ಎರಡನೆಯ ವಿಶ್ವಯುದ್ಧದ ಸಮಯದಲ್ಲಿ ಹಿಟ್ಲರಿನ ನಾಜ಼ಿ ಜರ್ಮನಿಯು ಪೋಲಂಡನ್ನು ಆಕ್ರಮಿಸಿತು. ಇದನ್ನು ವಿರೋಧಿಸಿದ ಆ್ಯನಾ ಸ್ವಿರ್ಶ್‌ಚಿನ್ಸ್‌ಕಾ ‘ಪೋಲಿಷ್ ಪ್ರತಿವಿರೋಧ ಚಳುವಳಿ’ಯನ್ನು ಸೇರಿ, ‘ವಾರ್ಸಾ ಬಂಡಾಯ’ದ ಸಮಯದಲ್ಲಿ ‘ಮಿಲಿಟರಿ ನರ್ಸ್’ ಆಗಿ ಕೆಲಸ ಮಾಡಿದರು. ಆಗ ಭೂಗತವಾಗಿ ಪ್ರಕಟವಾಗುತ್ತಿದ್ದ ಪತ್ರಿಕೆಗಳಿಗಾಗಿ ಅವರು ಕವನಗಳನ್ನು ಬರೆಯುತ್ತಿದ್ದರು. ಈ ಯುದ್ಧಕಾಲದ ಅನುಭವಗಳು ಅವರ ಕಾವ್ಯದ ಮೇಲೆ ಬಹಳಷ್ಟು ಪ್ರಭಾವ ಬೀರಿದವು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಪೋಲಂಡ್ ದೇಶದ ಕವಿ ಆ್ಯನಾ ಸ್ವಿರ್ಶ್‌ಚಿನ್ಸ್‌ಕಾ-ರವರ (Anna Swirszczynska, 1909–1984) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ
ತನ್ನ ವಂಶನಾಮ ‘ಸ್ವಿರ್ಶ್‌ಚಿನ್ಸ್‌ಕಾ’-ವನ್ನು ‘ಸ್ವಿರ್’ ಎಂದು ಚುಟುಕುಗೊಳಿಸಿ ‘ಆ್ಯನಾ ಸ್ವಿರ್’ (Anna Swir) ಎಂದೇ ಆಂಗ್ಲ-ಭಾಷೆಯ ಸಾಹಿತ್ಯಲೋಕದಲ್ಲಿ ಪರಿಚಿತರಾದ ಆ್ಯನಾ ಸ್ವಿರ್ಶ್‌ಚಿನ್ಸ್‌ಕಾ-ರವರು ನೊಬೆಲ್ ಸನ್ಮಾನಿತ ಪ್ರಸಿದ್ಧ ಪೋಲಿಷ್ ಕವಿಗಳಾದ ಚೆಸ್‌ಲಾಫ಼ ಮೀಲೋಶ್ (Czeslaw Milosz) ಹಾಗೂ ವೀಸ್ಲಾವಾ ಶಿಂಬೋರ್ಸ್ಕಾ-ರವರ (Wislawa Szymborska) ತಲೆಮಾರಿಗೆ ಸೇರಿದ ಮುಖ್ಯ ಕವಿ. ಆದರೆ, ಆಶ್ಚರ್ಯವೆಂಬಂತೆ ಅವರದೇ ದೇಶವಾದ ಪೋಲಂಡಿನಲ್ಲಿ ಆ್ಯನಾ ಸ್ವಿರ್ಶ್‌ಚಿನ್ಸ್‌ಕಾ ಬಹಳ ಕಾಲ ಅಜ್ಞಾತರಾಗಿದ್ದರು. ಪೋಲಂಡಿನ ಹೊರಗಿನ ಇಂಗ್ಲಿಷ್ ಭಾಷಾ ಸಾಹಿತ್ಯ ಲೋಕದಲ್ಲಂತೂ ಅವರ ಬಗ್ಗೆ ಗೊತ್ತೇ ಇರಲಿಲ್ಲ. ಆ್ಯನಾ ಸ್ವಿರ್ಶ್‌ಚಿನ್ಸ್‌ಕಾ-ರವರ ಕಾವ್ಯವನ್ನು ಬೆಳಕಿಗೆ ತಂದವರು ಚೆಸ್‌ಲಾಫ಼ ಮೀಲೋಶ್-ರವರು. ಮಿಲೋಶರು ಸ್ವಿರ್ಶ್‌ಚಿನ್ಸ್‌ಕಾ-ರ ಬಗ್ಗೆ ಹೀಗೆನ್ನುತ್ತಾರೆ: “ನಾನು ಆ್ಯನಾ ಸ್ವಿರ್ಶ್‌ಚಿನ್ಸ್‌ಕಾ-ರನ್ನು ಒಂದು ಮುಖ್ಯ ಕವಿಯೆಂದು ಪರಿಗಣಿಸುತ್ತೇನೆ. ಆದರೆ, ಯಾಕೋ ಅವರು ಎಲೆ ಮರೆಯ ಕಾಯಿಯಾಗೇ ಉಳಿದರು. ಹೀಗಾಗಿ, ಒಂದು ವಿಧದಲ್ಲಿ ಅವರು ಸಾಹಿತ್ಯ ಲೋಕಕ್ಕೆ ತಡವಾಗಿ ಪರಿಚಯವಾದರು. ಆದ್ದರಿಂದ, ಅವರ ಹೆಸರು ಹಾಗೂ ಕಾವ್ಯದ ಬಗ್ಗೆ ಬಹಳ ಜನರಿಗೆ ಗೊತ್ತಿಲ್ಲ.” ಆ್ಯನಾ ಸ್ವಿರ್ಶ್‌ಚಿನ್ಸ್‌ಕಾ-ರಿಗಾದ ಅನ್ಯಾಯವನ್ನು ಸರಿಪಡಿಸಲು ಮೀಲೋಶರು ಸ್ವತಃ ಸ್ವಿರ್ಶ್‌ಚಿನ್ಸ್‌ಕಾ-ರ ಕವನಗಳನ್ನು ಇಂಗ್ಲಿಷಿಗೆ ಅನುವಾದ ಮಾಡಿದರು, ಬೇರೆಯವರ ಕೈಯಲ್ಲಿ ಅನುವಾದ ಮಾಡಿಸಿದರು.
ಎರಡನೆಯ ವಿಶ್ವಯುದ್ಧದ ಸಮಯದಲ್ಲಿ ಹಿಟ್ಲರಿನ ನಾಜ಼ಿ ಜರ್ಮನಿಯು ಪೋಲಂಡನ್ನು ಆಕ್ರಮಿಸಿತು. ಇದನ್ನು ವಿರೋಧಿಸಿದ ಆ್ಯನಾ ಸ್ವಿರ್ಶ್‌ಚಿನ್ಸ್‌ಕಾ ‘ಪೋಲಿಷ್ ಪ್ರತಿವಿರೋಧ ಚಳುವಳಿ’ಯನ್ನು ಸೇರಿ, ‘ವಾರ್ಸಾ ಬಂಡಾಯ’ದ ಸಮಯದಲ್ಲಿ ‘ಮಿಲಿಟರಿ ನರ್ಸ್’ ಆಗಿ ಕೆಲಸ ಮಾಡಿದರು. ಆಗ ಭೂಗತವಾಗಿ ಪ್ರಕಟವಾಗುತ್ತಿದ್ದ ಪತ್ರಿಕೆಗಳಿಗಾಗಿ ಅವರು ಕವನಗಳನ್ನು ಬರೆಯುತ್ತಿದ್ದರು. ಈ ಯುದ್ಧಕಾಲದ ಅನುಭವಗಳು ಅವರ ಕಾವ್ಯದ ಮೇಲೆ ಬಹಳಷ್ಟು ಪ್ರಭಾವ ಬೀರಿದವು. ಪೋಲಿಷ್ ಸಾಹಿತ್ಯದ ಯುದ್ಧ-ಪೂರ್ವ ಸಾಹಿತ್ಯ ಭಾಷೆಯು ಈ ಯುದ್ಧಕಾಲದ ವಾಸ್ತವಗಳನ್ನು ನಿರೂಪಿಸಲು ಅಸಮರ್ಪಕವೆಂದು ಅವರಿಗೆ ಆಗಲೇ ಅನಿಸಿತು. ಒಂದು ಹೊಸ ತರಹದ ಕಾವ್ಯ-ಭಾಷೆ, ಒಂದು ಹೊಸ ಮಾದರಿಯ ಕಾವ್ಯದ ಸೃಷ್ಟಿಯಲ್ಲಿ ತೊಡಗಿದರು. ಅವರು ತಮ್ಮ ಕಾವ್ಯಭಾಷೆಯಿಂದ ರೂಪಕ-ಅಲಂಕಾರಗಳನ್ನು, ಸಾದೃಶ್ಯ-ಹೋಲಿಕೆಗಳನ್ನು ಕಿತ್ತು ಹಾಕಿದರು, ವಾಕ್ಯಗಳನ್ನು ಚುಟುಕುಗೊಳಿಸಿದರು. ‘ವಾರ್ಸಾ ದಂಗೆ’ಯನ್ನು ಅನುಭವಿಸದಿದ್ದಲ್ಲಿ ಅವರಿಂದ ಈ ಹೊಸ ಕಾವ್ಯಭಾಷೆಯ ಸೃಷ್ಟಿ ಸಾಧ್ಯವಾಗಿರಲಾರದು. ಇದೆಲ್ಲಾ ಮುಗಿದು ಮುವ್ವತ್ತು ವರ್ಷಗಳ ನಂತರ, 1974-ರಲ್ಲಿ, ಯುದ್ಧಕಾಲದ ಕಷ್ಟಗಳ ಅನುಭವಗಳನ್ನೆಲ್ಲಾ ನಿರೂಪಿಸುವ ಕವನಗಳ ಸಂಕಲನ ‘ಬಿಲ್ಡಿಂಗ್ ದ ಬ್ಯಾರಿಕೇಡ್’ (Building the Barricade) ಪ್ರಕಟವಾಯಿತು. ಯುದ್ಧ ಹಾಗೂ ಸಾವಿನ ಬಗ್ಗೆಯ ಕವನಗಳಲ್ಲಿ ಅವರು ನೇರ ಸರಳ ಭಾಷೆಯನ್ನೇ ಬಳಸುತ್ತಾರೆ.
ಆ್ಯನಾ ಸ್ವಿರ್ಶ್‌ಚಿನ್ಸ್‌ಕಾ ಅವರು ಹೆಣ್ಣಿನ ದೇಹದ ಬಗ್ಗೆಯೂ ಕವನಗಳನ್ನು ಬರೆದರು. ಮುಚ್ಚುಮರೆಯಿಲ್ಲದೇ ಭಾವಪೂರ್ಣವಾಗಿ ಬರೆದ ಕವನಗಳಿವು. ಶ್ವೆರ್‌ಚಿನ್ಸ್‌ಕಾ-ರ ‘ಟಾಕಿಂಗ್ ಟು ಮೈ ಬಾಡಿ’ (Talking to My Body) ಹೆಸರಿನ ಕವನ ಸಂಕಲನವನ್ನು ಪರಿಚಯಿಸುತ್ತಾ, ಚೆಸ್‌ಲಾಫ಼ ಮೀಲೋಶ್‌ರವರು ಹೀಗೆಂದಿದ್ದಾರೆ, “ಈ ಕವನಗಳ ಮುಖ್ಯ ವಸ್ತು ‘ದೇಹ – ಪ್ರೇಮ, ಉತ್ಕಟತೆ, ನೋವು, ಭಯ ಅನುಭವಿಸುವ ದೇಹ, ಒಂಟಿಯಾಗಿರಲು ಅಂಜುವ ದೇಹ, ಪ್ರಸವದಲ್ಲಿನ ದೇಹ, ವಿಶ್ರಮಿಸುವ ದೇಹ, ಸಮಯದ ಹರಿವನ್ನು ಅನುಭವಿಸುವ ದೇಹ.”
ಆ್ಯನಾ ಸ್ವಿರ್ಶ್‌ಚಿನ್ಸ್‌ಕಾ-ರ ಸುಮಾರು ಒಂಬತ್ತು ಕವನ ಸಂಕಲನಗಳು ಪ್ರಕಟವಾಗಿವೆ. ಅವರು ಮಕ್ಕಳಿಗಾಗಿಯೂ ಬರೆದರು. ಹಲವಾರು ಸಾಹಿತ್ಯ ಪುರಸ್ಕಾರಗಳಿಂದ ಸನ್ಮಾನಿತರಾಗಿದ್ದರು. ತಮ್ಮ ಇಪ್ಪತ್ತರ ವಯಸ್ಸಿನಲ್ಲಿ ಬರೆಯಲು ತೊಡಗಿದ ಆ್ಯನಾ ಸ್ವಿರ್ಶ್‌ಚಿನ್ಸ್‌ಕಾ-ರಿಗೆ ಹೆಸರು ಮತ್ತು ಖ್ಯಾತಿ ದೊರಕಿದ್ದು ತಮ್ಮ ಜೀವನದ ಅರವತ್ತನೆಯ ದಶಕದಲ್ಲಿ.
ನಾನು ಕನ್ನಡಕ್ಕೆ ಅನುವಾದಿಸಿರುವ ಇಲ್ಲಿರುವ ಆ್ಯನಾ ಸ್ವಿರ್ಶ್‌ಚಿನ್ಸ್‌ಕಾ-ರ ಎಲ್ಲಾ ಕವನಗಳನ್ನು ಚೆಸ್‌ಲಾಫ಼ ಮೀಲೋಶ್ (Czeslaw Milosz) ಮತ್ತು ಲೆನರ್ಡ್ ನೇಥನ್ (Leonard Nathan) ರವರು ಮೂಲ ಪೋಲಿಷ್ ಭಾಷೆಯಿಂದ ಇಂಗ್ಲಿಷ್-ಗೆ ಅನುವಾದಿಸಿದ್ದಾರೆ.
1
ಸಾಗರ, ಮಾನವ
ಮೂಲ: The Sea and the Man
ನೀನು ಈ ಸಾಗರವನ್ನು
ವಿನಯದಿಂದ ಯಾ ಆವೇಶದಿಂದ
ದಮನಿಸಲಾರೆ.
ಆದರೆ ನೀನು ಅದರ
ಮುಖಕ್ಕೆ ನಕ್ಕುಬಿಡಬಹುದು.
ಒಂದು ನಗೆಸ್ಫೋಟದಂತೆ
ಅಲ್ಪಕಾಲ ಜೀವಿಸುವವರೇ
ನಗೆಯನ್ನು
ಸೃಷ್ಟಿಸಿದವರು.
ಆ ಅನಂತ ಸಾಗರ
ಎಂದೂ ನಗಲು ಕಲಿಯದು.
2
ಅಂವ ಅದೃಷ್ಟಶಾಲಿ
ಮೂಲ: He was Lucky
ಆ ಮುದುಕ
ಪುಸ್ತಕಗಳ ಹೊತ್ತು, ಮನೆಯಿಂದ ಹೊರಡುತ್ತಾನೆ.
ಜರ್ಮನ್ ಸೈನಿಕನೊಬ್ಬ ಅವನ ಪುಸ್ತಕಗಳನ್ನು ಕಸಿದು
ನೆಲಕ್ಕೆಸೆಯುತ್ತಾನೆ.
ಆ ಮುದುಕ ಪುಸ್ತಗಳನ್ನು ಎತ್ತಿಕೊಳ್ಳುತ್ತಾನೆ,
ಆ ಸೈನಿಕ ಅವನ ಮುಖಕ್ಕೆ ಹೊಡೆಯುತ್ತಾನೆ.
ಆ ಮುದುಕ ಕೆಳಬೀಳುತ್ತಾನೆ,
ಆ ಸೈನಿಕ ಅವನನ್ನು ಒದ್ದು ಹೋಗುತ್ತಾನೆ.
ಆ ಮುದುಕ
ಮಣ್ಣು ನೆತ್ತರುಗಳಲ್ಲಿ ಬಿದ್ದಿದ್ದಾನೆ.
ಅವನ ದೇಹದಡಿಯಲ್ಲಿ
ಅವನಿಗೆ ಪುಸ್ತಕಗಳ ಸ್ಪರ್ಶವಾಗುತ್ತದೆ.
3
ಹಾಯಾಗಿ, ನಾಯಿ ಬಾಲದಂತೆ
ಮೂಲ: Happy as a Dog’s Tail
ಅಮುಖ್ಯವಾದ ಯಾವುದೋ ಒಂದರಂತೆ ಹಾಯಾಗಿ
ಹಾಗೂ ಅಮುಖ್ಯವಾದ ವಿಷಯವೊಂದರಂತೆ ಮುಕ್ತವಾಗಿ.
ಯಾರೂ ಬೆಲೆಕೊಡದಂತಹ ಹಾಗೂ ತನಗೆ ತಾನೂ
ಬೆಲೆಕೊಡದಂತಹ ಯಾವುದೋ ಒಂದರಂತೆ.
ಎಲ್ಲರೂ ಗೇಲಿ ಮಾಡುವಂತಹ ಹಾಗೂ ಅವರ ಅಣಕವನ್ನು
ಗೇಲಿ ಮಾಡುವಂತಹ ಯಾವುದೋ ಒಂದರಂತೆ
ಯಾವುದೇ ಗಂಭೀರ ಕಾರಣವಿಲ್ಲದ ನಗುವಿನಂತೆ,
ಬೊಬ್ಬೆಯನ್ನು ಮೀರಿಸಿ ಬೊಬ್ಬಿಡುವ ಬೊಬ್ಬೆಯಂತೆ,
ಯಾವ ವಿಚಾರವಿಲ್ಲದೇ ಹಾಯಾಗಿರುವಂತಹದ್ದು,
ಏನಾದರೂ ಹೇಗಾದರೂ ಸರಿಯೆಂಬಂತೆ.
ಹಾಯಾಗಿ
ನಾಯಿ ಬಾಲದಂತೆ.
4
ತಡೆಗಟ್ಟನ್ನು ಏರಿಸುತ್ತಿದ್ದಾಗ
ಮೂಲ: While Building the Barricade
ಹೆದರಿದ್ದೆವು ನಾವು ತಡೆಗಟ್ಟನ್ನು ಏರಿಸುತ್ತಿದ್ದಾಗ
ಗುಂಡಿನ ಸುರಿಮಳೆಯ ಮಧ್ಯೆ
ಶರಾಬಿನಂಗಡಿಯಂವ, ರತ್ನಗಾರನ ಪ್ರೇಯಸಿ, ಕ್ಷೌರಿಕ
ಹೇಡಿಗಳು ನಾವೆಲ್ಲರೂ
ಮನೆಗೆಲಸದಾಕೆ ನೆಲಕ್ಕೆ ಬಿದ್ದಳು
ಹಾಸುಗಲ್ಲೊಂದನ್ನು ಎತ್ತೆಳೆಯುವಾಗ,
ಬಹಳವೇ ಹೆದರಿದ್ದೆವು ನಾವೆಲ್ಲರೂ
ಹೇಡಿಗಳು ನಾವೆಲ್ಲರೂ
ಪಾರುಪತ್ಯಗಾರ, ಅಂಗಡಿಯವಳು, ಪಿಂಚಣಿದಾರ
ಔಷಧಿಯಂಗಡಿಯಂವ ನೆಲಕ್ಕೆ ಬಿದ್ದ
ಶೌಚಾಲಯದ ಬಾಗಿಲನ್ನು ಜಗ್ಗುತ್ತ ಎಳೆಯುವಾಗ
ನಾವು ಇನ್ನೂ ಹೆದರಿದೆವು, ಕಳ್ಳಸಾಗಣೆಯವಳು
ಟೈಲರು, ಟ್ರಾಮ್ ಡ್ರೈವರು,
ಹೇಡಿಗಳು ನಾವೆಲ್ಲರೂ
ಸುಧಾರಣಾ ಶಾಲೆಯ ಹುಡುಗನೊಬ್ಬ ಕೆಳಬಿದ್ದ
ಮಣ್ಣಿನಚೀಲವೊಂದನ್ನು ಎಳೆಯುವಾಗ,
ನಾವು ನಿಜಕ್ಕೂ ಹೆದರಿದ್ದೆವು ನೋಡಿ
ಯಾರೂ ನಮ್ಮನ್ನು ಬಲವಂತಮಾಡಲಿಲ್ಲವಾದರೂ
ನಾವು ತಡೆಗಟ್ಟನ್ನು ಏರಿಸಿದೆವು
ಗುಂಡಿನ ಸುರಿಮಳೆಯ ಮಧ್ಯೆ
5
ಲೇಖಕಿಯೊಬ್ಬಳು ಬಟ್ಟೆ ಒಗೆಯುತ್ತಾಳೆ
ಮೂಲ: A Woman Writer does Laundry
ಟೈಪ್ ಮಾಡಿದ್ದು ಸಾಕು.
ಇವತ್ತು ನಾನು ಬಟ್ಟೆ ಒಗೆಯುವೆ
ಹಳೆಯ ಪದ್ಧತಿಯಲ್ಲಿ.
ನಾ ಒಗೆಯುವೆ, ನಾ ಒಗೆಯುವೆ, ಅರಸುವೆ, ಹಿಂಡುವೆ,
ನನ್ನ ಅಜ್ಜಿ ಪಿಜ್ಜಿಯರು ಒಗೆಯುತ್ತಿದ್ದ ಹಾಗೆ.
ವಿರಾಮತೆ.
ಬಟ್ಟೆ ಒಗೆಯುವುದು ಆರೋಗ್ಯಕರ, ಉಪಯುಕ್ತ,
ಒಗೆದ ಒಂದು ಅಂಗಿಯ ಹಾಗೆ. ಬರವಣಿಗೆ
ಅನುಮಾನಾಸ್ಪದ.
ಹಾಳೆಯ ಮೇಲೆ ಮೂರು ಪ್ರಶ್ನೆಚಿಹ್ನೆಗಳನ್ನು
ಟೈಪ್ ಮಾಡಿದ ಹಾಗೆ.
6
ಕಿರುಗವನಗಳು
ನನ್ನೊಳಗೊಂದು ಬೆಳಕಿದೆ
ಮೂಲ: There is a Light in me
ಹಗಲಿನಲ್ಲಾಗಲಿ ರಾತ್ರಿಯಲ್ಲಾಗಲಿ
ಯಾವಾಗಲೂ ನಾನು ನನ್ನೊಳಗೆ
ಬೆಳಕೊಂದ ಹೊತ್ತಿರುವೆ
ಗದ್ದಲ ಗಲಭೆಗಳ ಮಧ್ಯೆ
ನಾ ಮೌನವ ಹೊತ್ತಿರುವೆ
ಯಾವಾಗಲೂ ನಾನು ಬೆಳಕನ್ನು ಹಾಗೂ
ಮೌನವನ್ನು ಹೊತ್ತಿರುವೆ.
ದುಃಖಿತ ಪ್ರೇಮಿಗಳು
ಮೂಲ: Sad Lovers
ಕಣ್ಣೀರ ಹನಿಯೊಂದು ಕೂಡಿಸಿದ
ಕಣ್ಣು ಮತ್ತು ಕಣ್ಣುರೆಪ್ಪೆಗಳ ಹಾಗೆ
ಆತಂಕ
ಮೂಲ: Anxiety
ಮರಗಳಲ್ಲಿ ಗೂಡೊಂದ ಕಟ್ಟಿರುವೆ ನೀನು
ನಮ್ಮ ಪ್ರೇಮದ ಸಲುವಾಗಿ
ಆದರೆ ನೋಡು ಎಷ್ಟೊಂದು
ಹೂಗಳ ತುಳಿದು ಹಾಕಿರುವೆ
ಕಡಲತೀರದಲ್ಲಿ ಮೆಟ್ಟುಗಳು
ಮೂಲ: Beach Sandals
ನನ್ನಿಂದ ಈಜಿ ಹೋಗಿರುವೆ ನಾನು
ಕರಿಯಬೇಡ ನನ್ನನ್ನು
ನಿನ್ನಿಂದ ಈಜಿ ಹೋಗು ನೀನೂ ಸಹ
ನಾವಿಬ್ಬರು ಈಜಿ ಹೋಗೋಣ, ನಮ್ಮ
ದೇಹಗಳನ್ನು ತೀರದಲ್ಲಿ ಬಿಟ್ಟು ಬಿಟ್ಟು,
ಬಿಚ್ಚಿಟ್ಟ ಜೋಡಿ ಮೆಟ್ಟುಗಳ ಹಾಗೆ.
ಬೆನ್ನಚೀಲಗಳು ಮತ್ತು ಪ್ರೇಮ
ಮೂಲ: Love with Rucksacks
ಎರಡು ಬೆನ್ನ ಚೀಲಗಳು
ಎರಡು ನರೆತ ತಲೆಗಳು
ಹಾಗೂ
ಅಲೆದಾಡುವುದಕ್ಕೆ
ಈ ಭೂಮಿಯ ಎಲ್ಲಾ ರಸ್ತೆಗಳು
ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು. ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು” (ಪೋಲೀಷ್ ಕವಿತೆಗಳ ಕನ್ನಡಾನುವಾದಿತ ಸಂಕಲನ). ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ. ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.