ಈ ಕತೆಗಳ ಸತ್ಯಾಸತ್ಯತೆ ಏನೇ ಇರಲಿ, ಆಯಸ್ಕಾಂತಗಳ ಈ ಕಣ್ಣಿಗೆ ಕಾಣದ ಶಕ್ತಿ ಅತ್ಯಂತ ಕುತೂಹಲಕರವಾದದ್ದು ಎನ್ನುವುದಂತೂ ನಿಜ. ಮ್ಯಾಗ್ನೆಟ್‌ ಗಳ ಬಗೆಗೆ ಸೋಜಿಗ ಪಟ್ಟವರು/ಪಡುವವರು ಕೇವಲ ಮಕ್ಕಳು ಮಾತ್ರವೇ ಅಲ್ಲ. ಸಾವಿರಾರು ವರ್ಷಗಳಿಂದ ದೇಶ-ವಿದೇಶಗಳ ಪಂಡಿತರು, ತತ್ವಜ್ಞಾನಿಗಳು, ವಿಜ್ಞಾನಿಗಳು ಮ್ಯಾಗ್ನೆಟ್‌ ಗಳ ಸೆಳೆತಕ್ಕೆ ಸಿಲುಕಿದ್ದಾರೆ. ಈ ಶಕ್ತಿಯ ಉಪಯೋಗಗಳ ಬಗೆಗೆ ಆಲೋಚಿಸಿದ್ದಾರೆ. ಇದು ಹೇಗೆ ಕೆಲಸ ಮಾಡುತ್ತಿರಬಹುದೆಂದು ಊಹಿಸಲು ಯತ್ನಿಸಿದ್ದಾರೆ. ನಮ್ಮವನೇ ಆದ ಸುಶ್ರುತ, ಮ್ಯಾಗ್ನೆಟ್‌ ಗಳನ್ನು ವೈದ್ಯಕೀಯ ಚಿಕಿತ್ಸೆಯಲ್ಲಿ ಬಳಸುವುದನ್ನು ಕುರಿತು ಬರೆದಿದ್ದಾನೆ.
ಶೇಷಾದ್ರಿ ಗಂಜೂರು ಬರೆಯುವ ಅಂಕಣ

 

ಸಣ್ಣವರಿದ್ದಾಗ ಮ್ಯಾಗ್ನೆಟ್‌ ಗಳೊಡನೆ ಆಟವಾಡದಿದ್ದವರು ಯಾರು? ಮ್ಯಾಗ್ನೆಟ್‌ ಗಳನ್ನು ಮಣ್ಣಿನಲ್ಲಿ ಹುದುಗಿಸಿ, ಮಣ್ಣಿನಲ್ಲಿರುವ ಕಬ್ಬಿಣದ ಕಣಗಳನ್ನು ತೆಗೆಯುವುದು, ಆ ಕಬ್ಬಿಣದ ಕಣಗಳನ್ನು ಪೇಪರ್ ಮೇಲೆ ಉದುರಿಸುವುದು ಮತ್ತು ಪೇಪರ್ ಕೆಳಗೆ ಮ್ಯಾಗ್ನೆಟ್ ಇಟ್ಟು ಆ ಕಣಗಳು ಪೇಪರ್ ಮೇಲೆ ಬಿಡಿಸುವ ಚಿತ್ತಾರವನ್ನು ನೋಡುವುದು; ಇದು ಎಲ್ಲ ಮಕ್ಕಳಂತೆ ನನಗೂ ಬಾಲ್ಯದಲ್ಲಿ ಅತ್ಯಂತ ಸೋಜಿಗವೂ, ಸಂತೋಷಕರವೂ ಆದ ವಿಚಾರವಾಗಿತ್ತು.

ಮ್ಯಾಗ್ನೆಟ್‌ ಗಳ ಬಗೆಗಿನ ಆ ಕುತೂಹಲ ನನಗಿನ್ನೂ ಹೋಗಿಲ್ಲ. ನಾನು ಶಾಲಾ ಬಾಲಕನಿದ್ದಾಗ ನನ್ನ ಶಾಲೆಯ ಬ್ಯಾಗಿನಲ್ಲಿ ಮ್ಯಾಗ್ನೆಟ್‌ ಗಳನ್ನು ಇಟ್ಟುಕೊಂಡಿರುತ್ತಿದ್ದೆ. ಹಲವು ದಶಕಗಳ ನಂತರ, ಇಂದೂ ಸಹ, ನಾನು ಆಫೀಸಿಗೆ ಕೊಂಡೊಯ್ಯುವ ಬ್ಯಾಕ್‌ ಪ್ಯಾಕಿನಲ್ಲೂ ಮ್ಯಾಗ್ನೆಟ್‌ ಗಳು ಇರುವುದುಂಟು. ಕೆಲಸದ ಹಲವಾರು “ಸ್ಟ್ರೆಸ್”ಗಳ ಮಧ್ಯೆ, ಕೆಲಗಳಿಗೆ ಮ್ಯಾಗ್ನೆಟ್‌ ಗಳೊಂದಿಗಿನ ಏಕಾಂತದ ಆಟ ನನಗೆ ನೆಮ್ಮದಿಯನ್ನು ತರುತ್ತದೆ.

ಮ್ಯಾಗ್ನೆಟ್‌ ಗಳ ಕುರಿತು ಎಂತೆಂತಹವೋ ಕತೆಗಳಿವೆ. ಸುಮಾರು ಮೂರು ದಶಕಗಳ ಹಿಂದೆ, ನಾನು, ಒರಿಸ್ಸಾದ ಕೊನಾರ್ಕ್ ಸೂರ್ಯ ದೇವಾಲಯವನ್ನು ನೋಡಲು ಹೋಗಿದ್ದೆ. ಆಗ, ಅಲ್ಲಿನ ಗೈಡ್ ಹೇಳಿದ್ದ ಕತೆ ಇನ್ನೂ ನೆನಪಿದೆ. ಅವನು ಹೇಳಿದಂತೆ, ಆ ಇಡೀ ದೇವಾಲಯವೇ ಒಂದು ಮಹಾ ಶಕ್ತಿಶಾಲಿ ಮ್ಯಾಗ್ನೆಟ್ ಮೇಲೆ ನಿಂತಿತ್ತಂತೆ. ಆ ಮ್ಯಾಗ್ನೆಟ್ಟಿನ ಬಲ ಎಷ್ಟಿತ್ತೆಂದರೆ, ಅದರಿಂದ ಬಂಗಾಳ ಕೊಲ್ಲಿಯ ಸಮುದ್ರದಲ್ಲಿ ಸಂಚರಿಸುತ್ತಿದ್ದ ನಾವೆಗಳ ಕಂಪಾಸ್‌ ಗಳು ದಿಕ್ಕೆಡುತ್ತಿದ್ದವಂತೆ ಅಷ್ಟೇ ಅಲ್ಲ, ಶತ್ರುಗಳ ಹಡಗುಗಳ ಕಬ್ಬಿಣದ ಮೊಳೆಗಳು ಆ ಮ್ಯಾಗ್ನೆಟ್ಟಿನ ಸೆಳೆತಕ್ಕೆ ಹೊರಬಂದು, ಮರದಿಂದ ನಿರ್ಮಿಸಿದ್ದ ಆ ಹಡಗುಗಳು ತುಂಡು-ತುಂಡಾಗಿ ಬೇರ್ಪಟ್ಟು ಇಡೀ ಹಡಗೇ ಕುಸಿಯುತ್ತಿತ್ತಂತೆ!

ಈ ಕತೆಗಳ ಸತ್ಯಾಸತ್ಯತೆ ಏನೇ ಇರಲಿ, ಆಯಸ್ಕಾಂತಗಳ ಈ ಕಣ್ಣಿಗೆ ಕಾಣದ ಶಕ್ತಿ ಅತ್ಯಂತ ಕುತೂಹಲಕರವಾದದ್ದು ಎನ್ನುವುದಂತೂ ನಿಜ. ಮ್ಯಾಗ್ನೆಟ್‌ ಗಳ ಬಗೆಗೆ ಸೋಜಿಗ ಪಟ್ಟವರು/ಪಡುವವರು ಕೇವಲ ಮಕ್ಕಳು ಮಾತ್ರವೇ ಅಲ್ಲ. ಸಾವಿರಾರು ವರ್ಷಗಳಿಂದ ದೇಶ-ವಿದೇಶಗಳ ಪಂಡಿತರು, ತತ್ವಜ್ಞಾನಿಗಳು, ವಿಜ್ಞಾನಿಗಳು ಮ್ಯಾಗ್ನೆಟ್‌ ಗಳ ಸೆಳೆತಕ್ಕೆ ಸಿಲುಕಿದ್ದಾರೆ. ಈ ಶಕ್ತಿಯ ಉಪಯೋಗಗಳ ಬಗೆಗೆ ಆಲೋಚಿಸಿದ್ದಾರೆ. ಇದು ಹೇಗೆ ಕೆಲಸ ಮಾಡುತ್ತಿರಬಹುದೆಂದು ಊಹಿಸಲು ಯತ್ನಿಸಿದ್ದಾರೆ. ನಮ್ಮವನೇ ಆದ ಸುಶ್ರುತ, ಮ್ಯಾಗ್ನೆಟ್‌ ಗಳನ್ನು ವೈದ್ಯಕೀಯ ಚಿಕಿತ್ಸೆಯಲ್ಲಿ ಬಳಸುವುದನ್ನು ಕುರಿತು ಬರೆದಿದ್ದಾನೆ. ಕ್ರಿಸ್ತ ಪೂರ್ವ ಗ್ರೀಸ್‌ ನ ತತ್ವಜ್ಞಾನಿಗಳು, ಮ್ಯಾಗ್ನೆಟ್‌ ಗಳಲ್ಲಿ “ಆತ್ಮ”ದಂತಹ ಶಕ್ತಿಯೊಂದು ಕೆಲಸ ಮಾಡುತ್ತಿರಬಹುದೇ ಎಂದು ಆಲೋಚಿಸಿದ್ದಾರೆ. (ನಮ್ಮ ಆತ್ಮ ಕಣ್ಣಿಗೆ ಕಾಣದಿದ್ದರೂ, ಅದು, ನಮ್ಮ ದೇಹದ ನಡವಳಿಕೆಗಳನ್ನು ನಿರ್ಧರಿಸುವಂತೆ, ಮ್ಯಾಗ್ನೆಟ್ ಗಳ ನಡಾವಳಿಗಳ ಹಿಂದೆಯೂ ಅದರ ಆತ್ಮವೇ ಕೆಲಸ ಮಾಡುತ್ತಿರಬಹುದೇ ಎಂಬುದು ಅವರ ಯೋಚನೆ)

ವಿಜ್ಞಾನ ಮುಂದುವರೆದಂತೆ, ಮ್ಯಾಗ್ನೆಟ್‌ ಗಳ ಮ್ಯಾಗ್ನೆಟಿಕ್ ಶಕ್ತಿಯ ರಹಸ್ಯ, ರಹಸ್ಯವಾಗಿ ಉಳಿದಿಲ್ಲ. ನಾವು ಕಾಣುವ ವಸ್ತುಗಳೆಲ್ಲಾ ಪರಮಾಣುಗಳಿಂದಲೇ ಮಾಡಲ್ಪಟ್ಟಿವೆ. ಈ ಪರಮಾಣುಗಳಲ್ಲಿ, ನ್ಯೂಕ್ಲಿಯಸ್ ಇದ್ದು, ಅದರ ಸುತ್ತಲೂ ನೆಗೆಟಿವ್ ಎಲೆಕ್ಟ್ರಿಕ್ ಚಾರ್ಜ್ ಉಳ್ಳ ಎಲೆಕ್ಟ್ರಾನ್‌ಗಳು ಸುತ್ತುತ್ತಿವೆ. ಅವು, ನ್ಯೂಕ್ಲಿಯಸ್ ಸುತ್ತಾ ಮಾತ್ರ ಸುತ್ತುತ್ತಿಲ್ಲ, ಅವು ಬುಗುರಿಯಂತೆ ತಿರುಗುತ್ತಿವೆ ಸಹ. (ಭೂಮಿಯೂ ಸೇರಿದಂತೆ ಸೌರಮಂಡಲದ ಗ್ರಹಗಳು ಸೂರ್ಯನ ಸುತ್ತಾ ಸುತ್ತುತ್ತಾ ತಿರುಗುವಂತೆ).

ಎಲೆಕ್ಟ್ರಿಕ್ ಚಾರ್ಜ್‌ ಗಳ ಇಂತಹ ಚಲನದಿಂದ, ಕೋಟ್ಯಾಂತರ ಮ್ಯಾಗ್ನೆಟಿಕ್ ಶಕ್ತಿಯ ಸಣ್ಣ-ಸಣ್ಣ ಉತ್ಪನ್ನವಾಗುತ್ತದೆ. ಇದು ಎಲ್ಲಾ ವಸ್ತುಗಳಲ್ಲೂ ನಡೆಯುವ ಪ್ರಕ್ರಿಯೆ. ಆದರೆ ಬಹುಪಾಲು ವಸ್ತುಗಳಲ್ಲಿ, ಇಂತಹ ಚಲನದಿಂದ ಉಂಟಾಗುವ ಮ್ಯಾಗ್ನೆಟಿಕ್ ಶಕ್ತಿಗಳು ಒಂದಕ್ಕೊಂದು ವಿರೋಧವಾಗಿ ಕೆಲಸಮಾಡಿ, ಇಡೀ ವಸ್ತುವಿಂದ ಯಾವುದೇ ಮ್ಯಾಗ್ನೆಟಿಕ್ ಸೆಳೆತ ಹೊರಹೊಮ್ಮುವುದಿಲ್ಲ. ಆದರೆ, ಕಬ್ಬಿಣವೂ ಸೇರಿ, ಕೆಲವೊಂದು ಲೋಹಗಳಲ್ಲಿ, ಎಲೆಕ್ಟ್ರಾನ್‌ ಗಳ ಚಲನೆಯಿಂದ ಸೃಷ್ಟಿಯಾಗುವ ಸಣ್ಣ-ಸಣ್ಣ ಮ್ಯಾಗ್ನೆಟಿಕ್ ಶಕ್ತಿಗಳು ಒಟ್ಟುಗೂಡಿ ಅವು ನಾವು ಕಾಣುವ ಮ್ಯಾಗ್ನೆಟ್‌ ಗಳಂತೆ ಕೆಲಸಮಾಡುತ್ತವೆ.

ಲೋಹದ ವೈರ್‌ ಗಳಲ್ಲಿ ವಿದ್ಯುತ್ ಪ್ರವಹಿಸಿದಾಗ, ಅದರ ಸುತ್ತಲೂ ಮ್ಯಾಗ್ನೆಟಿಕ್ “ಫೀಲ್ಡ್” ಉಂಟಾಗುವುದೂ ಇದರಿಂದಲೇ. (ಮ್ಯಾಗ್ನೆಟಿಸಂನ ಉಗಮದ ಕುರಿತು, ಪುರಾತನ ಗ್ರೀಕ್‌ ರಿಂದ ಹಿಡಿದು ಇಂದಿನ ವಿಜ್ಞಾನಿಗಳವರೆಗೆ ಹಲವಾರು ಪಂಡಿತರು ವಿವರಣೆ ನೀಡುತ್ತಲೇ ಬಂದಿದ್ದಾರೆ. ಅಂತಹವರಲ್ಲಿ, ಪಾಕಿಸ್ತಾನ ಸಂಜಾತ ವಿಜ್ಞಾನಿ ಪ್ರೊ.ಅಬ್ದುಸ್ ಸಲಾಮ್ ಸಹ ಒಬ್ಬರು. ಈ ಲೇಖನ ಮಾಲೆಯ ಆಶಯ “ಕಾಲ ಬಗ್ಗುವುದರ” ಕುರಿತಾಗಿರುವುದರಿಂದ, ಇದನ್ನು ಇಲ್ಲಿಗೇ ಬಿಡೋಣ. ಅಂದಹಾಗೆ, ಅಬ್ದುಸ್ ಸಲಾಮ್ ಕಾಲವಾದ ನಂತರ ಪಾಕಿಸ್ತಾನದಲ್ಲಿ ಅವರ ಪಾರ್ಥಿವ ಶರೀರವನ್ನು ಸಮಾಧಿ ಮಾಡಲಾಯಿತು. ಆ ಸಮಾಧಿಯ ಮೇಲೆ “ಪ್ರಪ್ರಥಮ ಮುಸ್ಲಿಂ ನೊಬೆಲ್ ವಿಜೇತ” ಎಂದು ಬರೆಯಲಾಗಿತ್ತು.

ಅದು ಪಾಕಿಸ್ತಾನ ಸರ್ಕಾರದ ಗಮನಕ್ಕೆ ಬಂದಾಗ, ಅವರು, “ಮುಸ್ಲಿಂ” ಪದವನ್ನು ಅಳಿಸಿದರು. ಪಾಕಿಸ್ತಾನದ ಸಂವಿಧಾನದ ಪ್ರಕಾರ, ಅಹ್ಮದೀ ಪಂಗಡಕ್ಕೆ ಸೇರಿರುವ ಪ್ರೊ.ಸಲಾಮ್ ಮುಸ್ಲಿಮರಲ್ಲವಂತೆ! ಪಾಕಿಸ್ತಾನದಲ್ಲಿ ಸಲ್ಲದವರು ಭಾರತದಲ್ಲಿ ಸಲ್ಲುತ್ತಾರೆಂದೇನೂ ಅಲ್ಲ; ಭಾರತ ಸರ್ಕಾರದ ಸಿ.ಎ.ಎ. ಕಾಯಿದೆಗಳೂ ಅಹ್ಮದೀ ಪಂಗಡದವರನ್ನು ಸ್ವಾಗತಿಸುವುದಿಲ್ಲ. ಕಾರಣ: ಅವರು ಮುಸ್ಲಿಮರಂತೆ! )

ನಮ್ಮವನೇ ಆದ ಸುಶ್ರುತ, ಮ್ಯಾಗ್ನೆಟ್‌ ಗಳನ್ನು ವೈದ್ಯಕೀಯ ಚಿಕಿತ್ಸೆಯಲ್ಲಿ ಬಳಸುವುದನ್ನು ಕುರಿತು ಬರೆದಿದ್ದಾನೆ. ಕ್ರಿಸ್ತ ಪೂರ್ವ ಗ್ರೀಸ್‌ ನ ತತ್ವಜ್ಞಾನಿಗಳು, ಮ್ಯಾಗ್ನೆಟ್‌ ಗಳಲ್ಲಿ “ಆತ್ಮ”ದಂತಹ ಶಕ್ತಿಯೊಂದು ಕೆಲಸ ಮಾಡುತ್ತಿರಬಹುದೇ ಎಂದು ಆಲೋಚಿಸಿದ್ದಾರೆ.

ಗುರುತ್ವಾಕರ್ಷಣೆ, ಮ್ಯಾಗ್ನೆಟಿಸಂ ಇವುಗಳ ಪರಿಣಾಮವನ್ನು ಇಂದ್ರಿಯಗಳ ಮೂಲಕ ನಾವು ಅನುಭವಿಸಬಹುದಾದರೂ, ಅವುಗಳ ಸೆಳೆತ ಮಾತ್ರ ಕಣ್ಣಿಗೆ ಕಾಣುವುದಿಲ್ಲ. ನಮ್ಮ ಮನೋ ಪ್ರಪಂಚದಲ್ಲೂ ನಾವು ಎಷ್ಟೋ ಸೆಳೆತಗಳನ್ನು ಅನುಭವಿಸುತ್ತೇವೆ. ಉದಾಹರಣೆಗೆ, ನಲ್ಲ-ನಲ್ಲೆಯರ ಪ್ರೇಮ, ತಾಯಿ-ಮಕ್ಕಳ ಪ್ರೇಮ. ಅನುಭವಕ್ಕೆ ಮಾತ್ರ ದಕ್ಕುವ ಇಂತಹ ವಿಷಯಗಳನ್ನು ಮತ್ತಷ್ಟು ಚಿಂತಿಸಲು, ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು “ಪರಿಭಾಷೆ”ಯೊಂದರ ಅಗತ್ಯವಿದೆ. ನಮ್ಮ ಭಾವನಾ ಪ್ರಪಂಚದ ಸೆಳೆತಗಳನ್ನು ವಿವರಿಸಲು, ಕಲೆ-ಕಾವ್ಯ-ಸಾಹಿತ್ಯಗಳು ಶತಮಾನಗಳಿಂದ ಮೂರ್ತ ಸ್ವರೂಪ ನೀಡುತ್ತಲೇ ಬಂದಿವೆ. (ಖ್ಯಾತ ಕವಿ ಮತ್ತು ನನ್ನ ಇಂಗ್ಲೀಷ್ ಶಿಕ್ಷಕರೂ ಆದ, ಶ್ರೀ ಬಿ.ಆರ್.ಲಕ್ಷ್ಮಣ ರಾವ್ ಅವರ, “ಅಮ್ಮ ನಿನ್ನ ಎದೆಯಾಳದಲ್ಲಿ…” ಗೀತ-ಕವನವನ್ನು ಕೇಳದವರಾರು? ತಾಯ್ತನದ ಅನುಭೂತಿ ಮತ್ತದರ ನೆನಪುಗಳ ಸೆಳೆತದ ಆ ಕವನದ ಕೊನೆಯ ಸಾಲು “ಮೂರ್ತ ಪ್ರೇಮದೆಡೆಗೆ” ಅಲ್ಲವೇ?!)

(ಮೈಕೇಲ್ ಫ್ಯಾರಡೇ)

ನಮ್ಮ ಭಾವನಾ ಪ್ರಪಂಚಕ್ಕೆ ಮೀರಿದ ಪ್ರಪಂಚದ “ಗುರುತ್ವಾಕರ್ಷಣೆ”, “ಮ್ಯಾಗ್ನೆಟಿಸಂ”ಗಳಂತಹ ವಿಷಯಗಳನ್ನು ವಿವರಿಸಲೂ, “ಕಲೆ-ಕಾವ್ಯ”ಗಳಂತಹ ಪರಿಭಾಷೆಯ ಅಗತ್ಯವಿದೆ; ಅದೇ ವಿಜ್ಞಾನ. ಅಮೂರ್ತ ವಿಷಯಗಳನ್ನು ಸಂವಹನ ಮಾಡಲು ಮೂರ್ತಿಯ ರಚನೆ ಅವಶ್ಯಕ. ಕವಿಗಳಿರಲಿ, ವಿಜ್ಞಾನಿಗಳಿರಲಿ, ಇಂತಹ ರಚನೆಗೆ ಬೇಕಿರುವುದು ಕಲ್ಪನಾ ಶಕ್ತಿ. (ವಿಜ್ಞಾನ ಬೆಳೆದಂತೆ, ವೈಜ್ಞಾನಿಕ ಸಂಸ್ಕೃತಿ ಮತ್ತು ಸಾಹಿತ್ಯದ ಸಂಸ್ಕೃತಿಗಳ ನಡುವಿನ ಕಂದಕ ವಿಶಾಲ ಮತ್ತು ಆಳವಾಗುತ್ತಲೇ ಇದ್ದಂತಿದೆ. ಪ್ರಪಂಚವನ್ನು ಅದರ ಮೂಲ ಧಾತುಗಳ ಮೂಲಕ ಅರ್ಥ ಮಾಡಿಕೊಳ್ಳುವ ವೈಜ್ಞಾನಿಕತೆಯ “ರಿಡಕ್ಷನಿಸಂ”, ಪ್ರಪಂಚದ ಸಂಪೂರ್ಣತೆಯ ಸಂಕೀರ್ಣತೆಯನ್ನು ಕಾವ್ಯದ ಮೂಲಕ ತಮ್ಮದಾಗಿಸಿಕೊಳ್ಳುವವರಿಗೆ ಅನಿಷ್ಟವೆನ್ನಿಸಬಹುದು. ಆದರೆ, ಇದು ನನ್ನ ದೃಷ್ಟಿಯಲ್ಲಿ ಅತ್ಯಂತ ಖೇದದ ವಿಚಾರ. ಈ ವಿಷಯವನ್ನು ಮತ್ತಷ್ಟು ವಿಚಾರಿಸ ಬೇಕೆಂದಿರುವವರು, ವಿಜ್ಞಾನಿ ಮತ್ತು ಕಾದಂಬರಿಕಾರ ಸಿ.ಪಿ.ಸ್ನೋನ ಪ್ರಖ್ಯಾತ ಭಾಷಣ/ಲೇಖನ “The Two Cultures And The Scientific Revolution” ಓದಬಹುದು)

ಎಂತಹ ಪ್ರತಿಭಾನ್ವಿತ ಕವಿಗಳಿಗೂ ಅವರ ಕಲ್ಪನಾ ಶಕ್ತಿ ಕೆಲವೊಮ್ಮೆ ಕೈ ಕೊಡಬಹುದು. ಮಹಾಕವಿಗಳು ತಮ್ಮ ಈ “ಸೋಲ”ನ್ನೇ ತಮ್ಮ ಕಾವ್ಯದ ವಸ್ತುವಾಗಿಸಿಕೊಳ್ಳಬಹುದು. ಅಂತಹ ಸಾಲುಗಳು ಮಾಂತ್ರಿಕವೆಂದೆನ್ನಿಸಲೂಬಹುದು – ಅದರ ಒಳ್ಳೆಯ ಅರ್ಥದಲ್ಲಿ (ಚಿಕ್ಕಂದಿನಿಂದಲೂ ನನಗೆ ಕುವೆಂಪುರವರ “ಯಾವ ಜನ್ಮದ ಮೈತ್ರಿ” ಗೀತ-ಕವನ ಬಹಳ ಇಷ್ಟ. ಆ ಕವನದಲ್ಲಿ, ಪ್ರೇಮ ತೀರ್ಥದಲ್ಲಿ ಮೀಯುವ ಹೃದಯಗಳ ಮಾತನ್ನಾಡುತ್ತಾ, ಇದ್ದಕ್ಕಿದ್ದಂತೆ, ಅವರು “ಅದರರ್ಥಗಿರ್ಥಗಳು ಸೃಷ್ಟಿಕರ್ತನಿಗಿರಲಿ” ಎನ್ನುವುದು ನನ್ನನ್ನು ಇಂದಿಗೂ ಯೋಚನಾಲಹರಿಗೆ ತಳ್ಳುತ್ತದೆ.)

ಗುರುತ್ವಾಕರ್ಷಣೆಯ ಗಣಿತದ ಲೆಕ್ಕಾಚಾರಗಳನ್ನು ತನ್ನ ವಿಜ್ಞಾನದ ಮೂಲಕ ಹಿಡಿದಿಟ್ಟ ನ್ಯೂಟನ್‌ ಗೆ, ವಸ್ತುಗಳ ನಡುವಿನ ಈ ಆಕರ್ಷಣೆ ಒಂದರಿಂದ ಇನ್ನೊಂದಕ್ಕೆ – ಯಾವುದೇ ಮಾಧ್ಯಮವಿಲ್ಲದೆ – ಹೇಗೆ ಸಂವಹಿಸುತ್ತದೆ ಎಂದು ಕಲ್ಪಿಸಲಾಗಲಿಲ್ಲ. ಆಗ ಅವನೂ ಸಹ, ಕುವೆಂಪುರವರಂತೆ “ವ್ಯರ್ಥ ಜಿಜ್ಞಾಸೆ”ಯನ್ನು ಬಿಟ್ಟು “ಸೃಷ್ಟಿಕರ್ತ”ನ ಮೊರೆಹೋಗುತ್ತಾನೆ. (ಇದರ ಮತ್ತಷ್ಟು ವಿವರಗಳಿಗೆ ಹಿಂದಿನ ಲೇಖನವನ್ನು ನೋಡಿ)

ಸಾವಿರಾರು ವರ್ಷಗಳಿಂದ ಹಲವಾರು ದೇಶ ವಿದೇಶಗಳ ಮಹಾ-ಮಹಿಮರು ಮ್ಯಾಗ್ನೆಟಿಸಂ ಬಗೆಗೆ ಜಿಜ್ಞಾಸೆ ಮಾಡಿದ್ದರೂ, ಅದು ಯಾವುದೇ ಮಾಧ್ಯಮದ ಸಹಾಯವಿಲ್ಲದೆ ಇನ್ನೊಂದು ಮ್ಯಾಗ್ನೆಟ್ ಅನ್ನು ಹೇಗೆ ಆಕರ್ಷಿಸುತ್ತದೆ ಅಥವಾ ದೂರ ತಳ್ಳುತ್ತದೆ ಎಂದು ಯಾರಿಗೂ ವಿವರಿಸಲಾಗಿರಲಿಲ್ಲ; ಮೈಕೇಲ್ ಫ್ಯಾರಡೇ ಹತ್ತೊಂಬತ್ತನೆಯ ಶತಮಾನದಲ್ಲಿ ಕಣ್ಣಿಗೆ ಕಾಣದ “ಮ್ಯಾಗ್ನೆಟಿಕ್ ಫೀಲ್ಡ್”ಗೆ ತನ್ನ ಚಿತ್ರಗಳ ಮೂಲಕ ಮೂರ್ತ ಸ್ವರೂಪ ನೀಡುವವರೆಗೂ.

ಬಡತನದಿಂದಾಗಿ ತನ್ನ ಬಾಲ್ಯದಲ್ಲಿ ಪ್ರಾಪ್ತ ಕ್ರಮ ಶಿಕ್ಷಣ ಪಡೆಯಲಾಗದಿದ್ದ ಫ್ಯಾರಡೆಗೆ, ಗಣಿತದಲ್ಲಿ ಹೆಚ್ಚಿನ ನೈಪುಣ್ಯತೆ ಇರಲಿಲ್ಲ. ಅವನು, “ಮ್ಯಾಗ್ನೆಟಿಕ್ ಫೀಲ್ಡ್” (ಮತ್ತಷ್ಟು ವೈಜ್ಞಾನಿಕವಾಗಿ ಹೇಳಬೇಕೆಂದರೆ “ಎಲೆಕ್ಟ್ರೋ ಮ್ಯಾಗ್ನೆಟಿಕ್ ಫೀಲ್ಡ್”) ಅನ್ನು ವಿವರಿಸಿದ್ದು ಬಹು ಮಟ್ಟಿಗೆ ತನ್ನ ಚಿತ್ರಗಳ ಮೂಲಕವೇ.

ಈ “ಮ್ಯಾಗ್ನೆಟಿಕ್ ಫೀಲ್ಡ್” ಎಂದರೆ ಏನು? ನಾವು ಚಿಕ್ಕಂದಿನಲ್ಲಿ, ಮ್ಯಾಗ್ನೆಟ್ ಮತ್ತು ಕಬ್ಬಿಣದ ಕಣಗಳೊಡನೆ ಆಟವಾಡುವಾಗ, ಪೇಪರಿನ ಮೇಲೆ ಕಬ್ಬಿಣದ ಕಣಗಳು ಮ್ಯಾಗ್ನೆಟ್ ಸುತ್ತಲೂ ಗೆರೆಗಳ ರೂಪದಲ್ಲಿ ನಿಲ್ಲುವುದನ್ನು ನೋಡಿರಬಹುದು. ಆ ಗೆರೆಗಳು ನಮಗೆ ಪೇಪರ್ ಮೇಲೆ ಮಾತ್ರ ಕಬ್ಬಿಣದ ಕಣಗಳ ಮೂಲಕ ಕಾಣುವುದಾದರೂ, ಅವು ಮ್ಯಾಗ್ನೆಟ್ ಸುತ್ತಲೂ – ಎಲ್ಲಾ ದಿಕ್ಕಿನಲ್ಲೂ – ಆವರಿಸಿವೆ. ಮ್ಯಾಗ್ನೆಟ್‌ ಗಳ ಆಯಸ್ಕಾಂತದ ಆಕರ್ಷಣೆ/ನಿರಾಕರ್ಷಣೆಗಳು ಸಂವಹಿಸುವುದು ಈ ಗೆರೆಗಳ ಮೂಲಕವೇ. ಇದುವೇ “ಮ್ಯಾಗ್ನೆಟಿಕ್ ಫೀಲ್ಡ್”. ಅದಕ್ಕೆ ಆ ಹೆಸರನ್ನಿತ್ತವನೂ ಮೈಕೇಲ್ ಫ್ಯಾರಡೆಯೇ. (ಪಕ್ಕದ ಚಿತ್ರವನ್ನು ನೋಡಿ)

ಮೈಕೇಲ್ ಫ್ಯಾರಡೆ, “ಮ್ಯಾಗ್ನೆಟಿಕ್ ಫೀಲ್ಡ್”ಗೆ ತನ್ನ ಮಹಾನ್ ಕಲ್ಪನಾ ಶಕ್ತಿಯ ಮೂಲಕ ಒಂದು ಸುಲಭವಾಗಿ ಅರ್ಥಮಾಡಿಕೊಳ್ಳಬಲ್ಲ ಮೂರ್ತ ಸ್ವರೂಪ ನೀಡಿದ್ದಷ್ಟೇ ಅಲ್ಲ, ಆ “ಮ್ಯಾಗ್ನೆಟಿಕ್ ಫೀಲ್ಡ್” ಅನ್ನು ಲೋಹದ ತಂತಿಗಳ ಮೂಲಕ ಕತ್ತರಿಸಿದರೆ, ಆ ತಂತಿಯಲ್ಲಿ ವಿದ್ಯುತ್ ಶಕ್ತಿಯ ಉತ್ಪಾದನೆ ಆಗುವುದನ್ನೂ ತೋರಿಸಿಕೊಟ್ಟ. (ಪಕ್ಕದ ಚಿತ್ರವನ್ನು ನೋಡಿ)


ಫ್ಯಾರಡೆಯ ಈ ಹೊಳಹೇ ಮುಂದೆ ಐನ್‌ಸ್ಟೈನನ “ರಿಲೆಟಿವಿಟಿ” ಸಿದ್ಧಾಂತಕ್ಕೆ ಕಾರಣೀಭೂತವಾಯಿತು.

(ಮುಂದುವರೆಯುವುದು)