ಇಲ್ಲಿನ ಕ್ರಿಕೆಟ್ ಆಟ ಎಷ್ಟು ಮೇಲುಗೈ ಆಗಿತ್ತೆಂದರೆ ಇವರ ವಿರುದ್ಧ ಆಡುವುದಕ್ಕೇ ಟೀಮುಗಳು ಹೆದರುತ್ತಿದ್ದವು! ಇವರ ವೇಗದ ಬೋಲಿಂಗ್‌ನಲ್ಲಿ ಎಷ್ಟು ಶಕ್ತಿ ಇತ್ತೆಂದರೆ ಆಡುವುದು ಇರಲಿ, ರನ್ ಹೊಡೆಯುವುದು ಇರಲಿ, ಏಟು ತಿನ್ನದೆ ಹೇಗೆ ಆಡುವುದು? ಎಂಬ ಶಂಕೆ ಮನಸ್ಸಿನಲ್ಲಿ ಏಳುತ್ತಿತ್ತು. ಭಾರತದ ಆಲ್-ರೌಂಡರ್ ಬಾಪು ನಾದ್ಕರ್ಣಿ ಒಮ್ಮೆ ಹೀಗೆ ಹೇಳಿದ್ದರು: ‘ಇವರ ಫಾಸ್ಟ್ ಬೋಲರ್ಸ್‌ ಬೋಲಿಂಗ್ ಮಾಡುವುದನ್ನು ನೋಡಿದರೆ ನಾವು ಎಷ್ಟೋ ಸಲ ಪೆವಿಲಿಯನ್‌ನಲ್ಲೇ ಔಟ್ ಆಗಿಬಿಡ್ತಿದ್ವಿ!’
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಹೊಸ ಬರಹ ನಿಮ್ಮ ಓದಿಗೆ

ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕಾದ ಮಧ್ಯೆ ಬರುವ ಕೆಲವು ದ್ವೀಪಗಳಿಗೆ ವೆಸ್ಟ್ ಇಂಡೀಸ್ ಎಂದು ಕರೆಯುತ್ತಾರೆ. ನೋಡಲು ಬಹಳ ಮನೋಹರವಾಗಿ ಸುಂದರವಾದ ಸಮುದ್ರದ ಕಡಲು ತೀರ, ಬಿಸಿಲಿರುವ ಹವಾಮಾನ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ತಾಣಗಳು ಅಲ್ಲಿವೆ.

ಆಂಟಿಗ ಮತ್ತು ಬರ್ಬ್ಯುಡ, ಬರ‍್ಬಡಾಸ್, ಗ್ರೆನಾಡ, ಗಯಾನ, ಜಮೈಕ, ಟ್ರಿನಿಡಾಡ್ ಮತ್ತು ಟೊಬಾಗೊ, ಸಂತ ಲ್ಯೂಸಿಯ, ಸಂತ ವಿನ್ಸೆಂಟ್‌ ಮುಂತಾದವು ಅಲ್ಲಿನ ಮುಖ್ಯ ರಾಜ್ಯಗಳು.

ಎರಡು ಅಮೆರಿಕಾದ ಮಧ್ಯೆ ಇದ್ದು ಕ್ರಿಕೆಟ್ ಗಂಧವೇ ಇಲ್ಲದವರ ಮಧ್ಯೆ ಕ್ರಿಕೆಟ್‌ನ ಬಾಹುಬಲಿಗಳಾಗಿದ್ದರು ಒಂದು ಕಾಲದಲ್ಲಿ! ಇಂಗ್ಲೆಂಡಿನ ಅಧಿಪತ್ಯದಲ್ಲಿದ್ದ ಕಾರಣ ಇಲ್ಲಿ ಕ್ರಿಕೆಟ್ ಆಟ ಚೆನ್ನಾಗಿ ಬೇರೂರಿ ನಿಂತಿದೆ.

1800 ಆಸುಪಾಸಿನಲ್ಲಿ ಇಂಗ್ಲೆಂಡಿನ ಮಿಲಿಟರಿಯಲ್ಲಿ ಕೆಲಸ ಮಾಡುವವರು ಅಲ್ಲಿ ಕ್ರಿಕೆಟ್ ಆಡಲು ಶುರು ಮಾಡಿದರು. ಬಿಳಿಯ ಜನಗಳೇ ಆಡುತ್ತಿದ್ದ ಆಟಗಳಿಗೆ ಕಪ್ಪುಜನರನ್ನು ಸೇರಿಸಿಕೊಳ್ಳುತ್ತಿರಲಿಲ್ಲ. ಕ್ರಮೇಣ ಅವರುಗಳ ಆಟದ ವೈಖರಿ, ಸಾಮರ್ಥ್ಯ ನೋಡಿ ಅವರುಗಳನ್ನು ತಮ್ಮ ಜೊತೆಗೆ ಸೇರಿಸಿಕೊಳ್ಳಲು ಶುರುಮಾಡಿದರು. ಅಲ್ಲಿನ ಜನಗಳು ಚೆನ್ನಾಗಿ ಆಡುತ್ತಿದ್ದ ಕಾರಣ ಮಿಶ್ರಿತ ಬಣ್ಣದ ಟೀಮುಗಳು ಬರಲು ಶುರುವಾಯಿತು. ವೆಸ್ಟ್ ಇಂಡೀಸ್‌ನ ಜಾರ್ಜ್‌ ಹಾಡ್ಲಿ, ಲಿಯರಿ ಕಾನ್ಸಟನ್‌ಟೈನ್ ಮತ್ತು ಫ್ರಾಂಕ್ ವೊರೆಲ್ ಅವರ ಆಟದ ಜೊತೆಗೆ ಓದಿನಲ್ಲಿಯೂ ಪದವೀಧರರಾಗಿದ್ದರಿಂದ ಅವರುಗಳಿಗೆ ಕ್ರಿಕೆಟ್ ಟೀಂಗಳನ್ನು ಮಾಡುವ ಅವಕಾಶ ಸಿಕ್ಕಿತು. ವೆಸ್ಟ್ ಇಂಡೀಸ್ ಟೀಂ ಎಷ್ಟು ಮುಂದೆ ಬಂತು ಎಂದರೆ ಅಲ್ಲಿಗೆ ಬರುತ್ತಿದ್ದ ಮಿಲಿಟರಿ ಟೀಮ್‌ಗಳನ್ನು ಸೋಲಿಸಲು ಶುರುಮಾಡಿತು.

ಅಂದು:
ಇಲ್ಲಿನ ಕ್ರಿಕೆಟ್ ಆಟ ಎಷ್ಟು ಮೇಲುಗೈ ಆಗಿತ್ತೆಂದರೆ ಇವರ ವಿರುದ್ಧ ಆಡುವುದಕ್ಕೇ ಟೀಮುಗಳು ಹೆದರುತ್ತಿದ್ದವು! ಇವರ ವೇಗದ ಬೋಲಿಂಗ್‌ನಲ್ಲಿ ಎಷ್ಟು ಶಕ್ತಿ ಇತ್ತೆಂದರೆ ಆಡುವುದು ಇರಲಿ, ರನ್ ಹೊಡೆಯುವುದು ಇರಲಿ, ಏಟು ತಿನ್ನದೆ ಹೇಗೆ ಆಡುವುದು? ಎಂಬ ಶಂಕೆ ಮನಸ್ಸಿನಲ್ಲಿ ಏಳುತ್ತಿತ್ತು. ಭಾರತದ ಆಲ್-ರೌಂಡರ್ ಬಾಪು ನಾದ್ಕರ್ಣಿ ಒಮ್ಮೆ ಹೀಗೆ ಹೇಳಿದ್ದರು: ‘ಇವರ ಫಾಸ್ಟ್ ಬೋಲರ್ಸ್‌ ಬೋಲಿಂಗ್ ಮಾಡುವುದನ್ನು ನೋಡಿದರೆ ನಾವು ಎಷ್ಟೋ ಸಲ ಪೆವಿಲಿಯನ್‌ನಲ್ಲೇ ಔಟ್ ಆಗಿಬಿಡ್ತಿದ್ವಿ!’ ಆದರೆ ಚಂದು ಬರ‍್ಡೆ ಹೀಗೆ ಹೇಳಿದರು. ‘ಒಂದೇ ಇನ್ನಿಂಗ್ಸಿನಲ್ಲಿ ಎರಡು ಶತಕಗಳು ಗಳಿಸುವ ನನಗೆ ಅವಕಾಶ ಬಂದಿತ್ತು. ಅದು ತಪ್ಪಿ ಹೋಯಿತು. ಆದರೆ ಆವತ್ತು ಒಂದೇ ಸಮನೆ ಮೈಗೆ ಏಟು ತಿಂದು ಇನ್ನು ಯಾವತ್ತೂ ವೇಗದ ಬೋಲಿಂಗ್‌ಗೆ ಹೆದರಲ್ಲ. ಆವತ್ತೇ ನಾನು ನಿಜವಾದ ಕ್ರಿಕೆಟರ್ ಆದೆ!’

(ಮಾಲ್ಕಮ್ ಮಾರ್ಷಲ್)

ಕ್ರಮೇಣ ವೆಸ್ಟ್ ಇಂಡೀಸ್ ಟೀಮ್ ಪ್ರಪಂಚದ ಯಾವ ಟೀಮಿಗಿಂತ ಕಡಿಮೆಯಿಲ್ಲ ಎಂದಾಯಿತು. ಅವರು ಓಡಿಐ ಕ್ರಿಕೆಟ್ ಆಟದಲ್ಲಿ ಎಷ್ಟು ಮುಂದೆ ಬಂದಿದ್ದರೆಂದರೆ ಅವರು ಸತತವಾಗಿ -1975 ಮತ್ತು 1979ರಲ್ಲಿ ವರ್ಲ್ಡ್‌ ಕಪ್ಪನ್ನು ಗೆದ್ದರು. 1983ರಲ್ಲಿ ಗೆದ್ದಿದ್ದರೆ ಮೂರಕ್ಕೆ ಮೂರುಸಲ ಗೆದ್ದ ದಾಖಲೆ ಅವರದಾಗಿರುತ್ತಿತ್ತು, ಆದರೆ ಭಾರತ ದೇಶ ಕಪಿಲ್ ಅವರ ನಾಯಕತ್ವದಲ್ಲಿ ಅದಾಗಲು ಬಿಡಲಿಲ್ಲ. ಅವರನ್ನು ಜೂನ್ 1983ರಲ್ಲಿ ಸೋಲಿಸಿ ಭಾರತ ಮೊದಲ ಬಾರಿಗೆ ವಿಶ್ವ ಕಪ್ಪನ್ನು ಪಡೆಯಿತು. ಇದು ವೆಸ್ಟ್ ಇಂಡೀಸಿಗೆ ಅನಿರೀಕ್ಷಿತ ಪೆಟ್ಟಾಯಿತು.

ಸುಮಾರು 15 ಇಂಗ್ಲಿಷ್ ಮಾತನಾಡುವ ಕರಿಬಿಯನ್ ದೇಶಗಳು ಒಟ್ಟುಗೂಡಿ ವೆಸ್ಟ್ ಇಂಡೀಸ್ ಎಂದು ಕರೆಯಲ್ಪಡುವ ಟೀಮ್ ರಚನೆಯಾಯಿತು. 1970ರಿಂದ 1990ವರೆಗೆ ವೆಸ್ಟ್ ಇಂಡೀಸ್‌ನ ಎದುರಾಳಿಗಳು ಅವರ ವಿರುದ್ಧ ಆಡಲು ಹಿಂಜರಿಯುತ್ತಿದ್ದರು. ಅವರ ಬ್ಯಾಟಿಂಗ್ ಮತ್ತು ಬೋಲಿಂಗ್‌ನಲ್ಲಿ ಅಸಾಧಾರಣ ಪ್ರತಿಭೆ ಇದ್ದು ಎಲ್ಲಾ ದೇಶದ ಮೇಲೆ ಅವರು ಸುಲಭವಾಗಿ ಗೆಲ್ಲುತ್ತಿದ್ದರು.

1940ರಲ್ಲಿ ಗರ‍್ರಿ ಗೋಮ್ಸ್, ಸ್ಟಾಲ್ಮೆಯರ್, ಲಿಯರಿ ಕಾನ್ಸ್ಟಂಟೈನ್‌, ಜಾರ್ಜ್‌ ಹೆಡ್ಲಿ, ಗರ‍್ರಿ ಅಲೆಕ್ಸಾಂಡರ್ ಮುಂತಾದವರು ವೆಸ್ಟ್ ಇಂಡೀಸ್‌ನ ಕ್ರಿಕೆಟ್‌ನಲ್ಲಿ ಹೆಸರುವಾಸಿಯಾಗಿದ್ದರು.

ಜೂನ್ 29, 1950ರಲ್ಲಿ ಮೊಟ್ಟ ಮೊದಲ ಬಾರಿ ವೆಸ್ಟ್ ಇಂಡೀಸ್ ಇಂಗ್ಲೆಂಡ್ ಟೀಮನ್ನು ವರ್ಲ್ಡ್‌ ಮೈದಾನದಲ್ಲಿ ಸೋಲಿಸಿತು. ಸನ್ನಿ ರಾಮಧಿನ್ ಮತ್ತು ಆಲ್ಫ್ ವ್ಯಾಲೆಂಟಿನ್ ಅವರ ಸ್ಪಿನ್ ಬೋಲಿಂಗ್‌ನ ಚಮತ್ಕಾರದಿಂದ ವೆಸ್ಟ್ ಇಂಡೀಸ್ ಆ ಪಂದ್ಯವನ್ನು ಗೆದ್ದರು. 16 ಆಗಸ್ಟ್ ರಂದು 3-1 ಅಂತರದಲ್ಲಿ ವೆಸ್ಟ್ ಇಂಡೀಸ್ ಇಂಗ್ಲೆಂಡನ್ನು ಪ್ರಥಮಬಾರಿ ಟೆಸ್ಟ್ ಸರಣಿಯಲ್ಲಿ ಸೋಲಿಸಿತು. ಆಗ ವೊರೆಲ್ ಜೊತೆಗೆ ಕ್ಲೈಡ್ ವಾಲ್ಕಾಟ್, ಎರ‍್ಟನ್ ವೀಕ್ಸ್ ಮುಂತಾದ ಮಹಾನ್ ಕ್ರಿಕೆಟರ್‌ಗಳು ಆಡುತ್ತಿದ್ದರು. ವೊರೆಲ್, ವೀಕ್ಸ್, ವಾಲ್ಕಾಟ್, 3 ಡಬ್ಲೂ- ಎಂದು ಪ್ರಸಿದ್ಧಿಯಾಗಿದ್ದರು.

1960ರಲ್ಲಿ ವೆಸ್ಟ್ ಇಂಡೀಸ್ ಫ್ರಾಂಕ್ ವೊರೆಲ್ ನಾಯಕತ್ವ ವಹಿಸಿದರು. ಇದೇ ಮೊದಲ ಬಾರಿ ಮಿಶ್ರ ಬಣ್ಣದವನೊಬ್ಬ ನಾಯಕತ್ವ ವಹಿಸಲಾರಂಬಿಸಿದ್ದು. ಇದರ ಪರಿಣಾಮ ಬೀರಿ ಆಗಿನಿಂದ ಇದೇ ವಾಡಿಕೆಯಾಯಿತು. ಜಮೈಕದಿಂದ ಬಂದ ವೊರೆಲ್ ಪದವೀಧರರಾಗಿದ್ದು ಅಲ್ಲಿನ ಸೆನೆಟರ್ ಕೂಡ ಆಗಿದ್ದರು. ಬಲಗೈನಲ್ಲಿ ಬ್ಯಾಟಿಂಗ್ ಆಡುತ್ತಿದ್ದ ವೊರೆಲ್ ಎಡಗೈಲಿ ವೇಗವಾಗಿ ಬೋಲಿಂಗ್ ಮಾಡುತ್ತಿದ್ದರು. ವೊರೆಲ್ ಅವರ ನಾಯಕತ್ವದಲ್ಲೇ ವಿಶ್ವದ ಮೊದಲ ಬಾರಿ ಒಂದು ಟೆಸ್ಟ್ ಪಂದ್ಯ ‘ಟೈ’ ನಲ್ಲಿ ಮುಕ್ತಾಯಗೊಂಡಿತು.

(ತಜೆನರೇನ್ ಚಂದ್ರಪಾಲ್)

ಭಾರತದ ನಾಯಕ ನಾರಿ ಕಂಟ್ರಾಕ್ಟರ್ ಅವರಿಗೆ ಒಂದು ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಬೋಲರ್ ಗ್ರಿಫಿತ್ ಬೋಲಿಂಗ್‌ನಲ್ಲಿ ತಲೆಗೆ ಏಟುಬಿದ್ದು ತೀವ್ರ ರಕ್ತಸ್ರಾವವಾಗಿ ಜೀವಕ್ಕೇ ಅಪಾಯ ಬಂದಾಗ, ಅವರಿಗೆ ರಕ್ತ ಕೊಟ್ಟವರಲ್ಲಿ ವೊರೆಲ್ ಒಬ್ಬರು. ದುರದೃಷ್ಟವಶಾತ್, ಸ್ವಲ್ಪ ವರ್ಷಗಳಾದ ಮೇಲೆ ವೊರೆಲ್ ಲ್ಯೂಕೇಮಿಯ ಅಂದರೆ ರಕ್ತದ ಕ್ಯಾನ್ಸರ್‌ಗೆ ಪ್ರಾಣ ಕಳೆದುಕೊಂಡರು.

1960ರಿಂದ 1990ವರೆಗೆ ವೆಸ್ಟ್‌ಇಂಡೀಸ್ ಕ್ರಿಕೆಟ್‌ನಲ್ಲಿ ಬಹಳ ಮಹಾನ್ ಕ್ರಕೆಟ್ ಆಟಗಾರರು ಅವರ ದೇಶವನ್ನು ಪ್ರತಿನಿಧಿಸಿದರು. ಗರ‍್ಫೀಲ್ಡ್ ಸೋಬರ್ಸ್‌, ರೋಹನ್ ಕನ್ಹಾಯ್, ಲಾನ್ಸ್ ಗಿಬ್ಸ್, ವಿವಿಯನ್ ರಿಚರ್ಡಸ್, ಬ್ರಿಯನ್ ಲಾರ, ಕ್ಲೈವ್ ಲಾಯ್ಡ್, ಗೊರ್ಡನ್ ಗ್ರೀನಿಡ್ಜ್, ಡೆಸ್ಮಂಡ್ ಹೇನ್ಸ್, ಆಂಡಿ ರಾಬರ್ಟ್ಸ್‌, ಕರ್ಟಲಿ ಆಂಬ್ರೋಸ್, ಮೈಕೆಲ್ ಹೋಲ್ಡಿಂಗ್, ಮಾರ್ಕಲ್ ಮಾರ್ಷಲ್, ಕೋರ್ಟ್ನಿ ವಾಲ್ಷ್, ಕಾರ್ಲ್‌ ಹೂಪರ್, ಜೊಎಲ್ ಗಾರ್ನರ್, ವೆಸ್ ಹಾಲ್, ಆಲ್ವಿನ್ ಕಾಲಿಚರನ್ ಮತ್ತು ಶಿವನಾರಾಯಣ್‌ ಚಂದ್ರಪಾಲ್.

ವೆಸ್ಟ್ ಇಂಡೀಸ್ ಕ್ರಿಕೆಟ್‌ನಲ್ಲಿ ಎಷ್ಟು ಪ್ರಬಲವಾದ ದೇಶವಾಗಿತ್ತೆಂದರೆ ನಾಲ್ಕು ವರ್ಷಕ್ಕೆ ಒಮ್ಮೆ ನಡೆಯುವ ಒಡಿಐ ಟ್ರೋಫಿಯನ್ನ 1975 ಮತ್ತು 1979ರಲ್ಲಿ ಪ್ರುಡೆನ್ಷಿಯಲ್ ಕಪ್ಪನ್ನು ಸತತವಾಗಿ ಗೆದ್ದರು. ಮೂರನೇ ಬಾರಿ ಗೆದ್ದು ಹ್ಯಾಟ್-ಟ್ರಿಕ್ ಮಾಡಲು ಬಂದ ಪ್ರಬಲವಾದ ವೆಸ್ಟ್ ಇಂಡೀಸನ್ನು 1983ರಲ್ಲಿ ಭಾರತ ಕಪಿಲ್ ದೇವ್ ಅವರ ನಾಯಕತ್ವದಲ್ಲಿ ಸೋಲಿಸಿತು! 2012 ಮತ್ತು 2016ರಲ್ಲಿ ವೆಸ್ಟ್ ಇಂಡೀಸ್ ಐಸಿಸಿ ಟಿ20 ಟ್ರೋಫಿಯನ್ನು ಗೆದ್ದರು. ಗಾರ‍್ಫೀಲ್ಡ್ ಸೋಬರ್ಸ್‌ ವಿಶ್ವದಲ್ಲೇ ಸುಪ್ರಸಿದ್ಧ ಆಲ್- ರೌಂಡರ್ ಅಂತ ಎಲ್ಲರ ಒಮ್ಮತದಿಂದ ಬಂದ ತೀರ್ಮಾನ. ಸ್ವಂತ ಡಾನ್ ಬ್ರಾಡ್ಮನ್ ಅವರೇ ಇಂತಹ ಕ್ರಿಕೆಟ್ ಆಟಗಾರ ಮತ್ತೆ ಹುಟ್ಟಿ ಬರುತ್ತಾನೋ ಇಲ್ಲವೋ ಎಂದು ಅವರನ್ನು ಶ್ಲಾಘಿಸಿದ್ದಾರೆ.

ಅವರ ಆಟದ ದಾಖಲೆ ಹೀಗಿದೆ: 93 ಟೆಸ್ಟ್ ಆಡಿದ ಸೋಬರ್ಸ್‌ 57.78 ಸರಾಸರಿಯಲ್ಲಿ 8032 ರನ್ ಹೊಡೆದರು. ಮತ್ತೆ ಎಡಗೈಲಿ ವೇಗವಾಗಿ ಹಾಗೂ ಸ್ಪಿನ್‌ನಲ್ಲೇ ಎರಡು ತರಹ ಬೋಲಿಂಗ್ ಮಾಡಿ 34.03ರ ಸರಾಸರಿಯಲ್ಲಿ 235 ವಿಕೆಟ್ ತೆಗೆದರು. ಜೊತೆಗೆ ಅತ್ಯುತ್ತಮ ಫೀಲ್ಡರ್ ಕೂಡ ಆಗಿದ್ದರು. ಅವರು 26 ಶತಕಗಳನ್ನು ಬಾರಿಸಿದರು.

ವೆಸ್ಟ್ ಇಂಡೀಸ್ ಸತತವಾಗಿ ಎರಡು ಬಾರಿ 1975, 1979ರಲ್ಲಿ ಓಡಿಐ ಕಪ್ಪನ್ನು ಗೆದ್ದರೆ, ಆಸ್ಟ್ರೇಲಿಯ ಅದನ್ನು ಮೂರು ಬಾರಿ – 1199, 2003 ಮತ್ತು 2007ರಲ್ಲಿ ಗೆದ್ದಿದ್ದಾರೆ. ವಿವ್ ರಿಚರ್ಡ್ಸ್‌ 121 ಮ್ಯಾಚ್ ಆಡಿ ಅವರ ಸರಾಸರಿ 50.23. 8540 ರನ್ ಹೊಡೆದರು. ಅವರ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ 1985 ರಿಂದ 1991 ವರೆಗೆ ಅತ್ಯಂತ ಯಶಸ್ವಿ ಟೆಸ್ಟ್ ಪಂಗಡವಾಗಿತ್ತು.

ಸುಮಾರು 15 ಇಂಗ್ಲಿಷ್ ಮಾತನಾಡುವ ಕರಿಬಿಯನ್ ದೇಶಗಳು ಒಟ್ಟುಗೂಡಿ ವೆಸ್ಟ್ ಇಂಡೀಸ್ ಎಂದು ಕರೆಯಲ್ಪಡುವ ಟೀಮ್ ರಚನೆಯಾಯಿತು. 1970ರಿಂದ 1990ವರೆಗೆ ವೆಸ್ಟ್ ಇಂಡೀಸ್‌ನ ಎದುರಾಳಿಗಳು ಅವರ ವಿರುದ್ಧ ಆಡಲು ಹಿಂಜರಿಯುತ್ತಿದ್ದರು. ಅವರ ಬ್ಯಾಟಿಂಗ್ ಮತ್ತು ಬೋಲಿಂಗ್‌ನಲ್ಲಿ ಅಸಾಧಾರಣ ಪ್ರತಿಭೆ ಇದ್ದು ಎಲ್ಲಾ ದೇಶದ ಮೇಲೆ ಅವರು ಸುಲಭವಾಗಿ ಗೆಲ್ಲುತ್ತಿದ್ದರು.

ಬ್ರೈನ್ ಲಾರ ಟೆಸ್ಟ್ ಕ್ರಿಕೆಟ್‌ನಲ್ಲೇ ಅತ್ಯಂತ ಹೆಚ್ಚು ರನ್ ಮಾಡಿದರು. ಇಂಗ್ಲೆಂಡಿನ ವಿರುದ್ಧ 2003-04 ರಲ್ಲಿ ಸಂತ ಜಾನ್ಸ್‌ನಲ್ಲಿ ಲಾರ ಅಜೇಯರಾಗಿ 400 ರನ್ ಹೊಡೆದರು. ಲಾರ ಅದಕ್ಕೂ ಮುಂಚೆ 1993-94ರಲ್ಲಿ ಅದೇ ಇಂಗ್ಲೆಂಡ್ ವಿರುದ್ಧ 375 ಅಜೇಯರಾಗಿ ಹೊಡೆದಿದ್ದರು. ಮೊದಲ ದರ್ಜೆ ಮ್ಯಾಚ್‌ಗಳಲ್ಲಿಯೂ ಲಾರ 505ರನ್ ಹೊಡೆದು ದಾಖಲೆಯನ್ನು ಮಾಡಿದ್ದಾರೆ!

ಅವರಲ್ಲಿ ಸುಪ್ರಸಿದ್ಧರಾದವರ ಬೋಲಿಂಗ್ ದಾಖಲೆ ಹೀಗಿದೆ, ಮಾಲ್ಕಮ್ ಮಾರ್ಷಲ್: 81 ಟೆಸ್ಟ್, 376 ವಿಕೆಟ್: ಜೊಎಲ್ ಗಾರ್ನರ್: 58 ಟೆಸ್ಟ್, 259 ವಿಕೆಟ್; ಕೋರ್ಟನಿ ವಾಲ್ಶ್: 55 ಟೆಸ್ಟ್, 255 ವಿಕೆಟ್; ಮೈಕೆಲ್ ಹೋಲ್ಡಿಂಗ್; 55 ಟೆಸ್ಟ್, 239 ವಿಕೆಟ್; ಕರ್ಟ್ಲಿ ಆಂಬ್ರೋಸ್ 50 ಟೆಸ್ಟ್. 224 ವಿಕೆಟ್‌ಗಳು. 1976 ರಲ್ಲಿ ಇಂಗ್ಲೆಂಡಿನಲ್ಲಿ ಆಡಿದ ಒಂದು ಟೆಸ್ಟ್‌ನಲ್ಲಿ ಮೈಕೆಲ್ ಹೋಲ್ಡಿಂಗ್ ಓವಲ್‌ನ ಒಂದು ಟೆಸ್ಟ್ ಪಂದ್ಯದಲ್ಲಿ 149 ರನ್ ಕೊಟ್ಟು 14 ವಿಕೆಟ್ ತೆಗೆದರು. ಆ ದಾಖಲೆ ಹಾಗೇ ಇದೆ. ಅದನ್ನು ಇನ್ನೂ ಯಾರೂ ಮುರಿದಿಲ್ಲ.

ಎಂಡಿ ರಾಬರ್ಟಸ್, ಮೈಕೆಲ್ ಹೋಲ್ಡಿಂಗ್, ಜೊಎಲ್ ಗಾರ್ನರ್ ಮತ್ತು ಕೊಲಿನ್ ಕ್ರಾಫ್ಟ್ ಒಟ್ಟಿಗೆ ಬೋಲ್ ಮಾಡಿ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೋಲರ್‌ಗಳಾಗಿ ಸಮಕಾಲೀನರಾಗಿದ್ದರು. ಅವರನ್ನು ಬೋಲಿಂಗನ್ನು ಹೆಲ್ಮೆಟ್ ಇಲ್ಲದೆ, ತೊಡೆಗೆ ಕಟ್ಟುವ ಪ್ಯಾಡ್‌ಗಳಿಲ್ಲದೆ ಎದುರಿಸಿ ರನ್ ಹೊಡೆದ ಖ್ಯಾತಿ ಭಾರತದ ಆರಂಭದ ಆಟಗಾರ ಸುನಿಲ್ ಗವಾಸ್ಕರ್‌ಗೆ ಸಲ್ಲುತ್ತೆ. ಇದನ್ನು ಕೂಡ ಬ್ರಾಡ್ಮನ್, ಸೋಬರ್ಸ್‌ ಒತ್ತಿ ಹೇಳಿ, ಗವಾಸ್ಕರ್‌ರನ್ನು ಶ್ಲಾಘಿಸಿದ್ದಾರೆ. ಅವರ ಗುಂಪಿನಲ್ಲೇ ಅತ್ಯಂತ ವೇಗವಾಗಿ ಬೋಲಿಂಗ್ ಮಾಡುವ ಮಾಲ್ಕಮ್ ಮಾರ್ಷಲ್ ಅವರ 41ನೇ ವಯಸ್ಸಿನಲ್ಲಿ ಕ್ಯಾನ್ಸರ್ ರೋಗದಿಂದ ಈ ಲೋಕವನ್ನು ತ್ಯಜಿಸಿದರು.

(ಜೇಸನ್‌ ಹೋಲ್ಡರ್‌)

ಇಂದು:
1990ನಂತರ ವೆಸ್ಟ್ ಇಂಡೀಸ್‌ರ ಕ್ರಿಕೆಟ್ ಪ್ರಭಾವ ಕುಂದುತ್ತಲೇ ಹೋಯಿತು. ಅದಕ್ಕೆ ಬಹಳ ಕಾರಣಗಳಿವೆ. ಮುಖ್ಯವಾಗಿ:

1. ಕ್ರಿಕೆಟ್ ಆಟ ಪ್ರಪಂಚದಲ್ಲಿ ಒಂದು ಹವ್ಯಾಸಿ (ಅಮೆಚ್ಯೂರ್) ಆಟದಿಂದ ವೃತ್ತಿಪರ (ಪ್ರೊಫೆಷನಲ್) ಆಟವಾಯಿತು. ವೆಸ್ಟ್ ಇಂಡೀಸ್‌ನಲ್ಲಿ ಹಾಗಾಗದೆ ಕ್ರಿಕೆಟ್ ಆಟಕ್ಕೆ ಧಕ್ಕೆಯಾಯಿತು. ಇದರ ಪರಿಣಾಮ ಪ್ರತಿಭಾವಂತರು ಕ್ರಿಕೆಟ್ ಆಟಗಾರರು ಬೇರೆ ಆಟಗಳಿಗೆ ವಲಸೆ ಹೋದರು ಎನ್ನಲಾಗುತ್ತೆ. ಅಮೆರಿಕದಲ್ಲಿ ಬ್ಯಾಸ್ಕೆಟ್ ಬಾಲ್‌ಗೆ ಒಳ್ಳೆ ಉತ್ತೇಜನವಿದೆ. ಅದನ್ನು ನೋಡುವುದಕ್ಕೆ ಸಾವಿರಾರು ಜನರು ಉತ್ಸುಕರಾಗಿರುತ್ತಾರೆ. ಆಟಗಾರರಿಗೆ ಆರ್ಥಿಕವಾಗಿ ಒಳ್ಳೆ ಬೇಡಿಕೆ ಇದೆ. ಅದರಿಂದ ಒಳ್ಳೆ ಪ್ರತಿಭಾವಂತ ಯುವಕರು ಕ್ರಿಕೆಟ್ ಬದಲು ಬ್ಯಾಸ್ಕೆಟ್ ಬಾಲ್ ಆಟವನ್ನು ಆಡಲು ಇಚ್ಛಿಸುತ್ತಾರೆ.

2. ಅಲ್ಲಿನ ದೇಶಗಳ ಆರ್ಥಿಕ ಸ್ಥಿತಿ ಅಷ್ಟು ಚೆನ್ನಾಗಿರಲಿಲ್ಲ. ಅದ್ದರಿಂದ ಆಟ, ಓಟಗಳಿಗೆ ಸರ್ಕಾರದಿಂದ ಮತ್ತು ಖಾಸಗಿ ಪಂಗಡಗಳಿಂದ ಅಷ್ಟು ಆರ್ಥಿಕ ಸಹಾಯ ದೊರೆಯಲಿಲ್ಲ. ಆದ್ದರಿಂದ ಕ್ರಮೇಣ ಕ್ರಿಕೆಟ್ ಆಟ ವೆಸ್ಟ್ ಇಂಡೀಸ್‌ನಲ್ಲಿ ಕುಂಠಿತಗೊಂಡಿತು.

3. ದೇಶದ ಪರಿಸ್ಥಿತಿಯನ್ನು ನೋಡಿ ಪ್ರತಿಭಾವಂತ ಯುವಕರು ಕ್ರಿಕೆಟ್‌ನಲ್ಲೇ ಮುಂದೆ ಬರಬೇಕಂತ ಇರುವರು ಇಂದು ಪ್ರಸಿದ್ಧಿಯಾಗಿ ಹಣದ ಹೊಳೆಯನ್ನೇ ಹರಿಸುತ್ತಿರುವ ಐಪಿಎಲ್ ಮಾದರಿ ಪ್ರಪಂಚದಲ್ಲೆಲ್ಲಾ ನಡೆಯುತ್ತಿರುವ ಟಿ 20 ಟೂರ್ನಮೆಂಟಿಗೆ ಹೋಗಿ ಆಡಿ ಚೆನ್ನಾಗಿ ಹಣ ಸಂಪಾದಿಸುತ್ತಾರೆ. ಅವರು ದೇಶವನ್ನು ಪ್ರತಿನಿಧಿಸುವುದನ್ನು ಬಿಟ್ಟರು.

ಈ ಕಾರಣಗಳಿಂದ ಒಂದು ಕಾಲದಲ್ಲಿ ಚಾಂಪಿಯನ್ ಆಗಿದ್ದ ವೆಸ್ಟ್ ಇಂಡೀಸ್ ಕ್ರಮೇಣ ತನ್ನ ಪಟ್ಟವನ್ನು ಕಳೆದುಕೊಂಡಿತು. ಕೊನೆಗೆ ಯಾವ ಮಟ್ಟ ತಲುಪಿದೆ ಎಂದರೆ ಈ ವರ್ಷ ಭಾರತದಲ್ಲಿ ನಡೆಯುವ ಒಡಿಐ ವಿಶ್ವ ಕಪ್ ಪಂದ್ಯಕ್ಕೆ ವೆಸ್ಟ್ ಇಂಡೀಸ್ ಸ್ಪರ್ಧೆಗೂ ಬರಲಾಗದೆ ಅರ್ಹತೆಯನ್ನು ಕಳೆದುಕೊಂಡಿದೆ. ಇದು ಅತ್ಯಂತ ದುಃಖದ ಸಮಾಚಾರ. ಒಂದು ಕಾಲದಲ್ಲಿ ಸಿಂಹಸ್ವಪ್ನವಾಗಿದ್ದ ದೇಶದ ಸ್ಥಿತಿ ಎಲ್ಲಿಗೆ ಇಳಿದಿದೆಯೆಂದು ಎಲ್ಲರಿಗೂ ಸಂಕಟವಾಗುತ್ತೆ.

ಟಿ20 ಮತ್ತು ಖಾಸಗಿ ಸಂಸ್ಥೆಗಳು ನಡೆಸುತ್ತಿರುವ ಪ್ರೀಮಿಯರ್ ಲೀಗ್‌ಗಳಲ್ಲಿ ವೆಸ್ಟ್ ಇಂಡೀಸ್ ಆಟಗಾರರು ಹಿಂಡು ಹಿಂಡಾಗಿ ಹೋಗಿ ಆಡಿ ಚೆನ್ನಾಗಿ ದುಡ್ಡು ಸಂಪಾದಿತ್ತಾರೆ. ಅದರಲ್ಲಿ ಮುಖ್ಯವಾಗಿ ಕ್ರಿಸ್ ಗೇಲ್, ಕೈರನ್ ಪೊಲ್ಲಾರ್ಡ್‌, ಮಾರ್ಲನ್ ಸಾಮ್ಯುಯಲ್ಸ್, ಆಂಡ್ರೆ ರಸಲ್, ಡಿಜೆ ಬ್ರಾವೊ, ಕಾರ್ಲೊಸ್ ಬ್ರಾತ್ ವೈಟ್, ಲೆಂಡಲ್ ಸಿಮನ್ಸ್ ಇತ್ಯಾದಿ.

ಕೆಲವು ವರ್ಷಗಳ ಹಿಂದೆ ಡಾರೆನ್ ಸಾಮಿ ನಾಯಕರಾಗಿದ್ದಾಗ ವೆಸ್ಟ್ ಇಂಡೀಸ್ ಮೂರು ಪ್ರಮುಖ ಟೂರ್ನಮೆಂಟನ್ನು ಗೆದ್ದಿದ್ದರು ಚಾಂಪಿಯನ್ಸ್ ಟ್ರೋಫಿ, ಟಿ20 ಕಪ್ ಎರಡು ಬಾರಿ. ಲಾಯ್ಡ್ ತರುವಾಯ ಐಸಿಸಿ ಚಾಂಪಿಯನ್ ಟ್ರೋಫಿ ನಾಯಕರಾಗಿ ಗೆಲ್ಲಿಸಿದ ಕೀರ್ತಿ ಸಾಮಿಗೆ ಹೋಗುತ್ತೆ.
1975 ಮತ್ತು 1979ರಲ್ಲಿ ಮೊದಲಿಗರಾಗಿದ್ದ ವೆಸ್ಟ್‌ ಇಂಡೀಸ್ ಈಗ 10 ಟೀಮ್‌ಗಳಲ್ಲಿ 9 ನೇಯವರಾಗಿದ್ದಾರೆ. 2023ರಲ್ಲಿ ಭಾರತದಲ್ಲಿ ನಡೆಯುವ ಒಡಿಐಗೆ ಅವರು ಆಡಲು ಅರ್ಹತೆಯನ್ನು ಹೊಂದಿಲ್ಲ, ಅವರು ಇಲ್ಲಿಗೆ ಬರುವುದಿಲ್ಲ ಎಂದರೆ ಅಭಿಮಾನಿಗಳಿಗೆ ಸಂಕಟವಾಗುತ್ತೆ ಎಂದರೆ ಅದು ಅತಿಶಯೋಕ್ತಿಯಲ್ಲ. ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ 9ರಲ್ಲಿ 8 ನೇ ಸ್ಥಾನವನ್ನು ಹೊಂದಿದ್ದಾರೆ.

ಟಿ20ರಲ್ಲಿ ಎರಡು ಬಾರಿ ಚಾಂಪಿಯನ್ ಆದ ವೆಸ್ಟ್ ಇಂಡೀಸ್ 16ರಲ್ಲಿ 15ನೇ ಸ್ಥಾನಕ್ಕೆ ಬಂದಿಳಿದಿದೆ. ಈಗೀಗ ಆಡುತ್ತಿರುವ ತಂಡದಲ್ಲಿ ಜೇಸನ್ ಹೋಲ್ಡರ್, ಕೆಮರ್ ರೋಚ್, ಕ್ರಾಗ್ ಬ್ರಾತ್‌ವೈಟ್, ತಜೆನರೇನ್ ಚಂದ್ರಪಾಲ್ ಮುಂತಾದವರು ಚೆನ್ನಾಗಿ ಆಡುತ್ತಿದ್ದಾರೆ. ಮುಂದೆ ವೆಸ್ಟ್ ಇಂಡೀಸ್ ತನ್ನ ಮೊದಲಿನ ಸ್ಥಾನಕ್ಕೆ ಬರುತ್ತದೆ ಎಂಬ ಆಶಯ ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೆ ಇದೆ. ಇದು ಎಲ್ಲಾ ದೇಶದವರ ಆಶಯ ಮತ್ತು ಕ್ರಿಕೆಟಾಯ ನಮಃದ ಹಾರೈಕೆ.