ಈ ನನ್ನ ಎಲ್ಲಾ ಅವಾಂತರಗಳಲ್ಲಿ ನನಗೆ ನೆನಪಾಗುತ್ತಿದ್ದದ್ದು ಮೈಕಲ್ ಮೋಸ್ಲಿ ಮತ್ತು ಅವರ ಟಿವಿ ಕಾರ್ಯಕ್ರಮಗಳು. ಅವುಗಳಲ್ಲಿ ತೋರಿಸುತ್ತಿದ್ದ ಪ್ರಯೋಗಗಳನ್ನು ನಾವು ಸಾಮಾನ್ಯ ಜನರು ಎಚ್ಚರಿಕೆ ವಹಿಸದೆ ಅನುಕರಣೆ ಮಾಡಲು ಹೋದರೆ ಆಗುವ ಅನಾಹುತವನ್ನು ನಾನೇ ಅನುಭವಿಸಿದ್ದೆ. ಅನೇಕ ಬಾರಿ ‘ಆ ಯಾವುದೋ ದೇವತೆಗಳು ನನಗೆ ಎಚ್ಚರಿಕೆ ಕೊಟ್ಟರು. ಎಷ್ಟಾದರೂ ನಾನೊಬ್ಬ ಹುಲುಮಾನವಳು’ ಎಂದು ನನಗೆ ನಾನೇ ಹೇಳಿಕೊಂಡು ಅದನ್ನು ಬೇರೆಯವರಿಗೂ ಹೇಳಿದ್ದೆ. ಕೇಳಿದವರೆಲ್ಲಾ ನಕ್ಕಿದ್ದರು. ಅವರು ಹಾಗೆ ನಕ್ಕಾಗ ನನಗೆ ಮೈಕಲ್ ಮೋಸ್ಲಿ ಮೇಲೆ ಕೋಪ ಬರುತ್ತಿತ್ತು. ಅದನ್ನೂ ಕುರಿತು ಹೇಳುತ್ತಿದ್ದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

ಪ್ರಿಯ ಓದುಗರೆ,

ಆಸ್ಟ್ರೇಲಿಯಾದ ಮುಖ್ಯ ಮಾಧ್ಯಮವಾಹಿನಿಗಳೆಲ್ಲವೂ ಒಬ್ಬ ವ್ಯಕ್ತಿಯ ಬಗ್ಗೆ ಪ್ರೀತಿ, ಆದರ ತೋರಿಸುವುದು ಸ್ವಲ್ಪ ಅಪರೂಪವೇ ಅನ್ನಿ. ಮಾಧ್ಯಮವಾಹಿನಿಗಳಲ್ಲಿ ಇರುವ ಪೈಪೋಟಿ, ಕಚ್ಚಾಟಗಳು ಎಲ್ಲರಿಗೂ ಚಿರಪರಿಚಿತ. ಹಾಗಿರುವಾಗ ಅವರೆಲ್ಲರೂ ಬೇರೊಂದು ದೇಶದ ಹೆಸರುವಾಸಿ ವ್ಯಕ್ತಿಯ ಬಗ್ಗೆ ಒಂದಿಷ್ಟೂ ಕೂಡ ಭಿನ್ನಾಭಿಪ್ರಾಯವಿಲ್ಲದೆ ಒಗ್ಗಟ್ಟಾಗಿ ಆತನ ಬಗ್ಗೆ ಪ್ರೀತಿಯಿಂದ ಮಾತನಾಡಿದಾಗ ನೋಡಿ, ಅದು ಅಪರೂಪವೇ ಸರಿ.

ಬರೀ ಆಸ್ಟ್ರೇಲಿಯಾ ಯಾಕೆ, ಪ್ರಪಂಚದಾದ್ಯಂತ ಎಲ್ಲರೂ ಆತನ ಬಗ್ಗೆ ಒಂದು ವಾರ ಪೂರ್ತಿ ಎಡಬಿಡದೆ ವಿಚಾರಿಸಿದ್ದಾರೆ. ಈ ಒಬ್ಬನೇ ಒಬ್ಬ ಮನುಷ್ಯ ಲಕ್ಷಾಂತರ ಜನರನ್ನು ತನ್ನತ್ತ ಸೆಳೆದು, ಅವರ ಆರೋಗ್ಯ, ಕ್ಷೇಮವನ್ನು ವಿಚಾರಿಸಿದ್ದಾರೆ ಎಂದರೆ ಅವರ ಜನಪ್ರಿಯತೆಯ ಅಂದಾಜು ನಮಗೆ ಸಿಗುತ್ತದೆ. ಹಾಗಾಗಿ ಅದೇ ಲಕ್ಷಾಂತರ ಮಂದಿ ಮೇ ತಿಂಗಳ ಕೊನೆಯಲ್ಲಿ ‘ಮೈಕಲ್ ಎಲ್ಲಿ, ಸಿಕ್ಕಿದರಾ’ ಎಂದು ಪದೇಪದೇ ಕೇಳುವಂತಾಗಿತ್ತು. ಹಾಗೆ ಕೇಳಿದವರಲ್ಲಿ ನಾನೂ ಕೂಡ ಒಬ್ಬಳು. ಅವರ ಆಕರ್ಷಣೀಯ ಮುದ್ದು ಮುಖ, ಮೃದುವಾದ ನಗೆ, ಮಾತನಾಡುವ ಶೈಲಿ, ಎಲ್ಲಿಯಾದರೂ ಸಲ್ಲುವ ಎಲ್ಲರೂ ಅಪೇಕ್ಷಿಸುವ ವ್ಯಕ್ತಿತ್ವಗಳತ್ತ ಗಮನ ಕೊಟ್ಟವರಲ್ಲಿ ನಾನೂ ಕೂಡ ಒಬ್ಬಳು. ಅದಕ್ಕೂ ಹೆಚ್ಚಾಗಿ ಅವರ Fifty Plus – healthy ageing ಆರೋಗ್ಯ ಕಾರ್ಯಕ್ರಮಗಳನ್ನು, ಹೊಸಹೊಸ ಪ್ರಯೋಗಗಳನ್ನು, ಬೇರೆಬೇರೆ ದೇಶದ ಜನರ ಜೀವನಾನುಭವಗಳನ್ನು ಕೇಳಿ, ನೋಡಿ ಪ್ರಭಾವಿತರಾದವರಲ್ಲಿ ನಾನೂ ಸೇರಿದ್ದೆ.

ಆತನ ಹೆಸರು ಮೈಕಲ್ ಮೋಸ್ಲಿ (Michael Mosley). ಇಂಗ್ಲೆಂಡಿನ ನಿವಾಸಿ. ಅವರು ಲಂಡನ್ ಕಾಲೇಜಿನಿಂದ ಮೆಡಿಕಲ್ ಡಿಗ್ರಿ ಪಡೆದರೂ ವ್ಯೆದ್ಯಕೀಯ ವೃತ್ತಿಯನ್ನು ತಿರಸ್ಕರಿಸಿ ಮೆಡಿಕಲ್ ಜರ್ನಲಿಸಂ ಕ್ಷೇತ್ರಕ್ಕೆ ಕಾಲಿಟ್ಟವರು. ಕಾಲಕ್ರಮೇಣ ‘ಟೆಲಿವಿಷನ್ ಡಾಕ್ಟರ್’ ಎಂದು ಅವರು ಪ್ರಸಿದ್ಧರಾದರು. ಇದಕ್ಕೆ ಕಾರಣ ಸಾಮಾನ್ಯ ಜನರ ಆರೋಗ್ಯ ಸೌಖ್ಯದ ಬಗ್ಗೆ ನಡೆಯುತ್ತಿದ್ದ ಅನೇಕ ಸಂಶೋಧನೆಗಳನ್ನು ಬೆಳಕಿಗೆ ತಂದು, ತಾವೂ ಕೂಡ ಅಂತಹ ಕೆಲವು ಅಧ್ಯಯನಗಳಲ್ಲಿ ಪಾಲ್ಗೊಂಡು ಟೆಲಿವಿಷನ್ ಕಾರ್ಯಕ್ರಮಗಳನ್ನು ನಡೆಸುತ್ತಾ, ಬೆಸ್ಟ್ ಸೆಲ್ಲಿಂಗ್ ಪುಸ್ತಕಗಳನ್ನು ಬರೆಯುತ್ತಾ, ದೇಶವಿದೇಶಗಳಲ್ಲಿ ಸುತ್ತುತ್ತಾ ಜನರ ಆರೋಗ್ಯದ ಬಗ್ಗೆ ಸರಕಾರಗಳ, ಸಂಶೋಧನಾ ಸಂಸ್ಥೆಗಳ ಗಮನ ಸೆಳೆದರು. ಸ್ವತಃ ತಾವೇ ತಮ್ಮನ್ನು ಹಲವಾರು ಆರೋಗ್ಯ ಸುಧಾರಣಾ ಪ್ರಯೋಗಗಳಿಗೆ ಒಡ್ಡಿಕೊಂಡು ಲಾಭ-ನಷ್ಟಗಳ ವಿಶ್ಲೇಷಣೆಗಳನ್ನೂ ಟೆಲಿವಿಷನ್ ಕಾರ್ಯಕ್ರಮಗಳಲ್ಲಿ ಹಂಚಿಕೊಂಡರು. ಅವರ ಹೀಗೊಂದು ಕಾರ್ಯಕ್ರಮವು ಆಸ್ಟ್ರೇಲಿಯಾದಲ್ಲಿ ನಡೆಸುತ್ತಿದ್ದ ನಿದ್ದೆ ಬಾರದ ಸಮಸ್ಯೆಯನ್ನು ಕುರಿತ ಅಧ್ಯಯನವಾಗಿತ್ತು. ತಾವೂ ಕೂಡ ನಿದ್ರಾಹೀನತೆ ಸಮಸ್ಯೆಯನ್ನು ಅನುಭವಿಸುತ್ತಿರುವುದನ್ನು ಅವರು ಬಹಿರಂಗಪಡಿಸಿ, ಅಧ್ಯಯನದಲ್ಲಿ ಒಬ್ಬ ಪೇಷಂಟ್ ಆಗಿ ಪಾಲ್ಗೊಂಡು ಆಸ್ಟ್ರೇಲಿಯಾದಲ್ಲಿ ಮನೆಮಾತಾಗಿದ್ದರು.

ಕೇವಲ ಅರವತ್ತೇಳು ವರ್ಷಗಳ ವಯಸ್ಸಿನ ಮೈಕಲ್ ಮೋಸ್ಲಿ ಜೂನ್ ೫ ರಂದು ನಿಧನರಾದರು. ತಮ್ಮ ಕುಟುಂಬಸಮೇತ ಜೂನ್ ತಿಂಗಳ ಹಿತವಾದ ಬಿಸಿಲಿನಲ್ಲಿ ಒಂದಷ್ಟು ದಿನಗಳ ಹಾಲಿಡೇ ರುಚಿ ಸವಿಯಲು ಗ್ರೀಸ್ ದೇಶದ ಒಂದು ದ್ವೀಪಕ್ಕೆ ತೆರಳಿದ್ದರು. ಇಳಿ ಮಧ್ಯಾಹ್ನ ಇಪ್ಪತ್ತು ನಿಮಿಷಗಳ ವಾಕಿಂಗ್‌ಗೆಂದು ಹೋದ ಮೈಕಲ್ ಮೋಸ್ಲಿ ವಾಪಸ್ ಬರಲಿಲ್ಲ. ವಾಕಿಂಗ್ ಹೋಗಿದ್ದ ಗಂಡ ವಾಪಸ್ಸಾಗದಿದ್ದಾಗ ಅವರ ಹೆಂಡತಿ ಪೊಲೀಸರನ್ನು ಸಂಪರ್ಕಿಸಿದರು. ಅಷ್ಟು ಚಿಕ್ಕ ದ್ವೀಪದಲ್ಲಿ ಅಷ್ಟೊಂದು ಸುಲಭವಾಗಿ ಕಳೆದುಹೋಗಿ ಎರಡು ದಿನಗಳ ಹುಡುಕಾಟದ ನಂತರವೂ ಮೈಕಲ್ ನಿಗೂಢ ನಾಪತ್ತೆ ಅನೇಕ ಊಹಾಪೋಹಗಳನ್ನು ಹುಟ್ಟುಹಾಕಿತ್ತು. ಅವರು ಕೊಲೆಯಾದರೇ, ಅವರನ್ನು ಅಪಹರಿಸಲಾಯ್ತೆ, ಮತಿಭ್ರಮಣೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡರೇ, ಅವರಿಗೇನಾಯ್ತು ಎನ್ನುವ ನಾನಾ ಮಾತುಗಳು ಕೇಳಿಬಂದವು. ಕಡೆಗೆ ಐದಾರು ದಿನಗಳ ಸತತ ಶೋಧನೆಯ ಬಳಿಕ ಅವರು ಒಂದು ಇಳಿಜಾರಿನಲ್ಲಿ ಬಿದ್ದದ್ದು, ಅವರ ದೇಹವು ಸಮುದ್ರದ ಅಂಚಿನಲ್ಲಿ ಪತ್ತೆಯಾಯ್ತು.

ನಾಲ್ಕು ಮಕ್ಕಳ ತಂದೆ, ಬ್ರಿಟಿಷ್ ಟೆಲಿವಿಷನ್ ವಲಯದ ಬಹು ಹೆಸರುವಾಸಿ ವ್ಯಕ್ತಿ, ವಿಶ್ವದಾದ್ಯಂತ ಸಂಚರಿಸುತ್ತಾ ‘ಟೆಲಿವಿಷನ್ ಡಾಕ್ಟರ್’ ಆಗಿದ್ದುಕೊಂಡು ಅಷ್ಟೆಲ್ಲಾ ಆರೋಗ್ಯ ಕಾರ್ಯಕ್ರಮಗಳನ್ನು ಜನಪ್ರಿಯವಾಗಿಸಿದ್ದ ಮೈಕಲ್ ಮೋಸ್ಲಿ ತಮ್ಮ ಸಾವಿನಲ್ಲಿ ತಾನೂ ಕೂಡ ಒಬ್ಬ ಹುಲುಮನುಷ್ಯ ಎನ್ನುವುದನ್ನು ಸಾಬೀತುಪಡಿಸಿದರು. ಯಮರಾಜ ಕರೆದಾಗ ಎಲ್ಲರೂ ಹೋಗಲೇಬೇಕು.

ಆಗಾಗ, ಸಮಯವಾದಾಗ, ನಾನು ಮೈಕಲ್ ಮೋಸ್ಲಿ ನಡೆಸಿಕೊಡುತ್ತಿದ್ದ Fifty Plus-Healthy ageing ಆರೋಗ್ಯ ಕಾರ್ಯಕ್ರಮಗಳನ್ನು ಟೀವಿಯಲ್ಲಿ ನೋಡುತ್ತಿದ್ದೆ. ಅವರು ಕೊಡುತ್ತಿದ್ದ ನಿದರ್ಶನಗಳು ನನ್ನ ಗಮನ ಸೆಳೆದಿದ್ದವು. ಕೆಲವು ಪರಿಚಿತವಾದವು. ಉದಾಹರಣೆಗೆ, ಅವರು ಅಧ್ಯಯನ ಸಮೇತ ಪ್ರಚಾರ ಮಾಡಿದ್ದ ಲಘು ಉಪವಾಸ ನಿದರ್ಶನ ಭಾರತೀಯ ಹಿಂದೂ ಧರ್ಮ ಅನುಸರಣೆಯ ದೈನಂದಿನ ಜೀವನಶೈಲಿಯಲ್ಲಿ ಹಾಸುಹೊಕ್ಕಾಗಿರುವ ಏಕಾದಶಿ ಉಪವಾಸವನ್ನು ನೆನಪಿಸಿತ್ತು. ಅದಲ್ಲದೆ ನಾನು ಅನೇಕ ಭಾರತೀಯರು ವಾರಕ್ಕೊಮ್ಮೆ ನಡೆಸುವ ಅರೆದಿನ ಉಪವಾಸ, ಅದರ ಪ್ರಯೋಜನಗಳು, ದೇಹಕ್ಕೆ ಸೇರುವ ಕ್ಯಾಲೋರಿಗಳಲ್ಲಿ ಇಳಿತ, ಸಸ್ಯಾಹಾರ ಸೇವನೆ, ‘liquid diet’ ಇವುಗಳನ್ನು ನೆನಪಿಸಿಕೊಂಡು ಉತ್ಸಾಹಿತಳಾಗಿದ್ದೆ.

ಹೋದ ವರ್ಷ ಆಗಸ್ಟ್ ತಿಂಗಳಿನಲ್ಲಿ ಹಾಗೆಯೆ ಅವರ Fifty Plus-Healthy ageing ಒಂದು ಕಾರ್ಯಕ್ರಮದಲ್ಲಿ ತೋರಿಸುತ್ತಿದ್ದ ದೈಹಿಕ ವ್ಯಾಯಾಮ ಬಗೆಗಳನ್ನು ನೋಡುತ್ತಿದ್ದೆ. ಅದರಲ್ಲಿ ಒಂದು hopping ಬಗೆ ಮತ್ತು ಅದರ ಪ್ರಯೋಜನಗಳು. ಅರೆ ನಾವೆಲ್ಲರೂ ಭಾರತದಲ್ಲಿ ಕುಂಟಾಟ ಆಡಿದ್ದೇ ಆಡಿದ್ದು, ಇದೇನು ಹೊಸದಲ್ಲ, hopping ನಲ್ಲಿ ನಾನೂ ಕೂಡ ಪಳಗಿದವಳೇ ಎಂದುಕೊಂಡು ನಾನು ಟೀವಿ ನೋಡುತ್ತಲೇ, ಅದರ ಮುಂದೆ ಒಂದಷ್ಟು hopping ಮಾಡಿದೆ. ಮುಂದಿನ ದಿನಗಳಲ್ಲಿ ನನ್ನ ಬಲಮಂಡಿಯಲ್ಲಿ ಮೂಳೆಕಟ್ಟು (knee ligament) ಸ್ವಲ್ಪ ಹರಿಯಿತು. ಅಯ್ಯೋ ಇದೇನಾಯಿತು ಎಂದುಕೊಂಡು ಒಂದಷ್ಟು ದಿನಗಳ ಫಿಸಿಯೋಥೆರಪಿ ಸಹಾಯ ಪಡೆದು ಸುಧಾರಿಸಿಕೊಳ್ಳುತ್ತಿದೆ. ಅದೇ ಸಮಯದಲ್ಲಿ ಸ್ವಲ್ಪ ಏರಿಳಿತದ ನಡಿಗೆ ಮಾಡುವಾಗ ಅದೇ ligament ಇನ್ನೊಂದಿಷ್ಟು ಹರಿಯಿತು. ಬೇಸಗೆ ರಜೆಯಲ್ಲಿ ಸಮುದ್ರ ಈಜು, ಬೀಚ್ ವಾಕ್ ಎಂದೆಲ್ಲಾ ಸಿಕ್ಕಾಪಟ್ಟೆ ಮಾಡಿ ಈ ವರ್ಷ ಜನವರಿಯಲ್ಲಿ ಅದೇ ಬಲ ಮಂಡಿಯಲ್ಲಿ ಪೂರ್ತಿ meniscus ಹರಿತವಾಯ್ತು. ಮೈಕಲ್ ಮೋಸ್ಲಿಯ ಕಾರ್ಯಕ್ರಮವನ್ನು ನೋಡುತ್ತಾ Hopping ಮಾಡಲು ಹೋಗಿ ನಿಜವಾಗಿಯೂ ಕುಂಟುವಂತಾಗಿತ್ತು. ನಡೆಯಲು ವಿಪರೀತ ಕಷ್ಟವಾದಾಗ ವ್ಯೆದ್ಯಕೀಯ ಶುಶ್ರೂಷಣೆ, ಫಿಸಿಯೋಥೆರಪಿಗಳು ಶುರುವಾಗಿ ನನ್ನ ದೈನಂದಿನ ಜೀವನಶೈಲಿಯೇ ಬದಲಾಯ್ತು. ಬಲು ಬೇಸರವಾಗಿತ್ತು. ನಾಲ್ಕು ತಿಂಗಳ ನಂತರ ಈಗ ಸ್ವಲ್ಪ ಸುಧಾರಿಸಿದೆ, ಬಿಡಿ.

ಈ ನನ್ನ ಎಲ್ಲಾ ಅವಾಂತರಗಳಲ್ಲಿ ನನಗೆ ನೆನಪಾಗುತ್ತಿದ್ದದ್ದು ಮೈಕಲ್ ಮೋಸ್ಲಿ ಮತ್ತು ಅವರ ಟಿವಿ ಕಾರ್ಯಕ್ರಮಗಳು. ಅವುಗಳಲ್ಲಿ ತೋರಿಸುತ್ತಿದ್ದ ಪ್ರಯೋಗಗಳನ್ನು ನಾವು ಸಾಮಾನ್ಯ ಜನರು ಎಚ್ಚರಿಕೆ ವಹಿಸದೆ ಅನುಕರಣೆ ಮಾಡಲು ಹೋದರೆ ಆಗುವ ಅನಾಹುತವನ್ನು ನಾನೇ ಅನುಭವಿಸಿದ್ದೆ. ಅನೇಕ ಬಾರಿ ‘ಆ ಯಾವುದೋ ದೇವತೆಗಳು ನನಗೆ ಎಚ್ಚರಿಕೆ ಕೊಟ್ಟರು. ಎಷ್ಟಾದರೂ ನಾನೊಬ್ಬ ಹುಲುಮಾನವಳು’ ಎಂದು ನನಗೆ ನಾನೇ ಹೇಳಿಕೊಂಡು ಅದನ್ನು ಬೇರೆಯವರಿಗೂ ಹೇಳಿದ್ದೆ. ಕೇಳಿದವರೆಲ್ಲಾ ನಕ್ಕಿದ್ದರು. ಅವರು ಹಾಗೆ ನಕ್ಕಾಗ ನನಗೆ ಮೈಕಲ್ ಮೋಸ್ಲಿ ಮೇಲೆ ಕೋಪ ಬರುತ್ತಿತ್ತು. ಅದನ್ನೂ ಕುರಿತು ಹೇಳುತ್ತಿದ್ದೆ.

ಈಗ ಮೈಕಲ್ ಮೋಸ್ಲಿ ಸಾವು ಅದನ್ನೇ ನೆನಪಿಸುತ್ತಿದೆ. ಗ್ರೀಕ್ ದ್ವೀಪವೊಂದರಲ್ಲಿ ಹಾಲಿಡೇ ಸಮಯವನ್ನು ಆನಂದಿಸುತ್ತಿದ್ದ ಅವರು ಕೇವಲ ಕೆಲವು ನಿಮಿಷಗಳ ವಾಕಿಂಗ್ ಗೆಂದು ಹೋಗಿ, ವಾಪಸ್ ತಮ್ಮ ಹಾಲಿಡೇ ನಿವಾಸಕ್ಕೆ ಹಿಂದಿರುಗುತ್ತಿದ್ದರು. ದಾರಿ ಮಧ್ಯದಲ್ಲಿ ಬಹುಶಃ ಅವರಿಗೆ ಸುಸ್ತಾಗಿರಬೇಕು. ಆ ದಿನದ ತಾಪಮಾನ ನಲವತ್ತು ಡಿಗ್ರಿ ಇತ್ತಂತೆ. ಅವರಿಗೆ ಆರೋಗ್ಯ ಸಮಸ್ಯೆಗಳಾದ ಡಯಾಬಿಟೀಸ್, ನಿದ್ರಾಹೀನತೆ ಸಮಸ್ಯೆಗಳಿದ್ದವು. ಅದರಿಂದ ಬಹು ಬೇಗ ಆ ಅತೀ ಬಿಸಿಲಿನ ಧಗೆ, ತಾಪಕ್ಕೆ ಗುರಿಯಾಗಿ, ನಡೆಯುವಾಗ ಜಾರಿ ಕುಸಿದುಬಿದ್ದು ಸತ್ತಿರಬಹುದು ಎಂದು ಅವರ ದೇಹದ ಪರೀಕ್ಷೆ ನಡೆಸಿದ ವ್ಯೆದ್ಯಕೀಯ ಮೂಲಗಳು ಹೇಳಿವೆ. ಪೊಲೀಸರು ಸ್ವಾಭಾವಿಕ ಕಾರಣಗಳಿಂದ ಅವರು ಸತ್ತಿದ್ದಾರೆ ಎಂದು ಘೋಷಿಸಿದ್ದಾರೆ.

ಅವರ ಸಾವು ಮತ್ತೊಂದು ವಿಷಯವನ್ನು ನೆನಪಿಸಿದೆ. ಅದು ಹವಾಮಾನ ತಾಪದ ಏರಿಕೆ, ಮತ್ತದರಿಂದ ಉಂಟಾಗುತ್ತಿರುವ ಆರೋಗ್ಯ ಪರಿಣಾಮಗಳು. ಹವಾಮಾನ ಬದಲಾವಣೆ ಎಂಬ ವಿಷಯವು ಈಗ ಜಾಗತಿಕ ಸಮಸ್ಯೆಯಾಗಿದೆ. ವಿಶ್ವಸಂಸ್ಥೆಯಿಂದ ಹಿಡಿದು ಅನೇಕ ದೇಶಗಳ ಸರಕಾರಗಳು, ಸಂಸ್ಥೆಗಳು ಕ್ಲೈಮೇಟ್ ಚೇಂಜ್, ಕ್ಲೈಮೇಟ್ ಆಕ್ಷನ್ ಬಗ್ಗೆ ಚಿಂತನೆ ನಡೆಸುತ್ತಿವೆ. ಅನೇಕಾನೇಕ ಸಮಾವೇಶಗಳು, ಸಭೆಗಳು, ಸಂವಾದಗಳು ನಡೆಯುತ್ತಲೇ ಇವೆ. ಮುಂಬರುವ ದಿನಗಳಲ್ಲಿ ಜಾಗತಿಕ ತಾಪಮಾನ ಏರಿಕೆ, ಪ್ರವಾಹ, ಭೂಕುಸಿತ ಎಲ್ಲವೂ ಹೆಚ್ಚಾಗಲಿವೆ. ಅದಕ್ಕಾಗಿ ನಾವೆಲ್ಲರೂ ನಮ್ಮನಮ್ಮ ಮಟ್ಟದಲ್ಲಿ ಕಾರ್ಯಪ್ರವೃತ್ತರಾಗಲೇ ಬೇಕಿದೆ.

ತಾವೇ ಸ್ವತಃ ಡಾಕ್ಟರಾಗಿ, ನೂರಾರು ಆರೋಗ್ಯ ಸುಧಾರಣಾ ಸಂಶೋಧನೆಗಳನ್ನು ನಡೆಸಿದ್ದ ಮೈಕಲ್ ಮೋಸ್ಲಿ ಒಬ್ಬ ಹುಲುಮಾನವರಾಗಿ ಯಮರಾಜನಿಗೆ ಶರಣಾದರು. ಪ್ರಕೃತಿಯ ಭಾಗವಾದ ನಾವು ಮನುಷ್ಯರು ಪ್ರಕೃತಿಯನ್ನು ಗೌರವಿಸಿ, ಪ್ರೀತಿಸಿ ತಲೆಬಾಗಬೇಕು. ನಾವು ಎಲ್ಲವನ್ನೂ ಗೆಲ್ಲಲಾಗುವುದಿಲ್ಲ. ಆದರೆ, ಪ್ರಕೃತಿಯ ಎಲ್ಲದರಲ್ಲಿ ಒಂದು ಕಡೆ ಇತರ ಜೀವಿಗಳೊಡನೆ ನಾವು ಸಲ್ಲಬಹುದು.