ಹದಿನೆಂಟು ವರ್ಷದ ಹಿಂದೆ ನೋಡಿದ್ದ ಯಾಣ ಮತ್ತು ಸಿರ್ಸಿಯ ಹತ್ತಿರವಿರುವ ಸಹಸ್ರಲಿಂಗವನ್ನು ಇನ್ನೊಮ್ಮೆ ನೋಡುವ ಅವಕಾಶ ನಿನ್ನೆ ತಾನೆ ಸಿಕ್ಕಿತ್ತು. ಪಶ್ಚಿಮ ಘಟ್ಟದ ದಟ್ಟ ಕಾಡಿನ ಮಧ್ಯದಿಂದ ಎದ್ದಂತೆನಿಸುವ, ಚೂಪಾಗಿ ಗರಗಸದಂಥ ತುದಿಯಿರುವ ಕಲ್ಲಿನ ರಚನೆಗಳು ಮೊದಲಿನ ಹಾಗೇ ನಿಂತಿವೆ. ಬಂಡೆಗಳು ಈಗಲೂ ಕಾಡು ಜೇನು, ಬಾವಲಿಗಳ ಮನೆಯಾಗಿದೆ. ಕಲ್ಲುಗಳ ಮೇಲೆ ನಮ್ಮ ಅಮರ ಪ್ರೇಮಿಗಳು, ಪ್ರಾಣಮಿತ್ರರ ಹೆಸರು ಸ್ವಲ್ಪ ಜಾಸ್ತಿಯಾಗಿರಬಹುದು. ಕಲ್ಲಿನ ಕೆಳಗೆ ಅಂಟಿಕೊಂಡಂತಿರುವ ಶಿವನ ದೇವಸ್ಥಾನ ಸ್ವಲ್ಪ ಮುಂದುವರೆದಿದೆ. ಜೊತೆಗೆ ಅಷ್ಟೇನು ಕೂಲಿಲ್ಲದ ಕೂಲ್ದ್ರಿಂಕ್ಸ್, ಕುರುಕಲು ತಿಂಡಿ ಶಾಪೊಂದಿದೆ. ೧೮ ವರ್ಷದ ಹಿಂದೆ ಮಂಜುಗುಣಿ ಊರಿನ ದೇವಸ್ಠಾನದಲ್ಲಿ ಉಳಿದು, ಬೆಳಗಿನ ಜಾವವೇ ಸುಮಾರು ೨೦ ಕಿಲೊಮೀಟರ್ ಕಾಲುದಾರಿಯಲ್ಲಿ ನಡೆದು ಯಾಣಕ್ಕೆ ಹೋಗಿದ್ದಿದ್ದು ಸುಮಾರಾಗಿ ನೆನಪಿತ್ತು. ದಾರಿ ನೆನಪಿಲ್ಲದಿದ್ದರೂ, ತಿಂದ ಹಣ್ಣುಗಳು, ನೋಡಿದ ಹಕ್ಕಿಗಳು ಮತ್ತು ಕೊನೆಗೆ ನೋಡಿದ ಯಾಣದ ಕಲ್ಲಿನ ಸಮುಚ್ಚಯ ನಿನ್ನೆ ಹೋಗುವ ದಾರಿಯಲ್ಲಿ ನೆನಪಾಗುತ್ತಲೇ ಇತ್ತು.
ಮನಸ್ಸೇ ಹಾಗೆ, ಹಿಂದೆ ನೋಡಿದ್ದು ಅಂದಾಕ್ಷಣ ಈಗಿನದ್ದಕ್ಕೆ ಹೋಲಿಸುವುದು, ಹಾಳಾಯಿತಲ್ಲ ಅಂತ ಕೊರಗುವುದು ಅಥವಾ ಬೆಳೆದಿದೆಯಲ್ಲ, ಸವಲತ್ತು ಬಂದಿದೆಯಲ್ಲ ಎಂದು ಖುಷಿಪಡುವುದು, ಒಟ್ಟಿನಲ್ಲಿ ಮತ್ತೆ ನೋಡೋದು ಅಂದರೆ, ಮೊದಲು ನೋಡಿದ್ದರ ಬುತ್ತಿ ಕಟ್ಟಿಕೊಂಡು ಹೋಗೋದು ಅಂತಲೇ. ಆಗ ನಾವು ಹೋಗಿದ್ದು ಸುಲಭದ ದಾರಿಯೇನೂ ಆಗಿರಲಿಲ್ಲ. ಯಾಣದ ನಿನ್ನೆಯ ದಾರಿ ೩ ಕಿಲೊಮೀಟರುಗಳು ಮಾತ್ರ. ಅದು ಕಾಲು ಹಾದಿಯದ್ದಲ್ಲ. ಮರ ಕಡಿದು, ನೆಲವನ್ನು ಸಮತಟ್ಟು ಮಾಡಿ ಜೆಲ್ಲಿ ಹಾಕಿ, ಅದರ ಮೇಲೆ ಬುಲ್ಡೋಜರ್ ಓಡಿಸಿತ್ತಾ ಇದ್ದ ಇನ್ನೇನು ಮುಗಿಯುತ್ತಾ ಬಂದಿರುವ ಬಿಸಿಲು ಬೀಳುವ ದೊಡ್ಡ ರಸ್ಥೆ..ದೇವಸ್ಠಾನಕ್ಕೆ ಐದು ನಿಮಿಷ ನಡೆಯುವಷ್ಟು ಹತ್ತಿರದವರೆಗು ಅದೇ ರೋಡು. ಹರಿಯುವ ತೊರೆಯಂತಿದ್ದ ನದಿಗೆ ಸೇತುವೆ. ನಮಗೆ ದಾರಿ ತೊರಿಸಿದ್ದು ಗುಟ್ಕಾ, ಚಾಕಲೇಟ್ ಕವರ್ ಗಳು. ಹಾಗು ಗುಹೆಗೆ ಹೊಗುವ ದಾರಿಯಲ್ಲಿ ಎದ್ದು ಕಾಣುವ ಪ್ಲಾಸ್ಟಿಕ್ ಟ್ಯಾಂಕು. ಸೊಕ್ಕಿದ್ದರೆ ಯಾಣಕ್ಕೆ ಹೋಗು ಎನ್ನುವ ಸ್ಥಳೀಯ ಗಾದೆಗೆ ಇನ್ನು ಬೆಲೆ ಇಲ್ಲ.
ಇನ್ನು ಶಾಲ್ಮಲ ನದಿಯ ಸಹಸ್ರಲಿಂಗದಲ್ಲಿ ಅಲ್ಲಲ್ಲಿ ಬಂಡೆಗಳ ಮೇಲೆ ಉಳಿದ ಕುಪ್ಪಸಗಳು, ಚಡ್ಡಿಗಳು, ಎಸೆದ ಚಪ್ಪಲಿಗಳು,ಜೊತೆಗೆ ಕೊಳೆತು ಮಣ್ಣಾಗದಂತ ಮಕ್ಕಳ ಪ್ಯಾಂಪರ್ಸ್, ಹಗ್ಗಿಸ್ ಎಂಬ ಹಾಕಿ ಎಸೆಯುವ ಚಡ್ಡಿಗಳು. ಸರಕಾರದಿಂದ ಟೂರಿಸ್ಟ್ ಕಾಂಪ್ಲೆಕ್ಸ್-ರೆಸ್ಟೊರೆಂಟ್ ಕಟ್ಟುವ ಕೆಲಸವನ್ನೂ ಮಾಡುತ್ತಿದ್ದರು.
ಮನೆಗೆ ಬಂದಿದ್ದೇ ಸರಕಾರದ ಪ್ರವಾಸೋದ್ಯಮದ ಪಾಲಿಸಿಯೇನೆಂದು ತಿಳಿಯಬೇಕೆನಿಸಿತು. ಮಾಹಿತಿಗಾಗಿ ಹುಡುಕಿದೆ. ಸರಕಾರದ ವೆಬ್ ಸೈಟ್ ಗಳನ್ನು ನೋಡಿದೆ. (ಸರಕಾರದ ವೆಬ್ ಸೈಟ್ ಕನ್ನಡದಲ್ಲಿ ನನಗೆ ಸಿಕ್ಕಲಿಲ್ಲ) ಮುಖ್ಯವಾಗಿ ಕಂಡದ್ದು ಪ್ರವಾಸೋದ್ಯಮದ ಪಾಲಿಸಿಯ ಮೂಲ ಉದ್ದೇಶ; ಒಂದು, ಪ್ರವಾಸ ಸಂಬಂಧಿತ ಚಟುವಟಿಕೆಗಳನ್ನು ಹೆಚ್ಚಿಸುವುದು, ಎರಡು, ಸಮಾಜದ ಎಲ್ಲಾ ಸ್ತರದ ಜನರಿಗೆ ಆದಾಯ ಹೆಚ್ಚಳ, ಉದ್ಯೋಗವನ್ನು ಕೊಡಿಸುವಂತದ್ದು. ಖಾಸಗಿ ಮೂಲಗಳ ಬಂಡವಾಳ ಹೂಡುವಿಕೆಯನ್ನು ಮತ್ತು ಪ್ರವಾಸೊದ್ಯಮವನ್ನು ಅಭಿವೃದ್ದಿಪಡುಸುವುದಕ್ಕಾಗಿ ಸರಕಾರ ಖಾಸಗಿ ಮೂಲಗಳಿಗೆ ಕೆಲವೊಂದು ಸವಲತ್ತನ್ನು,ರಿಯಾಯಿತಿಗಳನ್ನು ಕೊಡುವುದಕ್ಕೆ ಶಿಫಾರಸ್ಸು ಮಾಡಿದೆ. ಈ ರಿಯಾಯತಿಗಳಲ್ಲಿ ವಿವಿಧ ರೀತಿಯ ತೆರಿಗೆ ಕಡಿತದ ಜೊತೆಗೆ ಮುಖ್ಯವಾದದ್ದು ಸರಕಾರದ ಜಾಗವನ್ನು ಅದರ ಮಾರ್ಕೇಟ್ ಮೌಲ್ಯದ ಅರ್ಧ ಹಣಕ್ಕೆ ವಾಣಿಜ್ಯೊದ್ಯಮಿಗಳಿಗೆ ಮಾರುವುದು. ಸರಕಾರದ ಆಶಯವೇನೊ ಚೆನ್ನಾಗಿದೆ. ನನ್ನಂತ ಮಧ್ಯಮವರ್ಗದ ಜನಕ್ಕೆ ದಿನನಿತ್ಯದ ಬದುಕು ಮತ್ತು ಅದನ್ನೋಡಿಸುವ ಕೆಲಸದ ಮದ್ಯೆ ಏರ್ಪಟ್ಟಿರುವ ಕಂದಕದಿಂದ ಹುಟ್ಟಿದ ಏಕತಾನತೆ, ಮತ್ತು ಒತ್ತಡಗಳಿಂದ ‘ಎಸ್ಕೇಪ್’ ಆಗುವುದು, ಅಂದರೆ ಸ್ವಲ್ಪ ಹೊತ್ತು ನಮ್ಮ ‘ವಿಚಾರವಂತಿಕೆಯನ್ನು ಬಿಟ್ಟು, ಪ್ರಕೃತಿಯಲ್ಲಿ ಕಳೆದುಹೋಗುವುದಕ್ಕೆ’ ಬಹಳ ಅನುಕೂಲವಾಗುತ್ತದೆ.
ಅಲ್ಲೇ ಎಸೆದ ಡೈಯಾಪರ್ ನೋಡುವ ತನಕ ನಮಗೆ ಮನೆಯಲ್ಲಿ ಬಿದ್ದಿರುವ ಕೆಲಸದ ನೆನೆಪೇ ಆಗುವುದಿಲ್ಲ. ಎಸೆದ ಡೈಯಾಪರ್ ನಮ್ಮನ್ನು ಜರ್ರಂತ ವಾಪಸ್ ಯಥಾಸ್ಥಿತಿಗೆ ತರುತ್ತದೆ. ಮತ್ತೆ ಪ್ರವಾಸೊದ್ಯಮದ ಬಗ್ಗೆ ಪ್ರಶ್ನೆಗಳೇಳುತ್ತವೆ. ಈ ಖಾಸಗಿಕರಣದಿಂದ ಬರೀ ಬಂಡವಾಳ ಹೂಡುವ ವ್ಯಾಪಾರಿಗಳಿಗೆ ಮಾತ್ರ ಲಾಭವೊ ಅಥವಾ ಬಂಡವಾಳವಿಲ್ಲದ ಸ್ಠಳೀಯರಿಗು ಇದರಲ್ಲಿ ಉದ್ಯೋಗ, ಲಾಭದ ಖಾತ್ರಿ ಇದೆಯೊ? ನಗರಗಳಿಂದ ಕಂಪನಿಗಳು ಬಂದು ಅರ್ಧ ರೇಟಿಗೆ ತೆಗೆದುಕೊಂಡ ಜಾಗದಿಂದ ಹುಟ್ಟಿದ ಉದ್ಯಮಕ್ಕೆ ಸಂಬಂಧಪಟ್ಟ ಕೆಲಸಕ್ಕೆ ಬೇಕಾದ ಕುಶಲತೆ ಸ್ಠಳೀಯರಿಗೆ ಇರಲು ಸಾಧ್ಯವೊ? ಸರಕಾರ ಅಥವಾ ಖಾಸಗಿ ಸಂಸ್ಠೆ, ತಮ್ಮ ಲಾಭದಂಶದಲ್ಲಿ ಎಷ್ಟನ್ನು ಸ್ಠಳಕ್ಕಾಗಿ, ಅಲ್ಲಿನ ಜನರ ಏಳಿಗೆಗಾಗಿ ಖರ್ಚು ಮಾಡುತ್ತದೆ? ತಮ್ಮ ಊರಿನ ಗೋಮಾಳ,ಅಥವಾ ಊರೊಟ್ಟಿನ ಉಪಯೋಗಕ್ಕಿರುವ ಸ್ಥಳೀಯ ಸರಕಾರಿ ಜಾಗಗಳನ್ನು ಬಿಟ್ಟುಕೊಟ್ಟ ಜನಕ್ಕೆ ಆಗುವ ಲಾಭ ನಮ್ಮಂತ ಪ್ರವಾಸಿಗರು ಎಸೆದು ಹೋದಂತ ಪ್ಲಾಸ್ಟಿಕ್ ಇನ್ನಿತರೆ ತ್ಯಾಜ್ಯ ವಸ್ತುಗಳು ಅವರ ಕೃಷಿ ಜಮೀನಿನಲ್ಲಿ, ಹರಿಯುವ ನೀರಿನಲ್ಲಿ ಸೇರಿ ಈತನಕ ಇದ್ದ ಜೈವಿಕ ಚಕ್ರಕ್ಕೆ ಧಕ್ಕೆ ತರುವಂತದ್ದು ಮಾತ್ರವೇ?
ಆರೊಗ್ಯ, ಕೃಷಿಗೆ ತಕ್ಷಣಕ್ಕೆ, ಮತ್ತು ನಿಧಾನವಾಗಿ ಆಗುವ ತೊಂದರೆಗಳಿಗಿಂತ ಕೆಲವರಿಗೆ ಕೆಲಸ ಸಿಕ್ಕ ಲಾಭ ಹೆಚ್ಚು ತೂಕದ್ದೆ? ಅಮೂರ್ತವಾದ, ಸ್ಪಷ್ಟವಲ್ಲದ ಮತ್ತು ಸ್ಪಷ್ಟವಾಗುವ, ನಿಖರವಾಗಿ ಲೆಕ್ಕಕ್ಕೆ ಸಿಗುವ ಲಾಭ ನಷ್ಟಗಳನ್ನು ಹೇಗೆ ಹೊಂದಿಸಿ ನೋಡುವುದು? ಸೈಕ್ಯಾಟ್ರಿಸ್ಟ್, ರಾಜಕೀಯ ವಿಶ್ಲೇಷಕ- ಫ್ರಾನ್ಸ್ ಫನಾನ್- ೧೯೬೦ರ ದಶಕದಲ್ಲಿ ವಸಾಹತು ಆದವರ ಮನಸ್ಠಿತಿಯ ಅತ್ಯಂತ ಮಹತ್ವದ ಪುಸ್ತಕ ‘ರೆಚೆಡ್ ಆಫ್ ದ ಅರ್ಥ್’ದಲ್ಲಿ ಆಫ್ರಿಕಾ,ಏಷ್ಯಾದ ಬಡ ದೇಶಗಳಿಗೂ ಸಂವಾದಿಯಾಗಬಲ್ಲಂತೆ ಲ್ಯಾಟಿನ್ ಅಮೇರಿಕದ ಉದಾಹರಣೆ ಕೊಟ್ಟು ಬರೆಯುತ್ತಾನೆ. ‘… ವಿಶ್ರಾಂತಿ, ವಿಹಾರ ಮತ್ತು ಪ್ಲೆಶರ್ ರಿಸಾರ್ಟ್ ಕೇಂದ್ರಗಳನ್ನು ರಾಷ್ಟ್ರೀಯ ಬುರ್ಜ್ವಾ ಪಶ್ಚಿಮ ಬುರ್ಜ್ವಾನ ಇಷ್ಟಕ್ಕನುಸಾರವಾಗಿ ಸಂಘಟಿಸುತ್ತಾನೆ, ಈ ಚಟುವಟಿಕೆಗಳಿಗೆ ಪ್ರವಾಸೊದ್ಯಮವೆಂಬ ಹೆಸರುಕೊಟ್ಟು ಮತ್ತು ಇದಕ್ಕಾಗಿ ರಾಷ್ಟ್ರೀಯ ಉದ್ಯಮವನ್ನೇ ಕಟ್ಟಲಾಗುತ್ತದೆ’
‘ಪಶ್ಚಿಮದ ಉದ್ಯಮಕ್ಕೆ ಮ್ಯಾನೇಜರುಗಳಾಗಿ ಕಾರ್ಯನಿರ್ವಹಿಸುವುದನ್ನು ಬಿಟ್ಟು ರಾಷ್ಟ್ರೀಯ ಮಧ್ಯಮವರ್ಗಕ್ಕೆ ಬೇರೆನನ್ನೂ ಮಾಡಲಿರುವುದಿಲ್ಲ. ಮತ್ತು ಇದು ಇಡೀ ದೇಶವನ್ನು ಯುರೋಪಿಯನ್ನರಿಗೆ ಬ್ರೊಥೆಲ್ ಆಗಿ ನಿಲ್ಲಿಸುವ ನಡವಳಿಕೆಯಾಗುತ್ತದೆ.”
ಸಾಂಕೇತಿಕವಾಗಿ ಮತ್ತು ಯತಾರ್ಥ ಚಿತ್ರಣವೆರಡನ್ನೂ ನೀಡುವ ಫ್ರಾನ್ಸ್ ಫನಾನ್ ಹೇಳಿಕೆ ನಮಗೆ ಇನ್ನೂ ಪೂರ್ತಿಯಾಗಿ ಅನ್ವಯವಾಗುವುದಿಲ್ಲ. ಅಲ್ಲದೆ ಭಾರತದಂತ ದೇಶದಲ್ಲಿರುವ ತೀವ್ರವಾದ ಸಾಮಾಜಿಕ,ಆರ್ಥಿಕ ಅಂತರದಿಂದಾಗಿ ಇಲ್ಲಿ ಪಶ್ಚಿಮದ ಬುರ್ಜ್ವಾಗಳ ಬದಲಾಗಿ, ರಾಷ್ಟ್ರೀಯ ಗಣ್ಯರು(ಇಲೀಟ್) ಮತ್ತು ಸ್ಠಳೀಯ ಗಣ್ಯರು ಎಂದು ಬದಲಾಯಿಸಿಕೊಳ್ಳುವುದು ಹೆಚ್ಚು ಸಮಂಜಸವೇನೋ. ಹಾಗೆ, ಇಲ್ಲಿ ಹೀಗಾಗದಿರಲಿ ಎನ್ನುವಾಗಲೆ ಫ್ರಾನ್ಸ್ ಫನಾನ್ನ ಹಾಗೆ ಕೆರೆಬಿಯನ್ ನಡುಗಡ್ಡೆಯವನಾದ ಕವಿ, ನಾಟಕಕಾರ ಡೆರಿಕ್ ವಾಲ್ಕಾಟ್ ನ ಮಾತು ನಮಗೆ ಹೆಚ್ಚು ಹತ್ತಿರವಾಗಿದೆ ಎನ್ನಿಸುತ್ತದೆ. ಅವರ ನೋಬೆಲ್ ಉಪನ್ಯಾಸದ ತುಣುಕಿನ ಭಾವಾನುವಾದ.
”ಅರಾಕ್ ನಿಂದ ಕೆಳಗಿಳಿದಂತೆ ಆಂಟಿಲಿಯನ್ ಚರಿತ್ರೆಯ ನಾಶವಾದ ಬೇರುಗಳು ಕಾಣತೊಡಗುತ್ತವೆ. ಪ್ರವಾಸೋದ್ಯಮವೆಂಬ ಕರುಣಾಮಯಿ ಖಾಯಿಲೆ ಈ ದ್ವೀಪ ರಾಷ್ಟ್ರಗಳನ್ನೆಲ್ಲ, ಸಾವಕಾಶವಾಗಿಯಲ್ಲ ಅರಿವೇ ಆಗದಷ್ಟು ವೇಗವಾಗಿ, ಇಲ್ಲಿನ ಒಂದೊಂದು ಬಂಡೆಯೂ ಪ್ರಗತಿಯ ಕಮಾನು ನೆಲಮುಟ್ಟುವ ತಾಣವಾಗಿ ಬಿಳಿಯ ರೆಕ್ಕೆಯ ಹೋಟೆಲು ಹಕ್ಕಿಗಳ ಹಿಕ್ಕೆಯಿಂದ ತುಂಬಿಹೋಗುವವರೆಗೆ, ಬಾಧಿಸತೊಡಗಬಹುದು.
ಇನ್ನೇನು ಇವೆಲ್ಲ ಮಾಯವಾದಾವು. ಪ್ರಗತಿಯು ಪ್ರತಿಯೊಬ್ಬ ಕಲಾವಿದನನ್ನೂ ಮಾನವಶಾಸ್ತ್ರಜ್ಞನನ್ನಾಗಿ ಅಥವಾ ಜಾನಪದವಿದ್ವಾಂಸನನ್ನಾಗಿ ಪರಿವರ್ತಿಸುವ ಮುನ್ನ, ಹಳೆಯ ಬದುಕಿನ ಅಡಗುತಾಣಗಳಾಗಿ. ಆನಂದದ ನೆಲೆಮನೆಗಳಾಗಿ ಒಂದೆರಡೇ ಕಣಿವೆಗಳು ಈಗ ಉಳಿದುಕೊಂಡಿವೆ. ಈ ಕಣಿವೆಗಳಲ್ಲಿ ಐಡಿಯಾಗಳ ಪ್ರತಿಧ್ವನಿಯಿಲ್ಲ, ಬದಲಾವಣೆಯ ಅಪಾಯದಿಂದ ಭ್ರಷ್ಟವಾಗದ ಸರಳ ಬದುಕಿನ ಹೊಸ ಆರಂಭಗಳಿವೆ. ಇವು ಹಳೆಯ ಮರೆಯಲಾರದ ನೆನಪಿನ ಗೀಳಿನ ತಾಣಗಳಲ್ಲ, ಅಲ್ಲಿನ ಬಿಸಿಲಿನಷ್ಟೆ ಸಾಮಾನ್ಯವೂ ಸರಳವೂ ಆದ ಪರಿಶುದ್ಧ ಗುಪ್ತ ತಾಣಗಳು ಅವು. ಬುಲ್ಡೋಜರು ಅಲ್ಲಿನ ಮುಖ್ಯ ಪ್ರದೇಶವನ್ನು, ಸರ್ವೇಯರನ ಅಳತೆಯ ಟೇಪು ಅಲ್ಲಿನ ಸಾಗರ ತಡಿಯ ಆಲ್ಮಂಡ್ ತೋಪುಗಳನ್ನು, ನುಸಿ ಕಾಯಿಲೆಗಳು ಅಲ್ಲಿನ ಪರ್ವತದ ಲಾರೆಲ್ ಗಿಡಗಳನ್ನು ನಾಶಮಾಡಿದಂತೆ ವರ್ಣಿಸಲು ನಾನು ಬಳಸುತ್ತಿರುವ ಈ ಗದ್ಯದ ಮಾತುಗಳೇ ಆ ಕಣಿವೆಗಳ ನಾಶಕ್ಕೆ ಕಾರಣವಾಗಬಹುದು.”
ನಾಸ್ಟಾಲ್ಜಿಕ್ ಅಲ್ಲವೆಂದರೂ ಅವರ ಮಾತುಗಳು ನಮಗೆ ಹಾಗೆಯೆ ಕೇಳಿಸುತ್ತದೆ. ಬದಲಾವಣೆ ಬೇಡವೆನ್ನುವುದರ ಹಿಂದೆ ಈಗಿರುವುದು ಸರಿಯಾಗಿದೆ ಎನ್ನುವ ಭಾವವು ಇರುತ್ತದೆ. ಅದಂತು ಸತ್ಯವಲ್ಲ. ಆದರೆ ಬದಲಾವಣೆಯಾಗುತ್ತಿರುವಾಗ ನಾವು ಬದಲಿಸಿದ್ದು, ಹೊಸದಾಗಿ ಬಂದದ್ದಕ್ಕಿಂತ ಹೆಚ್ಚು ಮೌಲ್ಯವುಳ್ಳದ್ದಾಗಿದೆಯೊ ಇಲ್ಲವೊ ಎಂಬುದನ್ನು ನಾವು ಎಚ್ಚರದಿಂದ ಗಮನಿಸಬೇಕಾಗುತ್ತದೆ.
ಕೃತಿ ಹೊಸನಗರ ತಾಲ್ಲೂಕಿನ ಪುರಪ್ಪೇಮನೆ ಗ್ರಾಮದವರು. ಕೃಷಿಕರು. ಬಿಡುವಿನಲ್ಲಿ ಮಹಿಳಾ ತಾಳಮದ್ದಲೆ ತಂಡ, ಭಾಗವತಿಕೆ, ಬರವಣಿಗೆ ಹಾಗೂ ಅನುವಾದದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.