ಕಲ್ಲೆಸೆಯುವ ಕೈಗಳಿಗೆ ಆತ್ಮಸಾಕ್ಷಿ ಏಕೆ ಕಾಡುವುದಿಲ್ಲ?! ಕೊಂದು ಬದುಕುವುದು ಮನುಷ್ಯತ್ವವೇ ಅಲ್ಲ ಎಂದ ಮೇಲೆ ನೋಯಿಸಿ ನಗುವ ಮನಃಸ್ಥಿತಿ ಹುಟ್ಟಿದ್ದು ಎಲ್ಲಿಂದ… ಎಲ್ಲ ಪಾಠಗಳನ್ನೂ ನಮ್ಮ ಬದುಕಿನಿಂದಲೇ ಕಲಿಯುವ ಅಗತ್ಯವಿಲ್ಲ. ನಮ್ಮವರ ಬದುಕಿನಿಂದಲೂ ಕಲಿಯಬಹುದು…ಇಲ್ಲಿ ಮಲ್ಲಿಗೆ ಬಳ್ಳಿಯಂತೆ ತಬ್ಬಿ ಹಬ್ಬಿ ಬೆಳೆಯುವ ಹೊತ್ತಿನಲ್ಲೇ ಗುಲಾಬಿಯಂತೆ ಮುಳ್ಳುಗಳ ನಡುವೆಯೇ ಜಾಗ್ರತೆಯಾಗಿ ಅರಳುವುದನ್ನೂ ಕಲಿಯಬೇಕು. ಸಾವಿರ ಮಾತುಗಳ ಕಲ್ಲ ಬಳಸಿ ಪುಟ್ಟ ಗೂಡ ಕಟ್ಟುವ ಸೃಜನಶೀಲ ಮನಸ್ಥಿತಿ ನಮ್ಮದಾಗಲಿ.
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಹೊಸ ಬರಹ

ನಿನ್ನ ಧ್ಯಾನದಿ ನಿನ್ನದೇ ತೋಳಿನಲಿ
ಹೀಗೆಯು ಇರಬಹುದೇ
ಈ ಧ್ಯಾನವ ಕಂಡರೆ ದೇವರಿಗೂ
ಕೋಪವು ಬರಬಹುದೇ

ಅದೊಂದು ಕಾಲವಿತ್ತು. ಬದುಕಿನಲ್ಲಿ ಯಾವ ಯೋಚನೆಯಿಲ್ಲ, ಚಿಂತೆಯಿಲ್ಲ, ಕೈಯಲ್ಲಿ ಕೆಲಸ, ಬದುಕುಲು ದುಡ್ಡು, ಸಪೋರ್ಟಿಗೆ ಅಪ್ಪ ಅಮ್ಮ… ಎಲ್ಲ ಎಲ್ಲವೂ ಇದ್ದ ಕಾಲವದು… ಆದರೆ ಎಲ್ಲ ಇದ್ದಾಗಲೇ ಇಲ್ಲದ ರಗಳೆಯನ್ನು ಮೈಮೇಲೆ ಎಳೆದುಕೊಂಡಂತೆ ಸಿಕ್ಕವನು ನೀನು… ಬೇಸರ ಮಾಡಿಕೊಳ್ಳಬೇಡ. ಬಹುಪಾಲು ನಿನ್ನ ಕತೆಯೂ ಹೀಗೇ ಇತ್ತು ಅಂತ ನನಗೆ ಗೊತ್ತು. ಬಿರುಬಿಸಿಲನ್ನು ಸೂಸುತ್ತಿರುವ ಸೂರ್ಯನಿಗೆ ಅಡ್ಡಲಾಗಿ ಬಂದ ಕಡುಗಪ್ಪು ಕಾರ್ಮೋಡದಂತೆ ಬದುಕಿನ ಒಂದಷ್ಟು ದಿನಗಳಿಗೆ ಕರಾಳತೆ ಕವಿದದ್ದು ಒಂದು ಕ್ಷಣ ವಿಷಾದವೆನಿಸುತ್ತದೆ. ಆದರೆ ಅದೆಷ್ಟು ದಟ್ಟ ಅನುಭವ ಈ ನೆಪದಲ್ಲಿ ಸಿಕ್ಕವೆಂದರೆ ನೀ ಸಿಗದೆ ಹೋಗಿದ್ದರೆ ನಾ ಅದನ್ನೆಲ್ಲಾ ಕಳೆದುಕೊಳ್ಳುತ್ತಿದ್ದೆ.

ಆ ಬೆಟ್ಟದ ತುದಿಯಲ್ಲಿ ಇದ್ದ ದೇವಸ್ಥಾನಕ್ಕೆ ನಾ ಬರುವೆನೆನ್ನುವ ಸುಳಿವಾದರೂ ಹೇಗೆ ಸಿಗುತ್ತಿತ್ತು ನಿನಗೆ. ನಿನ್ನ ಚಿಗುರು ಮೀಸೆಯ ಕೆಳಗಿನ ಸಣ್ಣ ನಗುವಲ್ಲಿ ನನ್ನ ಬಗೆಗಿನ ಅಭಿಮಾನದ ಮೆರುಗು ತುಳುಕುತ್ತಿರುತ್ತಿತ್ತಲ್ಲ… ಬಹುಶಃ ನಾ ಅದಕ್ಕೆ ಸೋಲಲೇಬೇಕಿತ್ತು. ಹಾಗಾಗಿ ಸೋತೆ ಅನಿಸುತ್ತದೆ. ಆ ತೆಳುನೀಲಿ ಬಣ್ಣದ ಶರ್ಟಿನಲ್ಲಿ ಅದೆಷ್ಟು ಮುದ್ದಾಗಿ ಕಾಣುತ್ತಿದ್ದೆ ನೀನು… ನಿನ್ನನ್ನು ನನ್ನವನೆಂದು ಹೆಮ್ಮೆಯಿಂದ ಕಲ್ಪಿಸಿಕೊಳ್ಳುವುದೇ ಮತ್ತೊಂದು ಬಗೆಯ ಚಂದ…

ಬರಿಗಣ್ಣಿಗೆ ಕಾಣದಷ್ಟು ಸಣ್ಣಾತಿಸಣ್ಣ ಸೂಕ್ಷ್ಮ ಜೀವಕೋಶಗಳಲ್ಲಿ ಅದೆಷ್ಟು ಭಾಗಗಳಿವೆ ಅಲ್ಲವಾ… ಅದರ ನಡುವೊಂದು ಕೇಂದ್ರ. ಆ ಕೇಂದ್ರದೊಳಗೊಂದು ಕಿರುಕೇಂದ್ರ. ಅದು ಇಡೀ ಕೋಶವನ್ನೇ ನಿಯಂತ್ರಿಸುತ್ತದೆ ಎಂದರೆ ಅದಕ್ಕೆಂತಹ ಶಕ್ತಿ. ಮತ್ತೆ ಕೇಂದ್ರದೊಳಗಿನ ಸೈಟೋಪ್ಲಾಸಮ್ಮಿನಲ್ಲಿ ಆರಾಮವಾಗಿ ಅಲೆದಾಡುತ್ತಿರುವ ಕ್ರೋಮೋಸೋಮುಗಳು. ಮತ್ತೆ ಅವುಗಳನ್ನು ಉಂಟುಮಾಡಿರುವ ಡಿಎನ್ಎ ಗಳು… ಡಿಎನ್ಎ ಗಳೊಳಗಿನ ಕೋಡ್‌ಗಳಾದರೂ ಎಂಥ ಅದ್ಭುತ! ಒಂದು ಮಗುವಿನ ಅಣು ಅಣುವೂ ಹೇಗೆ ಪಡಿಮೂಡಬೇಕು ಎನ್ನುವ ಎಲ್ಲ ಆರ್ಡರ್ಸೂ ಇವುಗಳದ್ದೇ. ಆಶ್ಚರ್ಯವಾಗುತ್ತದೆ ಅಲ್ಲವಾ? ಮನುಷ್ಯನಾದವನ ಮರ್ತ್ಯದ ಕೈಗಳಿಂದ ಇಂಥದ್ದೊಂದು ವ್ಯವಸ್ಥೆಯನ್ನು ಮರು ಸೃಷ್ಟಿಸಲು ಸಾಧ್ಯವಾ ಹೇಳು… ಹಾಗೇ ನಮ್ಮ ಪ್ರೀತಿಯ ಅಣು ಅಣುವನ್ನೂ ನಿರ್ದೇಶಿಸಿದ ಡಬಲ್ ಸ್ಟ್ರಾಂಡೆಡ್ ಡಿಎನ್ಎ ಯಾವುದಿರಬಹುದು?!

ಮನಸೇ…
ಬದುಕು ನಿನಗಾಗಿ ಬವಣೆ ನಿನಗಾಗಿ
ನನ ಪ್ರೀತಿಯೇ ಸುಳ್ಳಾದರೆ
ಜಗವೆಲ್ಲ ಸುಳ್ಳು ಅಲ್ಲವೇ..

ಅಲುಗಾಡದ ಬೃಹತ್ ಮರವಾಗಿ ಬೆಳೆಯಿತಲ್ಲ ಪ್ರೀತಿ ಅದು ನಿಯತಿಯೇ ಇರಬೇಕು. ಏನೇನೋ ತಿರುವುಗಳು, ಊಹಿಸಲಾದರೂ ಸಾಧ್ಯವಿತ್ತೇ… ಯಾವುದೂ ನಾವಂದುಕೊಂಡದ್ದು ಅಲ್ಲ. ಬಯಸಿದ್ದೂ ಅಲ್ಲ. ಬಯಸಿದ್ದುದರ ಜೊತೆಗೇ ಬಯಸದ ಹಲವಾರು ವಿಷಯಗಳು ಜೊತೆಜೊತೆಯಾಗೇ ಬಂದವು. ಸಮುದ್ರ ಮಂಥನ ಮಾಡಿದಾಗ ಅಮೃತಕ್ಕೂ ಮೊದಲು ವಿಷ ಬಂದ ಹಾಗೆ. ಆದರೆ ಇಲ್ಲಿ ಯಾವ ನೀಲಕಂಠನೂ ಇರುವುದಿಲ್ಲ. ನಾವೇ ವಿಷವುಂಡು ಸಾಯಬೇಕು, ಅಮೃತ ಕುಡಿದು ಬದುಕಿಗೆ ಮರಳಬೇಕು.

ಕಲ್ಲೆಸೆಯುವ ಕೈಗಳಿಗೆ ಆತ್ಮಸಾಕ್ಷಿ ಏಕೆ ಕಾಡುವುದಿಲ್ಲ?! ಕೊಂದು ಬದುಕುವುದು ಮನುಷ್ಯತ್ವವೇ ಅಲ್ಲ ಎಂದ ಮೇಲೆ ನೋಯಿಸಿ ನಗುವ ಮನಃಸ್ಥಿತಿ ಹುಟ್ಟಿದ್ದು ಎಲ್ಲಿಂದ… ಎಲ್ಲ ಪಾಠಗಳನ್ನೂ ನಮ್ಮ ಬದುಕಿನಿಂದಲೇ ಕಲಿಯುವ ಅಗತ್ಯವಿಲ್ಲ. ನಮ್ಮವರ ಬದುಕಿನಿಂದಲೂ ಕಲಿಯಬಹುದು…ಇಲ್ಲಿ ಮಲ್ಲಿಗೆ ಬಳ್ಳಿಯಂತೆ ತಬ್ಬಿ ಹಬ್ಬಿ ಬೆಳೆಯುವ ಹೊತ್ತಿನಲ್ಲೇ ಗುಲಾಬಿಯಂತೆ ಮುಳ್ಳುಗಳ ನಡುವೆಯೇ ಜಾಗ್ರತೆಯಾಗಿ ಅರಳುವುದನ್ನೂ ಕಲಿಯಬೇಕು. ಸಾವಿರ ಮಾತುಗಳ ಕಲ್ಲ ಬಳಸಿ ಪುಟ್ಟ ಗೂಡ ಕಟ್ಟುವ ಸೃಜನಶೀಲ ಮನಸ್ಥಿತಿ ನಮ್ಮದಾಗಲಿ.

ಮತ್ತೆ ಆ ತಿರುವುಗಳ ಹೊತ್ತು ಹೆಮ್ಮೆಯಿಂದ ಬೀಗುವ ನಂದಿಯ ತಪ್ಪಲಿಗೆ ಹೋಗೋಣ. ಕೊಂಬೆ ಕೊಂಬೆಯಲ್ಲೂ ಅನುರಣಿಸುವ ಪ್ರೇಮದ ಆಲಾಪಗಳನ್ನು ಕಿವಿತುಂಬಿಕೊಳ್ಳೋಣ. ಈ ಹೊತ್ತಿಗೆ ಸರಿಯಾಗಿ, ಎಲ್ಲಿಂದಲೋ ಯಾವುದೋ ದೇಶ, ಪ್ರದೇಶದಿಂದ ಪಕ್ಷಿಧಾಮಕ್ಕೆ ವಲಸೆ ಬರುವ ಹಕ್ಕಿಗಳಂತೆ ನಾವೂ ಹಾರಿ ಹೋಗೋಣ…

ನನಗೀಗ ಈ ಕತೆ ಯಾಕೇ ನೆನಪಾಯಿತೋ ಗೊತ್ತಿಲ್ಲ. ಹೇಳುವೆ ಕೇಳು… ಒಂದೂರಲ್ಲಿ ಒಬ್ಬ ರಾಜಕುಮಾರನಿದ್ದ. ಗೊತ್ತಿಲ್ಲ ಅವನಿಗೆ ಏನಾಯಿತೋ ತೀರಿ ಹೋದ. ಅವನ ಪ್ರಜೆಗಳು ಮರುಗಿದರು. ಬಹುಶಃ ಅವ ಒಳ್ಳೆಯವನಿದ್ದ. ನಂತರ ಅವರೆಲ್ಲ ಸೇರಿ ಅವನದೊಂದು ಬಂಗಾರದಿಂದ ಮಾಡಿದ, ರತ್ನಖಚಿತ ಮೂರ್ತಿಯನ್ನು ಮಾಡಿಸಿ ರಾಜ್ಯದ ಸರ್ಕಲ್ ಒಂದರಲ್ಲಿ, ನಿತ್ಯ ಎಲ್ಲರಿಗೂ ಕಾಣುವಂತೆ ಇಟ್ಟರು. ಆ ರಾಜಕುಮಾರನ ಆತ್ಮ ಆ ಮೂರ್ತಿಯಲ್ಲಿ ಬಂದು ಸೇರಿಕೊಂಡಿತು. ರಾಜಕುಮಾರನಿಗೆ ಖುಷಿಯೋ ಖುಷಿ; ತನ್ನವರೆಲ್ಲ ತನ್ನನ್ನು ಎಷ್ಟು ಪ್ರೀತಿಸುತ್ತಾರಲ್ಲ ಎಂದು. ಹಾಗೆ ದಿನಕಳೆಯತೊಡಗಿತು. ಜನ ನಿಧಾನವಾಗಿ ರಾಜಕುಮಾರನ ಸಾವಿನ ದುಃಖದಿಂದ ಹೊರಬರತೊಡಗಿದರು. ಬರಬರುತ್ತಾ ರಾಜಕುಮಾರನ ಮೂರ್ತಿಯನ್ನು ಕಣ್ಣೆತ್ತಿ ನೋಡುವುದನ್ನೇ ಮರೆತರು. ರಾಜಕುಮಾರನಿಗೆ ಬಹಳ ನೋವಾಯಿತು. ಅದೆಷ್ಟೋ ದಿನವಾಗಿದ್ದರೂ ಯಾರೂ ಆ ಮೂರ್ತಿಯ ಧೂಳನ್ನು ಕೊಡವಿರಲಿಲ್ಲ. ಒಂದು ದಿನ ಆ ಮಾರ್ಗವಾಗಿ ವಲಸೆ ಹೋಗುತ್ತಿದ್ದ ಹಕ್ಕಿಯೊಂದು ದಣಿವಾರಿಸಿಕೊಳ್ಳಲು ರಾಜಕುಮಾರನ ಮೇಲೆ ಬಂದು ಕುಳಿತಿತು. ಆಗ ರಾಜಕುಮಾರ ಖುಷಿಯಿಂದ ಆ ಹಕ್ಕಿಯನ್ನು ಮಾತನಾಡಿಸಿದ. ಹಕ್ಕಿಗೋ ಪರಮಾಶ್ಚರ್ಯ. ರಾಜಕುಮಾರ ತನ್ನ ಪ್ರಜೆಗಳ ಪ್ರೀತಿಯನ್ನು ಕಳೆದುಕೊಂಡ ರೀತಿಯನ್ನು ವಿವರಿಸಿದ. ಇಬ್ಬರಲ್ಲೂ ಎಂಥದೋ ಗೆಳೆತನ ಹುಟ್ಟಿತು.

ರಾಜಕುಮಾರ ಹೇಳಿದ, “ನೋಡು ಅಲ್ಲೊಬ್ಬ ಬಡ ನಿರ್ಗತಿಕನಿದ್ದಾನಲ್ಲ ಅವನಿಗೆ ನನ್ನ ಮೂರ್ತಿಯ ಒಂದು ಚೂರು ಕೊಟ್ಟು ಬಾ” ಎಂದು. ಹಕ್ಕಿ ಹಾಗೇ ಮಾಡಿತು. ಇದು ಹೀಗೇ ಮುಂದುವರೆದು ಮೂರ್ತಿಯ ಚಿನ್ನವನ್ನೆಲ್ಲ ಹಕ್ಕಿ ಅವರಿವರಿಗೆ ಸಿಗುವ ಹಾಗೆ ಮಾಡಿ ಬಂತು. ಹೀಗೆ ಕಾಲ ಬದಲಾಗಿ ಚಳಿಗಾಲ ಶುರುವಾಯಿತು. ಕೊರೆಯುವ ಚಳಿ, ಹಕ್ಕಿ ಒದ್ದಾಡತೊಡಗಿತು. ಆದರೂ ಅದಕ್ಕೆ ರಾಜಕುಮಾರನನ್ನು ಬಿಟ್ಟು ಹೋಗುವ ಮನಸಿರಲಿಲ್ಲ. ಸ್ವತಃ ರಾಜಕುಮಾರನೇ ಹೇಳಿದರೂ ಅದು ಕೇಳಲೇ ಇಲ್ಲ. ಒಂದು ದಿನ ಯಾರೋ ಒಬ್ಬ ನಿರ್ಗತಿಕನಿಗೆ ಏನೋ ಕೊಡಬೇಕು ಅನಿಸಿತು ರಾಜಕುಮಾರನಿಗೆ. ಆದರೆ ಅವನ ಬಳಿ ಇದ್ದ ಲೇಪಿಸಿದ ಚಿನ್ನವೆಲ್ಲ ಖಾಲಿಯಾಗಿತ್ತು. ಅವನ ಬಳಿ ಉಳಿದದ್ದು ಅವನ ಕಣ್ಣಿನ ರತ್ನಗಳು ಮಾತ್ರ. ಈಗ ರಾಜಕುಮಾರ ಅವನ್ನೇ ಕಿತ್ತು ಕೊಟ್ಟು ಬರಲು ಹೇಳಿದ. “ಇವನ್ನು ಕಿತ್ತರೆ ಇನ್ನು ಮುಂದೆ ಯಾರನ್ನೂ ಏನನ್ನೂ ನೋಡಲಾಗುವುದಿಲ್ಲ ನಿನಗೆ” ಎಂದಿತು ಹಕ್ಕಿ. ಅದಕ್ಕೆ ರಾಜಕುಮಾರ, ‘ಪರವಾಗಿಲ್ಲ.. ಅವನಿಗೆ ಅದರಿಂದ ಉಪಯೋಗವಾದರೆ ಸಾಕು…’ ಎಂದ. ಹಕ್ಕಿ ಚಳಿಯಿಂದಾಗಿ ನಿತ್ರಾಣವಾಗಿತ್ತು. ಕೊನೆಯ ಕೆಲಸವೆಂಬಂತೆ ಆ ರತ್ನಗಳನ್ನು ಒಯ್ದು ಆ ನಿರ್ಗತಿಕನ ಮನೆ ಬಳಿ ಚೆಲ್ಲಿ ಬಂದು, ಇನ್ನೇನು ಮೂರ್ತಿಯ ಬಳಿ ತಲುಪಬೇಕು ಎನ್ನುವಷ್ಟರಲ್ಲಿ ಪ್ರಾಣವನ್ನೇ ಬಿಟ್ಟಿತು. ರಾಜಕುಮಾರ ಅದೆಷ್ಟೋ ದಿನ ಹಕ್ಕಿಗಾಗಿ ಕಾದ. ಅವನ ಕಣ್ಣು ಕುರುಡಾಗಿತ್ತು. ಏನೊಂದನ್ನೂ ಕಾಣದಾಗಿದ್ದ. ಕಾದು ಕಾದು ಸುಸ್ತಾದ. ಕೊನೆಗೆ, ಬಹುಶಃ ತನ್ನ ಊರಿಗೆ ಮರಳಿರಬಹುದು ಎಂದುಕೊಂಡ. ಎಲ್ಲೋ ಸುಖವಾಗಿರಲಿ, ಇಷ್ಟು ದಿನ ನನ್ನ ಜೊತೆಗೆ ಇತ್ತಲ್ಲ ಎಂದು ಸಮಾಧಾನ ಪಟ್ಟ. ತಾನು ಬದುಕಿದ್ದಾಗ ಮಾಡದ ಸಾರ್ಥಕ ಕೆಲವನ್ನ ಸತ್ತಾದ ಮೇಲೆ ಮಾಡಲು ಸಹಾಯ ಮಾಡಿದ ಹಕ್ಕಿಯನ್ನು ಬಹುವಾಗಿ ಪ್ರೀತಿಸಿದ. ಅವನ ಆತ್ಮಕ್ಕೆ ಶಾಂತಿ ಸಿಕ್ಕಿತ್ತು. ಒಂದು ದಿನ ಜನ ಅಚಾನಕ್ ಅವನ ಭಗ್ನಗೊಂಡ ಮೂರ್ತಿಯನ್ನು ಗಮನಿಸಿದರು. ಈಗ ಅವರ ಮನಸಲ್ಲಿ ಯಾವ ಪ್ರೀತಿಯೂ ಉಳಿದಿರಲಿಲ್ಲ. ಆ ಮೂರ್ತಿಯನ್ನು ಒಯ್ದು ಕಸದ ತಿಪ್ಪೆಯ ಮೇಲೆ ಎಸೆದು ಬಂದರು….

ಹಾಗಾದರೆ ಹೇಳು ಯಾವುದು ಪ್ರೀತಿ?! ಯಾಕಾದರೂ ಈ ಪ್ರೀತಿ… ಕೊರೆವ ಚಳಿಯಂತೆ ಹೀಗೇ…

ಮತ್ತೊಮ್ಮೆ ಸಿಕ್ಕಾಗ ಹೇಳಲು ಉತ್ತರ ಸಿದ್ಧವಾಗಿರಲಿ ಆಯಿತಾ…

“ಹಾಥ್ ಛೂಟೆ ಭಿ ತೊ ರಿಶ್ತೆ ನಹಿ ಛೋಡಾ ಕರ್ತೆ
ವಕ್ತ್ ಸೆ ಲಮ್ಹೆ ನಹಿ ತೋಡಾ ಕರ್ತೆ…”

-ಗುಲ್ಜಾರ್