ನಾಲ್ಕನೇ ಶತಮಾನದಿಂದ ೧೩ ನೇ ಶತಮಾನದ ವರೆಗೂ ಆಳಿದ ಚಂಪಾ ಸಾಮ್ರಾಜ್ಯವು ಆಮೇಲೆ ಚೈನಿಸ್ , ಡ ವಿಯೆಟ್ ಹಾಗೂ ಪ್ರಬಲರಾದ ಕಾಂಬೋಡಿಯಾದ ಖ್ಮೇರ್ ರಾಜರುಗಳಿಗೆ ಮಣಿದು ಕೊನೆಗೆ ಅಳಿದೇಹೊಯಿತು. ಅವರ ಭೌಗೋಳಿಕ ಪ್ರದೇಶಗಳನ್ನು ಇಂದ್ರಪುರ, ಅಮರಾವತಿ, ವಿಜಯಾ ಕೌತುರಾ ಮತ್ತು ಪಾಂಡುರಂಗ ಎಂದು ಕರೆಯುತ್ತಿದ್ದರು. ಮಿಸಾನ್ ಕಣಿವೆಯು ಅಮರಾವತಿಯ ಭಾಗವಾಗಿತ್ತು. ಅಲ್ಲಿಂದ ಅವರು ಶತ್ರುಗಳಿಂದ ಹಿಮ್ಮೆಟ್ಟಿ ಹೋದಂತೆ ಕಣಿವೆಯೂ ಅನಾಥವಾಗುತ್ತಾ ಹೋಯಿತು. ಕಡೆಗೆ ಎಲ್ಲಾ ದೇವಾಲಯಗಳು ಕಾಡಿನಲ್ಲಿ ಕರಗಿ ಹೋದವು.  ‘ದೇವ ಸನ್ನಿಧಿ’ ಅಂಕಣದಲ್ಲಿ ಗಿರಿಜಾ ರೈಕ್ವ ವಿಯೆಟ್ನಾಂ ಕುರಿತು ಬರೆದಿದ್ದಾರೆ. 

ಅಲ್ಲಿ ಮಳೆಗಾಲ ..ಚೆನ್ನಾಗಿ ಮಳೆ ಸುರಿಯುತ್ತಿತ್ತು. ಸುತ್ತ ಶತಮಾನಗಳ ಇತಿಹಾಸವನ್ನು ಹೊತ್ತ ಅನೇಕ ಅವಶೇಷಗಳು ಚೆಲ್ಲಾಪಿಲ್ಲಿಯಾದಂತೆ ಹರಡಿಕೊಂಡಿದ್ದವು. ಆ ಇಟ್ಟಿಗೆಯ ಕಟ್ಟಡಗಳು ಇಂತಹ ಅದೆಷ್ಟು ಮಳೆ ಕಂಡಿದ್ದವೋ ! ಅದೆಷ್ಟು ಯುದ್ಧಗಳಿಗೆ ಸಾಕ್ಷಿಯಾಗಿದ್ದವೋ, ಅದೆಷ್ಟು ರಾಜರುಗಳು ಅವರ ಭಕ್ತಿ, ಆಸೆ, ದುರಾಸೆ, ಆಕ್ರಮಣ, ಸಂಚು ಇವೆಲ್ಲವನ್ನು ಸದ್ದಿಲ್ಲದೆ ಕೇಳಿದ್ದವೋ, ಸಾವಿರಾರು ಕಿ. ಮೀಗಳಿಂದ ಬಂದ ಸಂಸ್ಕೃತಿ ಇಲ್ಲಿ ಅರಳಿ , ಬೆಳೆದು , ಹಬ್ಬಿದ್ದಕ್ಕೆ ಹೆಮ್ಮೆ ಪಟ್ಟಿದ್ದವೋ…. ಸಾವಿರಕ್ಕೂ ಮೀರಿದ ವಯಸ್ಸು ಆ ದೇವಾಲಯಗಳಿಗೆ.

ಕಣಿವೆಯ ಸುತ್ತ ಆವರಿಸಿಕೊಂಡ ಮಹಾಪರ್ವತ ಇವೆಲ್ಲಕ್ಕೂ ಒಂದು ಗಾಂಭೀರ್ಯವನ್ನು ತಂದುಕೊಟ್ಟಿತ್ತು. ಅಲ್ಲಲ್ಲೇ ಕಾಣುತ್ತಿದ್ದ ಶಿವಲಿಂಗಗಳ ಅವಶೇಷಗಳನ್ನು ಕಂಡಾಗ ಒಂದು ಬಗೆಯ ಸಂಕಟ. ಬಯಲನ್ನೇ ಆಲಯ ಮಾಡಿಕೊಂಡವನಿಗೆ ಇದೂ ಲೀಲೆಯೇ ಎನ್ನಿ. ನಾನು ನೋಡುತ್ತಿದ್ದುದು ಭಾರತದ ಯಾವುದೋ ಭಗ್ನ ದೇವಾಲಯದ ಆವರಣವನ್ನಲ್ಲ. ವಿದೇಶೀ ಭೂಮಿಯಲ್ಲಿ ಅರಳಿದ ಸಾವಿರಕ್ಕೂ ಹೆಚ್ಚು ವರ್ಷಗಳು ಆಳಿ ಅಳಿದು ಹೋದ ಹಿಂದೂ ಸಾಮ್ರಾಜ್ಯದ ಕೊನೆಯ ಪಳೆಯುಳಿಕೆಗಳನ್ನು. ಅದು ವಿಯಟ್ನಾಮಿನ ಅಂದಿನ ಚಂಪಾಸಾಮ್ರಾಜ್ಯದ ಪವಿತ್ರಕ್ಷೇತ್ರ. ಚಾಮ್ ಜನರ ಅಂದಿನ ರಾಜಕೀಯ , ಸಾಂಸ್ಕೃತಿಕ ಕೇಂದ್ರ.

ಭಾರತದಾಚೆಯ ದೇವಾಲಯಗಳಿಗೆ ಬಂದಾಗ ಕಾಂಬೋಡಿಯ, ಇಂಡೋನೇಷ್ಯ, ಹಾಗೂ ಥೈಲ್ಯಾಂಡ್ ಪ್ರಮುಖವಾಗಿ ನೆನಪಿಗೆ ಬರುತ್ತವೆ. ಆದರೆ ಮಧ್ಯ ವಿಯಟ್ನಾಂ ನಲ್ಲಿರುವ ಮಿಸಾನ್ ದೇವಾಲಯ ಸಮುಚ್ಚಯ ಅನೇಕರಿಗೆ ಹೆಚ್ಚು ತಿಳಿದಿಲ್ಲ. ೨೦೧೮ ರಲ್ಲಿ ನಾನು ವಿಯಟ್ನಾಂ ಗೆ ಹೋಗಿದ್ದಾಗ ಇದನ್ನು ನೋಡಲೇಬೇಕು ಅಂತ ತೀರ್ಮಾನಿಸಿದ್ದೆ. ಸಾಮಾನ್ಯವಾಗಿ ಉತ್ತರದಲ್ಲಿ ಹನೋಯ್ ದಕ್ಷಿಣದಲ್ಲಿ ಹೊ ಚಿ ಮಿನ್ ನಗರದ ಸುತ್ತ ಮುತ್ತ ಜನ ಪ್ರವಾಸ ಹೋಗುತ್ತಾರೆ. ವಿಯಟ್ನಾಂ ನ ಮಧ್ಯ ಭಾಗದಲ್ಲಿರುವ ಮಿಸಾನ್ ಯಾಕೋ ಇನ್ನೂ ಭಾರತೀಯರ ಪ್ರವಾಸ ನಕ್ಷೆಯಲ್ಲಿ ಅಂತಹ ಸ್ಥಾನ ಪಡೆದಿಲ್ಲ. ಅಷ್ಟೇಕೆ, ಆರ್ ಸಿ ಮಜುಮದಾರ್ ಅಂತಹ ಕೆಲವರನ್ನು ಬಿಟ್ಟರೆ ಈ ಕುರಿತು ಹೆಚ್ಚಿನ ಸಾಹಿತ್ಯ, ಬರಹವೂ ಕಡಿಮೆಯೇ.

ವಿಯಟ್ನಾಂ ನ ಮಧ್ಯ ಭಾಗದಲ್ಲಿರುವ ಮಿಸಾನ್ ಯಾಕೋ ಇನ್ನೂ ಭಾರತೀಯರ ಪ್ರವಾಸ ನಕ್ಷೆಯಲ್ಲಿ ಅಂತಹ ಸ್ಥಾನ ಪಡೆದಿಲ್ಲ. ಅಷ್ಟೇಕೆ, ಆರ್ ಸಿ ಮಜುಮದಾರ್ ಅಂತಹ ಕೆಲವರನ್ನು ಬಿಟ್ಟರೆ ಈ ಕುರಿತು ಹೆಚ್ಚಿನ ಸಾಹಿತ್ಯ, ಬರಹವೂ ಕಡಿಮೆಯೇ.

ಹನೋಯ್ ನಿಂದ ದನಾಂಗ್ ನಗರಕ್ಕೆ ಇರುವ ವಿಮಾನದಲ್ಲಿ ಬಂದಿಳಿದು ೬೦ ಕಿ. ಮೀ ದೂರದಲ್ಲಿರುವ ಮಿಸಾನ್ ಗೆ ಕಾರಿನಲ್ಲಿ ಹೋಗಿ ತಲುಪಿದ್ದೆವು. ರಸ್ತೆ ಚೆನ್ನಾಗಿದ್ದುದರಿಂದ ಒಂದು ಘಂಟೆಯ ಒಳಗೆ ಅಲ್ಲಿದ್ದೆವು. ಮಳೆ ನಿಂತೂ ನಿಂತೂ ಸುರಿಯುತ್ತಿತ್ತು. ಪ್ರವೇಶ ದ್ವಾರದಿಂದ ಮುಖ್ಯ ಭಾಗಕ್ಕೆ ಎಲೆಕ್ಟಿಕ್ ಕಾರಿನಲ್ಲಿ ಕರೆದೊಯ್ದರು. ಆಗ ನನ್ನೆದುರು ತೆರೆದುಕೊಂಡಿದ್ದೆ, ನಾನು ಊಹಿಸಿಯೂ ಇರದಷ್ಟು ದೊಡ್ದದಾದ ದೇವಾಲಯ ಸಮುಚ್ಚಯದ ಅವಶೇಷಗಳು.

ಅಲ್ಲಿ ಗೈಡ್ ಸೌಲಭ್ಯ ಇರದಿದ್ದುದರಿಂದ ನಕ್ಷೆ ನೋಡಿಕೊಂಡು ನಾವೇ ಹುಡುಕಾಡಿಕೊಂಡು ನೋಡುತ್ತಾ ಹೋದೆವು. ಇದೊಂದು ಪಾರಂಪರಿಕ ತಾಣ. ೧೯೯೯ ರಲ್ಲಿ ಯುನೆಸ್ಕೋ , ಮಿಸಾನ್ ಅನ್ನು ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಿತು. ಅಲ್ಲಿ ಬಂದಿದ್ದ ಗುಂಪು ಬಹುಪಾಲು ವಿದೇಶೀಯರಿಂದ ಕೂಡಿತ್ತು. ಅಲ್ಲಿದ್ದ ಹೊತ್ತೂ ಮತ್ಯಾವ ಭಾರತೀಯರೂ ಕಾಣಿಸಲಿಲ್ಲ. ಹಿಂದೆ ಚಂಪಾದ ವೈಭವದ ಕಾಲದಲ್ಲಿ ೭೦ ಕ್ಕೂ ಹೆಚ್ಚು ದೇವಾಲಯಗಳಿದ್ದವಂತೆ. ಈಗ ಉಳಿದಿರುವುದು ಅವಶೇಷಗಳು ಮಾತ್ರ.

ಸಾಮಾನ್ಯ ಶಕೆಯ ಆರಂಭದ ದಿನಗಳಿಂದಲೂ ಅಲ್ಲಿ ಚಂಪಾ ಸಾಮ್ರಾಜ್ಯ ಇತ್ತು ಎನ್ನಲಾದರೂ, ೫ ನೆಯ ಶತಮಾನ ದಿಂದ ಶಾಸನಗಳ ದಾಖಲೆ ಸಿಗುತ್ತದೆ. ಭೌಗೋಳಿಕವಾಗಿ ಒಂದು ಕಡೆ ಸಮುದ್ರ ಮಾತ್ತೊಂದುಕಡೆ ಪರ್ವತ ನಡುವೆ ಇದ್ದ ಚಾಮ್ (ಸಂಸ್ಕೃತದಲ್ಲಿ ಚಂಪಾ) ರಾಜ್ಯ ವ್ಯಾಪಾರ ವಹಿವಾಟಿಗೆ ಆಯಕಟ್ಟಿನ ಜಾಗದಲ್ಲಿತ್ತು ಅಂತ ಕಾಣುತ್ತೆ. ೫ ನೇ ಶತಮಾನದಲ್ಲಿ ಭದ್ರವರ್ಮನ್ ೧ ಈ ಕಣಿವೆಯನ್ನೇ ಶಿವನ ದೇವಾಲಯ ಎಂದು ಭಾವಿಸಿ ಒಂದು ದೇವಾಲಯವನ್ನು ಕಟ್ಟುತ್ತಾನೆ. ಅದಕ್ಕೆ ಭದ್ರೇಶ್ವರ ಎಂದು ಕರೆಯುತ್ತಾರೆ. ನಮ್ಮ ಹೊಯ್ಸಳ ದೇವಾಲಯಗಳಲ್ಲೂ ಕಟ್ಟಿಸಿದ ರಾಜನ ಅರ್ಧ ಹೆಸರಿನ ಮುಂದೆ ಈಶ್ವರ ಸೇರಿಸಿ ಕರೆಯುವುದನ್ನು ಗಮನಿಸಬಹುದು. ಉದಾಹರಣೆಗೆ ಹಾಸನದ ಸಮೀಪವಿರುವ ಕೊರವಂಗಲದ ಬುಚ್ಚೇಶ್ವರ ದೇವಾಲಯನ್ನು ಕಟ್ಟಿಸಿದ್ದು ಬುಚ್ಚರಾಜ ಎಂಬ ಅಧಿಕಾರಿ). ಹಾಗೆಯೇ ಚಾಮ್ ದೇವಾಲಯಗಳಲ್ಲಿಯೂ ಕೂಡ ಇದೇ ರೀತಿ ಹೆಸರಿಸುವುದನ್ನು ನೋಡಬಹುದು. ಭದ್ರವರ್ಮನ್ ನ ನಂತರ ಬಂದ ರಾಜರುಗಳೂ ಕೂಡ ಹೀಗೆಯೇ ಮಾಡುತ್ತಾರೆ. ಶಂಭುವರ್ಮನ್ನು ಶಂಭುಭದ್ರೇಶ್ವರನನ್ನು ಪ್ರತಿಷ್ಠಾಪಿಸುತ್ತಾನೆ. ಹೀಗೆಯೇ ೫ನೇ ಶತಮಾನದಿಂದ ೧೩ ನೇ ಶತಮಾನದವರೆಗೆ ೭೦ ದೇವಸ್ಥಾನಗಳು ನಿರ್ಮಾಣಗೊಳ್ಳುತ್ತವೆ. ಅದೊಂದು ದೇವಾಲಯಗಳ ಕಣಿವೆ ಎಂದು ಪ್ರಸಿದ್ಧವಾಗುತ್ತದೆ. ಅಂದಿನ ಚಾಮ್ ಜನರ ಪವಿತ್ರ ಕ್ಷೇತ್ರವಾಗುತ್ತದೆ. ಚಂಪಾರಾಜ್ಯದ ತೀರ್ಥಕ್ಷೇತ್ರವಾಗುತ್ತದೆ.

ಪಕ್ಕದ ಬೆಟ್ಟ ಮಹಾಪರ್ವತವನ್ನು ಕೈಲಾಸವೆಂದೂ, ಅಲ್ಲಿಂದ ಹರಿದು ಬರುತ್ತಿದ್ದ ಝರಿಯನ್ನು ಗಂಗೆಯೆಂದೂ ಪೂಜಿಸುತ್ತದ್ದರಂತೆ. ಅಂದ ಹಾಗೆ ಮಿಸಾನ್ ಎಂದರೆ ವಿಯಟ್ನಾಮಿ ಭಾಷೆಯಲ್ಲಿ ಸುಂದರವಾದ ಪರ್ವತಗಳು ಎಂದರ್ಥ.

೪ ನೇ ಶತಮಾನದಿಂದ ೧೩ ನೇ ಶತಮಾನದ ವರೆಗೂ ಆಳಿದ ಚಂಪಾ ಸಾಮ್ರಾಜ್ಯವು ಆಮೇಲೆ ಚೈನಿಸ್ , ಡ ವಿಯೆಟ್ ಹಾಗೂ ಪ್ರಬಲರಾದ ಕಾಂಬೋಡಿಯಾದ ಖ್ಮೇರ್ ರಾಜರುಗಳಿಗೆ ಮಣಿದು ಕೊನೆಗೆ ಅಳಿದೇಹೊಯಿತು. ಅವರ ಭೌಗೋಳಿಕ ಪ್ರದೇಶಗಳನ್ನು ಇಂದ್ರಪುರ, ಅಮರಾವತಿ, ವಿಜಯಾ ಕೌತುರಾ ಮತ್ತು ಪಾಂಡುರಂಗ ಎಂದು ಕರೆಯುತ್ತಿದ್ದರು. ಮಿಸಾನ್ ಕಣಿವೆಯು ಅಮರಾವತಿಯ ಭಾಗವಾಗಿತ್ತು. ಅಲ್ಲಿಂದ ಅವರು ಶತ್ರುಗಳಿಂದ ಹಿಮ್ಮೆಟ್ಟಿ ಹೋದಂತೆ ಕಣಿವೆಯೂ ಅನಾಥವಾಗುತ್ತಾ ಹೋಯಿತು. ಕಡೆಗೆ ಅಲ್ಲಿ ಪೂಜೆ ನಿಂತು ಹೋಗಿ ಕಾಡು ವ್ಯಾಪಿಸಿಕೊಳ್ಳುತ್ತಾ ಹೋಗಿ ಎಲ್ಲಾ ದೇವಾಲಯಗಳು ಕಾಡಿನಲ್ಲಿ ಕರಗಿ ಹೋದವು. ಕಾಂಬೋಡಿಯಾದಲ್ಲೂ ಹೀಗೇ ಕಾಡು ತಿಂದು ಉಳಿದ ದೇವಾಲಯಗಳೇ ವಿಶ್ವ ಪ್ರಸಿದ್ಧವಾಗಿವೆ. ೧೮ನೇ ಶತಮಾನದಲ್ಲಿ ಒಬ್ಬ ಫ್ರೆಂಚ್ ಆರ್ಕಿಯಾಲಜಿಸ್ಟ್ ಕಣ್ಣಿಗೆ ಬಿದ್ದ ನಂತರ ಈ ದೇವಾಲಯ ಸಮುಚ್ಚಯ ಜಗತ್ತಿಗೆ ತಿಳಿದಿದ್ದು.

ಅದೊಂದು ದೇವಾಲಯಗಳ ಕಣಿವೆ ಎಂದು ಪ್ರಸಿದ್ಧವಾಗಿತ್ತು. ಅಂದಿನ ಚಾಮ್ ಜನರ ಪವಿತ್ರ ಕ್ಷೇತ್ರವಾಗಿದೆ. ಚಂಪಾರಾಜ್ಯದ ತೀರ್ಥಕ್ಷೇತ್ರ.

ಈಗ ಇಡೀ ದೇವಾಲಯ ಸಂಕೀರ್ಣ ಪುನರುಜ್ಜೀವನದ ಹಾದಿಯಲ್ಲಿದ್ದು ಅನೇಕ ಕಡೆ ಕೆಲಸ ನಡೆಯುತ್ತಿದೆ. ನಮ್ಮ ಭಾರತೀಯ ಪುರಾತತ್ವ ಇಲಾಖೆ ವಿಯಟ್ನಾಂ ಸರಕಾರದೊಂದಿಗೆ ಕೈಜೋಡಿಸಿದೆ. ಅಲ್ಲಿʼ ಭಾರತೀಯ ಪುರಾತತ್ವ ಇಲಾಖೆʼ ಯ ಫಲಕ ನೋಡಿ ಒಂಥರಾ ಥ್ರಿಲ್ ಅನ್ನಿಸ್ತು. ಆದರೆ ನಾವು ಹೋದಾಗ ಅಲ್ಲಿ ಯಾರೂ ಇರಲಿಲ್ಲ. ಆರು ತಿಂಗಳು ಮಾತ್ರ ಭಾರತೀಯ ಕಛೇರಿ ತೆರದಿರುತ್ತದೆ. ಮಳೆ ಶುರು ಆದ ಮೇಲೆ ವಾಪಸ್ ಭಾರತಕ್ಕೆ ಬರುತ್ತಾರೆ. ಉತ್ಖನನವೂ ಕೂಡ ಸತತವಾಗಿ ನಡೆಯುತ್ತಿದೆ. ಕಳೆದ ವರ್ಷ ಅಲ್ಲಿ ಒಂದು ದೊಡ್ಡಮರಳುಗಲ್ಲಿನ ಶಿವಲಿಂಗ ಸಿಕ್ಕ ಸುದ್ದಿಯನ್ನು ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ್ದನ್ನು ನೆನಪಿಸಿಕೊಳ್ಳಬಹುದು. ನಾನು ಹೋದಾಗ ಕೂಡ ಅನೇಕ ಶಿವಲಿಂಗಗಳನ್ನು ನೋಡಿದ್ದೇನೆ. ಶಿವ ಅವರ ಆರಾಧ್ಯ ದೈವವಾಗಿದ್ದನು. ಹಾಗಾಗಿ ಶಿವನನ್ನು ಲಿಂಗರೂಪದಲ್ಲಲ್ಲದೆ ಶರೀರರೂಪಿಯಾಗೂ ಶಿಲ್ಪಗಳಲ್ಲಿ ಕೆತ್ತಿದ್ದಾರೆ. ಶಿವನಲ್ಲದೆ, ವಿಷ್ಣು, ಗರುಡ, ಬ್ರಹ್ಮ , ಸರಸ್ವತಿ, ಅಷ್ಟದಿಕ್ಪಾಲಕರು ಹೀಗೆ ಎಲ್ಲಾ ಹಿಂದೂದೇವದೇವಿಯರ ಶಿಲ್ಪಗಳನ್ನು ಕಾಣಬಹುದು.

ಇಡೀ ದೇವಾಲಯ ಸಂಕೀರ್ಣವನ್ನು -A, B, C, D, E, F, G,H,J,K & L ಗುಂಪುಗಳಾಗಿ ವಿಂಗಡಿಸಿದ್ದಾರೆ. ನಾವು ಮೊದಲಿಗೆ ಹೋಗಿದ್ದು BCD ಗುಂಪಿನ ದೇವಾಲಯಗಳು. ಇವನ್ನು ಇಟ್ಟಿಗೆಯಲ್ಲಿ ಕಟ್ಟಿದ್ದಾರೆ. ಶಿಥಿಲವಾಗಿದ್ದರೂ ಕೆಲವು ದೇವಾಲಯಗಳ ಒಳಗೆ ಇಂದಿಗೂ ಉಬ್ಬು ಶಿಲ್ಪಗಳನ್ನು ನೋಡಬಹುದು. ಅನೇಕ ದೇವಾಲಯಗಳು ಬೆಂಕಿಯಲ್ಲಿ ಸುಟ್ಟು ಹೋದಂತೆ ಕಾಣುತ್ತವೆ. ಆಮೇಲೆ ತಿಳಿದ ಕಾರಣ, ೧೯ ನೇ ಶತಮಾನದಲ್ಲಿ ನಡೆದ ಅನೇಕ ವರ್ಷಗಳ ಅಮೇರಿಕಾ ವಿಯಟ್ನಾಂ ಯುದ್ಧದ ಸಂದರ್ಭದಲ್ಲಿ ವಿಯಟ್ನಾಮಿ ಸೈನಿಕರು ಈ ದೇವಾಲಯಗಳನ್ನು ಅವರ ಅಡಗು ತಾಣಗಳಾಗಿ ಬಳಸುತ್ತಿದ್ದರಂತೆ. ಅವರನ್ನು ಕೊಲ್ಲಲು ೧೯೬೯ ರಲ್ಲಿ ಮೇಲಿಂದ ಮೇಲೆ ಸುರಿದ ಅಮೇರಿಕಾದ ಬಾಂಬುಗಳು ದೇವಾಲಯಗಳಿಗೆ ಅಪಾರ ಹಾನಿ ಉಂಟುಮಾಡಿವೆ. ಹಾಗಾಗೇ ಅನೇಕ ದೇವಾಲಯಗಳು ಕುಸಿದು ಬಿದ್ದಿವೆ, ಕೆಲವು ಕಡೆ ಬಾಂಬ್ ಬಿದ್ದ ಜಾಗದಲ್ಲಿ ದೊಡ್ಡ ಕುಳಿಗಳಾಗಿವೆ. ಇಷ್ಟಾಗಿಯೂ ಇನ್ನೂ ಕೇವಲ ಇಟ್ಟಗೆಯಲ್ಲಿ ಕಟ್ಟಿದ ಕಡ್ಡಟಗಳು ಉಳಿದಿರುವುದು ಆಶ್ಚರ್ಯ. ೫ ನೇ ಶತಮಾನದಲ್ಲಿ ಕಟ್ಟಿದ ಮೊದಲ ದೇವಾಲಯ ಕಟ್ಟಿಗೆಯದ್ದಾಗಿದ್ದು ಅದು ಕೆಲವೇ ವರ್ಷಗಳಲ್ಲಿ ಸುಟ್ಟುಹೋಗುದ್ದುದರಿಂದ ಅವರು ಕಂಡುಕೊಂಡ ಹೊಸ ತಂತ್ರ ಇಟ್ಟಿಗೆ. ಇದಕ್ಕೆ ಒಂದಕ್ಕೊಂದು ಬೆಸೆಯಲು ಸಿಮೆಂಟ್ ಅಥವಾ ಸುಣ್ಣವನ್ನು ಬಳಸಿಲ್ಲ. ಯಾವುದೋ ಮರದ ಅಂಟನ್ನು ಬಳಸಿದ್ದರು ಎನ್ನುತ್ತಾರೆ. ಇವತ್ತಿಗೂ ಚಾಮ್ ಜನರು ಕಟ್ಟಲು ಬಳಸಿದ ತಂತ್ರಜ್ಣಾನ ಇಂಜಿನಿಯರುಗಳಿಗೆ ಅಚ್ಚರಿ.

ಇಡೀ ಸಂಕೀರ್ಣದ ತುಂಬಾ ಅನೇಕ ಶಾಸನಗಳು ಅಂದಿನ ವಿವರಗಳನ್ನು ದಾಖಲಿಸಿವೆ. ಒಂದು ಕಡೆ ನಮಗೆ ಕನ್ನಡ ಲಿಪಿಯಂತೆ ತೋರುವ ಶಾಸನ ಕಾಣಿಸಿತು. ಆಮೇಲೆ ತಿಳಿದಂತೆ ಅದು ಬ್ರಾಹ್ಮೀ ಲಿಪಿಯ ಶಾಸನ , ಕನ್ನಡಕ್ಕೆ ಕೂಡ ಅದೇ ಮೂಲವಾದ್ದರಿಂದ ಹೋಲಿಕೆ ಸಹಜ. ಇದರ ಮೇಲೆ ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ. ಚಂಪಾದವರ ಶಾಸನಗಳು ಬಹುಪಾಲು ಸಂಸ್ಕೃತದಲ್ಲಿವೆ.

A ಯಿಂದ F ತನಕ ಒಂದು ವೃತ್ತಾಕಾರದ ದಾರಿಯಿದೆ. E ಮತ್ತು F ನೋಡಿದಾಗ ಇತ್ತೀಚೆಗೆ ಮಾಡಿರುವ ಪುನರುಜ್ಜೀವನದ ಕೆಲಸ ಕಂಡುಬರುತ್ತದೆ. ಹೊಸ ಇಟ್ಟಿಗೆಗಳಿಂದ ಹಳೆಯದನ್ನು ಹೋಲುವಂತೆ ಕಟ್ಟಿದ್ದಾರೆ. H,J,K & L ದೇವಾಲಯಗಳು ಸ್ವಲ್ಪ ದೂರದಲ್ಲಿವೆ. ಇಡೀ ಸಂಕೀರ್ಣದ ಎಲ್ಲಾಕೆಲಸಗಳು ಮುಗಿಯಲು ಹತ್ತು ವರ್ಷಗಳಾದರೂ ಬೇಕಾಗುತ್ತದೆ. ಕಾಂಬೋಡಿಯಾದ ಆಂಕೋರ್ ವಾಟ್ನಲ್ಲಿರುವಂತೆ, ಇಲ್ಲಿಯೂ ಅಪ್ಸರ ನೃತ್ಯದ ಪ್ರದರ್ಶನವಿರುತ್ತದೆ.

ಒಳಗೆ ಬಂದೊಡನೆ ದ್ವಾರದಲ್ಲೇ ಒಂದು ಮ್ಯೂಸಿಯಂ ಇದೆ. ಆದರೆ ಅದನ್ನು ವಾಪಸ್ ಬರುವಾಗ ನೋಡುವುದು ಒಳ್ಳೆಯದು. ಅದರಲ್ಲಿ ದೇವಾಲಯ ಪುನರುಜ್ಜಿವನದ ನಕಾಶೆ, ಅಲ್ಲಿ ಸಿಕ್ಕಿರುವ ಶಿಲ್ಪಗಳನ್ನು ಇಟ್ಟಿದ್ದಾರೆ. ಆದರೆ ಬಹುಪಾಲು ಅಮೂಲ್ಯ ಶಿಲ್ಪಗಳನ್ನು ದ ನಾಂಗ್ ನ ಮ್ಯೂಸಿಯಂ ನಲ್ಲಿ ಇಟ್ಟತಿದ್ದಾರೆ. ದನಾಂಗ್ ಮ್ಯೂಸಿಯಂ ಅನ್ನು ಮಿಸಾನ್ ನ ಮುಂದುವರೆದ ಭಾಗವಾಗಿ ನೋಡಬೇಕು. ಯಾಕೆಂದರೆ ಅಲ್ಲಿ ಅತ್ಯದ್ಭುತವಾದ ಕಲೆ ಮತ್ತು ಇತಿಹಾಸದ ಸಂಪತ್ತಿದೆ. ಅಲ್ಲಿರುವ ಒಂದು ಬೃಹತ್ ಲಿಂಗ ಚಾಮ್ ಜನರ ಶೈವಪ್ರೀತಿಗೆ ಸಾಕ್ಷಿ. ಅದೊಂದು ಮ್ಯೂಸಿಯಂ ನಲ್ಲಿರುವ ಕಲಾಕೃತಿಯಾದರೂ ಭಾರತೀಯರಾದ ನಮ್ಮ ಮನಸ್ಸು ಅದನ್ನು ಕಂಡು ಬೆಚ್ಚಗಾಗುವುದಂತೂ ನಿಜ. ಮಿಸಾನ್ ನಿಂದ ತಂದ ಶಿಲ್ಪಗಳು ಶಿವನ , ಬ್ರಹ್ಮನ , ಸರಸ್ವತಿಯ, ಕಿನ್ನರ , ಯಕ್ಷರ ಕಥೆ ಹೇಳುತ್ತವೆ, ರಾಮಾಯಣವನ್ನು ಹಾಡುತ್ತವೆ. ಆಗ್ನೇಯ ಏಷ್ಯಾದ ದೇಶಗಳಾದ ಥೈಲ್ಯಾಂಡ್ , ಇಂಡೋನೇಷ್ಯಾ, ಕಾಂಬೋಡಿಯಾ ಇಲ್ಲೆಲ್ಲಾ ರಾಮಾಯಣ ಅಲ್ಲಿನ ಪ್ರಾಚೀನ ಸಂಸ್ಕೃತಿಯ ಭಾಗವೇ ಆಗಿದೆ. ನಿಂತಿರುವ ಬೋಳುತಲೆಯ ಮುದ್ದಾದ ಗಣೇಶನ ವಿಗ್ರಹವಂತೂ ಮನಸಳೆಯುವಂತಿದೆ. ಭಾರತದ ದೇವ ದೇವಿಯರು ಅಲ್ಲಿನ ಭೂಭಾಗಕ್ಕೆ , ಅಲ್ಲಿನ ಸಂಸ್ಕೃತಿಗೆ ತಕ್ಕ ಹಾಗೆ ಶಿಲ್ಪಗಳಲ್ಲಿ ಅರಳಿವೆ. ನಮ್ಮ ಶಿವ ಸ್ವಲ್ಪ ಬೇರೆ ತರಹ ಕಾಣುತ್ತಾನೆ. ಆದರೆ ಅದರ ಹಿಂದಿರುವ ಭಾವ ಒಂದೇ .

ಭಾರತದಿಂದ ಯಾವಾಗ ಯಾರು ಅಲ್ಲಿ ಹೋಗಿದ್ದರೋ, ಅಥವಾ ಅಲ್ಲಿಯ ತನಕ ಹರಡಿದ್ದ ಭಾರತದ ಭಾಗವೇ ಆ ಭೂಭಾಗ ಅಗಿತ್ತೋ ಏನೋ ! ಭಾರತೀಯರು ಅಲ್ಲಿರುವವರನ್ನು ಮದುವೆ ಆಗಿ ಭಾರತೀಯ ಸಂಸ್ಕೃತಿಯ ಆಚಾರ ವಿಚಾರ ಕಲೆ ಭಾಷೆಯನ್ನು ಈ ಸಂಸ್ಕೃತಿಯ ಒಳಗೆ ಬೆಳೆಸುವಂತೆ ಮಾಡಿದ್ದಾರೆ. ಹೃದಯದಲ್ಲಿ ಭಾರತೀಯತೆ ಮತ್ತು ಬಾಹ್ಯ ಮುಖಭಾವದಲ್ಲಿ ವಿಯಟ್ನಾಮಿ ಚಹರೆ ಇರುವ ವಿಗ್ರಹಗಳು ಕಾಣುತ್ತವೆ. ದನಾಂಗ್ ಮ್ಯೂಸಿಯಂನಲ್ಲಿರುವ ಚಂಪಾಶಿಲ್ಪಕಲಾಕೃತಿಗಳಲ್ಲಿ ಭಾರತೀಯ ಮೂಲದ ಗುರು ಶಿಷ್ಯ ಪರಂಪರೆಯ ಸುಂದರ ಶಿಲ್ಪಗಳನ್ನು ಗಮನಿಸಬಹುದು.

ಚಾಮ್ ಜನರು ಇಂದೂ ನಿಂತುವಾನ್ ಮತ್ತು ಬಿಂತುವಾನ್ ಪ್ರಾಂತಗಳಲ್ಲಿ ಇದ್ದಾರೆ. ವಿಯಟ್ನಾಮಿನ ಅಲ್ಪಸಂಖ್ಯಾತರಾದ ಅವರ ಕಸುಬು ಕೃಷಿ ಮತ್ತು ನೇಯ್ಗೆ. ಅವರಲ್ಲಿ ಒಂದು ಗುಂಪು ಹಿಂದೂಗಳದ್ದು. ಮತ್ತೊಂದು ಗುಂಪು ಚಾಮ್ ಮುಸಲ್ಮಾನರಾಗಿ ಮತಾಂತರವಾಗಿ ನಗರಪ್ರದೇಶಗಳಲ್ಲಿ ವಾಸಿಸುತ್ತಾರೆ.

ಹೇಗೆ ಇಂದು ಕಾಂಬೋಡಿಯಾ ವಿಶ್ವಪ್ರಸಿದ್ಧವಾಗಿದೆಯೋ ಹಾಗೇಯೇ ಮುಂದೊಂದು ದಿನ ವಿಯಟ್ನಾಮಿನ ಮಿಸಾನ್ ವಿಶ್ವಪ್ರಸಿದ್ಧವಾಗುವುದರಲ್ಲಿ ಆಶ್ಚರ್ಯವಿಲ್ಲ. ಮಿಸಾನ್ ಅಲ್ಲದೆ ದಕ್ಷಿಣ ವಿಯಟ್ನಾಮ್ ನಲ್ಲಿ ಅನೇಕ ದೇವಾಲಯಗಳಿವೆ. ಅದು ಮತ್ತೊಂದೇ ದೊಡ್ಡ ಕತೆ. ಎಲ್ಲಕ್ಕಿಂತ ನನಗೆ ಹಿತವಾಗಿದ್ದು ಮಿಸಾನ್ ನ ಅಂಗಳದಲ್ಲಿ ಬೆಳೆದು ನಿಂತಿದ್ದ ತುಂಬೆಯ ಗಿಡ ಮತ್ತದರ ಹೂವುಗಳು.