Advertisement
ಯುಗಾದಿ ಅಂದ್ರೆ ನಂಗಿಷ್ಟ: ರೂಪಶ್ರೀ ಕಲ್ಲಿಗನೂರ್‌ ಬರಹ

ಯುಗಾದಿ ಅಂದ್ರೆ ನಂಗಿಷ್ಟ: ರೂಪಶ್ರೀ ಕಲ್ಲಿಗನೂರ್‌ ಬರಹ

ಚೈತ್ರ ಮಾಸ ಅಂದರೆ ಫಕ್ಕನೆ ನೆನಪಾಗೋದು ಹಸಿರು, ಯಾಕಂದ್ರೆ ಚಳಿಗಾಲದಲ್ಲಿ ಬರಡಾಗಿ ನಿಂತಿದ್ದ ಗಿಡ, ಮರಾ, ಬಳ್ಳಿಗಳು ಚಿಗುರೊ ಕಾಲ. ಹಾಗಾಗಿ ಊರ ತುಂಬ, ಗಿಡ-ಮರಗಳೆಲ್ಲ ಹೂ-ಹಸಿರು ಹೊದ್ದು ಚಂದವಾಗಿ ನಗುತ್ತ ನಿಂತಿರುವುದನ್ನ ನೋಡೋದೇ ಚಂದ. ಮೈತುಂಬಾ ಹೂ ಹೊತ್ತು ನಿಲ್ಲುವ ಮರಗಳನ್ನು ನೋಡುವಾಗಲೆಲ್ಲ, ವರ್ಷದ ಪ್ರತಿ ಮಾಸವೂ ಚೈತ್ರ ಮಾಸವೇ ಆಗಿದ್ದರೆ ಎಷ್ಟು ಚಂದ ಅಲ್ಲವೇ ಅನ್ನಿಸುತ್ತೆ.
ಚೈತ್ರಮಾಸದ ಯುಗಾದಿಯ ಕುರಿತು ರೂಪಶ್ರೀ ಕಲ್ಲಿಗನೂರ್‌ ಬರಹ

ಇಡೀ ವರ್ಷ ನೆನಪಲ್ಲೇ ಇರದ ಬೇಂದ್ರೆಯವರ “ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ” ಗೀತೆ ಯುಗಾದಿ ಹತ್ತಿರ ಬರುತ್ತಿದ್ದಂತೆ ನೆನಪಾಗತೊಡಗುತ್ತದೆ… ನೂರು ಕೆಲಸ, ಜಂಜಾಟಗಳಲ್ಲಿ ಕಳೆದುಹೋಗಿರುವ ಮನಸ್ಸಿಗೆ, ಓಹ್‌ ಹಬ್ಬ ಬಂತಲ್ಲ ಅನ್ನೋ ಸೂಚನೆ ಸಿಗುತ್ತೆ. ಹಬ್ಬದ ಪ್ರಯುಕ್ತ ಬೀಳೋ ಎಕ್ಸ್ಟ್ರಾ ಕೆಲಸಗಳನ್ನು ನೆನೆದು ಓಹ್‌!!! ಅಂತಲೂ ಅನ್ನಿಸುತ್ತೆ!

ಹಬ್ಬದಾಚರಣೆಗಳಲ್ಲಿ ನನಗೆ ಮೊದಲಿಂದಲೂ ಅಷ್ಟು ಆಸಕ್ತಿಯಿಲ್ಲವಾದರೂ ಯುಗಾದಿಯ ಕುರಿತು ನನ್ನಲ್ಲಿ ಒಂದು ಅನೂಹ್ಯ ಒಲವಿದೆ. ಮೊದಲನೆ ಮಾಸವಾದ ಚೈತ್ರ ಮಾಸ, ಅದರೊಳಗ ಬರೊ ಸಂವತ್ಸರದ ಮೊದಲನೆ ಹಬ್ಬವೇ ಯುಗಾದಿ. ಈ ಯುಗಾಗಿ ಅಂದ್ರೆ ನಂಗ್ಯಾಕೆ ಪ್ರೀತಿ ಅಂತ ಅಂದುಕೊಂಡ್ರ? ಯಾಕಂತ ಹೇಳ್ತೀನಿ ಕೇಳಿ. ಯುಗಾದಿ ಅಂದ್ರೆ ಬೇವು ಬೆಲ್ಲದ ಹಬ್ಬ ಅಲ್ವ. ಈ ಬೇವು ಬೆಲ್ಲದ ಸಂಪ್ರದಾಯ ಯಾವಾಗ ಶುರು ಆಯಿತೋ ಗೊತ್ತಿಲ್ಲಾ, ಆದರೆ ಇದು ಬಹಳ ಅರ್ಥಪೂರ್ಣ ಪದ್ಧತಿಯಿರುವ ಹಬ್ಬವಿದು ಅನ್ನಿಸತ್ತೆ. ಜೀವನದಲ್ಲಿ ಬರೋ ಸುಖ-ದುಖಃ ಸಮಾನವಾಗಿ ತಗೊಂಡು, ಎಂಥ ಸಂಕಷ್ಟ ಬಂದರೂ ಗಟ್ಟಿಯಾಗಿ ಎದುರಿಸುವ ಧೈರ್ಯಕೊಡುವ ಪಾಠವನ್ನು ಹೇಳಿಕೊಡುತ್ತದೆ. ನೀನು ಪ್ರೀತಿಯಲ್ಲೋ, ಹಣಕಾಸಿನಲ್ಲೋ ಎಷ್ಟೇ ಶ್ರೀಮಂತನಾಗಿರು; ನೀ ಬಯಸಿದಂತೆಯೇ ಬದುಕು ಖಂಡಿತವಾಗಿ ಇರೋದಿಲ್ಲ. ಬದುಕು ಅನ್ನೋದು. ಸಿಹಿ-ಕಹಿಗಳ ಸಮ್ಮಿಶ್ರ ಸಂಸಾರ… ಹಾಗಾಗಿ ಬೇವನ್ನೂ ಬೆಲ್ಲವನ್ನೂ ಸಮಾನವಾಗಿ ಸೇವಿಸೋಕೆ ರೆಡಿಯಿರು ಅಂತ ವರ್ಷದ ಮೊದಲೇ ಸಾರಾಸಗಟಾಗಿ ಹೇಳಿಬಿಡತ್ತೆ. ಯಾವ ಮುಲಾಜೂ ಇಲ್ಲದೇ! ಅದೇ ಕಾರಣಕ್ಕಾಗಿಯೇ ನನಗೆ ಯುಗಾದಿಯೆಂದರೆ ಬಲು ಮೆಚ್ಚು…

ಚೈತ್ರ ಮಾಸ ಅಂದರೆ ಫಕ್ಕನೆ ನೆನಪಾಗೋದು ಹಸಿರು, ಯಾಕಂದ್ರೆ ಚಳಿಗಾಲದಲ್ಲಿ ಬರಡಾಗಿ ನಿಂತಿದ್ದ ಗಿಡ, ಮರಾ, ಬಳ್ಳಿಗಳು ಚಿಗುರೊ ಕಾಲ. ಹಾಗಾಗಿ ಊರ ತುಂಬ, ಗಿಡ-ಮರಗಳೆಲ್ಲ ಹೂ-ಹಸಿರು ಹೊದ್ದು ಚಂದವಾಗಿ ನಗುತ್ತ ನಿಂತಿರುವುದನ್ನ ನೋಡೋದೇ ಚಂದ. ಮೈತುಂಬಾ ಹೂ ಹೊತ್ತು ನಿಲ್ಲುವ ಮರಗಳನ್ನು ನೋಡುವಾಗಲೆಲ್ಲ, ವರ್ಷದ ಪ್ರತಿ ಮಾಸವೂ ಚೈತ್ರ ಮಾಸವೇ ಆಗಿದ್ದರೆ ಎಷ್ಟು ಚಂದ ಅಲ್ಲವೇ ಅನ್ನಿಸುತ್ತೆ.

ನಂಗಿನ್ನು ನೆನಪಿದೆ; ದೇವರು ದಿಂಡಿರ ಬಗೆಗೆ ಹೆಚ್ಚು ಒಲವಿಲ್ಲದ ನಮ್ಮನೆಯಲ್ಲಿ ಹಬ್ಬಗಳು ಒಂಥರಾ ಹೈಬ್ರೀಡ್‌ ವರ್ಷನ್‌ನಲ್ಲಿ ಆಚರಿಸಲ್ಪಡುತ್ತವೆ. ನಾವು ಸಣ್ಣವರಿದ್ದಾಗ ಹಬ್ಬದ ದಿನ ಎದ್ದಕೂಡಲೆ ಹಿಂದಿನ ದಿನವೇ ಮಾರುಕಟ್ಟೆಯಿಂದ ತಂದಿಟ್ಟ ಮಾವಿನ ಎಲೆಗಳ ಕೊಂಬೆಗಳಿಂದ, ಒಳ್ಳೊಳ್ಳೆಯ ಎಲೆಗಳನ್ನು ಆರಿಸಿ, ಬಾಗಿಲಿಗೆ ತೋರಣ ಕಟ್ಟಬೇಕಿತ್ತು. ಜೊತೆಗೆ ಸ್ನಾನಕ್ಕೆ ರೆಡಿ ಮಾಡಿಕೊಂಡ ಬಕೇಟಿನಲ್ಲಿ ಬೇವಿನ ಎಲೆ, ಹೂಗಳನ್ನು ಹಾಕಿ ಸ್ನಾನ ಮಾಡುವಾಗ, ಹಬ್ಬದ ಹಬೆ ಮೈಯೆಲ್ಲ ಏರಿದಂತಾಗಿ ಏನೋ ಹೊಸ ಹುರುಪು ಬಂದಂತೆ… ಅದರಲ್ಲೂ ಹೊಸ ಬಟ್ಟೆ ಹಾಕಿಕೊಂಡ ಮೇಲಂತೂ ಮುಗಿಯಿತು. ಮನೆಯಿಂದ ಹೊರಗಿನ ಜಗತ್ತಿನ ನೆನಪೇ ಇರುತ್ತಿರಲಿಲ್ಲ.  ಅಮ್ಮ ನೆಚ್ಚುವ ದೇವರಿಗೆ ಹಬ್ಬದ ದಿನ ನಾವೂ ಕೈಮುಗಿದು, ಎಡೆ ಹಿಡಿದ ಪ್ರಸಾದವನ್ನು ಕಣ್ಣಿಗೊತ್ತಿ ಗುಳುಂ ಎನ್ನಿಸಿ, ಆಮೇಲೆ ನಾವು ಏಳುವ ಮುಂಚೆಯೇ ಎದ್ದು ಮಾಡಲಾಗಿದ್ದ ಹೋಳಿಗೆಯ ಜೊತೆಗೆ ಬೇಕಾದ ಇನ್ನಿತರೆ ಪದಾರ್ಥಗಳನ್ನೂ ಮಾಡಲು ನೆರವಾಗಿ, ನಂತರ ಅದನ್ನು ಊಟ ಮಾಡಿ ಅಲ್ಲಿಗೆ ಹಬ್ಬವನ್ನೂ ಮುಗಿಸಿಬಿಡುತ್ತೇವೆ.

“ಹಬ್ಬ ಅಂದ್ರೆ ಹುಡ್ಗೀರೆಲ್ಲ ಮಾರ್ದೂರ್‌ ಓಡೋಗ್ತಾರೆ, ಈಗೆಲ್ಲ ಯಾರ್‌ ಹಬ್ಬಾ ಮಾಡ್ತಾರೆ! ಬರೀ ಹೋಟ್ಲಿಂದಾನೇ ಹೋಳಿಗೆ, ಪಾಯ್ಸ ತರ್ಸಿ ಮುಗ್ಸಿಬಿಡ್ತಾರೆ. ಬಾರೀ ಸೋಮಾರಿಗಳಾಗಿದಾರಪ್ಪ ಹೆಂಗಸ್ರು…” ಅಂತ ಇಷ್ಟುದ್ದುದ್ದ ಭಾಷಣ ಬಿಗಿಯುವವರಲ್ಲಿ, ಎಷ್ಟು ಮಂದಿ, ತಮ್ಮನೆಯ ಹೆಣ್ಣುಮಕ್ಕಳು ಅಡುಗೆ ಮಾಡಿದ ನಂತರ ಪಾತ್ರೆ ತೊಳೆದಿದ್ದಾರೆ? ಎಲ್ಲವನ್ನೂ ತಾವೇ ಮಾಡಿಮಾಡಿ ಸುಸ್ತಾಗಿ ಬೀಳುತ್ತಿದ್ದ ಅಮ್ಮಂದಿರನ್ನು ನೋಡಿಯೇ, ಅವರ ಹೆಣ್ಣುಮಕ್ಕಳು ತಾವು ಏನು ಮಾಡಬಾರದು ಅಂತ ನಿರ್ಧರಿಸಿರೋದು ಅನ್ನಿಸತ್ತೆ. ಹೊರಗೆ ದುಡಿಯುವ ಗಂಡಸರು ಮನೆಗೆ ಬಂದು ಮನೆ ಕೆಲಸದಲ್ಲೂ ಸಹಾಯ ಮಾಡಿದ ಉದಾಹರಣೆಗಳು ತೀರಾ ಕಡಿಮೆಯಿರೋವಾಗ, ಆಫೀಸಿಗೆ ಹೋಗಿ ಬರುವ ಹೆಣ್ಣುಮಕ್ಕಳಿಂದ ಶ್ರಮದಾಯಕ ಹಬ್ಬದ ಕೆಲಸಗಳನ್ನು ನಿರೀಕ್ಷಿಸುವುದಾದರೂ ಯಾಕೆ?

About The Author

ರೂಪಶ್ರೀ ಕಲ್ಲಿಗನೂರ್

ಚಿತ್ರ ಕಲಾವಿದೆ, ಕವಯತ್ರಿ ಹಾಗೂ ಪತ್ರಕರ್ತೆ. ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 'ಕಾಡೊಳಗ ಕಳದಾವು ಮಕ್ಕಾಳು' ಮಕ್ಕಳ ನಾಟಕ . 'ಚಿತ್ತ ಭಿತ್ತಿ' ವಿಭಾ ಸಾಹಿತ್ಯ ಪ್ರಶಸ್ತಿ ಪಡೆದ ಕವನ ಸಂಕಲನ. ಹುಟ್ಟಿದ್ದು ಸವಣೂರಿನಲ್ಲಿ. ಈಗ ಬೆಂಗಳೂರು. ‘ಕೆಂಡಸಂಪಿಗೆ’ ಯಲ್ಲಿ ಸಹಾಯಕ ಸಂಪಾದಕಿ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ