ಕಮ್ಯುನಿಸ್ಟ್‌ ಆಳ್ವಿಕೆಯ ಸಮಯದಲ್ಲಿ ರಷ್ಯನ್ ಬರಹಗಾರರು ನಿರ್ಬಂಧಕ್ಕೆ ಒಳಗಾದರು. ಮುಕ್ತವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾಗದ ದುಃಸ್ಥಿತಿಗೆ ಸಿಲುಕಿಕೊಂಡರು. ಮರೀನಾ ಟ್ವೆಟೇವಾ ಅವರು ರಷ್ಯಾದ ಹೊರಗಡೆ ಇದ್ದುಕೊಂಡೇ ಕಾವ್ಯರಚನೆ ಮಾಡಿದ್ದು, ರಷ್ಯಾಕ್ಕೆ ಮರಳಿ ಬಂದು ಎರಡೇ ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡದ್ದು ಇವೆಲ್ಲಾ ಸಾಹಿತ್ಯ ಕ್ಷೇತ್ರದ ಮೇಲೆ ಕಮ್ಯುನಿಸ್ಟ್‌ ಪ್ರಾಬಲ್ಯವನ್ನು ಸೂಚಿಸುತ್ತವೆ. ಸ್ಟಾಲಿನ್ ಮರಣದ ಬಳಿಕ ರಷ್ಯನ್ ಸಾಹಿತ್ಯದಲ್ಲಿ ಹೊಸ ಬಗೆಯ ಬರಹಗಳು ಮತ್ತು ಪ್ರವೃತ್ತಿಗಳು ಕಾಣಿಸಿಕೊಂಡವು. ಕಮ್ಯುನಿಸ್ಟ್‌ ಆಡಳಿತ ವ್ಯವಸ್ಥೆಯಡಿಯಲ್ಲಿ ತಪ್ಪಿತಸ್ಥರಲ್ಲದವರೂ ಜೈಲುಶಿಕ್ಷೆ ಅನುಭವಿಸಬೇಕಾಗಿ ಬಂದದ್ದನ್ನು ಇವರು ಚಿತ್ರಿಸಿದರು.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ರಷ್ಯಾದ ಕುರಿತ ಬರಹ ನಿಮ್ಮ ಓದಿಗೆ

ರಷ್ಯಾದ ಸಂಪ್ರದಾಯಗಳು ನಿಗ್ರಹಿಸಲ್ಪಟ್ಟದ್ದು ಸೋವಿಯತ್ ಆಳ್ವಿಕೆಯ ಯುಗದಲ್ಲಿ. ಈ ಅವಧಿಯಲ್ಲಿ ಜನರ ಜೀವನದ ಮೇಲೆ ಆಳುವವರು ಹದ್ದಿನ ಕಣ್ಣನ್ನಿಟ್ಟಿದ್ದರು. ಆಡಳಿತದಲ್ಲಿರುವವರ ಮರ್ಜಿಗೆ ಅನುಗುಣವಾಗಿ ಜನರು ನಡೆದುಕೊಳ್ಳಬೇಕಿತ್ತು. ಲೆನಿನ್ ಮತ್ತು ಸ್ಟಾಲಿನ್ ಕಾಲಘಟ್ಟದಲ್ಲಿ ರಷ್ಯಾದ ಜನರು ಕಮ್ಯುನಿಷ್ಟ್ ಆಳ್ವಿಕೆಯ ಕಠಿಣತೆಯನ್ನು ಸಂಪೂರ್ಣವಾಗಿ ಅನುಭವಿಸಿದರು. ಹೀಗೆ ಕೈಕಟ್ಟಿ ಬಾಯಿ ಮುಚ್ಚಿ ಕುಳಿತಿದ್ದ ರಷ್ಯನ್ನರು ನಿರಾಳತೆಯ ನಿಟ್ಟುಸಿರುಬಿಟ್ಟದ್ದು 1980ರ ದಶಕದಲ್ಲಿ. ಈ ಸಮಯದಲ್ಲಿ ಮಿಖಾಯಿಲ್ ಗೋರ್ಬಚೇವ್ ಹೆಸರಿನ ಸುಧಾರಣಾವಾದಿ ರಷ್ಯಾವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಿದರು. ಇದರಿಂದಾಗಿ ರಷ್ಯಾದ ಸಮಾಜ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಧನಾತ್ಮಕವಾದ ಬದಲಾವಣೆ ಗೋಚರವಾಗತೊಡಗಿತು. ದೇಶದ ಪರಂಪರಾನುಗತವಾದ ನಂಬಿಕೆ- ಸಂಪ್ರದಾಯಗಳು, ಜಾನಪದ ಸಂಸ್ಕೃತಿ, ಧರ್ಮಾಚರಣೆ ಮೊದಲಾದವುಗಳು ಮತ್ತೆ ಜನರ ಬದುಕಿನಲ್ಲಿ ಸ್ಥಾನ ಪಡೆದುಕೊಂಡವು. ಹೀಗೆ ರಷ್ಯಾ ಮತ್ತೆ ಗತಕಾಲದ ಸದ್ವಿಚಾರಗಳನ್ನು ಅಳವಡಿಸಿಕೊಳ್ಳುವಂತಾಯಿತು.

ರಷ್ಯಾದ ಸಾಂಪ್ರದಾಯಿಕ ಆಚರಣೆಗಳಲ್ಲಿ ಜನರ ನಂಬಿಕೆಗಳ ಜೊತೆಗೆ ಪಾಕಪದ್ಧತಿಯೂ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಮಾಸ್ಲ್ಯಾನಿಟ್ಸಾ ಎನ್ನುವುದು ರಷ್ಯಾದ ಅತೀ ಹಳೆಯ ಜಾನಪದ ಆಚರಣೆಯಾಗಿದೆ. ಚಳಿಗಾಲ ಕೊನೆಗೊಳ್ಳುವ ಸಮಯದಲ್ಲಿ ಆಚರಿಸಲಾಗುವ ಇದರಲ್ಲಿ ಸೂರ್ಯನಿಗೆ ಪ್ರಾಮುಖ್ಯತೆಯಿದೆ. ಪೇಗನ್ ಕಾಲದಲ್ಲಿ ಈ ಆಚರಣೆ ರೂಪುಗೊಂಡಿದೆ. ಇದರಲ್ಲಿ ಕೆಲವು ಆಹಾರಗಳನ್ನು ಸೇವಿಸಲಾಗುತ್ತದೆ. ಕ್ಯಾವಿಯರ್, ವಿವಿಧ ಮೀನುಗಳು, ಹನಿ ಪೈ, ಪ್ಯಾನ್‌ಕೇಕ್ ಮೊದಲಾದವುಗಳನ್ನು ತಿನ್ನುವ ಕ್ರಮವಿದೆ. ಊಟದ ನಂತರ ಸಮೋವರ್ ಚಹಾ ಇಲ್ಲವೇ ವೋಡ್ಕಾವನ್ನು ಕುಡಿಯಲಾಗುತ್ತದೆ. ಈಸ್ಟರ್ ಹಬ್ಬದ ಸಂದರ್ಭದಲ್ಲಿ ವೃತ್ತಾಕಾರದ ಸಿಹಿ ಬ್ರೆಡ್, ಈಸ್ಟರ್ ಕೇಕ್ ಮೊದಲಾದ ಖಾದ್ಯಗಳಿರುತ್ತವೆ. ಪಾಶ್ಕಾ ಎನ್ನುವುದು ಈಸ್ಟರ್ ಅಂಗವಾಗಿ ಮಾಡಲ್ಪಡುವ ಸಾಂಪ್ರದಾಯಿಕ ಆಹಾರವಾಗಿದೆ. ಒಣದ್ರಾಕ್ಷಿ, ಬೆಣ್ಣೆ, ಸಿಹಿ ಮೊಸರು ಇವುಗಳನ್ನು ಕೇಕ್ ಜೊತೆಗೆ ಸೇರಿಸಿ ಈ ಭಕ್ಷ್ಯವನ್ನು ತಯಾರಿಸಲಾಗುತ್ತದೆ. ಬೇಯಿಸಿ ಗಟ್ಟಿಯಾದ ಬಣ್ಣಬಣ್ಣದ ಮೊಟ್ಟೆಗಳು ಈಸ್ಟರ್ ಕಾಲದ ಪ್ರಮುಖ ಆಹಾರ. ಈಸ್ಟರ್ ನಂತರದ ಮೊದಲ ಭಾನುವಾರವನ್ನು ರೆಡ್ ಹಿಲ್ ದಿನ ಎಂದು ಆಚರಿಸಲಾಗುತ್ತದೆ. ಮದುವೆ ಮಾಡಿಕೊಳ್ಳುವುದಕ್ಕೆ ಸೂಕ್ತ ದಿನವಿದು ಎಂಬ ನಂಬಿಕೆಯಿದೆ. ಐವಾನ್ ಕುಪಾಲೊ ಎನ್ನುವುದು ಬೇಸಿಗೆ ಕಾಲದಲ್ಲಿ ರಷ್ಯಾದಲ್ಲಿ ನಡೆಸಲಾಗುವ ವಿಶಿಷ್ಟ ಆಚರಣೆ. ಇದನ್ನು ಸೇಂಟ್ ಜಾನ್ ದಿ ಬ್ಯಾಪಿಸ್ಟ್ ಎಂದೂ ಕರೆಯಲಾಗುತ್ತದೆ. ಪ್ರವಾಸಿ ತಾಣಗಳಲ್ಲಿ ಅಥವಾ ನದಿಯ ದಡದಲ್ಲಿ ಪಟಾಕಿಗಳನ್ನು ಹೊಡೆದು ಇದನ್ನು ನಡೆಸಲಾಗುತ್ತದೆ. ದೆಟ್ರೋಯಿಟ್ಸಾ ಎಂಬ ಸಾಂಪ್ರದಾಯಿಕ ಆಚರಣೆಯು ಪೆಂಟೆಕೋಸ್ಟ್ ಎಂಬ ಹೆಸರನ್ನೂ ಹೊಂದಿದೆ. ಈ ಸಮಯದಲ್ಲಿ ಮನೆಗಳನ್ನು ಬರ್ಚ್ ಮರದ ರೆಂಬೆಗಳಿಂದ ಅಲಂಕರಿಸಲಾಗುತ್ತದೆ. ಈ ಆಚರಣೆಯ ಸಮಯದಲ್ಲಿಯೇ ಹುಡುಗಿಯರು ತಮ್ಮ ಬದುಕಿನ ಅದೃಷ್ಟವನ್ನು ವಿಶಿಷ್ಟ ರೀತಿಯಲ್ಲಿ ಪರೀಕ್ಷಿಸುತ್ತಾರೆ. ನೀರಿಗೆ ಬರ್ಚ್ ರೆಂಬೆಗಳನ್ನು ಇಲ್ಲವೇ ಹೂಮಾಲೆಗಳನ್ನು ಹಾಕುವ ಮೂಲಕ ತಾವೆಷ್ಟರಮಟ್ಟಿಗೆ ಅದೃಷ್ಟವಂತರು ಎನ್ನುವುದನ್ನು ಅರಿತುಕೊಳ್ಳುತ್ತಾರೆ. ಬೇಸಿಗೆ ಕಾಲ ಕೊನೆಯಾಗುವ ಸಮಯದಲ್ಲಿ ಮೂರು ಜಾನಪದ ಆಚರಣೆಗಳಿವೆ. ಇವುಗಳನ್ನು ಒಟ್ಟಾಗಿ ಸ್ಪಾ ಎನ್ನಲಾಗುತ್ತದೆ.

ರಷ್ಯಾದ ಬಹುಪಾಲು ಪ್ರದೇಶ ಅರಣ್ಯದಿಂದ ಕೂಡಿದೆ. ರಷ್ಯಾದ ಒಟ್ಟು ಭೂಪ್ರದೇಶವನ್ನು ಐದು ಭಾಗಗಳಾಗಿ ವಿಂಗಡಿಸಿಕೊಂಡರೆ ಅದರಲ್ಲಿ ಮೂರು ಪಾಲು ಕಾಡುಗಳಿಂದಲೇ ಕೂಡಿರುತ್ತದೆ. ಬಹುತೇಕ ಕಾಡುಗಳಲ್ಲಿ ಆದಿವಾಸಿಗಳಾಗಲಿ, ಬುಡಕಟ್ಟು ಸಮುದಾಯದವರಾಗಲಿ ಕಂಡುಬರುವುದಿಲ್ಲ. ಒಟ್ಟು ಅರಣ್ಯ ಪ್ರದೇಶದಲ್ಲಿ ಅರ್ಧದಷ್ಟು ಪ್ರದೇಶದಲ್ಲಿ ಮನುಷ್ಯರ ಸುಳಿವೇ ಇಲ್ಲ. ಜನವಸತಿಯಿಲ್ಲದ ಇಂತಹ ಕಾಡುಗಳಲ್ಲಿ ಇರುವುದು ಕ್ರೂರಮೃಗಗಳು. ವಿಶೇಷವಾಗಿ ಸೈಬೀರಿಯನ್ ಹುಲಿಗಳು ಕಂಡುಬರುತ್ತವೆ. ಈ ಹುಲಿ ಪ್ರಭೇದವು ಅಳಿವಿನಂಚಿನಲ್ಲಿರುವ ಜೀವಿಯಾಗಿದೆ. ಪ್ರಪಂಚದಾದ್ಯಂತ ಇರುವ ಮರಗಳಲ್ಲಿ ಸುಮಾರು ಇಪ್ಪತ್ತು ಶೇಕಡಾ ಮರಗಳು ರಷ್ಯಾದ ಕಾಡುಗಳಲ್ಲಿಯೇ ಇವೆ. ಸುಮಾರು 640 ಬಿಲಿಯನ್ ಮರಗಳು ಇಲ್ಲಿವೆ. ರಷ್ಯಾದ ಅರಣ್ಯ ಪ್ರದೇಶದಲ್ಲಿ ಬೈಕಲ್ ಸರೋವರವಿದೆ. ವಿಶ್ವದ ಅತೀ ದೊಡ್ಡ ಸಿಹಿನೀರಿನ ಸರೋವರ ಇದಾಗಿದೆ. ವಿಶ್ವದ ಸಿಹಿನೀರಿನಲ್ಲಿ ಇಪ್ಪತ್ತಮೂರು ಶೇಕಡಾದಷ್ಟು ಸಿಹಿನೀರು ಈ ಸರೋವರದಲ್ಲಿಯೇ ಇದೆ.

ಹದಿನೆಂಟನೇ ಶತಮಾನಕ್ಕೂ ಮೊದಲು ರಷ್ಯಾದಲ್ಲಿದ್ದದ್ದು ಜಾನಪದ ಸಂಗೀತ ಮತ್ತು ಚರ್ಚ್ ಸಂಗೀತ. ಧರ್ಮಕ್ಕಿಂತ ಹೊರತಾದ, ಮನರಂಜನೆಯನ್ನೇ ಪ್ರಧಾನವಾಗಿಸಿಕೊಂಡ ಸಂಗೀತ ಮುನ್ನೆಲೆಗೆ ಬಂದದ್ದು 1730ರ ಕಾಲಘಟ್ಟದಲ್ಲಿ. ರಾಣಿಯಾಗಿದ್ದ ಅನ್ನಾ ಇವನೊವ್ನಾ ಅವರು ರಾಜಸಭೆಯಲ್ಲಿ ರಂಜನೆ ನೀಡುವುದಕ್ಕಾಗಿ ಇಟಲಿಯ ಸಂಗೀತ ತಂಡವನ್ನು ಬರಮಾಡಿಕೊಂಡರು. ಇದರ ಪ್ರಭಾವದಿಂದ ರಷ್ಯಾದಲ್ಲಿಯೂ ಸಣ್ಣ ಸಣ್ಣ ಸಂಗೀತ ತಂಡಗಳು ರೂಪುಗೊಂಡವು. ಹತ್ತೊಂಬತ್ತನೇ ಶತಮಾನದಲ್ಲಿ ರಷ್ಯನ್ ಸಂಗೀತ ಕ್ಷೇತ್ರವು ಹಿಂದೆಂದಿಗಿಂತಲೂ ಹೆಚ್ಚು ಚಟುವಟಿಕೆಯಿಂದ ಕೂಡಿತ್ತು. ಸಂಗೀತ ಸಂಯೋಜಕರು ಮತ್ತು ಪಿಯಾನೋ ವಾದಕರು ಈ ಕಾಲದ ಸಂಗೀತಕ್ಕೆ ಹೆಚ್ಚು ಕೊಡುಗೆ ಕೊಟ್ಟವರಾಗಿದ್ದಾರೆ. ರಾಜಮನೆತನದ ಪ್ರೋತ್ಸಾಹದೊಂದಿಗೆ ಸೇಂಟ್ ಪೀಟರ್ಸ್ಬರ್ಗ್‌ನಲ್ಲಿ ವೃತ್ತಿಪರ ಆರ್ಕೆಸ್ಟ್ರಾ ತಂಡ ರೂಪುಗೊಂಡಿತು. ಸಂಗೀತ ಸಂರಕ್ಷಣಾಲಯದ ಸ್ಥಾಪನೆಯೂ ಆಯಿತು. ಸೇಂಟ್ ಪೀಟರ್ಸ್ಬರ್ಗ್ ಮಾದರಿಯಲ್ಲಿಯೇ ರಷ್ಯಾದ ಇತರ ಪ್ರಮುಖ ನಗರಗಳಲ್ಲಿಯೂ ಆರ್ಕೆಸ್ಟ್ರಾ ತಂಡಗಳು ಹುಟ್ಟಿಕೊಂಡವು. ರಷ್ಯಾದ ಮೊದಲ ವೃತ್ತಿಪರ ಸಂಗೀತ ಸಂಯೋಜಕರೆನಿಸಿಕೊಂಡ ಪಯೋಟರ್ ಇಲಿಚ್ ಚೈಕೋವ್ಸ್ಕಿ ಜನಪ್ರಿಯರಾದದ್ದು ಇದೇ ಅವಧಿಯಲ್ಲಿ. ಇವರ ಅದ್ಭುತ ಸಂಗೀತ ಸಂಯೋಜನೆಗಳು ಇಂದಿಗೂ ಅದೇ ಜನಪ್ರಿಯತೆಯನ್ನು ಉಳಿಸಿಕೊಂಡಿವೆ. ಬೇರೆ ಬೇರೆ ಉದ್ಯೋಗಗಳಲ್ಲಿದ್ದು, ಸಂಗೀತ ಕ್ಷೇತ್ರದಲ್ಲಿ ಕೆಲಸ ಮಾಡಿದವರಿದ್ದಾರೆ. ಸಂಗೀತದ ಮೇಲಿನ ಅತೀವ ಆಸಕ್ತಿಯಿಂದ ವೃತ್ತಿಯನ್ನೇ ತ್ಯಜಿಸಿದವರಿದ್ದಾರೆ. ಇಂತಹ ಸಂಗೀತ ಪ್ರೇಮಿಗಳಿಂದಲೇ ರಷ್ಯನ್ ಸಂಗೀತ ಬೆಳವಣಿಗೆ ಕಂಡಿದೆ. ಇಪ್ಪತ್ತನೇ ಶತಮಾನದ ರಷ್ಯನ್ ಸಂಗೀತದಲ್ಲಿ ಮೂವರು ಕಲಾವಿದರ ಪ್ರಾಬಲ್ಯ ಎದ್ದುಕಾಣುತ್ತದೆ. ಅಲೆಗ್ಸಾಂಡರ್ ಸ್ಕ್ರಿಯಾಬಿನ್ ಅವರು ಪಿಯಾನೋ ವಾದಕರು. ಸಾಂಕೇತಿಕವಾದ ಸಾಹಿತ್ಯವನ್ನು ಭಾವಪೂರ್ಣವಾಗಿ, ಕಲಾತ್ಮಕವಾಗಿ ಸಂಗೀತದ ಮೂಲಕ ಅಭಿವ್ಯಕ್ತಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇಂದ್ರಿಯಾತೀತವಾದ ಭಾವವನ್ನು ಸಂಗೀತದ ಮೂಲಕ ಪಸರಿಸಿದ ಶ್ರೇಷ್ಠ ಕಲಾವಿದ ಇವರಾಗಿದ್ದಾರೆ. ರಾಪ್ಸೋಡಿ ಆನ್ ಎ ಥೀಮ್ ಆಫ್ ಪಗಾನಿನಿ ಹೆಸರಿನ ಆರ್ಕೆಸ್ಟ್ರಾ ಕಾರ್ಯಕ್ರಮದ ಮೂಲಕ ಪ್ರಸಿದ್ಧಿ ಪಡೆದವರು ರಾಚ್‌ಮನಿನೋಫ್. ಇವರು ಪಿಯಾನೋ ವಾದಕರಾಗಿದ್ದರು. ಇಪ್ಪತ್ತನೇ ಶತಮಾನದ ಮಧ್ಯಭಾಗದ ನಂತರ ಇವರ ಕಾರ್ಯಕ್ರಮಗಳು ಜನರ ಮೆಚ್ಚುಗೆ ಗಳಿಸಿಕೊಂಡವು.

ಸ್ಟ್ರಾವಿನ್ಸ್ಕಿ ಅವರು ಇನ್ನೊಬ್ಬ ಮಹತ್ವದ ಕಲಾವಿದರು. ಇವರು ಮೊದಲಿಗೆ ಖ್ಯಾತಿ ಗಳಿಸಿದ್ದು ಸೆರ್ಗೆ ಡಯಾಘಿಲೆವ್ ಎನ್ನುವ ಕಲಾವಿದರ ಜೊತೆ ಸೇರಿ ಕಾರ್ಯಕ್ರಮ ನೀಡುವ ಮೂಲಕ. ಪ್ಯಾರಿಸ್‌ನಲ್ಲಿ ಕಾರ್ಯಕ್ರಮ ನೀಡುವುದಕ್ಕಾಗಿ ಇವರು ಸಂಯೋಜಿಸಿದ ಮೂರು ಸಂಗೀತ ಕೃತಿಗಳು ಅಪಾರ ಮೆಚ್ಚುಗೆ ಗಳಿಸಿದವು. ಸ್ಟ್ರಾವಿನ್ಸ್ಕಿ ಮತ್ತು ರಾಚ್‌ಮನಿನೋಫ್ ಅವರು ಅಮೇರಿಕಾ ಮತ್ತು ಪಶ್ಚಿಮ ಯುರೋಪ್‌ಗಳಿಗೆ ವಲಸೆ ಹೋದರು. ಏಕವ್ಯಕ್ತಿ ಸಂಗೀತ ಪ್ರದರ್ಶನಗಳನ್ನು ನೀಡುವ ಕಲಾವಿದರನ್ನು ರೂಪಿಸುವಲ್ಲಿ ರಷ್ಯಾದ ಸಂಗೀತ ರಕ್ಷಣಾಲಯಗಳ ಪಾತ್ರ ಮಹತ್ವದ್ದಾಗಿದೆ. ಪಿಯಾನೋ ವಾದಕರಾದ ಸ್ವಿಯಾಟೊಸ್ಲಾವ್ ರಿಕ್ಟರ್, ಎಮಿಲ್ ಗಿಲೆಲ್ಸ್, ಪಿಟೀಲು ವಾದಕರಾದ ಡೇವಿಡ್ ಓಸ್ಟ್ರಾಖ್, ಗಿಡಾನ್ ಕ್ರೆಮರ್, ಸೆಲಿಸ್ಟ್ ಮಿಸ್ಟಿಸ್ಲಾವ್ ರೋಸ್ಟ್ರೋಪೊವಿಚ್, ಗಾಯಕ ಗಲಿನಾ ವಿಷೆವ್ಸ್ಕಯಾ ಮೊದಲಾದವರು ಈ ಸಂಗೀತ ರಕ್ಷಣಾಲಯಗಳ ಮೂಲಕವೇ ಬಂದವರು. ಮಿಖಾಯಿಲ್ ಗೋರ್ಬಚೆವ್ ಅವರು ರಷ್ಯಾ ಕಲಾವಿದರ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿದ್ದರಿಂದ ಈ ಮೊದಲು ಹೊರದೇಶಗಳಿಗೆ ಹೋಗಿದ್ದ ಅದೆಷ್ಟೋ ರಷ್ಯನ್ ಕಲಾವಿದರು ಮರಳಿ ತಮ್ಮ ದೇಶ ಸೇರಿಕೊಳ್ಳುವಂತಾಯಿತು. ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಜನಪ್ರಿಯ ಸಂಗೀತದಲ್ಲಿ ಗುರುತಿಸಿಕೊಂಡ ಕಲಾವಿದರು ಪ್ರಸಿದ್ಧಿ ಗಳಿಸಿದರು. ಕೆಲವು ಗೀತ ರಚನಕಾರರು ಅವರೇ ಹಾಡುಗಳನ್ನು ರಚಿಸಿ ಅದಕ್ಕೆ ಸಂಗೀತ ಸಂಯೋಜನೆ ಮಾಡಿ ಖ್ಯಾತರಾದರು. ವ್ಲಾಡಿಮಿರ್ ವೈಸೊಟ್ಸ್ಕಿ ಎನ್ನುವ ಗಾಯಕರು ಪ್ರಸಿದ್ಧರಾದದ್ದು ತಮ್ಮ ಕರ್ಕಶ ಧ್ವನಿಯಿಂದಲೇ. ಎರಡು ದಶಕಗಳಲ್ಲಿ ಹಲವಾರು ಧ್ವನಿಸುರುಳಿಗಳಲ್ಲಿ ಇವರ ಗಾಯನ ಮೂಡಿಬಂತು. ಜನರ ಮೆಚ್ಚುಗೆ ಗಳಿಸಿತು. ವೇದಿಕೆ ಕಾರ್ಯಕ್ರಮಗಳ ಮೂಲಕವೂ ಇವರು ಮೆಚ್ಚುಗೆಗೆ ಪಾತ್ರರಾಗಿದ್ದರು. ಜಾಝ್ ಸಂಗೀತ ರಷ್ಯಾದ ಅತ್ಯಂತ ಜನಪ್ರಿಯ ಪಾಶ್ಚಾತ್ಯ ಸಂಗೀತ ಪ್ರಕಾರವಾಗಿದೆ. ರಷ್ಯಾದ ಪ್ರಸಿದ್ಧ ಜಾಝ್ ಸಂಗೀತ ತಂಡವಾಗಿದ್ದ ಗ್ಯಾನೆಲಿನ್ ಟ್ರಿಯೊ ರಷ್ಯಾದಲ್ಲಿ ಮಾತ್ರವಲ್ಲದೆ ಪಾಶ್ಚಾತ್ಯ ದೇಶಗಳಲ್ಲಿಯೂ ಪ್ರದರ್ಶನ ನೀಡಿತು. ಕೆಲವು ಪಾಪ್ ಗಾಯಕರೂ ಸಹ ಮುನ್ನೆಲೆಗೆ ಬಂದರು. 1970ರವರೆಗೂ ಇಂಗ್ಲೆಂಡ್ ಮತ್ತು ಅಮೇರಿಕಾದ ರಾಕ್ ಹಾಡುಗಳ ಮಾದರಿಯನ್ನು ಅನುಕರಿಸುತ್ತಿದ್ದ ರಷ್ಯನ್ ಗಾಯಕರು 1980ರ ವೇಳೆಗೆ ಸ್ವಂತ ಮಾದರಿಯೊಂದನ್ನು ರೂಪಿಸಿಕೊಂಡರು.

ವಾಸಿಸುತ್ತಿರುವ ಜನರನ್ನು ಪರಿಗಣನೆಗೆ ತೆಗೆದುಕೊಂಡು ಹೇಳುವುದಾದರೆ, ರಷ್ಯಾ ದೇಶವು ಯುರೋಪ್ ಖಂಡದ ಅತೀ ದೊಡ್ಡ ನಗರವನ್ನು ಒಳಗೊಂಡಿದೆ. ವಾಸ್ತವವಾಗಿ ಭೂಪ್ರದೇಶದ ವಿಸ್ತೀರ್ಣವನ್ನು ಆಧಾರವಾಗಿಟ್ಟುಕೊಂಡರೆ ಲಂಡನ್ ಮತ್ತು ಪ್ಯಾರಿಸ್ ನಗರಗಳು ದೊಡ್ಡ ನಗರಗಳು ಎನಿಸಿಕೊಳ್ಳುತ್ತವೆ. ಆದರೆ ಜನಸಂಖ್ಯೆಯ ಪ್ರಕಾರ ರಷ್ಯಾದ ಮಾಸ್ಕೋ ನಗರವು ಮೊದಲ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಈ ನಗರದಲ್ಲಿ ಒಂದು ಕೋಟಿಗೂ ಹೆಚ್ಚಿನ ಜನರು ಬದುಕುತ್ತಿದ್ದಾರೆ. ಇದು ಶ್ರೀಮಂತ ನಗರ. ವಿಶ್ವದಲ್ಲಿ ಅತೀ ಹೆಚ್ಚು ಬಿಲಿಯನೇರ್‌ಗಳನ್ನು ಹೊಂದಿದ ನಗರಗಳಲ್ಲಿ ಒಂದು ಎಂಬ ಖ್ಯಾತಿ ಈ ನಗರದ್ದು. ಎಪ್ಪತ್ತೊಂಬತ್ತು ಜನ ಬಿಲಿಯನೇರ್‌ಗಳು ಇಲ್ಲಿ ನೆಲೆನಿಂತಿದ್ದಾರೆ. ಹೀಗೆ ಸಿರಿವಂತರು ನೆಲೆಸಿರುವುದರಿಂದಾಗಿ ಈ ನಗರ ಹೆಚ್ಚಾಗಿ ಐಷಾರಾಮಿ ಕಾರುಗಳಿಂದ ತುಂಬಿರುತ್ತದೆ. ಪರಂಪರೆ ಮತ್ತು ಆಧುನಿಕತೆಗಳೆರಡರ ಮಿಶ್ರಣದಂತಿರುವ ಮಾಸ್ಕೋ ನಗರವು ಆಕರ್ಷಣೀಯವಾಗಿರುವುದರಿಂದ ಅನೇಕ ಪ್ರವಾಸಿಗಳೂ ಸಹ ಆಗಮಿಸುತ್ತಾರೆ. ಈ ಕಾರಣದಿಂದಾಗಿ ಯಾವಾಗಲೂ ಜನದಟ್ಟಣೆ ಹೊಂದಿರುವ ನಗರವಿದು.

ಹತ್ತೊಂಬತ್ತನೇ ಶತಮಾನದ ರಷ್ಯಾ ಕಾವ್ಯಕ್ಷೇತ್ರದ ಮೇಲೆ ರೊಮ್ಯಾಂಟಿಕ್ ಪ್ರಭಾವವಿದೆ. ಅನುವಾದದ ಮೂಲಕ ಶ್ರೇಷ್ಠ ಕಾವ್ಯ ರಚನೆಗಳು ರಷ್ಯನ್ ಸಾಹಿತ್ಯ ವಲಯವನ್ನು ಪ್ರವೇಶಿಸಿದವು. ಈ ಬಗೆಯ ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡ ಝುಕೊವ್ಸ್ಕಿ ಅವರು ಈ ಕಾಲಘಟ್ಟದ ಕವಿಗಳಿಗೆ ಮಾರ್ಗದರ್ಶಕರೆನಿಸಿಕೊಂಡರು. ಹಲವಾರು ಜನ ಕವಿಗಳು ಇವರು ರೂಪಿಸಿದ ಪಥದಲ್ಲಿಯೇ ನಡೆದರು. ಆದರೆ ರಷ್ಯಾದ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಪುಷ್ಕಿನ್ ಅವರು ಸ್ವಂತಿಕೆಯ ಮೊರೆಹೋದರು. ತಮ್ಮದೇ ಆದ ಶೈಲಿಯಲ್ಲಿ ಕಾವ್ಯ ರಚಿಸುವ ಮೂಲಕ ಆ ಕಾಲದ ಉಳಿದವರಿಗಿಂತ ಅನನ್ಯವಾಗಿ ಗುರುತಿಸಿಕೊಂಡರು. ತಾತ್ವಿಕ ವಿಚಾರಗಳನ್ನು ಹಾಸ್ಯಮಿಶ್ರಿತವಾಗಿ ಶಾಸ್ತ್ರಬದ್ಧತೆಯಿಂದ ಸಾಹಿತ್ಯಕ ಭಾಷೆಯಲ್ಲಿಯೇ ಕಾವ್ಯರೂಪದಲ್ಲಿ ಕಟ್ಟಿಕೊಟ್ಟ ಹೆಗ್ಗಳಿಕೆ ಇವರದ್ದು. 1830ರ ವೇಳೆಗೆ ರಷ್ಯನ್ ಪದ್ಯ ರಚನೆಗಳು ಹಿನ್ನೆಲೆಗೆ ಸಂದವು. ಗದ್ಯ ರಚನೆಗಳು ಪ್ರಾಮುಖ್ಯತೆ ಗಳಿಸಿದವು. ಹಲವು ಪ್ರಸಿದ್ಧ ಕವಿಗಳೂ ಸಹ ಸಾಹಿತ್ಯ ಹೊಸದೊಂದು ತಿರುವು ತೆಗೆದುಕೊಳ್ಳಬೇಕಾದ ಅನಿವಾರ್ಯತೆಯನ್ನು ಸೂಚಿಸಿದರು. ಮೊದಲು ಕವಿಗಳಾಗಿದ್ದವರು ಗದ್ಯ ಬರಹಗಾರರಾಗಿ ಬದಲಾದರು. ಕಥೆ, ಕಾದಂಬರಿ, ನಾಟಕಗಳು ಪ್ರಕಟಗೊಂಡವು. 1840ರಲ್ಲಿ ಪ್ರಕಟವಾದ ಎ ಹೀರೋ ಆಫ್ ಅವರ್ ಟೈಮ್ ಎನ್ನುವುದು ಗಮನಾರ್ಹ ಕೃತಿ. ಮಾನಸಿಕ ಕಾದಂಬರಿಯಾದ ಇದನ್ನು ಬರೆದವರು ಮಿಖಾಯಿಲ್ ಲೆರ್ಮೊಂಟೊವ್. ಇದೇ ಅವಧಿಯಲ್ಲಿ ರಷ್ಯನ್ ಸಾಹಿತ್ಯವು ವಾಸ್ತವಿಕ ನೆಲೆಗಟ್ಟನ್ನು ಪಡೆದುಕೊಂಡಿತು. ಸಾಮಾಜಿಕ ಸಮಸ್ಯೆಗಳ ವಿಶ್ಲೇಷಣೆಯು ಸಾಹಿತ್ಯದ ಪ್ರಮುಖ ಕಾಳಜಿಯಾಯಿತು.

ರೊಮ್ಯಾಂಟಿಕ್ ಸಾಹಿತ್ಯವನ್ನು ಸಂಪೂರ್ಣವಾಗಿ ಅಲ್ಲಗಳೆಯುವ ಸಾಹಿತ್ಯ ಸೃಷ್ಟಿಯಾಯಿತು. ವಾಸ್ತವಿಕ ಕಾದಂಬರಿಗಳ ಪ್ರಾಬಲ್ಯ ಇಪ್ಪತ್ತನೇ ಶತಮಾನದವರೆಗೂ ಮುಂದುವರಿಯಿತು. ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದವರ ಮೂಲಕ ಸಮಾಜವನ್ನು ಕಾಣುವ ಪ್ರಯತ್ನ ಈ ಅವಧಿಯ ಸಾಹಿತ್ಯ ರಚನೆಗಳಲ್ಲಿವೆ. ಆರ್ಥಿಕತೆಯ ಆಧಾರದ ಸಂಘರ್ಷ ಮತ್ತು ತಲೆಮಾರುಗಳ ನಡುವಿನ ಅಂತರವನ್ನೂ ಸಹ ಈ ಕಾಲದ ಸಾಹಿತ್ಯ ರಚನೆಗಳು ವ್ಯಕ್ತಗೊಳಿಸಿದವು. ಹತ್ತೊಂಬತ್ತನೇ ಶತಮಾನದ ಇಬ್ಬರು ಮಹಾನ್ ವಾಸ್ತವವಾದಿ ಬರಹಗಾರರನ್ನು ಹೊರತುಪಡಿಸಿ ರಷ್ಯನ್ ಸಾಹಿತ್ಯ ಕ್ಷೇತ್ರವನ್ನು ಅವಲೋಕಿಸಲು ಸಾಧ್ಯವಿಲ್ಲ. ಲಿಯೋ ಟಾಲ್‌ಸ್ಟಾಯ್ ಮತ್ತು ದೋಸ್ಟೋವ್ಸ್ಕಿ ಇವರಿಬ್ಬರು ತಮ್ಮ ಬರವಣಿಗೆಗಳ ಮೂಲಕ ರಷ್ಯನ್ ಸಮಾಜದ ಚಿತ್ರಣವನ್ನು ಒದಗಿಸಿಕೊಟ್ಟಿದ್ದಾರೆ. ಸಮಾಜದ ಮುಖ್ಯ ವಾಹಿನಿಯಲ್ಲಿ ಕಾಣಿಸಿಕೊಳ್ಳದವರ ಚಿತ್ರಣ ದೋಸ್ಟೋವ್ಸ್ಕಿ ಅವರ ಬರಹಗಳಲ್ಲಿದೆ.

ಜನಸಾಮಾನ್ಯರ ಜನರ ಜೀವನದ ಬಗ್ಗೆ ಬರೆದವರು ಟಾಲ್‌ಸ್ಟಾಯ್. ಇಪ್ಪತ್ತನೇ ಶತಮಾನದಲ್ಲಿ ಕಲೆಗಾಗಿ ಕಲೆ ಎಂಬ ಪರಿಕಲ್ಪನೆಯೊಂದು ಕಾಣಿಸಿಕೊಂಡಿತು. ಇದನ್ನು ರೂಪಿಸಿದವರು ಅವಂತ್‌ಗಾರ್ಡ್. ಕಲೆ, ಸಾಹಿತ್ಯಗಳು ಜನರ ಉದ್ಧಾರಕ್ಕಾಗಿ ಇದೆ ಎಂಬ ಮನೋಭಾವವನ್ನು ಪರಿವರ್ತಿಸಿದ ಕಲ್ಪನೆ ಇದಾಗಿದೆ. ಈ ಮೂಲಕ ಸಂಕೇತಗಳು ಸಾಹಿತ್ಯ ವಲಯವನ್ನು ಪ್ರವೇಶಿಸಿದವು. ಹೇಳಬೇಕಾದದ್ದನ್ನು ಸಾಂಕೇತಿಕವಾಗಿ ಬರಹದ ಮೂಲಕ ವ್ಯಕ್ತಪಡಿಸಲಾಯಿತು. ಕಮ್ಯುನಿಸ್ಟ್‌ ಆಳ್ವಿಕೆಯ ಸಮಯದಲ್ಲಿ ರಷ್ಯನ್ ಬರಹಗಾರರು ನಿರ್ಬಂಧಕ್ಕೆ ಒಳಗಾದರು. ಮುಕ್ತವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾಗದ ದುಃಸ್ಥಿತಿಗೆ ಸಿಲುಕಿಕೊಂಡರು. ಮರೀನಾ ಟ್ವೆಟೇವಾ ಅವರು ರಷ್ಯಾದ ಹೊರಗಡೆ ಇದ್ದುಕೊಂಡೇ ಕಾವ್ಯರಚನೆ ಮಾಡಿದ್ದು, ರಷ್ಯಾಕ್ಕೆ ಮರಳಿ ಬಂದು ಎರಡೇ ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡದ್ದು ಇವೆಲ್ಲಾ ಸಾಹಿತ್ಯ ಕ್ಷೇತ್ರದ ಮೇಲೆ ಕಮ್ಯುನಿಸ್ಟ್‌ ಪ್ರಾಬಲ್ಯವನ್ನು ಸೂಚಿಸುತ್ತವೆ. ಸ್ಟಾಲಿನ್ ಮರಣದ ಬಳಿಕ ರಷ್ಯನ್ ಸಾಹಿತ್ಯದಲ್ಲಿ ಹೊಸ ಬಗೆಯ ಬರಹಗಳು ಮತ್ತು ಪ್ರವೃತ್ತಿಗಳು ಕಾಣಿಸಿಕೊಂಡವು. ಕಮ್ಯುನಿಸ್ಟ್‌ ಆಡಳಿತ ವ್ಯವಸ್ಥೆಯಡಿಯಲ್ಲಿ ತಪ್ಪಿತಸ್ಥರಲ್ಲದವರೂ ಜೈಲುಶಿಕ್ಷೆ ಅನುಭವಿಸಬೇಕಾಗಿ ಬಂದದ್ದನ್ನು ಇವರು ಚಿತ್ರಿಸಿದರು. ತಮ್ಮ ಅನುಭವಗಳನ್ನೇ ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟರು. ಇವರ ಬರವಣಿಗೆಯು ಹೊರಜಗತ್ತನ್ನೂ ಸಹ ತಲ್ಲಣಕ್ಕೀಡುಮಾಡಿತು. ಇದರಿಂದಾಗಿ ನೇರವಾಗಿ, ನಿಷ್ಠುರವಾಗಿ ಬರೆಯುವವರು ತೊಂದರೆ ಅನುಭವಿಸಿದರು. ಕೆಲವರ ಮೇಲೆ ರಾಜದ್ರೋಹದ ಆಪಾದನೆ ಹೊರಿಸಲಾಯಿತು. ಇನ್ನೂ ಕೆಲವರನ್ನು ದೇಶದಿಂದ ಗಡಿಪಾರು ಮಾಡಲಾಯಿತು.

ಸೇಂಟ್ ಪೀಟರ್ಸ್ಬರ್ಗ್‌ನಲ್ಲಿ ಹರ್ಮಿಟೇಜ್ ಮ್ಯೂಸಿಯಂ ಹೆಸರಿನ ವಸ್ತುಸಂಗ್ರಹಾಲಯವಿದೆ. ಹರ್ಮಿಟೇಜ್ ಮ್ಯೂಸಿಯಮ್ ದೊಡ್ಡದಾಗಿದೆ. ಆರು ವಿಭಿನ್ನ ಕಟ್ಟಡಗಳು ಸೇರಿಕೊಂಡು ಈ ಬೃಹತ್ ವಸ್ತು ಸಂಗ್ರಹಾಲಯ ರೂಪುಗೊಂಡಿದೆ. ವಿಶ್ವದ ಅತೀ ದೊಡ್ಡ ವಸ್ತು ಸಂಗ್ರಹಾಲಯಗಳಲ್ಲಿ ಇದೂ ಒಂದು. ಪ್ರಾಚೀನತೆಯನ್ನೂ ಸಹ ಹೊಂದಿದೆ. ಇದು ಸ್ಥಾಪನೆಯಾದದ್ದು ಹದಿನೆಂಟನೇ ಶತಮಾನದ ಉತ್ತರಾರ್ಧದಲ್ಲಿ. ರಷ್ಯಾದ ಪ್ರಮುಖ ಕಲಾಕೃತಿಗಳು, ಸ್ಮಾರಕಗಳು ಇಲ್ಲಿವೆ. ಇಲ್ಲಿ ಮೂವತ್ತು ಲಕ್ಷದಷ್ಟು ಕಲಾಕೃತಿಗಳಿವೆ. ಇಲ್ಲಿಗೆ ಭೇಟಿ ಕೊಟ್ಟವರು ಪ್ರತೀ ಕಲಾಕೃತಿಯ ಮುಂದೆ ಎರಡು ನಿಮಿಷ ನಿಂತರೆ ಎಲ್ಲಾ ಕಲಾಕೃತಿಗಳನ್ನು ನೋಡಿಬರಲು ಹನ್ನೊಂದು ವರ್ಷಗಳಿಗೂ ಹೆಚ್ಚು ಸಮಯ ಬೇಕಾಗುತ್ತದೆ. ಅಂದರೆ ಯಾರೂ ಸಹ ಇಲ್ಲಿಯ ಕಲಾಕೃತಿಗಳನ್ನು ಸಾವಧಾನದಿಂದ ಪರಿಶೀಲಿಸಲು ಸಾಧ್ಯವಿಲ್ಲ. ಹಾಗೆಯೇ ಸುಮ್ಮನೆ ಕಣ್ಣಾಡಿಸುತ್ತಾ ಮುಂದೆ ಮುಂದೆ ಸಾಗಬೇಕಾಗುತ್ತದೆ. ಇಲ್ಲಿರುವ ಪ್ರತಿಯೊಂದು ವಸ್ತುವೂ ರಷ್ಯಾದ ಪರಂಪರೆಯನ್ನು ಸೂಚಿಸುತ್ತದೆ. ಆದ್ದರಿಂದ ಈ ಸಂಗ್ರಹಾಲಯವು ರಷ್ಯಾದ ಪಾಲಿಗೆ ರಾಷ್ಟ್ರೀಯ ಸಂಪತ್ತು ಎನಿಸಿಕೊಂಡಿದೆ. ಇಂತಹ ಶ್ರೇಷ್ಠ ವಸ್ತುಗಳನ್ನು ಹಾಗೆಯೇ ಉಳಿಸಿಕೊಳ್ಳುವ ದೃಷ್ಟಿಯಿಂದ ರಷ್ಯಾವು ಹೊಸದೊಂದು ಯೋಚನೆಯೆಡೆಗೆ ಮುಖ ಮಾಡಿದೆ. ಇಲ್ಲಿ ಇರುವ ಕಲಾಕೃತಿಗಳ ರಕ್ಷಣೆಗಾಗಿ ಬೆಕ್ಕುಗಳನ್ನು ನೇಮಿಸಲಾಗಿದೆ. ಇದು ನಿನ್ನೆ ಮೊನ್ನೆ ರೂಪುಗೊಂಡ ವ್ಯವಸ್ಥೆಯಲ್ಲ. ಹದಿನೆಂಟನೇ ಶತಮಾನದಿಂದಲೂ ಸಹ ಇದೇ ರೀತಿಯ ರಕ್ಷಣಾ ವ್ಯವಸ್ಥೆ ಇಲ್ಲಿದೆ. ಹಾಗಾದರೆ ಇಲ್ಲಿನ ಕಲಾಕೃತಿಗಳನ್ನು ರಕ್ಷಿಸಬೇಕಾಗಿರುವುದು ಯಾವುದರಿಂದ ಅಥವಾ ಯಾರಿಂದ ಎಂಬ ಪ್ರಶ್ನೆ ಮೂಡುತ್ತದೆ. ಸಾಕಷ್ಟು ಸಂಖ್ಯೆಯ ಇಲಿಗಳು ಈ ಸಂಗ್ರಹಾಲಯದಲ್ಲಿವೆ. ಇವುಗಳಿಂದ ಕಲಾಕೃತಿಗಳಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವ ಹೊಣೆ ಬೆಕ್ಕುಗಳದ್ದಾಗಿದೆ. ಈ ಸಂಗ್ರಹಾಲಯದಲ್ಲಿ ಐವತ್ತಕ್ಕೂ ಹೆಚ್ಚು ಬೆಕ್ಕುಗಳಿವೆ. ಒಂದು ದೇಶದ ಪರಂಪರೆಯನ್ನು ರಕ್ಷಿಸುವ ಹೊಣೆಯನ್ನು ಬೆಕ್ಕುಗಳು ವಹಿಸಿಕೊಂಡಿರುವುದು ನಿಜಕ್ಕೂ ಸೋಜಿಗದ ಸಂಗತಿಯಾಗಿದೆ.

ಮಧ್ಯಕಾಲದಲ್ಲಿ ಕಟ್ಟಲಾದ ರಷ್ಯಾದ ಕ್ರೆಮ್ಲಿನ್ ಕೋಟೆಯು ವಿಶ್ವದ ಅತೀ ದೊಡ್ಡ ಕೋಟೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕೋಟೆಯು ಎರಡೂವರೆ ಕಿಲೋಮೀಟರ್‌ಗಳಷ್ಟು ಉದ್ದವಿದೆ. ಇಪ್ಪತ್ತೇಳು ಹೆಕ್ಟೇರ್‌ಗಳಿಗಿಂತಲೂ ಹೆಚ್ಚು ಪ್ರದೇಶವನ್ನು ವ್ಯಾಪಿಸಿಕೊಂಡಿದೆ ಈ ಬೃಹತ್ ಕೋಟೆ. ವಿಶ್ವದ ಅತೀ ಉದ್ದದ ರೈಲುಮಾರ್ಗ ಕಂಡುಬರುವುದು ರಷ್ಯಾದಲ್ಲಿ. ಟ್ರಾನ್ಸ್ ಹೆಸರಿನ ಪ್ರದೇಶದಿಂದ ಸೈಬೀರಿಯಾ ಪ್ರದೇಶಕ್ಕಿರುವ ರೈಲುಮಾರ್ಗವು ಪ್ರಪಂಚದಲ್ಲಿಯೇ ಅತೀ ಉದ್ದದ್ದಾಗಿದೆ. ಇದು 9289 ಕಿಲೋಮೀಟರ್‌ಗಳಷ್ಟು ಉದ್ದವಾಗಿದೆ. ಇಷ್ಟು ಉದ್ದವನ್ನು ಕ್ರಮಿಸಬೇಕಾದರೆ ಪ್ರಯಾಣಿಕರು ಸುಮಾರು ಒಂದು ವಾರ ರೈಲಿನಲ್ಲಿ ಪ್ರಯಾಣಿಸಬೇಕು. ಈ ಪ್ರಯಾಣದ ಅವಧಿಯಲ್ಲಿ ಎಂಟು ಸಮಯ ವಲಯಗಳು ದಾಟಲ್ಪಡುತ್ತವೆ. ರಷ್ಯಾದಲ್ಲಿ ಹನ್ನೆರಡು ಸಕ್ರಿಯ ಜ್ವಾಲಾಮುಖಿಗಳಿವೆ. ಇಲ್ಲಿಯ ಕಮ್ಚಟ್ಕಾ ಹೆಸರಿನ ಪ್ರದೇಶವು ಜ್ವಾಲಾಮುಖಿಗಳ ಮೂಲಕ ಗುರುತಿಸಿಕೊಂಡಿದೆ. ಜೊತೆಗೆ ನಿಸರ್ಗಪ್ರೇಮಿಗಳನ್ನು ಆಕರ್ಷಿಸಬಲ್ಲ ವಿಚಾರಗಳೂ ಇಲ್ಲಿವೆ. ಸಾವಿರಕ್ಕೂ ಹೆಚ್ಚು ಜಾತಿಯ ಸಸ್ಯಗಳು ಮತ್ತು ಜೀವಿಗಳು ಇಲ್ಲಿ ಕಾಣಸಿಗುತ್ತವೆ.

ಬೇರೆಲ್ಲಾ ದೇಶಗಳಲ್ಲಿ ನಡೆದಂತೆ ರಷ್ಯಾದ ಆಹಾರ ಸಂಸ್ಕೃತಿಯೂ ಸಹ ಕಾಲಕ್ಕೆ ತಕ್ಕಂತೆ ಬದಲಾಗಿದೆ. ಆದರೆ ಸಾಂಪ್ರದಾಯಿಕ ಶೈಲಿಯ ಆಹಾರಗಳ ಕುರಿತ ಆಸಕ್ತಿಯನ್ನು ರಷ್ಯನ್ನರು ಕಳೆದುಕೊಂಡಿಲ್ಲ. ಬೀಟ್‌ರೂಟ್‌ನಿಂದ ಮಾಡಿದ ವಿಶೇಷ ರುಚಿಯ ಬೋರ್ಷ್ನಾ ಹೆಸರಿನ ಸೂಪ್ ರಷ್ಯಾದ ಜನಪ್ರಿಯ ಆಹಾರ. ಎಲೆಕೋಸು, ಆಲೂಗಡ್ಡೆ, ಕ್ರೀಮ್, ಸೇಬು, ಕ್ಯಾರೆಟ್ ಇಂತಹ ಆಹಾರ ಪದಾರ್ಥಗಳು ರಷ್ಯಾದ ಸಾಂಪ್ರದಾಯಿಕ ಭಕ್ಷ್ಯಗಳಲ್ಲಿ ಇದ್ದೇ ಇರುತ್ತವೆ. ಊಟ ಮಾಡಿದ ನಂತರ ಒಂದು ಲೋಟ ಚಹಾ ಇಲ್ಲವೇ ಕಾಫಿ ಕುಡಿಯುವುದು ಹಿಂದಿನಿಂದಲೂ ರಷ್ಯನ್ನರು ಇಟ್ಟುಕೊಂಡ ಅಭ್ಯಾಸ. ನಗರ ಪ್ರದೇಶಗಳ ಜನರು ಚಹಾಕ್ಕಿಂತಲೂ ಕಾಫಿಯನ್ನೇ ಹೆಚ್ಚು ಇಷ್ಟಪಡುತ್ತಾರೆ. ಕ್ವಾ ಎನ್ನುವುದು ಇಲ್ಲಿಯ ಜನಪ್ರಿಯ ಸಾಂಪ್ರದಾಯಿಕ ಪಾನೀಯವಾಗಿದೆ. ಇದನ್ನು ತಯಾರಿಸುವುದು ಕಪ್ಪು ಬ್ರೆಡ್ಡನ್ನು ಬಳಸಿಕೊಂಡು. ಇದೇ ಕ್ವಾ ಪಾನೀಯವನ್ನು ತಂಪಾಗಿಸಿ ಒಕ್ರೋಷ್ಕಾ ಹೆಸರಿನ ಸೂಪ್ ತಯಾರಿಸಲಾಗುತ್ತದೆ. ಇದು ಬೇಸಿಗೆ ಕಾಲದಲ್ಲಿ ಜನರ ನೆಚ್ಚಿನ ಪಾನೀಯ. ಕ್ವಾ ಜೊತೆಗೆ ಬೇಯಿಸಿದ ಮೊಟ್ಟೆ, ಸೌತೆಕಾಯಿ, ಸಾಸೇಜ್, ಸಲಾಮಿಗಳನ್ನು ಸೇರಿಸಿದರೆ ಈ ಸೂಪ್ ತಯಾರಾಗುತ್ತದೆ. ವೋಡ್ಕಾ ರಷ್ಯಾದ ರಾಷ್ಟ್ರೀಯ ಪಾನೀಯವಾಗಿಯೇ ಗುರುತಿಸಿಕೊಂಡಿದೆ. ಇದು ರಷ್ಯಾದ ಜನರ ಇಷ್ಟದ ಪಾನೀಯ. ರಷ್ಯನ್ನರು ಅಧಿಕ ಪ್ರಮಾಣದಲ್ಲಿ ಇದನ್ನು ಸೇವಿಸುತ್ತಾರೆ. ಇದು ರಷ್ಯಾ ಮೂಲದ್ದು ಎಂದು ಅನೇಕರು ಭಾವಿಸಿದ್ದಾರೆ. ಆದರೆ ವಾಸ್ತವವಾಗಿ ವೋಡ್ಕಾ ಮೊದಲು ತಯಾರಾದದ್ದು ಪೋಲಂಡ್‌ನಲ್ಲಿ. ಆದರೆ ರಷ್ಯಾದಲ್ಲಿ ವೋಡ್ಕಾವನ್ನು ಮತ್ತಷ್ಟು ಸುಧಾರಿಸಲಾಗಿದೆ ಎನ್ನುವುದು ನಿಜ. ವೋಡ್ಕಾ ಯಾವುದೇ ಪರಿಮಳ ಹೊಂದಿಲ್ಲದ ಕಾರಣ ರಷ್ಯನ್ನರು ಲಿಂಬೆಹಣ್ಣಿನ ಸಿಪ್ಪೆ, ಮೆಣಸು, ಕ್ರ್ಯಾನ್‌ಬೆರಿ ಹಣ್ಣು ಇಲ್ಲವೇ ಯಾವುದಾದರೂ ಗಿಡಮೂಲಿಕೆಗಳನ್ನು ಸೇರಿಸಿ ಕುಡಿಯುತ್ತಾರೆ.

ರಷ್ಯಾದ ದಕ್ಷಿಣ ಭಾಗವು ಉಪ ಉಷ್ಣ ವಲಯದ ಹವಾಮನವನ್ನು ಒಳಗೊಂಡಿದೆ. ರಷ್ಯಾದ ದಕ್ಷಿಣ ಭಾಗಕ್ಕೆ ಬರುವ ಸೋಚಿ ಹೆಸರಿನ ನಗರ ರಷ್ಯನ್ ರಿವೇರಿಯಾ ಎಂದು ಖ್ಯಾತವಾಗಿದೆ. ಕಪ್ಪು ಸಮುದ್ರದ ಕರಾವಳಿಯಲ್ಲಿರುವ ಈ ನಗರ ಉಪ ಉಷ್ಣ ವಲಯದ ಅಕ್ಷಾಂಶ ರೇಖೆಯಲ್ಲಿದೆ. ಬೇಸಿಗೆಯಲ್ಲಿ ಇಲ್ಲಿನ ತಾಪಮಾನ ಸುಮಾರು ಇಪ್ಪತ್ತೆಂಟು ಡಿಗ್ರಿ ಸೆಲ್ಸಿಯಸ್‌ಗಳಷ್ಟಿರುತ್ತದೆ. ಇಲ್ಲಿಯ ಚಳಿಗಾಲ ಜನರಿಗೆ ಬಾಧೆ ಕೊಡುವುದಿಲ್ಲ. ರಷ್ಯಾ ದೇಶದ ಬಹುತೇಕ ಪ್ರದೇಶಗಳು ಅತಿಯಾದ ಶೀತದಿಂದ ಕೂಡಿರುತ್ತವೆ. ಇವುಗಳಲ್ಲಿ ಒಮಿಯಾಕಾನ್ ಪಟ್ಟಣವು ಅತ್ಯಂತ ಶೀತ ವಾತಾವರಣವನ್ನು ಹೊಂದಿದೆ. ಆದರೂ ಇಲ್ಲಿ ಜನರು ವಾಸಿಸುತ್ತಿದ್ದಾರೆ. ಈ ಕಾರಣದಿಂದಲೇ ಈ ನಗರ ಜನವಸತಿಯಿರುವ ವಿಶ್ವದ ಅತ್ಯಂತ ಶೀತಲ ನಗರ ಎಂಬ ಗುರುತಿಸುವಿಕೆಗೆ ಪಾತ್ರವಾಗಿದೆ. ಚಳಿಗಾಲದಲ್ಲಿ ಇಲ್ಲಿಯ ತಾಪಮಾನ -50 ಡಿಗ್ರಿ ಸೆಲ್ಸಿಯಸ್‌ಗಳಷ್ಟಿರುತ್ತದೆ. 1938ನೇ ಇಸವಿಯಲ್ಲಿ ಇಲ್ಲಿ ದಾಖಲಾದ ತಾಪಮಾನ ಅಂಟಾರ್ಟಿಕಾದ ತಾಪಮಾನಕ್ಕೆ ಸವಾಲೊಡ್ಡುವಂತಿತ್ತು. ಆಗ ದಾಖಲಾದ ತಾಪಮಾನ -78 ಡಿಗ್ರಿ ಸೆಲ್ಸಿಯಸ್.

ಯುದ್ಧದ ಬಿಸಿಯಲ್ಲಿರುವ ರಷ್ಯಾ ತಂಪಗಾಗಬೇಕಿದೆ…ಇನ್ನಷ್ಟು ತಂಪಗಾಗಬೇಕಿದೆ… ಮತ್ತಷ್ಟು ಮಗದಷ್ಟು ತಂಪಗಾಗಬೇಕಿದೆ…