ಇದು ಇಷ್ಟಕ್ಕೇ ಮುಗಿಯುವುದಿಲ್ಲ. ಸ್ಕಾಟ್‌ಲ್ಯಾಂಡಿನ ಬಹಳಷ್ಟು ಜನರಿಗೆ ಇಂಗ್ಲೆಂಡಿನ ಜನರನ್ನು ಕಂಡರಾಗುವುದಿಲ್ಲ. ಇದು ಕರ್ನಾಟಕ ಮಹಾರಾಷ್ಟ್ರದ ಗಡಿ ವಿವಾದದ ತರಹ, ಕರ್ನಾಟಕ ತಮಿಳುನಾಡಿನ ಕಾವೇರಿ ವಿವಾದದ ತರಹ ಇರಬಹುದೇ ಅನಿಸಬಹುದು; ಇದು ಅದಕ್ಕಿಂತ ಸ್ವಲ್ಪ ಹೆಚ್ಚೇ ಅನ್ನಿ. ಎಷ್ಟು ಹೆಚ್ಚು ಎಂದರೆ ಕೆಲವು ವರ್ಷಗಳ ಹಿಂದೆ ಯು.ಕೆ ಯಿಂದ ಹೊರಬಂದು ಸ್ವತಂತ್ರ ದೇಶವಾಗಲು ಸ್ಕಾಟ್‌ಲ್ಯಾಂಡ್ ಮತದಾನವನ್ನು ಮಾಡಿತ್ತು, ಕೂದಲೆಳೆಯಲ್ಲಿ ಸ್ಕಾಟ್‌ಲ್ಯಾಂಡ್ ಸ್ವತಂತ್ರ ದೇಶವಾಗುವ ಅವಕಾಶ ತಪ್ಪಿಹೋಯಿತು. ಇದರ ಹೋಲಿಕೆ ಹೇಗೆಂದರೆ, ತಮಿಳುನಾಡಿನ ಜನ ತಮಗೆ ತಮಿಳುದೇಶ ಬೇಕು ಎಂದು ತಮಿಳುನಾಡಿನ ಜನರೇ ಮತದಾನ ಮಾಡಿಕೊಂಡಂತೆ.
ಕೇಶವ ಕುಲಕರ್ಣಿ ಬರೆಯುವ ‘ಇಂಗ್ಲೆಂಡ್‌ ಪತ್ರ’

 

ಭಾರತವನ್ನು ಇಂಗ್ಲೀಷಿನಲ್ಲಿ ‘ಇಂಡಿಯಾ’ ಎನ್ನುತ್ತಾರೆ, ಉತ್ತರ ಭಾರತದ ವಿವಿಧ ಭಾಷೆಗಳಲ್ಲಿ ‘ಹಿಂದುಸ್ಥಾನ್’ ಎನ್ನುತ್ತಾರೆ, ಆದರೆ ಭೌಗೋಳಿಕವಾಗಿ ಈ ಮೂರೂ ಹೆಸರುಗಳು ಒಂದೇ ಭೂಭಾಗವನ್ನು ಹೇಳುತ್ತವೆಯಾದ್ದರಿಂದ ಒಂದು ಸಲ ಕೇಳಿಸಿಕೊಂಡರೆ ಸಾಕು ಅರ್ಥವಾಗಿ ಬಿಡುತ್ತದೆ. ‘ಹಿಂದೂಸ್ಥಾನವು ಎಂದೂ ಮರೆಯದ ಭಾರತರತ್ನವು ನೀನಾಗು,’ ಎಂದು ಇಂಡಿಯಾದ ಎರಡು ಬೇರೆ ಬೇರೆ ಹೆಸರುಗಳನ್ನು ಸೇರಿಸಿ ಒಂದೇ ಸಾಲಿನಲ್ಲಿ ಹಾಡು ಹಾಡಿದರೂ, ಕೇಳುಗರಿಗೆ ಗೊಂದಲವೇನೂ ಆಗುವುದಿಲ್ಲ. ಬರ್ಮಾ ಅಂದರೂ ಒಂದೇ, ಮಾಯನ್ಮಾರ್ ಎಂದರೂ ಒಂದೇ, ಎಂದು ಒಂದು ಸಲ ಹೇಳಿದರೆ ಸಾಕು, ಸುಲಭವಾಗಿ ನೆನಪಿನಲ್ಲಿ ಉಳಿಯುತ್ತದೆ. ಆದರೆ ನಾನಿರುವ ಈ ದೇಶದ ಗತಿ ಹಾಗಲ್ಲ. ಇಂಗ್ಲೆಂಡ್ ಎಂದರೆ ಬೇರೆ ಅರ್ಥ, ಗ್ರೇಟ್ ಬ್ರಿಟನ್ ಎಂದರೆ ಬೇರೆ ಅರ್ಥ, ಯುನೈಟಡ್ ಕಿಂಗ್‍ಡಮ್ (ಯು.ಕೆ) ಎಂದರೆ ಇನ್ನೊಂದು ಅರ್ಥ! ನಿಮ್ಮಲ್ಲಿ ಬಹಳಷ್ಟು ಓದುಗರಿಗೆ ಇವುಗಳ ನಡುವಿನ ವ್ಯತ್ಯಾಸ ಗೊತ್ತಿರಬಹುದು ಎಂದುಕೊಂಡಿದ್ದೇನೆ; ಗೊತ್ತಿದ್ದರೂ, ಈ ಸಲದ ನನ್ನ ಈ ‘ಇಂಗ್ಲೆಂಡ್ ಪತ್ರ’ವನ್ನು ಓದಿದರೆ, ಬಹುಷಃ ನಷ್ಟವೇನೂ ಆಗುವುದಿಲ್ಲ ಅಂದುಕೊಂಡಿದ್ದೇನೆ.

ಕರ್ನಾಟಕ, ಗುಜರಾತ್, ಉತ್ತರ ಪ್ರದೇಶ, ಆಸ್ಸಾಂ ಇತ್ಯಾದಿ ಇಪ್ಪತ್ತೊಂಭತ್ತು ರಾಜ್ಯಗಳು (states) ಸೇರಿದರೆ ಅದು ಭಾರತವಾಗುತ್ತದೆ. ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್, ನೆವಾಡ, ಫ್ಲೋರಿಡಾ ಇತ್ಯಾದಿ ಐವತ್ತು ರಾಜ್ಯಗಳು (states) ಸೇರಿದ ಪ್ರದೇಶಕ್ಕೆ ಅಮೇರಿಕೆಯ ಸಂಯುಕ್ತ ಸಂಸ್ಥಾನ ಅಥವಾ ಸರಳವಾಗಿ ಅಮೇರಿಕಾ ದೇಶ ಎನ್ನುತ್ತೇವೆ. ಅದು ಸುಲಭವಾಗಿ ಎಲ್ಲರಿಗೂ ಅರ್ಥವಾಗುತ್ತದೆ.

ಆದರೆ ನಾನಿರುವ ಈ ದೇಶ ಹಾಗಲ್ಲ! ಇಂಗ್ಲೆಂಡ್, ಸ್ಕಾಟ್‌ಲ್ಯಾಂಡ್, ವೇಲ್ಸ್ ಮತ್ತು ನಾರ್ದರ್ನ್ (ಉತ್ತರ) ಐರ್‌ಲ್ಯಾಂಡ್ ಎನ್ನುವ ನಾಲ್ಕು ‘ದೇಶಗಳು’ (countries) ಸೇರಿರುವ ದೇಶಕ್ಕೆ ‘ಯುನೈಟೆಡ್ ಕಿಂಗ್‍ಡಮ್ (ಯು.ಕೆ)‘ ಎನ್ನುವ ದೇಶ (country) ಎನ್ನುತ್ತಾರೆ! ಏನು ‘ದೇಶಗಳು’ ಸೇರಿ ‘ಒಂದು ದೇಶ’ವಾಗುವುದು ಹೇಗೆ ಸಾಧ್ಯ ಎಂದು ಹುಬ್ಬೇರಿಸಬೇಡಿ. ಬಹುವಚನ ಸೇರಿ ಏಕವಚನ ಮಾಡಲಾದೀತೆ ಎಂದು ಜಗಳಕ್ಕೆ ಬರಬೇಡಿ. ಇಂಗ್ಲೆಂಡ್, ಸ್ಕಾಟ್‌ಲ್ಯಾಂಡ್, ವೇಲ್ಸ್ ಮತ್ತು ಉತ್ತರ ಐರ್‌ಲ್ಯಾಂಡ್ ಪ್ರದೇಶಗಳನ್ನು ‘ದೇಶಗಳು (Countries)’ ಎನ್ನದೇ ‘ರಾಜ್ಯಗಳು’ (States) ಎಂದು ಹೇಳಿದ್ದರೆ ಯಾರಿಗೂ ಕನ್‌ಫ್ಯೂಸ್ ಆಗುತ್ತಲೇ ಇರಲಿಲ್ಲ ಎಂದು ಬಯ್ಯಬೇಡಿ. ಏಕೆಂದರೆ ಸ್ಕಾಟ್‌ಲ್ಯಾಂಡನ್ನೋ ವೇಲ್ಸ್‌ ಅನ್ನೋ ‘ದೇಶ (country)’ವೆನ್ನುವ ಬದಲು ಅಪ್ಪಿ ತಪ್ಪಿ ‘ರಾಜ್ಯ (state)’ ಎಂದು ಯಾರಾದರೂ ಕರೆಯಲಿ, ಸ್ಕಾಟ್‌ಲ್ಯಾಂಡಿನವರು ಮತ್ತು ವೇಲ್ಸಿನವರು ನಖಶಿಕಾಂತ ಕೋಪ ಮಾಡಿಕೊಳ್ಳುತ್ತಾರೆ! ಅಧೀಕೃತವಾಗಿ ಇವುಗಳನ್ನು ರಾಜ್ಯ(state)ಗಳೆನ್ನದೇ ದೇಶ(country)ಗಳೆನ್ನುತ್ತಾರೆ.

ಭಾರತದಲ್ಲಿ ರಾಜ್ಯಗಳಿರುವಂತೆ, ರಷ್ಯಾದಲ್ಲಿ ಗಣರಾಜ್ಯಗಳಿವೆ (republic), ಚೈನಾದಲ್ಲಿ ಪ್ರಾಂತಗಳಿವೆ (province). ಆದರೆ ದೇಶಗಳು ಸೇರಿ ದೇಶವಾದ ದೇಶ ಈ ಭೂಮಿಯ ಮೇಲೆ ಯುನೈಟೆಡ್ ಕಿಂಗ್‍ಡಮ್ (ಯು.ಕೆ) ಒಂದೇ ಇರಬೇಕು. ಯಾಕೋ ಇದು ತುಂಬಾ ಅಧಿಕಪ್ರಸಂಗವಾಯಿತು ಎಂದು ನೀವೆಂದುಕೊಂಡರೆ ಅದು ನಿಮ್ಮ ಸಮಸ್ಯೆ. ಕನ್ನಡದಲ್ಲಿ ಈ ದೇಶದ ಹೆಸರನ್ನು ಭಾಷಾಂತರ ಮಾಡಿದರೆ ‘ಸಂಯುಕ್ತ ಸಾಮ್ರಾಜ್ಯ’ ಎಂದಾಗುತ್ತದೆ; ಹಾಗೆಂದು ಯಾರಿಗಾದರೂ ಕನ್ನಡದಲ್ಲಿ ಹೇಳಿದರೆ ಅಥವಾ ಬರೆದರೆ, ಕನ್ನಡ ತಾಯಿಯ ಮೇಲಾಣೆ, ಯಾವ ಕನ್ನಡಿಗನಿಗೂ ನಾನು ಯಾವ ದೇಶದ ಬಗ್ಗೆ ಮಾತಾಡುತ್ತಿದ್ದೇನೆ ಎಂದು ಅರ್ಥವಾಗುವುದಿಲ್ಲ! ಹಾಗಾಗಿ ಯುನೈಟೆಡ್ ಕಿಂಗ್‌ಡಮ್‍ ದೇಶವನ್ನು ಕನ್ನಡದಲ್ಲಿ ಬರೆಯುವಾಗ ಇಂಗ್ಲೆಂಡ್ ಎಂದೋ ಅಥವಾ ಬ್ರಿಟನ್ ಎಂದೋ ತಪ್ಪುತಪ್ಪಾಗಿ ಬರೆಯುತ್ತೇವೆ! ಯು.ಕೆ ಎಂದು ಚಿಕ್ಕದಾಗಿ ಬರೆದರೆ ಸರಿಯಾಗುತ್ತದೆ, ಆದರೆ ಕನ್ನಡದ ಜನರು ‘ಉತ್ತರ ಕನ್ನಡ‘ ಎಂದುಕೊಳ್ಳುತ್ತಾರೆ, ಏನು ಮಾಡುವುದು?

(ಇಂಗ್ಲೆಂಡ್)

ನಿಮಗೀಗ ಇಂಗ್ಲೆಂಡ್ ಮತ್ತು ಯುನೈಟೆಡ್ ಕಿಂಗ್‌ಡಮ್ (ಯು.ಕೆ) ನಡುವಿನ ವ್ಯತ್ಯಾಸ ಅರ್ಥವಾಯಿತು ಎಂದುಕೊಂಡಿದ್ದೇನೆ. ಹಾಗಾದರೆ ಈ ‘ಗ್ರೇಟ್ ಬ್ರಿಟನ್’ ಎಂದರೇನು? ಗ್ರೇಟ್ ಬ್ರಿಟನ್ ಅಂದರೆ ‘ಯು.ಕೆ’ ತಾನೆ ಎಂದು ನೀವಂದುಕೊಂಡಿದ್ದರೆ ಅದು ಖಂಡಿತ ತಪ್ಪು. ಯು.ಕೆ ಒಂದು ದ್ವೀಪಗಳ ದೇಶ. ಅದರಲ್ಲಿ ಅತ್ಯಂತ ಗೊಡ್ಡ ದ್ವೀಪದ ಹೆಸರೇ ಗ್ರೇಟ್ ಬ್ರಿಟನ್. “ಹಾಗಾದರೆ ‘ಲಿಟಲ್ ಬ್ರಿಟನ್’ ಎನ್ನುವ ದ್ವೀಪವೂ ಇರಬೇಕಲ್ಲ,” ಎಂದು ನೀವು ಕೇಳಬೇಕು. ಇಲ್ಲ ಸ್ವಾಮಿ, ‘ಲಿಟಲ್ ಬ್ರಿಟನ್’ ಎನ್ನುವ ಹೆಸರಿನ ದ್ವೀಪ ಇಲ್ಲ. “ಹಾಗೆಂದ ಮೇಲೆ ಈ ಪುಟ್ಟ ದ್ವೀಪಕ್ಕೆ ‘ಗ್ರೇಟ್ ಬ್ರಿಟನ್’ಎಂದು ಏಕೆ ಕರೆಯಬೇಕು, ಬರೀ ‘ಬ್ರಿಟನ್’ ಎಂದು ಕರೆದರೆ ಸಾಲುತ್ತಿರಲಿಲ್ಲವೇ,” ಎಂದು ನನ್ನನ್ನು ಬಯ್ಯಬೇಡಿ, ಈ ದೇಶದಲ್ಲಿ ಪ್ರಿಫಿಕ್ಸ್ ಆಗಿ ಗ್ರೇಟ್, ಗ್ರ್ಯಾಂಡ್ ಸೇರಿಸುವುದು ರೂಢಿಯಾಗಿಬಿಟ್ಟಿದೆ (ಗ್ರೇಟ್ ಬರ್‌ಮಿಂಗ್‌ಹ್ಯಾಮ್ ರನ್, ಗ್ರೇಟ್ ಬ್ರಿಟಿಷ್ ಬೇಕ್ ಆಫ್, ಗ್ರ್ಯಾಂಡ್ ಸೆಂಟ್ರಲ್ ಇತ್ಯಾದಿ); ಮೈಸೂರಿನವರು ಎಲ್ಲದಕ್ಕೂ ಮೈಸೂರು ಸೇರಿಸುವುದಿಲ್ಲವೇ (ಮೈಸೂರು ಮಲ್ಲಿಗೆ, ಮೈಸೂರು ಪಾಕು, ಮೈಸೂರು ಮಸಾಲೆ ದೋಸೆ), ಹಾಗೆಯೇ ಇದು.

ಈ ಗ್ರೇಟ್ ಬ್ರಿಟನ್ ಎನ್ನುವ ದ್ವೀಪದಲ್ಲಿ ಯು.ಕೆ ದೇಶದ ನಾಲ್ಕು ದೇಶಗಳಲ್ಲಿ ಮೂರು ದೇಶಗಳಿವೆ, ಅವೇ ಇಂಗ್ಲೆಂಡ್, ಸ್ಕಾಟ್‌ಲ್ಯಾಂಡ್ ಮತ್ತು ವೇಲ್ಸ್. ಏನು ಒಂದು ದ್ವೀಪದಲ್ಲಿ ಮೂರು ದೇಶಗಳಾ ಎಂದು ಮೂಗು ಮುರಿಯಬೇಡಿ. ಹಾಗಾದರೆ ಈ ನಾಲ್ಕನೇ ದೇಶವಾದ ಉತ್ತರ ಐರ್‌ಲ್ಯಾಂಡ್ ಎಲ್ಲಿದೆ? ಅದು ಗ್ರೇಟ್ ಬ್ರಿಟನ್ ದ್ವೀಪದ ಪಶ್ಚಿಮದಲ್ಲಿರುವ ಚಿಕ್ಕ ದ್ವೀಪವಾದ ಐರ್‌ಲ್ಯಾಂಡ್‍ನಲ್ಲಿದೆ. ಹಾಗಾದರೆ ಈ ನಾಲ್ಕನೇಯ ದೇಶಕ್ಕೆ ಉತ್ತರ ಐರ್‌ಲ್ಯಾಂಡ್ ಎನ್ನುವ ಬದಲು ಐರ್‌ಲ್ಯಾಂಡ್ ಎಂದೇ ಕರೆಯಬಹುದಿತ್ತಲ್ಲ! ಅದು ಹಾಗಲ್ಲ ಮಾರಾಯ್ರೇ, ಐರ್‌ಲ್ಯಾಂಡ್ ಎನ್ನುವ ದ್ವೀಪದ ಒಂದು ಚಿಕ್ಕ ಉತ್ತರ ಭಾಗ ಮಾತ್ರ ‘ಯು.ಕೆ’ಗೆ ಸೇರಿದ್ದು, ಅದಕ್ಕೇ ಅದು ಉತ್ತರ ಐರ್‌ಲ್ಯಾಂಡ್, ಅದು ಯು.ಕೆ.ಯ ನಾಲ್ಕನೇಯ ದೇಶ. ಹಾಗಾದರೆ ಐರ್‌ಲ್ಯಾಂಡ್ ದ್ವೀಪದ ದಕ್ಷಿಣ ಭಾಗಕ್ಕೆ ಇರುವ ಭೂಮಿಗೆ ‘ದಕ್ಷಿಣ ಐರ್‌ಲ್ಯಾಂಡ್’ ಎನ್ನುತ್ತಾರಾ? ಇಲ್ಲ, ಅದು ಇನ್ನೊಂದು ದೇಶ, ಯು.ಕೆ ಗೆ ಸೇರಿರದ ಸ್ವತಂತ್ರ ದೇಶ, ಅದೇ ‘ಐರ್‌ಲ್ಯಾಂಡ್’! ಹಾಗಾದರೆ ಐರ್‌ಲ್ಯಾಂಡ್ ಎನ್ನುವ ಸ್ವತಂತ್ರ ದೇಶ ನಿಜವಾದ ಲೆಕ್ಕದಲ್ಲಿ ದಕ್ಷಿಣ ಐರ್‌ಲ್ಯಾಂಡ್, ಹಾಗೆಂದು ಯಾರಾದರೂ ಐರಿಷ್ ಮುಂದೆ ಹೇಳಿ ನೋಡಿ, ನಿಮ್ಮ ಹಲ್ಲು ನಿಮ್ಮ ಕೈಯಲ್ಲಿರುತ್ತವೆ!

ಇನ್ನೂ ಮಜಕೂರಿನ ವಿಷಯಗಳನ್ನು ಹೇಳುತ್ತೇನೆ ಕೇಳಿ. ಭಾರತದೇಶದ ಚುನಾಯಿತ ನಾಯಕನಿಗೆ ಪ್ರಧಾನ ಮಂತ್ರಿ (Prime Minister) ಎಂತಲೂ, ರಾಜ್ಯದ ಚುನಾಯಿತ ನಾಯಕನಿಗೆ ಮುಖ್ಯಮಂತ್ರಿ (Chief Minister) ಎಂತಲೂ ಕರೆಯುತ್ತೇವೆ ತಾನೆ? ಹಾಗಾದರೆ ರಾಜ್ಯ ಅಥವಾ ಪ್ರಾಂತವನ್ನೇ ದೇಶವೆನ್ನುವ ಈ ಯು.ಕೆ.ನಲ್ಲಿ ಇಂಥ ನಾಯಕರಿಗೆ ಏನೆನ್ನುತ್ತಾರೆ ಎನ್ನುವ ಕುತೂಹಲ ಹುಟ್ಟುತ್ತದಲ್ಲವೇ? ಯು.ಕೆ ದೇಶದ ನಾಲ್ಕು ದೇಶಗಳಲ್ಲಿ ಮೂರು ದೇಶಗಳ (ಸ್ಕಾಟ್‌ಲ್ಯಾಂಡ್, ವೇಲ್ಸ್ ಮತ್ತು ನಾರ್ತ್ ಐರ್‌ಲ್ಯಾಂಡ್) ಮುಖ್ಯನಾಯಕನಿಗೆ ಮೊದಲಮಂತ್ರಿ (First Minister) ಎಂದು ಕರೆಯುತ್ತಾರೆ, ಭಾರತದಲ್ಲಿ ರಾಜ್ಯಗಳ ಮುಖಂಡರನ್ನು ಮುಖ್ಯಮಂತ್ರಿ (chief minister) ಎಂದು ಕರೆದಂತೆ. ಇನ್ನು ಉಳಿದ ನಾಲ್ಕನೇ ದೇಶವಾದ ಇಂಗ್ಲೆಂಡ್ ದೇಶಕ್ಕೆ ಮೊದಲಮಂತ್ರಿಯೇ ಇಲ್ಲ! ಹಾಗಾಗಿ ದೇಶ ಚುನಾಯಿಸಿದ ಪ್ರಧಾನಮಂತ್ರಿಯೇ ಇಂಗ್ಲೆಂಡ್ ದೇಶವನ್ನೂ ನೋಡಿಕೊಳ್ಳಬೇಕು. ಇದು ಹೇಗೆ ಎಂದರೆ, ಭಾರತದ ಎಲ್ಲ ರಾಜ್ಯಗಳ ನಾಯಕರು ಅವರವರ ರಾಜ್ಯಗಳ ಮುಖ್ಯಮಂತ್ರಿಗಳು, ಆದರೆ ಕರ್ನಾಟಕಕ್ಕೆ ಮುಖ್ಯಮಂತ್ರಿಯಿಲ್ಲ ಎನ್ನುವಂತೆ! ಭಾರತದ ಚುನಾವಣೆಯೊಂದರಲ್ಲಿ ಬಿಹಾರಿಯೊಬ್ಬ ಪ್ರಧಾನಮಂತ್ರಿ ಆದ ಎಂದುಕೊಳ್ಳಿ, ಆ ಬಿಹಾರಿಯೇ ಕರ್ನಾಟಕವನ್ನು ನೋಡಿಕೊಳ್ಳಬೇಕು, ಏಕೆಂದರೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಇಲ್ಲವಲ್ಲ! ಈಗಾಗಲೇ ಹತ್ತು ಜನ ಸ್ಕಾಟ್‌ಲ್ಯಾಂಡ್ ದೇಶದವರು ಯು.ಕೆ. ಯ ಪ್ರಧಾನಮಂತ್ರಿಗಳಾಗಿ ಹೋಗಿದ್ದಾರೆ, ಹಾಗಾಗಿ ಅವರು ಅಪರೋಕ್ಷವಾಗಿ ಇಂಗ್ಲೆಂಡ್ ದೇಶವನ್ನೂ ಆಳಿದ್ದಾರೆ.

(ಸ್ಕಾಟ್‌ಲ್ಯಾಂಡ್)

ಕನ್ನಡದಲ್ಲಿ ಈ ದೇಶದ ಹೆಸರನ್ನು ಭಾಷಾಂತರ ಮಾಡಿದರೆ ‘ಸಂಯುಕ್ತ ಸಾಮ್ರಾಜ್ಯ’ ಎಂದಾಗುತ್ತದೆ; ಹಾಗೆಂದು ಯಾರಿಗಾದರೂ ಕನ್ನಡದಲ್ಲಿ ಹೇಳಿದರೆ ಅಥವಾ ಬರೆದರೆ, ಕನ್ನಡ ತಾಯಿಯ ಮೇಲಾಣೆ, ಯಾವ ಕನ್ನಡಿಗನಿಗೂ ನಾನು ಯಾವ ದೇಶದ ಬಗ್ಗೆ ಮಾತಾಡುತ್ತಿದ್ದೇನೆ ಎಂದು ಅರ್ಥವಾಗುವುದಿಲ್ಲ!

ಇದು ಇಷ್ಟಕ್ಕೇ ಮುಗಿಯುವುದಿಲ್ಲ. ಸ್ಕಾಟ್‌ಲ್ಯಾಂಡಿನ ಬಹಳಷ್ಟು ಜನರಿಗೆ ಇಂಗ್ಲೆಂಡಿನ ಜನರನ್ನು ಕಂಡರಾಗುವುದಿಲ್ಲ. ಇದು ಕರ್ನಾಟಕ ಮಹಾರಾಷ್ಟ್ರದ ಗಡಿ ವಿವಾದದ ತರಹ, ಕರ್ನಾಟಕ ತಮಿಳುನಾಡಿನ ಕಾವೇರಿ ವಿವಾದದ ತರಹ ಇರಬಹುದೇ ಅನಿಸಬಹುದು; ಇದು ಅದಕ್ಕಿಂತ ಸ್ವಲ್ಪ ಹೆಚ್ಚೇ ಅನ್ನಿ. ಎಷ್ಟು ಹೆಚ್ಚು ಎಂದರೆ ಕೆಲವು ವರ್ಷಗಳ ಹಿಂದೆ ಯು.ಕೆ ಯಿಂದ ಹೊರಬಂದು ಸ್ವತಂತ್ರ ದೇಶವಾಗಲು ಸ್ಕಾಟ್‌ಲ್ಯಾಂಡ್ ಮತದಾನವನ್ನು ಮಾಡಿತ್ತು, ಕೂದಲೆಳೆಯಲ್ಲಿ ಸ್ಕಾಟ್‌ಲ್ಯಾಂಡ್ ಸ್ವತಂತ್ರ ದೇಶವಾಗುವ ಅವಕಾಶ ತಪ್ಪಿಹೋಯಿತು. ಇದರ ಹೋಲಿಕೆ ಹೇಗೆಂದರೆ, ತಮಿಳುನಾಡಿನ ಜನ ತಮಗೆ ತಮಿಳುದೇಶ ಬೇಕು ಎಂದು ತಮಿಳುನಾಡಿನ ಜನರೇ ಮತದಾನ ಮಾಡಿಕೊಂಡಂತೆ.

(ಉತ್ತರ ಐರ್‌ಲ್ಯಾಂಡ್)

ಇನ್ನೂ ಕೆಲವು ವಿಚಿತ್ರವೆನ್ನಿಸುವ ವಿಷಯಗಳಿವೆ. ಯು.ಕೆ.ಯಲ್ಲಿರುವ ಆರೋಗ್ಯ ವ್ಯವಸ್ಥೆ (ನ್ಯಾಷನಲ್ ಹೆಲ್ತ್ ಸರ್ವೀಸ್ – NHS) ಈ ದೇಶದಲ್ಲಿರುವ ಪ್ರತಿಯೊಬ್ಬರಿಗೆ ಉಚಿತ ಎಂದು ಈ ಹಿಂದೆ ಬರೆದಿರುವೆನಲ್ಲವೇ, ಆದರೆ ವೈದ್ಯರು ಕೊಡುವ ಮಾತ್ರೆಗಳ ಚೀಟಿ(prescription)ಯ ಪ್ರತಿ ಐಟಂಗೆ ‘ಇಂಗ್ಲೆಂಡಿ’ನಲ್ಲಿ ಸುಮಾರು ಹತ್ತು ಪೌಂಡ್ (ಸುಮಾರು ಸಾವಿರ ರೂಪಾಯಿ) ಕೊಡಬೇಕು. 25 ಪೆನ್ಸ್ (25 ರೂಪಾಯಿ)ಗೆ ಯಾವುದೇ ಅಂಗಡಿಯಲ್ಲಿ ವೈದ್ಯರ ಚೀಟಿಯಿಲ್ಲದೇ ಸಿಗುವ ಕ್ರೋಸಿನ್ ಮಾತ್ರೆಯನ್ನು ವೈದ್ಯರು ಬರೆದು ಕೊಟ್ಟರೆ, ಅದಕ್ಕೂ ಹತ್ತು ಪೌಂಡ್ ಕೊಡಬೇಕು! ಆದರೆ ಸಾವಿರಾರು ಪೌಂಡ್ ಬೆಲೆಬಾಳುವ ಮಾತ್ರೆಯನ್ನು ಬರೆದುಕೊಟ್ಟರೂ ಹತ್ತು ಪೌಂಡ್ ಕೊಟ್ಟರೆ ಸಾಕು! ಆದರೆ ಇದಕ್ಕೂ ಮಜಕೂರಿನ ವಿಷಯವೆಂದರೆ ವೇಲ್ಸ್, ಸ್ಕಾಟ್‌ಲ್ಯಾಂಡ್ ಮತ್ತು ಉತ್ತರ ಐರ್‌ಲ್ಯಾಂಡಿನವರಿಗೆ ಇದೂ ಉಚಿತ. ಇದರ ಲೆಕ್ಕ ಹೇಗೆ ಆಯಿತು ಎಂದರೆ, ಕರ್ನಾಟಕದವರು ಮಾತ್ರ ವೈದ್ಯರ ಚೀಟಿಗೆ ದುಡ್ಡು ಕೊಡಬೇಕು, ಕೇರಳ, ಆಂಧ್ರ ಮತ್ತು ತೆಲಂಗಾಣದವರಿಗೆ ಉಚಿತ ಎಂಬಂತೆ! ಹೀಗೆ ಭಾರತದಲ್ಲಿ ಆಗಿದ್ದರೆ, ಕರ್ನಾಟಕದವರು ಚಳುವಳಿ ಮಾಡದೇ ಬಿಡುತ್ತಿದ್ದರೇ? ಆದರೆ ಇಂಗ್ಲೆಂಡಿನವರು ಮಾತ್ರ ತೆಪ್ಪಗೆ ದುಡ್ಡುಕೊಟ್ಟು ಮಾತ್ರೆಗಳನ್ನು ಪಡೆಯುತ್ತಾರೆ.

ಈ ವಿಚಿತ್ರಗಳು ಇಲ್ಲಿಗೇ ಮುಗಿಯುವುದಿಲ್ಲ. ಇಂಗ್ಲೆಂಡಿನಲ್ಲಿರುವ ಮಕ್ಕಳು ಯು.ಕೆ.ಯ ಯಾವುದೇ ವಿಶ್ವವಿದ್ಯಾನಿಯದಲ್ಲಿ ಯಾವುದೇ ಡಿಗ್ರಿ ಕೋರ್ಸ್ ಮಾಡಲು (ಮೆಡಿಕಲ್ ಇರಲಿ ಆರ್ಟ್ ಇರಲಿ ಶುಲ್ಕ ಒಂದೇ) ವರ್ಷಕ್ಕೆ 9000 ಪೌಂಡ್ (9 ಲಕ್ಷ ರೂಪಾಯಿಗಳು) ಕೊಡಬೇಕು. ಆದರೆ ಸ್ಕಾಟ್‌ಲ್ಯಾಂಡಿನ ಮಕ್ಕಳು ಸ್ಕಾಟ್‌ಲ್ಯಾಂಡಿನ ವಿಶ್ವವಿದ್ಯಾನಿಲಯಗಳಲ್ಲಿ ಓದಲು, ವೇಲ್ಸ್‌ನ ಮಕ್ಕಳು ವೇಲ್ಸ್‌ನ ವಿಶ್ವವಿದ್ಯಾನಿಲಯಗಳಲ್ಲಿ ಓದಲು, ಉತ್ತರ ಐರ್‌ಲ್ಯಾಂಡಿನವರು ತಮ್ಮ ದೇಶದ ವಿಶ್ವವಿದ್ಯಾನಿಲಯಗಳಲ್ಲಿ ಓದಲು ಇಷ್ಟೆಲ್ಲ ಕೊಡಬೇಕಾಗಿಲ್ಲ, ಹೆಚ್ಚೂ ಕಡಿಮೆ ಪುಗಸಟ್ಟೆ ಎಂದರೂ ತಪ್ಪಿಲ್ಲ. ಇದು ಹೇಗೆ ಎಂದರೆ, ಕರ್ನಾಟಕದ ಮಕ್ಕಳು ಕರ್ನಾಟಕದಲ್ಲಿರುವ ವಿಶ್ವವಿದ್ಯಾನಿಲಯಗಳಲ್ಲಿ ಓದಲು ಶುಲ್ಕ ಕೊಡಬೇಕು, ಆದರೆ ತಮಿಳುನಾಡಿನ ಮಕ್ಕಳು ತಮಿಳುನಾಡಿನ ವಿಶ್ವವಿದ್ಯಾನಿಲಯಗಳಲ್ಲಿ ಓದಲು ಶುಲ್ಕ ಕೊಡಬೇಕಾಗಿಲ್ಲ ಎನ್ನುವಂತೆ!

(ವೇಲ್ಸ್)

ಕ್ರೀಡೆಗಳ ವಿಷಯಕ್ಕೆ ಬಂದರೆ ಇದು ಇನ್ನೂ ಸಂಕೀರ್ಣವಾಗುತ್ತದೆ. ಭಾರತದ ಅತ್ಯಂತ ಜನಪ್ರಿಯ ಕ್ರೀಡೆಯಾದ ಕ್ರಿಕೆಟ್ಟನ್ನೇ ತೆಗೆದುಕೊಳ್ಳೋಣ. ಈಗ ಆಗಸ್ಟಿನಲ್ಲಿ ಭಾರತ ಮತ್ತು ಇಂಗ್ಲೆಂಡ್ ಸರಣಿ ಆರಂಭವಾಗುತ್ತದೆ ತಾನೆ? ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ಯು.ಕೆ.ಯ ಕ್ರಿಕೆಟ್ ತಂಡ ಎಂದು ಯಾವತ್ತೂ ಕರೆಯುವುದಿಲ್ಲ. ಏಕೆಂದರೆ ಸ್ಕಾಟ್‌ಲ್ಯಾಂಡಿಗೆ ತನ್ನದೇ ಆದ ಕ್ರಿಕೆಟ್ ತಂಡವಿದೆ ಮತ್ತು ಅದು ಪ್ರತ್ಯೇಕವಾಗಿ ಅಂತರರಾಷ್ಟ್ರೀಯವಾಗಿ ಸ್ಪರ್ಧಿಸುತ್ತದೆ. ಇದು ಹೇಗೆ ಅಂದರೆ, ಕರ್ನಾಟಕ ಪ್ರತ್ಯೇಕವಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದಂತೆ! ವರ್ಲ್ಡ್‌ಕಪ್ ಫೈನಲ್ ನ್ಯೂಜಿಲೆಂಡ್ ಮತ್ತು ಕರ್ನಾಟಕದ ನಡುವೆ ಎಂದರೆ ಹೇಗೆ ಅನಿಸಬಹುದು? ಇತ್ತೀಚೆ ಮುಗಿದ ವರ್ಲ್ಡ್‌ಕಪ್ ಫೈನಲ್‍ನಲ್ಲಿ ಆದದ್ದೂ ಅದೇ! ಪಂದ್ಯ ನಡೆದದ್ದು ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವೆ, ನ್ಯೂಜಿಲೆಂಡ್ ಮತ್ತು ಯು.ಕೆ.ಯ ನಡುವೆ ಅಲ್ಲ!

(ಇಯಾನ್ ಮಾರ್ಗನ್)

ಸ್ಕಾಟ್‌ಲ್ಯಾಂಡಿನ ಕ್ರಿಕೆಟ್ ತಂಡಕ್ಕೆ ಪ್ರತ್ಯೇಕ ಅಂತರರಾಷ್ಟೀಯ ಮನ್ನಣೆ ಇರಬೇಕಾದರೆ, ವೇಲ್ಸ್ ಮತ್ತು ಉತ್ತರ ಐರ್‌ಲ್ಯಾಂಡಿಗೆ ಕೂಡ ಇರಬೇಕಲ್ಲವೇ? ಇಲ್ಲ, ಏಕೆಂದರೆ ವೇಲ್ಸ್ ಮತ್ತು ಇಂಗ್ಲೆಂಡ್ ಸೇರಿ ಒಂದು ತಂಡ. ಹಾಗಾದರೆ ಇಂಗ್ಲೆಂಡ್ ತಂಡವನ್ನು ‘ಇಂಗ್ಲೆಂಡ್-ವೇಲ್ಸ್’ ತಂಡ ಎಂದು ಕರೆಯಬೇಕಲ್ಲವೇ? ಹೌದು, ಆದರೆ ಹಾಗೆ ಕರೆಯುವುದಿಲ್ಲ, ವೇಲ್ಸಿನವರೇ ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ, ನಮಗೇಕೆ ಅದರೆ ಉಸಾಬರಿ? ಅಷ್ಟಾಗಿ ಈ ‘ಇಂಗ್ಲೆಂಡ್-ವೇಲ್ಸ್‘ ತಂಡದಲ್ಲಿ ಈಗ ಒಬ್ಬನೇ ಒಬ್ಬ ವೇಲ್ಸ್‌ನ ಆಟಗಾರನೂ ಇಲ್ಲ, ಆ ಮಾತು ಬೇರೆ ಬಿಡಿ.

ಇನ್ನು ಉತ್ತರ ಐರ್‌ಲ್ಯಾಂಡಿನವರು ಸ್ವತಂತ್ರ ದೇಶವಾದ ಐರ್‌ಲ್ಯಾಂಡಿನ ಜೊತೆ ಸೇರಿ ‘ಐರ್‌ಲ್ಯಾಂಡ್’ ಎಂದು ಅಂತರರಾಷ್ಟೀಯವಾಗಿ ಸ್ಪರ್ಧಿಸುತ್ತಾರೆ, ತನ್ನ ಸಮಷ್ಟಿ ದೇಶವಾದ ಯು.ಕೆ.ಯ ಬೇರೆ ದೇಶಗಳ ಜೊತೆ ಸೇರಿ ಅಲ್ಲ. ಉತ್ತರ ಐರ್‌ಲ್ಯಾಂಡ್ ಯು.ಕೆ ಗೆ ಸೇರಿದ್ದರೂ ಅವರು ಕ್ರಿಕೆಟ್ ಆಡುವುದು ತಮ್ಮ ನೆರೆಯ ಸ್ವತಂತ್ರ ದೇಶವನ್ನು ಸೇರಿ ಮತ್ತು ಮತ್ತು ಅವರು ಇಂಗ್ಲೆಂಡ್ ವಿರುದ್ಧ ಮ್ಯಾಚ್ ಕೂಡ ಆಡುತ್ತಾರೆ! ಇದು ಹೇಗೆ ಆಯಿತು ಎಂದರೆ, ಪಶ್ಚಿಮ ಬಂಗಾಲ ರಾಜ್ಯವು ಬಂಗ್ಲಾದೇಶದೊಡನೆ ಸೇರಿ, ಭಾರತದ ವಿರುದ್ಧ ಮ್ಯಾಚ್ ಆಡಿದಂತೆ, ಊಹಿಸಲೂ ಸಾಧ್ಯವೇ? ಇನ್ನೂ ವಿಚಿತ್ರವೆಂದರೆ, ಈಗಿನ ಇಂಗ್ಲೆಂಡಿನ ಒಂದು ದಿನ ಮತ್ತು ಟಿ20 ತಂಡದ ನಾಯಕನಾಗಿರುವ ಇಯಾನ್ ಮಾರ್ಗನ್, ಐರ್‌ಲ್ಯಾಂಡ್ ದೇಶದಲ್ಲಿ ಹುಟ್ಟಿ ಬೆಳೆದು (ಉತ್ತರ ಐರ್‌ಲ್ಯಾಂಡ್ ಅಲ್ಲ) ಐರ್‌ಲ್ಯಾಂಡ್ ತಂಡಕ್ಕೆ ಆಡಿದವನು (ಅವನ ತಂದೆ ಐರಿಷ್, ತಾಯಿ ಇಂಗ್ಲೀಷ್)! ಇದು ಹೇಗೆಂದರೆ ಪಾಕಿಸ್ಥಾನದಲ್ಲಿ ಜನಿಸಿ ಬೆಳೆದಿರುವ ವ್ಯಕ್ತಿಯೊಬ್ಬ, ತನ್ನ ತಾಯಿ ಭಾರತೀಯಳೆಂಬ ಕಾರಣಕ್ಕೆ ಭಾರತಕ್ಕೆ ಬಂದು ಕ್ರಿಕೆಟ್ ತಂಡದ ನಾಯಕನಾದಂತೆ, ಇದನ್ನು ಊಹಿಸಲೂ ಸಾಧ್ಯವೇ?

ಈಗ ನಡೆಯುತ್ತಿರುವ ಯುರೋ-2020 ಫುಟ್‍ಬಾಲ್‍ ಸ್ಪರ್ಧೆಯಲ್ಲಿ ಇಂಗ್ಲೆಂಡ್, ಸ್ಕಾಟ್‌ಲ್ಯಾಂಡ್ ಮತ್ತು ವೇಲ್ಸ್ ತಂಡಗಳಿದ್ದವು, ಯು.ಕೆ.ಯ ತಂಡ ಎಂದು ಇಲ್ಲವೇ ಇಲ್ಲ. ಈ ಲೇಖನ ಬರೆಯುವ ವೇಳೆಗೆ ಇಂಗ್ಲೆಂಡ್ ಫೈನಲ್ ತಲುಪಿದೆ, ಮತ್ತು ವೇಲ್ಸ್ ಮತ್ತು ಸ್ಕಾಟ್‌ಲ್ಯಾಂಡ್ ತಂಡಗಳು ನಿರ್ಗಮಿಸಿವೆ (ಉತ್ತರ ಐರ್‌ಲ್ಯಾಂಡ್ ಅರ್ಹತೆಯನ್ನೂ ಪಡೆಯಲಿಲ್ಲ). ಹಾಗಾದರೆ ವೇಲ್ಸ್, ಉತ್ತರ ಐರ್‌ಲ್ಯಾಂಡ್ ಮತ್ತು ಸ್ಕಾಟ್‌ಲ್ಯಾಂಡಿನವರು ಇಂಗ್ಲೆಂಡ್ ತಂಡವು ಯುರೋಕಪ್ ಗೆಲ್ಲಲಿ ಎಂದು ಹಾರೈಸಿ ಬೆಂಬಲಿಸುತ್ತಾರೋ ಅಥವಾ ಸೋಲಲಿ ಎಂದು ಶಾಪ ಹಾಕುತ್ತಾರೋ ನೀವೇ ಊಹಿಸಿ!