ಎಷ್ಟೋ ಬಾರಿ ಪೊಲೀಸರು ಈ ಮಕ್ಕಳಿಗೆ ಎಚ್ಚರಿಕೆ ಕೊಟ್ಟು ಕಳಿಸುತ್ತಾರೆ. ಕೆಲವೊಮ್ಮೆ ದೊಡ್ಡ ಮಕ್ಕಳು ಯೂತ್ ಜಸ್ಟಿಸ್ ಮುಖಾಮುಖಿ ಸಭೆಗಳಲ್ಲಿ ಸಲಹೆ, ಬುದ್ಧಿವಾದಗಳನ್ನು ಪಡೆದು ಹೋಗುತ್ತಾರೆ. ಕೆಲವರಿಗೆ ಅಪರಾಧ ಮಾಡುವುದು ತಮಾಷೆಯಾದರೆ ಇನ್ನೂ ಕೆಲವು ಮಕ್ಕಳಿಗೆ ಅದು ಉದ್ದೇಶಪೂರ್ವಕವಾದ ನಡವಳಿಕೆ ಆಗಿರುತ್ತದೆ ಎಂದು ಸಮಾಜ ಕಾರ್ಯಕರ್ತರು, ಆಪ್ತಸಮಾಲೋಚನಾ ತಜ್ಞರು ಹೇಳುತ್ತಾರೆ. ಚಿಂತಿಸುವ ವಿಷಯವೆಂದರೆ ಅವರಲ್ಲಿ ಅನೇಕರು ಪದೇಪದೇ ಅದೇ ರೀತಿಯ ಅಪರಾಧಗಳನ್ನು ಮಾಡುತ್ತಾ ಇರುತ್ತಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”ದಲ್ಲಿ ಯುವಜನ ಅಪರಾಧಗಳಲ್ಲಿ ಭಾಗಿಯಾಗುತ್ತಿರುವುದರ ಕುರಿತ ಬರಹ ನಿಮ್ಮ ಓದಿಗೆ

ಪ್ರಿಯ ಓದುಗರೆ,

ಈ ವಾರ ಸೌತ್ ಆಸ್ಟ್ರೇಲಿಯಾ ರಾಜ್ಯ ಸರಕಾರವು ಹದಿನಾಲ್ಕು ವರ್ಷದೊಳಗಿನ ಮಕ್ಕಳು ಸಾಮಾಜಿಕ ಮಾಧ್ಯಮಗಳನ್ನು ಬಳಸುವುದನ್ನು ನಿಷೇಧಿಸಿದೆ. ಮಕ್ಕಳು ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಾ ಅನೇಕ ಸಮಸ್ಯೆಗಳಿಗೆ ಈಡಾಗುವುದು, ಅವರ ಮಾನಸಿಕ ಆರೋಗ್ಯ ಕೆಡುತ್ತಿರುವುದು ಎಂಬಂತೆ ಹಲವಾರು ಕಾರಣಗಳನ್ನು ಮುಂದಿಟ್ಟುಕೊಂಡು ಈ ಕ್ರಮವನ್ನು ಕೈಗೊಳ್ಳಲಾಗಿದೆ. ಇದು ಆಸ್ಟ್ರೇಲಿಯಾದಲ್ಲೇ ಪ್ರಪ್ರಥಮ.

ಇಂತಹುದೊಂದು ನಿಷೇಧದ ಜೊತೆಜೊತೆಗೇ ದೇಶದಲ್ಲಿ ಮತ್ತೊಂದು ವಿಷಯವು ಚರ್ಚಿತವಾಗುತ್ತಿದೆ. ಅದು ಯೂತ್ ಕ್ರೈಂ – ಯುವಜನರಲ್ಲಿ ಹೆಚ್ಚುತ್ತಿರುವ ಅಪರಾಧ ನಡವಳಿಕೆ. ಕಾರ್ ಕಿಟಕಿಗೆ ಕಲ್ಲು ತೂರುವುದು, ಒಡೆಯುವುದು, ಕಾರ್, ಸೈಕಲ್, ಮೋಟಾರ್ ಬೈಕ್ ಕಳ್ಳತನ, ಮನೆಗಳಿಗೆ ನುಗ್ಗಿ ಕದಿಯುವುದು, ಬೆದರಿಸುವುದು, ಅತಿವೇಗದ ವಾಹನ ಚಾಲನೆ, ಅಲ್ಲಲ್ಲಿ ಚೂರಿ ಇರಿತ, ಪೋಲೀಸರ ಮೇಲೆ ದಾಳಿ, ಅಂಗಡಿಗಳಲ್ಲಿ ಕಳ್ಳತನ, ಕುಡಿತ, ಜೂಜಾಟ, ಮಾದಕದ್ರವ್ಯ ಚಾಳಿ… ಹೀಗೆ ಅನೇಕ ಅಪರಾಧಗಳ ಪಟ್ಟಿಯಿದೆ. ಈ ಬಗೆಯ ಅಪರಾಧಗಳನ್ನು ವಯಸ್ಸಾದವರು ಮಾಡಿದರೂ, ಮಾಡುತ್ತಿದ್ದರೂ ಯುವಜನತೆಯಲ್ಲಿ ಇದು ಹೆಚ್ಚುತ್ತಿದೆ ಎನ್ನಲಾಗಿದೆ. ಒಂದು ಮಾಹಿತಿಯಂತೆ ಕಳೆದ ವರ್ಷ ೨೦೨೩ರಲ್ಲಿ ಹದಿನಾಲ್ಕು ವರ್ಷದಿಂದ ಹದಿನೇಳು ವರ್ಷದವರೆಗಿನ ಮಕ್ಕಳು ಸುಮಾರು ೧೮,೦೦೦ ಕ್ಕೂ ಹೆಚ್ಚಿನ ಅಪರಾಧಗಳನ್ನು ಮಾಡಿದ್ದಾರೆ. ಅದಕ್ಕೂ ಹಿಂದಿನ ವರ್ಷ ೨೦೨೨ ಕ್ಕೆ ಹೋಲಿಸಿದರೆ ಈ ಅಪರಾಧಗಳು ಸುಮಾರು ೩೦% ಹೆಚ್ಚಿದೆಯಂತೆ. ಬಹಳಷ್ಟು ಚಿಕ್ಕಪುಟ್ಟ ಅಪರಾಧಗಳೇ ಆದರೂ ಅವು ಕಾನೂನಿನ ಪ್ರಕಾರ ತಪ್ಪು. ಹತ್ತರಿಂದ ಹದಿಮೂರು ವರ್ಷದ ಮಕ್ಕಳೂ ಕೂಡ ಈ ಬಗೆಯ ಸಣ್ಣಪುಟ್ಟ ಅಪರಾಧಗಳನ್ನು ಮಾಡುತ್ತಿದ್ದು ಅವೂ ಕೂಡ ಹೆಚ್ಚಿವೆ ಎನ್ನುವುದು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಆತಂಕ ತಂದಿದೆ. ಇತ್ತ ಸಾರ್ವಜನಿಕರ ಕೋಪತಾಪಗಳ ಬಿಸಿಯೂ ಏರುತ್ತಿದೆ.

ಎಷ್ಟೋ ಬಾರಿ ಪೊಲೀಸರು ಈ ಮಕ್ಕಳಿಗೆ ಎಚ್ಚರಿಕೆ ಕೊಟ್ಟು ಕಳಿಸುತ್ತಾರೆ. ಕೆಲವೊಮ್ಮೆ ದೊಡ್ಡ ಮಕ್ಕಳು ಯೂತ್ ಜಸ್ಟಿಸ್ ಮುಖಾಮುಖಿ ಸಭೆಗಳಲ್ಲಿ ಸಲಹೆ, ಬುದ್ಧಿವಾದಗಳನ್ನು ಪಡೆದು ಹೋಗುತ್ತಾರೆ. ಕೆಲವರಿಗೆ ಅಪರಾಧ ಮಾಡುವುದು ತಮಾಷೆಯಾದರೆ ಇನ್ನೂ ಕೆಲವು ಮಕ್ಕಳಿಗೆ ಅದು ಉದ್ದೇಶಪೂರ್ವಕವಾದ ನಡವಳಿಕೆ ಆಗಿರುತ್ತದೆ ಎಂದು ಸಮಾಜ ಕಾರ್ಯಕರ್ತರು, ಆಪ್ತಸಮಾಲೋಚನಾ ತಜ್ಞರು ಹೇಳುತ್ತಾರೆ. ಚಿಂತಿಸುವ ವಿಷಯವೆಂದರೆ ಅವರಲ್ಲಿ ಅನೇಕರು ಪದೇಪದೇ ಅದೇ ರೀತಿಯ ಅಪರಾಧಗಳನ್ನು ಮಾಡುತ್ತಾ ಇರುತ್ತಾರೆ.

Free public domain CC0 photo.
More:
View public domain image source here

ಸರಕಾರಗಳ ಆತಂಕದ ಮಟ್ಟ ಮತ್ತು ಸಾರ್ವಜನಿಕರ ಗಮನ ಎಲ್ಲಿಗೇರಿದೆ ಅಂದರೆ ಆಸ್ಟ್ರೇಲಿಯಾ ದೇಶವು ಯೂತ್ ಕ್ರೈಂ ಪೇಚಾಟಕ್ಕೆ ಸಿಲುಕಿದೆಯೇ ಅನ್ನುವ ಪ್ರಶ್ನೆಯನ್ನು ನಮ್ಮ ರಾಣಿರಾಜ್ಯದ ವಿಶ್ವವಿದ್ಯಾಲಯದ ಪಂಡಿತರು ಎತ್ತಿದ್ದಾರೆ. ಇವರುಗಳು ಅಪರಾಧಶಾಸ್ತ್ರ ಮತ್ತು ಅಪರಾಧ ನ್ಯಾಯ ತಜ್ಞರು. ಬರೀ ಪ್ರಶ್ನೆ ಕೇಳಿ ಅವರು ಸುಮ್ಮನಾಗಿಲ್ಲ. ಅಂಕಿಅಂಶಗಳನ್ನು ಕಲೆಹಾಕಿ ಅವುಗಳನ್ನು ಪರಿಶೀಲಿಸಿ, ವಿಶ್ಲೇಷಿಸಿ ಹಲವಾರು ಕುತೂಹಲಕಾರಿ ವಿಷಯಗಳನ್ನು ಚರ್ಚಿಸಿದ್ದಾರೆ.

ಆಸ್ಟ್ರೇಲಿಯಾದಾದ್ಯಂತ ಇರುವ ಕಾನೂನಿನ ಪ್ರಕಾರ ಅಪರಾಧ ಜವಾಬ್ದಾರಿ ವಯಸ್ಸು ಹತ್ತು ವರ್ಷ. ಅಂದರೆ ಹತ್ತು ವರ್ಷದ ಹುಡುಗಿ ಯಾ ಹುಡುಗ ಕಳ್ಳತನ ಮಾಡಿ ಸಿಕ್ಕಿಕೊಂಡರೆ ಅವರು ಕಾನೂನಿನ ಪ್ರಕಾರ ಅಪರಾಧಿಗಳಾಗುತ್ತಾರೆ. ಆದರೆ ಇಲ್ಲಿರುವ ಒಂದು ಮುಖ್ಯ ಅಂಶವೆಂದರೆ ಹತ್ತರಿಂದ ಹದಿಮೂರು ವರ್ಷದ ಮಕ್ಕಳು ಅಪರಾಧ ಎಸಗಿದರೂ ಅದು ಕಾನೂನಿನ ಹಿಡಿತಕ್ಕೆ ಬರುವುದು ಆ ಮಕ್ಕಳಿಗೆ ತಾವು ಮಾಡುತ್ತಿರುವುದು ತಪ್ಪು… ಇದೊಂದು ಅಪರಾಧ ಎನ್ನುವುದರ ಸಂಪೂರ್ಣ ಅರಿವಿತ್ತು ಎನ್ನುವುದನ್ನು ರುಜುವಾತು ಮಾಡಿ ತೋರಿಸಬೇಕು. ಹೀಗೆ ಸಾಬೀತು ಮಾಡುವುದರಲ್ಲೇ ಅನೇಕ ನ್ಯೂನತೆಗಳಿವೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಹೇಳುತ್ತಾರೆ.

ಮತ್ತೊಂದು ಮುಖ್ಯವಾದ ಸಂಗತಿ ಎಂದರೆ ಈ ಅಪರಾಧ ಎಸಗುವ ಮಕ್ಕಳ ಸಂಖ್ಯೆ, ಅಂದರೆ ಹದಿನೇಳು ವರ್ಷದೊಳಗಿನವರು, ರಾಜ್ಯದಿಂದ ರಾಜ್ಯಕ್ಕೆ ಬೇರೆಬೇರೆ ಇದೆ. ಹೋದ ವರ್ಷ ೨೦೨೩ರಲ್ಲಿ ರಾಣಿರಾಜ್ಯದಲ್ಲಿ ಯೂತ್ ಕ್ರೈಂ ಒಂದು ತೀವ್ರ ಸಮಸ್ಯೆಯಾಗಿದೆ ಎಂದು ವಾದಿಸಿ, ರಾಜ್ಯ ಸರಕಾರವು ಹಲವಾರು ಕ್ರಮಗಳನ್ನು ಜಾರಿಗೆ ತಂದು ಅವು ಬಹಳಷ್ಟು ಟೀಕೆಗೆ ಒಳಗಾದವು. ಮುಖ್ಯವಾಗಿ ಮಾನವ ಮತ್ತು ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ಅನೇಕರು ಟೀಕಿಸಿ ‘ಮಕ್ಕಳ ಅಪರಾಧ ಜವಾಬ್ದಾರಿ ವಯಸ್ಸನ್ನು ಏರಿಸಿ’ ಎನ್ನುವ ಆಂದೋಲನವನ್ನು ಆರಂಭಿಸಿ ಅದು ಇನ್ನೂ ನಡೆಯುತ್ತಿದ್ದು, ರಾಜ್ಯ ಸರಕಾರದ ಮೇಲೆ ಒತ್ತಡ ತರಲಾಗಿದೆ. ವಯಸ್ಸನ್ನು ಹತ್ತರಿಂದ ಹದಿನಾಲ್ಕಕ್ಕೆ ಏರಿಸಬೇಕು ಎನ್ನುವ ದನಿಗೆ ಬೆಂಬಲವಿದೆ.

ಸಣ್ಣಪುಟ್ಟ ಅಪರಾಧಗಳನ್ನು ಮಾಡುವ ಶಾಲಾ ವಯಸ್ಸಿನ ಮಕ್ಕಳನ್ನು ಕಾನೂನು ಕ್ರಮಕ್ಕೆ ಒಳಪಡಿಸಿದರೆ ಅವರ ಮಾನಸಿಕ ಆರೋಗ್ಯಕ್ಕೆ ಕುತ್ತು, ಅವರ ಕುಟುಂಬದ ಸೌಖ್ಯವು ಹಾಳಾಗುತ್ತದೆ, ಮಕ್ಕಳ ಭವಿಷ್ಯವೂ ಹಾಳಾಗುತ್ತದೆ, ಇದರಿಂದ ಸಮಾಜಕ್ಕೂ ಒಳ್ಳೆಯದಾಗುವುದಿಲ್ಲ ಎನ್ನುವ ವಾದಗಳು ಕೇಳಿಬರುತ್ತಿವೆ. ಹಾಗಾದರೆ, ಮಕ್ಕಳಲ್ಲಿ ಹೆಚ್ಚುತ್ತಿರುವ ಅಪರಾಧ ನಡವಳಿಕೆಯನ್ನು ಹೇಗೆ ತಡೆ ಹಿಡಿಯುವುದು, ಯಾವ್ಯಾವ ಹೊಸ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಮಾತುಕತೆಗಳು ಕೂಡ ನಡೆಯುತ್ತಿವೆ. ಅವುಗಳ ಕುರಿತು ಮುಂದಿನ ಪತ್ರದಲ್ಲಿ ಬರೆಯುತ್ತೀನಿ.