ಭಾರತೀಯರಿಗೆ ಹೆಚ್ಚು ಕಾಟ ಕೊಡುವುದು ಇಲ್ಲಿನ ಹವಾಮಾನ. ತಂಪಿನ ರಾಜ್ಯಗಳಲ್ಲಿ ನೆಲೆಸುವವರಿಗೆ ಹೆಚ್ಚು ಹಿಂಸೆ. ಬೇಸಿಗೆಯಲ್ಲಿ ಬಿಸಿ ಹೆಚ್ಚಿದ್ದರೂ ತಾಳಬಹದು, ಆದರೆ ಚಳಿಗಾಲದಲ್ಲಿ ಅತೀ ಹೆಚ್ಚಿನ ಚಳಿ ಇರುತ್ತದೆ. ಕೆಲವು ರಾಜ್ಯಗಳಲ್ಲಿ ಹಿಮ ಸುರಿಯುತ್ತದೆ. ಮನೆಯಲ್ಲಿ, ಕಾರಿನಲ್ಲಿ, ಅಂಗಡಿಗಳಲ್ಲಿ, ಕಚೇರಿಗಳಲ್ಲಿ ಹೀಟರ್ ಇರುವುದರಿಂದ ಪರ್ವಾಗಿಲ್ಲ, ಆದರೆ ಹೊರಗಡೆ ಹೆಚ್ಚಿನ ಸಮಯ ಕಳೆಯುವುದು ಕಷ್ಟ. ಸುಮಾರು ಐದು ತಿಂಗಳು ಚಳಿ ಇರುತ್ತದೆ, ಚಳಿಗಾಲದಲ್ಲಿ ಬಹುತೇಕ ಹೊರಗಿನ ಕಾರ್ಯಕ್ರಮಗಳು ಇರುವುದಿಲ್ಲ.
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ”

ವಿಶ್ವದಾದ್ಯಂತ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವಲಸೆ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ. ವಲಸೆಯ ಹಿನ್ನೆಲೆಯು ವಯಸ್ಕರಲ್ಲಿ ದೀರ್ಘಕಾಲದ ನೋವು ಮತ್ತು ಅಶಕ್ತತೆಗೆ ಉಂಟುಮಾಡಬಹದು ಎಂದು ಸಂಶೋಧನೆಯೊಂದು ತೋರಿಸಿದೆ. ಮಕ್ಕಳು ಮತ್ತು ಹದಿಹರೆಯದವರಲ್ಲಿ ಈ ವಿಷಯದ ಸಂಶೋಧನೆಯು ಸಮರ್ಪಕ ಫಲಿತಾಂಶಗಳನ್ನು ನೀಡಿಲ್ಲ. ವಲಸೆ ಪ್ರಕ್ರಿಯೆಯು ಇದಕ್ಕೆ ಸಂಬಂಧಿಸಿದ ವಿವಿಧ ಮಾನಸಿಕ ಸಮಸ್ಯೆಗಳನ್ನು ಉಂಟುಮಾಡಬಹುದು. ದೇಶಬಿಡುವ ಆತಂಕ, ಇನ್ನೊಂದು ದೇಶಕ್ಕೆ ಹೊಂದಿಕೊಳ್ಳುವ ಅನಿವಾರ್ಯತೆ ಮತ್ತು ದುಗುಡ, ಬೇರೆ ದೇಶಗಳಲ್ಲಿ ಜೀವನದ ಅನಿಶ್ಚತೆ ಮುಂತಾದವು ಮನ, ದೇಹವನ್ನು ಕಾಡುವ ಸಾಧ್ಯತೆ ಇದೆ. ಆದರೆ ಅನಿವಾರ್ಯವಾಗಿ, ದಾರಿಗಾಣದೆ ದೇಶಬಿಡುವ ಜನರಿಗೆ ಮಾತ್ರ ಇದು ಹೆಚ್ಚು ಅನ್ವಯಿಸುತ್ತದೆ. ಸಂತೋಷದಿಂದ ದೇಶಬಿಡಲು ಸಿದ್ಧವಾಗಿರುವವರಿಗೆ, ದೇಶ ಬಿಟ್ಟಮೇಲೆ ಮುಂದೆ ಎಂದಾದರೂ ತಮ್ಮವರೊಡನೆ ಹೆಚ್ಚು ಸಮಯ ಕಳೆಯಲಾಗಲಿಲ್ಲ ಎಂಬ ಕೊರಗು ಉಂಟಾಗಬಹದು.

ಆದರೆ ಅಮೇರಿಕಾದಲ್ಲಿ ಜೀವನ ಅಷ್ಟು ದುಸ್ತರವೇನಲ್ಲ. ಇಲ್ಲಿ ಒಂದು ಕೆಲಸ ಸಿಕ್ಕಿದ ಮೇಲೆ ಒಳ್ಳೆಯ ಜೀವನ ನಡೆಸಬಹುದು. ಇಲ್ಲಿ ಪ್ರತಿಯೊಬ್ಬರ ಪ್ರಾಣಕ್ಕೂ ಮೌಲ್ಯವಿರುವುದರಿಂದ ಎಲ್ಲ ಸ್ತರದಲ್ಲಿ ಅದನ್ನು ಕಾಪಾಡಿಕೊಳ್ಳುವ ಅವಕಾಶವಿರುತ್ತದೆ. ಅದರಲ್ಲೂ ಮಕ್ಕಳನ್ನು ಜತನದಿಂದ ನೋಡಿಕೊಳ್ಳಲಾಗುತ್ತದೆ. (ಮಕ್ಕಳ ತುಂಬಿಕೊಂಡ ಶಾಲಾವಾಹನವೊಂದು ರಸ್ತೆಯಲ್ಲಿ ನಿಂತರೆ ಅದರ ಹಿಂದೆ ಮುಂದಿನ ಎಲ್ಲಾ ವಾಹನಗಳೂ ನಿಂತು, ಮಕ್ಕಳು ವಾಹನದಿಂದ ಇಳಿಯುವವರೆಗೆ ಅಥವಾ ಹತ್ತುವವರೆಗೆ ಕಾಯಬೇಕಾಗುತ್ತದೆ). ಬಹುತೇಕ ಅಮೇರಿಕಾದಲ್ಲಿ ಧೂಳಿನ ಕಾಟವಿಲ್ಲ, ವಿದ್ಯುತ್ತಿನ ಅಡಚಣೆಯಿಲ್ಲ, ನೀರಿಗೆ ಅಭಾವವಿಲ್ಲ, ಕಾರಿದ್ದರೆ ಸಂಚಾರಕ್ಕೆ ತೊಂದರೆಯಿಲ್ಲ. ನಗರದಲ್ಲಾದರೆ ಬಸ್ಸು ಮತ್ತು ಮೆಟ್ರೋ ರೈಲಿನಲ್ಲಿ ಓಡಾಡುವ ಸೌಲಭ್ಯವಿರುತ್ತದೆ. ದೂರ ಪ್ರಯಾಣಕ್ಕೆ ವಿಮಾನಗಳಿವೆ. ವಿಶಾಲ ದೇಶವಾದ್ದರಿಂದ ವಿಮಾನಗಳಲ್ಲಿ ಸಂಚರಿಸುವ ಅನಿವಾರ್ಯತೆ ಇದೆ. ಭಾರತದಲ್ಲಿ ಬಸ್ಸಿನಲ್ಲಿ ಓಡಾಡುವಷ್ಟೇ ಸಹಜವಾಗಿ ಇಲ್ಲಿ ವಿಮಾನದಲ್ಲಿ ಜನ ಓಡಾಡುತ್ತಾರೆ.

ಅಮೇರಿಕಾದಲ್ಲಿ ನಾವು ಸಂಪಾದನೆ ಮಾಡುವಷ್ಟೇ ಖರ್ಚು ಇರುತ್ತದೆ. ಇಲ್ಲಿ ಮೊದಲನೇ ದೊಡ್ಡ ಖರ್ಚು ಮನೆಯ ಬಾಡಿಗೆ ಅಥವಾ ಮನೆ ಸಾಲದ ಕಂತು. ಸಂಬಳ ಹೆಚ್ಚು ಹೆಚ್ಚು ಆದಷ್ಟೂ ದೊಡ್ಡ ದೊಡ್ಡ ಮನೆ ಕೊಳ್ಳುವುದರಿಂದ, ಸಂಪಾದನೆಗೆ ತಕ್ಕಂತೆ ಖರ್ಚು ಬೆಳೆಯುತ್ತದೆ. ಎರಡನೇ ದೊಡ್ಡ ಖರ್ಚು ಕಾರಿನ ಸಾಲ. ಇದೂ ಅಷ್ಟೇ ನಮ್ಮ ಸಂಪಾದನೆಗೆ ತಕ್ಕಂತೆ ತರಾವರಿ ಕಾರುಗಳನ್ನು ಕೊಳ್ಳಬಹದು. ಅಲ್ಲೇ ಇರುವ ಇನ್ನಿತರೆ ಭಾರತೀಯರ ಸಾಮಾಜಿಕ ಒತ್ತಡದಿಂದ ಬ್ರಾಂಡ್ ಕಾರುಗಳನ್ನು ಕೊಳ್ಳುವ ಅನಿವಾರ್ಯತೆ ಬೆಳೆದು, ವಾಹನ ಸಾಲದ ಕಂತೂ ಹೆಚ್ಚಾಗುತ್ತದೆ. ಇದರ ಜೊತೆ ಕಾರಿಗೆ ತಕ್ಕಂತೆ ವಾಹನ ವಿಮೆಯೂ ಬೆಳೆಯುತ್ತದೆ. ಒಂದು ಕಾಲದಲ್ಲಿ ಊಟದ ಖರ್ಚು ಅಷ್ಟೇನೂ ಹೆಚ್ಚಿರಲಿಲ್ಲ, ಅದರಲ್ಲೂ ಮನೆಯಲ್ಲಿ ಅಡುಗೆ ಮಾಡಿಕೊಳ್ಳುವವರಿಗೆ ಅದು ಖರ್ಚು ಎನಿಸುತ್ತಿರಲಿಲ್ಲ, ಕೋವಿಡ್ ನಂತರ ಬಹುತೇಕ ಎಲ್ಲಾ ಆಹಾರದ ಬೆಲೆಯೂ ಹೆಚ್ಚಾಗಿ ಈಗ ಅದು ಒಂದು ಖರ್ಚಿನ ಬಾಬತ್ತಿಗೆ ಸೇರಿಕೊಂಡಿದೆ. ಆದರೆ ಉತ್ತಮ ಗುಣಮಟ್ಟದ ಬಟ್ಟೆ ಕಡಿಮೆ ದರದಲ್ಲೂ ಸಿಗುವುದು ಒಂಚೂರು ನಿರಾಳ ಅನ್ನಿಸುತ್ತದೆ.

ಅಮೇರಿಕಾದ ಡಾಲರ್‌ಗೆ ಭಾರತದಲ್ಲಿ ಹೆಚ್ಚಿನ ವಿನಿಮಯ ದರ ಸಿಗುವುದರಿಂದ, ಅದು ಭಾರತಕ್ಕೆ ಬಂದಾಗ ಸುಮಾರು ಎಂಬತ್ತು ಪಟ್ಟು ಹೆಚ್ಚಾಗುತ್ತದೆ, ಇದರಿಂದ ಇನ್ನೂ ಮದುವೆಯಾಗದವರು, ಮಕ್ಕಳ ಖರ್ಚು ಇರದವರು, ಅಷ್ಟೇನು ಶ್ರೀಮಂತ ಜೀವನ ನಡೆಸದ ಭಾರತೀಯರು ತಮಗೆ ಸಿಗುವ ಅಮೇರಿಕಾದ ಹಣದಿಂದ ಭಾರತದಲ್ಲಿ ಜಮೀನು, ಮನೆ ಮುಂತಾಗಿ ಭಾರತದ ಸಾಮಾನ್ಯ ಜನರಿಗಿಂತ ಸ್ವಲ್ಪ ಸುಲಭವಾಗಿ ಕೊಳ್ಳಬಹುದು. ಅದೇ ಹಣದಿಂದ ಭಾರತಕ್ಕೆ ಬಂದಾಗ ತಮ್ಮವರಿಗಾಗಿ ಸುಲಭವಾಗಿ ವ್ಯಯಿಸಬಹದು, ಇದರಿಂದ ಸ್ವಲ್ಪ ತೃಪ್ತಿಯೂ, ತಮ್ಮವರ ನಡುವೆ ಗೌರವವೂ ಸಿಗುತ್ತದೆ. ಇದಲ್ಲದೆ ತಾವು ವಿಶೇಷ ಎಂಬ ಭಾವನೆಯನ್ನು ಮೂಡಿಸಬಹದು. ಅದು ಅಮೇರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾದಂತ ಶ್ರೀಮಂತ ದೇಶಗಳಲ್ಲಿ ಇದ್ದರೆ ಮಾತ್ರ. ಹಿಂದೆ ಅರಬ್ ದೇಶಗಳಿಗೂ ಇಂತಹ ಗೌರವದ ಭಾಗ್ಯ ಸಿಗುತ್ತಿತ್ತು, ಈಗಲೂ ಸಿಗುತ್ತಿರಬಹದು. ಇಂತಹ ಗೌರವ ಪಡೆದುಕೊಳ್ಳಲು ಭಾರತದ ಯುವಕ-ಯುವತಿಯರು ದೇಶ ತೊರೆಯಲು ಅಪೇಕ್ಷಿಸಿಸುತ್ತಾರೆ. ದೇಶದ ಇತರರಿಗಿಂತ ಉತ್ತಮ ಜೀವನ ನಡೆಸುವ ಉದ್ದೇಶದಿಂದ ಯಾವುದೋ ರೀತಿಯಲ್ಲಿ ಶ್ರೀಮಂತ ದೇಶಕ್ಕೆ ಹೊರಡಲು ಪ್ರಯತ್ನಿಸುತ್ತಾರೆ. ಜೀವನ ಮಟ್ಟ ಎತ್ತರಿಸಿಕೊಳ್ಳಲು ಹೊರದೇಶಕ್ಕೆ ಹೊರಡುವಾಗ ದೇಶ ಭಕ್ತಿ, ದೈವ ಭಕ್ತಿ, ಮನೆಯವರ ಪ್ರೀತಿ, ಪ್ರೇಮಗಳು ನಗಣ್ಯವಾಗುತ್ತವೆ. ಎಷ್ಟೋಸಲ ಅಗತ್ಯಕ್ಕೆ ಮನೆಯವರಿಗೆ ತಕ್ಷಣ ಹಣ ಕಳುಹಿಸಲು ಸಾಧ್ಯವಾಗುತ್ತದೆ. ಏಕೆಂದರೆ ಅಮೇರಿಕಾದ ಒಂದು ಸಾವಿರ ಡಾಲರ್‌ಗಳು ಭಾರತದಲ್ಲಿ ಸುಮಾರು ಎಂಬತ್ತು ಸಾವಿರ ರೂಪಾಯಿಗಳಾಗಿ ತಕ್ಷಣದ ತೊಂದರೆಗಳಿಂದ ಪಾರು ಮಾಡುತ್ತದೆ.

ಆದರೆ ಮದುವೆಯಾಗಿ, ಮಕ್ಕಳಾಗಿ ಸಂಸಾರದ ಖರ್ಚು ಹೆಚ್ಚಾದಾಗ, ಬೇರೆಯವರಂತೆ ಒಳ್ಳೆಯ ಮನೆಯಲ್ಲಿ, ಒಳ್ಳೆಯ ಕಾರಿನಲ್ಲಿ ಓಡಾಡಲು ಪ್ರಾರಂಭವಾದಮೇಲೆ ಹೆಚ್ಚು ಹಣ ಉಳಿಸಲು ಸಾಧ್ಯವಾಗದೇ ಹೋಗಬಹದು, ಆದ್ದರಿಂದಲೇ ಬಹುತೇಕ ಗಂಡ-ಹೆಂಡತಿ ಇಬ್ಬರೂ ಕೆಲಸಮಾಡಬೇಕಾಗುತ್ತದೆ. ಹೆಚ್ಚು ಹಣ ಉಳಿಸಲಾಗದಿದ್ದರೂ ಉತ್ತಮ ಗುಣ ಮಟ್ಟದ ಜೀವನವಂತೂ ನಡೆಸಬಹದು.

ಭಾರತೀಯರಿಗೆ ಹೆಚ್ಚು ಕಾಟ ಕೊಡುವುದು ಇಲ್ಲಿನ ಹವಾಮಾನ. ತಂಪಿನ ರಾಜ್ಯಗಳಲ್ಲಿ ನೆಲೆಸುವವರಿಗೆ ಹೆಚ್ಚು ಹಿಂಸೆ. ಬೇಸಿಗೆಯಲ್ಲಿ ಬಿಸಿ ಹೆಚ್ಚಿದ್ದರೂ ತಾಳಬಹದು, ಆದರೆ ಚಳಿಗಾಲದಲ್ಲಿ ಅತೀ ಹೆಚ್ಚಿನ ಚಳಿ ಇರುತ್ತದೆ. ಕೆಲವು ರಾಜ್ಯಗಳಲ್ಲಿ ಹಿಮ ಸುರಿಯುತ್ತದೆ. ಮನೆಯಲ್ಲಿ, ಕಾರಿನಲ್ಲಿ, ಅಂಗಡಿಗಳಲ್ಲಿ, ಕಚೇರಿಗಳಲ್ಲಿ ಹೀಟರ್ ಇರುವುದರಿಂದ ಪರ್ವಾಗಿಲ್ಲ, ಆದರೆ ಹೊರಗಡೆ ಹೆಚ್ಚಿನ ಸಮಯ ಕಳೆಯುವುದು ಕಷ್ಟ. ಸುಮಾರು ಐದು ತಿಂಗಳು ಚಳಿ ಇರುತ್ತದೆ, ಚಳಿಗಾಲದಲ್ಲಿ ಬಹುತೇಕ ಹೊರಗಿನ ಕಾರ್ಯಕ್ರಮಗಳು ಇರುವುದಿಲ್ಲ. ಚರ್ಮಕ್ಕೆ ಸೂರ್ಯನ ಬಿಸಿ ಬೀಳುವುದಿಲ್ಲ, ಯಾವುದೇ ಪ್ರವಾಸ ಮಾಡಲಾಗುವುದಿಲ್ಲ. ಅನೇಕ ಅಮೇರಿಕಾದ ಜನ ಸ್ಕೀಯಿಂಗ್ (ಹಿಮದಲ್ಲಿ ಜಾರುವ ಆಟ) ಅಂತಹ ಆಟವಾಡಿ ಸ್ವಲ್ಪ ದೇಹ ಮನಸ್ಸನ್ನು ಉಲ್ಲಸಿತವಾಗಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ, ಇಂತಹ ಆಟವಾಡುವ ಅಭ್ಯಾಸವಿರದ ಭಾರತೀಯರು ಮನೆಯಲ್ಲಿ, ಸ್ನೇಹಿತರೊಡನೆ ಜೊತೆಗೂಡಿ ಸಮಯ ಕಳೆಯುತ್ತಾರೆ. ವಸಂತ ಋತು ಪ್ರಾರಂಭವವಾದಮೇಲೆ ಇದ್ದಕಿದ್ದಂತೆ ಎಲ್ಲರೂ ತಿಳಿದೆದ್ದು ಮತ್ತೆ ಹೊರಗಿನ ಕಾರ್ಯಕ್ರಮಗಲ್ಲಿ ತೊಡಗಿಕೊಳ್ಳುತ್ತಾರೆ. ಬೇಸಿಗೆಯಲ್ಲಿ ಪ್ರವಾಸಕ್ಕೆ ಹೊರಡುತ್ತಾರೆ. ಇಲ್ಲಿ ಮಕ್ಕಳು, ವೃದ್ಧರು, ಅಂಗವಿಕಲರಿಗೂ ಸುಲಭವಾಗಿ ಪ್ರವಾಸ ಮಾಡಲು ಎಲ್ಲರಿಗೂ ಸೌಲಭ್ಯವಿರುವುದರಿಂದ ಯಾರಿಗೂ ಓಡಾಡಲು ತೊಂದರೆ, ಹಿಂಸೆ ಆಗುವುದಿಲ್ಲ.

ಅಮೇರಿಕಾದಲ್ಲಿ ಅನೇಕ ಸುಂದರತಾಣಗಳು (ಅಮೇರಿಕಾದ ಸುಂದರ ತಾಣಗಳ ಬಗ್ಗೆ ಮುಂದಿನ ಬರಹಗಳಲ್ಲಿ ತಿಳಿದುಕೊಳ್ಳೋಣ) ಇರುವುದರಿಂದ ಎಷ್ಟು ನೋಡಿದರೂ ಮುಗಿಯದಷ್ಟು ಪ್ರದೇಶಗಳಿವೆ, ಕೆಲವು ತಾಣಗಳಿಗೆ ಮತ್ತೆ ಮತ್ತೆ ಭೇಟಿ ನೀಡಬಹದು. ಆರು ತಿಂಗಳು ದೇಹ, ಮನಸು ಉಲ್ಲಾಸ, ಉತ್ಸಾಹದಿಂದಿರುತ್ತವೆ. ಮಕ್ಕಳಿಗೆ ರಜೆ ಇರುವುದರಿಂದ ತುಂಬಾ ಜನ ಭಾರತಕ್ಕೆ ಬರುತ್ತಾರೆ, ವರ್ಷದ ಒಂದು ತಿಂಗಳಾದರೂ ಭಾರತದಲ್ಲಿ ಉಳಿಯುವುದು ಖುಷಿಯ ಸಂಗತಿ.