ನಾವು ಮುಖ್ಯವಾಗಿ ಯೂತ್ ಕ್ರೈಂ ವಿಷಯವನ್ನು ಅಪರಾಧ-ಕೇಂದ್ರಿತ ನಿಲುವಿನಿಂದ ನೋಡುವ ನಮ್ಮ ದೃಷ್ಟಿಕೋನವನ್ನು ಬದಲಿಸಿಕೊಂಡು ಅದನ್ನು ಪರಿಹಾರ-ಕೇಂದ್ರಿತ ದೃಷ್ಟಿಯಿಂದ ನೋಡಬೇಕು. ಆಗ ನಮ್ಮ ಗಮನ ಸಮಸ್ಯೆಗಿಂತಲೂ ಹೆಚ್ಚು ಒಟ್ಟಾರೆ ಸಮಗ್ರ ಪರಿಸ್ಥಿತಿಯನ್ನು ನೋಡುವ, ಅದನ್ನು ವಿಶ್ಲೇಷಿಸುವ ಸುಧಾರಣಾ ಹಾದಿಯತ್ತ ಹೊರಳುತ್ತದೆ. ನಾವು ಅಪರಾಧ ಎಸಗುವ ಯುವಜನರ ಸಾಮರ್ಥ್ಯಗಳನ್ನು ಗಮನಿಸಿ ಅವನ್ನು ಬೆಳೆಸುವತ್ತ ಗಮನ ಕೊಡಬೇಕು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”ದಲ್ಲಿ ಯುವಜನ ಅಪರಾಧಗಳಲ್ಲಿ ಭಾಗಿಯಾಗುತ್ತಿರುವುದರ ಕುರಿತ ಬರಹ ನಿಮ್ಮ ಓದಿಗೆ
ಪ್ರಿಯ ಓದುಗರೆ,
ಹೋದ ವಾರ ಆಸ್ಟ್ರೇಲಿಯಾದಲ್ಲಿ ಬಹು ಚರ್ಚಿತವಾಗುತ್ತಿರುವ ‘ಯೂತ್ ಕ್ರೈಂ’-ಯುವಜನ ಅಪರಾಧದ ಬಗ್ಗೆ ಸ್ವಲ್ಪ ಬರೆದಿದ್ದೆ. ಅಪರಾಧ ಎಸಗುವ ಮಕ್ಕಳು ಮತ್ತು ಯುವಜನರು ಎಷ್ಟೋ ಬಾರಿ ತಮಾಷೆಗಾಗಿ ಹಾಗೆ ಮಾಡುತ್ತಾರೆ, ತಮ್ಮ ಸ್ನೇಹಿತರನ್ನು ಅನುಕರಿಸುತ್ತಾರೆ, ಅಥವಾ ‘trendy, cool’ ಎಂದು ಹೊಗಳಿಸಿಕೊಳ್ಳಲು, ಸ್ನೇಹಿತರ ಗಮನ ಸೆಳೆಯಲೂ ಸಣ್ಣಪುಟ್ಟ ಅಪರಾಧಗಳನ್ನು ಮಾಡಬಹುದು. ಅನೇಕ ಬಾರಿ ಸಾರ್ವಜನಿಕ ಕಟ್ಟಡಗಳ ಗೋಡೆಗಳ ಮೇಲೆ ಗ್ರಾಫಿಟಿ ಆರ್ಟ್ ರಚಿಸುವುದು, ಕಾರ್ ಕಳ್ಳತನ, ಕಾರುಗಳಿಗೆ ಹಾನಿ ಮಾಡುವುದು, ಕಳ್ಳತನ ಮುಂತಾದವು ಸಾರ್ವಜನಿಕರ ಕೋಪಕ್ಕೆ ತುತ್ತಾಗುತ್ತವೆ. ಆಸ್ಟ್ರೇಲಿಯಾ ಸಮಾಜದಲ್ಲಿ ಯುವಜನತೆಯ ಬಗ್ಗೆ ಇರುವ ನಂಬಿಕೆ, ವಿಶ್ವಾಸ ಕಡಿಮೆ.
ಹದಿನೇಳು ವರ್ಷದೊಳಗಿನ ಮಕ್ಕಳು ಮತ್ತು ೧೮-೨೫ ವರ್ಷ ಗುಂಪಿಗೆ ಸೇರುವ ಯುವಜನತೆಯ ಅಪರಾಧ ನಡವಳಿಕೆಯನ್ನು ಕುರಿತು ಆಸ್ಟ್ರೇಲಿಯನ್ ಸಮಾಜವು ಬಹಳ ಮಾತನಾಡುತ್ತಿದೆ. ಸರಕಾರಗಳು, ಸಾರ್ವಜನಿಕರು, ಕಾನೂನು ತಜ್ಞರು ಮತ್ತು ಪಾಲಕರು, ಚಿಂತಕರು ಎಲ್ಲರೂ ತಮ್ಮತಮ್ಮ ಆಲೋಚನೆಗಳನ್ನು ಹೇಳಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಹಲವಾರು ಪ್ರಶ್ನೆಗಳು ಮುಖ್ಯ ನೆಲೆಗೆ ಬಂದಿವೆ. ನಿಜವಾಗಿಯೂ ಮಕ್ಕಳಲ್ಲಿ ಮತ್ತು ಯುವಜನರಲ್ಲಿ ಅಪರಾಧ ಪ್ರವೃತ್ತಿ ಹೆಚ್ಚಾಗಿದೆಯೆ? ಯೂತ್ ಕ್ರೈಂ ತಡೆಗಟ್ಟಲು ಹೊಸ ಕ್ರಮಗಳನ್ನು ತೆಗೆದುಕೊಳ್ಳಬೇಕೆ? ಇದರ ಬಗ್ಗೆ ರಾಜ್ಯ ಸರಕಾರಗಳು ಮತ್ತು ಕೇಂದ್ರ ಸರಕಾರ ಏನು ಹೇಳುತ್ತಿದೆ? ಸಮಾಜದ ನಿಲುವು ಏನು?
ಸದ್ಯಕ್ಕೆ ಆಸ್ಟ್ರೇಲಿಯಾದಲ್ಲಿರುವ ಕಾನೂನಿನಂತೆ ಹತ್ತು ವರ್ಷ ಮತ್ತು ಮೇಲ್ಪಟ್ಟ ವಯಸ್ಸಿನ ಮಕ್ಕಳು ಅಪರಾಧ ಎಸಗಿದರೆ ಅವರನ್ನು ವಿಚಾರಣೆಗೆ ಒಳಪಡಿಸಬಹುದು. ಆದರೆ ನಿಧಾನವಾಗಿ ಈ ವಯಸ್ಸಿನ ಬಗ್ಗೆ ಸುಧಾರಣೆಗಳು ಬರುತ್ತಿವೆ. ಉದಾಹರಣೆಗೆ, ಆಸ್ಟ್ರೇಲಿಯಾದ ನೆತ್ತಿಯಲ್ಲಿರುವ Northern Territoryಯಲ್ಲಿ ಈ ರೀತಿ ಮಾತುಕತೆ ನಡೆದು ಅಲ್ಲೀಗ ಮಕ್ಕಳ ಅಪರಾಧ ವಿಚಾರಣೆ ವಯಸ್ಸನ್ನು ಹತ್ತರಿಂದ ಹನ್ನೆರಡು ವರ್ಷಕ್ಕೆ ಏರಿಸಲಾಗಿದೆ. ಒಂದು ಮಾಹಿತಿಯ ಪ್ರಕಾರ ಈ ವಿವಿಧ ವಯಸ್ಸಿನ ವರ್ಗೀಕರಣವನ್ನು ದೇಶದ ಒಟ್ಟೂ ಜನಸಂಖ್ಯೆ ಪ್ರಮಾಣ, ರಾಜ್ಯಗಳಲ್ಲಿರುವ ಜನಸಂಖ್ಯೆ ಪ್ರಮಾಣಗಳು ಪ್ರಭಾವಿಸುತ್ತವೆ. ರಾಜ್ಯಗಳಲ್ಲಿರುವ ಬಿಳಿ ಆಸ್ಟ್ರೇಲಿಯನ್ನರ ಸಂಖ್ಯೆ ಮತ್ತು ಮೂಲನಿವಾಸಿಗಳ ಸಂಖ್ಯೆ, ಅವರ ನಡುವಿನ ಆಯಸ್ಸಿನಲ್ಲಿರುವ ಅಂತರ ಕೂಡ ಪ್ರಭಾವ ಬೀರುತ್ತವೆ.
ಮತ್ತೊಂದು ಉದಾಹರಣೆಗೆ ನೋಡಿ, ನಮ್ಮ ರಾಣಿರಾಜ್ಯವನ್ನೇ ತೆಗೆದುಕೊಳ್ಳೋಣ. ಕ್ವೀನ್ಸ್ಲ್ಯಾಂಡ್ ರಾಜ್ಯದಲ್ಲಿ ಯೂತ್ ಕ್ರೈಂ ಸಮಸ್ಯೆಯನ್ನು ಬಗೆಹರಿಸಲು ಯೂತ್ ಜಸ್ಟಿಸ್ ಸಮಿತಿ ಒಂದನ್ನು ರಚಿಸಲಾಗಿತ್ತು. ಮಾತುಕತೆ ಶುರುವಾಗಿ ಬಿಸಿಯೇರಿ ಸದಸ್ಯರಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಾಗಿ ಸಮಿತಿಯನ್ನೇ ವಿಸರ್ಜಿಸಲಾಯ್ತು. ಸದ್ಯಕ್ಕೆ ಎಲ್ಲರ ಗಮನವಿರುವುದು ‘ವಯಸ್ಸನ್ನು ಹೆಚ್ಚಿಸಿ’ ಎನ್ನುವ ಆಂದೋಲನದ ಬಗ್ಗೆ. ಇದು ಸಾರ್ವಜನಿಕ ಆಂದೋಲನವಲ್ಲ. ಬದಲಿಗೆ, ಹಲವಾರು ವರ್ಷಗಳಿಂದ ಅನೇಕ ಸಮಾಜ ಕಾರ್ಯಕರ್ತರು, ಮಾನವ ಹಕ್ಕು ಮತ್ತು ಸಾಮಾಜಿಕ ನ್ಯಾಯ ಕಾರ್ಯಕರ್ತರು ಒತ್ತಾಯ ತಂದು ಕ್ವೀನ್ಸ್‌ಲ್ಯಾಂಡ್ ರಾಜ್ಯ ಸರಕಾರವು ಅಪರಾಧ ಮಾಡುವ ಮಕ್ಕಳ ನಡವಳಿಕೆಯನ್ನು ಕಾನೂನಿನ ಕ್ರಮದಡಿಯಲ್ಲಿ ವಿಚಾರಣೆ ನಡೆಸುವ ಕುರಿತು ಆಲೋಚಿಸಿತು. ಸದ್ಯಕ್ಕೆ ಈ ರೀತಿ ಹತ್ತು ವರ್ಷ ವಯಸ್ಸಿನ ಮಕ್ಕಳನ್ನು ವಿಚಾರಣೆಗೆ ಒಳಪಡಿಸಬಹುದು. ಇದು ಬಾಲ್ಯದ ಬಹಳ ಕಿರಿ ವಯಸ್ಸು, ಈ ವಯಸ್ಸಿನಲ್ಲಿ ಮಕ್ಕಳು ನ್ಯಾಯವಿಚಾರಣೆ ಪ್ರಕ್ರಿಯೆಗೆ ಒಳಗಾದರೆ ಅದರ ಪರಿಣಾಮ ಅವರ ಜೀವನಪೂರ್ತಿ ಉಳಿಯುತ್ತದೆ. ಇದರಿಂದ ಹಾನಿಯೇ ಹೆಚ್ಚು ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರಕಾರವು ಅಂತಹ ಅಪರಾಧ ವಿಚಾರಣೆಯ ವಯಸ್ಸನ್ನು ಹೆಚ್ಚಿಸಬೇಕೇ ಎಂದು ರಾಜ್ಯದ ಜನತೆಯನ್ನು ಕೇಳಿದೆ. ಹೌದು, ಹತ್ತು ವರ್ಷ ವಯಸ್ಸು ತಪ್ಪು, ಅದನ್ನು ಹದಿನಾಲ್ಕು ವರ್ಷಕ್ಕೆ ಹೆಚ್ಚಿಸಿ ಎಂದು ಅನೇಕರು ಹೇಳಿದ್ದಾರೆ.
ಮಕ್ಕಳು ಮತ್ತು ಯುವಜನ ಅಪರಾಧ ಪ್ರವೃತ್ತಿಯನ್ನು ಹೇಗೆ ಸುಧಾರಿಸುವುದು, ಇದರ ಬಗ್ಗೆ ಇರುವ ದೃಷ್ಟಿಕೋನಗಳು ಹೇಗಿವೆ, ಎಂದು ಕೇಳುತ್ತಾ ನಾನು criminalogist ಒಬ್ಬರನ್ನು ಮಾತನಾಡಿಸಿದೆ. ಅವರು ಹಂಚಿಕೊಂಡ ದೃಷ್ಟಿಕೋನಗಳು ಚೆನ್ನಿವೆ ಅನಿಸಿತು. ಕಳೆದ ಒಂದು ದಶಕದ ಅಂಕಿಅಂಶಗಳನ್ನು ನೋಡಿದರೆ, ಆಸ್ಟ್ರೇಲಿಯಾದಲ್ಲಿ ಯೂತ್ ಕ್ರೈಂ ಕಡಿಮೆಯಾಗಿದೆ. ಬಹಳ ಕಡಿಮೆ ಸಂಖ್ಯೆಯ (ಬೆರಳೆಣಿಕೆಯಷ್ಟು) ಮಕ್ಕಳು ಮತ್ತು ಯುವಜನರು ಅತೀ ಗಂಭೀರದ ಅಪರಾಧಗಳನ್ನು (ಕೊಲೆ, ಕೊಲೆಯ ಪ್ರಯತ್ನ, ಚಾಕುಚೂರಿ ತೋರಿಸಿ ಬೆದರಿಸುವುದು ಮತ್ತು ಸುಲಿಗೆ, ಇತ್ಯಾದಿ) ಮಾಡಿದ್ದಾರೆ. ಆದರೂ, ಕೇವಲ ಇಪ್ಪತ್ತಾರು ಮಿಲಿಯನ್ ಜನರಿರುವ ಮಧ್ಯಮ ವರ್ಗ ಜನರೇ ಹೆಚ್ಚಿರುವ ಈ ದೇಶದಲ್ಲಿ ಅವು ವಿಪರೀತ ಆತಂಕ, ಭಯ ತರುವ ವಿಷಯವಾಗುತ್ತದೆ. ಹಾಗೆ ‘moral panic’ – ಆತಂಕ, ಭಯ ಹುಟ್ಟಿಸುವುದರಲ್ಲಿ ಮಾಧ್ಯಮಗಳ ಪಾತ್ರ ಗಮನೀಯ. ನಿಜವಾಗಿಯೂ ನೋಡಿದರೆ ಮಕ್ಕಳು ಮತ್ತು ಯುವಜನರು ಅತೀ ಗಂಭೀರ ಅಪರಾಧಗಳನ್ನು ಮಾಡುವವರಲ್ಲ ಅಥವಾ ಮಾಡಿದರೂ ಅದು ಬಹಳ ಅಪರೂಪ.
ನಾವು ಮುಖ್ಯವಾಗಿ ಯೂತ್ ಕ್ರೈಂ ವಿಷಯವನ್ನು ಅಪರಾಧ-ಕೇಂದ್ರಿತ ನಿಲುವಿನಿಂದ ನೋಡುವ ನಮ್ಮ ದೃಷ್ಟಿಕೋನವನ್ನು ಬದಲಿಸಿಕೊಂಡು ಅದನ್ನು ಪರಿಹಾರ-ಕೇಂದ್ರಿತ ದೃಷ್ಟಿಯಿಂದ ನೋಡಬೇಕು. ಆಗ ನಮ್ಮ ಗಮನ ಸಮಸ್ಯೆಗಿಂತಲೂ ಹೆಚ್ಚು ಒಟ್ಟಾರೆ ಸಮಗ್ರ ಪರಿಸ್ಥಿತಿಯನ್ನು ನೋಡುವ, ಅದನ್ನು ವಿಶ್ಲೇಷಿಸುವ ಸುಧಾರಣಾ ಹಾದಿಯತ್ತ ಹೊರಳುತ್ತದೆ. ನಾವು ಅಪರಾಧ ಎಸಗುವ ಯುವಜನರ ಸಾಮರ್ಥ್ಯಗಳನ್ನು ಗಮನಿಸಿ ಅವನ್ನು ಬೆಳೆಸುವತ್ತ ಗಮನ ಕೊಡಬೇಕು.
ಅಪರಾಧಿಗಳ ಒಟ್ಟಾರೆ ಜೀವನಾನುಭವವನ್ನು, ಅವರ ಕುಟುಂಬದ ಪರಿಸ್ಥಿತಿಯನ್ನು ವಿಶ್ಲೇಷಿಸಿ ಅಗತ್ಯವಿದ್ದಲ್ಲಿ trauma-informed ಪದ್ಧತಿಯನ್ನು ಬಳಸಿ ಸೂಕ್ತವಾದ ಕ್ಷಿಪ್ರ ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು. ಈ ಹಂತಗಳಲ್ಲಿ ಕುಟುಂಬಗಳನ್ನು, ಯುವಜನರು ಮತ್ತು ಮಕ್ಕಳನ್ನು ಕೂಡ ಸಮಾಲೋಚನೆಗೆ ತೆಗೆದುಕೊಂಡು, ಅವರ ಸಲಹೆಗಳನ್ನೂ ಕೇಳಬೇಕು. ಇದೊಂದು ಸಾಂಘಿಕ ಸಮುದಾಯ ಪ್ರಕ್ರಿಯೆಯಾಗಬೇಕು. ಹೇಗೆಂದರೆ ಅಪರಾಧ ಮಾಡಿರುವ ಒಬ್ಬ ೧೧ ವರ್ಷದ ಹುಡುಗನ ಕುಟುಂಬದಲ್ಲಿ ನಾನಾ ರೀತಿ ಸಮಸ್ಯೆಗಳಿರಬಹುದು. ಉದಾಹರಣೆಗೆ, ಮದ್ಯಸೇವನೆ ಅವಲಂಬನೆ, ನಿರುದ್ಯೋಗ, ಮಾನಸಿಕ ಅನಾರೋಗ್ಯ, ಕೌಟುಂಬಿಕ ಅಪರಾಧೀ ಪ್ರವೃತ್ತಿ ಹಿನ್ನೆಲೆ, ಕೌಟುಂಬಿಕ ಹಿಂಸೆ, ಶಾಲೆ ಬಿಟ್ಟಿರುವುದು, ಶಾಲಾಭ್ಯಾಸದಲ್ಲಿ ನಿರಾಸಕ್ತಿ, ಅಪೌಷ್ಟಿಕತೆ ಮತ್ತು ಅನಾರೋಗ್ಯ ಸಮಸ್ಯೆ, ಮನೆಯಿಂದ ಓಡಿಹೋಗುವುದು, ಮಾದಕವಸ್ತು ಸೇವನೆ …
ಆಸ್ಟ್ರೇಲಿಯಾದಲ್ಲಿ ಮಕ್ಕಳನ್ನು ಮತ್ತು ಯುವಜನರನ್ನು ಅನೇಕ ಸಮಸ್ಯೆಗಳು ಕಾಡುತ್ತಿವೆ. ಮಾಧ್ಯಮಗಳು ಅಥವಾ ಸರಕಾರಗಳು ಹೇಳಿಕೊಳ್ಳುವಂತೆ ಯೂತ್ ಕ್ರೈಂ ಪರಿಸ್ಥಿತಿ ತೀವ್ರ ಗಂಭೀರವಾಗಿಲ್ಲ ಅಥವಾ ಮಿತಿಮೀರುತ್ತಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ, ಅದು ಕಡಿಮೆಯಾಗಿದೆ. ಸಮಾಜವು, ಸರಕಾರಗಳು ನಮ್ಮ ಯುವಜನತೆಯ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಸಮಗ್ರ ಸಹಾಯ, ಆಸರೆ, ಬೆಂಬಲ ಕ್ರಮಗಳನ್ನು ರೂಪಿಸುವತ್ತ ಗಮನ ಕೊಟ್ಟು ಅವರ ಸಾಮರ್ಥ್ಯಗಳನ್ನು ಪೋಷಿಸಲು ಮತ್ತಷ್ಟು ಪ್ರಯತ್ನಿಸಬೇಕು.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.