ನಾಟಕ !  ಹಾಗೆಂದರೇನು? ಎಂದು ನಮಗೆ ನಾವು ಕೇಳಿಕೊಳ್ಳುವದರೊಂದಿಗೆ ಆರಂಭವಾಗುವ ಚಿಂತನೆ, ಅದರ ಸಂಘಟನೆ, ತಾಂತ್ರಿಕತೆ, ವ್ಯವಹಾರ, ಪ್ರೇಕ್ಷಕ ವರ್ಗದ ಅನಿಸಿಕೆ ಇತ್ಯಾದಿ ಹಲವು ಆಯಾಮಗಳಲ್ಲಿ ಇಂದು ಮುಂದುವರಿಯಬೇಕಿದೆ. ಸತ್ಯವನ್ನು ಸರಳಮಾರ್ಗದಲ್ಲಿ ಸಾಧಿಸಹೊರಟ ಗಾಂಧಿ ಚಿಂತನೆಯ ಮಾರ್ಗ ನಮ್ಮ ಮರುಚಿಂತನೆಗೆ ಅಗತ್ಯ ಹಾದಿಗಳನ್ನು ಕಾಣಿಸಬಲ್ಲವು ಎಂಬ ನಂಬಿಕೆ ನಮ್ಮದು. ಸತ್ಯವೆಂದರೆ ಅದು ಭೋಳೇತನವಲ್ಲ ಎಂಬುದನ್ನುಗುರುತಿಸುವ ರಂಗನಿರ್ದೇಶಕ ಡಾ. ಶ್ರೀಪಾದ ಭಟ್, ಈ ಕೆಲವು ಸಂಗತಿಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. 

 

ಯಾವುದೇ ಬಗೆಯ ಚಿಂತನೆಯಿರಲಿ ಅದು ನಾವಿರುವ ವರ್ತಮಾನವನ್ನು ನಮಗೆ ನಿರ್ವಚಿಸಿಕೊಳ್ಳೋಕೆ ಸಾಲುತ್ತಿಲ್ಲ, ಅಸಮಗ್ರ ಅನಿಸಿದರೆ ಅದರ ಕುರಿತ ಮರುಚಿಂತನೆ ಅವಶ್ಯಕವಾಗುತ್ತದೆ. ಕಾಲದ ಅಗತ್ಯಕ್ಕೆ ತಕ್ಕಂತೆ ಅವು ನಡೆಯುತ್ತಲೇ ಬಂದಿವೆ. ಸದ್ಯದ ಕಾಲವೂ ಹಾಗೆ. ಬದುಕನ್ನು ಹೊಸ ಹೊಸ ವ್ಯಾಖ್ಯಾನಕ್ಕೆ ಈಡು ಮಾಡಲು, ಹೊಸ ದೃಷ್ಟಿಕೋನದಿಂದ ನೋಡಲು ಹೇಳಿಕೊಟ್ಟ ರಂಗಭೂಮಿಯಲ್ಲಿಯ ನಮ್ಮ ನಡೆಯ ಕುರಿತ ಪುನರ್  ಮಥನವೂ ಈ ಕಾಲದ ಅಗತ್ಯವೇ ಆಗಿದೆ. ಕೊರೋನಾ ಕಾಲಘಟ್ಟದಲ್ಲಿ ಇದ್ದಕ್ಕಿದ್ದಂತೆ ರಂಗಭೂಮಿಯಲ್ಲಿ ಚಟುವಟಿಕೆಗಳೇ ನಿಂತಾಗ ಮತ್ತು ಅದು ನಿಂತಿತು ಎಂದು ರಂಗಕರ್ಮಿಗಳನ್ನು ಬಿಟ್ಟು ಬೇರೆ ಯಾವುದೇ ಸಾಮಾಜಿಕ ಘಟಕಗಳೂ ಚಿಂತಿಸದೇ ಹೋದ ಈ ಹೊತ್ತಿನಲ್ಲಾದರೂ ನಮ್ಮ ಕುರಿತು ನಾವು ‘ಸ್ವಾಭಿಮುಖಿ ಚಿಂತನೆ’ಯನ್ನು ನಡೆಸಿಕೊಳ್ಳಲೇ ಬೇಕಿದೆ.

ನಿಜ, ನಾವು ಲೋಕದ ಕತೆಯನ್ನೇ ಹೇಳುತ್ತಿದ್ದೆವು, ಲೋಕ ಹೇಗಿದೆ ಎಂದು ಮಾತ್ರವಲ್ಲ ಹೇಗಿರಬೇಕು ಎಂಬ ಕನಸನ್ನೂ ರಂಗಮುಖೇನ ಮಂಡಿಸಿದ್ದೆವು ಎಲ್ಲ ಸರಿ. ಆದರೆ ಇದುವರೆಗೆ ನಾವು ಯಾರೊಂದಿಗೆ ಈ ಕುರಿತು ಮಾತನಾಡಿದೆವು, ಹೇಗೆ ಮಾತನಾಡಿದೆವು ಎಂಬುದನ್ನು ಚಿಂತಿಸಿದರೆ ನಮ್ಮ ದೋಷ ಅರಿವಾಗದಿರದು. ನಾಟಕ ಹಾಗೆಂದರೇನು? ಎಂದು ನಮಗೆ ನಾವು ಕೇಳಿಕೊಳ್ಳುವದರೊಂದಿಗೆ ಆರಂಭವಾಗುವ ಈ ಚಿಂತನೆ, ಅದರ ಸಂಘಟನೆ, ತಾಂತ್ರಿಕತೆ, ವ್ಯವಹಾರ, ಪ್ರೇಕ್ಷಕ ವರ್ಗದ ಅನಿಸಿಕೆ ಇತ್ಯಾದಿ ಹಲವು ಆಯಾಮಗಳಲ್ಲಿ ಮುಂದುವರಿಯಬೇಕಿದೆ. ಸತ್ಯವನ್ನು ಸರಳಮಾರ್ಗದಲ್ಲಿ ಸಾಧಿಸಹೊರಟ ಗಾಂಧಿ ಚಿಂತನೆಯ ಮಾರ್ಗ ನಮ್ಮ ಮರುಚಿಂತನೆಗೆ ಅಗತ್ಯ ಹಾದಿಗಳನ್ನು ಕಾಣಿಸಬಲ್ಲವು ಎಂಬ ನಂಬಿಕೆ ನಮ್ಮದು. ಹೀಗಾಗಿ ಗಾಂಧಿ ಹುಟ್ಟಿದ ದಿನದ ನೆಪದಲ್ಲಿ ಈ ಕೆಲವು ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದೇನೆ.

ಕೊರೊನಾ ಕಾಲಘಟ್ಟದಲ್ಲಿ ರಂಗದರ್ಶನಗಳಂತೂ ಆಗಿಲ್ಲ; ಆದರೆ ಅಂತರಂಗ ದರ್ಶನಗಳಂತೂ ಆಗಿವೆ. ಈ ದರ್ಶನ ಕೇವಲ ರಂಗದ ಅಂತರಂಗದ ದರ್ಶನವನ್ನು ಮಾತ್ರ ಮಾಡಿಲ್ಲ, ಅದರಲ್ಲಿ ಪಾಲ್ಗೊಳ್ಳುವ ಎಲ್ಲರ ದರ್ಶನವನ್ನೂ ಮಾಡಿಸಿವೆ. ಸಂಬಂಧಗಳು, ಅಂತರಂಗದ ಸಂಬಂಧಗಳು, ಧಾರ್ಮಿಕ ಸಂಬಂಧಗಳು ಈ ಎಲ್ಲ ರೀತಿಯ ಸಂಬಂಧಗಳೂ ಸಹ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ತಿವೆ. ರಂಗಭೂಮಿಯವರು ಯಾವತ್ಕಾಲದಿಂದಲೂ ಮನುಷ್ಯರ ನಡುವಿನ ಅಂತರವನ್ನು ಕಡಿಮೆಮಾಡುವ ಭಿನ್ನದಾರಿಗಳ ಶೋಧನೆ ನಡೆಸುತ್ತಲೇ ಇದ್ದವರು. ಆದರೆ ಯಾವುದನ್ನು ನಾವು ನಿರಾಕರಿಸಲು ಯತ್ನಿಸುತ್ತೇವೆಯೋ ಅದನ್ನು ಅಧಿಕೃತವಾಗಿ ಕಾರ್ಯರೂಪಕ್ಕೆ ತರಲಾಗುತ್ತಿದೆ. ಈ ಬಿರುಕನ್ನು ಸರಿಪಡಿಸಲು ಅಗತ್ಯವಾದ ಅವಕಾಶದ, ಸ್ಪೇಸ್ ನ ಕೊರತೆ ರಂಗಭೂಮಿಯನ್ನು ಕಾಡುತ್ತಿದೆ. ನಿಜವೆಂದರೆ ಇದು ಕೇವಲ ಸ್ಪೇಸ್ ನ ಸಮಸ್ಯೆ ಅಲ್ಲ. ಇವತ್ತೋ, ನಾಳೆಯೋ ನಮಗೆ ರಂಗಪ್ರದರ್ಶನಕ್ಕೆ ಸ್ಪೇಸ್‍ಗಳು ಸಿಕ್ಕಿಬಿಡಬಹುದು. ಆದರೆ ಮುಖ್ಯ ಸಂಗತಿ ಏನೆಂದರೆ ರಂಗಭೂಮಿಯೊಳಗಿರುವ ರಂಗದರ್ಶನಗಳಿಗೆ ಅಗತ್ಯವಾದ ಸ್ಪೇಸ್ ನ ಕೊರತೆ ರಂಗಭೂಮಿಯ ಕಾರ್ಯಕರ್ತರ ಒಳಗೇ ಇದೆ.

ರಂಗಭೂಮಿ ದಣಿದಿದೆಯೇ?ಎಂಬ ಕಟುವಾದ ಪ್ರಶ್ನೆಯನ್ನು ಎದುರುಹಾಕಿಕೊಂಡು ಮುಂದುವರಿಯಲು ಯತ್ನಿಸುವೆ. ನಿಜ ನಾವು ಸುಸ್ತಾಗಿದ್ದೇವೆ. ಈ ಸುಸ್ತಿಗೆ ಮುಖ್ಯಕಾರಣ ನಮ್ಮೊಳಗೆ ಸೇರಿಕೊಂಡಿರುವ ಕೊಬ್ಬು.

ರಂಗಭೂಮಿಯ ಒಳಗೆ ಸುಸ್ತು, ದಣಿವು ಕಾಣಿಸಿಕೊಳ್ಳತೊಡಗಿದೆ. ಇದಕ್ಕೆ ಇರುವ ಹಲವು ಕಾರಣಗಳಲ್ಲಿ ಮುಖ್ಯವಾದುದು ಎಂದರೆ ರಂಗಭೂಮಿಯೊಳಗೆ ಈಗ ತುಂಬಿಕೊಂಡಿರುವ ಕೊಬ್ಬಿನದು. ನಿಜ ರಂಗಭೂಮಿಯ ಒಳಗೆ ಕೊಬ್ಬು ತುಂಬಿದೆ. ವಿಚಿತ್ರ ಅಹಂಕಾರ ಅದನ್ನು ಆಳುತ್ತಿದೆ. ಅದು ಮಧ್ಯಮವರ್ಗದ ಲೋಲುಪತೆಯಿಂದ ಬಂದ ಕೊಬ್ಬು.

ಈ ಜಗತ್ತು ಎಂದರೇನು? ಎಂದು ಪ್ರಶ್ನೆ ಕೇಳಿದರೆ ಈ ಜಗತ್ತಿನ ಅವಿಭಾಜ್ಯ ಅಂಗವಾಗಿ ಬದುಕುತ್ತಿರುವವರಾಗಿಯೂ ನಮಗೆ ಉತ್ತರಿಸುವುದು ಕಷ್ಟವಾಗುತ್ತದೆ. ಇವುಗಳನ್ನು ನಿರ್ವಚಿಸಿಕೊಳ್ಳಲು ಕಲೆಗಳು, ಸಾಹಿತ್ಯ ನೆರವಾಗುತ್ತವೆ. ರಂಗಭೂಮಿಯಂತೂ ಭೂಮಿಯನ್ನೇ ತನ್ನೊಳಗೆ ಅಡಕಗೊಳಿಸಿಕೊಂಡಿರುವುದರಿಂದ ಬದುಕಿನ ನಿರ್ವಚನೆಗೆ ಅದು ಅವಶ್ಯ ಪರಿಕರವಾಗಿದೆ. ಆದರೆ ಸದ್ಯದ ಕಾಲದ ನಿರ್ವಚನೆಗೆ ಬೇಕಾಗುವ ಪರಿಕರಗಳು ನಮಗೆ ಇಂದು ರಂಗಭೂಮಿಯಲ್ಲಿ ಸಿಗುತ್ತಿಲ್ಲ. ಏಕೆಂದರೆ ರಂಗಭೂಮಿಯ ಒಳಗೆ ಸುಸ್ತು, ದಣಿವು ಕಾಣಿಸಿಕೊಳ್ಳತೊಡಗಿದೆ. ಇದಕ್ಕೆ ಇರುವ ಹಲವು ಕಾರಣಗಳಲ್ಲಿ ಮುಖ್ಯವಾದುದು ಎಂದರೆ ರಂಗಭೂಮಿಯೊಳಗೆ ಈಗ ತುಂಬಿಕೊಂಡಿರುವ ಕೊಬ್ಬಿನದು. ನಿಜ ರಂಗಭೂಮಿಯ ಒಳಗೆ ಕೊಬ್ಬು ತುಂಬಿದೆ. ವಿಚಿತ್ರ ಅಹಂಕಾರ ಅದನ್ನು ಆಳುತ್ತಿದೆ. ಅದು ಮಧ್ಯಮವರ್ಗದ ಲೋಲುಪತೆಯಿಂದ ಬಂದ ಕೊಬ್ಬು.

ನಮ್ಮ ಇತ್ತೀಚಿನ ರಂಗಚಟುವಟಿಕೆಗಳೆಲ್ಲವೂ ಗಮನಿಸಿ. ಬಹುತೇಕ ಎಲ್ಲವೂ ಮಧ್ಯವವರ್ಗದವರ ಲೋಲುಪತೆಗೆ ಬೇಕಾಗುವ ಹಾಗೆ ಶೇಪ್ ಮಾಡಲ್ಪಟ್ಟಿವೆ; ಅದೂ ಮೇಲು ಮಧ್ಯಮವರ್ಗದ ಅವಶ್ಯಕತೆಗೆ ಬೇಕಾಗಿ. ನಾವು ಆಡುವ ಆಟಗಳೆಲ್ಲ 40 ವರ್ಷ ಮೇಲ್ಪಟ್ಟವರನ್ನು ಮೆಚ್ಚಿಸಲು ಆಡುವ ಆಟಗಳೇ ಆಗಿವೆ. ಅವರ ಹೊಗಳಿಕೆಯೇ ನಮ್ಮ ಧನ್ಯತೆಯೆಂದು ನಾವು ಅಂದುಕೊಳ್ಳುತ್ತಿದ್ದೇವೆ. ದುರಂತ ಎಂದರೆ ಯಾರನ್ನು ಗ್ರಹಿಸಿ ನಾವು ಆಟ ಕಟ್ಟುತ್ತಿದ್ದೇವೆಯೋ ಆ ವಲಯಕ್ಕೆ ರಂಗಭೂಮಿ ತುಂಬಾ ಅನಿವಾರ್ಯವೇನಲ್ಲ. ಅವರಿಗೆ ಅವರ ಹಲವು ಚಟುವಟಿಕೆಗಳ ಜೊತೆಗೆ ರಂಗಭೂಮಿಯೂ ಒಂದು ಫ್ಯಾಶನ್. ಹಾಗಾಗಿ ರಂಗಭೂಮಿಯ ಸ್ಥಗಿತತೆ ಅವರಿಗೆ ಯಾವ ಕೊರತೆಯನ್ನೂ ಉಂಟುಮಾಡುತ್ತಿಲ್ಲ. ಕೊರೊನಾ ಸಮಯದಲ್ಲಿ ರಂಗಭೂಮಿಯ ಚಟುವಟಿಕೆಗಳು ನಿಂತುಹೋದಾಗ ಬೇಸರಪಟ್ಟವರು ನಾವು ರಂಗಕರ್ಮಿಗಳು ಮಾತ್ರ. ಪ್ರೇಕ್ಷಕ ವಲಯ ದುಃಖಪಟ್ಟಿದ್ದನ್ನ ನಾವು ಕಾಣಲಿಲ್ಲ. ಅಥವಾ ಸಮಾಜ ‘ಇದು ಬೇಕಿತ್ತಲ್ಲ’ ಎಂದು ದುಃಖಪಟ್ಟದ್ದನ್ನು ನಾವು ನೋಡಿಲ್ಲ. ಯಾಕೆಂದರೆ ನಾವು ಬಹುಜನ ಸಮಾಜದ ಜೊತೆಗೆ ಇರಲಿಲ್ಲ. ಜನರು ಮರುಕಪಟ್ಟಿದ್ದಾರೆ, ರಂಗಭೂಮಿಯವರು ಹಸಿವಿನಿಂದಿದ್ದಾರೆ ಎಂದು ಅನುಕಂಪ ತೋರಿಸಿದ್ದಾರೆ. ಇಲ್ಲವೆಂದಲ್ಲ ಆದರೆ ರಂಗಚಟುವಟಿಕೆ ಸಮಾಜದ ಅಗತ್ಯ ಅಂತ ಅವರಿಗೆ ಯಾವತ್ತೂ ಅನಿಸಿಲ್ಲ.

ಮಧ್ಯಮವರ್ಗದ ಲೋಲುಪತೆಗೆ, ಬೌದ್ಧಿಕ ಲೋಲುಪತೆಗೆ ಸರಕಾಗಿ ರಂಗಭೂಮಿಯನ್ನು ಬಳಸಿಕೊಂಡನಾವು, ಬಹು ಮುಖ್ಯ ಜನಸಮುದಾಯಗಳನ್ನು ಕಲೆಯ ಹೆಸರಿನಿಂದಲೇ ಹೊರಗಿಟ್ಟೆವು. ನಾವು ಏನು ಹೇಳುತ್ತಿದ್ದೇವೆ ಎಂಬಷ್ಟೇ ಮುಖ್ಯವಾಗಿ ನಾವು ಯಾವಭಾಷೆಯಲ್ಲಿ ಮಾತನಾಡುತ್ತಿದ್ದೇವೆ ಎಂಬುದೂ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ನಾವು ನಮ್ಮ ರಂಗಭಾಷೆಯನ್ನು ತಿದ್ದಿಕೊಳ್ಳಬೇಕಿದೆ, ಅದು ಗಲ್ಲಿಗಲ್ಲಿಗಳಲ್ಲಿ ಸಂಚರಿಸಲು ಸಾಧ್ಯವಾಗುವಹಾಗೆ ತನ್ನ ದಢೂತಿ ದೇಹವನ್ನು ಕರಗಿಸಿಕೊಳ್ಳಬೇಕಿದೆ, ಸರಳವೂ ಸತ್ಯವೂ ಆಗಬೇಕಿದೆ. ಇದು ರಂಗಭೂಮಿಯನ್ನು ಪ್ರಮುಖವಾಗಿ ಉಸಿರಾಡಿಸುತ್ತಿರುವವರ ಭೌತಿಕ ಅಸ್ತಿತ್ವ ಆಗಿರುವದರ ಜತೆಗೆ ನೈತಿಕ ಅಸ್ತಿತ್ವವೂ ಆಗಿದೆ.

ನಿಮಗೆ ಅನಿಸುತ್ತಿರಬಹುದು ಕಲೆ ಎಂದಿಗೂ ಹಸಿವಿನ ಪ್ರಶ್ನೆಯಲ್ಲವಲ್ಲ, ಹಾಗಾಗಿ ಯಾರೂ ಯೋಚಿಸಲಿಲ್ಲ ಅಂತ. ಆದರೆ ವಿಷಯ ಅಷ್ಟು ಸುಲಭವಲ್ಲ. ಯಾವುದೇ ಸಮಾಜದ ಹರಿವಿಗೆ ತಾಳಿಕೆಯ, ಬಾಳಿಕೆಯ ಗುಣ ಬರೋದು ಅಲ್ಲಿಯ ಸಾಂಸ್ಕೃತಿಕ ಸಂಗತಿಗಳಿಂದ. ಸಾಮಾಜಿಕ ಚಲನಶೀಲತೆಗೆ ತಾಳಿಕೆಯ ಗುಣ ಬರುವುದು ಅಲ್ಲಿಯ ಏಸ್ಥೆಟಿಕ್ ಗಳಿಂದ. ಆದರೆ ರಂಗಭೂಮಿಯಿಂದ ಧಾರಣ ಸಾಮರ್ಥ್ಯ ಬರುತ್ತಿದೆ ಎಂದು ಸಮಾಜಕ್ಕೆ ಅನಿಸದೇ ಇರುವ ಕಾರಣದಿಂದಾಗಿ ನಾವಿಂದು ಅಪ್ರಸ್ತುತವಾಗುತ್ತಿದ್ದೇವೆ. ಅದು ಆಗಿರುವುದು ರಂಗಭೂಮಿಯೊಳಗಿನ ನಮ್ಮ ಕೊಬ್ಬಿನ ಕಾರಣದಿಂದ.

ಈಗ ಒಂದೆರಡು ವರ್ಷಗಳ ಹಿಂದೆ ಧಾರವಾಡ ರಂಗಾಯಣದ ವಿಚಾರಸಂಕಿರಣವೊಂದರಲ್ಲಿ ನಾನು ಪ್ರಸ್ತಾಪಿಸಿದ್ದೆ. ನಮ್ಮಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇನಾದರೂ ತನ್ನ ಪ್ರಾಯೋಜಕತ್ವವನ್ನು ನಿಲ್ಲಿಸಿಬಿಟ್ಟರೆ ಕರ್ನಾಟಕದ 90% ರಂಗಚಟುವಟಿಕೆಗಳು ಸ್ಥಗಿತಗೊಂಡುಬಿಡುತ್ತವೆ  ಬೇಕಾದರೆ ನೋಡಿ ಅಂತ. ಕೆಲವರು ಇದರಿಂದಾಗಿ ಬೇಸರಿಸಿಕೊಂಡಿದ್ದರು. ಆದರೆ ಅದೀಗ ಸತ್ಯವಾಗಿದೆ. ಸರಕಾರ ರಂಗಭೂಮಿಗೆ ಸಹಕಾರ ನೀಡುವುದು ಅದರ ಕರ್ತವ್ಯ ಮತ್ತು ಅದಕ್ಕಾಗಿ ಹಕ್ಕೊತ್ತಾಯ ಮಾಡುವುದು ನಮ್ಮ ಹಕ್ಕು ಎಲ್ಲವೂ ಹೌದು.

ಅದರಾಚೆಗೆ ನಿಂತು ತುಸು ಯೋಚಿಸೋಣ. ನಾವು ಈ ಪ್ರಾಯೋಜನೆಗಳಿಗೆ ಎಷ್ಟು ಆತುಕೊಂಡಿದ್ದೇವೆ ಎಂದರೆ ಅದಿಲ್ಲದಿದ್ದರೆ ನಮ್ಮ ಉಸಿರೇ ನಿಂತುಹೋಗುತ್ತದೆ. ಇದರಿಂದಾದ ಸಮಸ್ಯೆಯೆಂದರೆ ನಮಗೆ ಗಟ್ಟಿಯಾಗಿ ನಮ್ಮ ಅಸ್ತಿತ್ವಕ್ಕೆ ಬೇಕಾಗುವ ಮಾತುಗಳನ್ನೂ ಆಡಲು ಸಾದ್ಯವಾಗದೇ ಇರುವುದು. ಪ್ರಾಯೋಜನೆ ಸಿಗುವಾಗ ನಮಗೊಂದು ಅಹಂಕಾರವಿತ್ತು, ನಾಟಕದ ಕುರಿತು ಯಾರಿಗೆ ಆಸಕ್ತಿಯಿದೆಯೋ ಅವರು ಬಂದು ನೋಡಲಿ ಎಂದು. ಆದರೆ ಇಂದು? ಹಾಗೆ ಹೇಳುವ ಸಾಧ್ಯತೆ ಇದೆಯೇ?. ಹೀಗಾಗಿ ಇವತ್ತು ಈ ವಿಷಯವನ್ನು ನಾವು ಮರುಪರಿಶೀಲನೆ ಮಾಡಿಕೊಳ್ಳಬೇಕಾಗಿದೆ. ನಮ್ಮಲ್ಲಿ ತುಂಬಿರುವ ಕೊಬ್ಬನ್ನು ಇಳಿಸಿಕೊಳ್ಳಬೇಕಿದೆ.
ಪ್ರೊಸೀನಿಯಂನ ಲೋಲುಪ ಚೌಕಟ್ಟಿನಲ್ಲೇ ವಿನ್ಯಾಸಗೊಳ್ಳುತ್ತಿರುವ ನಮ್ಮ ರಂಗಚಟುವಟಿಕೆಗಳು ಗಲ್ಲಿಗಳಲ್ಲಿ ನುಸುಳುವ, ಬೀದಿಗಳಲ್ಲಿ ಹರಿದಾಡುವ, ವರಾಂಡಗಳಲ್ಲಿ ಮೈಚಾಚುವ ವಿನ್ಯಾಸ ಪಡೆದುಕೊಳ್ಳಬೇಕಿದೆ. ಒಮ್ಮೆ ಇಂತದೊಂದು ಮೈಕೊಡವಿಕೊಳ್ಳುವ ಚಟುವಟಿಕೆ ಆರಂಭಗೊಂಡರೆ ಹಲವು ಬಗೆಯ ಸ್ವ-ರೂಪಗಳು ಮೈದಾಳಲು ಆರಂಭವಾಗುತ್ತವೆ. ಅದಕ್ಕೆ ನಾವು ಹೆಚ್ಚು ಸರಳವಾಗಬೇಕಾಗುತ್ತದೆ ಮತ್ತು ಹೆಚ್ಚು ಸತ್ಯವಾಗಿರಬೇಕಾಗುತ್ತದೆ. ಸರಳತೆಯೆಂದರೆ ಬೋಳೆತನ ಅಂದುಕೊಂಡಿರುವ ಅನೇಕ ಜನರು ನಮ್ಮೊಳಗಡೆಯಿದ್ದಾರೆ.

ಮೊದಲನೆಯದಾಗಿ ನಮಗೆ ಅರಿವಿರಬೇಕಾದುದು ನಿಜವಾಗಿ ಸರಳವಾಗಿರುವುದು ಅಂದರೇನೇ ದೊಡ್ಡ ಸಂಕೀರ್ಣತೆ ಎಂಬುದು. ಎರಡನೆಯದಾಗಿ ಅದು ಬೋಳೆತನವಲ್ಲ, ಅದು ಸತ್ಯವಾಗಿರಬೇಕಾಗುತ್ತದೆ. ಏಕೆಂದರೆ ಸತ್ಯವಾಗಿರೋದು ಸರಳವೂ, ಸುಂದರವೂ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ  ಕಲೆಯ ಕುರಿತು ಗಾಂಧೀಜಿಯವರು ಹೇಳಿದ ಕೆಲವು ಮಾತಗಳನ್ನು ಪರಿಶೀಲಿಸೋಣ.
• ಕಲೆ ಕೇವಲ ಕೆಲವೇ ಕೆಲವು ಭಾಗ್ಯವಂತರ ತೊತ್ತಲ್ಲ; ಅದು ಸರ್ವಭೋಗ್ಯವಾದ ಹಾದಿ ಹಿಡಿಯಬೇಕು. ಪ್ರತಿಯೊಬ್ಬರಿಗೂ ಭೋಗ್ಯವಾದ ಹಾದಿ ಹಿಡಿಯಬೇಕು.
• ಜನರ ಬೇಡಿಕೆಯಿಂದ ಪುಷ್ಟಿಗೊಳ್ಳದೇ ಕಲೆ ಉದ್ಧಾರವಾಗದು. ಕಲೆ ರಾಜಭೋಗ್ಯವಾದ ಹಾದಿ ಹಿಡಿದು, ಸಿರಿವಂತರ ಆಟದ ಗೊಂಬೆಯಾದಾಗ ಅದು ಜನರಿಂದ ದೂರವಾಗುತ್ತದೆ.
• ಜೀವನಾಧಾರವಾದ ಪೃಥ್ವಿರಸವನ್ನು ಬೇರಿಗೆ ಎರೆಯದೇ ಕಲೆಯ ಸಸಿಯನ್ನು ನಾವು ಉಳಿಸಲಾಗದು.
• ಜನಸ್ತೋಮಕ್ಕೆ ಪ್ರಯೋಜನವಿಲ್ಲದ ಯಾವ ಬಗೆಯ ವಿಷಯಜ್ಞತೆಯೂ ನನಗೆ ಅರ್ಥವಾಗದು.
• ಕಲೆ ನಿಸರ್ಗದ ಭಾಷೆಯಂತೆಯೇ ಸರಳವಾಗಬೇಕು, ನೇರವಾಗಬೇಕು. ಕಲೆಯೆಂದರೆ ಸರಳತೆಯಲ್ಲಿಯೇ ಇರುವ ಚೆಲುವು ಎಂದು ಅರ್ಥ.

ಇದು ಗಾಂಧೀಜಿ ಮತ್ತೆ, ಮತ್ತೆ ಕಲೆ ಮತ್ತು ಸಾಹಿತ್ಯದ ಕುರಿತಾಗಿ ಆಡಿರುವ ಮಾತುಗಳು. ರಂಗಭೂಮಿಯ ಒಳಗಿನವರಿಗೆ ಇದು ಅರ್ಥವಾಗತೊಡಗಿದರೆ ಸ್ವಾಭಿಮುಖಿ ಚಲನೆ ಆರಂಭಗೊಳ್ಳಬಹುದು.

ಇದೊಂದು ಚಲನೆ. ನಮ್ಮನ್ನು ನಾವು ನೋಡಿಕೊಳ್ಳಲು ಬೇಕಾಗುವ ಚಲನೆ. ಹಾಗಂತ ಇದೇನೂ ತೀರ ಹೊಸದಲ್ಲ. ಈ ರೀತಿಯ ಚಲನೆ ಈಗಾಗಲೇ ಹಲವು ಕಾಲಗಳಲ್ಲಿ ಆಗಿವೆ. ರಿಚುವಲ್ ಅಥವಾ ಧಾರ್ಮಿಕ ನೆಲೆಯಿಂದ ರಂಗಭೂಮಿ ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಈ ಚಲನೆ ಸಂಭವಿಸಿದೆ. ಕಂಪನಿ ನಾಟಕದಿಂದ ಆಧುನಿಕ ನಾಟಕಗಳೆಡೆಗೆ ಪಲ್ಲಟಗೊಳ್ಳುವ ಸಂದರ್ಭದಲ್ಲಿಯೂ ಇದು ಘಟಿಸಿದೆ. ಕೈಲಾಸಂ, ಶ್ರೀರಂಗ ಇವರೆಲ್ಲರ ಆಂದೋಲನವನ್ನು ನಾವು ಗಮನಿಸಬಹುದು. ಅವರೆಲ್ಲರೂ ಕಲೆಯ ಕುರಿತಾದ ಅಂದರೆ ನಾಟಕಗಳ ಕುರಿತಾದ ನಾಟಕಗಳನ್ನು ಬರೆದಿದ್ದಾರೆ. ಇದಕ್ಕೆ ಒಳ್ಳೆಯ ಉದಾಹರಣೆಯೆಂದರೆ ಶ್ರೀರಂಗರ ಕತ್ತಲೆಯ ಬೆಳಕು. ಇದು ಆ ಕಾಲದ ಕಲೆಯ ಚಿಂತನಶೀಲತೆಯನ್ನು ಹಿಡಿಯುವುದಕ್ಕೆ ಪ್ರಯತ್ನಿಸಿದ ನಾಟಕವಾಗಿದೆ. ಕೈಲಾಸಂ ಅವರ ನಂ ಕಂಪ್ನಿಯೂ ಇದೇ ಬಗೆಯದು. ಕಲೆ ಲೋಲುಪವಾಗುವ ಸಂದರ್ಭದಲ್ಲಿ ಬ್ರೆಕ್ಟ್  ಕೂಡಾ ನಾಟಕಗಳ ಚಿಂತನೆಗಳ ಕುರಿತಾದ ನಾಟಕಗಳನ್ನು ರಚಿಸಿದ. ಇವೆಲ್ಲವೂ ಕಲೆಯ ಮರುಚಿಂತನೆಯ ಬೇರೆಬೇರೆ ಮಾದರಿಗಳನ್ನು ಹೇಳುತ್ತವೆ.

ಇದೊಂದು ಚಲನೆ. ನಮ್ಮನ್ನು ನಾವು ನೋಡಿಕೊಳ್ಳಲು ಬೇಕಾಗುವ ಚಲನೆ. ಹಾಗಂತ ಇದೇನೂ ತೀರ ಹೊಸದಲ್ಲ. ಈ ರೀತಿಯ ಚಲನೆ ಈಗಾಗಲೇ ಹಲವು ಕಾಲಗಳಲ್ಲಿ ಆಗಿವೆ. ರಿಚುವಲ್ ಅಥವಾ ಧಾರ್ಮಿಕ ನೆಲೆಯಿಂದ ರಂಗಭೂಮಿ ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಈ ಚಲನೆ ಸಂಭವಿಸಿದೆ

ಚಿಂತಕ, ನಾಟಕಕಾರ, ನಿರ್ದೇಶಕ ಹಾಗೂ ನೊಬೆಲ್ ಪ್ರಶಸ್ತಿವಿಜೇತ ದಾರಿಯೋಪೋ ಒಂದು ಮಾತನ್ನು ಹೇಳುತ್ತಾನೆ, “ನಾವು ನಮ್ಮ ಕತೆಯನ್ನು ಹೇಳಬೇಕು. ಯುವಕರನ್ನು ಬಳಸಿಕೊಂಡು ಯುವಕರಿಗೆ ಹೇಳುತ್ತಾ ಹೋಗಬೇಕು. ಅವರಿಗೆ ನಾಟಕ ಕಲೆ ಕಲಿಸುವುದು ಎಂದರೆ ಅಂಗಾಂಗಗಳನ್ನು ಹೇಗೆ ಬಳಸಬೇಕು, ಎಲ್ಲಿ ಉಸಿರು ಬಿಗಿಹಿಡಿಯಬೇಕು, ಎಲ್ಲಿ ದನಿಯನ್ನು ಏರಿಳಿಸಬೇಕು ಎಂದು ಕಲಿಸುವುದಷ್ಟೇ ಅಲ್ಲ. ನಮ್ಮ ಸುತ್ತಮುತ್ತ ಏನಾಗುತ್ತಿದೆ ಎಂಬುದನ್ನೂ ಹೇಳಿಕೊಡಬೇಕು. ಹಾಗೆ ಮಾಡಿದಾಗ ಅವರು ತಮ್ಮ ಕತೆಯನ್ನು ಹೇಳುವ ಸಮರ್ಥರಾಗುತ್ತಾರೆ.” ನಾವು ನಮ್ಮ ಕತೆಯನ್ನು ಹೇಳುವ ಸಾಮರ್ಥ್ಯವನ್ನು ಗಳಿಸಿಕೊಳ್ಳುವ ಸಲುವಾಗಿ ‘ರೀ ಥಿಂಕಿಂಗ್’ ಮಾಡಬೇಕಾಗಿದೆ. ಅದನ್ನೇ ದಾರಿಯೋಪೋ ಹೀಗೆ ಹೇಳುತ್ತಾನೆ, “ತನ್ನ ಕಾಲವನ್ನು ಕಥಿಸದ ಕತೆ ನಾಟಕ ಎಂದಿಗೂ ಸಮರ್ಪಕವಲ್ಲ” ನಮ್ಮ ಕಾಲದ ಕಲೆ ಹೇಗಿರಬೇಕು ಎಂಬುದನ್ನು ಅವನು ನಮಗೆ ಹೀಗೆ ಕಲಿಸುತ್ತಿದ್ದಾನೆ.

ಹೀಗಾಗಿಯೇ ನಾವಿಂದು ನಾಟಕ ಎಂದರೇನು? ಎಂಬ ಪ್ರಶ್ನೆಯೊಂದಿಗೆ ಆರಂಭಿಸಿ, ರಂಗಭೂಮಿ ಮತ್ತು ಸಮಾಜದ ನಡುವಿನ ಸಂಬಂಧವೇನು? ರಂಗಭೂಮಿಯ ಆರ್ಥಿಕತೆ ಹೇಗಿರಬೇಕು? ಇದರ ನಿರ್ವಹಣೆ ಹೇಗೆ? ನಟರ ನಡುವಿನ ಬಾಂಧವ್ಯ ಹೇಗೆ? ಇವೆಲ್ಲದರ ಬಗ್ಗೆಯೂ ಮರುಚಿಂತನೆ ಮಾಡಬೇಕಿದೆ.

ತಜ್ಞರು ಹೇಳುವ ಮಾತಿನ ಪ್ರಕಾರ, ಭಾಷೆ ಮತ್ತು ಮೆದುಳಿನ ನಡುವೆ ಒಂದು ಒಪ್ಪಂದವಿದೆ. ಇದು ಸಲೀಸಾದಾಗ ಸಿದ್ಧಮಾದರಿಯ ಚಲನೆಗಳು ನಡೆಯುತ್ತವೆ. ಭಾಷೆ ಮತ್ತು ಮೆದುಳಿನ ಸಂಬಂಧ ತುಂಡಾದಾಗ ಮನುಷ್ಯ ಅನಿವಾರ್ಯವಾಗಿ ಹೊಸಬಗೆಯಲ್ಲಿ ಚಿಂತಿಸುತ್ತಾನೆ. ಮೆದುಳು ಸಿದ್ದಮಾದರಿಯ ಭಾಷೆಯಿಂದ ಕಳಚಿಕೊಂಡಾಗ ಹೊಸಕಲ್ಪನೆಗಳು ಹೊಳೆಯತೊಡಗುತ್ತವೆ. ಹಾಗಾಗಿ ಈ ಕಾಲದ ಕಲ್ಪನೆಯನ್ನು ಕಟ್ಟುವುದಕ್ಕೆ ಹಲವು ದನಿಗಳ ಅವಶ್ಯಕತೆಯಿದೆ. ರೂಢಿಗತ ಭಾಷೆಯ ಸಂಬಂಧವನ್ನು ಕಡಿದುಕೊಳ್ಳಲು ಈಗಿನಿಂದಲೇ ಪ್ರಯತ್ನವನ್ನು ಆರಂಭಿಸಬೇಕಿದೆ. ಇಂಥ ಪ್ರಯತ್ನವನ್ನು ನಟರು ಮಾತ್ರವೇ ಮಾಡಬಲ್ಲರು, ಸೀಮಿತ ಅಳತೆಯ ವೇದಿಕೆಯಲ್ಲಿ ಇಡಿಯ ಜಗತ್ತನ್ನೇ ಸೃಷ್ಟಿಸುವ ತಾಕತ್ತು ಇರುವುದು ನಟರಿಗೆ ಮಾತ್ರ. ಆ ತಾಕತ್ತಿಗೆ ಸಿದ್ಧರೂಢಿಯನ್ನು ತಪ್ಪಿಸಿಕೊಳ್ಳುವ ತರಬೇತಿ ನೀಡಬೇಕಾಗಿದೆ. ಬಹುತೇಕವಾಗಿ ಈಗಿನ ಕಲಾಶಾಲೆಯಲ್ಲಿ ದೊರೆಯುತ್ತಿರುವ ತರಬೇತಿಗಳೆಲ್ಲ ಈ ಸಿದ್ಧಮಾದರಿಗಳನ್ನು ಮುಂದುವರೆಸುವ ಬಗೆಗಿನ ತರಬೇತಿಯೇ ಆಗಿದೆ. ರೂಢಿಯನ್ನು ಮುರಿಯುವ ತರಬೇತಿ ರಂಗಶಾಲೆಯಲ್ಲಿ ನಡೆಯದಿದ್ದರೆ ಅದರ ಹೊರಗಾದರೂ ಅದನ್ನು ಆರಂಭಿಸುವ ಅಗತ್ಯವಿದೆ.

ನಮ್ಮೊಳಗೆ ವಿಶ್ವವೇ ಅಡಗಿರುವುದರಿಂದ ವಿಶ್ವವನ್ನು ನಿರ್ವಚಿಸುವ ಶಕ್ತಿಯೂ ನಮ್ಮೊಳಗೆ ಅಡಕವಾಗಿದೆ. ಬಳಸಿ, ಬಳಸಿ ಕ್ಲೀಷೆಯಾಗಿರುವ ಭಾಷೆಯ ಕುರಿತಾಗಿ ರಿಲ್ಕ್ ಬರೆದಿರುವ ಕೆಲವು ಸಾಲುಗಳನ್ನು ನೆನಪಿಸಿಕೊಳ್ಳೋಣ.

ಈ ಜನ ಬಳಸುವ ಪದಗಳ ಕಂಡರೆ ಅಂಜಿಕೆ ನನಗೆ
ಉಚ್ಛಾರ ಸ್ಪಷ್ಟ, ಖಚಿತ ಇಲ್ಲ ಎನ್ನುವ ಅನುಮಾನವೇ ಇಲ್ಲ
ಇಗೋ ಇದು ನಾಯಿ, ಅಗೋ ಅದು ಮನೆ
ಇಗೋ ಇಲ್ಲಿದೆ ಮೊದಲು, ಅಗೋ ಅಲ್ಲಿದೆ ಮುಕ್ತಾಯ
ಸ್ಪಷ್ಟ ಎಲ್ಲವೂ, ಅದಕ್ಕೇ ಅಂಜಿಕೆ ನನಗೆ
ಆಲೋಚನೆ ಅಂದರೇನೇ ದಿಗಿಲು ಅವರಿಗೆ
(ರೀಥಿಂಕಿಂಗ್ ಅಂದರೇನೆ ದಿಗಿಲು ಅವರಿಗೆ)
ಆಗಿರುವುದೆಲ್ಲ ಗೊತ್ತು ಅವರಿಗೆ, ಆಗಿರುವುದೂ ಗೊತ್ತು
ಯಾವುದೇ ಗಿರಿ, ಶ್ರೇಣಿ ಕಂಡರೆ ಬೆರಗೇ ಆಗುವುದಿಲ್ಲ ಅವರಿಗೆ
ಬೆರಗಲ್ಲ ಅವರಿಗೆ ಹರಿವ ತೊರೆ, ಹರಡಿದ ಮುಗಿಲು ಯಾವುದೂ
ಅವರ ಕೈತೋಟ, ಅವರ ಆಸ್ತಿಪಾಸ್ತಿ ದೇವರ ನಾಡಿನ ಪಕ್ಕದಲ್ಲೇ ಇದ್ದ ಹಾಗೆ
ಆದ್ದರಿಂದ ಆಲೋಚನೆ ಅಂದರೇ ದಿಗಿಲು ಅವರಿಗೆ
ನಾನು ದೂರ ಇರುತ್ತೇನೆ, ಬದಿಗೆ ತಳ್ಳುತ್ತೇನೆ
ಬರಬೇಡಿ ನನ್ನ ಬಳಿ ಎನ್ನುತ್ತೇನೆ
ನನಗೆ ಎಲ್ಲ ವಸ್ತುಗಳನ್ನು ನೋಡುವುದು, ಹಾಡುವುದು ಇಷ್ಟ
ನೀವು ಪದಗಳನ್ನು ಮುಟ್ಟುವಿರಿ ಅದು ಒಣಗಿಯೇ ಹೋಗುತ್ತದೆ
ಸದ್ದಿಲ್ಲದೇ ವಸ್ತುಗಳನ್ನು ಕೊಲ್ಲುವ ಪರಿಯದು

ರಂಗಭೂಮಿಯ ಮರುಚಿಂತನೆಯನ್ನು ಈಗಲಾದರೂ ಪ್ರಾರಂಭಿಸದಿದ್ದರೆ ರಂಗಭಾಷೆ ಮುರುಟಿಹೋಗುತ್ತದೆ, ಸದ್ದಿಲ್ಲದೇ ಕೊಲ್ಲುವ ಪರಿಯದು.

(ಸಾಂದರ್ಭಿಕ ಚಿತ್ರಗಳು: ಲೇಖಕರವು)