ಸುಮ್ಮನೆ ಏನೋ ಸಿಕ್ಕಿತು ಎಂದು ಓದುತ್ತ ಕುಳಿತವಳನ್ನ ಜಪ್ಪಿಸಿ ಕೂತು ಒಂದಕ್ಷರವನ್ನೂ ಬಿಡದೆ ಓದುವಂತೆ ಮಾಡುವ ಮೋಡಿಯ ಬರಹಗಳು ಕೆಲವು ನನಗೆ ಆಗಾಗ ಸಿಗುತ್ತವೆ. ಆ ಮೋಡಿ ಎಂತಹುದೆಂದರೆ ದಿನದ ಮಹಾಬೋರಿನ ಕೆಲಸದ ನಡುವೆ ಮಾಡಿದ ಯಾವುದೋ ಒಂದು ಕ್ರಿಯೆಗೆ ಇದ್ದಕ್ಕಿದ್ದಂಗೆ ಆ ಬರಹದ ಲಿಂಕ್ ಲಗತ್ತಾಗುತ್ತದೆ. ಮಹಾಬೋರಿನ ಕೆಲಸದ ಬೋರು ಮರೆತುಹೋಗಿ ಮನಸ್ಸಲ್ಲಿ ಉಲ್ಲಾಸ ಮನೆಮಾಡುತ್ತದೆ. ಅಥವಾ ನಾವೇ ಸುತ್ತಿಕೊಂಡ ಎಲ್ಲ ರಗಳೆಗಳೂ ಬೋರಾಗಿ ಮನಸ್ಸು ಸೂನಾ ಸೂನಾ ಎನ್ನುತ್ತಿರುವಾಗ ಇದ್ದಕ್ಕಿದ್ದಂಗೆ ನೆನಪಾಗುವ ಸಾಲೊಂದು ಎಲ್ಲಿಂದಲೋ ಆಹ್ಲಾದವನ್ನು ಪುಟ್ಟಗೆ ತಂದು ಸುರಿಯುತ್ತದೆ. ನಮ್ಮ ಮಾನಸಿಕ ಒತ್ತಡಕ್ಕೆ ತಲ್ಲಣಕ್ಕೆ ಹಾಯೆನಿಸುವಂತಹ ಆರಾಮ ನೀಡುವ ಈ ಬರಹಗಳನ್ನ ಬರೆದವರ ಬಗೆಗೆ ಮನದಲ್ಲಿ ಪುಟ್ಟದೊಂದು ಖುಶಿಯ ಸೇತುವೆ ಕಟ್ಟಿಕೊಳ್ಳುತ್ತೇವೆ. ಯಾವ ಸಂದರ್ಭದಲ್ಲಿ ಯಾವ ಸಾಲು, ದೃಶ್ಯ, ಸನ್ನಿವೇಶ ಮನಸ್ಸನ್ನು ಹೋಗುತ್ತದೋ ಅದನ್ನು ಅವಲಂಬಿಸಿ ನಮ್ಮ ಲೇಖಕನೆಡೆಗಿನ ಅಂದಾಜು, ಹೀಗಿರಬಹುದೇ ಎಂಬ ಊಹೆ ಹೆಜ್ಜೆಯಿಟ್ಟು ಬರುತ್ತದೆ.
ಆದರೆ ಈಗ ಕಾಲ ಎಂದಿನಂತೆಯೇ ಸ್ವಲ್ಪ ಬದಲಾಗಿದೆ. ಇಂದಿನ ಎಲ್ಲ ಲೇಖಕರೂ, ಅವರ ಕೃತಿಗಳು, ಸ್ಪಂದನೆ – ಪ್ರತಿಸ್ಪಂದನೆ, ವಿಮರ್ಶೆಗಳೂ ಎಲ್ಲವನ್ನೂ ಹೊತ್ತುಕೊಂಡು ಜಾಲದಂಗಳಕ್ಕೆ ಮಾಧ್ಯಮಗಳ ಜಗಲಿಗೆ ಬಂದು ಕೂತಿದ್ದಾರೆ. ಓದಿದವರು ಓದಿದ ಕೂಡಲೆ ಪಟಕ್ಕನೆ ಗುಂಡಿಯೊತ್ತಿ ಅನಿಸಿದ್ದನ್ನು ಬರೆದುಬಿಡಬಹುದು. ಅದಕ್ಕೆ ಓದುಗರು ಅಂದುಕೊಂಡ ಹಾಗೆ ಇರದ ಪ್ರತಿಕ್ರಿಯೆಯನ್ನು ಲೇಖಕರೂ ಕೊಡಬಹುದು, ಕೃತಿಯೊಂದನ್ನು ಮಾತ್ರ ಸೈಡ್ ವಿಂಗಿಗೆ ಕಳಿಸಿ ಬಾಯಿಗೆ ಬಂದಹಾಗೆ ಬರೆದವರೂ ಓದಿದವರೂ ವಿಶ್ಲೇಷಣೆ ಮಾಡಬಹುದು. ಆದರೆ ಸಂವಹನ ಒಂದು ಕ್ರಿಯೆಯಾಗಿ, ತಾಂತ್ರಿಕವಾಗಿ ಬೆಳವಣಿಗೆ ಹೊಂದುತ್ತಾ, some ವಹನವಾಗಿ ಉಳಿದು, ಯಾರಿಗೆ ತಮಗೇನು ಬೇಕೋ ಅದನ್ನು ಮಾತ್ರ ಹೇಳುವುದಕ್ಕೆ, ಬರೆಯುವುದಕ್ಕೆ ಮತ್ತು ತಮಗೇನು ಬೇಕೋ ಅದನ್ನು ಮಾತ್ರ ಕೇಳುವುದಕ್ಕೆ, ಓದುವುದಕ್ಕೆ ಸೀಮಿತವಾಗುತ್ತ ನಡೆದಿದೆ. ಅದರಾಚೆಗಿನ ಹೇಳು-ಕೇಳುವಿಕೆಗೆ ಯಾರಿಗೂ ಸಮಯವಿಲ್ಲ. ಅಸೀಮವಾದ ಒಂದು ಭಾವವನ್ನು ಎಳೆದು ತಂದು ಸುತ್ತಿಟ್ಟುಕೊಂಡು ಜೇಬಿನಲ್ಲಿ ಸಿಕ್ಕಿಸಿಕೊಂಡು ಓಡಾಡಿದ ಹಾಗೆ. ಆಗ ಅದು ನಮಗೇನೋ ಬೇಕೋ ಅದನ್ನೇ ಉಲಿಯುತ್ತದೆ ಹೊರತು ಮಾಯಾಚಾಪೆಯಂತೆ ನಮ್ಮನ್ನು ಹತ್ತಿಸಿಕೊಂಡು ಪ್ರಪಂಚ ಸುತ್ತಿಸಲು ಹೋಗುವುದಿಲ್ಲವೆಂದೆನಿಸುತ್ತಿದೆ ನನಗೆ. ಈಗ ಜೋಡಣೆ ಮಾಡಲ್ಪಟ್ಟ ಕ್ಯಾಲೆಂಡರು ಮತ್ತು ಟೈಮ್ ಶೀಟಿನ ಸುತ್ತ ಸುತ್ತುವ ಭಾವಗಳು ಅಕಾಲಿಕ ಎತ್ತಂಗಡಿಯ ರೂಟಿನಲ್ಲಿ ಓಡಾಡುತ್ತವೆ.
ಇತ್ತೀಚಿನ ನನ್ನ ಒಂದು ಓದಿನ ಅನುಭವ ನನ್ನ ಹಳೆಯ ಓದನ್ನೇ ಓವರ್ ರೈಡ್ ಮಾಡಿ ನನ್ನನ್ನು ಇಬ್ಬಂದಿಗೆ ಸಿಲುಕಿಸಿತ್ತು.
ಈಗ ಕೆಲ ವರ್ಷಗಳಿಗೆ ಮುಂಚೆ, ಒಂದು ವಾಕ್ಯವನ್ನೂ ಮಿಸ್ ಮಾಡದೆ ಗೆಸ್ ಮಾಡದೇ ಸಿಕ್ಕಿದ ಸಮಯದಲ್ಲೆಲ್ಲಾ ಅದನ್ನೇ ಓದುತ್ತಾ ನಾಕು ದಿನಸದಲ್ಲಿ ಒಂದು ಪುಸ್ತಕವನ್ನು ಮುಗಿಸಿದೆ. ತುಂಬ ಆಸಕ್ತಿ ಹುಟ್ಟಿಸುವ ಪುಸ್ತಕ ಸಿಕ್ಕಾಗಲೇ ಸಿಕ್ಕಾಪಟ್ಟೆ ಕೆಲಸ ಬಂದಿರುತ್ತೆ, ಈ ಪುಸ್ತಕಕ್ಕಂತೂ ಎರಡೆರಡು ಅಲಗಿನ ಕಷ್ಟವಿತ್ತು. ಕೆಲಸ ಜಾಸ್ತಿ ಇರುವುದರ ಜೊತೆಗೆ, ಇದು ನನ್ನ ಪರೀಕ್ಷೆಗೆ ಉಲ್ಲೇಖಿಸಲ್ಪಟ್ಟ ಪಾಠ ಕೂಡ. ಪರೀಕ್ಷೆಗೆ ಓದಲಿರುವುದು ಸಿಕ್ಕಾಪಟ್ಟೆ ಬೋರಾಗುತ್ತೆ ಅಂತ ನಾನು ವರ್ಷವಿಡೀ ಇದ್ದ ಸಮಯದಲ್ಲಿ ಕ್ರಿಸ್ಟಿ, ಬೀಚಿ, ಕಾರಂತ, ಗಾರ್ಡನರ್, ಮೊರೇವಿಯೋ, ನಾಡಿ, ತೇಜಸ್ವಿಯವರನ್ನು ಸವಿಯುತ್ತ ಇದ್ದೆ. ಉದೂದ್ದ ಬಿಡುವಲ್ಲಿ ಸುತ್ತಾಟ. ಕೊನೆಕೊನೆಗೆ ಪರೀಕ್ಷೆಗೆ ಇನ್ನೊಂದು ಎರಡು ತಿಂಗಳಿರುವಾಗ ಕೂತು ತುಂಬಾ ಡೀಟೈಲಾದ ಪ್ಲಾನ್ ಮಾಡಿಕೊಂಡು ಓದಲು ಕೂತರೆ ಸಮಯವೂ ಇಲ್ಲ. ಇರುವ ಪುಸ್ತಕಗಳೆಲ್ಲ ಸಿಕ್ಕಾಪಟ್ಟೆ ಚೆನ್ನಾಗಿದ್ದು ಪೂರ್ತಿಯಾಗಿ ಓದದೆ ಮುಂದೆ ಹೋಗಲಾಗುತ್ತಿಲ್ಲ. ಒಂದೊಂದು ಪುಸ್ತಕವೂ ಇಂಗ್ಲಿಷ್ ಸಾಹಿತ್ಯದ ಉತ್ಕ್ರಷ್ಟ ಕೃತಿಯಾಗಿದ್ದು ಓದಲು ಸಮಯವನ್ನೂ ತೆಗೆದುಕೊಳ್ಳುತ್ತಿತ್ತು. ಕೊನೆಕೊನೆಗೆ ಮಜವಾದ ಓದಿನ ಪುಸ್ತಕಗಳನ್ನು ಮೊದಲು ಮುಗಿಸಿ ನೋಟ್ಸ್ ಮಾಡಿಟ್ಟುಕೊಂಡೆ. ಸೀರಿಯಸ್ ಓದಿನ ಪುಸ್ತಕಗಳನ್ನು ವಾರದಲ್ಲಿ ಮೂರು ಭಾಗ ಮಾಡಿಕೊಂಡು ಓದತೊಡಗಿದೆ.
ಹಾಗೆ ಸಿಕ್ಕಿದ್ದು ಈ ವಾಲ್ಡನ್. ಹೆನ್ರಿ ಡೇವಿಡ್ ಥೋರೋ ಬರೆದ ಪುಸ್ತಕ. ಸೀಮಿತ ಓದು ನಮ್ಮ ದೃಷ್ಟಿಕೋನವನ್ನ, ಬದುಕಿನೆಡೆಗಿನ ನಂಬಿಕೆಯನ್ನ ಎಷ್ಟು ಬದಲಿಸುತ್ತದೆ ಎಂಬುದಕ್ಕೆ ಇದೇ ನಿದರ್ಶನ. ನಾನು ಇಲ್ಲಿ ಥೋರೋ ನ ವಾಲ್ಡನ್ ಬಗೆಗಿನ ವಿಮರ್ಶೆ ಮಾಡುತ್ತಿಲ್ಲ. ಅದು ನಿಮಗಿಲ್ಲಿ ದೊರೆಯುತ್ತದೆ. ಆಸಕ್ತಿಯಿದ್ದರೆ ಓದಿ.
ನನಗೆ ವಾಲ್ಡನ್ ಓದಿ ಏನನ್ನಿಸಿತು, ಅದು ನನ್ನನ್ನ ಹೇಗೆ ಬದಲಿಸಿತು, ಮತ್ತು ಇನ್ಯಾವಾಗಲೋ ಅಚಾನಕ್ಕಾಗಿ ಥೋರೋ ಬಗೆಗೆ ಓದಿದಾಗ ನನಗೇನೆನ್ನಿಸಿತು ಎಂಬುದರ ಮೂಲಕ ನಮ್ಮ ಓದಿನ ಮಿತಿ ಮತ್ತು ಸಾಮರ್ಥ್ಯವನ್ನ ಹಂಚಿಕೊಳ್ಳಬಯಸುತ್ತೇನೆ.
ಇದು ೧೯ ನೇ ಶತಮಾನದ ಮೊದಲ ಭಾಗದಲ್ಲಿ ಅಮೆರಿಕನ್ ಒಬ್ಬ ತನ್ನ ವಿದ್ಯಾಭ್ಯಾಸ ಮುಗಿಸಿದ ನಂತರ ಬದುಕಲು ನಡೆದ ದಾರಿಯೊಂದರ, ಚೂರೆಂದರೆ ಚೂರೂ ರಮಣೀಯತೆಯನ್ನು ಆರೋಪಿಸದ ಸಹಜವಾಗಿ ಬರೆದ ದಿನಚರಿ. ಥೋರೋ ತನ್ನ ಅಧ್ಯಯನ ಮುಗಿಸಿ ಕೆಲಸ ಹಿಡಿದು ಒಂದು ಸೋಕಾಲ್ಡ್ ಯಶಸ್ವೀ ಬದುಕನ್ನು ಕಟ್ಟಿಕೊಳ್ಳಲು ಅಸಮರ್ಥನಾದಾಗ, ಪರಿಚಯದವರಾದ ಹಿರಿಯ ಸಾಹಿತಿ, ಬುದ್ದಿಜೀವಿ ಎಮರ್ಸನ್ ಅವರಿಗೆ ಸೇರಿದ ಕಾಡುಜಾಗವೊಂದರಲ್ಲಿ ಒಂದಷ್ಟು ದಿನ ಬದುಕು ನಡೆಸಲು ತೀರ್ಮಾನಿಸುತ್ತಾರೆ. ಅಲ್ಲಿನ ಮಿತವಾದ ಸೌಲಭ್ಯಗಳಲ್ಲಿ ಆತ ಹೇಗೆ ಏಕಾಂತವನ್ನು ಅನುಭವಿಸುತ್ತ ಸರಳತನದಲ್ಲಿ ಬದುಕಿದ ಎಂಬುದನ್ನ ನಾನು ಓದಲು ಹೊರಟ ವಿಮರ್ಶೆ ಮೊದಲೆ ಪರಿಚಯಿಸಿತ್ತು. ನಾನು ಆ ಆಯಾಮದಲ್ಲೇ ಆ ಮೂಲ ಪುಸ್ತಕವನ್ನು ಓದಿದೆ. ಅದರಲ್ಲಿ ನನ್ನನ್ನು ಬಹುವಾಗಿ ಕಾಡಿದ ಸಾಲುಗಳೆಂದರೆ… ‘If you have built castles in the air, your work need not be lost; that is where they should be. Now put the foundations under them.’
ಈಗಷ್ಟೆ ಕೆಲಸಕ್ಕೆ ಸೇರಿ ಗಟ್ಟಿ ನಿಲ್ಲಲು ನೆಲೆ ಹುಡುಕುತ್ತಿರುವ, ಹೊಸ ದಾರಿ ಹೊಸ ತೀರಗಳ ಬಗ್ಗೆ ಅಪಾರ ಕುತೂಹಲ ಇರುವ ಯಾವುದೇ ಯುವ ಮನಸ್ಸೂ ಕೂಡ ಸುಲಭವಾಗಿ ಆಕರ್ಷಣೆಗೆ ಒಳಗಾಗುವ ಸಾಲುಗಳು ಇವು ಅನ್ನುವುದು ಈಗಲೂ ನನ್ನ ಅಭಿಪ್ರಾಯ.
ಮುಂದೆ ನಡೆದವರೆಲ್ಲರೂ, ಎತ್ತರದ ಪ್ಲಾಟ್ ಫಾರಮ್ಮಿನಲ್ಲಿ ನಿಂತುಕೊಂಡು, ಹೀಗೆ ಹೋಗು, ಇಲ್ಲಿ ಹತ್ತಿದರೆ ಇಲ್ಲಿ ಬರಬಹುದು, ಇಲ್ಲಿಹೋದರೆ ಅಲ್ಲಿ ಏರಬಹುದು, ಯಾವುದಕ್ಕೂ ತುಂಬ ಸೀರಿಯಸ್ ಆಗಿ ಬದುಕನ್ನು ತಗೋಬೇಕು, ಎನ್ನುವ ಕಾಲದಲ್ಲಿ – ಅಂತದೇನೂ ಇಲ್ಲ, ನಿಂಗೆ ಬೇಕಾದ ಕನಸು ಕಾಣು, ಅದು ನನಸಾಗಲೇ ಬೇಕು ಅನ್ನೋದಾದರೆ ಕಂಡ ಕನಸನ್ನ ನಿಲ್ಲಿಸಲು ಒಳ್ಳೆ ಫ್ರೇಮ್ ಕಟ್ಟು ಅಥವಾ ಅಡಿಪಾಯ ಹಾಕು ಅಂತ ಅಂದ್ರೆ ಎಷ್ಟು ರುಚಿಯಾಗಿರತ್ತೆ. ಯಶಸ್ಸಿಗೆ ನೂರು ಪರಿಭಾಷೆ ಅನ್ನುವ ಸಂದೇಶ ಅರುಹಿದ ಅವನ ಪುಸ್ತಕ ನನಗೆ ತುಂಬ ಇಷ್ಟವಾಯಿತು. ತಾನೇ ಮರಗೆಲಸ ಮಾಡಿ ಕಟ್ಟಿಕೊಂಡ ಅವನ ವುಡನ್ ಕೇಬಿನ್ ನನಗೆ ಆದರ್ಶಪ್ರಾಯವಾಯಿತು. ನಾನು ಓದುವಾಗ ಕಾರ್ಪೆಂಟರಿ ನನಗೊಂದು ಪಠ್ಯ ವಿಷಯವಾಗಿದ್ದು, ಒಂದು ಚಿಕ್ಕ ಮರದ ತುಂಡನ್ನು ಕೂಡ ನಾಜೂಕಾಗಿ ಕೆತ್ತುವುದು ಎಷ್ಟು ಕಷ್ಟ ಎಂಬ ಅರಿವಿದ್ದಿದ್ದರಿಂದ ನನಗೆ ಅದೊಂದು ರಮ್ಯ ಸಾಹಸವಾಗಿ ತೋರಿದ್ದರಲ್ಲಿ ಆಶ್ಚರ್ಯವೇನಿಲ್ಲ. ಇಂಗ್ಲಿಷ್ ಕತೆಗಳೆಂದರೆ ಕ್ರಿಸ್ಟಿ, ರಾಬಿನ್ ಕುಕ್, ಸಿಡ್ನಿಶೆಲ್ಡನ್, ಮತ್ತಿತರರು ಅಂದುಕೊಂಡಿದ್ದ ಕನ್ನಡ ಮಾಧ್ಯಮದ ನನಗೆ ಇಂಗ್ಲಿಷ್ ಸಾಹಿತ್ಯಲೋಕದ ಅಗಾಧತೆಯನ್ನು ಪರಿಚಯಿಸಿದ್ದು ನಾನು ತಮಾಷೆಗಿರಲಿ ಅಂತ ಕಟ್ಟಿದ ಇಂಗ್ಲಿಷ್ ಸ್ನಾತಕೋತ್ತರ ಪದವಿ.
ಹೀಗಾಗಿ ವಾಲ್ಡನ್ ಓದುವುದಕ್ಕೆ ಕೆಲದಿನಗಳ ಮೊದಲು ಓದಿದ್ದ -ಹಕಲ್ಬೆರಿ ಫಿನ್- ಹಳೇ ಹಳ್ಳಿ ಅಮೆರಿಕಾದ ಚಿತ್ರಣವನ್ನ ಕಟ್ಟಿಕೊಟ್ಟಿತ್ತು. ವಾಲ್ಡನ್ ತಾನೇ ಬೆಳೆದ ಆಲೂಗಡ್ಡೆಯನ್ನ ತಾನೇ ಕಡಿದು ತಂದ ಮರದ ಒಲೆಯಲ್ಲಿ ಬೇಯಿಸಿ ತಿಂದ ಚಳಿಗಾಲದ ದಿನಗಳು, ಮನೆಯ ಸುತ್ತ ಮುತ್ತ ಸುಳಿದಾಡುತ್ತಿದ್ದ ಚಿಕ್ಕಪುಟ್ಟ ವನ್ಯಪ್ರಾಣಿಗಳು, ಅಲ್ಲಿಯೇ ಇದ್ದ ವಾಲ್ಡನ್ ಸರೋವರ ಎಲ್ಲ ನನ್ನ ಮನಸ್ಸಿನಲ್ಲಿ ಒಂದು ರಮ್ಯ ಕಲ್ಪನೆಯ ಲೋಕವನ್ನ ಕಟ್ಟಿದ್ದವು. ಹೆಚ್ಚಿಗೆ ದುಡ್ಡಿಲ್ಲದ್ದರಿಂದ ಆತ ತನ್ನ ಲಿವಿಂಗನ್ನ ತಾನೇ ನಿರ್ಮಿಸಿಕೊಳ್ಳುತ್ತ ಹೋದ ಸರಳ ಪರಿಕಲ್ಪನೆ ಹೆಚ್ಚು ಸಂಬಳ ಇಲ್ಲದಿದ್ದ ನನಗೆ ಬಹಳ ಹಿಡಿಸಿತು. ಆಹಾ ದಿನಾ ಅಡಿಗೆ ಮಾಡದೆ ಆಲೂ ಬೇಯಿಸಿಕೊಂಡು ತಿಂದರೆ ಒಳ್ಳೆಯದು ಎಂಬ ಮರೀಚಿಕೆ ಬಹಳ ಕಾಲದವರೆಗೂ ನನ್ನ ಮನಸ್ಸಿನಲ್ಲಿ ಚಿನ್ನಾಟವಾಡಿಕೊಂಡೇ ಇತ್ತು. ನಾನೇ ಮನೆ ಮಾಡಿ ಅಡಿಗೆ ಮಾಡತೊಡಗಿದ ಮೇಲೆ ಆ ಮರೀಚಿಕೆ ಆವಿಯಾಯಿತು. ಈ ಪುಸ್ತಕದಲ್ಲಿ ದಿನದ ಖರ್ಚನ್ನ ಲೆಕ್ಕವಿಡಬೇಕು ಎಂಬ ಬೇಸಿಕ್ ಮಾಹಿತಿಯನ್ನು ಒಂದು ಅಧ್ಯಾಯವಿಡೀ ಥೋರೋ ಬರೆದಿದ್ದರೂ ಅದನ್ನ ಇಲ್ಲಿಯವರೆಗೆ ಮಾಡಲು ನನಗೆ ಸಾಧ್ಯವಾಗದೆ ಹೋಗಿದೆ.:)
ಹೀಗೇ ಆ ಪುಸ್ತಕದಲ್ಲಿ ನನಗೆ ಅಥವಾ ಆಗಿನ್ನೂ ವಿದ್ಯಾಭ್ಯಾಸ ಮುಗಿಸಿ ಕೆಲಸ ಹಿಡಿಯುವ ಅವಶ್ಯಕತೆಯಿದ್ದು, ಮುಂದಿನ ಬದುಕಿನ ಬಗೆಗೆ ಮೆದುವಾದ ಕಲ್ಪನೆಗಳಿದ್ದ ಯುವ ಮನಸ್ಸಿಗೆ ಸುಲಭವಾಗಿ ಮೌಲ್ಡ್ ಆಗಬಹುದಾದ ಮೋಹಕ ದ್ರಾವಣದಂತಹ ವಿಷಯಗಳಿದ್ದವು. ಒಬ್ಬರೇ ಇರುವುದು, ಯಾರನ್ನೂ ಅವಲಂಬಿಸದಿರುವುದು, ಸರಳವಾದ ಕೆಲಸ ಕಾರ್ಯ ಮತ್ತು ಊಟ, ದಿನಚರಿ, ಓದಲು ಪುಸ್ತಕ ಮತ್ತು ಸಮಯ, ತಿರುಗಾಡಲು ಗದ್ದಲವಿಲ್ಲದ ಕಾಡುಜಾಗ, ಆಗ ಈಗ ಸಿಗುವ ಸಾಹಿತ್ಯಾಸಕ್ತರ ಜೊತೆ ಮತ್ತು ಮಾತುಕತೆ ಇವಿಷ್ಟು ನನ್ನನ್ನ ಬಲುವಾಗಿ ಸೆಳೆದವು. ನನ್ನ ಮುಂದಿನ ಬದುಕಿನ ಎಷ್ಟೋ ಮೆಟ್ಟಿಲುಗಳಲ್ಲಿ ನನ್ನ ಹೆಜ್ಜೆಯನ್ನ ವಾಲ್ಡನ್ನಿನ ದಿನಚರಿಯ ಜೊತೆಗೆ ಹೋಲಿಸಿಕೊಂಡು ಕೊರಗಿದ್ದು ಮತ್ತು ಖುಶಿಪಟ್ಟಿದ್ದು ಇದೆ.
ಇಂತಿಪ್ಪ ನನ್ನ ಈ ರಮ್ಯ ಆದರ್ಶವನ್ನ ಮೊನ್ನೆ ಓದಿದ ಒಂದು ಹೊಸ ಮಾಹಿತಿ ಚೆನ್ನಾಗಿ ಚಿವುಟಿ ಹಾಕಿದೆ.
ನೀವು ನೋಡಿರದ ಅಥವಾ ನಿಮಗೆ ಗೊತ್ತಿರದ ಥೋರೋ ಎಂಬ ವರದಿಯಲ್ಲಿ ಥೋರೋ ಯಾಕೆ ಕಾಡಿಗೆ ಹೋದರು, ಅಲ್ಲಿ ವುಡನ್ ಕ್ಯಾಬಿನೆಟ್ ಮಾಡಲು ಹೇಗೆ ಸಾಧ್ಯವಾಯಿತು, ಯಾರು ಸಹಾಯ ಮಾಡಿದರು, ಬಹಳ ಸರಳವಾಗಿ ಸ್ವಯಂಸೇವೆ ಮಾಡಿಕೊಂಡು ಬದುಕುತ್ತಿದ್ದೆ ಅಂತ ಬರೆದ ಅವರ ಲಾಂಡ್ರಿ ಕ್ಲೀನ್ ಮಾಡುತ್ತಿದ್ದವರು ಯಾರು, ಪ್ರತಿದಿನದ ಬ್ರೆಡ್ ಅನ್ನು ಅವರೆಲ್ಲಿಂದ(ಯಾವ ಅಂಗಡಿಯಿಂದ)ತರುತ್ತಿದ್ದರು, ಅಲ್ಲಿಗೆ ಬಂದು ಹೋಗುತ್ತಿದ್ದವರು ಯಾರು, ಮತ್ತು ಇವರೆಲ್ಲಿಲ್ಲಿಗೆ ಹೋಗುತ್ತಿದ್ದರು, ಇವರಿದ್ದ ಏಕಾಂತದ ಜಾಗ ಜನನಿಬಿಡ ಕನ್ ಕಾರ್ಡ್ ನಗರದಿಂದ ಎಷ್ಟು ದೂರ ಮತ್ತು ಹತ್ತಿರ ಎಂಬ ವಿವರಗಳಿದ್ದವು. ಈ ವಿವಾದಾಸ್ಪದ ವರದಿಯ ಸತ್ಯಾಸತ್ಯತೆಯ ಹೊರತಾಗಿ ಅದು ಬಿಡಿಸಿಟ್ಟ ವಿವರಗಳು ನಾನು ಓದಿ ಅನುಭವಿಸಿದ್ದ ವಾಲ್ಡನ್ ಮತ್ತು ಥೋರೋ ರಿಂದ ಪೂರ್ಣ ಭಿನ್ನವಾಗಿವೆ. ಒಂದೇ ನಾಣ್ಯದ ನಾನು ಕಂಡಿರದ ಇನ್ನೊಂದು ಮುಖವಾಗಿತ್ತು. ಅದು ಮೊದಲು ನನ್ನನ್ನು ಶಾಕ್ ಗೆ ತಳ್ಳಿತಾದರೂ ನಿಧಾನವಾಗಿ ನಾನು ಅದನ್ನ ಒಪ್ಪಿಕೊಂಡು ಅದು ಹಾಗಿರದೆ ಇರಲು ಹೇಗೆ ಸಾಧ್ಯ ಎಂಬ ಮನಸ್ಥಿತಿಗೆ ಮರಳುತ್ತಿದ್ದೇನೆ.
ಒಂದು ಕನಸುಗಣ್ಣಿನ ಯುವಾವಸ್ಥೆ ಬದುಕಿನ ಹೊರಳುಗಳಲ್ಲಿ ಹಾದುಹೋಗುತ್ತಾ ಹೋಗುತ್ತಾ ವಾಸ್ತವದ ದುಪಟ್ಟಿ ಹೊದೆಯುವ ರೂಪಾಂತರವನ್ನ ನಾನು ನನ್ನಲ್ಲೇ ಕಾಣುತ್ತಿದ್ದೇನೆ. ಏನೇ ಆದರೂ ನನ್ನ ತಲ್ಲಣದ ದಿನಗಳಲ್ಲಿ ಎಲ್ಲ ಮರೆತು ಗಾಳಿಯಲ್ಲಿ ಗೋಪುರ ಕಟ್ಟಲು ನನ್ನನ್ನ ಹುರಿದುಂಬಿಸಿದ್ದು ವಾಲ್ಡನ್ ಮತ್ತು ಥೋರೋ. ಈಗಲೂ ಆ ಗೋಪುರದ ಮೇಲೆ ಇರುವ ಮಿಣುಕು ಬೆಳಕು ಅವತ್ತು ಥೋರೋ ಓದಿದಾಗ ಹುಟ್ಟಿದ ವಿಶ್ವಾಸವೇ. ಆದರೂ ಮಿಣುಕು ಬೆಳಕಿಗೆ ಕೈಯಿಟ್ಟು ಕಾಯಬೇಕು, ಗೋಪುರಕ್ಕೆ ಅಡಿಪಾಯ ಕಟ್ಟುವ ಮೊದಲು ಸುತ್ತ ಬೇಲಿಯನ್ನೂ ಹಾಕಬೇಕು ಎಂಬ ಎಚ್ಚರದ ಮನಸ್ಸನ್ನ ಕೊಟ್ಟಿರುವುದು ಬರಹಗಳಿಂದ ಹೊರಗೆ ನಿಂತು ಕಲಿಸಿದ ಬದುಕು. ಸರಳ ಬದುಕಿನ ಬಗೆಗೆ ನನ್ನಲ್ಲಿ ಒಂದು ಆಳ ಭಾವವನ್ನ ಉದ್ದೀಪಿಸಿದ ಕೆಲವೇ ಕೆಲವು ಕೃತಿಗಳಲ್ಲಿ ಇದು ಇಂದಿಗೂ ನನ್ನ ಮೆಚ್ಚಿನ ಪುಸ್ತಕ. (ಇನ್ನೊಂದು ಡಾ!! ಶ್ವೆಯಿಟ್ಝರ್ ಅವರ ಆತ್ಮ ವೃತ್ತಾಂತ) ಇದೊಂತರ ಕನಸು ಮತ್ತು ಎಚ್ಚರವನ್ನ ಎರಕಹೊಯ್ದ ಪಾಕ. ಇದು ನಮ್ಮ ಸೀಮಿತ ಓದಿನ ಸಾಮರ್ಥ್ಯ ಮತ್ತು ಮಿತಿ.
ಯಾವುದನ್ನೋ ಓದಿ ನಮ್ಮ ಮನದಲ್ಲೇನೋ ಹೊಸ ಅಲೆಯೆದ್ದಿರುತ್ತದೆ. ಎದ್ದ ಅಲೆಗಳ ತರಂಗವನ್ನು ಹಿಂಬಾಲಿಸಿ ಹೊರಟರೆ ಸಿಕ್ಕುವುದು ಬೇರೆಯದೇ ತೀರ. ಇಲ್ಲಿ ಮುಳುಗಿ ಇನ್ನೆಲ್ಲೋ ಎದ್ದಿರುತ್ತೇವೆ. ಇದನ್ನೆಲ್ಲ ಬರೆದು ಮುಗಿಸಿ ಇನ್ನೊಮ್ಮೆ ಓದಿದಾಗ ನೆನಪಾಗಿದ್ದು ಇತ್ತೀಚೆಗೆ ಓದಿದ ಚಂದಮಾಮ ಕತೆ “ಅರ್ಥ ಮತ್ತು ಅಪಾರ್ಥ”ಎಲ್ಲರೂ ಎಲ್ಲ ಕಾಲದಲ್ಲೂ ಬೇರೆ ಬೇರೆ ಕಾಂಟೆಕ್ಸ್ಟಿನಲ್ಲಿ ಈ ಕತೆ ಹೇಳಿರುತ್ತಾರೆ ಕೇಳಿರುತ್ತಾರೆ. ಕತೆಯ ನೀತಿ ಅದೇ. “ಅರ್ಥ ಮಾಡಿಕೊಳ್ಳುವುದು ಕಷ್ಟ. ಅಪಾರ್ಥ ಮಾಡಿಕೊಳ್ಳುವುದು ಸುಲಭ.”
ನನಗೆ ಓದು ಯಾವತ್ತಿಗೂ ಮಾಯಾಚಾಪೆಯೇ. ಅದಕ್ಕೇ ನಾನು ಲೇಖಕರೊಂದಿಗಿನ ನೇರ ಸಂವಹನ ಮತ್ತು ನೇರಾನೇರ ಭೇಟಿಯನ್ನ ಯಾವಾಗಲೂ ತಪ್ಪಿಸಿಕೊಳ್ಳುತ್ತಿರುತ್ತೇನೆ. ಅವರಿಗೆ ಹತ್ತಿರವಾಗುವ ಅಥವಾ ಅವರ ಬಗ್ಗೆ ತಿಳಿದುಕೊಳ್ಳುವ ದಾರಿ ಹಿಡಿದ ಕೂಡಲೇ ಓದಿದ ಎಲ್ಲ ಕತೆಗಳ ವ್ಯಾಕರಣ ಕಲಸಿ ಹೋಗಿ ಭಾವಛಂದಸ್ಸು ಪಲ್ಟಿಹೊಡೆಯುತ್ತದೆ. ಕತೆಯ ಪಾತ್ರಗಳು ಆಟವಾಡದೇ ಔಟಾಗಿಹೋಗತ್ತವೆ. ನಾನು ತುಂಬ ಮೆಚ್ಚುವ ಕನ್ನಡದ ಲೇಖಕ ತೇಜಸ್ವಿ ಕೃತಿಯೊಂದನ್ನ ಕೃತಿಕಾರನ ಹೊರತಾಗಿ ವಿಮರ್ಶೆ ಮಾಡಲು ಸಾಧ್ಯವಿಲ್ಲ ಎಂಬ ಮಾತನ್ನ ಎಷ್ಟೇ ಕನ್ ವಿನ್ಸಿಂಗ್ ಆಗಿ ಬರೆದು ತಿಳಿಸಿದ್ದರೂ, ಬರೆದವರ ಖಾಸಗಿಬದುಕಿನಲ್ಲಿ ಓದುವವರು ಪ್ರವೇಶ ಮಾಡುವುದು ನನ್ನ ಮನಸ್ಸಿಗೆ ಬರದ ಸಂಗತಿ. ನನ್ನ ಮಟ್ಟಿಗೆ – ಎಷ್ಟೇ ವಸ್ತುನಿಷ್ಟ ವಿಮರ್ಶೆಗೆ ಬಿದ್ದರೂ, ಲೇಖಕರ ಬಗೆಗಿನ ಹೆಚ್ಚಿನ ಅರಿವು ಮತ್ತು ಪೂರ್ವಗ್ರಹಿಕೆ ಒಳ್ಳೆಯ ಕೃತಿಯ ಓದಿನ ಸವಿಗೆ ಅಡ್ಡಗಾಲಾಗುತ್ತದೆ. ಈ ವಿಚಾರಕ್ಕೆ ಹಲವು ಆಯಾಮಗಳಿವೆ. ನನ್ನ ಗ್ರಹಿಕೆಗೆ ಸಿಕ್ಕಿದ್ದನ್ನ ನಾನಿಲ್ಲಿ ದಾಖಲಿಸಿದ್ದೇನೆ. ನಿಮ್ಮ ಅನಿಸಿಕೆಗಳನ್ನೂ ಹಂಚಿಕೊಂಡರೆ ಹೆಚ್ಚು ತಿಳಿಯಬಹುದು.
ಹುಟ್ಟಿದ್ದು ಶಿವಮೊಗ್ಗದ ಸಾಗರದಲ್ಲಿ. ವೆಬ್ ಡಿಸೈನಿಂಗ್ ಡಿಪ್ಲೊಮಾ ಮತ್ತು ಇಂಗ್ಲಿಷ್ ಎಂ.ಎ ಮಾಡಿ, ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಸಂಸ್ಥೆಯೊಂದರ, ತರಬೇತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ