ಮಹಾರಾಷ್ಟ್ರದ ಪ್ರಮುಖ ನಗರಿಗಳಾದ ಪುಣೆ ಮತ್ತು ಮುಂಬೈಗಳ ನಡುವೆ ಆಯ್ಕೆ ಬಂದರೆ, ನಾನು ಬಿಲ್ಕುಲ್ ಮುಂಬೈಪರ. ಅಲ್ಲಿ ಶಿವಸೇನೆಯ ಅಟಾಟೋಪವಿದೆ ನಿಜ. ಆದರೂ ಅದರ ಕಾಸ್ಮೊಪಾಲಿಟನ್ ಧರ್ಮಾತೀತವಾದ ಗುಣ, ವ್ಯಾವಹಾರಿಕತೆ ಮತ್ತು ಮಾನವೀಯತೆಗಳ ಸಂಗಮ, ಕಾರ್ಮಿಕ ಚಳುವಳಿಗಳ ಚರಿತ್ರೆ, ಅಲ್ಲಿನ ಚಿತ್ರೋದ್ಯಮಕ್ಕೆ ಹೋಗಿ ಹೊಸಬದುಕನ್ನು ಕಟ್ಟಿಕೊಂಡ ಕಲಾವಿದರ ಧೀಮಂತ ಚರಿತ್ರೆ, ಹೋಟೆಲ್ ಉದ್ಯಮಿಗಳಾಗಿರುವ ಕನ್ನಡಿಗರ ಸಾಹಸಗಳು, ಪಾರ್ಸಿಗಳ ಯಹೂದಿಗಳ ಮುಂತಾಗಿ ಅನೇಕ ಸಂಸ್ಕೃತಿಗಳನ್ನು ಬದುಕಗೊಟ್ಟಿರುವ ಅದರ ಉದಾರತೆ ಇವೆಲ್ಲ ಇಷ್ಟವಾಗುತ್ತವೆ. ಮುಂಬೈನ ಈ ಮನೋಧರ್ಮ ಚಿತ್ತಾಲ, ಬಲ್ಲಾಳ, ಶಾಂತಿನಾಥ, ಕಾಯ್ಕಿಣಿ, ಉಮಾರಾವ್, ಶಾಮಲಾ ಮುಂತಾದವರ ಬರೆಹಗಳನ್ನು ಓದುವಾಗಲೂ ಮನದಟ್ಟಾಗಿದೆ.
ಆದರೆ ಯಾಕೊ ಏನೊ ಪುಣೆಯ ಬಗ್ಗೆ ನನಗೆ ಅಷ್ಟು ಸದಭಿಪ್ರಾಯ ಇರಲಿಲ್ಲ. ಇಲ್ಲಿದ್ದ ಪೇಶ್ವೆಗಳು, ಅವರ ಜಾತಿನಿಷ್ಠೆ, ಅವರು ಬ್ರಿಟಿಶರ ಜತೆ ಒಪ್ಪಂದ ಮಾಡಿಕೊಂಡು ಮೈಸೂರಿನ ಮೇಲೆ ಮಾಡಿದ ಯುದ್ಧ, ತಿಲಕರೇ ಮೊದಲಾಗಿ ಸಂಪ್ರದಾಯವಾದಿ ಚಿಂತಕರು ಇಲ್ಲಿ ಹುಟ್ಟಿದ್ದು, ಉಚ್ಚಜಾತಿಗಳ ಹಿಡಿತದಲ್ಲಿರುವ ಇಲ್ಲಿನ ಸಾಂಸ್ಕೃತಿಕ ಲೋಕ ಇಂಥವೆಲ್ಲ ಕಾರಣವಿರಬೇಕು.
ಹಾಗೆಂದು ಪುಣೆಯನ್ನು ಒಂದೇ ಬೀಸಿನಲ್ಲಿ ನಿರಾಕರಿಸಲಾರೆ. ನನಗೆ ಪ್ರಿಯರಾದ ರಾಜವಾಡೆ, ಡಿ.ಡಿ.ಕೊಸಾಂಬಿ, ಪಿ.ವಿ.ಕಾಣೆ, ರಾ.ಚಿಂ.ಢೇರೆ ಮುಂತಾದವರ ವಿದ್ವತ್ ಪರಂಪರೆಯೂ ಇದೇ ನಗರಿಯಲ್ಲಿ ಬೆಳೆದವರು. ಭಾರತದ ಆಕ್ಸಫರ್ಡ್ ಎನಿಸಿಕೊಂಡಿದ್ದ ಪುಣೆಯ ಡೆಕ್ಕನ್ ಮತ್ತು ಫರ್ಗ್ಯುಸನ್ ಕಾಲೇಜುಗಳು, ಅತ್ಯುತ್ತಮ ಬೌದ್ಧಿಕರನ್ನು ಹುಟ್ಟಿಸಿದವು. ಇಲ್ಲಿ ಕ್ರಾಂತಿಕಾರಿಗಳೂ ಸಮಾಜ ಸುಧಾರಕರೂ ಹುಟ್ಟಿ ಬೆಳೆದರು. ಮಹಿಳಾ ಶಿಕ್ಷಣದ ಪರವಾಗಿ ಹೋರಾಟ ಮಾಡಿದ ತಾರಾಬಾಯಿ ಶಿಂಧೆ, ದಲಿತರ ಹಕ್ಕುಗಳ ಪರವಾಗಿ ಹೋರಾಡಿದ ಮಹಾತ್ಮ ಫುಲೆ ಇಲ್ಲಿಯವರು. ರಾ.ಚಿಂ.ಢೇರೆ ನಮ್ಮ ಶಂಬಾ ಜೋಶಿಯವರಷ್ಟು ಕ್ರಾಂತಿಕಾರಿ ಸಂಶೋಧಕರಲ್ಲ. ಆಸ್ತಿಕರಾದ ಅವರ ವಸ್ತುನಿಷ್ಠ ಸಂಶೋಧನೆ ಅಲ್ಲಿನ ಬುಧವಾರ ಪೇಟೆಯ ಸಾಂಪ್ರದಾಯಿಕ ಪಂಡಿತರನ್ನು ಕೆರಳಿಸಿತು. ಕೆಲವರು ಢೇರೆಯವರಿಗೆ ಬಹಿಷ್ಕಾರವನ್ನೂ ಹಾಕಿದರು. ಬಹುಶಃ ಕ್ರಾಂತಿಕಾರಕ ಚಟುವಟಿಕೆಗಳು ಕರ್ಮಠ ಪರಿಸರದಲ್ಲೇ ಮೊಳಕೆಯೊಡೆಯುತ್ತವೆ ಎಂದು ಕಾಣುತ್ತದೆ. ವಿರುದ್ಧ ಜಗತ್ತುಗಳು ಒಟ್ಟಿಗಿರುವ ಊರುಗಳಲ್ಲಿ ಪುಣೆಯೂ ಒಂದು. ಇಂತಹ ಸೈದ್ಧಾಂತಿಕ ಜಗಳಗಳಿರುವ ಊರುಗಳಲ್ಲಿ ವಾತಾವರಣ ಜೀವಂತವಿರುತ್ತದೆ. ಇದರ ಕರ್ಷಣ ಮತ್ತು ಬಿಸುಪನ್ನು ನಾನು ಶಿವಮೊಗ್ಗೆಯಲ್ಲಿದ್ದಾಗ ಅನುಭವಿಸಿದ್ದೇನೆ. ಪುಣೆಯನ್ನು ಹೋಲುವ ಕರ್ನಾಟಕದ ಶಹರಗಳೆಂದರೆ ಶಿವಮೊಗ್ಗ ಮತ್ತು ಧಾರವಾಡಗಳು.
ಉತ್ತರ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯನ್ನು ಪುಣೆಶಹರನ್ನು ಹೊರತುಪಡಿಸಿ ಕಲ್ಪಿಸಿಕೊಳ್ಳುವಂತೆಯೇ ಇಲ್ಲ. ನನ್ನ ಗುರುಗಳಾಗಿದ್ದ ಶಂಕರ ಮೊಕಾಶಿಯವರ ಹೆಸರಲ್ಲೇ ಪುಣೆಯಿತ್ತು. ಪುಣೆಯಲ್ಲಿದ್ದ ಸಂಘರ್ಷಾತ್ಮಕ ಬೌದ್ಧಿಕ ಪರಿಸರದಲ್ಲಿ ಕನ್ನಡದ ಚಿಂತಕರೂ ಲೇಖಕರೂ ಆದ ಶಂಬಾ ಜೋಶಿ, ಆಲೂರು ವೆಂಕಟರಾವ್, ಹರ್ಡೇಕರ್ ಮಂಜಪ್ಪ, ದ.ರಾ. ಬೇಂದ್ರೆ ಮುಂತಾದವರು ರೂಪುತಳೆದರು. ಸಿನಿಮಾ ಕಲಾವಿದರು ತಮ್ಮ ಅದೃಷ್ಟ ಪರೀಕ್ಷೆಗೆ ಮುಂಬೈಗೆ ಹೋಗುತ್ತಿದ್ದರೆ, ಸಂಗೀತ ಕಲಾವಿದರಾದ ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ ಮನ್ಸೂರ್, ಭೀಮಸೇನ ಜೋಶಿಯವರು ರಸಿಕರನ್ನು ಹುಡುಕಿಕೊಂಡು ಪುಣೆಗೆ ಹೋಗುತ್ತಿದ್ದರು. ಜೋಶಿಯವರಂತೂ ಪುಣೆಯನ್ನೇ ತಮ್ಮ ಮನೆಯಾಗಿಸಿಕೊಂಡರಷ್ಟೆ.
ಗಾಯಕನಟಿ ಅಮೀರ್ಬಾಯಿ ಕರ್ನಾಟಕಿ ಅವರ ಜೀವನ ಚರಿತ್ರೆ ಬರೆಯುವ ಕಾಲಕ್ಕೆ ನಾನು ಪುಣೆಯ ನ್ಯಾಶನಲ್ ಫಿಲ್ಮ್ ಅರ್ಕೈವ್ಸ್ಗೂ, ಫಿಲ್ಮ್ ಇನ್ಸ್ಸ್ಟಿಟ್ಯೂಟಿಗೆ ಎಡತಾಕಬೇಕಾಯಿತು. ಕರ್ನಾಟಕದ ಮೇಲೆ ಅದ್ಭುತ ಸಂಶೋಧನೆ ಮಾಡಿರುವ ರಾಮಚಂದ್ರ ಚಿಂತಾಮಣ ಢೇರೆಯವರ ಸಂದರ್ಶನ ಮಾಡಲು, ಅಲ್ಲಿರುವ ಕನ್ನಡಿಗರಾದ ವಿರೂಪಾಕ್ಷ ಕುಲಕರ್ಣಿಯವರ ಮೂಲಕ ಒಮ್ಮೆ ಹೋಗಿದ್ದುಂಟು. ಪ್ರತಿಸಲ ಹೋದಾಗಲೂ -ಸದಸ್ಯನಲ್ಲದ ಕಾರಣ ಒಳಗೆ ಪ್ರವೇಶವಿಲ್ಲದಿದ್ದರೂ-ಪುಣೆಯ ಇತಿಹಾಸ ಪ್ರಸಿದ್ಧ ಭಂಡಾರ್ಕರ್ ಓರಿಯಂಟಲ್ ರಿಸರ್ಚ್ ಇನ್ಸ್ಟಿಟ್ಯೂಟನ್ನು ಗುಡಿಯನ್ನು ಸುತ್ತುವ ಭಕ್ತನಂತೆ ಒಮ್ಮೆ ಸುತ್ತಿಬರುತ್ತೇನೆ. ಸಂಶೋಧನೆ ಮಾಡುವ ಯಾರಿಗೂ ಪುಣೆಯ ಆಕರ್ಷಣೆಯಿಂದ ತಪ್ಪಿಸಿಕೊಳ್ಳಲಾಗದು.
ಅಷ್ಟೊಂದು ಬಾರಿ ಪುಣೆಗೆ ಹೋದರೂ ಅಲ್ಲಿನ ಕನ್ನಡಿಗ ಮಿತ್ರರ ಜತೆಗೇ ಮಾತುಕತೆ ಆಗುತ್ತಿತ್ತು. ಮರಾಠಿಗರ ಜತೆ ಬೆರೆಯಲು ಮತ್ತು ಅವರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿರಲಿಲ್ಲ. ಈಚೆಗೆ ಪುಣೆಯ ಮಹಾರಾಷ್ಟ್ರ ಸಾಂಸ್ಕೃತಿಕ ಮಂಚ್, ಬೀಳಗಿ ಸೋದರಿಯರ ಬಗ್ಗೆ ನಾನು ಉಪನ್ಯಾಸ ಮಾಡಬೇಕೆಂದು ಕರೆದಾಗ, ಮರಾಠಿಗರ ಸಾಂಸ್ಕೃತಿಕ ಲೋಕದಲ್ಲಿ ಇಣುಕು ಹಾಕುವ ಅವಕಾಶ ಸಿಕ್ಕಿತೆಂದು ಹೋದೆ. ಈ ಅವಕಾಶ ಕಲ್ಪಿಸಿದವರು ಪುಣೆಯಲ್ಲಿ ಇಂಜಿನಿಯರ್ ಆಗಿರುವ ಪ್ರಶಾಂತ್ ಕುಲಕರ್ಣಿ. ಸಂಗೀತದಲ್ಲಿಯೂ ಪ್ರಾಗಿತಿಹಾಸದಲ್ಲಿಯೂ ಆಸಕ್ತಿಯುಳ್ಳ ಪ್ರಶಾಂತ್, ನಾನು ಮರಾಠಿಯ ರಂಗತಾರೆ ಬಾಲಗಂಧರ್ವ ಹಾಗೂ ಕನ್ನಡಿತಿ ಗೋಹರಬಾಯಿ ಕರ್ನಾಟಕಿ ಅವರ ಮೇಲೆ ಬರೆದ ಲೇಖನವನ್ನು ಅನುವಾದಿಸಿ ಮರಾಠಿಗರಿಗೆ ತಲುಪಿಸಿದವರು. ನನ್ನ ಅಮೀರ್ಬಾಯಿ ಪುಸ್ತಕವನ್ನು ಮರಾಠಿಗೆ ಅನುವಾದಿಸುತ್ತಿರುವವರು.
ಈ ಸಲದ ಭೇಟಿಯಲ್ಲಿ ಪುಣೆಯನ್ನು ವಿರಾಮದಲ್ಲಿ ಸುತ್ತಾಡಿದೆ. ಪೇಶ್ವೆಗಳ ಅರಮನೆ ಶನಿವಾರವಾಡ, ಪುಣೆಯ ನಡುವೆ ಸೀಳಿಕೊಂಡು ಹರಿಯುವ ಮುಠಾಹೊಳೆ, ಅದರ ದಡದಲ್ಲಿರುವ ಬಾಲಗಂಧರ್ವ ರಂಗಮಂದಿರ, ಸೈನ್ಯವಿರುವ ಕಂಟೋನ್ಮೆಂಟ್, ಬುಧವಾರಪೇಟೆ ಹೀಗೆ. ಪುಣೆಯ ಜನ ಸಾಂಸ್ಕೃತಿಕ ಪ್ರಜ್ಞೆಯನ್ನು ನಮಗಿಂತ ಜೀವಂತವಾಗಿ ಇರಿಸಿಕೊಂಡಿರುವವರು. ನಾನು ವಸ್ತಿ ಮಾಡಿದ್ದ ಮಹಾರಾಷ್ಟ್ರ ಸಾಂಸ್ಕೃತಿಕ ಮಂಚವು ಶನಿವಾರಪೇಟೆಯಲ್ಲಿತ್ತು. ಅದರ ಅತಿಥಿಗೃಹದ ಎದುರಿದ್ದ ಒಂದು ಕಟ್ಟಡದ ಮುಂದೆ, ಇಲ್ಲಿ ಕರ್ನಾಟಕದ ಮಹಾಕವಿ ದ.ರಾ. ಬೇಂದ್ರೆಯವರು ೧೯೧೪ರಿಂದ ೧೯೧೮ರ ತನಕ ವಾಸವಾಗಿದ್ದರು ಎಂದು ಬೋರ್ಡಿತ್ತು. ಹಿಂದೊಮ್ಮೆ ಚಾಳಾಗಿದ್ದ ಈ ಕಟ್ಟಡ ಈಗ ಫ್ಲ್ಯಾಟ್ ಆಗಿ ರೂಪಾಂತರಗೊಂಡಿದ್ದರೂ, ಅದರ ಸಾಂಸ್ಕೃತಿಕ ಮಹತ್ವವನ್ನು ಪುಣೆ ಮರೆತಿರಲಿಲ್ಲ.
ಅಲ್ಲಿನ ‘ಸಕಾಳ್ ದಿನಪತ್ರಿಕೆ ಗಮನಿಸಿದೆ. ಅದರಲ್ಲಿ ಆದಿನ ಪುಣೆಯಲ್ಲಿ ನಡೆಯುವ ಸಂಗೀತ ಸಾಹಿತ್ಯಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳಿಗಾಗಿಯೇ ಒಂದು ಪುಟವಿತ್ತು. ಆ ದಿನ ಪುಣೆಯಲ್ಲಿ ಉಸ್ತಾದ್ ಅಬ್ದುಲ್ ಕರೀಂಖಾನರ ಸ್ಮೃತಿಯಲ್ಲಿ ಒಂದು ಸಂಗೀತ ಕಾರ್ಯಕ್ರಮವಿತ್ತು; ಮಹಮದ್ ರಫಿ ಜನ್ಮದಿನದ ನೆನಪಿನಲ್ಲಿ ಅವರ ಹಾಡುಗಳ ಹಾಡಿಕೆಯಿತ್ತು; ಬಾಲಗಂಧರ್ವ ಥಿಯೇಟರಿನಲ್ಲಿ ಮರಾಠಿ ನಾಟಕವಿತ್ತು; ಅಲ್ಲೇ ಚಿತ್ರಕಲೆ ಮತ್ತು ಫೊಟೊಗ್ರಫಿಯ ಪ್ರದರ್ಶನವೂ ಇತ್ತು; ಅದರ ಕ್ಯಾಂಪಸ್ಸಿನಲ್ಲೇ ಮಾವಿನಹಣ್ಣಿನ ಪ್ರದರ್ಶನವಿತ್ತು. ಮರಾಠಿ ಓವಿಯಿಂದ ಆಧುನಿಕ ಹಾಯ್ಕುತನಕ ಕಿರುಗವಿತೆಗಳ ಹಾಡು-ವಾಚನ ಕಾರ್ಯಕ್ರಮವಿತ್ತು. ಅಂಬೇಡ್ಕರ್ ಸಂಘಟನೆಯಿಂದ ಮಹಾರಾಷ್ಟ್ರದ ಚಳುವಳಿಗಳನ್ನು ಕುರಿತ ವಿಚಾರ ಸಂಕಿರಣವಿತ್ತು. ಮರಾಠಿ ರಂಗನಟರೊಬ್ಬರ ನೆನಪಿನಲ್ಲಿ ಮರಾಠಿ ರಂಗಗೀತೆಗಳ ಕಾರ್ಯಕ್ರಮವಿತ್ತು. ಪುಣೆಯನ್ನು ಸಾಂಸ್ಕೃತಿಕ ರಾಜಧಾನಿ ಎನ್ನುವುದು ಸುಳ್ಳಲ್ಲ. ಹೊಸಪೇಟೆಯಂತಹ ಪಟ್ಟಣದಲ್ಲಿರುವ ನನಗೆ ಆ ಕಾರ್ಯಕ್ರಮಗಳನ್ನು ನೋಡಿ ಹೊಟ್ಟೆಯುರಿಯಿತು. ಹೆಚ್ಚಿನ ಕಾರ್ಯಕ್ರಮಗಳಿಗೆ ಟಿಕೇಟು ಇಲ್ಲವೇ ದೇಣಿಗೆ ಕೊಟ್ಟು ಹೋಗಬೇಕು.
ನಾನು ಮೊದಲಿಗೆ ಕೊಳಕಾಗಿ ಹರಿಯುವ ಮುಠಾ ಹೊಳೆದಡದ ಮೇಲಿರುವ ಬಾಲಗಂಧರ್ವ ಥಿಯೇಟರ್ ಆವರಣದಲ್ಲಿ ಏರ್ಪಡಿಸಿದ್ದ ಮಾವಿನಹಣ್ಣಿನ ಉತ್ಸವ ನೋಡಲು ಹೋದೆ. ರತ್ನಾಗಿರಿ ಸೀಮೆಯಿಂದ ಬಂದ ಅಪೂಸ್ ಮಾವಿನ ಸ್ಟಾಲುಗಳು ಉದ್ದಕ್ಕೂ ಇದ್ದವು. ಅದನ್ನು ಅಲ್ಲಿನ ರಾಜಕೀಯ ಪಕ್ಷವೊಂದು ಏರ್ಪಡಿಸಿತ್ತು. ಮಹಾರಾಷ್ಟ್ರದಲ್ಲಿ ರಾಜಕೀಯ ಪಕ್ಷಗಳು ಜನಸಂಸ್ಕೃತಿಯೊಳಗೆ ಬೇರುಬಿಡುವ ಸಣ್ಣ ಅವಕಾಶವನ್ನೂ ಕಳೆದುಕೊಳ್ಳುವುದಿಲ್ಲ. ರತ್ನಪಡಿ ವ್ಯಾಪಾರಿಗಳಂತೆ ಬೋದಿಹುಲ್ಲಿನ ಪೆಟ್ಟಿಗೆಗಳಲ್ಲಿ ವ್ಯಾಪಾರಿಗಳು ರೈತರು ಹೊನ್ನಿನ ಗಟ್ಟಿಗಳಂತಿರುವ ಮಾವಿನ ಹಣ್ಣನ್ನು ಜೋಡಿಸಿದ್ದರು. ನಮ್ಮಲ್ಲಿರುವಂತೆ ಹಲವು ಜಾತಿಯ ಹಣ್ಣು ಅಲ್ಲಿ ಕಾಣಲಿಲ್ಲ. ಆಪೂಸೊಂದೇ ಮೆರೆಯುತ್ತಿತ್ತು. ಜತೆಗೆ ಬಗೆಬಗೆಯ ಉಪ್ಪಿನಕಾಯಿ, ಮಾವಿನ ಹಣ್ಣಿನ ರಸಗಳು, ಮಾವಿನರಸದ ಚಾಕಲೇಟು, ಐಸ್ಕ್ರೀಮು, ಹೋಳಿಗೆರಸ ಇತ್ಯಾದಿಗಳ ಪ್ರದರ್ಶನವಿತ್ತು. ಮೂಲೆಯಲ್ಲಿ ಮಾವಿನರಸದಲ್ಲಿ ಕಲಸಿಕೊಂಡು ತಿನ್ನಲು ಒಬ್ಬ ಮಹಿಳೆ ಬಾಂಡ್ಲಿಯನ್ನು ಒಲೆಯ ಮೇಲೆ ಡಬ್ಬುಹಾಕಿ, ಅದರ ಮೇಲೆ ಮೊರದಗಲದ ಪೂರಣಪೋಳಿ ಮಾಡುತ್ತಿದ್ದಳು. ನಮ್ಮ ಸೀಮೆಯಲ್ಲಿ ಮಾವಿನತೋಟಿಗರು, ಅತ್ಯುತ್ತಮ ಹಣ್ಣನ್ನು ಸಾಂಗಲಿಗೆ ಒಯ್ಯುತ್ತಿದ್ದುದು ಯಾಕೆಂದು ಅರ್ಥವಾಯಿತು. ಕರ್ನಾಟಕದವರಿಗೆ ಮಾವು ಬೆಳೆದು ಗೊತ್ತು; ಮರಾಠಿಗರಿಗೆ ಅದನ್ನು ಸವಿದು ಗೊತ್ತು. ನಾನು ಮರಾಠಿ ಊಟವನ್ನು ಸವಿದ ‘ದೂರ್ವಾಂಕುರ್ ಎಂಬ ಹೋಟೆಲಿನಲ್ಲಿ ಕುಡಿದಷ್ಟೂ ಮಾವಿನರಸವನ್ನು ಬಡಿಸಲೆಂದೇ ಒಬ್ಬ ಮಾಣಿಯಿದ್ದನು.
ಪುಣೆಯ ಜನ ಸಾಮಾಜಿಕ ವಿಷಯದಲ್ಲಿ ಸಂಪ್ರದಾಯವಾದಿಗಳಾದರೂ ಸಂಗೀತದ ವಿಷಯ ಬಂದರೆ ಜಾತಿ, ಭಾಷೆ, ಮತದ ಆಚೆ ಹೋಗಿಬಿಡುತ್ತಾರೆ. ಆದರೂ ಪುಣೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸೇರುವ ಜನರ ಸಾಮಾಜಿಕ ಮತ್ತು ವರ್ಗ ಹಿನ್ನೆಲೆ ಏಕರೂಪಿಯಾಗಿತ್ತು. ಮೈಸೂರು ಧಾರವಾಡಗಳ ಹಾಗೆ ಪುಣೆ ಪೆನಶನದಾರರ ಸ್ವರ್ಗವೆನಿಸಿಕೊಂಡಿರುವ ಶಹರ. ಭಾರತದ ಮಧ್ಯಮವರ್ಗದ ಜನವಸತಿಗೂ ‘ಸಾಂಸ್ಕೃತಿಕ ಎನ್ನಲಾಗುವ ಚಟುವಟಿಕೆಗಳಿಗೂ ಸಂಬಂಧವಿದೆ. ಇಂತಹ ವರ್ಗಸೀಮಿತವಾದ ಚಟುವಟಿಕೆಗಳನ್ನು ಇಡೀ ಮರಾಠಿಗರ ಸಾಂಸ್ಕೃತಿಕ ಚಟುವಟಿಕೆ ಎಂದು ಸಾಮಾನ್ಯೀಕರಿಸುವುದು ಸರಿಯಲ್ಲವೇನೊ?
ನನಗೆ ಗಾಬರಿಯಾಗಿದ್ದು ಬುಧವಾರಪೇಟೆಯ ದರ್ಶನದಿಂದ. ಐದುಸಾವಿರ ಲೈಂಗಿಕ ಕಾರ್ಯಕರ್ತರಿರುವ ಇದು ಏಶಿಯಾದಲ್ಲೇ ದೊಡ್ಡ ವೇಶ್ಯಾವಾಟಿಕೆಯಂತೆ. ವಲಸಿಗ ಕಾರ್ಮಿಕರ ನಗರವಾದ ಮುಂಬಯಿಯಲ್ಲಿ ಕೆಂಪುದ್ವೀಪವಿರುವುದು ಅರ್ಥವಾಗುತ್ತದೆ. ಆದರೆ ಸಾಂಸ್ಕೃತಿಕ ರಾಜಧಾನಿ ಎನಿಸಿಕೊಂಡಿರುವ ಪುಣೆಯಲ್ಲಿ ಇದು ಹೇಗೆ ಅಸ್ತಿತ್ವದಲ್ಲಿದೆ? ನಾವು ಯಾವುದನ್ನು ಸಂಸ್ಕೃತಿ ಪರಂಪರೆ ಎಂದು ಕರೆಯುತ್ತೇವೆಯೊ ಅವುಗಳ ಮಡಿಲಲ್ಲಿ ಇಂತಹ ಅಧೋಲೋಕಗಳೂ ಇರುತ್ತವೆಯೇ? ಅಥವಾ ಸೈನಿಕ ನೆಲಸು ಇರುವ ಕಡೆಯಲ್ಲೆಲ್ಲ ಗಣಿಕಾಲೋಕ ಇರುತ್ತದೆಯೋ- ನಮ್ಮ ವಿಜಯನಗರದಲ್ಲಿ ಸೂಳೆಬಜಾರಿನ ಅವಶೇಷಗಳು ಇರುವಂತೆ.
ಒಮ್ಮೆ ಅಲ್ಲಿನ ಫಿಲ್ಮ್ ಇನ್ಸ್ಟಿಟ್ಯೂಟಲ್ಲಿರುವ ಮಿತ್ರ ಸಂವರ್ತರ ಜತೆ, ‘ಚಂದ್ರಹಾಸ (೧೯೪೮) ಚಿತ್ರದಲ್ಲಿ ಹಾಡಿರುವ ಹುಬ್ಬಳ್ಳಿ ಮೂಲದ ವಿಜಯಾ ದೇಸಾಯಿ ಅವರನ್ನು ಕಾಣಲು, ಹಡಪಸರ್ ಏರಿಯಾಕ್ಕೆ ಹೋಗಿದ್ದೆ. ಆಗ ಖ್ಯಾತ ಪಾಶ್ಚಾತ್ಯ ಗಾಯಕನೊಬ್ಬ ಬಂದ ಕಾರಣ, ಪುಣೆಯ ಟ್ರಾಫಿಕ್ಕು ಗಲಿಬಿಲಿಗೊಂಡಿತ್ತು. ಶಾಸ್ತ್ರೀಯ ಸಂಗೀತ ಪರಂಪರೆಯನ್ನು ರಕ್ಷಿಸುತ್ತಿರುವ ಪುಣೆಗೆ ಈ ಮುಖವೂ ಇದೆಯೆಂದು ತಿಳಿಯಿತು. ಗೆಳೆಯರೊಬ್ಬರು ಪುಣೆಯ ಕಂಟೋನ್ಮೆಂಟ್ ಭಾಗದಲ್ಲಿ, ಲಂಡನ್ ನಗರದ ಚಹರೆಗಳಿರುವಂತೆ ಕಟ್ಟಲಾಗಿರುವ ಪಾಶ್ಚಿಮಾತ್ಯ ಸಂಸ್ಕೃತಿಯ ಕುರುಡಾನುಕರಣೆ ಮಾಡುವ ಹೋಟೆಲೊಂದಕ್ಕೆ ಊಟಕ್ಕೆ ಕರೆದೊಯ್ದರು. ಆಗ ಪುಣೆಗೆ ಪಶ್ಚಿಮದ ಮಾರುಕಟ್ಟೆ ಸಂಸ್ಕೃತಿಯ ಚಹರೆಗಳೂ ಇವೆಯೆಂದು ತಿಳಿಯಿತು. ಇಷ್ಟಕ್ಕೂ ಪಾಶ್ಚಿಮಾತ್ಯ ಸಂಸೃತಿಯ ಕೊಡುಕೊಳೆಯೇನು ಪುಣೆಗೆ ಹೊಸತಲ್ಲ. ದಖನ್ನಿನ ರಾಣಿ ಎನಿಸಿಕೊಂಡ ಈ ಊರು ಬ್ರಿಟಿಶರಿಗೆ ಬಹಳ ಹಿಡಿಸಿತ್ತು. ಸಹ್ಯಾದ್ರಿ ಶ್ರೇಣಿಯಲ್ಲಿರುವ ಇದರ ತಂಪು ವಾತಾವರಣಕ್ಕೆ ಮನಸೋತಿದ್ದ ಅವರು ಪುಣೆಯನ್ನು ದಖನ್ನಿನ ರಾಣಿಯೆಂದು ಕರೆದರು. ಪುಣೆಯ ಸಾಂಪ್ರದಾಯಿಕ ಮರಾಠಿತನ ಮತ್ತು ಸಾಂಸ್ಕೃತಿಕ ಸಂವೇದನೆಗಳು ರೂಪುಗೊಂಡಿದ್ದೇ ಯೂರೋಪಿಯನ್ ಸಹವಾಸದಲ್ಲಿ. ಭಂಡಾರ್ಕರ್ ಅವರ ಪಾಂಡಿತ್ಯ ಕೂಡ.
ವ್ಯಕ್ತಿಯನ್ನೊ ಸಮುದಾಯವನ್ನೊ ಊರನ್ನೊ ದೇಶವನ್ನೊ ಕುರಿತ ನಮ್ಮ ತಿಳುವಳಿಕೆ, ಈ ಕುರಿತು ಚಾಲ್ತಿಯಲ್ಲಿರುವ ನಾನಾ ಗ್ರಹಿಕೆಗಳಿಂದ ರೂಪುಗೊಂಡಿರುತ್ತದೆ. ಆ ಊರು ದೇಶ ಸಮುದಾಯ ಅಥವಾ ವ್ಯಕ್ತಿಯನ್ನು ಖುದ್ದಾಗಿ ಮುಖಾಬಿಲೆ ಮಾಡಿದಾಗ, ತುಸು ಹೊಕ್ಕಾಡಿ ಒಡನಾಟ ಮಾಡತೊಡಗಿದಾಗ, ಪೂರ್ವಗ್ರಹಗಳು ಒಡೆದುಹೋಗುತ್ತವೆ. ಪುಣೆಯ ನಿದ್ದೆಯಲ್ಲಿ ಬಿದ್ದಿರುವುದೆಲ್ಲ ಮುಂಬೈ ಕನಸು ಎಂದು ಭಾಸವಾಯಿತು. ಈಗಂತೂ ಚತುಷ್ಫಥದ ಹೆದ್ದಾರಿಯಾಗಿ ಪುಣೆ-ಮುಂಬೈ ಫಾಸಲೆಯೂ ಕಡಿಮೆಯಾಗಿದೆ.
ಹೊಸ ತಲೆಮಾರಿನ ತೀಕ್ಷ್ಣ ಒಳನೋಟಗಳ ಲೇಖಕರು. ಸಂಸ್ಕೃತಿ ವಿಮರ್ಶೆ ಮತ್ತು ತಿರುಗಾಟ ಇವರ ಪ್ರೀತಿಯ ವಿಷಯಗಳು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ.
ಪುಣೆಗೆ ಹೋದಾಗ ಶನಿವಾರವಾಡಾದ ಮಹಡಿಯ ಮೇಲೆ ನಿಂತು ಬುಧವಾರ ಪೇಟೆಯ ತಿರುವನ್ನು ನೋಡಿದ ನೆನಪಾಯಿತು. ಪುಣೆಯ ಬಗೆಗಿನ ಉತ್ತಮ ಬರಹ