Advertisement
ರಾಮಮನೋಹರ ಲೋಹಿಯಾ ಮತ್ತು ರಾಮ ಕೃಷ್ಣ ಶಿವ: ಚಿತ್ರಾ ವೆಂಕಟರಾಜು ಸರಣಿ

ರಾಮಮನೋಹರ ಲೋಹಿಯಾ ಮತ್ತು ರಾಮ ಕೃಷ್ಣ ಶಿವ: ಚಿತ್ರಾ ವೆಂಕಟರಾಜು ಸರಣಿ

ಪ್ರಬಂಧದಲ್ಲಿ ರಾಮಮನೋಹರ ಲೋಹಿಯಾ ಅವರು ರಾಮ, ಕೃಷ್ಣ, ಶಿವ ಮೂವರಲ್ಲಿ ಒಂದೊಂದು ವ್ಯಕ್ತಿತ್ವವನ್ನು ಗುರುತಿಸಿದ್ದಾರೆ. ಆ ಮೂರೂ ವ್ಯಕ್ತಿತ್ವಗಳೂ ಭಾರತಕ್ಕೆ ಹೇಗೆ ಮತ್ತು ಯಾಕೆ  ಬೇಕು ಎನ್ನುವುದೇ ಲೇಖನದ ಆಶಯ. ರಾಮನಲ್ಲಿನ ಸೀಮಿತ ವ್ಯಕ್ತಿತ್ವ, ಕೃಷ್ಣ ನ ಸಮೃದ್ಧ ವ್ಯಕ್ತಿತ್ಚ ಮತ್ತು  ಶಿವ ನ ಪ್ರಮಾಣಾತೀತ ವ್ಯಕ್ತಿತ್ವ. ಈ ವ್ಯಕ್ತಿತ್ವಗಳನ್ನು ಆ ಪಾತ್ರಗಳ ಘಟನೆಗಳ ಮೂಲಕವೇ  ನಿರೂಪಿಸುತ್ತಾರೆ. ರಾಮನೊಳಗೆ ಕೃಷ್ಣ ನ ಸಮೃದ್ಧ ವ್ಯಕ್ತಿತ್ವವೂ, ಕೃಷ್ಣನೊಳಗೆ ರಾಮನ ಸೀಮಿತತೆಯೂ ಬಂದುಬಿಡುತ್ತದೆ. ನಮ್ಮ ದೇಶದ ಹಲವು ಸಂತರು ಇವೆಲ್ಲದರ ಸಹಯೋಗಕ್ಕೆ ಪ್ರಯತ್ನಿಸಿದವರೇ! ಎಂದು ಹೇಳುತ್ತಾರೆ‌.
ಚಿತ್ರಾ
ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ

ಇತ್ತೀಚೆಗೆ ,  ಕರಾವಳಿ ‘ನಿರ್ದಿಗಂತ’ ಪ್ರಸ್ತುತ ಪಡಿಸಿದ ‘ರಾಮ ಕೃಷ್ಣ ಶಿವ’ ನಾಟಕ ನೋಡಿದೆ. ನಾಟಕ ಮಾಡಲು ನಾಟಕಕೃತಿಯೇ ಬೇಕಾಗಿಲ್ಲ. ಕ್ರಿಯಾಶೀಲನಾದ ಕಲಾವಿದ ಒಂದು  ಪತ್ರಿಕಾ ಸುದ್ದಿಯಿಂದಲೂ ನಾಟಕ ಮಾಡಬಹುದು ಎಂದು ಹೇಳುತ್ತಾರೆ. ಆದರೆ, ಈ ಪ್ರಯೋಗ ನೋಡಿದ ಮೇಲೆ ನಾಟಕಕಾರ ಯಾಕೆ ಮುಖ್ಯ ಎನ್ನುವುದು ಹೆಚ್ಚು ಸ್ಪಷ್ಟವಾಯಿತು.

ಉಳಿದ ಸಾಹಿತ್ಯ ಪ್ರಕಾರಗಳಾದ ಕತೆ, ಕಾದಂಬರಿಗಳಿಗಿಂತ ನಾಟಕ ಎನ್ನುವುದು ಭಿನ್ನ. ಕತೆ, ಕಾದಂಬರಿ ನಿರೂಪಣಾ ಶೈಲಿಯಲ್ಲಿರುತ್ತದೆ. ಆದರೆ ನಾಟಕದಲ್ಲಿ ಘಟನೆಗಳೇ ನೇರವಾಗಿ ಘಟಿಸುತ್ತದೆ.

ಎಲ್ಲಾ ಕಲಾಪ್ರಕಾರಗಳಲ್ಲೂ ಹಲವಾರು ರೀತಿಯ ಪ್ರಯೋಗಗಳು ಆಗುತ್ತಲೇ ಇರುತ್ತದೆ‌. ಹಾಗೆಯೇ ಕತೆಗಳು ಕಾದಂಬರಿಗಳನ್ನು ನಾಟಕಗಳನ್ನಾಗಿ ಮಾಡುವ ಪ್ರಯೋಗವೂ ಆಗಿವೆ. ಮೊದಮೊದಲು ಇಂತಹ ಪ್ರಯೋಗಗಳು ಅಚ್ಚರಿ ಮೂಡಿಸಿದವು. ಒಂದು ಕನ್ನಡಕ ಅಥವಾ ಸಣ್ಣ ಸಣ್ಣ ಪ್ರಾಪರ್ಟಿಗಳು ಇಂಥದನ್ನು ಪಾತ್ರಸೂಚಕವಾಗಿ ಬಳಸಿ ಒಂದೇ ಪಾತ್ರವನ್ನು ಹಲವಾರು ನಟರು ಅಭಿನಯಿಸುವ ಪ್ರಯೋಗಗಳೂ ಆದವು. ಕತೆಯಲ್ಲಿ ಪಾತ್ರದ ಜೀವನ ಪಲ್ಲಟದ ಕ್ಷಣಕ್ಕೂ ಮುಂಚೆ ಒಬ್ಬ ನಟ ನಂತರ ಮತ್ತೊಬ್ಬ ನಟ ಅದೇ ಪಾತ್ರವನ್ನು ಮಾಡುವ ಪ್ರಯೋಗಗಳೂ ಆದವು‌. ಕಥಾ ನಿರೂಪಕರೇ ತಕ್ಷಣ ಪಾತ್ರವಾಗುವುದು. ಪ್ರೇಕ್ಷಕರೆದುರೇ ಪಾತ್ರದಿಂದ ಹೊರಬಂದು ನಿರೂಪಕರಾಗುವ ತಂತ್ರ ಇವೆಲ್ಲವೂ ರಂಗಭೂಮಿಯಲ್ಲಿ ಮಾತ್ರ ಸಾಧ್ಯ.

ಇತ್ತೀಚೆಗೆ ನೋಡಿದ ‘ರಾಮ ಕೃಷ್ಣ ಶಿವ’ ರಾಮಮನೋಹರ ಲೋಹಿಯಾ ಅವರ ಇದೇ ಹೆಸರಿನ ಪ್ರಬಂಧದ ಆಧಾರದಲ್ಲಿ ಕಟ್ಟಲಾದ ನಾಟಕ. ಲೋಹಿಯಾರ ಬರಹಗಳನ್ನು ಈವರೆಗೆ ಗಂಭೀರವಾಗಿ ಓದಿಕೊಂಡಿಲ್ಲದ ನನಗೆ ವೈಚಾರಿಕ ಪ್ರಬಂಧವೊಂದನ್ನು ರಂಗರೂಪಕ್ಕೆ ಹೇಗೆ ತರುತ್ತಾರೆ ಎಂಬ ಕುತೂಹಲವಿತ್ತು.

ಪ್ರಸ್ತುತ ನಾಟಕ ಪ್ರಯೋಗದಲ್ಲಿ ರಾಮ, ಕೃಷ್ಣ ಮತ್ತು ಶಿವನಿಗೆ ಸಂಬಂಧಪಟ್ಟ ಅನೇಕ ಘಟನಾವಳಿಗಳು ಇದ್ದವು. ವನವಾಸದಲ್ಲಿ ಶೂರ್ಪನಖಿಯ ಮೂಗು ಮತ್ತು ಮೊಲೆಗಳನ್ನು ಕತ್ತರಿಸುವುದು, ಮರದ ಮರೆಯಿಂದ ರಾಮ  ವಾಲಿಯನ್ನು ಕೊಲ್ಲುವುದು, ಕೃಷ್ಣನ ರಾಸಲೀಲೆ, ಅವನು ಹಬ್ಬದ ಬಗ್ಗೆ ಮಾತನಾಡುವುದು, ಶಿವ ಪಾರ್ವತಿಯರ ನೃತ್ಯ ಸ್ಪರ್ಧೆ, ಬ್ರಹ್ಮ ಮತ್ತು ವಿಷ್ಣು ನಡುವಿನ ಸ್ಪರ್ಧೆ ಹೀಗೆ ಅನೇಕ ಘಟನಾವಳಿಗಳು ಎರಡೂವರೆ ಗಂಟೆಯ ಈ ಪ್ರಯೋಗದಲ್ಲಿದ್ದವು. ನಾಟಕ ನೋಡುವಾಗ ಒಂದು ಅನುಭವವನ್ನು ನೀಡಿತಾದರೂ, ಲೋಹಿಯಾರ  ‘ರಾಮ ಕೃಷ್ಣ ಶಿವ’  ಏನು ಹೇಳುತ್ತದೆ ಎಂದು ಪ್ರಯೋಗವನ್ನು ನೋಡಿದಾಗ ಸ್ಪಷ್ಟವಾಗಲಿಲ್ಲ‌. ಹಾಗಾಗಿ ರಾಮಮನೋಹರ ಲೋಹಿಯಾರವರ ಪ್ರಬಂಧವನ್ನು ಓದುವ ಮೂಲಕ ಕರಾವಳಿ ನಿರ್ದಿಗಂತ ಪ್ರಸ್ತುತ ಪಡಿಸಿದ ‘ರಾಮ ಕೃಷ್ಣ ಶಿವ’ ನಾಟಕವನ್ನು ಅರ್ಥ ಮಾಡಿಕೊಳ್ಳುತ್ತಾ, ಎಲ್ಲಾ ರೂಪದ ಬರಹ,  ಆಲೋಚನೆ, ತತ್ವಗಳನ್ನು ರಂಗಕೃತಿಯಾಗಿ ತರಬಲ್ಲೆವೇ ಎನ್ನುವುದು ಈ ಬರಹದ ಹುಡುಕಾಟ‌.

ರಾಮಮನೋಹರ ಲೋಹಿಯಾರ ಪ್ರಬಂಧ

‘ರಾಮ ಕೃಷ್ಣ ಶಿವ’ ಪ್ರಬಂಧದಲ್ಲಿ ಲೋಹಿಯಾರವರು ಭಾರತದಲ್ಲಿನ ಪುರಾಣಗಳ ಬಗ್ಗೆ ಹೇಳುತ್ತಾರೆ. ಭಾರತದ ನೆಲ ಹಲವು ಪುರಾಣಗಳಿಂದ ಕೂಡಿದೆ. ಈ ಪುರಾಣಗಳನ್ನು ಬಿಟ್ಟು ಭಾರತವನ್ನು ನೋಡಲಾಗುವುದಿಲ್ಲ, ಎಂದು ಹೇಳುತ್ತಾ ‘ಪುರಾಣ ಎನ್ನುವುದು ಜನರ ದೇಹಧಾತುವಿನ ಭಾಗ’ ಎಂದು ಹೇಳುತ್ತಾರೆ.

ಇನ್ನು, ‘ರಾಮ ಕೃಷ್ಣ ಶಿವ ಮೂವರೂ ಭಾರದ ಮಹತ್ ಸ್ವಪ್ನಗಳು, ಮಹತ್ ದುಃಖಗಳು’  ಎಂದು ಹೇಳುತ್ತಾರೆ.

ಪುರಾಣಗಳ ಬಗ್ಗೆ ಅಥವಾ ಪುರಾಣದ ಪಾತ್ರಗಳ ಬಗ್ಗೆ ಹೇಳುವುದು ಲೇಖನದ ಉದ್ದೇಶವಲ್ಲ; ಬದಲಿಗೆ ಈ ಪುರಾಣದ ವ್ಯಕ್ತಿಗಳನ್ನು ನಾವು  ಹೇಗೆ ನೋಡಬೇಕು ಎನ್ನುವುದು ಲೋಹಿಯಾ ಅವರ ಪ್ರಬಂಧದಲ್ಲಿ ಬಹಳ ಮುಖ್ಯವಾದ ಅಂಶ. ಈ ಪುರಾಣ ಪಾತ್ರಗಳನ್ನು  ‘ಉದಾತ್ತೀಕರಣ ದ ಮಾದರಿಗಳಾದ ಮಾಹಾವ್ಯಕ್ತಿಗಳಂತೆ ನೋಡುವುದು ಹಾಸ್ಯಾಸ್ಪದವಾಗುತ್ತದೆ’  ಮತ್ತು ಇತಿಹಾಸ ಪುರುಷರಂತೆ ನೋಡಿದರೂ ತರ್ಕದ ಹೊರತು ಇನ್ನೇನೂ ಸಿಗುವುದಿಲ್ಲ. ರಾಮ ಕೃಷ್ಣರನ್ನು ಸಚ್ಚಿಂತನೆಗೋ ಸಚ್ಚಾರಿತ್ರ್ಯಕ್ಕೋ ಮಾದರಿಗಳಾಗಿ ಮಾಡಿಕೊಂಡರೆ ಅವರನ್ನು ಕೆಳಮಟ್ಟಕ್ಕೆ ಇಳಿಸಿದಂತಾಗುತ್ತದೆ. ಆದ್ದರಿಂದ ಅವರನ್ನು ದೇವರುಗಳೆಂದೋ, ಇತಿಹಾಸ ಪುರುಷರೆಂದೋ ನೋಡಬಾರದು’  ಎಂದು ಲೋಹಿಯಾ ಹೇಳುತ್ತಾರೆ.  ತಮ್ಮ ಪ್ರಬಂಧದಲ್ಲಿ ಅವರು ಅನೇಕ ಪುರಾಣದ ಪ್ರಸಂಗಗಳ ಮೂಲಕವೇ ಇದೆಲ್ಲವನ್ನೂ ನಿರೂಪಿಸಿದ್ದಾರೆ.

ಇದರಲ್ಲಿ ಪುರಾಣದ ಕತೆಗಳು ಇವೆಯಾದರೂ ಆ ಕತೆಗಳ ಮೂಲಕ ಏನು ಹೇಳುತ್ತಿದ್ದಾರೆ ಎನ್ನುವುದು ಮುಖ್ಯವೇ ಹೊರತು ಕತೆಗಳಲ್ಲ‌. ಯಾವುದೇ ಒಳ್ಳೆಯ ನಾಟಕಕಾರರು ಅಥವಾ ಸಾಹಿತಿಗಳು ಭಾಷೆಯ ಮೂಲಕವೇ ಭಾಷೆ ಹೇಳಲಾರದ್ದೇನನ್ನೋ ಹೇಳುತ್ತಿರುತ್ತಾರೆ.  ಯಾವುದೇ ಕೃತಿಯನ್ನು ನಾಟಕವಾಗಿ ರಂಗಕ್ಕೆ ತರುವಾಗ, ‘ಈ ಕೃತಿಯ ಮೂಲಕ ನಾಟಕಕಾರ  ಅಥವಾ ಸಾಹಿತಿ ಏನನ್ನು ಹೇಳುತ್ತಿದ್ದಾನೆ ‘ ಎನ್ನುವ ಸ್ಪಷ್ಟತೆ ನಿರ್ದೇಶಕರಿಗೆ ಮತ್ತು ಇಡೀ ತಂಡಕ್ಕೆ ಬೇಕಾಗುತ್ತದೆ. ಇಲ್ಲದಿದ್ದರೆ ನಾಟಕಕಾರ ಬರೆದಿಟ್ಟ ಸಾಲುಗಳನ್ನು ಬಹಳ ಚಂದ ಮಾಡಿ ರಂಗದ ಮೇಲೆ ಹೇಳುವುದೇ ಒಂದು ನಾಟಕ ಎಂದಾಗುತ್ತದೆ.

ರಾಮ, ಕೃಷ್ಣ ಶಿವ ನಾಟಕ ಪ್ರಯೋಗವು ಹೆಚ್ಚು ಕಡಿಮೆ ಪ್ರಸಂಗಗಳನ್ನು ನಿರೂಪಿಸಿತೇ ಹೊರತು, ‘ರಾಮ ಕೃಷ್ಣ ಶಿವ’ ಪ್ರಬಂಧದ ಆಶಯವನ್ನು ರಂಗದ ಮೇಲೆ ತರಲು ಸೋತಿತು.

ಪ್ರಬಂಧದಲ್ಲಿ ರಾಮಮನೋಹರ ಲೋಹಿಯಾ ಅವರು ರಾಮ, ಕೃಷ್ಣ, ಶಿವ ಮೂವರಲ್ಲಿ ಒಂದೊಂದು ವ್ಯಕ್ತಿತ್ವವನ್ನು ಗುರುತಿಸಿದ್ದಾರೆ. ಆ ಮೂರೂ ವ್ಯಕ್ತಿತ್ವಗಳೂ ಭಾರತಕ್ಕೆ ಹೇಗೆ ಮತ್ತು ಯಾಕೆ  ಬೇಕು ಎನ್ನುವುದೇ ಲೇಖನದ ಆಶಯ. ರಾಮನಲ್ಲಿನ ಸೀಮಿತ ವ್ಯಕ್ತಿತ್ವ, ಕೃಷ್ಣ ನ ಸಮೃದ್ಧ ವ್ಯಕ್ತಿತ್ಚ ಮತ್ತು  ಶಿವ ನ ಪ್ರಮಾಣಾತೀತ ವ್ಯಕ್ತಿತ್ವ. ಈ ವ್ಯಕ್ತಿತ್ವಗಳನ್ನು ಆ ಪಾತ್ರಗಳ ಘಟನೆಗಳ ಮೂಲಕವೇ  ನಿರೂಪಿಸುತ್ತಾರೆ. ರಾಮನೊಳಗೆ ಕೃಷ್ಣ ನ ಸಮೃದ್ಧ ವ್ಯಕ್ತಿತ್ವವೂ, ಕೃಷ್ಣನೊಳಗೆ ರಾಮನ ಸೀಮಿತತೆಯೂ ಬಂದುಬಿಡುತ್ತದೆ. ನಮ್ಮ ದೇಶದ ಹಲವು ಸಂತರು ಇವೆಲ್ಲದರ ಸಹಯೋಗಕ್ಕೆ ಪ್ರಯತ್ನಿಸಿದವರೇ! ಎಂದು ಹೇಳುತ್ತಾರೆ‌.

ರಾಮ

ನಾಟಕ ಪ್ರಯೋಗದಲ್ಲಿ ರಾಮನ ಸೀಮಿತತೆಯ ವ್ಯಕ್ತಿತ್ವವನ್ನು ವಿವರಿಸುವುದರ ಮೂಲಕ ರಾಮನ ಪಾತ್ರ ತೆರೆದುಕೊಳ್ಳುತ್ತದೆ. ಇಲ್ಲಿ ಶೂರ್ಪನಖಿಯ ಮೂಗು ಮತ್ತು ಮೊಲೆಗಳನ್ನು ರಾಮ ಕತ್ತರಿಸುವುದು ಮತ್ತು ಶೂರ್ಪನಖಿ ದುಃಖತಪ್ತಳಾಗಿ ಹೋಗುವ ಪ್ರಸಂಗ ನಾಟಕದಲ್ಲಿದೆ‌. ಯಕ್ಷಗಾನದ ಶೈಲಿಯಲ್ಲಿ  ಈ ದೃಶ್ಯವನ್ನು ಪ್ರಸ್ತುತಪಡಿಸಿದ್ದಾರೆ. ಆದರೆ ಲೋಹಿಯಾ ಈ ಪ್ರಸಂಗವನ್ನು ತಮ್ಮ ಪ್ರಬಂಧದಲ್ಲಿ ಉದ್ಧರಿಸುವುದು ‘ರಾಮ ಶ್ರೊತ್ರಿಯನಾಗಿದ್ದ; ವಕ್ತಾರನಾಗಿರಲಿಲ್ಲ’ ಎಂದು ಹೇಳುವುದಕ್ಕೆ‌ ಮಾತ್ರ. ಆ ಘಟನೆಯನ್ನು ದೃಶ್ಯೀಕರಿಸಿದರೆ ಆ ದೃಶ್ಯ ನೆನಪಿನಲ್ಲುರುತ್ತದೆಯೇ ಹೊರತು ಪ್ರಬಂಧದಲ್ಲಿ ಈ ಪ್ರಸಂಗವನ್ನು  ಏನು ಹೇಳುವುದಕ್ಕೆ ಬಳಸಿದ್ದಾರೆ ಎನ್ನುವುದು ತಿಳಿಯುವುದಿಲ್ಲ ಮತ್ತು ಪ್ರಬಂಧದಾಚೆಗೂ ಈ ದೃಶ್ಯದಿಂದ ಏನೂ ಧ್ವನಿಸುವುದಿಲ್ಲ.

ಚಂದ್ರನ ಕತೆ

ರಾಮ ಮತ್ತು ಕೃಷ್ಣ ಇಬ್ಬರಲ್ಲೂ ಚಂದ್ರನ ಕತೆ ಬರುತ್ತದೆ. ಸೀತೆಯನ್ನು ಕಳೆದುಕೊಂಡ ಪ್ರಕೃತಿಯ ಮುಂದೆ ಪರಿತಪಿಸುತ್ತಾನೆ. ಆಗ, ಚಂದ್ರ ರಾಮನನ್ನು ನೋಡಿ ನಗುತ್ತಾನೆ. ರಾಮ ಕೃಷ್ಣ ಇಬ್ಬರೂ ವಿಷ್ಣುವಿನ ರೂಪವೇ ಆದ್ದರಿಂದ ಮುಂದೆ ದ್ವಾಪರಯುಗದಲ್ಲಿ ಕೃಷ್ಣ ೧೬೦೦೦ ಗೂಪಿಕೆಯರ ಜತೆ ನರ್ತಿಸುವಾಗ ಚಂದ್ರನ ಮುಖ ಬಾಡುತ್ತದೆ. ‘ರಾಮನಲ್ಲಿ ಕೃಷ್ಣ, ಕೃಷ್ಣ ನಲ್ಲಿ ರಾಮನನ್ನು ಜನ ನೋಡಿದ್ದಾರೆ’ ಎಂದು ಹೇಳುವಾಗ ಈ ಪ್ರಸಂಗವನ್ನು ಹೇಳುತ್ತಾರೆ.

ಅಗಸನ ಘಟನೆ ಸೀತೆಯ ಪಾವಿತ್ರ್ಯತೆಯನ್ನು ಪ್ರಶ್ನಿಸಿದ ಅಗಸನ ಘಟನೆ ಈ ಪ್ರಬಂಧದಲ್ಲಿದೆ‌. ನಾಟಕ ಪ್ರಯೋಗದಲ್ಲಿಲ್ಲ.  ‘ಆರೋಪ ಅನ್ನುವುದು ರೋಗದ ಅಭಿವ್ಯಕ್ತಿ’ ಆದ್ದರಿಂದ, ನಿಯಮ ಮೂರ್ಖತನದ್ದಾದರೂ ಶಿಕ್ಷೆ ಕ್ರೂರವಾದರೂ  ಸೀಮಿತ ವ್ಯಕ್ತಿತ್ವದ ರಾಮ ಅದನ್ನು ಮೀರಲಿಲ್ಲ. ನಿಯಮ ಬದಲಿಸಲಿಲ್ಲ. ‘ಸೀಮಿತ ವ್ಯಕ್ತಿತ್ವದ ಪರಿಪೂರ್ಣ ಮಾದರಿ ಇದರಲ್ಲಿದೆ’ ಎನ್ನುವುದನ್ನು ಹೇಳುವುದಕ್ಕೋಸ್ಕರ ಈ ಘಟನೆಯನ್ನು ಲೋಹಿಯಾ ಹೇಳುತ್ತಾರೆ.

ಕೃಷ್ಣ

ಕೃಷ್ಣ ಸಮೃದ್ಧ ವ್ಯಕ್ತಿತ್ವದ ಪರಿಪೂರ್ಣತೆ. ಅವನದು ಅಸಾಮಾನ್ಯ ವ್ಯಕ್ತಿತ್ವ. ಬೆಣ್ಣೆ ಕದ್ದದ್ದು, ಮತ್ತೊಬ್ಬನ ಹೆಂಡತಿಯನ್ನು ಕದ್ದದ್ದು. ಸೂರ್ಯನನ್ನು ಮುಚ್ಚಿ ಸುಳ್ಳು ಕತ್ತಲಲ್ಲಿ ಮಹಾವೈರಿಯ ಕೊಲ್ಲಿಸಿದ್ದು, ಮಿತ್ರನಿಗೆ ತನ್ನ ತಂಗಿಯನ್ನೇ ಓಡಿಸಿಕೊಂಡು ಹೋಗಲು ನೆರವಾದದ್ದು… ಈ ಎಲ್ಲಾ ಘಟನೆಗಳನ್ನೂ ಹೇಳಿ,  ‘ಇದೆಲ್ಲವನ್ನೂ ಕೃಷ್ಣ ತನಗಲ್ಲದೇ ತನ್ನ ಇತರ ಅಂಗೋಪಾಂಗಗಳಿಗಾಗಿ ಸದಾ ಅನಂತವಾಗಿ , ಅವಿಶ್ರಾಂತವಾಗಿ ಟುಕುಗುಡುವ ಪಾಪದ ಹೃದಯದಂತಿದ್ದಾನೆ’ – ಎಂದು ಕೃಷ್ಣನ ವ್ಯಕ್ತಿತ್ವ ಹೇಳುವುದಕ್ಕೆ ಲೋಹಿಯಾ ಇವುಗಳನ್ನು ಹೇಳಿದ್ದಾರೆ.

ಹಬ್ಬದ ಬಗ್ಗೆ ಕೃಷ್ಣ ಮಾತನಾಡುವ ದೃಶ್ಯ ಚನ್ನಾಗಿದೆ. ಈ ಪ್ರಬಂಧದ ಮುಂದುವರಿಕೆಯಂತೆ ಕಾಣುತ್ತದೆ.

(ರಾಮಮನೋಹರ ಲೋಹಿಯಾ)

ಶಿವ

ಬ್ರಹ್ಮನೂ ವಿಷ್ಣುವೂ ತಮ್ಮತಮ್ಮಲ್ಲೇ ಕಾದಾಡಿಕೊಂಡು ಶಿವನ ಬಳಿ ಬರುತ್ತಾರೆ. ಶಿವ ಅವನ ಗಾತ್ರವನ್ನು ಅಳೆಯಲು ಹೇಳಿದಾಗ ಅವರು ಸೋತು ಬರುತ್ತಾರೆ.

ಅದೇ ಶಿವ ಲೋಕ ಸುತ್ತಿಬರುವಂತೆ ಹೇಳಿದಾಗ ಕಾರ್ತಿಕೇಯ ತತ್ ಕ್ಷಣ ಲೋಕ ಸುತ್ತಲು ಹೊರಡುತ್ತಾನೆ. ಆದರೆ ಗಣೇಶ ಅವರ ಸುತ್ತವೇ ಸುತ್ತುತ್ತಾನೆ. ಈ ಎರಡು ಘಟನೆಗಳೂ ‘ಮೂಲತಃ  ಶಿವ ಅನಂತಗಾತ್ರನಾಗಿಯೂ ಹಾಗೆಯೇ ಅದೇ ಕಾಲಕ್ಕೆ ಏಳು ಹೆಜ್ಜೆ ಅಳೆಯಬಲ್ಲ ನಿಶ್ಚಿತಗಾತ್ರನೂ ಆಗಿದ್ದಾನೆ’ ಎಂದು ಹೇಳುವುದಕ್ಕಾಗಿ  ಲೋಹಿಯಾ ಈ ಎರಡೂ ಪ್ರಸಂಗವನ್ನೂ  ಹೇಳುತ್ತಾರೆ.

ಶಿವನ ನೃತ್ಯ

ಪಾರ್ವತಿಯೊಂದಿಗೆ ಶಿವ ನೃತ್ಯದ ಸ್ಪರ್ಧೆ ಮಾಡಿದಾಗ, ಶಿವ ಇನ್ನೇನು ಸೋಲುತ್ತಾನೆ ಎನಿಸುವಾಗ ಹೆಂಗಸರಿಗೆ ಅಶ್ಲೀಲವೆನಿಸುವ ಭಂಗಿಯನ್ನು ಮಾಡಿ ಪಾರ್ವತಿಯನ್ನು ಸೋಲಿಸುತ್ತಾನೆ. ಇದನ್ನು ವಿವರಿಸಿ ಲೋಹಿಯಾ ಹೇಳುತ್ತಾರೆ – ‘ಆದರೆ ಬದುಕಿನ ಕುಣಿತದಲ್ಲಿ ಅಂತ ಹುಚ್ಚು ನಗೆತಗಳಿವೆ.  ಶಿವ ಅಂಥ ವೀರ್ಯವತ್ತಾದ ಭಂಗಿಯನ್ನು ತೋರಿಸಿದ್ದು ಪಂಥವೊಂದರಲ್ಲಿ ತಾನು ಸೋತುಹೋಗಲಿದ್ದಾಗ, ಅದನ್ನು ಮೋಸದಿಂದ ಮರೆಸಿ ಹೇಗೋ ಗೆಲುವು ಪಡೆಯುವ ಸಲುವಾಗಿಯೇ? ಅಥವಾ ಕನಿಷ್ಠ ಅದರಷ್ಟೇ ಮುಖ್ಯವಾಗಿ ಹೆಜ್ಜೆಯಿಂದ ಹೆಜ್ಜೆಗೆ ಲಯ ಕಾವೇರುತ್ತಾ  ಸಹಜ ತೀವ್ರಗೊಂಡು ವಿಜೃಂಭಿಸುವ ಬದುಕಿನ ಕುಣಿತದ ಅಂಗ ಮಾತ್ರವಾಗಿಯೇ?’ ಎಂದು ಹೇಳುತ್ತಾರೆ.

ಈ ಮೇಲಿನ ಹಲವು ಘಟನೆಗಳನ್ನು ನಾಟಕದಲ್ಲಿ ದೃಶ್ಯೀಕರಿಸಲಾಗಿದೆ. ಹಾಡು, ನೃತ್ಯ, ವಾಚನ, ಅಭಿನಯ ಎಲ್ಲವನ್ನೂ ಬಳಸಿಕೊಂಡು ಲೋಹಿಯಾ ಅವರ ಮಾತುಗಳನ್ನೇ ಉದ್ಧರಿಸಿ ಪ್ರಸಂಗಗಳನ್ನು ಪ್ರದರ್ಶಿಸಿದ್ದಾರೆ. ಆದರೆ ಪ್ರಬಂಧದಲ್ಲಿ ಲೋಹಿಯಾ ಏನನ್ನು ಹೇಳುವುದಕ್ಕೆ ಈ ಪ್ರಸಂಗಗಳನ್ನು ಉದ್ಧರಿಸಿದ್ದಾರೋ ಅದು ಪ್ರದರ್ಶನದಲ್ಲಿ ಅನುಭವಕ್ಕೆ ಬರುವುದಿಲ್ಲ. ಹಾಗಾಗಿ ಪ್ರದರ್ಶನವು ರಾಮ, ಕೃಷ್ಣ, ಶಿವ ಪ್ರಬಂಧದಲ್ಲಿ  ಪ್ರಸಂಗಗಳಿಗೆ ಸೀಮಿತವಾದಂತೆನಿಸುತ್ತದೆ‌.

ಪ್ರಸ್ತುತತೆ

ಯಾವುದೇ ಒಂದು ಕತೆಯನ್ನೋ, ಬರಹವನ್ನೋ, ಕಾದಂಬರಿಯನ್ನೋ, ಪುರಾಣವನ್ನೋ ನಾವು ನಾಟಕಕ್ಕಾಗಿ ಆಯ್ಕೆ ಮಾಡಿಕೊಳ್ಳುವುದೇ ಅದು ಇಂದಿಗೆ ಪ್ರಸ್ತುತ ಎಂಬ ಕಾರಣಕ್ಕೆ. ಕುವೆಂಪು ‘ಸ್ಮಶಾನ ಕುರುಕ್ಷೇತ್ರ’ ಬರೆದಾಗ ಮಹಾಯುದ್ಧದ ಹಿನ್ನೆಲೆಯಿತ್ತು. ಅದು ಮಹಾಭಾರತದ ಕತೆಯೇ ಆದರೂ ಅದನ್ನು ನಿರೂಪಿಸಿದ ರೀತಿಯೇ ಅದನ್ನು ಇನ್ನಷ್ಟು ಪ್ರಸ್ತುತವನ್ನಾಗಿಸಿತು. ಅದೇ ‘ಶೂದ್ರ ತಪಸ್ವಿ’ ಬರೆಯುವಾಗ, ವಾಲ್ಮೀಕಿ ರಾಮಾಯಣದಲ್ಲಿನಂತೆ  ಶೂದ್ರನಾದ ಶಂಭೂಕನ ವಧೆಯಾಗದೇ, ಬಾಣವೇ ತಿರುಗಿ ಬ್ರಾಹ್ಮಣನಿಗೆ ಜ್ಞಾನೋದಯವಾಗುತ್ತದೆ. ಈ ಎರಡರಲ್ಲೂ ಪ್ರಸ್ತುತತೆ ಎನ್ನುವುದು ಕತೆಯ ಒಳಗಿನಿಂದಲೇ ಬಂದಿದೆ.

ಕೆ‌.ವಿ. ಅಕ್ಷರ ಅವರು ನಿರ್ದೇಶಿಸಿದ್ದ ‘ ಸ್ಮಶಾನ ಕುರುಕ್ಷೇತ್ರ’ ಪ್ರಯೋಗದಲ್ಲಿ, ನಾಟಕದ ಕೊನೆಯಲ್ಲಿ ನಟ ವಿಮಾನದಲ್ಲಿ ಆಟವಾಡುವ ದೃಶ್ಯ ಬರುತ್ತದೆ. ಅದು ನಾಟಕದಲ್ಲಿಲ್ಲ. ಆದರೆ ಪ್ರಯೋಗದಲ್ಲಿ ಆ ವಿಮಾನದಿಂದ ಇಡೀ ನಾಟಕ  ಇಂದು ನಡೆಯುತ್ತಿರುವ ಯುದ್ಧಕ್ಕೆ ಸ್ಪಂದನೆಯಾಗುತ್ತದೆ. ಇತ್ತೀಚೆಗೆ ಪ್ರಸನ್ನ ಅವರು ನಿರ್ದೇಶಿಸಿದ ‘ಅಯೋಧ್ಯಾಕಾಂಡ’ ನಾಟಕದ ಕೈಕೆಯಿಯ ಮಾನೋಲಾಗ್, ಅಕ್ಷರಕ್ಷರವೂ  ಇಂದಿನ ಮಹಿಳಾ ರಾಜಕಾರಣಿಯೊಬ್ಬರ ಮಾತುಗಳು ಎನಿಸಿದ್ದು ಸುಳ್ಳಲ್ಲ. ಆದರೆ ಆ ಮಾತುಗಳನ್ನು ಆಡಿದ್ದು ಪುರಾಣದ ಪಾತ್ರ ಕೈಕೆಯಿಯೇ. ಆದರೆ, ‘ ರಾಮ ಕೃಷ್ಣ ಶಿವ’ ನಾಟಕದಲ್ಲಿ ಕೃಷ್ಣನಿಗೆ ಬಾಣ ನೆಟ್ಟಾಗ (ಪ್ರಸ್ತುತ ಪ್ರಯೋಗದಲ್ಲಿ ಇದನ್ನು ಗನ್ ಶಾಟ್ ಮಾಡಿದ್ದಾರೆ) ಕೃಷ್ಣನ ಬಾಯಿಯಿಂದ ನಿರ್ದೇಶಕರು ‘ಹೇ ರಾಮ್’ ಎಂದು ಹೇಳಿಸಿದ್ದಾರೆ. ಕೃಷ್ಣನ ಕೊನೆಯ ಕ್ಷಣವನ್ನು  ಲೋಹಿಯಾ ಹೀಗೆ ಬರೆದಿದ್ದಾರೆ.

‘ಅವನ ಕೊನೆಯ ನೋಟವೂ, ಅದರ ಜತೆಗೆ ಇಳಿದು ಬಂದ ಕಾರುಣ್ಯದ ಮಂದಹಾಸವೂ ಬೇಡನನ್ನು ಬೆಳಗಿತೇ? ಅವನ ಮನಸ್ಸಿನಲ್ಲಿ ಏನು ನಡೆದಿರಬಹುದು? ಹರ್ಷ ಕೊಡುವ, ಹರಹು ಕೊಡುವ ಬದುಕಿನ ಆಟವೇ? ಎಲ್ಲ ಲೀಲಾಮಾತ್ರವೇ ಆಗಿರುವ ಈ ಭ್ರಮೆ ಸತ್ಯಗಳೆ?’

ಈ ಮಾತುಗಳು ಗಾಂಧಿಯ ಕೊನೆಯ ಗಳಿಗೆಗೂ ಹೇಳಬಹುದಾದರೂ, ಕೃಷ್ಣನ ಕೊಲೆಗೆ ಬಾಣದ ಬದಲಾಗಿ ಗನ್ ಶಾಟ್ ಬಳಸಿ ಆ ಪಾತ್ರದ  ಬಾಯಿಯಿಂದ ‘ಹೇ ರಾಂ’ ಎಂದು ಹೇಳಿಸಿರುವುದು ಹಲವು ಗೊಂದಲವನ್ನು ಮೂಡಿಸುತ್ತದೆ. ಪ್ರಸ್ತುತ ಎನಿಸುವುದಿಲ್ಲ. ಗಾಂಧಿಯಲ್ಲಿ ರಾಮನ ಸೀಮಿತತೆ, ಕೃಷ್ಣನ ಸಮೃದ್ಧತೆ ಎರಡೂ ಇತ್ತು ಎನ್ನುವ ಲೋಹಿಯಾರ ಪ್ರಬಂಧವನ್ನು ಕೃಷ್ಣನ ಬಾಯಲ್ಲಿ ‘ಹೇ ರಾಮ್’ ಹೇಳಿಸುವುದು ಸಮಸ್ಯಾತ್ಮಕ ಎನಿಸುತ್ತದೆ.

ನಾಟಕದಲ್ಲಿ ಧರ್ಮರಾಯ ಕೃಷ್ಣನನ್ನು ನೋಡಲು ಬರುವ ದೃಶ್ಯ ಇದೆ. ಇದು ಲೋಹಿಯಾರ ಪ್ರಬಂಧದಲ್ಲಿ ಇಲ್ಲ. ಇಲ್ಲಿ ಧರ್ಮರಾಯ ಪಾತ್ರಧಾರಿಯನ್ನು ‘ಧರ್ಮಾಧಿಕಾರಿ’ ಯಾಗಿ ಮಾಡಿದ್ದಾರೆ. ಪಾತ್ರದ ಕನ್ನಡಕ, ಬಿಳಿ ಉಡುಗೆ, ಪೇಟ, ಕೈಯಲ್ಲಿ ದಂಡ ಎಲ್ಲವೂ ಧರ್ಮಾಧಿಕಾರಿ ಗಳನ್ನೇ ಸೂಚಿಸುತ್ತದೆ. ರಂಗದ ಮೇಲೆ ಧರ್ಮರಾಯನ ಪಾತ್ರ ಬಂದಾಗ  ‘ನಿನ್ನ ಅಧಿಕಾರಕ್ಕಾಗಿ ಎಷ್ಟು ಹೆಣ್ಣುಮಕ್ಕಳ ಮಾರಣಹೋಮವಾಯಿತು!’ ಎಂಬ ಹಲವಾರು ಹೆಣ್ಣುದನಿಗಳ ಆಕ್ರಂದನ ರಂಗದ ಬದಿಯಿಂದ  ಬರುತ್ತದೆ. ನಂತರ ಧರ್ಮರಾಯ/ ಧರ್ಮಾಧಿಕಾರಿ ಉದಾತ್ತವಾಗಿ ‘ನನಗೆ ಅಧಿಕಾರ ಸಾಕಾಗಿದೆ. ನಾನು ಹಿಮಾಲಯಕ್ಕೆ ಹೋಗುತ್ತೇನೆ’ ಎಂದು ಹೇಳುತ್ತಾರೆ. ಇಲ್ಲಿ ಧರ್ಮರಾಯ – ಧರ್ಮಾಧಿಕಾರಿಯ ಹೋಲಿಕೆ ಎಷ್ಟು ಸರಿ? ಮಹಿಳೆಯರ ದನಿಯ ಪರ ನಾಟಕ ಮಾತಾಡುತ್ತದೆಯೇ ಅಥವಾ ಧರ್ಮಾಧಿಕಾರಿಯ ಪರ ಈ ಘಟನೆ ಇದೆಯೇ? ಒಂದು ಕಲಾಕೃತಿ ಏಕಕಾಲಕ್ಕೆ ಎರಡೂ ಪಕ್ಷ ವಹಿಸುವುದು ಹೇಗೆ ಸಾಧ್ಯ? ಎಂಬ ಪ್ರಶ್ನೆ ಮೂಡುತ್ತದೆ.

ನಾಟಕದಲ್ಲಿ ಶಂಭೂಕ ವಧೆಯ ಪ್ರಸಂಗವನ್ನು ನಿರ್ದೇಶಕರು ತಂದಿದ್ದಾರೆ. ಆದರೆ ಈ ಪ್ರಸಂಗ ಮೂಲ ಪ್ರಬಂಧದಲ್ಲಿಲ್ಲ. ಶಂಭೂಕನನ್ನು ಒಬ್ಬ ಚಿತ್ರ ಕಲಾವಿದನಾಗಿ ಚಿತ್ರಿಸುವುದು ಇಡೀ ಪ್ರಸಂಗದ ಗಮನವನ್ನೇ ಪಲ್ಲಟಗೊಳಿಸುತ್ತದೆ. ಈಗ ಶಂಭೂಕನನ್ನು ಒಬ್ಬ ಶೂದ್ರನಾಗಿ ನೋಡಬೇಕೋ? ಪ್ರಭುತ್ವದ ಕೆಂಗಣ್ಣಿಗೆ ಗುರಿಯಾದ ಕಲಾವಿದನಾಗಿ ನೋಡಬೇಕೋ! ಒಬ್ಬ ಬ್ರಾಹ್ಮಣ ಮತ್ತು ಶೂದ್ರನ ನಡುವಿನ ಸಮಸ್ಯೆ ಬೇರೆ – ಒಬ್ಬ ಕಲಾವಿದ ಮತ್ತು ಪ್ರಭುತ್ವದ ಸಮಸ್ಯೆ ಬೇರೆಯಲ್ಲವೇ! ಈ ಎರಡನ್ನೂ ಶೂದ್ರತಪಸ್ವಿ ಯ ಹಿನ್ನೆಲೆಯಲ್ಲಿ ನೋಡಲು ಬರುವುದಿಲ್ಲ.

ಹಾಗೆಂದು ಲೋಹಿಯಾ ತಮ್ಮ ಪ್ರಬಂಧ ದಲ್ಲಿ ಉಲ್ಲೇಖಿಸಿದ ಪ್ರಸಂಗಗಳನ್ನೇ ನಾಟಕ ಮಾಡಬೇಕೆಂಬ ನಿಯಮವೇನಿಲ್ಲ. ಆ ಪ್ರಬಂಧ ಓದುವಾಗ ಕಲಾವಿದನೊಬ್ಬನ ಮನಸಿನಲ್ಲಿ ಉಂಟಾಗುವ ಪ್ರಶ್ನೆಗಳು, ಅಥವಾ ಅದಕ್ಕೆ ಸಮಾನಾಂತರವಾದ ಆಲೋಚನೆಗಳಿರುವ ಘಟನೆಗಳನ್ನೂ ರಂಗರೂಪಕ್ಕೆ ತರಬಹುದು. ಪುರಾಣವೇ ಆಗಬೇಕೆಂದೇನೂ ಇಲ್ಲ.  ಆದರೆ ಲೋಹಿಯಾರ ಪ್ರಬಂಧ ಆಧರಿಸಿದ ನಾಟಕ ಎಂದಾಗ ನಾಟಕ ಅವರ ಚಿಂತನೆಗಳಿಗೆ ಬದ್ಧವಾಗಿರಬೇಕಾಗುತ್ತದೆ. ಪುರಾಣದ ಪಾತ್ರಗಳನ್ನು ನಮ್ಮ ಸಾಮಾನ್ಯ ದೃಷ್ಟಿಯಿಂದ ನೋಡಬಾರದು ಎಂದು ಲೋಹಿಯಾ ಹೇಳುತ್ತಾರೆ. ಆದರೆ, ವಾಲಿಯನ್ನು ಕೊಂದಾಗ, ಸುಗ್ರೀವನ ಮಡಿಲಲ್ಲಿ ವಾಲಿ ಪ್ರಾಣ ಬಿಟ್ಟಾಗ, ‘ಒಂದು ಸಮುದಾಯದ ಉಳಿವಿಗಾಗಿಯೋ ಮುಂದೆ ಒಳ್ಳೆಯದಾಗುತ್ತದೆ ಎನ್ನುವುದಕ್ಕೆ ಒಂದು ಕೊಲೆಯಾಗುವುದು ಸರಿಯೇ?’ ಎಂದು ನಾಟಕದಲ್ಲಿನ ನಟರು ಕೇಳುವುದು ಲೋಹಿಯಾ ಅವರು ಪುರಾಣ ಪಾತ್ರಗಳ ಬಗ್ಗೆ ‘ ಸಾಮಾನ್ಯ ದೃಷ್ಠಿಯಲ್ಲಿ ನೋಡಬಾರದು’ ಎನ್ನುವುದಕ್ಕೆ ವಿರೋಧವಾಗಿದೆ. ಪುರಾಣ ನೀತಿಪಾಠವಲ್ಲ (ಅದರ ಬೈ ಪ್ರಾಡಕ್ಟ್ ಆಗಿ ನೀತಿ ಬರಬಹುದು) ಎನ್ನುತ್ತಾರೆ ಲೋಹಿಯ. ನಾಟಕದ ಕೊನೆಯಲ್ಲಿ ‘ಕೇಳೋ ಜಾಣ
ಶಿವ ಧ್ಯಾನ ಮಾಡಣ್ಣ
ನಿನ್ನೊಳಗ ನೀನು
ತಿಳಿದು ನೋಡಣ್ಣʼ – ಎನ್ನುವ ತತ್ವಪದ ಇಡೀ ಪ್ರಯೋಗಕ್ಕೆ ನೀತಿಪಾಠದ ಒಂದು ಚೌಕಟ್ಟನ್ನು ಹಾಕಿಬಿಡುತ್ತದೆ.

 

ರಾಮ, ಕೃಷ್ಣ, ಶಿವನ ಬಗ್ಗೆ ಇಷ್ಟೆಲ್ಲಾ ಹೇಳುತ್ತಾ ಪ್ರಬಂಧದ ಕೊನೆಕೊನೆಗೆ ಲೋಹಿಯಾ, ‘ರಾಮನ ಭಕ್ತರು ಮತ್ತೆ ಮತ್ತೆ ಪತ್ನಿ ಪರಿತ್ಯಾಗ ಪಾರಾಯಣರಾಗಿದ್ದಾರೆ, ಕೃಷ್ಣಭಕ್ತರು ಕಳ್ಳರಾಗಿದ್ದಾರೆ, ಶಿವ ಭಕ್ತರು ಕೊಳಕನ್ನೇ ಪ್ರೀತಿಸುವವರಾಗಿದ್ದಾರೆ‌ ‌.ಅಧಃಪತನಗೊಳ್ಳುತ್ತ ಹಾದಿ ತಪ್ಪುತ್ತ ಸೀಮಿತ ವ್ಯಕ್ತಿತ್ವ ಕೂಪಮಂಡೂಕವಾಗುತ್ತದೆ. ಸಮೃದ್ಧ ವ್ಯಕ್ತಿತ್ವ ಅನೈತಿಕವಾಗುತ್ತದೆ. ಗಾತ್ರಾತೀತ ವ್ಯಕ್ತಿತ್ವ ಆಕಾರವಿಲ್ಲದೇ  ಹೊಗೆಯಾಡುತ್ತದೆ‌ ಕಥೆಗಳಷ್ಟೇ ಅನ್ನವಾಗುತ್ತದೆ’ ಎನ್ನುತ್ತಾರೆ.

ಯಾವುದೇ ಕಲೆ – ದೃಶ್ಯಕಲೆಯಾಗಲೀ, ಪ್ರದರ್ಶಕ ಕಲೆಯಾಗಲೆ ಅದಕ್ಕೆ ಅದರದ್ದೇ ಸಾಧ್ಯತೆ  ಮತ್ತು  ಮಿತಿಗಳಿರುತ್ತದೆ. ಹಾಗಾಗಿಯೇ ಸಂಗೀತ, ನಾಟಕ, ನೃತ್ಯ, ಚರ್ಚೆ, ಎಲ್ಲವೂ ಕೊಡುವ ಅನುಭವಗಳು ಬೇರೆಬೇರೆಯಾದದ್ದು. ಒಂದು ಚಿತ್ರ ಉದ್ದೀಪಿಸುವ ಭಾವನೆಯನ್ನೇ ಒಂದು ರಾಗ ಉಂಟುಮಾಡಲು ಸಾಧ್ಯವಿಲ್ಲ. ನಾಟಕದಲ್ಲಿ ರಂಗದ ಮೇಲೆ, ರಂಗದ ಆಚೆಗೆ ನಡೆಯುವ ಚರ್ಚೆಗಳನ್ನು ಒಂದು ನೃತ್ಯ ಪ್ರದರ್ಶನದಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಬಸವಣ್ಣನ ಜೀವನದ ಬಗ್ಗೆ ನಾಟಕ ಮಾಡುತ್ತಾ ಸ್ಥಾವರ, ಜಂಗಮದ ಚರ್ಚೆಯನ್ನು  ರಂಗದಮೇಲೆ ತರಬಹುದು ಆದರೆ ಕೇವಲ ಆಲೋಚನೆಯನ್ನು ಅಥವಾ ತತ್ವವನ್ನು ತರುವುದು ಕಷ್ಟ. ಅಲ್ಲಮನ ಬಗ್ಗೆ ನಾಟಕ ಮಾಡಬಹುದು ‘ಬಯಲ’ ನ್ನು ರಂಗದ ಮೇಲೆ ತೋರಿಸುವುದು ಸವಾಲಿನ ಕೆಲಸ. ಹಾಗೇನಾದರೂ ತರಲೇಬೇಕಾದಾಗ ಆ ನಿರ್ದಿಷ್ಟ ವಸ್ತುವಿಗನುಗುಣವಾಗಿ ನಾಟಕದ ವಿನ್ಯಾಸ ಮತ್ತು ಪ್ರಸ್ತುತಿ, ಶೈಲಿಯನ್ನೇ  ಬದಲಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದಲೇ, ಪ್ರತಿ ನಾಟಕವನ್ನು ಕೈಗೆತ್ತಿಕೊಂಡಾಗ ‘ಇದನ್ನು ಯಾಕೆ ಮಾಡಬೇಕು’ ಎನ್ನುವ ಪ್ರಶ್ನೆ ಬಹಳ ಮುಖ್ಯವಾಗುತ್ತದೆ.

About The Author

ಚಿತ್ರಾ ವೆಂಕಟರಾಜು

ಚಿತ್ರಾ ವೆಂಕಟರಾಜು, ಚಾಮರಾಜನಗರದವರು. ನಟಿ. ಕಳೆದ ೧೮ ವರ್ಷಗಳಿಂದ ಸರ್ಕಾರಿ ಪ್ರೌಢಶಾಲೆಯಲ್ಲಿ ರಂಗಶಿಕ್ಷಣಶಿಕ್ಷಕಿಯಾಗಿಕೆಲಸ ನಿರ್ವಹಿಸುತ್ತಿದ್ದಾರೆ. ನೀನಾಸಮ್ರಂಗಶಿಕ್ಷಣ ಕೇಂದ್ರದಿಂದ ರಂಗಶಿಕ್ಷಣ ದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ. ಚಾಮರಾಜನಗರದಶಾಂತಲಾ ಕಲಾವಿದರುʼ ತಂಡದಲ್ಲಿ ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಕಲಾಶಿಕ್ಷಣ, ಸಾಹಿತ್ಯ, ಸಂಗೀತ, ನೃತ್ಯ, ಸಿನೆಮಾದಲ್ಲಿ ಆಸಕ್ತಿ. ಇವರು ಅಭಿನಯಿಸಿದ ಅಮೃತಾ ಪ್ರೀತಂ ಅವರ ಬದುಕನ್ನು ಆಧರಿಸಿದ ಏಕವ್ಯಕ್ತಿ ರಂಗಪ್ರಯೋಗ “ಮೈ ತೆನ್ನು ಫಿರ್ಮಿಲಾಂಗಿ" ಹಲವಾರು ಪ್ರದರ್ಶನಗಳನ್ನು ಕಂಡಿದೆ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ