ಶೋಭಾ ನಾಯಕ ಮೊದಲ ಬಾರಿಗೆ ಅದು ಗಂಡಿನದು ಹೇಗೋ ಹಾಗೆಯೇ ಹೆಣ್ಣಿನದೂ ಹೌದು ಎಂಬುದನ್ನು ಸ್ಥಾಪಿಸಿದ್ದಾರೆ. ಇನ್ನೂ ಒಳಗೆ ಹೋಗಿ ಮಾತನಾಡುವುದಾದರೆ ಅಲ್ಲಿನ ಶಯನದ ಒಡೆತನ ಕೇವಲ ಗಂಡನದು ಎಂಬ ಗಂಡಾಳ್ವಿಕೆಯ ನಡಾವಳಿಯನ್ನು ಮುರಿಯಲೆತ್ನಿಸಿದ್ದಾರೆ. ಈ ನಡಾವಳಿಗಳನ್ನು ಪ್ರಶ್ನಿಸಿದವರು ಗಂಡುಬೀರಿಯರಾಗಿ ಕಾಣುವ ಅಪಾಯಗಳು ಸದಾ ಇದ್ದೇ ಇರುತ್ತವೆ. ಡಾ. ವಿನಯಾ ನಾಯಕ ಮುನ್ನುಡಿಯ ಮಾತುಗಳಲ್ಲಿ ಮುದ್ದುಪಳನಿಯ ‘ರಾಧಿಕಾ ಸಾಂತ್ವಾನಂ’ ಕೃತಿ ಕುರಿತು ಸರಿಯಾಗಿಯೇ ಪ್ರಸ್ತಾಪಿಸಿದ್ದಾರೆ.
ಡಾ. ಶೋಭಾ ನಾಯಕ ಅವರ ‘ಶಯ್ಯಾಗೃಹದ ಸುದ್ದಿಗಳುʼ ಕವನ ಸಂಕಲನದ ಕುರಿತು ಡಾ. ಎಚ್.ಎಲ್. ಪುಷ್ಪ ಬರಹ
ಇತ್ತೀಚೆಗೆ ಪ್ರಕಟವಾದ ಡಾ. ಶೋಭಾ ನಾಯಕ ಅವರ ‘ಶಯ್ಯಾಗೃಹದ ಸುದ್ದಿಗಳು’ ಭಿನ್ನ ಬಗೆಯ ಸಂಕಲನವಾಗಿದೆ. ಕಾರಣ ಮೊದಲ ಬಾರಿಗೆ ಖಾಸಗಿ ಎನ್ನಬಹುದಾದ ಶಯ್ಯಾಗೃಹದ ಸಂಗತಿಗಳು ಕವಿತೆಗಳ ರೂಪದಲ್ಲಿ ಹೊರಗೆ ಬಂದಿರುವುದು. ಶಯ್ಯಾಗೃಹದ ಒಳಗಿನ ಗಂಡಿನ ಲೀಲೆಗಳು ಇಂದು ಬಹಿರಂಗವಾಗಿ ಹೊರಗೆ ಹರಿದಾಡಿ ಕೋರ್ಟಿನ ಮೆಟ್ಟಲೇರುತ್ತಲಿವೆ. ದಿನಾ ಅದರ ವಿಚಾರಣೆಯ ಸುದ್ದಿ ಇಷ್ಟಿಷ್ಟೇ ಎಂಬಂತೆ ಬಿತ್ತರಗೊಳ್ಳುತ್ತಿರುತ್ತದೆ. ಶಯ್ಯಾಗೃಹವೆಂದರೆ ತೀರಾ ಸೀಮಿತ ಅರ್ಥದಲ್ಲಿ ಬಳಕೆಯಾಗುತ್ತಿರುತ್ತದೆ. ಅದು ಕೇವಲ ಗಂಡಹೆಂಡಿರ ಖಾಸಾ ಕೊಠಡಿ ಎಂಬಂತೆ ನೋಡಲ್ಪಡುತ್ತದೆ.
ಶೋಭಾ ನಾಯಕ ಮೊದಲ ಬಾರಿಗೆ ಅದು ಗಂಡಿನದು ಹೇಗೋ ಹಾಗೆಯೇ ಹೆಣ್ಣಿನದೂ ಹೌದು ಎಂಬುದನ್ನು ಸ್ಥಾಪಿಸಿದ್ದಾರೆ. ಇನ್ನೂ ಒಳಗೆ ಹೋಗಿ ಮಾತನಾಡುವುದಾದರೆ ಅಲ್ಲಿನ ಶಯನದ ಒಡೆತನ ಕೇವಲ ಗಂಡನದು ಎಂಬ ಗಂಡಾಳ್ವಿಕೆಯ ನಡಾವಳಿಯನ್ನು ಮುರಿಯಲೆತ್ನಿಸಿದ್ದಾರೆ. ಈ ನಡಾವಳಿಗಳನ್ನು ಪ್ರಶ್ನಿಸಿದವರು ಗಂಡುಬೀರಿಯರಾಗಿ ಕಾಣುವ ಅಪಾಯಗಳು ಸದಾ ಇದ್ದೇ ಇರುತ್ತವೆ. ಡಾ. ವಿನಯಾ ನಾಯಕ ಮುನ್ನುಡಿಯ ಮಾತುಗಳಲ್ಲಿ ಮುದ್ದುಪಳನಿಯ ‘ರಾಧಿಕಾ ಸಾಂತ್ವಾನಂ’ ಕೃತಿ ಕುರಿತು ಸರಿಯಾಗಿಯೇ ಪ್ರಸ್ತಾಪಿಸಿದ್ದಾರೆ. ಕರ್ನಾಟಕ ಸಂಗೀತದ ಮೂಲಪುರುಷರಲ್ಲಿ ಒಬ್ಬರಾದ ಮಹಾನ್ ಸಂಗೀತಗಾರರಾದ ತ್ಯಾಗರಾಜರ ಸಂಗೀತದ ಪರಮ ಆರಾಧಕರಲ್ಲಿ ಬೆಂಗಳೂರು ನಾಗರತ್ನಮ್ಮ ಸಹ ಒಬ್ಬರು. ತ್ಯಾಗರಾಜರ ಪಾಳುಬಿದ್ದ ಸಮಾಧಿಯನ್ನು ಜೀರ್ಣೋದ್ಧಾರ ಮಾಡಿ ಆರಾಧನೆಗೆಂದೇ ವ್ಯವಸ್ಥಿತವಾದ ಜಾಗ ನಿರ್ಮಿಸುತ್ತಾರೆ. ಇಡೀ ಬದುಕಿನ ದುಡಿಮೆಯನ್ನು ಆ ಸ್ಮಾರಕ ನಿರ್ಮಾಣಕ್ಕೆ ಬಳಸಿಕೊಳ್ಳುತ್ತಾರೆ. ಇದೇ ನಾಗರತ್ನಮ್ಮ ದೇವದಾಸಿ ಕುಲಕ್ಕೆ ಸೇರಿದ ಮುದ್ದುಪಳನಿಯ ‘ರಾಧಿಕಾ ಸಾಂತ್ವನಂ’ ಪ್ರಕಟಿಸಲು ಮುಂದಾಗುತ್ತಾರೆ. ಅದು ರಾಧಾ ಮತ್ತು ಕೃಷ್ಣರ ಅಶ್ಲೀಲ ಪ್ರಣಯವೆಂದು, ಜನರನ್ನು ಹಾದಿ ತಪ್ಪಿಸುತ್ತದೆಂದು ಅಲ್ಲಿನ ಪಂಡಿತರು ಕೋರ್ಟಿನಿಂದ ತಡೆ ತರುತ್ತಾರೆ. ಜಗ್ಗದ ನಾಗರತ್ನಮ್ಮ ಯಾರು ಕೋರ್ಟಿಗೆ ಹೋಗಿರುತ್ತಾರೋ ಅವರ ಕೃತಿಯಲ್ಲಿರುವ ಅಶ್ಲೀತೆಯನ್ನು ಪ್ರಶ್ನಿಸುತ್ತಾರೆ. ನೋಡುವ ನೋಟದಲ್ಲಿ ಅಶ್ಲೀಲತೆಯಿರುತ್ತದೆಯೇ ಹೊರತು ಭಕ್ತಿ ಮತ್ತು ಆರಾಧನೆಯಲ್ಲಲ್ಲ ಎಂಬ ವಾದವನ್ನು ಮಂಡಿಸುತ್ತಾರೆ.
ಈ ಸಂದರ್ಭದಲ್ಲಿ ಸೆನ್ಸಾರ್ಶಿಪ್ ವಿರೋಧಿಸಿ ನಡೆಸುವ ನಾಗರತ್ನಮ್ಮ ಅವರ ಹೋರಾಟ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುವುದು ಹೆಣ್ಣಿಗೆ ಮತ್ತು ಗಂಡಿಗೆ ಬೇರೆಯಾಗಿರುತ್ತದೆಯೇ ಎಂಬುದನ್ನು ಕುರಿತದ್ದಾಗಿತ್ತು. ಜಯದೇವನ ಗೀತಗೋವಿಂದದಲ್ಲಿ ಇರುವ ರಾಧಾಕೃಷ್ಣರ ಪ್ರಣಯದಲ್ಲಿನ ಅಶ್ಲೀಲತೆಯನ್ನು ಜನ ಒಪ್ಪಿಕೊಳ್ಳವುದಾದರೆ ರಾಧಿಕಾ ಸಾಂತ್ವಾನಂ ಕೃತಿಯನ್ನು ಯಾಕೆ ಒಪ್ಪಿಕೊಳ್ಳುವುದಿಲ್ಲ ಎಂಬ ಪ್ರಶ್ನೆಯನ್ನು ಮುಂದಿಡುತ್ತಾರೆ.
ಕೇವಲ ಹೆಣ್ಣೊಬ್ಬಳು, ಅದರಲ್ಲೂ ದೇವದಾಸಿ ಹೆಣ್ಣುಮಗಳೊಬ್ಬಳು ಬರೆದಳು ಅಂದ ಮಾತ್ರಕ್ಕೆ ಅದು ತಿರಸ್ಕಾರಕ್ಕೆ ಯೋಗ್ಯವೇ ಎಂಬ ಮಾತು ಪ್ರಸ್ತಾಪಿಸುತ್ತಾರೆ. ನಾಗರತ್ನಮ್ಮ ಅವರ ಬೆಂಬಲಕ್ಕೆ ಕಲೆ, ಸಾಹಿತ್ಯ ಬಲ್ಲ ವಿದ್ವಾಂಸರು ನಿಲ್ಲುತ್ತಾರೆ.
ಪ್ರಸ್ತುತ ಶೋಭಾ ನಾಯಕ ಅವರ ಕವಿತೆಗಳು ಇಂತಹ ಹಲವು ಪ್ರಶ್ನೆಗಳನ್ನು ಈ ಕೃತಿಯಲ್ಲಿ ಎತ್ತುತ್ತದೆ. ಯಾವುದೇ ಮಾನಸಿಕವಾದ ದೋಖಾತನವನ್ನು ಇಟ್ಟುಕೊಳ್ಳದ ಈ ಕವಿತೆಗಳು ಸರಾಗವಾಗಿ ಓದಿಸಿಕೊಳ್ಳುತ್ತವೆ. ಆದರೆ ಇಲ್ಲಿನ ಕವಿತೆಗಳು ವೈಯಕ್ತಿಕ ನೆಲೆಯನ್ನು ದಾಟಿ ಇನ್ನಷ್ಟು ಸಾರ್ವತ್ರಿಕವಾಗುವ ನಿಟ್ಟಿನಲ್ಲಿ ಬೆಳೆಯುವ ಅವಕಾಶಗಳಿದ್ದವು ಎಂಬ ಕೊರತೆಯನ್ನು ಕಾಣಿಸುತ್ತವೆ. ಇದುವರೆಗೂ ಇಂತಹ ಸಂಗತಿಗಳು ರೂಪಕದ ಭಾಷೆಯಲ್ಲಿ ವ್ಯಕ್ತವಾಗುತ್ತಿದ್ದು ಶೋಭಾ ನಾಯಕ ರೂಪಕವೆಂಬ ಭಾಷಾ ಶರೀರದ ಹಂಗಿಲ್ಲದೆ ಅಭಿವ್ಯಕ್ತಿಸಿರುವುದನ್ನು ಮೆಚ್ಚಲೇಬೇಕು. ಮಹಿಳಾ ಕಾವ್ಯಕ್ಕೆ ಒಂದು ದಿಕ್ಕಿನಿಂದ ಸಂಚಲನ ತರುವ ಪ್ರಯತ್ನ ಈ ಕವಿತೆಗಳಿಗಿವೆ ಎಂದು ಈ ಮೂಲಕ ಹೇಳಬಹುದೆನಿಸುತ್ತದೆ. ಖಾಸಗಿ ಬದುಕಿನ ವಿಚಾರಗಳನ್ನು ಬಹಿರಂಗಕ್ಕೆ ಎಳೆದು ಸುಖಿಸುವವರನ್ನು ಕುರಿತು ಕೆಲಸಾಲುಗಳು ಈ ಕೆಳಗಿನಂತೆ ಚಾಟಿ ಬೀಸುತ್ತವೆ.
ಶಯ್ಯಾಗೃಹದ ಸುದ್ದಿಗಳು
ಇನ್ನೊಬ್ಬರ ಬಾಯಿಯ ತಾಂಬೂಲವಾಗುವುದು
ಅವರವರ ಶಯ್ಯಾಗೃಹಗಳು
ಶವಾಗಾರಗಳಾದಾಗಲೇ.
(ಕೃತಿ: ಶಯ್ಯಾಗೃಹದ ಸುದ್ದಿಗಳು (ಕವನ ಸಂಕಲನ), ಲೇಖಕರು: ಡಾ. ಶೋಭಾ ನಾಯಕ, ಪ್ರಕಾಶಕರು: ಮನೋರಮಾ ಬುಕ್ ಹೌಸ್, ಬೆಲೆ: 100/-)
ಕವಯತ್ರಿ ಎಚ್.ಎಲ್. ಪುಷ್ಪ ಅವರು ಮೂಲತಃ ದೊಡ್ಡಬಳ್ಳಾಪುರದ ಹೊಸಹಳ್ಳೀ ಉಜ್ಜನಿಯವರು. ಅಮೃತಮತಿಯ ಸ್ವಗತ, ಗಾಜುಗೊಳ, ಮದರಂಗಿ, ವೃತ್ತಾಂತ, ಲೋಹದ ಕಣ್ಣು (ಕವನ ಸಂಕಲನ), ಭೂಮಿಲ್ಲ ಇವಳು, ಗೆಲ್ಲಲಾರ್ಕುಮೆ ಮೃತ್ಯುರಾಜನಂ, ಪರ್ವಾಪರ್ವ (ನಾಟಕ), ಅವಲೋಕನ, ಗಂಧಗಾಳಿ, ವಚನ ಸಾಹಿತ್ಯ ಮತ್ತು ಸ್ತ್ರೀತ್ವದ ಕಲ್ಪನೆ (ವಿಮರ್ಶೆ) ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಪು.ತಿ.ನ.ಕಾವ್ಯ ಪುರಸ್ಕಾರ, ಕಡೆಂಗೋಡ್ಲು ಶಂಕರಭಟ್ ಕಾವ್ಯ ಪ್ರಶಸ್ತಿ, ಸಾರಂಗಮಠ ಪಾಟೀಲ ಪ್ರಶಸ್ತಿ ಜೊತೆಗೆ ಹಲವು ಪ್ರಶಸ್ತಿಗಳು ಇವರಿಗೆ ಸಂದಿವೆ.
ಚೆಂದದ ಪರಿಚಯ
ಧನ್ಯವಾದಗಳು