ಮಾನವರು ಯಕ್ಷರಾಗುವ ಪ್ರಕ್ರಿಯೆ ನಮ್ಮೊಳಗೆ ಅಡಕವಾಗುತ್ತ ನಡೆದಾಗಲೂ ಕೆಲವೊಮ್ಮೆ ಭ್ರಮೆ ಮತ್ತು ವಾಸ್ತವಗಳು ಮನಸ್ಸಿನಲ್ಲಿ ತಾಡಿಸುತ್ತಲೇ ಇರುತ್ತಿದ್ದವು. ದುಃಶ್ಶಾಸನನ ವೇಷ ತೊಟ್ಟ ಅಪ್ಪ, ಭೀಮನಿಂದ ಪೆಟ್ಟುತಿಂದು ಯುದ್ಧರಂಗದಲ್ಲಿ ಓಡುತ್ತಿರುವಾಗ ಅವನೆಲ್ಲಾದರೂ ಅಪ್ಪನನ್ನು ಗದೆಯಿಂದ ಹೊಡೆದು ಕೊಂದಾನೆಂಬ ಭ್ರಮೆಯಲ್ಲಿ ‘ಬೇಡಾ’ ಎಂದು ಕಿರುಚಿದ್ದೂ ಇತ್ತು. ಕೌರವನನ್ನು ಬೆನ್ನಟ್ಟುವ ರೌದ್ರ ಭೀಮನ ಕಣ್ಣಿನ ಕೆಂಪಿಗೆ ಹೆದರಿ, ಅವನೆಲ್ಲಿಯಾದರೂ ಕೌರವನ ವೇಷಧಾರಿಯಾದ ನನ್ನಪ್ಪನ ತೊಡೆಯನ್ನೇ ಮುರಿದಾನೆಂದು ಚಡಪಡಿಸುತ್ತಿದ್ದುದು ಅತ್ತೆಗೆ ಇರಿಸುಮುರಿಸು ಮಾಡುತ್ತಿತ್ತು.
ಮನುಷ್ಯ ಹೊಂದಬಹುದಾದ ರೂಪಾಂತರಗಳ ಕುರಿತು ಸುಧಾ ಆಡುಕಳ ಬರಹ ನಿಮ್ಮ ಓದಿಗೆ
ಒಂದು ಇನ್ನೊಂದಾಗಿ ರೂಪಾಂತರಗೊಳ್ಳುವ ಪ್ರಕ್ರಿಯೆ ಜಗತ್ತಿನ ಎಲ್ಲ ಸೃಜನಶೀಲ ಕಲೆಗಳ ಅಂತಿಮ ಸಿದ್ಧಿ ಎನ್ನುತ್ತಾರೆ ರವೀಂದ್ರನಾಥ ಟ್ಯಾಗೋರ್. ಹೀಗೆ ರೂಪಾಂತರವಾದಾಗ ನಮ್ಮೊಳಗೆ ತೆರೆದುಕೊಳ್ಳುವ ಲೋಕವನ್ನವರು ಸತ್ಯಲೋಕವೆಂದು ಕರೆಯುತ್ತಾರೆ. ಹೊರಲೋಕಗಳ ಒತ್ತಡವನ್ನು ಕಳೆದುಕೊಂಡು ನಮ್ಮೊಳಗಿನ ಸತ್ಯಲೋಕವನ್ನು ತಲುಪಲು ಈ ರೂಪಾಂತರಗಳು ನಮಗೆ ಸಹಾಯಕವಾಗುತ್ತವೆ. ಬಾಲ್ಯಕಾಲದಲ್ಲಿ ನನ್ನೂರಿನಲ್ಲಿ ಕಂಡ ರೂಪಾಂತರದ ಚಹರೆಗಳು ನನ್ನೊಳಗೊಂದು ರಮ್ಯಲೋಕವನ್ನು ಸೃಷ್ಟಿಸಿವೆ. ನೆನಪಾದಾಗಲೆಲ್ಲ ನನ್ನೊಳಗಿನ ಮಗುತನವನ್ನು ಮರಳಿ ತರುತ್ತವೆ.
ಯಕ್ಷಗಾನ ವೇಷಧಾರಿಯಾಗಿದ್ದ ಅಪ್ಪ ದೂರದ ಊರುಗಳಲ್ಲಿ ವೇಷ ಮಾಡಲೆಂದು ಸಂಜೆಯಾಗುತ್ತಿದ್ದಂತೆ ಹೊರಡುವುದು ಮಾಮೂಲಿಯಾಗಿತ್ತು. ಅಂಗಡಿಗೋ, ನೆಂಟರ ಮನೆಗೋ ಹೋಗುವಾಗ ಎಲ್ಲರಂತೆಯೇ ಬಣ್ಣದ ಅಂಗಿ ಮತ್ತು ಚೌಕಳಿ ಲುಂಗಿಯನ್ನು ಧರಿಸಿ ಹೋಗುತ್ತಿದ್ದ ಅಪ್ಪ, ವೇಷಹಾಕಲು ಹೊರಡುವಾಗ ಮಾತ್ರ ತನಗಿದ್ದ ಒಂದೇ ಒಂದು ಉದ್ದಕೈಯ್ಯಿಯ ಬಿಳಿಯಂಗಿ, ಅಚ್ಚ ಬಿಳಿಯ ಧೋತಿ ಉಟ್ಟುಕೊಂಡು, ಹೆಗಲ ಮೇಲೊಂದು ಹೊಳೆಯುವ ಶಾಲನ್ನು ಧರಿಸಿ ಹೊಸವೇಷ ಧಾರಣೆ ಮಾಡುತ್ತಿದ್ದರು. ಮನೆಯ ಹೊಳ್ಳಿಯ ಮರದ ಕಂಬಕ್ಕೆ ನೇತಾಡಿಸಿದ ಕನ್ನಡಿಯಲ್ಲಿ ಪದೇ, ಪದೇ ಮುಖವನ್ನು ನೋಡಿ ಕೂದಲು ಬಾಚಿಕೊಳ್ಳುತ್ತಿದ್ದರು. ದಿನದಂತಿರದ ಅಪ್ಪನ ರೂಪಾಂತರವನ್ನು ದೂರದಿಂದಲೇ ಕಣ್ಣರಳಿಸಿ ನಾವು ನೋಡುತ್ತಿದ್ದೆವು. ಚರಪರ ಶಬ್ದ ಮಾಡುವ ಚಪ್ಪಲಿ ಧರಿಸಿ, ಬಾಯಲ್ಲಿ ಅಂದಿನ ಪಾತ್ರದ ಹಾಡನ್ನು ಗುಣುಗುತ್ತಾ ಅಪ್ಪ ಮರೆಯಾಗುತ್ತಿದ್ದಂತೆ ಅಮ್ಮ, “ಹೊರಟಿತು ಸವಾರಿ” ಅಂತ ಸಿಡುಕಿನಿಂದ ಹೇಳುತ್ತಿದ್ದಳು. ಹೀಗಾಗಿ ಅಪ್ಪನ ಈ ಹೊಸ ವೇಷವನ್ನು ನಾನು ‘ಸವಾರಿ’ ಎಂದೇ ಅಂದುಕೊಂಡಿದ್ದೆ.
ಹೀಗೆ ಹುಲುಮಾನವನಾಗಿರುವ ಅಪ್ಪ ಅದ್ಯಾವುದೋ ವಿಚಿತ್ರ ಗಂಧರ್ವನಾಗಿ ಬದಲಾದ ದೃಶ್ಯವೊಂದಕ್ಕೆ ಸಾಕ್ಷಿಯಾಗುವ ಅವಕಾಶ ಬಹಳ ಬೇಗನೆ ನನಗೆ ಒದಗಿಬಂತು. ಅಡಿಕೆ ಮಾರಿ ಬಂದ ಅಷ್ಟೋ ಇಷ್ಟೋ ಪುಡಿಗಾಸನ್ನು ಸೇರಿಸಿದ ನನ್ನೂರಿನ ಕಲಾರಸಿಕರು ಒಂದು ‘ಆಟ’ವನ್ನು ಏರ್ಪಡಿಸಿಯೇ ಬಿಟ್ಟರು. ಅದರಲ್ಲಿ ಅಪ್ಪ ಮುಖ್ಯ ವೇಷಧಾರಿಯಾಗಿದ್ದುದು ಸಹಜವಾಗಿತ್ತು. ಎಂದಿನಂತೆಯೇ ‘ಸವಾರಿ’ಯಾಗಿ ಬದಲಾದ ಅಪ್ಪ ಸೂರ್ಯ ಕಂತುವ ಮೊದಲೇ ಬಯಲಾಟದ ಚೌಕಿಗೆ ಹೋಗಿದ್ದ. ಮನೆಯಲ್ಲಿ ಅಮ್ಮನ ಹೊರತು ಉಳಿದೆಲ್ಲವರಿಗೂ ‘ಆಟ’ ನೋಡುವ ಉತ್ಸಾಹ. ಮಕ್ಕಳಾದ ನಮಗಂತೂ ಇಂದು ಸೂರ್ಯ ಎಷ್ಟು ನಿಧಾನವಾಗಿ ಚಲಿಸುತ್ತಿದ್ದಾನೆ ಅನಿಸುತ್ತಿತ್ತು. ದೂರದ ಗದ್ದೆಯಲ್ಲಿ ಮೊಳಗುತ್ತಿದ್ದ ಮೈಕಾಸುರನ ದನಿ ಬಾ, ಬಾ ಎಂದು ಕರೆಯುತ್ತಿತ್ತು. ಅಂತೂ ನಾಲ್ಕು ತುತ್ತು ತಿಂದ ಶಾಸ್ತ್ರ ಮಾಡಿ, ಗದ್ದೆಯಲ್ಲಿ ಹಾಸಲು ಗೋಣಿತಾಟು ಹಿಡಿದುಕೊಂಡ ದೊಡ್ಡವರ ಕೈಗೆ ನೇತಾಡಿಕೊಂಡು, ಮಡಲಿನ ಸೂಡಿಯ ಬೆಳಕಲ್ಲಿ ಸಾಲಾಗಿ ಬಯಲಾಟ ನಡೆಯುವ ಕಡೆಗೆ ಸಾಗುತ್ತಿದ್ದೆವು. ಅಷ್ಟರಲ್ಲಾಗಲೇ ‘ಆಟ’ ಶುರುವಾಗಿ ರಂಗದಲ್ಲಿ ಕೋಡಂಗಿ ಕುಣಿಯುತ್ತಿತ್ತು.
ನಮಗೆಲ್ಲ ಕೂಡಲು ಜಾಗ ಹುಡುಕಿ, ಗೋಣಿತಾಟು ಹಾಸಿದ ಅತ್ತೆ, “ಬಾ, ನಿನ್ನ ಅಪ್ಪನನ್ನು ತೋರಿಸುತ್ತೇನೆ.” ಎಂದು ಚೌಕಿಗೆ ಕರೆದೊಯ್ದಿದ್ದಳು. ಅಲ್ಲಿ ಮನೆಯ ಗೋಡೆಗೆ ನೇತುಹಾಕಿದ ದೇವರಂತೆ ಬಣ್ಣ, ಬಣ್ಣದ ಉಡುಗೆಯನ್ನು ತೊಟ್ಟ ಅನೇಕರು ಕನ್ನಡಿಯೆದುರು ಕುಳಿತಿದ್ದರು. ಅವರಲ್ಲೊಬ್ಬರನ್ನು ತೋರಿಸಿದ ಅತ್ತೆ, “ಇಗಾ. ನಿನ್ನ ಅಪ್ಪ.” ಎಂದಾಗ ಒಂದಿನಿತೂ ನಂಬುಗೆ ಬಾರದೇ ಹೆದರಿಕೆಯಿಂದ ಅವಳನ್ನು ಅಪ್ಪಿಕೊಂಡಿದ್ದೆ. ಇದನ್ನು ನೋಡಿದ ಅಪ್ಪ ಅಲ್ಲಿಂದ ಎದ್ದು ಬಂದು, “ಹೆದರಿದೆಯೇನೆ? ನಾನೆಯೇ ಮಗಾ” ಎಂದು ನಕ್ಕಾಗ, ಅವರ ದನಿಯೂ, ಕವಳ ತಿಂದು ಕೆಂಪಾದ ಬಾಯಿಯೂ ಚೂರು ಪರಿಚಿತವೆನಿಸಿ ಇರಲೂಬಹುದು ಎನಿಸಿತ್ತು. ಆದರೂ ಮುಟ್ಟಲು ಬಂದ ಅವರ ಬಣ್ಣದ ಬೇಗಡೆ ಬಿಗಿದ ಕೈಯ್ಯನ್ನು ದೂಡಿ ಬಂದದ್ದು ಇಂದಿಗೂ ನೆನಪಿದೆ. ಹಗಲಿಡೀ ನಮ್ಮ ಕಣ್ಮುಂದೆಯೇ ಓಡಾಡುತ್ತಿದ್ದ ಈ ಹುಲುಮಾನವರೆಲ್ಲರೂ ಇಲ್ಲಿ, ಹೀಗೆ ಇದ್ದಕ್ಕಿದ್ದಂತೆ ದೇವತೆಗಳೂ, ರಾಜ-ರಾಣಿಯರೂ ಆಗಿಬಿಡುವ ವಿಸ್ಮಯವನ್ನು ಆ ಪುಟ್ಟ ಮನಸ್ಸು ಅರಗಿಸಿಕೊಳ್ಳುವುದಾದರೂ ಹೇಗೆ?
ಹೀಗೆ ಮಾನವರು ಯಕ್ಷರಾಗುವ ಪ್ರಕ್ರಿಯೆ ನಮ್ಮೊಳಗೆ ಅಡಕವಾಗುತ್ತ ನಡೆದಾಗಲೂ ಕೆಲವೊಮ್ಮೆ ಭ್ರಮೆ ಮತ್ತು ವಾಸ್ತವಗಳು ಮನಸ್ಸಿನಲ್ಲಿ ತಾಡಿಸುತ್ತಲೇ ಇರುತ್ತಿದ್ದವು. ದುಃಶ್ಶಾಸನನ ವೇಷ ತೊಟ್ಟ ಅಪ್ಪ, ಭೀಮನಿಂದ ಪೆಟ್ಟುತಿಂದು ಯುದ್ಧರಂಗದಲ್ಲಿ ಓಡುತ್ತಿರುವಾಗ ಅವನೆಲ್ಲಾದರೂ ಅಪ್ಪನನ್ನು ಗದೆಯಿಂದ ಹೊಡೆದು ಕೊಂದಾನೆಂಬ ಭ್ರಮೆಯಲ್ಲಿ ‘ಬೇಡಾ’ ಎಂದು ಕಿರುಚಿದ್ದೂ ಇತ್ತು. ಕೌರವನನ್ನು ಬೆನ್ನಟ್ಟುವ ರೌದ್ರ ಭೀಮನ ಕಣ್ಣಿನ ಕೆಂಪಿಗೆ ಹೆದರಿ, ಅವನೆಲ್ಲಿಯಾದರೂ ಕೌರವನ ವೇಷಧಾರಿಯಾದ ನನ್ನಪ್ಪನ ತೊಡೆಯನ್ನೇ ಮುರಿದಾನೆಂದು ಚಡಪಡಿಸುತ್ತಿದ್ದುದು ಅತ್ತೆಗೆ ಇರಿಸುಮುರಿಸು ಮಾಡುತ್ತಿತ್ತು. ಅಂತಹ ಚಡಪಡಿಕೆಯಲ್ಲೊಮ್ಮೆ ಅತ್ತೆ ನನ್ನನ್ನು ಚೌಕಿಯ ಹಿಂಬದಿಗೆ ಕರೆದೊಯ್ದು ಅಕ್ಕಪಕ್ಕದಲ್ಲಿ ಮಲಗಿ ಕವಳ ಮೆಲ್ಲುತ್ತಿದ್ದ ಕೌರವ ಮತ್ತು ಭೀಮರನ್ನು ತೋರಿಸಿ ಚಕಿತಗೊಳಿಸಿದ್ದಳು. ಆದಾಗ್ಯೂ ನಾವೆಲ್ಲ ಓಡಾಡುತ್ತಿದ್ದ ಗದ್ದೆಯ ಭಾಗವೊಂದು ಕತ್ತಲು ಆವರಿಸುತ್ತಿರುವಂತೆಯೆ ಝಗಮಗಿಸಿ ದೇವಲೋಕವೋ, ರಾಜನೊಡ್ಡೋಲಗವೋ, ವನವಿಹಾರದ ಕೊಳವೋ, ದಟ್ಟ ಕಾನನವೋ ಆಗಿ ಬದಲಾಗುವ ವಿಸ್ಮಯ ಮತ್ತು ನಮ್ಮೆದುರೇ ಓಡಾಡುತ್ತಿರುವವರೆಲ್ಲ ದೇವ-ದೇವತೆ, ಯಕ್ಷ, ಕಿನ್ನರ, ಕಿಂಪುರುಷ, ರಾಜ ಮಹಾರಾಣಿ, ರಾಜಕುಮಾರರಾಗಿ ಬದಲಾಗುವ ಕೌತುಕ ಇಂದಿಗೂ ಮನದೊಳಗೊಂದು ಅಚ್ಛರಿಯಾಗಿ ಉಳಿದುಹೋಗಿವೆ.
ಮನೆಯಲ್ಲಿ ಅಮ್ಮನ ಹೊರತು ಉಳಿದೆಲ್ಲವರಿಗೂ ‘ಆಟ’ ನೋಡುವ ಉತ್ಸಾಹ. ಮಕ್ಕಳಾದ ನಮಗಂತೂ ಇಂದು ಸೂರ್ಯ ಎಷ್ಟು ನಿಧಾನವಾಗಿ ಚಲಿಸುತ್ತಿದ್ದಾನೆ ಅನಿಸುತ್ತಿತ್ತು. ದೂರದ ಗದ್ದೆಯಲ್ಲಿ ಮೊಳಗುತ್ತಿದ್ದ ಮೈಕಾಸುರನ ದನಿ ಬಾ, ಬಾ ಎಂದು ಕರೆಯುತ್ತಿತ್ತು. ಅಂತೂ ನಾಲ್ಕು ತುತ್ತು ತಿಂದ ಶಾಸ್ತ್ರ ಮಾಡಿ, ಗದ್ದೆಯಲ್ಲಿ ಹಾಸಲು ಗೋಣಿತಾಟು ಹಿಡಿದುಕೊಂಡ ದೊಡ್ಡವರ ಕೈಗೆ ನೇತಾಡಿಕೊಂಡು, ಮಡಲಿನ ಸೂಡಿಯ ಬೆಳಕಲ್ಲಿ ಸಾಲಾಗಿ ಬಯಲಾಟ ನಡೆಯುವ ಕಡೆಗೆ ಸಾಗುತ್ತಿದ್ದೆವು.
ಹೀಗೆಯೇ ನಮ್ಮೂರಲ್ಲಿ ಆಗುತ್ತಿದ್ದ ಇನ್ನೊಂದು ರೂಪಾಂತರವೆಂದರೆ ಮನುಷ್ಯರು ದೆವ್ವಗಳಾಗಿ ಬದಲಾಗುವ ವಿದ್ಯಮಾನ. ಆಸ್ಪತ್ರೆ, ವೈದ್ಯರು ಇವೆಲ್ಲವೂ ಲಕ್ಸುರಿಯೆನಿಸಿದ್ದ ಆ ಕಾಲದಲ್ಲಿ ಮನೆಯಲ್ಲಿ ಯಾರಿಗಾದರೂ ಬೇನೆಯಾದರೆ ಸೊಪ್ಪು, ರಸ, ಕಷಾಯ, ಪಥ್ಯವೆಂದು ಒಂದೆರಡು ದಿನ ಕಳೆದುಹೋಗುತ್ತಿದ್ದವು. ಮೈಬಿಸಿಯಾಗುವುದರೊಂದಿಗೆ ಶುರುವಾಗುವ ಜ್ವರ ತಲೆಗೇರಿ ರೋಗಿಯೆಲ್ಲಾದರೂ ಬಡಬಡಿಸತೊಡಗಿದನೆ(ಳೆ)ಂದರೆ ಅವನಿ(ಳಿ)ಗೆ ಕೀಳುದೆವ್ವ ಮೆಟ್ಟಿದೆಯೆಂದೇ ಅರ್ಥ. ಮುಸ್ಸಂಜೆಯ ಹೊತ್ತಲ್ಲೋ ಅಥವಾ ನಡುಮಧ್ಯಾಹ್ನದಲ್ಲೋ ಊರ ಹೊರಗಿರುವ ನಿರ್ಜನ ಪ್ರದೇಶದಲ್ಲಿ ಸುಳಿದರೆ ಸಾಕು, ಈ ಕೀಳು ದೆವ್ವಗಳು ಹಿಡಿದುಕೊಳ್ಳುತ್ತಿದ್ದವು. ಅವುಗಳ ಪ್ರಭಾವವಿರುವಾಗ ಯಾವ ಔಷಧವೂ ನಾಟಲಾರದು ಎಂದರ್ಥ. ಹಾಗಾಗಿ ದೆವ್ವವನ್ನು ಬಿಡಿಸುವ ನೋಟದವರನ್ನು ಕಡ್ಡಾಯವಾಗಿ ಕರೆಸಲಾಗುತ್ತಿತ್ತು. ಆ ಪ್ರಕ್ರಿಯೆಗೆ ‘ನೋಟ ನೋಡುವುದು’ ಎಂದು ಕರೆಯಲಾಗುತ್ತಿತ್ತು. ವೈದಿಕರೊಬ್ಬರು ಮಣೆಯ ಮೇಲೆ ಕವಡೆಯಾಡಿಸುತ್ತ ದೆವ್ವದ ಚಲನವಲನವನ್ನು ಪತ್ತೆ ಹಚ್ಚಿ ದೆವ್ವವನ್ನು ಮೈಮೇಲೆ ಆವಾಹಿಸಿಕೊಳ್ಳುವವ ಪಾತ್ರಿಗೆ ಹೇಳುತ್ತಿದ್ದರೆ, ಪಾತ್ರಿ ಮಣೆಯೊಂದರ ಅಂಚಿನ ಮೇಲೆ ಬಾಳೆಯ ಎಲೆಯ ದಿಂಡನ್ನಿಟ್ಟು ಚಾಕುವಿನಿಂದ ತುಂಡರಿಸುತ್ತಾ, ಲಯಬದ್ಧವಾಗಿ ದೈವವನ್ನು ತನ್ನ ಮೇಲೆ ಆರೋಪಿಸಿಕೊಳ್ಳುತ್ತಿದ್ದರು. ಅವರು ದೈವವನ್ನು ಕರೆಯುವ ಹೇಳಿಕೆಗಳು ನಿಧಾನವಾಗಿ ತಾರಕ್ಕೇರುತ್ತಿರುವಂತೆಯೇ ವೈದಿಕರು ಅದು ಎಲ್ಲಿಂದ ತಪ್ಪಿಸಿಕೊಳ್ಳಲು ನೋಡುತ್ತಿದೆ ಮತ್ತು ಅದು ಸಿಕ್ಕಿದ ನಂತರ ಅದನ್ನು ಎಲ್ಲಿಗೊಯ್ದು ನೆಲೆಗೊಳಿಸಬೇಕು ಎಂದು ಹೇಳುತ್ತಿದ್ದರು.
ಜ್ವರ ಬಂದ ರೋಗಿ ಇವರಿಬ್ಬರ ನಡುವೆ ನಡುಗುತ್ತಾ ಕುಳಿತಿದ್ದರೆ, ಉಳಿದ ಮನೆಯವರೆಲ್ಲರೂ ದೆವ್ವ ಮೈಮೇಲೆ ಬರುವುದರ ನಿರೀಕ್ಷೆಯಲ್ಲಿರುತ್ತಿದ್ದರು. ಒಂದೊಂದು ಹೇಳಿಕೆಯನ್ನು ಹೇಳುತ್ತಾ, ತನ್ನ ತಲೆಯನ್ನು ಒಂದು ಬದಿಗೆ ಚಕ್ಕೆಂದು ತಿರುಗಿಸುತ್ತಾ, ಕಣ್ಣಿನ ಹುಬ್ಬುಗಳನ್ನು ಮೇಲೇರಿಸುತ್ತಾ ಕುಳಿತಿದ್ದ ಪಾತ್ರಿಗಳ ಮೇಲೆ ಅಷ್ಟೊತ್ತಿನಲ್ಲಿ ದೆವ್ವ ಬಂದು ಅಬ್ಬರಿಸುತ್ತಿತ್ತು. ಇದ್ದಕ್ಕಿದ್ದಂತೆಯೇ ಕುಣಿದು ಕುಪ್ಪಳಿಸುತ್ತಾ ಆರ್ಭಟಿಸುವ ಅವರನ್ನು ಬೀಳದಂತೆ ಹಿಡಿಯಲು ಒಂದೆರಡು ಜನರು ಸಿದ್ಧರಿರುತ್ತಿದ್ದರು. ಒಂದಿಷ್ಟು ಕುಣಿದಾದ ಮೇಲೆ ದೆವ್ವ ಕರೆಯುವವರು ತನ್ನೊಳಗಿನ ಆವೇಶ ತಣ್ಣಗಾಗಿ ನಿತ್ರಾಣನಾಗಿ ಕೆಳಗೆ ಬೀಳುತ್ತಿದ್ದರು. ಅವರಿಗೆ ಗಾಳಿ ಹಾಕಿ, ಮುಖಕ್ಕೆ ನೀರೆರೆಚಿ ಎಚ್ಚರಿಸಲಾಗುತ್ತಿತ್ತು. ಅಷ್ಟೊತ್ತಿಗೆ ಕವಡೆಯಾಡಿಸುತ್ತಿದ್ದ ವೈದಿಕರು ದೆವ್ವವು ಬಿಟ್ಟು ಹೋಗಿ ತನ್ನ ನೆಲೆಯಲ್ಲಿ ಬಂಧಿಸಲ್ಪಟ್ಟಿದೆಯೇ? ಎಂಬುದನ್ನು ಖಾತ್ರಿಪಡಿಸುತ್ತಿದ್ದರು. ಕೆಲವೊಮ್ಮೆ ರೋಗಿಯನ್ನು ಬಿಟ್ಟುಹೋದ ದೆವ್ವ ತನ್ನ ನೆಲೆಯನ್ನು ತಲುಪಿಲ್ಲದ ಸಾಧ್ಯತೆಯೂ ಇರುತ್ತಿತ್ತು. ಹಾಗೇನಾದರೂ ಆದರೆ ಮತ್ತೆ ಮರುದಿನ ನೋಟ ನೋಡುವ ತೀರ್ಮಾನವಾಗುತ್ತಿತ್ತು. ಇವೆಲ್ಲದರ ನಡುವೆ ರೋಗಿಯ ಮೈಬೆವರಿ, ಜ್ವರವಿಳಿದು ಎಲ್ಲರೊಂದಿಗೆ ಕುಳಿತು ಚಹಾ ಕುಡಿಯುವುದು ನಡೆಯುತ್ತಿತ್ತು. ಮತ್ತೆ ವೀಳ್ಯದೆಲೆ ಮೆಲ್ಲುತ್ತಾ, ಹಿಂದೆ ತಾವು ಎಂಥೆಂಥಾ ದೆವ್ವವನ್ನೆಲ್ಲ ಬಿಡಿಸಿದ್ದೆವು ಎಂಬ ಪುರಾಣಶ್ರವಣವೂ ನಡೆದು, ತಮಗೆಂದು ನೀಡಿದ ತೆಂಗಿನಕಾಯಿಯ ಭಕ್ಷೀಸನ್ನು ಹಿಡಿದು ವೈದಿಕರು ಮತ್ತು ಪಾತ್ರಿಗಳ ನಿರ್ಗಮನವಾಗುತ್ತಿತ್ತು. ಮರುದಿನ ಶಾಲೆಗೆ ಹೋಗುವಾಗ ಸಿಗುವ ಪಾತ್ರಿಗಳು ಮನುಷ್ಯರಾ? ಅಥವಾ ದೆವ್ವವಾ? ಎಂಬ ಗೊಂದಲದಲ್ಲಿಯೇ ಅವರನ್ನು ಮಾತನಾಡಿಸುವ ಧೈರ್ಯವೂ ಉಡುಗಿಹೋಗುತ್ತಿತ್ತು. ಅವರು ಕಳಿಸಿದ ದೆವ್ವಗಳೆಲ್ಲಾದರೂ ನಮ್ಮನ್ನು ಮೆಟ್ಟಿಕೊಂಡರೆ ಎಂಬ ಹೆದರಿಕೆಯೂ ಆಗಾಗ ಆವರಿಸುವುದಿತ್ತು. ನಮ್ಮೆದುರೇ ನಡೆಯುವ ಈ ರೂಪಾಂತರ ಭಯಮಿಶ್ರಿತ ವಿಭ್ರಮೆಯನ್ನು ನಮ್ಮಲ್ಲಿ ಮೂಡಿಸುತ್ತಿತ್ತು.
ನಿಜ ಹೇಳಬೇಕೆಂದರೆ ನಮ್ಮೂರಿನಲ್ಲಿ ಹುಟ್ಟಿದ ಯಾರೂ ಸಾಯುತ್ತಲೇ ಇರಲಿಲ್ಲ. ಅದರರ್ಥ ಸತ್ತವರೆಲ್ಲರೂ ದೇಹವನ್ನು ಬಿಡುತ್ತಿದ್ದರೇ ಹೊರತು, ಕುಟುಂಬವನ್ನು ಕಾಯುವ ಭೂತವಾಗಿ ಅಲ್ಲಿಯೇ ಓಡಾಡಿಕೊಂಡಿರುತ್ತಿದ್ದರು. ಮನೆಯಲ್ಲೇನಾದರೂ ಅಸಂಬದ್ಧವಾದುದು ನಡೆದರೆ ಸಾಕು, ತಮ್ಮ ಪ್ರೀತಿ ಪಾತ್ರರ ಮೈಯ್ಯೇರಿ ಬಂದು ರಾಜೀ ಪಂಚಾಯಿತಿಕೆ ಮಾಡಿ, ನಾಲ್ಕು ಬುದ್ಧಿಮಾತು ಹೇಳಿ ಹೋಗುತ್ತಿದ್ದರು. ಯಾರಾದರೊಬ್ಬರು ಹಿರಿಯರು ಸತ್ತರೆಂದರೆ ಅವರನ್ನು ತಮ್ಮ ಈ ಪರಿವಾರದಲ್ಲಿಯೇ ಇಟ್ಟುಕೊಳ್ಳುವ ಸಲುವಾಗಿ, ಸತ್ತ ಹನ್ನೆರಡನೆಯ ದಿನಕ್ಕೆ ಕೊಲೆಕರೆಯುವ ಸಂಪ್ರದಾಯವನ್ನು ಮಾಡುತ್ತಿದ್ದರು. ಅಂದು ಸಂಜೆ ಕುಟುಂಬದ ಸದಸ್ಯರೆಲ್ಲರೂ ಸೇರಿ, ಸತ್ತವರಿಗೆ ತೀರ ಪ್ರೀತಿಯ ಮಕ್ಕಳನ್ನು ನಡುವೆ ಕುಳ್ಳಿರಿಸಿ, ಅವನ ಮೈಮೇಲೆ ಸತ್ತವರ ಕೊಲೆಯನ್ನು ಕರೆಯುತ್ತಿದ್ದರು. ಕೆಲವೊಮ್ಮೆ ಹಾಗೆ ಕೂರಿಸಿದವರ ಮೈಮೇಲೆ ಬರದ ಹಿರಿಯರು ಇನ್ನೊಬ್ಬರ ಮೈಮೇಲೆ ಬಂದು ಅಬ್ಬರಿಸಿ, ಮತ್ತೆ ತಣ್ಣಗಾಗಿ ಪರಿವಾರದ ಸದಸ್ಯನಾಗಿ ಉಳಿದು ಎಲ್ಲರನ್ನೂ ಸಲಹುವ ಭರವಸೆಯನ್ನು ನೀಡುತ್ತಿದ್ದರು. ಹಾಗಾಗಿ ಊರಿನಲ್ಲಿ ಯಾರೊಬ್ಬರು ತೀರಿಕೊಂಡರೂ ಅವರು ಯಾರ ಮೈಮೇಲೆ ಬರುತ್ತಾರೆ ಎಂಬ ಕುತೂಹಲ ಮಕ್ಕಳಾದ ನಮ್ಮದಾಗಿರುತ್ತಿತ್ತು. ನಮ್ಮೂರ ದೇವಿಯರಂತೂ ಬಹಳ ಚಾಲಾಕಿಯಾಗಿದ್ದರು. ಚಂದಚಂದದ ಹೆಂಗಸರ ಮೈಮೇಲೆ ಬಂದು ಅವರನ್ನು ಹೇಗೆ ನಡೆಸಿಕೊಳ್ಳಬೇಕೆಂದು ಮನೆಯವರಿಗೆಲ್ಲ ಮನವರಿಕೆ ಮಾಡಿಕೊಡುತ್ತಿದ್ದರು. ಕೆಲವೊಮ್ಮೆ ಹರಕೆ ಹೇಳಿ ಮರೆತುಹೋಗಿದ್ದರೆ ರಾತ್ರಿ ಮಲಗಿದ ಪುಟ್ಟ ಮಕ್ಕಳ ಮೈಮೇಲೆ ಬಂದು ಹಠಮಾಡಿ ಅಳಿಸಿ ತಮ್ಮ ಹರಕೆಗಳನ್ನು ಸಲ್ಲಿಸಿಕೊಳ್ಳುತ್ತಿದ್ದರು.
ರವೀಂದ್ರರು ನಮಗೆ ಹೇಳುವುದು ಕಲೆಯ ಮುಖಾಂತರವಾಗಿ ಮನುಷ್ಯ ಹೊಂದಬಹುದಾದ ರೂಪಾಂತರಗಳ ಬಗ್ಗೆ. ಆದರೆ ನಂಬಿಕೆಯ ಮೂಲಕವೂ ನಡೆಯುವ ಅನೇಕ ರೂಪಾಂತರಗಳಿಗೆ ಸಾಕ್ಷಿಯಾಗುವ ಅವಕಾಶ ಬಾಲ್ಯದಲ್ಲಿ ನಮಗೊದಗಿತ್ತು. ಬದುಕಿಗಾಗಿ ನಡೆಯುವ ಅನೇಕ ರೂಪಾಂತರಗಳು ಇಂದು ನಮ್ಮ ಮುಂದೆಯೇ ನಡೆಯುತ್ತಿದ್ದರೂ ಅಮಾನುಷ ಲೋಕದ ಈ ರೂಪಾಂತರಗಳು ಇಂದಿಗೂ ನನ್ನನ್ನು ಕಾಡುವ ಸಂಗತಿಗಳಾಗಿವೆ.
ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹವನ್ನು ಬಹುರೂಪಿ ಪ್ರಕಟಿಸಿದೆ. ಅನೇಕ ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.