ರಕ್ತದಲ್ಲಿ ಮಧುರ ದನಿಯನ್ನು ಹೊತ್ತು ತಂದಿದ್ದ ಮಗು ಬಾಲೆಯಾಗಿ ಬೆಳೆಯುತ್ತಾ ವಿಪರೀತ ಚಂದದ ಗಾಯಕಿ ಆದಳು. ವಯಸ್ಸಿನ ಹುಡುಗಿಯನ್ನು ಸ್ವಯಂವರದ ಮೂಲಕ ಗ್ವಾಲಿಯರಿನ ದೊರೆ ಮಾನ್ ಸಿಂಗ್‍ಗೆ ಮದುವೆ ಮಾಡಿಕೊಡಲಾಗಿತ್ತು. ನಿತ್ಯವೂ ನರ್ಮದೆಯ ಪೂಜೆ ಸಲ್ಲಿಸದೆ ಗುಟುಕು ನೀರನ್ನೂ ಒಲ್ಲೆ ಎನ್ನುತ್ತಿದ್ದ ರೂಪ್ಮತಿಗೆ, ಗ್ವಾಲಿಯರಿನಲ್ಲಿ ನರ್ಮದೆ ಕಾಣದಾಗಿದ್ದಳು. ಅದಕ್ಕೇ ಮಾನ್ ಸಿಂಗ್ ಅವಳನ್ನು ತವರಿನಲ್ಲಿಯೇ ಬಿಟ್ಟಿದ್ದ. ರೂಪ್ಮತಿಯ ಹಾಡುಗಾರಿಕೆ ದೆಹಲಿಯ ಸುಲ್ತಾನ ಅಕ್ಬರನ ಕಿವಿ ಸೇರಿತ್ತು.
ಕಂಡಷ್ಟೂ ಪ್ರಪಂಚ ಪ್ರವಾಸ ಅಂಕಣದಲ್ಲಿ ಮಧ್ಯಪ್ರದೇಶದ ಮಾಂಡುವಿನಲ್ಲಿ ಸುತ್ತಾಡಿದ ಅನುಭವಗಳನ್ನು ಹಂಚಿಕೊಂಡಿದ್ದಾರೆ ಅಂಜಲಿ ರಾಮಣ್ಣ ಬರಹ
ಮಾಂಡು ಎನ್ನುವ ಹೆಸರೇ ಜನ್ಮಾಂತರಗಳ ಪಳಿಯುಳಿಕೆಯ ತರಂಗದಂತೆ ಎನ್ನಿಸಿತ್ತು. ಕಣ್ಣು ಮುಚ್ಚಿದಾಗ ಅದರ ಊಹಾತ್ಮಕ ನೋಟಗಳೋ ಸೂರಜ್ ಬರ್ಜಾತಿಯಾ ಸಿನೆಮಾದಂತೆ ಸುಳಿಯೊಳಗೆ ಸಿಕ್ಕಿಸಿಕೊಳ್ಳುತ್ತಿತ್ತು. ಅದೆಷ್ಟು ಪ್ರೇಮಕಥೆಗಳು ಆಗಿ ಹೋಗಿವೆ ಈ ನೆಲದಲ್ಲಿ. ವಿಚ್ಚೇದನಗಳ ಸಂಖ್ಯೆ ಹೆಚ್ಚುತ್ತಿವೆ ಎನ್ನುವ ಸೊಲ್ಲಿನ ಜೊತೆಗೇ, ಮರ್ಯಾದಾ ಹತ್ಯೆ ಬೇಯುತ್ತಿರುವ ಸೆರಗಿನಲ್ಲಿಯೇ, ಜಾತಿ-ಜಾತಿಗಳ ಹುಣ್ಣು ಹರಡುತ್ತಿರುವಾಗಲೂ ಪ್ರೀತಿಸುವ ಮನಸುಗಳು ಕಾಲನಿಂದ ಕ್ಷಣಗಳನ್ನು ಕದ್ದು, ಕಣ್ಣುಕಣ್ಣುಗಳಲ್ಲಿ ಸಂಧಿಸುತ್ತಿವೆ ಎನ್ನುವುದೇ ಬಿರುಬೇಸಿಗೆಲ್ಲೂ ಎಲೆಯಾಡಿಸುವ ಗಾಳಿಯಂತೆ. ಅದರಲ್ಲೂ ರಾಣಿ ರೂಪಮತಿ ಮತ್ತು ಬಾಜ಼್ ಬಹಾದ್ದೂರನ ಪ್ರೇಮ ಕಹಾನಿ ಅದೆಷ್ಟೊಂದು ತಂಪು ಎಂದುಕೊಂಡೇ ಮಧ್ಯಪ್ರದೇಶದ ಇಂದೋರಿನಿಂದ ಎರಡೂವರೆ ಗಂಟೆಗಳ ಪ್ರಯಾಣದಲ್ಲಿ ಬಂದು ನಿಂತಿದ್ದೇವೆ ಮಾಂಡುವಿನಲ್ಲಿ.
ನಲವತ್ತೈದು ಕಿಲೋಮೀಟರುಗಳ ವಿಸ್ತೀರ್ಣದ ಊರು ಹೆಜ್ಜೆಹೆಜ್ಜೆಯಲ್ಲೂ ಕೋಟೆ ಕೊತ್ತಲಗಳ ತಂಬೂರಿ ಮೀಟಿ, ಭವಾಬ್ಧಿ ದಾಟಿಸಲು ಹವಣಿಸುತ್ತಿದೆ. ಕ್ಯಾಲೆಂಡರಿನಲ್ಲಿ ಚಳಿಗಾಲ ಮುಗಿಯುವ ಕೊನೆಯ ದಿನದಲ್ಲಿಯೇ ನಮ್ಮೂರಿನ ನಡುಬೇಸಿಗೆಯನ್ನೂ ಮೀರಿಸಿದ ಶಾಖ ಮತ್ತು ಬಿಸಿಲು ಹೊತ್ತಿದ್ದ ಊರು ಭೂಗೋಳದ ಚರಿತ್ರೆಯಲ್ಲಿ ಜ್ವಾಲಾಮುಖಿಯಿಂದ ರೂಪಗೊಂಡಿದ್ದಂತೆ. ನೀಲಿಹರಳು, ಅಪರಂಜಿ ಚಿನ್ನವನ್ನು ಗರ್ಭದಲ್ಲಿ ಹೊತ್ತ ಇಲ್ಲಿನ ಭೂದೇವಿಯ ಬಗ್ಗೆ ದೇಶ, ವಿದೇಶದವರಿಗೂ ವ್ಯಾಮೋಹವಂತೆ. ನದಿಯ ಮೇಲ್ಘಟ್ಟವನ್ನು ಮಾಲ್ವರು, ಕೆಳಘಟ್ಟವನ್ನು ನೇಮಾಡರು ಆಳುತ್ತಿದ್ದರಂತೆ. ಕಾಳಿದಾಸನ ಕಾಲದ ಪಾರ್ಮಾರ್ ವಂಶದ ಭೋಜರಾಜ ಆಳ್ವಿಕೆ ನಡೆಸಿದ್ದೂ ಇಲ್ಲಿಯೇ ಅಂತೆ. ನರ್ಮದಾ ನದಿತೀರದ ದೂರದ ಅಂಚಿನಲ್ಲಿ ದೇವಸ್ಥಾನಗಳು, ಜೈನ ಮಂದಿರಗಳು ಇರುವ ಈ ನೆಲದಲ್ಲಿ ಹೋಷಾಂಗ್ ಷಾ ಕಟ್ಟಿಸಿದ ಬಿಳಿ ಅಮೃತ ಶಿಲೆಯ ಗೋಳವೇ ಆಗ್ರಾದ ತಾಜ್ ಮಹಲಿಗೆ ಪ್ರೇರಣೆ ಆಯಿತಂತೆ. ಹೀಗೆ ಅದಂತೆ, ಇದಂತೆ ಎನ್ನುವ ಸಾಲುಗಳನ್ನು ಗೂಗಲ್‌ನಲ್ಲಿ ಓದಿಕೊಂಡು ಮಾಂಡು ನೆಲಕ್ಕೆ ಕಾಲಿಟ್ಟಾಗ ಸಂಜೆಯ ನಾಲ್ಕು ಗಂಟೆ.
ಚಾಲಕ ಪವನ್ ಸೋಲಂಕಿ “ಇಲ್ಲಿಂದ ಮುಂದೆ ಗಾಡಿ ಹೋಗಲ್ಲ. ನೀವು ಇಲ್ಲಿ ಇಳಿದು ಬೇಗ ಬೇಗ ಹೋಗಿ. ಖಿಲ್ಲೆ ಮುಚ್ಚಿಬಿಡುತ್ತಾರೆ” ಎಂದು ನಮ್ಮ ಕಾಲುಗಳಿಗೆ ವೇಗ ಹತ್ತಿಸಿಕೊಟ್ಟ. ಇಪ್ಪತ್ತು ರೂಪಾಯಿಗಳ ಟಿಕೆಟ್ ಕೊಂಡಾಗ ನಾನೂರು ರೂಪಾಯಿಯ ಫಿಕ್ಸೆಡ್ ದರಕ್ಕೆ ಜೊತೆಯಾಗಿದ್ದು ಪುರಾತತ್ವ ಇಲಾಖೆಯಿಂದ ನಿಯೋಜಿತಗೊಂಡಿದ್ದ ಮಾರ್ಗದರ್ಶಿ ಯಶ್ವಂತ್ ಗವಾರ್. ಆತನ ಮೊದಲ ಮಾತು “ನನ್ನ ಜೊತೆಗೇ ಹೆಜ್ಜೆ ಹಾಕಿ, ನಿಮ್ಮ ಮೊಬೈಲ್ ನನಗೆ ಕೊಟ್ಟು ಬಿಡಿ. ನಾನೇ ಫೋಟೊ ತೆಗೆಯುತ್ತೇನೆ. ನೀವು ಗಮನವಿಟ್ಟು ಚರಿತ್ರೆ ಕೇಳಿಸಿಕೊಳ್ಳಿ. ಯಾವುದನ್ನೂ ಮಿಸ್ ಮಾಡಿಕೊಳ್ಳಬೇಡಿ” ಆತನ ಉತ್ಸಾಹವು ರಾಣಿ ರೂಪ್ಮತಿಯ ಹೆಸರಿನ ಭಾಸ ನೀಡುತ್ತಿತ್ತು. ಒಂದು ಊರಿನ ಇತಿಹಾಸ ತಿಳಿಯಲು ಪುಸ್ತಕ ಇದ್ದೇ ಇದೆ. ಈಗಂತೂ ಅಂತರ್ಜಾಲ ಬೇಕಾದ್ದು ಬೇಡವಾದ್ದು ಎಲ್ಲಾ ಮಾಹಿತಿಯ ಬಲೆ ಬೀಸುತ್ತಿರುತ್ತದೆ. ಆದರೂ ಸ್ಥಳೀಯ ಜನರ ಬಾಯಿಂದ ಅಲಿಖಿತ ಇತಿಹಾಸ ಕಥನ ಕೇಳುವುದು ಮಾತ್ರ ಮುಂದಿನ ಭವಿಷ್ಯಕ್ಕೆ ಉರುಳಿಕೊಳ್ಳುವಂತೆ ಮಾಡುವ ಚೆಂಡು ಎನ್ನುವುದೇ ಸತ್ಯ. ಚಕ್‌ಚಕ್ಕಂತ ಫೋಟೊ ತೆಗೆಯುತ್ತಾ ಇಂಗ್ಲಿಷ್, ಹಿಂದಿ ಮಿಶ್ರಿತ ಯಶ್ವಂತನ ಮಾತುಗಳು ಒಂದಷ್ಟು ಹೊತ್ತು ಗತದ ಸೌಂದರ್ಯ ತೋರಿಸಿತ್ತು.
ರೂಪ್ಮತಿ ಮಹಲಿನ ದ್ವಾರದಲ್ಲಿ “ಸಾರಾಂಗ್‌ಪುರದಲ್ಲಿ ಥಾಣ್ ಸಿಂಗ್ ಅಂತ ಒಬ್ಬ ರಾಜ ಇದ್ದ. ತಾನ್ ಸಿಂಗ್ ಅಲ್ಲ. ಥಾಣ್ ಸಿಂಗ್. ಅವನಿಗೆ ಮಕ್ಕಳಿರಲಿಲ್ಲ. ಒಂದು ದಿನ ನರ್ಮದೆಯಲ್ಲಿ ಅರ್ಘ್ಯ ಬಿಡುತ್ತಿದ್ದಾಗ ರಾಜನ ಕಾಲಿಗೆ ಬಂಡೆ ಸಿಕ್ಕಂತಾಯ್ತು. ಅದನ್ನು ಒಡೆದು ನೋಡಿದಾಗ ಬುಟ್ಟಿಯಲ್ಲಿ ಒಂದು ಹೆಣ್ಣು ಮಗು ತೇಲುತ್ತಿತ್ತು. ರಾಜ ಅದು ತನಗೆ ದೇವರು ಕೊಟ್ಟ ವರ ಎಂದುಕೊಂಡು ಮಗುವನ್ನು ಅರಮನೆಗೆ ತಂದ” ಹೀಗೆ ಶುರುವಾಯಿತು ಅವನು ಹೇಳುತ್ತಿದ್ದ ಕಥೆ. ಆ ಮಗು ಅದೆಷ್ಟು ಸುಂದರವಾಗಿತ್ತು ಎಂದರೆ ವಳಲೆಯಲ್ಲಿ ಅದರ ಬಾಯಿಗೆ ಹಾಲು ಹನಿಸಿದರೆ ಆ ತುಟುಕುಗಳು ಕೂಸಿನ ಗಂಟಲಿನಲ್ಲಿ ಇಳಿಯುತ್ತಿದ್ದದ್ದು ಚರ್ಮದ ಮೇಲಿನಿಂದ ಕಾಣುತ್ತಿತ್ತು. ಅದಕ್ಕೇ ಆ ಮಗುವಿಗೆ ರೂಪ್ಮತಿ ಎಂದು ನಾಮಕರಣ ಮಾಡಲಾಯಿತು.
ರಕ್ತದಲ್ಲಿ ಮಧುರ ದನಿಯನ್ನು ಹೊತ್ತು ತಂದಿದ್ದ ಮಗು ಬಾಲೆಯಾಗಿ ಬೆಳೆಯುತ್ತಾ ವಿಪರೀತ ಚಂದದ ಗಾಯಕಿ ಆದಳು. ವಯಸ್ಸಿನ ಹುಡುಗಿಯನ್ನು ಸ್ವಯಂವರದ ಮೂಲಕ ಗ್ವಾಲಿಯರಿನ ದೊರೆ ಮಾನ್ ಸಿಂಗ್‍ಗೆ ಮದುವೆ ಮಾಡಿಕೊಡಲಾಗಿತ್ತು. ನಿತ್ಯವೂ ನರ್ಮದೆಯ ಪೂಜೆ ಸಲ್ಲಿಸದೆ ಗುಟುಕು ನೀರನ್ನೂ ಒಲ್ಲೆ ಎನ್ನುತ್ತಿದ್ದ ರೂಪ್ಮತಿಗೆ, ಗ್ವಾಲಿಯರಿನಲ್ಲಿ ನರ್ಮದೆ ಕಾಣದಾಗಿದ್ದಳು. ಅದಕ್ಕೇ ಮಾನ್ ಸಿಂಗ್ ಅವಳನ್ನು ತವರಿನಲ್ಲಿಯೇ ಬಿಟ್ಟಿದ್ದ. ರೂಪ್ಮತಿಯ ಹಾಡುಗಾರಿಕೆ ದೆಹಲಿಯ ಸುಲ್ತಾನ ಅಕ್ಬರನ ಕಿವಿ ಸೇರಿತ್ತು. ತನ್ನ ಆಸ್ಥಾನ ವಿದ್ವಾಂಸ ತಾನ್ಸೇನ್ ಜೊತೆಗೆ ರೂಪ್ಮತಿಯ ಗಾಯನದ ಸ್ಪರ್ಧೆ ನಡೆಸಲು ಸಜ್ಜಾದ. ಅಲ್ಲಿ ತಾನ್ಸೇನ್ ದೀಪಕ್ ರಾಗವನ್ನು ಆಲಾಪಿಸಿ ಜ್ಯೊತಿ ಹೊತ್ತಿಸಿದರೆ, ಇವಳು ಇಲ್ಲಿಯೇ ಮಲ್ಹಾರ್ ರಾಗದಲ್ಲಿ ಹರಿದು ಮಳೆ ಬರಿಸಿಬಿಟ್ಟಳು. ವಿರಹದ ದಳ್ಳುರಿಯಲ್ಲಿ ದಹಿಸಿಹೋಗುತ್ತಿದ್ದ ಅಕ್ಬರ್ ತನ್ನ ಖಜಾಂಚಿ ಬಾಜ಼್ ಬಹಾದ್ದೂರನನ್ನು ತೆರಿಗೆ ಪಡೆದುಕೊಂಡು, ರೂಪ್ಮತಿಯ ಬಗ್ಗೆ ಹೆಚ್ಚಿನ ವಿಷಯ ಸಂಗ್ರಹಿಸಿಕೊಂಡು ಬರಲು ಕಳುಹಿಸುತ್ತಾನೆ.
ಕಾಳಿದಾಸನ ಕಾಲದ ಪಾರ್ಮಾರ್ ವಂಶದ ಭೋಜರಾಜ ಆಳ್ವಿಕೆ ನಡೆಸಿದ್ದೂ ಇಲ್ಲಿಯೇ ಅಂತೆ. ನರ್ಮದಾ ನದಿತೀರದ ದೂರದ ಅಂಚಿನಲ್ಲಿ ದೇವಸ್ಥಾನಗಳು, ಜೈನ ಮಂದಿರಗಳು ಇರುವ ಈ ನೆಲದಲ್ಲಿ ಹೋಷಾಂಗ್ ಷಾ ಕಟ್ಟಿಸಿದ ಬಿಳಿ ಅಮೃತ ಶಿಲೆಯ ಗೋಳವೇ ಆಗ್ರಾದ ತಾಜ್ ಮಹಲಿಗೆ ಪ್ರೇರಣೆ ಆಯಿತಂತೆ. ಹೀಗೆ ಅದಂತೆ, ಇದಂತೆ ಎನ್ನುವ ಸಾಲುಗಳನ್ನು ಗೂಗಲ್‌ನಲ್ಲಿ ಓದಿಕೊಂಡು ಮಾಂಡು ನೆಲಕ್ಕೆ ಕಾಲಿಟ್ಟಾಗ ಸಂಜೆಯ ನಾಲ್ಕು ಗಂಟೆ.
ಸಾವಿರ ಗಾವುದ ದೂರದಲ್ಲಿಯೇ ವೀಣೆ ನುಡಿಸುತ್ತಾ ಹಾಡಿಕೊಳ್ಳುತ್ತಿದ್ದ ಅವಳ ದನಿ ಇವನ ಹೃದಯ ಸವರಿತು. ಹಣದ ಚೀಲವನ್ನು ಕೈ ಜಾರಿಸಿ, ಪ್ರೀತಿಯ ಮಣೆಯ ಏರಿ ನಿಂತ ಬಾಜ಼್ ಬಹಾದ್ದೂರ್. ನೇರ ಥಾಣ್ ಸಿಂಗ್‌ನ ಅಂತಃಪುರಕ್ಕೆ ಬಂದು ರೂಪ್ಮತಿಯಲ್ಲಿ ತನ್ನ ಪ್ರೇಮ ನಿವೇದನೆ ಮಾಡಿಕೊಂಡ. ಮಾಂಡುವಿನಲ್ಲಿ ಭೋಜರಾಜ ತನ್ನ ಸೇನೆಗೆ ಬಿಡಾರವಾಗಿ ಕಟ್ಟಿದ್ದ ಇಂದಿನ ಮಹಲನ್ನು ವಶಪಡಿಸಿಕೊಂಡು ತನಗೆ ಬೇಕಾದಂತೆ ರೂಪಾಂತರ ಮಾಡಿಕೊಂಡು ಅದರ ಪಕ್ಕದಲ್ಲಿಯೇ ಇದ್ದ ಬೇಸಿಗೆ ಮಹಲನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬದಲಿಸಿ, ನಿತ್ಯವೂ ರೂಪ್ಮತಿಯ ಸಂಗೀತವನ್ನು ದೂರದಿಂದಲೇ ಆಲಿಸುತ್ತಾ ಅಲ್ಲೇ ಉಳಿದುಬಿಟ್ಟ. ಅಕ್ಬರನನ್ನು ಮರೆತೇ ಬಿಟ್ಟ ಗಾಢ ಪ್ರೇಮಿ ಬಾಜ಼್ ಬಹಾದ್ದೂರ್. ಇನ್ನು ತಾಳಲಾರೆ ಎನಿಸಿದಾಗ ಪ್ರಿಯನು ಪ್ರೇಮಿಕೆಯನ್ನು ತನ್ನೊಡನೆ ಬಂದು ಇರಲು ಕೇಳುತ್ತಾನೆ. ಹೀಗೆ ಹೇಳುತ್ತಿದ್ದ ಯಶ್ವಂತ್‌ನನ್ನು ತಡೆದು ಕೇಳಿದೆ “ಅವರಿಬ್ಬರೂ ಮದುವೆ ಮಾಡಿಕೊಂಡರಾ?” ಅದಕ್ಕವನ ಉತ್ತರ “ಈಗ ವಿದ್ಯಾವಂತರು ಲಿವಿಂಗ್ ರಿಲೇಷನ್‌ಶಿಪ್ ಬಗ್ಗೆ ಮಾತನಾಡುತ್ತೇವೆ, ಆದರೆ ಆ ಶತಮಾನದಲ್ಲಿಯೇ ರೂಪ್ಮತಿ ಮತ್ತು ಬಾಜ಼್ ಬಹಾದ್ದೂರ್ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿ ಇದ್ದರು”
“ಬರಲಾರೆ, ನೀನಿರುವ ಜಾಗದಲ್ಲಿ ನರ್ಮದೆ ಹರಿಯುವುದಿಲ್ಲ.” ಎಂದು ಕಾರಣವಿತ್ತ ಪ್ರಿಯತಮೆ ರೂಪ್ಮತಿಯ ಕನಸಿನಲ್ಲಿ ಕಾಣಿಸಿದ ನರ್ಮದಾ ದೇವಿ, “ಬಾಜ಼್ ಬಹಾದ್ದೂರಿನ ಮಹಲಿನ ಮುಂದೆ ಕೊಳ ಸ್ಥಾಪಿಸು ನಾನು ಅಲ್ಲಿ ಬಂದು ನೆಲೆಸುತ್ತೇನೆ” ಎಂದು ಹೇಳುತ್ತಾಳೆ. ಅದರಂತೆ ರೂಪ್ಮತಿ ನಿರ್ಮಿಸಿದ್ದು ರೇವಾ ಕುಂಡ ಎನ್ನಲಾಗುತ್ತಿದೆ ಇವತ್ತಿಗೂ. ರೇವಾ ನರ್ಮದಾ ನದಿಯ ಪೂರ್ವದ ಹೆಸರು. ಇಷ್ಟೇ ಆಗಿ ಅವರಿಬ್ಬರೂ ಹಾಡಿಕೊಂಡು ಸುಖವಾಗಿದ್ದರೆ ಈ ಲವ್ ಸ್ಟೋರಿ ವಿಶೇಷ ಎನಿಸಿಕೊಳ್ಳುವುದಾದರೂ ಹೇಗೆ?! ಹಿಂದಿರುಗಿ ಬಾರದ ಬಾಜ಼್ ಬಗ್ಗೆ ಅಕ್ಬರನಿಗೆ ಹೊತ್ತಿ ಉರಿಯಿತು ಕೋಪ. ತನ್ನ ಸೇನಾಧಿಪತಿ ಆಧಮ್ ಖಾನ್‌ನನ್ನು ಬಾಜ಼್ ಮತ್ತು ರೂಪ್ಮತಿಯನ್ನು ಹೊತ್ತು ತರಲು ಕಳುಹಿಸುತ್ತಾನೆ. ಗ್ವಾಲಿಯರಿನ ಗಡಿಯಲ್ಲಿ ಬಾಜ಼್ ಬಹಾದ್ದೂರ್ ಆಧಮ್ ಖಾನ್ ಜೊತೆಗೆ ಯುದ್ಧಕ್ಕೆ ನಿಲ್ಲುತ್ತಾನೆ. ಸೋಲುತ್ತಾನೆ, ಸಾಯುತ್ತಾನೆ. ತನ್ನನ್ನು ಹೊತ್ತೊಯ್ಯಲು ಆಧಮ್ ಖಾನ್ ಬರುತ್ತಿದ್ದಾನೆ ಎನ್ನುವ ವಿಷಯ ತಿಳಿದ ರೂಪ್ಮತಿ ಕೈಯಲ್ಲಿದ್ದ ವಜ್ರದ ಉಂಗುರವನ್ನು ತೇದು ತಿಂದು ಯಾರಿಗೂ ಕಾಣದ ಕಲ್ಪನಾ ಲೋಕಕ್ಕೆ ಹೋಗಿಬಿಡುತ್ತಾಳೆ. ಅವಳ ಶವವನ್ನು ಅಕ್ಬರನ ಆಸ್ಥಾನಕ್ಕೆ ಕೊಂಡೊಯ್ಯಲಾಗುತ್ತದೆ. ಸಾವಿನಲ್ಲೂ ಸುಂದರಿಯಾಗಿದ್ದ ಅವಳನ್ನು ದಫನ್ ಮಾಡಿದ ನಂತರ ಅಕ್ಬರ್ ಮಧ್ಯಪ್ರದೇಶವನ್ನು ನಾಲ್ಕು ಕಂದಾಯ ವಿಭಾಗಗಳನ್ನಾಗಿ ಮಾಡಿ ಮಾಲ್ವರು, ರಜಪೂತರು, ಪಾರ್ಮಾರರು ಮತ್ತು ಚಂದೇರಿಗಳಲ್ಲಿ ಹಂಚಿದನಂತೆ.
ಅಬ್ಬಾ, ಈ ಯುವಕ ಏನೆಲ್ಲಾ ಹೇಳುತ್ತಾ ಏನೇನನ್ನೋ ಹೇಳದೆ ಉಳಿಸಿಬಿಟ್ಟ ಎನ್ನುವ ನೀಳವಾದ ಉಸಿರಿನೊಡನೆ ಆ ಮಹಲನ್ನು ಸುತ್ತಿ ಪಕ್ಕದ ಬಾಜ಼್ ಬಹಾದ್ದೂರ್ ಮಹಲನ್ನೂ ನೋಡಿಯಾಗಿತ್ತು.
“ಬೇಗ ಹೋಗಿ ಜಹಾಜ಼್ ಮಹಲ್ ಮುಚ್ಚುವ ಸಮಯ ಆಗುತ್ತಿದೆ” ಎನ್ನುವ ಅವನದ್ದೇ ಮಾತು ಕೈಗಡಿಯಾರದೆಡೆಗೆ ಗಮನ ತಂದು ಬಿಟ್ಟಿತ್ತು. ಅಲ್ಲಿಂದ ಒಂದು ಕಿಲೋಮೀಟರ್‌ನ ದೂರದಲ್ಲಿ ಜಹಾಜ಼್ ಮಹಲ್ ಎನ್ನುವ ಮತ್ತೊಂದು ಅದ್ಭುತ ಲೋಕ ಇತ್ತು. ಮಾರ್ಗದರ್ಶಿ ಹೇಳಿದ ಪ್ರಕಾರ ಇದನ್ನು ಹಡಗಿನ ಆಕಾರದಲ್ಲಿ ಕಟ್ಟಿಸಿ ಬೇಸಿಗೆ ಅರಮನೆಯನ್ನಾಗಿ ಮಾಡಿಕೊಂಡಿದ್ದದ್ದು ಮಾಲ್ವರ ರಾಜ ಜಯದೇವ. ನಂತರ ಹದಿನೈದು ಸಾವಿರ ಹೆಂಗಸರನ್ನು ತನ್ನ ಅಂತಃಪುರದಲ್ಲಿ ಹೊಂದಿದ್ದ ಘಿಯಾಸ್ ಉದ್ದಿನ್ ಖಿಲ್ಜಿ ಈ ಮಹಲನ್ನು ವಶಪಡಿಸಿಕೊಂಡು ರಚನೆಯನ್ನು ಬದಲಾಯಿಸಿದನಂತೆ. ಅವನದ್ದು, ಇವನದ್ದು ಎನ್ನುವ ಗೊಡವೆಗೆ ಬೀಳದೆಯೇ ನೋಡುವಾಗ ಜಹಾಜ಼್ ಮಹಲ್ ವಿಶ್ವಾತೀತ ಎನಿಸಿಬಿಡುತ್ತದೆ. ಬೇರೆ ಯಾವ ಪ್ರವಾಸಿಯೂ ಅಲ್ಲಿರಲಿಲ್ಲ. ಜೀವದ ಗೆಳತಿ ವೀಣಾ ಮತ್ತು ನಾನು ಇಬ್ಬರೇ. ಪಕ್ಕದಲ್ಲಿ ತೀನ್ ತಾಲ್ ಆಗುತ್ತಿದ್ದ ನೀರಿನ ಝರಿ. ಎದುರು ನಿರುಮ್ಮಳತೆಯನ್ನೇ ನಿತ್ಯದ ರಿಯಾಜ಼್ ಆಗಿಸಿಕೊಂಡು ಬೀಗುತ್ತಿದ್ದ ಕೊಳ, ಅದರ ನಡುವಿನಲ್ಲಿತ್ತು ಹಸ್ತಕದಂತೆ ಒಂದು ಕಲ್ಲ್ಮಂಟಪ. ರೆಕ್ಕೆ ಕಾಣದಂತೆ ಹಾರಿ ಬಂದು ಕೂರುತ್ತಿದ್ದ ಬೆಳ್ಳಕ್ಕಿ ಮತ್ತು ಅವುಗಳ ಕಥಕ್ ಭ್ರಮಣ. ಇವಿಷ್ಟೇ ಮತ್ತು ಇವಿಷ್ಟೇ. ಅಲ್ಲೇ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತು ಎರಡು ಹೆಣ್ಣ್ಜೀವಗಳು ಚರಿತ್ರೆಯನ್ನು ಭಾಗವಾಗಿಸಿ ಕೊಳ್ಳುತ್ತಿರುವಾಗ, ಜಹಾಜ಼್ ಮಹಲ್ ನಿತ್ಯನೂತನ ಸೌಂದರ್ಯ ಮತ್ತು ಅತೀ ಪುರಾತನ ಮೌನದ ತುಣುಕಾಗಿ ಭಾವವಾಗುತ್ತಾ ಹೋಗಿದ್ದು ಹೇಳಲಾಗದ್ದು, ಮತ್ತೆಂದೂ ಹಿಂದಿರುಗಿಬಾರದ್ದು.
ಅಲ್ಲಿನ ಚೌಕಿದಾರ ಮೀರಿದ ಸಮಯದ ಬಗ್ಗೆ ಶಿಲ್ಪಿ ಊದಿದಾಗ ಕಂಡದ್ದು ಪಕ್ಕದಲ್ಲೇ ಇದ್ದ ಹಿಂಡೋಲಾ ಮಹಲ್. ರಜಪೂತರ ಭಾಷೆಯಲ್ಲಿ ಹಿಂಡೋಲ ಎಂದರೆ ಉಯ್ಯಾಲೆ ಎನ್ನುವ ಅರ್ಥವಂತೆ. ಆ ಮಹಲಿನ ಗೋಡೆಗಳು ತೂಗಾಡುವಂತೆ ಎನಿಸುತ್ತದೆ. ಅದರ ಮೇಲೆಯೇ ಮಾಂಡುವಿನ ಇತಿಹಾಸದ ಧ್ವನಿ ಮತ್ತು ಬೆಳಕಿನ ಪ್ರದರ್ಶನವೂ ಇದೆ. ಅದರ ಕಡೆಗೆ ಹೊರಟಾಗ ತುಂತುರು ಮಳೆ ಹಿಡಿದು ಗೆಳತಿಯರ ಪಾಲಿಗೆ ಸುಖದ ಸಾರವನ್ನೇ ಧಾರೆ ಎರೆದಿತ್ತು. ಬಣ್ಣನೆ ಬದಲಾವಣೆ ಎರಡಕ್ಕೂ ತಾನೇ ಹೊಣೆ ಎನ್ನುವ ಮಿತಿಗೆ ಸಿಗದ ಭಾವವೊಂದಕ್ಕೆ ತಾಕಿಕೊಂಡ ಮಾಂಡು ಈ ಸಖಿಯರಿಗೆ ಬೀಳ್ಕೊಡುಗೆ ಕೊಟ್ಟಿದ್ದು ಜನ್ಮಜನ್ಮಾಂತರದ ಮತ್ತೊಂದು ತರಂಗವೇ ಇರಬೇಕು.
ಅಂಜಲಿ ರಾಮಣ್ಣ ಲೇಖಕಿ, ಕವಯಿತ್ರಿ, ಅಂಕಣಗಾರ್ತಿ, ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತೆ. ‘ರಶೀತಿಗಳು – ಮನಸ್ಸು ಕೇಳಿ ಪಡೆದದ್ದು’, ‘ಜೀನ್ಸ್ ಟಾಕ್’ ಇವರ ಲಲಿತ ಪ್ರಬಂಧಗಳ ಸಂಕಲನ.