Advertisement
‘ರೈತ ಕವಿ’ ಲೆನಾರ್ಟ್ ಸ್ಯೋಗ್ರೆನ್ : ಎಸ್. ಜಯಶ್ರೀನಿವಾಸ ರಾವ್ ಸರಣಿ

‘ರೈತ ಕವಿ’ ಲೆನಾರ್ಟ್ ಸ್ಯೋಗ್ರೆನ್ : ಎಸ್. ಜಯಶ್ರೀನಿವಾಸ ರಾವ್ ಸರಣಿ

ಈ ಕಾರ್ಯದ ವಿರೋಧಾಭಾಸದ ಸ್ವರೂಪವು ಅವರ ಕವಿತೆಗಳಿಗೆ ಒಂದು ರೀತಿಯ ಮೊಂಡುತನದ ನಿಷ್ಠುರತೆಯನ್ನು ನೀಡುತ್ತದೆ. ಮೌನದ ದಿಕ್ಕಿನಲ್ಲಿ ಮಾತನಾಡುವ ಈ ಮಾತು, ಭಾಷೆಯ ಮೂಲಕ ಭಾಷೆಯಿಲ್ಲದವರ ಜಗತ್ತನ್ನು ವ್ಯಾಖ್ಯಾನಿಸುವ ಈ ಪ್ರಯತ್ನ – ಅದರೊಂದಿಗೆ, ಯಾವಾಗಲೂ ಅಡಗಿರುವ ವೈಫಲ್ಯದ ಭಾವನೆಯ ಜೊತೆ – ಸ್ಯೋಗ್ರೆನ್ ಅವರು ಇದನ್ನು ಮುವ್ವತ್ತಕ್ಕೂ ಹೆಚ್ಚು ಕವನ ಸಂಕಲನಗಳಲ್ಲಿ ನಿರಂತರವಾಗಿ ಮತ್ತು ಸಮಚಿತ್ತದಿಂದ ನಿರ್ವಹಿಸುತ್ತಾ ಬಂದಿದ್ದಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಸ್ವೀಡನ್ ದೇಶದ ಕವಿ ಲೆನಾರ್ಟ್ ಸ್ಯೋಗ್ರೆನ್-ರವರ (Lennart Sjögren, 1930) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

ಲೆನಾರ್ಟ್ ಸ್ಯೋಗ್ರೆನ್ ಅವರು ಸ್ವೀಡನ್ ದೇಶದ ಬಾಲ್ಟಿಕ್‌ ಪ್ರಾಂತ್ಯದ ಓಲ್ಯಾಂಡ್‌ (Öland) ಎಂಬ ದ್ವೀಪದಲ್ಲಿರುವ ಬೋಡಾ ಗ್ರಾಮದಲ್ಲಿ 1930-ರಲ್ಲಿ ಜನಿಸಿದರು ಮತ್ತು ಇಂದಿಗೂ ಅವರು ಕಡಲ ತೀರದಲ್ಲಿರುವ ಅವರ ಹೆತ್ತವರ ಹಳೆಯ ಫಾರ್ಮಿನಲ್ಲಿ ವಾಸವಾಗಿದ್ದಾರೆ. 1950-ರ ದಶಕದಲ್ಲಿ, ಅವರು ಗೋಟೆನ್‌ಬರ್ಗ್ ಅಕಾಡೆಮಿ ಆಫ್ ಆರ್ಟ್‌-ನಲ್ಲಿ (Gothenburg Academy of Art) ಸ್ವಲ್ಪ ಕಾಲ ಅಧ್ಯಯನ ಮಾಡಿದರು; ಅಲ್ಲಿ ಅವರು ಕಲಾವಿದೆ ಏವಾ ಫೋರ್ಸ್‌ಬರ್ಗ್-ರನ್ನು (Eva Forsberg) ಭೇಟಿಯಾದರು. ಮುಂದೆ, ಇವರಿಬ್ಬರ ವಿವಾಹವಾಗುತ್ತದೆ. ಸ್ಯೋಗ್ರೆನ್ ಅವರ ಕೃತಿಗಳಲ್ಲಿ ಕಾಣುವ ಹೆಚ್ಚಿನ ಚಿತ್ರಗಳನ್ನು ಏವಾ ಫೋರ್ಸ್‌ಬರ್ಗ್-ರವರೇ ಬಿಡಿಸಿರುವರು. 1959-ರಲ್ಲಿ, ಅವರು ಕವಿಯಾಗಿ ಸಾಹಿತ್ಯಲೋಕಕ್ಕೆ ಪ್ರವೇಶ ಮಾಡಿದರು. ಕಾವ್ಯದ ಹೊರತಾಗಿ, ಸ್ಯೋಗ್ರೆನ್ ಅವರು ಸಣ್ಣ ಕಥೆಗಳನ್ನು ಸಹ ಬರೆದಿದ್ದಾರೆ. ಅವರು ವರ್ಣಚಿತ್ರಕಾರರಾಗಿ ಸಕ್ರಿಯವಾಗಿದ್ದರೂ ಎಂದಿಗೂ ತಮ್ಮನ್ನು ಒಬ್ಬ ಅಸಲಾದ ಕಲಾವಿದ ಎಂದು ಪರಿಗಣಿಸಲಿಲ್ಲ, ಆದರೆ ಸ್ಯೋಗ್ರೆನ್-ರವರು ಒಬ್ಬ ವಿಶಿಷ್ಟ ವರ್ಣಚಿತ್ರಕಾರನ ದೃಷ್ಟಿಯನ್ನು ಹೊಂದಿದ್ದಾರೆ. ಅವರ ಕವಿತೆಗಳು ಸಾಂದ್ರವಾದ, ‘ಕಂಡ’ ಚಿತ್ರಗಳಿಂದ ತುಂಬಿವೆ.

ಸ್ಯೋಗ್ರೆನ್ ಅವರು ಹಳ್ಳಿಯ ಜೀವನವನ್ನು ವ್ಯಾವಹಾರಿಕ ಅನುಭವದಿಂದ ತಿಳಿದಿದ್ದಾರೆ ಎಂಬ ಅಂಶವು ಬಹುಶಃ ‘ಸ್ವೀಡಿಷ್ ನಿಸರ್ಗ ಕವಿ’ ಎಂದು ಕರೆಯಲ್ಪಡುವ ರಮ್ಯ ಕ್ಲೀಷೆಯ ಅತಿ ಪರಿಚಿತ ‘ರೈತ ಕವಿ’-ಯ ಲಕ್ಷಣದಂತೆ ತೋರುತ್ತದೆ. ಆದರೆ ಇದು ಸತ್ಯದಿಂದ ಬಲು ದೂರ. ರೈತನಿಗೆ ಗ್ರಾಮೀಣ ಸೌಂದರ್ಯದ ಕಾಣಿಸುವುದಿಲ್ಲ ಎಂದು ಖ್ಯಾತ ಡಚ್ ಬರಹಗಾರ ಹಾಗೂ ಸಾಹಿತ್ಯ ಇತಿಹಾಸಕಾರ ಕ್ಯಾರೆಲ್ ಫಾನ್ ಹೆಟ್ ರೆವ್ (Karel van het Reve) ಒಮ್ಮೆ ಹೇಳಿರುವರು. ಸ್ಯೋಗ್ರೆನ್ ಅವರು ತಮ್ಮನ್ನು ಸುತ್ತುವರೆದಿರುವ ಪ್ರಕೃತಿಯನ್ನು, ಹೊಲಗಳನ್ನು, ಪ್ರಾಣಿಗಳನ್ನು, ಕಡಲನ್ನು ತಂಪಾದ ಮತ್ತು ಕೆಲವೊಮ್ಮೆ ಕೋಪದ ದೃಷ್ಟಿಯಿಂದ ನೋಡುತ್ತಾರೆ. ಸ್ಯೋಗ್ರೆನ್ ಚಿತ್ರಿಸಿದ ಪ್ರಕೃತಿಯಲ್ಲಿ ರಮ್ಯತೆಗೆ ಅವಕಾಶವಿಲ್ಲ – ಇದು ತಿನ್ನುವ ಅಥವಾ ತಿನ್ನಲ್ಪಡುವ ಜಗತ್ತು, ಮಾನವ ಸ್ವಭಾವ ಮತ್ತು ನೈತಿಕತೆಯ ಬಗ್ಗೆ ಅಸಡ್ಡೆ ಹೊಂದಿರುವ ಜಗತ್ತು.

ಸ್ವೀಡಿಷ್ ಸಾಹಿತ್ಯ ಪತ್ರಿಕೆಯೊಂದರಲ್ಲಿ 1978-ರಲ್ಲಿ ಪ್ರಕಟವಾದ ಲೇಖನವೊಂದರಲ್ಲಿ, ಸ್ಯೋಗ್ರೆನ್ ಅವರು ತಮ್ಮ ಕಾವ್ಯವನ್ನು ಬರೆಯುವ ದೃಷ್ಟಿಯ ಸ್ಪಷ್ಟ ಚಿತ್ರಣವನ್ನು ನೀಡುತ್ತಾರೆ:
“ಜೈವಿಕ ವ್ಯವಸ್ಥೆಯಲ್ಲಿ ನಿರೂಪಿತವಾಗಿರುವ ವ್ಯಕ್ತಿಯ ಬಗ್ಗೆ ಸಂಪೂರ್ಣ ಅಲಕ್ಷ್ಯವನ್ನು ತೊಡೆದುಹಾಕಲು ಸಾಧ್ಯವಿಲ್ಲ; ಆ ದೃಷ್ಟಿಕೋನದಿಂದ ಪ್ರಕೃತಿಯು ಸಾಮರಸ್ಯದ ಜೀವಿಗಿಂತ ಹೆಚ್ಚಾಗಿ ಒಂದು ಭಯಹುಟ್ಟಿಸುವ ಸನ್ನಿವೇಶಗಳ ಅಥವಾ ವಸ್ತುಗಳ ಸಂಗ್ರಹಾಲಯವಾಗಿ ಕಂಡುಬರುತ್ತೆ. ಜನಪ್ರಿಯ ಪರಿಸರ ಚಿಂತನೆಯಲ್ಲಿ ವೈಯಕ್ತಿಕ ಅಸ್ತಿತ್ವಕ್ಕಾಗಿ ಈ ವಿನಾಶಕಾರಿ ಸಂದರ್ಭವನ್ನು ಮರೆಮಾಡುವ, ಮನುಷ್ಯನನ್ನು ಪ್ರಕೃತಿಯ ವಿನಾಶಕ ಎಂದು ಮಾತ್ರ ಸೂಚಿಸುವ ಪ್ರವೃತ್ತಿ ಇದೆ, ಈ ಪ್ರಕ್ರಿಯೆಯಲ್ಲಿ ಮನುಷ್ಯನ ಆಗಮನಕ್ಕೆ ಬಹಳ ಹಿಂದೆಯೇ ಪ್ರಕೃತಿಯು ಅಗಾಧ ವಿಪತ್ತುಗಳಿಗೆ ಕಾರಣವಾಗಿದೆ ಮತ್ತು ಈ ಮಹಾ ಚಕ್ರವು ಮಾನವರ ಒಳ್ಳೆಯದು ಮತ್ತು ಕೆಟ್ಟದ್ದರ ಪರಿಕಲ್ಪನೆಗಳ ಹೊರಗೆ ಇದೆ ಎಂಬುದನ್ನು ಮರೆತುಬಿಡುತ್ತದೆ.”

ಇನ್ನೊಂದು ಸಂದರ್ಶನದಲ್ಲಿ ಅವರು ತಮ್ಮನ್ನು ಒಬ್ಬ ‘ಡಾರ್ವಿನಿಸ್ಟ್’ (Darwinist) ಎಂದು ಕರೆದುಕೊಳ್ಳುತ್ತಾರೆ. ಲೆನಾರ್ಟ್ ಸ್ಯೋಗ್ರೆನ್ ಅವರ ಕಾವ್ಯಾತ್ಮಕ ಲೋಕದಲ್ಲಿ ಮಾನವೀಯತೆಯು ಕೇವಲ ಒಂದು ಸಾಧಾರಣ ಸ್ಥಾನವನ್ನು ಮಾತ್ರ ಪಡೆಯುತ್ತದೆ. ಫ್ರೆಂಚ್ ಕವಿ ಫ್ರೋಂಸಿಸ್ ಪೋಂಝ಼್ (Francis Ponge) ಅವರಂತೆ, ಲೆನಾರ್ಟ್ ಸ್ಯೋಗ್ರೆನ್-ರು ‘ಮೂಕ ಜಗತ್ತೇ ನಮ್ಮ ಏಕೈಕ ಆಶ್ರಯ’ ಎಂದು ನಂಬುತ್ತಾರೆ ಮತ್ತು ಮರಗಳು, ಪ್ರಾಣಿಗಳು, ಕಲ್ಲುಗಳು ಮತ್ತು ಖನಿಜಗಳ ಮೂಕ ಜಗತ್ತಿಗೆ ಸಾಧ್ಯವಾದಷ್ಟು ಹತ್ತಿರವಾಗಲು ಪ್ರಯತ್ನಿಸುತ್ತಾರೆ, ಅವುಗಳಿಗೂ ಒಂದು ಭಾಷೆ ಇದೆ ಎಂಬ ದೃಢನಿಶ್ಚಯದಿಂದ – ಆ ಭಾಷೆ ನಮ್ಮದಲ್ಲ ಮತ್ತು ನಮ್ಮ ಪದಗಳಲ್ಲಿ ಅದರ ಸುಳಿವನ್ನು ಮಾತ್ರ ಕೊಡಲು ಸಾಧ್ಯವಾಗುತ್ತೆ, ಹಾಗೂ ಸ್ಯೋಗ್ರೆನ್-ರು ‘ಮಿತಿ’ ಮತ್ತು ‘ಗಡಿ’ಯಂತಹ ಪದಗಳನ್ನು ಬಳಸುವ ಮೂಲಕ ಇಂತಹ ಸಂದರ್ಭಗಳನ್ನು ಸೂಚಿಸುತ್ತಾರೆ.

ಈ ಕಾರ್ಯದ ವಿರೋಧಾಭಾಸದ ಸ್ವರೂಪವು ಅವರ ಕವಿತೆಗಳಿಗೆ ಒಂದು ರೀತಿಯ ಮೊಂಡುತನದ ನಿಷ್ಠುರತೆಯನ್ನು ನೀಡುತ್ತದೆ. ಮೌನದ ದಿಕ್ಕಿನಲ್ಲಿ ಮಾತನಾಡುವ ಈ ಮಾತು, ಭಾಷೆಯ ಮೂಲಕ ಭಾಷೆಯಿಲ್ಲದವರ ಜಗತ್ತನ್ನು ವ್ಯಾಖ್ಯಾನಿಸುವ ಈ ಪ್ರಯತ್ನ – ಅದರೊಂದಿಗೆ, ಯಾವಾಗಲೂ ಅಡಗಿರುವ ವೈಫಲ್ಯದ ಭಾವನೆಯ ಜೊತೆ – ಸ್ಯೋಗ್ರೆನ್ ಅವರು ಇದನ್ನು ಮುವ್ವತ್ತಕ್ಕೂ ಹೆಚ್ಚು ಕವನ ಸಂಕಲನಗಳಲ್ಲಿ ನಿರಂತರವಾಗಿ ಮತ್ತು ಸಮಚಿತ್ತದಿಂದ ನಿರ್ವಹಿಸುತ್ತಾ ಬಂದಿದ್ದಾರೆ.

ಹೆಚ್ಚಾಗಿ ಕವನ ಸಂಕಲನಗಳನ್ನು ಒಳಗೊಂಡ, ಸುಮಾರು ಮೂವತ್ತೈದು ಪುಸ್ತಕಗಳನ್ನು ಪ್ರಕಟಿಸಿರುವ ಸ್ಯೋಗ್ರೆನ್ ಅವರು, ತಮ್ಮ ಪೀಳಿಗೆಯ ಪ್ರಮುಖ ಬರಹಗಾರರಲ್ಲಿ ಒಬ್ಬರು. ಈ ಮಾತಿಗೆ ಅವರು ಪಡೆದಿರುವ ಹಲವಾರು ಪ್ರತಿಷ್ಠಿತ ಸ್ವೀಡಿಷ್ ಪ್ರಶಸ್ತಿಗಳೇ ಸಾಕ್ಷಿ. ಅವರ ಜೀವಮಾನದಲ್ಲಿ ಅವರು ಸ್ವೀಡಿಷ್ ರೇಡಿಯೋ ಪೊಯೆಟ್ರಿ ಪ್ರಶಸ್ತಿ, ಫ್ರೋಡಿಂಗ್ಸ್ ಗ್ರ್ಯಾಂಡ್ ಪ್ರಶಸ್ತಿ, ಡಿ ನಿಯೋಸ್ ಪ್ರಶಸ್ತಿ, ಕಾರ್ಲ್‌ಫೆಲ್ಡ್ಟ್ ಪ್ರಶಸ್ತಿ ಮತ್ತು ಆಸ್ಪೆನ್‌ಸ್ಟ್ರಾಮ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ನಂತರದ ಕೃತಿಗಳಲ್ಲಿ ಎರಡು ಖಂಡಕಾವ್ಯಗಳಂತಹ ಕವಿತೆಗಳು ಸೇರಿವೆ – ಕರಗುವ ಮಂಜುಗಡ್ಡೆಯಲ್ಲಿ ಸಿಕ್ಕಿಬಿದ್ದ ಮತ್ತು ಮುಳುಗಿದ ಬೇಟೆಗಾರರ ಸ್ಥಳೀಯ ಕಥೆಯ ಪುನರಾವರ್ತನೆ “ದಿ ಬರ್ಡ್-ಹಂಟರ್ಸ್” (The Bird-Hunters, 1997) ಮತ್ತು ಬೈಬಲ್-ನಲ್ಲಿ ಬರುವ ನೋಆಹ್-ನ ಕತೆಯ ಬಗ್ಗೆ ತಮ್ಮ ಮನನದಂತಹ ನೀಳ್ಗವಿತೆ, “ಕಾಲ್ ಮಿ ನೋಆಹ್” (Call me Noah, 2014). ನೈಸರ್ಗಿಕ ಬದುಕಿಗೆ ಕುಂದು ತರುವ ಪರಿಸರ ಹಾನಿಯ ಬಗ್ಗೆ ಸ್ವೀಡಿಶ್ ಕವಿ ಹಾಗೂ ಲೇಖಕ ಹ್ಯಾರಿ ಮಾರ್ಟಿನ್ಸನ್ (Harry Martinson) ಅವರ ಕೆಲವು ಆತಂಕಗಳು ಮತ್ತು ಬಾಲ್ಟಿಕ್ ಕಡಲು ಪ್ರಾಂತದ ಬಗ್ಗೆ ಖ್ಯಾತ ಸ್ವೀಡಿಶ್ ಕವಿ ತೋಮಾಸ್ ತ್ರಾನ್ಸ್‌ತ್ರೋಮೆರ್-ರಿಗಿದ್ದ (Tomas Tranströmer) ಆಕರ್ಷಣೆಯನ್ನು ಸ್ಯೋಗ್ರೆನ್-ರು ಕೂಡ ಹಂಚಿಕೊಳ್ಳುತ್ತಾರೆ, ಆದರೆ ಅದೇ ಸಮಯದಲ್ಲಿ ನೈಸರ್ಗಿಕ ಜೀವನದ ಬಗ್ಗೆ ಅವರ ಅವಲೋಕನವು ಕ್ಷಮಿಸದ ಮತ್ತು ಭಯಾನಕವಾದ ಅಮಾನವೀಯ ಶಕ್ತಿಗಳನ್ನು ಬಹಿರಂಗಪಡಿಸುತ್ತದೆ.

ನಾನು ಇಲ್ಲಿ ಕನ್ನಡಕ್ಕೆ ಅನುವಾದಿಸಿರುವ ಲೆನಾರ್ಟ್ ಸ್ಯೋಗ್ರೆನ್-ರ ಹತ್ತು ಕವನಗಳಲ್ಲಿ ಮೊದಲ ಐದು ಕವನಗಳನ್ನು ಡೇವಿಡ್ ಮೆಕ್‌ಡಫ಼್ (David McDuff), ಹಾಗೂ ನಂತರದ ಐದು ಕವನಗಳನ್ನು ಜಾನ್ ಐಯರ್ನ್ಸ್‌ (John Irons) ಅವರು ಮೂಲ ಸ್ವೀಡಿಷ್ ಭಾಷೆಯಿಂದ ಇಂಗ್ಲಿಷ್‌-ಗೆ ಅನುವಾದಿಸಿರುವರು.


ನನಗೆ ಅರ್ಥಮಾಡಿಕೊಳ್ಳಲು ಬಲು ಕಷ್ಟವಾಗುತ್ತೆ
ಮೂಲ: I find it hardest to understand

ಕಲ್ಲುಗಳನ್ನು, ದೊಡ್ಡ ದೊಡ್ಡ ಬಂಡೆಗಳನ್ನು
ಅರ್ಥಮಾಡಿಕೊಳ್ಳುವುದು ನನಗೆ ಬಲು ಕಷ್ಟ,
ಅವುಗಳ ಉಸಿರಾಟವನ್ನು, ಅವುಗಳ ನಿಧಾನದ
ಮಾತುಗಳನ್ನು ನನ್ನಿಂದ ಗ್ರಹಿಸಲಾಗದು.

ಆ ವಿಷಯದಲ್ಲಿ ಸಮುದ್ರವನ್ನು
ಅರ್ಥಮಾಡಿಕೊಳ್ಳುವುದು ಸುಲಭ,
ಅದರ ನಿರಂತರ, ಇಬ್ಬಗೆಯ
ಅಪ್ರಾಮಾಣಿಕತೆಯಿಂದಾಗಿ,

ಆದರೆ ಅವು ದೀರ್ಘಕಾಲ ನೆಟ್ಟದೃಷ್ಟಿಯಿಂದ
ಆ ಶಿಥಿಲತೆಯಲ್ಲಿ ನನ್ನನ್ನು ನೋಡಿದಾಗ,
ನಾವು ಒಬ್ಬರಿನ್ನೊಬ್ಬರ ಗುರುತು ಹಿಡಿಯುತ್ತೇವೆ.
ನನ್ನ ಕೈಬೆರಳುಗಳ ಮಧ್ಯೆ ನಾನು ಸೋಸುವ
ಮರಳಿನಲ್ಲಿ ನಾವೊಂದು ಸಂಧಿಸ್ಥಾನವ ಕಂಡಿದ್ದೇವೆ.


ನನ್ನ ಬಾಲ್ಯಕಾಲದ ಕುದುರೆಗಳು
ಮೂಲ: Hear the horses of my childhood

ನೆನಪಿನ ಕತ್ತಲಿನೊಳಗಿಂದ
ನನ್ನ ಬಾಲ್ಯಕಾಲದ ಕುದುರೆಗಳು
ಕೆನೆಯುವುದು ಕೇಳಿಸುತ್ತೆ.
ಇಂತಹ ಶ್ರವಣೀಯ ಭ್ರಾಂತಿಗಳು ಇಳಿವಯಸ್ಸಿನ
ಸಾಮಾನ್ಯ ಸಂಗತಿಗಳು ಎಂದು ಚೆನ್ನಾಗಿ ಗೊತ್ತಿದ್ದು,
ನಾನು ಇದಕ್ಕೆ ವಿವರವಾದ ಉತ್ತರ ಕೊಡಲು ಹೋಗಲ್ಲ.

ತೇಲಾಡುವ ಕತ್ತಲೆಗೆ ಸೇರಿದ್ದು ಅವು,
ಹಲ್ಲುಗಳು ಸಡಿಲವಾಗುವ ವಯಸ್ಸಿನ ಒಂದು ಭಾಗ ಅವು,
ನೆಲ ಮತ್ತೂ ಜೋರಾಗಿ ಕೈಕೊಡುವ ಕಾಲವಿದು.
ಯಾರೋ ಅಲ್ಲಿ ಆಳದಲ್ಲಿ ನಗುವುದ
ಕೇಳಿಸಿದಂತೆ ನಿಜವಾಗಿಯೂ ಅನಿಸಿತು,
ಅಥವಾ ಅದು
ಬಾಲ್ಯದ ಇಳಿಗಾಲದಲ್ಲಿ ಒಂದು ಸಂಜೆ ಕೇಳಿಸಿದ
ಪಾರಿವಾಳಗಳ ಮನಸೆಳೆಯುವ
ಕೂಜನದಂತಿರುವ
ಅಳುವ ಸದ್ದಾ?


ನಾನು ಬರೆಯುತ್ತಿರುವೆ ಮಾನವ ಲೋಕದಿಂದ
ಮೂಲ: From the human world is what I write

ನಾನು ಬರೆಯುತ್ತಿರುವೆ ಮಾನವ ಲೋಕದಿಂದ,
ಹಲವಾರು ಇತರ ಲೋಕಗಳಿವೆ,
ನನಗೆ ಅವುಗಳ ಬಗ್ಗೆ ಗೊತ್ತಿಲ್ಲ.

“ಕರಿ ದ್ರವ್ಯ”ದ ಬಗ್ಗೆ ನನಗೇನೂ ಗೊತ್ತಿಲ್ಲ,
ದಿವ್ಯ ದ್ರವ್ಯದ ಬಗ್ಗೆನೂ ಗೊತ್ತಿಲ್ಲ.
ಭೂಮಿಯ ಲೋಕದಿಂದ, ಅದರ ಜಂತುಗಳಿಂದ
ಎಲ್ಲೋ ಪಿಸುಮಾತುಗಳ ಹಾಗೆ ಕೇಳಿದಂತೆ ಅನಿಸುತದೆ,
ಆದರೆ ನೊಣಗಳ ಮಾತಾಗಲಿ, ಇಲಿಗಳ ಮಾತಾಗಲಿ
ನನ್ನಿಂದ ಅರ್ಥಮಾಡಿಕೊಳ್ಳಲಾಗಲಿಲ್ಲ.
ನನ್ನನ್ನು ಉತ್ಸುಕನಾಗಿಸಿ, ಆಕರ್ಷಿಸಿದ ಆ ನೀರ್-ಬಿಂಬ
ನಾನು ತಿರುಗಿ ನೋಡುವಷ್ಟರಲ್ಲಿ ಮಾಯವಾಯಿತು.

ಗಾಳಿಸುದ್ದಿಗಳು ಖಂಡಿತವಾಗಿಯೂ ಹೆಚ್ಚುತ್ತಲೇ ಇವೆ,
ಆದರೆ ನಾನು ಅಲ್ಲಿರಲಿಲ್ಲ.

ಅಜ್ಞಾತದಿಂದ ಬಂದೆ ನಾನು,
ನನ್ನ ಸ್ಥಾನವಿತ್ತು ಮಾನವ ಲೋಕದಲ್ಲಿ
ಬಲು ಕ್ರೂರವಾಗುತ್ತಲಿದೆ ಅದರ ರುಚಿ
ಆದರೆ ನನಗಿರುವುದು ಅದೊಂದೇ,
ಬೇರೆ ಯಾವುದೇ ಲೋಕವಿಲ್ಲ ನನಗೆ ಬದುಕಲು.


ಕಣ್ಣು
ಮೂಲ: The Eye

ಆ ಸತ್ತ ಪಶುವಿನ ತಲೆಯನ್ನು
ನಿನ್ನ ಕೈಯಲ್ಲಿ ತೆಗೆದುಕೊ,
ಮತ್ತೆ ನಿನ್ನ ತಲೆಯಿಂದ ಒಂದು
ಕಣ್ಣನ್ನು ಕೀಳು.
ಆ ಪಶುವಿನ (ಅಥವಾ ನಿನ್ನ ಶತ್ರುವಿನ) ಕಣ್ಣನ್ನು
ಆ ಖಾಲಿ ಕುಳಿಯೊಳಗೆ ತೂರಿಸು,
ನಿನಗೆ ಯಾವ ವ್ಯತ್ಯಾಸವೂ
ಕಾಣಿಸದು.
ಕಣ್ಣುಗಳೆಲ್ಲ ಒಂದೇ,
ಚೌಕಟ್ಟು ಮಾತ್ರ
ಭಿನ್ನವಾಗಿರುತ್ತೆ ಅಷ್ಟೇ.


ಕೊಡಲಿ
ಮೂಲ: The Axe

ಕತ್ತಲಾಗುತ್ತಿದೆ,
ಹೆಜ್ಜೆಗಳು, ಮತ್ತೆಲ್ಲದರ ಹಾಗೆ,
ಕಾಲುದಾರಿಗಳ ಕೆಳಗೆ ಕುಸಿಯುತ್ತಿವೆ.
ಯಾರೋ ಒಬ್ಬರು ಕಿಟಕಿ ತೆರೆಯುತ್ತಾರೆ
ಸವಾಲೆಸೆಯುವಂತೆ ಕೇಳುತ್ತಾರೆ
ಎಲ್ಲಿದೆ ಕೊಡಲಿ ಎಂದು.

ಈ ತರಹದ ಪ್ರಶ್ನೆಗೆ ಎನೂಂತ ಉತ್ತರ ಕೊಡಲಿ ನಾನು?


ಸಾಯಂಕಾಲ
ಮೂಲ: Evening

ಅಡವಿ ಹೇಳುವ ತನ್ನ ಅಳಲಿನ ಕತೆಯನ್ನು
ಆಲಿಸುವ ಇಚ್ಛೆ ಇಲ್ಲ ನನಗೆ.
ಬಹಳ ಕಾಲದಿಂದಲೂ ಸ್ಪ್ರೂಸ್ ಮರಗಳ
ನಡುವೆ ಪಿಸುದನಿಗಳು ಓಡಾಡುತ್ತಿವೆ,
ಬಹಳ ಕಾಲದಿಂದಲೂ ಎಲೆಗಳ
ನಡುವೆ ನಿಟ್ಟಿಸಿರುಗಳು ಸಹ ಕೇಳಿಬರುತ್ತಿವೆ,
ಬಹಳ ಕಾಲದಿಂದ ಮರದ ಕಾಂಡಗಳ
ಮಧ್ಯೆ ನೆರಳುಗಳು ಸುಳಿದಾಡುತ್ತಿವೆ.
ಹೊರಗೆ ಬಾ ನೀನು ರಸ್ತೆಗೆ.
ಅಲ್ಲಿ ಯಾರೂ ನಮ್ಮನ್ನು ಸಂಧಿಸಲ್ಲ.
ನೀರವ ನೀರಗುಂಡಿಗಳ ತಿಟ್ಟುಗಳ ಸುತ್ತ ಕಾಣುವ
ಮಾಸಿದ ಕೆಂಪು ಬಣ್ಣವೇ ಸಾಯಂಕಾಲದ ಕನಸು.
ದಾರಿ ಮೆಲ್ಲಗೆ ಮುನ್ನಡೆಯುತ್ತದೆ,
ಸಾವಧಾನವಾಗಿ ಮೇಲಕ್ಕೇರುತ್ತದೆ
ಇಳಿಯುವ ಸೂರ್ಯನ ಕಾಂತಿಗಾಗಿ
ಬಹಳ ಹೊತ್ತು ಹುಡುಕುತ್ತಿರುತ್ತೆ.


ಹುಲ್ಲಿನ ಎಳೆ
ಮೂಲ: The blade of grass!

ಹುಲ್ಲಿನ ಎಳೆಯಿದು!
ಅದನ್ನು ಹತ್ತಿರದಿಂದ ನೋಡಿ
ಅದು ಗಾಳಿಯಲ್ಲಿ ಬಾಗುವಾಗ,
ರಾತ್ರಿಮಳೆಯ ತೇವ ಇನ್ನೂ ಅಂಟಿಕೊಂಡಿದೆ,
ಒಂದು ಸಣ್ಣ ಕೊಯ್ಲುಕತ್ತಿಯ ಹಾಗೆ
ತೂಗಾಡುತ್ತಿದೆ ಅದು ತನ್ನ ಅಸೀಮ ವೈಭವದಲ್ಲಿ.

ತಡ ಬೇಸಿಗೆಯ ಬಿಸಿಲಿನಲ್ಲಿ ಅದು ಒಣಗುತ್ತಿರುವ ಪರಿ ನೋಡಿ,
ಮುಪ್ಪಾದ ಮಾನವ ಚರ್ಮಕ್ಕಿಂತಲೂ ತೆಳ್ಳನೆಯ
ಪಾರದರ್ಶಕತೆಯತ್ತ ಸಾಗುತ್ತಿದೆ ಅದು.
ಮರುಭೂಮಿಗಳ ಮೌನವನ್ನು ಸರಿದೂಗುವಂತಹ
ಮಹಾ ಮೌನವನ್ನು ಅದು ಬೆಳೆಸುತ್ತಿರುವ ಪರಿ ನೋಡಿ.

ಅಕ್ಟೋಬರ್ ಮಾಸ ಕೊನೆಯಾಗುವ ಮುಂಚೆ ಅದು ಬಾಗುವಾಗ,
ತಡ ಮುಂಜಾನೆಯಲ್ಲಿ ಅದರ ಬೆನ್ನು ಇನ್ನೂ ಹೊಳೆಯುತ್ತಿರುವಾಗ,
ಬೂಷ್ಟು ಬಂದು ಅಂಟಿಕೊಂಡಾಗ, ಹಿಮ ಹೆಪ್ಪುಗಟ್ಟುತ್ತಿರುವಾಗ,
ಕೊನೆಗೆ ಅದನ್ನು ತುಳಿದು ಚಪ್ಪಟ್ಟೆಯಾಗಿಸುತ್ತೆ ಒಂದು ಪಾದ.

ಭೂಮಿಯಲ್ಲಿ ಅದು ಕುಗ್ಗುತ್ತಿರುವ ಪರಿ ನೋಡಿ,
ಕುಗ್ಗುತ್ತಿದೆ ಅದು ಮತ್ತೊಮ್ಮೆ,
ತನ್ನ ಅಸೀಮ ವೈಭವದಲ್ಲಿ ಮತ್ತೆ ಹೊಸದಾಗಿ ಮೂಡುವ ಮುನ್ನ.


ಎಲೆಗಳು ಉದುರುವ ಋತುವಿನಲ್ಲಿ
ಮೂಲ: In the leaf-shedding season

ಎಲೆಗಳು ಉದುರುವ ಋತುವಿನಲ್ಲಿ
ಕೆಳಗಿದ್ದದ್ದು ಮೇಲೆಕ್ಕೇರಿದಂತನಿಸುತ್ತದೆ,
ಶಬ್ದವಾಗಿದ್ದದ್ದು ಮೌನವಾದಂತನಿಸುತ್ತದೆ.
ತಡವಾಗಿ ಆಗಮಿಸಿದ ವಲಸೆಹಕ್ಕಿಗಳಿಗೆ
ಅನಿಶ್ಚಿತ ಚಳಿಗಾಲವೊಂದು ಕಾದಿದೆ.

ಕೆಲವೊಮ್ಮೆ ಹೀಗೆ ಆಗುವುದೂ ಉಂಟು,
ವಸಂತ ಮಾಸದಲ್ಲಿ ಹುಟ್ಟಿದ ಮಕ್ಕಳು
ಆಗಲೇ ಮುರುಟಿ ಮುದುಕರಾಗಿದ್ದಾರೆ.
ಕೈನೀಡುತ್ತಾರೆ ಅವರು
ನಲಿವಿಲ್ಲದ ಭಿಕ್ಷುಕರಾಗಲು ನಿಂದಿತರಾದವರಂತೆ.
ಹೌದು,
ಈಗ ಬಂದರುಗಳ ಸಮೀಪಿಸುತ್ತಿರುವ
ಹಾಯಿಗಳು ಸಹ
ಅತಿಕಳಿತ ಹಣ್ಣುಗಳಂತೆ ಕಾಣಿಸುತ್ತಿವೆ.

ಈ ಬೇಸಿಗೆಯ ಕೊನೆಯ ಚಂಡಮಾರುತದಲ್ಲಿ
ನಾಶವಾದ ಮನೆಯ ಅವಶೇಷಗಳ ಮಧ್ಯೆ
ಅಲ್ಲಿ ವಾಸಿಸುತ್ತಿದ್ದ ಮುದುಕನೊಬ್ಬ
ಮರು-ದೊರೆತ ಮೊಳೆಯೊಂದನ್ನು
ತನ್ನ ಮುಖದೆದುರು ಹಿಡಿದುಕೊಂಡಿದ್ದಾನೆ.

ಎಲೆಗಳು ಹಾಗೂ ಭಿಕ್ಷುಕರು,
ಮಕ್ಕಳು ಹಾಗೂ ಮುದುಕರು,
ಎಲ್ಲರೂ ಬೇರೆ ಯಾವುದೋ ಒಂದು
ಸಂಭಾಷಣೆಯಲ್ಲಿ ತಲ್ಲೀನರಾಗಿದ್ದರು
ಎಂಬಂತೆ ಅನಿಸುತಿದೆ.


ನೈಟ್‌ಜಾರ್* ಹಕ್ಕಿ
ಮೂಲ: The Nightjar

ನಿಡುಗಾಲದಿಂದ ಪರಿಚಯವಿದ್ದ ನೈಟ್‌ಜಾರ್ ಹಕ್ಕಿ ಸಹ
ಈ ರಾತ್ರಿ ಇಲ್ಲಿ ಕೂತಿದೆ.
ನಮ್ಮ ಕಣ್ಣುಗಳು ಸಂಧಿಸುತ್ತವೆ –
ನನ್ನವು ಭಯದಿಂದ ತುಂಬಿವೆ
ಅವಳದ್ದು ಕಲ್ಲುಗಳ ಹಾಗಿವೆ,
ಕಲ್ಲುಗಳ ಜಾಯಮಾನದಂತೆ
ಏನೂ ಹೇಳದೇನೆ ಎಲ್ಲವೂ ಅರಿತಿವೆ,
ಅವಳು ಹೇಳುವುದಕ್ಕಿಂತ ಪ್ರಾಯಶಃ
ಹೆಚ್ಚಾಗಿಯೇ ಅವಳಿಗೆ ತಿಳಿದಿದೆ.

ಕೋರುವೆ ಒಂದು ಕ್ಷಣದ ಮೌನವ
ಅವಳ ಬಳಿ ಹೋಗಲೆಂದು,
ಅವಳ ಚೂಪಾದ ತಣ್ಣನೆಯ ತುಟಿಗಳು
ನನ್ನ ತುಟಿಗಳ ಸಂಧಿಸಲೆಂದು,
ಆದರೆ ರೆಕ್ಕೆಗಳ ಪಟಪಟಿಸುತ್ತಾ ಹಿಂದೊಮ್ಮೆ ಹಾರಿದಂತೆ
ಮೇಲಕ್ಕೆ ಹಾರುವಳವಳು.
ಇಂತಹ ಕ್ರಮಗಳಿಂದ ತನ್ನನ್ನು ಮನ್ನಿಸಬೇಕೆಂದು
ಬೇಡಿಕೊಳ್ಳುವಳವಳು.

ಏನೂ ಬದಲಾಗಿಲ್ಲ,
ಪಂಜಗಳ, ರೆಕ್ಕೆಗಳ ಬದುಕು ಅವಳದ್ದು.
ಇದಲ್ಲದೆ ಅವಳು ಮತ್ತಿನೇನು
ಎಂಬುದರ ಅರಿವಿಲ್ಲ ನನಗೆ.

* ಕರ್ಕಶ ಧ್ವನಿಯುಳ್ಳ ಒಂದು ಜಾತಿಯ ಇರುಳು ಹಕ್ಕಿ

೧೦
ಸರ್ಪಕಾಲ
ಮೂಲ: The age of the snake

ಹಾವಿನಂತೆ ಚರ್ಮವನ್ನು ಕಳಚಿಕೊಂಡೆವು ನಾವು,
ಹಾಗಾಗಿ ಇನ್ನೊಂದು ವರ್ಷ ಬದುಕುಳಿದೆವು ನಾವು,
ಆದರೆ ಪೊರೆಕಳಚುವ ಕಲೆ ಹಾವಿಗಿಂತ
ನಮಗೇ ಹೆಚ್ಚು ಅಹಿತಕರವಾಗಿರುತ್ತೆ.

ಮನುಜಚರ್ಮ ಅಷ್ಟು ಸುಲಭವಾಗಿ ಜಾರಿಕೊಳ್ಳುವುದಿಲ್ಲ,
ಮತ್ತೆ, ಅತಿಕಠೋರ ಚಳಿಗಾಲದಲ್ಲಿಯೂ
ಬದುಕುಳಿಯಲು ಬೇಕಾದ
ಹುಗಿದಿರುವ ಬಂಡೆರಾಶಿಗಳೂ ಇಲ್ಲ.

ಧಗೆ ತೀವ್ರವಾದಾಗ ನಮ್ಮ ಬದುಕನ್ನು ನಾವು ಬೇರೆಯೇ
ರೀತಿಯಲ್ಲಿ ಕಾಪಾಡಿಕೊಳ್ಳಬೇಕು,
ಮತ್ತೆ, ಹೊರಗಿನ ಯುದ್ಧಗಳ ಹೊರತಾಗಿ
ಅಸಲಾದ ತುಂಡರಿಕೆ ನಮ್ಮ ಒಳಗೂ ನಡೆಯುತ್ತಿರುತ್ತೆ.
ನಾವು ತೆವಳಿಕೊಂಡು ಹೋದಲ್ಲೆಲ್ಲಾ
ಬೆಂಕಿಗಳನ್ನು ಕಂಡೆವು,
ಕರುಕಲಾದ ಬೆಂಕಿಗಳನ್ನು ಕಂಡೆವು.

ಕೇಳಿಸದಂತೆ ನಟಿಸುವುದು,
ಹಾಗೂ, ಸ್ವಲ್ಪಮಟ್ಟಿನ ಅಸಲಿ ಅಂಧತ್ವ ಒದಗಿಸುವ
ಒರಟಾದ ಕರಿಗುಡ್ಡಿಗೆ ಶರಣಾಗುವುದು,
ಆವಾಗಾವಾಗ ನೆರವಾಗುತ್ತೆ ಅಷ್ಟೆ.

ಮತ್ತೆ, ನಾವು ಸರ್ಪವನ್ನು ಕಾಣಲು ಹೋಗುವೆವು
ಆದರೆ ಸರ್ಪದ ನಿದ್ರೆ ಆಗಲೇ ಪ್ರಾರಂಭವಾಗಿದೆ.

About The Author

ಎಸ್. ಜಯಶ್ರೀನಿವಾಸ ರಾವ್

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು.  ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.  “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು" (ಪೋಲೀಷ್‌ ಕವಿತೆಗಳ ಕನ್ನಡಾನುವಾದಿತ ಸಂಕಲನ).  ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ.  ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.  ಎಸ್ಟೋನಿಯಾ, ಲ್ಯಾಟ್ವಿಯಾ ಹಾಗೂಲಿಥುವೇನಿಯಾ ದೇಶದ ಕವಿತೆಗಳ ಸಂಕಲನ 'ಬಾಲ್ಟಿಕ್ ಕಡಲ ಗಾಳಿ' ಇತ್ತೀಚೆಗೆ ಪ್ರಕಟವಾಗಿದೆ.

1 Comment

  1. bhagya ch

    ನಮಸ್ತೆ ಜೈ ಸರ್,

    ನೀವು ವಿಶ್ವಾಸವಿಟ್ಟು ಸ್ಯೋಗ್ರೆನ್ ಕವನಗಳ ಕುರಿತು ನನ್ನ ಅಭಿಪ್ರಾಯ ಕೇಳಿದ್ದಕ್ಕೆ ನನ್ನಿ. ಸ್ಯೋಗ್ರೆನ್ ನೆವದಲ್ಲಿ ಒಂದಷ್ಟು ಈ ನೆಲದ ಕವಿ/ ಲೇಖಕರ ಬಗ್ಗೆ ಚಿಂತಿಸಲು ಅವಕಾಶ ಮಾಡಿಕೊಟ್ಟಿರಿ. ಥ್ಯಾಂಕ್ಸ್ ಎಂದರೆ ಕಡಿಮೆ ಆಗತ್ತೆ.

    ಸ್ಯೋಗ್ರೆನ್ ಪ್ರಕೃತಿ ಕವಿಯೇ ಎಂದರೆ ಹೌದು ಹಾಗೂ ಇಲ್ಲ ಎಂದು ಎರಡೂ ಉತ್ತರ ನೀಡಬಹುದು.
    ಸ್ಯೋಗ್ರೆನ್ ಪ್ರಕೃತಿಗೆ ಸಂಪೂರ್ಣ ಒಪ್ಪಿಸಿಕೊಂಡ, ಸದಾ ಬೆರಗು ಕಣ್ಣಿನಿಂದ, ಆರಾಧನಾ ಮನೋಭಾವದಿಂದ ಪ್ರಕೃತಿಯನ್ನು ನೋಡುವ ಗುಂಪಿಗೆ ಸೇರಿದವನಂತೆ ಕಾಣಿಸುವುದಿಲ್ಲ.

    I stood amid the wood and I was a tree … ಎಂದ ಎಜ್ರಾ ಪೌಂಡ್ ಆಗಲಿ, ಹಸಿರ್ ಗಟ್ಟಿತೊ ಕವಿ ಆತ್ಮಂ ಹಸಿರ್ ನೆತ್ತರ್ ಒಡಲಿನಲಿ … ಎಂದ ಕುವೆಂಪು ಆಗಲಿ, My heart leaps up when I behold a rainbow in the sky … ಎಂದ Wordsworth ಆಗಲಿ ಸ್ಯೋಗ್ರೆನ್-ಗೆ ಹತ್ತಿರ ಅನಿಸುವುದಕ್ಕಿಂತ, ‘ನಿಗೂಢ ಮನುಷ್ಯರು’ ಕೃತಿಯ ತೇಜಸ್ವಿ ಹತ್ತಿರ ಎನಿಸುತ್ತಾರೆ. ಕೈಗೆಟುಕದ ಹಾರುವ ಓತಿ ಏಕಕಾಲಕ್ಕೆ ವಿಸ್ಮಯ ಹಾಗೂ ಸವಾಲು ಆಗುವಂತೆ ಸ್ಯೋಗ್ರೆನ್-ಗೆ ಕೂಡಾ. ನೀವು ಅನುವಾದಿಸಿರುವ ಅವರ ಕವನಗಳಲ್ಲಿ ಎಲೆ ಉದುರುವ ಋತುವಿನಲ್ಲಿ, ಹುಲ್ಲಿನ ಎಳೆ, ಸರ್ಪಕಾಲ … ಈ ಕವನಗಳು ಇದನ್ನು ಧ್ವನಿಸುತ್ತವೆ ಅನಿಸುತ್ತದೆ. ಬೇಂದ್ರೆಯವರ ನೃತ್ಯಯಜ್ಞದಲ್ಲಿ ಒಂದು ಸಾಲು ಬರುತ್ತದೆ … ‘ಹಾ ಭಯವೊ, ಓ ನಿದ್ದೆಯೊ, ಮಿಥುನದ ಒಲವೊ, ರೌದ್ರದ ಮೊರೆ ಹೇಸಿಗೆ ಹೊರೆ ಓ ಮಾನವ ದಳವೋ’ … ಅಂತ ಇಲ್ಲಿ ಮಾನವ ಒಂದು’ ದಳ ‘ ಎನ್ನುವ ಧ್ನನಿಯ ಜೊತೆ ದಳ (ಸೇನೆ) ಎನ್ನುವ ಧ್ವನಿಯೂ ಇದೆ ಸ್ಯೋಗ್ರೆನ್ ಹುಲ್ಲಿನ ಎಳೆ ಇದನ್ನು ನೆನಪಿಸಿತು. ಒಂದು ರೀತಿಯ tragic optimism ಇದು. ಬೆರಗು, ಆತಂಕ ಜೊತೆಗೆ ತಾದಾತ್ಮ್ಯ.

    ಇಂತಹ ಕವಿಗಳನ್ನು ನಮಗೆ ‘ ಕಾಣಿಸು’ ತ್ತಿರುವ ನಿಮ್ಮ ಕಾವ್ಯ ಪ್ರೇಮ, ಕನ್ನಡದ ಮನಸ್ಸಿಗೆ ಶರಣು. ನಿಮ್ಮ ಮೇಲಿನ ಅನುವಾದಗಳ ಬಗ್ಗೆ ಹೆಚ್ಚು ಹೇಳಲಾರೆ, ಆದರೆ ‘ಹುಲ್ಲಿನ ಎಳೆ’ ಬದಲು ‘ಹುಲ್ಲಿನ ದಳ’ (ಎಸಳು) ಬಳಸಬಹುದಿತ್ತೇನೊ, ಹಾಗೆಯೇ ‘ಪಾರಿವಾಳಗಳ ಕೂಜನ’ ಅಷ್ಟಾಗಿ ಹೊಂದದ ಪದವೆನಿಸಿತು. ‘ಕೊಡಲಿ’ ಪದವನ್ನು ಶ್ಲೇಷೆಯಲ್ಲಿ‌ತಂದಿರುವ ರೀತಿ excellent.

    ಹೀಗೆ ಜಗತ್ತಿನ ಸಂದಿಗೊಂದಿಗಳಲ್ಲಿ ಹುದುಗಿಹೋಗಿರುವ ಕವಿಗಳನ್ನು ಪರಿಚಯಿಸುತ್ತಿರಿ. ಓದುವ ಖುಷಿ ನಮ್ಮದಾಗಲಿ.

    ವಿಶ್ವಾಸದಿಂದ … ಭಾಗ್ಯ‌

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ