”ರಸ್ತೆಯನ್ನು ಕೆಳಗಿನ ಬೈಲಿನ ಅಂಚಿನಲ್ಲಿ ಸಾಗಿಸಿದರೆ ಯಾರಿಗೂ ತೊಂದರೆಯಿಲ್ಲ. ಕಿರಸ್ತಾನರ ಮಣೆಗಾರರು ನಮ್ಮ ಮಾತನ್ನು ಮನಸ್ಸಿಗೆ ಹಚ್ಚಿಕೊಂಡಿಲ್ಲವಾದ್ದರಿಂದ ಖಾವಿಂದರಿಗೆ ಅರ್ಜಿ ಹಾಕಿದೆನು ಎಂದು ತನ್ನ ಆಕ್ಷೇಪ ಅಭಿಪ್ರಾಯಗಳನ್ನು ಹೇಳಿದನು. ನಾನು ಆ ಗುಡಿಗಳನ್ನು ಕಿಟಕಿಯ ಸಂದಿನಲ್ಲಿ ಇಣುಕಿದೆ. ಒಳಗಡೆ ಕತ್ತಲಿತ್ತು. ಒಂದು ಕಡೆ ಒಂದು ಖಡ್ಗವಿರಿಸಿದಂತೆ ಕಂಡಿತು. ಏನೆಂದರೂ ಈ ಹಿಂದುಗಳ ಧಾರ್ಮಿಕ ಭಾವನೆಯನ್ನು ನೋಯಿಸಬಾರದೆಂದು ಸರಕಾರದ ಉದ್ದೇಶವೆ ಇರುವುದರಿಂದ ಶೀತಪ್ಪುವಿಗೆ ಸಮಾಧಾನ ಹೇಳಿದೆ. ಇಷ್ಟರಲ್ಲಿ ಘಂಟೆ ಒಂಭತ್ತಾದ್ದರಿಂದ ಬಂಗಲೆಗೆ ಹಿಂತಿರುಗಿದೆವು”
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುತ್ತಿರುವಓಬೀರಾಯನ ಕಾಲದ ಕತೆಗಳುಸರಣಿಯಲ್ಲಿ ಬನ್ನಂಜೆ ರಾಮಾಚಾರ್ಯರು ಬರೆದ ಕಥೆ

 

ತಾ: ……………….
ಈ ದಿನ ಲಿಲ್ಲಿಗೆ ಕಾಗದ ಬರೆಯಬೇಕೆಂದು ಮಾಡಿದ್ದೆ. ಆದರೆ ದಿನವಿಡೀ ಸಂದರ್ಶಕರೊಡನೆ ಭೇಟಿ, ಮನವಿಗಳ ಪರಿಶೀಲನೆಗಳಿದ್ದುದರಿಂದ ವೇಳೆಯೇ ಸಿಗಲಿಲ್ಲ. ಈ ದಿನ ಅಚ್ಯುತ ಭಟ್ಟನೊಡನೆ ಚರ್ಚಿಸಿಯೇ ಕಾಲ ಹೋಯಿತು. ಭಟ್ಟನೊಬ್ಬ ವಿಚಿತ್ರ ವ್ಯಕ್ತಿ. ನಮ್ಮ ಸೀಮೆಯಲ್ಲಿ ರಸ್ತೆ ಬೇಕೆಂದು ಜನ ಹಾತೊರೆಯುತ್ತಿರುತ್ತಾರೆ. ಇಲ್ಲಿಯವರು ರಸ್ತೆ ಬಂದರೂ ಹೆದರುತ್ತಾರೆ. ಹೊಸೂರಿನಿಂದ ಹೊರಟು ಸಂದೂರಿಗೆ ಹೋಗಿ ಸೇರುವ ರಸ್ತೆ ಈ ಕಪಾಲೇಶ್ವರ ದೇವಸ್ಥಾನದ ಮುಂದುಗಡೆ ಹಾದುಹೋಗಬೇಕಾಗಿತ್ತು. ಆದರೆ ಅಚ್ಯುತ ಭಟ್ಟನು ದೇವಾಲಯದ ಮುಂದೆ ರಸ್ತೆ ಬರಬಾರದೆಂದು ತಕರಾರು ಮಾಡಿದ್ದನು. ಇವನ ಆಕ್ಷೇಪಗಳನ್ನು ಪರಾಮರ್ಶಿಸಿ ನೋಡಬೇಕೆಂದೇ ನಾನು ಬಂದುದು. ಈ ಬ್ರಾಹ್ಮಣ ಏನೆಂದರೂ ಜಗ್ಗುವುದಿಲ್ಲ. ರಸ್ತೆಯಂತೂ ಅವಶ್ಯದ್ದಾಗಿ ಕಾಣುವುದು. ನಾಳೆ ಇನ್ನೊಮ್ಮೆ ಬ್ರಾಹ್ಮಣನನ್ನು ಒಲಿಸಿ ನೋಡಬೇಕು.

ತಾ: ……………….

ನಿನ್ನೆ ನನ್ನೊಡನೆ ದುಭಾಷಿಯಾಗಿ ವರ್ತಿಸಿದ ನರಸಿಂಗರಾಯ ಚಾಲೂಕಿನ ಮನುಷ್ಯನಾಗಿರಲಿಲ್ಲ. ಆದುದರಿಂದಲೆ ಭಟ್ಟನೊಡನೆ ಸಲೀಸಾಗಿ ವ್ಯವಹರಿಸಲು ಸಾಧ್ಯವಾಗಿಲ್ಲ. ಅದಕ್ಕಾಗಿಯೆ ಈ ದಿನ ಸ್ಯಾಮುವೆಲನನ್ನು ಕರಕೊಂಡು ಬ್ರಾಹ್ಮಣನ ಮನೆಗೇ ಹೋದೆ. ತೆಂಗಿನ ತೋಟದ ನಡುವೆ ಸಣ್ಣ ಗುಡಿಸಲಿನಲ್ಲಿ ಬ್ರಾಹ್ಮಣ ವಾಸವಾಗಿದ್ದನು. ಮನೆಯ ಹೊರಗಡೆ ತುಳಸಿಗಿಡಕ್ಕೆ ಒಬ್ಬ ಹೆಂಗಸು ಸುತ್ತು ತೆಗೆಯುತ್ತಿದ್ದಳು. ಅವಳ ಸೆರಗು ಹಿಡಿದುಕೊಂಡು ಒಂದು ಮಗುವೂ ಸುತ್ತುತ್ತಿತ್ತು. ಮನೆಯ ಬಾವಿಕಟ್ಟೆಯ ಬದಿಯಲ್ಲಿಯೆ ಒಬ್ಬ ತರುಣ ನಮ್ಮನ್ನು ನಿಲ್ಲಿಸಿ ಬಂದ ಕಾರಣವನ್ನು ವಿಚಾರಿಸಿದನು. ಸ್ಯಾಮುವೆಲನು ಕಲೆಕ್ಟರ್ ದೊರೆ ಬಂದಿದ್ದಾರೆ ಎಂದು ಕ್ಯಾನರೀಸ್ ನಲ್ಲಿ ಹೇಳಿದನು. ತರುಣನು ಕೂಡಲೆ ಒಳಗೆ ಓಡಿ ಒಂದು ಮಂಚವನ್ನು ತಂದು ಬಾವಿಕಟ್ಟೆಯ ಸಮೀಪವೆ ಇರಿಸಿ ಕುಳಿತುಕೊಳ್ಳಲು ಸೂಚಿಸಿದನು. ನಾವು ಕುಳಿತಿರುವಾಗ ಒಬ್ಬ ಆಳು ಮಗ ಬಂದು ನಮಗೆ ಬಗ್ಗಿ ವಂದಿಸಿದನು. ತರುಣನು ತುಳು ಭಾಷೆಯಲ್ಲಿ ಏನೋ ಒದರಿದನು. ತುಳು ಭಾಷೆ ಕೇಳುವುದಕ್ಕೆ ಹಿತವಾಗಿದೆ. ಅರ್ಥ ಆಗಿಲ್ಲ. ಆಳು ಮಗ ಸ್ವಲ್ಪ ಹೊತ್ತಿನಲ್ಲಿಯೆ ಮೂರು ನಾಲ್ಕು ಎಳನೀರುಗಳನ್ನು ಕಡಿದು ತಂದನು. ನಾನು ಬೇಡವೆಂದೆ. ಸ್ಯಾಮುವೆಲನು ಅವನ್ನು ಬಂಗಲೆಗೆ ಕಳುಹಿಸಿದನು. ನನಗೆ ಅಚ್ಯುತ ಭಟ್ಟ ಬೇಕಾಗಿದ್ದ. ಆದರೆ ಅವನು ‘ಯಜ್ಞ ಮಾಡುತ್ತಾನೆ; ಈಗ ಸಿಗಲಾರ’ ಎಂದು ತರುಣನಿಂದ ತಿಳಿಯಿತು.

ಬರಿಯ ಬೆಂಕಿಯನ್ನು ತುಪ್ಪ ಹಾಕಿ ಉರಿಸುವುದನ್ನು ಈ ಜನ ಯಜ್ಞವೆಂದು ಕರೆಯುತ್ತಾರಂತೆ. ಅವರು ಅದನ್ನು ಮಾಡಿದರೆ ದೇವರು ಮೆಚ್ಚುತ್ತಾರೆ ಎಂದು ನಂಬುತ್ತಾರಂತೆ. ಏನು ಜನರೋ! ಏನು ಧರ್ಮವೊ! ನನಗಂತೂ ವಿಚಿತ್ರವಾಗಿ ಕಾಣುತ್ತದೆ. ಒಂದು ಗಂಟೆಯ ಅನಂತರ ಅಚ್ಯುತ ಭಟ್ಟನನ್ನು ಬಂಗಲೆಗೆ ಬರಹೇಳಿ ನಾವು ಶೀತಪ್ಪ ಸೆಟ್ಟಿಯ ಮನೆಗೆ ಹೋದೆವು. ಶೀತಪ್ಪ ಸೆಟ್ಟಿ ಸರಕಾರಕ್ಕೆ ಬಗ್ಗಿ ನಡೆವ ಸಾಧು ಮನುಷ್ಯ. ಅವನೂ ರಸ್ತೆಗೆ ಆಕ್ಷೇಪ ಎತ್ತಿದ್ದನು. ನಾವು ಹೋದಾಗ ಶೀತಪ್ಪು ಮನೆಯಲ್ಲಿ ಇರಲಿಲ್ಲ. ನನಗೆ ಅವರವರನ್ನು ಪ್ರತ್ಯಕ್ಷ ಕಂಡು ಅವರು ಹೇಳುವ ಸಮಾಚಾರಗಳ ಸತ್ಯಾಸತ್ಯಗಳನ್ನು ಕಣ್ಣಾರೆ ಪರಾಮರ್ಶಿಸುವ ಕುತೂಹಲವಿದ್ದುದರಿಂದ ನಾನೇ ಸ್ವತಃ ಆ ಜನಗಳ ಗುಡಿಸಲುಗಳಿಗೆ ಹೋಗಬೇಕೆಂದು ಮಾಡಿದೆನು. ನಾವು ಬಂದ ಸುದ್ದಿ ಕೇಳಿ ಶೀತಪ್ಪು ಗದ್ದೆಯಿಂದ ಓಡಿ ಬಂದ. ಒಂದು ಕೋಪಿನವಲ್ಲದೆ ಮೈಯಲ್ಲಿ ಬೇರೆ ಬಟ್ಟೆಯಿಲ್ಲ. ಗದ್ದೆಯ ಕೆಸರು ಮೈಗೆಲ್ಲ ಲೇಪಿಸಿತ್ತು. ಓಡಿ ಬಂದವನೆ ನಮಗೆ ಕೈಮುಗಿದ. ಸ್ಯಾಮುವೆಲನು ನಾನು ಬಂದ ಕಾರಣವನ್ನು ಹೇಳಿದ ಮೇಲೆ ಅವನು ಬಾವಿಕಟ್ಟೆಗೆ ಹೋಗಿ ಒಂದಿಷ್ಟು ನೀರನ್ನು ಸುರುವಿಕೊಂಡು ಸೋಪು ಹಾಕಿ ತೊಳೆದುಕೊಳ್ಳದೆಯೆ ಮೈಯೊರಸಿಕೊಂಡು ನಮ್ಮನ್ನು ಕರೆದುಕೊಂಡು ಹೋಗಿ ಒಂದು ಸ್ಥಳದ ಮುಂದೆ ನಿಲ್ಲಿಸಿ ರಸ್ತೆ ಹೀಗೆ ಬರುತ್ತದೆ, ಸ್ವಾಮಿ. ಹೀಗೆ ಬಂದರೆ ಈ ಜುಮಾದಿ ಗುಡ್ಡವೂ ಪಂಜುರ್ಲಿ ಸ್ಥಾನವೂ ಬೇರ್ಪಟ್ಟ ಹಾಗಾಗುತ್ತೆ. ಇದು ಎರಡೂ ಸ್ಥಾನಗಳು ಒಂದಾಗಿರಬೇಕಾದ್ದು.

ರಸ್ತೆಯನ್ನು ಕೆಳಗಿನ ಬೈಲಿನ ಅಂಚಿನಲ್ಲಿ ಸಾಗಿಸಿದರೆ ಯಾರಿಗೂ ತೊಂದರೆಯಿಲ್ಲ. ಕಿರಸ್ತಾನರ ಮಣೆಗಾರರು ನಮ್ಮ ಮಾತನ್ನು ಮನಸ್ಸಿಗೆ ಹಚ್ಚಿಕೊಂಡಿಲ್ಲವಾದ್ದರಿಂದ ಖಾವಿಂದರಿಗೆ ಅರ್ಜಿ ಹಾಕಿದೆನು ಎಂದು ತನ್ನ ಆಕ್ಷೇಪ ಅಭಿಪ್ರಾಯಗಳನ್ನು ಹೇಳಿದನು. ನಾನು ಆ ಗುಡಿಗಳನ್ನು ಕಿಟಕಿಯ ಸಂದಿನಲ್ಲಿ ಇಣುಕಿದೆ. ಒಳಗಡೆ ಕತ್ತಲಿತ್ತು. ಒಂದು ಕಡೆ ಒಂದು ಖಡ್ಗವಿರಿಸಿದಂತೆ ಕಂಡಿತು. ಏನೆಂದರೂ ಈ ಹಿಂದುಗಳ ಧಾರ್ಮಿಕ ಭಾವನೆಯನ್ನು ನೋಯಿಸಬಾರದೆಂದು ಸರಕಾರದ ಉದ್ದೇಶವೆ ಇರುವುದರಿಂದ ಶೀತಪ್ಪುವಿಗೆ ಸಮಾಧಾನ ಹೇಳಿದೆ. ಇಷ್ಟರಲ್ಲಿ ಘಂಟೆ ಒಂಭತ್ತಾದ್ದರಿಂದ ಬಂಗಲೆಗೆ ಹಿಂತಿರುಗಿದೆವು. ಬಂಗಲೆಯಲ್ಲಿ ಭಟ್ಟ ಕಾದಿದ್ದ. ನಾನು ಬೆಳಗ್ಗಿನ ಬ್ರೆಡ್ಡು-ಕಾಫಿಗಳನ್ನು ತೀರಿಸಿಕೊಂಡು ಭಟ್ಟನೊಡನೆ ಮಾತಾಡಲು ಬಂದು ಕುಳಿತೆ.

ಭಟ್ಟನಿಗೆ ವಯಸ್ಸಾಗಿದೆ. ಕಣ್ಣುಗಳು ಕುಳಿಬಿದ್ದಿದ್ದರೂ ಅದರಲ್ಲಿ ಒಂದು ವರ್ಚಸ್ಸಿತ್ತು. ಮುಖ ನೆರಿಬಿದ್ದಿದ್ದರೂ ಒಂದು ಕಾಂತಿಯಿತ್ತು. ಲೋಕದ ಸಿಹಿಕಹಿಗಳನ್ನು ಕಂಡು ಉಂಡು ಅನುಭವದಿಂದ ಮಾಗಿದ ಜೀವವಲ್ಲವೆ? ಮಾತಿನಲ್ಲಿಯೂ ಹಾಗೆಯೆ, ವಿಷಯಗಳನ್ನು ಕೇಳುವುದರಲ್ಲಿ ಸಹನೆಯಿತ್ತು. ಹೇಳುವುದರಲ್ಲಿ ನಯವಿತ್ತು. ಮಂಡನೆಯಲ್ಲಿ ತೂಕವಿತ್ತು. ಮೈಗೆಲ್ಲ ಗೋಪಿಯೆಂಬುದನ್ನು ಲೇಪಿಸಿಕೊಂಡಿದ್ದನು. ನಾನು ಅವನೊಡನೆ ರಸ್ತೆಯಾಗುವುದರಿಂದ ಊರಿಗೆ ಹಿತವಾಗುವುದೆಂದೂ, ದೇವಸ್ಥಾನಕ್ಕೆ ಬರುವವರಿಗೂ ಸೌಕರ್ಯವಾಗುವುದೆಂದೂ ತಕರಾರು ಮಾಡಬಾರದೆಂದೂ ಸ್ಯಾಮುವೆಲನ ಮೂಲಕ ಹೇಳಿಸಿದೆ. ಅದಕ್ಕೆ ದೊರೆತ ಉತ್ತರವಿಷ್ಟೆ:

“ಕಪಾಲೇಶ್ವರನ ಗುಡಿ ಪ್ರಾಚೀನವಾದುದು. ಕಾಪಾಲಿಗಳೆಂಬ ಕ್ರೂರರು ಈ ನಾಡಿನಲ್ಲಿ ಸಜ್ಜನರನ್ನು ನಾನಾ ವಿಧಗಳಿಂದ ಪೀಡಿಸುತ್ತಲಿದ್ದರು. ಆಗ ಅಗಸ್ತ್ಯ ಮುನಿಗಳು-ಅದೋ, ಓ ಅಲ್ಲಿ ತೋರುವ ಬೆಟ್ಟದಲ್ಲಿ ಈ ಊರಿನ ಮಂಗಲಕ್ಕಾಗಿ ತಪಸ್ಸು ಮಾಡುತ್ತ ಕುಳಿತರು. ಅವರ ತಪಃಪ್ರಭಾವದಿಂದ ಈ ಸ್ಥಳದಲ್ಲಿ ಒಂದು ಮಹತ್ತಾದ ಜ್ಯೋತಿಯುತ್ಪನ್ನವಾಗಿ ಕಾಪಾಲಿಕರ ಕಾಟವಡಗಿದೆ. ಅಂದಿನಿಂದಲೂ ಸ್ವಾಮೀ ಇಲ್ಲಿಯೆ ಸನ್ನಿಹಿತನಾಗಿದ್ದಾನೆ. ಸ್ವಾಮಿಯ ಭೃತ್ಯನಾದ ಭೈರವನ ಗುಡಿಯೂ ಪಕ್ಕದಲ್ಲಿಯೆ ಇದೆ. ಈ ಭೈರವನು ಬಹಳ ಪ್ರಭಾವಶಾಲಿಯಾದವನು. ಇಲ್ಲಿ ದೇವಾಲಯದ ಸುತ್ತಲೂ ಇರುವ ತೋಡಿನ ಒಳಗಡೆ ಅಶುಚಿವಂತರು ಸುಳಿವಂತಿಲ್ಲ. ಮುಟ್ಟಾದವರು ಬರುವಂತಿಲ್ಲ. ಇಂಥ ಕಠೋರ ನಿಯಮಗಳನ್ನು ಪಾಲಿಸದೆ ಇದ್ದರೆ ಊರು ಭೈರವನ ಕೋಪಾಗ್ನಿಗೆ ತುತ್ತಾಗಬೇಕಾಗುವುದು. ಈ ಅನುಭವವೂ ಆಗಿದೆ. ರಸ್ತೆಯಾದರೆ ಈ ನಿಯಮಗಳೆಲ್ಲ ಶಿಥಿಲವಾಗುವುದು. ಸ್ವಾಮಿ ಸನ್ನಿಧಾನದ ಪಾವಿತ್ರ್ಯವನ್ನು ಕಾಪಾಡುವುದಕ್ಕಿಂತ ರಸ್ತೆ ಹೆಚ್ಚು ಅವಶ್ಯವೆನಿಸುವುದಿಲ್ಲ. ಆದುದರಿಂದ ರಸ್ತೆಯನ್ನು ಬೇರೆ ಕಡೆಯಿಂದ ಒಯ್ಯಿರಿ. ರಸ್ತೆ ಬೇಡವೆಂದು ನಾನು ಹೇಳಲಾರೆ. ಆದರೆ ನಿಯಮಗಳನ್ನು ಹಾಳುಮಾಡುವ ಈಗಿನ ಯೋಜನೆಯಂತೆ ರಸ್ತೆಯಾಗುವುದು ನಮಗೆಲ್ಲ ಅನಿಷ್ಟ. ಪರಾಂಬರಿಸಿರಿ.’’

ಒಳಗಡೆ ಕತ್ತಲಿತ್ತು. ಒಂದು ಕಡೆ ಒಂದು ಖಡ್ಗವಿರಿಸಿದಂತೆ ಕಂಡಿತು. ಏನೆಂದರೂ ಈ ಹಿಂದುಗಳ ಧಾರ್ಮಿಕ ಭಾವನೆಯನ್ನು ನೋಯಿಸಬಾರದೆಂದು ಸರಕಾರದ ಉದ್ದೇಶವೆ ಇರುವುದರಿಂದ ಶೀತಪ್ಪುವಿಗೆ ಸಮಾಧಾನ ಹೇಳಿದೆ. ಇಷ್ಟರಲ್ಲಿ ಘಂಟೆ ಒಂಭತ್ತಾದ್ದರಿಂದ ಬಂಗಲೆಗೆ ಹಿಂತಿರುಗಿದೆವು.

ಬ್ರಾಹ್ಮಣ ಇಷ್ಟು ಹೇಳಿ ಸುಮ್ಮಗಾದ. ಸ್ಯಾಮುವೆಲನಿಗೂ ನನಗೂ ಏನು ಹೇಳಬೇಕೆಂದೇ ತೋರಲಿಲ್ಲ. ರಸ್ತೆಯನ್ನು ಮುಂದುವರಿಸುವುದು ನಮಗೆ ಆಡಳಿತದ ಅನುಕೂಲದ ದೃಷ್ಟಿಯಿಂದಲೂ ಅಗತ್ಯವುಂಟು. ಮುಂದುವರಿಸಬೇಕೆಂದು ನಿರ್ಧರಿಸಿಯೂ ಆಗಿದೆ. ಈ ಬ್ರಾಹ್ಮಣನ ಮಾತು ಕೇಳಿದರೆ ರಸ್ತೆ ವಕ್ರವೂ ಆಗುತ್ತದೆ. ಫಲವತ್ಪ್ರದೇಶಗಳನ್ನು ಹಾಳುಗೈದು ಹೋಗಬೇಕಾದ್ದರಿಂದ ಇದಕ್ಕಿಂತಲೂ ಹೆಚ್ಚಿನ ಕಷ್ಟವೂ ಉಂಟಾದೀತು. ಈ ಊರಿನಲ್ಲಿ ಬ್ರಾಹ್ಮಣನ ವರ್ಚಸ್ಸಿದೆ. ಅವನ ಅಭಿಪ್ರಾಯವನ್ನು ಮೀರುವುದೂ ವಿವೇಕವಲ್ಲ. ಏನು ಮಾಡಲೆಂಬುದೇ ಸಮಸ್ಯೆಯಾಯಿತು! ಯಾವುದಕ್ಕೂ ವಿಚಾರಿಸುತ್ತೇನೆ ಎಂದು ಹೇಳಿ ಸದ್ಯ ಬ್ರಾಹ್ಮಣನನ್ನು ಕಳಿಸಿಬಿಟ್ಟೆ. ಸಂಜೆಗೆ ಊರನ್ನು ಸುತ್ತಿ ಬಂದೆ. ಊರು ಚೊಕ್ಕವಾಗಿದೆ. ಎಲ್ಲ ಮನೆಗಳೂ ಚಿಕ್ಕವಾದರೂ ತೋಪಿನ ತಂಪಿನಲ್ಲಿ ಹಿತವಾಗಿ ಕಂಡವು. ಎಲ್ಲರ ಮುಖದಲ್ಲಿಯೂ ನಲಿವಿತ್ತು. ಎಲ್ಲರೂ ವಿನಯಶೀಲರೂ ಸತ್ಯಪರಾಯಣರೂ ಆಗಿರುವಂತೆ ಕಂಡಿತು. ಬ್ರಾಹ್ಮಣರ ಮನೆಗಳೂ ಹತ್ತಾರು ಇದ್ದುವು. ಈ ಬ್ರಾಹ್ಮಣರು ಧರ್ಮದ ಪ್ರತಿಪಾದಕರಾಗಿದ್ದಾರೆ. ಜನಸಾಮಾನ್ಯರಿಗೆ ಏನೂ ಗೊತ್ತಿರುವ ಹಾಗೆ ಇಲ್ಲ. ಅವರೆಲ್ಲರ ಮೇಲೆ ಇವರ ವರ್ಚಸ್ಸಿದೆ.

ಸಂಜೆ ಒಬ್ಬ ಬ್ರಾಹ್ಮಣ ಸಿಕ್ಕಿದ. ನಾನು ಅವನ ಹತ್ತಿರ ಕೆಲವು ಪ್ರಶ್ನೆಗಳನ್ನು ಕೇಳಿದೆ. ಅವನು ತನಗೆ ತಿಳಿದಂತೆ ಉತ್ತರ ಕೊಟ್ಟನು. ಆ ಮೇಲೆ ಗಾಯತ್ರಿಯ ಮಾತು ಬಂತು. ಗಾಯತ್ರಿ ಎಂದರೆ ಪವಿತ್ರವಾದ ಪ್ರಾರ್ಥನೆಯಂತೆ. ಅದನ್ನು ಹೇಳು ನೋಡೋಣ ಎಂದೆ. ಅವನು ಹೇಳಲಿಲ್ಲ. ಅಶುಚಿಯಲ್ಲಿರುವಾಗ ಹೇಳಬಾರದೆಂದೂ, ಅನಧಿಕಾರಿಗಳು ಕೇಳಬಾರದೆಂದೂ ಹೇಳಿಬಿಟ್ಟ! ನನಗೆ ಆಶ್ಚರ್ಯವಾಯಿತು. ಇವರ ದೇವರಿಗೆ ಗುಟ್ಟಿನ ಪ್ರಾರ್ಥನೆಯೆ ಬೇಕೇ? ಇನ್ನೊಬ್ಬ ಬ್ರಾಹ್ಮಣ ಯುವಕ ಸಿಕ್ಕಾಗ ಪುನಃ ಗಾಯತ್ರಿಯ ಮಾತು ಬಂದು ಆತನೊಡನೆ ಅದನ್ನು ಹೇಳುವಂತೆ ಹೇಳಿದೆ. ಆತ ಆರಂಭದಲ್ಲಿ ಅಳುಕಿದ. ಅವನಿಗೆ ನಾಲ್ಕು ರೂಪಾಯಿಗಳ ಸಂಭಾವನೆಯನ್ನು ಕೊಟ್ಟು ನೋಡಿದೆ. ಅಂಜುತ್ತ ಅಂಜುತ್ತ ಅವನು ಹೇಳಿದ. ನನಗೆ ಅರ್ಥವಾಗಲಿಲ್ಲ. ಆದರೂ ಕೇಳುವ ಕೌತುಕವಿತ್ತು. ಈ ಬ್ರಾಹ್ಮಣರು ತಮ್ಮ ಮಂತ್ರಗಳನ್ನು ಎಷ್ಟು ಗೋಪನಮಾಡುತ್ತಾರೆ! ಆದರೆ ಅವರಲ್ಲಿಯೂ ದುಡ್ಡಿಗೆ ಸೋಲುವವರಿದ್ದಾರೆ! ಬ್ರಾಹ್ಮಣರ ವರ್ಚಸ್ಸು ಶಿಥಿಲವಾದರೆ ಧರ್ಮದ ಬಲ ತಗ್ಗುವುದು. ಇಲ್ಲಿ ಒಂದೇ ಧರ್ಮದ ಜನರಿದ್ದ ಕಾರಣ ರಸ್ತೆಯ ಕೆಲಸದಂಥ ಸಣ್ಣ ಮಾತುಗಳಿಗೂ ನೂರಾರು ಆಕ್ಷೇಪಗಳು. ನಮ್ಮ ಜನ ಇಲ್ಲಿ ಇದ್ದಿದ್ದರೆ ಚೆನ್ನಾಗಿತ್ತು. ಈ ಸಲ ಹೋದವನೆ ರೆ| ಫಾದರ್ ರವರನ್ನು ಕಾಣಬೇಕು. ಈ ಹಳ್ಳಿಯಲ್ಲಿ ಒಂದು ಶಾಲೆಯನ್ನಾದರೂ ತೆರೆದು ಯೇಸು ಸ್ವಾಮಿಯ ಸಂದೇಶವನ್ನು ಹರಡುವಂತೆ ಪ್ರೋತ್ಸಾಹಿಸಬೇಕು. ಈ ಹಳ್ಳಿ ಅದಕ್ಕೆ ಅನುಕೂಲವಾಗಿರುತ್ತದೆ ಎಂದು ನನ್ನ ಅಭಿಪ್ರಾಯವಾಗಿದೆ.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ತಾ: ……………….

ಈ ದಿನ ನಾನು ಆ ಹಳ್ಳಿಯಿಂದ ಮರಳಿಬಂದೆ. ಬ್ರಾಹ್ಮಣನ ಅಭಿಪ್ರಾಯವನ್ನು ಒಪ್ಪುವುದು ಸಾಧ್ಯವಾಗಿ ಕಾಣುವುದಿಲ್ಲ. ಆದುದರಿಂದ ಅಲ್ಲಿಂದ ಹೊರಡುವಾಗ ರಸ್ತೆಯ ಯೋಜನೆಯನ್ನು ಬದಲಿಸಲಾಗುವುದಿಲ್ಲವೆಂದು ತೀರ್ಪಿತ್ತು ಬಂದೆ. ಆ ಬ್ರಾಹ್ಮಣನೂ ಕೆಲವರೂ ಬಹಳ ಗೊಣಗುಟ್ಟಿದರಂತೆ. ಜಾಗದ ಮರ್ಯಾದೆಯನ್ನು ಭೈರವ ನೋಡಿಕೊಂಡಾನು ಎಂದರಂತೆ ಕೆಲವರು. ಭೈರವ ಬಂದು ಆಕ್ಷೇಪಿಸಿದಾಗ ನೋಡಿಕೊಳ್ಳೋಣವೆಂದು ನಾನು ನಕ್ಕುಬಿಟ್ಟೆ!

ತಾ: ……………….
ಮುತ್ತಳ್ಳಿ ಕ್ಯಾಂಪಿನಿಂದ ಈ ದಿನ ಬರುವಾಗ ಮನೆಯಲ್ಲಿ ಲಿಲ್ಲಿ ಕಾಹಿಲೆ ಬಿದ್ದಿದ್ದಾಳೆ. ಹಾಗಾಗಿ ಈ ದಿನ ನನ್ನ ಮನಸ್ಸೆ ಸರಿಯಿಲ್ಲ. ಆಫೀಸಿನ ಕಾರ್ಯಗೌರವದಲ್ಲಿ ಬತ್ತಿಹೋದ ನನ್ನ ಜೀವನಶಕ್ತಿಗೆ ಲಿಲ್ಲಿಯ ನಗೆ ಒಂದು ಅಮೃತಸೇಚನವಿದ್ದ ಹಾಗೆ! ಅವಳ ಮಾತು ಒಂದು ರಸಾಯನವಿದ್ದ ಹಾಗೆ.

ತಾ: ……………….

ನಿನ್ನೆ ಲಿಲ್ಲಿ ಹುಚ್ಚಾಬಟ್ಟೆ ಮಾತಾಡಿ ನನ್ನನ್ನು ಗಾಬರಿಪಡಿಸಿದಳು. ಡಾಕ್ಟರರು ಬಂದು ಇನ್ಫ್ಲೂಯಂಝ-ಭಯವಿಲ್ಲ, ಎಂದಿದ್ದಾರೆ. ರಾತ್ರೆಯಿಡೀ ಭಯವೆಂದು ಚೀರುತ್ತಿದ್ದಳೊಮ್ಮೆ. ನಾನು ಬಳಿಯಲ್ಲೆ ಇದ್ದರೂ ಭಯವಂತೆ, ಉರಿಯಂತೆ. ನನಗೆ ಯಾವ ಕೆಲಸ ಮಾಡಲು ಉತ್ಸಾಹವಿಲ್ಲ. ದೇವರೇ, ಲಿಲ್ಲಿಗೆ ಗುಣವಾಗಲಿ.

ಬ್ರಾಹ್ಮಣರ ವರ್ಚಸ್ಸು ಶಿಥಿಲವಾದರೆ ಧರ್ಮದ ಬಲ ತಗ್ಗುವುದು. ಇಲ್ಲಿ ಒಂದೇ ಧರ್ಮದ ಜನರಿದ್ದ ಕಾರಣ ರಸ್ತೆಯ ಕೆಲಸದಂಥ ಸಣ್ಣ ಮಾತುಗಳಿಗೂ ನೂರಾರು ಆಕ್ಷೇಪಗಳು. ನಮ್ಮ ಜನ ಇಲ್ಲಿ ಇದ್ದಿದ್ದರೆ ಚೆನ್ನಾಗಿತ್ತು. ಈ ಸಲ ಹೋದವನೆ ರೆ| ಫಾದರ್ ರವರನ್ನು ಕಾಣಬೇಕು. ಈ ಹಳ್ಳಿಯಲ್ಲಿ ಒಂದು ಶಾಲೆಯನ್ನಾದರೂ ತೆರೆದು ಯೇಸು ಸ್ವಾಮಿಯ ಸಂದೇಶವನ್ನು ಹರಡುವಂತೆ ಪ್ರೋತ್ಸಾಹಿಸಬೇಕು.

ತಾ: ……………….

ನಿನ್ನೆ ರಾತ್ರಿ ನನಗೂ ಒಂದು ಅತ್ಯಂತ ವಿಸ್ಮಯಕರವಾದ ಅನುಭವವಾಯಿತು. ನಿದ್ದೆಯೂ ಅಲ್ಲ; ಎಚ್ಚರವೂ ಅಲ್ಲ ಎನ್ನುವ ಮಟ್ಟಿನಲ್ಲಿ ಇದ್ದ ಹಾಗೆ ನೆನಪು. ಲಿಲ್ಲಿಯ ತಲೆಬುಡದಲ್ಲಿ ನೆರಳೊಂದು ಕುಳಿತಿತ್ತು. ಕಣ್ಣಿನಿಂದ ಕಿಡಿಯುರುಳುತ್ತಿದ್ದಂತೆ ತೋರುತ್ತಿತ್ತು. ಆ ಕರಿನೆರಳಿನ ಕರಾಳವಾದ ಕೈಗಳು ಲಿಲ್ಲಿಯನ್ನು ಆವರಿಸಿದಂತಿದ್ದವು! ಇದೇನಾಗಿದ್ದೀತು? ನನಗೇಕೋ ಅದನ್ನು ಕಂಡು ಭಯವೇ ಆಯಿತು. ಜನರ ಮಾತನ್ನು ಕೇಳಿ ಮನಸ್ಸಿನಲ್ಲಿ ಉಂಟಾದ ವಿಕಾರಗಳಿಂದ ಹೀಗಾಗಿರಬೇಕು.

ತಾ: ……………….

ಕರಿನೆರಳಿನ ಕಾಟ ನನ್ನನ್ನು ಪೂರ್ಣ ಗಾಬರಿಗೊಳಿಸಿದೆ. ಲಿಲ್ಲಿಯ ಸ್ಥಿತಿ ನಿನ್ನೆ ರಾತ್ರಿ ಬಹಳ ವಿಷಮವಾಗಿತ್ತು. ನಿನ್ನೆ ಸ್ಯಾಮುವೆಲ್ ಬಂದು ಒಂದು ನವೀನವಾದ ಆದರೆ ಸ್ವಾರಸ್ಯವಾದ ಸುದ್ದಿ ಹೇಳಿದ. ಕಪಾಲೇಶ್ವರನ ಭೈರವನ ಉಪದ್ರದಿಂದ ಲಿಲ್ಲಿಗೆ ಅಪಾಯವುಂಟಾಗಿದೆಯೆಂದೂ ಜಾಗದ ಗೌರವವನ್ನು ಭೈರವನು ಉಳಿಸಿಯೆ ಉಳಿಸುವೆನೆಂದೂ ಜನರು ಹೇಳುತ್ತಿರುವರಂತೆ. ಹುಚ್ಚು ಜನರು!… ಅಥವಾ…. ಅಥವಾ…. ಅದು ಸತ್ಯವಾಗಿರಬಹುದೇ? ಲಿಲ್ಲಿಗೆ ಅಪಾಯ ಬರಬಹುದೇ?….

ತಾ: ……………….

ಲಿಲ್ಲಿಯ ಪರಿಸ್ಥಿತಿ ವಿಷಮವಾಗಿದೆಯೆಂದು ಡಾಕ್ಟರರೆ ಹೇಳಿಬಿಟ್ಟರು. ಓ ದೇವರೇ… ನನ್ನ ಲಿಲ್ಲಿಯನ್ನು ಉಳಿಸು… ಈ ಹಿಂದೂಗಳ ಭೂತವೇ ಇದರ ಕಾರಣವಾಗಿರಬಹುದೇ?… ಏನೇ ಆಗಲಿ. ನನಗೆ ಲಿಲ್ಲಿ ಉಳಿಯಬೇಕು… ಹಾಳಾಗಿ ಹೋಗಲಿ. ರಸ್ತೆಯನ್ನು ಆ ದೇವಸ್ಥಾನದ ಹತ್ತಿರ ಕೊಂಡೊಯ್ಯದೆ ಬೇರೆ ದಾರಿಯ ಮುಖಾಂತರ ಮುಂದುವರಿಸುವಂತೆ ಈ ದಿನವೆ ಆಜ್ಞೆ ಮಾಡುವೆನು.

ತಾ: ……………….

ಇದು ಕೇವಲ ವಿಚಿತ್ರವಾಗಿದೆ. ನಿನ್ನೆ ನಾನು ರಸ್ತೆಯನ್ನು ಕಪಾಲೇಶ್ವರ ಗುಡಿಯ ಹತ್ತಿರ ಕೊಂಡೊಯ್ಯದಂತೆ ಆಜ್ಞಾಪಿಸಿದೆ. ಲಿಲ್ಲಿಯ ಜ್ವರ ಬಿಟ್ಟಿದೆ. ಈಗ ಆಕೆ ಉಲ್ಲಸಿತಳಾಗಿದ್ದಾಳೆ. ರೆ| ಫಾದರ್ ಇದನ್ನು ಕೇಳಿ ನಕ್ಕುಬಿಟ್ಟರು. ಆದರೆ ನನಗೆ ಏನೂ ಹೇಳುವುದಕ್ಕೆ ತೋರುವುದಿಲ್ಲ… ಧೈರ್ಯವೂ ಇಲ್ಲ…

ಒಮ್ಮೆಗೆ ಪಾರಾದೆ. ಲಿಲ್ಲಿ ಈಗ ಪೂರ್ಣ ಗುಣಮುಖಳಾಗಿದ್ದಾಳೆ… ಹೇಗೂ ಇರಲಿ. ಈ ಹಿಂದೂಗಳ ದೇವ – ದೆವ್ವಗಳ ತಂಟೆಗೆ ಹೋಗಬಾರದಾಗಿ ನಿರ್ಧರಿಸಿಬಿಟ್ಟಿದ್ದೇನೆ. ಅಚ್ಯುತಭಟ್ಟರಿಗೆ – ಪಾಪ ನನ್ನ ನಿರ್ಧಾರ ಕೇಳಿ ಎಷ್ಟು ಸಂತೋಷವಾಯಿತೋ? ಈ ಭೂತ – ದೈವಗಳ ಮೂಢನಂಬಿಕೆಯನ್ನು ಕಿತ್ತೆಸೆಯುವುದು ಹೇಗೆ? ನಾಳೆಯಿಂದ ಈ ಬಗೆಗೆ ಯತ್ನಿಸಬಹುದು. ಈ ನಾಡಿನಲ್ಲಿ ಇದು ಅಗತ್ಯ ಆಗಬೇಕಾದ ಕಾರ್ಯ….

ಟಿಪ್ಪಣಿ:

(ಬನ್ನಂಜೆ ರಾಮಾಚಾರ್ಯ)

ಕನ್ನಡ ಪತ್ರಿಕಾರಂಗದಲ್ಲಿ ಹಿರಿಯ ಸಂಪಾದಕರಾಗಿ ಹೆಸರು ಮಾಡಿದ ಬನ್ನಂಜೆ ರಾಮಾಚಾರ್ಯರು (1917 – 2011) ಐದು ದಶಕಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ನವಶಕ್ತಿ, ಧುರೀಣ, ಯುಗಪುರುಷ, ಪ್ರಕಾಶ, ನವಭಾರತ ಮತ್ತು ಉದಯವಾಣಿ ಪತ್ರಿಕೆಗಳ ಸಂಪಾದಕ/ಹಿರಿಯ ಉಪಸಂಪಾದಕರಾಗಿ ಅವರು ಸೇವೆ ಸಲ್ಲಿಸಿದ್ದಾರೆ. ‘ಬಾಳ್ನೋಟಗಳು’ ಹಾಗೂ ‘ಮಿಂಚಿದ ತಾರೆ ಮತ್ತು ಇತರ ಕಥೆಗಳು’ ಎಂಬ ಕಥಾಸಂಕಲನಗಳು. ‘ಹೂಗೊಂಚಲು’ (ಭಾಗ: 1 ಮತ್ತು 2) ಎಂಬ ಪ್ರಾತಿನಿಧಿಕ ಸಂಕಲನಗಳನ್ನು ಸಂಪಾದಿಸಿದ್ದಾರೆ. ಭಗವದ್ಗೀತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಸಂಪಾದಕೀಯಗಳು ಹಾಗೂ ಲೇಖನಗಳು ಸಂಕಲನಗಳಾಗಿ ಪ್ರಕಟವಾಗಬೇಕಿದೆ.
ಬ್ರಿಟಿಷ್ ಪ್ರಜೆಗಳು ಈ ಪ್ರದೇಶದಲ್ಲಿ ಅಧಿಕಾರಿಗಳಾಗಿ ಅಥವಾ ಎಸ್ಟೇಟ್ ಮಾಲಕರಾಗಿ ಇದ್ದಾಗಿನ ಅವರ ಬದುಕಿನ ಕ್ರಮ, ಚಿಂತನೆಗಳು ದೇಶೀಯ ಬದುಕು ಮತ್ತು ನಂಬಿಕೆಗಳ ಜತೆಗೆ ಸಂಘರ್ಷಿಸಿದಾಗಿನ ಕೆಲವು ಕತೆಗಳಲ್ಲಿ ಬನ್ನಂಜೆ ರಾಮಾಚಾರ್ಯರ ‘ರೋಬರ್ಟ್ಸ್ ದೊರೆಯ ದಿನಚರಿಯಿಂದ’ ಮುಖ್ಯವಾದುದು. ಇದರಲ್ಲಿ ಬ್ರಿಟಿಷರು ಮಾಡಿದ ಅಭಿವೃದ್ಧಿಪರ ಕಾಮಗಾರಿಗಳೂ ಆನುಷಂಗಿಕವಾಗಿ ದಾಖಲಾಗಿವೆ.
ದೊರೆಗಳ ವೈಯಕ್ತಿಕ ದೌರ್ಬಲ್ಯಗಳನ್ನು ಹೇಳುವ ಕತೆಗಳಿಗಿಂತ ಹೆಚ್ಚು ಸಾಮಾಜಿಕವಾದ ಕತೆ ಬನ್ನಂಜೆ ರಾಮಾಚಾರ್ಯರ ‘ರೋಬರ್ಟ್ಸ್ ದೊರೆಯ ದಿನಚರಿಯಿಂದ’. ಇದರಲ್ಲಿ ಸ್ಥಳೀಯ ದೈವ ದೇವರುಗಳ ಬಗ್ಗೆ ಗೌರವ ಇರಿಸಿಕೊಳ್ಳದ ಬ್ರಿಟಿಷ್ ಅಧಿಕಾರಿ ರೋಬರ್ಟ್ಸ್ ದೊರೆ, ಊರಿನಲ್ಲಿ ರಸ್ತೆ ಮಾಡಿಸುವಾಗ ಕಪಾಲೇಶ್ವರ ಗುಡಿಗೆ ಧಕ್ಕೆಯಾಗದಂತೆ ಮತ್ತು ಜುಮಾದಿ – ಪಂಜುರ್ಲಿ ಸ್ಥಾನಗಳ ನಡುವೆ ಹಾದುಹೋಗದಂತೆ ಮಾಡಬೇಕೆಂದು ಅಚ್ಯುತ ಭಟ್ಟ ಮತ್ತು ಶೀತಪ್ಪ ಶೆಟ್ಟಿ ಎಂಬವರು ಆಕ್ಷೇಪ ಎತ್ತುತ್ತಾರೆ. ದೊರೆ ಅವರ ಮಾತನ್ನು ಮನ್ನಿಸುವುದಿಲ್ಲ. ಅವನ ಹೆಂಡತಿ ಲಿಲ್ಲಿಗೆ ಅತಿಮಾನುಷ ಶಕ್ತಿಯ ತೊಂದರೆ ಕಾಣಿಸಿಕೊಳ್ಳುತ್ತದೆ. ದೊರೆ ರಸ್ತೆಯನ್ನು ಬೇರೆ ಕಡೆಯಿಂದ ಮಾಡಿಸಲು ಒಪ್ಪಿದೊಡನೆ ಲಿಲ್ಲಿಯ ಸಮಸ್ಯೆ ದೂರವಾಗುತ್ತದೆ. ಈ ಕತೆಯಲ್ಲಿ ನಂಬಿಕೆಗಳ ತಾಕಲಾಟ, ಆಧುನಿಕತೆಯ ಪ್ರವೇಶದ ಜತೆಗೆ ಕಾಣಿಸಿಕೊಳ್ಳುವ ಸಂಘರ್ಷ ಮುಂತಾದ ಹಲವು ಸಾಂಸ್ಕೃತಿಕ ಆಯಾಮಗಳಿವೆ.