ಈ ಕಾದಂಬರಿಯಲ್ಲಿ ಲಂಕೇಶರು ಕೊಳಗೇರಿ ಹುಡುಗನ ಮೂಲಕ ಹೇಳಹೊರಟ ನೋಟ, ಪ್ರಜ್ಞೆ ಮುಖ್ಯವಾದುದು. ಬ್ರೆಕ್ಟ್‌ ಹೇಳುವಂತೆ ರಾಜಕೀಯ ನಮ್ಮ ಬದುಕುನ್ನು ಹೇಗೆ ಸದ್ದಿಲ್ಲದೆ ಪ್ರಭಾವಿಸುತ್ತದೆ ಎಂಬುದು. ಏಕಕಾಲಕ್ಕೆ ಇವೆರಡು ಹೇಗೆ ಒಂದಕ್ಕೊಂದು ತಳುಕು ಹಾಕಿಕೊಂಡಿರುತ್ತವೆ ಎಂಬುದು ಗಮನಾರ್ಹ. ರಾಜಕೀಯ ಪ್ರಜ್ಞೆ ಎಷ್ಟು ಮುಖ್ಯ ಎಂಬುದನ್ನುಈ ಕೃತಿಯ ಮೂಲಕ ಲಂಕೇಶ್‌ರಿಗೆ ಹೇಳಬೇಕಿತ್ತು.
ಪಿ.ಲಂಕೇಶರ ‘ಅಕ್ಕ’ ಕಾದಂಬರಿಯ ಕುರಿತು ನಾಗರಾಜ ಹರಪನಹಳ್ಳಿ ಬರಹ

 

ದಾರಿಹೋಕ ನೋಡುವ, ಚಿಂತಿಸುವ, ಸ್ವ ವಿಮರ್ಶೆ ಮಾಡಿಕೊಳ್ಳುವ ತರಹದವನಾಗಿದ್ರೆ ಅವನಿಗೆ ಒಂದಲ್ಲ ಒಂದು ದಿನ ಈ ಕ್ಯಾತ ಅಥವಾ ಕೃಷ್ಣ ಸಿಕ್ಕೇಸಿಗ್ತಾನೆ. ಈ ಕ್ಯಾತನ ಹಟ್ಟಿ, ಅವನ ಅಕ್ಕ, ಅವರಿಬ್ಬರನ್ನು ಸುತ್ತುವರಿದ ರಾಜಕೀಯ- ಎಲ್ಲವೂ ಆ ದಾರಿಹೋಕನಲ್ಲಿ ಸುರುಳಿ ಸುರುಳಿಯಾಗಿ ಬಿಚ್ಚಿಕೊಳ್ಳುತ್ತೆ. ಕ್ಯಾತ ಕಂಡದ್ದನ್ನು ಹೇಳುವ ಈ ಪುಟ್ಟ ಕಾದಂಬರಿ ನಿಜಕ್ಕೂ ರಾಜಕೀಯ ಕಾದಂಬರಿ ಎಂದು ಲಂಕೇಶರೇ ಹೇಳಿಕೊಂಡಿದ್ದಾರೆ.

ಇಷ್ಟನ್ನು ಮನಸಲ್ಲಿಟ್ಟುಕೊಂಡು ಈ ಕಾದಂಬರಿಯನ್ನು ಎರಡನೇ ಸಲ ಓದಿದೆ. ಮೊದಲ ಓದು ೧೯೯೩ ರಲ್ಲಿ. ಈ ಕಾದಂಬರಿ ಮುದ್ರಣವಾದುದು ೧೯೯೧ರಲ್ಲಿ. ಕಾದಂಬರಿ ಘಟನೆ ನಡೆದುದು ನವ್ಹಂಬರ್ ೧೯೮೨ ರಿಂದ ಹಾಗೂ ೧೯೮೩ ಮಾರ್ಚ್‌ ಸಮಯದಲ್ಲಿ. ೧೯೮೨ ನವಂಬರ್ ನಲ್ಲಿ ಕರ್ನಾಟಕ ಶಾಸನ ಸಭೆಗೆ ಚುನಾವಣಾ ತಯಾರಿ ನಡೆದ ಸಮಯ. ಚುನಾವಣಾ ವರದಿಗಾಗಿ ಲಂಕೇಶರು ಲಾಲ್‌ಬಾಗ್ ರಸ್ತೆಯ ಕೊಳಗೇರಿಯೊಂದಕ್ಕೆ ಹೋಗಿದ್ದಾಗ ಅಲ್ಲೊಬ್ಬ ಪುಟ್ಟ ಹುಡುಗ ಗಾಢ ದುಗುಡದಲ್ಲಿ ಕೂತಿದ್ದ. ಕುತೂಹಲಕ್ಕೆ ವಿಚಾರಿಸಿದಾಗ, “ಅಕ್ಕ ನಾಕ್ ದಿನದಿಂದ ಮನೆಗೆ ಬಂದಿಲ್ಲ, ಅವಳವ್ನ್!” ಅಂದು ಮುಖ ಮುಚ್ಚಿಕೊಂಡು ಅಳತೊಡಗಿದ. ಕೊಳಗೇರಿ ಹುಡುಗನ ಭಾಷೆಯನ್ನು ಬಳಸಿರುವುದು ಹಾಗೂ ಲೇಖಕರಿಗೆ, ಕ್ಯಾತ ಎಂಬ ಹುಡುಗ ತನ್ನ ಸುತ್ತಮುತ್ತಲಿನ, ಅಕ್ಕ ದೇವೀರಿ ಕತೆ ಹೇಳುತ್ತಾ ಹೋಗುವ ಶೈಲಿಯ ಈ ಕಾದಂಬರಿ ಅತ್ಯಂತ ಕುತೂಹಲದಿಂದ ಓದುಗನ ಎದುರು ತೆರೆದುಕೊಳ್ಳುತ್ತದೆ.

ಹುಡುಗನೊಬ್ಬನ ಮನದಲ್ಲಿ ಹಾದು ಹೋಗುವ ಘಟನೆಗಳ ವಿವರ ಅತ್ಯಂತ ತಾಜಾತನದಿಂದ ಕೂಡಿರುವ ಕಾರಣ, ಇಡೀ ಕತೆ ಓದುಗನ ಮನದಲ್ಲಿ ಇಡೀ ಕಥಾನಕ, ಕೊಳಗೇರಿಯ ಜನ ಜೀವನದ ಸಣ್ಣ ಸಣ್ಣ ವಿವರಗಳು ಕಣ್ಣೆದುರು ಚಿತ್ರದ ರೂಪದಲ್ಲಿ, ದೃಶ್ಯಗಳು ಕಣ್ಣೆದುರೇ ನಡೆದಂತೆ ಭಾಸವಾಗುತ್ತವೆ.

೧೭ ಅಧ್ಯಾಯಗಳ ೧೦೪ ಪುಟಗಳ ಈ ಕಾದಂಬರಿ ತುಂಬಾ ತುಂಬಿಕೊಂಡಿರೋದು ಕ್ಯಾತ ಎಂಬ ಹುಡುಗ. ಈ ಹುಡುಗನ ಒಳಗಣ್ಣಿನ ನೋಟದ‌ ಮೂಲಕವೇ ದೇವೀರಿ, ರಾಮಪ್ಪ, ಖಡವಾ, ನಾಗ್ರ, ನರಸಿಂಹ ಮೇಸ್ತ್ರಿ, ನಾಗರಾಜ ನಾಯ್ಡು, ಅವನ ಮಗಳು ಪದ್ದಿ, ಲಲಿತಾ, ಅವರವ್ವ ಅಲಮೇಲು, ಗಂಡ ಮುನಿರಾಜು, ಕುದುರೆ ರೇಸ್ ಕೋರ್ಸಿನ ರಂಗ ಜೆಟ್ಟಿ, ಅವನ ಪತ್ನಿ ಸಂಪೂರ್ಣಮ್ಮ, ಅವಳ ಮಗಳು ರೇಸ್ಮಿ ಪಾತ್ರಗಳು ಅರಳುತ್ತವೆ. ಇವತ್ತಿನ ಸಂದರ್ಭದಲ್ಲಿ ಅಕ್ಕ ಕಾದಂಬರಿ ಮರು ಓದು ಮುಖ್ಯ ಎನಿಸಿದ್ದು ಈ ಕಾರಣಗಳಿಗಾಗಿ.

(ಪಿ. ಲಂಕೇಶ್)

ಲಂಕೇಶರು ಕೊಳಗೇರಿ ಹುಡುಗನ ಮೂಲಕ ಹೇಳಹೊರಟ ನೋಟ, ಪ್ರಜ್ಞೆ ಮುಖ್ಯವಾದುದು. ಬ್ರೆಕ್ಟ್‌ ಹೇಳುವಂತೆ ರಾಜಕೀಯ ನಮ್ಮ ಬದುಕುನ್ನು ಹೇಗೆ ಸದ್ದಿಲ್ಲದೆ ಪ್ರಭಾವಿಸುತ್ತದೆ ಎಂಬುದು. ಏಕಕಾಲಕ್ಕೆ ಬದುಕು ಮತ್ತು ರಾಜಕೀಯ ಹೇಗೆ ಒಂದಕ್ಕೊಂದು ತಳುಕು ಹಾಕಿಕೊಂಡಿರುತ್ತವೆ ಎಂಬುದು ಗಮನಾರ್ಹ. ರಾಜಕೀಯ ಪ್ರಜ್ಞೆ ಎಷ್ಟು ಮುಖ್ಯ ಎಂಬುದನ್ನು ಲಂಕೇಶ್‌ರಿಗೆ ಹೇಳಬೇಕಿತ್ತು. ಕೊಳಗೇರಿ ಬದುಕಿನ ಜೀವಂತಿಕೆ, ಹೊಡೆದಾಟ, ತಾಯಿ ತಂದೆ ಇಲ್ಲದ ದೇವೀರಿ ಬದುಕು ಹೊಸ ದಿಕ್ಕಿನತ್ತ ಸಾಗುವುದು, ದೇವೀರಿ ಇಟ್ಟಂಗಿ ಹೊರುವ ಕೆಲಸ ಬಿಟ್ಟು ಇನ್ನೇನೋ ಮಾಡುತ್ತಾಳೆ ಎಂಬುದನ್ನು ಕ್ಯಾತನ ಮೂಲಕ ನೋಡುವುದು, ದೇವೀರಿ ಬದುಕಿನ ನಿಗೂಢ ಹಾದಿಯ ಬಗ್ಗೆ ಏಕಕಾಲಕ್ಕೆ ಹೆಮ್ಮೆ ಹಾಗೂ ದುಃಖ, ಅಸಕ್ಯ (ಇದು ಕ್ಯಾತನ ಭಾಷೆಯಲ್ಲಿ), ಅಸಹ್ಯವಾಗುವುದು ಚಿತ್ರಿತವಾಗಿವೆ.

ಮನುಷ್ಯನ‌ ಮನಸು ಹೇಗೆ ಏಕಕಾಲಕ್ಕೆ ಎರಡು ವಿಧದಲ್ಲಿ ಯೋಚಿಸುತ್ತದೆ ಎಂಬುದನ್ನು ಈ ಕಾದಂಬರಿಯಲ್ಲಿ ಕಾಣಬಹುದು. ಪದ್ದಿ (ಪದ್ಮಾ) ಸಿನಿಮಾ ನಟಿ, ನಾಯಕಿಯಾಗುವ ಹಂಬಲ, ರಂಗಜಟ್ಟಿಯ ಕುದುರೆ ರೇಸಿನ ಹುಚ್ಚು, ಸಂಪೂರ್ಣಮ್ಮನ ಮಾನವೀಯ ಕಾಳಜಿ, ರೌಡಿಗಳ ವರ್ತನೆ, ಕ್ಯಾತನ‌ ಹಸಿವು ಕಾಣುವುದರ ಜೊತೆಗೆ ನಗರದ ಕೊಳಗೇರಿ ಮೇಲ್ಮುಖವಾಗಿ ಚಲಿಸುವ ತುಡಿತ ಕಾಣುತ್ತಾ ಹೋಗುತ್ತದೆ. ಹಲವು ಸಾಧ್ಯತೆಗಳು ಹಾಗೂ ಚಲನೆಯನ್ನು ಏಕಕಾಲಕ್ಕೆ ಕಟ್ಟಿಕೊಡುವುದು ಲಂಕೇಶರ ಪ್ರತಿಭೆಗೆ ಸಾಧ್ಯ. ಭಾಷೆಯ ಬಳಕೆಯ ಜೊತೆಗೆ ತಂತ್ರಗಾರಿಕೆ ದೃಷ್ಟಿಯಿಂದ ಸಹ ಕನ್ನಡದಲ್ಲಿ ವಿಶಿಷ್ಟ ಕಾದಂಬರಿಯಾಗಿ ಅಕ್ಕ ನಿಲ್ಲುತ್ತದೆ.

******

ಕಾದಂಬರಿಯ ಕೆಲ ಭಾಗಗಳನ್ನು ಗಮನಿಸೋಣ:

ನೋಡಲು ಹುಚ್ಚು ಲೌಡಿಯ ತರವಿದ್ದ ಲಲಿತಳಿಗಿಂತ ತನ್ನ ಅಕ್ಕನೇ ವಾಸಿ ಅನ್ನಿಸಿತು‌. ದೇವೀರಿ ಈಗ ಅನ್ನಕ್ಕೆ ಉಪ್ಪು ಕಲಸಿ ಗೊಣಗುತ್ತಲೇ ತನ್ನ ಹರಕಲು ಕುಪ್ಪಸ ತೆಗೆದು ಒಳ್ಳೆಯ ಜಾಕೀಟಿಗಾಗಿ ಹುಡುಕುತ್ತಿದ್ದಳು. ಅಕ್ಕನ ಕಡೆ ಹೀಗೆ ನೋಡಬಾರದೆಂದು ಎಸ್ಟು ಬೈದುಕೊಂಡರೂ “ನೋಡಿದರೇನಾತು” ಎಂದುಕೊಂಡು ಕಣ್ಣಂಚಿನಲ್ಲಿ ನೋಡಿದ; ಆಕೆ ಬೇಗ ಜಾಕೀಟು ಸಿಕ್ಕಬಹುದೆಂದು ಹಾಗೆ ತೆಗೆದು ಸೆರಗ‌ನ್ನು ಕೂಡಾ ಎದೆಗೆ ಹಾಕಿಕೊಳ್ಳದೆ ಹಳೆಯ ಪೆಟ್ಟಿಗೆಯಲ್ಲಿ ತಡಕಾಡಿದಳು. ಅವಳ ಎದೆ ಕುಂಬಳ ಗಾತ್ರದ ಕುರುವಿನಂತಿತ್ತು; ಅದರ ತುದಿಯಲ್ಲಿ ಒಂಚೂರು ಕೆಂಪಗಿತ್ತು. ತೋಳುಗಳನ್ನು ಮೀರಿ ಪೆಟ್ಟಿಗೆಯ ಅಂಚನ್ನು ತಾಕುತ್ತಿದ್ದ ಅವನ್ನು ನೋಡಿ ಕ್ಯಾತನ ಮುಖ ಹೆದರಿಕೆಯಿಂದ ನಡುಗತೊಡಗಿತು. ಅವನು ತನ್ನ ಮೊಲೆಯ ಮೇಲೆ ಕಣ್ಣು ನೆಟ್ಟಿರುವುದನ್ನು ಕಂಡ ದೇವೀರಿ ಸಿಟ್ಟಿನಿಂದ, “ಏಳಲೆ, ಎದ್ದು ಆ ರಾಮಪ್ಪನೋರ ತಾವ ಹೋಗಿ ಮೇಸ್ತ್ರಿ ನರಸಿಂಹ ಬಾಡಿಗೆ ಜಾಸ್ತಿ ಮಾಡಿದಾನೆ – ಹ್ಯಂಗಾದ್ರೂ ಮಾಡಿ ಬಡವರನ್ನ ಬದುಕಿಸಿ ಅಂತ ಹೇಳಿ ಬಾ” ಅಂದಳು.

“ಯಾ ರಾಮಪ್ಪ ಅಕ್ಕ?” ಅಂದ ಕ್ಯಾತ

“ಇನ್ಯಾವ ರಾಮಪ್ಪ ಅದಾರೋ- ನಾವೆಲ್ಲಾ ಓಟು ಕೊಟ್ಟು ಆರಿಸಿ ತರಲಿಲ್ಲವಾ? ನಿನ್ನ ಕರಕೊಂಡು ಕರಗದ ದಿನ ಅವರಿಗೆ ಹೂವು ಕೊಡಾಕೆ ಹೋಗಿರಲಿಲ್ಲವಾ?”

******

ಖಡವಾ, ನಾಗ್ರರನ್ನು ಕಂಡರಂತೂ ಕ್ಯಾತನಿಗೆ ಆಗುತ್ತಿರಲಿಲ್ಲ. ಅವನನ್ನು ಕೆಲವು ಸಲ ‘ಬೋಳೀಮಗ’ ಎಂದು ಮನಸ್ಸಿನಲ್ಲೇ ಬೈಯುತ್ತಿದ್ದ. ಅವರೆಲ್ಲರೂ ಹಾದರಕುಟ್ಟಿದ ಸೂಳೆ ಮಕ್ಕಳು ಎಂಬುದು ಕ್ಯಾತನಿಗೆ ಗೊತ್ತಿತ್ತು. ಯಾಕೆಂದರೆ ಸೂಳೆಮಕ್ಕಳು ನಮ್ಮ ಗುಡ್ಲಿಗೆ ಬಂದ ಕೂಡಲೆ ನನ್ನನ್ನು ಬೀಡಿ, ಸಿಗರೇಟು ತರಲು ಕಳಿಸುತ್ತಿದ್ದರು. ನಮ್ಮ ಗವಿಪುರದಿಂದ ಸರಿ ಸುಮಾರು ನೂರು ಮೈಲಿ ದೂರವಿರುವ ವಿದ್ಯಾರ್ಥಿ ಭವನಕ್ಕೆ ದೋಸೆ ತರಲು ಕಳಿಸುತ್ತಿದ್ದರು; ….

ಅವರು ಬಂದು ಇಬ್ಬರೂ ಮಲಗೋಕೂ ಕಷ್ಟವಾದ ನಮ್ಮ ಗುಡ್ಳಲ್ಲಿ ಕುಂತು ಕಾಲು ಚಾಚಿ ಮಾತಾಡೋದು ನನಗೆ ಸರಿ ಹೋಗ್ತಿರಲಿಲ್ಲ. ದೇವೀರಿ ಒಲೆಯ ಪಕ್ಕದಲ್ಲಿ ಕೂತು ಅವರನ್ನ ಬೈಯುತ್ತಿದ್ದಳು. ಬೈದರೂ ಅವರ ತಮಾಸೆಗೆ ನಗ್ತಿದ್ದಳು. ಒಂದು ಸಲ ನಾ ಕಣ್ಣಾರೆ ನೋಡಿದೆ. ಖಡವಾ ಅವಳ ಕುಂಡೆಗೆ ಕೈ ಹಾಕಿ ನೇವರಿಸಿದ. ದೇವೀರಿ ಸಿಟ್ಟು ಮಾಡಿದರೂ ಅವನಿಗೆ ಒದೆಯಲಿಲ್ಲ. ಅವತ್ತು ದೇವೀರಿಯನ್ನು ನಾನು ‘ಗಬ್ಬು ಮುಂಡೆ’ ಅಂತ ಮನಸಲ್ಲೇ ಬೈದೆ. ಬೈದರೂ ದೇವೀರಿ ತುಂಬಾ ಸಿಟ್ಟಿನವಳು, ತುಂಬಾ ಗಟ್ಟಿ ಹೆಂಗಸು, ಮನಸು ಮಾಡಿದರೆ ಇವರನ್ನೆಲ್ಲಾ ಒದ್ದೋಡಿಸ್ತಾಳೆ ಅನ್ನಿಸಿತು. ಒಂದು ಸಲ ದೇವೀರಿ ಖಡವಾನ‌ ಕೆನ್ನೆಗೆ ಹೊಡೆದು ಬಾಯಿಬಾಯಿ ಬಡಿದುಕೊಳ್ಳುತ್ತಿದ್ದಾಗ ನಾನು ನನ್ನ ಸ್ಕೂಲ್ ನಿಂದ ಬಂದಿದ್ದೆ. ಅವನು ಅಲ್ಲಿ ನಿಲ್ಲದೆ ಓಡಿ ಹೋಗಿದ್ದ. ಈ ದೇವೀರಿ ಅನ್ನೋ ಚಿತ್ರಾಂಗಿ ನ‌ನ್ನ ಒಳ್ಳೆಯ ಅಕ್ಕ ಆದರೂ ಇವರಿಂದೆಲ್ಲ ಬಿಡಿಸಿಕೊಂಡು ಎಲ್ಲಾದ್ರೂ ಓಡಿಹೋಗಬೇಕು ಅನ್ನಿಸಿತ್ತು. ಗುಡ್ಡದ ಆಂಜನೇಯನ ಆಣೆ, ನನಗೆ ತುಂಬಾ ಬೇಸರವಾಗಿತ್ತು.

******

ಕ್ಯಾತನನಮಗ ನೂರು ಸುಳ್ಳು ಹೇಳಿದ್ರೆ ತೊಂಬತ್ತರಲ್ಲಿ ಸಿಕ್ಕಿ ಹಾಕಿಕೊಳ್ತಾನೆ. ಅವತ್ತು ದೇವೀರಿ ಬೇರೆ ಸುಡುಗಾಡು ಹೈಲಿನಲ್ಲಿದ್ದಳು. ಕ್ಯಾತನ್ನ ಎಬ್ಬಿಸಿ ಗೋಡೆಯ ದಬ್ಬೆ ಕಿತ್ತುಕೊಂಡು ಕುಂಡೆ, ಬೆನ್ನು, ತೊಡೆಗೆ ಬಾರಿಸಹತ್ತಿದಳು; ಈ ರೀತಿಯಲ್ಲಿ ಕ್ಯಾತ ಭಾಳದಿನ ಹೊಡೆತ ತಿಂದಿರಲಿಲ್ಲ, ಸಂಜೆತಾನೆ ಸಿನಿಮಾದಲ್ಲಿ ಛಾನ್ಸ್‌ ಕೊಡ್ತೀಯಾ ಅನ್ನಲು ಹೋಗಿದ್ದ ಕ್ಯಾತ. ಈಗ ಅದೇ ಕ್ಯಾತ “ಆಯ್ಯೊಯ್ಯೋ ಸಾಯ್ತೆನಪೋ” ಅಂತ ಕೂಗುವುದು ತಿಳಿಗೇಡಿತನ. ಆದರೂ ನೋವು ತಡೆಯಲಾಗದೆ ಕೂಗತೊಡಗಿದ.

ಹಲವು ಸಾಧ್ಯತೆಗಳು ಹಾಗೂ ಚಲನೆಯನ್ನು ಏಕಕಾಲಕ್ಕೆ ಕಟ್ಟಿಕೊಡುವುದು ಲಂಕೇಶರ ಪ್ರತಿಭೆಗೆ ಸಾಧ್ಯ. ಭಾಷೆಯ ಬಳಕೆಯ ಜೊತೆಗೆ ತಂತ್ರಗಾರಿಕೆ ದೃಷ್ಟಿಯಿಂದ ಸಹ ಕನ್ನಡದಲ್ಲಿ ವಿಶಿಷ್ಟ ಕಾದಂಬರಿಯಾಗಿ ಅಕ್ಕ ನಿಲ್ಲುತ್ತದೆ.

ರಂಗಜೆಟ್ಟಿಯ ಊದಿನಕಡ್ಡಿಯಂಥ ಹೆಂಡ್ತಿ ಕ್ಯಾತನ ತೊಡೆ ಮೇಲೆ ಬಾಸಾಳ ನೋಡಿದಳು; ‘ಯಾಕಳ್ತಿ ಸುಮ್ಕಿರ’ ಎಂದು ಗಂಧದ ಕೊರಡು ಎಳೆದುಕೊಂಡು ತೇದು ಅವನ ರಕ್ತ ಬಂದ ಜಾಗಕ್ಕೆ ಹಚ್ಚತೊಡಗಿದಳು. ರಂಗಜೆಟ್ಟಿಯ ಹೆಂಡ್ತಿ ಸಂಪೂರ್ಣಮ್ಮ ಒಳ್ಳೇಳು. ಯಾಕಂದ್ರೆ ಇಡೀ ಹಟ್ಟಿಯ ಐವತ್ತು ಮನೇಲಿ ಹೆಚ್ಚು ಮಾತೇ ಆಡದ ಹೆಂಗ್ಸು ಸಂಪೂರ್ಣಮ್ಮ. ಅವಳ ಮಗಳು ರೇಸ್ಮಿನೂ ಹಂಗೆ. ಊದಿನಕಡ್ಡಿಯ ತಗಡಿನ ಡಬ್ಬಿ ಮಾಡೋದು ಅವರಿಬ್ರ ಕೆಲಸ.

*****

“ಶಂಕ್ರಪ್ಪ ತುಂಬ ಒಳ್ಳೆರು. ಹೊಸ ಸಿನಿಮಾ ಶುರು ಮಾಡ್ತಿದಾರೆ” ಎಂದು ತನ್ನ ಕತೆ ಶುರು ಮಾಡಿದಳು ಪದ್ದಿ.
ಪದ್ದಿ ಹಂಗೆ ತನ್ನ ಕತೆ ಹೇಳಾಕೆ ಹತ್ತಿದ‌ ಕೂಡಲೆ ಕ್ಯಾತನ ಹಸಿವೆ ಒಂಚೂರು ಕಮ್ಮಿಯಾಯಿತು. ಪದ್ದಿ ಅವನ ಕೈಯಿಂದ ಬಾಚಣಿಕೆ ಕಸಿದುಕೊಂಡು, ಎರಡು ತೋಳನ್ನೂ ಮ್ಯಾಲಕ್ಕೆತ್ತಿ ಮೇಲೆ ಪೂರ್ತಿ ಉಚಾಯಿಸಿಕೊಂಡು ಕ್ಯಾತನ್ನ ಅಣಕಿಸೋ‌ ಹಂಗೆ ರಟ್ಟೆಗಳನ್ನು ಹಿಂದಕ್ಕೆ ತೆಗೆದುಕೊಂಡು ತುರುಬುಕಟ್ಟಿಕೊಂಡ್ಳು; ಅಸ್ಟರಲ್ಲಿ ಅವಳ ಏರ್ ಪಿನ್ನುಗಳು ಅವಳ ಹಲ್ಲಿನ‌ ನಡುವೆ ಇದ್ದವು. ಅವಳು ಮಾತಾಡೋ‌ ಹಂಗಿರಲಿಲ್ಲ. ಮಜಾ ಅನ್ನುಸ್ತು ಸಾರ್. ಹಸಿವು ಮರೆತು ಹೋತು. ಕ್ಯಾತ ತನ್ನನ್ನು ನೋಡೋದು ಪದ್ದಿಗೆ ಗೊತ್ತಿತ್ತೊ ಇಲ್ಲವೋ ಹ್ಯಂಗೆ ಹೇಳಲಿ. ಕ್ಯಾತನ ತಲೇಲಿ ಮೊಲೆಗಿಲೆ ಕುತ್ತಿಗೆ ಗಲ್ಲ ವಗೈರೆಗಳೆಲ್ಲ ತಮ್ಮ ಸಿಡಿಲು ಗುಡುಗು ಹುಟ್ಟಿಸ್ತವೆ ಅನ್ನೋದು ಆಕೆಗೆ ಗೊತ್ತಿತ್ತು ಅನ್ನೋದು ನಂಗೆ ಹ್ಯಂಗೆ ಗೊತ್ತು. ಹಲ್ಲಿನ‌ ನಡುವೆ ಕಚ್ಚಿಕೊಂಡಿದ್ದ ಪಿನ್ನು ತಗೊಂಡು ತುರುಬಿಗೆ ಚುಚ್ಕೊಂಡು, “ಕುಂತ್ಕ ಕ್ಯಾತ. ನಾನು ರೆಡಿ ಆಗಬೇಕು. ಶಂಕ್ರಪ್ಪ ಬರ್ತಾರೆ ” ಅಂದ್ಲು. ಹಂಗಂತಾನೇ “ಅವ್ವ, ಚಪಾತಿ ಆತ, ಶಂಕ್ರಪ್ಪ ಬಂದುಬಿಡ್ತಾರೆ” ಅಂದ್ಲು.

*****

ಅಕ್ಕ ಕಾದಂಬರಿಯ ಈ ಸಂಭಾಷಣೆಗಳನ್ನು ಓದುಗನನ್ನು ಗಾಢವಾಗಿ ತಟ್ಟುತ್ತವೆ. ಒಬ್ಬ ಲೇಖಕ ಪಾತ್ರಗಳ ಮನಸ್ಸನ್ನು ಪ್ರವೇಶ ಮಾಡಿ ಬರೆಯುವ ತದಾತ್ಮ್ಯತೆ, ಧ್ಯಾನಸ್ಥ ಸ್ಥಿತಿ ಓದುಗನನ್ನು ದಿಗ್ಭ್ರಮೆಗೊಳಿಸಬೇಕು. ಅದು ಲಂಕೇಶರು ಕತೆ ಹೇಳುವ ಶೈಲಿಯಲ್ಲಿದೆ. ಅಕ್ಕ ಕಾದಂಬರಿಯಲ್ಲಿ ಲಂಚ ಪ್ರಪಂಚ ಎಂಬ ಅಧ್ಯಾಯ ಬರ್ತದೆ. ಕ್ಯಾತ ಹಾಗೂ ಅವನ ಗೆಳೆಯ ಲಂಚದ ಬಗ್ಗೆ ಮಾತಾಡಿಕೊಳ್ತಾರೆ… ಸುಧೀರನ ಅಪ್ಪ ಲಂಚ ಪಡೆದು ಸಿಕ್ಕಾಕಿಕೊಂಡಿರ್ತಾನೆ. ಕೆಲಸದಿಂದ ಸಸ್ಪೆಂಡ್ ಆಗಿ ರಾಮಪ್ಪ ಹತ್ರ ಅರ್ಜಿ ಬರೆಯುವ ಕೆಲಸಕ್ಕೆ ಇರ್ತಾನೆ. ಇಂತಹ ಸನ್ನಿವೇಶದಲ್ಲಿ ಕ್ಯಾತ ಮತ್ತವನ ಗೆಳೆಯ ಸುಧೀರ ಸಂಭಾಷಣೆ ಗಮನಿಸಿ:

“ಲಂಚ ಅಂದ್ರೆ ಏನು ಮಾರಾಯ?” ಅಂದ ಕ್ಯಾತ
“ಕಾಸು ಇಸ್ಕಳದು”
“ಕಾಸ್ ಇಸ್ಕಂಡ್ರೆ ಅದ್ಯಾಕೆ ಲಂಚವಾಗಿಬಿಡುತ್ತೆ?”
“ಗೊತ್ತಿಲಪ್ಪ. ಅಪ್ಪ ರಾಮಪ್ಪನ ಮನೇಲಿದಾರೆ- ನೋಡ್ಕಂಡು ಇಸ್ಮಾಯಿಲ್ ಪಾರ್ಕಿಗೆ ಹೋಗಿ ಆಡೋಣ ಬಾ” ಅಂದ ಸುಧೀರ.

ಸುಧೀರ ಕ್ಯಾತನಿಗೆ ಹೇಳುವುದು ಹೀಗಿದೆ. “ಎಂಜಲು ಸೂಳೇಮಗಂದು- ಒಂದ್ಸಲ ತಿಂದ್ರೆ ಗರ ಹೊಡೆದು ಬಿಡುತ್ತೆ ಅಂದ್ರು ಕಣೋ” ನಮ್ಮಪ್ಪ.

“ಗರ ಬಡಿದವರ ನುಡಿಸಬಹುದು,
ಸಿರಿಗರ ಹೊಡೆದವರ ನುಡಿಸಲಾಗದು” ಎನ್ನುತ್ತಾನೆ ಬಸವಣ್ಣ. ಸಂಕ್ರಾಂತಿಯಲ್ಲಿ ಬಸವಣ್ಣನ‌ ಜೊತೆ ಲಂಕೇಶರು ಮಾತಾಡಿದ್ದರು ಎಂಬುದು ಇಲ್ಲಿ ಗಮನಾರ್ಹ.

ಆಮೇಲೆ ಒಂಚೂರು ದೊಡ್ಡವನಾದ ಮೇಲೆ ಈ ಕ್ಯಾತನಿಗೆ ಗೊತ್ತಾಗಿದ್ದೇನಂದ್ರೆ ಲಂಚ ಅಂದ್ರೆ ಟೇಬಲ್ಲಿನ ಕೆಳಗೆ ಕೈ ಹಾಕಿ ಯಾರಿಗೂ ಕಾಣಿಸದಹಂಗೆ ತಗೊಂಡು ಯಾರೂ ಇಲ್ಲದ ಹತ್ರ ತಿಂದು ಮಾಡೋ ಮೋಸ. ಯಾರಿಗೆ ಮೋಸ ಅನ್ನೊದು ಕ್ಯಾತನಿಗೆ ಆಮೇಲೆ ಗೊತ್ತಾತು. ಅದೇನಂದ್ರೆ, ಒಂದೊಂದ್ಸಲ ಕೊಟ್ಟವನಿಗೆ ಮೋಸ, ಒಂದೊಂದ್ಸಲ ಸರ್ಕಾರಕ್ಕೆ‌ ಮೋಸ, ಒಂದೊಂದ್ಸಲ ತಗಂಡಿದ್ನ ಮೇಲಿನವರಿಗೆ ಸರಿಯಾಗಿ ತಲುಪಿಸದಿದ್ರೆ ಮೇಲಿನವರಿಗೆ ಮೋಸ. ಇನ್ನೂ ಒಂಚೂರು ದೊಡ್ಡವನಾದ ಮೇಲೆ ಸುಧೀರನ ಅಪ್ಪನ ವಿಸ್ಯ ಯೋಚನೆ ಮಾಡ್ತಿದ್ದಾಗ ಅನ್ನಿಸ್ತು. ಆ ಸೂಳೇಮಗ ಏನೇ ಹೇಳಿದ್ರೂ ಬಲೆ ಹಲ್ಕಟ್ ನನ್ಮಗ ಅನ್ನಿಸ್ತು. ಅವನ ಕೈಗೆ ಬಂದ ದುಡ್ಡೆಲ್ಲ ಬರೀ ಲಂಚದ ತರ ಅನ್ನಿಸ್ತು.

*****

ಕ್ಯಾತ ಪದ್ದಿ ದೊಡ್ಡವಳಾದಾಗ ಹೂವು ತಗೊಂಡು ಹೋಗಲು ನಿರ್ಧರಿಸಿ, ಗಾಂಧಿ ಬಜಾರಿನಲ್ಲಿ ಹೂ ಮಾರುವ ಹುಡುಗಿ ಹತ್ರ ಬರ್ತಾನೆ. ಅಲ್ಲಿ ಅವಳು ಹಿಮಾಲಯದ ತರಹ ಹೂ ರಾಶಿ ಹಾಕಿಕೊಂಡಿರ್ತಾಳೆ. ಬೀದಿಬದಿ ಹೂ ಮಾರುವ ಹುಡುಗಿಯ ಭಾಷೆ, ಅವಳ ಧೈರ್ಯ, ಕ್ಯಾತನಲ್ಲಿ ಹೂ ಮಾರುವ ಹುಡುಗಿಯ ಮಾತಿನ ದಾಟಿ ಹುಟ್ಟಿಸುವ ಸಿಟ್ಟು.. ಎಷ್ಟೊಂದು ಸೊಗಸಾಗಿ ಲಂಕೇಶರು ನಿರೂಪಿಸ್ತಾರೆ.

“ಮಲ್ಲಿಗೆ ಹೂವಿನ ರಾಸಿಯಿಂದ ನಾಲ್ಕು ಬೊಗಸೆ ತೆಗೆದು ಬಾಳೆ ಎಲೆಯಲ್ಲಿ ಕಟ್ಟಿ, ಹತ್ತು ಗುಲಾಬಿ ಎಣಸಿಕೊಟ್ಟಳು. ಅವಳ ಕೈ, ತೋಳು ಎಷ್ಟು ಮಜವಾಗಿ ಕೆಲಸ ಮಾಡುತ್ತವೆ ಎಂದು ಎದೆಯನ್ನೆಲ್ಲ ಸಿಹಿಸಿಹಿ ತುಂಬಿಕೊಂಡಿತು. ಅವನ್ನ ತೆಗೆದುಕೊಂಡು ‘ಏನೂ ತಿಳ್ಕೋಬ್ಯಾಡ’ ಅಂದ. ಅವಳು ಇನ್ನಸ್ಟು ಸುಂದರವಾಗಿ – ಬೆಳಗ್ಗೆ ಗುಲಾಬಿ ತುಟಿ ಬಿಟ್ಟಂಗೆ – ಮುಗುಳ್ನಕ್ಕು “ಬರ್ತಿರು, ತಿಳಿತಾ?” ಅಂದಳು.

ಹೀಗೆ ಕ್ಯಾತನ ಸಣ್ಣ ಸಣ್ಣ ಖುಷಿ, ವ್ಯಾಮೋಹಗಳು ದಾಖಲಾಗಿವೆ. ಪದ್ದಿ ಸಹ ಕ್ಯಾತ ಕೊಟ್ಟ ಹೂ ಮುಡಿದು ಖುಷಿ ಪಡುವ ಸನ್ನಿವೇಶ ಸಹ ಸೊಗಸಾಗಿ ದಾಖಲಾಗಿದೆ.

****

ಕೊನೆಯ ಅಧ್ಯಾಯ “ಕೊನೇ ಕಂಬನಿ” ಯಲ್ಲಿ ನನಗೆ, ಅಂದ್ರೆ ಕ್ಯಾತನಿಗೆ ಕೈಕಾಲು ಬಿದ್ದಂಗಾತು. ಇನ್ನ ದೇವೀರಿ, ಅಂದ್ರೆ ನನ್ನಕ್ಕ ದೇವೀರಿ ಬರ್ರೋದೇ ಇಲ್ಲ… ಇನ್ನ ಬರ್ರೋದೇ ಇಲ್ಲ ಅಂತ ನೆನಸಿಕೊಂಡಸ್ಟೂ ಕಣ್ಣು ಕುರುಡಾದಂಗಾತು. ಎಸ್ಟು, ಎಸ್ಟು ಒಳ್ಳೇಳು ದೇವೀರಿ.

ಎಂಬ ವಿಷಾದದಲ್ಲಿ ಕಾದಂಬರಿ ಮುಗಿಯುತ್ತದೆ. ಕ್ಯಾತ ಹಟ್ಟೀ ಕಡೆ ಹೊಂಟ. ಕ್ಯಾತನಲ್ಲಿ ಬದಲಾವಣೆಯಾಗಿತ್ತು. ಆ ಬಗ್ಗೆ ಕ್ಯಾತ ತನ್ನನ್ನ ತಾನೇ ಗಮನಿಸುತ್ತಿದ್ದ…. ಎನ್ನುವ ಮೂಲಕ ಕ್ಯಾತ ಸ್ವವಿಮರ್ಶೆ ಮಾಡಿಕೊಳ್ಳುವವನಾಗಿದ್ದ ಎನ್ನುತ್ತಾರೆ ಲಂಕೇಶ್. ಮನುಷ್ಯರಿಗೆ ಸ್ವವಿಮರ್ಶೆ ಮುಖ್ಯ ಎಂಬ ಧ್ವನಿಯನ್ನು ಕನ್ನಡದ ಮಹಾನ್ ಲೇಖಕ ನಮಗೆ ಬಿಟ್ಟು ಹೋಗಿದ್ದಾರೆ.