ಈ ಕಾದಂಬರಿಯಲ್ಲಿ ಯೋಧ, ರಾಜನೀತಿಜ್ಞ, ನಟ-ವಿಟ, ವಿಪ್ರ, ವರ್ತಕ, ಶ್ರಮಿಕ, ಶ್ರಮಣ, ಗೃಹಸ್ಥ-ಗೃಹಿಣಿ ಎಲ್ಲರಲ್ಲಿಯೂ ತಮ್ಮ-ತಮ್ಮ ನೆಲೆ, ನಿಲವು, ಬೆಳಸು-ಕನಸುಗಳೆಲ್ಲದಕ್ಕೆ ಹಿಮ್ಮೇಳವಾದ ಧರ್ಮ, ಸಂಸ್ಕೃತಿ, ಕಲೆಗಳನ್ನು ಒಂದು ಸೂರಿನಡಿ ಕಾಯ್ದಿಡುವ ರಾಷ್ಟ್ರಪ್ರಜ್ಞೆಯ ಪಸೆಯನ್ನು ಕಾಣುವ ಹಂಬಲವಿದೆ. ಹಾಗೆಂದು ಇದು ಸಮಾಜ-ರಾಜಕೀಯ-ಧರ್ಮಗಳ ಗಡಸು ಮುದ್ದೆಯಲ್ಲ; ಸಂಸ್ಕೃತಿಯ ಸಂವೇದನೆಯಲ್ಲಿ, ಸಾರ್ವತ್ರಿಕವಾದ ಜೀವನತತ್ತ್ವ-ಕಲಾತತ್ತ್ವಗಳ ನೆಲಗಟ್ಟು-ಸೂರುಗಳ ನಡುವೆ ಬೆಳೆದ ಕಾದಂಬರೀವಧುವಿನ ಯಾತ್ರೆ.
ಶತಾವಧಾನಿ ಡಾ. ಗಣೇಶ್‌ ಬರೆದ “ಮಣ್ಣಿನ ಕನಸು” ಕಾದಂಬರಿಯ ಕುರಿತು ನೀಲಕಂಠ ಕುಲಕರ್ಣಿ ಬರಹ

 

ಮಣ್ಣಿನ ಬಂಡಿಯ ನಿಮಿತ್ತದಲ್ಲಿ ತನ್ನ ನಿಷ್ಕಲ್ಮಷ ಪ್ರೇಮದ ಸಾಫಲ್ಯಕ್ಕೆ ಹವಣಿಸುವ ವಸಂತಸೇನೆ, ಅವಿನಾಭಾವದ ಪತಿಯ ರಾಜ್ಯವನ್ನು ಮರಳಿ ಪಡೆಯುವಲ್ಲಿ ಭಾವಿ ಸವತಿಗೇ ದಾಸಿಯಾಗಿ ನಿಲ್ಲುವ ವಾಸವದತ್ತೆ, ಪುರುಷಾರ್ಥಗಳ ಚೌಕಟ್ಟಿನಲ್ಲಿ ಬದುಕು, ಪರಮಾರ್ಥ, ರಾಸಿಕ್ಯಗಳ ಬೆಳಕಿನಲ್ಲಿ ಭರತವರ್ಷವನ್ನು ಮುನ್ನಡೆಸುವ ರಾಜ-ರಾಜನೀತಿಜ್ಞರಿಗಾಗಿ ಹಂಬಲಿಸುವ ಯೌಗಂಧರಾಯಣರೇ ಮೊದಲಾದ ಪಾತ್ರಗಳ ಮೂರ್ತತೆಯಲ್ಲಿ “ಮಣ್ಣಿನ ಕನಸು” ಅರಳುತ್ತದೆ.

(ಶತಾವಧಾನಿ ಡಾ. ಆರ್. ಗಣೇಶ್)

ದಶಕಗಳಿಂದ ತಮ್ಮ ಕವಿತ್ವ, ಅವಧಾನ, ವಾಗ್ಮಿತೆಗಳಿಂದ ನಮಗೆಲ್ಲ ಕಲಾಸ್ವಾದ, ಧರ್ಮ-ಸಂಸ್ಕೃತಿ, ತತ್ತ್ವ-ವೈಚಾರಿಕತೆಗಳನ್ನು ಪುಷ್ಕಳವಾಗಿ ಉಣಬಡಿಸುತ್ತಿರುವ ಶತಾವಧಾನಿ ಡಾ|| ಆರ್. ಗಣೇಶರ ಈ ಚೊಚ್ಚಲ ಕಾದಂಬರಿಯಲ್ಲಿಯೂ ದೊರಕುವುದು ರಸದೌತಣವೇ. ವಸ್ತು-ವರ್ಣನೆಗಳನ್ನು ರಸವತ್ತಾಗಿ, ಸ್ಫುಟವಾಗಿ ಸಹೃದಯರಿಗೆ ಮುಟ್ಟಿಸುವ ಅಭಿಜಾತಶೈಲಿಯ ತಾಯಿಬೇರಿನ ಈ ಕೃತಿಯಲ್ಲಿ ಓದುಗನು ಆಸ್ವಾದದ ಬಹುಮುಖಿತ್ವದಲ್ಲಿ ಕಳೆದುಹೋಗುತ್ತಾನೆಯೇ ಹೊರತು ಒಗಟು, ಅಮೂರ್ತತೆಗಳ ಗೊಂದಲದಲ್ಲಿ ಅಲ್ಲ.

ಇಲ್ಲಿ ಯೋಧ, ರಾಜನೀತಿಜ್ಞ, ನಟ-ವಿಟ, ವಿಪ್ರ, ವರ್ತಕ, ಶ್ರಮಿಕ, ಶ್ರಮಣ, ಗೃಹಸ್ಥ-ಗೃಹಿಣಿ ಎಲ್ಲರಲ್ಲಿಯೂ ತಮ್ಮ-ತಮ್ಮ ನೆಲೆ, ನಿಲವು, ಬೆಳಸು-ಕನಸುಗಳೆಲ್ಲದಕ್ಕೆ ಹಿಮ್ಮೇಳವಾದ ಧರ್ಮ, ಸಂಸ್ಕೃತಿ, ಕಲೆಗಳನ್ನು ಒಂದು ಸೂರಿನಡಿ ಕಾಯ್ದಿಡುವ ರಾಷ್ಟ್ರಪ್ರಜ್ಞೆಯ ಪಸೆಯನ್ನು ಕಾಣುವ ಹಂಬಲವಿದೆ. ಹಾಗೆಂದು ಇದು ಸಮಾಜ-ರಾಜಕೀಯ-ಧರ್ಮಗಳ ಗಡಸು ಮುದ್ದೆಯಲ್ಲ; ಸಂಸ್ಕೃತಿಯ ಸಂವೇದನೆಯಲ್ಲಿ, ಸಾರ್ವತ್ರಿಕವಾದ ಜೀವನತತ್ತ್ವ-ಕಲಾತತ್ತ್ವಗಳ ನೆಲಗಟ್ಟು-ಸೂರುಗಳ ನಡುವೆ ಬೆಳೆದ ಕಾದಂಬರೀವಧುವಿನ ಯಾತ್ರೆ. ಇದಕ್ಕೆ ವೇದಕಾಲದಿಂದ ಬೆಳೆದುಬಂದ ತತ್ತ್ವ-ನೀತಿ-ಅರ್ಥಶಾಸ್ತ್ರಗಳ, ಬದುಕಿನ ಪಾಠಗಳ ಬುತ್ತಿಗಂಟು ಇದೆ. ಆದರ್ಷ ಕಾವ್ಯಗಳ ನದಿ-ಸರಸ್ಸುಗಳ ತಟಗಳೇ ತಂಗುದಾಣಗಳು. ದಾರಿಯುದ್ದಕ್ಕೂ ಮನಮುಟ್ಟುವ ಕಲೆ, ಕಾವ್ಯ, ಸಂಗೀತ-ನೃತ್ಯ, ಶ್ರದ್ಧೆ, ವೀರ, ತಂತ್ರ, ಅರ್ಥ-ಕಾಮ, ಪ್ರೇಮ-ಪ್ರಣಯ, ಜಿಜ್ಞಾಸೆ, ಬೋಧನೆ ಇವೆಲ್ಲದರ ಹೂದೋಟ, ಕಗ್ಗಾಡು, ಗಿರಿ-ಕಂದರ, ಬಯಲು, ತಪ್ಪಲು. ಇಲ್ಲಿ ಕಾಣುವುದು ಜನಜನದ ದಿನದಿನದ ಆಸೆ-ಆಕಾಂಕ್ಷೆಗಳ ಕೈಗೂಡುವಿಕೆ-ಕೈಕೊಡುವಿಕೆಗಳ ಉಲ್ಲಾಸ-ನಿರಾಶೆಗಳನ್ನು; ಪ್ರಯತ್ನಶೀಲತೆಯ ತುಡಿತ, ಕೌಶಲ, ಸಾಹಸಗಳನ್ನು; ನಿರ್ಮಮ-ನಿಷ್ಠೆಗಳ ನೋಂಪಿಯನ್ನು; ಇತಿಹಾಸ-ದರ್ಶನಗಳ ದಿಗ್ದರ್ಶಕತೆಯನ್ನು; ಜೀವನಾನುಭವ, ವಿಚಾರತೀಕ್ಷ್ಣತೆ, ಪಕ್ವತೆಗಳ ಫಲವತ್ತತೆಯನ್ನು, ಭಾವಸಂಪತ್ತಿಯ ಗಣಿಗಳನ್ನು. ಅಲ್ಲಲ್ಲಿ ಗೌತಮ ಬುದ್ಧನು ನಡೆದ ಪ್ರೇಮಲವಾದ ಬೆಳುದಿಂಗಳಿನ ಹಾದಿ ಕಾಣುತ್ತದೆ. ಮಿಗಿಲಾಗಿ ಹರವಾದ ನೋಟಕ್ಕೆ ಬೆಳಕಾಗಿ ವ್ಯಾಸ-ದರ್ಶನ, ಕೃಷ್ಣ-ದರ್ಶನಗಳ ಹಿರಿಸೆಳಕನ್ನು ಕಾಣುತ್ತೇವೆ. ಈ ಯಾತ್ರಿಕೆಯ ಕನಸೋ, ಸ್ವಾರ್ಥ-ಹೇಡಿತನಗಳ ಕೊಳಕು, ವ್ಯಸನ-ಒಳಜಗಳಗಳ ಕುಸಿತ, ವಿದ್ರೋಹ-ದೌರ್ಜನ್ಯಗಳ ಲಾವಾಸ್ಫೋಟ, ಕಲಾವಿಹೀನತೆ-ನೈರಸ್ಯಗಳ ಬರಡು-ಬಂಜರು, ಅಹಂಕಾರ-ದುರಭಿಮಾನಗಳ ಅಡ್ಡಗೋಡೆಗಳು ಇವುಗಳಿಂದ ಮುಕ್ತವಾದ ನಮ್ಮ ನೆಲದ ಸಮೃದ್ಧಿ. ಆ ಕನಸಿನ ನಿರೂಪಣೆಯು ಲೇಖಕರ ಒಳತೋಟಿಯೇ ಆಗಿರದೆ ಕೇವಲ ಪಾತ್ರದ ಬಾಯಿಂದ ಬಂದದ್ದಲ್ಲ ಎಂಬುದೂ ಮನವರಿಕೆಯಾಗುತ್ತದೆ.

ಈ ಭವ್ಯವಾದ ಕನಸನ್ನು ನನಸಾಗಿಸಲು ಪಕ್ಕಾಗಬಹುದಾದ ಪಾತ್ರಗಳಲ್ಲಿ ಗುಣಗಳ ಜೊತೆ ಕುಂದುಗಳೂ ಸೇರಿರುತ್ತವೆ. ಒಂದೆಡೆ ಸಮಾಜವನ್ನು ತನ್ನ ಸಂಪತ್ತು, ಉದಾತ್ತತೆಯಿಂದ ಪ್ರಭಾವಿಸುವಂತಿದ್ದರೂ ಅತಿ-ಔದಾರ್ಯದಿಂದ ಕಸುವು ಕಳೆದುಕೊಳ್ಳುವ ವೈಶ್ಯವರ್ಯ ಚಾರುದತ್ತ; ಇನ್ನೊಂದೆಡೆ ಕ್ಷತ್ರಿಯೋಚಿತ ಮಹತ್ತ್ವಾಕಾಂಕ್ಷೆ, ಸಾಹಸಗಳಿಂದ ಧರ್ಮರಾಜ್ಯಕ್ಕೆ ಹವಣಿಸದೇ ಕಲಾಪ್ರೇಮ, ರಾಸಿಕ್ಯ, ನೆಮ್ಮದಿಗಳ ವಲಯದಲ್ಲೇ ಸುಳಿಯುವ ವತ್ಸರಾಜ; ಇವರಿಗೆ ಅಂಟಾಗಿ ನಂಟಾಗಿ ಪ್ರೀತಿ, ಸಂಯಮ-ಸೌಶೀಲ್ಯ, ಧೈರ್ಯ-ಸ್ಥೈರ್ಯಗಳ ವಸಂತಸೇನೆ, ಧೂತಾದೇವಿ, ವಾಸವದತ್ತೆ, ಪದ್ಮಾವತಿಯರು; ಜೊತೆಗೇ ಧರ್ಮದ ಹಿಡಿತ ತಪ್ಪಿದ ಸಂಸ್ಥಾನಕ, ಕಾಮಲತೆ, ಪಾಲಕರಂಥವರೂ ಬರುತ್ತಾರೆ. ಇನ್ನೀ ಪಾತ್ರಪ್ರಪಂಚದ ಎರಡು ಕಣ್ಮಣಿಗಳಂತೆ, ರಾಷ್ಟ್ರಪ್ರಜ್ಞೆಯ ವಿಶಾಲ ಆಯಾಮದಲ್ಲಿ ವಿಕಾಸದ ಕನಸು ಕಾಣುವ ಯೌಗಂಧರಾಯಣ, ಸದ್ದುಗದ್ದಲದಿಂದ ದೂರವಾಗಿ ಆತ್ಮಕೇಂದ್ರಿತ ವಿಕಾಸವನ್ನು ಬಿಂಬಿಸುವ ರೇಭಿಲ ಎದ್ದು ತೋರುತ್ತಾರೆ.

ಪುರುಷಾರ್ಥ, ವ್ಯಕ್ತಿಗತ ಸ್ವಭಾವ-ಅಹಂಕಾರಗಳ ಹಗ್ಗ-ಜಗ್ಗಾಟದ ನಡುವೆ ತನ್ನ ವಿಶಿಷ್ಟ ಮನೋಹರತೆಯಿಂದ ನಮಗೆ ಆಪ್ತವಾಗುವುದು, ಯಾವ ಸಾಮ್ರಾಟನಿಗಿಂತಲೂ ಕಡಮೆಯೆನಿಸದಂತೆ ಕಾಮಸಾಮ್ರಾಜ್ಯವನ್ನು ಆಳಿ, ಭಾವೋದ್ರೇಕದ ಹಾರಾಟದಿಂದ ಭಾವೋನ್ನತಿಯತ್ತ, ಅಲ್ಲಿಂದ ಆತ್ಮೋನ್ನತಿಯತ್ತ ಪದವಿಟ್ಟ ಆಮ್ರಪಾಲಿಯ ಪಾತ್ರ. ಅನುಭವದ ಪರಿಪಾಕದಲ್ಲಿ ತನ್ನ ಗತಜೀವನದ ಉತ್ಕಟತೆ-ವಿಕಟತೆಗಳನ್ನು ತಿಳಿಸುವುದು “ರಸದ” ಜೇನಿನಲ್ಲಿ ಅದ್ದಿಟ್ಟ ನೆಲ್ಲಿಯಂತೆ ಸವಿಯೂಡುತ್ತದೆ. ಕಾಮದ ಮಳಿಗೆಯಿಂದ ಕಲಾವೇದಿಯತ್ತ ಅನೂಹ್ಯವಾಗಿ ತೆರೆದುಕೊಳ್ಳುವ ಮಜಲುಗಳಲ್ಲಿ ನಮ್ಮನ್ನು ನಡೆಸಿಕೊಂಡು, ಕಾಮಪ್ರಪಂಚ, ಕಲಾಪ್ರಪಂಚಗಳ ಕಟುಸತ್ಯಗಳೊಂದಿಗೆ ಅವುಗಳ ಅಪ್ಪಟ ಮೀಮಾಂಸೆಯನ್ನೇ ತೆರೆದಿಡುತ್ತಾಳೆ. ಉಳಿದೆಡೆಯಲ್ಲಿ ಲೇಖಕರು ತಮ್ಮ ಪ್ರೌಢಿಮೆಯತ್ತ ಒಮ್ಮೆ ಗಮನ ಸೆಳೆದರೆ, ಈ ಪ್ರಕರಣದಲ್ಲಿ ತಾವೇ ಮರೆಯಾಗುವಂತೆ ಅಚ್ಚ ಕವಿ-ಹೃದಯವನ್ನು ಬಸಿಯುತ್ತಾರೆ.

ಕೆಲವೆಡೆ ಸ್ವಲ್ಪ ಹೆಚ್ಚಾಯಿತು ಅನಿಸಿದರೂ, ಕೃತಿಯೆಲ್ಲೆಡೆ ವೈಚಾರಿಕತೆ, ಸಂಭಾಷಣೆ, ಸ್ವಗತಗಳ ವೈವಿಧ್ಯ, ಔಚಿತ್ಯ, ರೀತಿ, ಆಳ, ಹರವು ಅನನ್ಯವಾದದ್ದು. ವೈಶ್ಯವೃತ್ತಿಗೆ ಸಹಜವಾಗಿ ಒದಗುವ ಮಾತಿನ ಹದವು ಚಾರುದತ್ತನಲ್ಲಿ ವೃತ್ತಿಮೂಲವನ್ನೇ ಮೀರಿ ಮಾನವೀಯತೆಯತ್ತ ಚಾಚುತ್ತದೆ. ಯೌಗಂಧರಾಯಣ, ರೇಭಿಲರ ವಿಚಾರಲಹರಿ, ತತ್ತ್ವ, ದೃಷ್ಟಿಕೋನಗಳು ರಾಷ್ಟ್ರನಿರ್ಮಾಣದತ್ತ ಬೀಸಿ, ಜೀವನೋನ್ನತಿಯ ಪರಮಲಕ್ಷ್ಯದತ್ತ ಹೊರಳುತ್ತವೆ. ವಾಸವದತ್ತೆ, ವಸಂತಸೇನೆ, ಆಮ್ರಪಾಲಿ, ಪದ್ಮಾವತಿಯರ ಮಾತುಗಳು ಪ್ರೇಮಪೂರ್ಣವಾದ ಋಜುತ್ವ, ಮೃದುತ್ವ, ಮಾಧುರ್ಯ, ಕಳಕಳಿಗಳ ತೆನೆದುಂಬಿ ತೊನೆಯುತ್ತವೆ. ವಸಂತಕ, ಮೈತ್ರೇಯರ ವರ್ತನೆ ಸ್ನೇಹ-ಸೌಜನ್ಯಗಳ ಸ್ನಿಗ್ಧತೆಯಿಂದ ಮಿನುಗಿದರೆ, ಗಾಂಭೀರ್ಯದ ಜಿಡ್ಡು ಬಿಡದ, ಕಲೆಯ ಸೊಗಸು-ನಯ ಹಿಡಿದ ಉದಯನನ ಮಾತುಗಳು ಬೆಣ್ಣೆಯಂತೆ ಮನ ಮುಟ್ಟುತ್ತವೆ. ಇವೆಲ್ಲದರ ನಡುವೆಯೇ ಬದುಕಿನ ಹದ, ನಿಷ್ಠೆ, ಆತ್ಮಶ್ರದ್ಧೆ, ಸಾಧನೆ-ಸಿದ್ಧಿಗಳಿಂದ ಹಿಡಿದು ವೇದಾಂತದ ಗಾಢತತ್ತ್ವಗಳಿಗೆ ತಾಗಿಕೊಂಡು ಹೋಗುವ ವಿಚಾರಗಳ ಹೊಳಪೂ ಕಾಣುತ್ತದೆ.

ಯಾವೊಂದು ವರ್ಣ-ವೃತ್ತಿಗಳಿಗೆ ಅಂಟದೇ, ಆರ್ಷ-ದರ್ಶನ, ಬಾಳು-ಬೆಳಕುಗಳಿಗೆ ಬೇಕಾದ ಕ್ಷಾತ್ರ-ಬ್ರಾಹ್ಮಗಳ ಸಮಾಹಾರ, ಕಲೆ ಮತ್ತು ಸಾತ್ತ್ವಿಕ ಆನಂದ, ಶುದ್ಧಪ್ರೇಮ, ಸುಖ-ಶಾಂತಿಗಳ ಹುಡುಕಾಟವು ಇಲ್ಲಿದೆ. ಲೇಖಕರದು ಕ್ಲಿಷ್ಟಮನೋಹರವಾದ ಪ್ರೌಢಗತಿ. “ಸಲೀಸಾಗಿ ಓದಿಸಿಕೊಂಡು ಹೋಗುತ್ತದೆ” ಎಂಬ ಮಾತು ಇಲ್ಲಿ ಅಳತೆಗೋಲಾಗದು. ಸ್ವತಃ ಅಭಿಜಾತ ಕವಿಗಳಾದ ಲೇಖಕರು ಇಲ್ಲಿ ಕೊಡುವ ಅಲಂಕಾರನಿಬಿಡತೆಯ ಕುಸುರಿ-ಕೆಲಸ ನಮಗೆ ಅಪ್ಪಟ ಕಾವ್ಯದ ಸೊಗಸನ್ನು ನೀಡುತ್ತದೆ. ಪದಪುಷ್ಟಿ-ಅರ್ಥಪುಷ್ಟಿಗಳು ನಮ್ಮನ್ನು ಅಲ್ಲಲ್ಲಿಯೇ ಹಿಡಿದು ನಿಲ್ಲಿಸುತ್ತವೆ. ಬೇಲೂರು-ಹಳೇಬೀಡು ದೇವಾಲಯದ ಭಿತ್ತಿಗಳನ್ನು ಸರಸರ ನೋಡಿಕೊಂಡು ಹೋಗಲಾದೀತೇ? ದೌಡಾಯಿಸಿದರೆ ನಮಗೇ ನಷ್ಟ.

ನಮ್ಮ ದೇಶ-ಭಾಷೆ, ಧರ್ಮ-ಸಂಸ್ಕೃತಿ, ತತ್ತ್ವ-ಸಾಹಿತ್ಯ, ಕಲೆ, ಪರಂಪರೆ ಎಂಬೆಲ್ಲ ಹೆಮ್ಮೆಗೆ ಒಟ್ಟಂದದ ಚಂದದ ನೆಲೆ ಒದಗಿಸುವ ಚೂರಾದರೂ ಸಾಮಗ್ರಿ ಬೇಕು ಅಂದರೆ ತಪ್ಪದೇ ಓದಬೇಕಾದ ಕೃತಿ. ಹಾಗೆ ಕೈಗೆತ್ತಿಕೊಳ್ಳುವವರಿಗೆ ದಕ್ಕುವುದು ಚೂರಲ್ಲ, ದೊಡ್ಡ-ದೊಡ್ಡ ಗಣಿಗಳ ಕುರುಹುಗಳೇ.

(ಕೃತಿ: ಮಣ್ಣಿನ ಕನಸು (ಕಾದಂಬರಿ) ಲೇಖಕರು: ಶತಾವಧಾನಿ ಆರ್.‌ ಗಣೇಶ್‌, ಪ್ರಕಾಶನ: ಸಾಹಿತ್ಯ ಪ್ರಕಾಶನ ಹುಬ್ಬಳ್ಳಿ, ಬೆಲೆ: 600/-)