ಚಂದನ್ ಮತೊಂದು ಭಾರತವನ್ನು ಅವಲೋಕಿಸುತ್ತಿರುವುದೇ ದಮನಿತರ ದೃಷ್ಟಿಕೋನದಿಂದ. ಅಂಚಿನ ಸಂಗತಿಗಳನ್ನು ಮುಖ್ಯ ವಾಹಿನಿಗೆ ತಂದಿರಿಸಿ ನಿರೂಪಿಸುವುದೇ ಸಾಂಸ್ಕೃತವಾಗಿ ಮಹತ್ವದ್ದು. ದಲಿತ ಕವಿ ಸಿದ್ದಲಿಂಗಯ್ಯನವರ ಆತ್ಮಕಥನವ ಕಂಡಂತೆಯೆ, ಸರ್.ಎಂ.ವಿಶ್ವೇಶ್ವರಯ್ಯ ಅವರ ಬಗೆಗೂ, ನಾಲ್ವಡಿ ಕೃಷ್ಣ ರಾಜೇಂದ್ರ ಅವರ ಬಗೆಗೂ ಟಿಪ್ಪು ಸುಲ್ತಾನ್ ಬಗೆಗೂ ಸಮಾನವಾಗಿ ನೋಡುವ ಪರಿಯು ಗಮನಾರ್ಹವಾಗಿದೆ. ಯು.ಆರ್. ಅನಂತಮೂರ್ತಿ ಅವರು ಆತ್ಯಂತಿಕ ಪ್ರಭೆಯ ಲೇಖಕರು. ಅವರ ಮೂಲಕ ಭಾರತವನ್ನು ಚಂದನ್ ಭಾವಿಸುತ್ತಾರೆ.
ಚಂದನ್‌ ಗೌಡ ಹೊಸ ಕೃತಿ “ಅನದರ್‌ ಇಂಡಿಯಾ” ಕೃತಿಯ ಕುರಿತು ಮೊಗಳ್ಳಿ ಗಣೇಶ್‌ ಬರಹ

ಚಂದನ್ ಗೌಡ ಇಂಗ್ಲಿಷ್‌ ಭಾಷೆಯಲ್ಲಿ ಬರೆವ ಪ್ರತಿಭಾವಂತ ಲೇಖಕ. ನನಗೆ ತಿಳಿದಂತೆ ಯು.ಆರ್. ಅನಂತಮೂರ್ತಿ, ಲಂಕೇಶ್, ತೇಜಸ್ವಿ, ಕೆ.ವಿ. ಸುಬ್ಬಣ್ಣ, ಡಿ.ಆರ್. ನಾಗರಾಜ್, ಎ.ಕೆ. ರಾಮಾನುಜನ್, ಸಿದ್ದಲಿಂಗಯ್ಯ ತರದ ದೊಡ್ಡ ಲೇಖಕರ ಬಳಗದಲ್ಲಿ ಬೆಳೆದವರು. ಕನ್ನಡ ಪ್ರಜ್ಞೆಯನ್ನು ಜಾಗತೀಕರಣದ ನಡೆಯಲ್ಲಿ ತಡಕಾಡುವ ಒಂದು ವಿನೂತನ ದೃಷ್ಟಿಯನ್ನು ಬರಹದ ಧ್ಯಾನಕ್ಕೆ ಅಳವಡಿಸಿಕೊಂಡವರು. ಇದು ಒಂದು ರೀತಿಯಲ್ಲಿ ಸದ್ಯದ ಭಾರತದ ಆದುನಿಕೋತ್ತರ ಇಂಗ್ಲೀಷ್ ಬರಹಗಾರರು, ಅದರಲ್ಲು ಎಡಪಂಥೀಯತೆಯನ್ನೂ ಮೀರಿ ಆಲೋಚಿಸುವವರ ಧಾಟಿ ಆಗಿದೆ. ಹೀಗಾಗಿ ಚಂದನ್ ಗೌಡ ಅವರ “ಅನದರ್ ಇಂಡಿಯ” (Another India) ಕೃತಿಯಲ್ಲಿ ಸ್ಥಳೀಯತೆ ಮತ್ತು ರಾಷ್ಟ್ರೀಯತೆಯ ಸಂಗಮ ಚಹರೆಗಳು ಪುಟಪುಟಗಳಲ್ಲು ಸುಳಿದು ಹೋಗುತ್ತವೆ.

(ಚಂದನ್ ಗೌಡ)

“ಅನದರ್ ಇಂಡಿಯ” ಎಂಬ ನೋಟವೇ ಭಾರತದ ಬೇರೆ ಬೇರೆ ಮೂಲೆಗಳ ಹುಡುಕುವ ಪರಿಚಯಿಸುವ ಸಮರ್ಥಿಸುವ ಕಥನವಾಗಿದೆ. ಚಂದನ್ ಗೌಡ ಅವರು ವೈಚಾರಿಕತೆಯ ಅಬ್ಬರದವರಲ್ಲ. ಬಲಪಂಥೀಯತೆಯ ಯಾವ ಗಾಯಗಳೂ ಅವರ ಬರಹಗಳಿಗಿಲ್ಲ. ಲೇಖಕ ಲೋಕದ ಎಲ್ಲೋ ಒಂದೆಡೆ ತನ್ನ ಪಾಡಿಗೆ ತಾನು ಇದ್ದು ಅವಲೋಕಿಸಿದರೆ ನಿರ್ಲಿಪ್ತ ಸ್ತಿತಿ ಒಂದು ನಿರ್ವ್ಯಾಜ್ಯವಾಗಿ ಬರಹದಲ್ಲಿ ಬಂದು ಬೆಸುಗೆ ಆಗುತ್ತದೆ. ಈ ಬಗೆಯ ಗುಣ ಈ ಪುಸ್ತಕದ ವಿಶೇಷ. ಸಮಾಜ ವಿಜ್ಞಾನಿಗಳು ಹಿಂದೆ ತಮ್ಮ ವಿಷಯ ನಿಷ್ಟತೆಗೆ ಗಂಟು ಬೀಳುತ್ತಿದ್ದರು. ಚಂದನ್ ನಿರ್ದಿಷ್ಟ ವಿಷಯದ ಒಣ ಲೇಖಕ ಅಲ್ಲ. ಕ್ರಿಯೇಟಿವ್ ಹಾಗು ಇನ್ಕ್ಲೂಸಿವ್ ಆದ ಎರಡು ಸ್ವಭಾಗಳಲ್ಲಿ ಇಲ್ಲಿನ ಲೇಖನಗಳು ಮೈದಾಳಿವೆ. ಸಮಾಜದ ಚಲನೆ ಕ್ರಿಯೇಟಿವ್ ಆಗದೆ ಜಡವಾದಾಗ ಲೇಖಕ‌ ತನ್ನ ಒಳನೋಟಗಳ ಮೂಲಕ ಕಾರಣಗಳನ್ನು ಹುಡುಕುತ್ತಾನೆ. ಹಾಗಾಗಿಯೆ ಅನದರ್ ಇಂಡಿಯಾದ ನೋಟ ಕ್ರಮ ಭಿನ್ನವಾದುದು.

ಇಲ್ಲಿನ ಬಹು ಪಾಲಿನ ಬರಹಗಳೆಲ್ಲ ವರ್ತಮಾನಕ್ಕೆ ಸಮಾಜ ವಿಜ್ಞಾನಿ ಒಬ್ಬ ಮಾಡುವ ಪ್ರತಿಕ್ರಿಯೆಯಂತಿವೆ. ಗತ ಸಮಾಜಗಳ ಕೊಂಡಾಡಿ ಪ್ರಯೋಜನವಿಲ್ಲ. ಅವನ್ನು ತೆಗಳುತ್ತ ಕಾಲಹರಣ ಮಾಡುವುದು ನಷ್ಟಕಾರಿ. ನಮ್ಮ ಸಮಾಜಗಳ ಸಂಯುಕ್ತ ನಡೆಯೇ ಅಸಾಮಾನ್ಯವಾದುದು. ಅದರಲ್ಲೂ ಬೇಕಾದ ಸಂಗತಿಗಳಿರುತ್ತವೆ. ಈ ಪುಸ್ತಕ ನಮ್ಮ ಕಣ್ಣೆದುರಿನ ಗತದಿಂದಾದ ವರ್ತಮಾನವನ್ನು ನಿಚ್ಚಳವಾಗಿ ಮಂಡಿಸುತ್ತದೆ.

ಚಂದನ್‌ ಗೌಡ ಮೂಲತಃ ಸಮಾಜ ವಿಜ್ಞಾನದಲ್ಲಿ ಎಂ.ಎ. ಮುಗಿಸಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪದವಿ ಪಡೆದು ಈಗ ಪ್ರಾಧ್ಯಾಪಕರಾಗಿ ಬೆಂಗಳೂರಿನ “ಐಸ್ಯಾಕ್” ನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಕಾಲಂ ಬರಹಗಳನ್ನು ದಿ ಮಿರರ್, ಡೆಕನ್ ಹೆರಾಲ್ಡ್‌, ದಿ ಹಿಂದೂ ಪತ್ರಿಕೆಗಳಲ್ಲಿ ಗಮನಿಸಿರಬಹುದು. ಇಂತಹ ಒಬ್ಬ ಅಂಕಣ ಬರಹಗಾರನ ಶೈಲಿಗೆ ಹಲವು ಮಾದರಿಗಳಿವೆ. ಆಶಿಷ್ ನಂದಿ ಅವರಿಂದ ಹಿಡಿದು ತೇಲ್ ತುಂಬ್ಡೆ ತನಕ ಬಹು ರೂಪಿ ಬರಹಗಾರರ ದೊಡ್ಡ ದಂಡೇ ಇದೆ. ಚಂದನ್ ಬರಹದಲ್ಲಿ ಪುಟ್ಟ ಅಧೀರತೆ ಇದೆ. ಓದುಗನನ್ನು ನೋಯಿಸಬಾರದು ಎಂಬ ಎಚ್ಚರವಿದೆ. ಜನಪ್ರಿಯ ಸತ್ಯಗಳನ್ನು ಪ್ರಶ್ನಿಸುವುದು ಬಹಳ ಕಷ್ಟ. ಸಾರ್ವಜನಿಕ ಸಂಯಮ ಕಳೆದು ಹೋಗಿ ಮಾಧ್ಯಮಗಳು ಬರಹಗಾರನನ್ನೆ ನಿಯಂತ್ರಿಸುವ ಮಟ್ಟ ತಲುಪಿರುವಲ್ಲಿ ಲೇಖಕ ಪುಟ್ಟ ಚಿತ್ರಗಳಲ್ಲಿ ರೂಪಕಗಳನ್ನು ಬೆಂಬತ್ತಿ ಬರೆಯಬೇಕಾಗುತ್ತದೆ. ಚಂದನ್ ಬರಹ ಹೀಗಾಗಿಯೇ ಕಥನ ಗುಣವನ್ನು ಆವಾಹಿಸಿಕೊಳ್ಳುವುದು.

ಇಲ್ಲಿನ ಬರಹಗಳು ಬಹುರೂಪಿಯಾಗಿವೆ. ಆದರೆ ಅವು ತಣ್ಣಗೆ ಒಂದು ಕಲ್ಚರಲ್ ಪಾಲಿಟಿಕ್ಸ್‌ನ ನೆರೇಟಿವಿಟಿಯನ್ನು ನೇಟೀವ್ ಆಗಿ ಮಾಡುತ್ತವೆ. ಭಾರತೀಯ ಸಮಾಜಗಳ ಮುಖ ಪರಿಚಯ ಮಾಡುವುದು ಬೇರೆ. ಅದರ ಬೆನ್ನನ್ನು ವಿಶ್ಲೇಷಣೆ ಮಾಡುವುದು ಕಷ್ಟ. ಚಂದನ್ ಅವರ ಈ ಪುಸ್ತಕದ ಸಂದರ್ಭದಲ್ಲಿ ಗಾಂಧೀಜಿ ಹಾಗು ಅಂಬೇಡ್ಕರ್ ಅವರ ಬರಹಗಳನ್ನು ನೆನಪು ಮಾಡಿಕೊಳ್ಳಬೇಕು. ಗಾಂಧೀಜಿ ಅವರು ಬೃಹತ್‌ ಭಾರತದ ಅಖಂಡತೆಯನ್ನು ಎತ್ತಿ ಹಿಡಿದರು. ಅಂಬೇಡ್ಕರ್ ಅವರು ಭಗ್ನ ಭಾರತದ ಜಾತಿಗಳ ಬೆನ್ನುಗಳ ವಿರೂಪವನ್ನು ಬಹಿರಂಗ ಪಡಿಸಿದರು. ಮುಖವನ್ನು ಬೆನ್ನು ನೋಡದು; ಮುಖ ಬೆನ್ನಿನತ್ತ ತಿರುಗಿ ನೋಡದು! ಎಂತಹ ವಿಚಿತ್ರ, ಎರಡೂ ಸ್ಥಿತಿಗಳು ಒಂದೇ ದೇಹದಲ್ಲಿ ಬೆರೆತಿರುವುದು!

ಈ ಸ್ಥಿತಿಯನ್ನು ಅಂಬೇಡ್ಕರ್ ಥರ ಚಂದನ್ ಪ್ರಶ್ನಿಸಲಾಗದು. ಚಾರಿತ್ರಿಕ ಪ್ರಜ್ಞೆಗಿಂತಲೂ ವರ್ತಮಾನದ ಅನಿವಾರ್ಯತೆಯಲ್ಲಿ ಈ ಬರಹಗಳು ಮಾತನಾಡುತ್ತವೆ. ಭಾರತದ ಬೆನ್ನು ಕಣ್ಣಿಗೆ ಕಾಣದು. ಮುಖ ಧಾರಳವಾಗಿ ಅಚ್ಚಾದಂತೆ ಗೋಚರಿಸುತ್ತದೆ. ಚಂದನ್‌ಗೆ ಮುಖವೂ ಗೊತ್ತೂ, ಬೆನ್ನೂ ಗೊತ್ತು. ಆದರೆ ಮುಖಬೆಲೆಗೇ ಅವರು ಹೆಚ್ಚು ವಾಲುತ್ತಾರೆ. ಹಾಗಾಗಿಯೆ ಬೆನ್ನ ಮೇಲಿನ ಹೊದಿಕೆಯನ್ನು ತೆರೆಯಲು ಅವರು ಜೋಪಾನವಹಿಸುತ್ತಾರೆ. ಭಾರತೀಯ ಇಂಗ್ಲೀಷ್ ಬುದ್ಧಿಜೀವಿ ಬರಹಗಾರರ ಸಂಕೀರ್ಣ ಸಮಸ್ಯೆ ಇದು. ಇದಕ್ಕೆ ಕಾರಣ ಇಂಡಿಯಾದ ಪತ್ರಿಕಾ ಮಾಧ್ಯಮ. ಚಂದ್ರಬಾನ್ ಪ್ರಸಾದ್ ಎಂಬ ದಲಿತ ಚಿಂತಕರನ್ನು ಮಾಧ್ಯಮ ಹೇಗೆ ಸಹಿಸಿಕೊಂಡಿತ್ತೋ ಏನೋ… ಈ ಪರಿಯ ಇಂಗ್ಲಿಷ್ ದಲಿತ ಬರಹಗಾರರು ಬೆರಳೆಣಿಕೆಯ ಸಂಖ್ಯೆಯಲ್ಲಿ ಇದ್ದಾರೆ. ಅಂತಹ ಲೇಖಕಿ ಅರುಂಧತಿ ರಾಯ್ ಕೂಡ ನಿಯಂತ್ರಿತ ಭಾಷೆಯಲ್ಲಿ ಬರೆಯಬೇಕಾದ್ದಿದೆ.

ಚಂದನ್ ಮತೊಂದು ಭಾರತವನ್ನು ಅವಲೋಕಿಸುತ್ತಿರುವುದೇ ದಮನಿತರ ದೃಷ್ಟಿಕೋನದಿಂದ. ಅಂಚಿನ ಸಂಗತಿಗಳನ್ನು ಮುಖ್ಯ ವಾಹಿನಿಗೆ ತಂದಿರಿಸಿ ನಿರೂಪಿಸುವುದೇ ಸಾಂಸ್ಕೃತವಾಗಿ ಮಹತ್ವದ್ದು. ದಲಿತ ಕವಿ ಸಿದ್ದಲಿಂಗಯ್ಯನವರ ಆತ್ಮಕಥನವ ಕಂಡಂತೆಯೆ, ಸರ್.ಎಂ.ವಿಶ್ವೇಶ್ವರಯ್ಯ ಅವರ ಬಗೆಗೂ, ನಾಲ್ವಡಿ ಕೃಷ್ಣ ರಾಜೇಂದ್ರ ಅವರ ಬಗೆಗೂ ಟಿಪ್ಪು ಸುಲ್ತಾನ್ ಬಗೆಗೂ ಸಮಾನವಾಗಿ ನೋಡುವ ಪರಿಯು ಗಮನಾರ್ಹವಾಗಿದೆ. ಯು.ಆರ್. ಅನಂತಮೂರ್ತಿ ಅವರು ಆತ್ಯಂತಿಕ ಪ್ರಭೆಯ ಲೇಖಕರು. ಅವರ ಮೂಲಕ ಭಾರತವನ್ನು ಚಂದನ್ ಭಾವಿಸುತ್ತಾರೆ. ಅದರಲ್ಲೂ ಸಾಹಿತ್ಯದ ಮೂಲಕ ಭಾರತೀಯ ಸಮಾಜಗಳ ಚಲನಶೀಲತೆಯನ್ನು ಗ್ರಹಿಸುವ ಬಗೆಯು ಕುತೂಹಲಕಾರಿಯಾಗಿದೆ. ಬಹುರೂಪಿಯಾಗಿ, ಆನ್ವಯಿಕವಾಗಿ ಬಹಿಶಿಸ್ತೀಯ ಅಧ್ಯಯನಗಳ ಸಂಯೋಗ ಸಂವೇದನೆಯಾಗಿ ಬರೆವ ಚಂದನ್ ಗೌಡ ಈ ಕೃತಿಯ ಉದ್ದಕ್ಕೂ ಸಂಯಮಿ ಬರಹಗಾರರಾಗಿಯೇ ಕಾಣುವರು.

ಚಂದನ್ ಅವರ ಈ ಪುಸ್ತಕದ ಸಂದರ್ಭದಲ್ಲಿ ಗಾಂಧೀಜಿ ಹಾಗು ಅಂಬೇಡ್ಕರ್ ಅವರ ಬರಹಗಳನ್ನು ನೆನಪು ಮಾಡಿಕೊಳ್ಳಬೇಕು. ಗಾಂಧೀಜಿ ಅವರು ಬೃಹತ್‌ ಭಾರತದ ಅಖಂಡತೆಯನ್ನು ಎತ್ತಿ ಹಿಡಿದರು. ಅಂಬೇಡ್ಕರ್ ಅವರು ಭಗ್ನ ಭಾರತದ ಜಾತಿಗಳ ಬೆನ್ನುಗಳ ವಿರೂಪವನ್ನು ಬಹಿರಂಗ ಪಡಿಸಿದರು. ಮುಖವನ್ನು ಬೆನ್ನು ನೋಡದು; ಮುಖ ಬೆನ್ನಿನತ್ತ ತಿರುಗಿ ನೋಡದು! ಎಂತಹ ವಿಚಿತ್ರ, ಎರಡೂ ಸ್ಥಿತಿಗಳು ಒಂದೇ ದೇಹದಲ್ಲಿ ಬೆರೆತಿರುವುದು!

ಚಂದನ್ ಗೌಡ ಅವರ ಹೊಸ ಪುಸ್ತಕ “ಅನದರ್ ಇಂಡಿಯಾ” ಇತ್ತೀಚೆಗೆ ಬಿಡುಗಡೆಯಾಗಿ ವಾರದಲ್ಲೇ ಮಾರಾಟವಾಗಿ, ಮರು ಮುದ್ರಣಕ್ಕೆ ಹೋಗಿದೆ. ಈ ಪುಸ್ತಕ ಮೂಲತಃ ಬಹುಶಿಸ್ತೀಯ ಅಧ್ಯಯನ ಕೇಂದ್ರಿತ ಬರಹಗಳ ಗುಚ್ಛವಾಗಿದೆ. ಬದಲಾದ ಭಾರತೀಯ ಸಮಾಜಗಳ ಚಹರೆಗಳನ್ನು ನಮ್ಮ ನಿತ್ಯದ ಆಗು ಹೋಗುಗಳ ಮೂಲಕವೆ ಚರ್ಚಿಸುವುದು ವಿನೂತನವಾಗಿದೆ. ನಿತ್ಯ ವರ್ತಮಾನದ ಸಂಕೀರ್ಣ ಜಾತಿ ನಿಷ್ಟ, ಮತೀಯ ಸಮಾಜಗಳ ರಾಜಕೀಯ ಮನಸ್ಥಿತಿಯನ್ನು ಗ್ರಹಿಸಿ ಯಾರಿಗೂ ಹರ್ಟ್‌ ಆಗದಂತೆ ಬರೆಯುವುದು ಬಹಳ ಕಷ್ಟ. ಇದನ್ನು ಚಂದನ್ ಒಂದು ಫುಟ್ ಬಾಲ್ ಕ್ರೀಡೆಯ ಬಲಾಬಲ ಆಟದ ಸಮರ್ಥ ವಿವರಣೆಕಾರನಂತೆ, ಸೋಲು ಗೆಲುವಿನ ವಿಶ್ಲೇಷಕನಂತೆ ತಾರತಮ್ಯ ಮಾಡದೇ ಬರೆಯುತ್ತಾರೆ.

ಚಂದನ್ ಸಮಾಜ ವಿಜ್ಞಾನವನ್ನು ಒಂದು ಕ್ರಿಯೆಟಿವ್ ಡಿಸ್ಕೋರ್ಸಿನಂತೆ ಬರೆಯುತ್ತಾರೆ. ಈ ಮಾತನ್ನು ಮತ್ತೆ ಹೇಳಬೇಕಾಗಿದೆ. ನಾವು ಕಂಡ ಸಮಾಜ ನಮ್ಮ ಅನುಭವ ಕಥನವಾಗಬೇಕು. ಅಂತೆಯೆ ಅದು ಹಲವರ ಭಾವನೆಯ ಮೊತ್ತವೂ ಆಗಬೇಕು. ಪ್ರಖ್ಯಾತ ಎಂ.ಎನ್. ಶ್ರೀನಿವಾಸ್ ಅವರ ರಿಮೆಂಬರ್ಡ್‌ ವಿಲೇಜ್ ಕೃತಿ ಕೇವಲ ನೆನಪಿನ ಕಥನವಲ್ಲ; ಅದು ಜೀವಂತ ಕಾಲದ ಕಥನವೂ ವ್ಯಾಖ್ಯಾನವೂ ಆಗುವುದು. ಆದ್ದರಿಂದಲೇ ಅನದರ್ ಇಂಡಿಯಾ ನಮ್ಮ ಕಾಲದ ಬಗ್ಗೆ ನಾವೇ ಬರೆದುಕೊಂಡಂತಹ ಸೆಲ್ಪ್ ನೆರೇಟೀವ್ ಆಗುವುದು. ಎಂ.ಎನ್.ಶ್ರೀ ಅವರ ನೆನಪಿನ ಕಥನದ ಕಾಲ ಮಾನ ಬೇರೆಯೇ ಆಗಿತ್ತು. ಸಾಹಿತ್ಯ ಪರಿಭಾಷೆಯ ಕಥನ ಅಥವ ಕಥೆ ಹೇಳುವ ಬಗೆಯು ನೆರೇಟಿವ್ ಗುಣವನ್ನು ಅನುಸರಿಸಿದೆ. ಚಂದನ್ ಸರಳವಾಗಿಯೇ ಡಿ.ಆರ್. ನಾಗರಾಜರಂತೆ ರೂಪಕಗಳಲ್ಲಿ ಹೊಳೆದ ವಿಚಾರಗಳ ಮಂಡಿಸುತ್ತಾರೆ. ಪುಟ್ಟ ಪುಟ್ಟ ಟಿಪ್ಪಣಿಗಳಲ್ಲಿ ವಿಚಾರ ನಿರೂಪಿಸುವ ಕ್ರಮವು ಲಂಕೇಶರ “ಮರೆವ ಮುನ್ನ” ಟಿಪ್ಪಣಿಗಳನ್ನು ನೆನಪಿಸುತ್ತವೆ. ಮೇಲೆ ಉಲ್ಲೇಖಿಸಿದ ಹಿರಿಯ ಬರಹಗಾರರ ಗಾಢವಾದ ಪರಿಣಾಮ ಚಂದನ್ ಮೇಲೆ ಆದಂತಿದೆ. ಚಂದನ್ ಬಳಸುವ ಇಂಗ್ಲಿಷ್ ಭಾಷೆ ಕನ್ನಡದ ಆಲೋಚನಾ ಕ್ರಮವನ್ನು ಮೈಗೂಡಿಸಿಕೊಂಡಿದೆ. ಆದ್ದರಿಂದಲೆ ಅವರ ಈ ಇಂಗ್ಲಿಷ್ ನಿರೂಪಣೆಯ ಶೈಲಿಯು ಕನ್ನಡದ ಮೂಲಕವೇ ಭಾರತವನ್ನು ಭಾವಿಸುವ ಮಟ್ಟಕ್ಕೆ ಎತ್ತರವಾಗಿದೆ.

ಚಂದನ್ ಬರಹದ ಹರವು ವ್ಯಾಪಕವಾದುದು. ಬಹು ಆಯಾಮಗಳ ಸಂಗಮಿಸಿ ಬರೆವ ಗುಣ ಇಲ್ಲಿನ ಎಲ್ಲ ಲೇಖನಗಳಲ್ಲು ಇದೆ. ಕನ್ನಡದ ಅಸ್ಮಿತೆಯ ಚರ್ಚೆಯಿಂದ ಆರಂಭಿಸಿ, ಕರ್ನಾಟಕ ಗ್ರಾಮ ದೈವಗಳ ಅನನ್ಯತೆಯನ್ನೂ ಬಿಡದೆ ಡಾ. ರಾಜಕುಮಾರ್ ಅವರ ಬಗ್ಗೆಯೂ ಬರೆಯತ್ತ ಕನ್ನಡದ ಅನೇಕ ಸಂಗತಿಗಳ ಬೆರೆಸಿ, ಕುವೆಂಪು ಅವರ ವಿಶ್ವ ಮಾನವತೆಯನ್ನೂ ಎಟುಕಿಸಿಕೊಂಡು ಬರೆಯುವುದು ಸಲೀಸಲ್ಲ. ಇಲ್ಲೆಲ್ಲ ಕನ್ನಡ ಸಂವೇದನೆಯನ್ನು ಇಡೀಯಾದ ನೋಟದಲ್ಲಿ ಭಾರತೀಕರಿಸಿಬಿಡುತ್ತಾರೆ.

ಆಧುನಿಕತೆ ಮತ್ತು ಪರಂಪರೆಗಳ ಗೊಣಗಾಟ ಯಾವತ್ತಿನಿಂದಲೂ ಇದ್ದಿದ್ದೇ. ಆದರೆ ಚಲನಶೀಲ ಸಮಾಜದ ಎಡರು ತೊಡರುಗಳನ್ನು ಚಂದನ್ ಸಂಯಮದಿಂದ ಪರಿಭಾವಿಸುತ್ತಾರೆ. ಸಿರಿ ಧಾನ್ಯಗಳ ಬಗ್ಗೆ ವಿವೇಚಿಸುತ್ತಲೇ ಪ್ರೊ.ನಂಜುಂಡಸ್ವಾಮಿ, ರೈತ ಸಂಘ, ದಲಿತ ಸಂವೇದನೆಯ ಎಲ್ಲೆಗಳ ಸುತ್ತಿ ಬರೆವ ಪರಿ ಅನನ್ಯವಾದುದು. ಅನೇಕ ಸಮಾಜ ವಿಜ್ಞಾನಿಗಳು ಗತ ಪಡಸಾಲೆಗಳಲ್ಲೆ ಕೂತು ಹರಟೆ ಹೊಡೆಯುತ್ತಿರುತ್ತಾರೆ. ಸಮಾಜಗಳ ಗುಡಿ ಗೋಪುರಗಳಲ್ಲೆ ಭಜನೆ ಮಾಡುತ್ತಿರುತ್ತಾರೆ. ನಮ್ಮ ಸುತ್ತಣ ಸಮಾಜಗಳು ಉರಿಯುತ್ತಿದ್ದರೂ ಅದರ ಕಿಚ್ಚೇ ಅವರಿಗೆ ತಾಕಿರುವುದಿಲ್ಲ. ನಮ್ಮ ನಿತ್ಯ ವರ್ತಮಾನವೇ ನಮ್ಮ ಸಮಾಜ. ಅದು ಯಾರಿಂದಲೋ ಉದ್ಧಾರ ಆಗುವಂಥದಲ್ಲ. ವ್ಯಕ್ತಿ ಮತ್ತು ಸಮೂಹಗಳು ಒಟ್ಟಿಗೇ ಪಯಣ ಮಾಡಿದರೆ ಅದೇ ಒಳ್ಳೆಯ ಸಮಾಜ. ಚಂದನ್ ಅವರ ಈ ಬರಹಗಳ ಮೇಲೆ ಕಂಡೂ ಕಾಣದಂತೆ ಅಂಬೇಡ್ಕರ್ ನೆರಳು ಬಿದ್ದಿದೆ. ಅದು ಒಂದು ಉನ್ನತ ಗತಿ ಎನಿಸುತ್ತದೆ.

ಈ ಚಂದನ್‌ಗೂ ಜಾನಪದಕ್ಕೂ ಏನು ಸಂಭಂದ ಎಂದು ನೋಡಿದರೆ, ಕರ್ನಾಟಕ ಜಾನಪದದ ಲೆಜೆಂಡ್ ಆದ ಜೀ.ಶಂ.ಪರಮಶಿವಯ್ಯ ಅವರು ಸಂಗ್ರಹಿಸಿರುವ ಅಮೂಲ್ಯ ಕಾವ್ಯಗಳನ್ನು ಅಭ್ಯಾಸ ಮಾಡಿ ಜುಂಜಪ್ಪನ ಕಾವ್ಯದ ಬಗ್ಗೆ ಬರೆದಿರುವುದು ಅಚ್ಚರಿ ಮೂಡಿಸಿತು. ಭಾರತೀಯ ಸಂಸ್ಕೃತಿಗಳ ವ್ಯಾಪಕತೆ, ಸಾಹಿತ್ಯ, ಜಾನಪದ, ಭಾಷೆ ಹಾಗು ಅಂಚಿನ ಸಮಾಜಗಳ ಕುರಿತಂತೆ ಸೂಕ್ಷ್ಮ ಒಳನೋಟಗಳ ಆನ್ವಯಿಕ ಚಿಂತಕನಂತೆ ಬರೆದಿರುವುದು ಚಂದನ್ ಗೌಡ ಆವರ ವಿಶೇಷವಾಗಿದೆ. ಈ ಪ್ರತಿಭಾವಂತ ಲೇಖಕ ಅಂಕಣದ ಅಳತೆಗೆ ಸಿಲುಕಿದಂತಿದೆ. ವ್ಯಾಪಕವಾಗಿ, ದೀರ್ಘವಾಗಿ ಸಿದಗದಾಂತಿಯಂತೆ ಗಾಢವಾಗಿ ಚಿಂತಿಸಿ ಬರೆಯಬೇಕಾದ ಅನಿವಾರ್ಯತೆ ಇದೆ. ಅದು ಚಂದನ್ ಗೌಡ ಅವರಿಗೆ ಕಷ್ಟದ ಕೆಲಸ ಅಲ್ಲ. ಈ ಪುಸ್ತಕವನ್ನು ಪ್ರತಿಷ್ಟಿತ SIMON & SCHUSTER LODON ಪ್ರಕಾಶನದವರು ಪ್ರಕಟಿಸಿದ್ದಾರೆ. ಗೂಗಲ್ ಸರ್ಚ್ ಮಾಡಿದರೆ ಆನ್ ಲೈನ್ ಮೂಲಕ ಖರೀದಿಸಿ ಓದಬಹುದು.
ಚಂದನ್ ಗೌಡ ಅವರ ನಂ:_9480180545.