ಕನ್ನಡ ನಾಡಿನ ಜೈನವಾಸ್ತುಶಿಲ್ಪದ ಉತ್ತಮ ಮಾದರಿಗಳಲ್ಲೊಂದೆಂದು ಪರಿಗಣಿತವಾಗಿರುವ ಲಕ್ಕುಂಡಿಯ ಬ್ರಹ್ಮಜಿನಾಲಯ ದೊಡ್ಡಆವರಣ, ವಿಶಾಲವಾದ ನಿರ್ಮಿತಿಗಳಿಂದ ಗಮನಸೆಳೆಯುತ್ತದೆ. ಅತ್ತಿಮಬ್ಬೆ ಕಟ್ಟಿಸಿದ ಗುಡಿಯ ಪೂಜಾನಿರ್ವಹಣೆಗೆ ಅನೇಕ ಭಕ್ತರು ದಾನದತ್ತಿಗಳನ್ನು ನೀಡಿದ ಶಾಸನಗಳು ಲಭ್ಯವಿವೆ. ಮುಖಮಂಟಪ, ಮಹಾಮಂಟಪ, ಅಂತರಾಳ, ಗರ್ಭಗುಡಿಗಳೆಲ್ಲವನ್ನೂ ಒಳಗೊಂಡಿರುವ ಆಲಯದ ಶಿಖರಭಾಗದಲ್ಲೂ ಶುಕನಾಸಿಗೆ ಹೊಂದಿಕೊಂಡಂತೆ ಕಿರುಗುಡಿಯೊಂದಿದೆ. ಇದರಿಂದಾಗಿ ದೇವಾಲಯದ ಕಟ್ಟಡವು ಎರಡು ಅಂತಸ್ತಿನ ನಿರ್ಮಿತಿಯಂತೆ ಭಾಸವಾಗುತ್ತದೆ. ಜಿನಾಲಯದ ಮುಖಮಂಟಪವು ಇಪ್ಪತ್ತೆಂಟು ಕಂಬಗಳಿಂದ ಕೂಡಿದ್ದು ಇವೆಲ್ಲ ಕಂಬಗಳು ವಿಶೇಷ ಕೆತ್ತನೆಯಿಂದ ಆಕರ್ಷಿಸುತ್ತವೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಇಪ್ಪತ್ತನೆಯ ಕಂತು

 

ಹತ್ತನೆಯ ಶತಮಾನದ ಕಲ್ಯಾಣ ಚಾಲುಕ್ಯರ ದೊರೆ ಆಹವಮಲ್ಲ ತೈಲಪ ಹಾಗೂ ಅವನ ಮಕ್ಕಳ ಆಳ್ವಿಕೆಯ ಕಾಲದಲ್ಲಿ ಜೀವಿಸಿದ್ದ ಅತ್ತಿಮಬ್ಬೆಯ ಹೆಸರು ಕನ್ನಡನಾಡಿನ ಮಹಾನ್ ವ್ಯಕ್ತಿಗಳ ಪಟ್ಟಿಯ ಮುಂಚೂಣಿಯಲ್ಲಿ ಕಂಡುಬರುತ್ತದೆ. ರನ್ನ, ಪೊನ್ನರಂತಹ ಮಹಾಕವಿಗಳನ್ನು ಪ್ರೋತ್ಸಾಹಿಸಿ, ತನ್ನೆಲ್ಲ ಸಂಪತ್ತನ್ನು ಜೈನಧರ್ಮದ ಹಿರಿಮೆಗಾಗಿ ಮೀಸಲಿಟ್ಟು, ಅನೇಕ ಜಿನಾಲಯಗಳನ್ನು ನಿರ್ಮಿಸಿ ದಾನಚಿಂತಾಮಣಿಯೆಂಬ ಹಿರಿಮೆಗೆ ಪಾತ್ರಳಾದವಳು ಅತ್ತಿಮಬ್ಬೆ. ಸರ್ವಧರ್ಮೀಯರೂ ಆಕೆಯನ್ನು ಬಹು ಗೌರವಾದರಗಳಿಂದ ಕಾಣುತ್ತಿದ್ದರು. ಗದಗ ಸಮೀಪದ ಲಕ್ಕುಂಡಿಯಲ್ಲಿ ಅತ್ತಿಮಬ್ಬೆ ನಿರ್ಮಿಸಿದ ದೇಗುಲದ ಬ್ರಹ್ಮಜಿನನಿಗೂ ತಮ್ಮ ಬ್ರಹ್ಮನಿಗೂ ವ್ಯತ್ಯಾಸವಿಲ್ಲವೆಂದು ಊರಿನ ಬ್ರಾಹ್ಮಣಸಮುದಾಯದವರು ಆ ಗುಡಿಯನ್ನು ಬ್ರಹ್ಮಜಿನಾಲಯವೆಂದು ಕರೆದು ಗೌರವಿಸಿದುದಾಗಿ ಕ್ರಿ.ಶ. 1007ರ ಶಾಸನದಲ್ಲಿ ಉಲ್ಲೇಖವಿದೆ.


ಕನ್ನಡ ನಾಡಿನ ಜೈನವಾಸ್ತುಶಿಲ್ಪದ ಉತ್ತಮ ಮಾದರಿಗಳಲ್ಲೊಂದೆಂದು ಪರಿಗಣಿತವಾಗಿರುವ ಲಕ್ಕುಂಡಿಯ ಬ್ರಹ್ಮಜಿನಾಲಯ ದೊಡ್ಡಆವರಣ, ವಿಶಾಲವಾದ ನಿರ್ಮಿತಿಗಳಿಂದ ಗಮನಸೆಳೆಯುತ್ತದೆ. ಅತ್ತಿಮಬ್ಬೆ ಕಟ್ಟಿಸಿದ ಗುಡಿಯ ಪೂಜಾನಿರ್ವಹಣೆಗೆ ಅನೇಕ ಭಕ್ತರು ದಾನದತ್ತಿಗಳನ್ನು ನೀಡಿದ ಶಾಸನಗಳು ಲಭ್ಯವಿವೆ. ಮುಖಮಂಟಪ, ಮಹಾಮಂಟಪ, ಅಂತರಾಳ, ಗರ್ಭಗುಡಿಗಳೆಲ್ಲವನ್ನೂ ಒಳಗೊಂಡಿರುವ ಈ ಆಲಯದ ಶಿಖರಭಾಗದಲ್ಲೂ ಶುಕನಾಸಿಗೆ ಹೊಂದಿಕೊಂಡಂತೆ ಕಿರುಗುಡಿಯೊಂದಿದೆ. ಇದರಿಂದಾಗಿ ದೇವಾಲಯದ ಕಟ್ಟಡವು ಎರಡು ಅಂತಸ್ತಿನ ನಿರ್ಮಿತಿಯಂತೆ ಭಾಸವಾಗುತ್ತದೆ.

ಜಿನಾಲಯದ ಮುಖಮಂಟಪವು ಇಪ್ಪತ್ತೆಂಟು ಕಂಬಗಳಿಂದ ಕೂಡಿದ್ದು ಇವೆಲ್ಲ ಕಂಬಗಳು ವಿಶೇಷ ಕೆತ್ತನೆಯಿಂದ ಆಕರ್ಷಿಸುತ್ತವೆ. ಮಂಟಪದ ಅಂಚಿಗೆ ಸುತ್ತಲೂ ಜಗುಲಿಯ ಕಟ್ಟೆ. ಹೊರಕ್ಕೆ ಮೂರು ದಿಕ್ಕುಗಳಿಗೆ ಇಳಿಜಾರಾಗಿ ಚಾಚಿಕೊಂಡ ಸೂರು ಕಟ್ಟಡಕ್ಕೆ ವಿಶೇಷ ಸೊಬಗು ತಂದಿದೆ. ನಡುಮಂಟಪದಲ್ಲಿ ತಮ್ಮ ಹೊಳಪಿನಿಂದ ಕಣ್ಸೆಳೆಯುವ ಕಪ್ಪುಕಲ್ಲಿನ ಕಂಬಗಳು. ಅವುಗಳ ಬುಡದ ಚೌಕದಲ್ಲಿ ದೇವತಾಮೂರ್ತಿಗಳಿವೆ. ಈ ಮಂಟಪದಲ್ಲೇ ಬ್ರಹ್ಮನ ಶಿಲಾವಿಗ್ರಹವಿದೆ.

ಚತುರ್ಮುಖ ಬ್ರಹ್ಮ ಸ್ಥಾನಕ ಎಂದರೆ ನಿಂತಿರುವ ಭಂಗಿಯಲ್ಲಿರುವ ಅಪೂರ್ವ ಮೂರ್ತಿ. ಎಡಗೈಯಲ್ಲಿ ದಂಡವನ್ನೂ ಬಲಗೈಯಲ್ಲಿ ಅಭಯಹಸ್ತವನ್ನೂ ಪ್ರದರ್ಶಿಸುವ ಬ್ರಹ್ಮನ ಮೇಲಿನ ಎರಡು ಕೈಗಳು ಭಗ್ನಗೊಂಡಿವೆ. ಏಳೆಂಟು ಅಡಿಗಳಷ್ಟು ಎತ್ತರವಿರುವ ಹಸನ್ಮುಖ ಮೂರ್ತಿಯ ಎಡಬಲಗಳಲ್ಲಿ ಚಾಮರಧಾರಿಣಿಯರೂ ಪಾಣಿಪೀಠದಲ್ಲಿ ಸಿಂಹಗಳೂ ಚಿತ್ರಿತರಾಗಿದ್ದಾರೆ.

ಈ ಅಂಕಣದಲ್ಲಿರುವ ಇನ್ನೊಂದು ಆಕರ್ಷಕ ಮೂರ್ತಿ ಪದ್ಮಾವತಿ ಯಕ್ಷಿಯ ವಿಗ್ರಹ. ಚತುರ್ಭುಜಳೂ, ಹಸನ್ಮುಖಿಯೂ ಆಗಿರುವ ಈ ಪ್ರಾಚೀನಶಿಲ್ಪವು ಭಗ್ನವಾಗದೆ ಸುಸ್ಥಿತಿಯಲ್ಲಿ ಉಳಿದುಬಂದಿದೆ. ಸರ್ವಾಲಂಕೃತೆಯಾಗಿ, ಎಡಮಂಡಿಯನ್ನು ಮಡಚಿಕೊಂಡು, ಎಡಗೈಯಲ್ಲಿ ಮಾದಲಫಲವನ್ನು ಹಿಡಿದು ಸುಖಾಸೀನದಲ್ಲಿ ಕುಳಿತ ಪದ್ಮಾವತಿಯ ನಗುಮುಖದ ಶಿಲ್ಪ ಮೋಹಕವಾಗಿದೆ.

ಈ ಶಿಲ್ಪಗಳಷ್ಟೇ ಗಮನಸೆಳೆಯುವ ದ್ವಾರಬಂಧವು ಈ ಜಿನಾಲಯದ ನಿರ್ಮಿತಿಯ ವಿಶೇಷ ಅಂಶಗಳಲ್ಲೊಂದು. ದ್ವಾರಲಲಾಟದಲ್ಲಿ ಜಿನಬಿಂಬವಿದ್ದು ಅಕ್ಕಪಕ್ಕದಲ್ಲಿ ಬಳ್ಳಿಗಳೊಳಗೆ ನರ್ತಕವೃಂದವನ್ನು ಚಿತ್ರಿಸಿದೆ. ಬಾಗಿಲ ಚೌಕಟ್ಟಿನಲ್ಲಿ ಐದು ಪಟ್ಟಿಕೆಗಳಿದ್ದು ವಜ್ರಾಕೃತಿ, ಹೂಬಳ್ಳಿಗಳಲ್ಲಿ ನರ್ತಕರು, ಕುಸುರಿಕಂಬಗಳು, ಸಿಂಹಾದಿ ಪ್ರಾಣಿಗಳು ಹಾಗೂ ಕಬ್ಬಿನ ಜಲ್ಲೆಯ ಆಕೃತಿಗಳನ್ನು ಕೆತ್ತಿರುವ ರೀತಿ ಪುರಾತನಶಿಲ್ಪಕಾರರ ಅಸಾಧಾರಣಪ್ರತಿಭೆಗೆ ಸಾಕ್ಷಿಯಂತಿದೆ.

ಜಿನಾಲಯದ ಹೊರಕಟ್ಟಡ ತಳದಿಂದ ಕಳಶದವರೆಗೆ ಸುಸ್ಥಿತಿಯಲ್ಲಿದ್ದು ಕಲ್ಯಾಣ ಚಾಲುಕ್ಯಕಾಲದ ದೇವಾಲಯ ವಾಸ್ತುಶಿಲ್ಪವನ್ನು ಚೆನ್ನಾಗಿ ಪರಿಚಯಿಸುತ್ತದೆ. ನಡುಭಿತ್ತಿಯಲ್ಲಿ ಕಿರುಗೋಪುರದ ಆಕೃತಿಯುಳ್ಳ ಮಂಜರಿ, ಸ್ತಂಭಪಂಜರಗಳೂ, ಸೂರಿನ ಮೇಲಕ್ಕೆ ವಿಮಾನಶಿಖರದ ಅಂಚಿನವರೆಗೆ ವಾಸ್ತುಶಿಲ್ಪಕಾರರು ಗುರುತಿಸುವ ಕಪೋತ, ಕಂಟಕ, ವೇದಿ ಮೊದಲಾದ ಎಲ್ಲ ಸ್ತರಗಳನ್ನೂ ಇಲ್ಲಿ ಕಾಣಬಹುದು. ಸಿಂಹಮುಖಗಳಿಂದ ಚಾಚಿದ ಹೂಬಳ್ಳಿಗಳ ಆವರಣದೊಳಗೆ(ಶಾಲಾ) ಜಿನದೇವತೆಗಳನ್ನೂ, ಸೂರಿನ ಅಂಚಿನಲ್ಲಿ ಸಿಂಹ, ಆನೆ ಮೊದಲಾದ ಪ್ರಾಣಿಗಳನ್ನೂ ಚಿತ್ರಿಸಿದೆ.

ಜಿನಾಲಯದ ಪಕ್ಕದಲ್ಲಿ ಇನ್ನೊಂದು ಚಿಕ್ಕ ಗುಡಿಯಿದ್ದು ಅಲ್ಲೂ ಜಿನದೇವರ ಮೂರ್ತಿಯಿದೆ. ಈ ಗುಡಿಯ ಮುಂಭಾಗದಲ್ಲಿ ಶಿರಭಾಗವು ತುಂಡರಿಸಿದ ಪಾರ್ಶ್ವನಾಥನ ವಿಗ್ರಹವನ್ನು ಇರಿಸಿದ್ದು, ಅತ್ತಿಮಬ್ಬೆಯ ನಂತರದ ಕಾಲದಲ್ಲಿ ತೀವ್ರಗೊಂಡ ಧಾರ್ಮಿಕ ವೈಷಮ್ಯದ ಮೂಕಸಾಕ್ಷಿಯಾಗಿ ಉಳಿದುಕೊಂಡಿದೆ. ಅತ್ತಿಮಬ್ಬೆಯಂತಹ ಸಾರ್ವಕಾಲಿಕ ಶ್ರೇಷ್ಠರ ಸಾಧನೆಗೆ ಸಮಾಜದ ಪ್ರತಿಕ್ರಿಯೆಯ ರೂಪದ ಕ್ರೂರವ್ಯಂಗ್ಯವೂ ಆಗಿದೆ.