ಲಾಂಡೇಯ್ ಸುತ್ತಲಿನ ಲೋಕದ ಕುರಿತಾದ ಗಹನ ವಿಚಾರಗಳನ್ನು, ಕಟುವಾಸ್ತವಗಳನ್ನು ಹಿಡಿದಿಡುವ ಮತ್ತು ಇತರರೊಂದಿಗೆ ಹಂಚಿಕೊಳ್ಳುವ ಮಾಧ್ಯಮ. ಹಾಗಾಗಿ, ಲಾಂಡೇಯ್ ರಚನೆಗಳು ನೋವಿನಿಂದ ಕೂಡಿರಬಹುದು ಅಥವಾ ಕಠೋರ ಟೀಕೆಯಿಂದ; ಹಾಸ್ಯದಿಂದ ತುಂಬಿರಬಹುದು ಅಥವಾ ವ್ಯಂಗ್ಯದಿಂದ. ಹಾಗೆಂದು, ಲಾಂಡೇಯ್ ಕೇವಲ ಬಂಡಾಯ ಕಾವ್ಯವೆಂದೇನೂ ಅಲ್ಲ; ಶೋಕ, ಪ್ರೇಮ, ದುರಂತಗಳೂ ಅದಕ್ಕೆ ಗ್ರಾಸವಾಗುವ ವಿಷಯವಾಗಬಹುದು. ಸಹಜವೋ, ಅಪಥ್ಯವೋ; ಸರಳವೋ, ಕಠಿಣವೋ, ಅಂತೂ ನಿತ್ಯ ಅನುಭವಗಳು ತೋರಿದ ಸತ್ಯಗಳನ್ನು ಹಂಚಿಕೊಳ್ಳುವುದೇ ಅವುಗಳ ಇಂಗಿತ.
ಎಲ್ಲ ಕಾವ್ಯವೂ ಮೂಲದಲ್ಲಿ ಲಾಂಡೇಯ್ ತರವೇ ಅಲ್ಲವೇ – ಕರೆಯುವುದು, ಬೆರೆಯುವುದು ಮತ್ತು ಸಾಂಗತ್ಯವ ಸಾಧಿಸುವುದು ತಾನೇ ಎಲ್ಲ ಕಾವ್ಯದ ಧ್ಯೇಯ ಅಂತ ಹೇಳುತ್ತಾರೆ ಕಮಲಾಕರ ಕಡವೆ
ವಿಶ್ವದ ಗಮನವನ್ನು ಎರಡು ದಶಕಗಳ ನಂತರ ಮತ್ತೊಮ್ಮೆ ತನ್ನತ್ತ ಸೆಳೆದಿರುವ ತಾಲೀಬಾನ್, ಪಷ್ಟೂನ್ ಬುಡಕಟ್ಟಿನವರು ಪ್ರಾಬಲ್ಯದಲ್ಲಿರುವ ಗುಂಪು. ತಾಲೀಬಾನ್ ಶಬ್ದದೊಂದಿಗೇ ನಾವು ಕಲ್ಪಿಸಿಕೊಳ್ಳುವ ಜಗತ್ತು ಒಂದಾದರೆ, ಇದೇ ಬುಡಕಟ್ಟಿಗೆ ಸೇರಿದ ಅಫ್ಘಾನಿಸ್ತಾನ-ಪಾಕಿಸ್ತಾನ್ ಗಡಿಭಾಗದ ಮಹಿಳೆಯರು ತೋರುವ ಲೋಕ ಇನ್ನೊಂದೇ ಆಗಿದೆ. ಅಂತರರಾಷ್ಟ್ರೀಯ ಚರ್ಚೆಗಳಲ್ಲಿ ಅಫ್ಘನ್ ಮಹಿಳೆಯರನ್ನು ಅಲ್ಲಿನ ಹಿಂಸಾತ್ಮಕ ಸನ್ನಿವೇಶದ ಬಲಿಪಶುಗಳೆಂದು ನೋಡುವುದು ಸರ್ವೇಸಾಮಾನ್ಯ. ಅಫ್ಘನ್ ಹೆಣ್ಣುಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು ಖಂಡಿತವಾಗಿಯೂ ಕ್ರೂರವೇ. ಆದರೆ, ದೂರದಲ್ಲಿದ್ದು ಲೊಚಗುಟ್ಟುವ ನಮ್ಮ ವಾಚಾಳಿಚಾಳಿಯನ್ನು ತಿರಸ್ಕರಿಸುವ ಕೇಕೆಯಂತಿವೆ ಅತೀವ ಅಪಾಯದ ನಡುವೆ ಅವರು ಹಾಡುವ ಲಾಂಡೇಯ್ ಹಾಡುಗಳು.
ಅಫ್ಘನ್ ಸಂಸ್ಕೃತಿಯಲ್ಲಿ ಕಾವ್ಯಕ್ಕೆ ಗೌರವವಿತ್ತಾದರೂ, 1996ರಲ್ಲಿ ತಾಲೀಬಾನ್ ಅಧಿಕಾರಕ್ಕೆ ಬಂದನಂತರ ಸಾರ್ವಜನಿಕ ಜೀವನದಲ್ಲಿ ಸಂಗೀತ, ಸಾಹಿತ್ಯ ಅಗೋಚರವಾಗುತ್ತ ಬಂದು, ಕೇವಲ ಉಪಸಂಸ್ಕೃತಿಯಾಗಿ ಚಾಲ್ತಿಯಲ್ಲಿದೆ*. ಹಾಡುಗಳನ್ನು ಅನೈತಿಕವೆಂದು ಬಗೆಯುವ ತಾಲೀಬಾನ್, ಕಾವ್ಯವನ್ನು ಕೂಡ ಅಕ್ಷಮ್ಯ ಅಪರಾಧವಾಗಿಸಿದೆ. ಹೀಗಿರುವಾಗ, ಲಾಂಡೇಯ್ ಕಾವ್ಯಪ್ರಕಾರವಂತೂ ಅಫ್ಘನ್ ಮಹಿಳೆಯರ ಗುಪ್ತ ಹತ್ಯಾರವೆನ್ನುವಂತೆ ಅವರ ಅಭಿವ್ಯಕ್ತಿ ಸಾಧನವಾಗಿದೆ.
ಲಾಂಡೇಯ್ ಅನ್ನುವುದೊಂದು ದ್ವಿಪದಿ – ಅದರ ಮೊದಲ ಸಾಲಿನಲ್ಲಿ ಒಂಬತ್ತು ಮತ್ತು ಎರಡನೆಯ ಸಾಲಿನಲ್ಲಿ ಹದಿಮೂರು ಅಕ್ಷರಗಳು ಇರುತ್ತವೆ. ಪಷ್ಟೂನ್ ಭಾಷೆಯ ಸಾವಿರಾರು ವರುಷಗಳ ಪರಂಪರೆಯುಳ್ಳ ಈ ರಚನೆಗಳು ಸಾಮಾನ್ಯವಾಗಿ ಮಾ ಅಥವಾ ಬಾ ಅಕ್ಷರಗಳಲ್ಲಿ ಕೊನೆಯಾಗುತ್ತವೆಯಾದರೂ, ಪ್ರಾಸಬದ್ಧವಿರಬೇಕಿಲ್ಲ. ಆದರೂ, ಈ ಪುರಾತನ ಕಾವ್ಯ ಪ್ರಕಾರದಲ್ಲಿಯೂ ಈಗೀಗ ಪ್ರಯೋಗಗಳಾಗಿವೆ, ಭಿನ್ನ ಶೈಲಿಯ ಲಾಂಡೇಯ್ ಕೂಡ ಹೊಸಪೀಳಿಗೆ ಬಳಸುತ್ತಿದೆ. ಇವು ಸಾಮಾನ್ಯವಾಗಿ ಅನಾಮಧೇಯ ರಚನೆಗಳು ಮತ್ತು ಸಾಮಾಜಿಕ ಸಮಾರಂಭಗಳಲ್ಲಿ ಇವನ್ನು ಹಾಡಲಾಗುತ್ತದೆ. ಪಾರಂಪರಿಕವಾಗಿ, ಲಾಂಡೇಯ್ ಗಳನ್ನು ಗಂಡಸರು ಹಾಗೂ ಹೆಂಗಸರೂ ಬರೆಯುತ್ತಾರೆ; ಆದರೆ, ಈ ಲೇಖನದಲ್ಲಿ ಸಮಕಾಲೀನ ಅಫ್ಘನ್ ಮಹಿಳೆಯರ ಲಾಂಡೇಯ್ ಗಳ ವಿಶೇಷ ಉಪಸಂಸ್ಕೃತಿಯನ್ನು ಪರಿಚಯಿಸುವ ಪ್ರಯತ್ನವಿದೆ.
ಲಾಂಡೇಯ್ ಸುತ್ತಲಿನ ಲೋಕದ ಕುರಿತಾದ ಗಹನ ವಿಚಾರಗಳನ್ನು, ಕಟುವಾಸ್ತವಗಳನ್ನು ಹಿಡಿದಿಡುವ ಮತ್ತು ಇತರರೊಂದಿಗೆ ಹಂಚಿಕೊಳ್ಳುವ ಮಾಧ್ಯಮ. ಹಾಗಾಗಿ, ಲಾಂಡೇಯ್ ರಚನೆಗಳು ನೋವಿನಿಂದ ಕೂಡಿರಬಹುದು ಅಥವಾ ಕಠೋರ ಟೀಕೆಯಿಂದ; ಹಾಸ್ಯದಿಂದ ತುಂಬಿರಬಹುದು ಅಥವಾ ವ್ಯಂಗ್ಯದಿಂದ. ಹಾಗೆಂದು, ಲಾಂಡೇಯ್ ಕೇವಲ ಬಂಡಾಯ ಕಾವ್ಯವೆಂದೇನೂ ಅಲ್ಲ; ಶೋಕ, ಪ್ರೇಮ, ದುರಂತಗಳೂ ಅದಕ್ಕೆ ಗ್ರಾಸವಾಗುವ ವಿಷಯವಾಗಬಹುದು. ಸಹಜವೋ, ಅಪಥ್ಯವೋ; ಸರಳವೋ, ಕಠಿಣವೋ, ಅಂತೂ ನಿತ್ಯ ಅನುಭವಗಳು ತೋರಿದ ಸತ್ಯಗಳನ್ನು ಹಂಚಿಕೊಳ್ಳುವುದೇ ಅವುಗಳ ಇಂಗಿತ. ಎಲ್ಲ ಕಾವ್ಯವೂ ಮೂಲದಲ್ಲಿ ಲಾಂಡೇಯ್ ತರವೇ ಅಲ್ಲವೇ – ಕರೆಯುವುದು, ಬೆರೆಯುವುದು ಮತ್ತು ಸಾಂಗತ್ಯವ ಸಾಧಿಸುವುದು ತಾನೇ ಎಲ್ಲ ಕಾವ್ಯದ ಧ್ಯೇಯ.
ಪ್ರೇಮ, ಕಾವ್ಯ, ಯುದ್ಧ – ಅಫ್ಘನ್ನಿನ ಪಷ್ಟೂನ್ ಮಹಿಳೆಯರು ಜೀವಭಯ ಬಿಟ್ಟು ಹಾಡುವ ಪದ್ಯಗಳಿಗೆ ಸೂಕ್ತವೆನಿಸುವ ಪದಗಳು. ಗುಪ್ತಬಂಡಾಯದಂತೆ ಮನೆಮಂದಿ, ಸಮಾಜ, ಸರಕಾರಗಳ ಗಂಡುಕ್ರೋಧವನ್ನು ಎದುರುಹಾಕಿಕೊಂಡು, ಪರಂಪರಾಗತ ಕಾವ್ಯಪ್ರಕಾರದೊಳಗೆ ದಂಗೆಯ ಕಿಡಿಗಳ ಹೊತ್ತಿಸಿ, ತಮ್ಮ ನಿತ್ಯಜೀವನದಲ್ಲಿನ ಕಾಮ, ಕ್ರೋಧ, ಯುದ್ಧ, ದ್ರೋಹ, ದುರಂತ, ನೋವುಬವಣೆಗಳ ವಿಪರೀತಗಳನ್ನು ಸಿಡಿವ ಗುಂಡುಗಳಂತಹ ಇಪ್ಪತ್ತೆರಡು ಅಕ್ಷರಗಳ ಎರಡು ಸಾಲುಗಳಲ್ಲಿ ಹೇಳುವ ಲಾಂಡೇಯ್ ಗಳು ಅತ್ಯಂತ ಅಪರೂಪದ, ನಂಬಲಾಗದಷ್ಟು ಧೈರ್ಯದ, ಸಾಹಿತ್ಯಿಕ ವಿದ್ಯಮಾನ. ಛೇ! ಇದನ್ನು ಸಾಹಿತ್ಯಿಕ ವಿದ್ಯಮಾನವೆಂದು ಬಿಟ್ಟರೆ, ಅದು ಒಂದು ಬಗೆಯ ಸೀಮಿತತೆ, ಮತ್ತು ನನ್ನದೇ ಸಣ್ಣತನವಷ್ಟೇ. ಸಾಹಿತ್ಯವನ್ನು ಮೀರಿದ, ಕಾವ್ಯವನ್ನು ಮೀರಿದ, ಆದರೆ ಅಭಿವ್ಯಕ್ತಿಸುವ ಹೆಬ್ಬಯಕೆಯಿಂದಲೇ ಸಾಧ್ಯವಾಗಿರುವ ಅನನ್ಯ ಸಂಗತಿ ಇದಾಗಿದೆ.
ಪರಂಪರಾಗತ ರೂಢಿಗಳಲ್ಲಿ ಬಾಳುವ ಪಷ್ಟೂನ್ ಸಮುದಾಯದ ಮಹಿಳೆಯರಿಗೆ ತಾಲೀಬಾನ್ ಹಿಂದೆಯೂ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿರಲಿಲ್ಲ. ಈಗಲೂ ನೀಡುವ ಗ್ಯಾರಂಟಿ ಇಲ್ಲ. ಅವರ ಧ್ವನಿ ಹಾಗಾಗಿಯೇ ಅದುಮಿಡಲಾಗಿದೆ ಎಂದರೆ ವಾಸ್ತವವೇ. ಆದರೂ, ಈ ಮಹಿಳೆಯರು ಲಾಂಡೇಯ್ ಎಂಬ ಸಾವಿರಾರು ವರುಷ ಹಳೆಯ ಕಾವ್ಯಪ್ರಕಾರವನ್ನು ಈ ಅನ್ಯಾಯ-ಅತ್ಯಾಚಾರಗಳ ವಿರೋಧದಲ್ಲಿ ಬಂಡಾಯದ ಆಶಯದೊಂದಿಗೆ ಬಳಸುತ್ತಿದ್ದಾರೆ. ಸಾರ್ವಜನಿಕವಾಗಿ ದನಿ ಎತ್ತುವುದೇ ಒಂದು ಬಗೆಯ ಬಂಡಾಯವಾದರೆ, ಈ ಪಷ್ಟೂನ್ ಗಟ್ಟಿಗಾತಿಯರು ಆಯ್ದುಕೊಳ್ಳುವ ವಿಷಯದಲ್ಲಿಯೂ ಬಂಡಾಯವಿರುತ್ತದೆ.
ಯಾವೆಲ್ಲವನ್ನೂ ಮಹಿಳೆಯರು ಸಾರ್ವಜನಿಕವಾಗಿ ಅಭಿವ್ಯಕ್ತಿಸಲು ಪ್ರತಿಬಂಧವಿದೆಯೋ, ಯಾವೆಲ್ಲವನ್ನೂ ಮಹಿಳೆಯರು ಮುಚ್ಚಿಡಲಿ ಎಂಬ ಆದೇಶವಿದೆಯೋ – ಯುದ್ಧ, ಕಾಮ, ಕೌಟುಂಬಿಕ ಅನ್ಯಾಯ, ಗಂಡಂದಿರ ಗಂಡಸ್ತನ – ಅವೆಲ್ಲವನ್ನೂ ಕಟು ವ್ಯಂಗ್ಯದೊಂದಿಗೆ ಲಾಂಡೇಯ್ ಎತ್ತಿ ತೋರಿಸುತ್ತದೆ, ಒತ್ತಿ ಹೇಳುತ್ತದೆ, ಮತ್ತೆ ಮತ್ತೆ ಈ ವಿಷಯಗಳ ಬಗೆಗೆಯೇ ಹಾಡುತ್ತದೆ.
ಈ ಪುರಾತನ ಕಾವ್ಯ ಪ್ರಕಾರದಲ್ಲಿಯೂ ಈಗೀಗ ಪ್ರಯೋಗಗಳಾಗಿವೆ, ಭಿನ್ನ ಶೈಲಿಯ ಲಾಂಡೇಯ್ ಗಳನ್ನು ಕೂಡ ಹೊಸಪೀಳಿಗೆ ಬಳಸುತ್ತಿದೆ. ಇವು ಸಾಮಾನ್ಯವಾಗಿ ಅನಾಮಧೇಯ ರಚನೆಗಳು ಮತ್ತು ಸಾಮಾಜಿಕ ಸಮಾರಂಭಗಳಲ್ಲಿ ಇವನ್ನು ಹಾಡಲಾಗುತ್ತದೆ.
ನಾನು ಕರೆದಾಗ ನೀನು ಕಲ್ಲಿನಂತಿರುವೆ,
ನೀನು ಕರೆವ ದಿನ ಬಂದಾಗ ನಾನಿರುವುದಿಲ್ಲ.
ನಿನ್ನ ಕಣ್ಣುಗಳಲ್ಲ ಅವು ಜೇನುನೊಣಗಳು.
ಎಲ್ಲಿಯೂ ಸಿಗದು ನನಗವುಗಳ ಕಡಿತಕ್ಕೆ ಮದ್ದು.
ಬಾಳು ಕಳೆದಂತೆ ನನ್ನ ಶೂಲೆ ಹೆಚ್ಚುತ್ತಲಿದೆ
ಎದೆ ತುಂಬ ಆಸೆಗಳ ಹೊತ್ತು ಕಾಲವಾಗಲಿದ್ದೇನೆ ನಾನು.
ದಾಳಿಂಬೆಯ ವನದಲ್ಲಿ ಮುತ್ತನಿಡುವೆ ನಿನಗೆ.
ಜನರೆಂಬರು ಗಿಡಗಳ ನಡುವೆ ಆಡುಹೊಕ್ಕಿದೆಯೆಂದು.
ಹಾಗೆಂದು ಲಾಂಡೇಯ್ ಗಳು ಶಯ್ಯಾಗೃಹಕ್ಕೆ ಸೀಮಿತವಲ್ಲ – ಪ್ರತಿಯೊಂದು ವರ್ತಮಾನದ ಸಂಗತಿಯ ಕುರಿತಾಗಿಯೂ ಲಾಂಡೇಯ್ ಗಳಲ್ಲಿ ಹಾಡಲಾಗುತ್ತದೆ.
ಡ್ರೋನುಗಳು ಬಂದರೆ ಉತ್ತರ ಕೊಡುವರು ತಾಲೀಬಾನ ಹುಡುಗರು
ನನ್ನೂರು-ಮನೆಗಳ ನುಂಗಿದ ನಿನ್ನ ಟ್ಯಾಂಕು ಡ್ರೋನುಗಳ ದೇವರು ನಾಶಮಾಡಲಿ!
ತಾಲೀಬಾನು ಮತ್ತವರ ಯುದ್ಧಗಳ ಸಾಯಿಸಲಿ ದೇವರು
ಅಫ್ಘನ್ ಹೆಂಗಸರ ವಿಧವೆ-ವೇಶ್ಯೆಯರನ್ನಾಗಿಸಿದ್ದಾರೆ ಅವರು.
ನಿನ್ನ ಮನೆಯನ್ನ ದೇವರು ಸರ್ವನಾಶ ಮಾಡಲಿ, ಅಪ್ಪ,
ನಿನ್ನ ಮಗಳಾದ ನನ್ನ ಮುದುಕನಿಗೆ ಮಾರಿದೆಯಲ್ಲೋ.
ನಮ್ಮ ನಲ್ಮೆಯ ಅಫ್ಘನ್ನಿನ ಮೇಲೆ ಬಾಂಬುಗಳ ಮಳೆಗೈಯುವ
ನಿಮ್ಮ ವಿಮಾನಗಳು ಬಿದ್ದುಹೋಗಲಿ, ಪೈಲಟ್ ಸಾಯಲಿ
ಸೋದರಿಯರು ಸೇರಿದರೆ ಸೋದರರ ಸ್ತುತಿಸುವರು
ಸೋದರರು ಸೇರಿದಾಗ, ನಮ್ಮನ್ನು ಮಾರಿಬಿಡುವರು.
ಲಾಂಡೇಯ್ ಗಳು ವ್ಯಾಪಕವಾಗಿ ರಚಿತವಾಗುವುದು ಮತ್ತು ಮದುವೆ ಮತ್ತಿತರ ಸಮಾರಂಭಗಳಲ್ಲಿ ಹಾಡಲಾಗುವುದು ಅಫ್ಘನ್ನಿನ ಹಳ್ಳಿಗಳಲ್ಲಿ. ಯುದ್ಧ, ಸಂಘರ್ಷಗಳ ಪುನರಾವರ್ತನೆಯ ಚಕ್ರ ಅಪಾರ ಸಾವು-ನೋವು, ದುಖಃ-ದುರಂತಗಳನ್ನು ಅವರ ಮೇಲೆ ಸುರಿದಿದೆ; ಬ್ರಿಟೀಷರು, ಆಮೇಲೆ ರಶಿಯಾದವರು, ಆಮೇಲೆ ಅಮೇರಿಕದವರು ಹೀಗೆ ತಮ್ಮ ತಾಯ್ನಾಡಿನ ಮೇಲೆ ನಡೆದಿರುವ ಧಾಂದಲೆ, ಅದರಲ್ಲಿ ಅವರು ಕಳೆದುಕೊಂಡಿರುವ ಜನ, ಮನೆಮಾರು, ಆಸ್ತಿಪಾಸ್ತಿ ಲೆಕ್ಕ ತಪ್ಪಿದೆ. ತಾಲೀಬಾನುಗಳು ಇವುಗಳ ವಿರುದ್ಧ ಹೋರಾಡಲೆಂದು ಮತ್ತೆ ಇವರದ್ದೇ ಮಕ್ಕಳನ್ನು ಹೆದರಿಸಿ ಒಯ್ಯುವುದು, ಆಸ್ತಿಯ ಲೂಟಿ, ಹಿಂಸೆ-ಅತ್ಯಾಚಾರವೆಸಗುವುದು, ಮತ್ತೆ ಧಾರ್ಮಿಕ ಡೋಂಗಿತನದ ಮಾತನಾಡುವುದು – ಇವೆಲ್ಲದರ ವಿರುದ್ಧ ಈ ಲಾಂಡೇಯ್ ಗಳು ಮಹಿಳೆಯರ ಅಕ್ಷರಸಮರವಾಗಿವೆ.
ಇರಾಕ್, ಸೋಮಾಲಿಯಾ, ನೈಜೀರಿಯಾ, ಸಿರಿಯಾ, ಅಫ್ಘಾನಿಸ್ತಾನಗಳಿಂದ ವರದಿಗಾರಳಾಗಿ ಕೆಲಸ ಮಾಡಿರುವ ಅಮೇರಿಕಾದ ಎಲೀಜಾ ಗ್ರಿಸ್ವೋಲ್ಡ್ ಹಲವು ವರ್ಷಗಳ ಕಾಲ ಅಫ್ಘನ್ ಮಹಿಳೆಯರಿಂದ ಲಾಂಡೇಯ್ ಗಳನ್ನು ಸಂಕಲನ ಮಾಡಿ “ಆಯ್ ಆಮ್ ದ ಬೆಗರ್ ಆಫ್ ದ ವರ್ಲ್ಡ್” ಎಂಬ ಪಷ್ಟೂನ್ ಮಹಿಳೆಯರ ಸಮಕಾಲೀನ ಲಾಂಡೇಯ್ ಗಳ ಸಂಕಲನವನ್ನು 2014ರಲ್ಲಿ ಪ್ರಕಟಿಸಿದ್ದಾರೆ. ತಮ್ಮ ಅನೇಕ ವರುಷಗಳ ಪತ್ರಿಕೋದ್ಯಮದ ಕೆಲಸದ ನಂತರವೂ, ಅವರು ಲಾಂಡೇಯ್ ಗಳನ್ನು ಕಂಡುಕೊಂಡಾಗ ಅಫ್ಘನ್ ಮಹಿಳೆಯರ ಜಗತ್ತಿನ ಕುರಿತು ಹೊಚ್ಚಹೊಸ ದೃಷ್ಟಿ ಪಡೆದ ಅನುಭವ ಪಡೆದರಂತೆ: ಕೋಪ, ಶೋಕ, ಬಯಕೆ, ಸ್ವಯಂ-ಶಕ್ತಿಯ ಅನನ್ಯ ಹಾಗೂ ಸಂಕೀರ್ಣ ಜಗತ್ತು.
ಕನಸಲ್ಲಿ ನಾನಿದ್ದೆ ನಾಡದೊರೆ
ಎದ್ದರೆ ನಾನಾಗಿದ್ದೆ ಜಗದ ತಿರುಕ
ಗ್ರಿಸ್ವೋಲ್ಡ್ ಕೊಡುವ ಉದಾಹರಣೆಯಲ್ಲಿ ಎಂಟುವರ್ಷದ ಎಳೆವಯಸ್ಸಿನಲ್ಲಿ ಮುದುಕನೊಬ್ಬನ ಹೆಂಡತಿಯಾಗಿದ್ದ ಮಹಿಳೆಯೊಬ್ಬಳು ಹಾಡುವ ಲಾಂಡೇಯ್ ಹೀಗಿದೆ:
ಮುದುಕ ಗಂಡನ ಜೊತೆ ಪ್ರೇಮ ಮಾಡುವುದೆಂದರೆ
ಬೂಸು ಹಿಡಿದು ಸುಕ್ಕಾದ ಜೋಳದದಂಟ ಪ್ರೇಮಿಸಿದಂತೆ.
ಪಷ್ಟೂನ್ ಮಹಿಳೆಯರು ತಮ್ಮ ಹಾಡುಗಳಲ್ಲಿ ಲೈಂಗಿಕತೆ, ಪ್ರೇಮ, ಯುದ್ಧ ಮುಂತಾದ ವಿಷಯಗಳ ಬಗೆಗೆ ಹೀಗೆ ನೇರವಾಗಿ ಪ್ರಸ್ತಾಪಿಸುವುದನ್ನು, ಮತ್ತದರ ಕಡುಧಾಟಿಯನ್ನು ದಿಟ್ಟತನ ಅನ್ನುವುದೋ, ಕೆಚ್ಚು ಅನ್ನುವುದೋ, ಅಂತೂ ಲಾಂಡೇಯ್ ಶಬ್ದವೇ ಸೂಚಿಸುವಂತೆ ಇದು ವಿಷಕಕ್ಕುವ ಸಣ್ಣ ಹಾವಿನ ಹಾಗೇಯೇ. ಚುಚ್ಚಿಸಿಕೊಂಡವರು ಮುಟ್ಟಿನೋಡಿಕೊಳ್ಳುವಷ್ಟು ಜೋರಾಗಿ ಇರುತ್ತದೆ. ತಾಲೀಬಾನುಗಳ ನಿಷ್ಕರುಣೆಯ ಹಿಂಸಕ ಜಗತ್ತಿನಲ್ಲಿ ಚಾಟಿಯೇಟಿನಂತ ಲಾಂಡೇಯ್ ಬರೆದು ಹಾಡಲು ಬೇಕಾದ ಧೈರ್ಯ ಈ ಅಫ್ಘನ್ ಮಹಿಳೆಯರ ಬಳಿ ಇದ್ದೀತೆಂದು ಲೋಕ ಊಹಿಸಿರಲೇ ಇಲ್ಲ!
ಲಾಂಡೇಯ್ ರಚನೆ, ಹಾಡುವುದು ಮತ್ತು ಅದಕ್ಕೆ ಅಫ್ಘನ್ ಮಹಿಳೆಯರು ತೆರುವ ಭೀಕರ ಬೆಲೆಯ ಕುರಿತಾಗಿಯೇ ಹಲವು ಕತೆಗಳಿವೆ. ಉದಾಹರಣೆಗೆ, ರಾಜಧಾನಿ ಕಾಬೂಲಿನಲ್ಲಿ “ಮಿರ್ಮಾನ್ ಬಹೀರ್” ಎಂಬ ಸಂಸ್ಥೆ ದೂರವಾಣಿ ಮಾಧ್ಯಮದ ಮೂಲಕ ಕಾವ್ಯ ವಾಚನದ ಉಪಕ್ರಮ ಹಾಕಿಕೊಂಡಿದೆ. ದೂರದೂರದಿಂದ ಅಫ್ಘನ್ ಮಹಿಳೆಯರು ಕರೆಮಾಡಿ ಇತರ ಸಮಾನ ಆಸಕ್ತಿಯ ಮಹಿಳೆಯರೊಡನೆ ತಮ್ಮ ಲಾಂಡೇಯ್ ಜೊತೆ ಜೊತೆ ತಂತಮ್ಮ ಬಾಳುಬವಣೆಗಳ ಕತೆಯನ್ನೂ ಹಂಚಿಕೊಳ್ಳುತ್ತಾರೆ. ಇದರಲ್ಲಿ ಬಗೆಬಗೆಯ ಹಿನ್ನೆಲೆಯ, ಹಿರಿಕಿರಿಯ ಹೆಣ್ಣುಮಕ್ಕಳೂ ಸೇರಿದ್ದಾರೆ. ಲಾಂಡೇಯ್ ಗಳನ್ನು ಅನಾಮಿಕವಾಗಿಯೇ ಹಂಚಿಕೊಳ್ಳುವುದು ವಾಡಿಕೆ. ಅದು ಸ್ವರಕ್ಷಣೆಗೂ ಒಳಿತೇ.
ಸಾವಿನ ಬೆದರಿಕೆಯೂ ಬಗ್ಗಿಸಲಾಗದ ಸೆಳೆತ ಯಾಕೆ? ಲಾಂಡೇಯ್ ಗಳ ಮೂಲಕ ತಮ್ಮ ಸಿಟ್ಟು, ತಮ್ಮ ಹತಾಶೆ, ಹಂಬಲ, ಆಸೆ, ಭೀತಿ, ಬಯಕೆ, ನೋವುಬಾವುಗಳನೆಲ್ಲ ತೋಡಿಕೊಂಡು, ಲಾಂಡೇಯ್ ಮೂಲಕವೇ ತಮ್ಮ ಶೋಷಕರನ್ನು ತಿವಿಯುವ, ಅವರನ್ನು ಅಕ್ಷರಮಾಧ್ಯಮದಲ್ಲಿ ಕುಬ್ಜರಾಗಿಸುವ ಈ ಬಂಡಾಯ ಗುಣ ಪಷ್ಟೂನ್ ಮಹಿಳೆಯರ ಸ್ವಾಭಾವಿಕ ಗುಣವೇ? ಒಂದು ಬಗೆಯಲ್ಲಿ, ಫೋನಿನ ಕರೆಯ ಮೂಲಕ ಹಂಚಿಕೊಳ್ಳುತ್ತಿರುವುದು ಹಾಡುಮಾತ್ರವಲ್ಲ; ಅದೊಂದು ಕರೆ – ಅತ್ತಣಿಂದ ಆಲಿಸುತ್ತಿರುವ ಮಹಿಳೆಯರಿಗೆ ಸಲ್ಲಿಸಿದ ಕರೆ; ಮೈಲುದೂರವಿರುವ ಸಂಬಂಧಿಕರಿಗೆ ಮಾಡುವ ಕರೆ; ಅನ್ಯಪ್ರದೇಶದಲ್ಲಿರುವ ಭಿನ್ನ ಬುಡಕಟ್ಟಿನ ಮಹಿಳೆಯರಿಗೆ ಮಾಡುವ ಕರೆ; ಒಣಗುಡ್ಡ, ಮಂಜುಪರ್ವತಗಳಾಚೆ, ಕುರುಚಲುಕಾಡುಗಳಾಚೆ, ಧೂಳುಮರುಭೂಮಿಯಾಚೆ, ಪಷ್ಟೂನ್ ಬುಡಕಟ್ಟಿನ ಜನವಸತಿಯಾಚೆ, ಅಫ್ಘಾನಿಸ್ತಾನದಾಚೆ, ಇಡೀ ವಿಶ್ವದಾಚೆಗೆ ಸಲ್ಲಿಸಿದ ಕರೆ… ಆಗಿರಬಹುದು ಪಷ್ಟೂನ್ ಮಹಿಳೆಯರು ಹಾಡುವ ಈ ಲಾಂಡೇಯ್.
ಆದರೂ ಅಪಾಯ ತಪ್ಪಿದ್ದಲ್ಲ: ರಹೀಲಾ ಮುಸ್ಕಾ ಫೋನಿನಲ್ಲಿ ತನ್ನ ಲಾಂಡೇಯ್ ಓದುವಾಗ ಅವಳ ಸಹೋದರರು ಕೇಳಿಸಿಕೊಂಡರಂತೆ. ಸಿಟ್ಟಿನಲ್ಲಿ ಅವಳಿಗೆ ಹೊಡೆದುಬಡಿದು ಗಾಯಗೊಳಿಸಿದರಂತೆ. ಮುಸ್ಕಾ ಹಲವು ದಿನಗಳವರೆಗೆ ಆಸ್ಪತ್ರೆಯಲ್ಲಿದ್ದು, ವಾಪಸಾದ ಮೇಲೆ, ಮತ್ತೆ ಫೋನಿನಲ್ಲಿ ಲಾಂಡೇಯ್ ಓದುತ್ತಿರುವಾಗ ಸಿಕ್ಕಿ ಬಿದ್ದು ಮತ್ತೆ ಸಹೋದರರ ಹೊಡೆತ ತಿಂದಳಂತೆ. ಇದಾದನಂತರ, ಆಕೆ ಆತ್ಮಹತ್ಯೆಗೆ ಪ್ರಯತ್ನಿಸಿ, ಮೈಯೆಲ್ಲ ಸುಟ್ಟಗಾಯಗಳೊಂದಿಗೆ ಆಸ್ಪತ್ರೆ ಸೇರಿ, ಅಲ್ಲಿಂದಲೇ ತನ್ನ ಕೊನೆಯ ಫೋನುಕರೆ ಮಾಡಿದಳಂತೆ. ಆಸ್ಪತ್ರೆಯಿಂದ ಆಕೆ ಮತ್ತೆ ಮರಳಲಿಲ್ಲ. ಇಂಥ ಭೀಕರ ಪರಿಣಾಮದ ಭಯವೂ ಕೂಡ ಪಷ್ಟೂನ ಹೆಣ್ಣುಮಕ್ಕಳ ಬಾಯಿ ಮುಚ್ಚಿಸಿಲ್ಲವೆನ್ನುವುದು ಕೇಳಿ ಕಾವ್ಯಪ್ರೀತಿಯ ನಾವು ಸಂಭ್ರಮಪಡಬೇಕೋ, ಅವರು ಎದುರಿಸುತ್ತಿರುವ ಪರಿಸ್ಥಿತಿಗೆ ಗಾಭರಿ ಪಡಬೇಕೋ?
ಗ್ರಿಸ್ವೋಲ್ಡ್ ಹೇಳುವಂತೆ ಇದನ್ನು ಪ್ರತಿರೋಧವೆಂದು ಕರೆದರೆ ಏನೂ ಹೇಳಿದಂತಲ್ಲ. ಅಫ್ಘಾನಿಸ್ತಾನದ ಬಗೆಗೆ, ಅಫ್ಘನ್ ಮಹಿಳೆಯರ ಬಗೆಗೆ ಬೇರೆ ಯಾವ ಮೂಲದಿಂದಲೂ ಸಿಗಲಾರದ ಚಿತ್ರಣವನ್ನು ಲಾಂಡೇಯ್ ಒದಗಿಸುತ್ತದೆ. ತಮ್ಮ ಹಾಡುಗಳ ಮೂಲಕ ಪಷ್ಟೂನ್ ಹೆಣ್ಣುಮಕ್ಕಳು ತಮ್ಮ ಸ್ತ್ರೀಶಕ್ತಿಯನ್ನು ಬಳಸಿ ಗಂಡಸರಲ್ಲಿ ನಾಚಿಕೆಯುಂಟಾಗಿಸಲು ಪ್ರಯತ್ನಿಸುತ್ತಿದ್ದಾರೆ. ಅಂತಹ ನಾಚಿಕೆಯಿಂದಲಾದರೂ ಅಫ್ಘಾನಿಸ್ತಾನದಲ್ಲಿ ನ್ಯಾಯ, ಶಾಂತಿ, ಸ್ಥಿರತೆ ಸ್ಥಾಪಿಸುವ ಸಹ್ಯ ಪ್ರಭುತ್ವ ಮೂಡಿಬರಲಿ.
*****
*ಓದುಗರಲ್ಲಿ ವಿನಂತಿ: ಈ ಲೇಖನದ ಬಹುತೇಕ ವಾಕ್ಯಗಳು ‘ಹೀಗಿದೆ’, ‘ಹಾಗಿದೆ’ ಎನ್ನುತ್ತಿವೆಯಾದರೂ, ಇವೆಲ್ಲವೂ “ಹೀಗಿದೆಯಂತೆ”, “ಹಾಗಿದೆಯಂತೆ” ಆಗಬೇಕಿದೆ – ನಾನು ಕೇಳಿ ತಿಳಿದಿರುವ ವಿಚಾರಗಳೇ, ವಿನಃ ನೋಡಿರುವುದಲ್ಲ, ಅನುಭವಿಸಿರುವುದಲ್ಲ. ಈ “ಅಂತೆ” ಪ್ರಯೋಗಗಳು ಓದಲು ತೊಡಕು ಎನಿಸಿ ಬಿಟ್ಟಿದ್ದೇನೆ.
ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆಯುವ ಕಮಲಾಕರ ಕಡವೆ ಅನುವಾದಕರೂ ಹೌದು.
ಚೂರುಪಾರು ರೇಶಿಮೆ (ಅಭಿನವ, 2006, ಪುತಿನ ಪ್ರಶಸ್ತಿ), ಮುಗಿಯದ ಮಧ್ಯಾಹ್ನ (ಅಕ್ಷರ, 2010). ಮತ್ತು, “ಜಗದ ಜತೆ ಮಾತುಕತೆ” (ಅಕ್ಷರ, 2017) ಇವರ ಪ್ರಕಟಿತ ಕವನ ಸಂಕಲನಗಳು.
ಮರಾಠಿ ದಲಿತ ಕಾವ್ಯದ ರೂವಾರಿ ಮತ್ತು ದಲಿತ ಪ್ಯಾಂಥರ್ಸ್ ಜನಕ ನಾಮದೇವ್ ಧಸಾಲ್ ಅವರ ಕವನಗಳನ್ನು ಅನುವಾದಿಸಿ “ನಾಮದೇವ್ ಧಸಾಲ್ ವಾಚಿಕೆ” ಪ್ರಕಟಿಸಿದ್ದಾರೆ
ಅಬ್ಬಾ!! ಗೊತ್ತಿರದ ಲೋಕವಿದು.. ಏನೇ ಆಗಲಿ ಸಶಕ್ತವಾಗಿ ಅಭಿವ್ಯಕ್ತ ಗೊಳ್ಳುವ ಲಾಂಡೆಯ್ ಪದ್ಯಗಳಿಗೆ ಒಂದು ಹ್ಯಾಟ್ ಆಫ್