ಕೂತಿದ್ದ ವಿಮಾನವು ನಿಧಾನವಾಗಿ Aotearoa ಸೌತ್ ಐಲ್ಯಾಂಡ್ ಅಂಚನ್ನು ಸಮೀಪಿಸಿದಾಗ ಎರಡು ಸೀಟ್ ಆಚೆ ಕೂತಿದ್ದ ಹುಡುಗ ‘ಕ್ಯಾನ್ ಯು ಸೀ ದ ಮೌಂಟೆನ್ಸ್?’ ಅಂತ ಕೇಳಿದ. ಕಿಟಕಿಯಿಂದ ಹಿಮಪರ್ವತಗಳನ್ನು ನೋಡುತ್ತಾ ಮೈಮರೆತಿದ್ದ ನನಗೆ ಅವನು ತನ್ನ ಮೊಬೈಲ್ ಫೋನ್ ಕೊಟ್ಟು ‘ಪ್ಲೀಸ್, ವಿಡಿಯೋ ಮಾಡಿ’ ಎಂದಾಗ ಅವನ ಫೋನನ್ನು ಕಿಟಕಿಯ ಮೇಲೆ ಹಿಡಿದು, ನಾನು ಪುನಃ ಪರ್ವತಗಳಲ್ಲಿ ಕಳೆದುಹೋದೆ. ನನ್ನ ಫೋನಿನಲ್ಲಿ ವಿಡಿಯೋ ಹಿಡಿಯುವ ಆಲೋಚನೆ ಕೂಡ ಬರಲಿಲ್ಲ. ಅದನ್ನು ನೆನಪಿಸಿಕೊಂಡರೆ ಯಾಕೋ ಈಗ ನನ್ನಮ್ಮನ ಹಿಮಾಲಯ ಪ್ರವಾಸಗಳ ಡೈರಿ ಜ್ಞಾಪಕಕ್ಕೆ ಬರುತ್ತಿದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಪ್ರಿಯ ಓದುಗರೆ,
ಏನೆಲ್ಲಾ ಆಯ್ತು ಈ ೨೦೨೪ರಲ್ಲಿ! ಕ್ರಿಸ್ಮಸ್ ಹಬ್ಬದ ರಜಾದಿನಗಳಲ್ಲಿ ಎಲ್ಲರೂ ೨೦೨೪-ಹೈಲೈಟ್ಸ್ ಮೆಲುಕು ಹಾಕುತ್ತಿದ್ದಾರೆ. ವರ್ಷದ ಕಡೆಗಳಿಗೆಗಳು ಬೆರಳಸಂದಿಯಲ್ಲಿ ಜಾರಿಹೋಗುತ್ತಿವೆ. ಹೊಸ್ತಿಲಲ್ಲಿ ಕಾದಿರುವ, ಬಾಗಿಲೊಳು ಬರಲು ಕಾತರಿಸುತ್ತಿರುವ ಹೊಸವರ್ಷ ತನ್ನ ಬೆನ್ನ ಮೇಲೆ ಕನಸುಗಳ ದೊಡ್ಡ ಚೀಲವನ್ನು ಹೊತ್ತಿದೆ. ಆಡದೇ ಇರುವ ಮಾತುಗಳಲ್ಲಿ ಅದೇನೊ ಹೇಳಬರದ ಅನಿರೀಕ್ಷಿತಗಳನ್ನು ಅಡಗಿಸಿದೆ. ಇನ್ನೇನು ಮೂರು ದಿನಗಳ ನಂತರ ಬರುವುದು ೨೦೨೫, ಕಾಲು ಶತಮಾನದ ಮೈಲಿಗಲ್ಲು. ಅದಾಗಲೇ ಸಿಲ್ವರ್ ಜುಬಿಲಿ ಸಂಭ್ರಮ ಶುರುವಾಯ್ತೆ? ಹಾಗೆಂದು ಇಪ್ಪತ್ತನಾಲ್ಕರ ಛಾಪು ಕಡಿಮೆಯಾಯ್ತೆ? ಬೆರಳಲ್ಲಿ ಬಿಳಿ ಚಾಕ್ ಪೀಸ್ ಹಿಡಿದು ಕ್ಯಾಲೆಂಡರ್ ಲೆಕ್ಕಕ್ಕೆ ಸಿಗದ ನೋವು-ನಲಿವು, ಏಳು-ಬೀಳುಗಳನ್ನು ಗೋಡೆ ಮೇಲೆ ಹೇಗೆ ಬರೆಯುವುದು?
ನನ್ನ ಮಟ್ಟಿಗೆ ಹೇಳಿಕೊಳ್ಳುವುದಾದರೆ ನನಗೆ ಇಪ್ಪತ್ತನಾಲ್ಕು ಸಿಲ್ವರ್ ಜುಬಿಲಿ ಆಗಿದೆ. ಇಷ್ಟೆಲ್ಲಾ ವರ್ಷಗಳಿಂದ ನಾನು ಕ್ವೀನ್ಸ್ಲ್ಯಾಂಡ್ ರಾಜ್ಯದಲ್ಲೇ ಇದ್ದರೂವೆ ಅಂತೂ ಕಡೆಗೂ ನಮ್ಮ ರಾಣಿರಾಜ್ಯದ ಮುಕುಟಮಣಿಯಾದ ಗ್ರೇಟ್ ಬ್ಯಾರಿಯರ್ ರೀಫ್ ನೋಡುವಂತಾಯ್ತು. ವಿಮಾನ-ದೋಣಿ ಹತ್ತಿ ಬಹುದೂರದ ರೀಫ್ ಒಡಲಾಳಕ್ಕೆ ಹೋಗದಿದ್ದರೂ ಅದರ ದಕ್ಷಿಣ ಭಾಗದಲ್ಲಿರುವ ಲೇಡಿ ಮಸ್ಗ್ರೇವ್ (Lady Musgrave) ದ್ವೀಪಕ್ಕೆ ಹೋಗಿ ಸಮುದ್ರದ ಒಳಹೊಕ್ಕು ಈಜಾಡಿ ನೀರೊಳಗಿನ ಅದ್ಭುತರಮ್ಯ ಲೋಕವನ್ನು ನೋಡಿದ್ದು ನನ್ನಮಟ್ಟಿಗೆ ೨೦೨೪ರ ಮೈಲಿಗಲ್ಲು. ನಿಜವಾಗಿಯೂ ಕಡಲಾಮೆಗಳು, ರೀಫ್ ಶಾರ್ಕ್, ಹವಳ ಗುಡ್ಡೆಗಳು, ಅಸಂಖ್ಯಾತ ಸಮುದ್ರಜೀವಿಗಳ ವೈಚಿತ್ರ್ಯಗಳನ್ನು ಮುಖಾಮುಖಿಯಾಗಿ ನೋಡುವಾಗ ‘ನಾನು’ ಎಂಬ ಮನುಷ್ಯಪ್ರಜ್ಞೆ ಮರೆತುಹೋಗುತ್ತದೆ. ರಂಗುರಂಗಿನ, ಚಿಕ್ಕ-ಪುಟ್ಟ-ದೊಡ್ಡ ಗಾತ್ರದ ಮೀನುಜಾತಿಗಳನ್ನು, ray ವಿಧಗಳನ್ನು, ಸರಕ್ಕನೆ ಸುಳಿಯುವ ರೀಫ್ ಶಾರ್ಕ್, ನಿಧಾನವಾಗಿ ಕಣ್ಣು ಪಿಳುಕಿಸುತ್ತಾ ಹೋಗಲೋ ಬೇಡವೋ ಎನ್ನುತ್ತಾ ಸರಿಯುವ ಕಡಲಾಮೆಗಳು, ಹವಳಗುಡ್ಡೆಯ ಮೇಲೆ ಪವಡಿಸಿದ್ದ ಅಕ್ಟೊಪಸ್ ನಮ್ಮನ್ನು ನೋಡಿ ಸಿಡುಕುತ್ತಾ ಅಲ್ಲೆಲ್ಲೊ ಹೋಗಿ ಅಡಗುವುದು. ಮೇಲಿರುವ ಮನುಷ್ಯಲೋಕದ ಬೇಕಿಲ್ಲದ ಜಂಜಾಟಗಳನ್ನೆಲ್ಲ ಬಿಟ್ಟು, ಎಲ್ಲವನ್ನೂ ಮರೆತು ಈ ಸಾಗರಲೋಕದಲ್ಲೇ ತೇಲಾಡುತ್ತಾ ಇದ್ದುಬಿಡೋಣ ಅಂದಿತ್ತು ಮನಸ್ಸು. ಅದು ಹೇಗೆ ಕನಸುಗಳನ್ನು ಕಾಣದೇ ನಾವು ಮನುಷ್ಯರಾಗಲು ಸಾಧ್ಯ!

(ಫೋಟೋ ಹಕ್ಕು: ಸೂರ್ಯ ಶರ್ಮ-ಬ್ರೈಮರ್)
ಇಪ್ಪತ್ತನಾಲ್ಕರಲ್ಲಿ ಮತ್ತೊಂದು ಸುಂದರಸ್ವಪ್ನ ಬಿತ್ತು. ಇದು ಅನಿರೀಕ್ಷಿತವಾದದ್ದು. ಅದರ ಹೆಸರು Aotearoa/New Zealand. ಕೂತಿದ್ದ ವಿಮಾನವು ನಿಧಾನವಾಗಿ Aotearoa ಸೌತ್ ಐಲ್ಯಾಂಡ್ ಅಂಚನ್ನು ಸಮೀಪಿಸಿದಾಗ ಎರಡು ಸೀಟ್ ಆಚೆ ಕೂತಿದ್ದ ಹುಡುಗ ‘ಕ್ಯಾನ್ ಯು ಸೀ ದ ಮೌಂಟೆನ್ಸ್?’ ಅಂತ ಕೇಳಿದ. ಕಿಟಕಿಯಿಂದ ಹಿಮಪರ್ವತಗಳನ್ನು ನೋಡುತ್ತಾ ಮೈಮರೆತಿದ್ದ ನನಗೆ ಅವನು ತನ್ನ ಮೊಬೈಲ್ ಫೋನ್ ಕೊಟ್ಟು ‘ಪ್ಲೀಸ್, ವಿಡಿಯೋ ಮಾಡಿ’ ಎಂದಾಗ ಅವನ ಫೋನನ್ನು ಕಿಟಕಿಯ ಮೇಲೆ ಹಿಡಿದು, ನಾನು ಪುನಃ ಪರ್ವತಗಳಲ್ಲಿ ಕಳೆದುಹೋದೆ. ನನ್ನ ಫೋನಿನಲ್ಲಿ ವಿಡಿಯೋ ಹಿಡಿಯುವ ಆಲೋಚನೆ ಕೂಡ ಬರಲಿಲ್ಲ. ಅದನ್ನು ನೆನಪಿಸಿಕೊಂಡರೆ ಯಾಕೋ ಈಗ ನನ್ನಮ್ಮನ ಹಿಮಾಲಯ ಪ್ರವಾಸಗಳ ಡೈರಿ ಜ್ಞಾಪಕಕ್ಕೆ ಬರುತ್ತಿದೆ. ತಮ್ಮ ಅಮರ್ ನಾಥ್ ಪ್ರವಾಸ ಕಥಾನಕದಲ್ಲಿ ಹಿಮಾಚ್ಚಾದಿತ ಶಿಖರಗಳನ್ನು ವರ್ಣಿಸುತ್ತಾ ಅಮ್ಮ ಒಂದುಕಡೆ ಹೀಗೆ ಬರೆದಿದ್ದಾರೆ – ‘ವಿನೂ, ಈ ಮನಮೋಹಕ ವರ್ಣಿಸಲಸಾಧ್ಯ. ಸೌಂದರ್ಯವನ್ನು ನನ್ನ ಕಣ್ಣುಗಳ ಕ್ಯಾಮೆರಾದಿಂದ ಹಿಡಿದಿಟ್ಟುಕೊಂಡು ಮನಸ್ಸಿನ ಪುಟಗಳಲ್ಲಿ ದಾಖಲಿಸಿದೆ. ಫೋಟೋಗ್ರಫಿ ಹುಚ್ಚಿರುವ ನೀನು ಈ ದೃಶ್ಯಗಳನ್ನು ನೋಡಿದ್ದರೆ ಅದೆಷ್ಟು ಫೋಟೋ ಹಿಡಿಯುತ್ತಿದ್ದೆಯೋ.’ Aotearoa ಹಿಮಪರ್ವತಗಳನ್ನು ನೋಡುತ್ತಿದ್ದಾಗ ಅಮ್ಮನ ರೀತಿ ನಾನೂ ಕೂಡ ಕಣ್ಣುಗಳಲ್ಲಿ ಪ್ರಕೃತಿಯ ಸೊಬಗಿನ ರಸಾಸ್ವಾದನೆ ಮಾಡಿದೆ. ನಿಜವಾದ ಕ್ಯಾಮೆರಾ ಸೆಟ್ ಮನೆಯಲ್ಲಿತ್ತು. ಮೊಬೈಲ್ ಫೋನ್ ಕ್ಯಾಮೆರಾ ಸೀಟ್ ಕೆಳಗಿನ ಬ್ಯಾಗಿನಲ್ಲಿತ್ತು.
ಆಗಲೇ ಹೇಳಿದೆನಲ್ಲಾ, ಜೀವನದಲ್ಲಿ ಅನಿರೀಕ್ಷಿತಗಳು ಇದ್ದಾಗ ಬಂದಾಗ ಅವು ನಾವು ಜೀವಂತ ಮನುಷ್ಯರು, ಯಂತ್ರಗಳಲ್ಲ ಅನ್ನೋದನ್ನ ನೆನಪಿಸುತ್ತವೆ. ನನ್ನ ಜೀವನದಲ್ಲಿ ಅಂದುಕೊಳ್ಳದ ರೀತಿಯಲ್ಲಿ ಇಪ್ಪತ್ತನಾಲ್ಕು ಮತ್ತೆ ವಿಶೇಷವಾಯ್ತು. ವರ್ಷವು ಅಂತ್ಯವಾಗುತ್ತಿರುವ ಸಮಯದ ಒಂದು ಮುಸ್ಸಂಜೆಯಲ್ಲಿ ನಾವು ಬ್ರಿಸ್ಬೇನ್ ನಗರದಲ್ಲಿರುವ ಎಂಭತ್ತು ಮೀಟರ್ ಎತ್ತರದ Story Bridge ಹತ್ತಿದೆವು. ಒಟ್ಟು ೧೦೦೮ ಮೆಟ್ಟಿಲುಗಳು. ಸಿಡ್ನಿ ನಗರದಲ್ಲಿರುವ ಹಾರ್ಬರ್ ಬ್ರಿಡ್ಜ್ ಎತ್ತರ ೧೫೦ ಮೀಟರ್. ಒಮ್ಮೆ ಆಗ ನಾನಿದ್ದ ವಿಶ್ವವಿದ್ಯಾಲಯಕ್ಕೆ ಅಕಡೆಮಿಕ್ ಅತಿಥಿಯಾಗಿ ಕೆನಡಾದಿಂದ ಬಂದಿದ್ದ ಒಬ್ಬರು ಬ್ರಿಸ್ಬೇನ್ ಚಿಕ್ಕ, ಸುಂದರ ನಗರವೆಂದು ವರ್ಣಿಸಿದ್ದರು. ಸಿಡ್ನಿ ನಗರ ಗಾತ್ರಕ್ಕೆ ಹೋಲಿಸಿದರೆ ಅದು ನಿಜವೇ. ಅಂತೆಯೇ Story Bridge ಕೂಡ. ಗಾತ್ರ, ಹೋಲಿಕೆ ಏನೇ ಇರಲಿ, ಇಷ್ಟೆಲ್ಲಾ ವರ್ಷಗಳ ಬಳಿಕ ನಮ್ಮ ನಗರದಲ್ಲೇ ಇರುವ ಈ ಪ್ರಮುಖ ಪ್ರವಾಸೀ ಆಕರ್ಷಣೆಯನ್ನು ನಾವು ಆನಂದಿಸಿದೆವು. ಕಡುಬೇಸಿಗೆಯ ಬಿಸಿಲಿನಲ್ಲಿ ಬ್ರಿಡ್ಜ್ ಹತ್ತುವುದನ್ನು ಆರಂಭಿಸಿ, ಅದರ ನೆತ್ತಿ ತಲುಪಿದಾಗ ಕತ್ತಲಾಗುತ್ತಿತ್ತು. ಸುತ್ತಲೂ ನಗರಕೇಂದ್ರದ ಎತ್ತರದ ಕಟ್ಟಡಗಳು, ಹಬ್ಬಿರುವ ಬಡಾವಣೆಗಳು, ಕೆಳಗಡೆ ಹಾವಿನಂತೆ ಸುತ್ತಿ ಹರಿಯುತ್ತಿರುವ Maiwar ನದಿ. ಅದೋ ಆಗಸದಲ್ಲಿ ಸೂರ್ಯಾಸ್ತಮಾನವಾಗುತ್ತಿದೆ, ಎಲ್ಲೆಲ್ಲೂ ಕೆಂಪಿನೋಕುಳಿ. ಕಣ್ಣುಗಳಿಂದ ಎಲ್ಲವನ್ನೂ ಹೀರಿಕೊಂಡು ಮನಸ್ಸೆಂಬ ಪುಟಗಳಲ್ಲಿ ಬರೆದುಕೊಂಡೆ, ಫೋಟೋ ತೆಗೆದವನು ನಮ್ಮ ಗೈಡ್.
ನನ್ನನ್ನು ಪಕ್ಕಕ್ಕಿಟ್ಟು ಈಗ ಆಸ್ಟ್ರೇಲಿಯಾ ವಿದ್ಯಮಾನಗಳಿಗೆ ಬರೋಣಂತೆ. ಬ್ರಿಸ್ಬೇನ್ ಮಳೆಯಿಂದ ತತ್ತರಿಸಿದ ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ಮ್ಯಾಚ್ ಮೆಲ್ಬೋರ್ನ್ ನಗರದಲ್ಲಿ Boxing Day ಬೆಳಗ್ಗೆ ಆರಂಭವಾದಾಗ ಒಳ್ಳೆ ಬಿಸಿಲು. ಹೊಸ ಸೂರ್ಯ ಉದಿಸಿದ್ದ. ಬಲಗೈ ಬ್ಯಾಟ್ಸ್ಮನ್ ಸ್ಯಾಮ್ ಕೊನ್ಸ್ಟಾಸ್ ಕ್ರೀಡಾಂಗಣಕ್ಕೆ ಬಂದು ಬ್ಯಾಟಿಂಗ್ ಆರಂಭಿಸಿದಾಗ ಅವನು ತರುವ ಕೋಲಾಹಲದ ಅಂದಾಜು ಯಾರಿಗೂ ಇರಲಿಲ್ಲ. ಸಿಡ್ನಿ ಥಂಡರ್ ಲೀಗ್ ತಂಡಕ್ಕೆ ಆಡುವ ಈ ಹತ್ತೊಂಭತ್ತು ವರ್ಷದ ಪೋರ ತನ್ನತ್ತ ಬಂದ ಚೆಂಡೆಸೆತಗಳನ್ನು ಬಾರಿಸಿ ಬೀಸಿ ಹೊಡೆದ. ಅವನ ಈ ಹದಿವಯಸ್ಸಿನ ‘ಐ ಡೋಂಟ್ ಕೇರ್’ ಮನೋಭಾವಕ್ಕೆ ಸ್ಪಂದಿಸಿ ಅವನ ಬ್ಯಾಟ್ ನಲಿದಾಡಿತ್ತು. ಅವನ ‘reverse lapping’ ಈಗ ಆಸ್ಟ್ರೇಲಿಯಾದಲ್ಲಿ ಮನೆಮಾತಾಗಿದೆ. ಹದಿಹರೆಯದವರಿಗೆ ಈ ‘ಥಂಡರ್’ ನ ‘ಫಿಯರ್ ನಾಟ್, ಜಸ್ಟ್ ಗೋ ಫಾರ್ ಇಟ್’ ಅನ್ನೋ ಸ್ಟೈಲ್ ಬಹಳ ಹಿಡಿಸಿಬಿಟ್ಟಿದೆ. ಅದಕ್ಕೆ ಇಂಬು ಕೊಟ್ಟಿದ್ದು ಭಾರತದ ಆಟಗಾರ ವಿರಾಟ್ ಕೊಹ್ಲಿ ನಡತೆ. ಕೊಹ್ಲಿ ಉದ್ದೇಶಪೂರ್ವಕವಾಗಿ ಸ್ಯಾಮ್ ಕೊನ್ಸ್ಟಾಸ್ ಹತ್ತಿರಕ್ಕೆ ಹೋಗಿ ಅವನ ಭುಜಕ್ಕೆ ಢಿಕ್ಕಿ ಹೊಡೆಯದೇ ಹೋಗಿದ್ದರೆ ಕೊನ್ಸ್ಟಾಸ್ ಇಷ್ಟರಮಟ್ಟಿಗೆ ‘ಕೂಲ್ ಕಿಡ್’ ಎಂಬ ಹೆಸರಿಗೆ ಪಾತ್ರನಾಗುತ್ತಿರಲಿಲ್ಲ. ಕೊಹ್ಲಿಯ ನಡೆ ಅವರಿಗೆ ಒಳ್ಳೆಹೆಸರಿಗೆ ಚ್ಯುತಿ ತಂದಿದೆ. ಭುಜ-ಡಿಕ್ಕಿ ಪ್ರಸಂಗಕ್ಕೆ ಕೊನ್ಸ್ಟಾಸ್ ಕೊಟ್ಟ, ‘ಅದು ಕ್ರಿಕೆಟ್ excitement’, ಪ್ರತಿಕ್ರಿಯೆ ಪ್ರಸಿದ್ಧಿಯಾಗಿದೆ.
ಈ ವರ್ಷ ಬಹಳ ಚರ್ಚೆಯಾಗಿದ್ದು AI ಪ್ರಭಾವಳಿ. ಎಲ್ಲಾ ಕಡೆಯೂ ಕೃತಕ ಬುದ್ಧಿಮತ್ತೆ (AI) ಗೋಚರಿಸಿ ಹಲೋ ಹೇಳಿದಾಗ ಹಲೋ ನಂತರ AI ಏನು ಮಾಡುತ್ತದೆ ಎಂದು ತಲೆಕೆರೆದುಕೊಳ್ಳುವಂತಾಗಿತ್ತು. ಪ್ರಪಂಚದಲ್ಲೆಲ್ಲೊ ಇದ್ದ AI ಜನಕರು ದೇವರಾಣೆ, ನಮಗೆ AI ನಿಂದ ತೊಂದರೆಯಾಗಬಹುದು ಅನ್ನೋದರ ಅಂದಾಜೇ ಇರಲಿಲ್ಲ, ಎಂದು ಹೇಳಿ ಕೈ ತೊಳೆದುಕೊಂಡು ಸುಮ್ಮನಾದರು. ಖಾಸಗಿ ಕಂಪನಿಗಳಿಂದ ಹಿಡಿದು ವಿಶ್ವವಿದ್ಯಾಲಯಗಳು, ಶಾಲೆಗಳು ಕೂಡ ತಮ್ಮತಮ್ಮ AI policy ಪ್ರಕಟಿಸುವಂತಾಯ್ತು. ನಮ್ಮ ವಿದ್ಯಾರ್ಥಿಗಳು ಅವರ assessment ಕೆಲಸದಲ್ಲಿ ಎಷ್ಟು ಪಾಲು AI ಬಳಕೆ ಮಾಡಿದ್ದಾರೆ ಮತ್ತು ಹೇಗೆ ಎನ್ನುವುದನ್ನು ಅವರೂ ಕೂಡ ಸಾಬೀತುಪಡಿಸುವಂತಾಯ್ತು. ಇವನ್ನೆಲ್ಲ ಸಂಭಾಳಿಸುವುದರಲ್ಲಿ ಒಂದಷ್ಟು ಬೆವರಿಳಿದಿದೆ.
ಆಸ್ಟ್ರೇಲಿಯಾದಿಂದ ಅದರ ನೆರೆಹೊರೆಗೆ ಹಾರಿದರೆ ಪ್ಯಾಲೆಸ್ಟೈನ್ ವಿಷಯದಲ್ಲೂ ಬೆವರಿಳಿಯುತ್ತಿದೆ. ಸುಲಭವಾಗಿ ಕೈತೊಳೆದುಕೊಂಡು ನಡೆದುಬಿಡಬಹುದು ಎಂದುಕೊಂಡ ಅಮೆರಿಕ, ಬ್ರಿಟನ್, ಯುರೋಪಿಯನ್ ರಾಷ್ಟ್ರಗಳು ಪೆದ್ದರಾದರು. ಇಸ್ರೇಲ್ ಇವರ ಬೆಂಬಲದಿಂದ ಬೀಗುತ್ತಾ ಯದ್ವಾತದ್ವಾ ಕಲಹಕ್ಕಿಳಿದು ಪ್ಯಾಲೆಸ್ಟೈನ್ ನಾಗರಿಕರ ನರಬಲಿ ತೆಗೆದುಕೊಳ್ಳೋದ ನೋಡಿ ಗಾಬರಿಯಾದವು, ಅವೇ ವಿಶ್ವಮಾದರಿ ಬಲಿಷ್ಠ ದೇಶಗಳು. ಅಯ್ಯೋ, ಬೇಡಬೇಡ ಈ ಪಾಟಿ ಸಾವುನೋವು ಎಂದು ಅವರೆಲ್ಲಾ ಒಕ್ಕೊರಲಿನಿಂದ ಶಾಂತಿ ಒಪ್ಪಂದದ ಮಂತ್ರ ಜಪಿಸಿದರು. ಕಲಹ ಮುಂದುವರೆದಿದೆ. ಬಲಾಢ್ಯ ದೇಶಗಳ ನಾಯಕರಲ್ಲಿ ಪ್ಯಾಲೆಸ್ಟೈನ್ ಕುಟುಂಬಗಳಿಗೆ, ಸತ್ತವರಿಗೆ ಸಾಂತ್ವನ ಹೇಳುವ ಧೈರ್ಯವೇ ಇಲ್ಲ. ಹೇಳಿದರೂ ಅದು ಕ್ಷೀಣವಾಗಿದೆ. ಎಲ್ಲರಿಗೂ ಕೇಳುವಂತೆ ‘ಕಲಹ ನಿಲ್ಲಿಸಿ, ಹಿಂಸಾಚಾರ ಬೇಡ, ನಾಗರಿಕರ ಮೇಲೆ ಬಾಂಬ್ ಹಾಕುವುದು ಅಪರಾಧ’ ಎಂದು ಹೇಳುತ್ತಿರುವವರು ಬೆರಳೆಣಿಕೆ ಮಂದಿ.
ಇದರ ಪರಿಣಾಮ ನಮ್ಮ ಆಸ್ಟ್ರೇಲಿಯಾ ಕೇಂದ್ರಸರಕಾರದ ಮೇಲೂ ಆಗಿದೆ. ಎಷ್ಟೋಕಾಲದಿಂದ ಕಾಯುತ್ತಾ ಎದುರು ನೋಡುತ್ತಿರುವ ಬದಲಾವಣೆಗಳನ್ನು ತರುವಂಥಾ ಒಂದು ಭದ್ರ ಸರಕಾರ ಕಡೆಗೂ ಬಂತು ಎಂದುಕೊಂಡಿದ್ದರೆ ಯಾಕೊ ಕೇಂದ್ರದಲ್ಲಿರುವ ಲೇಬರ್ ಸರಕಾರ ಅಲ್ಲಾಡುತ್ತಿದೆ. ಆಂತರಿಕ ವಿಷಯಗಳ ಜೊತೆಗೆ ಪ್ಯಾಲೆಸ್ಟೈನ್-ಇಸ್ರೇಲ್ ನಿಲುವು ತಲೆನೋವು ತಂದಿದೆ. ಈ ವಿಷಯದಲ್ಲಿ ಜೋರುಜೋರಾಗಿ ಹೇಳಿಕೆಗಳನ್ನು ಕೊಡುತ್ತಿದ್ದ ಅಮೆರಿಕೆಯಲ್ಲಿ ಈಗ ಟ್ರಂಪ್ ಗಾಳಿ ಬೀಸಿ ಎಲ್ಲವೂ, ಎಲ್ಲರೂ ದಿಕ್ಕಾಪಾಲಾಗಿದ್ದಾರೆ. ಇನ್ನು ಅತ್ತಕಡೆ ಬ್ರಿಟನ್ನಿನಲ್ಲಿ ಪ್ರಧಾನಮಂತ್ರಿಯಾಗಿದ್ದ ಭಾರತೀಯ ಮೂಲದ ರಿಷಿ ಸುನಾಕ್ ವಿದಾಯ ಹೇಳಿ ಜುಲೈನಲ್ಲಿ ಕೀರ್ ಸ್ಟಾರ್ಮೆರ್ ಹೊಸ ಪ್ರಧಾನಿಯಾದರು. ಇವರು ತಮ್ಮ ದೇಶದ ಆಂತರಿಕ ಸಮಸ್ಯೆಗಳನ್ನು ನಿವಾರಿಸಲು ಹೆಣಗಾಡುತ್ತಿದ್ದಾರೆ. ಯುರೋಪಿಯನ್ ದೇಶಗಳಲ್ಲಿ ರೈಟ್-ವಿಂಗ್ ಬೆಂಬಲ ಹೆಚ್ಚುತ್ತಿದೆ. ವಿಶ್ವದ ಈ ಗಾಳಿ-ಬಿರುಗಾಳಿಗಳು ನಮ್ಮ ಖಂಡ-ದೇಶವಾದ ಆಸ್ಟ್ರೇಲಿಯಾ ಮೇಲೆ ಯಾವ್ಯಾವ ಪರಿಣಾಮಗಳನ್ನು ಬೀರುವುದೊ ಕಾದು ನೋಡಬೇಕು. ಅದಕ್ಕೆ ೨೦೨೫ ಸಾಕ್ಷಿಯಾಗಬೇಕು.

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.