Advertisement
ಲೋಕಾಂತ ಕವಿಯ ಏಕಾಂತ ಬದುಕಿನ ಅನಾವರಣ: ಡಾ. ಎ. ರಘುರಾಂ ಬರಹ

ಲೋಕಾಂತ ಕವಿಯ ಏಕಾಂತ ಬದುಕಿನ ಅನಾವರಣ: ಡಾ. ಎ. ರಘುರಾಂ ಬರಹ

ಲೆಕ್ಕದಲ್ಲಿ ತಾನು ಅಷ್ಟೊಂದು ಪಂಡಿತನಲ್ಲ ಎನ್ನುವ ಕಾರಣಕ್ಕೆ ತಿಂಗಳಿಗೆ ಮೂವತ್ತೈದು ರೂಪಾಯಿ ಸಂಬಳದ ಪವರ್‌ಹೌಸ್‌ನ ನೌಕರಿಯನ್ನು ಬಿಟ್ಟು ಇಪ್ಪತ್ತೊಂದು ರೂಪಾಯಿಯ ಶಿಕ್ಷಕ ವೃತ್ತಿಯನ್ನು ಆಯ್ಕೆಮಾಡಿಕೊಳ್ಳುತ್ತಾರೆ. ಲೆಕ್ಕ ಬರದೇ ಇರುವ ಕಾರಣದಿಂದ ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆಯೇ ಹೊರತು ಶಿಕ್ಷಕ ವೃತ್ತಿಯ ಕಾರಣದಿಂದಲ್ಲ. ಒಮ್ಮೆ ಮಗಳು ‘ಗಣಿತ ಕಲಿಸುವುದನ್ನು ಹೇಗೆ ನಿಭಾಯಿಸಿದೆ? ಗಣಿತ ನಿನಗೆ ಬರುವುದೇ ಇಲ್ಲವಲ್ಲ’ ಎಂದು ಕೇಳಿದ್ದಕ್ಕೆ ‘ವಿದ್ಯಾರ್ಥಿಗಳಿಗೆ ನಾನು, ನೀವು ಇಬ್ಬರೂ ಕೂಡಿಯೇ ಗಣಿತವನ್ನು ಬಗೆಹರಿಸಿಕೊಳ್ಳೋಣ..’ ಎಂದು ಹೇಳಿದೆ ಎಂದು ಗಹಗಹಿಸಿ ನಕ್ಕನು.
ತಮ್ಮ ತಂದೆ ಶಾಂತರಸರೊಂದಿಗಿನ ಒಡನಾಟದ ಕುರಿತು ಎಚ್.ಎಸ್.‌ ಮುಕ್ತಾಯಕ್ಕ ಬರೆದ “ಅಪ್ಪ ನಾನು ಕಂಡಂತೆ” ಕೃತಿಯ ಕುರಿತು ಡಾ. ಎ. ರಘುರಾಂ ಬರಹ ನಿಮ್ಮ ಓದಿಗೆ

ವ್ಯಕ್ತಿ ತಾನು ಹೇಗೆ ಬಾಳಿದೆ ಎಂದು ಬರೆದುಕೊಳ್ಳುವ ವಿಧಾನ ಆತ್ಮ ಚರಿತ್ರೆ, ವ್ಯಕ್ತಿಯನ್ನು ತಾನು ಹೇಗೆ ನೋಡಿದೆ ಎನ್ನುವ ಕ್ರಮ ಜೀವನಚರಿತ್ರೆ. ಕುಟುಂಬದ ಸದಸ್ಯರು ಹತ್ತಿರದಿಂದ ನೋಡಿದ ಕಾರಣ ಅವರ ಬದುಕನ್ನು ಕಟ್ಟಿಕೊಡುವ ಇನ್ನೊಂದು ವಿಧಾನ ಈ ತೆರನಾದ ಕೃತಿಗಳದ್ದಾಗಿದೆ. ಎಚ್.ಎಸ್.ಮುಕ್ತಾಯಕ್ಕ ತಮ್ಮ ತಂದೆ ಶಾಂತರಸರ ವ್ಯಕ್ತಿತ್ವವನ್ನು ‘ಅಪ್ಪ ನಾನು ಕಂಡಂತೆ’ ಕೃತಿಯಲ್ಲಿ ತುಂಬ ಆಪ್ತವಾಗಿ ನಿರೂಪಿಸಿದ್ದಾರೆ. ಸಾಹಿತ್ಯದ ಸಂದರ್ಭದಲ್ಲಿ ಎಲ್ಲಿಯೂ ಗೋಚರಿಸದ ಅಪರೂಪದ ಪ್ರಸಂಗಗಳು ಇಲ್ಲಿವೆ.

ತೇಜಸ್ವಿಯವರು ‘ಅಣ್ಣನ ನೆನಪುಗಳು’ ಕೃತಿಯಲ್ಲಿ ತಮ್ಮ ತಂದೆಯವರನ್ನು ನೋಡಿದ ಬಗೆಯನ್ನು ಹೇಳಿದ್ದಾರೆ. ಹಿರಿಯ ನಟ ಅನಂತ್‌ನಾಗ್ ಅವರು ತಮ್ಮನಾದ ಶಂಕರ್‌ನಾಗ್ ಬಗ್ಗೆ ‘ನನ್ನ ತಮ್ಮ ಶಂಕರ್’ ಎನ್ನುವ ಕೃತಿಯಲಿ ಆತನ ವ್ಯಕ್ತಿತ್ವವನ್ನು ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ. ಇಂತಹ ಬರವಣಿಗೆಗಳು ವ್ಯಕ್ತಿಗಳ ಸಾಹಿತ್ಯಲೋಕದಿಂದ ಹೊರತಾದ ಒಂದು ಲೋಕವನ್ನು ತಿಳಿಸಿಕೊಡುತ್ತವೆ. ಇಂತಹ ಪ್ರಯತ್ನಗಳು ಹೆಚ್ಚಾಗುತ್ತಿರುವುದು ಆಶಾದಾಯ ಕೂಡ.

(ಶಾಂತರಸ ಹೆಂಬೆರಳು)

ಕನ್ನಡದಲ್ಲಿ ಗಜಲುಗಳನ್ನು ರಚಿಸಿ, ಅದಕ್ಕೊಂದು ಬುನಾದಿ ಹಾಕಿದ ಶಾಂತರಸರನ್ನು ‘ಗಜಲುಗಳ ಕವಿ’ ಎಂದೇ ಕರೆದಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಶಾಂತರಸರಿಗೆ ತಮ್ಮದೇ ಆದ ಒಂದು ವ್ಯಕ್ತಿತ್ವ ಇದೆ. ಅಂತರಂಗ ಹಾಗೂ ಬಹಿರಂಗ ಎರಡೂ ಒಂದೇ ಇದ್ದ ಕವಿಹೃದಯಿ. ಇದು ಎಲ್ಲರಲ್ಲೂ ಕಾಣುವ ಮನೋಧರ್ಮವೇನಲ್ಲ. ಹೊರಗೊಂದು, ಒಳಗೊಂದು ರೀತಿಯ ವ್ಯಕ್ತಿತ್ವವನ್ನೇ ಕಾಣುತ್ತಿರುವ ಇಂದಿನ ಸಂದರ್ಭದಲ್ಲಿ ಶಾಂತರಸರಂತಹ ವ್ಯಕ್ತಿತ್ವ ಕಾಣುವುದು ಅಪರೂಪ. ಮೌನಿ, ಮೃದುಹೃದಯಿ, ಏನೂ ಗೊತ್ತಿಲ್ಲ ಎನ್ನುವಂತೆ ಹೊರನೋಟಕ್ಕೆ ಕಂಡರೂ ಸಾಹಿತ್ಯದ ಒಳಲೋಕಗಳನ್ನು ಅರ್ಥವತ್ತಾಗಿ ಗ್ರಹಿಸುವ ಜಾಣ್ಮೆ ಉಳ್ಳವರಾಗಿದ್ದರು. ಈ ಕೃತಿಯಲ್ಲಿ ಒಟ್ಟು ನಲವತ್ತೇಳು ಘಟಕಗಳಿವೆ. ಕೊನೆಯಲ್ಲಿ ತಂದೆಯನ್ನು ಕುರಿತು ಬರೆದ ನಾಲ್ಕು ಕವಿತೆಗಳಿವೆ. ಒಟ್ಟಾರೆ ಶಾಂತರಸರನ್ನು ವಿಭಿನ್ನವಾಗಿ ಪರಿಚಯಿಸುವ ಮಾದರಿಯೊಂದು ಇಲ್ಲಿದೆ.

‘ಅಪ್ಪ ಮತ್ತು ಶ್ಯಾಂಪೂ’ ಎನ್ನುವ ಘಟಕದಲ್ಲಿ ಕುಟುಂಬದ ಎಲ್ಲ ಗೊಡವೆಗಳಿಂದ ಶಾಂತರಸರು ಅಬಾಧಿತರು ಎನ್ನುವುದು ತಿಳಿಯುತ್ತದೆ. ‘ಇದು ಶ್ಯಾಂಪೂ ಅಲ್ಲ’ ಎಂದು ಹೆಂಡತಿ ಹೇಳಿದ ತಕ್ಷಣ ‘ಹೌದೆ, ಮತ್ತೇನದು ಹಾಗಾದರೆ?’ ಎಂದು ಕೇಳಿದಕ್ಕೆ ‘ಅದು ಬಟ್ಟೆ ಒಗೆಯುವ ಪುಡಿ, ತಲೆಗೆ ಹಾಕಿಕೊಳ್ಳುವುದಲ್ಲ!’ ಎಂದಾಗ ಗೊಂದಲಕ್ಕೆ ಒಳಗಾಗುತ್ತಾರೆ. ಸಾಹಿತ್ಯದಲ್ಲಿ ಬಹುದೊಡ್ಡ ಜ್ಞಾನವಿದ್ದರೂ ಮನೆಯ ಯಾವ ಜವಾಬ್ದಾರಿಗಳನ್ನು ನಿಭಾಯಿಸದೇ ಇರುವ ಕಾರಣ ಆ ವಿಷಯದಲ್ಲಿ ಆತ ಅಜ್ಞಾನಿಯೇ ಆಗಿದ್ದನು ಎಂದು ಯಾವುದೇ ಹಿಂಜರಿಕೆ ಇಲ್ಲದೇ ಹೇಳುತ್ತಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಅವರು ಕಾವೇರಿ ವಸತಿಗೃಹದಲ್ಲಿ ಇದ್ದರು. ಆಗ ಈ ಘಟನೆ ನಡೆಯುತ್ತದೆ. ಪ್ಲಾನಿಟೋರಿಯಂ ನೋಡಲು ಕುಟುಂಬ ಸಮೇತರಾಗಿ ಹೋದಾಗ ಮತ್ತೊಂದು ಘಟನೆ ಅದೇ ಬೆಂಗಳೂರಿನಲ್ಲಿಯೇ ನಡೆಯುತ್ತದೆ. ಬಿಸಿಲನಾಡಿನ ಶಾಂತರಸರಿಗೆ ಬೆಂಗಳೂರಿನ ತಣ್ಣನೆಯ ವಾತಾವರಣ ಆಗಿಬರುತ್ತಿರಲಿಲ್ಲ. ಅವರು ಸ್ಕಾರ್ಫನ್ನು ಮರೆತು ಬಂದಿರುತ್ತಾರೆ. ‘ಕೊನೆಗೆ ನನ್ನ ತಂಗಿ ತನ್ನ ಮಗಳ ದುಪಟ್ಟಾವನ್ನೇ ತೆಗೆದು ಅಪ್ಪನ ತಲೆಗೆ ನೀಟಾಗಿ ಸುತ್ತಿದಳು. ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಯಿತು. ಬಣ್ಣದ ಹೂವಿನ ಚಿತ್ತಾರವಿದ್ದ ದುಪ್ಪಟ್ಟಾ ಸುತ್ತಿಕೊಂಡ ಅಪ್ಪ ನೋಡಲು ವಿಲಕ್ಷಣವಾಗಿ ಕಾಣುತ್ತಿದ್ದನು!’ (ಪುಟ.10) ಹೊರಗೆ ಬಂದಾಗ ‘ಎಲ್ಲರೂ ನನ್ನನ್ನೇ ಏಕೆ ನೋಡುತ್ತಿರುವರು’ ಎಂದು ಕೇಳಿದನು. ಆಗ ನನ್ನ ತಂಗಿ ಸ್ವಲ್ಪ ಹೊತ್ತು ಅಪ್ಪನನ್ನೇ ದಿಟ್ಟಿಸುತ್ತ ‘ಅಯ್ಯೋ ತಲೆಗೆ ಕಟ್ಟಿಕೊಂಡಿರುವ ಆ ದುಪ್ಪಟ್ಟಾವನ್ನು ಬಿಚ್ಚು. ಅದು ನೋಡುವವರಿಗೆ ವಿಚಿತ್ರವಾಗಿ ಕಾಣುತ್ತಿದೆ’ (ಪುಟ.11) ಎಂದು ಹೇಳಿದಾಗ ದುಪ್ಪಟ್ಟಾ ಬಿಚ್ಚುತ್ತಾರೆ.

ಲೆಕ್ಕದಲ್ಲಿ ತಾನು ಅಷ್ಟೊಂದು ಪಂಡಿತನಲ್ಲ ಎನ್ನುವ ಕಾರಣಕ್ಕೆ ತಿಂಗಳಿಗೆ ಮೂವತ್ತೈದು ರೂಪಾಯಿ ಸಂಬಳದ ಪವರ್‌ಹೌಸ್‌ನ ನೌಕರಿಯನ್ನು ಬಿಟ್ಟು ಇಪ್ಪತ್ತೊಂದು ರೂಪಾಯಿಯ ಶಿಕ್ಷಕ ವೃತ್ತಿಯನ್ನು ಆಯ್ಕೆಮಾಡಿಕೊಳ್ಳುತ್ತಾರೆ. ಲೆಕ್ಕ ಬರದೇ ಇರುವ ಕಾರಣದಿಂದ ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆಯೇ ಹೊರತು ಶಿಕ್ಷಕ ವೃತ್ತಿಯ ಕಾರಣದಿಂದಲ್ಲ. ಒಮ್ಮೆ ಮಗಳು ‘ಗಣಿತ ಕಲಿಸುವುದನ್ನು ಹೇಗೆ ನಿಭಾಯಿಸಿದೆ? ಗಣಿತ ನಿನಗೆ ಬರುವುದೇ ಇಲ್ಲವಲ್ಲ’ ಎಂದು ಕೇಳಿದ್ದಕ್ಕೆ ‘ವಿದ್ಯಾರ್ಥಿಗಳಿಗೆ ನಾನು, ನೀವು ಇಬ್ಬರೂ ಕೂಡಿಯೇ ಗಣಿತವನ್ನು ಬಗೆಹರಿಸಿಕೊಳ್ಳೋಣ..’ ಎಂದು ಹೇಳಿದೆ ಎಂದು ಗಹಗಹಿಸಿ ನಕ್ಕನು. (ಪುಟ.13) ಎಂದು ಬರೆಯುತ್ತಾರೆ. ಹಣದ ಬೆನ್ನು ಹತ್ತಿ ಹೋಗಿ ಲಕ್ಷಗಟ್ಟಲೆ ಹಣ ನೋಡುವ ಮಂದಿಗೆ ಇಪ್ಪತ್ತೊಂದು ಸಾವಿರವೆ ಎನ್ನುವುದು ತೀರ ಕ್ಷುಲ್ಲಕ ಎನ್ನಿಸಿದರೆ ಆಶ್ಚರ್ಯವೇನಲ್ಲ. ‘ಗಣಿತದಲ್ಲಿ ತಾನು ಶತದಡ್ಡನೆಂದು ಹೇಳುತ್ತ ‘ಅದು ಹೇಗೆ ಬಹಳ ಜನ ಗಣಿತದಲ್ಲಿ ಅಷ್ಟೊಂದು ಬುದ್ಧಿವಂತರಾಗಿರುತ್ತಾರೆಯೋ ಅವರಿಗೆ ಅದು ಹೇಗೆ ಗಣಿತ ತಿಳಿಯುತ್ತದೆಯೋ’ ಎಂದು ಆಶ್ಚರ್ಯ ಪಡುತ್ತಿದ್ದನು’. ಇದಕ್ಕೆ ಉತ್ತರವಾಗಿ ಈ ಘಟಕದ ಕೊನೆಯಲ್ಲಿ ಮುಕ್ತಾಯಕ್ಕ ಬರೆಯುವ ಸಾಲುಗಳು ಅತ್ಯದ್ಭುತವಾಗಿವೆ. ‘ಆಗ ನಾನು ‘ಇದರಲ್ಲಿ ಆಶ್ಚರ್ಯ ಪಡುವಂಥದ್ದೇನು ಇಲ್ಲ ಅಪ್ಪ. ನೀನು ಒಬ್ಬ ಕವಿ, ನೀನು ಲೌಕಿಕವನ್ನು ಮೀರಿದಾತ ಮತ್ತು ಚುಕ್ಕಿಗಳನ್ನು ನೀನು ಎಣಿಸಬಲ್ಲೆಯೆ ಹೊರತು ಹಣವನ್ನಲ್ಲ!’ ಎಂದು ನಾನು ಅನ್ನುತ್ತಿದ್ದೆನು. ಆಗ ಆತನ ಮುಖದಲ್ಲಿ ಒಂದು ವಿಶಾಲವಾದ ಮುಗುಳ್ನಗೆ ಮೂಡುತ್ತಿತ್ತು.’ (ಪುಟ.15) ಎಂದು ಹೇಳುವ ಮಾತುಗಳು ತಂದೆಯ ಕಣ್ಣುಗಳಲ್ಲಿನ ಅನುಭೂತಿಯನ್ನು ನೋಡಿದ ಮಗಳ ಸಂತಸವನ್ನು ತೋರುತ್ತದೆ.

‘ಬಹಳಷ್ಟು ಜನಕ್ಕೆ ನೆಲಮಾಳಿಗೆ ಇದೆಯೆಂದೇ ಗೊತ್ತಿರಲಿಕ್ಕಿಲ್ಲ. ಒಳಗೆ ಹೋಗಿರುವ ಸಂಭವವಂತೂ ತೀರಾ ಕಡಿಮೆ. ಈ ಘಟನೆ ನಿನ್ನೆಯೆ ನಡೆದಿದೆ ಎಂಬಷ್ಟು ಅಚ್ಚಳಿಯದೆ ನನ್ನ ನೆನಪಿನಲ್ಲಿದೆ. ಇಂದು ಅಪ್ಪ ಕೂಡಾ ಶಾಂತವಾಗಿ ಮಲಗಿದ್ದಾನೆ ಗೋರಿಗಳಲ್ಲಿರುವ ಆ ಜೀವಿಗಳಂತೆ. ಆದರೆ ಆ ನೆನಪುಗಳು ಮಾತ್ರ ನನ್ನೊಡನೆ ಜೀವಂತವಾಗಿವೆ!’ (ಪುಟ.20) ಎಂದು ‘ಗೋಲ್ ಗುಂಬಜ್’ ಘಟಕದಲ್ಲಿ ಬರೆದಿದ್ದಾರೆ.

‘ಉಮ್ರಾವ್ ಜಾನ್’ ರೇಖಾ, ನಾಸಿರುದ್ದೀನ್ ಷಾ, ಫಾರುಕ್‌ಶೇಖ್ ಅಭಿನಯಿಸಿದ ಚಲನಚಿತ್ರ. ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಮಿರ್ಜಾರುಸ್ವಾ ಅವರು ರಚಿಸಿದ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಲು ಕೊಡುತ್ತಾರೆ. ಉರ್ದು, ಹಿಂದಿ, ಕನ್ನಡ ಬಲ್ಲ ಕಾರಣದಿಂದ ಅದನ್ನು ಅತ್ಯದ್ಭುತವಾಗಿ ಅನುವಾದ ಮಾಡುತ್ತಾರೆ. ‘ಇನ್ನೊಂದು ಭಾಷೆಯ ಸಾಹಿತ್ಯದ ಆತ್ಮವನ್ನು ನಮ್ಮದನ್ನಾಗಿ ಮಾಡಿಕೊಳ್ಳಬೇಕು. ಅಂದಾಗಲೇ ಅದು ಅನುವಾದವೆನಿಸದೆ, ಮೂಲದಷ್ಟೇ ಸುಂದರವಾಗಿದ್ದು, ಮೂಲವನ್ನೇ ಓದಿದಂತೆ ಭಾಸವಾಗುತ್ತದೆ. ಇಂದು ಅಪ್ಪ ನಮ್ಮ ನಡುವೆ ಇಲ್ಲ. ಆದರೆ ನಮ್ಮೆದುರು ‘ಉಮ್ರಾವ್ ಜಾನ್’ ಇದ್ದಾರೆ.” (ಪುಟ.23) ಎನ್ನುತ್ತಾರೆ.

(ಎಚ್.ಎಸ್.‌ ಮುಕ್ತಾಯಕ್ಕ)

ಮಾರ್ಕೆಟ್ಟಿನ ಯಾವ ದಾರಿಯೂ ಗೊತ್ತಿರದ ಶಾಂತರಸರು ಅಪರೂಪಕ್ಕೊಮ್ಮೆ ಅಂತಹ ದಾರಿಯಲ್ಲಿ ನಡೆಯುತ್ತಾರೆ. ‘ಸೀರೆ ಪ್ರಕರಣ’ದಲ್ಲಿ ಇದನ್ನು ನೋಡುತ್ತೇವೆ. ಓದುಗರಿಗೆ ಇದೇನಿದು ಸೀರೆ ಪ್ರಸಂಗ ಎನ್ನುವ ಕುತೂಹಲ ಮೂಡುವುದು ಸಹಜವೇ. ಬಂಧುಗಳು ‘ಲಕ್ಷ್ಮೀದೇವಮ್ಮನಿಗೆ ಒಂದು ಸೀರೆಯನ್ನಾದರೂ ತೆಗೆದುಕೊಂಡು ಬನ್ನಿ’ ಎಂದು ಹೇಳಿದಾಗ ಮಗಳು ಮುಕ್ತಾಯಕ್ಕನನ್ನು ಕರೆಯುತ್ತಾರೆ. ನಾನು ಬಂದರೆ ಅದು ನನ್ನ ಆಯ್ಕೆಯಾಗುತ್ತದೆ ಎಂದು ಹೇಳಿ ತಪ್ಪಿಸಿಕೊಳ್ಳುತ್ತಾರೆ. ಕೊನೆಗೆ ಮೊಮ್ಮಗ ಸಿದ್ಧಾರ್ಥನನ್ನು ಹುಡುಕುತ್ತಾರೆ, ಅವನು ಶಾಲೆಗೆ ಹೋಗಿರುತ್ತಾನೆ. ಶಾಂತರಸರೊಬ್ಬರೇ ಮೊದಲನೆಯ ಸಲ ಮಾರ್ಕೆಟ್ಟಿಗೆ ಹೋಗಿ ಸೀರೆ ತರುತ್ತಾರೆ. ‘ನಿನಗಾಗಿ ಸೀರೆ ತಂದಿರುವೆ’ ಎಂದಾಗ ಎಲ್ಲರಿಗೂ ಅಚ್ಚರಿ. ಆ ಸೀರೆ ಚೆನ್ನಾಗಿದೆ ಎಂದು ಎಲ್ಲರೂ ಒಪ್ಪಿಕೊಂಡರೂ ನೀರಿಗೆ ಹಾಕಿದಾಗ ಪೂರ್ತಿ ಬಣ್ಣಬಿಟ್ಟು ಮೂಲ ಗುರುತಿಸದಂತಾಯ್ತು. “ಇದು ಯಾರ ಸೀರೆ ಗೊತ್ತಾ” ಎಂದು ಲಕ್ಷ್ಮೀದೇವಮ್ಮ ಕೇಳಿದಾಗ ‘ಯಾರದು’ ಎಂದು ಕೇಳುತ್ತಾರೆ. ಸೀರೆ ಬಣ್ಣ ಬಿಟ್ಟಾಗ ಕೂಡ ಆಕ್ಷೇಪಿಸದೆ “ಹೋಗಲಿಬಿಡಿ ನಿಮಗೆ ತಿಳಿಯುವುದಿಲ್ಲ ಅದಕ್ಕೆ ಬೇಸರವೇಕೆ” ಎಂದು ನಗುತ್ತಾ ಹೇಳಿದಾಗ “ಹೌದು ನನಗೆ ತಿಳಿಯುವುದಿಲ್ಲವೆಂದು” ತಾನೂ ನಕ್ಕನು’ (ಪು.27) ಎಂದು ಬರೆಯುತ್ತಾರೆ. ಸೀರೆಯ ಪ್ರಕರಣವನ್ನು ಬಂಧು-ಬಾಂಧವರು, ಸ್ನೇಹಿತರ ಮುಂದೆ ಹೇಳಿ ಅಮ್ಮ ನಗುತ್ತಿದ್ದಳು. ಬಹಳ ಸಿಟ್ಟು ಬಂದಾಗ ಆಕೆ “ಒಂದು ಸೀರೆ ತರಲು ತಿಳಿಯುವುದಿಲ್ಲ” ಎಂದು ಬಯ್ಯುತ್ತಿದ್ದಳು. ಮುಂದೆ ಅಪ್ಪ ಯಾವತ್ತೂ ಸೀರೆ ತರಲಿಲ್ಲ. ಇಷ್ಟಾದರೂ, ಏನಿದ್ದರೂ ಆತನ ಬಡತನವನ್ನು ಆಕೆ ಎಂದೂ ಹೀಯಾಳಿಸಲಿಲ್ಲ. ಅದನ್ನು ಆಕೆ ಮನಸಾರೆ ಒಪ್ಪಿಕೊಂಡಿದ್ದಳು, ಅದರಂತೆಯೇ ನಡೆದಳು.” (ಪುಟ.27) ಎನ್ನುವ ಮಾತುಗಳಲ್ಲಿ ಬಡತನವನ್ನು ಹೀಯಾಳಿಸದೇ ಬದುಕನ್ನು ನಡೆಸಿರುವ ಮಾನವತ್ವದ ಹೆಣ್ಣಾಗಿ ಲಕ್ಷ್ಮೀದೇವಮ್ಮ ಕಾಣುತ್ತಾಳೆ. ವ್ಯಾಮೋಹದ ಬದುಕಿನ ಸಂದರ್ಭದಲ್ಲಿ ಈ ಸಾಲುಗಳು ಅರ್ಥಹೀನ ಎನ್ನಿಸಿಬಿಡುವ ಸಾಧ್ಯತೆಗಳೇ ಹೆಚ್ಚು. ಹಣದ ಬೆನ್ನು ಹತ್ತಿ ಪ್ರೀತಿ, ಮಮಕಾರಗಳನ್ನು ಕಳೆದು ಮೆಟೀರಿಯಲಿಸ್ಟಿಕ್ ಆಗಿರುವ ಜಗತ್ತಿಗೆ ಇಂತಹ ಹೃದಯ ತಟ್ಟುವ ಮಾತುಗಳು ಅರ್ಥವಾಗಲಾರವು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ‘ಕಾವೇರಿ ಭವನ್’ಗೆ ತಂಗಿ ತನ್ನ ಮಕ್ಕಳೊಂದಿಗೆ ಬರುತ್ತಾಳೆ. ತಂಗಿಯನ್ನು ಕರೆದುಕೊಂಡು ಮಾರ್ಕೆಟ್ಟಿಗೆ ಹೊರಟಾಗ ಶಾಂತರಸರು ಐಸ್‌ಕ್ರೀಂ ತರಲು ಹೇಳುತ್ತಾರೆ. ಮಾರ್ಕೆಟ್ಟಿನಿಂದ ಮರೆತು ಬಂದುದಕ್ಕೆ ತಂದೆ ಕೋಪಗೊಂಡು ಮೌನಿಯಾದರು. ಅವರ ಮೌನವನ್ನು ನೋಡಿ ಮಾರ್ಕೆಟ್ಟಿಗೆ ಹೋಗಿ ಐಸ್‌ಕ್ರೀಂ ತಂದುಕೊಟ್ಟಾಗ ತುಂಬ ಖುಷಿಗೊಳ್ಳುತ್ತಾರೆ. ‘ನನ್ನಪ್ಪನ ಅಂದಿನ ಖುಷಿಯ ಮುಗ್ಧ ನಗೆಯನ್ನು ನಾನೆಂದೂ ಮರೆಯಲಾರೆ. ಈಗಲೂ ‘ಗಡ್ ಬಡ್ ಐಸ್ ಕ್ರೀಮ್’ ನೋಡಿದಾಗ ನನಗೆ ಅಂದಿನ ಘಟನೆ ನೆನಪಾಗುತ್ತದೆ’(ಪುಟ.145)ಎಂದು ನೆನಪುಗಳ ಸವಿ ಉಣ್ಣಿಸುತ್ತಾರೆ.

‘ನನ್ನ ಅಪ್ಪʼ
ಮುಂಜಾವಿನ ಹೊಚ್ಚ ಹೊಸ
ಸೂರ್ಯ ಗುಡ್ಡದೋರೆಯಲ್ಲಿ
ಮೆಲ್ಲನೇ ಇಳಿಯುವ ಝರಿ
ಗಾಳಿ ಮಳೆ ಬಿಸಿಲಿಗೆ
ಅಲುಗದ ಮುಗಿಲು’

ಎಂದು ಹೇಳಿ ಅಕ್ಷರಗಳಿಗೆ ಜೀವ ತುಂಬಿದ್ದಾರೆ. ‘ಬೆನ್ನ ಹಿಂದಿನ ಚೂರಿ’ ಘಟಕದಲ್ಲಿ ಮನುಷ್ಯನ ಅವಕಾಶವಾದಿತನ ಹೇಗೆಲ್ಲ ಕೆಲಸಮಾಡುತ್ತದೆ ಎನ್ನುವುದು ತಿಳಿಯುತ್ತದೆ. ‘ಪ್ರೇರಣೆ’ ಎನ್ನುವ ಘಟಕ ಮುಕ್ತಾಯಕ್ಕನಿಗೆ ಹೇಗೆ ಪ್ರೇರಣೆಯಾದರು ಎನ್ನುವುದನ್ನು ಹೇಳುತ್ತದೆ. ‘ರಜಾಕಾರರು’ ಘಟಕ ಹೈದರಾಬಾದ್ ಪ್ರಾಂತ್ಯ ಹೇಗೆ ಬಿಕ್ಕಟ್ಟುಗಳಿಂದ ಪಾರಾಯಿತು ಎನ್ನುವುದನ್ನು ನಮ್ಮ ಮುಂದಿರಿಸುತ್ತದೆ. ಬದುಕನ್ನು ಕಟ್ಟಿಕೊಳ್ಳಲು ಹೆಣಗಿದ ಅನೇಕ ಪ್ರಸಂಗಗಳು ಇಲ್ಲಿವೆ. ಶಾಂತರಸರನ್ನು ಪರಿಚಯಿಸಲು ಇಲ್ಲಿನ ಚಿತ್ರಗಳು ಸಹಾಯಕವಾಗಿವೆ. ಅಪ್ಪನ ವಿಶಿಷ್ಟ ಚಿತ್ರವೊಂದನ್ನು ಕಟ್ಟಿಕೊಟ್ಟಿರುವ ಕಾರಣಕ್ಕೆ ಕನ್ನಡಿಗರು ಎಚ್.ಎಸ್.ಮುಕ್ತಾಯಕ್ಕ ಅವರಿಗೆ ಉಪಕೃತರಾಗಿರಬೇಕಾಗುತ್ತದೆ. ‘ಸಂಗಾತ ಪುಸ್ತಕ’ ಇದನ್ನು ಆಕರ್ಷಕವಾಗಿ ಪ್ರಕಟಿಸಿದೆ, ಈ ಕಾರಣಕ್ಕೆ ಟಿ.ಎಸ್.ಗೊರವರ ಅವರಿಗೂ ಧನ್ಯವಾದಗಳು ಸಲ್ಲುತ್ತವೆ.

About The Author

ಡಾ. ಎ. ರಘುರಾಂ

ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ರೇಣುಕಾಪುರದವರಾದ ಡಾ. ಎ. ರಘುರಾಂ ಸದ್ಯ ಬೆಂಗಳೂರು ನಿವಾಸಿಯಾಗಿದ್ದಾರೆ. 2005ರಲ್ಲಿ ಕನ್ನಡ ವಿಶ್ವವಿದ್ಯಾಲಯದಿಂದ ‘ನವ್ಯೋತ್ತರ ಕಾದಂಬರಿಗಳು – ಒಂದು ಅಧ್ಯಯನ’ ಎನ್ನುವ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯಡಿಯಲ್ಲಿ ಕೆಲವು ವರ್ಷಗಳ ಕಾಲ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ, 1996ರಿಂದ ಕಾಲೇಜು ಉಪನ್ಯಾಸಕನಾಗಿ ಕಾರ್ಯ ನಿರ್ವಹಣೆ. ಸದ್ಯ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ, ಬೆಂಗಳೂರು ಇಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ವಿಮರ್ಶೆ ಇವರ ಆಸಕ್ತಿಯ ಕ್ಷೇತ್ರ. ತೆಲುಗು ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಭರವಸೆ (ಕವನ ಸಂಕಲನ) ಸ್ನೇಹ ಪ್ರಕಾಶನ, ಚಿತ್ರದುರ್ಗ, ಆಕೃತಿ (ವಿಮರ್ಶೆ- ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಬಾಗಲಕೋಟೆ), ರಾಯಚೂರು ಜಿಲ್ಲೆಯ ಕತೆಗಳು (ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು), ಅಯನ (ವಿಮರ್ಶೆ-ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು), ಬೀಜ ಬಿತ್ತುವ ಗಳಿಗೆ (ವಿಮರ್ಶೆ-ಸಿವಿಜಿ ಇಂಡಿಯಾ, ಬೆಂಗಳೂರು), ವಿಮರ್ಶೆಯ ನೆಲೆ (ತುಮಕೂರು ವಿಶ್ವವಿದ್ಯಾಲಯದ ಕನ್ನಡ ಐಚ್ಛಿಕ ಪಠ್ಯ ಪುಸ್ತಕ), ನವ್ಯೋತ್ತರ ಕಾದಂಬರಿ – ಒಂದು ಅಧ್ಯಯನ (ಸಂಶೋಧನೆ - ಸಿವಿಜಿ ಇಂಡಿಯಾ, ಬೆಂಗಳೂರು : 2021) ಇವರ ಕೆಲವು ಪ್ರಕಟಿತ ಕೃತಿಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಸಾಹಿತ್ಯ ವಿಮರ್ಶೆ 2021’ ಕೃತಿ ಸಂಪಾದನೆ ಅಚ್ಚಿನಲ್ಲಿದೆ.

1 Comment

  1. Kaligananath Gudadur

    ಪುಸ್ತಕದ ಘಟಕಗಳಂತೆ ಇಲ್ಲಿನ ಪರಿಚಯಾತ್ಮಕ ಬರಹವೂ ಚೆನ್ನಾಗಿದೆ. ಶಾಂತರಸರಂತೆ ಈ ಬರಹವೂ ನಿರಾಡಾಂಭರ. ಅಭಿನಂದನೆಗಳು.

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ