ಅದಮ್ಯವಾದ ಕಾಮ, ಅನಿವಾರ್ಯವಾದ ಸಾವು ಮತ್ತು ಬಾಳಿನ ನಿರರ್ಥಕತೆ ಇವು ನನ್ನ ಕಾವ್ಯಕ್ಕೆ ಪ್ರೇರಕ ಶಕ್ತಿಗಳು ಎಂದು ಹೇಳುವ ಬಿ.ಆರ್. ಲಕ್ಷ್ಮಣರಾಯರ ಕವನಗಳಲ್ಲಿ ಗೇಯಗುಣವು ಸಹಜವಾಗಿ ಒಲಿದು ಬಂದಿದೆ. ಅವರ ಸಾಲುಗಳಲ್ಲಿ ವೈನೋದಿಕ ಶಕ್ತಿಯೂ ಸೇರಿಕೊಂಡಿದೆ.  ಅವರು ಆ ಕಾಲಕ್ಕೆ ಅತ್ಯಂತ ಆಧುನಿಕ ವಿಷಯಗಳನ್ನೇ ಬರೆದರೂ ಅವೆಲ್ಲವನ್ನೂ ಯಾವ ಛಂದಸ್ಸನ್ನೂ ಮುರಿದು ಕಟ್ಟುವ ಗೋಜಿಗೆ ಹೋಗದೆ ಇದ್ದಲ್ಲಿಯೇ ಸಾಧಿಸಿದರು. ಅವರ ಪದ್ಯಗಳನ್ನು ಗಟ್ಟಿಯಾಗಿ ಓದಿ ನೋಡಿದರೆ ಆ ಹಿಡಿತ ತಾನೇ ತಾನಾಗಿ ಅರಿವಾಗುತ್ತದೆ.
ಬಿ.ಆರ್. ಲಕ್ಷ್ಮಣರಾವ್ ಕವನಗಳನ್ನು ಮೆಚ್ಚಿಕೊಂಡು ಬರೆದಿದ್ದಾರೆ ಮಾಲಿನಿ ಗುರುಪ್ರಸನ್ನ.

 

ಪರೀಕ್ಷಿತ ರಾಜನಿಗೆ ಸಾವು ಖಚಿತವಾದಾಗ ಶುಕಾಚಾರ್ಯರಲ್ಲಿ ಒಂದು ಪ್ರಶ್ನೆಯನ್ನು ಕೇಳುತ್ತಾನೆ.. ”ಮ್ರಿಯಮಾಣಃ ಕಿಮ್ ಕರ್ತವ್ಯಮ್.. ” ಸಾವು ಖಚಿತವಾದ ಮನುಷ್ಯ ಹೇಗೆ ಬದುಕಬೇಕು”. ನೋಡಲು ಬಹಳ ಸರಳವೆನ್ನಿಸುವ ಒಂದು ಸಾಲಿನ ಈ ಪ್ರಶ್ನೆಯ ಉತ್ತರವೇ ಭಾಗವತ ಮಹಾಪುರಾಣ. ಹುಟ್ಟಿದ ಮರು ಕ್ಷಣದಿಂದಲೇ ಸಾವಿನ ಕಡೆಗೆ ಗಡಿಯಾರದ ಮುಳ್ಳು ಓಡತೊಡಗುತ್ತದೆ. ಮತ್ತು ಅದು ಯಾರಿಗೂ ಗೊತ್ತಿಲ್ಲದ ರಹಸ್ಯವೇನಲ್ಲ, ಹುಟ್ಟಿನಷ್ಟೇ ಖಚಿತ ಸತ್ಯ ಸಾವು. ಇದು ಗೊತ್ತಿರುವುದಕ್ಕೂ, ಬದುಕುವಾಗ ಇದರ ಅರಿವಿರುವುದಕ್ಕೂ ನಡುವೆ ಬಹು ಸೂಕ್ಷ್ಮ ವ್ಯತ್ಯಾಸವಿದೆ. ಹೀಗೇ ಸಾವು ಖಚಿತವೆಂಬ ಅರಿವಿರುವ ಕವಿಯೊಬ್ಬ ತನ್ನ ಕಾವ್ಯ ಕೃಷಿಯನ್ನು ಆರಂಭಿಸಿದರೆ ಹೇಗಿರಬಹುದು? ಬಿ.ಆರ್.ಲಕ್ಷ್ಮಣ ರಾವ್ ಅವರು ತಮ್ಮ “ಅಕ್ಷರ ಹೊಸ ಕಾವ್ಯ” ಪುಸ್ತಕದ ಕವಿ ಕಾವ್ಯ ಪರಿಚಯದಲ್ಲಿ “ಅದಮ್ಯವಾದ ಕಾಮ, ಅನಿವಾರ್ಯವಾದ ಸಾವು ಮತ್ತು ಬಾಳಿನ ನಿರರ್ಥಕತೆ ಇವು ನನ್ನ ಕಾವ್ಯಕ್ಕೆ ಪ್ರೇರಕ ಶಕ್ತಿಗಳು” ಎಂದಿದ್ದಾರೆ.

ಗೋಪಿ ಮತ್ತು ಗಾಂಡಲೀನ ಸಂಕಲನದ ಮೊಟ್ಟಮೊದಲ ಪದ್ಯವೂ ಅವರ ವ್ಯಕ್ತಿಚಿತ್ರಣದಂತೆಯೇ ಇದೆ. ಅವರ ಕಾವ್ಯದ ಮ್ಯಾನಿಫೆಸ್ಟೋ ಎಂದೇ ನಾನು ಗುರುತಿಸುವ “ನಾನು ಕ್ರಮ
ವಾಗಿ ಪಂಚೇಂದ್ರಿಯ
ಹೃದಯ ಮಿದುಳು
ಗಳ ದಾಸ.
ಈ ವ್ಯಾಸ
ದಲ್ಲೇ ನನ್ನ
ಭಾರತ, ಕುರುಕ್ಷೇತ್ರ,
ಕರ್ಮಯೋಗ,
ವಿಶ್ವರೂಪ ದರ್ಶನ,
ಮುಕ್ತಿ.”

ಪಂಚೇಂದ್ರಿಯಗಳನ್ನು ಮೊಟ್ಟಮೊದಲ ಆದ್ಯತೆಯನ್ನಾಗಿ ಪರಿಗಣಿಸಿದ ಕವಿಗೆ ಕಾವ್ಯ ಬರೆಯಲು ಪ್ರೇರೇಪಿಸಿದ್ದು ಅದಮ್ಯ ಕಾಮದೊಟ್ಟಿಗೆ ಸಾವಿನ ಭಯ ಮತ್ತು ಬಾಳಿನ ನಿರರ್ಥಕತೆ. ಹೀಗೆ ಕವಿಗೆ ಅನ್ನಿಸಿದ್ದು ತನ್ನ ಇಪ್ಪತ್ತೈದರ ಹರೆಯದಲ್ಲಿ ಎಂಬುದೂ ಬಹಳ ಕುತೂಹಲಕಾರಿ. ಇದನ್ನು ಅಂತರ್ಗತವಾದ ಒಂದು  ಭಾವ ಅಂತಲೂ ಪರಿಗಣಿಸಬಹುದು.

ಅವರ ಗೋಪಿ ಮತ್ತು ಗಾಂಡಲೀನ ಕವಿತೆಯನ್ನೇ ನೋಡೋಣ. ಅದರಲ್ಲಿ ಜನಿವಾರವನ್ನು ಕಿವಿಗೆ ಸಿಕ್ಕಿಸಿಕೊಂಡು ಶೌಚಕ್ಕೆ ಹೋಗುವಷ್ಟು ಸಂಪ್ರದಾಯಬದ್ಧ ಬ್ರಾಹ್ಮಣರ ಹುಡುಗ ಗೋಪಿ, ಬಾರಿಗೆ ಗೆಳೆಯರ ಜೊತೆಗೆ ಹೋಗುತ್ತಾನೆ. ಅದೂ ಜಾಲಿಬಾರು! ಪಂಚೇಂದ್ರಿಯಗಳ ಮಾತಿಗೆ ಓಗೊಟ್ಟು ಅಲ್ಲ, ಗೆಳೆಯರೊಟ್ಟಿಗೆ ಹರಟೆಗೆ. ಅಲ್ಲಿ ಆತ ಗೇಲಿಯ ವಸ್ತುವೂ ಆಗುತ್ತಾನೆ. ಗುಂಡಿನ ಬದಲು ಕಾಫಿಯನ್ನು ಕುಡಿಯುವ ಗೋಪಿ ಗಾಂಡಲೀನಳನ್ನು ಬಿಟ್ಟ ಕಣ್ಣು ಬಿಟ್ಟುಕೊಂಡು ನೋಡುತ್ತಾ ನಿಲ್ಲುತ್ತಾನೆ. ಆದರೆ ಗಾಂಡಲೀನಾಳ ಸ್ಪರ್ಶದ ನಂತರವೂ ಕವಿ ಗೋಪಿಗೆ ವೆಂಕಟಲಕ್ಷ್ಮಿಯ ನೆನಪು ತರಿಸುವುದು, ನಂತರ ಗೋಪಿ ಗಾಂಡಲೀನಾಳ ಕಾಲಿಗೆ ಬೀಳುವುದು ನಗೆ ತರಿಸಿದರೂ ಯೋಚನೆಗೂ ಹಚ್ಚುತ್ತದೆ. ಅವಳ ಸ್ಪರ್ಶದ ನಂತರ ಮೈಮರೆಯಬೇಕಾಗಿದ್ದವನಿಗೆ ಹೆಂಡತಿಯ ನೆನಪಾಗಿ ಮನಸ್ಸು ಎಚ್ಚರವಾಗುವುದು ಏನನ್ನು ಸೂಚಿಸುತ್ತದೆ. ಜಾರಿಬಿದ್ದನೋ, ಅಡ್ಡಬಿದ್ದನೋ ಎಂಬ ಪ್ರಶ್ನಾರ್ಥಕ ಚಿಹ್ನೆಯಿದ್ದರೂ ಅದಕ್ಕೆ ಮುನ್ನ “ನೊಂದು” ಎಂಬ ಪದವನ್ನು ಸೇರಿಸಿರುವುದರಿಂದ ಅಡ್ಡಬಿದ್ದಿದ್ದೇ ಸತ್ಯ ಎನ್ನಿಸಿ ದೊಡ್ಡ ಅನಾಹುತವೊಂದು ತಪ್ಪಿದ ಹಾಗೆ ಮನಸ್ಸು ನಿಟ್ಟುಸಿರೆಳೆಯುತ್ತದೆ. ಪಂಚೇಂದ್ರಿಯಗಳು ಎಬ್ಬಿಸಿದ ಗೋಪಿಯನ್ನು ಹೃದಯ ತಡೆದು ಪರನಾರೀ ಸೋದರನನ್ನಾಗಿಸಿ ಮಿದುಳೇ ಗೆಲ್ಲುತ್ತದೆ.  ಅನಿವಾರ್ಯವಾದ ಸಾವಿನ ಭಯ, ಬಾಳಿನ ನಿರರ್ಥಕತೆ ಅದಮ್ಯ ಕಾಮವನ್ನು ಮಟ್ಟ ಹಾಕಿದ್ದೇ? ಅಥವಾ ಸಹಜವಾಗಿಯೇ ಅವರಿಗೆ ಸಿದ್ಧಿಸಿರುವ ವೈನೋದಿಕ ದೃಷ್ಟಿಕೋನ ಈ ರೀತಿಯ ಹಾಸ್ಯದ ತಿರುವನ್ನು ಕವನಕ್ಕೆ ಕೊಟ್ಟಿದೆಯೇ?

ಲಿಲ್ಲಿಪುಟ್ಟಿಯ ಹಂಬಲದಲ್ಲೂ ಮೊದಮೊದಲ ಸಾಲುಗಳನ್ನು ಓದುವಾಗ ಲಿಲ್ಲಿಪುಟ್ಟಿ ಮತ್ತೆಂದೂ ಬಾರದ ಗಲಿವರನನ್ನು ಹಂಬಲಿಸುತ್ತಿದ್ದಾಳೆ. ತನ್ನ ಜನರ ಬಳಿ ಇಲ್ಲಿಂದ ತಪ್ಪಿಸಿಕೊಂಡು ಹೋದ ಗಲಿವರ್ ಇಲ್ಲಿಗೆ ಕಾಲಿಡುವುದನ್ನೂ ಕಲ್ಪಿಸಿಕೊಳ್ಳಲಾರ. ಅವಳ ಹಂಬಲ ಬಡಬಡಿಕೆಯೆನ್ನಿಸುತ್ತ ಸಿಂಬಳದ ಹುಳುವಿನಂತೆ ಅವಳು ಭಾಸವಾಗುವ ಹೊತ್ತಲ್ಲೇ “ಎಲ್ಲಿ ನನ್ನ ಚೆನ್ನ? ಎಲ್ಲಿ ನನ್ನ ಚೆಲುವ? ನೀವು ಕಾಣಿರೇ.. ನೀವು ಕಾಣಿರೇ ..” ಎಂಬ ಕೊನೆಯ ಸಾಲುಗಳು ಇನ್ನಿಲ್ಲದಂತೆ ಕಾಡಿಬಿಡುತ್ತವೆ. ಓಡಿಹೋದ ಗಲಿವರ್, ಮತ್ತೆಂದೂ ಬಾರದ ಗಲಿವರ್, ಲಿಲ್ಲಿಪುಟ್ಟಿ ಅಕ್ಕನಂತಾಗಿದ್ದಾಳೆ. ದೇಹದಿಂದ ಮೊದಲ್ಗೊಂಡು ದೇಹದ ಕಾರಣಕ್ಕೇ ಹತ್ತಿರವಾಗಿ ದೇಹವನ್ನೂ ಮೀರಿ ಹಂಬಲಿಸುವ ಲಿಲ್ಲಿಪುಟ್ಟಿ ಮನಸ್ಸಿಗೆ ಹತ್ತಿರವಾಗುತ್ತಾಳೆ, ದೇಹಕ್ಕೆ ಶರಣಾಗಿ ನಂತರ ದೇಹವನ್ನು ಗೆದ್ದ ಗೋಪಿಯಂತೆಯೇ. ಗೋಪಿ ವೆಂಕಟಲಕ್ಷ್ಮಿಯ ನೆನಪಿಗೆ ಶರಣಾದರೆ, ಲಿಲ್ಲಿಪುಟ್ಟಿ ಪರಧ್ಯಾನದಲ್ಲೂ ಅಕ್ಕನಂತಾಗುತ್ತಾಳೆ.

ನನಗೆ ಬಿ ಆರ್ ಎಲ್ ಎಂದ ಕೂಡಲೇ ನೆನಪಾಗುವುದು ಅವರ ಗುಂಡಪ್ಪ ವಿಶ್ವನಾಥ್ ಪದ್ಯ. ಕ್ರಿಕೆಟ್ಟನ್ನು ಆರಾಧಿಸುವ ಆ ಕಾಲದ ಯಾರಿಗೆ ಆದರೂ ವಿಶ್ವನಾಥ್ ಎಂಬ ಕಲಾತ್ಮಕ ಆಟಗಾರನ ಕ್ರಿಕೆಟ್ ಜಗತ್ತಿನ ಮಹಾಕಾವ್ಯವನ್ನು ಮರೆಯಲು ಸಾಧ್ಯವೇ ಇಲ್ಲ. ತಮ್ಮ ಪರಮ ಪ್ರೀತಿಯ ಆಟಗಾರನ ಸೋಲಿಗೂ ನೆವಗಳನ್ನು ಹೇಳುತ್ತಾ ಅದರ ಹಿಂದಿನ ಗತವೈಭವಗಳನ್ನು ಎತ್ತಿ ಹಿಡಿಯುತ್ತಾ ಅವನ ಶ್ರೇಷ್ಠತೆಯನ್ನು ಸಾರುವುದೇ ಅಭಿಮಾನಿಗಳ ಕರ್ತವ್ಯ. ಬಿ ಆರ್ ಎಲ್ ಕೂಡಾ ಅವರ ಅಪ್ಪಟ ಅಭಿಮಾನಿ. ವಿಶ್ವನಾಥನ ಆಟವನ್ನು, ಅವನ ಗೆಲುವನ್ನು, ಆಟವನ್ನು, ಸೋಲನ್ನು ಅದೆಷ್ಟು ಸೂಕ್ಷ್ಮವಾಗಿ ಗಮನಿಸಿದ್ದಾರೆಂದರೆ ವಿಶ್ವನಾಥ್ ಇಲ್ಲಿ ಪ್ರತಿಮೆಯಾಗುತ್ತಾನೆ.

ಹುಟ್ಟಿನಷ್ಟೇ ಖಚಿತ ಸತ್ಯ ಸಾವು. ಇದು ಗೊತ್ತಿರುವುದಕ್ಕೂ, ಬದುಕುವಾಗ ಇದರ ಅರಿವಿರುವುದಕ್ಕೂ ನಡುವೆ ಬಹು ಸೂಕ್ಷ್ಮ ವ್ಯತ್ಯಾಸವಿದೆ. ಹೀಗೇ ಸಾವು ಖಚಿತವೆಂಬ ಅರಿವಿರುವ ಕವಿಯೊಬ್ಬ ತನ್ನ ಕಾವ್ಯ ಕೃಷಿಯನ್ನು ಆರಂಭಿಸಿದರೆ ಹೇಗಿರಬಹುದು?

ದೇಹವನ್ನು ಹುರಿಗೊಳಿಸಿದ ಬಿಲ್ಲಿನಂತಿಟ್ಟುಕೊಂಡಿದ್ದರಿಂದಲೇ ಅಪ್ರತಿಮ ಆಟಗಾರನಾದ ಏಕಾಗ್ರಧ್ಯಾನಸ್ಥ ಏಕಾಂತ, ಏಕಲವ್ಯನಂತಹಾ ವ್ಯಕ್ತಿಯೊಬ್ಬ ಆ ಮಟ್ಟಕ್ಕೇರಲು ಸಾಧ್ಯವಾಗಿದ್ದು ಎಂಬುದನ್ನು ಈ ಪದ್ಯದ ಮೊದಲ ಭಾಗ ಹೇಳಿದರೆ, ಆ ಎತ್ತರ ತಂದುಕೊಡುವ ಆಮಿಷಗಳು ಮತ್ತು ಅವುಗಳಿಗೆ ಬಲಿಯಾಗಿ ಅದೇ ದೇಹವನ್ನು ಕಡೆಗಣಿಸಿದರೆ ಎದುರಿಸಬೇಕಾದ ಪರಿಣಾಮಗಳ ಕುರಿತು ಮುಂದಿನ ಭಾಗ ಹೇಳುತ್ತದೆ. ಅವರ ದೇಹವನು ಹೀಗಳೆಯಬೇಡ ಎಂಬ ಪದ್ಯದ “ಭವದೆಲ್ಲ ಅನುಭವ ಇದರ ಕೊಡುಗೆ, ಅನುಭಾವಕೂ ಇದೇ ಚಿಮ್ಮು ಹಲಗೆ” ಎಂಬ ಸಾಲು ಮನಸ್ಸಿನೊಳಗೆ ಥಟ್ಟನೆ ಕೋರೈಸುತ್ತದೆ. ಅವರ ಕಾವ್ಯಮಾರ್ಗಕ್ಕೆ ಬಹಳ ಭಿನ್ನವಾದುದು ಎಂಬಂತೆ ಮೊದಲ ಓದಿಗೆ ಅನ್ನಿಸುವ ಈ ಪದ್ಯ ಮರು ಓದುಗಳಲ್ಲಿ ಮತ್ತೇನನ್ನೋ ಹೇಳುತ್ತದೆ.

ಪಂಚೇಂದ್ರಿಯಗಳನ್ನು ಆದ್ಯತೆಯಾಗಿಟ್ಟುಕೊಂಡ ಮನುಷ್ಯನಿಗೆ ದೇಹ ಬಹಳ ಮುಖ್ಯವಾದುದು. ದೇಹದ ಅಂಗಗಳೇ ಆದ ಪಂಚೇಂದ್ರಿಯಗಳು ದೇಹದ ಹಾದಿ ತಪ್ಪಿಸದಂತೆ ಎಚ್ಚರದಿಂದ ಬಹಳ ಜತನವಾಗಿ ಕಾಪಾಡಿಕೊಳ್ಳಲೇಬೇಕಾಗುತ್ತದೆ. ಅವರ ಗೋಪಿಯಾಗಲೀ, ಲಿಲ್ಲಿಪುಟ್ಟಿಯಾಗಲೀ ಈ ದೇಹದ ಮೂಲಕವೇ ಆ ಹಂತಗಳನ್ನು ದಾಟಿದವರು. ದೇಹವನ್ನೇ ಮಾರ್ಗವಾಗಿ ಬಳಸಿದವರು. ವಿಶ್ವನಾಥ್ ಎಂಬ ನಿರ್ದಿಷ್ಟ ವ್ಯಕ್ತಿಯಲ್ಲದ ಆಟಗಾರನ ಪ್ರತಿಮೆಯೊಂದು ಇದನ್ನು ಮೀರಲಾಗದೆ ಸೋತು ಹೋಗಿರುವುದು. ಮೊದಲ ಭಾಗಕ್ಕೆ ಕೃತಜ್ಞತೆ, ಕೊನೆಯ ಭಾಗಕ್ಕೆ ಸಹಾನುಭೂತಿ.. ಹೀಗೆ ಎರಡಕ್ಕೂ ಒಬ್ಬನೇ ವ್ಯಕ್ತಿ ಪಕ್ಕಾಗುವುದು ದುರಂತ. (ರೂಪದರ್ಶಿಯ ಅರ್ನೆಸ್ಟೊ, ಗ್ಯಾರಿಬಾಲ್ಡಿ ನೆನಪಿನಲ್ಲಿ ಸುಳಿಯಿತು) ದೇಹವೇ ಪ್ರಮುಖ ಆದ್ಯತೆಯಾದರೂ ದೇಹದ ಮೂಲಕವೇ ಹೃದಯ, ಬುದ್ಧಿಯನ್ನು ತಲುಪುವುದು ಲಕ್ಷ್ಮಣರಾಯರ ಕಾವ್ಯದ ಮುಖ್ಯ ಅಂಶ. ಈ ನಿಟ್ಟಿನಲ್ಲಿ ಅವರ ಆದ್ಯತೆಯ ಪಟ್ಟಿ ವಿಶಿಷ್ಟ ಅರ್ಥ ಪಡೆದುಕೊಳ್ಳುತ್ತದೆ. ಪಂಚೇಂದ್ರಿಯಗಳಿಗೆ ಆದ್ಯತೆ ಕೊಡುವುದೆಂದರೆ ಅವುಗಳಿಗೆ ಶರಣಾಗಿಬಿಡುವುದು ಎಂದಲ್ಲ. ಅದರ ಮೂಲಕವೇ ಮತ್ತೊಂದು ಮಜಲಿಗೆ ಏರುವುದು. ಬದುಕಿನ ಯಾವ ಸುಖಗಳನ್ನೂ ಬದಿಗಿಡದ, ದೇಹವನ್ನೇ ಚಿಮ್ಮುಹಲಗೆಯನ್ನಾಗಿಸಿಕೊಳ್ಳುವ, ಆ ಭರದಲ್ಲಿ ಮಾನವೀಯತೆ, ಸಾಮಾಜಿಕ ನ್ಯಾಯ ಇತ್ಯಾದಿಗಳನ್ನು ಗಾಳಿಗೆ ತೂರದ, ಲೌಕಿಕವನ್ನೇ ಮುಖ್ಯವಾಗಿ ಲಕ್ಷಿಸುವ ಉತ್ಸಾಹವನ್ನು ಇಂದಿಗೂ ಉಳಿಸಿಕೊಂಡಿರುವ ಏಕೈಕ ಕವಿ ಬಿ ಆರ್ ಎಲ್. ಅವರ ಲೊಲಿಟಾ, ಟ್ವಿನ್ಕಲ್ ಹಾಕುವ ಪ್ರಶ್ನೆಗಳನ್ನು ಅಷ್ಟೇ ನಿರ್ಭೀತಿಯಿಂದ ಬಯಲು ಮಾಡುತ್ತಾರೆ.’ ನಿಮಗೂ ಮಗನಿದ್ದಾನೆ ಅಂಕಲ್’ ಎಂಬ ಸಾಲಿನ ವಿಷಾದ ಪದ್ಯ ಮುಗಿಸಿದ ಮೇಲೂ ಓದುಗನನ್ನು ಕಾಡುತ್ತಲೇ ಇರುತ್ತದೆ.

ಸಾಮಾಜಿಕ ನ್ಯಾಯದ ಕುರಿತು ಮಾತನಾಡುವಾಗಲೂ ಅಷ್ಟೇ ಬದ್ಧತೆ ಈ ಕವಿಗೆ. ಅವರ ದ್ವಾ ಸುಪರ್ಣ ಪದ್ಯವನ್ನು ಮೊದಲು ಓದಿದಾಗ ತಬ್ಬಿಬ್ಬಾಗಿದ್ದೆ ನಾನು. ಸದಾ ಒಟ್ಟಿಗೆ ಇರುವ ಒಳ್ಳೆಯ ಗೆಳೆಯರಾದ ಸಶಕ್ತ ರೆಕ್ಕೆಗಳನ್ನೂ ಹೊಂದಿದ ಎರಡು ಹಕ್ಕಿಗಳು ಒಂದೇ ಮರದ ಮೇಲೆ ಒಟ್ಟಿಗೆ ಕುಳಿತಿವೆ. ಒಂದು ಹಣ್ಣನ್ನು ಕುಕ್ಕಿ ಕುಕ್ಕಿ ತಿನ್ನುತ್ತಲೇ ಇರುತ್ತದೆ. ಮತ್ತೊಂದು ಪಕ್ಕದಲ್ಲಿ ಕುಳಿತು ನೋಡುತ್ತಲೇ ಇರುತ್ತದೆ. ಆದರೆ ಉಪನಿಷತ್ತಿನ ಈ ವಾಕ್ಯ ಹೇಳುವುದು ಆ ಎರಡೂ ಹಕ್ಕಿಗಳೆಂದರೆ ತನ್ನ ಕರ್ಮ ಫಲವನ್ನುಣ್ಣುವ ಜೀವ ಚೈತನ್ಯ, ಮತ್ತು ಒಳಗಿರುವ ನಿತ್ಯ ಶುದ್ಧವಾದ ಈಶ್ವರಿ ಆತ್ಮ. ಮೊದಲನೆಯದು ನಶ್ವರ, ಎರಡನೆಯದು ಅಮರ. ಇವೆರಡರ ಸ್ಥಾನ ಲಕ್ಷ್ಮಣರಾಯರ ಪದ್ಯದಲ್ಲಿ ಆಗಾಗ ಬದಲಾಗುತ್ತಿರುತ್ತವೆ. ಇದು ಹೇಗೆ ಸಾಧ್ಯ ಎಂದು ಚಕಿತಗೊಂಡು ಪದ್ಯವನ್ನು ಮತ್ತೆ ಮತ್ತೆ ಓದಿದಾಗ ಸ್ಪಷ್ಟವಾಗಿದ್ದು ಅವರ ಮನಸ್ಥಿತಿ. ಶೋಷಿತ ಮತ್ತು ಶೋಷಕ ಸ್ಥಾನಗಳು ಆಗಾಗ ಬದಲಾಗುತ್ತಿರುತ್ತವೆ ಶೋಷಕ ಶೋಷಿತ ಪರಸ್ಪರ ಬದಲಾಗುವ ಮೂಲಕ ಶೋಷಣೆ ನಿರಂತರ. ಅನುಭವಿಸುವ ಪ್ರಜ್ಞೆಯಾದ ನಾನು, ಸಾಕ್ಷಿಪ್ರಜ್ಞೆಯಾದ ನೀನು ಎಂಬರ್ಥದಲ್ಲಿ ಇದನ್ನು ಚಾರಿತ್ರಿಕ ಮತ್ತು ಸಾಮಾಜಿಕ ಆಯಾಮಕ್ಕೆ ಬಳಸಿಕೊಂಡಿದ್ದಾರೆ. ಒಂದು ಉಪನಿಷತ್ ವಾಕ್ಯ ಅದು ಇದ್ದಂತೆಯೇ ಬಳಕೆಯಾಗದೆ ಪ್ರೇರಣೆಯಾಗಿದೆ ಇಲ್ಲಿ ಎಂಬುದು ನನಗೆ ಬಹಳ ಮಹತ್ವದ ಸಂಗತಿಯಂತೆ ಕಾಣಿಸಿತು.

ಬಹಳ ಮುಖ್ಯವಾಗಿ ಗಮನಿಸಬೇಕಾದ್ದು ಆ ಇಪ್ಪತ್ತೈದರ ವಯಸ್ಸಿನಲ್ಲಿಯೇ ಸಿಕ್ಕ ಲಯಪ್ರಜ್ಞೆ, ಛಂದಸ್ಸಿನ ಹಿಡಿತ, ತಾನು ಹೊಸದೇನು ಹೇಳಬಹುದೆಂಬ ಉಳಿದವರಿಗಿಂತ ಭಿನ್ನವಾಗಿ ನಿಲ್ಲುವ ಕಲ್ಪನೆ ಇವೆಲ್ಲವೂ ಅವರಿಗೆ ಬಹಳ ಬೇಗನೆ ಸಿದ್ಧಿಸಿಬಿಟ್ಟಿತ್ತು. ಸ್ವತಃ ಹಾಡುಗಾರರಾದ ಅವರಿಗೆ ಆ ಗೇಯ ಸಹಜವಾಗಿಯೇ ಒಲಿದಿದೆ. ಅವರು ಆ ಕಾಲಕ್ಕೆ ಅತ್ಯಂತ ಆಧುನಿಕ ವಿಷಯಗಳನ್ನೇ ಬರೆದರೂ ಅವೆಲ್ಲವನ್ನೂ ಯಾವ ಛಂದಸ್ಸನ್ನೂ ಮುರಿದು ಕಟ್ಟುವ ಗೋಜಿಗೆ ಹೋಗದೆ ಇದ್ದಲ್ಲಿಯೇ ಸಾಧಿಸಿದರು. ಮುರಿದು ಕಟ್ಟಲಾಗದ ಅಸಾಮರ್ಥ್ಯವನ್ನು ಮುಚ್ಚಿಟ್ಟು ನಾವು ಮುರಿದು ಕಟ್ಟುತ್ತೇವೆ ಎಂದು ಸೋಗು ಹಾಕುವವರು ಇವರ ಪದ್ಯಗಳನ್ನು ಓದಬೇಕು. ಅವರ ಪದ್ಯಗಳನ್ನು ಗಟ್ಟಿಯಾಗಿ ಓದಿ ನೋಡಿದರೆ ಆ ಹಿಡಿತ ತಾನೇ ತಾನಾಗಿ ಅರಿವಾಗುತ್ತದೆ.

ಸಾವು ಖಚಿತವೆಂಬ ಅರಿವಿರುವ ಕವಿಯೊಬ್ಬ ಆ ಸಾವಿನ ಭಯದಿಂದ ತಪ್ಪಿಸಿಕೊಳ್ಳಲು ಇಷ್ಟು ಲವಲವಿಕೆಯ ಕವಿತೆಗಳನ್ನು ಬರೆದರೇ? ಮೊದಲ ಪದ್ಯದಿಂದ ಇಲ್ಲಿಯವರೆಗೂ ತನ್ನ ನಿಲುವಿನಲ್ಲಿ ಕಿಂಚಿತ್ತೂ ಬದಲಾಗದ ಅಚ್ಚರಿ ಲಕ್ಷ್ಮಣರಾವ್ ಅವರಿಗೀಗ ಎಪ್ಪತ್ತೈದು. ನೂರರಲ್ಲೂ ಇದೇ ಲವಲವಿಕೆ, ಇದೇ ನಿಲುವು ಉಳಿಯುವುದರಲ್ಲಿ ನನಗ್ಯಾವ ಸಂಶಯವೂ ಇಲ್ಲ.