ನೋಡನೋಡುತ್ತಿದ್ದಂತೆ ಲ್ಯಾಪ್ಲಾಂಡ್ ಪ್ರವಾಸದ ದಿನ ಬಂದೆ ಬಿಟ್ಟಿತು. ಮ್ಯುನಿಕ್‌ನಿಂದ ಹೆಲ್ಸಿಂಕಿಗೆ ವಿಮಾನ. ಫಿನ್ಲ್ಯಾಂಡ್ ರಾಜಧಾನಿಯಾದ ಹೆಲ್ಸಿಂಕಿ ಬಾಲ್ಟಿಕ್ ಸಮುದ್ರ ತೀರದ ಒಂದು ನಗರ. ಹೆಲ್ಸಿಂಕಿ ಹತ್ತಿರ ಹತ್ತಿರ ಬರುತ್ತಿದ್ದಂತೆ ಬಾಲ್ಟಿಕ್ ಸಮುದ್ರವೂ ಹೆಪ್ಪುಗಟ್ಟಿದ ದೃಶ್ಯಗಳು ವಿಮಾನದೊಳಗೆ ಕೂತಿದ್ದ ನನ್ನ ಬೆನ್ನುಹುರಿಯಲ್ಲಿ ನಡುಕ ಹುಟ್ಟಿಸಿತು! ದೊಡ್ಡ ಹಡಗೊಂದು ಹೆಪ್ಪುಗಟ್ಟಿರುವ ಹಿಮವನ್ನು ಸೀಳಿಕೊಂಡು ಮುನ್ನುಗ್ಗುತ್ತಿರುವ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ.
‘ದೂರದ ಹಸಿರು’ ಸರಣಿಯಲ್ಲಿ ಲಾಪ್ಲ್ಯಾಂಡ್‌ ಪ್ರವಾಸದ ಅನುಭವಗಳನ್ನು ಹಂಚಿಕೊಂಡಿದ್ದಾರೆ ಗುರುದತ್‌ ಅಮೃತಾಪುರ

(ಭಾಗ -1)

ಪ್ರವಾಸದ ಸಿದ್ಧತೆ

ಲ್ಯಾಪ್ಲ್ಯಾಂಡ್ ಪ್ರವಾಸ ನಮ್ಮ ಬಹಳ ವರ್ಷಗಳ ಕನಸು. ಅದಕ್ಕೆ ಮೂಲ ಕಾರಣ “ಅರೋರಾ ಲೈಟ್ಸ್”. ಇದನ್ನು “northern lights” ಅಂತಲೂ ಕರೆಯುತ್ತಾರೆ. ಇದೊಂದು ಪ್ರಕೃತಿಯ ವಿಸ್ಮಯ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳನ್ನು ನೋಡಿದಾಗಲೆಲ್ಲ ನಮ್ಮ ಅದೃಷ್ಟ ಯಾವಾಗ ಬರುತ್ತೊ ಅಂತ ಜಪ ಮಾಡುವುದೇ ಕಾಯಕ. ಅರೋರಾ ಲೈಟ್ಸ್ ಬಗ್ಗೆ ನಿಮಗೂ ಕುತೂಹಲ ಇದ್ದರೆ ನೀವು ನನ್ನೊಡನೆ “ಈ ಕನಸಿನ ಪಯಣ”ದಲ್ಲಿ ಕೊನೆಯವರೆಗೂ ಪ್ರಯಾಣಿಸಬೇಕು!

ಯುರೋಪಿನಲ್ಲಿ ಕೊರೋನ ಮೂರನೇ ಅಲೆ ಮುಗಿಯುವ ಹಂತದಲ್ಲಿ, ಬಹುತೇಕ ಇನ್ನೇನು ಈ ಪೀಡೆ ತೊಲಗಿತಪ್ಪ ಎಂದು ನಿಟ್ಟುಸಿರು ಬಿಟ್ಟು, ಲ್ಯಾಪ್ಲ್ಯಾಂಡ್ ಪ್ರವಾಸದ ತಯಾರಿ ಶುರುವಾಯಿತು. ಆಗಿನ್ನೂ ಓಮಿಕ್ರಾನ್ ಬಂದಿರಲಿಲ್ಲ! ಮುಂದಿನ ಪ್ರಶ್ನೆ ಯಾವಾಗ ಹೋಗುವುದು? ನಮಗೆ ಡಿಸೆಂಬರಿನಲ್ಲಿ ಕ್ರಿಸ್ಮಸ್ ರಜೆ ಇದ್ದಾಗ ಹೋಗುವುದೇ ಸರಿ ಎನ್ನಿಸಿತು. ಮತ್ತೆ ಮತ್ತೆ ರಜೆ ಹಾಕುವ ಗೋಜಿಲ್ಲ. ಈ ಸಿದ್ಧತೆಗಳು ನಮ್ಮ ಪ್ರವಾಸಕ್ಕೆ ನಾಲ್ಕು ತಿಂಗಳ ಮೊದಲು ಪ್ರಾರಂಭವಾಗಿದ್ದು. ಸರಿ ಪ್ರವಾಸದ ದಿನಾಂಕಗಳು ನಿಶ್ಚಯವಾಯಿತು.

ಮುಂದಿನ ಸವಾಲು ನಾವೇ ಪ್ಲಾನ್ ಮಾಡಿ ಹೋಗುವುದಾ ಅಥವಾ ಪ್ಯಾಕೇಜ್ ಟೂರ್ ತೆಗೆದುಕೊಳ್ಳುವುದಾ? ನಾವು ಸಾಮಾನ್ಯವಾಗಿ ಪ್ಯಾಕೇಜ್ ಟೂರ್‌ಗಳಿಂದ ದೂರ ಇರುವವರು. ಯಾವುದಾದರೂ ಜಾಗ ಇಷ್ಟವಾದರೆ ಘಂಟೆಗಟ್ಟಲೆ ಕಾಲ ಕಳೆಯುತ್ತೇವೆ. ಇದೆಲ್ಲ ಪ್ಯಾಕೇಜ್ ಟೂರ್ ನಲ್ಲಿ ಸಾಧ್ಯವಿಲ್ಲ. ನಮ್ಮ ಫೋಟೋಗ್ರಫಿ ಹುಚ್ಚಿಗೆ ಅಷ್ಟು ಅಚ್ಚುಕಟ್ಟಾದ ಅಥವಾ ಪೂರ್ವ ನಿಗಧಿ ಪಡಿಸಿದ ವ್ಯವಸ್ಥೆ ಸರಿಹೊಂದುವುದಿಲ್ಲ. ಆದರೆ ಈ ಪ್ರವಾಸಕ್ಕೆ ಅನೇಕ ಸವಾಲುಗಳು. ಪ್ರತಿಕೂಲ ಹವಾಮಾನ – ಅಲ್ಲಿ ದಾಖಲಾಗಿರುವ ಕನಿಷ್ಠ ಉಷ್ಣಾಂಶ -55 .1 ಡಿಗ್ರಿ ಸೆ. ನವೆಂಬರ್ ನಿಂದ ಮಾರ್ಚ್- ಏಪ್ರಿಲ್ ವರೆಗೂ ಅತಿಯಾಗಿ ಸುರಿಯುವ ಹಿಮ. ಡಿಸೆಂಬರ್ ತಿಂಗಳ ಕತ್ತಲು ವಾತಾವಾರಣ. ಇದೆಲ್ಲ ನಮ್ಮ ಧೈರ್ಯವನ್ನು ಅಡಗಿಸಿಬಿಟ್ಟಿತು. ಹಾಗಾಗಿ ಈ ಬಾರಿ ಪ್ಯಾಕೇಜ್ ಟೂರ್ ಒಳ್ಳೆಯ ಆಯ್ಕೆ ಅನ್ನಿಸಿ, ಒಳ್ಳೆಯ ವಿಮರ್ಶೆಗಳಿರುವ ಒಂದು ಪ್ಯಾಕೇಜ್ ಟೂರ್ ಬುಕ್ ಮಾಡಿದೆವು. ಫಿನ್ಲ್ಯಾಂಡ್ ನ ರಾಜಧಾನಿಯಾದ ಹೆಲ್ಸಿನ್ಕಿಯಿಂದ ಲ್ಯಾಪ್‌ಲ್ಯಾಂಡ್‌ ವರೆಗೂ ಏಳು ದಿನಗಳ ಪ್ರವಾಸ ವಿವರ ನನ್ನ ಇಮೇಲ್ ತಲುಪಿದಾಗ ನಾಲ್ಕು ತಿಂಗಳು ನಾಳೆಯೇ ಆಗಬಾರದೇ ಎನ್ನಿಸಿತು.

ಪ್ರವಾಸಕ್ಕೆ ಇನ್ನೂ ಹತ್ತು ದಿನ ಬಾಕಿ ಇತ್ತು. ಪ್ರವಾಸದ ದಿನ ಹತ್ತಿರ ಬರುತ್ತಿದ್ದಂತೆ ನಮ್ಮ ಆತಂಕ ಹಾಗೂ ಕುತೂಹಲ ಎರಡೂ ಹೆಚ್ಚಾಗುತ್ತಿತ್ತು. ಎಲ್ಲೆಡೆ ಓಮಿಕ್ರಾನ್ ತಾಂಡವ ಶುರುವಾಗಿತ್ತು. ಯಾವಾಗ ಬೇಕಾದರೂ ನಮ್ಮ ಪ್ರವಾಸ ರದ್ದಾಗಬಹುದು ಅಥವಾ ಹೊಸ ಕಾನೂನು ಬರಬಹುದು. ವಿಮಾನಕ್ಕೆ ಹಾಗೂ ಪ್ಯಾಕೇಜ್ ಟ್ರಿಪ್ಪಿಗೆ ಕಟ್ಟಿದ ಹಣದ ಬಗ್ಗೆಯೂ ಯೋಚನೆ. ಆಗಿದ್ದಾಗಲಿ ತಯಾರಾಗಿಬಿಡುವ ಅಂತ ಗಟ್ಟಿ ಮನಸ್ಸು ಮಾಡಿದೆವು. ಏನೇನು ಬೇಕಾಗಬಹುದು ಎಂದು ಎಲ್ಲಾ ಪಟ್ಟಿ ಮಾಡಿ ದೊಡ್ಡ ಶಾಪಿಂಗ್ ಕೂಡ ಆಯಿತು. ಪ್ಯಾಕಿಂಗ್ ಶುರು ಮಾಡಿದಾಗ ಒಂದು ಭಾಗ ಬಟ್ಟೆಗಳಿಗೆ, ಮತ್ತೊಂದು ಭಾಗ ಅಡುಗೆ ಸಾಮಾನುಗಳಂತೆ ಜೋಡಿಸುತ್ತಾ ಹೋದೆವು. ಬಟ್ಟೆಗಳ ಬಗ್ಗೆ ಮುಂದೆ ಬರೆದಿದ್ದೇನೆ. ಕುಕ್ಕರ್, ಅಕ್ಕಿ, ಬೇಳೆ, ಉಪ್ಪಿಟ್ಟು ಮಿಕ್ಸ್, ಉಪ್ಪಿನಕಾಯಿ ಇತ್ಯಾದಿ ಅಪ್ಪಟ ಕರ್ನಾಟಕದ ಪದಾರ್ಥಗಳನ್ನು ಪ್ಯಾಕ್ ಮಾಡಿ ಎಲ್ಲಾ ಮುಗಿಸಿದೆವು. ನಾವು ಸಸ್ಯಹಾರಿಗಳಾದ್ದರಿಂದ ನಮಗೆ ಯೂರೋಪಿನ ಬಹುತೇಕ ದೇಶಗಳಲ್ಲಿ ದಿನದ ಮೂರು ಹೊತ್ತು ಇಷ್ಟ ಪಟ್ಟು ತಿನ್ನುವ ತಿನಿಸುಗಳು ಸಿಗುವುದಿಲ್ಲ. ಹಾಗಾಗಿ ಸಾಮಾನ್ಯವಾಗಿ ನಾವೇ ಅಡುಗೆ ಮಾಡುವ ಹಾಗೆ ಎಲ್ಲವನ್ನು ತೆಗೆದುಕೊಂಡಿರುತ್ತೇವೆ. ಅದು ಹೊಟ್ಟೆಗೆ ಹಾಗೂ ಜೇಬಿಗೆ ಎರಡಕ್ಕೂ ಹಿತ! ಹಾಗಂತ ಅಲ್ಲಿಯ ವಿಶೇಷ ಆಹಾರ ಪದಾರ್ಥಗಳನ್ನು ತಿನ್ನುವುದಿಲ್ಲ ಅಂತಲ್ಲ. ಖಂಡಿತವಾಗಿ ಅದನ್ನೆಲ್ಲ ಸವಿಯುತ್ತೇವೆ. ಆದರೆ ದಿನದ ಮೂರು ಹೊತ್ತೂ ಅದರ ಮೇಲೆ ಅವಲಂಬಿತವಾಗುವುದಿಲ್ಲ.

ಹೆಲ್ಸಿಂಕಿಯಲ್ಲಿ ಪರದಾಟ

ನೋಡನೋಡುತ್ತಿದ್ದಂತೆ ಪ್ರವಾಸದ ದಿನ ಬಂದೆ ಬಿಟ್ಟಿತು. ಮ್ಯುನಿಕ್‌ನಿಂದ ಹೆಲ್ಸಿಂಕಿಗೆ ವಿಮಾನ. ಫಿನ್ಲ್ಯಾಂಡ್ ರಾಜಧಾನಿಯಾದ ಹೆಲ್ಸಿಂಕಿ ಬಾಲ್ಟಿಕ್ ಸಮುದ್ರ ತೀರದ ಒಂದು ನಗರ. ಹೆಲ್ಸಿಂಕಿ ಹತ್ತಿರ ಹತ್ತಿರ ಬರುತ್ತಿದ್ದಂತೆ ಬಾಲ್ಟಿಕ್ ಸಮುದ್ರವೂ ಹೆಪ್ಪುಗಟ್ಟಿದ ದೃಶ್ಯಗಳು ವಿಮಾನದೊಳಗೆ ಕೂತಿದ್ದ ನನ್ನ ಬೆನ್ನುಹುರಿಯಲ್ಲಿ ನಡುಕ ಹುಟ್ಟಿಸಿತು! ದೊಡ್ಡ ಹಡಗೊಂದು ಹೆಪ್ಪುಗಟ್ಟಿರುವ ಹಿಮವನ್ನು ಸೀಳಿಕೊಂಡು ಮುನ್ನುಗ್ಗುತ್ತಿರುವ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ.

(ಹೆಪ್ಪುಗಟ್ಟಿರುವ ಬಾಲ್ಟಿಕ್ ಸಮುದ್ರದ ಪಕ್ಷಿ ನೋಟ)

ಬಹುತೇಕ ಪ್ರವಾಸಗಳಲ್ಲಿ ಉಳಿದುಕೊಳ್ಳಲು ಅಪಾರ್ಟ್ಮೆಂಟ್ ಬುಕ್ ಮಾಡುವುದು ನಮ್ಮ ಅಭ್ಯಾಸ. ಅಡುಗೆಗೆ ಅನುಕೂಲವಾಗುತ್ತದೆ ಹಾಗೂ ಜನ ವಸತಿ ಪ್ರದೇಶದಲ್ಲಿ ಇರುವುದರಿಂದ ಪ್ರಶಾಂತವಾಗಿರುತ್ತದೆ. ಆದರೆ ಇದಕ್ಕೆ ಕೆಲವು ಅನಾನುಕೂಲಗಳೂ ಇವೆ. ಹೋಟೆಲಿನಲ್ಲಿ ಇದ್ದಂತೆ ಯಾವಾಗಲೂ ರಿಸೆಪ್ಷನ್ ಇರುವುದಿಲ್ಲ. ನಾವು ಮುಂಚಿತವಾಗಿ ಇಷ್ಟೊತ್ತಿಗೆ ಅಪಾರ್ಟ್ಮೆಂಟ್ ಹತ್ತಿರ ಬರುತ್ತೇವೆ ಎಂದು ತಿಳಿಸಿದರೆ ಅಷ್ಟೊತ್ತಿಗೆ ಬಂದು ಮನೆಯ ಕೀಲಿ ಕೊಟ್ಟು, ಎಲ್ಲವನ್ನು ಒಮ್ಮೆ ವಿವರಿಸಿ ಹೋಗುತ್ತಾರೆ. ಸಾಮಾನ್ಯವಾಗಿ ಯಾವ ತಾಪತ್ರಯವೂ ಇಲ್ಲದಂತೆ ನೋಡಿಕೊಳ್ಳುತ್ತಾರೆ. ಏಕೆಂದರೆ ಉಳಿದುಕೊಳ್ಳುವರ ವಿಮರ್ಶೆಗಳ ಮೇಲೆಯೇ ಅವರ ಮುಂದಿನ ವ್ಯವಹಾರ ವೃದ್ಧಿಯಾಗುವುದು.

ಬಹಳ ವರ್ಷಗಳಿಂದ ಈ ವ್ಯವಸ್ಥೆಯನ್ನು ನೆಚ್ಚಿಕೊಂಡಿದ್ದ ನಮಗೆ ಇಲ್ಲಿಯವರೆಗೆ ದೊಡ್ಡ ನಿರಾಸೆಯಾಗುವಂಥಹ ಘಟನೆಗಳು ನಡೆದಿರಲಿಲ್ಲ. ಸಣ್ಣ ಪುಟ್ಟ ಕುಂದುಕೊರತೆಗಳಿದ್ದರೂ, ತೀರಾ ಮನಸ್ಸಿನ ಮೂಡ್ ಕೆಡಿಸುವಂತಹ ಸನ್ನಿವೇಶ ಬಂದಿರಲಿಲ್ಲ. ಹಾಗಾಗಿ ನಾವೂ ಸಹ ಅಷ್ಟು ತಲೆ ಬಿಸಿ ಮಾಡಿಕೊಂಡಿರಲಿಲ್ಲ. ಹೆಲ್ಸಿಂಕಿಯಲ್ಲಿ ಇಳಿದು ಮನೆಯ ಮಾಲೀಕರಿಗೆ ಫೋನ್ ಮಾಡಿದರೆ ಯಾರೂ ಉತ್ತರಿಸುತ್ತಿಲ್ಲ. ಹೊರಗಡೆ ನಡುಗುವ -14 ಡಿಗ್ರಿ ಸೆ ತಾಪಮಾನ. ಕೊನೆಗೆ ಮನೆಯ ಹತ್ತಿರವೇ ಹೋಗಿ ನೋಡೋಣ ಎಂದು ಅಲ್ಲೇ ಹೋದೆವು. ಅಲ್ಲಿಯೂ ಯಾರು ಇಲ್ಲ!

(ಹೆಲ್ಸಿಂಕಿ ರೈಲ್ವೆ ನಿಲ್ದಾಣ)

ನವೆಂಬರ್ ಇಂದ ಮಾರ್ಚ್- ಏಪ್ರಿಲ್ ವರೆಗೂ ಅತಿಯಾಗಿ ಸುರಿಯುವ ಹಿಮ. ಡಿಸೆಂಬರ್ ತಿಂಗಳ ಕತ್ತಲು ವಾತಾವಾರಣ. ಇದೆಲ್ಲ ನಮ್ಮ ಧೈರ್ಯವನ್ನು ಅಡಗಿಸಿಬಿಟ್ಟಿತು. ಹಾಗಾಗಿ ಈ ಬಾರಿ ಪ್ಯಾಕೇಜ್ ಟೂರ್ ಒಳ್ಳೆಯ ಆಯ್ಕೆ ಅನ್ನಿಸಿ, ಒಳ್ಳೆಯ ವಿಮರ್ಶೆಗಳಿರುವ ಒಂದು ಪ್ಯಾಕೇಜ್ ಟೂರ್ ಬುಕ್ ಮಾಡಿದೆವು.

ಈ ಅನಿರೀಕ್ಷಿತ ಸನ್ನಿವೇಶದಲ್ಲಿ ಬುಕಿಂಗ್ ಡಾಟ್ ಕಾಮ್ ಗ್ರಾಹಕರ ಸೇವೆ ವಿಭಾಗಕ್ಕೆ ಕರೆ ಮಾಡಿದರೆ, ಆ ಕಡೆಯಿಂದ ಉತ್ತರಿಸುವ ಆಸಾಮಿಗೆ ಎಲ್ಲಿಲ್ಲದ ತಾಳ್ಮೆ. ನಾವು ಚಳಿಯಲ್ಲಿ ನಡುಗಿ ಸಾಯುತ್ತಿದ್ದರೆ ಅವನು ಅತಿ ವಿನಯದಿಂದ, ನಿಧಾನವಾಗಿ ಎಲ್ಲವನ್ನೂ ಕೇಳಿ ಮತ್ತೆ ಅದನ್ನೇ ಜಿಲೇಬಿಯ ರೀತಿ ತಿರುಗಿಸಿ ವಾಪಸ್ ಹೇಳಿ ಹೇಳಿ ಜೀವ ಹಿಂಡಿದ. ಒಮ್ಮೊಮ್ಮೆ ಅತಿಯಾದ ತಾಳ್ಮೆಯೂ ಎದುರಿಗಿದ್ದವರ ತಾಳ್ಮೆಗೆಡಿಸುತ್ತದೆ! ಚಳಿ ಯಾವ ಮಟ್ಟಕ್ಕಿತ್ತೆಂದರೆ ಮಾತನಾಡುವಾಗ ನನ್ನ ವಸಡುಗಳು ಕಂಪಿಸುತ್ತಿದ್ದವು, ತುಟಿ ಮರಗಟ್ಟಿ ಹೋಗಿತ್ತು, ನಾಲಿಗೆ ಹೊರಳುತ್ತಿರಲಿಲ್ಲ. ಮೊಬೈಲ್ ಫೋನ್ ಹಿಡಿದ ಹಸ್ತದ ಮಾಂಸ ದಾಟಿ ಮೂಳೆಗೆ ರಾಚುತ್ತಿದ್ದ ಚಳಿರಾಯ ಯಾವ ಕಾಲದ ಶತ್ರುವೋ ಎಂದು ಭಾಸವಾಗುತಿದ್ದ. ಜೊತೆಗೆ ನನ್ನ ಹೆಂಡತಿ ಹಾಗೂ ನಮ್ಮೊಟ್ಟಿಗೆ ಬಂದಿದ್ದ ಸ್ನೇಹಿತ ದಂಪತಿಗಳು ಚಳಿಯಲ್ಲಿ ನಡುಗುತ್ತಾ ನಿಂತಿದ್ದರು. ಆವತ್ತು ಡಿಸೆಂಬರ್ 25! ಕ್ರಿಸ್ಮಸ್ ರಜೆಯ ನಿಮಿತ್ತ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದಾಗಿದ್ದವು. ಆಶ್ರಯ ಪಡೆಯಲು ಯಾವ ಅವಕಾಶಗಳೂ ಇರಲಿಲ್ಲ. ನಾವು ಚಳಿಯಲ್ಲಿ ಸಾಯುತ್ತಿದ್ದರೆ, ಗ್ರಾಹಕರ ಸೇವೆಯ ಆಸಾಮಿ ನಲವತ್ತು ನಿಮಿಷ ಮಾತಾಡಿ ಬೇರೆಯೊಂದು ಮನೆಯನ್ನು ಹುಡುಕಿ ಬುಕ್ ಮಾಡಿದ. ಅವನೇನಾದರೂ ಎದುರಿಗದ್ದಿದ್ದರೆ ಕಥೆಯೇ ಬೇರೆಯಿರುತ್ತಿತ್ತು! ಯಾವುದೋ ಕನ್ನಡ ಸಿನೆಮಾದಲ್ಲಿ ವಿಮಾನವೊಂದು ಹಿಡಿತ ತಪ್ಪಿ ಬೀಳುವ ಸಂದರ್ಭದಲ್ಲಿ, ಕಂಟ್ರೋಲ್ ರೂಮಿಗೆ ಕರೆ ಮಾಡಿದಾಗ, ಆ ಕಡೆಯಿಂದ ಸಾಧು ಕೋಕಿಲ ಅತಿಯಾದ ತಾಳ್ಮೆ ಹಾಗೂ ವಿನಯದಿಂದ ಅಭಿನಯಿಸಿರುವ ತುಣುಕು ನೆನಪಾಗಿ ಎಲ್ಲರೂ ನಗುತ್ತಾ, ಸಿಕ್ಕ ಬೇರೆ ಮನೆಯೊಳಗೆ ಹೊಕ್ಕೆವು.

ಪ್ರವಾಸದ ಮೊದಲ ದಿನವೇ ನಮಗೆ ನಿರಾಸೆಯಾಗಿತ್ತು. ಆ ಮನೆ ನಾಲ್ಕು ಜನಕ್ಕೆ ಆಗುವಂತಿರಲಿಲ್ಲ. ಅದೊಂದು ಸ್ಟುಡಿಯೋ ಅಪಾರ್ಟ್ಮೆಂಟ್! ಪ್ರತ್ಯೇಕ ಕೋಣೆಯಿಲ್ಲ. ಇಬ್ಬರಿಗೆ ಒಂದು ಮಂಚವಿತ್ತು. ಮತ್ತಿಬ್ಬರು ಕೆಳಗೆ ಕಾರ್ಪೆಟ್ ಮೇಲೆ ಮಲಗುವ ಸಂದರ್ಭ. ಕೆಳಗೆ ಮಲಗುವುದು ಕೀಳು ಭಾವನೆ ಅಂತಲ್ಲ, ಎರಡು ದಿನಕ್ಕೆ ಇನ್ನೂರು ಯೂರೋ ದುಡ್ಡು ತೆತ್ತು ಕಾರ್ಪೆಟ್ ಮೇಲೆ ಮಲಗಬೇಕಲ್ಲ ಅಂತ ಬೇಜಾರಾಯಿತು. ಅಡುಗೆಗೆ ಎಲೆಕ್ಟ್ರಿಕ್ ಒಲೆ ಕೂಡ ಅಲ್ಲಿಯೇ. ಅಡುಗೆ ಮಾಡಲು ಬೇಕಾದ ಚಾಕು, ಚಮಚ, ಪಾತ್ರೆಗಳೆಲ್ಲ ಎತ್ತರದ ಒಂದು ಕುರ್ಚಿಯ ಮೇಲೆ ನಿಂತರೆ ಮಾತ್ರ ಎಟುಕುವ ಕಪಾಟಿನಲ್ಲಿ. ಮೊದಮೊದಲು ಕಸಿವಿಸಿ ಎನ್ನಿಸಿದರೂ, ಬಾಲ್ಯದಲ್ಲಿ ಅಜ್ಜಿಯ ಮನೆಯಲ್ಲಿ ಕಸಿನ್ಸ್ ಎಲ್ಲ ಸೇರಿದಾಗ ಹೇಗಿತ್ತು ಎಂದೆಲ್ಲಾ ನೆನಪಾಯಿತು. ಬಿಸಿ ಬಿಸಿ ಉಪ್ಪಿಟ್ಟು ಎರಡು ನಿಮಿಷಗಳಲ್ಲಿ ತಯಾರಾಗಿ ನಿಂಬೆ ಉಪ್ಪಿನಕಾಯಿಯ ಜೊತೆ ತಿಂದು ಮಲಗಿದರೆ ಮತ್ತೆ ಬೆಳಗ್ಗೆಯೇ ಎಚ್ಚರವಾದದ್ದು.

(ಕ್ರಿಸ್ಮಸ್ ದೀಪಗಳಿಂದ ಕಂಗೊಳಿಸುತ್ತಿರುವ ಹೆಲ್ಸಿಂಕಿ)

ತಾಲಿನ್ ಹಾಗೂ ಹೆಲ್ಸಿಂಕಿ

ನಮ್ಮ ಪ್ರವಾಸದ ಎರಡನೆಯ ದಿನ ಎಸ್ಟೋನಿಯಾದ ತಾಲಿನ್‌ ಭೇಟಿ. ಯೂರೋಪಿನ ನಗರಗಳಲ್ಲಿ ನನಗೆ ವಿಶೇಷ ಅನ್ನಿಸಿದ್ದು ತಾಲಿನ್! ಇಲ್ಲಿನ ಅಹಿಂಸಾತ್ಮಕ ಸ್ವಾತಂತ್ರ್ಯ ಚಳುವಳಿಯ ಬಗೆಗೆ ತಿಳಿದಾಗ ಭಾರತೀಯನಾದ ನನಗೆ ಆಶ್ಚರ್ಯ ಹಾಗೂ ಸಂತಸ ಎರಡೂ ಆಯಿತು. ಹೆಲ್ಸಿಂಕಿಯಿಂದ ಎರಡೂವರೆ ಘಂಟೆ ಹಡಗಿನಲ್ಲಿ ಪ್ರಯಾಣಿಸಿ ತಾಲಿನ್ ತಲುಪಿದ್ದೆವು. ಮೊದಲ ಬಾರಿ ನೋಡಿದ ಎಂಟು ಅಂತಸ್ತಿನ ಐಷಾರಾಮಿ ಹಡಗು, ಸಮುದ್ರದ ದೃಶ್ಯಗಳು ಮನಸೆಳೆದವು. ತಾಲಿನ್‌ನಲ್ಲಿ ಕ್ರಿಸ್ಮಸ್ ಮಾರುಕಟ್ಟೆ, ಕಿರಿದಾದ ರಸ್ತೆಗಳಲ್ಲಿನ ಓಡಾಟ, ಅಲೆಕ್ಸಾಂಡರ್ ಚರ್ಚ್, ಗಾಯನ ಕ್ರಾಂತಿಯ ಬಗ್ಗೆ ಚರ್ಚೆ ಹೀಗೆ ಕಾಲ ಕಳೆದದ್ದು ಗೊತ್ತಾಗಲೇ ಇಲ್ಲ. ಇದರ ಮಧ್ಯೆ ಒಳ್ಳೆಯ ಉತ್ತರ ಭಾರತೀಯ ಶೈಲಿಯ ಊಟ ಸವಿದದ್ದು ಹೊಟ್ಟೆಯ ಚಿಂತೆಯನ್ನು ದೂರವಾಗಿಸಿತು. ಮತ್ತೆ ಸಂಜೆ ವಾಪಾಸ್ ಅದೇ ಹಡಗಿನಲ್ಲಿ ಹೆಲ್ಸಿಂಕಿಗೆ ಪ್ರಯಾಣ. ಅಷ್ಟೊತ್ತಿಗೆ ಕತ್ತಲಾಗಿದ್ದರಿಂದ ಹೊರಗೆ ನೋಡಲು ಏನೂ ಕಾಣಿಸುತ್ತಿರಲಿಲ್ಲ. ಸಮಯ ಕಳೆಯಲು ಪ್ರಯಾಣದುದ್ದಕ್ಕೂ ನಮ್ಮ ಬಳಿ ಇದ್ದ ಯಾವುದೋ ಹಾಳೆಯನ್ನು ಹರಿದು ರಾಜ, ರಾಣಿ, ಕಳ್ಳ, ಪೊಲೀಸ್ ಆಡಿದೆವು.

ತಾಲಿನ್ ಬಗ್ಗೆ ವಿವರವಾಗಿ ಒಂದು ಲೇಖನವನ್ನು ಹಿಂದಿನ ಸಂಚಿಕೆಯಲ್ಲಿ ಈಗಾಗಲೇ ನೀವು ಓದಿರಬಹುದು.  ವಿವರ ಇಲ್ಲಿದೆ.

(ರಾಕ್ ಚರ್ಚ್ ಒಳನೋಟ)

ಮೂರನೆಯ ದಿನ ಸಂಜೆ ನಮ್ಮ ಲ್ಯಾಪ್ಲ್ಯಾಂಡ್ ಪ್ರವಾಸದ ಆರಂಭ. ಅಲ್ಲಿಯವರೆಗೂ ಹೆಲ್ಸಿಂಕಿಯಲ್ಲಿ ಸುತ್ತಾಡಿ ಸಮಯ ಕಳೆದೆವು. ಒಂದು ದಿನದ ಪಾಸ್ ತೆಗೆದುಕೊಂಡಿದ್ದರಿಂದ ಪ್ರತಿ ಬಾರಿ ಟಿಕೆಟ್ ತೆಗೆದುಕೊಳ್ಳುವ ತಲೆ ಬಿಸಿ ಇರಲಿಲ್ಲ. ಕ್ರಿಸ್ಮಸ್ ಹಬ್ಬದ ಸಮಯವಾದ್ದರಿಂದ ಊರು ನವ ವಧುವಿನಂತೆ ಸಿಂಗಾರಗೊಂಡಿತ್ತು. ಮಧ್ಯಾಹ್ನವೇ ಕತ್ತಲಾಗುತ್ತಿದ್ದಂತೆ, ಹೆಲ್ಸಿಂಕಿ ಜಗಮಗಿಸಲು ಪ್ರಾರಂಭಿಸಿತ್ತು. ಹೆಲ್ಸಿಂಕಿಯಲ್ಲಿ ಸುತ್ತಾಡಿದ ಜಾಗಗಳಲ್ಲಿ, ಇಲ್ಲಿನ ರಾಕ್ ಚರ್ಚ್ ವಿಶಿಷ್ಟ ವಾಸ್ತುಶಿಲ್ಪದಿಂದ ಕೂಡಿದೆ. ಹೊರಗಿಂದ ಸಾಮಾನ್ಯವಾಗಿ ಕಾಣುವ ಈ ಚರ್ಚ್ ಒಳ ಹೊಕ್ಕ ಮೇಲೆ ಬೇರೆಯ ರೂಪವನ್ನೇ ತಾಳುತ್ತದೆ. ಇದು ಹೆಲ್ಸಿಂಕಿಯಲ್ಲಿ ನನಗೆ ಇಷ್ಟವಾದ ಜಾಗ.

ಫಿನ್ಲ್ಯಾಂಡ್ ಬಗೆಗಿನ ಹದಿನೈದು ನಿಮಿಷದ 4D ಸಿನೆಮಾ ನೋಡಿದ್ದು ಆಕರ್ಷಣೀಯ ಎನ್ನಿಸಿತು. ಸಂಪೂರ್ಣ ಫಿನ್ಲ್ಯಾಂಡ್ ನ ರೋಚಕ ಇತಿಹಾಸ ಪರಿಚಯವಾಯಿತು. ಅಲ್ಲಿನ ಪರ್ವತ ಶ್ರೇಣಿಗಳು, ವನ್ಯ ಜೀವಿಗಳ ಪರಿಚಯ, ವಿವಿಧ ಋತುಗಳಲ್ಲಿನ ಮಾಹಿತಿ, ರಾಷ್ಟ್ರೀಯ ಉದ್ಯಾನವನಗಳ ಪರಿಚಯ ಈ ಚಿಕ್ಕ ಕಿರುಚಿತ್ರದ ಜೀವಾಳ. ವಿಶೇಷ ಕನ್ನಡಕದ ಸಹಾಯದಿಂದ 3D ಕಾಣುತಿತ್ತು. ನಾಲ್ಕನೇ ಆಯಾಮವೆಂದರೆ ಬೆಳ್ಳಿ ಪರದೆಯ ಮೇಲೆ ಮಳೆ ಬಂದರೆ ನಮ್ಮ ಮೇಲೂ ನೀರು ಬಿತ್ತು, ಅಲ್ಲಿ ಕ್ಯಾಮೆರಾ ವಾಲಿದರೆ ನಮ್ಮ ಕುರ್ಚಿ ಕೂಡ ವಾಲುತಿತ್ತು, ಪರದೆಯ ಮೇಲೆ ಹಿಮ ಬಿದ್ದರೆ ನಮ್ಮ ಮೇಲೂ ಹಿಮ ಬಿದ್ದ ಹಾಗೆ ಮಾಡಿದ್ದರು. ಯಾವುದೋ ಕಾರ್ಟೂನ್ ಗಷ್ಟೇ ಸೀಮಿತವಾಗಿರುವ ಈ ತಂತ್ರಜ್ಞಾವನ್ನು ಇಲ್ಲಿ ಫಿನ್ಲ್ಯಾಂಡ್ ಪರಿಚಯಿಸಲು ಉಪಯೋಗಿಸಿರುವ ರೀತಿ ಮಾದರಿಯೇ ಸರಿ. ನಮ್ಮ ಕರ್ನಾಟಕದ ಬಗ್ಗೆ ಯಾಕೆ ಈ ಪ್ರಯೋಗ ನಡೆಯಬಾರದು? ಅದನ್ನು ಬಿಟ್ಟರೆ ರಷಿಯನ್ ಶೈಲಿಯ ಈರುಳ್ಳಿ ಗುಮ್ಮಟದ ಚರ್ಚ್, ಕ್ಯಾಥೆಡ್ರೆಲ್ ಇಲ್ಲಿನ ಇತರೆ ಪ್ರಮುಖ ಆಕರ್ಷಣೆಗಳು. ಇಷ್ಟೆಲ್ಲಾ ನೋಡಿ ಲಾಕರ್ ನಿಂದ ನಮ್ಮ ಲಗೇಜ್ ಎತ್ತಿಕೊಂಡು ಬಸ್ ನಿಲ್ದಾಣಕ್ಕೆ ಬಂದರೆ ನಮ್ಮ ಲ್ಯಾಪ್ಲ್ಯಾಂಡ್ ಪ್ರವಾಸದ ಬಸ್ ಕಾಯುತಿತ್ತು. ಲ್ಯಾಪ್ಲ್ಯಾಂಡ್ ಬಗೆಗಿನ ಕುತೂಹಲ ಇನ್ನೂ ಹೆಚ್ಚಾಗಿತ್ತು.

(ಹೆಲ್ಸಿಂಕಿ ಕ್ಯಾಥೆಡ್ರೆಲ್ ನೋಟ)

(ಹೆಲ್ಸಿಂಕಿ ಚರ್ಚ್)

ಓದುಗರಿಗಾಗಿ ಫಿನ್ಲ್ಯಾಂಡ್ ಬಗ್ಗೆ ಕಿರು ಮಾಹಿತಿ:

• ಫಿನ್ಲ್ಯಾಂಡ್: ಯುರೋಪಿನ ಈಶಾನ್ಯ ದಿಕ್ಕಿನ ರಾಷ್ಟ್ರ.
• ಜನಸಂಖ್ಯೆ: ಸುಮಾರು ಐವತ್ತೈದು ಲಕ್ಷ
• ಭೂ ಭಾಗದ ವಿಸ್ತೀರ್ಣ: 338 ಸಾವಿರ ಚದರ ಕಿಲೋಮೀಟರು (ಕರ್ನಾಟಕಕ್ಕಿಂತ ಸುಮಾರು ಎರಡು ಪಟ್ಟು ದೊಡ್ಡದು)
• ರಾಜಧಾನಿ: ಹೆಲ್ಸಿಂಕಿ
• ಕರನ್ಸಿ: ಯುರೋ
• ಅಧಿಕೃತ ಭಾಷೆ: ಫಿನ್ನಿಷ್. ಈ ಭಾಷೆಯಲ್ಲಿ ನಮಸ್ಕಾರ/ಹಲೋ ಹೇಳಲು “ಹೇ” ಎಂದೂ ಧನ್ಯವಾದ ಹೇಳುವುದಾದರೆ “ಕಿಟೋಸ್” ಎನ್ನಬೇಕು.
• ಭೇಟಿ ನೀಡಲು ಉತ್ತಮ ಸಮಯ: ಅರೋರಾ ನೋಡಲು ಚಳಿಗಾಲ ಉತ್ತಮ. ನಗರಗಳನ್ನು ಸುತ್ತಾಡಲು ಬೇಸಿಗೆ ಒಳ್ಳೆಯದು.
• ಹೆಲ್ಸಿಂಕಿಗೆ ಮಾರ್ಗಗಳು: ಅಂತಾರಾಷ್ಟ್ರೀಯ ವಿಮಾನ ಹಾಗು ಅಂತಾರಾಷ್ಟ್ರೀಯ ಜಲಮಾರ್ಗ.
• ಗಡಿ ದೇಶಗಳು: ರಷಿಯಾ, ನಾರ್ವೆ ಹಾಗು ಸ್ವೀಡೆನ್ ಭೂ ಗಡಿಭಾಗನ್ನು ಹಂಚಿಕೊಂಡಿವೆ.

ಮುಂದಿನ ಅಂದರೆ 26 ಫೆಬ್ರವರಿ 2022ರ ಸಂಚಿಕೆಯಲ್ಲಿ ಲ್ಯಾಪ್ಲ್ಯಾಂಡಿನಲ್ಲಿ ನಮ್ಮ ಉಡುಗೆ-ತೊಡುಗೆ ಹೇಗಿತ್ತು ಮತ್ತು ಅಲ್ಲಿಯ ಪ್ರಕ್ರತಿ ವಿಸ್ಮಯವಾದ ಹಗಲು ಬೆಳಕಿನ ವ್ಯತ್ಯಾಸವನ್ನು ನೋಡೋಣ.

(ಫೋಟೋಗಳು: ಲೇಖಕರವು)

(ಮುಂದುವರೆಯುವುದು)