ಒಂದು ನಿಸರ್ಗದಲ್ಲಿ ಸ್ವತಂತ್ರವಾಗಿ ಜೀವಿಸುತ್ತಿರುವ ಆನೆಗಳು ನಶಿಸುತ್ತಿರುವುದು. ಮತ್ತೊಂದು, ಮಾನವರ ಪೋಷಣೆಯಲ್ಲಿರುವ ಬಂಧಿತ ಮತ್ತು ಪಳಗಿದ ಆನೆಗಳನ್ನು ನಾವುಗಳು ಬಳಸಿಕೊಳ್ಳುತ್ತಿರುವ ಕ್ರೂರ ವಿಧಾನಗಳು, ಧೋರಣೆಗಳು, ಮತ್ತು ಅವುಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ಸಲಹಿ ಪೋಷಿಸುವ ಮಾವುತರನ್ನು ನಿರ್ಲಕ್ಷಿಸಿರುವುದು. ಈ ಅಪಾಯಕಾರಿ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಆನೆಗಳ ಸಂತತಿಯನ್ನು ಕಾಪಾಡಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲಿಫೆಂಟ್ ಟೂರಿಸಂ ಚರ್ಚೆಗಳು ವ್ಯಾಪಕವಾಗಿವೆ. ಹಿಂದೊಮ್ಮೆ, ೧೯೭೦ ರಿಂದ ೨೦೦೦ ಇಸವಿಗಳ ದಶಕಗಳಲ್ಲಿ ಹೀಗೆಯೇ ಹುಲಿಯನ್ನು, ಅವು ವಾಸಿಸುವ ಪ್ರದೇಶಗಳನ್ನು ಕಾಪಾಡುವ ಪ್ರಯತ್ನಗಳು ವ್ಯಾಪಕವಾಗಿ ನಡೆದಿದ್ದವು.
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ.

 

ಕೈ ಮೇಲೆ ಹದ್ದನ್ನು ಕೂರಿಸಿಕೊಂಡಿದ್ದ ಅವಳು ಮತ್ತು ಹದ್ದಿನ ಜೊತೆ ತಾನೂ ಒಂದು ದೊಡ್ಡ ಪಕ್ಷಿಯಾಗಿ ಯಾವುದೇ ಕ್ಷಣದಲ್ಲಿ ಹಾರಿಹೋಗುವಂತೆ ನಿಂತಿದ್ದಳು. ನನಗೆ ಗೊತ್ತಿಲ್ಲದಂತೆ ಅದು ನನ್ನ ಫೋನ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಫೋಟೋವನ್ನ ಮೊದಲು ನೋಡಿದ ಮಗರಾಯ, ‘ಓಹ್, ಶಿ ಈಸ್ ಟ್ರೈಯಿಂಗ್ ಟು ಫ್ಲೈ ಅವೇ,’ ಎಂದು ಉದ್ಗರಿಸಿದ. ಮೈಸುಡುವ ಈ ಬಿಸಿಲಿನಿಂದ ಅಥವಾ ದಿನಕ್ಕೆರಡು ಬಾರಿ ತನ್ನ BOP (Bird of Prey) ಷೋಗೆ ಬರುವ ಪ್ರೇಕ್ಷಕರ ಮುಂದೆ ನಿಂತು ಹೇಳಿದ್ದನ್ನೇ ಹೇಳುತ್ತಾ ಬೇಸರವಾಗಿ ಆ ಉದ್ಯೋಗದಿಂದಲೇ ಹಾರಿಹೋಗಿ ಬಿಡುವ ಮನಸ್ಸು ಹದ್ದಿಗೂ, ಹುಡುಗಿಗೂ ಇತ್ತಾ, ಎನಿಸಿತು.

ಫೋಟೋದ ಮೂಲಕ ಅರೆಕ್ಷಣದ ಅವಳ ಆ ಭಂಗಿ ಆಗಾಗ ಕಣ್ಣ ಮುಂದೆ ಬರುತ್ತಿದೆ. ಹಾರಿಹೋಗುವ ಮನಸ್ಸುಗಳ ಬಗ್ಗೆ ಕಲ್ಪನೆ ಮೂಡುತ್ತದೆ. ಬಂಧನದಲ್ಲಿರುವುದು ಯಾರಿಗೆ ತಾನೇ ರುಚಿಸುತ್ತದೆ? ಸ್ವಾತಂತ್ರ್ಯ ಎಂಬುದು ಎಲ್ಲಾ ಜೀವಿಗಳ ಮೂಲಭೂತ ಭಾವ ಅಲ್ಲವೇ? ಯಾಕದನ್ನ ಪ್ರಮುಖ ಮೂಲಭಾವಗಳಲ್ಲಿ ಒಂದು ಎಂದು ಮನೋವಿಜ್ಞಾನಿಗಳು ಪಟ್ಟಿ ಮಾಡಲಿಲ್ಲ ಅನಿಸುತ್ತದೆ. ಯೂರೋಪ್, ಬ್ರಿಟನ್, ಅಮೆರಿಕಾದ ಘಟಾನುಘಟಿ ಮನೋವಿಜ್ಞಾನಿಗಳ ಸಿದ್ಧಾಂತಗಳ ಬಗ್ಗೆ ಸಂಶಯ ಉಂಟಾಗುತ್ತದೆ. ಸಂಶಯಗಳ ನಡುವೆ ಸಮಾಧಾನವೆಂದರೆ ಎಮೋಷನಲ್ ಇಂಟೆಲಿಜೆನ್ಸ್ ಬಗ್ಗೆ ಕಡೆಗೂ ಗೋಲ್ಮನ್ ಮಾತನಾಡಿದ. ವಿಷಯ ಎಲ್ಲೆಲ್ಲಿಗೋ ಹೋಗುತ್ತಿದೆ.

(Bird of Prey)

ಸಾಂಕ್ಚುರಿ (Sanctuary)ಯಲ್ಲಿ ಆವತ್ತು ನೋಡಿದ ವಿವಿಧ ಹದ್ದುಗಳು, ಗಿಡುಗ, ಗೂಬೆಗಳ ಸೌಂದರ್ಯದ ಜೊತೆಗೆ ಆ ಮೂರೂ ಹದ್ದುಗಳು ಮತ್ತು ಗಿಡುಗ ಅನುಭವಿಸಿದ್ದ ಗಾಯಗಳು, ಅವುಗಳ ವ್ಯಥೆಯ ಕತೆಯನ್ನು ಕೇಳಿ ಮನ ಮೀಟಿತ್ತು. ಈಗೇನೋ ಅವು ಆರೋಗ್ಯದಿಂದ ಬದುಕುತ್ತಿವೆ. ಆದರೆ ದಿನಕ್ಕೆ ಎರಡು ಬಾರಿ ತಮ್ಮ ಮನೆಯಾಗಿರುವ ಪ್ರಾಣಿಪಕ್ಷಿಧಾಮಕ್ಕೆ ಭೇಟಿಕೊಡುವ ಜನರ ಮುಂದೆ ಬಂದು ನಿಂತುಕೊಂಡು ಷೋಟೈಮ್ ನಲ್ಲಿ ಭಾಗವಹಿಸುವ ಪಾಡು ಅವಕ್ಕೆ. ಆರೋಗ್ಯ ಸುಧಾರಿಸಿದ ಮೇಲೆ ಅವನ್ನು ಯಾಕೆ ಮರಳಿ ಪ್ರಕೃತಿಯಲ್ಲಿ ಬಿಟ್ಟುಬಿಡಲಿಲ್ಲ ಎನ್ನಿಸುತ್ತದೆ. ಮತ್ತೆ ಮನಸ್ಸು ಸ್ವತಂತ್ರ, ಮೂಲಭಾವಗಳು, ಎಲ್ಲಾ ಜೀವಿಗಳು ಎಂಬುದರ ಕಡೆಗೇ ವಾಲುತ್ತಿದೆ.

ಪ್ರಾಣಿಪಕ್ಷಿಗಳ ಪರವಾಗಿ ನಿಂತು ಅವುಗಳ ಹಕ್ಕುಗಳಿಗಾಗಿ ಹೋರಾಡುತ್ತಿರುವ ಮಂದಿ ಒಂದು ಕಡೆ. ಇನ್ನೊಂದು ಕಡೆ ಅವನ್ನು ಸಂರಕ್ಷಿಸಿ, ಸುರಕ್ಷಿತವಾಗಿ ಆಶ್ರಯ ಧಾಮಗಳಲ್ಲಿ ಇಟ್ಟು ಕಾಪಾಡುತ್ತಾ, ಸಲಹುತ್ತಾ, ನಶಿಸಿಹೋಗುತ್ತಿರುವ ಹಲವಾರು ಪ್ರಾಣಿಪಕ್ಷಿ ಸಂತತಿಗಳನ್ನು ಉಳಿಸಲು ಪ್ರಯತ್ನಿಸುತ್ತಿರುವ ಮಂದಿ ಇದ್ದಾರೆ. ಮತ್ತೊಂದು ಕಡೆ ಪ್ರಾಣಿಪಕ್ಷಿ, ಪ್ರಕೃತಿ, ಕಾಡು, ಬೆಟ್ಟ ಎಲ್ಲವನ್ನೂ ಒಳಪಡಿಸಿ, ಅವುಗಳ ಉಳಿವಿಗಾಗಿ ಎಂಬಂತೆ ಪ್ರವಾಸೋದ್ಯಮ (tourism) ಅನ್ನೋ ವಿಷಯವನ್ನು ನಾನಾ ವಿಧದಲ್ಲಿ ಹಬ್ಬಿ ಹರಡುವ ಪ್ರಯತ್ನಗಳು. ಯಾವತ್ತೂ ಇರುವಂತೆ, ಇರಬೇಕಾದಂತೆ ಇವೆಲ್ಲದರಲ್ಲೂ ಬೇವುಬೆಲ್ಲವಿದ್ದೇ ಇದೆ.

ಅದರ ಬಗ್ಗೆಯೇ ಇನ್ನಷ್ಟು ಯೋಚಿಸಿದರೆ ಅಂತಹ ಟೂರಿಸಂ ಎಲ್ಲೆಲ್ಲಿ ನಡೆಯುತ್ತಿದೆ, ಯಾಕಾಗಿ, ಯಾರು ಅದನ್ನು ಬೆಂಬಲಿಸುತ್ತಿದ್ದಾರೆ, ಅವುಗಳ ಲಾಭನಷ್ಟ ಏನೇನು ಎಂಬ ಪ್ರಶ್ನೆಗಳು ಏಳುತ್ತಿವೆ. ತಮ್ಮತಮ್ಮ ದೇಶಗಳ ನೈಸರ್ಗಿಕ ಸಂಪತ್ತನ್ನು ಹೇಗೆಲ್ಲ ಬಳಸಿಕೊಳ್ಳಬಹುದು ಎಂಬುದು ಬಹುತೇಕ ಎಲ್ಲಾ ದೇಶಗಳ ಸರ್ಕಾರಗಳ ಮುಂದಿರುವ ಪ್ರಶ್ನೆ. ಅದೇನೂ ಹೊಸದಲ್ಲ. ಪ್ರಕೃತಿಯನ್ನುನಾವು ಹೇಗೇಗೋ ಬಳಸಿಕೊಂಡಿದ್ದಾಗಿದೆ. ನಿಸರ್ಗವೆಂದರೆ, ಪ್ರಾಣಿಪಕ್ಷಿ ಜೀವಿಗಳೆಂದರೆ, ಹೊಳೆನದಿ, ಕಾಡು ಬೆಟ್ಟ ಎಂದರೆ ತಮ್ಮ ಬಳಕೆಗಾಗಿ ಇರುವುದು ಅನ್ನೋ ಅಹಂಭಾವ ಮನಷ್ಯರಿಗೆ ಮಾತ್ರ ಇರುವುದು. ಅವೆಲ್ಲದರಲ್ಲಿ ತಾನೂ ಒಂದು ಭಾಗ, ಅವೆಲ್ಲದರ ಜೊತೆಗೆ ತಾನು ಹೊಂದಿಕೊಂಡು ಜೀವನ ಮಾಡಬೇಕು ಅನ್ನೋ ಸತ್ಯವನ್ನ ಪಕ್ಕಕ್ಕೆ ಸರಿಸಿ ಎಲ್ಲೆಲ್ಲೂ ತನ್ನ ಅಧಿಪತ್ಯವನ್ನ ಸ್ಥಾಪಿಸಿ ಮೆರೆಯುವುದು ಮನುಷ್ಯತನದ ಹೆಗ್ಗುರುತೇನೋ.

ಪ್ರಾಣಿಪಕ್ಷಿಗಳನ್ನ ತಮ್ಮ ರಂಜನೆಗಾಗಿ ಮತ್ತು ಹೊಟ್ಟೆಪಾಡಿಗಾಗಿ ಬಳಸುವುದು, ಅವನ್ನು ಬಂಧನದಲ್ಲಿಟ್ಟು ಸಾಕುವುದು, ಅವನ್ನು ಸಂಶೋಧನೆಗೆ, ಪರೀಕ್ಷೆಗಳಿಗೆ ಒಳಪಡಿಸುವುದು, ಅವುಗಳ ಬಗ್ಗೆ ಅಧ್ಯಯನಗಳನ್ನು ಕೈಗೊಳ್ಳುವುದು ಮಾನವನ ಅಭ್ಯಾಸಗಳು. ಆಧುನಿಕತೆ ಮತ್ತು ನಾಗರಿಕತೆಯ ಪ್ರಭಾವ ಹೆಚ್ಚಿದಂತೆಲ್ಲಾ ನಮಗೆ ಇತರರ ಬಗ್ಗೆ ತಿಳಿದುಕೊಳ್ಳುವ ಅಪಾರ ಕುತೂಹಲ ಬೇರೆ ಬೇರೆ ಆಯಾಮಗಳನ್ನ ತಳೆದಿವೆ. ನಮ್ಮ ಕುತೂಹಲ ನಿಸರ್ಗದಲ್ಲಿನ ಇತರೇ ಜೀವಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದ್ದು ನಮಗೆಲ್ಲಾ ತಿಳಿದಿದೆ.

ನಮ್ಮ ಅಂತಹ ಕುತೂಹಲವನ್ನು ನಿಯಂತ್ರಿಸುವ, ಅದನ್ನು ಸರಿಯಾದ ಮಾರ್ಗದಲ್ಲಿ ನಿರ್ದೇಶಿಸುವ ಮತ್ತು ನಮ್ಮ ಮಾನವಸಹಜ ಕುತೂಹಲದಿಂದ ಒಳ್ಳೆಯ ಲಾಭವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ, ನಿಸರ್ಗವನ್ನು ಕಾಪಾಡುವ ಉದ್ದೇಶದಿಂದ ಅನೇಕ ತರಹದ ‘ಟೂರಿಸಂ’ಗಳು ವ್ಯಾಪಾರ ನಡೆಸುತ್ತಿವೆ. ಉದಾಹರಣೆಗೆ, ವೈಲ್ಡ್ ಲೈಫ್ ಟೂರಿಸಂ (Wildlife Tourism), ಅಡ್ವೆಂಚರ್ ಟೂರಿಸಂ (Adventure Tourism), ಟೈಗರ್ ಟೂರಿಸಂ (Tiger Tourism), ಎಲಿಫೆಂಟ್ ಟೂರಿಸಂ (Elephant Tourism), ಡಾಲ್ಫಿನ್ ವಾಚಿಂಗ್ (Dolphin Watching), ವೇಲ್ ವಾಚಿಂಗ್ (Whale Watching) ಇತ್ಯಾದಿಗಳು ಕೆಲವು ಉದಾಹರಣೆಗಳು. ಕಾಡುಗಳನ್ನ ಸುತ್ತುತ್ತಾ ನಮ್ಮ ಸುತ್ತಲಿನ ನೈಸರ್ಗಿಕ ಸೌಂದರ್ಯವನ್ನು ಮೆಚ್ಚುತ್ತಾ, ಆ ಮೂಲಕ ನಮ್ಮ ಭೂಗ್ರಹವನ್ನು ಕಾಪಾಡುವ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಇವು ಕ್ರಮೇಣ ಹೆಚ್ಚುತ್ತಿವೆ ಎನ್ನುವುದು ಗಮನಾರ್ಹ.

ಇಂತಹ ನಿಸರ್ಗಪರ ಟೂರಿಸಂ ನಡೆಸುವವರು ಹೇಳುವಂತೆ ಟೂರಿಸಂ ಮೂಲಕ ನಾವು ಪ್ರಕೃತಿಗೆ ಮತ್ತಷ್ಟು ಹತ್ತಿರವಾಗುತ್ತೀವಿ. ನಿಸರ್ಗವನ್ನು ದುರುಪಯೋಗಪಡಿಸಿಕೊಳ್ಳುವ ಪರಿಪಾಠಕ್ಕೆ ಈ ಪ್ರಯತ್ನಗಳು ಸಕಾರಾತ್ಮಕ ಉತ್ತರ. ಏಕೆಂದರೆ, ಅವರ ಪ್ರವಾಸಿ ಕಾರ್ಯಕ್ರಮಗಳು ಸಂಪೂರ್ಣವಾಗಿ ನಿಸರ್ಗಪರ ಮೌಲ್ಯಗಳಿಗೆ ಬದ್ಧವಾಗಿರುತ್ತವೆ. ಅವರ ಕಾರ್ಯ ನೀತಿ ನಿಯಮಗಳು, ಧೋರಣೆಗಳು ಪೂರ್ತಿಯಾಗಿ ಅವರ ದೃಷ್ಟಿಕೋನವೇನಿದೆಯೋ ಅದಕ್ಕೆ ತಪ್ಪದೆ ಬೆಂಬಲವನ್ನು ಸೂಚಿಸುತ್ತವೆ. ಉದಾಹರಣೆಗೆ, ಹಿಂದೊಮ್ಮೆ ನಾನು ಕೆನಡಾ ದೇಶದ ಬ್ಯಾನ್ಫ್ ನಿಸರ್ಗಧಾಮದಲ್ಲಿ (ಬ್ರಿಟಿಷ್ ಕೊಲಂಬಿಯಾ) ಟೆಂಟ್ ಹೊಡೆದುಕೊಂಡು ಠಿಕಾಣಿ ಹೂಡಿದ್ದೆ. ನೂರಾರು ಕಿಲೋಮೀಟರ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಗ್ರಿಸ್ಲಿ ಕರಡಿಗಳನ್ನು ನೋಡುವ ತವಕವಿತ್ತು. ಮೂರು ದಿನದ ವಾಸದಲ್ಲಿ ಕಂಡದ್ದು ಅಲ್ಲಿಯ ಕಪ್ಪು ಕರಡಿಗಳಷ್ಟೇ. ಒಂದೂ ಗ್ರಿಸ್ಲಿ ಕರಡಿ ಕೂಡ ಕಣ್ಣಿಗೆ ಬೀಳಲಿಲ್ಲ. ಮುಖ್ಯ ಕಾರಣ ನಿಸರ್ಗಧಾಮದ ನಿಯಮದಂತೆ ಪ್ರವಾಸಿಗರು ಅವು ವಾಸಿಸುವ ಒಳಭಾಗಳನ್ನು ಪ್ರವೇಶಿಸುವಂತಿರಲಿಲ್ಲ, ನಿಷೇಧವಿತ್ತು. ನನ್ನಂತೆಯೇ ಅನೇಕ ಪ್ರವಾಸಿಗರು ನಿರಾಶರಾಗಿ ಹೋಗುತ್ತಿದ್ದರು. ಆದರೆ ಯಾರೂ ಕೂಡ ನಿಯಮದ ಬಗ್ಗೆ ಅಸಮಾಧಾನವನ್ನು, ಕೋಪವನ್ನು ವ್ಯಕ್ತಪಡಿಸಲಿಲ್ಲ. ಕರಡಿಯ ಮನೆಗೆ ನುಗ್ಗಿ ಹೋಗಿ ನೋಡಲು ನಮಗೇನು ಅಧಿಕಾರವಿದೆ?

(ರಿವರ್ ರ್ಯಾಫ್ಟಿಂಗ್ (River Rafting)

ನೋಡು ಬಾ ನನ್ನನ್ನ ಅಂತ ಅದು ಆಮಂತ್ರಣ ಕೊಟ್ಟಿತ್ತೇ?! ಅದೇನು ನಮ್ಮನೆ ಶೋಕೇಸಿನ ಗೊಂಬೆಯೇ?! ಆದರೆ, ಅಲ್ಲಿದ್ದ ಮೂರು ದಿನಗಳ ಕಾಲ ಕಾಲ್ನಡಿಗೆಯಲ್ಲಿ, ಅನುಮತಿಯಿದ್ದ ಕಡೆಯೆಲ್ಲಾ ಅಲೆದಾಡುತ್ತಾ ಅಲ್ಲಿನ ನಿಸರ್ಗದ ಬಗ್ಗೆ ಅದೆಷ್ಟೋ ವಿಷಯಗಳನ್ನ ತಿಳಿದುಕೊಂಡೆ. ಅಲ್ಲಿನ ಹವೆ, ಹಣ್ಣುಗಳು (ಬೆರ್ರೀಸ್), ಹರಿಯುವ ಪರಿಶುದ್ಧ ನೀರು, ಹಸಿರುಹೊದ್ದ ಪರ್ವತಗಳು ಇವೆಲ್ಲಾ ಕರಡಿಯ ಮನೆಯೇ ಅಲ್ಲವೇ, ಈ ಪರಿಶುದ್ಧ ನಿಸರ್ಗವನ್ನು ಕರಡಿ ಮನೆಯನ್ನು ಕಟ್ಟೆಚ್ಚರದಿಂದ ಕಾಪಾಡುತ್ತಿರುವ ಕರ್ಮಿಗಳಿಗೆ ಮತ್ತು ಕರಡಿಯ ಆತಿಥ್ಯಕ್ಕೆ ನಮಿಸಿದೆ.

ನಿಸರ್ಗವನ್ನು ದುರುಪಯೋಗಪಡಿಸಿಕೊಳ್ಳುವ ಪರಿಪಾಠಕ್ಕೆ ಈ ಪ್ರಯತ್ನಗಳು ಸಕಾರಾತ್ಮಕ ಉತ್ತರ. ಏಕೆಂದರೆ, ಅವರ ಪ್ರವಾಸಿ ಕಾರ್ಯಕ್ರಮಗಳು ಸಂಪೂರ್ಣವಾಗಿ ನಿಸರ್ಗಪರ ಮೌಲ್ಯಗಳಿಗೆ ಬದ್ಧವಾಗಿರುತ್ತವೆ. ಅವರ ಕಾರ್ಯ ನೀತಿ ನಿಯಮಗಳು, ಧೋರಣೆಗಳು ಪೂರ್ತಿಯಾಗಿ ಅವರ ದೃಷ್ಟಿಕೋನವೇನಿದೆಯೋ ಅದಕ್ಕೆ ತಪ್ಪದೆ ಬೆಂಬಲವನ್ನು ಸೂಚಿಸುತ್ತವೆ.

ನಿಸರ್ಗಪರ ಟೂರಿಸಂನ ಮತ್ತೊಂದು ಉದಾಹರಣೆ ಬಹಳ ವಿಭಿನ್ನವಾಗಿದೆ. ಅದು ಆನೆ ಟೂರಿಸಂ. ಅದು ಈಗ ವ್ಯಾಪಕ ಚರ್ಚೆಯಲ್ಲಿರುವ ವಿಷಯ. ಕಾರಣವೆಂದರೆ ಒಂದು ನಿಸರ್ಗದಲ್ಲಿ ಸ್ವತಂತ್ರವಾಗಿ ಜೀವಿಸುತ್ತಿರುವ ಆನೆಗಳು ನಶಿಸುತ್ತಿರುವುದು. ಮತ್ತೊಂದು, ಮಾನವರ ಪೋಷಣೆಯಲ್ಲಿರುವ ಬಂಧಿತ ಮತ್ತು ಪಳಗಿದ ಆನೆಗಳನ್ನು ನಾವುಗಳು ಬಳಸಿಕೊಳ್ಳುತ್ತಿರುವ ಕ್ರೂರ ವಿಧಾನಗಳು, ಧೋರಣೆಗಳು, ಮತ್ತು ಅವುಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ಸಲಹಿ ಪೋಷಿಸುವ ಮಾವುತರನ್ನು ನಿರ್ಲಕ್ಷಿಸಿರುವುದು. ಈ ಅಪಾಯಕಾರಿ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಆನೆಗಳ ಸಂತತಿಯನ್ನು ಕಾಪಾಡಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲಿಫೆಂಟ್ ಟೂರಿಸಂ ಚರ್ಚೆಗಳು ವ್ಯಾಪಕವಾಗಿವೆ. ಹಿಂದೊಮ್ಮೆ, ೧೯೭೦ ರಿಂದ ೨೦೦೦ ಇಸವಿಗಳ ದಶಕಗಳಲ್ಲಿ ಹೀಗೆಯೇ ಹುಲಿಯನ್ನು, ಅವು ವಾಸಿಸುವ ಪ್ರದೇಶಗಳನ್ನು ಕಾಪಾಡುವ ಪ್ರಯತ್ನಗಳು ವ್ಯಾಪಕವಾಗಿ ನಡೆದಿದ್ದವು. ಆಗಲೂ ವಿಶ್ವಮಟ್ಟದಲ್ಲಿ ಹುಲಿಯನ್ನು ಉಳಿಸುವ ಕರೆ ಕೊಟ್ಟಿದ್ದರು. ಆದರೆ ಕಾಡಿನಲ್ಲಿ ಹುಲಿಯನ್ನು ಗೌರವ ಮತ್ತು ನಿಯಮಬದ್ಧವಾಗಿ ಹೋಗಿ ನೋಡುವ ನಿಸರ್ಗಪರ ಟೂರಿಸಂ ಬಗ್ಗೆ ಅನೇಕ ತಕರಾರುಗಳಿವೆ. ಹುಲಿ ಸಂರಕ್ಷಣೆ ವಿಷಯ ಜಾಗತಿಕ ಮಟ್ಟದ ರಾಜಕೀಯ ಮತ್ತು ಆರ್ಥಿಕ ವಲಯಗಳಲ್ಲಿ ಇನ್ನೂ ರಂಗುರಂಗಾಗೇ ಉಳಿದಿದೆ.

(ಸ್ಕೀಯಿಂಗ್ (Skiing)

ಹುಲಿ ಸಂರಕ್ಷಣೆ ಕಾಡಿನ ಎಲ್ಲಾ ಜೀವಜಾಲಕ್ಕೆ ಹೆಣೆದುಕೊಂಡಿತ್ತು. ಆದರೆ ಆನೆ ಸಂರಕ್ಷಣೆಯ ಮತ್ತು ಆನೆ ಪ್ರವಾಸೋದ್ಯಮದ ವಿಷಯವೇ ಬೇರೆ. ಆನೆ ಮನುಷ್ಯರ ಸ್ನೇಹಿ ಎಂಬ ಮುಖ್ಯ ಅಂಶ ಆನೆ ಪ್ರವಾಸೋದ್ಯಮದಲ್ಲಿ ಅಡಕವಾಗಿದೆ. ಕಾಡಿನ ಆನೆಗಳ ಸಂರಕ್ಷಣೆ ಅಷ್ಟೇ ಅಲ್ಲ, ನಾಡಿನಲ್ಲಿ ವಾಸಿಸುತ್ತಿರುವ (ಪಳಗಿಸಿದವು, ಅರಣ್ಯ ಇಲಾಖೆಗಳಲ್ಲಿರುವ ಆನೆಗಳು, ಕೆಲಸಗಾರ ಆನೆಗಳು, ಮನುಷ್ಯರ ಮನರಂಜನೆಗೆ ಬಳಸಲ್ಪಡುತ್ತಿರುವ ಆನೆಗಳು, ದೇವಾಲಯಗಳಲ್ಲಿ ಇರುವ ಆನೆಗಳು, ಹೀಗೆ ಪಟ್ಟಿ ಉದ್ದವಾಗುತ್ತದೆ) ಆನೆಗಳ ಜೀವನವನ್ನು ಸುಧಾರಿಸುವ ಗುರಿ ಈ ಆನೆ ಪ್ರವಾಸೋದ್ಯಮಕ್ಕೆ ಇದೆ. ಆ ಗುರಿಯಲ್ಲಿ ಆನೆಗಳ ಮಾವುತರು ಮತ್ತವರ ಕುಟುಂಬಗಳ ಏಳಿಗೆ, ಅವರ ಜೀವನಮಟ್ಟದ ಸುಧಾರಣೆಗಳು ಕೂಡ ಮುಖ್ಯವಾಗಿವೆ. ಹಾಗಾಗಿ ಆನೆ ಪ್ರವಾಸೋದ್ಯಮವೆಂಬುದು ಬಹು ರಾಷ್ಟ್ರಗಳ ಚರ್ಚೆಯಾಗಿದೆ. ಸ್ವಾಭಾವಿಕವಾಗಿ ಆನೆಗಳು ಇಲ್ಲದಿದ್ದರೂ ಹಲವಾರು ಪಾಶ್ಯಾತ್ಯ ದೇಶಗಳಲ್ಲಿ ಆನೆಗಳ ಉಳಿವು, ಸಂರಕ್ಷಣೆ ಮತ್ತು ಒಳಿತಿಗಾಗಿ ಬಹಳಷ್ಟು ಬೆಂಬಲವಿದೆ. ಆನೆಗಳಿರುವ ಪ್ರತಿಯೊಂದು ಮೃಗಾಲಯದಲ್ಲೂ ಕೂಡ ಅಧ್ಯಯನ, ಸಂರಕ್ಷಣೆ ಮುಂತಾದ ಕಾರ್ಯಗಳು ನಡೆಯುತ್ತಿವೆ. ಆಸ್ಟ್ರೇಲಿಯಾಯದ ಮೆಲ್ಬೋರ್ನ್ ಮತ್ತು ಸಿಡ್ನಿ ನಗರಗಳ ಮೃಗಾಲಯಗಳು, ಬ್ರಿಸ್ಬನ್ ನಗರದಾಚೆ ಸನ್ ಶೈನ್ ಕೋಸ್ಟ್ (Sunshine Coast) ನಲ್ಲಿರುವ ಆಸ್ಟ್ರೇಲಿಯಾ ಝೂ ಮುಂಚೂಣಿಯಲ್ಲಿವೆ.

ಡಾಲ್ಫಿನ್ (Dolphin) ಮತ್ತು ವೇಲ್ (Whale) ಪ್ರವಾಸೋದ್ಯಮದಲ್ಲಿ ನೇರವಾಗಿ ಸಮುದ್ರಕ್ಕೆ ನಮ್ಮನ್ನು ಕೊಂಡೊಯ್ದು ಅವುಗಳನ್ನು ಪರಿಚಯಿಸುತ್ತಾರೆ. ಪ್ರವಾಸೋದ್ಯಮಕ್ಕೆ ಹಣ ಹರಿದು ಬಂದರೂ ಸಮುದ್ರಕ್ಕೆ ಸೇರುವ ಅನಿಲಗಳು, ತ್ಯಾಜ್ಯಗಳ ಬಗ್ಗೆ, ಸಮುದ್ರದಲ್ಲಿ ಶಾಂತವಾಗಿ ಜೀವಿಸುತ್ತಿರುವ ಜೀವಚರಗಳನ್ನು ಅಲ್ಲೋಲಕಲ್ಲೋಲಗಳಿಸುವ ಬಗ್ಗೆ ಟೀಕೆಗಳಿವೆ.

(ಡಾಲ್ಫಿನ್ ವಾಚಿಂಗ್ (Dolphin Watching)

ಇಂತಹ ಟೂರಿಸಂ ಕಾರ್ಯಕ್ರಮಗಳು ದುಬಾರಿ. ಹಾಗಾಗಿ ಪ್ರಾಣಿಗಳನ್ನು ನೋಡಲು ಅನೇಕರು ಮೃಗಾಲಯಗಳಿಗೆ ಹೋಗುತ್ತಾರೆ. ಹಲವಾರು ದೇಶಗಳಲ್ಲಿ ಮೃಗಾಲಯಗಳು ಸಂಶೋಧನಾ ಶಾಲೆಗಳಾಗಿ, ಪ್ರಯೋಗಾಲಯಗಳಾಗಿ ಕೂಡ ಕೆಲಸ ಮಾಡುತ್ತಿವೆ. ಉದಾಹರಣೆಗೆ, ನಾವು ಹೋಗಿದ್ದ Koala ಧಾಮದಲ್ಲಿ koala ಗಳ ಬಗ್ಗೆ ವೈಜ್ಞಾನಿಕ ಅಧ್ಯಯನಗಳು ನಡೆಯುತ್ತಿವೆ. ಈ ಪುಟ್ಟ ಸುಂದರ, ಅವಚಿಕೊಳ್ಳಬೇಕು ಅನ್ನಿಸುವ ಪ್ರಾಣಿಗಳಿಗೆ ಬರುವ ರೋಗರುಜಿನಗಳು, ಅವು ತಿನ್ನುವ ನೀಲಗಿರಿ ಜಾತಿ ಮರಗಳ ಎಲೆಗಳ ವೈವಿಧ್ಯತೆಯ ಬಗ್ಗೆ, ಅವುಗಳ ಸಂತತಿಯನ್ನು ಬೆಳೆಸುವ ಬಗ್ಗೆ, ಕಾಪಾಡುವ ಬಗ್ಗೆ ನಾವು ಸಾಮಾನ್ಯ ಜನರು ಏನು ಮಾಡಬಹುದು ಎಂದು ಅಲ್ಲಿನ ಸಿಬ್ಬಂದಿ ತಿಳಿಸಿಕೊಡುತ್ತಾರೆ. ಬಂಧನದಲ್ಲಿದ್ದರೂ ಅನೇಕ ಪ್ರಾಣಿಗಳು ಮೃಗಾಲಯಗಳಲ್ಲಿ ಸುರಕ್ಷತೆಯನ್ನು ಹೊಂದಿವೆ ಎಂದು ಕೆಲವರ ಅಭಿಪ್ರಾಯ. ಅದರಲ್ಲೂ ಮಕ್ಕಳು ತಮ್ಮ ಬಾಲ್ಯದಲ್ಲಿ ವನಧಾಮಗಳಿಗೆ, ಮೃಗಾಲಯಗಳಿಗೆ ಆದಷ್ಟೂ ಬಾರಿ ಭೇಟಿಕೊಟ್ಟು ಪ್ರಾಣಿಪಕ್ಷಿ, ಮರಗಿಡ, ನಿಸರ್ಗ ಸಂರಕ್ಷಣೆ ಮುಂತಾದ ವಿಷಯಗಳ ಬಗ್ಗೆ ಅರಿವನ್ನು ಬೆಳೆಸಿಕೊಳ್ಳುವುದು ಮುಖ್ಯ.

ಹದ್ದನ್ನು ಕೈಮೇಲೆ ಹಿಡಿದು ಅದರ ವ್ಯಥೆಯ ಬಗ್ಗೆ ಮಾತನಾಡಿದ ಆ ಹುಡುಗಿ ಹೇಳಿದ್ದ ಮಾತು ನೆನಪಿಗೆ ಬಂತು. ಹದ್ದಿನ ಒಂದು ರೆಕ್ಕೆ ವಿದ್ಯುಚ್ಛಕ್ತಿ ಕೇಬಲ್ ಗೆ ತಾಕಿ ಅದು ಕೆಳಬಿದ್ದು ಗಾಯವಾಗಿ ಸಾಯುವ ಸ್ಥಿತಿಯಲ್ಲಿದ್ದಾಗ ಅದನ್ನು ರಕ್ಷಿಸಿದ್ದಂತೆ. ಆ ಪೆಟ್ಟಿನ ನಂತರ ಹದ್ದಿಗೆ ಬಹಳ ದೂರ ಹಾರುವ ಶಕ್ತಿ ಕ್ಷೀಣಿಸಿದೆ. ಮೇಲೆತ್ತರದಲ್ಲಿ ಹಾರುತ್ತಾ ತನ್ನ ಆಹಾರವನ್ನು ಗುರುತಿಸಿ ಬೇಟೆಯಾಡುವ ಸಹಜಕುಶಲತೆ ಈಗ ಅದಕ್ಕಿಲ್ಲ. ಹಾಗಾಗಿ ಅವರ ಧಾಮವೇ ಅದರ ಮನೆಯಾಗಿಬಿಟ್ಟಿದೆ. ಆದರೂ ಬಂಧನದಲ್ಲಿರುವ ಕಾಕಟೂ, ಕುಕ್ಕಬರ್ರ, ತರಾವರಿ ಬಣ್ಣಗಳ ಗಿಳಿಗಳು ಮತ್ತು ಇತರೆ ಪಕ್ಷಿಗಳನ್ನ ನೋಡಿದರೆ ಅವು ಹಾರಾಡುತ್ತಿದ್ದರೇನೇ ನೋಡಲು ಚೆನ್ನ ಅನ್ನಿಸುತ್ತದೆ.

(ಕೋಲಾ (Koala)

ಜಾಗತಿಕ ಮಟ್ಟದ ಉದ್ಯಮಪತಿ ಸರ್ ರಿಚರ್ಡ್ ಬ್ರಾನ್ಸನ್ ಒಮ್ಮೆ ತಮ್ಮ ಸ್ಕೀಯಿಂಗ್ ಅನುಭವದ ಬಗ್ಗೆ ಹೇಳುತ್ತಾ “ಹಿಮ ಪರ್ವತಗಳ ಇಳಿಜಾರಿನಲ್ಲಿ ಸ್ಕೀಯಿಂಗ್ ಮಾಡುತ್ತಿದ್ದರೆ ಹಕ್ಕಿಯಂತೆ ಹಾರಾಡಿದ ಅನುಭವವಾಗುತ್ತದೆ”, ಎಂದಿದ್ದರು. ಅಂತರ್ಜಾಲದಲ್ಲಿ ಅವರ ಮಾತನ್ನು ಕೆಲವರು ಟೀಕಿಸುತ್ತಾ ಅವರ ಒಡೆತನದಲ್ಲಿರುವ ಸೀ ವರ್ಲ್ಡ್ (Sea World) ನಲ್ಲಿ (Gold Coast) ಬಂಧನದಲ್ಲಿರುವ ಡಾಲ್ಫಿನ್ ಗಳ ಬಗ್ಗೆ ಪ್ರಸ್ತಾಪಿಸಿದ್ದರು. ಸಮುದ್ರದಲ್ಲಿ ಸ್ವತಂತ್ರವಾಗಿ ಬದುಕುತ್ತಿದ್ದ ಡಾಲ್ಫಿನ್ ಗಳನ್ನು ಹಿಡಿದು, ಪಳಗಿಸಿ, ದಿನಕ್ಕೆರಡು ಬಾರಿ ಷೋಗಳಲ್ಲಿ ಬಳಸುವ ಬಗ್ಗೆ ಟೀಕಾಕಾರರು ಪ್ರತಿರೋಧವನ್ನು ಸೂಚಿಸಿ ‘ಬ್ರಾನ್ಸನ್, ನಿಮಗೆ ಸ್ವಾತಂತ್ರ್ಯದ ಬಗ್ಗೆ, ವ್ಯಕ್ತಿ ಸ್ವತಂತ್ರದ ಬಗ್ಗೆ ಮಾತನಾಡುವ ಹಕ್ಕು ಇಲ್ಲ,’ ಎಂದು ಗುಡುಗಿದ್ದರು. ಅದು ನಿಜವಾದದ್ದೆ ಹೌದು; ಆದರೆ ಒಂದು ಭೇಟಿಗೆ ಒಬ್ಬರಿಗೆ ಎಪ್ಪತೈದು ಡಾಲರ್ ಕೊಟ್ಟು ಹೋದರೆ ಸಾಮಾನ್ಯವಾಗಿ ನಾವು ನೋಡದೆ ಇರುವ ಅದೆಷ್ಟು ಜಲಜೀವಿಗಳನ್ನು ನೋಡಬಹುದು, ಮಕ್ಕಳಿಗೆ ಅದು ಕೊಡುವ ಅರಿವು ಎಷ್ಟು ಹೆಚ್ಚಿನದು ಅನ್ನುವ ಮಾತೂ ಕೂಡ ಅಷ್ಟೇ ನಿಜ. ಯಾವುದು ಸರಿ ತಪ್ಪು ಅನ್ನುವ ವಾದಕ್ಕೂ ಮಿಗಿಲಾಗಿ ನಮಗೆಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ನಿಸರ್ಗಪರ ಧೋರಣೆಗಳನ್ನು, ಅಭ್ಯಾಸಗಳನ್ನೂ, ಮೌಲ್ಯಗಳನ್ನೂ ಬೆಳೆಸಿಕೊಳ್ಳುವುದು, ಮಾನವರಿಗಿಂತ ಭಿನ್ನವಾದ ಜೀವಿಗಳೂ ಕೂಡ ನಮ್ಮಂತೆಯೇ, ಅವರಿದ್ದರೆ ಮಾತ್ರ ನಾವು ಕೂಡ ಇರುವುದು ಅನ್ನೋ ಅರಿವು ಮುಖ್ಯವಾಗುತ್ತದೆ.

ತನ್ನಂತೆ ಇಲ್ಲದ ಇತರೆ ಜೀವಿಗಳನ್ನು ಅವು ಇರುವ ಕಡೆಯೇ ಹೋಗಿ ನೋಡುವ ತೆವಲು ಮನುಷ್ಯರಲ್ಲಿ ಯಾವಾಗ ಶುರುವಾಯ್ತು, ಯಾಕೆ ಬೇಕಿತ್ತು, ಎಂದು ಮನಸ್ಸು ಬೈದುಕೊಳ್ಳುತ್ತದೆ. ನಿಸರ್ಗದಿಂದ ದೂರವಾಗಿದ್ದು ಹೋಗಿ ಈಗ ಮತ್ತೆ ನಿಸರ್ಗಕ್ಕೆ ಮನುಷ್ಯ ಮರಳುತ್ತಿರುವ ಪ್ರಯತ್ನಗಳು ಇವು. ಇಂತಹ ಪ್ರಯತ್ನಗಳು ಸರಿಯಾದ ದಿಕ್ಕಿನಲ್ಲಿ ನಡೆದು ಎಲ್ಲಾ ಜೀವಚರಗಳು ನೆಮ್ಮದಿಯಾಗಿ ಬದುಕಲಿ ಎಂದು ಕೂಡ ಮನಸ್ಸು ಪ್ರಾರ್ಥಿಸುತ್ತಿದೆ.