ಆನಂದನಿಗೆ ತಾನು ಅಭ್ಯಸಿಸುತ್ತಿದ್ದ ಕೆಲವು ಪುಸ್ತಕಗಳಲ್ಲಿ ‘ವೀರ್ಯನಾಶವೇ ಮೃತ್ಯು, ಬ್ರಹ್ಮಚರ್ಯವೇ ಜೀವನ’ ಎಂಬ ಉಕ್ತಿಗಳು ಪ್ರಭಾವ ಬೀರಿದವು. ಆದರೆ ‘ಎಲ್ಲ ಹೆಣ್ಣುಮಕ್ಕಳನ್ನು ಸೋದರಿಯರಂತೆ ಕಾಣುವುದು ದುಸ್ಸಾಧ್ಯ’ ಎಂಬ ಅನುಭವೂ ಕಾಡುತ್ತಿತ್ತು. ಅನೇಕ ಟೀಚರ್‌ಗಳಿಗೆ ಅಚ್ಚರಿಯಾಗುವಂತೆ ಪಿ.ಯು.ಸಿಯಲ್ಲಿ ಕಾಮರ್ಸ್ ತೆಗೆದುಕೊಂಡ. ಬಿ.ಕಾಂ. ಮಾಡಲು ಖರ್ಚು ಕಡಿಮೆ. ಬೇಗ ಕೆಲಸ ಸಿಗುವುದು. ತಮ್ಮನಾದ ಶೃಂಗ ಬೇಕಾದರೆ ಬಿ.ಇ. ಮಾಡಲಿ. ಅಪ್ಪನಿಗೆ ವಿ.ಆರ್.ಎಸ್. ಸಾಧ್ಯತೆ ಹೆಚ್ಚಿರುವುದರಿಂದ ತಾನು ಬೇಗನೆ ದುಡಿದು ಮನೆ ನೋಡಿಕೊಳ್ಳಬೇಕು. ಶೃಂಗ ಎಷ್ಟು ಬಯಸುತ್ತಾನೋ ಅಲ್ಲಿಯವರೆಗೂ ಓದಲಿ. ಪಿ.ಯು.ಸಿ.ಯಲ್ಲಿದ್ದಾಗ ಆಶ್ರಮಕ್ಕೆ ಹೋಗಿ ಬರುವುದು ಹೆಚ್ಚಾಯಿತು. ಆದರೂ ಒಮ್ಮೊಮ್ಮೆ ಸಾಪ್ತಾಹಿಕಗಳಲ್ಲಿ ಕಂಡುಬರುವ ‘ಗುಪ್ತ ಸಮಾಲೋಚನೆ’ಗಳ ಕಡೆ ಗಮನ ಸೆಳೆಯುವಾಗ ತಪ್ಪು ಮಾಡಿದ ಅಪರಾಧಿ ಭಾವನೆ. ವಸಂತಕುಮಾರ್ ಕಲ್ಯಾಣಿ ಬರೆದ “ಪರ್ಯಾಪ್ತ” ಕತೆ ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
ಕೋಡುಗಲ್ಲನ್ನು ಹತ್ತಿ ದೂರವನ್ನು ನೋಳ್ಪಂಗೆ ಗೋಡೆ ಗೊತ್ತುಗಳೇನು? ಮೇಡುಕುಳಿಯೇನು? ನೋಡು ನೀನುನ್ನತದಿ ನಿಂತು ಜನ ಜೀವಿತವ ಮಾಡುದಾರದ ಮನವ ಮಂಕುತಿಮ್ಮ॥
ಆನಂದನ ಕಣ್ಣುಗಳು ನಿದ್ದೆಯಿಲ್ಲದೆ ಕೆಂಪು ಬಣ್ಣಕ್ಕೆ ತಿರುಗಿದ್ದವು. ಇಡೀರಾತ್ರಿ ಯೋಚಿಸಿ, ಪರಿಹಾರ ಕಾಣದೆ ಗೋಜಲು ಇನ್ನೂ ಹೆಚ್ಚಾಗಿತ್ತು. ತನ್ನ ನಿರ್ಧಾರ ದುಡುಕಿನದ್ದೆ? ಉನ್ನತಿ ಏನು ಹೇಳಬಹುದು? ಎದೆಬಡಿತ ಹೆಚ್ಚಾಯಿತು. ಫ್ಲೈಓವರ್ ಹತ್ತಿರ ಬಂದವನು ಅಲ್ಲಿಯೇ ಒಂದು ಕ್ಷಣ ನಿಂತು ಯೋಚಿಸಿದ.. ವಾಪಸ್ ಹೊರಟು ಬಿಡಲೇ.. ಫೋನ್ ಮಾಡುತ್ತಾಳೆ. ಸ್ವಿಚ್ ಆಫ್ ಮಾಡಿಟ್ಟುಕೊಂಡರೆ? ತನ್ನ ಬಗ್ಗೆಯೇ ಅಸಹ್ಯವಾಯಿತು ತನ್ನ ಆದರ್ಶಗಳೆಲ್ಲ ಪುಸ್ತಕದ ಬದನೆಕಾಯಿಯೆ? ಅಥವಾ ಯಾರೋ ಹೇಳಿದಂತೆ ‘ಸಾತ್ವಿಕ ಅಹಮ್ಮೇ? ಅವನಿಗೆ ತಿಳಿಯದಂತೆ ಫ್ಲೈ ಓವರ್ ಮೇಲೆ ನಡೆಯತೊಡಗಿದ. ದೂರದಲ್ಲಿ ಕೆಳಗೆ ಫ್ಲೈಓವರ್ ಮುಗಿದು ಕಾಣುವ ತಿರುವಿನಲ್ಲಿ, ಗೋಣಿ ಮರದ ಬುಡದಲ್ಲಿ, ನಾಲ್ಕಾರು ಹೆಂಗಳೆಯರು ಕಂಡುಬಂದರು. ಇವನ ಉದ್ವೇಗ ಹೆಚ್ಚಾಯಿತು. ಅಲ್ಲಿನ್ನೂ ಉನ್ನತಿ ಬಂದಿರಲಿಲ್ಲ. ಅಷ್ಟಕ್ಕೂ ಅವಳಿನ್ನು ಬರುವ ಸಮಯವಾಗಿಲ್ಲ. ಈಗಿನ್ನೂ ಏಳೂ ಇಪ್ಪತೈದು. ಸಾಮಾನ್ಯವಾಗಿ ಅವಳು ಬರುವುದು ಏಳು ಮೂವತ್ತರ ನಂತರವೇ. ಅವಳ ವ್ಯಾನ್ ಬರುವುದು ಏಳೂ ನಲವತ್ತಕ್ಕೆ.
*****
ವಿವೇಕಾನಂದ ಅವನ ತಂದೆ ತಾಯಿಗೆ ಮೊದಲನೇ ಮಗ. ಎರಡನೆಯದೂ ಗಂಡೆ. ಸ್ವಭಾವದಲ್ಲಿ ಇಬ್ಬರದೂ ಉತ್ತರ-ದಕ್ಷಿಣ. ಐ.ಟಿ.ಐ.ನಲ್ಲಿ ಸ್ಟೋರ್ಸ್ ಆಫೀಸರ್ ಆಗಿದ್ದ ಸೀತಾರಾಮಯ್ಯ ಹಾಗೂ ಅವರ ಪತ್ನಿ ಗೃಹಿಣಿ ಗೀತಾಬಾಯಿ, ದೂರದ ಸಂಬಂಧಿಕರೇ. ಮದುವೆ ನಂತರವೂ ವಾರಾಂತ್ಯಗಳಲ್ಲಿ ರಾಮಕೃಷ್ಣ ಆಶ್ರಮಕ್ಕೆ ಭೇಟಿ ತಪ್ಪುತ್ತಿರಲಿಲ್ಲ. ಅಧ್ಯಾತ್ಮದ ಪುಸ್ತಕಗಳೇ ಕಪಾಟಿನ ತುಂಬ. ಮಿಡ್ಲ್ ಸ್ಕೂಲ್, ಹೈಸ್ಕೂಲ್ ನಲ್ಲಿದ್ದಾಗ ರಾಮಕೃಷ್ಣ ಮಿಷನ್ ನವರು ಏರ್ಪಡಿಸುವ ಚರ್ಚಾಸ್ಪರ್ಧೆಗಳಲ್ಲಿ, ವಿದ್ಯಾಮಂದಿರ ಶಾಲೆಗೆ ದೊರಕುತ್ತಿದ್ದ ಅನೇಕ ಶೀಲ್ಡ್ ಗಳಲ್ಲಿ ವಿವೇಕಾನಂದನದೇ ಸಿಂಹಪಾಲು.
ಸಹಜವಾಗಿಯೇ, ಚರ್ಚಾಸ್ಪರ್ಧೆಗೆ ಸಿದ್ಧವಾಗುವಾಗ ನಂತರ ಬಹುಮಾನವಾಗಿ ದೊರಕುತ್ತಿದ್ದ ರಾಮಕೃಷ್ಣ ಪರಮಹಂಸ, ವಿವೇಕಾನಂದರ ಕುರಿತ ಪುಸ್ತಕಗಳನ್ನು ಓದುವಾಗ, ಅವುಗಳ ಪ್ರಭಾವದಿಂದ ವಿವೇಕಾನಂದನನ್ನು ಶಾಲೆಯ ಇತರ ವಿದ್ಯಾರ್ಥಿಗಳಿಗಿಂತ ಪ್ರತ್ಯೇಕವಾಗಿಯೇ ಗುರುತಿಸುತ್ತಿದ್ದರು. ಅವರು ಗುರುತಿಸುವುದಕ್ಕೂ ಇವನ ಸ್ವಭಾವವು ಒಂದಕ್ಕೊಂದು ಪೂರಕವಾಗಿ, ಇವನಲ್ಲೂ ‘ತಾನು ಬೇರೆಯೇ’ ಎಂಬ ಭಾವನೆ ಬಂತು. ಮುಂದಿನ ಸಾಲಿನಲ್ಲಿ ಕುಳಿತ ತನ್ನನ್ನು ದೃಷ್ಟಿಸಿ ಟೀಚರ್ ಗಳು ಪಾಠ ಮಾಡುವುದು, ತಾನು ಅದಕ್ಕೆ ಪ್ರತಿಕ್ರಿಯಿಸಬೇಕೆಂಬ ಭಾವನೆಯೂ, ಮರವಾಗಿ ಬೆಳೆಯಿತು.
ತಾನು ಅಭ್ಯಸಿಸುತ್ತಿದ್ದ ಕೆಲವು ಪುಸ್ತಕಗಳಲ್ಲಿ ‘ವೀರ್ಯನಾಶವೇ ಮೃತ್ಯು, ಬ್ರಹ್ಮಚರ್ಯವೇ ಜೀವನ’ ಎಂಬ ಉಕ್ತಿಗಳು ಪ್ರಭಾವ ಬೀರಿದವು. ಆದರೆ ‘ಎಲ್ಲ ಹೆಣ್ಣುಮಕ್ಕಳನ್ನು ಸೋದರಿಯರಂತೆ ಕಾಣುವುದು ದುಸ್ಸಾಧ್ಯ’ ಎಂಬ ಅನುಭವೂ ಕಾಡುತ್ತಿತ್ತು. ಅನೇಕ ಟೀಚರ್‌ಗಳಿಗೆ ಅಚ್ಚರಿಯಾಗುವಂತೆ ಪಿ.ಯು.ಸಿಯಲ್ಲಿ ಕಾಮರ್ಸ್ ತೆಗೆದುಕೊಂಡ. ಬಿ.ಕಾಂ. ಮಾಡಲು ಖರ್ಚು ಕಡಿಮೆ. ಬೇಗ ಕೆಲಸ ಸಿಗುವುದು. ತಮ್ಮ ಶೃಂಗ ಬೇಕಾದರೆ ಬಿ.ಇ. ಮಾಡಲಿ (ಅವನಿಗಾಗಿ ತಾನು ತ್ಯಾಗ ಮಾಡುತ್ತಿದ್ದೇನೆ ಎಂಬ ಭಾವನೆಯೇ?) ಅಪ್ಪನಿಗೆ ವಿ.ಆರ್.ಎಸ್. ಸಾಧ್ಯತೆ ಹೆಚ್ಚಿರುವುದರಿಂದ ತಾನು ಬೇಗನೆ ದುಡಿದು ಮನೆ ನೋಡಿಕೊಳ್ಳಬೇಕು. ಶೃಂಗ ಎಷ್ಟು ಬಯಸುತ್ತಾನೋ ಅಲ್ಲಿಯವರೆಗೂ ಓದಲಿ. ಪಿ.ಯು.ಸಿ.ಯಲ್ಲಿದ್ದಾಗ ಆಶ್ರಮಕ್ಕೆ ಹೋಗಿ ಬರುವುದು ಹೆಚ್ಚಾಯಿತು. ಆದರೂ ಒಮ್ಮೊಮ್ಮೆ ಸಾಪ್ತಾಹಿಕಗಳಲ್ಲಿ ಕಂಡುಬರುವ ‘ಗುಪ್ತ ಸಮಾಲೋಚನೆ’ಗಳ ಕಡೆ ಗಮನ ಸೆಳೆಯುವಾಗ ತಪ್ಪು ಮಾಡಿದ ಅಪರಾಧಿ ಭಾವನೆ. ‘ತಾನು ಬ್ರಹ್ಮಚಾರಿ ಆಗಿರಬೇಕು. ಅಪ್ಪ, ಅಮ್ಮನ ಸುಖಜೀವನಕ್ಕೆ, ತಮ್ಮನ ಶ್ರೇಯೋಭಿವೃದ್ಧಿಗೆ ಕಾರಣನಾಗಬೇಕು.’ ಡಿಗ್ರಿಗೆ ಬಂದಾಗ ಉಳಿದವರಂತೆ ತಾನು ‘ಜೀನ್ಸ್ ಹಾಕಿಕೊಳ್ಳಬೇಕೆಂದು’ ಮನಸ್ಸು ಕೇಳಿದರೂ ತಡೆದುಕೊಂಡ. ಆದರೆ ಕನಸು ಯಾರಪ್ಪನ ಸೊತ್ತು? ಒಮ್ಮೊಮ್ಮೆ ಸಹಪಾಠಿ ಸುಂದರಿಯರು ಬಂದುಬಿಡುತ್ತಿದ್ದರು. ಗುಪ್ತ ಸಮಾಲೋಚನೆಯಲ್ಲಿ ಓದಿದ್ದು ನೆನಪಾಗುತ್ತಿತ್ತು. ಒಮ್ಮೆಯಂತೂ ಹೊಸದಾಗಿ ಸೇರಿದ ತರುಣಿ ಲೆಕ್ಚರರ್ ಕನಸಿನಲ್ಲಿ ಪ್ರತ್ಯಕ್ಷರಾಗಿದ್ದರು. ದುಃಸ್ವಪ್ನದಿಂದ ಎಚ್ಚೆತ್ತವನಂತೆ ಕೈಕಾಲು ತೊಳೆದು, ದೇವರಿಗೆ ನಮಸ್ಕರಿಸಿ, ಬಂದು ಕೋಣೆಯಲ್ಲಿದ್ದ ಪರಮಹಂಸ, ಶಾರದಾ ಮಾತೆ, ವಿವೇಕಾನಂದರ ಪಟಕ್ಕೆ ನಮಸ್ಕರಿಸಿ, ಮಲಗಿದ್ದ. ಆದರೂ ಒಮ್ಮೊಮ್ಮೆ ಕನಸಿನಲ್ಲಿ ಅನಾಹುತಗಳಾಗಿ ಬೆಳಿಗ್ಗೆ ಬೇಗನೆದ್ದು ಬಚ್ಚಲು ಸೇರಿ, ಬಕೆಟ್‌ಗಟ್ಟಲೆ ತಣ್ಣೀರು ಸುರಿದುಕೊಂಡು ಬರುತ್ತಿದ್ದ.
ಅಕೌಂಟ್ಸ್ ಲೆಕ್ಚರರ್ ‘ಕೇಶವಯ್ಯಂಗಾರ್’ ತಮ್ಮ ಪಾಠ, ಪ್ರವಚನಗಳಿಗೆ ಎಷ್ಟು ಖ್ಯಾತಿಯೋ, ವಿದ್ಯಾರ್ಥಿ ವೃಂದದೊಂದಿಗೆ ಸಲುಗೆಯಿಂದಿದ್ದು ಅವರ ಕಷ್ಟ-ಸುಖಗಳಿಗೆ ಸ್ಪಂದಿಸುವುದರಲ್ಲೂ ಅಷ್ಟೇ ನಿಸ್ಸೀಮರು. ಒಂದು ದಿನ ಅವರು ‘ಇವತ್ತು ಹೆಂಡ್ತಿ ಜೊತೆ ಜಗಳ ಆಡಿ ಬಂದುಬಿಟ್ಟೆ. ಯಾಕೋ ಪಾಠ ಮಾಡುವ ಮೂಡ್ ಇಲ್ಲ. ಹೇಗೂ ಪೋಷನ್ಸ್ ಎಲ್ಲಾ ಆಲ್ಮೋಸ್ಟ್ ಕಂಪ್ಲೀಟ್ ಆಗಿದೆ. ನೀವೆಲ್ಲ ನಿಮ್ಮ ಮುಂದಿನ ಲೈಫ್ ಬಗ್ಗೆ, ಲೈಫ್ ಪಾರ್ಟ್ನರ್ ಬಗ್ಗೆ ಹೇಳಿ” ಎಂದು ಟೇಬಲ್ ಮೇಲೆ ಕುಳಿತರು. ಪುಣ್ಯವಶಾತ್ ಹಿಂದಿನಿಂದ ಶುರುಮಾಡಲು ಹೇಳಿದರು. ಬಲಭಾಗದಲ್ಲಿದ್ದ ಹೆಣ್ಣುಮಕ್ಕಳು, ಎಡಭಾಗದ ಗಂಡು ಮಕ್ಕಳು ಎಲ್ಲರೂ ತಮಗನಿಸಿದ್ದನ್ನು ಹೇಳತೊಡಗಿದರು. ವಿವೇಕಾನಂದನಿಗೆ ಅವು ಯಾವುವೂ ಕಿವಿಗೆ ಬೀಳಲಿಲ್ಲ. ಕಾರಣ, ತನ್ನ ಸರದಿ ಬಂದಾಗ ತಾನು ಏನು ಹೇಳುವುದು.. ಎಂಬ ಭಯ. ಹೌದು, ತಾನು ಆ ನಿಟ್ಟಿನಲ್ಲಿ ಯೋಚಿಸಿಯೇ ಇರಲಿಲ್ಲ. ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೋಬೇಕು. ಸಾಧ್ಯವಾದರೆ ಕಾಶಿ, ಬದರಿ, ಪ್ರಯಾಗ ದರ್ಶನ ಮಾಡಿಸಬೇಕು. ಶೃಂಗ ಬಯಸಿದರೆ ಬಿ.ಇ. ನಂತರವೂ ಓದಲಿ.. ಇಷ್ಟೇ ಅವನ ಪ್ರಪಂಚ. ಹಾಗಾಗಿ ಅವನಿಗೆ ಗಾಬರಿಯಾದದ್ದು ಸಹಜ. ಆದರೂ ಅವನ ಸರದಿ ಬಂದೇ ಬಿಟ್ಟಿತು. ಎದ್ದು ನಿಂತ, ತಲೆ ತಗ್ಗಿಸಿ ಡೆಸ್ಕ್ ನೋಡುತ್ತಾ, ನಿಂತುಬಿಟ್ಟ. “ಹೇಳ್ರಿ, ವಿವೇಕಾನಂದಸ್ವಾಮಿಗಳೇ” ಎಂದರು ಅಯ್ಯಂಗಾರ್. ಹಿಂದಿನಿಂದ ಒಂದು ಧ್ವನಿ “ಸ್ವಾಮಿ ವಿವೇಕಾನಂದರು ಮದುವೆಯಾಗಿರ್ಲಿಲ್ಲ ಸಾರ್” ಎಂದಿತು. ಇನ್ನೊಂದು ಧ್ವನಿ ‘ಮದುವೆ ಗಂಡಿಗೆ ಅದೇ ಇಲ್ಲ’ ಎಂದುಬಿಟ್ಟಿತು. ಅಯ್ಯಂಗಾರ್ “ಶಟಪ್ ಐಸೆ, ತಮಾಷೆಗೂ ಒಂದು ಲಿಮಿಟ್ ಇರಲಿ” ಎಂದುಬಿಟ್ಟರು. ವಿವೇಕಾನಂದನ ಕಡೆಗೆ ತಿರುಗಿ “ಹೇಳಿ ವಿವೇಕ್, ಮುಂದೆ ಸಿ.ಎ, ಎಂ.ಕಾಂ. ಮಾಡೋ ಉದ್ದೇಶ ಇದೆಯಾ? ಲೈಫ್ ಪಾರ್ಟ್ನರ್ ಬಗ್ಗೆ ಏನಾದ್ರೂ ಕಲ್ಪನೆ ಇದೆಯೇ? ಲವ್ ಮ್ಯಾರೇಜ್ ಇಷ್ಟಾನೋ ಅರೇಂಜ್ಡ್ ಮ್ಯಾರೇಜೋ?” ಎಂದರು ಅಯ್ಯಂಗಾರ್. ವಿವೇಕಾನಂದ ಒಂದು ಕ್ಷಣ ಯೋಚಿಸಿದ. ಧೈರ್ಯ ತಂದುಕೊಂಡ. ತನ್ನ ಮನಸ್ಸಿನಲ್ಲಿದ್ದುದನ್ನು ಹೇಳಿಬಿಟ್ಟ. ತಂದೆ ತಾಯಿಗಾಗಿ, ತಮ್ಮನ ಓದಿಗಾಗಿ ತಾನು ಕೆಲಸ ಸೇರಲು ನಿರ್ಧರಿಸಿರುವುದನ್ನು, ಮದುವೆಯಾದರೆ ಬರುವ ಹೆಣ್ಣು ತಂದೆ-ತಾಯಿ ಗಳಿಗೆ ಕಿರಿಕಿರಿ ಉಂಟುಮಾಡುವ ಭಯ. ಬ್ರಹ್ಮಚಾರಿಯಾಗಿಯೇ ಇದ್ದು ಸಮಾಜ ಸೇವೆ ಮಾಡುವ ಉದ್ದೇಶ..” ಎಲ್ಲವನ್ನೂ ಹೇಳಿಬಿಟ್ಟ. ಇಡೀ ತರಗತಿಯೇ ನಿಶ್ಶಬ್ದವಾಗಿ ಆಲಿಸಿತ್ತು.
ಕೇಶವಯ್ಯಂಗಾರ್‌ರಿಗೆ ಇವನ ಪರಿಸ್ಥಿತಿ, ಮನಸ್ಥಿತಿ ಕಂಡು ಮರುಕ ಉಂಟಾಯಿತು. “ಗುಡ್, ಸಮಾಜಸೇವೆ ಮಾಡುವ ಉದ್ದೇಶ ಒಳ್ಳೆಯದೇ, ಆದರೆ ಆ ಕೆಲಸಾನ ಮದುವೆಯಾದ ಮೇಲೂ ಮಾಡಬಹುದು. ಸಾಧ್ಯವಾದರೆ ಕೆಲಸಕ್ಕೆ ಸೇರಿದ ಮೇಲೂ ಓದಬಹುದು ನಮ್ಮ ಅಭಿರುಚಿಗೆ ಹೊಂದುವ ಹೆಣ್ಣನ್ನು ನಾವೇ ಹುಡುಕಿಕೊಳ್ಳಬೇಕು ಅಥವಾ ಅಂಗವಿಕಲೆಗೋ ವಿಧವೆಗೋ ಬಾಳು ಕೊಡುವ ಮೂಲಕವೂ ಸಮಾಜಸೇವೆ ಮಾಡಿದ ಹಾಗಾಗುತ್ತದೆ. ನನ್ನದು ಪ್ರೇಮ ವಿವಾಹವೇ. ಎಂಥವರ ನಡುವೆಯೂ ಒಮ್ಮೊಮ್ಮೆ ವಿರಸ ಹುಟ್ಟುತ್ತದೆ. ಆದರೆ ಅದು ಕ್ಷಣಿಕ. ನನ್ನನ್ನೇ ನೋಡಿ, ಈಗಾಗಲೇ ನನ್ನ ಹೆಂಡತಿಗೆ ಕ್ಷಮೆಯಾಚಿಸಿ 3 ಮೆಸೇಜ್ ಕಳಿಸಿದ್ದೇನೆ.. ಆದರೆ ಯಾವುದೇ ಕೆಲಸ ಮಾಡಿದರೂ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಆನಂತರ ಮರುಗಬೇಡಿ. ಆಲ್ ದ ಬೆಸ್ಟ್” ಎಂದರು.
ಅವನಿಚ್ಛೆ ಇಲ್ಲದಿದ್ದರೂ, ಶೃಂಗ ಸೈನ್ಸ್ ತೆಗೆದುಕೊಂಡು, ಸೆಕೆಂಡ್ ಕ್ಲಾಸಿನಲ್ಲಿ ಪಾಸಾಗಿ, ಅಪ್ಪನ ವಿ.ಆರ್ ಎಸ್.ನ ಅರ್ಧ ಹಣ ಖಾಲಿ ಮಾಡಿ, ಬಿ.ಇ. ಪೇಮೆಂಟ್ ಸೀಟ್ ಗಿಟ್ಟಿಸಿದ್ದ. ಹಾಗಾಗಿ, ಬಿಕಾಂ ಮುಗಿದ ತಕ್ಷಣವೇ, ವಿವೇಕಾನಂದನಿಗೆ ಕೆಲಸಕ್ಕೆ ಸೇರುವುದು ಅನಿವಾರ್ಯವಾಯಿತು. ದಿನಕ್ಕೆರಡು ಗಂಟೆಯಂತೆ ನೆಟ್‌ನಲ್ಲಿ ಸರ್ಚ್ ಮಾಡಿ ರೆಸ್ಯೂಮ್ ಮೇಲ್ ಮಾಡಿದ. ಒಂದು ವಾರದಲ್ಲಿಯೇ ಕೆಲಸ ಸಿಕ್ಕು ಖುಷಿಯಾದ.
*****
ಉನ್ನತಿ ದೂರದಲ್ಲಿ ಬರುತ್ತಿದ್ದ ಹಾಗೆ ಕಂಡಿತು. ಕರ್ಚೀಫಿನಿಂದ ಮುಖ ಒರೆಸಿಕೊಂಡ. ‘ತನ್ನನ್ನು ಮನೆಯಲ್ಲಿ ಒಪ್ಪಿಕೊಂಡಿದ್ದಾರೆ. ನಿಜವಾಗಲೂ ಆ ಹುಡುಗ ಗ್ರೇಟ್’ ಎಂದರು ಎನ್ನಬಹುದೆ? ನಾನೇನು ಹೇಳಲಿ, ನನ್ನ ನಿರ್ಧಾರ ತಿಳಿದು ಅವಳು ಕುಸಿದು ಹೋದರೆ.. ಇಲ್ಲದ ಆಸೆ ಹುಟ್ಟಿಸಿ ಅವಳ ಆತ್ಮಹತ್ಯೆಗೆ ನಾನು ಕಾರಣನಾಗಿ ಬಿಟ್ಟರೆ.. ಮೈಮೇಲಿನ ಬಟ್ಟೆಗಳೆಲ್ಲ ಮಾಯವಾಗಿ ಬೆತ್ತಲೆಯಾದಂತೆ… ಉನ್ನತಿಗೆ ಬೆನ್ನುಮಾಡಿ ಫ್ಲೈ ಓವರ್‌ನಿಂದ ಜಿಗಿದು ಹಳಿಯ ಗುಂಟ ಓಡಿದಂತೆ ಭಾಸವಾಯಿತು. ಉನ್ನತಿ ಹತ್ತಿರ ಬಂದೇ ಬಿಟ್ಟಳು.
*****
ಇತರೆ ಯಾವುದೇ ದುಶ್ಚಟಗಳಿಲ್ಲದಿದ್ದರಿಂದ ಸಹಜವಾಗಿಯೇ ಕೆಲಸದಲ್ಲಿ ಆಸಕ್ತಿ ಹೆಚ್ಚಿ, ‘ಒಳ್ಳೆಯ ಕೆಲಸಿಗ ಕೆಲಸಗಾರ’ ಎನಿಸಿಕೊಂಡ. ಯಾವತ್ತೂ ತಡವಾಗಿ ಬರುತ್ತಿರಲಿಲ್ಲ. ಕಪ್ಪು, ಕಡು ನೀಲಿ, ಬೂದು ಬಣ್ಣದ ಪ್ಯಾಂಟ್‌ಗಳನ್ನು ಬಿಳಿ, ತೆಳು ಹಳದಿ, ಆಕಾಶ ನೀಲಿ ಬಣ್ಣದ ಅರ್ಧ ತೋಳಿನ ಶರ್ಟ್ ಗಳನ್ನೇ ಧರಿಸುತ್ತಿದ್ದ. ಪ್ರತಿ ದಿನ ಪೂರ್ತಿ ಶೇವ್ ಮಾಡಿಕೊಂಡು ಬರುತ್ತಿದ್ದ. ಮೀಸೆ ಬಿಡುವುದು ಪುರುಷತ್ವದ, ಅಹಂಕಾರದ ಪ್ರದರ್ಶನ ಎಂದು ಯಾವುದೋ ಪುಸ್ತಕದಲ್ಲಿ ಓದಿದ್ದ. ಗುಂಗುರು ಕೂದಲನ್ನು ಸಣ್ಣದಾಗಿ ಕತ್ತರಿಸಿಕೊಂಡು, ಎಡ ಬೈತಲೆ ತೆಗೆದು ಬಾಚುತ್ತಿದ್ದ. ಎಲ್ಲಕ್ಕಿಂತ ಹೆಚ್ಚಾಗಿ ನೀಳವಾಗಿ ಸರಳರೇಖೆಯಂತಿದ್ದ ಉದ್ದ ಮೂಗು ಅವನ ಮುಖಕ್ಕೆ ಕಳೆ ತಂದಿತ್ತು. ಆದರೂ ಒಮ್ಮೊಮ್ಮೆ ಕೆಲವು ದಾಂಡಿಗರು ‘ಆನಂದ್, ನೀಟಾಗಿ ಒಳ್ಳೆ ಚೂಡಿದಾರ್ ಹಾಕಿಬಿಟ್ಟರೆ ಯಾವ ಹೀರೋಯಿನ್‌ಗೂ ನೀವು ಕಡಿಮೆ ಇಲ್ಲ’ ಎಂದಾಗ, ವಿವೇಕಾನಂದನಿಗೆ ಬೇಸರವಾಗುತ್ತಿತ್ತು.
ಯಾರೊಂದಿಗೂ ಹೆಚ್ಚು ಬರೆಯದಿದ್ದರೂ ಯಾರನ್ನೂ ಎದುರು ಹಾಕಿಕೊಳ್ಳುತ್ತಿರಲಿಲ್ಲ. ಅವರ ಜೋಕುಗಳಿಗೆ ಸಣ್ಣ ನಗು ಒಂದೇ ಉತ್ತರ. ಬೇರೆಯವರ ಮದುವೆ ಆಹ್ವಾನ ಪತ್ರಿಕೆಗಳು ಬಂದಾಗ ಸಹಜವಾಗಿಯೇ ಉಳಿದವರೂ ಕೇಳುತ್ತಿದ್ದರು. ‘ಕಾಲ ಬರಲಿ’ ಎನ್ನುತ್ತಿದ್ದ. ಆಗೆಲ್ಲ ಇವನ ಮನಸ್ಸಿಗೆ ಬರುತ್ತಿದ್ದುದು ಕೇಶವಯ್ಯಂಗಾರ್ ಹೇಳಿದ ಮಾತುಗಳು. “ಅಂಗವಿಕಲೆಗೋ ವಿಧವೆಗೋ ಬಾಳು ಕೊಡುವ ಮೂಲಕ ಸಮಾಜಸೇವೆ ಮಾಡಬಹುದು.”
ಅವನಿಚ್ಛೆ ಇಲ್ಲದಿದ್ದರೂ, ಶೃಂಗ ಸೈನ್ಸ್ ತೆಗೆದುಕೊಂಡು, ಸೆಕೆಂಡ್ ಕ್ಲಾಸಿನಲ್ಲಿ ಪಾಸಾಗಿ, ಅಪ್ಪನ ವಿ.ಆರ್ ಎಸ್.ನ ಅರ್ಧ ಹಣ ಖಾಲಿ ಮಾಡಿ, ಬಿ.ಇ. ಪೇಮೆಂಟ್ ಸೀಟ್ ಗಿಟ್ಟಿಸಿದ್ದ. ಹಾಗಾಗಿ, ಬಿಕಾಂ ಮುಗಿದ ತಕ್ಷಣವೇ, ವಿವೇಕಾನಂದನಿಗೆ ಕೆಲಸಕ್ಕೆ ಸೇರುವುದು ಅನಿವಾರ್ಯವಾಯಿತು. ದಿನಕ್ಕೆರಡು ಗಂಟೆಯಂತೆ ನೆಟ್‌ನಲ್ಲಿ ಸರ್ಚ್ ಮಾಡಿ ರೆಸ್ಯೂಮ್ ಮೇಲ್ ಮಾಡಿದ. ಒಂದು ವಾರದಲ್ಲಿಯೇ ಕೆಲಸ ಸಿಕ್ಕು ಖುಷಿಯಾದ.
ಬಸ್ಸುಗಳು ನಿಲ್ಲುವುದಕ್ಕೆ ತೊಂದರೆಯಾಗಬಾರದೆಂದು ಇವನ ಆಫೀಸಿನ ಕ್ಯಾಬ್ ಸ್ವಲ್ಪ ಮುಂದೆ ಮರದ ಬಳಿ ನಿಲ್ಲುತ್ತಿತ್ತು ಇತರೆ ಕೆಲವು ಕ್ಯಾಬ್‌ಗಳು ಅಲ್ಲಿಯೇ ನಿಲ್ಲುತ್ತಿದ್ದುದು ಹತ್ತು ನಿಮಿಷ ಮುಂಚೆಯೇ ಬರುತ್ತಿದ್ದ ಆನಂದ ದಿಟ್ಟಿಸಿ ಮುಖ ನೋಡುವುದು ಸೌಜನ್ಯವಲ್ಲವೆಂದು ಯಾವುದಾದರೂ ಮ್ಯಾಗ್ಸಿನ್ ಓದುತ್ತಾ ನಿಲ್ಲುತ್ತಿದ್ದ. ಆದರೂ ಒಮ್ಮೊಮ್ಮೆ ಕಿರುಗಣ್ಣಿನಲ್ಲಿ ಗಮನಿಸುತ್ತಿದ್ದ. ದಿನವೂ ಬರುತ್ತಿದ್ದ ಕೆಲವರು ವಿಶ್ ಮಾಡುತ್ತಿದ್ದರೂ ಕೆಲವರದು ಮುಗುಳುನಗೆ… ಯಾರಾದರೂ ಹೆಣ್ಣು ಮಕ್ಕಳು ಬರೀ ಹಣೆಯಲ್ಲಿದ್ದರೆ ಅವರು ವಿಧವೆ ಏನೋ ಎಂದುಕೊಳ್ಳುತ್ತಿದ್ದ, ಆದರೆ ಅದು ಕೆಲವರಿಗೆ ಫ್ಯಾಷನ್ ಎಂದು ಅನುಭವ ಹೇಳಿತು.
ಒಂದು ದಿನ ಬಹುಶಃ ವಾಡಿಕೆಯಂತೆ ಐದು ನಿಮಿಷ ಮುಂಚೆಯೇ ಬಂದಿದ್ದ. ಸಪೂರ, ಬೆಳ್ಳಗೆ, ಉದ್ದವಿದ್ದ, ಸಾಮಾನ್ಯ ಚೂಡಿದಾರ್ ಹಾಕಿದ್ದ ಹುಡುಗಿಯೊಬ್ಬಳು ಧಾವಿಸಿ ಬಂದಳು. ಇವನನ್ನೇ ಉದ್ದೇಶಿಸಿ ‘ಮ್ಯಾಕ್ಸಿ ಕ್ಯಾಬ್ ಹೊರಟು ಹೋಯಿತಾ’ ಎಂದಳು. ಆ ವ್ಯಾನ್ ಹೋದುದನ್ನು ಗಮನಿಸಿದ್ದ. ಹೌದೆಂದು ತಲೆಯಾಡಿಸಿದ. ಅವಳು ಪೆಚ್ಚಾದಳು. ಆನಂದನಿಗೆ ಯಾಕೋ ಅವಳ ಮುಖ ನೋಡದೆ ಇರಲಾಗಲಿಲ್ಲ. ಕಿರುಗಣ್ಣಿನಲ್ಲೇ ಗಮನಿಸುತ್ತಾ ಇದ್ದ. ಎರಡುಹೆಜ್ಜೆ ಹಿಂದೆ ಹೋದಳು. ಬಸ್‌ಗಳಲ್ಲಿ, ಖಾಸಗಿ ವ್ಯಾನ್‌ಗಳಲ್ಲಿ ಜನ ನೇತಾಡುತ್ತಿದ್ದರು. ಪುನಃ ಇವನ ಬಳಿ ಬಂದು “ನೀವು ಕ್ಯಾಬ್‌ಗೆ ಕಾಯ್ತಾ ಇದ್ದೀರಾ” ಎಂದಳು. ‘ಹೂಂ’ ಎಂದ. ಇವನ ಆಫೀಸ್ ಯಾವುದೆಂದು ಕೇಳಿದಳು. ಹೇಳಿದ. “ಇವತ್ತೊಂದು ದಿನ ನಿಮ್ಮ ಕ್ಯಾಬ್‌ನಲ್ಲಿ ಪರ್ಮಿಟ್ ಮಾಡ್ತಾರಾ” ಎಂದು ಸಂಕೋಚದಿಂದಲೇ ಕೇಳಿದಳು. ಪಕ್ಕದಲ್ಲಿದ್ದ ಸುಮಂತ- ಇವನ ಆಫೀಸಿನ ವನು- “ಶೂರ್, ನಾನ್ಹೇಳ್ತೀನಿ” ಎಂದ. ವಿವೇಕಾನಂದ ತಲೆಯಾಡಿಸಿದ. ಅವಳು ಇವನ ಮುಖ ನೋಡಿ “ಥ್ಯಾಂಕ್ಸ್” ಎಂದಳು. ಪ್ರಯಾಣದ ಸಮಯದಲ್ಲಿ ಕಿರುಗಣ್ಣಿನಿಂದ ಅವಳನ್ನೇ ಗಮನಿಸುತ್ತಿದ್ದೆ. ಸಭ್ಯತೆಯಲ್ಲವೆಂದುಕೊಂಡರೂ ಸುಮ್ಮನಿರಲಾಗಲಿಲ್ಲ. ಇಳಿದು ಹೋಗುವಾಗ ಇಬ್ಬರಿಗೂ- ಸುಮಂತ ವಿವೇಕ-ಥ್ಯಾಂಕ್ಸ್ ಹೇಳಿ ಹೋದಳು.
ಇವನ ವ್ಯಾನ್ ಬರುವುದು ಏಳು ನಲವತ್ತೈದಕ್ಕೆ ಆದರೂ ಮರುದಿನದಿಂದ ಏಳೂ ಇಪ್ಪತ್ತಕ್ಕೆ ಸ್ಟಾಪಿಗೆ ಬರುತ್ತಿದ್ದ. ಆದರೆ ಅವಳು ಮಾತ್ರ ಅವಳ ವ್ಯಾನ್ ಬರುವುದಕ್ಕೆ ಒಂದೆರಡು ನಿಮಿಷ ಇರುವಾಗ ಬರುತ್ತಿದ್ದಳು. ಅಥವಾ ವ್ಯಾನ್ ನಿಂತಿರುವುದನ್ನು ಕಂಡು ಓಡೋಡಿ ಬರುತ್ತಿದ್ದಳು. ಒಂದೆರಡು ನಿಮಿಷ ಮುಂಚೆ ಬಂದಾಗ ಮಾತ್ರ ಇವನ ಕಡೆ ದೃಷ್ಟಿ ಹಾಯಿಸುತ್ತಿದ್ದಳು. ಇವನಿಗಾಗಿ ಅಲ್ಲದಿದ್ದರೂ ಸಣ್ಣದೊಂದು ನಗು ಅವಳ ಕಣ್ಣಿನಲ್ಲಿಯೂ ತುಟಿಯಲ್ಲಿಯು ಕಾಣುತ್ತಿತ್ತು. ಅದೊಂದು ರೀತಿಯ ಯಾವ ಕಲ್ಮಶದ ಎಳೆಯೂ ಇಲ್ಲದ ನಿರ್ಮಲ ನಗು. ಅದು ಹೆಚ್ಚಾಗಿ ಅವಳ ಕಣ್ಣುಗಳಲ್ಲಿಯೇ ಕಾಣುತ್ತಿದ್ದುದು. ವಿವೇಕಾನಂದ ಆ ನಗುವಿಗಾಗಿಯೇ ಕಾದಿರುತ್ತಿದ್ದ. ಮಾತಿಲ್ಲ, ಕತೆಯಿಲ್ಲ. ಅವನ ಕಣ್ಣುಗಳು ನೆಪಮಾತ್ರಕ್ಕೆ ಮ್ಯಾಗ್‌ಜೀನ್‌ಗಳ ಮೇಲಿರುತ್ತಿತ್ತು. ಮೊದಲೇ ಸಂಕೋಚದ ಮುದ್ದೆ. ದಿಟ್ಟಿಸಿ ಮುಖ ನೋಡಲು ಹಿಂಜರಿಕೆ. ಆಗಾಗ ಚೂರು ಚೂರೇ ಕಣ್ಣಿನ ಕೊನೆಯಲ್ಲಿ ಗಮನಿಸಿದ. ಅವನಿಗೆ ಅವಳ ಸ್ನಿಗ್ಧ ಸೌಂದರ್ಯ, ಮೂಗು, ತುಟಿಗಳು ಮಾತ್ರವಲ್ಲ, ಇಡೀ ಮುಖವೇ ಸಂಪಿಗೆಯಂತೆ ಕಾಣುತ್ತಿತ್ತು. ಸಣ್ಣ ಬೊಟ್ಟಿನ ಮೇಲೊಂದು ಚೂರೇ ಚೂರು ವಿಭೂತಿ. ಬಹುಶಃ ಸಾಯಿಭಕ್ತೆ ಇರಬಹುದು. ಅವಳ ಬಗ್ಗೆ ಇವನ ಬಗ್ಗೆ- ಅವಳು ಕೇಳಿರಲಿಲ್ಲ ಇವನು ಹೇಳಿರಲಿಲ್ಲ. ಇವನು ಇವನ ಕಲ್ಪನೆಯ ಪ್ರಕಾರ ಅವಳ ಹೆಸರು ‘ಸರಸ್ವತಿ’ ಇರಬಹುದು. ಅಥವಾ ‘ಶಾರದೆ’ ಹೂಂ, ಹೌದು ಅದೇ ಸೂಕ್ತ ಎಂದುಕೊಂಡ. ಒಂದು ದಿನ ಇವನು ಅವಳ ನಿರೀಕ್ಷೆಯಲ್ಲಿ ಇದ್ದ. ಅವಳು ಒಂದೈದು ನಿಮಿಷ ಮುಂಚೆಯೇ ಬಂದುಬಿಟ್ಟಳು. ಇವನಿಗೆ ಸಂಭ್ರಮ. ಬಿಳುಪಿನ ಮೇಲೆ ನೀಲಿ ಹೂಗಳ ಚಿತ್ತಾರದ ಹತ್ತಿಯ ಚೂಡಿದಾರ. ಹತ್ತಿರ ಬಂದು ನಿಂತಳು. ಹೃದಯ ಬಾಯಿಗೆ… ಉಭಯಕುಶಲೋಪರಿ. ಅವಳ ಹೆಸರು ‘ಉನ್ನತಿ’ ಇವನ ಹೆಸರು ವಿವೇಕಾನಂದ ಎನ್ನುವುದಕ್ಕಿಂತ ‘ವಿವೇಕ್ ಚೆಂದ’ ಎಂದಳು. ಅವಳೇ ದೊಡ್ಡವಳು, ಇಬ್ಬರು ತಂಗಿಯರು, ಅವಳದು ಬಿ.ಕಾಂ. ಆ ದಿನ ಪೂರ ‘ವಿವೇಕ’ ಗಾಳಿಯಲ್ಲಿ ತೇಲಿದ. ತಾನೇನಾ ಇಷ್ಟು ವರ್ಷ ವಾರಾಂತ್ಯಗಳಲ್ಲಿ ಆಶ್ರಮಕ್ಕೆ ಹೋಗಿ ಬಂದವನು? ಪರ ನಾರಿಯರೆಲ್ಲ ಸಹೋದರಿಯರೆಂದು ಕೊಂಡವನು? ಈ ಬದಲಾವಣೆ ಹೇಗಾಯಿತು? ಏಕಾಯಿತು?
ಬೆಳಗಿನ ಐದು ನಿಮಿಷದ ಭೇಟಿ ಇಡೀ ದಿನಕ್ಕೆ ಸಂಜೀವಿನಿ. ಪುನಃ ಮಾರನೇ ದಿನ ಸಿಗುವ ಭರವಸೆಯಿಂದ ರಾತ್ರೆಗಳು ಜಾರಿಕೊಳ್ಳುತ್ತಿದ್ದವು. ಅವಳ ಕಣ್ಣುಗಳನ್ನು ತುಟಿಗಳನ್ನು ಗಮನಿಸುತ್ತಿದ್ದವನಿಗೆ ಒಮ್ಮೆ ಹುಬ್ಬಿನ ಮೇಲೆ ಹಾಗೂ ತುಟಿಯ ಮೇಲೆ ಸಣ್ಣದೊಂದು ಎಳೆಯ ಬಿಳಿಯ ಮಚ್ಚೆಗಳು ಕಂಡವು. ಇನ್ನೊಮ್ಮೆ ಎಡಮೊಣಕೈ ಬಿಳಿ ತುಸು ದೊಡ್ಡ ಕುಂಕುಮ ದಷ್ಟು ಅಗಲ ಬಿಳಿಯ ಮಚ್ಚೆ. ಒಮ್ಮೆ ಇವನು ಅದನ್ನು ಗಮನಿಸುತ್ತಿರುವುದನ್ನ ಅವಳು ಗಮನಿಸಿದಳು. ಇದನ್ನು ಇವನು ಕೇಳುವ ಮೊದಲೇ ಅವಳು ಹೇಳಿಬಿಟ್ಟಳು “ನಮ್ಮ ತಾತ ಒಬ್ಬರಿಗೆ ಇತ್ತಂತೆ. ಇತ್ತೀಚೆಗೆ ನನಗೂ ಶುರುವಾಗಿದೆ. ಬೆಳಗಾವಿಯ ಬಳಿ ಇದಕ್ಕೆ ಒಂದು ಔಷಧಿ ಸಿಗುತ್ತದಂತೆ. ಅದನ್ನು ಹಚ್ಚಿಕೊಂಡು ಬಿಸಿಲಿನಲ್ಲಿ ನಿಂತರೆ ಕಡಿಮೆ ಆಗುವುದಂತೆ. ಹಾಗೆ ಮಾಡಬೇಕಾದರೆ ನಾನು ಕೆಲಸ ಬಿಡಬೇಕು, ಅದು ಸಾಧ್ಯವಿಲ್ಲ. ಅಷ್ಟಕ್ಕೂ ಇದೊಂದು ಕಾಯಿಲೆಯೇ ಅಲ್ಲವಂತೆ. ಪಾದಗಳ ಬಳಿ ಮಾತ್ರ ಸ್ವಲ್ಪ ಜಾಸ್ತಿಯೇ ಆಗಿದೆ. ಹಾಗಾಗಿ ಚಪ್ಪಲಿ ಬದಲು ಶೂ ಹಾಕಿಕೊಳ್ಳುವೆ” ಎಂದಳು. ಇವನಿಗೆ ಒಂದು ರೀತಿಯ ಸಂಕಟ ಶುರುವಾಯಿತು. ಇಷ್ಟು ಚಂದದ ಮುಖ ಹೇಗಾಗಬಹುದು? ನೀಳ ಸಂಪಿಗೆಯ ದಳವೊಂದು ಬಿಸಿಲಿಗೆ ಕಪ್ಪಾದ ಹಾಗಾಯಿತು. ಇಷ್ಟು ದಿನ ಅವನಿಗೇನೂ ವಿಶೇಷ ಅನಿಸಿರಲಿಲ್ಲ. ಅವಳ ಸನಿಹವೇ ಖುಷಿ ಕೊಡುತ್ತಿತ್ತು. ಮುಂದೇನು ಕಲ್ಪನೆಗಳಿರಲಿಲ್ಲ. ಈ ಭೇಟಿ, ಮಾತು, ಬೆಳಗಿನ ಸಂಜೆಯ ಕಾಯುವಿಕೆ ಎಲ್ಲವೂ ಅವ್ಯಾಹತವಾಗಿ ನಿರಂತರ ನಡೆಯುವ ಕ್ರಿಯೆಯಷ್ಟೇ ಎಂದು ಭಾವಿಸಿದ್ದ. ದಿಗ್ಗನೆ ಕೇಶವಯ್ಯಂಗಾರ್ ಮಾತುಗಳು ನೆನಪಾಯಿತು. ಇಡೀ ದಿನ ಇಡೀ ವಾರ ಗುನುಗುಡುತ್ತಲೇ ಇತ್ತು. ಹೌದು, ಇವಳು ಅಂಗವಿಕಲೆಯಲ್ಲ, ವಿಧವೆಯಲ್ಲ, ಆದರೂ ಇವಳಿಗೆ ಸೂಕ್ತ ಗಂಡು ಸಿಗುವುದು ದುಸ್ತರ. ಅವಳ ವ್ಯಾನ್ ಬರಲು ಇನ್ನೂ ಐದು ನಿಮಿಷ ಇತ್ತು. ಇಬ್ಬರೂ ಸಹಜ ಮೌನದಲ್ಲಿ ಎರಡು ನಿಮಿಷ ಕಳೆದರು. ಇದ್ದಕ್ಕಿದ್ದಂತೆ ಗಂಭೀರ ಧ್ವನಿಯಲ್ಲಿ ವಿವೇಕ “ಇಷ್ಟು ದಿನ ನಾನು ಮದುವೆಯ ಆಗಬಾರದು ಎಂದಿದ್ದೆ” ಎಂದ. ಅವಳು ಎಂದಿನಂತೆ ತೆಳು ಸಂಪಿಗೆಯ ನಗೆಯನ್ನು ತುಟಿಯಲ್ಲೂ ಕಣ್ಣುಗಳಲ್ಲೂ ಹರಡಿಕೊಂಡು ಅವನನ್ನೇ ನೋಡಿದಳು. ಇನ್ನೆರಡು ನಿಮಿಷ ಅಸಹಜ ಮೌನದ ನಂತರ ವ್ಯಾನ್ ಬಂತು. ಇವನನ್ನೇ ನೋಡುತ್ತ ಹೊರಟುಹೋದಳು.
ಮಧ್ಯಾಹ್ನ ಊಟದ ಸಮಯದ ನಂತರ ಮೊಬೈಲ್ ವೈಬ್ರೇಟ್ ಆಯಿತು. ಇವನಿಗೆ ಫೋನ್ ಕಾಲ್ಸ್ ಬರುವುದೇ ಕಡಿಮೆ. ಯಾರದೆಂದು ನೋಡದೆ ರಿಸಿವ್ ಮಾಡಿ ‘ಹಲೋʼ ಎಂದ. ಅವಳೇ! “ಈ ಹೊತ್ತು ಊಟ ಸೇರಲಿಲ್ಲ; ಬೇರೇನೂ ಕಾರಣ ಅಲ್ಲ, ಕ್ಯಾಂಟೀನ್‌ನಲ್ಲಿ ಊಟ ಚೆನ್ನಾಗಿರಲಿಲ್ಲ” ಅಪರೂಪಕ್ಕೆ ಸಶಬ್ದವಾಗಿ ನಕ್ಕಳು. “ಹೌದು, ಮದುವೆ ಯಾವಾಗ? ಹೆಣ್ಣು ಯಾರು?” ಎಂದಳು. ಒಂದು ನಿಮಿಷ ಮೊಬೈಲ್ ಕಿವಿಯಲ್ಲೇ ಇತ್ತು. ಏನು ಹೇಳುವುದೆಂದು ಸುಮ್ಮನಿದ್ದ. ಡಿಸ್‌ಕನೆಕ್ಟ್ ಆಯಿತು.
ಮಾರನೆಯ ಬೆಳಿಗ್ಗೆ ಇವನಿಗೇನೋ ಉದ್ವೇಗ; ಮದುವೆಯೇ ಬೇಡ ಎಂದಿದ್ದವನು ಇಡೀ ರಾತ್ರಿ ಅದರ ಬಗ್ಗೆಯೇ ಯೋಚಿಸಿ ನಿದ್ರಿಸಿರಲಿಲ್ಲ. ಅವಳು ಬಂದಳು. “ನಿನ್ನೆ ಉತ್ತರ ಹೇಳಲಿಲ್ಲ” ಎಂದಳು. “ನಾನು ಮದುವೆ ಬಗ್ಗೆ ಯೋಚಿಸುವುದಕ್ಕೆ ಕಾರಣಾನೇ ನೀವು” ಎಂದೆ. “ಅದು ಗೊತ್ತು, ಆದರೆ ಹುಡುಗಿ ಯಾರು?” ಇನ್ನಷ್ಟು ಕೆಣಕಿದಳು. “ನೀವಿಷ್ಟು ಘಾಟಿ ಅಂದ್ಕೊಂಡಿರಲಿಲ್ಲ” ಅಂದೆ. “ಹೋಗ್ಲಿ ಬಿಡಿ ನೀವು ಇನ್ನಷ್ಟು ರೊಮ್ಯಾಂಟಿಕ್ ಆಗಿ ಪ್ರಪೋಸ್ ಮಾಡ್ತೀರೇನೊ ಅಂದ್ಕೊಂಡಿದ್ದೆ” ಅಂದಳು. ಇದರ ಸಾಧಕ ಬಾಧಕ ಯೋಚಿಸಿದ್ದೀರಾ? ಮನೆಯಲ್ಲಿ ಕೇಳಿದ್ದೀರಾ?” ಎಂದಳು. “ನಾನು ಮನೆಯಲ್ಲಿ ಕೇಳೋದೇನಿಲ್ಲ, ಹೇಳೋದಷ್ಟೇ” ಎಂದೆ. “ಸರಿ ನೀವು ಹೇಳಿ, ಬಂದು ತಿಳಿಸಿ. ನಂತರ ನಾನು ಮನೇಲಿ ಹೇಳ್ತೀನಿ” ಎಂದಳು.
ಅಪ್ಪನ ಬಳಿ ಮಾತಾಡುವುದಕ್ಕಿಂತ ಅಮ್ಮನ ಬಳಿ ಹೇಳುವುದು ಸಾಧ್ಯವೂ ಸಾಧುವೂ ಎನಿಸಿತು. ಈ ಹಿಂದೆ ಅಮ್ಮ ಮದುವೆಯ ಮಾತು ತೆಗೆದಾಗಲೆಲ್ಲ ಮೌನವಾಗಿರುತ್ತಿದ್ದ. ಒಮ್ಮೆ ತುಸು ಗಟ್ಟಿಸಿ ಕೇಳಿದಾಗ ‘ಮದ್ವೆ ಆಗ್ಲೇಬೇಕೇನಮ್ಮಾ?ʼ ಎಂದು ದನಿ ಎತ್ತರಿಸಿ ಹೇಳಿ, ಮರುಕ್ಷಣವೇ ನಾಚಿ ‘ಸಾರಿʼ ಎಂದಿದ್ದ. ‘ಸದ್ಯಕ್ಕೆ ಆ ವಿಷಯ ಬೇಡಮ್ಮʼ ಎಂದಿದ್ದ. ಈಗ ಹೇಗೆ ಪ್ರಸ್ತಾಪಿಸುವುದು? ಒಮ್ಮೆ ಸಮಯ ನೋಡಿ, ಅಮ್ಮ ಒಬ್ಬರೇ ಇದ್ದಾಗ, ತನ್ನ ಸ್ಟಾಪಿನಲ್ಲಿ ಸಿಗುವ ಹುಡುಗಿಯ ಬಗ್ಗೆ ಹೇಳಿದ. ಅವಳಿಗಿರುವ ಬಿಳುಪು ಮಚ್ಚೆಗಳ ಬಗ್ಗೆ ಹೇಳಿದ. ಅಂಥವರಿಗೆ ಮರು ಮದುವೆಯಾಗೋದು ಕಷ್ಟಾನಾ ಅಮ್ಮಾ? ಎಂದು ಹೇಳಿದ. “ಹಾಗೇನಿಲ್ಲಪ್ಪ, ಹತ್ತಿರದ ನೆಂಟರು ಅಥವಾ ಬಡ ಗಂಡು ಅಥವಾ ಎರಡನೇ ಮದುವೆಯ ಗಂಡು ಇಲ್ಲವೆ ತುಸು ವಯಸ್ಸಾದವರು ಸಿಕ್ತಾರೆ” ಎಂದರು. ತುಸು ಮೌನದ ನಂತರ “ನಾನು ಆ ಹುಡುಗೀನ ಮದುವೆ ಆದ್ರೆ ನಿಂಗೆ ಬೇಸರವಾ ಅಮ್ಮಾ?” ಎಂದ. ಅವನು ಈ ವಿಚಾರ ಪ್ರಸ್ತಾಪಿಸಿದಾಗಲೇ ಈ ಸಾಧ್ಯತೆಯನ್ನು ಊಹಿಸಿದ್ದ ಗೀತಾಬಾಯಿ, ತುಸು ಗಂಭೀರರಾದರು. “ಬೇಸರ ಅಂತೇನೂ ಇಲ್ಲ, ಆದ್ರೂ ಯೋಚ್ನೆಮಾಡು. ನಾಳೆ ಆ ಕಲೆಗಳು ಹೆಚ್ಚಾಗಿ, ಮೈಪೂರ ಆವರಿಸಿಕೊಳ್ಳಬಹುದು. ಹುಟ್ಟುವ ಮಕ್ಕಳಿಗೂ ಬರುವ ಸಾಧ್ಯತೆ ಇರಬಹುದು. ಯೋಚಿಸು.” ಎಂದರು. ಮದುವೆಯಾಗದೆ ಬ್ರಹ್ಮಚಾರಿಯಾಗಿ ಉಳಿದು ಬಿಡುತ್ತಾನೇನೋ ಎಂಬ ಭಯ, ಅಲ್ಲದೆ ‘ಸರಳ, ಶಿಸ್ತಿನ ಜೀವನ ರೂಪಿಸಿಕೊಳ್ಳಲಿʼ ಎಂದು ಆಶ್ರಮಕ್ಕೆ ಆಗಾಗ ಕರೆದುಕೊಂಡು ಹೋಗಿ ನಾವೇ ತಪ್ಪು ಮಾಡಿದೆವೇನು ಎಂದು ಚಿಂತಿಸುತ್ತಿದ್ದ ಗೀತಾಬಾಯಿಗೆ ಮಗನ ಮದುವೆಯ ಸಿದ್ಧತೆಯಿಂದ ಸಂತೋಷ ಸಂಭ್ರಮ ಪಡಲಾಗಲಿಲ್ಲ. ಅಲ್ಲದೆ ಯಜಮಾನರ ಬಳಿ ಈ ವಿಷಯ ಹೇಳಿ ಒಪ್ಪಿಸುವುದು ತನ್ನದೇ ಜವಾಬ್ದಾರಿ ಎಂಬ ಅಳುಕು.
******
ಆನಂದ ಮನೆಯಿಂದ ಸ್ಟಾಪಿಗೆ ನಡೆದು ಹೋಗುವ ದಾರಿಯಲ್ಲಿ ಒಂದು ಸ್ಲಂ ಸಿಗುತ್ತದೆ. ಅಲ್ಲಿ ಇಬ್ಬರು ಬಿಳಿಯ ಹುಡುಗರನ್ನು ನೋಡುತ್ತಿದ್ದ. ಬಹುಶಃ ಅವರಿಬ್ಬರೂ ಅಣ್ಣತಮ್ಮಂದಿರು ಇರಬೇಕು. ಈ ದಿನವೂ ಅವರು ಆಡಿಕೊಂಡು ಇದ್ದರು. ಆನಂದ ಒಂದು ಕ್ಷಣ ನಿಂತು ಗಮನಿಸಿದ. ಅವರ ಕೂದಲು, ಕಣ್ಣುರೆಪ್ಪೆಗಳು, ಮೈಕೈ ಮೇಲಿನ ರೋಮಗಳು ಬೆಳ್ಳಗಿದ್ದವು. ಶಾಕ್ ಆಯಿತು. ಬಹುಶಃ ಹುಟ್ಟಿನಿಂದಲೇ ಬಂದ ಬಳುವಳಿ ಇರಬಹುದು.
ಸ್ಟಾಪಿನಲ್ಲಿ ಅವಳು ಸಿಕ್ಕಳು. ‘ತಾನು ಅಮ್ಮನ ಬಳಿ ಹೇಳಿರುವುದಾಗಿಯೂ ಅವಳು ಅಪ್ಪನಿಗೆ ಒಪ್ಪಿಸುವುದಾಗಿಯೂ, ತನ್ನ ಕಡೆಯಿಂದ ಯಾವುದೇ ಸಮಸ್ಯೆ ಇಲ್ಲʼವೆಂದು ಹೇಳಿದ. ತನ್ನ ಹೆಗಲಿನ ಭಾರವನ್ನು ಅವಳ ಹೆಗಲಿಗೆ ವರ್ಗಾಯಿಸಿದ. ಸದಾ ಸ್ಥಾಯಿಭಾವದಂತೆ ಸ್ಥಿರವಾಗಿದ್ದ. ಸಂಪಿಗೆಯ ನಗುವಿನಲ್ಲಿ ತುಸು ಕೊರತೆ ಕಂಡ ಹಾಗಾಯಿತು. ‘ಸರಿಸರಿ, ಆಯಿತಾಯಿತು, ಮನೆಯಲ್ಲಿ ಕೇಳುತ್ತೇನೆʼ ಎಂಬೆಲ್ಲ ಅರ್ಥವ್ಯಾಪ್ತಿಯನ್ನು ಒಳಗೊಂಡಂತೆ ಹತ್ತಿಪ್ಪತ್ತು ಸೆಕೆಂಡುಗಳ ಕಾಲ ತಲೆಯನ್ನು ಮೇಲೆ ಕೆಳಗೆ ಆಡಿಸುತ್ತಲೇ ಇದ್ದಳು. ಆ ಹೊತ್ತು ಶುಕ್ರವಾರ; ಎರಡು ದಿನ ಕಾಯುವುದು ಅನಿವಾರ್ಯ.
*****
ಉನ್ನತಿಯ ಮನೆಯಲ್ಲಿ ಏನು ನಿರ್ಧರಿಸಬಹುದು? ಸಹಜವಾಗಿಯೇ ಸಂತಸದಿಂದ ಒಪ್ಪಿಗೆ ನೀಡಬಹುದೆ? ತನ್ನ ನಿರ್ಧಾರ ಸರಿಯಾದುದೇ? ತಾನೇನೋ ಆದರ್ಶದಿಂದ ನಿರ್ಧಾರ ತೆಗೆದುಕೊಂಡ ಬಗ್ಗೆ ಹೆಮ್ಮೆಯೆ? ಅಥವಾ ದಾರಿಯಲ್ಲಿ ಕಂಡುಬರುವ ಆ ಅಣ್ಣ ತಮ್ಮಂದಿರ ಹಾಗೆ ಉನ್ನತಿಯ ದೇಹ ಸಂಪೂರ್ಣ ಬಿಳಿಯಾಗಿ ಬಿಡಬಹುದೆ? ಆದರೆ ಏನು? ತಾನು ಕೇವಲ ಅವಳ ದೇಹವನ್ನು ಪ್ರೀತಿಸುವುದೇ? ವಿವೇಕನ ಆನಂದಕ್ಕೆ ಮಂಕು ಕವಿಯಿತು. ಏನನ್ನೋ ನೆಟ್‌ನಲ್ಲಿ ಸರ್ಚ್ ಮಾಡುತ್ತಿದ್ದವನಿಗೆ ಇದರ ಬಗ್ಗೆಯೂ ಹುಡುಕುವ ಕುತೂಹಲವಾಯಿತು. ಹುಡುಕಿದ- ಸಾರಾಂಶ.. ‘ದೇಹದ ಕಂದು ಬಣ್ಣಕ್ಕೆ ಕಾರಣವಾಗುವ ಮೆಲನೋಸೈಟ್ ಜೀವಕೋಶದಿಂದ ಉತ್ಪತ್ತಿಯಾಗುವ ಮೆಲನಿನ್ ವರ್ಣದ್ರವ್ಯವು ದೇಹದಲ್ಲಿ ಕಡಿಮೆಯಾದಾಗ ಈ ತೊಂದರೆ ಕಾಣಿಸಿಕೊಳ್ಳುತ್ತದೆ. ದೇಶದಲ್ಲಿ ಶೇಕಡ ನಾಲ್ಕರಷ್ಟು ಜನಕ್ಕೆ ಈ ಸಮಸ್ಯೆ ಇದೆ. ಒಂದು ರೀತಿಯಲ್ಲಿ ಇದು ಕಾಯಿಲೆಯೇ ಅಲ್ಲ. ಹಾಗೆಯೇ ಸಾಮಾನ್ಯ ಜನರು ಭಾವಿಸಿರುವ ಹಾಗೆ ಇದು ರೋಗವೂ ಅಲ್ಲ, ಅನುವಂಶೀಯವೂ ಅಲ್ಲ, ಪ್ರಾರಂಭದಲ್ಲೇ ಲೇಸರ್ ಚಿಕಿತ್ಸೆ ಮುಂತಾದ ವಿಧಾನದಿಂದ ಈ ಕಾಯಿಲೆಯನ್ನು ಗುಣಪಡಿಸಬಹುದು.’ ವಿವೇಕಾನಂದನಿಗೆ ಸ್ವಲ್ಪ ಸಮಾಧಾನವಾಯಿತು. ಇಡೀ ದಿನ ಗೆಲುವಿನಿಂದ ಇದ್ದ.
ಸಂಜೆ ಮನೆಗೆ ಹಿಂದಿರುಗುವಾಗಲೂ ‘ಆ ಹುಡುಗರು’ ಕಂಡರು. ಒಂದುಕ್ಷಣ ಹೊಟ್ಟೆಯಲ್ಲಿ ಸಂಕಟ. ಮನೆಗೆ ಹಿಂತಿರುಗಿದಾಗ ಅಮ್ಮ ತುಸು ಗಂಭೀರರಾಗಿದ್ದರು. ಇವನೇನು ಕೇಳಲಿಲ್ಲ. ಮಗ ಕಾಫಿ ಮುಗಿಸುವುದನ್ನು ಕಾದಿದ್ದ ಅವರೇ ಹೇಳಿದರು. ಇವನ ನಿರ್ಧಾರವನ್ನು ಪತಿಗೆ ತಿಳಿಸಿದ್ದರು. ಎಷ್ಟೇ ವಿಶಾಲ ಹೃದಯ ಇದ್ದರೂ, ಸಮಸ್ಯೆ ತಮ್ಮ ಕಾಲಬುಡಕ್ಕೆ ಬಂದಾಗ ಸ್ವಾರ್ಥ ಹೆಡೆಯೆತ್ತುತ್ತದೆ. ಅಂತೆಯೇ ಸೀತಾರಾಮಯ್ಯ ಒಮ್ಮೆಗೆ ಒಪ್ಪಿಗೆ ನೀಡಲು ನಿರಾಕರಿಸಿ, ಅದಕ್ಕೊಂದು ಪರಿಹಾರವನ್ನೂ ಸೂಚಿಸಿದ್ದರು. ‘ಇನ್ನೊಂದೆರಡು ವರ್ಷ ಕಾಯುವಂತೆ ಹುಡುಗಿಗೆ ತಿಳಿಸಲಿ; ಕಾಲನ ನಿರ್ಧಾರಕ್ಕೆ ಮಣಿಯೋಣ. ಅಷ್ಟರಲ್ಲಿ ಶೃಂಗನ ಓದು ಮುಗಿದು ಕೆಲಸಕ್ಕೆ ಸೇರಿರುತ್ತಾನೆ. ಅವನಿಗೊಂದು ಮದುವೆ ಮಾಡಿ ತಾವಿಬ್ಬರೂ ಅವನ ಜತೆ ವಾಸಿಸೋಣ. ಆಗ ಅನಿವಾರ್ಯವೆನಿಸಿದರೆ, ವಿವೇಕ – ಉನ್ನತಿಯನ್ನು ಜೊತೆಗೂಡಿ ಬೇರೆ ನೆಲೆಸಲಿ’. ಇದು ಅಪ್ಪನ ನಿರ್ಧಾರ ಮಾತ್ರವಲ್ಲ, ಅಮ್ಮನ ಅನುಮೋದನೆಯೂ ಇತ್ತು. ಸಮಸ್ಯೆಗೆ ಇಷ್ಟೆಲ್ಲಾ ಆಯಾಮವಿರುವುದು ವಿವೇಕನಿಗೆ ಈಗಲೇ ತಿಳಿದದ್ದು. ಅಮ್ಮನ ಮನಸ್ಸಿನಲ್ಲಿ ಇನ್ನೂ ಕೆಲವು ಗೊಂದಲಗಳಿದ್ದವು. ‘ಮನೆಗೆ ಬಂದ ಸೊಸೆಗೆ ಚಿಕಿತ್ಸೆ ಫಲಕಾರಿಯಾಗದೆ ದೇಹವೆಲ್ಲ ತೊನ್ನಿನಿಂದ ಕೂಡಿದರೆ ಇನ್ನೊಬ್ಬ ಮಗನಿಗೆ ಹೆಣ್ಣು ಸಿಗುವುದು ಕಠಿಣ. ಅಲ್ಲದೆ ಉನ್ನತಿಗೆ ಹುಟ್ಟುವ ಮಕ್ಕಳಿಗೂ ಅಕಸ್ಮಾತ್ ಈ ಸಮಸ್ಯೆ ಮುಂದುವರೆದರೆ?ʼ ಬೇಗ ಮದುವೆಯಾಗೆಂದು ಒತ್ತಾಯಿಸುತ್ತಿದ್ದ ಅಮ್ಮನೇ ಈಗ ಇನ್ನೊಂದೆರಡು ವರ್ಷ ಕಾಯಲು ಹೇಳುವಂತಾದದ್ದು ವಿವೇಕನಿಗೆ ಬೇಸರ ತಂದಿತ್ತು. ತಾನು ನೆಟ್‌ನಲ್ಲಿ ಕಂಡುಕೊಂಡ ವಿಷಯವನ್ನೆಲ್ಲ ಅಮ್ಮನಿಗೆ ತಿಳಿಸಿ ಹೇಳಿದ. ಅಮ್ಮನ ಕೊನೆಯ ಮಾತೊಂದೆ ‘ಇದರ ಮೇಲೆ ನಿನ್ನಿಷ್ಟ. ನಿನ್ನ ಮನಸ್ಸಿಗೆ ಬಂದ ಹಾಗೆ ಮಾಡು’. ಆ ಮಾತಿಗಿಂತಲೂ, ಅದರ ಹಿಂದಿದ್ದ ಧ್ವನಿ, ವಿವೇಕನಿಗೆ ಅರಗಿಸಿಕೊಳ್ಳಲಾಗಲಿಲ್ಲ.
ಅಪ್ಪ ಅಮ್ಮನ ಸುಖಕ್ಕಾಗಿ ತಾನು ಮದುವೆಯೇ ಆಗದಿರಲು ನಿರ್ಧರಿಸಿದವನು, ಈಗ ಮದುವೆಯ ಮೂಲಕವೇ ಅವರ ನೆಮ್ಮದಿ ಹಾಳು ಮಾಡಲು ಹೊರಟೆನೆ? ಅವರೇಕೆ ಅರ್ಥಮಾಡಿಕೊಳ್ಳುತ್ತಿಲ್ಲ? ತಾನು ಉನ್ನತಿಯನ್ನು ಮದುವೆಯಾದರೂ ಬೇರೆಯೇ ವಾಸಮಾಡಲು ಸೂಚ್ಯವಾಗಿ ಹೇಳುತ್ತಿರುವುದು ಅವನಿಗೆ ಇನ್ನಷ್ಟು ಸಂಕಟ ಉಂಟು ಮಾಡಿತ್ತು
ಎರಡು ದಿನ ಕಳೆಯುವುದು ಅಸಹನೀಯವಾಯಿತು. ಕಪಾಟಿನಲ್ಲಿದ್ದ ಪುಸ್ತಕಗಳನ್ನು ತಿರುವಿದ. ಗಮನವಿರಿಸಿ ಓದಲಾಗಲಿಲ್ಲ. ಉನ್ನತಿಗೆ ಏನು ಹೇಳುವುದು? ಕಣ್ಣು ಮುಚ್ಚಿದರೆ ‘ಆ ಇಬ್ಬರು’ ಹುಡುಗರೇ ಮೂಡುತ್ತಿದ್ದರು. ಕೊನೆಗೊಂದು ನಿರ್ಧಾರಕ್ಕೆ ಬಂದ. ‘ಮನೆಯಲ್ಲಿ ಒಪ್ಪಿದ್ದರೂ, ಕೆಲವು ಕಾರಣಗಳಿಂದಾಗಿ ಇನ್ನೂ ಒಂದೆರಡು ವರ್ಷ ಕಾಯುವುದು ಅನಿವಾರ್ಯ. ತಾನೇನೂ ಮದುವೆಯಾಗಲ್ಲ ಎಂದು ಹೇಳುತ್ತಿಲ್ಲ. ನಮ್ಮ ಸ್ನೇಹ ಹೀಗೆ ಇರಲಿ’ ಆದರೆ ಇದನ್ನು ಅವಳೆದುರು ಹೇಳುವುದು ಹೇಗೆ? ಎಂದು ತೊಳಲಾಡಿದ.
*****
ಉನ್ನತಿ ಹತ್ತಿರ ಬಂದಳು. ವಿವೇಕನಿಗೆ ಉದ್ವೇಗ. ಅವಳ ನಗು ತುಸು ಬಾಡಿದ ಹಾಗಿತ್ತು. “ಇಲ್ಲೆಲ್ಲಾದರೂ ಕೂತು ಮಾತಾಡೋಣ ಬಾ” ಎಂದಳು. “ಸರಿ” ಎಂದ. ಹಾಗೆಯೇ ಫ್ಲೈಓವರ್ ಹತ್ತಿ ಇಳಿದು ಹತ್ತಿರವಿದ್ದ ಪಾರ್ಕ್ ಬಳಿಗೆ ಹೋದರು. ಜನಸಂದಣಿ ಕಡಿಮೆ ಇದ್ದ ಜಾಗದಲ್ಲಿ ಕಲ್ಲು ಬೆಂಚಿನ ಮೇಲೆ ಕೂತರು. ಪ್ರಥಮ ಬಾರಿ ಇಬ್ಬರೂ ಅಷ್ಟು ಸನಿಹ ಕುಳಿತಿದ್ದರು. ಅವಳ ನಿರ್ಧಾರ ತಿಳಿಸುವ ಮೊದಲೇ ತನ್ನ ನಿರ್ಧಾರ ಹೇಳಿಬಿಡಲೆ? ವಿವೇಕನಿಗೆ ಮಾತುಗಳು ಗಂಟಲಿನಲ್ಲಿಯೇ ಸಿಕ್ಕಿಕೊಂಡವು. ಅಷ್ಟಕ್ಕೂ ಈಗ ನಿರ್ಧಾರ ತಿಳಿಸಬೇಕಾದವಳು ಅವಳೇ.
ಕೆಲವು ಕ್ಷಣಗಳ ಅಸಹನೀಯ ಮೌನದ ನಂತರ, ಉನ್ನತಿ ಇವನ ಕಡೆ ತಿರುಗದೆ ಹೇಳತೊಡಗಿದಳು. ಅವಳ ಮನೆಯಲ್ಲಿ ವಿಷಯ ಪ್ರಸ್ತಾಪಿಸಿದಾಗ, ತಂದೆ ತಾಯಿ ಇಬ್ಬರೂ ಒಪ್ಪಿದರು; “ಆದರೆ, ಮೊದಲ ತಂಗಿ ಬಿ.ಎಸ್ಸಿ ಕೊನೆಯ ವರ್ಷದಲ್ಲಿ ಇರುವುದರಿಂದ, ಅವಳಿಗೆ ಎಂ.ಎಸ್ಸಿ ಮಾಡುವ ಆಕಾಂಕ್ಷೆ ಇರುವುದರಿಂದ, ಅಲ್ಲದೆ, ಹಾಗೆ ಮಾಡುವುದರಿಂದ ಕೆಲಸವೂ ಸುಲಭವಾಗಿ ಸಿಕ್ಕುವುದರಿಂದ, ಇನ್ನೊಂದೆರಡು ವರ್ಷ ಕಾಯಲು ಸಾಧ್ಯವಿಲ್ಲವೇ? ಎರಡನೆಯವಳು ಕೆಲಸಕ್ಕೆ ಸೇರಿದರೆ ಮೂರನೆಯವಳ ಓದಿಗೂ, ಮನೆಯ ಖರ್ಚಿಗೂ ಅನುಕೂಲವಾಗುತ್ತದೆ. ಆ ಎರಡು ವರ್ಷ ಸಾಧ್ಯವಾದಷ್ಟು ಉಳಿಸಿದರೆ ಅದು ಮದುವೆಯ ಖರ್ಚಿಗೆ ದಾರಿ ಅಲ್ಲವೇ?” ಕೆಲವು ಕ್ಷಣಗಳು ಮೌನ ಆವರಿಸಿತ್ತು. “ಸಾರಿ ವಿವೇಕ್, ಎರಡು ವರ್ಷ ನಿಮಗೆ ಕಾಯಲು ಹೇಳುವುದು ನನಗೆ ಇಚ್ಛೆ ಇಲ್ಲ. ಈ ಎರಡು ವರ್ಷಗಳಲ್ಲಿ ಈ ಕಾಯಿಲೆ ಇನ್ನಷ್ಟು ಹೆಚ್ಚಾಗಬಹುದು; ನನ್ನನ್ನು ನೋಡುವುದೇ ನಿಮಗೆ ಬೇಸರವಾಗಬಹುದು. ನಿಮ್ಮಂತಹ ಒಳ್ಳೆಯ ರೂಪದ, ಅದಕ್ಕೂ ಮಿಗಿಲಾಗಿ, ಒಳ್ಳೆಯ ಗುಣದ ಹುಡುಗ ನನಗೆ ದೊರಕಲಾರ. ಆ ಸತ್ಯ ನನಗೆ ಗೊತ್ತು. ನೀವು ಯಾವುದಾದರೂ ಚಂದದ ಹುಡುಗಿಯನ್ನು ನೋಡಿ ಮದುವೆಯಾಗಿ ಸುಖವಾಗಿರಿ. ಬೆಳಗಿನ ಐದು ನಿಮಿಷದ ಸನಿಹ ನನಗೆ ಸಾಕು. ಬಹುಶಃ ನನಗೆ ಲಭ್ಯವಿರುವುದು ಅಷ್ಟೆ.” ಅವಳ ಗಂಟಲುಬ್ಬಿ ಬಂತು.
ವಿವೇಕನಿಗೆ ಕೆನ್ನೆಗೆ ಬಾರಿಸಿದ ಹಾಗಾಯಿತು. ‘ಸದ್ಯ, ತನ್ನ ನಿರ್ಧಾರ ತಾನು ಮೊದಲಿಗೆ ಹೇಳದೆ ಒಳ್ಳೆಯದನ್ನೇ ಮಾಡಿದೆʼ ಎಂದುಕೊಂಡ. ಈಗ ತನ್ನ ನಿರ್ಧಾರ ಬದಲಾಗಿದೆ. “ನಾನು ಕಾಯುತ್ತೇನೆ. ಎರಡು ವರ್ಷವಲ್ಲ, ಎರಡು ಶತಮಾನ ಬೇಕಾದರೂ ಕಾಯುತ್ತೇನೆ. ನನ್ನ ದುಡಿಮೆಯ ಒಂದು ಪಾಲು ನಿನ್ನ ಚಿಕಿತ್ಸೆಗೆ ಮುಡಿಪಾಗಿಡುತ್ತೇನೆ. ಅದು ಫಲಕಾರಿಯಾಗದೆ ನಿನ್ನ ಇಡೀ ದೇಹ ಬಿಳಿ ಬಿಳಿ ಆದರೂ ನನಗೆ ಚಿಂತೆಯಿಲ್ಲ. ಈ ವಿವೇಕನಿಗೆ ಉನ್ನತಿ ದೊರಕಿದಾಗಲೇ ಆನಂದ.” ಎಂದ. ಅವಳ ಹತ್ತಿರ ಸರಿದು ಅವಳ ಕೈಯನ್ನು ತನ್ನ ಬೊಗಸೆಯಲ್ಲಿ ತೆಗೆದುಕೊಂಡು ನಯವಾಗಿ ಅದುಮಿದ. ಅವನು ಹೇಳಬೇಕಾದ ಮಾತುಗಳು ಆ ಸ್ಪರ್ಶದಲ್ಲಿದ್ದವು.
ವಸಂತಕುಮಾರ್ ಕಲ್ಯಾಣಿ ಹವ್ಯಾಸಿ ಬರಹಗಾರರು. ಕಥನ ಇವರ ಇಷ್ಟದ ಪ್ರಕಾರ. ಕನ್ನಡ ಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದವರು, ಗೋಕಾಕ್ ಚಳುವಳಿಯಲ್ಲಿ ಸಕ್ರಿಯರಾಗಿದ್ದರು, ಹಲವು ಕಿರುತೆರೆ, ಚಲನಚಿತ್ರಗಳಲ್ಲಿ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ಬರಹಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ‘ಬಾಲರಾಜನೂ ಕ್ರಿಕೆಟ್ಟಾಟವೂ’ ಕಥೆಗೆ ಮೇವುಂಡಿ ಮಲ್ಲಾರಿ ಕಥಾ ಪುರಸ್ಕಾರ ಪ್ರಶಸ್ತಿ ದೊರಕಿದೆ. ‘ಕಾಂಚನ ಮಿಣಮಿಣ’ (ಸಣ್ಣಕಥಾ ಸಂಕಲನ) ‘ಪರ್ಯಾಪ್ತ’ ಪ್ರಕಟಿತ ಕಥಾ ಸಂಕಲನಗಳು.
ಅದ್ಭತವಾಗಿದೆ…👏👌👍
Good Short story with a good subject. Also, drawing reminds GKSatya’s art!