ಮೀಟಿಂಗ್‌ಗಳಿಗೆ ಜನ ಸೇರಿಸಬೇಕು. ಇದು ಪಂಚಾಯಿತಿ ಚುನಾವಣೆಯಂತಲ್ಲ ಹಾಗಾಗಿ ಜನರು ಬುದ್ಧಿವಂತರಾಗಿದ್ದರು(?) ಹೆಚ್ಚು ಕೇಳುತ್ತಿದ್ದರು. ಆದರೂ ಒಂದೆರಡು ಕೈ ಬದಲಾಗಿ ಹಣ ಸಿಗುವಾಗ ಬಹಳ ಹೆಚ್ಚಿಗೇನೂ ಸಿಗುತ್ತಿರಲಿಲ್ಲ. ಈ ವಿಷಯದಲ್ಲಿ ಉತ್ತಮ್ ಈಗ ಸಾಕಷ್ಟು ಪಳಗಿದ್ದ. ಹೆಚ್ಚಿನ ಜನರನ್ನು ಸೇರಿಸುತ್ತಿದ್ದ. ಅದಕ್ಕಿಂತ ಹೆಚ್ಚು ತೋರಿಸುತ್ತಿದ್ದ. ಬೇರೆ ಮೂಲಗಳಿಂದ ಹಣ ಪೀಕುತ್ತಿದ್ದ. ಬೇರೆ ಮನೆಯಲ್ಲಿದ್ದರೂ ರಾಮ್, ಲಕ್ಷ್ಮಣ್ ಭಾವನ ಜೊತೆಗೆ ಕೈಜೋಡಿಸಿ ಚುನಾವಣೆಗೆ ದುಡಿಯುತ್ತಿದ್ದರು. ಇನ್ನೇನು ಚುನಾವಣೆ ಒಂದು ವಾರ ಇದೆ ಎಂದಾಗ ಅವರಿಬ್ಬರು ಭಾವನ ಕಣ್ತಪ್ಪಿಸಿ ತಿರುಗತೊಡಗಿದರು‌. ತಮಗೆ ವಹಿಸಿದ್ದ ಕೆಲಸವನ್ನು ಸರಿಯಾಗಿ ಮಾಡುತ್ತಿರಲಿಲ್ಲ.
ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ “ಚದುರಂಗ” ನಿಮ್ಮ ಓದಿಗೆ

ಉತ್ತಮ್ ಮೊಹಂತಿ ಮೂಲತಃ ಒರಿಸ್ಸಾದ ಬಾಲೇಶ್ವರದ ಹತ್ತಿರದ ಹಳ್ಳಿಯವನು. ಬಾಲ್ಯ ಯೌವ್ವನವೆಲ್ಲ ಅಲ್ಲಿಯೇ ಕಳೆದು, ತರುಣಿಯೊಬ್ಬಳನ್ನು ಪ್ರೀತಿಸಿ, ಮೊದಲು ನಿರೀಕ್ಷಿತ ಪ್ರತಿಕ್ರಿಯೆ ಸಿಕ್ಕಿ, ನಂತರ ಅದು ಏಕ ಮುಖ ಪ್ರೀತಿ ಎನ್ನುವ ನಾಟಕ ಶುರುವಾಗಿ, ಅವಳು ಬೇರೆ ಯಾರನ್ನೊ ಮದುವೆಯಾಗಿ ಹೊರಟಾಗ ಉತ್ತಮ್ ಹತಾಶಗೊಂಡಿದ್ದ. ಊರನ್ನೇ ಬಿಟ್ಟು ಎಲ್ಲಿಯಾದರೂ ಹೋಗಿಬಿಡಬೇಕೆನ್ನುವ ಮನಸ್ಥಿತಿಯಲ್ಲಿದ್ದಾಗ, ಬೆಂಗಳೂರಿನಲ್ಲಿ ಆಗಲೇ ಕೆಲಸ ಒಂದನ್ನು ಹುಡುಕಿಕೊಂಡು ಸ್ವಲ್ಪಮಟ್ಟಿಗೆ ಸೆಟ್ಲ್ ಆಗಿದ್ದ ಗೆಳೆಯ ಸುರೇಶ್ ಮೊಯಿತ್ರ ಇವನನ್ನು ಆಹ್ವಾನಿಸಿದ್ದ.

ಆಗಿನ್ನೂ ಬಾಲೇಶ್ವರದಲ್ಲಿ ಅಷ್ಟೊಂದು ಉದ್ಯೋಗಾವಕಾಶಗಳು ಇರಲಿಲ್ಲ. ಬಿರ್ಲಾ ಟೈಯರ್ಸ್ ಪ್ರಮುಖವಾಗಿ ಬೆಳೆದಿದ್ದರೂ ಅಲ್ಲಿಯೂ ಮುಖ್ಯ ಹುದ್ದೆಗಳಿಗೆ ಬೆಂಗಾಲಿಗಳೇ ತುಂಬಿಕೊಂಡಿದ್ದು ಸಣ್ಣಪುಟ್ಟ ಸಹಾಯಕರ ಹುದ್ದೆಗಳಿಗೆ ಮಾತ್ರ ಒಡಿಯಾಗಳಿದ್ದರು. ಮನೆಯಲ್ಲಿ ಅಣ್ಣ ಅತ್ತಿಗೆ ಅಮ್ಮ ಇದ್ದರು. ಅಣ್ಣ ಬಾಲೇಶ್ವರದಲ್ಲಿ ಪ್ಲಂಬಿಂಗ್ ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್ ಬಳಿ ಸಹಾಯಕನಾಗಿದ್ದುಕೊಂಡು ಸಾಕಷ್ಟು ಸಂಪಾದಿಸುತ್ತಿದ್ದು ತಾಯಿಯನ್ನೂ ಸಾಕಷ್ಟು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಕೆಲವು ದಿನ ಉತ್ತಮ್ ಕೂಡ ಅವನ ಒಟ್ಟಿಗೆ ಕೆಲಸ ಮಾಡಿ ಸ್ವಲ್ಪ ಮಟ್ಟಿಗೆ ಕೆಲಸವನ್ನು ಕಲಿತಿದ್ದ. ಆದರೂ ಪ್ರೇಮಭಂಗವಾದ ಮೇಲೆ ಏಕೋ ಒಂದು ರೀತಿಯ ಅಸಹನೆ ಹೆಚ್ಚಾಗಿ ಊರು ತೊರೆಯಲು ನಿರ್ಧರಿಸಿಬಿಟ್ಟ.

ಹೀಗೆ ಬೆಂಗಳೂರಿಗೆ ಬಂದವನು ಮೊದಲು ಗೆಳೆಯನೊಟ್ಟಿಗೆ ರಾಜಪಾಳ್ಯದ ರೂಮ್‌ನಲ್ಲಿ ಹೊಂದಿಕೊಂಡ. ಬೂದಿಗೆರೆ ಸಮೀಪದ ಕೆಲವು ಅಪಾರ್ಟ್ಮೆಂಟ್‌ಗಳ ಮೇಂಟೆನೆನ್ಸ್ ಕಾಂಟ್ರಾಕ್ಟ್ ಪಡೆದಿದ್ದ ಆವಲಹಳ್ಳಿಯ ಮಹೇಶ್ ಬಾಬುವಿನ ಬಳಿ ಕೆಲಸಕ್ಕೆ ಸೇರಿಕೊಂಡ ಗೆಳೆಯನ ವಶೀಲಿಯಿಂದ. ದಿನಕಳೆದ ಹಾಗೆ ಕೆಲಸಕ್ಕೂ ಈ ಊರಿಗೂ ಹೊಂದಿಕೊಂಡ‌. ಬಹುಮುಖ್ಯವಾಗಿ ಸ್ವಲ್ಪ ಸ್ವಲ್ಪ ಕನ್ನಡ ಮಾತಾಡಲು ಶುರು ಮಾಡಿಕೊಂಡ. ಒಂದು ವರ್ಷ ಕಳೆಯುವುದರ ಒಳಗೆ ಮಹೇಶ್ ಬಾಬುವಿನ ಹತ್ತಿರದ ಬಳಗದಲ್ಲಿ ಒಬ್ಬನಾಗಿ ಬಿಟ್ಟ. ಮತ್ತೊಂದು ವರ್ಷ ಕಳೆಯುವಷ್ಟರಲ್ಲಿ ಊರಿಗೆ ಹೋಗಿ ಮದುವೆಯಾಗಿ ಹೆಂಡತಿಯನ್ನು ಕರೆದುಕೊಂಡು ಬಂದು ಕೋನದಾಸನಪುರದ ಬಳಿ ಮನೆ ಒಂದನ್ನು ಬಾಡಿಗೆಗೆ ಪಡೆದು ಸಂಸಾರ ಹೂಡಿದ. ವಿಶೇಷವೆಂದರೆ ಶ್ರಮವಹಿಸಿ ಕೆಲಸ ಮಾಡಬೇಕೆಂದರೆ ಸಂಜೆ ಒಂದು ಕ್ವಾರ್ಟರ್ ಹಾಕಲೇಬೇಕು ಎಂಬ ಸಿದ್ಧಾಂತಕ್ಕೆ ಇವನು ಬಲಿಯಾಗಿರಲಿಲ್ಲ. ಅಲ್ಲದೆ ಇನ್ನಷ್ಟು ಬೆಳೆಯಬೇಕೆಂಬ ಛಲ ಮನದೊಳಗಿದ್ದುದರಿಂದ ಹಣ ಉಳಿಸತೊಡಗಿದ.

ಇನ್ನೊಂದು ವರ್ಷ ಕಳೆಯುವಾಗ ಪಂಚಾಯತಿ ಚುನಾವಣೆ ಹತ್ತಿರ ಬಂತು. ಈಗಾಗಲೇ ವೋಟರ್ ಐಡಿಯನ್ನು ಬೆಂಗಳೂರಿನ ವಿಳಾಸಕ್ಕೆ ಮಾಡಿಕೊಂಡಿದ್ದ. ಇದು ತನ್ನ ಬಾಳಿನಲ್ಲಿ ಮಹತ್ತರ ಬದಲಾವಣೆ ತರಬಹುದೆಂಬ ಯಾವ ಸೂಚನೆಯೂ ಉತ್ತಮ್ ಮೊಹಂತಿಗೆ ಇರಲೇ ಇಲ್ಲ. ಅವನ ಯಜಮಾನ ಮಹೇಶ್ ಬಾಬು ಚುನಾವಣೆಗೆ ನಿಲ್ಲಲು ನಿರ್ಧರಿಸಿದ. ಎರಡು ಪ್ರಮುಖ ಪಕ್ಷಗಳಲ್ಲಿ ಒಂದರಲ್ಲಿ ತನ್ನ ದಾಯಾದಿ ರಮೇಶ್ ಚಿನ್ನಿ ಗುರುತಿಸಿಕೊಂಡಿದ್ದರಿಂದ ಹಾಗೂ ಅವನಿಗೂ ತನಗೂ ಕೆಲವು ವಿಷಯಗಳಲ್ಲಿ -ಮುಖ್ಯವಾಗಿ ಒಂದು ಆಸ್ತಿಯನ್ನು ವಶಪಡಿಸಿಕೊಳ್ಳುವ ಹುನ್ನಾರದಲ್ಲಿ ರಮೇಶ್ ಕೈ ಮೇಲಾದಾಗ -ಮಹೇಶ್ ಬಾಬು ಇನ್ನೊಂದು ಪ್ರಮುಖ ಪಕ್ಷದಲ್ಲಿ ಗುರುತಿಸಿಕೊಂಡಿದ್ದ, ಹಾಗೂ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಹಾಲಿ ಪಂಚಾಯತಿ ಸದಸ್ಯ ರಮೇಶ್ ಚಿನ್ನಿಯನ್ನು ಸೋಲಿಸಲೇಬೇಕೆಂದು ಪಣತೊಟ್ಟಿದ್ದ. ಆದರೆ ಕೊನೆಯ ಕ್ಷಣದಲ್ಲಿ ತನಗಿಂತ ಜಾತಿಯಲ್ಲಿ, ಹಣದಲ್ಲಿ ಬಲಿಷ್ಠನಾದ ಬೇರೊಬ್ಬನಿಗೆ ಸೀಟು ಸಿಗುವ ಸುಳಿವು ಸಿಕ್ಕಿ, ಮಹೇಶ್ ಬಾಬು ಇನ್ನೊಂದು ಪಕ್ಷಕ್ಕೆ -ಅದು ಮೂರನೇ ಸ್ಥಾನದಲ್ಲಿತ್ತು ಹಾಗೂ ಈ ಭಾಗದಲ್ಲಿ ಆ ಪಕ್ಷದ ಪ್ರಮುಖ ಜಾತಿಯವರು ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ- ಸೇರ್ಪಡೆಗೊಂಡು ಚುನಾವಣೆಗೆ ನಿಂತು ಬಿಟ್ಟ. ಅಲ್ಲಿಯೂ ಸಿಗದಿದ್ದರೆ ಪಕ್ಷೇತರನಾಗಿ ನಿಲ್ಲಲು ನಿರ್ಧರಿಸಿದ್ದ. ಅಲ್ಲದೇ ಇದು ಮಹೇಶ್ ಬಾಬುವಿನ ಪ್ರತಿಷ್ಠೆಯ ಪ್ರಶ್ನೆಯಾಗಿ ಶತಾಯಗತಾಯ ಗೆಲ್ಲಲೇ ಬೇಕೆಂದು ನಿರ್ಧರಿಸಿ ವೆಚ್ಚದ ಬಗ್ಗೆ ಗಮನವಿಡಲಿಲ್ಲ.

ಮಹೇಶ್ ಬಾಬುವಿನ ಪರವಾಗಿ ಪ್ರಚಾರಕ್ಕೆ ಒಂದು ತರುಣ ಪಡೆ ಸಿದ್ಧವಾಯಿತು. ಅದರಲ್ಲಿ ಲೋಕಲ್ ಲೀಡರ್ ಹಾಗೂ ತನ್ನ ಸಂಬಂಧಿ ಒಬ್ಬನನ್ನು ಮುಖ್ಯಸ್ಥನಾಗಿ ಮಾಡಿದ್ದ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಸ್ಥಳೀಯರಿಗಿಂತ ಹೆಚ್ಚಾಗಿ ಹೊರರಾಜ್ಯದವರೇ ಅದರಲ್ಲೂ ಈಶಾನ್ಯ ಭಾರತದವರೆ ಇಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ತುಂಬಿ ಹೋಗಿದ್ದರು. ಅವರ ಮತಗಳು ನಿರ್ಣಾಯಕವೂ ಆಗಿಬಿಡುತ್ತಿತ್ತು. ಹಾಗಾಗಿ ಅವರ ಮತಗಳನ್ನು ಸೆಳೆಯಲು ಅವರಲ್ಲಿಯೇ ಒಬ್ಬ ನಾಯಕ ಬೇಕಿತ್ತು. ಆಯಾಚಿತವಾಗಿ ಉತ್ತಮ್ ಮೊಹಂತಿಗೆ ಆ ಸ್ಥಾನ ದೊರಕಿತು. ಉತ್ತಮ್ ಸರಾಗವಾಗಿ ಹಿಂದಿ ಮಾತಾಡುತ್ತಿದ್ದರಿಂದ ಅಸ್ಸಾಮಿ ಬಿಹಾರಿ ಜಾರ್ಖಂಡ್ ತರುಣರನ್ನು ಓಲೈಸತೊಡಗಿದ. ಅವರಲ್ಲಿ ಅನೇಕರು ಇವನ ಜೊತೆ ಕೆಲಸ ಮಾಡುತ್ತಿದ್ದವರು ಆಗಿದ್ದರು. ಅವರ ಮೂಲಕ ಅವರ ಗುಂಪಿನ ಸದಸ್ಯರನ್ನು ಬುಟ್ಟಿಗೆ ಹಾಕಿಕೊಂಡ‌. ಪ್ರಚಾರಕ್ಕೆ ಒಂದು ತಂಡ ಸಿದ್ಧವಾಯಿತು. ಒಬ್ಬರಿಗೆ ದಿನಕ್ಕೆ ಎಂಟುನೂರು, ಊಟ ಹಾಗೂ ರಾತ್ರಿಗೆ ಒಂದು ಕ್ವಾರ್ಟರ್. ಒಂದು ವಾರ ಕೆಲವರು ಕೆಲಸಕ್ಕೆ ಕೈ ಕೊಟ್ಟು ಇವನ ಜೊತೆ ಸುತ್ತಿದರು. ರಾತ್ರಿ ಮಹೇಶ್ ಬಾಬುವಿನ ಮನೆಯ ಬಳಿ ಮೀಟಿಂಗ್ ಇರುತ್ತಿತ್ತು ಉತ್ತಮ್ ಮೊಹಂತಿ ಕುಡಿಯುತ್ತಿರಲಿಲ್ಲವಾದ್ದರಿಂದ ಅದರ ಬಾಬ್ತು ಸೇರಿ ಒಟ್ಟು ಹಣ ಅವನ ಜೇಬಿಗೆ ತರುಕುತ್ತಿದ್ದ ಮಹೇಶ್ ಬಾಬುವಿನ ಶಿಷ್ಯನೊಬ್ಬ. ಅಲ್ಲದೆ ತಾನೇ ಹದಿನೈದು ಜನರನ್ನು ಕರೆತಂದು ಇಪ್ಪತ್ತು ಎಂದರೂ ನಡೆಯುತ್ತಿತ್ತು ಎಂದು ತನ್ನ ಮನಸ್ಸಿಗೆ ಬಂದರೂ ‘ಬೇಡ ಮೊದಲು ಮಹೇಶ್ ಬಾಬುವಿನ ನಂಬಿಕೆ ಉಳಿಸಿಕೊಳ್ಳಬೇಕು, ಅವನು ಗೆಲ್ಲಬೇಕು’ ಎಂದು ಆಸೆಗೆ ಕಡಿವಾಣ ಹಾಕಿಕೊಂಡಿದ್ದ. ಚುನಾವಣೆಯ ಹಿಂದಿನ ದಿನ ಉಡುಗೊರೆಗಳನ್ನು ಹಂಚುವ ಪ್ರಮುಖ ಕೆಲಸದಲ್ಲಿ ಉತ್ತಮನೂ ಒಬ್ಬನಾಗಿದ್ದ. ತಮ್ಮವರಾರು ವಿರೋಧಿಗಳ ಬೆಂಬಲಿಗರಾರು ಎಂಬುದು ತಿಳಿದು ಹೋಗಿತ್ತು. ಆದರೂ ಕೆಲವರು ಎಲ್ಲರ ಬಳಿಯು ಗಿಫ್ಟ್‌ಗಳನ್ನು ಪಡೆದುಕೊಳ್ಳುವ ಕಿಲಾಡಿ ಮತದಾರರು ಇದ್ದರು. ಈ ಪ್ರಕ್ರಿಯೆಯಲ್ಲೂ ಉತ್ತಮ್ ಲಾಭ ಮಾಡಿಕೊಳ್ಳಲಿಲ್ಲ. ಆದರೆ ಅದರಿಂದ ಆದ ಲಾಭವೆಂದರೆ ಮಹೇಶ್ ಬಾಬುವಿನ ಹತ್ತಿರದ ಬಳಗದಲ್ಲಿ ಇನ್ನಷ್ಟು ಹತ್ತಿರವಾದದ್ದು. ಚುನಾವಣೆ ದಿನ ಬಂದಿತು. ಎಲ್ಲರಿಗೂ ಉದ್ವೇಗ‌. ತುಸುಮಟ್ಟಿನ ಹೊಯ್ ಕೈ ಆಯಿತು. ಮಾರನೇ ದಿನ ಬಂದ ಚುನಾವಣೆಯ ಫಲಿತಾಂಶದಲ್ಲಿ ಕೆಲವೇ ಕೆಲವು ಮತಗಳ ಅಂತರದಿಂದ ಮಹೇಶ್ ಬಾಬು ಗೆದ್ದಿದ್ದ.

ಹೀಗೆ ಮಹೇಶ್ ಬಾಬು ಪಂಚಾಯಿತಿ ಮೆಂಬರ್ ಆದಮೇಲೆ ಸಹಜವಾಗಿಯೇ ಪಂಚಾಯಿತಿಯಲ್ಲಿ ಪರಿಚಯದ ಯಾರದಾದರೂ ವೈಯಕ್ತಿಕ ಕೆಲಸಗಳೇನಾದರೂ ಇದ್ದಲ್ಲಿ ಮಹೇಶ್ ಬಾಬು ಮಾಡಿಸಿಕೊಡುತ್ತಿದ್ದ. ಪರಿಚಯದ, ಸಂಬಂಧದ ಮಟ್ಟದ ಮೇಲೆ ಅವನಿಗೆ ಕೊಡಬೇಕಾದ ಹಣದ ಮೊತ್ತ ವ್ಯತ್ಯಾಸವಾಗುತ್ತಿತ್ತು. ಕೆಲವೊಮ್ಮೆ ಕೆಲವರು ಉತ್ತಮ್‌ನ ಮೂಲಕ ಹೇಳಿಸಿ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಕೆಲವು ಬಾರಿ ಉತ್ತಮನಿಗೆ ಎರಡು ಕಡೆ ಕಮಿಷನ್ ಸಿಗುತ್ತಿತ್ತು‌. ಇದು ಎಲ್ಲಾ ಕಡೆ ಸಹಜವಾದುದರಿಂದ, ಸಮಯದ ಉಳಿತಾಯ ಆಗುತ್ತಿದ್ದುದರಿಂದ ಗೊಣಗುವವರ ಸಂಖ್ಯೆ ಕಡಿಮೆ ಇದ್ದು, ಇದು ಸಹಜ ಪ್ರಕ್ರಿಯೆಯಾಗಿತ್ತು. ಹೀಗೆ ದಿನದಿಂದ ದಿನಕ್ಕೆ ಉತ್ತಮ್ ಹಣ ಗಳಿಕೆಯ ಮಾರ್ಗವನ್ನು ಕಂಡುಕೊಂಡ‌. ಕೆಲವು ದಿನಗಳಲ್ಲಿ ಸುತ್ತಮುತ್ತಲ ಅಪಾರ್ಟ್ಮೆಂಟ್‌ಗಳಲ್ಲಿ ಕಾಂಟ್ರಾಕ್ಟ್ ಕೆಲಸಕ್ಕೆ, ಸಣ್ಣ ಫ್ಯಾಕ್ಟರಿಗಳಿಗೆ ಕೆಲಸಗಾರರನ್ನು ಒದಗಿಸುವ ಗುತ್ತಿಗೆದಾರನಾಗಬೇಕೆಂಬ ಹಂಬಲ ಉಂಟಾಯಿತು ಉತ್ತಮನಿಗೆ. ಅದರಲ್ಲಿ ಲಾಭವೇನೋ ಹೆಚ್ಚಿರುತ್ತಿತ್ತು, ಆದರೆ ಮೊದಲು ಕೆಲಸಗಾರರಿಗೆ ಪೇಮೆಂಟ್ ಮಾಡಬೇಕು ನಂತರ ಬಿಲ್ ಕೊಟ್ಟು ಅದು ಪಾಸ್ ಆಗಿ, ತನಗೆ ಕಂಪೆನಿಗಳಿಂದ ಹಣ ಕೈಸೇರಬೇಕಾದರೆ ಒಂದೆರಡು ತಿಂಗಳು ಕಾಯಬೇಕಾಗುತ್ತದೆ‌. ಅದನ್ನು ತಡೆಯುವಷ್ಟು ಹಣ ಬಲ ಇರಬೇಕಿತ್ತು. ಆಗ ಮಹೇಶ್ ಬಾಬುವಿನ ಕೈಕಾಲು ಹಿಡಿದು ಒಂದಷ್ಟು ಹಣ ಕಡ ಪಡೆದುಕೊಂಡು ಕೆಲಸ ಶುರು ಮಾಡಿದ್ದ. ನಿರೀಕ್ಷೆಗಿಂತ ಈ ವ್ಯವಹಾರ ಯಶಸ್ವಿಯಾಗುತ್ತಾ ಬಂತು. ಅದೇ ಸಮಯಕ್ಕೆ ಉತ್ತಮ್ ಪತ್ನಿ ತನ್ನಿಬ್ಬರು ಸೋದರರು ಊರಿನಲ್ಲಿ ಹೆಚ್ಚು ಸಂಪಾದನೆ ಮಾಡಲಾಗುತ್ತಿಲ್ಲ ಅವರಿಗೂ ಒಂದು ದಾರಿ ತೋರಿಸು ಎಂದು ಗಂಡನನ್ನು ಒತ್ತಾಯಿಸಿ, ಅದರಂತೆಯೇ ಉತ್ತಮ್ ಅವರಿಬ್ಬರನ್ನು -ಅವರು ಅವಳಿ ಜವಳಿ, ರಾಮ್ ಬೆಹರ, ಲಕ್ಷ್ಮಣ್ ಬೆಹರ – ಕರೆಸಿಕೊಂಡ. ಅವರು ಸಹ ಉತ್ತಮ ಕೆಲಸಗಾರರಾಗಿದ್ದುದರಿಂದ, ಆದಷ್ಟು ಬೇಗ ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡರು‌. ಅಲ್ಲದೆ ಕೆಲವು ತಿಂಗಳು ಅಕ್ಕ ಭಾವನ ಮನೆಯಲ್ಲಿದ್ದವರು, ಅಲ್ಲಿ ಎರಡು ಸಣ್ಣ ಮಕ್ಕಳಿಗೂ ದೊಡ್ಡವರಿಗೂ ಸ್ಥಳಾವಕಾಶವು, ಏಕಾಂತಕ್ಕೂ ತೊಂದರೆಯಾಗಿ, ಇಬ್ಬರು ಸೇರಿ ಅವಲಹಳ್ಳಿಯಲ್ಲಿ ಒಂದು ಬಾಡಿಗೆ ಮನೆ ನೋಡಿಕೊಂಡರು. ಹೀಗೆ ಒಂದು ವರ್ಷ ಕಳೆಯಿತು.

ಪಂಚಾಯಿತಿ ಚುನಾವಣೆಯಾಗಿ ಸುಮಾರು ಒಂದುವರೆ ವರ್ಷಕ್ಕೆ ವಿಧಾನಸಭಾ ಚುನಾವಣೆ ಘೋಷಣೆ ಆಯಿತು. ಮಹೇಶ್ ಬಾಬು ಸೇರಿಕೊಂಡಿದ್ದ ಪಕ್ಷದ ಅಭ್ಯರ್ಥಿ ರಾಮರಾಜು ಸಾಕಷ್ಟು ಸ್ಥಿತಿವಂತನಾಗಿದ್ದು ಹಿಂದೆ ಒಂದೆರಡು ಬಾರಿ ಸೋತಿದ್ದರಿಂದ, ಅನುಕಂಪದ ಅಲೆಯು ಇರಬಹುದು ಎಂದು ಇದು ನನ್ನ ಕೊನೆಯ ಚುನಾವಣೆ ಎಂಬ ಘೋಷಣೆಯೊಂದಿಗೆ ಕಣಕ್ಕಿಳಿದಿದ್ದ. ಸುತ್ತಮುತ್ತಲ ಕೆಲವು ಪಂಚಾಯತಿಗಳ ವ್ಯಾಪ್ತಿಯ ಹೊಣೆಗಾರಿಕೆಯನ್ನು ಮಹೇಶ್ ಬಾಬುವಿನ ಹೆಗಲಿಗೇರಿಸಿ ತಕ್ಕ ಹಣದ ವ್ಯವಸ್ಥೆ ಮಾಡಿದ್ದ. ಮಹೇಶ್ ಬಾಬುವಿಗೂ ಸಾಕಷ್ಟು ಅನುಭವ ಇದ್ದುದರಿಂದ ಅಲ್ಲದೆ ಉತ್ತಮ್ ಮೊಹಂತಿ ಅಂತವರು ಅನೇಕರು ಬೆನ್ನಿಗಿದ್ದುದರಿಂದ ಸಾಕಷ್ಟು ಹುರುಪಿನಿಂದಲೇ ಕೆಲಸ ಶುರು ಮಾಡಿಕೊಂಡ.

ಮೀಟಿಂಗ್‌ಗಳಿಗೆ ಜನ ಸೇರಿಸಬೇಕು. ಇದು ಪಂಚಾಯಿತಿ ಚುನಾವಣೆಯಂತಲ್ಲ ಹಾಗಾಗಿ ಜನರು ಬುದ್ಧಿವಂತರಾಗಿದ್ದರು(?) ಹೆಚ್ಚು ಕೇಳುತ್ತಿದ್ದರು. ಆದರೂ ಒಂದೆರಡು ಕೈ ಬದಲಾಗಿ ಹಣ ಸಿಗುವಾಗ ಬಹಳ ಹೆಚ್ಚಿಗೇನೂ ಸಿಗುತ್ತಿರಲಿಲ್ಲ. ಈ ವಿಷಯದಲ್ಲಿ ಉತ್ತಮ್ ಈಗ ಸಾಕಷ್ಟು ಪಳಗಿದ್ದ. ಹೆಚ್ಚಿನ ಜನರನ್ನು ಸೇರಿಸುತ್ತಿದ್ದ. ಅದಕ್ಕಿಂತ ಹೆಚ್ಚು ತೋರಿಸುತ್ತಿದ್ದ. ಬೇರೆ ಮೂಲಗಳಿಂದ ಹಣ ಪೀಕುತ್ತಿದ್ದ. ಬೇರೆ ಮನೆಯಲ್ಲಿದ್ದರೂ ರಾಮ್, ಲಕ್ಷ್ಮಣ್ ಭಾವನ ಜೊತೆಗೆ ಕೈಜೋಡಿಸಿ ಚುನಾವಣೆಗೆ ದುಡಿಯುತ್ತಿದ್ದರು. ಇನ್ನೇನು ಚುನಾವಣೆ ಒಂದು ವಾರ ಇದೆ ಎಂದಾಗ ಅವರಿಬ್ಬರು ಭಾವನ ಕಣ್ತಪ್ಪಿಸಿ ತಿರುಗತೊಡಗಿದರು‌. ತಮಗೆ ವಹಿಸಿದ್ದ ಕೆಲಸವನ್ನು ಸರಿಯಾಗಿ ಮಾಡುತ್ತಿರಲಿಲ್ಲ.

ಚುನಾವಣೆಗೆ ಇನ್ನು ನಾಲ್ಕು ದಿನ ಉಳಿದಿತ್ತು. ವೋಟರ್ ಐಡಿ ಇದ್ದವರಿಗೆ ಗಿಫ್ಟ್ ವೋಚರ್ ತಲುಪಿಸುವುದು (ಅರ್ಹರಿಗೆ?) ನಂತರ ಚುನಾವಣೆ ಹಿಂದಿನ ದಿನ ಓಚರ್ ತೋರಿಸಿದವರಿಗೆ ಸೀರೆ/ ಫ್ಯಾನ್ಸಿ ಐಟಂ ಜೊತೆಗೆ ನಗದು ವಿತರಿಸಬೇಕಿತ್ತು. ಇದು ಬಹಳ ಮುಖ್ಯವಾದ ಕೆಲಸ. ಕೆಲವೊಮ್ಮೆ ತಡ ರಾತ್ರಿ ಅಥವಾ ಮುಂಜಾನೆ ಸಹ ಈ ಕೆಲಸ ಮಾಡಬೇಕು. ಆದರೆ ಅದೇ ಸಮಯದಲ್ಲಿ ರಾಮ್ ಲಕ್ಷ್ಮಣ್ ಕೈಕೊಟ್ಟಿದ್ದು ಉತ್ತಮ್‌ನಿಗೆ ನುಂಗಲಾರದ ತುತ್ತಾಯಿತು.

ಪಂಚಾಯಿತಿ ಚುನಾವಣೆಯಲ್ಲಿ ಸೋತಾಗಿನಿಂದ ರಮೇಶ್ ಚಿನ್ನಿ ಕೈಕಟ್ಟಿ ಕೂತಿರಲಿಲ್ಲ. ಮಹೇಶ್ ಬಾಬುವಿನ ಎಲ್ಲಾ ಚಲನ ವಲನ ಗಮನಿಸುತ್ತಿದ್ದ . ವಿಧಾನಸಭಾ ಚುನಾವಣೆಯಲ್ಲಿ ತನ್ನ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಮಹೇಶ್ ಬಾಬುವಿನ ಮುಖ ಭಂಗ ಮಾಡಬೇಕೆಂದು ನಿರ್ಧರಿಸಿಯಾಗಿತ್ತು. ಅದರ ಒಂದು ಭಾಗವಾಗಿ ರಾಮ್ ಲಕ್ಷ್ಮಣರಿಗೆ ಗಾಳ ಹಾಕಿದ್ದ. ಹಳೆಯ ಸಿಮ್ ಬಿಸಾಡಿ ಹೊಸ ಸಿಮ್ ಕೊಡಿಸಿದ್ದ‌ ತನ್ನ ಮನೆಯ ಬಳಿಯೇ ಒಂದು ಬಾಡಿಗೆ ಮನೆ ಕೊಡಿಸಿದ್ದ. ಉತ್ತಮ್ ಮೊಹಂತಿಯ ಆತ್ಮೀಯರ ಬಳಗದ ಲಿಸ್ಟ್ ತಯಾರಿಸಿ, ಅವರಲ್ಲಿ ಯಾರನ್ನು ಹೇಗೆ ತನ್ನ ಕಡೆ ತಿರುಗಿಸಿಕೊಳ್ಳಬೇಕೆಂಬ ಸಮಾಲೋಚನೆ ನಡೆಸಿದ್ದ. ಉತ್ತಮ್ ನಂತೆ ಮಹತ್ವಾಕಾಂಕ್ಷಿಗಳಾಗಿದ್ದ ರಾಮ್ ಲಕ್ಷ್ಮಣ್ ಬೆಹೆರ ಈಗ ರಮೇಶ್ ಚಿನ್ನಿಯ ಬಳಗದಲ್ಲಿ ಗುರುತಿಸಿಕೊಂಡು ತಮ್ಮ ಬೆಳವಣಿಗೆ ಬಗ್ಗೆ ಕನಸು ಕಾಣುತ್ತಿದ್ದರೆ, ಅತ್ತ ಉತ್ತಮ್ ತನ್ನ ಖಾತರಿ ಮತಗಳು ಚದುರದಂತೆ ಹರಸಾಹಸ ಪಡುತ್ತಿದ್ದ!