ಈ ಸೌತ್ ಬ್ಯಾಂಕ್ ಎನ್ನುವುದು ಒಂದು ಮನರಂಜನಾ ತಾಣವಾಗಿ ರೂಪುಗೊಂಡಿದೆ. ಮಕ್ಕಳು, ದೊಡ್ಡವರು, ಕುಟುಂಬಗಳು, ಪ್ರೇಮಿಗಳು, ವಿಹಾರಿಗಳಿಗೆ ಎಲ್ಲರಿಗೂ ಇಲ್ಲಿ ಅವರವರಿಗೆ ಬೇಕಾದಂತೆ ಹುಲ್ಲುಗಾವಲು, ನಡಿಗೆ ಹಾದಿ, ತರಕಾರಿ ಕೈತೋಟ, ಹೂತೋಟ, ಮಕ್ಕಳನ್ನು ಮನರಂಜಿಸುವ ನೀರಿನ ಕಾರಂಜಿ, ಈಜುಕೊಳ ಮುಂತಾದವು, ದೊಡ್ಡವರಿಗೆ ಇರುವ ಸರೋವರ ಎಲ್ಲವೂ ಇದೆ. ನದಿ ಆಚೆ ಪಕ್ಕದಲ್ಲಿ ತಲೆಯೆತ್ತಿರುವ ಬೃಹತ್ ಆಕಾಶಕಾಯಿ ಕಟ್ಟಡಗಳು, ವೇಗವಾಹಿ ರಸ್ತೆಗಳನ್ನು ಕಾಣಬಹುದು. ಪ್ರತಿ ವಾರಾಂತ್ಯದಲ್ಲಿ ಸೌತ್ ಬ್ಯಾಂಕ್‌ಗೆ ಹೋಗಿ ದಿನಪೂರ್ತಿ ಕಳೆಯುವ ಅದೆಷ್ಟೋ ನೂರಾರು ಕುಟುಂಬಗಳಿಗೆ ಇದು ಸ್ವರ್ಗತಾಣ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”ದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುವ ವಿವಿಧ ಹಬ್ಬಗಳ ಕುರಿತ ಬರಹ ನಿಮ್ಮ ಓದಿಗೆ
ಸೆಪ್ಟೆಂಬರ್ ಬಂತೆಂದರೆ ಚಳಿಗಾಲದ ಮೂರು ತಿಂಗಳು ಹೊದ್ದಿದ್ದ ಬೆಚ್ಚಗಿನ ಕಂಬಳಿಯನ್ನು ಪಕ್ಕಕ್ಕೆ ಸರಿಸಿ ಆಸ್ಟ್ರೇಲಿಯಾ ಮೈಮುರಿಯುತ್ತ ಏಳುತ್ತದೆ. ಆಸ್ಟ್ರೇಲಿಯನ್ನರು ವಸಂತನ ಆಗಮನವನ್ನು ಸವಿಯುತ್ತ ಹಿತವಾದ ಬಿಸಿಲಿಗೆ ಮೈ ಚಾಚಲು ತವಕಿಸುತ್ತಾರೆ. ಹಬ್ಬಗಳು ಸಾಲುಗಟ್ಟಿ ನಿಲ್ಲುತ್ತವೆ. ಇವು ನಮ್ಮ ಭಾರತೀಯ ಧಾರ್ಮಿಕ ಹಬ್ಬಗಳಂತಿರುವುದಿಲ್ಲ. ಪ್ರತಿ ರಾಜ್ಯದಲ್ಲೂ ಅಲ್ಲಿನ ರಾಜಧಾನಿಯಲ್ಲಿ, ವಿವಿಧ ಪಟ್ಟಣಗಳಲ್ಲಿ ತರಾವರಿ ಹಬ್ಬಗಳು ನಡೆಯುತ್ತವೆ. ಸಾಹಿತ್ಯ ಹಬ್ಬ, ಸಂಗೀತ-ನಾಟಕ-ನೃತ್ಯಗಳ ಹಬ್ಬಗಳು, drag queen ಹಬ್ಬ, ಡಿಸೈನ್ ಹಬ್ಬ, ವೈನ್ ಅಂಡ್ ಚೀಸ್, ವೈನ್ ಅಂಡ್ ಫುಡ್, ಆಂಗ್ಲ ಸಂಸ್ಕೃತಿಯ ಚಿಹ್ನೆಯಾದ ಹೈ ಟೀ ಹಬ್ಬಗಳು, ಗಾಳಿಪಟ ಹಬ್ಬ, ಹೂ ಪ್ರದರ್ಶನಗಳು, ಪಕ್ಷಿವೀಕ್ಷಣೆ ವಾರ, ರಾಯಲ್ ಶೋ ಗಳು, ತೋಟಗಾರಿಕೆ ಹಬ್ಬ ಹೀಗೆ ಅದೇನೇನೋ ಹಬ್ಬಗಳು ದೇಶದ ಪೂರ್ತಿ ನಡೆಯುತ್ತವೆ.
ಇವುಗಳಲ್ಲಿ ಕೆಲವು ಪ್ರಾದೇಶಿಕವಾಗಿ ಹೆಸರುವಾಸಿಯಾಗಿದ್ದರೆ ಇನ್ನೂ ಕೆಲವು ದೇಶದ ಮಟ್ಟದಲ್ಲಿ ಪ್ರಸಿದ್ಧಿಯಾಗಿವೆ. ಹಾಗೆ ಕೇಳಿಬರುವುದು ಸಿಡ್ನಿ ಫ್ರಿಂಜ್ ಫೆಸ್ಟಿವಲ್, ಬ್ರೋಕನ್ ಹೀಲ್ ಫೆಸ್ಟಿವಲ್, ಬ್ರಿಸ್ಬೇನ್ ಫೆಸ್ಟಿವಲ್, Toowoomba ಕಾರ್ನಿವಾಲ್ ಆಫ್ ಫ್ಲವರ್ಸ್, Swell sculpture ಫೆಸ್ಟಿವಲ್, ಗ್ರೇಟ್ ಈಸ್ಟರ್ನ್ ವೈನ್ ಫೆಸ್ಟಿವಲ್, Tasmanian ಫ್ಯಾಷನ್ ಫೆಸ್ಟಿವಲ್, ಚೆರಿಹಿಲ್ ಬ್ಲಾಸಮ್ ಫೆಸ್ಟಿವಲ್, ಟೈಡಲ್ ಸೀಫುಡ್ ಫೆಸ್ಟಿವಲ್, ಟೆಸ್ಸೆಲಾರ್ ಟುಲಿಪ್ ಫೆಸ್ಟಿವಲ್, ಆರ್ಚಿಬಾಲ್ಡ್ ಪ್ರೈಜ್, ಪೆರ್ತ್ ರಾಯಲ್ ಶೋ, ಮಾರ್ಗರೆಟ್ ರಿವರ್ ಓಪನ್ ಸ್ಟುಡಿಯೋಸ್, ಮೇರಿ ಪಾಪ್ಪಿನ್ಸ್, ರಾಯಲ್ ಅಡಿಲೈಡ್ ಶೋ, Oktoberfest, ರಾಕ್ ನ್ ರೋಲ್ ಫೆಸ್ಟ್, ಕಾಕಡೂ ಬರ್ಡ್ ವೀಕ್, ಡೆಸರ್ಟ್ ಮಾಬ್, ಡಾರ್ವಿನ್ ಸ್ಟ್ರೀಟ್ ಆರ್ಟ್ ಫೆಸ್ಟಿವಲ್, ಫ್ಲೋರಿಯಾಡ್, ಅಂತಾರಾಷ್ಟ್ರೀಯ ಚಲನಚಿತ್ರ ಪ್ರದರ್ಶನಗಳು.
ಮೇಲೆ ಹೇಳಿದ ಅನೇಕಾನೇಕ ಫೆಸ್ಟಿವಲ್‌ಗಳಲ್ಲಿ ಕೆಲವನ್ನು ನಾನು ನೆನಪಿಸಿಕೊಂಡು ಅರೆ, ಹೌದಲ್ಲಾ, ಅವನ್ನು ನಾನೂ ಕೂಡ ನೋಡಿ ಭಾಗವಹಿಸಿದ್ದೀನಿ ಎಂದು ಖುಷಿಯಾಯ್ತು. ಕ್ಯಾನ್ಬೆರ್ರಾ ನಗರದ Floriade ಮತ್ತು ನಮ್ಮ ರಾಣಿರಾಜ್ಯದಲ್ಲಿರುವ Toowoomba ಪಟ್ಟಣದ ಹೂ ಪ್ರದರ್ಶನಗಳು, ಗೋಲ್ಡ್ ಕೋಸ್ಟ್‌ನ ಸಮುದ್ರತೀರದಲ್ಲಿ ನಡೆಯುವ Swell sculpture ಫೆಸ್ಟಿವಲ್, ಮೆಲ್ಬೋರ್ನ್‌ನಲ್ಲಿ ನಡೆಯುವ Tulip ಹೂ ಪ್ರದರ್ಶನ, ಬ್ರಿಸ್ಬೇನ್ ಫೆಸ್ಟಿವಲ್‌ಗಳನ್ನು ನೋಡಿ ಆನಂದಪಟ್ಟಿರುವ ನೆನಪುಗಳು ಮಧುರ.
ಈಗ ನಮ್ಮ ಬ್ರಿಸ್ಬೇನ್ ನಗರದಲ್ಲಿ Brisbane Festival ನಡೆಯುತ್ತಿದೆ. ವಿವಿಧ ಪ್ರಕಾರ, ಶೈಲಿ, ಸಂಸ್ಕೃತಿ, ಲಿಂಗಗಳನ್ನು ಒಳಗೊಂಡ ಬಗೆಬಗೆಯ ಸಂಗೀತ, ನೃತ್ಯ, ನಾಟಕ, ಪ್ರಹಸನ, ಚಲನಚಿತ್ರ ಪ್ರದರ್ಶನ, ಸಾಹಿತ್ಯ ಗೋಷ್ಠಿಗಳು ಎಂತೆಲ್ಲಾ ನಡೆಯುತ್ತಿವೆ. ಈ ನಗರ-ಕೇಂದ್ರಿತ ಹಬ್ಬವು Riverfire ಎನ್ನುವ ಭಾರಿ fireworks ಪ್ರದರ್ಶನದೊಂದಿಗೆ ಆರಂಭವಾಯ್ತು. ಆಸ್ಟ್ರೇಲಿಯಾದಲ್ಲಿ ಢಮ್ ಢಮ್ ಪಟಾಕಿ ಹಾರಿಸುವಂತಿಲ್ಲ. ವರ್ಷಕ್ಕೆರಡು ಬಾರಿ ನಗರ ಮಧ್ಯದ ಸೌತ್ ಬ್ಯಾಂಕ್ ಪ್ರದೇಶದ ಬ್ರಿಸ್ಬೇನ್ ನದಿ ತಲೆಮೇಲೆ fireworks (ಬಣ್ಣಬಣ್ಣದ ರಾಕೆಟ್, ಬಾಣಬಿರುಸು ಇತ್ಯಾದಿಗಳು) ಪ್ರದರ್ಶನ ನಡೆಯುತ್ತದೆ. ಒಂದು Riverfire, ಮತ್ತೊಂದು ಹೊಸವರ್ಷ ಆಗಮನದ ಹಿಂದಿನ ರಾತ್ರಿ.
ಕೋವಿಡ್-೧೯ ಕಾಲದಿಂದ ಸ್ಥಗಿತವಾಗಿದ್ದ ಇಲ್ಲವೇ ಕಳಾಹೀನವಾಗಿದ್ದ ಹಬ್ಬಗಳಿಗೆ ಈ ವರ್ಷ ಪುನಃಶ್ಚೇತನ ಬಂದಿದೆ. ಎಲ್ಲವೂ ಮುಂಚಿನಂತೆ ಅದ್ಧೂರಿಯಿಂದ ಜರುಗುತ್ತಿವೆ. Riverfire ಪ್ರದರ್ಶನಕ್ಕೆ ನಾವೂ ಹೋಗಿ ನೋಡಿ ಆನಂದಿಸಿದೆವು. ನದಿ ಪಕ್ಕದ ಸೌತ್ ಬ್ಯಾಂಕ್ ಪ್ರದೇಶದಲ್ಲಿ ಸಾವಿರಾರು ಜನ ಕಿಕ್ಕಿರಿದಿದ್ದರು. ಸೂಜಿಗೂ ಜಾಗವಿರಲಿಲ್ಲ. ಈ ಸೌತ್ ಬ್ಯಾಂಕ್ ಎನ್ನುವುದು ಒಂದು ಮನರಂಜನಾ ತಾಣವಾಗಿ ರೂಪುಗೊಂಡಿದೆ. ಮಕ್ಕಳು, ದೊಡ್ಡವರು, ಕುಟುಂಬಗಳು, ಪ್ರೇಮಿಗಳು, ವಿಹಾರಿಗಳಿಗೆ ಎಲ್ಲರಿಗೂ ಇಲ್ಲಿ ಅವರವರಿಗೆ ಬೇಕಾದಂತೆ ಹುಲ್ಲುಗಾವಲು, ನಡಿಗೆ ಹಾದಿ, ತರಕಾರಿ ಕೈತೋಟ, ಹೂತೋಟ, ಮಕ್ಕಳನ್ನು ಮನರಂಜಿಸುವ ನೀರಿನ ಕಾರಂಜಿ, ಈಜುಕೊಳ ಮುಂತಾದವು, ದೊಡ್ಡವರಿಗೆ ಇರುವ ಸರೋವರ ಎಲ್ಲವೂ ಇದೆ. ನದಿ ಆಚೆ ಪಕ್ಕದಲ್ಲಿ ತಲೆಯೆತ್ತಿರುವ ಬೃಹತ್ ಆಕಾಶಕಾಯಿ ಕಟ್ಟಡಗಳು, ವೇಗವಾಹಿ ರಸ್ತೆಗಳನ್ನು ಕಾಣಬಹುದು. ಪ್ರತಿ ವಾರಾಂತ್ಯದಲ್ಲಿ ಸೌತ್ ಬ್ಯಾಂಕ್‌ಗೆ ಹೋಗಿ ದಿನಪೂರ್ತಿ ಕಳೆಯುವ ಅದೆಷ್ಟೋ ನೂರಾರು ಕುಟುಂಬಗಳಿಗೆ ಇದು ಸ್ವರ್ಗತಾಣ.
ಸೌತ್ ಬ್ಯಾಂಕ್ ತಾಣದಿಂದಲೇ fireworks ಪ್ರದರ್ಶನವನ್ನು ಏರ್ಪಡಿಸುವುದು. ರೇಡಿಯೋ ಮತ್ತು ಟಿವಿ ತಂಡಗಳು ಅಲ್ಲಿರುವ ವೇದಿಕೆಯ ಮೇಲೆ ಜರುಗುವ ಕಾರ್ಯಕ್ರಮಗಳನ್ನು ಪ್ರಸರಿಸುತ್ತವೆ. ಸೆಪ್ಟೆಂಬರ್ ೨ನೇ ತಾರೀಕು Riverfire ಪ್ರದರ್ಶನಕ್ಕೂ ಮೊದಲು ಸಂಜೆ ಆಕಾಶದಲ್ಲಿ ಗಡಚಿಕ್ಕುವ ಶಬ್ದದೊಂದಿಗೆ ಫೈಟರ್ ಜೆಟ್‌ಗಳು, ಮಿಲಿಟರಿ ಹೆಲಿಕ್ಯಾಪ್ಟರ್ ತಮ್ಮ ಚಮತ್ಕಾರವನ್ನು ತೋರಿಸಿದವು. ಕತ್ತಲಾದ ನಂತರ ಸಂಗೀತದೊಂದಿಗೆ fireworks ಶುರುವಾಯ್ತು. ಈ ಬಾರಿಯಂತೂ ಇಪ್ಪತ್ತು ನಿಮಿಷಗಳಿಗೂ ಹೆಚ್ಚು ಕಾಲ ಆಕಾಶದಲ್ಲಿ ಬಣ್ಣಗಳ ಮಾಯಾಲೋಕ ಏರ್ಪಟ್ಟಿತ್ತು. ಬಣ್ಣಗಳ ಬೆಳಕು ಮತ್ತು ಪಟಾಕಿಮದ್ದು ಚಿಮ್ಮುವಿಕೆ ಸಂಯೋಜನೆಯಿಂದ ಕ್ಷಣಕ್ಷಣಕ್ಕೂ ಆಕಾಶದಲ್ಲಿ ರಂಗಿನೋಕುಳಿ ಚೆಲ್ಲಾಡುತ್ತಿತ್ತು. ಅಗೋಚರ ಗಂಧರ್ವರು ಆಕಾಶದಲ್ಲಿ ’ಹೋಲಿ ಹೈ’ ಎಂದು ಹೇಳುತ್ತಿದ್ದಂತೆ, ಮತ್ತೇರಿದ ಮದನನು ತನ್ನ ಪ್ರೇಯಸಿ ರತಿಯೊಂದಿಗೆ ನೃತ್ಯವಾಡಿದಂತೆ ಭಾಸವಾಗಿತ್ತು. ಈ ರಂಗಿನಾಟವನ್ನು ಕೆಳಗಿನ ನದಿನೀರು ತನ್ನೊಡಲಿನಲ್ಲಿ ಪ್ರತಿಫಲಿಸಿತ್ತು.
ಈ fireworks ಬಣ್ಣದೋಕುಳಿಯ ನಂತರ ಮತ್ತೊಂದು ಆಶ್ಚರ್ಯ ಕಾದಿತ್ತು. ಇದೇ ಮೊದಲ ಬಾರಿ ವಿಶೇಷವಾಗಿ ಏರ್ಪಡಿಸಿದ್ದು ‘Nieergoo-Spirit of the Whale’ ಕಥಾ ದೃಶ್ಯ-ಕಾವ್ಯ. ನೆಲದ ಮೇಲಲ್ಲ ಇದು ಏರ್ಪಟ್ಟಿದ್ದು. Nieergoo ತಿಮಿಂಗಿಲ ಈಜಾಡಿದ್ದು ಆಕಾಶದಲ್ಲಿ! ಏಕೆಂದರೆ, ನಾನೂರು ಡ್ರೋನ್‌ಗಳು ಬಹುಬಣ್ಣಗಳ ಹೊನಲು ಹರಿಸಿ, ಮೂರು-ಆಯಾಮಗಳ ಈ ಕಥಾ ದೃಶ್ಯ-ಕಾವ್ಯವನ್ನು ಕಣ್ಣಿಗೆ ಬಣ್ಣಿಸಿ ಕಟ್ಟಿಕೊಟ್ಟಿದ್ದವು. ದೃಶ್ಯ-ಕಾವ್ಯವು ಹೇಳಿದ್ದು ಅಬೊರಿಜಿನಲ್ ಯುಗೆರ ಮತ್ತು ಟೂರಬುಲ್ ಜನರ Dreamtime ಕಥಾನಕವನ್ನು. ಇದರ ಕೇಂದ್ರಪಾತ್ರ Nieergoo ಹೆಸರಿನ ತಿಮಿಂಗಿಲ ಮತ್ತು ಮೊರೆಟೋನ್ ಬೇ ದ್ವೀಪವು ಜನ್ಮತಾಳಿದ ಕಥೆ. ನೋಡುಗರು ತನ್ಮಯತೆಯಿಂದ ವೀಕ್ಷಿಸಿದ ಈ ಡ್ರೋನ್-ದೃಶ್ಯ-ಕಾವ್ಯ ಪ್ರದರ್ಶವು ಅತ್ಯಂತ ಆಕರ್ಷಕವಾಗಿತ್ತು. ಬೃಹತ್ ತಿಮಿಂಗಿಲವು ನಿಧಾನವಾಗಿ ಈಜಾಡುವುದನ್ನು ಆಕಾಶದಲ್ಲಿ ನೋಡುತ್ತಾ, ಅದರ ಕಥೆಯನ್ನು ಕೇಳುತ್ತಿದ್ದಾಗ ಅದು ಅಕ್ಷರಶಃ ಲೋಕಜ್ಞಾನವಿಲ್ಲದ ಕ್ಷಣವಾಗಿತ್ತು. ಈ ಪ್ರದರ್ಶನದ ಕಲ್ಪನಾಕಾರರನ್ನು, ನಿರ್ದೇಶಕರ ಪ್ರಯತ್ನವನ್ನು ಮೆಚ್ಚಿ ತಲೆತೂಗಿದೆವು.
ಅಂದಹಾಗೆ, ಈ ಫೆಸ್ಟಿವಲ್ ಸೀಸನ್ ಸಂಬಂಧವಿಲ್ಲದಿದ್ದರೂ, ಈ ಸೆಪ್ಟೆಂಬರ್ ತಿಂಗಳ ಮೊದಲ ವಾರ ಸಿಡ್ನಿ ನಗರದ Bangarra ಡಾನ್ಸ್ ಥೀಯೇಟರ್ ಕಂಪನಿ ನಮ್ಮ ಬ್ರಿಸ್ಬೇನ್ ನಗರದಲ್ಲಿ ಪ್ರದರ್ಶಿಸಿದ Yuldea ನೃತ್ಯ-ಕಥಾನಕವನ್ನು ನೋಡಿದೆ. ಈಗಾಗಲೇ Bangarra ಕಂಪನಿ ಬಗ್ಗೆ ಅಲ್ಪಸ್ವಲ್ಪ ಬರೆದಿದ್ದೀನಿ. ಈ Yuldea ಕಥಾನಕದ ಬಗ್ಗೆ ಮುಂದೆ ಎಂದಾದರೂ ಬರೆಯುತ್ತೀನಿ.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.
ಸೊಗಸಾದ ಚಿತ್ರಣ. ಕಣ್ಣ ಮುಂದೆ ನಡೆದ ಹಾಗಿದೆ….
ಗೋಪಾಲಕೃಷ್ಣ