‘ಗಂಡ- ಹೆಂಡತಿಯ ನಡುವಿನ ಸಂಬಂಧವೆಂದರೆ ಬರೀ ಮಂಚವನ್ನು ಹಂಚಿಕೊಳ್ಳುವುದಲ್ಲ, ದೇಹವನ್ನು ಹಂಚಿಕೊಳ್ಳುವುದಲ್ಲ; ಮನಸ್ಸನ್ನು ಹಂಚಿಕೊಳ್ಳುವುದು, ಕನಸನ್ನು ಹಂಚಿಕೊಳ್ಳುವುದು, ಬದುಕನ್ನು ಹಂಚಿಕೊಳ್ಳುವುದು, ಬದುಕಿನ ಜವಾಬ್ದಾರಿಗಳನ್ನು ಹಂಚಿಕೊಳ್ಳುವುದು’- ಪ್ರಚೇತನನ ಪಾಲಿಗೆ ಅಪರಿಚಿತವಾಗಿದ್ದ ಈ ಚಿಂತನೆ ಆತನ ಚಿತ್ತಭಿತ್ತಿಯಲ್ಲಿ ಮತ್ತೆ ಮತ್ತೆ ಅನುರಣಿಸತೊಡಗಿತು. ಪ್ರಣತಿಯನ್ನು ಬಿಟ್ಟುಬರುವ ವಾರದಲ್ಲಿ ತಾನು ಅನಾರೋಗ್ಯಕ್ಕೀಡಾದಾಗ ಕಡಿದುಹೋಗುವ ಸಂಬಂಧ ತಮ್ಮದೆಂದು ಮನದಟ್ಟಾದ ಬಳಿಕವೂ ಆಕೆ ತನ್ನನ್ನು ಉಪಚರಿಸಿದ ರೀತಿ, ವಹಿಸಿದ ಅತೀವ ಕಾಳಜಿ ಪ್ರಚೇತನನಿಗೆ ಈಗ ನೆನಪಾಯಿತು.
ವಿಶ್ವನಾಥ ಎನ್.‌ ನೇರಳಕಟ್ಟೆ ಬರೆದ ಕತೆ “ಸಹಜೀವನ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

“ನಾನು ಹೋಗುತ್ತಿದ್ದೇನೆ” ಪ್ರಣತಿ ನಿರುದ್ವಿಗ್ನವಾಗಿ ಹೇಳಿದ ಮಾತು ಕಿವಿಭಿತ್ತಿಗೆ ಬಲವಾಗಿ ಬಡಿದರೂ ಕೇಳದವನಂತೆ ಕುಳಿತಿದ್ದ ಪ್ರಚೇತನ. ತನ್ನ ಮಾತಿಗೆ ಸಿಗದ ಪ್ರತಿಕ್ರಿಯೆಯಿಂದಾಗಿ ಪ್ರಣತಿ ನಿರಾಸೆಗೊಳಗಾದದ್ದು, ತುಸು ಕೋಪಗೊಂಡದ್ದು ಶೋಕೇಸಿನ ಎದುರಿನ ಕನ್ನಡಿಯಲ್ಲಿ ಪ್ರಚೇತನನಿಗೆ ಸ್ಪಷ್ಟವಾಗಿ ಕಂಡಿತು. ಮನಸ್ಸಿನಲ್ಲಿಯೇ ಖುಷಿಗೊಂಡ. ಅರೆನಿಮಿಷದಲ್ಲಿಯೇ ಅವಳು ಹೊರಟುಹೋಗಿದ್ದಳು. ತಕ್ಷಣವೇ ಇವನೂ ಹೊರಡಲು ಸಿದ್ಧನಾದ. ಇದ್ದದ್ದೆಲ್ಲವನ್ನೂ ಬ್ಯಾಗಿಗೆ ತುಂಬಿಕೊಂಡು, ಮನೆಯ ಬೀಗ ಹಾಕಿ ಹೊರಟೇಹೋದ.

ವಾರದ ಮೊದಲು ಅಂದುಕೊಂಡಂತೆಯೇ ಪ್ರಚೇತನ ಹಾಗೂ ಪ್ರಣತಿ ಬೇರೆಬೇರೆಯಾಗಿದ್ದರು…

*****

ಪ್ರಚೇತನನಿಗೆ ೨೮ ವರ್ಷ. ಪ್ರಣತಿಗೆ ೨೬ ವರ್ಷ. ಪ್ರಣತಿ ಎಂ.ಬಿ.ಎ. ಮುಗಿಸಿದ್ದಳು. ಪ್ರಚೇತನನಿಗೆ ಅಂತಹ ಓದಿನ ಹಿನ್ನೆಲೆ ಇರಲಿಲ್ಲ. ಹುಟ್ಟು ಶ್ರೀಮಂತನಾಗಿದ್ದ ಅವನಿಗೆ ಸಿನಿಮಾ- ಕಿರುತೆರೆಯ ಬಗೆಗೆ ಅತೀವ ಆಕರ್ಷಣೆ ಇತ್ತು. ತನ್ನ ಶ್ರೀಮಂತಿಕೆ ಬಳಸದೇ ಬಣ್ಣದ ಜಗತ್ತಿನ ಎಬಿಸಿಡಿ ಕಲಿತು ಮುಂದೆ ಬರಬೇಕೆಂಬ ಹಠವಿತ್ತು. ಕಷ್ಟಪಟ್ಟು ಡಿಗ್ರಿ ಮುಗಿಸಿದವನು ಬೆಂಗಳೂರಿಗೆ ಬಂದು, ರಿಯಾಲಿಟಿ ಶೋಗಳ ಸಹಾಯಕ ನಿರ್ದೇಶಕ ಎನಿಸಿಕೊಂಡಿದ್ದ. ವಿದ್ಯಾರ್ಥಿನಿಯಾಗಿದ್ದಾಗಲೇ ನೃತ್ಯದ ಅಭಿರುಚಿ ರೂಢಿಸಿಕೊಂಡಿದ್ದ ಪ್ರಣತಿ ತನ್ನ ಓದು ಮುಗಿದ ತಕ್ಷಣವೇ ಡ್ಯಾನ್ಸ್ ರಿಯಾಲಿಟಿ ಶೋ ಒಂದರ ಅಡಿಷನ್‌ನಲ್ಲಿ ಆಯ್ಕೆಯಾಗಿ ಬೆಂಗಳೂರಿಗೆ ಬಂದಿದ್ದಳು. ಪ್ರಚೇತನನ ಪರಿಚಯ ಆಕೆಗಾದದ್ದು ಇಲ್ಲಿಯೇ. ಅವಳು ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದರೆ, ಪ್ರಚೇತನ ಅದರ ಸಹಾಯಕ ನಿರ್ದೇಶಕನಾಗಿದ್ದ. ಮೊದಲ ನೃತ್ಯ ಪ್ರದರ್ಶನದ ಸಂದರ್ಭದಲ್ಲಿ ವೇದಿಕೆ ಏರುವುದಕ್ಕೂ ಮೊದಲು ಪ್ರಣತಿ ಭಲೇ ಹೆದರಿಕೊಂಡಿದ್ದಳು. ತನ್ನ ಮೂರು ವರ್ಷಗಳ ಪರಿಶ್ರಮ ಫಲ ಕೊಡುತ್ತದೋ ಇಲ್ಲವೋ ಎನ್ನುವಂತಹ ಭಯವದು. ಜೊತೆಗೇ ಇದ್ದ ಅವಳ ತಾಯಿ ಧೈರ್ಯ ತುಂಬಿದ್ದಳು. ತೀರ್ಪುಗಾರರು ಹೊಗಳಿಕೆಯ ಮಾತುಗಳನ್ನಾಡಿ, ಆಕೆಯನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಿದರೂ ಕೂಡಾ ಪ್ರಣತಿಗೆ ಸಂತಸವಾಗಿರಲಿಲ್ಲ. ತನ್ನ ನರ್ತನ ತಾನು ಅಂದುಕೊಂಡಂತೆ ಬಂದಿಲ್ಲ ಎಂಬ ಅತೃಪ್ತಿ ಅವಳಲ್ಲಿತ್ತು.

ವೇದಿಕೆ ಮೇಲೆ ನಿಂತು, ನಿರ್ಣಾಯಕರ ಎಲ್ಲಾ ಮಾತುಗಳಿಗೂ ಮನದುಂಬಿ ನಕ್ಕವಳು ವೇದಿಕೆಯಿಂದ ಕೆಳಗಿಳಿದು ಬಂದ ತಕ್ಷಣವೇ ಕಣ್ಣೀರಾಗಿದ್ದಳು. ತನಗಾದ ಬೇಸರವನ್ನು ಅಮ್ಮನ ಜೊತೆಗೆ ಹಂಚಿಕೊಳ್ಳುತ್ತಿದ್ದ ಅವಳನ್ನು ಸಮಾಧಾನಪಡಿಸಲು ಮುಂದಾದದ್ದು ಪ್ರಚೇತನ. ಅವಳ ಬೆನ್ನ ಮೇಲೆ ಲಘುವಾಗಿ ಬಡಿದು, “ಇದು ಆರಂಭ ಮಾತ್ರ. ನಿಮ್ಮ ಪೂರ್ತಿ ಪ್ರತಿಭೆಯನ್ನು ತೋರಿಸಲು ಮುಂದೆ ಅವಕಾಶ ಇದೆ. ನೀವು ಮುಂದಿನ ವಾರದಲ್ಲಿ ಅದ್ಭುತವಾಗಿ ಪರ್ಫಾರ್ಮ್ ಮಾಡ್ತೀರಿ ಅನ್ನೋ ಗ್ಯಾರಂಟಿ ನನ್ಗಿದೆ” ಎಂದಿದ್ದ. ತನ್ನನ್ನು ಸಮಾಧಾನಪಡಿಸುವುದಕ್ಕೆ ಹಾಗೆ ಹೇಳುತ್ತಿದ್ದಾನೆ ಎಂದುಕೊಂಡ ಪ್ರಣತಿ ತನ್ನ ಅಳು ನಿಲ್ಲಿಸಿ ಸುಮ್ಮನಾಗಿದ್ದಳು. ಇನ್ನೊಂದೆರಡು ವಾರಗಳಲ್ಲಿ ತಾನು ಎಲಿಮಿನೇಟ್ ಆಗುತ್ತೇನೆ ಎನ್ನುವ ಆತಂಕ ಅವಳಲ್ಲಿತ್ತು. ಆದರೆ ಎರಡನೇ ವಾರದಲ್ಲಿ ಅವಳ ಪ್ರದರ್ಶನ ನಿಜಕ್ಕೂ ಅದ್ಭುತವಾಗಿತ್ತು. ತೀರ್ಪುಗಾರರೂ ಕೂಡಾ ಬಹಳವಾಗಿ ಮೆಚ್ಚಿಕೊಂಡರು. ಹೊಗಳಿಕೆಯನ್ನು ತಲೆತುಂಬ ಹೊತ್ತುಕೊಂಡವಳು ಶೂಟಿಂಗ್ ಮುಗಿದ ಮೇಲೆ ಹುಡುಕಿಕೊಂಡು ಬಂದು ಥ್ಯಾಂಕ್ಸ್ ಹೇಳಿದ್ದು ಪ್ರಚೇತನನನಿಗೆ. ಅವನಾಡಿದ ಸಮಾಧಾನದ ಮಾತುಗಳಿಂದಲೇ ತನಗೆ ಅಂತಹ ಹುಮ್ಮಸ್ಸು ಬಂದದ್ದು ಎಂಬ ಭಾವನೆ ಅವಳದ್ದಾಗಿತ್ತು. ಹೀಗೆ ಪ್ರಚೇತನನ ಪರಿಚಯ ಮಾಡಿಕೊಂಡ ಪ್ರಣತಿ ಅವನು ತನ್ನ ಊರಿಗೆ ಸಮೀಪದ ಗ್ರಾಮದವನು ಎಂದು ತಿಳಿದಾಗ ಅವನ ಜೊತೆಗೆ ಮತ್ತಷ್ಟು ಆತ್ಮೀಯತೆ ಬೆಳೆಸಿಕೊಂಡಳು. ಅವರಿಬ್ಬರ ನಡುವಿನ ಬಹುವಚನಮಿಶ್ರಿತ ಮಾತುಕತೆ ಏಕವಚನದ ಮಟ್ಟಿಗೆ ಬಂದಿತ್ತು. ಹಲವು ಸಂದರ್ಭಗಳಲ್ಲಿ ಪ್ರಣತಿಯ ಅಮ್ಮನಿಗೆ ಬರಲಿಕ್ಕಾಗುತ್ತಿರಲಿಲ್ಲ. ಆಗೆಲ್ಲಾ ಪ್ರಚೇತನ ಅವಳ ಜೊತೆಗಿದ್ದು, ಅವಳಿಗೆ ಸ್ಫೂರ್ತಿ ತುಂಬುತ್ತಿದ್ದ. ಹೆಣ್ಣುಮಗು ಹೆತ್ತ ಕೋಪಕ್ಕೆ ಅಮ್ಮನನ್ನು ಬಿಟ್ಟುಹೋದ ಅಪ್ಪನ ಬಗ್ಗೆ ಹೇಳಿಕೊಳ್ಳುತ್ತಾ ಪ್ರಣತಿ ಅಳುತ್ತಿರಬೇಕಾದರೆ ಪ್ರಚೇತನ ಹೆಗಲಾಗಿದ್ದ. ಪ್ರಚೇತನನ ಕೆಲಸದ ಚುರುಕುತನವನ್ನು ಗಮನಿಸಿ ಇಷ್ಟಪಟ್ಟಿದ್ದ ಪ್ರಣತಿಗೆ ಅವನು ತನ್ನ ದುಃಖಕ್ಕೆ ಸ್ಪಂದಿಸುವ ಬಗೆ ಮತ್ತೂ ಮೆಚ್ಚುಗೆಯಾಗಿತ್ತು.

ಪ್ರಣತಿ ರಿಯಾಲಿಟಿ ಶೋನಲ್ಲಿ ಗೆಲ್ಲದಿದ್ದರೂ ಒಳ್ಳೆಯ ನೃತ್ಯಗಾರ್ತಿ ಎಂದು ಗುರುತಿಸಿಕೊಂಡಿದ್ದಳು. ಆ ರಿಯಾಲಿಟಿ ಶೋಗೆ ವಿಶೇಷ ಅತಿಥಿಯಾಗಿ ಬಂದಿದ್ದ ಖ್ಯಾತ ನಿರ್ದೇಶಕರೊಬ್ಬರು ಅವಳ ನೃತ್ಯಶೈಲಿಯನ್ನು ಅತೀವವಾಗಿ ಮೆಚ್ಚಿಕೊಂಡು ತಮ್ಮ ಮುಂದಿನ ಎರಡು ಚಿತ್ರಗಳಲ್ಲಿ ಪ್ರಣತಿಗೆ ನೃತ್ಯ ನಿರ್ದೇಶಕಿಯಾಗಿ ಅವಕಾಶವನ್ನು ನೀಡಿದರು. ತಮ್ಮ ಪರಿಚಯದ ನಿರ್ಮಾಪಕರೊಬ್ಬರ ಮೂಲಕ ಇನ್ನೊಂದೆರಡು ಚಿತ್ರಗಳಲ್ಲಿಯೂ ಅವಕಾಶವನ್ನು ಒದಗಿಸಿಕೊಟ್ಟರು. ಇದೇ ಸಂದರ್ಭದಲ್ಲಿ ಅವಳ ವಿದ್ಯಾರ್ಹತೆಗೆ ತಕ್ಕಂತಹ ಉದ್ಯೋಗವೂ ಬೆಂಗಳೂರಿನಲ್ಲಿಯೇ ಒದಗಿಬಂತು. ಭರಪೂರ ಸಿನಿಮಾ ಅವಕಾಶಗಳ ಜೊತೆಗೆ ಉದ್ಯೋಗವನ್ನೂ ಗಿಟ್ಟಿಸಿಕೊಂಡ ಪ್ರಣತಿಗೆ ಬೆಂಗಳೂರಿನಲ್ಲಿಯೇ ಉಳಿದುಕೊಳ್ಳುವುದು ಅನಿವಾರ್ಯವಾಗಿತ್ತು. ಇಂತಹ ಸಂದರ್ಭದಲ್ಲಿ ಅವಳಿಗೆ ಒಳ್ಳೆಯ ಬಾಡಿಗೆ ಮನೆಯೊಂದನ್ನು ಒದಗಿಸಿಕೊಟ್ಟವನು ಪ್ರಚೇತನ. ತನ್ನ ಪರಿಚಯದ ವ್ಯಕ್ತಿಯೊಬ್ಬರ ಮೂಲಕ ಕಡಿಮೆ ಬಾಡಿಗೆಯ ಮನೆಯೊಂದನ್ನು ಗೊತ್ತುಮಾಡಿಕೊಟ್ಟಿದ್ದ. ಮಗನ ವಿದ್ಯಾಭ್ಯಾಸದ ನಿಮಿತ್ತ ಊರಿನಲ್ಲಿಯೇ ಇದ್ದ ಪ್ರಣತಿಯ ಅಮ್ಮ ಮಗಳನ್ನು ನೋಡಲು ಬರುತ್ತಿದ್ದುದೇ ಅಪರೂಪ. ಒಂಟಿತನ ಪ್ರಣತಿಯನ್ನು ಕಾಡಿದಾಗೆಲ್ಲಾ ಪ್ರಚೇತನ ಅವಳಿಗೆ ಜೊತೆ ನೀಡಲಾರಂಭಿಸಿದ. ಉದ್ಯೋಗ- ನೃತ್ಯ ಇವುಗಳ ಮೂಲಕ ಖುಷಿ ಕಂಡುಕೊಳ್ಳುತ್ತಿದ್ದ ಪ್ರಣತಿಗೆ ಈಗೀಗ ಪ್ರಚೇತನನ ಸಂಗಾತ ಎಲ್ಲಕ್ಕಿಂತಲೂ ಹೆಚ್ಚಿನ ಖುಷಿ ಕೊಡುತ್ತಿತ್ತು. ವಾರಕ್ಕೊಮ್ಮೆಯಾದರೂ ಅವಳನ್ನು ನೋಡಲು ಬರುತ್ತಿದ್ದ. ಅವಳನ್ನು ಮನಸಾರೆ ನಗಿಸುತ್ತಿದ್ದ. ಅವನು ಹುಟ್ಟಿಸಿದ ನಗು ಮುಂದಿನ ಏಳು ದಿನ ಉತ್ಸಾಹದಿಂದ ಕೆಲಸ ಮಾಡುವಷ್ಟು ಶಕ್ತಿಯನ್ನು ಅವಳಲ್ಲಿ ತುಂಬುತ್ತಿತ್ತು.

ಪ್ರಚೇತನನ ಸಾಮಿಪ್ಯಕ್ಕೆ ಅತೀವವಾಗಿ ಹಂಬಲಿಸುತ್ತಿದ್ದ ಆಕೆ ಅದೊಂದು ದಿನ ಇದಕ್ಕಿದ್ದಂತೆಯೇ ಪ್ರಚೇತನನ ಹೊಸ ಮನೆಯನ್ನು ಸೇರಿಕೊಂಡಳು. ಲಿವಿಂಗ್ ಟುಗೆದರ್ ಅಂದರೆ ಸಹಜೀವನ ಎಂಬ ಆಧುನಿಕ ಸಂಬಂಧದ ಹೆಸರಿನಲ್ಲಿ ಮದುವೆಯಾಗದೆಯೇ ಜೊತೆಗೆ ಬದುಕುವ ನಿರ್ಧಾರ ಪ್ರಚೇತನ ಹಾಗೂ ಪ್ರಣತಿಯರದ್ದಾಗಿತ್ತು. ಹಿಂದೆ ಒಂದೆರಡು ಬಾರಿ ಪ್ರಚೇತನ ಲಿವಿಂಗ್ ಟುಗೆದರ್ ಸಂಬಂಧದ ಬಗ್ಗೆ ಪ್ರಣತಿಯ ಮುಂದೆ ಪ್ರಸ್ತಾಪಿಸಿ, ಅವಳ ಮನಃಸ್ಥಿತಿಯನ್ನು ಅರಿತುಕೊಳ್ಳುವ ಪ್ರಯತ್ನ ಮಾಡಿದ್ದ. ಹೀಗೆ ರಿಯಾಲಿಟಿ ಶೋ ಮೂಲಕ ಅವರಿಬ್ಬರ ನಡುವೆ ಹುಟ್ಟಿಕೊಂಡ ಗೆಳೆತನ ರಿಯಾಲಿಟಿ ಶೋ ಮುಗಿದ ಮೇಲೆ ಲಿವಿಂಗ್ ಟುಗೆದರ್ ಎಂಬ ಬೇರೊಂದು ಆಯಾಮವನ್ನು ಪಡೆದುಕೊಂಡಿತು. ಗಂಡು- ಹೆಣ್ಣಿನ ನಡುವಿನ ಸಂಬಂಧದ ವಿಚಾರದಲ್ಲಿ ಅವರಿಬ್ಬರ ಮನಃಸ್ಥಿತಿಯೂ ಒಂದೇ ಆಗಿತ್ತು. ತನ್ನ ಅಪ್ಪನಿಂದ ಅಮ್ಮ ಅನುಭವಿಸಿದ ತೊಂದರೆಯನ್ನು ಕೇಳಿ ತಿಳಿದುಕೊಂಡಿದ್ದ ಪ್ರಣತಿಗೆ ಮದುವೆಯ ವಿಚಾರದಲ್ಲಿ ಆಸಕ್ತಿ ಇರಲಿಲ್ಲ. ಶಾಶ್ವತ ಸಂಬಂಧದಲ್ಲಿ ಆಕೆಗೆ ಸ್ವಲ್ಪವೂ ನಂಬಿಕೆ ಇರಲಿಲ್ಲ. ಮದುವೆ ಆದಮೇಲೆ ಜವಾಬ್ದಾರಿ ಹೊತ್ತುಕೊಂಡು ಹೆಣಗುವುದು ಹೇಗೂ ಇರುವುದರಿಂದ ಅದಕ್ಕೂ ಮೊದಲೇ ಸಾಧ್ಯವಾದಷ್ಟೂ ಲೈಫನ್ನು ಎಂಜಾಯ್ ಮಾಡಬೇಕು ಎಂಬ ಸರಳ ಗಣಿತ ಪ್ರಚೇತನನದ್ದು. ಸೆಕ್ಸ್ ಬಿಟ್ಟರೆ ಪ್ರೀತಿ ಎನ್ನುವುದಕ್ಕೆ ಅಸ್ತಿತ್ವವೇ ಇರುವುದಿಲ್ಲ ಎಂಬ ಯೋಚನೆಯೂ ಅವನಲ್ಲಿತ್ತು.

ಹೊಸ ಬದುಕು ಅವರಿಬ್ಬರಿಗೂ ಅತೀವ ಸಂತಸ ನೀಡತೊಡಗಿತ್ತು. ಆರಂಭದ ಒಂದೆರಡು ತಿಂಗಳುಗಳಲ್ಲಿ ಕಾಮಕ್ಕಾಗಿಯೇ ಜನಿಸಿದವರಂತೆ ಅವರಿದ್ದರು. ಅವರಿಬ್ಬರ ನಡುವಿನ ಕಾಮಕೇಳಿಯಲ್ಲಿ ಯಾವ ನಿರ್ಬಂಧಗಳೂ ಇರಲಿಲ್ಲ. ಗಂಡ ಹೆಂಡತಿಯ ನಡುವಿನ ಲೈಂಗಿಕ ಸಂಬಂಧದಲ್ಲಿ ಕೆಲವೊಮ್ಮೆ ಕಂಡುಬರುವ ಶಿಷ್ಟಾಚಾರಗಳು ಇಲ್ಲಿ ಲೆಕ್ಕಕ್ಕೇ ಬರುತ್ತಿರಲಿಲ್ಲ. ವಯಸ್ಸಿಗಿಂತಲೂ ಹೆಚ್ಚಿನ ಪ್ರೌಢತೆಯಿಂದ ಚಿಂತಿಸುತ್ತಿದ್ದ ಪ್ರಣತಿಗೆ ಈ ಹೊಸ ಸಂಬಂಧ ಬಹಳ ಇಷ್ಟವಾಗಿತ್ತು. ಮುಖ್ಯವಾಗಿ ಗಂಡು- ಹೆಣ್ಣಿನ ನಡುವಿನ ಲೈಂಗಿಕತೆಯಲ್ಲಿ ಕಂಡುಬರುವ ಶ್ರೇಷ್ಠ- ಕನಿಷ್ಠ ಮನೋಭಾವ ತನ್ನ ಮತ್ತು ಪ್ರಚೇತನನ ನಡುವೆ ಇಲ್ಲದಿರುವುದೇ ಅವಳಿಗೆ ಬಲು ಮೆಚ್ಚುಗೆಯಾಗಿದ್ದ ವಿಷಯವಾಗಿತ್ತು. ತನ್ನ ಕಾಮದಾಹವನ್ನು ಇಳಿಸುವುದಕ್ಕೆ ಇರುವ ಸಾಧನ ಇವಳು ಎಂಬಂತೆ ಪ್ರಚೇತನ ಯಾವತ್ತೂ ನಡೆದುಕೊಳ್ಳುತ್ತಿರಲಿಲ್ಲ. ತನ್ನ ಆಸೆಗಳನ್ನು ಮುಕ್ತವಾಗಿ ಹೇಳಿ, ಅವಳ ಒಪ್ಪಿಗೆ ಪಡೆದು, ಮುಂದುವರಿಯುತ್ತಿದ್ದನೇ ಹೊರತು ತನ್ನ ಆಕಾಂಕ್ಷೆಗಳನ್ನು ಅವಳ ಮೇಲೆ ಹೇರುತ್ತಿರಲಿಲ್ಲ. ಅವಳ ಆಸೆ- ಆಕಾಂಕ್ಷೆಗಳನ್ನೂ ಈಡೇರಿಸುತ್ತಿದ್ದ.

ಹೀಗೆ ಎರಡು ವರ್ಷಗಳ ಕಾಲ ಸ್ವಚ್ಛಂದ ಪ್ರಣಯದಲ್ಲಿ ಪರಮೋಚ್ಛ ಸುಖವನ್ನು ಕಂಡುಕೊಂಡ ಪ್ರಚೇತನ- ಪ್ರಣತಿಯ ಮಧ್ಯೆ ಈಗ್ಗೆ ಮೂರು ತಿಂಗಳುಗಳಿಂದ ವಿರಸ ತಲೆದೋರತೊಡಗಿತ್ತು. ಅವಳು ತನ್ನ ಮಾತು ಕೇಳುತ್ತಿಲ್ಲ ಎಂಬ ಕೋಪ ಅವನಿಗಿತ್ತು. ತನ್ನ ಮೇಲೆ ಅಧಿಕಾರ ಚಲಾಯಿಸುವುದಕ್ಕೆ ಇವನ್ಯಾರು ಎಂಬ ಹಠ ಅವಳಿಗಿತ್ತು. ತಾವಿನ್ನು ಜೊತೆಗೆ ಬದುಕುವುದಕ್ಕೆ ಸಾಧ್ಯವಿಲ್ಲ ಎಂದು ನಿರ್ಧರಿಸಿದ ಅವರು ಇದೀಗ ಬೇರೆಬೇರೆಯಾಗಿ ತಮ್ಮ ತಮ್ಮ ದಾರಿ ಹಿಡಿದು ತೆರಳಿದ್ದಾರೆ…

*****

ತನ್ನೂರಿನ ಕಡೆಗೆ ಹೊರಡುವುದೆಂದು ಮನೆಬೀಗ ಹಾಕುವಾಗ ನಿರ್ಧರಿಸಿದ್ದ ಪ್ರಚೇತನ ಐದಾರು ಕಿಲೋಮೀಟರ್ ಸಾಗುವಷ್ಟರಲ್ಲಿಯೇ ನಿರ್ಧಾರ ಬದಲಾಯಿಸಿದ್ದ. ಪ್ರಣತಿಯ ಹಳ್ಳಿಗೆ ಸಮೀಪದಲ್ಲಿಯೇ ತನ್ನ ಗ್ರಾಮವೂ ಇರುವುದರಿಂದ ಅಲ್ಲಿಗೆ ಹೋಗುವುದು ಅವನಿಗ್ಯಾಕೋ ಸಹ್ಯವಾಗಿರಲಿಲ್ಲ. ಪ್ರಣತಿಯ ಸಾಮಿಪ್ಯವನ್ನು ಮಾತ್ರವಲ್ಲ, ಸಾಮಿಪ್ಯದಲ್ಲಿ ಇದ್ದಂತೆ ತೋರುವ ಭಾವನೆಯಿಂದಲೂ ಪಲಾಯನಗೈಯ್ಯುವುದು ಅವನ ಉದ್ದೇಶವಾಗಿತ್ತು. ತನ್ನ ಅಜ್ಜಿಮನೆಯಿರುವ ದೂರದ ಮಲೆನಾಡಿನ ಕಡೆಗೆ ಕಾರು ತಿರುಗಿಸಿದ. ಮೊಮ್ಮಗನ ಅನಿರೀಕ್ಷಿತ ಆಗಮನ ಅಜ್ಜ- ಅಜ್ಜಿಯಲ್ಲಿ ಸಂತಸವನ್ನು ಹುಟ್ಟುಹಾಕಿತ್ತು. ಈಗ ತಾನೇ ಮಾತು- ನಡಿಗೆ ಕಲಿತ ಮಗುವಿನಂತಾದ ಅವರಿಬ್ಬರ ಮಧ್ಯೆ ಮುದ್ದಿನ ಮೊಮ್ಮಗನನ್ನು ಮುದ್ದಿಸುವುದಕ್ಕೆ ಪೈಪೋಟಿ ಆರಂಭವಾಗಿತ್ತು. ಅವನಿಗೆ ಏನೆಲ್ಲಾ ತಿನ್ನುವುದಕ್ಕೆ ಇಷ್ಟವಿದೆ ಎಂದು ನೆನಪಿಸಿಕೊಳ್ಳುತ್ತಲೇ ಅದೆಲ್ಲವನ್ನೂ ಮಾಡಿ ಬಡಿಸಿದರು. ಆ ಚಳಿಯ ವಾತಾವರಣ, ಬೆಚ್ಚನೆಯ ಅಡುಗೆ, ಅಜ್ಜ- ಅಜ್ಜಿಯ ಪ್ರೀತಿಯ ಮಾತು- ಎರಡು ದಿನಗಳ ಬದುಕು ಕಳೆದುಹೋದದ್ದೇ ತಿಳಿಯಲಿಲ್ಲ ಪ್ರಚೇತನನನಿಗೆ.

*****

ಎರಡು ದಿನಗಳ ನಿರಂತರ ಖಿನ್ನತೆಯ ಬಳಿಕ ಇದೀಗ ಪ್ರಣತಿಯ ಮನಸ್ಸು ಒಂದಷ್ಟು ತಹಬಂದು ಪಡೆದುಕೊಂಡಿತ್ತು. ಬೇಸರದ ಮುಖವನ್ನು ನೋಡಿ ಪ್ರಶ್ನಿಸಿದ ತಾಯಿಗೆ ಕೆಲಸದ ಒತ್ತಡ ಎಂದು ಸುಳ್ಳು ಹೇಳಿದ್ದಳು. ತಾಯಿ ಅದೆಷ್ಟೇ ಮಾತನಾಡಿಸಿದರೂ ಇವಳಿಗೆ ಮಾತನಾಡುವ ಮನಸ್ಸೇ ಇರಲಿಲ್ಲ. ತನಗೇಕೆ ಹೀಗಾಗುತ್ತಿದೆ? ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡ ಅವಳಲ್ಲಿ ಉತ್ತರವಿರಲಿಲ್ಲ. ‘ಆದಷ್ಟು ಬೇಗ ಅವನನ್ನು ಮನಸ್ಸಿನಿಂದ ಡಿಲಿಟ್ ಮಾಡಬೇಕು’ ಎಂದು ಯೋಚಿಸಿದ ಪ್ರಣತಿ ಮನಸ್ಸನ್ನು ಒಂದಷ್ಟು ನಿರಾಳವಾಗಿಸಿಕೊಳ್ಳುವ ಸಲುವಾಗಿ ಗೆಳತಿಯ ಭೇಟಿಗಾಗಿ ಮನೆಯಿಂದ ಹೊರಟಳು…

*****

ಪ್ರಚೇತನ ಈಗ ಆಸ್ಪತ್ರೆಯಲ್ಲಿದ್ದ. ತನ್ನ ಮೇಲಿನ ಅತೀವ ಕಾಳಜಿಯೇ ತನ್ನ ಅಜ್ಜಿಯ ದುರವಸ್ಥೆಗೆ ಎಡೆಮಾಡಿಕೊಟ್ಟಿತಲ್ಲಾ ಎಂಬ ಬೇಸರ ಅವನದ್ದಾಗಿತ್ತು. ಮೊಮ್ಮಗ ಮರುದಿನ ಮುಂಜಾನೆಯೇ ತನ್ನ ಮನೆಗೆ ಹೊರಡುತ್ತಾನೆ ಎಂದು ತಿಳಿದ ತಕ್ಷಣವೇ ಅಜ್ಜಿ ಮೊಮ್ಮಗನಿಗೆ ಕೊಟ್ಟು ಕಳಿಸಬಹುದಾಗಿದ್ದ ತಿಂಡಿ- ತೀರ್ಥದ ಲೆಕ್ಕಾಚಾರ ಹಾಕತೊಡಗಿದ್ದರು. ‘ಒಂದು ಭರಣಿ ಮಾವಿನಮಿಡಿ ಉಪ್ಪಿನಕಾಯಿ ಸಿದ್ಧಮಾಡಿಟ್ಟಾಗಿದೆ. ಹಲಸಿನ ಹಪ್ಪಳ, ಸೆಂಡಿಗೆಯೂ ಇದೆ. ಕರಿಬೇವಿನ ಸೊಪ್ಪಿನ ಚಟ್ನಿಹುಡಿಯನ್ನು ಸಿದ್ಧಪಡಿಸಿಕೊಟ್ಟರೆ ಒಳ್ಳೆಯದು’ ಎಂದು ಅಂದಾಜಿಸಿದ ಅಜ್ಜಿ ಮನೆಯ ಬಲಭಾಗಕ್ಕಿರುವ ಕರಿಬೇವಿನ ಗಿಡದಾಚೆಗೆ ನಡೆದಿದ್ದರು. ಸುರಿದ ನಾಲ್ಕು ಹನಿ ಮಳೆಯಿಂದಾಗಿ ನೆಲ ಸ್ವಲ್ಪ ಮೆದುವಾಗಿತ್ತೇನೋ, ಇಟ್ಟ ಹೆಜ್ಜೆ ಜಾರಿದಂತಾಗಿ ನೆಲದ ಕಡೆಗೆ ಬೆನ್ನುಮಾಡಿ ಬಿದ್ದಿದ್ದರು. ಎದ್ದುನಿಲ್ಲುವುದಕ್ಕೆ ಸಾಧ್ಯವಾಗದಂತೆ ಸೊಂಟಕ್ಕೆ ಪೆಟ್ಟು ಬಿದ್ದಿತ್ತು. ಬೊಬ್ಬೆ ಕೇಳಿ ಓಡಿಬಂದ ಪ್ರಚೇತನ ಹಾಗೂ ಅವನ ಅಜ್ಜ ತಕ್ಷಣವೇ ಆಸ್ಪತ್ರೆಗೆ ಸೇರಿಸಿದ್ದರು.

ಗಂಡು- ಹೆಣ್ಣಿನ ನಡುವಿನ ಸಂಬಂಧದ ವಿಚಾರದಲ್ಲಿ ಅವರಿಬ್ಬರ ಮನಃಸ್ಥಿತಿಯೂ ಒಂದೇ ಆಗಿತ್ತು. ತನ್ನ ಅಪ್ಪನಿಂದ ಅಮ್ಮ ಅನುಭವಿಸಿದ ತೊಂದರೆಯನ್ನು ಕೇಳಿ ತಿಳಿದುಕೊಂಡಿದ್ದ ಪ್ರಣತಿಗೆ ಮದುವೆಯ ವಿಚಾರದಲ್ಲಿ ಆಸಕ್ತಿ ಇರಲಿಲ್ಲ. ಶಾಶ್ವತ ಸಂಬಂಧದಲ್ಲಿ ಆಕೆಗೆ ಸ್ವಲ್ಪವೂ ನಂಬಿಕೆ ಇರಲಿಲ್ಲ. ಮದುವೆ ಆದಮೇಲೆ ಜವಾಬ್ದಾರಿ ಹೊತ್ತುಕೊಂಡು ಹೆಣಗುವುದು ಹೇಗೂ ಇರುವುದರಿಂದ ಅದಕ್ಕೂ ಮೊದಲೇ ಸಾಧ್ಯವಾದಷ್ಟೂ ಲೈಫನ್ನು ಎಂಜಾಯ್ ಮಾಡಬೇಕು ಎಂಬ ಸರಳ ಗಣಿತ ಪ್ರಚೇತನನದ್ದು. ಸೆಕ್ಸ್ ಬಿಟ್ಟರೆ ಪ್ರೀತಿ ಎನ್ನುವುದಕ್ಕೆ ಅಸ್ತಿತ್ವವೇ ಇರುವುದಿಲ್ಲ ಎಂಬ ಯೋಚನೆಯೂ ಅವನಲ್ಲಿತ್ತು.

ಭುಜಕ್ಕೆ ತಲೆ ಆನಿಸಿ ಕಣ್ಣೀರುಗೈಯ್ಯುತ್ತಿದ್ದ ಅಜ್ಜನನ್ನು ಅಚ್ಚರಿಯಿಂದ ನೋಡಿದ ಪ್ರಚೇತನ. ಅರಗಿಸಿಕೊಳ್ಳಲಾರದ ಆಶ್ಚರ್ಯವಾಗಿತ್ತು ಅವನಿಗೆ. ಚಿಕ್ಕವನಿದ್ದಾಗ ಪ್ರಚೇತನ ಅಜ್ಜನ ಜೋರುತನಕ್ಕೆ ಬೆದರಿ ಅಜ್ಜಿಮನೆಗೆ ಬರುವುದಕ್ಕೇ ಹೆದರುತ್ತಿದ್ದ. ಹುಲಿಯಂತಹ ಮನುಷ್ಯ ತನ್ನಜ್ಜ ಎನ್ನುವುದು ಅವನಿಗೆ ಗೊತ್ತಿತ್ತು. ಅಂತಹ ದಿಟ್ಟತನವಿದ್ದ ವ್ಯಕ್ತಿ ಈಗ ಹಾಲುಗೂಸಿನಂತಾದುದು ಅವನಿಗೆ ನಂಬುವುದಕ್ಕೇ ಆಗಲಿಲ್ಲ. ಅಜ್ಜ ನಿರಂತರವಾಗಿ ಅಳುತ್ತಲೇ ಇದ್ದ. “ಅವಳು ಉಳಿಯದಿದ್ದರೆ ನಾನೂ ಬದುಕುವುದಿಲ್ಲ” ಎಂದು ಸ್ವಗತದಂತೆ ಅಜ್ಜ ಪದೇ ಪದೇ ಹೇಳುತ್ತಿದ್ದುದು ಅಜ್ಜನ ಮನದ ಅಸ್ಥಿರತೆಯನ್ನು ಸೂಚಿಸುತ್ತಿತ್ತು. ಅಜ್ಜನ ವರ್ತನೆ ಪ್ರಚೇತನನಲ್ಲಿದ್ದ ರೂಢೀಗತ ನಂಬಿಕೆಗೆ ಕೊಡಲಿಯೇಟು ನೀಡಿತ್ತು. ಕಾಮವಿಲ್ಲದೆ ಪ್ರೇಮ ಬದುಕುವುದಿಲ್ಲ ಎಂಬ ತನ್ನ ಮನೋಭಾವ ಅದೆಷ್ಟು ಸರಿ ಎಂದು ಮನದಲ್ಲಿಯೇ ಮತ್ತೆ ಮತ್ತೆ ಪ್ರಶ್ನಿಸಿಕೊಂಡ. ಅಜ್ಜಿಗೆ ವಯಸ್ಸು ಎಪ್ಪತ್ತು ದಾಟಿದೆ. ಒಣಕಲು ಕಟ್ಟಿಗೆಯಂತಾಗಿರುವ ಆ ಮುದಿದೇಹ ಈ ವೃದ್ಧನಲ್ಲಿ ಕಾಮದ ಭಾವನೆಯನ್ನು ಬಡಿದೆಬ್ಬಿಸಲು ಶಕ್ಯವೇ? ಹಾಗಾದರೆ ಕಾಮದ ಸ್ಪರ್ಶವೇ ಇಲ್ಲದ ನಿಷ್ಕಲ್ಮಶ ಪ್ರೀತಿ ಜಗತ್ತಿನಲ್ಲಿ ಇವತ್ತಿಗೂ ಅಸ್ತಿತ್ವದಲ್ಲಿದೆ ಎಂದಾಯಿತಲ್ಲ. ಅಜ್ಜ ತನ್ನ ಹೆಂಡತಿಯ ಮಾತನ್ನು ತಲೆಮೇಲಿಟ್ಟು ಪಾಲಿಸುತ್ತಾನೆ. ಹಠಮಾರಿಯೆಂದೇ ಊರಿಡೀ ಗುರುತಿಸಿಕೊಂಡಿರುವ ಅಜ್ಜ ಪತ್ನಿಯೆದುರು ಛಲವಾದಿಯಾಗಿದ್ದೇ ಇಲ್ಲ. ತಂಬಾಕಿನ ವಾಸನೆ ಅವಳಿಗಾಗುವುದಿಲ್ಲ ಎನ್ನುವ ಕಾರಣಕ್ಕೆ ತಂಬಾಕು ಜಗಿಯುವುದನ್ನೇ ಮರೆತುಬಿಟ್ಟಿದ್ದಾನೆ. ಅಜ್ಜಿಯೂ ಅಷ್ಟೇ. ಅಜ್ಜನಿಗೆ ಮಧುಮೇಹ ಬಂದುದನ್ನು ತಿಳಿದ ತಕ್ಷಣವೇ ತಾನೂ ಸಪ್ಪೆ ಚಹಾ ಕುಡಿಯುವುದನ್ನು ರೂಢಿಸಿಕೊಂಡಳು. ಪಂಚಾಯಿತಿಕೆ, ದೇವಸ್ಥಾನದ ಕಾರುಬಾರು ಎಂದು ಅಜ್ಜ ಮುಂಡಾಸು ದೊಡ್ಡದು ಮಾಡಿಕೊಂಡು ಓಡಾಡುತ್ತಿದ್ದಾಗ ಮನೆಯ ಜವಾಬ್ದಾರಿಗಳನ್ನು ತಾನೇ ನಿಭಾಯಿಸಿದಳು. ಹಾಗೆ ಬದುಕಿದ ಕಾರಣಕ್ಕೇ ಇಂದು ಒಬ್ಬರನ್ನೊಬ್ಬರು ಅಗಲಲಾರದಂತಹ ಬಗೆಯಲ್ಲಿ ಬೆಸೆದುಕೊಂಡಿದ್ದಾರೆ- ಈ ಎಲ್ಲಾ ಯೋಚನೆಗಳು ಮತ್ತೆ ಮತ್ತೆ ಪ್ರಚೇತನನ ಮನಸ್ಸಿಗೆ ಬಡಿದವು.

‘ಗಂಡ- ಹೆಂಡತಿಯ ನಡುವಿನ ಸಂಬಂಧವೆಂದರೆ ಬರೀ ಮಂಚವನ್ನು ಹಂಚಿಕೊಳ್ಳುವುದಲ್ಲ, ದೇಹವನ್ನು ಹಂಚಿಕೊಳ್ಳುವುದಲ್ಲ; ಮನಸ್ಸನ್ನು ಹಂಚಿಕೊಳ್ಳುವುದು, ಕನಸನ್ನು ಹಂಚಿಕೊಳ್ಳುವುದು, ಬದುಕನ್ನು ಹಂಚಿಕೊಳ್ಳುವುದು, ಬದುಕಿನ ಜವಾಬ್ದಾರಿಗಳನ್ನು ಹಂಚಿಕೊಳ್ಳುವುದು’- ಪ್ರಚೇತನನ ಪಾಲಿಗೆ ಅಪರಿಚಿತವಾಗಿದ್ದ ಈ ಚಿಂತನೆ ಆತನ ಚಿತ್ತಭಿತ್ತಿಯಲ್ಲಿ ಮತ್ತೆ ಮತ್ತೆ ಅನುರಣಿಸತೊಡಗಿತು. ಪ್ರಣತಿಯನ್ನು ಬಿಟ್ಟುಬರುವ ವಾರದಲ್ಲಿ ತಾನು ಅನಾರೋಗ್ಯಕ್ಕೀಡಾದಾಗ ಕಡಿದುಹೋಗುವ ಸಂಬಂಧ ತಮ್ಮದೆಂದು ಮನದಟ್ಟಾದ ಬಳಿಕವೂ ಆಕೆ ತನ್ನನ್ನು ಉಪಚರಿಸಿದ ರೀತಿ, ವಹಿಸಿದ ಅತೀವ ಕಾಳಜಿ ಪ್ರಚೇತನನಿಗೆ ಈಗ ನೆನಪಾಯಿತು.

ಅಷ್ಟರಲ್ಲಿ ಅಜ್ಜಿಯನ್ನು ಪರೀಕ್ಷಿಸಿ ಹೊರಬಂದ ವೈದ್ಯರು ಏನೂ ಅಪಾಯವಿಲ್ಲ, ಎರಡು ದಿನ ಮನೆಯಲ್ಲಿಯೇ ಇದ್ದು ವಿಶ್ರಾಂತಿ ತೆಗೆದುಕೊಂಡರೆ ಸಾಕು ಎಂದು ತಿಳಿಸಿದರು. ಅಜ್ಜನ ಮುಖದಲ್ಲಿ ಮೂಡಿದ ನಿರಾಳತೆಯ ನಗು ಪ್ರಚೇತನನನಿಗೂ ಸಂತಸ ನೀಡಿತು. ಅಜ್ಜಿಯನ್ನು ಗಾಲಿಕುರ್ಚಿಯಲ್ಲಿ ಕೂರಿಸಿಕೊಂಡು ಕರೆದೊಯ್ಯುತ್ತಿರಬೇಕಾದರೆ ಅವನ ಅಮ್ಮನ ಫೋನು. ಅರೆಮನಸ್ಸಿನಿಂದ ಎತ್ತಿಕೊಂಡವನಿಗೆ ಅಮ್ಮ ಹೇಳಿದ್ದೇನೆಂಬುದು ಸ್ಪಷ್ಟವಾಗಲಿಲ್ಲ. ನೆಟ್‌ವರ್ಕ್ ಸಮಸ್ಯೆಯಿಂದಾಗಿ ಅರ್ಧಂಬರ್ಧ ಮಾತು ಮಾತ್ರ ಕಿವಿಗೆ ಬಿದ್ದಂತಾಯಿತು. ಕೇಳಿಸಿಕೊಂಡವನಂತೆ “ಆಯ್ತು, ಆಯ್ತು” ಎಂದು ಹೇಳಿ ಕರೆ ಕಟ್ ಮಾಡಿದ.

*****

ಗೆಳತಿಯನ್ನು ಭೇಟಿ ಮಾಡಿ ಬಂದ ಪ್ರಣತಿ ಈಗ ಮೊದಲಿಗಿಂತ ಗೆಲುವಾಗಿದ್ದಳು. ಪ್ರಚೇತನನ ಸಂಗಾತವನ್ನು ಶೂನ್ಯವಾಗಿಸಿ ಬದುಕಬೇಕೆಂದು ಅವಳಿಗೀಗ ಅನ್ನಿಸಿತ್ತು. ಅದಕ್ಕೆ ಸರಿಯಾಗಿ ಅವಳ ತಾಯಿ ಇವಳು ಮನೆ ಹೊಕ್ಕ ತಕ್ಷಣವೇ “ನಿನ್ನನ್ನು ನೋಡುವುದಕ್ಕೆ ನಾಳೆ ಸಂಜೆ ಹುಡುಗನ ಕಡೆಯವರು ಬರುತ್ತಾರೆ. ಸಿದ್ಧವಾಗಿರು. ನಿನ್ನ ಮದುವೆ ಮಾಡಿ ಮುಗಿಸಿದರೆ ನನ್ನ ಬಹುದೊಡ್ಡ ಜವಾಬ್ದಾರಿ ಮುಗಿಯುತ್ತದೆ” ಎಂದಳು. ಪ್ರಚೇತನನ ವಿರುದ್ಧದ ಹಠಕ್ಕೆ ಎನ್ನುವಂತೆ ಪ್ರಣತಿ ಹುಡುಗನ ಪೂರ್ವಾಪರ ವಿಚಾರಿಸದೆಯೇ ತಾಯಿಯ ಮಾತಿಗೆ ಒಪ್ಪಿಗೆ ಕೊಟ್ಟಳು.

*****

ಹಿಂದಿನ ರಾತ್ರಿ ಆಸ್ಪತ್ರೆಯಿಂದ ಅಜ್ಜಿಯನ್ನು ಕರೆದುಕೊಂಡು ಬಂದಿದ್ದ ಪ್ರಚೇತನ ಬೆಳ್ಳಂಬೆಳಗ್ಗೆ ತನ್ನಜ್ಜಿಯ ಮನೆಯಿಂದ ತನ್ನೂರಿನ ಕಡೆಗೆ ಹೊರಟಿದ್ದ. ಗೊಂದಲವನ್ನು ಮನಸ್ಸಿನ ತುಂಬೆಲ್ಲಾ ಇರಿಸಿಕೊಂಡಿದ್ದ ಅವನು ಏಕಾಂತ ಬಯಸುತ್ತಿದ್ದ. ಆ ಕಾರಣಕ್ಕೇ ಅಜ್ಜ- ಅಜ್ಜಿ ಎಷ್ಟು ಒತ್ತಾಯಪಡಿಸಿದರೂ ಕೇಳದೆ ಹೊರಟಿದ್ದ.

ಇನ್ನೇನು ಸಂಜೆ ಕವಿಯುವುದರಲ್ಲಿತ್ತು. ಊರು ತಲುಪುವುದಕ್ಕೆ ಹದಿನೈದು ಇಪ್ಪತ್ತು ಕಿಲೋಮೀಟರ್‌ಗಳಿದ್ದವು. ಅವನೀಗ ಪ್ರಣತಿಯ ಮನೆಗೆ ತೀರಾ ಸಮೀಪದಲ್ಲಿದ್ದ. ಅಷ್ಟು ಹೊತ್ತಿನಿಂದ ಫೋನು ಇಲ್ಲವಲ್ಲ ಎಂದುಕೊಂಡವನು ಮೊಬೈಲ್ ಕಡೆಗೆ ದೃಷ್ಟಿ ಹಾಯಿಸಿದರೆ ನೆಟ್‌ವರ್ಕ್ ಇರಲೇ ಇಲ್ಲ. ಕಾರಿನಿಂದಿಳಿದಾಗ ನೆಟ್‌ವರ್ಕ್ ಬಂತು. ಮನೆಯವರಿಗೆ ಕಾಲ್ ಮಾಡಲು ಪ್ರಯತ್ನಿಸುತ್ತಿರಬೇಕಾದರೆ ಅವನ ಗೆಳತಿ ಅಕ್ಷತಾಳ ಫೋನು. “ಪ್ರಣತಿಯನ್ನು ನೋಡುವುದಕ್ಕೆ ಹುಡುಗನ ಕಡೆಯವರು ಇಂದು ಬರುತ್ತಾರಂತೆ” ಚುಟುಕಾಗಿ ಹೇಳಿ ಮುಗಿಸಿದವಳು ಫೋನಿಟ್ಟಿದ್ದಳು.

ಪ್ರಚೇತನನಿಗೆ ಸಹಿಸಲಾರದಂತಾಗಿತ್ತು. ‘ನಿನ್ನ ಪ್ರಣತಿಯನ್ನು ನಿನ್ನಿಂದ ಕಿತ್ತುಕೊಳ್ಳುತ್ತಿದ್ದಾರೆ’ ಎಂದು ಅವನ ಹೃದಯ ನುಡಿಯಿತು. ಪ್ರಣತಿಯ ಮನೆಯ ಕಡೆಗೆ ಕಾರು ಚಲಾಯಿಸಲು ನಿರ್ಧರಿಸಿದ. ಅಷ್ಟರಲ್ಲಿ ಅಮ್ಮ ಕಳಿಸಿದ ವಾಟ್ಸಾಪ್ ಮೆಸೇಜ್‌ಗಳು ಒಂದರ ಹಿಂದೊಂದರಂತೆ ಬರತೊಡಗಿದವು. ಆತುರಾತುರವಾಗಿ ಅದರ ಕಡೆಗೆ ದೃಷ್ಟಿ ಹಾಯಿಸಿದ. “ಲೊಕೇಶನ್ ಕಳಿಸುತ್ತೇನೆ. ಬೇಗ ಬಾ” ಎಂಬ ಅಕ್ಷರಗಳು ಕಣ್ಣಿಗೆ ರಾಚಿದವು. ಅದೇನೆಂದು ತಲೆಕೆಡಿಸಿಕೊಳ್ಳದ ಪ್ರಚೇತನ ತಕ್ಷಣ ಕಾರು ಸ್ಟಾರ್ಟ್ ಮಾಡಿ, ಆದಷ್ಟು ಬಲವಾಗಿ ಎಕ್ಸಿಲೇಟರ್ ಅದುಮತೊಡಗಿದ…

*****

ಇನ್ನೇನು ಕೆಲವೇ ನಿಮಿಷಗಳಲ್ಲಿ ಹುಡುಗನೆದುರು ನಿಲ್ಲಬೇಕಿದ್ದ ಪ್ರಣತಿ ಕೋಣೆಯಲ್ಲಿ ಒಬ್ಬಂಟಿಯಾಗಿ ಕುಳಿತು ಬಿಕ್ಕುತ್ತಿದ್ದಳು. ಡೈರಿಯೊಂದು ಅವಳ ಕೈಯ್ಯಲ್ಲಿತ್ತು. ಅದು ಪ್ರಚೇತನ ಬರೆದಿದ್ದ ಡೈರಿ. ಬೆಂಗಳೂರಿನಿಂದ ಪ್ರಚೇತನನನ್ನು ಬಿಟ್ಟು ಬರುವಾಗ ಅಚಾನಕ್ಕಾಗಿ ಇದು ಪ್ರಣತಿಯ ಬ್ಯಾಗ್ ಸೇರಿತ್ತು. ಈಗ ಕಿವಿಯೋಲೆಗಾಗಿ ತಡಕಾಡುತ್ತಿದ್ದಾಗ ಅದು ಅವಳಿಗೆ ದೊರೆತಿತ್ತು. ಡೈರಿಯ ತುಂಬಾ ಹುದುಗಿದ್ದದ್ದು ಪ್ರಚೇತನನ ಭಾವನೆಗಳು. ಪ್ರಣತಿಯ ಕುರಿತಾದ ಅವನ ಭಾವನೆಗಳು. ಪ್ರಣತಿಯ ಜೊತೆಗೆ ಬೇರೆ ಯಾವನೋ ಹುಡುಗ ಮಾತನಾಡಿದ್ದನ್ನು ಅತೀವವಾಗಿ ಹಚ್ಚಿಕೊಂಡು ಒಂದಷ್ಟು ಪುಟಗಳನ್ನು ಬರೆದಿದ್ದ. ಅವನ ಆ ವರ್ತನೆಯನ್ನು ತಪ್ಪಾಗಿ ಅರ್ಥೈಸಿಕೊಂಡ ಪ್ರಣತಿ ಅವನು ತನ್ನ ಮೇಲೆ ಅಧಿಕಾರ ಚಲಾಯಿಸುತ್ತಿದ್ದಾನೆ ಎಂದುಕೊಂಡು ಅವನನ್ನು ತೊರೆಯುವ ನಿರ್ಧಾರ ಮಾಡಿದ್ದಳು. ಕೋಪದ ಅತಿರೇಕವಸ್ಥೆಯಲ್ಲಿ ಅವನೂ ಆ ನಿರ್ಧಾರಕ್ಕೆ ಒಪ್ಪಿಗೆ ಕೊಟ್ಟಿದ್ದ.

ಪ್ರಣತಿ ಯೋಚಿಸುತ್ತಾ ಅಳುತ್ತಿರಬೇಕಾದರೆ ಹೊರಗಿನಿಂದ ಬಾಗಿಲು ಬಡಿದ ಅಮ್ಮ ನುಡಿದಳು- “ಹುಡುಗನ ಕಡೆಯವರು ಬಂದಿದ್ದಾರೆ. ಹೊರಗೆ ಬಾ”

ಹೊರಬಂದ ಪ್ರಣತಿಯ ಕೈಯ್ಯಲ್ಲಿ ಜ್ಯೂಸಿನ ಲೋಟಗಳಿದ್ದ ಟ್ರೇಯನ್ನು ಕೊಟ್ಟ ಅವಳಮ್ಮ ಮಗಳ ತಲೆಯನ್ನೊಮ್ಮೆ ಮುದ್ದಿನಿಂದ ನೇವರಿಸಿದಳು. ತನ್ನಮ್ಮನ ಖುಷಿಗಾದರೂ ತಾನೀಗ ಹುಡುಗನ ಕಡೆಯವರ ಎದುರು ಹೋಗಿ ನಿಲ್ಲಬೇಕೆಂದು ಯೋಚಿಸಿದ ಅವಳು ಟ್ರೇ ಹಿಡಿದುಕೊಂಡು ಹುಡುಗನ ಕಡೆಯವರೆದುರು ಹೋಗಿ ನಿಂತಳು.

ಪ್ರಚೇತನ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದು, ಪ್ರಣತಿಯ ಮನೆಯಂಗಳದಲ್ಲಿ ಕಾರು ನಿಲ್ಲಿಸಿದ. ಅಂಗಳದಲ್ಲಿ ನಿಂತಿದ್ದ ಕಾರಿನ ಕಡೆಗೊಮ್ಮೆ ಅಸ್ಪಷ್ಟ ಗಮನ ಹರಿಸಿದವನಿಗೆ ಹುಡುಗನ ಕಡೆಯವರು ಬಂದಿದ್ದಾರೆ ಎನ್ನುವುದು ಸ್ಪಷ್ಟವಾಯಿತು. ‘ನನ್ನ ಪ್ರಣತಿಯನ್ನು ನಾನ್ಯಾರಿಗೂ ಬಿಟ್ಟುಕೊಡಲಾರೆ’ ಎನ್ನುವ ಆವೇಶದಿಂದ ಮನೆಯ ಒಳ ನುಗ್ಗಿದವನಿಗೆ ಕಂಡದ್ದು- ಟ್ರೇಯನ್ನು ಕೈಯ್ಯಲ್ಲಿ ಹಿಡಿದುಕೊಂಡು ಸಪ್ಪೆಮುಖ ಮಾಡಿಕೊಂಡು ನಿಂತಿದ್ದ ಪ್ರಣತಿ ಹಾಗೂ ಪಕ್ಕದಲ್ಲಿಯೇ ಮುಗುಳ್ನಗುತ್ತಿದ್ದ ಅವಳಮ್ಮ. ಹುಡುಗನ ಕಡೆಯವರಿಗೆ ನಿಜವಿಚಾರವನ್ನೆಲ್ಲಾ ತಿಳಿಸಬೇಕೆಂದುಕೊಂಡು ಸೋಫಾದಲ್ಲಿ ಕುಳಿತಿದ್ದವರೆಡೆಗೆ ನೋಡಿದ. ಇವನನ್ನು ನೋಡಿದ ತಕ್ಷಣವೇ ಇವನಮ್ಮ- “ಹೋ ನಮ್ಮ ಮಗ ಪ್ರಚೇತನನೂ ಬಂದುಬಿಟ್ಟ” ಎಂದು ಸಂತಸದಿಂದ ನುಡಿದರು. ಪ್ರಚೇತನನ ಕಾಲು ಕೇಜಿ ಹೃದಯ ಖುಷಿಯಿಂದ ಕುಣಿದಾಡತೊಡಗಿತು.