‘ಬೌದ್ಧಿಕ’ ಕವನಗಳಿಗೆ ವ್ಯತಿರಿಕ್ತವಾಗಿರುವ ಹಲವಾರು ‘ಮುಗ್ಧ’ ಕವನಗಳು ಟ್ಯಾಲ್ವೆಟ್‌ರ ಸಂಕಲನದಲ್ಲಿ ಇವೆ. ಈ ‘ಮುಗ್ಧ’ ಕವನಗಳು ಎಸ್ಟೋನಿಯನ್ ಜಾನಪದ ಕಾವ್ಯದಲ್ಲಿ ಅವರ ಆಳವಾದ ಮತ್ತು ಸಕ್ರಿಯ ಆಸಕ್ತಿಯಲ್ಲಿ ಹುಟ್ಟಿದ ಕಾವ್ಯ. ಎಸ್ಟೋನಿಯನ್ ಕಾವ್ಯದ ಬೆಳವಣಿಗೆಗೆ ಜಾನಪದ ಕಾವ್ಯದ ಪಾತ್ರ ಮಹತ್ವದ್ದಾಗಿದೆ. ಟ್ಯಾಲ್ವೆಟ್ ಅವರ ಕಾವ್ಯದಲ್ಲಿ, ಅವರ ಮಕ್ಕಳ ಮೇಲಿನ ಪ್ರೀತಿಯ ವಿಷಯದ ಕವನಗಳು ಹೆಚ್ಚಾಗಿ ಈ ವಿಧಾನವನ್ನು ಅಳವಡಿಸಿಕೊಳ್ಳುತ್ತವೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಎಸ್ಟೋನಿಯಾ ದೇಶದ ಕವಿ ಯೂರಿ ಟ್ಯಾಲ್ವೆಟ್-ರ (Jüri Talvet) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

ರೂಪ ಮತ್ತು ಪರಿಕಲ್ಪನೆ ಎರಡರಲ್ಲೂ ಪಾಂಡಿತ್ಯವನ್ನು ಪ್ರದರ್ಶಿಸುತ್ತಾ ಮುಕ್ತವಾಗಿರುವ ಕಾವ್ಯ ಯೂರಿ ಟ್ಯಾಲ್ವೆಟ್-ರದ್ದು. ಇವರ ಕಾವ್ಯದ ವ್ಯಾಪ್ತಿಯಲ್ಲಿ ಮುಕ್ತ ಪದ್ಯ, ಶಾಸ್ತ್ರೀಯ ರೂಪಗಳು, ಮತ್ತು ಹೈಕುಗಳೂ ಸೇರಿವೆ; ನವಿರಾದ ಪ್ರೇಮ ಕಾವ್ಯದಿಂದ ಹಿಡಿದು ಸಮಕಾಲೀನ ಜೀವನದ ಕಹಿ ಕವನಗಳನ್ನೂ ಒಳಗೊಂಡಿದೆ. ಟ್ಯಾಲ್ವೆಟ್-ರ ಕಾವ್ಯ ಪ್ರಪಂಚವು ಸಂಬಂಧಗಳು ಮತ್ತು ಉಲ್ಲೇಖಗಳೊಂದಿಗೆ ತುಂಬಿ ತುಳುಕುತ್ತಿರುವ, ನಿರಂತರವಾಗಿ ಉತ್ತರಗಳಿಗಾಗಿ ಹುಡುಕಾಡುವ ವಿಶ್ವ ಸಾಹಿತ್ಯ ವಿಮರ್ಶಕರ ಸಂಕೀರ್ಣ ಸ್ಥಳವಾಗಬಹುದು. ಇದನ್ನು ಶಿಕ್ಷಕನ “ಪ್ರಯಾಣ ಕವನ” ಎಂದು ಕರೆಯಲಾಗುತ್ತದೆ. ಆದಾಗ್ಯೂ, ಈ ಶಿಕ್ಷಕ ಇಂದಿನ ನೈಜ ಜಗತ್ತಿನಲ್ಲಿ ಸತ್ಯವನ್ನು ಹುಡುಕುತ್ತಾನೆ, ಅವನ ಸಣ್ಣ ನಾರ್ಡಿಕ್ ತಾಯ್ನಾಡಾದ ಎಸ್ಟೋನಿಯಾ ದೇಶವನ್ನು ಹೊರಗಿರುವ ವಿಶಾಲ ಪ್ರಪಂಚದೊಂದಿಗೆ ಜೋಡಿಸುತ್ತಾನೆ, ಹಾಗೆಯೇ ಪ್ರತ್ಯೇಕಿಸುತ್ತಾನೆ ಕೂಡ.

ಈ ಜಾಗತಿಕ ಹರಹನ್ನು ಐಹಿಕವಾಗಿ ಹಾಗೂ ಪ್ರೀತಿಯಿಂದ ಮೆಚ್ಚುವ ಹಾಗೂ ಅದನ್ನು ಹೃತ್ಪೂರ್ವಕವಾಗಿ, ಆಗಾಗ ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡುವ ಟ್ಯಾಲ್ವೆಟ್‌ರ ಅನುಭವನ್ನು ಅವರ ಕವನಗಳಲ್ಲಿ ನಾವು ಗ್ರಹಿಸಬಹುದು. ಅವರ ಕಾವ್ಯ ಸ್ವಪ್ನಮಯವಾಗಿದ್ದು, ಶಬ್ಧಮೇಳದ ಅನುಭವ ನೀಡುತ್ತೆ. ವೈದೃಶ್ಯಗಳಿಗಾಗಿ ಹುಡುಕದೇ ಇರುವ ಜಗದ ಪಥಸಂಗಮ ಇವರ ಕಾವ್ಯ. ಟ್ಯಾಲ್ವೆಟ್‌ರ ಬಹು-ಧ್ವನಿಯ ಕಾವ್ಯದಲ್ಲಿ, ಇನ್ನೂ ಜಗತ್ತನ್ನು ಅನ್ವೇಷಿಸುವ ಮಗುವಿನ ತಾಜಾ ಧ್ವನಿಯು ತುಂಬಾ ಮುಖ್ಯವಾಗಿದೆ.

ಯೂರಿ ಟ್ಯಾಲ್ವೆಟ್-ರು 1945 ರಲ್ಲಿ ಎಸ್ಟೋನಿಯಾದ ಪಾರ್ಣು (Pärnu) ನಗರದಲ್ಲಿ ಜನಿಸಿದರು. ಅವರು 1972-ರಲ್ಲಿ ಟಾರ್ಟು ವಿಶ್ವವಿದ್ಯಾನಿಲಯದಿಂದ ‘ಇಂಗ್ಲಿಷ್ ಫಿಲಾಲಜಿ’ (philology) ವಿಷಯದಲ್ಲಿ ಪದವಿ ಪಡೆದು, 1974-ರಲ್ಲಿ ವಿಶ್ವವಿದ್ಯಾಲಯದ ಉಪನ್ಯಾಸಕರಾಗಿ ಸೇರಿದರು. 1992-ರಲ್ಲಿ ಅದೇ ವಿಶ್ವವಿದ್ಯಾಲಯದಲ್ಲಿ ವಿಶ್ವ ಸಾಹಿತ್ಯದ ಪ್ರಾಧ್ಯಾಪಕರಾದರು. 1981-ರಲ್ಲಿ ಟ್ಯಾಲ್ವೆಟ್‌ರು “ಗುಜ್ಮನ್ ಡಿ ಅಲ್ಫರಾಚೆ” (Guzman de Alfarache) ಎಂಬ ಹೆಸರಿನ ಕ್ಲಾಸಿಕ್ ಸ್ಪ್ಯಾನಿಷ್ ಪಿಕರೆಸ್ಕ್ (picaresque) ಕಾದಂಬರಿಯ ಆಧ್ಯಯನಕ್ಕಾಗಿ ಲೆನಿನ್‌ಗ್ರ್ಯಾಡ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದರು. ಅವರು “ಇಂಟರ್ಲಿಟರೇರಿಯಾ” (Interlitteraria) ಎಂಬ ಅಂತರರಾಷ್ಟ್ರೀಯ ಸಾಹಿತ್ಯ ಅಧ್ಯಯನ ಪತ್ರಿಕೆಯ ಮುಖ್ಯ ಸಂಪಾದಕರೂ ಆಗಿದ್ದಾರೆ.

ಈಗಾಗಲೇ ಅನುವಾದಕರಾಗಿ ಸಾಹಿತ್ಯಲೋಕಕ್ಕೆ ಪಾದಾರ್ಪಣೆ ಮಾಡಿದ ಟ್ಯಾಲ್ವೆಟ್ ಅವರ ಮೊದಲ ಕವನ ಸಂಕಲನ Äratused (Awakenings, 1981) 1980-ರ ಸೋವಿಯತ್ ಯೂನಿಯನ್ನಿನ ಉಸಿರುಕಟ್ಟಿಸುವ ಸಾಹಿತ್ಯಲೋಕದಲ್ಲಿ ತನ್ನ ಆಹ್ಲಾದಕರ ಹೊಸತನದಿಂದ ಹಾಗೂ ಭಾವನಾತ್ಮಕ ಧೈರ್ಯದಿಂದ ಎದ್ದು ಕಾಣುತ್ತದೆ. ಇದರ ನಂತರ 1986-ರಲ್ಲಿ Ambur ja karje (The Archer and the Cry), 1990-ರಲ್ಲಿ Hinge kulg ja kliima üllatused (The Soul’s Progress and Surprises of Climate), 1997-ರಲ್ಲಿ Eesti eleegia ja teisi luuletusi (Estonian Elegy and Other Poems), 2001-ರಲ್ಲಿ Kas sul viinamarju ka on? (Do You Have Also Grapes?), 2005-ರಲ್ಲಿ Unest, lumest (From Dreams, from Snow), 2008-ರಲ್ಲಿ Silmad peksavad une seinu (Eyes Beat the Walls of Sleep), ಹೀಗೆ ಈವರೆಗೆ ಹತ್ತು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. 2014-ರಲ್ಲಿ ಪ್ರಕಟವಾದ ‘Estonian Elegy and Other Poems: 1981-2012’ ಸಮಗ್ರ ಸಂಗ್ರಹದಲ್ಲಿ ಟ್ಯಾಲ್ವೆಟ್‌ರ 1981-ರಿಂದ 2012-ರ ವರೆಗೆ ಪ್ರಕಟವಾದ ಅತ್ಯುತ್ತಮ ಕವನಗಳು ಹಾಗೂ ಕೆಲವು ಹೊಸ ಕವನಗಳೂ ಸಹ ಸೇರಿವೆ.

ವಿಶ್ವ ಪ್ರಸಿದ್ಧ ಸ್ಪ್ಯಾನಿಷ್ ಭಾಷೆಯ ಕೃತಿಗಳನ್ನು ಟ್ಯಾಲ್ವೆಟ್‌ರು ಎಸ್ಟೋನಿಯನ್ ಭಾಷೆಗೆ ಅನುವಾದಿಸಿದ್ದಾರೆ – ಪ್ರಖ್ಯಾತ ಸ್ಪ್ಯಾನಿಷ್ ಬರಹಗಾರರಾದ ಕ್ವೆವೆಡೊ, ಕ್ಯಾಲ್ಡೆರಾನ್, ಆರ್. ಗೊಮೆಜ್ ಡೆ ಲಾ ಸೆರ್ನಾರ ಕೃತಿಗಳು ಹಾಗೂ ಆಧುನಿಕ ಲ್ಯಾಟಿನ್ ಅಮೇರಿಕನ್ ಲೇಖಕರಾದ ಗಾರ್ಸಿಯಾ ಮಾರ್ಕ್ವೆಜ್, ವಾರ್ಗಸ್ ಲೊಸಾ, ಮತ್ತು ಇತರರ ಕೃತಿಗಳನ್ನು ಸಹ ಎಸ್ಟೋನಿಯನ್ ಭಾಷೆಗೆ ಅನುವಾದಿಸಿದ್ದಾರೆ. ಕವಿ ಹಾರ್ವೆ ಎಲ್. ಹಿಕ್ಸ್‌ರ ಜತೆ ಸೇರಿ ಟ್ಯಾಲ್ವೆಟ್ ಅವರು ಪ್ರಖ್ಯಾತ ಆಧುನಿಕ ಎಸ್ಟೋನಿಯನ್ ಕವಿ ಯುಹಾನ್ ಲೀವ್ (Juhan Liiv) ಅವರ ಕವನಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಅವರ ಆಯ್ದ ಕವನಗಳ ಅನುವಾದಗಳು ಇಂಗ್ಲಿಷ್, ಸ್ಪ್ಯಾನಿಷ್, ಫ್ರೆಂಚ್ ಮತ್ತು ಇತರ ಭಾಷೆಗಳಲ್ಲಿ ಪ್ರಕಟಿಸಲಾಗಿದೆ. ಹಾರ್ವೆ ಎಲ್. ಹಿಕ್ಸ್-ರ (H. L. Hix) ಇಂಗ್ಲಿಷ್ ಅನುವಾದದಲ್ಲಿ ಟ್ಯಾಲ್ವೆಟ್‌ರ ಎರಡು ಸಂಕಲನಗಳು ಪ್ರಕಟವಾಗಿವೆ – Estonian Elegy: Selected Poems (2008) ಮತ್ತು Of Snow, Of Soul: New Selected Poems (2010).

1972-ರಿಂದ ಅವರು ವಿಶ್ವವಿದ್ಯಾನಿಲಯದ ವೃತ್ತಪತ್ರಿಕೆ ‘ಟಾರ್ಟು ಊಲಿಕೂಲ್‌’-ಗೆ (Tartu Ülikool) ಸಾಹಿತ್ಯಿಕ ಸಹಯೋಗಿಯಾಗಿದ್ದರು. 1974-ರಲ್ಲಿ ಅವರು ಟಾರ್ಟು ವಿಶ್ವವಿದ್ಯಾಲಯದಲ್ಲಿ ಪಾಶ್ಚಿಮಾತ್ಯ ಸಾಹಿತ್ಯದ ಇತಿಹಾಸವನ್ನು ಕಲಿಸಲು ಪ್ರಾರಂಭಿಸಿದರು. ಅವರು 1992 ರಿಂದ ವಿಶ್ವವಿದ್ಯಾನಿಲಯದಲ್ಲಿ ತುಲನಾತ್ಮಕ ಸಾಹಿತ್ಯ (Comparative Literature) ವಿಭಾಗದ ಪ್ರಾಧ್ಯಾಪಕರಾಗಿ ಮತ್ತು ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಅದೇ ವರ್ಷ, ಟ್ಯಾಲ್ವೆಟ್‌ ಅವರು ಟಾರ್ಟು ವಿಶ್ವವಿದ್ಯಾಲಯದಲ್ಲಿ ಸ್ಪ್ಯಾನಿಷ್ ಭಾಷೆ ಮತ್ತು ಸಾಹಿತ್ಯ ವಿಭಾಗವನ್ನು ಸ್ಥಾಪಿಸಿದರು ಮತ್ತು ಅಂದಿನಿಂದ ಅದರ ಮುಖ್ಯಸ್ಥರಾಗಿದ್ದಾರೆ.

2006-ರಲ್ಲಿ ಟ್ಯಾಲ್ವೆಟ್ ಅವರು ಯೂನಿವರ್ಸಿಟಿ ಆಫ್ ಟಾರ್ಟು ಪ್ರೆಸ್‌ನ ಅಶ್ರಯದಲ್ಲಿ Mailmakirjanduse Tõlkevaramu (ವಿಶ್ವ ಸಾಹಿತ್ಯದ ಶ್ರೇಷ್ಠ ಕೃತಿಗಳು), Kaasaegne Mõte (ಸಮಕಾಲೀನ ಚಿಂತನೆ), ಮತ್ತು Kaasajaluule (‘ಸಮಕಾಲೀನ ಕವಿತೆ’) ಎಂಬ ಪುಸ್ತಕ ಸರಣಿಗಳನ್ನು ಸ್ಥಾಪಿಸಿದರು. 2008-ರಲ್ಲಿ ಅವರು ‘ಅಮೆರಿಕನ್ ಕಾವ್ಯ ಸಂಗ್ರಹ’ವೊಂದನ್ನು ಭಾಗಶಃ ಅನುವಾದಿಸಿ, ಸಂಪಾದಿಸಿ ಪ್ರಕಟಿಸಿದರು. ಅವರ ವಿಶ್ವದ ಪ್ರಸಿದ್ಧ ಕವನಗಳ ಅನುವಾದಗಳ ಸಂಗ್ರಹ 2021-ರಲ್ಲಿ ಎರಡು ಸಂಪುಟಗಳಲ್ಲಿ ಪ್ರಕಟವಾಯಿತು.

ಕವಿಯಾಗಿ ಹಾಗೂ ಸಾಹಿತ್ಯ ವಿದ್ವಾಂಸರಾಗಿ ಟ್ಯಾಲ್ವೆಟ್‌ರು ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು, ಗೌರವಗಳನ್ನು ಪಡೆದಿದ್ದಾರೆ – 1986-ರಲ್ಲಿ ‘ಎಸ್ಟೋನಿಯನ್ ವಾರ್ಷಿಕ ಸಾಹಿತ್ಯ ಪ್ರಶಸ್ತಿ’ (Estonian Annual Prize of Literature), 1992-ರಲ್ಲಿ ಸ್ಪ್ಯಾನಿಷ್ ಭಾಷೆ ಮತ್ತು ಸಾಹಿತ್ಯ ಅಧ್ಯಯನದಲ್ಲಿ ಅವರ ಕಾರ್ಯಕ್ಕಾಗಿ ‘ಆರ್ಡರ್ ಆಫ್ ಇಸಬೆಲಾ ದಿ ಕ್ಯಾಥೋಲಿಕ್ (Order of Isabella the Catholic), 1997-ರಲ್ಲಿ ಯುಹಾನ್ ಲೀವ್ ಕಾವ್ಯ ಪ್ರಶಸ್ತಿ, 2001-ರಲ್ಲಿ ಆರ್ಡರ್ ಆಫ್ ದಿ ವೈಟ್ ಸ್ಟಾರ್ (Order of the White Star), 2002-ರಲ್ಲಿ ಕಾವ್ಯ ಮತ್ತು ಪ್ರಬಂಧಕ್ಕಾಗಿ ಐವರ್ ಇವಾಸ್ಕ್ ಸ್ಮಾರಕ ಪ್ರಶಸ್ತಿ (Ivar Ivask Memorial Prize for Poetry and Essay), 2020-ರಲ್ಲಿ ಸಮಗ್ರ ಸಾಹಿತ್ಯಕ್ಕಾಗಿ ಅಂತರರಾಷ್ಟ್ರೀಯ ನಾಜಿ ನಾಮನ್ ಸಾಹಿತ್ಯ ಗೌರವ ಪ್ರಶಸ್ತಿ (International Naji Naaman Literature Honor Prize), 2021-ರಲ್ಲಿ ಸಂಶೋಧನೆಗಾಗಿ ಎಸ್ಟೋನಿಯನ್ ರಾಷ್ಟ್ರೀಯ ಜೀವಮಾನ ಸಾಧನೆ ಪ್ರಶಸ್ತಿ, ಎರಡು ಸಂಪುಟಗಳಲ್ಲಿ ಪ್ರಕಟವಾದ ‘ಆಯ್ದ ಕವನ ಅನುವಾದಗಳು: 1970-2020’ ಕೃತಿಗಾಗಿ 2022-ರಲ್ಲಿ ಜಾನ್ ಕ್ರಾಸ್ ಸಾಹಿತ್ಯ ಪ್ರಶಸ್ತಿ, ಹಾಗೂ 2022-ರಲ್ಲಿ ಫುಶುನ್, ಚೈನಾದಲ್ಲಿ ನೀಡಲಾದ ಗೋಲ್ಡನ್ ಐವಿ ಅಂತರರಾಷ್ಟ್ರೀಯ ಕವನ ಪ್ರಶಸ್ತಿ.

ಯೂರಿ ಟ್ಯಾಲ್ವೆಟ್‌ರ ಬಹಳಷ್ಟು ಕವನಗಳನ್ನು ಇಂಗ್ಲಿಷಿಗೆ ಅನುವಾದ ಮಾಡಿರುವ ಎಚ್. ಎಲ್. ಹಿಕ್ಸ್ (H. L. Hix) ಅವರು ತಾವು ಇಂಗ್ಲಿಷಿಗೆ ಅನುವಾದಿಸಿದ ಟ್ಯಾಲ್ವೆಟ್‌ರ ಕವನಗಳ ಸಂಕಲನದ (Of Snow, Of Soul; 2010) ಪ್ರಸ್ತಾವನೆಯಲ್ಲಿ ಟ್ಯಾಲ್ವೆಟ್‌ರ ಕಾವ್ಯದ ವಿಷಯ-ವಿಧಾನಗಳ ಬಗ್ಗೆ ಬರೆಯುತ್ತಾ, ಹೀಗನ್ನುತ್ತಾರೆ: “ಪ್ರತಿಯೊಂದು ಕವಿತೆಯೂ ವಿಶಿಷ್ಟವಾಗಿದೆ ಮತ್ತು ತನ್ನದೇ ಆದ ಅವಶ್ಯಕತೆಗಳನ್ನು ಅನುಸರಿಸುತ್ತದೆಯಾದರೂ, ನಾನು ಟ್ಯಾಲ್ವೆಟ್ ಅವರ ಕಾವ್ಯದಲ್ಲಿ ಹಲವಾರು ಪುನರಾವರ್ತಿತ ವಿಧಾನಗಳನ್ನು ನೋಡುತ್ತೇನೆ. ಸೂಕ್ತವಾದ ಪದದ ಕೊರತೆಯಿಂದಾಗಿ ನಾನು ಅವರ ಒಂದು ವಿಧಾನವನ್ನು ‘ಬೌದ್ಧಿಕ’ (intellectual) ಎಂದು ಕರೆಯುತ್ತೇನೆ. ಇಲ್ಲಿ, ‘ಬೌದ್ಧಿಕ’ವನ್ನು ‘ಭಾವನೆ’ಯಿಂದ ವಿಭಜಿಸಿ, ವಿಜ್ಞಾನವನ್ನು ಒಂದರೊಂದಿಗೆ ಮತ್ತು ಕಾವ್ಯವನ್ನು ಇನ್ನೊಂದರೊಂದಿಗೆ ಜೋಡಿಸುವ ಮೂಲಕ ಕಾವ್ಯದಿಂದ ಹೊರಗಿಡಲಾಗುವುದಿಲ್ಲ. ಟ್ಯಾಲ್ವೆಟ್‌-ರಿಗೆ ಕಾವ್ಯವೆಂದರೆ ಅವರು ಯೋಚಿಸುವ ಮತ್ತು ಕಲಿಯುವ ಎಲ್ಲವನ್ನೂ ಒಳಗೊಂಡಂತೆ ಅವರ ಎಲ್ಲಾ ಅನುಭವಗಳ ಸಂಯೋಜನೆ. ಟ್ಯಾಲ್ವೆಟ್-ರ ಕವನಗಳು ಬೌದ್ಧಿಕ ಅನುಭವವನ್ನು ಉಳಿದ ಅನುಭವಗಳಿಂದ ಪ್ರತ್ಯೇಕಿಸುವುದಿಲ್ಲ: ಅವರ ಕವನಗಳು ಬೌದ್ಧಿಕ ಅನುಭವವನ್ನು ಸಾಕಾರಗೊಳಿಸುತ್ತವೆ, ಹಾಗೂ ಮಾನವ ಸಂವಹನ, ಅಗತ್ಯ, ಮರ್ತ್ಯತೆ ಮತ್ತು ಭೌತಿಕತೆಗಳಿಂದ ನಿಯಮಾಧೀನಪಡಿಸಲಾಗಿದೆ ಎಂದು ತೋರಿಸುತ್ತದೆ.

‘ಬೌದ್ಧಿಕ’ ಕವನಗಳಿಗೆ ವ್ಯತಿರಿಕ್ತವಾಗಿರುವ ಹಲವಾರು ‘ಮುಗ್ಧ’ (naïve) ಕವನಗಳು ಟ್ಯಾಲ್ವೆಟ್‌ರ ಸಂಕಲನದಲ್ಲಿ ಇವೆ. ಈ ‘ಮುಗ್ಧ’ ಕವನಗಳು ಎಸ್ಟೋನಿಯನ್ ಜಾನಪದ ಕಾವ್ಯದಲ್ಲಿ ಅವರ ಆಳವಾದ ಮತ್ತು ಸಕ್ರಿಯ ಆಸಕ್ತಿಯಲ್ಲಿ ಹುಟ್ಟಿದ ಕಾವ್ಯ. ಎಸ್ಟೋನಿಯನ್ ಕಾವ್ಯದ ಬೆಳವಣಿಗೆಗೆ ಜಾನಪದ ಕಾವ್ಯದ ಪಾತ್ರ ಮಹತ್ವದ್ದಾಗಿದೆ. ಟ್ಯಾಲ್ವೆಟ್ ಅವರ ಕಾವ್ಯದಲ್ಲಿ, ಅವರ ಮಕ್ಕಳ ಮೇಲಿನ ಪ್ರೀತಿಯ ವಿಷಯದ ಕವನಗಳು ಹೆಚ್ಚಾಗಿ ಈ ವಿಧಾನವನ್ನು ಅಳವಡಿಸಿಕೊಳ್ಳುತ್ತವೆ. ಈ ಕವಿತೆಗಳ ವರ್ಗದಲ್ಲಿ ಕಳೆದುಹೋದ ಸಮಯ, ಕಳೆದುಹೋದ ಜೀವನ, ಕಳೆದುಹೋದ ಸಾಧ್ಯತೆಗಳ ಚಿತ್ರಣಗಳಿರುವಂತಹ ‘ಪ್ರಲಾಪ’ ಕವನಗಳ ಉದಾಹರಣೆಗಳನ್ನು ಸಹ ಸೇರಿಸಿಕೊಳ್ಳಬಹುದು. ಕಳೆದುಹೋಗುತ್ತಿರುವ ಸಮಯದ ಬಗ್ಗೆ ಚಿಂತನೆ ಹಾಗೂ ವೈಯಕ್ತಿಕ ಜೀವನದ ಮೇಲೆ ಸಾಮಾಜಿಕ ಬದಲಾವಣೆಗಳ ಪರಿಣಾಮಗಳಂತಹ ವಿಷಯಗಳ ಬಗೆಗಿನ ‘ಧ್ಯಾನ’ ಕವನಗಳನ್ನು ಕೂಡ ಈ ವರ್ಗದಲ್ಲಿ ಸೇರಿಸಬಹುದು. ಕಾಲಾನುಕ್ರಮಣಿಯಲ್ಲಿ ನಾವು ಸೆರೆಯಾಗಿರುವ ಪ್ರಜ್ಞೆಯನ್ನು ಮೀರಿಸುವ ಸಮಯದ ಮಾಂತ್ರಿಕ ಪ್ರಜ್ಞೆ ಹಾಗೂ ವಾಸ್ತವದ ತರ್ಕವನ್ನು ಮೀರಿಸುವ ‘ಕನಸಿನ’ ತರ್ಕಗಳಿರುವ ‘ಸ್ವಪ್ನ’ ಕವನಗಳನ್ನು ಕೂಡ ಇಲ್ಲಿ ಕಾಣಬಹುದು. ಎಸ್ಟೋನಿಯಾದ ಬಗ್ಗೆಯೂ ಕವನಗಳಿವೆ.”

ನನ್ನ ಕನ್ನಡ ಅನುವಾದದಲ್ಲಿ ಇಲ್ಲಿ ಪ್ರಕಟವಾಗಿರುವ ಯೂರಿ ಟ್ಯಾಲ್ವೆಟ್‌ರ ಏಳೂ ಕವನಗಳನ್ನು ಮೂಲ ಎಸ್ಟೋನಿಯನ್‌-ನಿಂದ ಇಂಗ್ಲಿಷ್‌-ಗೆ ಎಚ್. ಎಲ್. ಹಿಕ್ಸ್-ರವರು (H. L. Hix) ಅನುವಾದಿಸಿದ್ದಾರೆ.

1
ನಿನಗಿಷ್ಟವಾದ ಸಂಕೇತಗಳನ್ನು ನಂಬು
ಮೂಲ: Believe What Signs You Like

ಅಡ್ಡಿಯಿಲ್ಲ, ನಿನ್ನ ಪೂರ್ವಜರು ಬೇರೊಂದು
ಭಾಷೆಯನ್ನಾಡುತ್ತಿದ್ದರೇನಂತೆ,
ಈಗ ಯಾರಿಗೂ ಗೊತ್ತಿರದ ಭಾಷೆ ಅದು.
ಪದಭೂಷಿತ ಗುರಾಣಿ
ಶಾಂತಿಕಾಲದಲ್ಲಿ ಮಾತ್ರ ಕಾಪಾಡಬಲ್ಲುದು.
ಯುದ್ಧಕಾಲದಲ್ಲಿ, ಪ್ರೇಮ ಕಾಲವದು,
ನೀನು ನನ್ನೊಂದಿಗೆ ಮಾತಾಡಿದೆ
ಅತಿ ಪುರಾತನ ಭಾಷೆಯಲಿ,
ನಿನ್ನ ಕಡುಕಪ್ಪು ಕೂದಲಿಗಿಂತಲೂ
ಕಪ್ಪಾದ ಭಾಷೆಯಲಿ,
ನಿನ್ನ ಪೂರ್ವಜರ ಉಗ್ಗು ಮಾತುಗಳಿಗಿಂತಲೂ
ಆಳವಾದ ಭಾಷೆಯಲಿ,
ನಿನ್ನ ಕೆಂದುಟಿಗಳ ರಕ್ತಕ್ಕಿಂತಲೂ
ಜೀವಂತವಾಗಿರುವ ಭಾಷೆಯಲಿ,
ಪದವ ಭಾಗಿಸುವ ಗೆರೆಗಳನ್ನ ನೀ
ವಿರೋಧಿಸುವೆ ನಿನ್ನ ನಾಲಗೆಯಿಂದ,
ನಿರ್ಭೀತಿಯಾಗಿ ನೀನು ನನ್ನ
ನಾಲಗೆಗೆ ಗುಟ್ಟಾಗಿ ಸಾಗಿಸುವೆ
ಹುಲ್ಲಿಗಿಂತಲೂ ಹಸಿರಾದ ರುಚಿಯನ್ನ,
ಕಡಲಿಗಿಂತಲೂ ಕಡಲಂತಾಗಿರುವ ಕಡಲಿನಂತೆ.

2
ಹವಾಮಾನದ ವಿಸ್ಮಯಗಳು
ಮೂಲ: Surprises of Climate

ಇನಾಮಿಗಾಗಿ ಕಾಯುತ್ತ,
ನಾವು ಕ್ಷಯಿಸಿಹೋಗುತ್ತೇವೆ ಮುಪ್ಪಾಗಿ.
ಕುರಿಕಾಯುವುದೇ ಉತ್ತಮವಾಗಿದ್ದೀತೇನೋ,
ಮಳೆ ಬಂದಾಗ ಮರದಡಿಯಲಿ ಆಸರೆ ಪಡೆಯುವುದು
ದೇವರ ಆರ್ಭಟಗಳನ್ನು ಕೇಳುವುದು,
ಶಾಂತವಾಗಿದ್ದಾಗ ಅವನೂ ಒಂದು ಕುರಿಮರಿಯೇ.
ಇಲ್ಲಾ ಕಾಡಿನಲ್ಲಿ ಮರ ಕಡಿಯುವುದು,
ಬೀಳುವ ಮರದ ಲಯಕ್ಕೆ
ದುಡಿಯುವ ದೇಹದ ತಾಳ
ಮೆಲ್ಲಮೆಲ್ಲನೆ ಜೋಡಿಯಾಗುವವರೆಗೂ,
ಒಂದು ಕೊಡಲಿಯ ಹಾಗೆ.
ಕಡೆ ಪಕ್ಷ ಒಂಟಿತನದೊಳಗೆ
ಒಂದು ಬೆಣೆ ಹೊಡೆದಂತಾಗುವುದು.
ಯಾರೂ ಕರ್ನಲ್‌ಗೆ ಪತ್ರ ಬರೆಯುವುದಿಲ್ಲ.
ವೇದಿಕೆಯ ಮೇಲೆ ಆ ಕಪಟಿ
ಕೆರಳಿಸುವನು ತನ್ನ ಕಣ್ಣುಗಳನ್ನು, ಧೂಳನ್ನು.
ಹೊಗಳುವರು ಅವನನ್ನು ಆಕಾಶದೆತ್ತರಕ್ಕೆ,
ಆದರೆ ರಾತ್ರಿಯಲ್ಲಿ ಒಂದೊಂದು ಧೂಳಿನ ಕಣವೂ
ಮತ್ತೆ ತನ್ನ ಜಾಗ ಸೇರುವುದು, ನಿಶ್ಚಲವಾಗುವುದು.
ಆದ್ದರಿಂದ ಅಚಾನಕ್ಕಾಗಿ ಭವಿಷ್ಯದಿಂದ
ಬೆಚ್ಚಗಿನ ಗಾಳಿಯೊಂದು ಬೀಸಿದಾಗ,
ನಾವು ದಿಗ್ಭ್ರಾಂತರಾಗುತ್ತೇವೆ,
ನಮ್ಮ ಅಂಗಿಗಳನ್ನ ಹೇಗೆ ಹಾಯಿಗಳನ್ನಾಗಿ
ಮಾಡಿ ಏರಿಸುವುದೆಂದು ಮರೆತಿರುತ್ತೇವೆ.

3
ನೀ ನನ್ನ ಮುಟ್ಟಿದಾಗ ಎಚ್ಚೆತ್ತೆ ನಾನು
ಮೂಲ: I Woke When You Touched Me

ಮತ್ತೆ ಬಂದಿರುವೆ ಮನೆಗೆ,
ಅದರ ವಿಳಾಸ
ಈಗಲೂ ಅಜ್ಞಾತ.

ಬೆಳಕಿನ ಮೇಜೊಂದು
ಮಾತ್ರ ಇದೆ ನನ್ನೆದುರು.

ಹಸಿರು,
ನಿನ್ನನ್ನು ಬಯಸುವೆ
ಹಸಿರಾಗಿ ನಾನು.

ಮತ್ತೆ ನೀನು ಬಂದೆ,
ಮತ್ತೊಂದು ಜೀವಮಾನದಿಂದ
ಬಂದಂತೆ.

ಮತ್ತೊಂದು,
ಆದರೆ ಮತ್ತೂ ಅದೇ.

ನೆನಪಿನಿಂದ ಕೆಟ್ಟದ್ದನ್ನು ಅಳಿಸುವ
ನದಿಯ ನೀರನ್ನು ಕುಡಿದಿರುವೆ ನಾನು.

ನಿನ್ನ ಹೆಸರ ಮರೆತಿರುವೆ,
ನಿನ್ನನ್ನು ಲಿಂಡಾ ಎಂದು ಕರೆಯುವೆ.

ಸುಂದರ ನಾರಿ,
ಯಾವ ಭಾಷೆಯಲ್ಲೂ
ಬರುವ ನಾರಿಯೆ.

4
ಬೇಸಗೆಯೊಳಗೆ ಕಾಲಿಡುವುದು
ಮೂಲ: Entering Summer

ಬಿಸಿಲ್ಗಾಲದ ಮಳೆಯ ಆಗಮನ ಬಸ್ಸಿನ ಕಿಟಕಿಗಳನ್ನ ಯಥೇಷ್ಟವಾಗಿ
ಕಣ್ಣೀರು ಸುರಿಸುವಂತೆ ಮಾಡಿತು.
ಅಪ್ಪನ ಮನೆಯ ಹುಲ್ಲಂಗಳದ ತುಂಬ ಪುಟ್ಟ ಪುಷ್ಪಗಳು
ಸೊಂಪಾಗಿ ಅರಳಿವೆ,
ಮಾರ್ತಾ-ಲೀಸಾ*ಳ ಸಂತೋಷ ಒಮ್ಮೆಲೆ ಹರಡಿ,
ಮನೆ ತುಂಬಾ ತುಂಬಿದಂತೆ.
ಮುಪ್ಪಾದ ಚೆರಿ ಮರದ ಜೀವಂತ ಉಳಿದಿರುವ ರೆಂಬೆಯೊಂದು
ಹೂಬಿಟ್ಟಿದೆ,
ಆ ರೆಂಬೆಯಲ್ಲಿ ಒಟ್ಟುಗೂಡಿರುವ ಮರದೆಸರು ಮರದ ಲೊಡ್ಡು ಕಾಂಡವನ್ನು
ಮರ ಮರೆಯುವಂತೆ ಮಾಡುತ್ತೆ.

ಮರದ ಮಂಡೆ, ಆ ಮುದಿ ಗುತ್ತಿ – ದ್ರೋಹಿ ಅದು –
ಮೆಲ್ಲಮೆಲ್ಲನೆ ಹಸಿರಿನೊಳಗೆ ಇಳಿಯುತ್ತದೆ,
ಕಾಡುಸೇವಂತಿಗೆಯ ಕಡಲಿನಲ್ಲಿ
ಯುಕ್ತವಾಗಿ ಮುಳುಗಿಹೋಗುತ್ತದೆ.

* ಕವಿ ಯೂರಿ ಟ್ಯಾಲ್ವೆಟ್-ರ ಮಗಳು; ಈಗ ಎಸ್ಟೋನಿಯಾದ ಪ್ರಮುಖ ಸಂಗೀತ ರಚನಾಕಾರರಲ್ಲಿ (music composer) ಒಬ್ಬರು.

5
ಹೂತೋಟದಲ್ಲಿನ ಆ ಹಳದಿಬಣ್ಣದ ಚಿಟ್ಟೆಗಳೋ!
ಮೂಲ: Oh those yellow butterflies in the garden

ಪಾರ್ಣು ನಗರದ ನನ್ನ ಬಾಲ್ಯದ-ಮನೆಯ
ಹೂತೋಟದಲ್ಲಿನ ಆ ಹಳದಿಬಣ್ಣದ ಚಿಟ್ಟೆಗಳೋ!
ಅಲ್ಲಿ ವರುಷದ ಹನ್ನೆರಡು ತಿಂಗಳೂ ಬೇಸಗೆಯೇ.

ಒಂದು ಚಿಟ್ಟೆ ನನ್ನ ಅಂಗೈಯ ಮೇಲೆ
ಬಂದು ಕೂರುತ್ತೆ, ಎಷ್ಟು ಧೈರ್ಯ ಅದಕ್ಕೆ.

ನಾವೆಲ್ಲರೂ ಕುತೂಹಲದಿಂದ ನೋಡಿದೆವು ಅದನ್ನ,
ನಾನು, ನನ್ನಮ್ಮ, ನನ್ನ ಪುಟ್ಟ ಮಗಳು –
ಚುರುಕುನಡೆಯವರು ನಾವೆಲ್ಲರೂ,
ಒಂದೇ ವಯಸ್ಸಿನವರು ನಾವೆಲ್ಲರೂ,

ಒಂದೇ ಮನಸ್ಸಿನಿಂದ ನೋಡುತ್ತಿದ್ದೆವು:
ಏಯ್ ನೋಡು, ಆ ಚಿಟ್ಟೆಗೆ ಸಿಂಹದ ಮುಖವಿದೆ!

6
ಒಂದು ವೇಳೆ ಧೂಳು ಅತೀತಕ್ಕೆ ಮಾತ್ರ ಸೇರಿದ್ದೆಂದಾಗಿದ್ದರೆ
ಮೂಲ: Suppose Dust Belonged Only to the Beyond

ಈ ಸಲದ ಎಸ್ಟೋನಿಯಾದ ವಸಂತಮಾಸದಲ್ಲಿ
ಆಕಾಶ ನೀಲಿಯಾಗಿಯೆ ಇರುತ್ತೆ.
(ನಿರೀಕ್ಷೆಯಾ, ಶಕುನವಾ?)
ಪದಗಳು ಬಾನಂಚನ್ನು ಮುಕ್ತಗೊಳಿಸುತ್ತದೆ,
ಆಮೇಲೆ ಹಠಾತ್ತಾಗಿ ನಾವು ಹಿಂದೆ ಇದ್ದುದಕ್ಕಿಂತ
ಉತ್ತಮರಾಗುತ್ತೇವೆ. ಇದು ಏನೋ ಹೊಸದು:
ನಿನ್ನ ಖಯಾಲಿನ ಗಾಳಿಯಲ್ಲಿ ತೇಲಿ ಹೋಗುತ್ತಿರುವ
ಮಾಸದ ಶವಪೆಟ್ಟಿಗೆಗಳು ಕೆಡುಕಿಗಾಗಿ ಕೆಲಸ ಮಾಡುವುದಿಲ್ಲ
ಎಂದು ಹೇಳಿವೆಯೋ ಎಂಬಂತೆ. ಅಥವಾ ಒಳಿತಿಗಾಗಿಯೂ ಸಹ.
ಆದರೆ ಧೂಳು ಮಾತ್ರ – ಯಾವುದೇ ಧೂಳಿರಬಹುದು –
ಸಜೀವ ದೇಹಕ್ಕಿಂತ ಹೆಚ್ಚಿನ ದುಃಖವನ್ನು
ತನ್ನೊಳಗೆ ಹಿಡಿದುಕೊಂಡಿದೆ.
ಎಂದೇ, ಒಂದು ವಿಚಿತ್ರವಾದ
ಅಸಮತೋಲನವಿದೆ ಇಲ್ಲಿ,
ಜೀವಂತದಲ್ಲಿ,
ಅದು ದುಃಶಕುನ ಮತ್ತು ವಾಗ್ದಾನಗಳ ಜತೆಗೂಡಿ
ಇನ್ನೊಂದನ್ನು ಅನುಕರಣಿಸುತ್ತೆ, ನಿಜವಾದದ್ದನ್ನು,
ಎಸ್ಟೋನಿಯಾದ ವಸಂತಮಾಸದ
ವಿಶಿಷ್ಟವಾದ ನೀಲಾಕಾಶವನ್ನು.

7
ದೈವನಿಂದನೀಯ
ಮೂಲ: Blasphemous

ನೀನೆಂದೂ ಹಿಡಿಯಲಾಗದಂತಹ
ಪೆಡಂಭೂತ ಸ್ವಾತಂತ್ರ್ಯ.
ಅಧಿಕಾರದ ಮಹಾಬೀಗ ಕೂಡ
ಬಂಧಿಸಿಡಲಾಗದಂತಹ
ಪೆಡಂಭೂತ ಸ್ವಾತಂತ್ರ್ಯ.
ರಾಜಗೋಪುರದ ಮೇಲೆ ಏರಿಸಲಾಗಿದೆ ಅದನ್ನು,
ರಾಜಗೋಪುರದ ಮೇಲೆ ಗಾಳಿಯಲ್ಲಿ
ಹಾರಾಡುತಿದೆ ಸ್ವಾತಂತ್ರ್ಯದ ಬಾಲ.