ಇವತ್ತು ಆಡಿಟರು ಮೊಬೈಲಿಗೆ ಕರೆದು- ಯಾವುದಕ್ಕೂ ಮೂರ್‍ನಾಕು ಚಿಲ್ಲರೆ ಇಟ್ಟುಕೊಂಡಿರಿ, ಆಲ್‍ಮೋಸ್ಟ್ ಎಲ್ಲ ಆಗಿದೆ… ಹದಿನೈದರ ಹೊತ್ತಿಗೆ ಫೈಲು ಮಾಡಿಬಿಡೋಣ ಅಂದರು. ಇಳಿಸಂಜೆ… ಕುಳಿತಲ್ಲೇ (ಹೌ)ಹಾರಿದ್ದೆ. ಅವರು ಮೂರರಿಂದ ನಾಲ್ಕು ಅನ್ನುವುದನ್ನು ಯಾವುದೇ ಏರಿಳಿತವಿರದ ಸಹಜ ಸ್ಥಾಯಿಯಲ್ಲಿ ಹೇಳಿದ್ದರು. ಐ ಡೋಂಟ್ ಕೀಇನ್ ಎಮೋಷನ್ಸ್ ಇನ್‍ಟು ಎನಿ ಮನಿ ಟಾಕ್!! -ಇದು ಅವರ ಪಂಚ್‍ಲೈನು. ಅದನ್ನೇ ಪಂಚಿರದೆ ಆಗಾಗ್ಗೆ ಪ್ರಹರಿಸುತ್ತಾರೆ ಅಷ್ಟೆ! ‘ಏನು ಹೇಳುತಿದ್ದೀರಿ, ಕುಮಾರ್…? ಪೂರ್ತಿ ಚೆಕ್ ಆಗಿದೆಯಾ?’ ಏರಿದ ಬೀಪೀತಾಪವನ್ನೆಲ್ಲ ಮಾತಿನಲ್ಲಿ ಮಾಪಿಸಿದ್ದೆ. ಹಂಡ್ರೆಡ್ ಪರ್ಸೆಂಟ್.. ನೀವು ನಿಮ್ಮ ಹೋಮ್‍ವರ್ಕ್ ಸುರು ಮಾಡಿ ಅಷ್ಟೆ-ಅಂತ ಫೋನಿಟ್ಟರು. ಎಲ್ಲೋ ಎಡವಟ್ಟಾಗಿರಬೇಕು. ಮೂವತ್ತೂ ನಲವತ್ತು ಅನ್ನುವುದನ್ನು ಮೂರೋ ನಾಲ್ಕೋ ಅಂದುಬಿಟ್ಟರೋ ಹೇಗೆ -ಅಂತ ಮತ್ತೆ ಫೋನು ಹಚ್ಚಿದೆ. ‘ಐ ಮೀನ್ ಥ್ರೀ ಟು ಫೋರ್ ಲ್ಯಾಕ್ಸ್’ ಅಂತ ಖಾತ್ರಿಯಿಂದ ಹೇಳಿ, ನಾನು ತನಿಖೆ ತುರುಕಿದೆನೆಂದು ‘ಡೆಫಿನೆಟ್‍ಲಿ ಸೋ ಮಚ್’ ಅಂತ ಪುಷ್ಠೀಕರಿಸಿ ಯಾವತ್ತಿನಷ್ಟೇ ನಿರಾಳವಾಗಿ ಫೋನು ಕಡಿದರು. ತಲೆಗೆ ಕೈಯಿಟ್ಟು ಕುಳಿತೆ. ತಿಂಗಳೊಪ್ಪತ್ತಿಗೆ ಮೂರು ನಾಲ್ಕು ಲಕ್ಷ ಹೊಂಚುವುದು ಅಂದರೇನು? … ಮತ್ತು ಹೇಗೆ? ಸುತರಾಂ ಹೊಳೆಯಲಿಲ್ಲ.
ಡಿಸೈನು, ಒಂದಷ್ಟು ಪದ್ಯ, ಕತೆಗಿತೆ ಹೊಳೆಯುವಷ್ಟು ಸಲೀಸಾಗಿ ಹಾಳಾದ್ದು- ಈ ಆಯವ್ಯಯಗಳ ವ್ಯವಹಾರ ನನಗೆ ಎಟುಕುವುದೇ ಇಲ್ಲ. ಇವುಗಳ ಕಟ್ಟಾ ಲೆಕ್ಕಾಚಾರಕ್ಕೆ ತೊಡಗಿದರೆ ವಿನ್ಯಾಸವೆಂಬ ಒಂದು ನಿಸ್ಸೀಮ ಟ್ರಾನ್ಸಿಗೆ ಧಕ್ಕೆಯಾದೀತು. ಪದ್ಯ ಕೊಡುವ ಅಪ್ಪಟ ಆರ್ಗ್ಯಾಸಮಿಗೆ ಘಾಸಿಯಾದೀತು. ಒಟ್ಟಿನಲ್ಲಿ ಇದು ಇವಕ್ಕೆಲ್ಲ ಹೇಳಿ ಮಾಡಿಸಿದ ತಲೆಯಲ್ಲ. ಹಾಗಂತ ತಪ್ಪು ನನ್ನದಲ್ಲವಲ್ಲ! ಹೀಗೆಂತಲೇ ಸದ್ಯಕ್ಕೆ ಲ್ಯಾಪ್‍ಟಾಪ್‍ನಲ್ಲಿ ಕುಟ್ಟುತ್ತ ಕೂತಿದ್ದೇನೆ. ಈ ನಡುವೆ ಆಡಿಟರಿಗೆ ಮತ್ತೊಮ್ಮೆ ಫೋನು ಹಚ್ಚಿ ಗೋಗರೆಯಬಾರದೇಕೆ ಅನಿಸಿತ್ತು. ಆದದ್ದಾಗಲಿ… ಸುಂಕದವನ ಮುಂದೆ ಸುಖ ದುಃಖ ಹೇಳಿಕೊಳ್ಳೋದೇ ಅಂತ ಸುಮ್ಮನೆ ಹೇಳೀಕೇಳೀ ಹೇಳಿರುವುದೆ? ಆದ್ದರಿಂದಲೇ ಈ ಲೇವಾದೇವಿಯ ಚಿಂತೆ ನಾಳೆ ಬೆಳಗಿನವರೆಗೆ ರದ್ದಾಗಿದೆ. ಅದೇನೇ ಇರಲಿ… ಮತ್ತೆ ನೀವೇನೇ ಅನ್ನಿ- ನನ್ನ ಮಟ್ಟಿಗೆ ಈ ಸರಕಾರ, ಅದರ ಕಾರುಬಾರು, ಈ ಕರಭಾರ… ಇತ್ಯಾದಿಗಳೆಂದರೆ ಅಷ್ಟಕ್ಕಷ್ಟೆ. ನಮ್ಮನ್ನು ಯಾರೋ ಆಡಳಿಸುತ್ತಿರುವುದು, ನಾವು ಆಳಿಸಿಕೊಳ್ಳುತ್ತಿರುವುದು- ನಡುವೊಂದು ಆಳ್ವಿಕೆಯೆಂಬ (ಅ)ವ್ಯವಸ್ಥೆ ಇವೆಲ್ಲ ಏಕ್‍ದಮ್ ರೇಜಿಗೆ ಹುಟ್ಟಿಸುತ್ತದೆ. ಅಸಂಗತವೆನಿಸುತ್ತವೆ. ನಾವು ಇದ್ದೇವೆಂದು ದುಡಿಮೆ, ದುಡಿದೇವೆಂದು ಮಜೂರಿ, ಗಳಿಸಿದೇವೆಂದು ಬರುವ ಇನ್‍ಕಮ್ಮಿಗೆಂದು, ಮಾಡಿದ ಆಸ್ತಿಪಾಸ್ತಿಗೆಂದು, ಸುಮ್ಮನೆ ಮನೆ ಕಟ್ಟಿದ್ದೇವೆಂದು, ನೀರು ಬಳಸಿದ್ದೇವೆಂದು, ಅಲ್ಲದೆ ಕೊಂಡೆವೆಂದು ಮಾರಿದೆವೆಂದು -ಈ ಎಲ್ಲವುಗಳ ನಡುವೆ ಮೇಲೊಂದು ತೆರಿಗೆ. ಮತ್ತು ತೆರಿಗೆ ಭರಿಸಲಿಕ್ಕೆ ಹೆಣಗಾಟ. ಆಗೆಲ್ಲ ಇರುವುದೇ ಇರದ ಹಾಗೆ ಇರಲು ಆಗಿದ್ದಿದ್ದರೆ… ಅಂತೊಂದು ಆಲೋಚನೆ ಇಣಿಕುತ್ತದೆ. ಇರುವೆಗಳ ಹಾಗೆ. ಹಕ್ಕಿಗಳ ಹಾಗೆ. ಅಲೆಮಾರಿಗಳ ಹಾಗೆ ಅಂಡಲೆದುಕೊಂಡು. ಎಲ್ಲೂ ನೆಲೆಯೂರದೆ. ಈ ಸ್ವಂತ ಉದ್ದಿಮೆಯೆಂಬ ಸಾಮ್ರಾಜ್ಯವನ್ನು ಕಟ್ಟದೆ, ಕಟ್ಟಿ ಅಭಿಷಿಕ್ತಗೊಳ್ಳದೆ… ಸುಮ್ಮನೆ ನನ್ನಷ್ಟಕ್ಕೆ ನಾನೇ.
ಇರುವುದೇ ಇರದ ಹಾಗೆ ಇದ್ದುಬಿಡುವುದು ಹೇಗೆ? ಛೆ ಛೇ! ಹಾಗಿರುವುದೆಲ್ಲಿ ಬಂತು! ಎಷ್ಟಾದರೂ ಹಾಳು ಮನುಷ್ಯಜನ್ಮ. ಇರುವುದೇ ಹಾನಿಗೆ. ನೆಲ ಮತ್ತು ಆಕಾಶಗಳ ನಡುವೆ ಇದ್ದು ಇರುವಷ್ಟೂ ದಿವಸ ಎರಡನ್ನೂ ಕುಲಗೆಡಿಸುವುದೇ ಜಾಯಮಾನ. ಸೋಜಿಗವೆಂದರೆ ನೋಡಿ- ಅದು ತನಗನಿಸಿದ್ದೆಲ್ಲ ಆಗಿಬಿಡುತ್ತದೆ. ಎಣಿಸಿದ್ದೆಲ್ಲ ಆಗಿಸಿಕೊಳ್ಳುತ್ತದೆ. ಅನಿಸಿದ ಕೂಡಲೆ ಜಿಂಕೆಯಾಗಿ ಚಂಗೆಂದ ಮಾರೀಚನ ಹಾಗೆ. ತೇಲಲಿಕ್ಕೆ ನಾವೆ. ಹಾರಲಿಕ್ಕೆ ನೌಕೆ. ಹೀಗೆ ಏನೆಂದರೆ ಅದು. ಆಕಾಶಕ್ಕೆ ಏಣಿಯೆಂದರೆ ಅದನ್ನೂ. ಇಲ್ಲದಿದ್ದರೆ ಅಷ್ಟೆತ್ತರಕ್ಕೆ ನಿಮಿಷದಲ್ಲಿ ಏರಿಸಬಲ್ಲ ಎಲಿವೇಟರು… ಹೀಗೆ ಆಗಾಗ ಅನಿಸುತ್ತದೆ- ಪ್ರತಿಸರ್ತಿ ಅವರಿವರ ಇರವುಗಳಿಗೆ ಗೆರೆ ಬರೆದು ಮನೆ ಮಾಡಿಕೊಡುವಾಗ. ಮನುಷ್ಯನ ಪ್ರತಿಯೊಂದು ಕೃತ್ಯವೂ, ಕರ್ಮಕಾಂಡವೂ ನೆಲದ, ಮತ್ತದರಿಂದ ಬಗೆದು ತೆಗೆದ ವಸ್ತುವಿನಿಂದ ಆಕಾರಗಳನ್ನು ಪಡೆಯುತ್ತದೆ. ನಿಲ್ಲಲಿಕ್ಕೆ, ಕೂರಲಿಕ್ಕೆ, ನಡೆಯಲಿಕ್ಕೆ, ಓಡಲಿಕ್ಕೆ, ಆಡಲಿಕ್ಕೆ- ನೆಲವನ್ನೇ ಒತ್ತೆಯಿಟ್ಟು ಮಾಡಿದ ಸವಲತ್ತುಗಳಿವೆ. ಕುಳಿತರೆ ಕುರ್ಚಿ, ನಡೆದರೆ ಮೆಟ್ಟು, ಉಂಡರೆ ತಟ್ಟೆ, ಕುಡಿದರೆ ಲೋಟ… ಹೀಗೆ. ಸ್ವಚ್ಛಂದದ ಕೇಳಿಗೆ ಕಾಂಡೋಮು, ಫೀಮೋಡೋಮು ಇನ್ನಿತರೆಗಳು! ಈ ನಡುವೆ ಇವೆಲ್ಲವೂ ಬಾಳಿಕೆ ಬರಬೇಕು ಎನ್ನುವ ತಗಾದೆಯಂತೂ ಎಂದಿಗೂ ಇದ್ದಿದ್ದೆ. ಮನೆ ಕಟ್ಟಿದರೆ ಅದು ತನ್ನ ಜೀವಿತವನ್ನು ಮೀರಿ ಮಿಕ್ಕುಬಿಡಬೇಕೆಂಬ ‘ಚಿರಂತನ’ದ ವಾಂಛೆ. ಹೆಂಚಿನಿಂದ ತಾರಸಿ, ಷೀಟಿನಿಂದ ಮೌಲ್ಡೆನ್ನುತ್ತ ಸೂರಿಗೊಂದು ಮುಂಬಡ್ತಿಯನ್ನು ಕನಸುತ್ತಲೇ ಬದುಕು ನೀಗುವ ತುಡಿತ. ಹಾಗೆ ಮೌಲ್ಡು ಅಂತೊಂದಾದರೆ ಮತ್ತೊಂದು. ಅದೂ ಆದರೆ ಇನ್ನೂ ಒಂದು. ಒಟ್ಟಾರೆ ಇರುವವರೆಗೂ ‘ವಸ್ತು’ವಿಶೇಷಗಳ ಬಡ್ತಿ ಬದುಕಿಗೆ. ಇಷ್ಟೆಲ್ಲವನ್ನು ಕಲೆ ಹಾಕಿ, ವಾರಸಿಕೆಯನ್ನು ಮೆರೆದು, ಉಯಿಲು ಬರೆದು ತಲೆಮಾರುಗಳಲ್ಲಿ ಹೊರೆಸಿ ಹೊರೆದುಕೊಳ್ಳುತ್ತಿರುವಾಗ- ಇರುವುದೇ ಇರದ ಹಾಗೆ ಇರುವುದು ಅಂದರೆ ಹೇಗೆ?
ಇಲ್ಲಿ ಮಹಾನಗರಿಯಲ್ಲಿ ನೆಲೆಯೂರಿದ ಒಬ್ಬೊಬ್ಬನೂ ಉದ್ಧಾರವಾಗಿದ್ದಾನೆ. ದಿನೇದಿನೇ ಸುಧಾರಿಸಿಬಿಡುತ್ತಾನೆ. ಇಂತಹ ಸುಧಾರಣೆಗೆ ಇಲ್ಲಿ ನೂರೆಂಟು ದಾರಿಗಳಿವೆ. ದುಡಿಮೆಯ ದಾಖಲಿದ್ದರೆ ಮುಗಿಬಿದ್ದು ಸಾಲ ಕೊಡುವವರಿದ್ದಾರೆ. ಇಷ್ಟಕ್ಕೂ ಖರ್ಚಿಗೂ ಅಷ್ಟೇ ದಾರಿಗಳಿವೆ. ಅವಶ್ಯಕತೆಯಿದ್ದರೆ ಪೂರೈಸಿಕೊಳ್ಳುವ ದಾರಿ ದುರ್ಗಮವೇನಿಲ್ಲ. ಅರ್ಜಿಯ ಚೌಕಳಿ ಮನೆಗಳಲ್ಲಿ ನಿಮ್ಮ ವಿವರಗಳನ್ನು ಹೆಸರು, ವಿಳಾಸ, ಲಿಂಗ, ತೇದಿಗಳ ಸಮೇತ ಕಾಗುಣಿತವನ್ನು ಬಿಡಿ ಬಿಡಿ ಬಿಡಿಸಿ ತುಂಬಿಕೊಳ್ಳುವವರಿದ್ದಾರೆ. ನಿಮ್ಮದೆಂದು ಒಂದಿಪ್ಪತ್ತು ಮೂವತ್ತು ರುಜುಗಳಾದರೆ ಅಷ್ಟು ಸಾಕು. ಜತೆಗೆ ಕಂತು ತುಂಬಿಸಲಿಕ್ಕೊಂದಿಷ್ಟು ತಿಂಗಳ ಎಣಿಕೆಯಿದ್ದರೆ ಸಾಕು. ಎಲ್ಲ ಸರಳ, ಸುಲಭ ಮತ್ತು ಸುಲಲಿತ. ಇನ್ನೂ ಅರ್ಧವೇ ತೀರಿರಲಿಕ್ಕಿಲ್ಲ- ಸಾಲದ ಮೇಲೊಂದು ಸಾಲದ ನಿವೇದನೆಯಾಗುತ್ತದೆ. ಒಪ್ಪಿದಿರೋ ನಿಮ್ಮ ಜಾತಕವನ್ನು ಕಂಪ್ಯೂಟರಿನ ತೆರೆಯಲ್ಲಿ ತೆರೆದಿಟ್ಟುಕೊಂಡಿರುವ ಲಲನೆಯರು ಆಗಾಗ್ಗೆ ಕರೆದು ನಿವೇದಿಸುತ್ತಲೇ ಇರುತ್ತಾರೆ. ಒಟ್ಟಿನಲ್ಲಿ ನಿಮ್ಮ ಅಂಕಿಅಂಶಗಳೆಲ್ಲ ಅವರಿವರ ಸರ್ವರುಗಳಲ್ಲಿ ಭದ್ರವಿರುತ್ತವೆ. ನಿಮ್ಮ ಗುರುತಿಗೆ ಮನೆಯ ಡೋರ್‍ಅಂಕಿಗಿಂತಲೂ ಮಿಗಿಲಾದ ಪುರಾವೆಗಳನ್ನು ತೋರುವ ಅಂಕಿಗಳು ನಿಮ್ಮೊಟ್ಟಿಗಿವೆ. ಕೋಡು ಸೇರಿ ಹತ್ತು ಎಣಿಕೆಗಳ ದೂರವಾಣಿ ನಿಮ್ಮ ಹೆಸರಿನಲ್ಲಿದೆ. ಅಷ್ಟೇ ಡಿಜಿಟುಗಳ ಇನ್ನೊಂದು ಸದಾ ನಿಮ್ಮ ಕೈಯಲ್ಲಿದೆ. ಹದಿನಾರಂಕಿಗಳ ನಾಲ್ಕೈದು ಕಾರ್ಡುಗಳು ಕಿಸೆಯಲ್ಲಿವೆ. ಮತ್ತಷ್ಟು ಅಂಕಿಗಳ ನಂಬರುಗಳು ಬ್ಯಾಂಕಿನಲ್ಲಿವೆ. ಇಷ್ಟೆಲ್ಲ ಇರುವುದರಿಂದಲೇ ದೇಶದ ದಾಕ್ಷಿಣ್ಯಕ್ಕೆ ತೆರಿಗೆ ಭರಿಸಲಿಕ್ಕೆಂದು ಇನ್ನೊಂದು ನಂಬರಿದೆ. ಖಂಡಾಂತರದ ವಹಿವಾಟಿಗೆಂದು ಘನಸರಕಾರ ನಿಮ್ಮ ಗುರುತು ನೋಂದಾಯಿಸಿ ಮತ್ತೊಂದು ನಂಬರು ಕೊಟ್ಟಿದೆ. ಅಲ್ಲದೆ ವಿಮೆಗಳಿವೆ. ಒಂದೊಂದಕ್ಕೂ ಅಂಕಿಗಳಿವೆ. ನೀವು ಅವುಗಳ ಸಮಾ ಸುಧಾರಿಸಿದ್ದೀರಿ. ಹೀಗೆ ಅಂಕಿಗಳಿರುವುದರಿಂದಲೇ ನೀವು ಚೆನ್ನಿದ್ದೀರಿ. ಇನ್ನೂ ಚೆನ್ನಾಗಬೇಕೆಂದು ಇನ್ವೆಸ್ಟ್‍ಮೆಂಟುಗಳನ್ನು ಯೋಜಿಸುತ್ತೀರಿ. ಅಂಕಿಗಳನ್ನು ಜೋಡಿಸುತ್ತೀರಿ. ಇಷ್ಟೆಲ್ಲ ಅಂಕಿಅಂಶವಿಟ್ಟುಕೊಂಡು- ಇರುವುದೇ ಇರದ ಹಾಗೆ ಇರುವುದು ಅಂದರೆ…
ಹೌದು. ಹಾಗೆ ಇರುವುದೇ ಇರದ ಇದ್ದುಕೊಳ್ಳಲಿಕ್ಕೆ ಇಲ್ಲಿನ ಈ ಅಂಕಿಅಂಶಗಳನ್ನೆಲ್ಲ ನೀಗಿಕೊಳ್ಳಬೇಕು. ಸಾಲಸೋಲಗಳು ತೀರಿಕೊಳ್ಳಬೇಕು. ಎಷ್ಟೆಲ್ಲ ಖಾತೆಗಳು ಮುಚ್ಚಿಕೊಳ್ಳಬೇಕು…. ಮತ್ತು ಇಷ್ಟೆಲ್ಲ ಆಗಲಿಕ್ಕೆ ದುಡಿಮೆ ಗಟ್ಟಿಯಿರಬೇಕು. ಇನ್ನೂ ಎಷ್ಟು ಕಾಲ? ಎಲ್ಲ ನೀಗಿಕೊಳ್ಳುವವರೆಗೆ… ಹಾಗಾದರೆ ಇವೆಲ್ಲ ನೀಗುವುದು ಎಂದು?
ಆಡಿಟರು ಹೇಳುತ್ತಾರೆ- ಹಣ ಹಣವನ್ನು ಹುಟ್ಟಿಸುತ್ತದೆ. ವೆಲ್ತ್ ಶಲ್ ಜೆನರೇಟ್ ವೆಲ್ತ್. ಬಂಡವಾಳ ಚೆನ್ನಿದ್ದರೆ, ಮಾರಲು ಚಾಲಾಕಿದ್ದರೆ ವ್ಯಾಪಾರ ಚಂದ ಕುದುರುತ್ತದೆ. ಹಣ ಬಿತ್ತಿ ಹಣದ ಫಸಲಾಗುತ್ತದೆ. ಆದರೆ ಹಣ ಬಂದಿತೆಂದು ಹಣ ತೆರುತ್ತೇವೆ. ತೆರಲಿಕ್ಕೆ ಇನ್ನಷ್ಟು ಸಾಲ ತರುತ್ತೇವೆ. ತೆರಿಗೆ ತಗ್ಗಿಸಲಿಕ್ಕೆ ಅಲ್ಲಲ್ಲಿ ಇನ್ನಷ್ಟು ಹೂಡುವ ಉಪಾಯಗಳನ್ನು ಅವರು ಹೇಳುತ್ತಾರೆ. ಮತ್ತಷ್ಟು ಅಂಕಿಗಳನ್ನು ಹೇರುತ್ತಾರೆ. ಇಲ್ಲಿ ಇರುತ್ತಲೇ ‘ಗಟ್ಟಿ’ ಇರುವುದರ ಬಗ್ಗೆ ತಲೆ ಕೆಡಿಸಿ, ಒತ್ತೆಯಿರಿಸಿ ನಿಮ್ಮನ್ನು ಅಂಕಿಅಂಶಗಳ ಜತೆಗೇ ಊರಿಬಿಡುತ್ತಾರೆ. ಬೆಳಿಗ್ಗೆ ಅವರನ್ನು ಕರೆದು ಯಾವುದಕ್ಕೂ ಕೇಳುತ್ತೇನೆ- ಇರುವುದೇ ಇರದ ಹಾಗೆ ಇರಬೇಕು. ಹೇಗೆಂದು ಹೇಳುತ್ತೀರಾ, ಪ್ಲೀಸ್….? ಹಾಗೆ ಹೇಳಿದಾಗ ಅವರ ಮೋರೆ ಏನು ತುಡಿಯಬಹುದೆಂದು ಊಹಿಸಿಕೊಂಡು ಈಗ ನಗೆ ಬರುತ್ತಿದೆ… ನನ್ನ ಕುರಿತು ನನಗೇ! ಇಲ್ಲಿ ಮಹಾನಗರದಲ್ಲಿರುವ ನಿಮ್ಮನ್ನು ಕುರಿತೂ!!
ಕವಿ, ಆರ್ಕಿಟೆಕ್ಟ್ ಮತ್ತು ಕಥೆಗಾರ. ೨೦೦೨ರಲ್ಲಿ ದೇಶದ ಹತ್ತು ಪ್ರತಿಭಾನ್ವಿತ ಯುವ ವಿನ್ಯಾಸಕಾರರಾಗಿ ಆಯ್ಕೆಗೊಂಡವರಲ್ಲಿ ಇವರೂ ಒಬ್ಬರು.