ಅಡಚಣೆ

ಕಡಲಿನ ಗೊತ್ತಿರುವ ಈ ಬದಿ ನಿಂತು
ಅಗಾಧ ದೂರದ
ಆಕಾಶದಂಚನ್ನು ನಿನ್ನೊಟ್ಟಿಗೆ ಕನಸುತ್ತಿದ್ದೆ.
ಸವೆಯುತ್ತಿತ್ತು ಹಗಲು.

ನೀರು ಮತ್ತು ಆಕಾಶ ಒಂದಕ್ಕೊಂದು
ಬೆಸೆದುಕೊಳ್ಳುವವರೆಗೆ-
ತುದಿ ಅಂತಿದ್ದಿದ್ದರೆ ಅಗೋ ಅಲ್ಲಿಯವರೆಗೆ
ಬೆಳಕೋ ಬೆಳಕು. ಆಗ ಸಂಜೆಗೆ ಚಿನ್ನದ ರೇಕು.

ತೆಕ್ಕೆಗೆ ತೆಕ್ಕೆ, ಅಗಣಿತ ಮುತ್ತು
ಗಳ ನಡುವೆ- ಕಡಲಿಗೆ ಬದಿಯೆಂಬುದಿದ್ದರೆ
ಅದು ನೆಲವೇ ಇದ್ದೀತು, ಆಕಾಶವಲ್ಲ
ಎಂದು ತಿದ್ದಿದೆ ನೀನು.

ನಿನ್ನೊಳಗೆ ಕದಡಿಕೊಂಡಿರುವ ನನಗೆ
ನಿನ್ನ ವಸ್ತುನಿಷ್ಠ ನಿಷ್ಠುರಗಳೇ
ಅಡಚಣೆ ಯಾವತ್ತಿಗೂ

(ರೇಖಾಚಿತ್ರ: ರೂಪಶ್ರೀ ಕಲ್ಲಿಗನೂರು)