ಮಾತಿನ ನಡುವೆ ವಿಮಲಕ್ಕ ಅಜ್ಜಿಯ ಬಳಿ “ಸರಸು, ಮಕ್ಕನೂ ಅವ್ರಿದ್ದೇ ಪ್ರಪಂಚದಲ್ಲಿ ಮುಳ್ಗಿದ್ದೋ. ಯಾರಿಗೂ ನಾನು ಬೇಡಾಗೋಯ್ದೆ ಅನ್ನಿಸ್ತು. ಬೇರೆಯವ್ಕೆ ನಾ ಇಷ್ಟ ಇದ್ನೋ ಇಲ್ಯೋ ಗೊತ್ತಿಲ್ಯೆ. ನಾ ಮೊದ್ಲಿಂದ್ಲೂ ಆ ದೇವ್ರಿಗೆ ಮಾತ್ರ ಪ್ರೀತಿ. ಅವಂಗೆ ನನ್ನ ಮೇಲೆ ರಾಶಿ ಮುತವರ್ಜಿ ಕಾಣ್ತು. ಅದ್ಕೇ ಯನ್ನ ಕಷ್ಟಕ್ಕೆ ಕೊನೆನೇ ಇಲ್ಲೆ ನೋಡು… ಇದೇ ನನ್ನ ಭಾಗ್ಯ ಅಂದ್ಕತ್ತಿ ಬಿಡು… ಎಲ್ಲ ನನ್ನ ಹಣೆಬಹರ, ಕರ್ಮ” ಎಂದು ಕಣ್ಣೀರಾಗಿದ್ದಳು. ನನಗೆ ಆಗ ಅರ್ಥವೇ ಆಗಿರಲಿಲ್ಲ. ಆದರೆ ಆ ಮಾತು ಮಾತ್ರ ಅದು ಹೇಗೋ ನನ್ನೊಳಗೆ ಇಳಿದು ಬಿಟ್ಟಿತ್ತು.
ತೇಜಸ್ವಿನಿ ಹೆಗಡೆ ಬರಹ ನಿಮ್ಮ ಓದಿಗೆ
ನನ್ನ ಅಜ್ಜಿಮನೆ ಅಂದರೆ ಅಮ್ಮನ ತವರು ಮನೆ ಇರುವುದು ಹೊನ್ನಾವರ, ಕುಮ್ಟೆಯ ನಡುವಿನ ಪುಟ್ಟ ಹಳ್ಳಿಯಲ್ಲಿ. ಬಾಲ್ಯದಲ್ಲಿ ನಮ್ಮ ಕಡು ಬೇಸಿಗೆ ರಜೆಗಳು ತಂಪಾಗುತ್ತಿದ್ದುದು ಅಲ್ಲಿಯೇ. ಊರುಕೇರಿಯವರೇ ಆಗಿದ್ದ ಅಜ್ಜಿಯ ಗೆಳತಿಯೋರ್ವರು ಆಗಾಗ ಅಲ್ಲಿಗೆ ಬರುತ್ತಿದ್ದರು. ಅವರ ಹೆಸರು ವಿಮಲ. ಅಮ್ಮ, ಚಿಕ್ಕಮ್ಮಂದಿರೆಲ್ಲ ಆಕೆಯನ್ನು ವಿಮಲಕ್ಕ ಎಂದೇ ಕರೆಯುತ್ತಿದ್ದರಿಂದ ನಾವೂ ಹಾಗೇ ಕರೆಯುತ್ತಿದ್ದೆವು. ಎಳವೆಯಲ್ಲೇ ವಿಧವೆಯಾಗಿ, ಆಗಿನ ಕಾಲದ ಕಂದಾಚಾರಕ್ಕೆ ಕಟ್ಟುಬಿದ್ದು ಕೇಶಮುಂಡನ ಮಾಡಿಕೊಂಡು ತಲೆಗೆ ಸೀರೆ ಸೆರಗು ಹೊದ್ದು ತಿರುಗುತ್ತಿದ್ದರು. ಉಡುತ್ತಿದ್ದುದು ಬಿಳಿ ಅಥವಾ ತಿಳಿ ಹಳದಿ ಬಣ್ಣಾದ ವಾಯಲ್ ಸೀರಿಗಳನ್ನಷ್ಟೇ. ಒಟ್ಟುಕುಟುಂಬದ ವ್ಯಂಗ್ಯ, ದೂಷಣೆ, ಭೇದನೀತಿ – ಇವೆಲ್ಲವುಗಳ ನಡುವೆಯೇ ನೋಯುತ್ತ, ಬೇಯುತ್ತ ತಮ್ಮ ಮಕ್ಕಳನ್ನು ಸಾಕಿ ದೊಡ್ಡವರನ್ನಾಗಿಸಿದ್ದರು. ಆಗಾಗ ಬಂದು ಅಜ್ಜಿಮನೆಯ ಹಿತ್ತಲಿನ ಚಿಕ್ಕುಹಣ್ಣಿನ ಮರದ ಕಟ್ಟೆಯಲ್ಲಿ ಕುಳಿತು ತುಸು ಹೊತ್ತು ನನ್ನ ಅಜ್ಜಿಯೊಂದಿಗೆ ದುಃಖ ತೋಡಿಕೊಂಡು ಕಣ್ಣೊರೆಸಿಕೊಳ್ಳುತ್ತಿದ್ದ ಆ ದಿನಗಳ ದೃಶ್ಯ ನನ್ನ ಮನದೊಳಗೆ ಅಚ್ಚಳಿಯದಂತೇ ಉಳಿದು ಬಿಟ್ಟಿದೆ!
ಅದೊಂದು ದಿವಸ ಮುಸ್ಸಂಜೆಯ ಹೊತ್ತು, ನಾನೂ ಅದೇ ಕಟ್ಟೆಯ ಮೇಲೆ ಕುಳಿತು ಮಂಡಕ್ಕಿಯನ್ನೋ ಬಿಸ್ಕತ್ತನ್ನೋ ಮೆಲ್ಲುತ್ತಿದ್ದೆ. ಚಿಕ್ಕವಳಾಗಿದ್ದ ನಾನು ಅವರಿಬ್ಬರ ಸಂವಹನಕ್ಕೆ ಬಹುಶಃ ತಡೆಯಾಗಿರಲಿಲ್ಲ. ಯಾರಿಗೂ ಏನನ್ನೂ ಹೇಳಿಕೊಡುವ ಅಥವಾ ಅವರ ಮಾತುಗಳನ್ನು ಅರ್ಥ ಮಾಡಿಕೊಳ್ಳುವ ವಯಸ್ಸು ನನ್ನದಾಗಿರಲಿಲ್ಲವೆನ್ನಿ. ಮಾತಿನ ನಡುವೆ ವಿಮಲಕ್ಕ ಅಜ್ಜಿಯ ಬಳಿ “ಸರಸು, ಮಕ್ಕನೂ ಅವ್ರಿದ್ದೇ ಪ್ರಪಂಚದಲ್ಲಿ ಮುಳ್ಗಿದ್ದೋ. ಯಾರಿಗೂ ನಾನು ಬೇಡಾಗೋಯ್ದೆ ಅನ್ನಿಸ್ತು. ಬೇರೆಯವ್ಕೆ ನಾ ಇಷ್ಟ ಇದ್ನೋ ಇಲ್ಯೋ ಗೊತ್ತಿಲ್ಯೆ. ನಾ ಮೊದ್ಲಿಂದ್ಲೂ ಆ ದೇವ್ರಿಗೆ ಮಾತ್ರ ಪ್ರೀತಿ. ಅವಂಗೆ ನನ್ನ ಮೇಲೆ ರಾಶಿ ಮುತವರ್ಜಿ ಕಾಣ್ತು. ಅದ್ಕೇ ಯನ್ನ ಕಷ್ಟಕ್ಕೆ ಕೊನೆನೇ ಇಲ್ಲೆ ನೋಡು… ಇದೇ ನನ್ನ ಭಾಗ್ಯ ಅಂದ್ಕತ್ತಿ ಬಿಡು… ಎಲ್ಲ ನನ್ನ ಹಣೆಬಹರ, ಕರ್ಮ” ಎಂದು ಕಣ್ಣೀರಾಗಿದ್ದಳು. ನನಗೆ ಆಗ ಅರ್ಥವೇ ಆಗಿರಲಿಲ್ಲ. ಆದರೆ ಆ ಮಾತು ಮಾತ್ರ ಅದು ಹೇಗೋ ನನ್ನೊಳಗೆ ಇಳಿದು ಬಿಟ್ಟಿತ್ತು. ‘ಅಲ್ಲಾ, ದೇವ್ರಿಗೆ ಪ್ರೀತಿ ಹೇಳಾದ್ರೆ ಖುಶಿ ಪಡವು. ದೇವ್ರಿಗೇ ಇಷ್ಟ ಆಗೋದ್ರೆ ಎಲ್ಲ ಕಷ್ಟ ನೀಗೋಗ್ತು ಹೇಳ್ತಿರ್ತ ಅಪ್ಪ… ಕೃಷ್ಣನ ಕತೆಯಲ್ಲೆಲ್ಲ ಅದೇ ಬತ್ತಲಿ’ ಎಂದು ನನ್ನ ಹತ್ತುವರ್ಷದ ಹರೆಯದ ಮನಸ್ಸು ಪ್ರಶ್ನಿಸಿತ್ತು. ಶಿವನಿಗೆ ಒತ್ತಾಯಿಸಿ ಹಾಲು ಕುಡಿಸಿದ ‘ಕೊಡವರ ಕೂಸು’ ಎಂಬ ಜಾನಪದ ಕಥೆ ಬೇರೆ ಮನಸಲ್ಲೇ ಪಕ್ಕಾಗಿ ಕುಳಿತಿತ್ತು. ಹೀಗಾಗಿ ಭಗವಂತ ಬಂದರೆ ಎಲ್ಲ ಸಂತೋಷ ಸಿಗುತ್ತದೆ, ಖುಶಿಯಲ್ಲಿರುವವರ ಪಾಲಿಗೆ ಆತ ಇದ್ದಿರ್ತಾನೆ ಎಂದೇ ನಂಬಿಕೊಂಡಿದ್ದೆ. ಅಪ್ಪನ ಬಳಿಯೂ ವಿಮಲಕ್ಕನ ಮಾತುಗಳ ಬಗ್ಗೆ ಕೇಳಿದ್ದೆನೋ ಇಲ್ಲವೋ ಅದು ನೆನಪಿಲ್ಲ. ಆದರೆ ಆ ಪ್ರಶ್ನೆ ಮಾತ್ರ ಹಾಗೇ ಕೂತಿತ್ತು. ಆದರೆ ಕ್ರಮೇಣ ಸುರುಳಿ ಸುತ್ತಿದ್ದ ಬದುಕು ಒಂದೊಂದೇ ಗಂಟು ಬಿಡಿಸುತ್ತಾ ಪರೋಕ್ಷವಾಗಿ ಉತ್ತರವನ್ನು ಕೊಡುತ್ತ ಹೋಯಿತು. ಅದು ಮತ್ತಷ್ಟು ಸ್ಪಷ್ಟವಾಗಿದ್ದು ಶ್ರೀಯುತ ಲಕ್ಷ್ಮೀಶ ತೋಳ್ಪಾಡಿಯವರ ನನ್ನಚ್ಚುಮೆಚ್ಚಿನ “ಬೆಟ್ಟ ಮಹಮ್ಮದನ ಬಳಿಗೆ ಬಾರದಿದ್ದರೆ…” ಎನ್ನುವ ಪುಸ್ತಕವನ್ನೋದಿದಾಗ! ಇದರಲ್ಲಿ ಬರುವ ಆ ಒಂದು ಅಪೂರ್ವ ಸಾಲು ಕಣ್ಣಿಗೆ ಬಿದ್ದಿದ್ದೇ ಹೊಸ ಬೆಳಕೊಂದು ಮೂಡಿಬಿಟ್ಟಿತ್ತು!
“ಸೋತ, ದುಃಖಿತ, ಹೆಜ್ಜೆ ಕುಸಿಯುತ್ತಿರುವ ಕನಸೊಡೆದ ಪಯಣಿಗನಿಗೆ- ಅವನು ನಿರಂತರ ಜತೆಗಾರ. ಅದು ಅವನ ಭಾಗ್ಯ.” – ಈ ಸಾಲು ಹೊಳೆದದ್ದು ವಿಮಲಕ್ಕನ ಆ ಮಾತಿನೊಳಗೋ, ಇಲ್ಲ ವಿಮಲಕ್ಕನ ಅದೇ ಮಾತು ಬೆಳಕಾಗಿದ್ದು ಈ ಸಾಲಿನ ಮೂಲಕವೋ ಒಟ್ಟಿನಲ್ಲಿ ಮೊದಲ ಬಾರಿ ಓದಿದಾಗ ಒಂದು ಅಸ್ಪಷ್ಟವಾದ ಗುಟ್ಟು ರಟ್ಟಾದ ಖುಶಿ ನನ್ನೊಳಗೆ ಉಂಟಾಗಿದ್ದು ಸತ್ಯ!
ಅರಿಯದೇ ಅಂದು ಆಕೆ ನುಡಿದಿದ್ದ ಆ ಅಣಿಮುತ್ತು ನನ್ನೊಳಗೆ ಪ್ರವಹಿಸಿ, ಸುಪ್ತವಾಗಿ ಬೇರೂರಿ, ನನ್ನೊಳಗಿನ ಅರಿವನ್ನು ಹೆಚ್ಚಿಸಿದ್ದು ಆಕಸ್ಮಿಕವೋ, ಪೂರ್ವನಿಯೋಜಿತವೋ ಗೊತ್ತಿಲ್ಲ. ಎಷ್ಟೆಂದರೂ ಆತ ಸೋತ, ದುಃಖಿತರ ಪರವೇ!
ಎಳವೆಯಲ್ಲಿ ನನ್ನನ್ನು ಬಹಳ ಸಲ ಕಾಡಿದ್ದೇನೆಂದರೆ… “ದೇವ್ರನ್ನ ಭಕ್ತಿಯಿಂದ ಕರೆದರೆ ಆತ ಸಹಾಯಕ್ಕೆ ಬಂದೇ ಬರ್ತಾನೆ. ನಮ್ಮ ಆಶೋತ್ತರಗಳನ್ನು ಈಡೇರಿಸ್ತಾನೆ ಅಂತೆಲ್ಲ ಹೇಳ್ತಾರಲ್ಲ… ಹಾಗಿದ್ರೆ ನಾನು ಪ್ರತಿ ದಿವಸ ಕೃಷ್ಣನನ್ನು ಪ್ರಾರ್ಥನೆ ಮಾಡ್ತೇನೆ ಎಂತಕ್ಕೆ ಅಂವ ಬರಲ್ಲ.. ನನ್ನ ಕಷ್ಟಗಳನ್ನ ನೀಗಿಸಲ್ಲ” ಎಂಬ ಪ್ರಶ್ನೆ ಎದ್ದುಬಂದು, ಅದನ್ನು ಅಪ್ಪನಲ್ಲಿ ಹಲವು ಬಾರಿ ಕೇಳಿದ್ದೆ. ಆಗ ಅಪ್ಪ ನನ್ನ ಬುದ್ಧಿಮಟ್ಟಕ್ಕೆ ಅರ್ಥವಾಗುವ ರೀತಿ ಏನೋ ಸಮಾಧಾನ ಹೇಳ್ತಿದ್ರು. ಆದರೆ ನಿಜವಾದ ಭಕ್ತಿಯ ಜೊತೆಗೆ ಸಂಪೂರ್ಣ ಶರಣಾಗತಿಯಿದ್ದಾಗ, ನಮ್ಮೊಳಗೇ ಇರುವ ಅವನನ್ನು ನಾವು ಕಾಣುವೆವು ಎನ್ನುವುದು ಹಲವು ಅಪೂರ್ವ ಪುಸ್ತಕಗಳನ್ನೋದಿ, ಉಪನ್ಯಾಸಗಳ ರಸವನ್ನು ಕೇಳಿ ಅರ್ಥವಾಯಿತು. ಅಂತಃಶಕ್ತಿ ಎಂದರೆ ಅದು ಬೇರೆಯಲ್ಲ, ನಮ್ಮ ಸಂಕಷ್ಟಗಳ ಸಮಯದಲ್ಲಿ ದಾಟಿಸಲು ಆತ ಕಳಿಸುವ ಹಾಯಿದೋಣಿ ಎನ್ನುವುದೂ ಮನವರಿಕೆ ಆಯಿತು. ಹೋ ಎಂಥ ವಿಪತ್ತು ಬಂತು, ಇನ್ನು ಮುಗಿಯಿತು ಕಥೆ ಎಂದುಕೊಂಡಾಕ್ಷಣವೇ ಆತ ಜೊತೆಗಿದ್ದರೂ ನಮಗೆ ಕಾಣಿಸನು. ಕಾಣ್ಕೆ ಬೇಕೆಂದರೆ ಕಾಣುವ ದೃಷ್ಟಿ ಬೇಕು ಅದಕ್ಕೆ ಪೂವ ತಯಾರಿ, ಮನಸ್ಥಿತಿ ಬೇಕು. ಹಾಗೆಂದ ಮಾತ್ರಕ್ಕೆ ಎಲ್ಲವೂ ಎಲ್ಲರಿಂದ ಸಾಧ್ಯವ? ಆ ಒಂದು ತಾದಾತ್ಮ್ಯತೆ, ಸಂಪೂರ್ಣ ಶರಣಾಗತಿ ಸಾಮಾನ್ಯ ಮನುಷ್ಯರಿಂದ ಸುಲಭವಲ್ಲ ಎನ್ನುವುದನ್ನೂ ಮನಸ್ಸು ತಿಳಿಹೇಳಿತು. ಎಲ್ಲರೂ ಮೀರಾಬಾಯಿ, ಅಂಡಾಳಮ್ಮ, ರಾಧೆ, ಅಕ್ಕಮಹಾದೇವಿ, ಕನಕದಾಸರು ಆಗಲು ಸಾಧ್ಯವೇ? ಅವರು ನುಡಿದ, ನುಡಿದಂತೇ ನಡೆದ ಆ ಜಟಿಲ ಪಥದ ಜಾಡನ್ನು ತಿಳಿಯುವುದೂ ನಮ್ಮ ಪುಣ್ಯಫಲ ಎಂದುಕೊಳ್ಳಬೇಕಷ್ಟೇ. ‘ನಾನು, ನನ್ನಿಂದ, ನನಗಾಗಿ, ನಮ್ಮವರಿಗೋಸ್ಕರ’ ಎಂಬ ಸಣ್ಣ ಅಹಂಕಾರವೇ ನಮ್ಮ ಸಂಕಷ್ಟಗಳ ಪರಿಹಾರಕ್ಕೆ ಬಹು ದೊಡ್ಡ ತಡೆಯು.
ಕೃಷ್ಣನ ಪರಮಾಪ್ತೆ, ಸಹೋದರಿ ದ್ರೌಪದಿಯ ವಸ್ತ್ರಾಪರಹರಣದ ಪ್ರಸಂಗವವನ್ನೇ ತೆಗೆದುಕೊಳ್ಳೋಣ…
ಆಕೆ ಮೊದಮೊದಲು ಕ್ರೋಧದಿಂದ ತನ್ನ ಮನೋಬಲದ ಮೂಲಕ ಕೌರವರನ್ನು ವಿರೋಧಿಸಿದಳು. ಆಮೇಲೆ ಗುರು-ಹಿರಿಯರನ್ನು ಯಾಚನೆ ಮಾಡಿ ಆ ಕುಕೃತ್ಯವನ್ನು ತಡೆಯಲು ಬೇಡಿಕೊಂಡಳು, ತನ್ನ ಪತಿಯರನ್ನು ಕೆಣಕಿ, ಬೈದು ವಿರೋಧಿಸಿ ಹೋರಾಡಲು ಕರೆಕೊಟ್ಟಳು. ತನ್ನ ಶಕ್ತಿಯನ್ನುಪಯೋಗಿಸಿ ಶಾಪ ಕೊಡಲೂ ಹೋದಳು. ಎಲ್ಲವೂ ನಿಷ್ಪ್ರಯೋಜಕವಾದಾಗ ಕೃಷ್ಣನ ಮೊರೆ ಹೋದಳು. ಅಲ್ಲಾದರೂ ತಕ್ಷಣ ಅವಳಿಗೆ ಸಹಾಯ ದೊರಕಿತೇ? ಊಹೂಂ… ಇಲ್ಲ! ಅದಕ್ಕೆ ಕಾರಣ ಇನ್ನೂ ಅವಳಲ್ಲಿ ಉಳಿದಿದ್ದ ‘ನಾನು’, ‘ಅವನು’ ಎನ್ನುವ ಭಿನ್ನ ಭಾವ! ಅವನೇ ನಾನು, ನಾನೇ ಅವನು ಎಂಬ ಏಕತ್ವ ಆಕೆಯಲ್ಲಿ ಮೂಡಿ ಸಂಪೂರ್ಣ ಶರಣಾಗತಿಗೆ ಬಂದು ಆಕೆ ತನ್ನ ಒಂದು ಅಂಗೈಯಲ್ಲಿ ಸೆರಗನ್ನು ಎದೆಗೆ ಹಿಡಿದಿದ್ದದನ್ನೂ ಕೈಬಿಟ್ಟಾಗಲೇ ವಸ್ತ್ರ ಅಕ್ಷಯವಾಗಿದ್ದು, ಕೃಷ್ಣೆಯೊಳಗಿನ ಕೃಷ್ಣ ಪ್ರಕಟಗೊಂಡಿದ್ದು! ಹಾಗೆ ನೋಡಿದರೆ ವಸ್ತ್ರಾಪಹರಣ ಪ್ರಸಂಗದಲ್ಲಿ ಶರಣಾಗತಿಗಿಂತ ಭಕ್ತಿಯ ನವವಿಧಗಳಲ್ಲೊಂದಾದ ಆತ್ಮನಿವೇದನೆಯನ್ನು ಕಾಣುವೆವು.

ಆತ್ಮನಿವೇದನೆಯಲ್ಲಿ ಎರಡು ವಿಧಗಳು.
೧. ಕಪಿಕಿಶೋರ ನ್ಯಾಯ – ಕೋತಿ ತನ್ನ ಕಂದಮ್ಮನನ್ನು ಒಂದೆಡೆಯಿಂದ ಇನ್ನೊಂದೆಡೆ ಕೊಂಡೊಯ್ಯುವಾಗ ಕೋತಿ ಮರಿಯೂ ತನ್ನ ತಾಯಿಯನ್ನು ಗಟ್ಟಿಯಾಗಿ ಅಪ್ಪಿಕೊಂಡಿರುತ್ತದೆ. ಇಲ್ಲಿ ಕೋತಿಮರಿಗೆ ತನ್ನ ತಾಯಿಯ ಮೇಲೆ ನಂಬಿಕೆ ಇದ್ದಿರುತ್ತದೆ. ಆದರೆ ತನ್ನ ಅಸ್ತಿತ್ವದ ಬಗ್ಗೆಯೂ ಪ್ರಜ್ಞೆ ಉಳಿದುಕೊಂಡುಬಿಡುವುದರಿಂದ ತಾಯಿಯನ್ನು ಅಪ್ಪಿರುತ್ತದೆ. ಇದೇ ರೀತಿ ಭಕ್ತನು ಭಗವಂತನನ್ನು ಆಶ್ರಯಿಸಿರುತ್ತಾನೆ.
೨. ಮಾರ್ಜಾಲಕಿಶೋರ ನ್ಯಾಯ – ಇದು ಆತ್ಮನಿವೇದನೆಯ ಪರಮೋಚ್ಚಸ್ಥಿತಿ! ಬೆಕ್ಕು ತನ್ನ ಮರಿಯನ್ನು ಕತ್ತಿನ ಹಿಂಭಾಗದಲ್ಲಿ ಹಿಡಿದು ಎತ್ತಿಕೊಂಡು ಹೋಗುತ್ತದೆ. ಇಲ್ಲಿ ಮರಿಗೆ ಸ್ವಾತಂತ್ರ್ಯ ಇಲ್ಲ. ಅದು ಸಂಪೂರ್ಣ ತಾಯಿಯನ್ನಾಶ್ರಯಿಸಿರುತ್ತದೆ. ಅದಕ್ಕೆ ತನ್ನ ಅಸ್ತಿತ್ವದ ಬಗ್ಗೆ ಪ್ರಜ್ಞೆಯೂ ಇರುವುದಿಲ್ಲ. ತಾಯಿ ಬೆಕ್ಕೇ ತನ್ನ ಮಗುವನ್ನು ಎತ್ತಿಕೊಂಡು ಹೋಗುತ್ತದೆ. ತನ್ನ ವಸ್ತ್ರಾಪಹರಣದ ಅಂತಿಮ ಘಟ್ಟದಲ್ಲಿ ದ್ರೌಪದಿ ತೋರಿದ್ದು ಇದೇ ಭಕ್ತಿಭಾವವನ್ನು.
ಊರಲ್ಲಿ ದೇವಿ ಎನ್ನುವ ಆಳು ಮನೆಗೆಲಸಕ್ಕೆ ಬರುತ್ತಿದ್ದಳು. “ಒಡ್ತೀರೇ, ನಾಳೆ ನಾ ಕೆಲ್ಸಕ್ಕೆ ಬರೂಕಿಲ್ವ್ರ… ಅಮ್ನೋರ ಗುಡೀಲಿ ಪೂಜೆ ಐತೆ” ಎಂದು ಹೇಳಿ ಹೋಗುತ್ತಿದ್ದಳು. ಮರುದಿವ್ಸ ಬಂದವಳನ್ನು ಅಜ್ಜಿ “ಕಾರ್ಯಕ್ರಮ ಎಲ್ಲ ಹೇಂಗಾಯ್ತೆ ದೇವಿ?” ಎಂದು ಕೇಳುತ್ತಿದ್ದುದು ಮಾಮೂಲಿ. ಹೆಚ್ಚಿನ ಸಲ ಆಕೆ “ನಂದೆಲ್ಲ ಗೋಳು ಅವ್ಳಿಗೆ ಹೇಳ್ಬಂದಾಯ್ತು… ಇನ್ಮುಂದೆ ಅದುಂಟು ನನ್ನ ಸಂಕ್ಟ ಉಂಟು” ಎಂದು ಪಾತ್ರೆ ತಿಕ್ಕುತ್ತಿದ್ದಳು. ನನಗೋ ಬಹಳ ಮಜ ಅನ್ನಿಸ್ತಿತ್ತು. ದೇವಮ್ಮನ ಅದು, ಇದು ಅಂತಾಳಲ್ಲ.. ಅವ್ಳಿಗೆ ದುಃಖ ಕೊಟ್ಟು ಬಂದೆ ಅಂತಾಳಲ್ಲ… ಪಾಪ ಅಲ್ವ ಹಾಗೆ ಮಾಡೋದು ಎಂದೆಲ್ಲ ಅನ್ನಿಸಿ ಭಯವೂ ಆಗ್ತಿತ್ತು. ಅಜ್ಜಿ ಹತ್ರ ಒಮ್ಮೆ ಕೇಳಿದಾಗ ಆಕೆ “ತಾಯಿ ಹತ್ರ ಮಕ್ಕ ದುಃಖ ಹೇಳ್ಕಳ್ದೇ ತಂದೆ ಹತ್ರ ಹೇಳ್ಕಂಬಲಾಗ್ತ? ತಾಯಿ ಮಕ್ಕಗೆ ಕರಗ್ತು ಬೇಗ. ತಂದೆ ಸ್ವಲ್ಪ ಗಟ್ಟಿನೇಯಾ” ಎಂದುಬಿಟ್ಟಿದ್ದಳು. ನನಗೋ ಸಂಪೂರ್ಣ ಗೊಂದಲವಾಗಿತ್ತು. ನನ್ನಿಷ್ಟದ ಕೃಷ್ಣನ ಬಿಟ್ಟು ದುರ್ಗೆಯನ್ನ ಕೇಳ್ಬೇಕ ಹಾಗಿದ್ರೆ, ಅಡ್ರೆಸ್ ಬದಲಾಯಿಸ್ಬೇಕಾ ನಾನು ಅಂತೆಲ್ಲ ಒದ್ದಾಡಿದ್ದೆ. ಅಂತೂ ಮುಂದೆ ಲಲಿತಾಸಹಸ್ರನಮ, ಸೌಂದರ್ಯಲಹರಿಯ ಶಿವ-ಶಕ್ತಿ, ಪ್ರಕೃತಿ-ಪುರುಷನ ಅನುಬಂಧ, ವಾಗರ್ಥದ ಸಮನ್ವಯವು ಈ ಎಲ್ಲ ಗೊಂದಲಗಳನ್ನು ಸುಮಾರಷ್ಟು ನಿವಾರಣೆ ಮಾಡಿತು.
ವಿಮಲಕ್ಕ, ದೇವಿ, ಬಹುತೇಕ ಸಾಮಾನ್ಯರಾದ ಸಹೃದಯರೆಲ್ಲರೂ ಕಪಿಕಿಶೋರ ನ್ಯಾಯ ನಿವೇದನೆಯ ಪಥದಲ್ಲಿ ಸಾಗುವವರೇ. ಭಗವಂತನ ಇರುವಿಕೆಯನ್ನು ನಂಬಿ ಅಪ್ಪಿ ಹಿಡಿದು, ‘ನೋಡಬೇಡೆನ್ನವಗುಣವ ದಮ್ಮಯ್ಯ, ಬೇಡಿದಿಷ್ಟವನಿತ್ತು ಒಡಗೂಡಿ ಸಲಹಯ್ಯ’ (ನೆಕ್ಕರ ಕೃಷ್ಣದಸರು) ಎಂದು ಪ್ರಾರ್ಥಿಸುತ್ತ ನಿರುಮ್ಮಳರಾಗಲು ಪ್ರಯತ್ನಿಸುವವರು.

ಮನುಷ್ಯ ಎಲ್ಲ ರೀತಿಯ ಭಾವೋದ್ವೇಗ, ಭಾವಾವೇಶಕ್ಕೆ ಆಗಾಗ ಒಳಗಾಗುತ್ತಲೇ ಇರುತ್ತಾನೆ. ಆದರೆ ಆತ ಅದೆಷ್ಟು ಬೇಗ, ಯಾವ ದಾರಿಯ ಮೂಲಕ ಅದನ್ನು ನಿವಾರಿಸಿಕೊಳ್ಳುತ್ತಾನೆ ಎಂಬುದರ ಮೇಲೆ ಆತನ ಮನೋಶಕ್ತಿಯ ಕುಗ್ಗುವಿಕೆ/ಹೆಚ್ಚುವಿಕೆ ಅವಲಂಬಿತವಾಗಿರುತ್ತದೆ. ಹೊರಗಿನ ಪ್ರಪಂಚದ ಅಪಸವ್ಯಗಳು ಕಾಡಿದಾಗೆಲ್ಲ, ಮನಸ್ಸು ಕುಗ್ಗಿದಾಗೆಲ್ಲ ನನ್ನ ನೆನಪಿಗೆ ಬರುವರು ವಿಮಲಕ್ಕ, ದೇವಿಯಂಥವರು. ಸೂಕ್ಷ್ಮವಾಗಿ ನೋಡಿದರೆ ನಮ್ಮ ಸಂಪರ್ಕಕ್ಕೆ ಬರುವ ಎಲ್ಲ ಪಾತ್ರಗಳೂ ಹಲವು ಗುಟ್ಟಿನ ಬುತ್ತಿಯನ್ನು ಹೊತ್ತು ತಂದಿರುತ್ತವೆ. ಕೆಲವೊಮ್ಮೆ ಅದು ನಮಗೆ ಕಾಣಿಸುತ್ತದೆ, ಹಲವು ಬಾರಿ ನಾವು ಅದನ್ನು ಹುಡುಕಿ ಕಾಣಬೇಕಾಗುತ್ತದೆ. ನಮ್ಮ ದಾರಿ ಖರ್ಚಿಗೆ ಆ ಬುತ್ತಿಗಳೇ ಬಹಳ ಸಹಕಾರಿ. ಅವು ಮತ್ತೆಮತ್ತೆ ಮೆಲ್ಲಬೇಕಾದಂಥ ಅಮೃತಫಲದ ರುಚಿಯ ಹೊತ್ತಿರುವ ಅಕ್ಷಯ ಬುತ್ತಿಗಳು.

ತೇಜಸ್ವಿನಿ ಹೆಗಡೆ ಮೂಲತಃ ಉತ್ತರ ಕನ್ನಡದ ಶಿರಸಿಯವರು. ಪ್ರಸ್ತುತ ಬೆಂಗಳೂರು ನಿವಾಸಿ. ಮಂಗಳೂರಿನ ಕೆನರಾ ಡಿಗ್ರಿ ಕಾಲೇಜಿನಲ್ಲಿ ಬಿಎಸ್ಸಿ ವಿದ್ಯಾಭ್ಯಾಸ ಪೂರೈಸಿರುವ ತೇಜಸ್ವಿನಿ, ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಲ್ಲಿ (ಕನ್ನಡ) ಎಂ.ಎ ಪದವೀಧರರು. ಚಿಗುರು (ಕವಿತೆಗಳು), ಜೋತಯ್ಯನ ಬಿದಿರು ಬುಟ್ಟಿ (ಕಥಾಸಂಕಲನ), ಸಂಹಿತಾ (ಕವಿತೆಗಳು), ಹಂಸಯಾನ (ಕಾದಂಬರಿ) ಇವರ ಪ್ರಕಟಿತ ಕೃತಿಗಳು
