ಶೀರ್ಷಿಕೆಯಲ್ಲಿ ‘happiness’ ಪದ ಇದ್ದಾಗ್ಯೂ, ಇದು ಸಂತೋಷದ ಕುರಿತಾದ ಕಾವ್ಯವಲ್ಲ. ದಣಿವು ಹೇಗೆ ಶೇಖರವಾಗುತ್ತದೆ, ಸಣ್ಣ ಸಣ್ಣ ಸನ್ನೆಗಳ ಕಡೆ ನಾವು ಹೇಗೆ ಗಮನ ಹರಿಸುತ್ತೇವೆ, ಸಂಘರ್ಷಗಳು ಹೇಗೆ ಹುಟ್ಟಿಕೊಳ್ಳುತ್ತವೆ ಅಥವಾ ಮುಂದು ಹೋಗಲು ನಾವು ಕಾರಣವನ್ನು ಎಲ್ಲಿಂದ ಕಂಡುಕೊಳ್ಳುತ್ತೇವೆ ಎಂಬಂಥ ಪ್ರಶ್ನೆಗಳನ್ನು ಇಲ್ಲಿರುವ ಕವನಗಳು ಕೇಳುತ್ತವೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಬಲ್ಗೇರಿಯಾ ದೇಶದ ಕವಿ ಒಲ್ಯಾ ಸ್ಟೊಯನೋವಾ-ರ (Olya Stoyanova) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

ಬಲ್ಗೇರಿಯಾ ದೇಶದ ಕವಿ ಒಲ್ಯಾ ಸ್ಟೊಯನೋವಾ-ರನ್ನು ‘ದೈನಂದಿನ ಜೀವನದ ಹೃದಯವಿದ್ರಾವಕತೆಯ ಮತ್ತು ಅಕ್ಕರೆಯ ಸರಳತೆಯ ಹರಿಕಾರ’ ಎಂದು ಸ್ಟೊಯನೋವಾರ ಕವನಗಳನ್ನು ಇಂಗ್ಲಿಷಿಗೆ ಅನುವಾದ ಮಾಡಿದ ಪ್ರಖ್ಯಾತ ಅನುವಾದಕಿ ಕ್ಯಾಟರಿನಾ ಸ್ಟೋಯ್ಕೋವಾರವರು ಕರೆದಿದ್ದಾರೆ.

ಸೆಪ್ಟೆಂಬರ್ 1977-ರಲ್ಲಿ ಬಲ್ಗೇರಿಯಾದ ರಾಜಧಾನಿ ಸೋಫಿಯಾದಲ್ಲಿ ಜನಿಸಿದ ಒಲ್ಯಾ ಸ್ಟೊಯನೋವಾ, ಪತ್ರಿಕೋದ್ಯಮದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಅದಕ್ಕೂ ಮೊದಲು, ಅವರು ಸೇಂಟ್ ಕ್ಲೆಮೆಂಟ್ ಓಹ್ರಿಡ್ಸ್ಕಿ ವಿಶ್ವವಿದ್ಯಾಲಯದಲ್ಲಿ (University of St. Kliment Ohridski) ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. ಅವರು 10 ವರ್ಷಗಳ ಕಾಲ ಡ್ನೆವ್ನಿಕ್ (Dnevnik) ಪತ್ರಿಕೆಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದರು. 2022-ರಿಂದ ಅವರು ಬಲ್ಗೇರಿಯನ್ ನ್ಯಾಷನಲ್ ರೇಡಿಯೊದ ಹಿಸ್ಟೋ ಬೊಟೆವ್ (Hristo Botev) ಕಾರ್ಯಕ್ರಮದ ಮುಖ್ಯ ಸಂಪಾದಕರಾಗಿದ್ದಾರೆ ಹಾಗೂ And now where? ಕಾರ್ಯಕ್ರಮದ ನಿರೂಪಕರಾಗಿದ್ದಾರೆ.

ಕವನ, ಸಣ್ಣ ಕಥೆಗಳು, ಕಾದಂಬರಿ ಮತ್ತು ಸಾಕ್ಷ್ಯಚಿತ್ರ ಸೇರಿದಂತೆ ಅವರು ಒಟ್ಟು ಹನ್ನೆರಡು ಪುಸ್ತಕಗಳನ್ನು ಬರೆದಿದ್ದಾರೆ. ಅವರ ಕೃತಿಗಳನ್ನು ಇಂಗ್ಲಿಷ್, ಜರ್ಮನ್, ಸರ್ಬಿಯನ್, ಮೆಸಡೋನಿಯನ್, ಹಂಗೇರಿಯನ್, ಪೋಲಿಷ್, ರಷ್ಯನ್, ಚೆಕ್, ಪೋರ್ಚುಗೀಸ್, ಸ್ಲೋವಾಕ್, ಆ್ಯರಬಿಕ್, ಟರ್ಕಿಷ್ ಮತ್ತು ಸ್ಪ್ಯಾನಿಷ್ ಭಾಷೆಗಳಿಗೆ ಅನುವಾದಿಸಲಾಗಿದೆ.

2014-ರಲ್ಲಿ Invitation to Dinner ನಾಟಕಕ್ಕಾಗಿ ಹಾಗೂ 2018-ರಲ್ಲಿ The Color of the Deep Waters ನಾಟಕಕ್ಕಾಗಿ, ಎರಡು ಬಾರಿ Askeer ನಾಟಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರ ನಾಟಕ Invitation to Dinner “ಸೋಫಿಯಾ” ಥಿಯೇಟರ್‌ನ ಸಮಕಾಲೀನ ಬಲ್ಗೇರಿಯನ್ ನಾಟಕಕ್ಕಾಗಿರುವ ಪ್ರಶಸ್ತಿಯನ್ನೂ ಗೆದ್ದುಕೊಂಡಿತು.

ಇದುವರೆಗೆ ಅವರ ನಾಲ್ಕು ಕವನ ಸಂಕಲನಗಳು ಪ್ರಕಟವಾಗಿವೆ – Photographs (2000), Prose (2002), Roadmap (2003) ಮತ್ತು Happiness Street (2013). ಸ್ಟೊಯನೋವಾ ಅವರ ಮೊದಲ ಕಾದಂಬರಿ, Personal Geographies, 2005-ರಲ್ಲಿ ಹಾಗೂ ಸಣ್ಣ ಕಥೆಗಳ ಸಂಕಲನ, What Do Wolves Dream, 2011-ರಲ್ಲಿ ಪ್ರಕಟವಾಯಿತು. A Guide to Wild Places ಎಂಬ ತಮ್ಮ ದೇಶದ ನಿರ್ಜನ ಕಾಡು ಪ್ರದೇಶಗಳ ಬಗೆಗಿನ ‘ಗೈಡ್’ ಪುಸ್ತಕವನ್ನು 2011-ರಲ್ಲಿ ಪ್ರಕಟಿಸಿದರು.

ಸ್ಟೊಯನೋವಾ ಅವರ ನಾಲ್ಕನೆಯ ಕವನ ಸಂಕಲನ Happiness Street ಅಕ್ಟೋಬರ್ 2013-ರಲ್ಲಿ ಹೊರಬಂದಿತು. ಈ ಸಂಕಲನಕ್ಕಾಗಿ ಅವರಿಗೆ 2013-ರ ನಿಕೋಲಾಯ್ ಕಾಂಚೆವ್ (Nikolay Kanchev) ರಾಷ್ಟ್ರೀಯ ಪ್ರಶಸ್ತಿ ಹಾಗೂ 2013-ರ ವರ್ಷದ ಕಾವ್ಯ ಸಂಕಲನಕ್ಕಾಗಿರುವ ಇವಾನ್ ನಿಕೋಲೋವ್ (Ivan Nikolov) ರಾಷ್ಟ್ರೀಯ ಪ್ರಶಸ್ತಿ ಲಭಿಸಿತು.

ತಮ್ಮ ಪತಿ ಝಿವ್ಕೊ ಜಾಕೋವ್-ರ (Zhivko Dzakov) ಜೊತೆ ಸೇರಿ ಕಳೆದ ಹದಿನೈದು ವರ್ಷಗಳಿಂದ ಸ್ಟೊಯನೋವಾ-ರವರು Guide to Wild Places-ನ್ನು ಬರೆಯುತ್ತಿದ್ದಾರೆ. ಇದರಲ್ಲಿ ಅವರು ಬಲ್ಗೇರಿಯಾ ದೇಶದ ಸುಂದರವಾದ ಮತ್ತು ಅಪರಿಚಿತ ಸ್ಥಳಗಳ ಕಥೆಗಳು ಮತ್ತು ಛಾಯಾಚಿತ್ರಗಳನ್ನು ಒಂದು ಕಡೆಯಲ್ಲಿ ಸಂಗ್ರಹಿಸುತ್ತಾರೆ – ಬಂಡೆಗಳಲ್ಲಿ ಕೆತ್ತಿದ ಚರ್ಚುಗಳು ಮತ್ತು ಗುಹೆಗಳು, ತೊರೆದ ಹಳ್ಳಿಗಳು, ಅಭಯಾರಣ್ಯಗಳು ಮತ್ತು ಬೆಟ್ಟಗಳು.

ಇಂತಹ ಕೆಲವು ಸ್ಥಳಗಳನ್ನು ನಾವು ಅವರ Happiness Street ಸಂಕಲನದಲ್ಲೂ ಕಾಣಬಹುದು. ಸಂಕಲನದಲ್ಲಿ ಕಂಡು ಬರುವ ‘ಶ್ಟಾಸ್ಟಿ ರಸ್ತೆ’ (Shtastie Street) ನಿಜವಾಗಿಯೂ ಅಸ್ತಿತ್ವದಲ್ಲಿರುವ ರಸ್ತೆ ಎಂದು ಒಲ್ಯಾ ಸ್ಟೊಯನೋವಾ ಹೇಳುತ್ತಾರೆ. ಈ ರಸ್ತೆ ಸೋಫಿಯಾದ ಒಂದು ಉಪನಗರದಲ್ಲಿದೆ; ಇಲ್ಲಿ ಒಂದೇ ಒಂದು ತಗ್ಗಿರುವ ಮನೆ ಇದೆ – ನಾಯಿಗಳು ಇದರ ಹೊಸ್ತಿಲಿನ ಮುಂದೆ ಬಾಲ ಅಲ್ಲಾಡಿಸುತ್ತವೆ; ಮಕ್ಕಳು ನಗುತ್ತಿರುತ್ತಾರೆ.

ಆದಾಗ್ಯೂ, ಇಲ್ಲಿರುವ ಕಾವ್ಯವು ವಿಚಿತ್ರವಾದ ರಸ್ತೆಗಳಲ್ಲಿ ಚಲಿಸುತ್ತದೆ – ಮಧ್ಯ ಏಷ್ಯಾದ ಸಮರ್ಖಂಡ್ ಮೂಲಕ ಹಾದುಹೋಗುತ್ತದೆ ಮತ್ತು ಪ್ರಾಗ್‌-ನಲ್ಲಿ ನಿಲ್ಲುತ್ತದೆ, ಇಸ್ತಾನ್ಬುಲ್ ಮತ್ತು ಡ್ರೆಸ್ಡೆನ್-ಗೆ ತೆರಳಿ, ಯಾವುದೋ ಒಂದು ಪರ್ವತ ಶಿಖರದಲ್ಲಿ ನಿಲ್ಲುತ್ತದೆ ಅಥವಾ ಲಯನ್ ಸೇತುವೆಯ ಬಸ್ ನಿಲ್ದಾಣದಲ್ಲಿ ಕಾಯುತ್ತದೆ. ಶೀರ್ಷಿಕೆಯಲ್ಲಿ ‘happiness’ ಪದ ಇದ್ದಾಗ್ಯೂ, ಇದು ಸಂತೋಷದ ಕುರಿತಾದ ಕಾವ್ಯವಲ್ಲ. ದಣಿವು ಹೇಗೆ ಶೇಖರವಾಗುತ್ತದೆ, ಸಣ್ಣ ಸಣ್ಣ ಸನ್ನೆಗಳ ಕಡೆ ನಾವು ಹೇಗೆ ಗಮನ ಹರಿಸುತ್ತೇವೆ, ಸಂಘರ್ಷಗಳು ಹೇಗೆ ಹುಟ್ಟಿಕೊಳ್ಳುತ್ತವೆ ಅಥವಾ ಮುಂದು ಹೋಗಲು ನಾವು ಕಾರಣವನ್ನು ಎಲ್ಲಿಂದ ಕಂಡುಕೊಳ್ಳುತ್ತೇವೆ ಎಂಬಂಥ ಪ್ರಶ್ನೆಗಳನ್ನು ಇಲ್ಲಿರುವ ಕವನಗಳು ಕೇಳುತ್ತವೆ.

ಇಲ್ಲಿರುವ ಒಲ್ಯಾ ಸ್ಟೊಯನೋವಾರ ಆರೂ ಕವಿತೆಗಳನ್ನು ಮೂಲ ಬಲ್ಗೇರಿಯನ್‌ ಭಾಷೆಯಿಂದ ಇಂಗ್ಲಿಷ್‌-ಗೆ ಕ್ಯಾಟರಿನಾ ಸ್ಟೊಯ್ಕೋವಾ ಕ್ಲೆಮರ್-ರವರು (Katerina Stoykova-Klemer) ಅನುವಾದಿಸಿದ್ದಾರೆ.

*****

1
ಸಣ್ಣ ಸಣ್ಣ ಕತೆಗಳು
ಮೂಲ: Small Stories

ಸಣ್ಣ ಸಣ್ಣ ಚೀಟಿಗಳು ಬರೆಯುವುದು ಅವಳಿಗಿಷ್ಟ –
“ಐ ಲವ್ ಯು,” ಗಂಡನಿಗೆ,
“ಯಾವಾಗಲೂ ನಿನ್ನದೇ ಯೋಚನೆ,” ಮಗುವಿಗೆ,
“ತ್ಯಾಂಕ್ ಯೂ,” ಅಮ್ಮನಿಗೆ.
ತುಸು ಹಾಸ್ಯಾಸ್ಪದವೇ, ನಿಜ ಹೇಳಬೇಕೆಂದರೆ,
ಆದರೆ, ಅವಳ ಪ್ರೀತಿಪಾತ್ರರು
ಇದರ ಬಗ್ಗೆ ಏನೂ ಹೇಳಲ್ಲ,
ತಮ್ಮ ಜೇಬುಗಳಲ್ಲಿ ಇವು ಸಿಕ್ಕವು
ಅಂತ ಕೂಡ ನಾಟಕ ಮಾಡಲ್ಲ.
ಆದರೂ, ಅವಳು ಸುಮಾರು ದಿನಗಳಿಂದ
ಚೀಟಿಗಳನ್ನು ಬರೆಯುತ್ತಿದ್ದಾಳೆ –
ಹೆಂಗಸೊಬ್ಬಳು ಹದಿನಾಲ್ಕನೆಯ ಮಹಡಿಯಿಂದ
ಹಾರಿ ಬಿದ್ದಳು ಅಂತ ಎಲ್ಲೋ ಓದಿದಾಗಿನಿಂದ,
ಅವಳ ಜೇಬಿನಲ್ಲಿ ಒಂದು ಚೀಟಿ ಇತ್ತಂತೆ,
ಅದರಲ್ಲಿ ಬರೆದಿತ್ತು –
“ಐದು ಮೊಟ್ಟೆಗಳು, ಒಂದು ಪೌಂಡ್ ಬ್ರೆಡ್ಡು.”

2
ಲಂಚ್ ಬ್ರೇಕ್
ಮೂಲ: Lunch Break

ಮಸೀದಿಯನ್ನು ಕಾಯುವ ಕಾವಲುಗಾರ –
ಮಧ್ಯಾಹ್ನದ ಹೊತ್ತು
ಮಸೀದಿಯ ಬಾಗಿಲು ತೆರೆದಿಟ್ಟು –
ಹತ್ತಿರದಲ್ಲಿದ ‘ಕ್ಯಾಲಿಫೋರ್ನಿಯಾ’
ಕ್ಯಾಫೆ-ಗೆ ಓಡಿದ,
ಎರಡು ಸ್ಯಾಂಡ್‌ವಿಚ್ ಮತ್ತು ಒಂದು ಕೊಕೊ-ಕೊಲಾ ಸೇವಿಸಲು –
ಈ ಹೊತ್ತಿನಲ್ಲಿ ಅಲ್ಲಾಹ್ ಕೂಡ ವಿರಮಿಸುತ್ತಾನೆ –
ಅಂತ ಕ್ಯಾಫೆ ಮಾಲಿಕಳಿಗೆ ಹೇಳಿದ,
ಅವಳು ನಕ್ಕಳು,
ಮತ್ತವನು,
ವಾಪಸ್ಸು ಹೋಗುವಾಗ,
ಓಡುತ್ತಾನೆ.

3
ಕ್ಷಮೆಕೋರಿಕೆಯ ಬದಲಿಗೆ
ಮೂಲ: Instead of an Apology

ದಿನಾ ಬೆಳಗ್ಗೆ –
ನಾನು ಕೆಲಸಕ್ಕೆ ಹೋಗುವ ದಾರಿಯಲ್ಲಿ –
ಬ್ಯಾಂಕಿನ ಮೆಟ್ಟಲುಗಳ ಮೇಲೆ
ಕೂತಿರುವ ಮುದುಕನೊಬ್ಬ –
ಕೈ ಮುಂದೆ ಚಾಚಿ ಕೇಳುತ್ತಾನೆ:
ಹೊತ್ತೆಷ್ಟಾಯಿತು, ಮಗು…
ಏನು ಹೇಳಲಿ ನಾನು –
ದಿನಾ ಬೆಳಗ್ಗೆ
ಅದೇ ಹೊತ್ತು,
ತಡವಾಗಿದೆ,
ತುಂಬಾ ತಡವಾಗಿದೆ …

4
ಬೀದಿ ಬಜಾರ್
ಮೂಲ: Flea Market

ಸೊಮವಾರ,
ಸಾಯಂಕಾಲ ಏಳು ಘಂಟೆ.
ಲುವೊವ್ ಸೇತುವೆಯ ಕೈಕಂಬಿಯ ಮೇಲೆ
ಒಂದು ಚಿಕ್ಕ ಕೆಂಪುಬಣ್ಣದ ಉಡುಪು
ಹರಡಲಾಗಿದೆ –
ಆ ಉಡುಪಿನ ಒಡತಿ –
ಸುಮಾರು ವಯಸ್ಸಿನ ಹೆಂಗಸು,
ಐದು ಮೀಟರ್ ದೂರ ಕೂತಿದ್ದಾಳೆ
ನಿರ್ಲಿಪ್ತಳಾಗಿ ಗಮನಿಸುತ್ತಿದ್ದಾಳೆ
ತನ್ನ ನೆನಪುಗಳಲ್ಲಿ ಯಾರಿಗಾದರೂ
ಆಸಕ್ತಿ ಇದೆಯಾ ಎಂದು.
ಇಲ್ಲ, ಆಸಕ್ತಿ ಇಲ್ಲ.

5
ಬುಖಾರಾ
ಮೂಲ: Bukhara

ಗೊತ್ತಿದೆಯಾ ನಿನಗೆ
ಪುರಾತನ ನಗರ ಬುಖಾರಾ
ಎಲ್ಲಿದೆಯೆಂದು?
ಮಕ್ಕಾ, ಮದೀನಾ, ಜೆರುಸಲೆಮ್
ನಗರಗಳ ನಂತರ ಮುಸಲ್ಮಾನರಿಗೆ
ಅತಿ ಪವಿತ್ರವಾದ ಆ ನಾಲ್ಕನೆಯ ನಗರ?
ಇಲ್ಲಿ,
ಮಧ್ಯ ಏಶಿಯಾದಲ್ಲಿ,
ಮೂರು ಕಡೆ ಮರುಭೂಮಿಯಿಂದ
ಸುತ್ತುಗಟ್ಟಿದ ಈ ನಗರ
ಒಂದು ಮೃಗಜಲವನ್ನು ಹೋಲುತ್ತದೆ –
ಮದ್ರಸಾಗಳು, ಹೊಯಿಗೆ ಬಣ್ಣದ
ಕೋಟೆ ಗೋಡೆಗಳು,
ಎದುರುಗಾಳಿಗೆ ಕಣ್ಣುಗಳ ಅರೆಮುಚ್ಚಿ
ಓಡಾಡುವ ಜನರು,
ಮತ್ತೆ
ಹೆಂಗಸರ ಲಂಗಗಳನ್ನು ಓ ಮೇಲಕ್ಕೆ
ಹಾರಿಸುವ ಗಾಳಿ.
ನಗರಗಳು ಬದುಕುಳಿಯುವುದು ಹೀಗೆಯೇ
ಅಂತ ಬಲ್ಲವರು ಹೇಳುತ್ತಾರೆ.

6
ಪ್ರಾಗ್ ನಗರದಲ್ಲಿ ಒಂದು ಮಧ್ಯಾಹ್ನ
ಮೂಲ: In Prague at Noon

ಎಷ್ಟೋ ವರುಷಗಳಿಂದ
ಒಬ್ಬ ಚಿಕಣಿಚಿತ್ರಕಾರ
ಪ್ರತಿ ದಿನ ಚಿತ್ರ ಬಿಡಿಸುತ್ತಾನೆ
ಪ್ರಾಗ್ ನಗರದ ಮಹಾ-ಚೌಕದಲ್ಲಿ ಕೂತು –
ವಾಹನಗಳ ಓಡಾಟ,
ಘಂಟೆಗಳ ತರಂಗಾಟ,
ಪ್ರವಾಸಿಗರ ಕುತೂಹಲ,
ಯಾವುದನ್ನೂ ಲೆಕ್ಕಿಸದೇ,
ಇಣುಕಿ ನೋಡುತ್ತಾರೆ ಪ್ರವಾಸಿಗರು,
ಏನೋ ಆ ಒಂದು ಕ್ಷಣದಲ್ಲಿ
ಅವನು ಎಷ್ಟೋ ತಿಂಗಳುಗಳಿಂದ ಬಿಡಿಸುತ್ತಿರುವ
ಚಿತ್ರವನ್ನು ಇವರು ಗ್ರಹಿಸುವಂತೆ.
ಪ್ರತಿ ಮನುಜನಲ್ಲಿ ಎರಡು
ದೇವ-ಗಳು ಅಡಗಿದ್ದಾರೆ –
ಒಂದು ಒಳ್ಳೆಯ, ಒಂದು ಕೆಟ್ಟ –
ಅವನು ಅವರಿಗೆ ಹೇಳುತ್ತಾನೆ.
ಎಲ್ಲಿ, ಎಲ್ಲಿ – ಪ್ರವಾಸಿಗರು ಕೇಳುತ್ತಾರೆ,
ಅವರ ಕೈಗೆ ಒಂದು ಭೂತಗನ್ನಡಿ ಕೊಡುತ್ತಾನೆ,
ಒಟ್ಟಿಗೆ ಅವರು ಚಿಕಣಿಚಿತ್ರಗಳನ್ನು ಪರಿಶೀಲಿಸುತ್ತಾರೆ.
– ಇಲ್ಲಿ, ಇಲ್ಲಿ ನೋಡು – ಅವನು ತೋರಿಸುತ್ತಾನೆ.
ವಿವರಗಳ ಒಳಗೆ ದೆವ್ವ ಅಡಗಿರುತ್ತೆ*,
ಮತ್ತೆ, ದೇವ ಕೂಡ.

* The devil is in the details