ವಿದ್ಯಾಭೂಷಣರ ಆತ್ಮಕಥೆಯಲ್ಲಿ ಎದ್ದು ಕಾಣುವ ಒಂದಂಶವೆಂದರೆ ಅವರ ಪ್ರಾಮಾಣಿಕತೆ. ಸಂನ್ಯಾಸ ಒಲ್ಲದ ತಮ್ಮನ್ನು ಒತ್ತಾಯದಿಂದ ಪೀಠದಲ್ಲಿ ಕುಳ್ಳಿರಿಸಿದ ಕಾರಣ, ತಮ್ಮ ಮನಸ್ಸು ಸದಾ ಪೀಠತ್ಯಾಗವೆಂಬ ಪ್ರತಿಭಟನೆಗೆ ತುಡಿಯುತ್ತಿದ್ದುದನ್ನು ದಾಖಲಿಸುವುದರ ಜತೆಗೆ ಅವರು ತಮ್ಮ ನಿರ್ಧಾರ ಮತ್ತು ನಡೆಗಳ ಬಗ್ಗೆ ಸ್ವವಿಮರ್ಶೆ ಮಾಡುತ್ತಾರೆ. ತಮ್ಮ ಸ್ವಾರ್ಥಸಾಧನೆಗಾಗಿ ತಮ್ಮ ಶಿಷ್ಯರಾದ ಶ್ರೀಧರ ಜೋಯಿಸರಿಗೆ ಒತ್ತಾಯದಿಂದ ಇದನ್ನು ದಾಟಿಸಿದ್ದೇನೆ, ಸ್ವಲ್ಪ ಹೆಚ್ಚೇ ವಯಸ್ಸಿನ ಅಂತರವಿರುವ ತಮ್ಮ ಪತ್ನಿಯನ್ನು ಮದುವೆಯಾದುದು ಸರಿಯಾಯಿತೇ ಇಲ್ಲವೇ? ಇತ್ಯಾದಿ ಪ್ರಶ್ನೆಗಳನ್ನು ತನಗೆ ತಾನೇ ಕೇಳಿಕೊಳ್ಳುತ್ತಾರೆ.
‘ಕೆಂಡಸಂಪಿಗೆ’ಯಲ್ಲಿ ಸರಣಿಯಾಗಿ ಪ್ರಕಟವಾಗಿ ಈಗ ಪುಸ್ತಕ ರೂಪದಲ್ಲಿ ಬಂದಿರುವ ವಿದ್ಯಾಭೂಷಣರ “ನೆನಪೇ ಸಂಗೀತ ಪುಸ್ತಕ”ದ ಕುರಿತು ಡಾ. ಜನಾರ್ದನ ಭಟ್ ಅವರ ಬರಹ
ಕುಕ್ಕೆ ಸುಬ್ರಹ್ಮಣ್ಯದ ಸಂಪುಟ ನರಸಿಂಹಸ್ವಾಮಿ ಮಠದ ಸ್ವಾಮೀಜಿಯಾಗಿದ್ದು, ಪೀಠತ್ಯಾಗ ಮಾಡಿದ ಖ್ಯಾತ ಕರ್ನಾಟಕ ಸಂಗೀತ ಗಾಯಕರಾದ ವಿದ್ಯಾಭೂಷಣರು ತಮ್ಮ ಜೀವನ ಕಥನವನ್ನು ‘ನೆನಪೇ ಸಂಗೀತ’ ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಇದು ಮೊದಲು ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬರುತ್ತಿತ್ತು. ಈಗ ಪುಸ್ತಕ ರೂಪದಲ್ಲಿ ಪ್ರಕಟವಾಗಿರುವುದರಿಂದ ಪುಸ್ತಕಪ್ರಿಯರಿಗೆ ಒಂದು ಸಂಗ್ರಹಯೋಗ್ಯ ಕೃತಿ ಸಿಕ್ಕಿದಂತಾಗಿದೆ.
ಈ ಪುಸ್ತಕಕ್ಕೆ ಹಲವು ನೆಲೆಗಳಲ್ಲಿ ಮಹತ್ವ ಇದೆ. ಮೊದಲನೆಯದು, ಮಠವೊಂದರ ಸ್ವಾಮೀಜಿಯಾಗಿದ್ದವರು ಪೀಠತ್ಯಾಗ ಮಾಡಿದ ನಂತರ ಬರೆದ ಆತ್ಮಕಥನವಾಗಿ ಇದು ಒಂದು ಅನನ್ಯ ಪುಸ್ತಕ. ಆ ಅಂಶದ ಬಗ್ಗೆಯೇ ಈ ಪುಸ್ತಕ ಹೆಚ್ಚು ಗಮನ ಹರಿಸುತ್ತದೆ. ವಾಗ್ವಾದವಾಗಿ ಇದೊಂದು ಬಹಳ ಮಹತ್ವ ಇರುವ ಪುಸ್ತಕ. ಬಹುಮಟ್ಟಿಗೆ ಈ ವಾಗ್ವಾದ ಆತ್ಮಗತವಾಗಿಯೇ ಈ ಪುಸ್ತಕದಲ್ಲಿ ನಡೆದಿದೆ. ಜತೆಗೆ ವಿದ್ಯಾಭೂಷಣರ ಆತ್ಮೀಯ ಮಿತ್ರ ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿಯವರು ಈ ವಾಗ್ವಾದಕ್ಕೆ ತಾತ್ವಿಕ ಗಹನತೆ ಕೊಟ್ಟಿದ್ದಾರೆ. ಅದನ್ನು ಮುಂದೆ ಚರ್ಚಿಸಲಾಗಿದೆ.
ಎರಡನೆಯದು, ಮಠಾಧಿಪತಿ ಸಂನ್ಯಾಸಿಗಳ ಬದುಕಿನ ಒಂದು ಪಾರ್ಶ್ವನೋಟ ಕೊಡುವ ಕಥನವಿದು. ಮೂರನೆಯದು, ಮಠಗಳ ಆಡಳಿತದ ಲೌಕಿಕ ಜಂಜಾಟಗಳ ಒಂದು ನೋಟವೂ ಇಲ್ಲಿ ಸಿಗುತ್ತದೆ. ಮಠಗಳ ದಿನನಿತ್ಯದ ಖರ್ಚುಗಳನ್ನು ನಿಭಾಯಿಸುವುದು ಎಷ್ಟು ಕಷ್ಟವೆಂಬ ಸಂಗತಿಯನ್ನು ಈ ಕೃತಿಯಲ್ಲಿ ತಿಳಿಯಬಹುದು. ವಿದ್ಯಾಭೂಷಣರ ತಂದೆಯವರಾದ ಗೋವಿಂದಾಚಾರ್ಯರು ಮಠದ ಪಾರುಪತ್ಯಗಾರರಾಗಿ ಖರ್ಚುಗಳನ್ನು ನಿಭಾಯಿಸಲು ಸಾಲ ತರುತ್ತಿದ್ದುದು, ತಮ್ಮ ಪತ್ನಿಯ ಆಭರಣಗಳನ್ನು ಸದಾ ಅಡವು ಇಡಬೇಕಾಗಿ ಬರುತ್ತಿದ್ದುದು, ಆ ಸೇವೆಯಲ್ಲಿಯೇ ಅವರು ನವೆದುದು ಇವೆಲ್ಲ ಈ ಆತ್ಮಕಥೆಯೊಳಗೆ ಬರುವ ಹೃದಯಸ್ಪರ್ಶಿಯಾದ ಅಧ್ಯಾಯಗಳು. ನಾಲ್ಕನೆಯದು, ವಿದ್ಯಾಭೂಷಣರು ಖ್ಯಾತ ಕರ್ನಾಟಕೀ ಗಾಯಕರೂ ಆಗಿ ಬೆಳೆದವರು. ಈ ಆಯಾಮದಲ್ಲಿ ಅವರ ನೆನಪುಗಳು, ಅವರ ಸಾಧನೆಯ ಪಥ ಹೇಗಿತ್ತು ಎನ್ನುವುದನ್ನೂ ತಿಳಿಯುವ ಅವಕಾಶ ಇಲ್ಲಿದೆ. ವಿದ್ಯಾಭೂಷಣರ ಬರವಣಿಗೆಯ ಸಂಗ್ರಹಗುಣದಿಂದಾಗಿ ಕೆಲವು ಆಯಾಮಗಳನ್ನು ಇನ್ನಷ್ಟು ಬೆಳೆಸಬಹುದಿತ್ತೆಂದು ಅನಿಸುವುದು ಸುಳ್ಳಲ್ಲ. ಆದರೆ ಪೀಠತ್ಯಾಗದ ತಾತ್ವಿಕತೆಯನ್ನು ಮತ್ತು ಕತೆಯನ್ನು ಹೇಳುವ ಉದ್ದೇಶವೇ ಪ್ರಧಾನವಾಗಿ ಕಾಣುವುದರಿಂದ ಇತರ ನೆನಪುಗಳು ಸಣ್ಣ ಸಣ್ಣ ಸಂಗತಿಗಳಾಗಿ ಬಂದು ಕೃತಿಯ ಸ್ವಾರಸ್ಯವನ್ನು ಹೆಚ್ಚಿಸುವಲ್ಲಿ ನೆರವಾಗಿವೆ.
ವಿದ್ಯಾಭೂಷಣರ ಆತ್ಮಕಥೆಯಲ್ಲಿ ಎದ್ದು ಕಾಣುವ ಒಂದಂಶವೆಂದರೆ ಅವರ ಪ್ರಾಮಾಣಿಕತೆ. ಸಂನ್ಯಾಸ ಒಲ್ಲದ ತಮ್ಮನ್ನು ಒತ್ತಾಯದಿಂದ ಪೀಠದಲ್ಲಿ ಕುಳ್ಳಿರಿಸಿದ ಕಾರಣ, ತಮ್ಮ ಮನಸ್ಸು ಸದಾ ಪೀಠತ್ಯಾಗವೆಂಬ ಪ್ರತಿಭಟನೆಗೆ ತುಡಿಯುತ್ತಿದ್ದುದನ್ನು ದಾಖಲಿಸುವುದರ ಜತೆಗೆ ಅವರು ತಮ್ಮ ನಿರ್ಧಾರ ಮತ್ತು ನಡೆಗಳ ಬಗ್ಗೆ ಸ್ವವಿಮರ್ಶೆ ಮಾಡುತ್ತಾರೆ. ತಮ್ಮ ಸ್ವಾರ್ಥಸಾಧನೆಗಾಗಿ ತಮ್ಮ ಶಿಷ್ಯರಾದ (ಈಗಿನ ಸುಬ್ರಹ್ಮಣ್ಯ ಸ್ವಾಮಿಗಳಾದ) ಶ್ರೀಧರ ಜೋಯಿಸರಿಗೆ ಒತ್ತಾಯದಿಂದ ಇದನ್ನು ದಾಟಿಸಿದ್ದೇನೆ, ಸ್ವಲ್ಪ ಹೆಚ್ಚೇ ವಯಸ್ಸಿನ ಅಂತರವಿರುವ ತಮ್ಮ ಪತ್ನಿಯನ್ನು ಮದುವೆಯಾದುದು ಸರಿಯಾಯಿತೇ ಇಲ್ಲವೇ? ಇತ್ಯಾದಿ ಪ್ರಶ್ನೆಗಳನ್ನು ತನಗೆ ತಾನೇ ಕೇಳಿಕೊಳ್ಳುತ್ತಾರೆ. ತೋಳ್ಪಾಡಿಯವರು ಬರೆದುಕೊಟ್ಟ ಭಾಷಣವನ್ನು ಪ್ರಸ್ತುತಪಡಿಸಿದ್ದು, ತಾವೇ ರಮಾ ಅವರಿಗೆ ಮೊದಲಾಗಿ ಪ್ರಸ್ತಾಪ ಮಾಡಿದ್ದು ಇತ್ಯಾದಿಗಳನ್ನು ಕೂಡಾ ಸಂಕೋಚವಿಲ್ಲದೆ ಬರೆದುಕೊಂಡಿದ್ದಾರೆ. ಜತೆಗೆ, ಮತ್ತೊಂದು ಕಡೆ ಸಂಯಮವನ್ನು ತೋರಿಸಿದ್ದಾರೆ. ತಾನು ಗಮನಿಸಿದ ಇತರರ ದೌರ್ಬಲ್ಯಗಳನ್ನು ಹೇಳದೆ ತನ್ನ ನಿಲುವುಗಳನ್ನು ಮಾತ್ರ ಹೇಳಿಕೊಂಡು ಹೋಗಿದ್ದಾರೆ.
“ನೆನಪೇ ಸಂಗೀತ – ಮರೆತೇ ಬಿಟ್ಟಿದ್ದ ನನ್ನ ಬದುಕಿನ ವಿಶಿಷ್ಟ ಸಂದರ್ಭಗಳನ್ನು ಮತ್ತೆ ನೆನಪಿಸಿಕೊಂಡು ಬರೆದುದು. ಇಲ್ಲಿ ಹೇಳದೇ ಉಳಿದುದು ಬಹಳಷ್ಟಿವೆ. ಮತ್ತದು ಬೇಕೆಂದೇ ಹೇಳದೇ ಉಳಿದದ್ದು. ಹಾಗೆಂದು ಹೇಳಿದವುಗಳಲ್ಲಿ ಅತಿಶಯೋಕ್ತಿಯೇನೂ ಇಲ್ಲ!” ಎಂದು ‘ನನ್ನೆರಡು ಮಾತು’ಗಳಲ್ಲಿ ಅವರು ಹೇಳಿಕೊಂಡಿದ್ದಾರೆ.
ಒಂದು ಕೃತಿ ಅಂದರೆ ಅದರ ಮುನ್ನುಡಿ, ಬೆನ್ನುಡಿ ಎಲ್ಲ ಸೇರಿದ ಸಮಗ್ರ. ಹಾಗಾಗಿ ಲಕ್ಷ್ಮೀಶ ತೋಳ್ಪಾಡಿಯವರ ಮುನ್ನುಡಿಯೂ ಈ ಕೃತಿಯ ಭಾಗವಾಗಿಯೇ ಇದೆ. ಅವರ ಮುನ್ನುಡಿ, ವಿದ್ಯಾಭೂಷಣರ ಒಂದು ಮಾತಿಗೆ ಉತ್ತರವಾಗಿ ಬಂದು, ಇಡಿಯ ಕೃತಿಯನ್ನು ವಿಸ್ತರಿಸಿದೆ, ಮತ್ತು ಎತ್ತರಿಸಿದೆ.
ಈ ಕೃತಿಯನ್ನು ಒಂದು ಆತ್ಮಕಥನವಾದರೂ ಒಂದು ಸೃಜನಶೀಲ ಸಾಹಿತ್ಯ ಕೃತಿಯಾಗಿ ಪರಿಗಣಿಸಬೇಕಾಗಿದೆ. ಆಗ ವಿದ್ಯಾಭೂಷಣರ ಬದುಕಿನ ಎರಡು ಮುಖ್ಯ ಧಾರೆಗಳು ಸ್ಪಷ್ಟವಾಗುತ್ತವೆ. ಒಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿಯವರು ಪ್ರತಿನಿಧಿಸುವ ಬೌದ್ಧಿಕ – ಆಧ್ಯಾತ್ಮಿಕ ಮೌಲ್ಯಗಳು, ಇನ್ನೊಂದು ಅವರ ಪತ್ನಿ ಶ್ರೀಮತಿ ರಮಾ ವಿದ್ಯಾಭೂಷಣರು ಪ್ರತಿನಿಧಿಸುವ ಸಾಂಸಾರಿಕ ಮೌಲ್ಯಗಳು. ವಿದ್ಯಾಭೂಷಣರೂ ತಮ್ಮಲ್ಲಿರುವ ಈ ಎರಡು ತುಡಿತಗಳನ್ನು ಒಂದು ರೂಪಕದ ರೀತಿಯಲ್ಲಿ ಹೇಳುತ್ತಲೇ ನೆನಪುಗಳನ್ನು ಬಿಚ್ಚಿಡಲು ಪ್ರಾರಂಭಿಸುವುದು: “ದೇವ ನರಸಿಂಹ ನನ್ನ ಮನದೈವ…… ಕೆಂಡಸಂಪಿಗೆ ಹೂವು ಆತನಿಗೆ ಅತಿಪ್ರಿಯವಾದದ್ದು. ನನ್ನ ಹೆಂಡತಿಗೂ ಆ ಹೂವು ಪ್ರಿಯ…. ಕೆಂಡಸಂಪಿಗೆಯನ್ನು ವಿಷ್ಣುಪ್ರತೀಕವಾದ ಸಾಲಿಗ್ರಾಮದ ಮೇಲಿರಿಸಬಾರದಂತೆ. ಸಾಲಿಗ್ರಾಮಶಿಲೆ ವಜ್ರಕಠಿಣವಾದರೂ ಕೆಂಡಸಂಪಿಗೆಯ ಪರಿಮಳದ ಪ್ರಖರತೆಗೆ ಒಡೆದೇ ಹೋಗಬಹುದಂತೆ! ವಜ್ರನಖನಾದ ನರಸಿಂಹನ ವಜ್ರಕಠಿಣ ಪ್ರತೀಕ ಸಾಲಿಗ್ರಾಮವನ್ನೇ ಬೆದರಿಸಿಹ ಈ ಕೆಂಡಸಂಪಿಗೆಯನ್ನು ಏನನ್ನೋಣ?!”
ನೇರವಾಗಿ ಇದನ್ನು ಘಟನೆಗಳ ಮೂಲಕ ನೋಡುವುದಾದರೆ ಅದು ಹೀಗಿದೆ. ಚಿಂತಕ ಲಕ್ಷ್ಮೀಶ ತೋಳ್ಪಾಡಿಯವರು ಪ್ರಾರಂಭದಿಂದಲೂ ವಿದ್ಯಾಭೂಷಣರ ಅತ್ಯಂತ ಆತ್ಮೀಯ ಗೆಳೆಯ, ಸಹಪಾಠಿ (ಸತೀರ್ಥ) ಮತ್ತು ಮಾರ್ಗದರ್ಶಕ. ಮಠದ ಕಾರ್ಯಕ್ರಮಗಳಿಗೆ ಬೌದ್ಧಿಕ ಔನ್ನತ್ಯವನ್ನು ಮತ್ತು ಲಿಬರಲ್ ದೃಷ್ಟಿಕೋನವನ್ನು ತಂದುಕೊಡುವಲ್ಲಿ ಲಕ್ಷ್ಮೀಶ ತೋಳ್ಪಾಡಿಯವರ ಪಾತ್ರವಿದೆ.
ವಿದ್ಯಾಭೂಷಣರು ರಮಾ ಅವರನ್ನು ಮದುವೆಯಾಗಲು ನಿರ್ಧರಿಸಿ ಈ ನಿರ್ಧಾರ ಗಟ್ಟಿಯಾಗುತ್ತಿದ್ದ ಸಂದರ್ಭಗಳಲ್ಲಿ ತೋಳ್ಪಾಡಿಯವರು ಅದನ್ನು ವಿರೋಧಿಸುತ್ತಾರೆ. ರಮಾ ಅವರ ಜತೆಗೆ ದೂರವಾಣಿಯಲ್ಲಿ ಮಾತಾಡುತ್ತಿದ್ದ ವಿದ್ಯಾಭೂಷಣರಿಗೆ, ‘ಫೋನಿನಲ್ಲಿ ಮಾತಾಡುವುದನ್ನು ಬಿಡಿ. ಆಗ ಎಲ್ಲ ಮರೆತುಹೋಗುತ್ತದೆ” ಎಂದು ಸಲಹೆ ಕೊಡುತ್ತಾರೆ.
ವಿದ್ಯಾಭೂಷಣರು ಕೊನೆಗೂ ಪೀಠತ್ಯಾಗದ ನಿರ್ಧಾರ ಮಾಡಿ, ಅದನ್ನು ಮೊದಲಾಗಿ ಮಿತ್ರ ತೋಳ್ಪಾಡಿಯವರಿಗೆ ಹೇಳಲು ಅವರ ಮನೆಗೆ ಹೋಗುತ್ತಾರೆ. ಆ ಸನ್ನಿವೇಶ ಹೀಗಿದೆ:
“ಅಂತೂ ಶ್ರೀಧರ ಜೋಯಿಸರಿಗೆ ಸನ್ಯಾಸಾಶ್ರಮ ನೀಡುವ – ಕುಕ್ಕೆ ಸುಬ್ರಹ್ಮಣ್ಯ ಮಠಕ್ಕೆ ಅಧಿಪತಿಯನ್ನಾಗಿಸುವ ದಿನ ಬಂತೇ ಬಂತು. ಅದಕ್ಕು ಮುಂಚೆ ತೋಳ್ಪಾಡಿಗೆ ವಿಷಯ ವಿವರಿಸಿ, ಮುಂದಿನ ಯೋಜನೆ ಕುರಿತು ಮಾತಾಡಲೆಂದು ಶಾಂತಿಗೋಡಿನ ಆತನ ಮನೆಗೇ ಹೊರಟೆ……
ತೋಳ್ಪಾಡಿಯವರು ಬರೆದುಕೊಟ್ಟ ಭಾಷಣವನ್ನು ಪ್ರಸ್ತುತಪಡಿಸಿದ್ದು, ತಾವೇ ರಮಾ ಅವರಿಗೆ ಮೊದಲಾಗಿ ಪ್ರಸ್ತಾಪ ಮಾಡಿದ್ದು ಇತ್ಯಾದಿಗಳನ್ನು ಕೂಡಾ ಸಂಕೋಚವಿಲ್ಲದೆ ಬರೆದುಕೊಂಡಿದ್ದಾರೆ. ಜತೆಗೆ, ಮತ್ತೊಂದು ಕಡೆ ಸಂಯಮವನ್ನು ತೋರಿಸಿದ್ದಾರೆ. ತಾನು ಗಮನಿಸಿದ ಇತರರ ದೌರ್ಬಲ್ಯಗಳನ್ನು ಹೇಳದೆ ತನ್ನ ನಿಲುವುಗಳನ್ನು ಮಾತ್ರ ಹೇಳಿಕೊಂಡು ಹೋಗಿದ್ದಾರೆ.
“ನಗುತ್ತಾ ವಿಷಯ ತಿಳಿಸಿದೆ. ನಡೆಯಲಿರುವ ಕಾರ್ಯಕ್ರಮದ ರೂಪರೇಷೆ ವಿವರಿಸಿದೆ, ನನ್ನ ಮುಂದಿನ ಹೆಜ್ಜೆಯ ಕುರಿತಾಗಿ ಅವನ ಸಲಹೆ ಕೇಳಿದೆ. ಅಷ್ಟರತನಕ ನನ್ನೆಲ್ಲ ಮಾತುಗಳನ್ನು ಸುಮ್ಮನೆ ಆಲಿಸುತ್ತಿದ್ದವನು, ಒಮ್ಮಿಂದೊಮ್ಮೆಲೆ ‘ಭಗ್ಗನೆ’ ಉರಿದುಬಿಟ್ಟ. ಆ ವರ್ತನೆ, ಆಗಿನ ಅವನ ಮಾತುಗಳು ನನಗೆ ತೀರ ಅನಿರೀಕ್ಷಿತವಾದವುಗಳಾಗಿತ್ತು. ಅವನ ಮುಖ ಕೆಂಪಗೆ, ಅವನ ತುಟಿಗಳು ನಡುಗುತ್ತಿದ್ದವು, “ಏನು? – ನನ್ನನ್ನು ಪರೀಕ್ಷೆ ಮಾಡಲು ಬಂದಿದೀರಾ? – ಏನು ಹೇಳ್ತಾ ಇದೀರಿ? – ಮತ್ತೆ ಮಠ ಬಿಡ್ತಿದೀರಿ? – ಸಣ್ಣ ಹುಡುಗಿಯನ್ನು ಮದುವೆಯಾಗ್ತಾ ಇದೀರಿ?” (ಪುಟ 124).
ಇದನ್ನು ತಮ್ಮ ‘ಕನ್ನಡಿಹೊಳೆ’ ಎಂಬ ಮುನ್ನುಡಿಯಲ್ಲಿ ಪ್ರಸ್ತಾಪಿಸಿರುವ ತೋಳ್ಪಾಡಿಯವರು ಹೀಗೆ ಹೇಳುತ್ತಾರೆ: “ವಿದ್ಯಾಭೂಷಣರ ಈ ನೆನಪಿನ ಬರಹದಲ್ಲಿ ಕೊನೆಯಲ್ಲಿ ನಾನು ಅವರ ನಿಲುವನ್ನು ವಿರೋಧಿಸಿದ ಬಗ್ಗೆ ಕೆಲವು ಮಾತುಗಳು ಬಂದಿವೆ. ಹೌದು. ನನ್ನ ಮಾತುಗಳು ರೂಕ್ಷವಾಗಿದ್ದವು. ಅದಕ್ಕಾಗಿ ಅವರಲ್ಲಿ ಕ್ಷಮೆ ಯಾಚಿಸುವೆ. ಆದರೆ ನಾನು ತಳೆದ ನಿಲುವಿಗೆ – ಸಮರ್ಥನೆಯಲ್ಲ – ಒಂದೇ ಒಂದು ಕಾರಣವಾದರೂ ಇರಬಹುದಲ್ಲವೆ? ಇರಬಹುದು. ಆದರೆ ಆ ಕಾರಣ ನನ್ನಲ್ಲಿಯೇ ಇಂಗಿಹೋಗಲಿ. ನನಗೇ ಅದು ಮರೆತುಹೋಗಲಿ.”
ಆ ಕಾರಣ ತಾತ್ವಿಕವಾದುದಾಗಿರಬಹುದು. ತೋಳ್ಪಾಡಿಯವರು ಈ ಮುನ್ನುಡಿಯ ಕೊನೆಯಲ್ಲಿ ಹೀಗೆ ಹಾರೈಸುತ್ತಾರೆ: “ಪ್ರಿಯ ವಿದ್ಯಾಭೂಷಣರಿಗೂ ಅವರೊಳಗಿನ ಇಷ್ಟದೈವದ ನಿಲುವು “ಕನ್ನೆಯ ಸ್ನೇಹದಂತೆ ಇದ್ದಿತ್ತು” ಎಂಬ ಬಗೆಯ ಅನುಭವವಾಗಿ ಬರಲಿ ಎಂದು ಎದೆಯಾಂತರಾಳದಿಂದ ಹಾರೈಸುವೆ.” (ಬಸವಣ್ಣನವರ ಮಾತು – ‘ಕೂಡಲ ಸಂಗನ ನಿಲವು ಕನ್ನೆಯ ಸ್ನೇಹದಂತೆ ಇದ್ದಿತ್ತು”.)
ಲಕ್ಷ್ಮೀಶ ತೋಳ್ಪಾಡಿಯವರು ಹೇಳುತ್ತಿರುವ ಮಾತು, ವಿದ್ಯಾಭೂಷಣರ ಸಾಂಸಾರಿಕ ಬದುಕು ನೆಲೆಕಂಡುಕೊಂಡಂತೆ ಆಧ್ಯಾತ್ಮಿಕ ಹುಡುಕಾಟವೂ ಇನ್ನಷ್ಟು ತೀವ್ರವಾಗಲಿ, ಅದು ಅವರಿಗೆ ಸಿದ್ಧಿಸಲಿ ಎನ್ನುವುದಾಗಿರಬಹುದು. ವಿದ್ಯಾಭೂಷಣರು ತಮ್ಮ ಇಷ್ಟದೈವ ಲಕ್ಷ್ಮೀನರಸಿಂಹನ ಮೂರ್ತಿಯನ್ನು ತಮ್ಮ ಆಧ್ಯಾತ್ಮಿಕ ಸ್ಪಂದನವಿರುವ ಮನೆಯಲ್ಲಿ ಪ್ರತಿಷ್ಠಾಪಿಸಿದ್ದಾರೆ, ಮೊದಲಿನಂತೆಯೆ ನಿತ್ಯಾನುಷ್ಠಾನ ಇತ್ಯಾದಿಗಳಲ್ಲಿ ತೊಡಗಿದ್ದಾರೆ ಎನ್ನುವುದನ್ನು ಗಮನಿಸಿದರೆ ಅವರ ಬದುಕಿನ ಎರಡು ತುಡಿತಗಳು ಸ್ಪಷ್ಟವಾಗುತ್ತವೆ.
ಈ ಕಥಾನಕದಲ್ಲಿ ಸಂನ್ಯಾಸ, ಬಾಲ ಸಂನ್ಯಾಸ, ಮಠಗಳ ಅಗತ್ಯ, ಗೃಹಸ್ಥ ಸ್ವಾಮಿಗಳ ಪದ್ಧತಿಯ (ಋಷಿ ಪರಂಪರೆ) ಸಾಧ್ಯತೆ ಇತ್ಯಾದಿಗಳ ಬಗ್ಗೆ ಕೆಲವು ತಾತ್ವಿಕ ಚರ್ಚೆಗಳು ಇವೆ. ಪೇಜಾವರ ಸ್ವಾಮೀಜಿ, ಪಲಿಮಾರು ಸ್ವಾಮೀಜಿ, ಮಾಸ್ತಿ ಮುಂತಾದವರ ಅಭಿಪ್ರಾಯಗಳು, ಸ್ವತಃ ವಿದ್ಯಾಭೂಷಣರ ಚಿಂತನೆಗಳು ಇವೆಲ್ಲ ದಾಖಲಾಗಿ ಈ ವಿಷಯದ ಕುರಿತ ಒಂದು ಚಿಂತನೆಯಾಗಿ ಬೆಳೆದಿದೆ. ತಪಸ್ವಿಗಳಾದ ಪಲಿಮಾರು ಸ್ವಾಮೀಜಿಯವರು ಮತ್ತು ಅವರ ಶಿಷ್ಯ ಪೇಜಾವರ ಸ್ವಾಮೀಜಿಯವರು, ಜತೆಗೆ ಪೇಜಾವರರ ಶಿಷ್ಯ ವಿದ್ಯಾಭೂಷಣರು ಒಂದು ದಿನ ಏಕಾಂತದಲ್ಲಿ ಕುಳಿತಿದ್ದಾಗ ನಡೆದ ಒಂದು ಮಾತುಕತೆ ಕುತೂಹಲಕರವಾಗಿದೆ. ವಿದ್ಯಾಭೂಷಣರು ದಾಖಲಿಸುವ ಇನ್ನೊಂದು ಸನ್ನಿವೇಶ ಹೀಗಿದೆ:
“ಪೇಜಾವರ ಶ್ರೀಪಾದರು ಆಗತಾನೇ ಕೆನ್ನೆಗಳಲ್ಲಿ ಹಾಲು ಆರದ, ಮೀಸೆ ಮೂಡದ ವಟುವೊಬ್ಬನನ್ನು ತಮ್ಮ ಉತ್ತರಾಧಿಕಾರಿಯೆಂದು ಆಯ್ಕೆ ಮಾಡಿ, ಸನ್ಯಾಸ ನೀಡಿ ತಮ್ಮ ಜೊತೆಗಿರಿಸಿಕೊಂಡಿದ್ದರು. ಬಾಲಯತಿಯ ಮುಖದಲ್ಲಿ ಅಪೂರ್ವ ತೇಜಸ್ಸು. ಅವರದು ಅಪೂರ್ವ ಪ್ರತಿಭೆಯೂ ಹೌದು. ಪೇಜಾವರ ಶ್ರೀಪಾದರನ್ನು ಭೇಟಿಯಾಗಲೆಂದು ಶತಾಯುಷ್ಯ ಸಮೀಪಿಸುತ್ತಿದ್ದ, ಕನ್ನಡದ ಆಸ್ತಿ – ಮಾಸ್ತಿಯವರು ಬಂದಿದ್ದರು. ಶ್ರೀಪಾದರ ಜೊತೆ ನಾನೂ ಇದ್ದೆ. ಮಾಸ್ತಿಯವರಿಗೆ ನಮ್ಮೆಲ್ಲರನ್ನು ಶ್ರೀಪಾದರು ಪರಿಚಯಿಸಿದರು. ಜೊತೆಗೆ ಹೊಸ ಸ್ವಾಮಿಗಳನ್ನೂ. ಮಾಸ್ತಿಯವರು ಹೊಸ ಸ್ವಾಮಿಗಳನ್ನು ದಿಟ್ಟಿಸಿ ನೋಡಿದರು – ಮತ್ತೂ ನೋಡಿದರು! ‘ಅಯ್ಯೋ ಪಾಪ’ ಎಂದುಸುರಿ ಸುಮ್ಮನಾದರು. ಕೂಡಲೆ ಹಿರಿಯ ಶ್ರೀಪಾದರು ಪ್ರತಿಕ್ರಿಯಿಸುತ್ತ, “ಇಲ್ಲ ಇಲ್ಲ, ಅವರಿಗೆ ಒಳ್ಳೆಯ ತರಬೇತಿ – ಶಿಕ್ಷಣ ನೀಡುವೆವು. ಪಾಠ ಪ್ರವಚನ ಮಾಡಿ ಯೋಗ್ಯ ರೀತಿಯಿಂದ ಅವರನ್ನು ಸಿದ್ಧಪಡಿಸುವೆವು” ಎಂದರೆ ಮಾಸ್ತಿಯವರಾದರೋ, “ಇಲ್ಲ ಇಲ್ಲ, ನನಗಿದರಲ್ಲಿ ನಂಬಿಕೆಯಿಲ್ಲ – ಸರಿ ಸರಿ ಇರಲೀ” ಎನ್ನುತ್ತಾ ಸ್ವಲ್ಪ ಹೊತ್ತು ಸುಮ್ಮನಾಗಿ – ಕೈಯಾಡಿಸಿ ವಿಷಯಾಂತರಗೊಂಡರು! ನಾನೂ ನೋಡುತ್ತಲೇ ಇದ್ದೆ.” (ಪುಟ 58)
ಈ ಒಟ್ಟು ಕಥಾನಕವನ್ನು ಒಂದು ರೂಪಕವಾಗಿ ಗ್ರಹಿಸುವಂತಹ ತೋಳ್ಪಾಡಿಯವರ ಮುನ್ನುಡಿಯ ಮಾತುಗಳಿವು: “ಆ ಕಾಲದ ಕುಕ್ಕೆಯ ಕುಮಾರಪರ್ವತದ ಚಾಚಿದ ನೆರಳ ಅಡಿಯಲ್ಲಿ ಮುಗ್ಧ ಕುಮಾರಿಯಂತಿದ್ದ ಕುಕ್ಕೆಯ ಗಹನ ನೀರವ ರಾತ್ರಿಗಳಲ್ಲಿ – ಮಠದ ಮೇಲುಪ್ಪರಿಗೆಯ ಕಿರುಕೋಣೆಯಲ್ಲಿ …. ಈ ನನ್ನ ಗೆಳೆಯ ವಿದ್ಯಾಭೂಷಣರು – ನೀನಲ್ಲ; ನೀನು ಗೆಳೆಯನಿರಬಹುದು – ಆದರೆ ಹಾಡೇ ನನ್ನ ಪ್ರಾಣಸಖಿ – ಎನ್ನುವಂತೆ ಜಯದೇವನ ಅಷ್ಟಪದಿ – “ಪ್ರಿಯೇ ಚಾರುಶೀಲೇ” ಹಾಡುತ್ತಿದ್ದರೆ – ಓಹ್! ಅದೇನು ಅನುಭವ!…. ಆದರೂ ಇಲ್ಲಿ ಒಂದು ವಿ-ಸಂಗತಿ ಇರುವಂತಿದೆ. ಅದೇನೆಂದರೆ ಮಠದ ಉಪ್ಪರಿಗೆಯಲ್ಲಿ ಕಾವಿ ಉಟ್ಟ ತರುಣ ಕೊರಲಿನಿಂದ ಈ ಹಾಡು ಹುಟ್ಟಿ ಬರುತ್ತಿದೆ!”
ಲೇಖಕ, ಸಂಗೀತ ವಿಷಯದಲ್ಲಿ ಅಧ್ಯಯನ ಮಾಡಿ ಸಂಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದಿರುವ ಡಾ.ವಿದ್ಯಾಭೂಷಣರ ಈ ಕೃತಿ ಅವರ ಜನಪ್ರಿಯತೆಯ ಕಾರಣವಾಗಿ ಮಾತ್ರ ಮುಖ್ಯವಾಗುವುದಲ್ಲ, ಸಮಾಜದೊಳಗಿನ ಸಂನ್ಯಾಸಾಶ್ರಮದಂತಹ ಒಂದು ವ್ಯವಸ್ಥೆಯ ಭಾಗವಾಗಿದ್ದವರು ನಡೆಸಿದ ಸ್ವಾನುಭವದಿಂದ ಗಟ್ಟಿತನ ಪಡೆದ ಗಹನವಾದ ಚಿಂತನೆಗಳ ಸಹಿತ ಒಂದು ಜೀವನಕ್ರಮದ, ಒಂದು ಸಂಸ್ಕೃತಿಯ ದಾಖಲೆಯಾಗಿಯೂ ಮುಖ್ಯವಾಗಿದೆ.
(ಪುಸ್ತಕ: ನೆನಪೇ ಸಂಗೀತ (ಜೀವನ ಕಥನ), ಲೇಖಕರು : ವಿದ್ಯಾಭೂಷಣ, ಪ್ರ.: ಪ್ರಕೃತಿ ಪ್ರಕಾಶನ, ಬೆಂಗಳೂರು, ಮೊದಲನೆಯ ಮುದ್ರಣ: 2018, ಬೆಲೆ: 180, ಪುಟಗಳು: 152)
ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82.