ಯಾವುದೋ ದೇಶದಿಂದ ಬರುವ ಪೆಟ್ರೋಲಿಯಂ ದ್ರವ್ಯವನ್ನೇ ಆಧರಿಸಿಯೇ ರೈತರು ಬದುಕು ನಡೆಸುತ್ತ, ಮಾರುಕಟ್ಟೆಗೆ ತಮ್ಮದೆಲ್ಲವನ್ನೂ ಮಾರಿಕೊಳ್ಳುವ ದುರ್ಭರ ಪರಿಸ್ಥಿತಿಯಿಂದ ಬಿಡುಗಡೆ ಪಡೆಯಬೇಕೆಂಬ ಸಣ್ಣ ಹಂಬಲವೊಂದು ಇಲ್ಲಿ ಮೊಳಕೆಯೊಡೆಯುತ್ತಿರುವುದು ನನಗೆ ಕಾಣಿಸುತ್ತಿದೆ. ಸ್ಥಳೀಯ ಮಟ್ಟದಲ್ಲಿ ರೈತರು ಸಂಘಟಿತರಾದರೆ, ಸ್ಥಳೀಯ ಸಂಪನ್ಮೂಲವನ್ನೇ ಆದಷ್ಟೂ ಬಳಸಬೇಕೆಂಬ ಪ್ರೇರಣೆ ಅವರಲ್ಲಿ ಮೂಡಿತೆಂದರೆ, ಪ್ರಕೃತಿಯ ವಿನಿಮಯ ಪದ್ಧತಿಗಳನ್ನೂ ನಿಯಮಗಳನ್ನು ಗೌರವಿಸಿದಂತಾಗುತ್ತದೆ.
ಮಲ್ಲಿಕಾರ್ಜುನ ಹೊಸಪಾಳ್ಯ ಸಂಪಾದಿಸಿದ ವಿಜಯನಗರ ಜಿಲ್ಲೆಯ ಕೃಷಿ ಕಥನಗಳ “ಹಸಿರು ಮಾತುಕತೆ” ಕೃತಿಗೆ ನಾಗೇಶ ಹೆಗಡೆಯವರು ಬರೆದ ಮಾತುಗಳು

ವಿಜಯನಗರ ಜಿಲ್ಲೆಯ ರೈತರು ʻಹಸಿರಿನೊಂದಿಗೆ ಮಾತುಕತೆʼ ಪ್ರಾರಂಭಿಸಿ, ಒಂದೇ ವರ್ಷದಲ್ಲಿ ಸಾವಯವ ಸಿರಿಧಾನ್ಯ ಮೇಳವನ್ನೂ ಫಲಪ್ರದವಾಗಿ ನಡೆಸಿ, ಅದರ ಮುಂದುವರಿಕೆಯಾಗಿ ಇದೀಗ ತಮ್ಮ ಅನುಭವದ ಹೂರಣವನ್ನು ಹೊರಜಗತ್ತಿಗೂ ಹಂಚಿಕೊಳ್ಳಲೆಂದು ಈ ಕೃತಿಯನ್ನು ಸಿದ್ಧಪಡಿಸಿದ್ದಾರೆ. ಜಿಲ್ಲೆಯ ನೂರಾರು ರೈತರು ಸ್ವಯಂಪ್ರೇರಿತರಾಗಿ ಕೈ ಕೈ ಜೋಡಿಸಿ ಯಶಸ್ಸಿನ ಇಷ್ಟೊಂದು ಮೆಟ್ಟಿಲುಗಳನ್ನು ಏರಿದ್ದು ಅನುಕರಣೀಯವೂ ಹೌದು, ಪ್ರೇರಣೆದಾಯಕವೂ ಹೌದು.

(ಮಲ್ಲಿಕಾರ್ಜುನ ಹೊಸಪಾಳ್ಯ)

ಈ ಇಡೀ ಉಪಕ್ರಮದಲ್ಲಿ ಅನೇಕ ವಿಧದ ವಿನಿಮಯವನ್ನು ನಾನು ಗಮನಿಸಿದ್ದೇನೆ. ಕೃಷಿಕರ ಬದುಕಿನ ಕಷ್ಟಸುಖಗಳ ವಿಚಾರ ವಿನಿಮಯ, ಸ್ನೇಹಸೌಹಾರ್ದಗಳ ವಿನಿಮಯ, ಬೇಸಾಯಸಾಧನಗಳ ವಿನಿಮಯ, ಬೀಜ ಮತ್ತು ಸಸಿಗಳ ವಿನಿಮಯ, ಒಂದೆ, ಎರಡೆ? ಇದು ಒಂದು ರೀತಿಯಲ್ಲಿ ಪ್ರಕೃತಿಯ ನಿಯಮಗಳ ಸಹಜ ಅನುಕರಣೆ ಎಂದೇ ಹೇಳಬಹುದು. ನಿಸರ್ಗದಲ್ಲಿ ನಾವಿದನ್ನು ಹೆಜ್ಜೆಹೆಜ್ಜೆಗೂ ನೋಡುತ್ತೇವೆ. ಹೂವು ತನ್ನ ಮಕರಂದವನ್ನು ಉಣಿಸಿಯೇ ಪರಾಗಸ್ಪರ್ಶಕ್ಕೆ ಜೇನಿನ ಸಹಾಯವನ್ನು ಪಡೆಯುತ್ತದೆ. ಸಸ್ಯದ ಆಶ್ರಯವನ್ನು ಪಡೆದೇ ಏಕಾಣುಜೀವಿಗಳು ಗಾಳಿಯಲ್ಲಿನ ಸಾರಜನಕವನ್ನು ಸ್ಥಿರೀಕರಿಸಿ ಸಸ್ಯಗಳಿಗೆ ನೀಡುತ್ತವೆ. ಇಂಗಾಲದ ಡೈಆಕ್ಸೈಡನ್ನು ಹೀರಿಕೊಳ್ಳುತ್ತಲೇ ಸಸ್ಯಗಳು ಇತರ ಜೀವಿಗಳಿಗೆ ಆಮ್ಲಜನಕವನ್ನು ನೀಡುತ್ತವೆ. ಇಂಥ ಲೆಕ್ಕವಿಲ್ಲದಷ್ಟು ಉದಾಹರಣೆಗಳು ಹೆಜ್ಜೆಹೆಜ್ಜೆಗೂ ಸಿಗುತ್ತವೆ.

ಮನುಷ್ಯ ಕೂಡ ತನ್ನ ವಿಕಾಸಮಾರ್ಗದುದ್ದಕ್ಕೂ ವಿನಿಮಯ ಪದ್ಧತಿಯಲ್ಲೇ ಬದುಕಿ ಬಾಳಿದ್ದರೂ ಈಚಿನ ಕೆಲವು ದಶಕಗಳಲ್ಲಿ ಹಣವೇ ಎಲ್ಲೆಲ್ಲೂ ಪ್ರಧಾನವಾಗುತ್ತಿದೆ. ರೈತನಿಗೆ ಸಾಲ ಕೊಡಿಸಿ, ಆ ಹಣದಿಂದಲೇ ರಸಗೊಬ್ಬರ, ಪೀಡೆನಾಶಕ, ಹೈಬ್ರಿಡ್‌ ಬೀಜಗಳನ್ನು ಉತ್ಪಾದಿಸಿ ಮಾರುವ ಕಂಪನಿಗಳು ಮೇಲೆದ್ದು ಮೆರೆಯುತ್ತಿವೆ. ಟ್ರ್ಯಾಕ್ಟರ್‌, ಪಂಪ್‌ಸೆಟ್‌, ಪಾಲಿಹೌಸ್‌ ಕಂಪನಿಗಳು ಉದ್ಧಾರವಾಗಿವೆ. ರೈತರ ಸ್ಥಿತಿ ಮಾತ್ರ ಮೊದಲಿದ್ದಂತೆಯೇ ಇದೆ, ಅಥವಾ ಇನ್ನೂ ಕೆಳಕ್ಕಿಳಿದಿದೆ. ಸಾಲದ ಸುಳಿಯಲ್ಲಿ ಸಿಕ್ಕು ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಸಂಖ್ಯೆ ಹೆಚ್ಚುತ್ತ ಹೋಗುತ್ತಿದೆ. ಕೃಷಿಋಷಿ ಫುಕುವೊಕಾ ಹೇಳಿದಂತೆ ರೈತರು ಒಂದೆಡೆ ವಿರಾಮವಾಗಿ ಕೂತು ಹಾಡು, ಹರಟೆಯಲ್ಲೂ ತೊಡಗಲು ಸಾಧ್ಯವಿಲ್ಲದ ಮಟ್ಟಿಗೆ ಇಂದಿನ ಹಣಕಾಸು ವ್ಯವಸ್ಥೆ ಅವರನ್ನು ಅಹೋರಾತ್ರಿ ಕೆಲಸಕ್ಕೆ ಹಚ್ಚಿದೆ. ಕೃಷಿಕರು ಸಂಘಟಿತರಾಗದ ಹಾಗೆ, ತಂತಮ್ಮೊಳಗೆ ವಿಚಾರ ವಿನಿಮಯವನ್ನೂ ಮಾಡಿಕೊಳ್ಳದ ಹಾಗೆ ಅವರು ಬಯಲುಬಂಧಿಗಳಾಗಿದ್ದಾರೆ.

ಈ ಬಂಧನದಿಂದ ಬಿಡಿಸಿಕೊಳ್ಳುವ ಸಂಘಟಿತ ಪ್ರಯತ್ನವೊಂದು ನನಗೆ ಈ ʻಹಸಿರು ಮಾತುಕತೆʼಯಲ್ಲಿ ಕಾಣುತ್ತಿದೆ. ಯಾವುದೋ ದೇಶದಿಂದ ಬರುವ ಪೆಟ್ರೋಲಿಯಂ ದ್ರವ್ಯವನ್ನೇ ಆಧರಿಸಿಯೇ ರೈತರು ಬದುಕು ನಡೆಸುತ್ತ, ಮಾರುಕಟ್ಟೆಗೆ ತಮ್ಮದೆಲ್ಲವನ್ನೂ ಮಾರಿಕೊಳ್ಳುವ ದುರ್ಭರ ಪರಿಸ್ಥಿತಿಯಿಂದ ಬಿಡುಗಡೆ ಪಡೆಯಬೇಕೆಂಬ ಸಣ್ಣ ಹಂಬಲವೊಂದು ಇಲ್ಲಿ ಮೊಳಕೆಯೊಡೆಯುತ್ತಿರುವುದು ನನಗೆ ಕಾಣಿಸುತ್ತಿದೆ. ಸ್ಥಳೀಯ ಮಟ್ಟದಲ್ಲಿ ರೈತರು ಸಂಘಟಿತರಾದರೆ, ಸ್ಥಳೀಯ ಸಂಪನ್ಮೂಲವನ್ನೇ ಆದಷ್ಟೂ ಬಳಸಬೇಕೆಂಬ ಪ್ರೇರಣೆ ಅವರಲ್ಲಿ ಮೂಡಿತೆಂದರೆ, ಪ್ರಕೃತಿಯ ವಿನಿಮಯ ಪದ್ಧತಿಗಳನ್ನೂ ನಿಯಮಗಳನ್ನು ಗೌರವಿಸಿದಂತಾಗುತ್ತದೆ. ಆಳ ಪಾತಾಳದಿಂದ ಕಚ್ಚಾತೈಲವನ್ನೂ ಖನಿಜವನ್ನೂ ನೀರನ್ನೂ ಮೇಲೆತ್ತಿ ಆಕಾಶಕ್ಕೆ ತೂರುತ್ತ ಈಗಂತೂ ಇಡೀ ಪೃಥ್ವಿಯೇ ಬಿಸಿಪ್ರಳಯವನ್ನು ತನ್ನ ಮೈಮೇಲೆ ಆವಾಹಿಸಿಕೊಳ್ಳುತ್ತಿದೆ. ಬರುತ್ತಿರುವ ಈ ಮಹಾ ಸಂಕಟದಿಂದ ಬಚಾವಾಗುವ ವಿಧಾನವನ್ನೂ ರೈತರೇ ಹುಡುಕಿಕೊಳ್ಳಬೇಕಿದೆ. ಸಂಕಟದ ನಾಳಿನ ಪರಿಹಾರವನ್ನೂ ಅವರೇ ಸೂಚಿಸಬೇಕಿದೆ. ಕೃಷಿಸಮಾಜದವರೇ ಒಂದೆಡೆ ಆಗಾಗ ಕಲೆತು ಸಮಾಲೋಚನೆ ಮಾಡುವ ಅಗತ್ಯ ಹಿಂದೆಂದಿಗಿಂತ ಈಗ ಹೆಚ್ಚಿದೆ.

(ನಾಗೇಶ ಹೆಗಡೆ)

ರೈತರು ತಂತಮ್ಮೊಳಗೆ ವಿಚಾರ ವಿನಿಮಯ, ಬೀಜ ವಿನಿಮಯ ನಡೆಸುವ ಅನೇಕ ವೇದಿಕೆಗಳು ಕರ್ನಾಟಕದಲ್ಲಿ ಆಗಾಗ ಅಲ್ಲಲ್ಲಿ ಸೃಷ್ಟಿಯಾಗಿವೆ ನಿಜ. ಆದರೆ ತಮ್ಮ ಇದುವರೆಗಿನ ಮಾತುಕತೆಗಳನ್ನು, ಸಾಧನೆಗಳನ್ನು ಮತ್ತು ಸವಾಲುಗಳನ್ನು ಹೀಗೆ ಪುಸ್ತಕ ರೂಪದಲ್ಲಿ ದಾಖಲಿಸಿದ್ದು ಇದೇ ಮೊದಲಬಾರಿ ಎನ್ನಬೇಕು. ಕೂತು ಬರೆಯುವಷ್ಟು ವ್ಯವಧಾನವೂ ಸೂಕ್ತ ಪರಿಕರಗಳೂ ಇಲ್ಲದ ಪರಿಶ್ರಮಿಗಳೇ ಇದನ್ನೆಲ್ಲ ಬರೆದಿದ್ದಾರೆ ಎಂದರೆ, ಅವರಿಂದ ಇದನ್ನು ಬರೆಸಿ, ಒಪ್ಪವಾಗಿ ಜೋಡಿಸಿ, ಪ್ರಕಟಿಸಿದ ಸಂಪಾದಕ ಮಲ್ಲಿಕಾರ್ಜುನ ಹೊಸಪಾಳ್ಯರ ಶ್ರಮವನ್ನು ಯಾರೂ ಊಹಿಸಬಹುದು.

ಹೊಸಪಾಳ್ಯದ ಮಲ್ಲಿಕಾರ್ಜುನ ಅವರು ಹೊಸಪೇಟೆಯ ಕೃಷಿ ಪಾಳಯಕ್ಕೆ ಬಂದು, ಹೊಸ ಚಿಂತನೆಯನ್ನು, ಹೊಸದೊಂದು ಪರಂಪರೆಯನ್ನು ಹುಟ್ಟುಹಾಕಿದ್ದಾರೆ. ಇದೊಂದು ರೀತಿಯ ಮೈಲುಗಲ್ಲು ಎಂದುಕೊಂಡರೆ, ಪ್ರತಿವರ್ಷವೂ ಇಂಥ ಹೊಸ ಹೊಸ ಮೈಲುಗಲ್ಲುಗಳು ಸೃಷ್ಟಿಯಾಗಬೇಕು. ಹಸಿರಿನ ಸೃಷ್ಟಿಕರ್ತರು ಹಸಿರಿನೊಂದಿಗೆ ನಡೆಸುವ ಈ ಮಾತುಕತೆಗಳು ದೂರದೂರಿನ ಹೊಲಗಳಲ್ಲೂ ಮನೆಗಳಲ್ಲೂ ಅನುರಣಿಸಬೇಕು.