ನಾನು ನಿಧಿ ನಿಕ್ಷೇಪದ ಗುಂಗಿನಲ್ಲಿ ಸುಮ್ಮನೆ ಕಬ್ಬಿಣದ ರಾಡಿನಿಂದ ಅಗೆಯುತ್ತಲೇ ಇದ್ದೆ. ಅದೇನಾಯಿತೋ ಒಮ್ಮೆಲೆ ‘ಟನ್’ ಎಂಬ ಸದ್ದಾಯಿತು. ಮೈಯೆಲ್ಲಾ ಒಮ್ಮೆ ಮಿಂಚು ಪ್ರವಹಿಸಿದಂತಾಯಿತು. ಖಂಡಿತಾ ಚಿನ್ನದ ಮಡಕೆಯನ್ನು ಮಾರಿ ದೊಡ್ಡ ಮನೆ, ಮತ್ತೊಂದು ಕಾರು ಖರೀದೀಸಬೇಕೆಂದು ಲೆಕ್ಕ ಹಾಕಿ ಇನ್ನಷ್ಟು ಹಸಿ ಮಣ್ಣನ್ನು ಕೈಯಿಂದ ಬಿಡಿಸತೊಡಗಿದೆ. ನನ್ನ ಖುಷಿಗೆ ಪಾರವಿರಲಿಲ್ಲ. ನಾಲ್ಕೈದು ಬಾರಿ ಗುದ್ದುವಾಗಲೂ “ಟನ್” ಎಂಬ ಅದೇ ಸದ್ದು! ಹಾಗೂ ಹೀಗೂ ಮಣ್ಣು ಬಿಡಿಸಿದಾಗ ಮಣ ಬಾರದ ಏನೋ ಹಿಡಿದರೆ ಎಳೆಯಾಲಾಗದ ಗಟ್ಟಿ ಲೋಹ ಕೆಸರಿನಲ್ಲಿ ಹೂತು ಹೋಗಿತ್ತು.
ಮುನವ್ವರ್ ಜೋಗಿಬೆಟ್ಟು ಬರೆವ ಪರಿಸರ ಕಥನ

 

ಬೇಸಿಗೆ ರಜೆ ಮುಗಿದು ಮತ್ತೆ ಶಾಲೆ ಪ್ರಾರಂಭವಾಗಿತ್ತು. ಅಚ್ಚುಮೆಚ್ಚಿನ ಶಶಿಕಲಾ ಟೀಚರ್ ವರ್ಗಾವಣೆಗೊಂಡ ವಿಚಾರ ನಮಗೆ ತಿಳಿಯುವಾಗ ತಡವಾಗಿತ್ತು. ಆ ಖಿನ್ನತೆ ಎಲ್ಲ ಸಹಾಪಾಟಿಗಳಲ್ಲೂ ಎದ್ದು ಕಾಣುತ್ತಿತ್ತು. ಆ ಹೊತ್ತಿಗೆ ಅವರ ತೆರವಾದ ಸ್ಥಾನವನ್ನು ತುಂಬಲು ಆ ಅವಳಿ ಟೀಚರ್ ಗಳು ಬರಬೇಕಾಯಿತು. ಪ್ರಭಾ ಮತ್ತು ವಿಭಾ ಒಬ್ಬರನ್ನೊಬ್ಬರಿಂದ ವ್ಯತ್ಯಾಸ ಗುರುತಿಸಲಾರದಷ್ಟು ತದ್ರೂಪಿಗಳು. ಅಕ್ಕ-ತಂಗಿಯರಿಬ್ಬರು ಅಧ್ಯಾಪಕರಾಗಿ ನಮ್ಮ ಶಾಲೆಗೆ ಬಂದ ನಂತರ ಇಡೀ ಶಾಲೆಯ ವರ್ಚಸ್ಸೇ ಬದಲಾಯಿತು. ಅವರ ಸೌಂದರ್ಯದ ಸಹಜ ಆಕರ್ಷಣೆ, ತರಗತಿಗೆ ಬಂದರೆಂದರೆ ಎಲ್ಲ ವಿದ್ಯಾರ್ಥಿಗಳೂ ಅವರನ್ನು ತಮ್ಮೆಡೆಗೆ ಆಕರ್ಷಿಸಿಕೊಳ್ಳುವ ಪ್ರಯತ್ನ ನಡೆಸುತ್ತಲೇ ಇದ್ದರು. ನಮಗೆ ನಿಯೋಜಿತರಾದವರು ವಿಭಾ.

ಕಲಿಕೆಯಲ್ಲಿ ಮುಂದಿದ್ದ ನಾನೆಂದರೆ ಅವರಿಗೆ ಅಚ್ಚುಮೆಚ್ಚು. ನನಗೂ ಅವರೆಂದರೆ ಅಷ್ಟೇ. ಅಸಾಧರಣ ಚುರುಕು, ಸದಾ ಸಾಹಸ ಕಥೆಗಳನ್ನೇ ಹೇಳುವ ಅವರ ಚರ್ಯೆ…. ಅವರ ಕಥೆಗಳಿಂದ ಪ್ರೇರಿತಗೊಂಡ ನಾನೂ ಭೂತ, ಪಿಶಾಚಿ, ನಿಧಿಯ ಕಥೆಗಳಿಗೆ ಪ್ರೇರಿತಗೊಳ್ಳತೊಡಗಿದ್ದೆ. ಆ ದಿನಗಳಲ್ಲಿ ಅವರ ಕಥೆಗಳಿಗೆ ಮನಸೋಲದ ವಿದ್ಯಾರ್ಥಿಗಳಿರಲಿಲ್ಲ. ರೋಮಾಂಚಕ ಕೌತುಕಗಳನ್ನು ಕಥೆಯಾಗಿ ಹಣೆದು ನಮ್ಮನ್ನೂ ಅದೇ ಪ್ರಪಂಚಕ್ಕೆ ಕರೆದೊಯ್ಯುತ್ತಿದ್ದರು. ಅವರು ಒಂಥರಾ ಫಾರ್ವರ್ಡ್ ಥಿಂಕರ್, ಕಮ್ಯುನಿಸ್ಟ್ ವಾದಿ. ಹಾಗಂತ ಅವರ ಮಾತು, ಹಾವಭಾವ ಹೇಳುತ್ತಿತ್ತು. ಲಿಂಗ ತಾರತಮ್ಯದ ಬಗ್ಗೆ ಬಹುವಾಗಿ ಮಾತನಾಡುತ್ತಿದ್ದರು. ತಾನು ಲೇಡಿ ಪೋಲಿಸ್ ಆಗಬೇಕೆಂದು ಆಗಾಗ ಹೇಳಿಕೊಳ್ಳುತ್ತಿದ್ದರು. ಜಾತಿಗಳು ಏನೂ ಇಲ್ಲ, ಧರ್ಮಗಳೆಲ್ಲಾ ಒಂದೇ ಎಂಬ ಭಾವನೆ ನಮ್ಮಲ್ಲಿ ಹುಟ್ಟು ಹಾಕಿದವರು ಅವರು. ಅಪ್ಪಟ ಜಾತ್ಯಾತೀತೆಯನ್ನು ನಮ್ಮೊಳಗೆ ಬಿತ್ತಿದ ಮಾರ್ಕ್ಸ್ ವಾದಿಯಂತೆ ಕಾಣುತ್ತಿದ್ದರು. ಸ್ವತಃ ಸಸ್ಯಹಾರಿಯಾದರೂ ಮಾಂಸಾಹಾರವನ್ನು ಸಮರ್ಥಿಸುತ್ತಿದ್ದರು.

ಕೆಲವು ವಿಚಾರಗಳಲ್ಲಿ ಅವರ ವಾದಗಳಲ್ಲಿ ನಮಗೆ ಭಿನ್ನಾಬಿಪ್ರಾಯಗಳಿದ್ದರೂ ನಾವು ಯಾವುದನ್ನೂ ವಿರೋಧಿಸುತ್ತಿರಲಿಲ್ಲ. ಬಹುಶಃ ಅವರಲ್ಲಿನ ವಾಗ್ಝರಿ, ತನ್ಮಯತೆ ನಮ್ಮನ್ನು ಅದರಿಂದ ಕಟ್ಟಿ ಹಾಕುತ್ತಿತ್ತು. ಅಷ್ಟು ಸಣ್ಣ ಮಕ್ಕಳಿಗೆ ಫಿಲಾಸಫಿಯನ್ನು ಹೇಗೆ ಗಾಢವಾಗಿ ಪರಿಚಯಿಸಿದರು ಎಂದು ನೀವು ಹುಬ್ಬೇರಿಸಬಹುದು. ಅವರ ಪಾಠದ ಚಟುವಟಿಕೆಯೇ ಹಾಗೆ. ಎಂಥ ದಡ್ಡನಲ್ಲೂ ತಮ್ಮ ವಿಚಾರಧಾರೆಯನ್ನು ಇಳಿಸಿಬಿಡುವಂಥದ್ದು.

ಒಮ್ಮೆ ನಿಧಿ ಶೋಧನೆಯ ಕುರಿತು ಅಪರೂಪದ ಕಥೆಯೊಂದನ್ನು ಹೇಳಿದರು. ಅದೊಂದು ರೋಚಕ ಕಥೆ. ನಿಧಿಗಾಗಿ ಮಗುವೊಂದನ್ನು ಹಿಡಿದು ನರಬಲಿ ಕೊಡುವ ಮೈ ನವಿರೇಳಿಸುವ ಕಥೆ. ಬಹುಶಃ ಆ ಕಾಲಕ್ಕೆ ಅವರು ಹೆಚ್ಚಾಗಿ ಪತ್ತೆದಾರಿ ಕಥೆ ಓದುತ್ತಿರುವುದರ ಫಲವಾಗಿತ್ತೋ ಏನೋ; ಅಂಥೂ ಆ ಕಥೆಯ ಪ್ರಭಾವ ನನ್ನಲ್ಲಿ ಗಾಢವಾಗಿ ಉಳಿಯಿತು. ಆ ಹೊತ್ತಿನಲ್ಲಿ ನಮ್ಮೊಳಗೊಂದು ವದಂತಿಯೂ ಶುರುವಾಗಿತ್ತು. ೦೦೦೦ ನಾಲ್ಕು ಸೊನ್ನೆ ಹಾಕಿ ಬರುವ ನಂಬರ್ ಪ್ಲೇಟ್ ಇರುವ ಕೆಂಪು ಕಾರುಗಳಲ್ಲಿ ಸಮಾನ್ಯವಾಗಿ ಮಕ್ಕಳಿಗೆ ಚಾಕ್ಲೇಟ್ ತೋರಿಸಿ ಹತ್ತಿರ ಕರೆಯುತ್ತಾರಂತೆ. ಹಾಗೆ ಹತ್ತಿರ ಹೋದ ಮಕ್ಕಳನ್ನು ಕೊಂಡುಹೋಗಿ ನರಬಲಿಯೋ, ಅಂಗಾಂಗ ಕತ್ತರಿಸಿ ಮಾರಾಟ ಮಾಡುತ್ತಾರೆಂಬ ಹೆದರಿಕೆ ಹುಟ್ಟಿಬಿಟ್ಟಿತ್ತು. ಆ ಬಳಿಕ ನಾನು ಮನೆಯಿಂದ ಶಾಲೆಗೆ ಹೋಗುವಾಗಲೂ, ಬರುವಾಗಲೂ ಒಳ ದಾರಿಯನ್ನೇ ಬಳಸುತ್ತಿದ್ದೆ.

ಒಮ್ಮೆ ಏನಾಯಿತೆಂದರೆ, ಅಂದು ಅನಿವಾರ್ಯವಾಗಿ ಟಾರು ರೋಡಿನಲ್ಲಿ ಬರಬೇಕಾದ ಸನ್ನಿವೇಶ ನಿರ್ಮಾಣವಾಯಿತು. ಭಯದಿಂದ ಬರುತ್ತಿದ್ದಂತೆ ವೇಗವಾಗಿ ಬಂದ ಕೆಂಪು ಕಾರೊಂದು ಹತ್ತಿರ ಬಂದು ನಿಂತಿತು. ನನಗೆ ಒಮ್ಮೆಲೆ ದಿಗಿಲು. ಯಾರೋ ಹತ್ತಿರದ ಸಂಬಂಧಿಕರ ಮನೆಯ ವಿಳಾಸ ಕೇಳಿರಬೇಕು. “ಬದುಕಿದೆಯಾ ಬಡ ಜೀವವೇ” ಎನ್ನುತ್ತಾ ಹತ್ತಿರದ ಗುಡ್ಡ ಹತ್ತಿ ಹುಚ್ಚು ಹಿಡಿದಂತೆ ವೇಗವಾಗಿ ಓಡಿ ಬಿಟ್ಟಿದ್ದೆ. ಅವರಿಗೆ ಏನನಿಸಿತೋ, ನಗುತ್ತ ಮತ್ತೆ ಯಾರೋ ದಾರಿಹೋಕರಲ್ಲಿ ರಸ್ತೆ ಕೇಳಿ ಹೊರಟು ಹೋದರು. ಅದೆಲ್ಲವನ್ನೂ ಪೊದೆಯ ಮರೆಯಲ್ಲಿ ಕುಳಿತು ಭಯದಿಂದಲೇ ನೋಡುತ್ತಲಿದ್ದೆ.

ಆಗ ತರಗತಿಯಲ್ಲಿ ನಾನು ಲೀಡರ್ ಆಗಿರುವುದರಿಂದ ಹೆಸರು ಬರೆಯುವ ಗುರುತರ ಜವಾಬ್ದಾರಿ ನನ್ನ ಮೇಲಿತ್ತು. ಆ ಸಮಯಕ್ಕೆ ನಮ್ಮ ತರಗತಿಯಲ್ಲಿ ಒಬ್ಬ “ಶಿಯಾಬ್” ಎನ್ನುವ ಚೂಟಿ ಹುಡುಗನಿದ್ದ. ಗಲಾಟೆಕೋರನಾದ ಅವನ ಹೆಸರನ್ನು ಬರೆಯಲೇಬೇಕಾದ ಅನಿವಾರ್ಯತೆಗೆ ಬಿದ್ದು ಒಮ್ಮೆ ಅವನ ಹೆಸರು ಬರೆದಿದ್ದೆ. ಅದೇ ಕಾರಣಕ್ಕೆ ನನ್ನನ್ನು ಹತ್ತಿರಕ್ಕೆ ಕರೆದು, “ನನ್ನಪ್ಪ ಮಕ್ಕಳನ್ನು ಹಿಡಿಯುವ ದೊಡ್ಡ ದರೋಡೆಕೋರ, ಹೆಸರು ಬರೆದರೆ ಅವರಲ್ಲಿ ಹೇಳಿ ಹಿಡಿಸುತ್ತೇನೆ” ಎಂದು ಬೆದರಿಸಿಬಿಟ್ಟಿದ್ದ. ನಾನು ಅದಕ್ಕೆ ಹೆದರಿ ಸುಮಾರು ದಿನ ಅವನ ಹೆಸರು ಬರೆಯದೆ ಅವನ ಕೀಟಲೆಗಳನ್ನೆಲ್ಲಾ ನುಂಗಿಕೊಂಡೆ. ಅವನು ರಾಜಾರೋಷವಾಗಿ ತರಗತಿಯಲ್ಲಿ ಮೆರೆದ.

ಈ ಮಧ್ಯೆ ವಿಭಾ ಟೀಚರ್ ಕಥೆಗಳೆಲ್ಲಾ ನಮ್ಮನ್ನು ಹೊಸ ಕುತೂಹಲಕ್ಕೆ ದೂಡುತ್ತಲೇ ಇದ್ದವು. ಆ ದಿನಗಳಲ್ಲಿ ರೈತನೊಬ್ಬ ಅಗೆಯುವಾಗ ಪಿಕ್ಕಾಸಿಗೆ ಸಿಗುವ ಚಿನ್ನದ ಮಡಕೆ, ಬಂಗಾರದ ನಾಣ್ಯದ ಕಥೆಗಳೇ ಹಾಸು ಹೊಕ್ಕಾಗಿದ್ದವು. ನಿಧಿ ಸಿಗುವುದೆಂದರೆ, ಹಿಂದಿನ ಜನರು ತಮ್ಮ ಮುಂದಿನ ಪೀಳಿಗೆಗಾಗಿ ಚಿನ್ನವನ್ನು ತುಂಬಿ ಭೂಗರ್ಭದಲ್ಲಿ ಅಡಗಿಸಿಡುತ್ತಿದ್ದರಂತೆ. ಅವರಿಗೆ ಹೇಳಲು ಮರೆತು ಸತ್ತು ಹೋದರೆ ಯಾರಾದರೊಬ್ಬರು ಅಗೆಯುವಾಗ ಸಿಗುತ್ತಿತ್ತಂತೆ. ಕಾವಲಿಗೆ ಮಹಾ ಸರ್ಪಗಳನ್ನು ನಿಲ್ಲಿಸುತ್ತಿದ್ದರಂತೆ ಎಂಬ ಸುಳ್ಳೂ ಜೊತೆ ಸೇರಿ ಕಥೆ ಇನ್ನಷ್ಟು ಭವ್ಯವಾಗಿ ಬದಲಾಗುತ್ತಿತ್ತು.

ಅವರ ಕಥೆಗಳಿಂದ ಪ್ರೇರಿತಗೊಂಡ ನಾನೂ ಭೂತ, ಪಿಶಾಚಿ, ನಿಧಿಯ ಕಥೆಗಳಿಗೆ ಪ್ರೇರಿತಗೊಳ್ಳತೊಡಗಿದ್ದೆ. ಆ ದಿನಗಳಲ್ಲಿ ಅವರ ಕಥೆಗಳಿಗೆ ಮನಸೋಲದ ವಿದ್ಯಾರ್ಥಿಗಳಿರಲಿಲ್ಲ. ರೋಮಾಂಚಕ ಕೌತುಕಗಳನ್ನು ಕಥೆಯಾಗಿ ಹಣೆದು ನಮ್ಮನ್ನೂ ಅದೇ ಪ್ರಪಂಚಕ್ಕೆ ಕರೆದೊಯ್ಯುತ್ತಿದ್ದರು. ಅವರು ಒಂಥರಾ ಫಾರ್ವರ್ಡ್ ಥಿಂಕರ್, ಕಮ್ಯುನಿಸ್ಟ್ ವಾದಿ.

ಒಮ್ಮೆ ನಾನು ಇದೇ ಗುಂಗಿನಲ್ಲಿ ನಮ್ಮ ಹಿತ್ತಲಿನ ಹಸಿ ಮಣ್ಣನ್ನು ಅಗೆಯತೊಡಗಿದೆ. ಆಗ ಮಣ್ಣಿನ ಕುಳಿಗಳಲ್ಲಿ “ಬೆಕ್ಕು ಹುಡುಕುವ” ಪ್ರಾಯ. “ಬಾ ಬೆಕ್ಕೇ ಬಾ” ಅನ್ನುತ್ತಾ ಸುರುಳಿಯಾಕೃತಿಯಲ್ಲಿ ಸಣ್ಣ ಕೀಟವನ್ನು ಹುಡುಕಿ ಪಡೆಯುವ ಉಮೇದು. ನಾನು ನಿಧಿ ನಿಕ್ಷೇಪದ ಗುಂಗಿನಲ್ಲಿ ಸುಮ್ಮನೆ ಕಬ್ಬಿಣದ ರಾಡಿನಿಂದ ಅಗೆಯುತ್ತಲೇ ಇದ್ದೆ. ಅದೇನಾಯಿತೋ ಒಮ್ಮೆಲೆ ‘ಟನ್’ ಎಂಬ ಸದ್ದಾಯಿತು. ಮೈಯೆಲ್ಲಾ ಒಮ್ಮೆ ಮಿಂಚು ಪ್ರವಹಿಸಿದಂತಾಯಿತು. ಖಂಡಿತಾ ಚಿನ್ನದ ಮಡಕೆಯನ್ನು ಮಾರಿ ದೊಡ್ಡ ಮನೆ, ಮತ್ತೊಂದು ಕಾರು ಖರೀದೀಸಬೇಕೆಂದು ಲೆಕ್ಕ ಹಾಕಿ ಇನ್ನಷ್ಟು ಹಸಿ ಮಣ್ಣನ್ನು ಕೈಯಿಂದ ಬಿಡಿಸತೊಡಗಿದೆ. ನನ್ನ ಖುಷಿಗೆ ಪಾರವಿರಲಿಲ್ಲ. ನಾಲ್ಕೈದು ಬಾರಿ ಗುದ್ದುವಾಗಲೂ “ಟನ್” ಎಂಬ ಅದೇ ಸದ್ದು! ಹಾಗೂ ಹೀಗೂ ಮಣ್ಣು ಬಿಡಿಸಿದಾಗ ಮಣ ಬಾರದ ಏನೋ ಹಿಡಿದರೆ ಎಳೆಯಾಲಾಗದ ಗಟ್ಟಿ ಲೋಹ ಕೆಸರಿನಲ್ಲಿ ಹೂತು ಹೋಗಿತ್ತು. ಇನ್ನೇನು ಕಾವಲಿಗಿದ್ದ ಹಾವು ಯಾಕೆ ಬರಲಿಲ್ಲವೆಂದು ಇನ್ನಷ್ಟು ಮಣ್ಣು ಬಿಡಿಸುತ್ತಲೇ ಹೋದೆ. ಕೊನೆಗೆ ಸಮ ಗಾತ್ರದ ಗುಂಡಿಯಾಯಿತು.

ಆ ಕಬ್ಬಿಣದ ತುಂಡು ಎಳೆದರೆ ಬಾರದೆ ಇನ್ನಷ್ಟು ಸತಾಯಿಸುತ್ತಿತ್ತು. ಕೊಟ್ಟ ಕೊನೆಗೆ ಆ ಲೋಹದ ತುಂಡು ಮಣ್ಣು ಬಿಟ್ಟು ಮೇಲೆ ಬಂತು. ಒಂದು ಸಬಳದಂತಹ ಲೋಹದ ತುಂಡು ಅದು. ತೊಳೆದು ನೋಡಿದರೆ ಕರೆಂಟಿಗಾಗಿ ಹಳೆಯ ಸರ್ವೀಸ್ ವೈರನ್ನು ಎಳೆದಿಡುವ ಕಬ್ಬಿಣದ ಸಲಾಕೆ. ಯಾರೋ ಮೆಸ್ಕಾಮಿನವರು ಎಸೆದು ಹೋಗಿದ್ದರೋ, ಅಥವಾ ಹಳೆಯದನ್ನು ತೆಗೆಯದೇ ಭೂಗತಗೊಳಿಸಿದ್ದರೋ, ನಾನು ಮಾತ್ರ ಅತೀವ ನಿರಾಸೆಯಿಂದ ಉಗುರಿನಲ್ಲಿ ಸಿಕ್ಕಿದ ಮಣ್ಣು ಬಿಡಿಸುತ್ತಾ ಸಿಟ್ಟಿನಿಂದಲೇ ಮನೆಗೆ ಬಂದೆ.

ನಮ್ಮ ಹಾಸ್ಟೆಲ್ ಪಕ್ಕ ಸಂಜೆಯ ಹೊತ್ತಿಗೆ ಆಮ್ಲೇಟ್, ಚರುಮುರಿ ತಯ್ಯಾರಿಸುವ ಅಶ್ರಫ್ ಅನ್ನುವವನಿದ್ದ. ಮಾತು ಕಡಿಮೆ, ಸದಾ ಕೆಲಸದಲ್ಲಿ ಮಗ್ನನಾಗಿರುವವನು, ಅದೊಂದು ದಿನ ಬೆವರುತ್ತಲೇ ಆ ಕಥೆ ಹೇಳಿದ್ದ. ಆತನಲ್ಲೊಂದು ಕಾರಿತ್ತು, ಬಾಡಿಗೆಗಾಗಿ ಯಾರಾದರೂ ಕರೆದರೆ ಹೋಗುವವನು. ಆ ದಿನ ಯಾರದೋ ಕರೆ ಬಂದು ಉಡುಪಿಯ ಕಡಲ ಕಿನಾರಕ್ಕೆ ಹೊರಟನಂತೆ. ಧಾರಿ ಮಧ್ಯೆ ಒಬ್ಬೊಬ್ಬರಂತೆ ನಾಲ್ಕು ಜನ ಹತ್ತಿದರಂತೆ. ಎಲ್ಲರ ಕೈಯಲ್ಲೂ ರುದ್ರಾಕ್ಷಿ, ಆಯುಧ, ಪೂಜಾ ಸಾಮಾಗ್ರಿಗಳಿತ್ತಂತೆ. ಹಾಗೂ ಹೀಗೂ ಹೆದರುತ್ತಲೇ ಹೋದವನಿಗೆ, “ನೀನಿಲ್ಲೇ ನಿಲ್ಲು” ಎಂದು ನಾಲ್ವರೂ ಹೊರಟು ಹೋದರಂತೆ. ಅವರು ನಾಲ್ಕೂ ಜನ ನಿಧಿಗಾಗಿ ಹೋಮವನ್ನೇನೋ ಪ್ರಾರಂಭಿಸಿ ಇವನನ್ನು ಬಲಿ ಕೊಡುವ ಸನ್ನಾಹದಲ್ಲಿದ್ದರಂತೆ. ಯಾರ ಪುಣ್ಯವೋ, ಅಗೋಚರ ಇಂದ್ರಿಯವೊಂದು ಇವನನ್ನು ಸಾವಿನ ಎಚ್ಚರಿಕೆ ನೀಡಿದಾಗ ರಾತ್ರೋರಾತ್ರಿ ಅಲ್ಲಿಂದ ತಪ್ಪಿಸಿಕೊಂಡು ಒಬ್ಬನೇ ಕಾರಿನಲ್ಲಿ ಹೊರಟು ಮನೆ ಸೇರಿದನಂತೆ.

ಹೀಗಿರುವಾಗ ಒಂದು ದಿನ ನಮ್ಮೂರ ಪಕ್ಕದಲ್ಲೊಂದು ಅದ್ಭುತವೊಂದು ಘಟಿಸಿತು. ಯಾರೋ ಮಣ್ಣಿನ ಕೆಲಸ ಮಾಡುವವರ ಹಾರೆಗೆ ಏನೋ ಸಿಕ್ಕಿ ಭೂಮಿ ಬಿರುಕು ಬಿಟ್ಟಿತ್ತು. ಸುದ್ದಿ ಕಾಡ್ಗಿಚ್ಚಿನಂತೆ ಊರ ತುಂಬೆಲ್ಲ ಹರಡಿತು. ಎಲ್ಲರೂ ಅಲ್ಲಿಗೆ ದೌಡಾಯಿಸತೊಡಗಿದರು. ನಾನು ಸಣ್ಣವನಿದ್ದರಿಂದ ನಾನೆಷ್ಟು ಹಠ ಮಾಡಿದರೂ ಉಮ್ಮ ನನ್ನನ್ನು ಕಳುಹಿಸಿಕೊಡಲಿಲ್ಲ. ಹೋಗಿ ಬಂದವರು ಹೊಸ ಹೊಸ ಸುಳ್ಳುಗಳೊಡನೆ ಬಂದರು. ಭೂಮಿಯೇ ಬಾಯ್ದೆರೆಯಿತಂತೆ. ಒಳಗೆ ಹೋಗುವಂತಿಲ್ಲವಂತೆ, ಸರ್ಪವಿರಬಹುದೆಂಬ ಹೆದರಿಕೆ. ಖಂಡಿತಾ ಕೆಜಿಗಟ್ಟಲೆ ಚಿನ್ನವಿರಬಹುದೆಂಬ ಗಾಳಿಸುದ್ದಿಯೂ ಇತ್ತು.

ಅಂತೂ ಇಂತೂ ಬೆಳಗ್ಗೆಯಿಂದ ಸಂಜೆವರೆಗೂ ಅದೇ ವಿಷಯದ ಬಗ್ಗೆ ಚರ್ಚೆಯಾಯಿತು. ಕೆಲವರು ಅದರೊಳಗಿಳಿದು ಪರೀಕ್ಷಿಸಿದರು. ಕೊನೆಗೆ ಹಾಗೇಯೇ ಮಣ್ಣು ಮುಚ್ಚಿದರಂತೆ. ನಡೆದದ್ದಿಷ್ಟೇ, ಯಾವುದೋ ಹಳೆಕಾಲದ ಮಣ್ಣಿನ ಸುರಂಗವೊಂದು ಅಗೆಯುವಾಗ ಸಿಕ್ಕಿರಬೇಕು. ಜನರಿಗೆ ವಾಟ್ಸ್ ಆ್ಯಪ್ ಇಲ್ಲದ ಕಾಲದಲ್ಲಿ ನಂಬುವುದಕ್ಕೆ ಫೋಟೋಗಳ ಜರೂರತ್ತು ಬೇಕೇ. ಬರಿಯ ಬಾಯಿ ಮಾತುಗಳೇ ಹೆದರಿಕೆ ಹುಟ್ಟಿಸುವುದಕ್ಕೆ ಸಾಕಾಗಿ ಹೋಗುತ್ತಿತ್ತು. ಆದರೂ ಆ ದಿನಗಳಲ್ಲಿ ಆ ಕಟ್ಟು ಕಥೆಗಳು, ಕುತೂಹಲ ಸಂಗತಿಗಳು ಕೇಳಿಸಿಕೊಳ್ಳುವ ಖುಷಿಗೆ ಇವತ್ತಿನ ಯಾವ ಕಾದಂಬರಿಗೂ, ಕ್ರೈಂ ಕವರೇಜ್ ಗಳಿಗಾಗಲೀ ಇಲ್ಲದಿರುವುದು ಮಾತ್ರ ಖರೆ.

ಮರುದಿನ ಜೋರುಮಳೆ; ಉಮ್ಮ ಮತ್ತು ತಂಗಿಗೆ ಜ್ಚರವಿದ್ದುದರಿಂದ ಡಾಕ್ಟರರ ಬಳಿ ತೋರಿಸಲೆಂದು ನಾನು ಅವರನ್ನು ಪೇಟೆಗೆ ಕರೆದುಕೊಂಡು ಹೋಗಿದ್ದೆ. ಮಳೆ ಜೋರಾದಾಗ ಇದ್ದ ಒಂದು ಛತ್ರಿಯನ್ನು ಉಮ್ಮ ಮತ್ತು ತಂಗಿಗೆ ಬಿಟ್ಟು ಮಳೆಯಲ್ಲಿ ನೆನೆಯುತ್ತಾ ಬಸ್ ನಿಲ್ದಾಣಕ್ಕೆ ಬಂದೆ. ಮಳೆಯ ರಭಸಕ್ಕೆ ಅಲ್ಲಿ ಜನ ಜಂಗುಳಿ ಹೆಚ್ಚಿತ್ತು. ಜಡಿಮಳೆಯಲ್ಲಿ ನೆನೆಯುತ್ತಾ ಮಳೆ ಹನಿಯನ್ನು ಆನಂದಿಸುತ್ತಾ ದೇವದಾಸನಂತೆ ಬಸ್ಟ್ಯಾಂಡ್ ಬಳಿ ಬಂದೆ. ಬಿರುಸಿನ ಮಳೆಗೆ ಕಟ್ಟಡದಲ್ಲಿ ವಾಸ ಹೂಡಿದ್ದ ಗುಬ್ಬಿಗಳು ಚೀಂಗುಟ್ಟುತ್ತಿದ್ದವು. ಮಳೆ ನನ್ನನ್ನು ಸಂಪೂರ್ಣವಾಗಿ ತೋಯಿಸಿಬಿಟ್ಟಿತ್ತು.

ಆಚಾನಕ್ ಜನಜಂಗುಳಿಯ ಮಧ್ಯೆ ಬಣ್ಣ ಬಣ್ಣದ ಕೊಡೆಯೊಂದು ಮೆಲ್ಲಗೆ ಹೊರ ಬಂತು. ‘ಈ ಮಳೆಯ ಮಧ್ಯೆ ನನ್ನನ್ನು ಗುರುತಿಸುವವರು ಯಾರಪ್ಪಾ?’ ಅಂತ ತಿರುಗಿದೆ. ನಗುಮುಖದ ಶಶಿಕಲಾ ಟೀಚರ್ ನಿಂತಿದ್ದರು. “ಏನಪ್ಪಾ ಕೊಡೆ ತರ್ಲಿಲ್ವಾ ಮುನವ್ವರ್?” ಎಂದು ಕೇಳುವ ಪ್ರಶ್ನೆಗೆ, ನಮ್ಮ ಶಾಲೆ ಬಿಟ್ಟು ಹೋಗಿ ೫ ವರ್ಷವಾದರೂ ನನ್ನ ನೆನಪಿಟ್ಟ ಮನಸ್ಸಿಗೆ ಹಾಗೆಯೇ ಕೈಗಳೆರಡು ನನಗರಿವಿಲ್ಲದೇ ವಂದಿಸಿ ‘ನಮಸ್ತೇ ಟೀಚರ್’ ಅಂದಿತು.