ಹೀಗೆ ಎಲ್ಲವೂ ಆಗಿದ್ದ ತಂದೆಯನ್ನು ಕಳೆದುಕೊಂಡ ಮೇಲೆ ಒಂಟಿ ತರುಣಿ ಕುಸುಮ ಮುಂದೆ ಏನಾದಳು ಎಂಬುದನು ಸ್ಮರಿಸಿಕೊಂಡರೆ ಕೈ ಕಾಲುಗಳು ನಡುಗುತ್ತವೆ. ಎಷ್ಟೊಂದು ಸುಂದರವಾಗಿ ಕಾಣುವ ಈ ಜಗತ್ತು ಮತ್ತು ವ್ಯವಸ್ಥೆಯ ಕರಾಳ ಮುಖವನ್ನು ಕಂಡು ಎಂಥವರಲ್ಲೂ ಆಕ್ರೋಶ ಪುಟಿದೇಳುತ್ತದೆ. ಕುಸುಮಳ ಆ ಸ್ಥಿತಿಗೆ ಕಾರಣವಾದವರನ್ನು ಸುಟ್ಟುಹಾಕಬೇಕೆನ್ನುವಷ್ಟು ಸಿಟ್ಟು ಎಲ್ಲ ಸಾತ್ವಿಕ ಮತ್ತು ಸತ್ಯ ಪರವಾದ ಮನಸ್ಸುಗಳಲ್ಲಿ ಉಕ್ಕುತ್ತದೆ! ಆದರೂ ಈ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವೆ ಎಂಬುದೇ ವಿಷಾದದ ಪ್ರಶ್ನೆ!
ಈ ವರ್ಷದ ಪನೋರಮಕ್ಕೆ ಆಯ್ಕೆಯಾದ ʻನಾನು ಕುಸುಮಾʼ ಚಿತ್ರದ ಕುರಿತು ಕುಮಾರ ಬೇಂದ್ರೆ ಬರಹ

ಹಲವು ಪ್ರಯೋಗಗಳೊಂದಿಗೆ ಯಶಸ್ಸು ಕಾಣುತ್ತ ವಿವಿಧ ಆಯಾಮಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವ ಚಂದನವನದಲ್ಲಿ ಈಗ ಮತ್ತೊಂದು ವಿಶಿಷ್ಟ ದೃಶ್ಯಕಾವ್ಯ ಅರಳಿದೆ! ಸಾಮಾಜಿಕ ಕಾಳಜಿ ಮತ್ತು ಸದಭಿರುಚಿಯ ಕತೆ, ತಾಂತ್ರಿಕ ಗುಣಮಟ್ಟ ಮತ್ತು ಒಂದು ಉತ್ತಮ ಸಾಹಿತ್ಯ ಕೃತಿಗೆ ಇರಬಹುದಾದ ಭಾವವಿರೇಚನಾ ಶಕ್ತಿಯೇ ಈ ಚಿತ್ರದ ಶ್ರೇಷ್ಟತೆಗೆ ಮಾನದಂಡ.

ಬೆಸಗರಹಳ್ಳಿ ರಾಮಣ್ಣ ಅವರು ರಚಿಸಿದ ʻಮಗಳುʼ ಹೆಸರಿನ ಸಣ್ಣ ಕತೆ ಆಧರಿಸಿ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರೂ ಆದ ಕೃಷ್ಣೆಗೌಡ ಅವರು ಚಿತ್ರಕಥೆ ಬರೆದು ನಿರ್ದೇಶನ ಮತ್ತು ಅಭಿನಯ ಮಾಡಿದ ʻನಾನು ಕುಸುಮಾʼ ಹೆಸರಿನ ಚಿತ್ರದ ವೈಶಿಷ್ಟ್ಯವಿದು. ಈ ಚಿತ್ರದ ಹೂರಣ ಚಂದನವನದ ಚಿತ್ರವಿಶ್ಲೇಷಕರನ್ನು ಮಾತ್ರವಲ್ಲ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಿತ್ರ ವಿಮರ್ಶಕರನ್ನು ಕೂಡ ಸೆಳೆದಿದೆ! ಹಾಗಾದರೆ ಈ ಚಿತ್ರದ ಹೂರಣವಾದರೂ ಏನು!?

(ಕೃಷ್ಣೆಗೌಡ)

ಅವಳು ʻಕುಸುಮಾʼ… ಹೆಸರಿಗೆ ತಕ್ಕಹಾಗೆ ಸ್ವಾಭಿಮಾನ ಸತ್ಯ ಪ್ರಾಮಾಣಿಕತೆಗಳು ಆ ವ್ಯಕ್ತಿತ್ವದಲ್ಲೇ ಮೈಗೂಡಿದಂತಿರುವ ಮೃದು ಮನಸ್ಸಿನ ಕುಸುಮ ಬಾಲೆ! ಅವಳ ತಂದೆ ಸರ್ಕಾರಿ ಆಸ್ಪತ್ರೆಯ ಶವಾಗೃಹದಲ್ಲಿ ಹೆಣ ಕತ್ತರಿಸುವ ಕಾಯಕ ಮಾಡುತ್ತಿದ್ದರೂ ಹೂವಿನಂತಹ ಮನಸ್ಸಿನವನು. ತನ್ನ ಮಗಳು ವೈದ್ಯಳಾಗಬೇಕೆಂಬ ಕನಸು ಹೊತ್ತು ತನ್ನ ಕಾಯಕಕ್ಕೆ ಕಾಲದ ಮಿತಿ ಹಾಕಿಕೊಳ್ಳದೇ ನಿಯತ್ತಿನಿಂದ ದುಡಿದು ಬದುಕುತ್ತಿರುವವನು. ಹೆಂಡತಿ ಎಂದೋ ಕೈ ಬಿಟ್ಟು ಹೋಗಿದ್ದಾಳೆ. ಮಗಳೆಂದರೆ ಅವನಿಗೆ ಪ್ರಾಣಕ್ಕಿಂತ ಮಿಗಿಲು! ಓದುವ ಹುಮ್ಮಸ್ಸಿನಲ್ಲಿ ಮಗಳು ಹಸಿದು ಇರದಿರಲಿ ಎಂದು ಹೊತ್ತು-ಹೊತ್ತಿಗೆ ಅಡುಗೆ ಮಾಡಿ ಊಟ ಮಾಡಿಸುವವನು. ರಾತ್ರಿ ವೇಳೆ ಅವಳು ಓದಲು ಕುಳಿತಿದ್ದರೆ ನಿದ್ದೆ ಬಾರದಿರಲೆಂದು ಅಕ್ಕರೆಯಿಂದ ಚಹಾ ಮಾಡಿ ತಂದು ಕೊಡುವವನು. ಅಕಾಲಕ್ಕೆ ತಾಯಿಯನ್ನು ಕಳೆದುಕೊಂಡ ಮಗಳಿಗೆ ಹೀಗೆ ತಾಯಿಯೂ ಆಗಿದ್ದವನು. ತನ್ನ ಮಗಳ ಭವಿಷ್ಯ ತನ್ನಂತೆ ಆಗದಿರಲಿ ಎಂದುಕೊಂಡು, ತಾನು ಕೆಲಸ ಮಾಡುತ್ತಿರುವ ಅದೇ ಸರ್ಕಾರಿ ಆಸ್ಪತ್ರೆಯಲ್ಲಿ ಅವಳು ವೈದ್ಯಳಾಗಿ ಬಡವರ ಸೇವೆ ಮಾಡಬೇಕೆಂಬ ಮಹದಾಸೆ ಹೊಂದಿದ್ದ. ಆದರೆ ಹೀಗೆ ನಿರುಪದ್ರವಿಯಾಗಿ ಜೀವಿಸುವವರನ್ನು ಈ ಸಮಾಜದ ವ್ಯವಸ್ಥೆ ಸರಳವಾಗಿ ಬದುಕಲು ಬಿಟ್ಟೀತೆ!? ಸ್ವಾಭಿಮಾನ, ಸತ್ಯ ಮತ್ತು ನ್ಯಾಯದ ಬದುಕನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳದ ನಕಾರಾತ್ಮಕ ಶಕ್ತಿಗಳು ಮತ್ತು ಅಧಿಕಾರಶಾಹಿ ವ್ಯಕ್ತಿಗಳು ಇಂಥವರನ್ನು ನೆಮ್ಮದಿಯಿಂದ ಇರಲು ಬಿಡುತ್ತಾರೆಯೇ!? ಈ ಪ್ರಶ್ನೆಗಳಿಗೆ ʻಕುಸುಮಾʼ ಮತ್ತು ಅವಳ ತಂದೆಯ ಬದುಕಿನ ಈ ಚಿತ್ರಣವೇ ಉತ್ತರ ಕೊಡುತ್ತದೆ.

ಅಪಾರ ಜೀವನಪ್ರೀತಿ ಮತ್ತು ಮಗಳೇ ತನ್ನ ಪ್ರಪಂಚ ಎಂದುಕೊಂಡು ಕನಸುಗಳೊಂದಿಗೆ ದಿನ ಕಳೆಯುತ್ತಿದ್ದ ಕುಸುಮಳ ತಂದೆ, ಒಂದು ರಾತ್ರಿ ಮೇಲಧಿಕಾರಿಯ ಆಜ್ಞೆ ಪಾಲಿಸುವ ಅವಸರದಲ್ಲಿ ಮನೆಯಿಂದ ಶವಾಗಾರಕ್ಕೆ ಹೋಗುವಾಗ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ! ಅದೆಷ್ಟು ಹೆಣಗಳನ್ನು ಕತ್ತರಿಸಿದ್ದ ಅದೇ ಶವಾಗಾರದಲ್ಲಿ ಕುಸುಮಳ ತಂದೆಯ ದೇಹ ನಿಶ್ಚೇತನವಾಗಿ ಮಲಗಿರುವಾಗ ಅದನ್ನು ನೋಡಿದ ಕುಸುಮಳ ಆಕ್ರಂದನ ಪ್ರೇಕ್ಷಕನ ಕರುಳು ಹಿಂಡಿ ಕಂಬನಿ ಮಿಡಿಸುತ್ತದೆ. ಆ ಹೊತ್ತು ಕುಸುಮ ಏನಾದರೂ ನಮ್ಮ ಎದುರು ಇದ್ದಿದ್ದರೆ ಒದ್ದೆಕಣ್ಣುಗಳಲ್ಲೇ ಅವಳ ತಲೆ ನೇವರಿಸಿ ಸಾಂತ್ವನ ಹೇಳಬೇಕೆಂಬ ಅಂತಃಕರಣ, ಮರುಕ ಪ್ರೇಕ್ಷಕನಲ್ಲಿ ಹುಟ್ಟುತ್ತದೆ.

ಹೀಗೆ ಎಲ್ಲವೂ ಆಗಿದ್ದ ತಂದೆಯನ್ನು ಕಳೆದುಕೊಂಡ ಮೇಲೆ ಒಂಟಿ ತರುಣಿ ಕುಸುಮ ಮುಂದೆ ಏನಾದಳು ಎಂಬುದನು ಸ್ಮರಿಸಿಕೊಂಡರೆ ಕೈ ಕಾಲುಗಳು ನಡುಗುತ್ತವೆ. ಎಷ್ಟೊಂದು ಸುಂದರವಾಗಿ ಕಾಣುವ ಈ ಜಗತ್ತು ಮತ್ತು ವ್ಯವಸ್ಥೆಯ ಕರಾಳ ಮುಖವನ್ನು ಕಂಡು ಎಂಥವರಲ್ಲೂ ಆಕ್ರೋಶ ಪುಟಿದೇಳುತ್ತದೆ. ಕುಸುಮಳ ಆ ಸ್ಥಿತಿಗೆ ಕಾರಣವಾದವರನ್ನು ಸುಟ್ಟುಹಾಕಬೇಕೆನ್ನುವಷ್ಟು ಸಿಟ್ಟು ಎಲ್ಲ ಸಾತ್ವಿಕ ಮತ್ತು ಸತ್ಯ ಪರವಾದ ಮನಸ್ಸುಗಳಲ್ಲಿ ಉಕ್ಕುತ್ತದೆ! ಆದರೂ ಈ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವೆ ಎಂಬುದೇ ವಿಷಾದದ ಪ್ರಶ್ನೆ! ಇದೆಲ್ಲವನ್ನು ಪ್ರೇಕ್ಷಕನ ಎದೆಯಲ್ಲಿ ಹುಟ್ಟುಹಾಕುವುದೇ ʻನಾನು ಕುಸುಮಾʼ ಚಿತ್ರದ ಶಕ್ತಿ!

ಓದುವ ಹುಮ್ಮಸ್ಸಿನಲ್ಲಿ ಮಗಳು ಹಸಿದು ಇರದಿರಲಿ ಎಂದು ಹೊತ್ತು-ಹೊತ್ತಿಗೆ ಅಡುಗೆ ಮಾಡಿ ಊಟ ಮಾಡಿಸುವವನು. ರಾತ್ರಿ ವೇಳೆ ಅವಳು ಓದಲು ಕುಳಿತಿದ್ದರೆ ನಿದ್ದೆ ಬಾರದಿರಲೆಂದು ಅಕ್ಕರೆಯಿಂದ ಚಹಾ ಮಾಡಿ ತಂದು ಕೊಡುವವನು. ಅಕಾಲಕ್ಕೆ ತಾಯಿಯನ್ನು ಕಳೆದುಕೊಂಡ ಮಗಳಿಗೆ ಹೀಗೆ ತಾಯಿಯೂ ಆಗಿದ್ದವನು. 

ಅದೇ ಸರ್ಕಾರಿ ಆಸ್ಪತ್ರೆಯ ವಸತಿಯಲ್ಲಿ ಬೆಳೆದ ಕುಸುಮ ಮುಂದೆ ಅಪ್ಪನ ಕನಸಿನಂತೆ ವೈದ್ಯಳಾಗಲು ಸಾಧ್ಯವಾಗದಿದ್ದರೂ ಶುಶ್ರೂಷಕಿ (ನರ್ಸ್‌) ಆಗಿ ಕೆಲಸಕ್ಕೆ ಸೇರಿದಳು. ಆದರೆ ಅಲ್ಲಿನ ಭ್ರಷ್ಟ ಅಧಿಕಾರಿಗಳು ಮತ್ತು ದೇಹಕ್ಕಾಗಿ ಹೊಂಚಿ ಕೂತ ಕೂಳವ್ಯಾಘ್ರರ ಕೈಗೆ ಸಿಕ್ಕು ಅವಳದು ಅಸಹಾಯಕ ಒಂಟಿ ಬದುಕಾಯಿತು. ಸರ್ಕಾರಿ ಆಸ್ಪತ್ರೆಯ ಆ ಭ್ರಷ್ಟ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಳ್ಳಲಾಗದ ಅವಳ ಪರಿಶುದ್ಧ ಮನಸ್ಥಿತಿ ವ್ಯಕ್ತಿತ್ವ ಅವಳನ್ನು ಹೇಗೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅವಳ ಬದುಕನ್ನು ಮುರುಟಿಹಾಕಿತು ಎಂಬುದನ್ನು ಕಂಡರೆ ಪ್ರೇಕ್ಷಕನ ರಕ್ತ ಕುದಿಯುತ್ತದೆ!

ವರ್ತಮಾನ ಸಮಾಜದಲ್ಲಿ ದಿನದಿಂದ ದಿನಕ್ಕೆ ಕ್ರೌರ್ಯ ಹೆಚ್ಚುತ್ತ ಹೆಣ್ಣು ಹೆತ್ತವರ ಎದೆಯಲ್ಲಿ ತಲ್ಲಣ ಸೃಷ್ಟಿಸುತ್ತಿರುವ ಅತ್ಯಾಚಾರ ಘಟನೆಗಳ ಹಿಂದಿನ ಸತ್ಯದ ಮೇಲೆ ಬೆಳಕು ಚೆಲ್ಲುವ ಈ ಚಿತ್ರವು ನಾವು ಎಂತಹ ಕರಾಳ ವ್ಯವಸ್ಥೆಯಲ್ಲಿ ಎಂತಹ ಅಮಾನವೀಯ ವ್ಯಕ್ತಿಗಳ ಸುತ್ತ ಬದುಕುತ್ತಿದ್ದೇವೆ ಎಂಬುದನ್ನು ಪರಿಣಾಮಕಾರಿಯಾಗಿ‌ ದರ್ಶಿಸುತ್ತದೆ. ಒಂದು ಜೀವ ಸೃಜನದಿಂದ ಆರಂಭವಾಗಿ ಬೆಳೆದು ಜನಿಸಿ ಜೀವಿಸಿ ಮುಪ್ಪಾಗಿ ಮಸಣ ಸೇರುವವರೆಗೂ ಆ ಜೀವಕ್ಕೆ ಹೆಣ್ಣು ಜೀವವೊಂದು ಹೇಗೆ ಆಧಾರವಾಗಿ ಇರುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಅಂತಹ ಹೆಣ್ಣು ಜೀವವನ್ನು ಆದರ ಗೌರವದಿಂದ ಕಾಣಬೇಕಾದ ಸಮಾಜ, ಪುರುಷ ಸಮೂಹ ಮತ್ತು ವ್ಯವಸ್ಥೆ ಈ ಕಾಲಕ್ಕೂ ಗೌರವ ಭಾವನೆ ಹೊಂದಲಿಲ್ಲವಲ್ಲ; ಹೊರತಾಗಿ ಹೆಣ್ಣುನ್ನು ಉಪಯೋಗದ ವಸ್ತುವಿನಂತೆ ಕಂಡು, ಅವಕಾಶ ಸಿಕ್ಕಾಗಿ ಆಕ್ರಮಣ ಮಾಡಿ ದೇಹದ ಅಗತ್ಯ ತೀರಿಸಿಕೊಳ್ಳುವ ಹೀನ ಪುರುಷ ಸಮಾಜದ ವಿರುದ್ಧ ಮೌನ ಪ್ರತಿಭಟನೆಯ ಮೂಲಕ ಈ ಇಡೀ ಚಿತ್ರದ ಕತೆ ಮತ್ತು ಕುಸುಮಳ ಪಾತ್ರ ಪ್ರೇಕ್ಷನ ಮನ ತಟ್ಟುತ್ತದೆ.

ಬೆಸಗರಹಳ್ಳಿ ರಾಮಣ್ಣ ಅವರ ಸಣ್ಣ ಕತೆಯೊಂದು ಇಂತಹ ಮೌಲ್ಯಯುತ ಚಲನಚಿತ್ರವಾಗಿ ಸದಭಿರುಚಿ ಸೃಷ್ಟಿಸುವ ಪರಿಪೂರ್ಣ ಕಲಾಕೃತಿಯಾಗಿ ರೂಪುಗೊಂಡಿರುವುದು ಕನ್ನಡಿಗರು, ಕನ್ನಡ ಸಾಹಿತ್ಯ ಮತ್ತು ಚಿತ್ರಜಗತ್ತು ಹೆಮ್ಮೆ ಪಡುವಂತಹ ವಿಚಾರ. ಸಾಹಿತ್ಯ ಕೃತಿಯನ್ನು ಆಧರಿಸಿ ಒಂದು ಸಶಕ್ತ ಚಲನಚಿತ್ರ ನಿರ್ಮಾಣವಾಗಬಲ್ಲದು ಎಂಬ ಸತ್ಯ ಕೂಡ ಈ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ನಿರ್ದೇಶಕರು ಗಮನದಲ್ಲಿ ಇರಿಸಿಕೊಳ್ಳಬೇಕಾದ ವಿಚಾರವಿದು. ವರ್ಷಕ್ಕೆ ಸುಮಾರು ಮೂನ್ನೂರು ಕನ್ನಡ ಚಿತ್ರಗಳಂತೆ ಸಿದ್ಧವಾಗುವ ಎಲ್ಲಾ ಚಿತ್ರಗಳ ಸಾಲಿನಲ್ಲಿ ಇದೂ ಒಂದು ಎನ್ನುವಂತಿದ್ದರೆ ಇಷ್ಟೆಲ್ಲ ಹೇಳುವ ಅಗತ್ಯವಿರುತ್ತಿರಲಿಲ್ಲ. ಚಿತ್ರದ ಯಾವುದೇ ಭಾಗದಲ್ಲೂ ಸಂಗೀತ ಬಳಸದೇ ಸಿಂಕ್‌ಸೌಂಡ್‌ (ಮೂಲಧ್ವನಿ ಮತ್ತು ಶಬ್ದಗ್ರಹಣ) ಮೂಲಕ ಇಡೀ ಚಿತ್ರವನ್ನು ವಾಸ್ತವಿಕ ನೆಲೆಯಲ್ಲಿ ಅತ್ಯಂತ ಸಹಜವಾಗಿ ರೂಪಿಸಲಾಗಿದೆ. ಕಲಾವಿದರ ಅಭಿನಯ ನೇರವಾಗಿ ಪ್ರೇಕ್ಷನ ಎದೆಗೆ ಇಳಿಯುವಂತಿದೆ. ಕುಸುಮಳ ತಂದೆಯಾಗಿ ಅಭಿಯಿಸಿರುವ ಕೃಷ್ಣೆಗೌಡರ ಪಾತ್ರವಂತೂ ಪ್ರೇಕ್ಷನ ಸ್ಮೃತಿಯಿಂದ ಮಾಸುವುದಿಲ್ಲ. ಚಿತ್ರಕತೆಯ ಚಲನೆ, ಬೆಳಕಿನ ವಿನ್ಯಾಸ ಉತ್ಕೃಷ್ಟ ಮಟ್ಟದಲ್ಲಿದೆ. ಈ ಚಿತ್ರದ ಈ ಎಲ್ಲ ಗುಣಮಟ್ಟಕ್ಕೆ ದೊರೆತ ಮನ್ನಣೆ ಎನ್ನುವಂತೆ ಈ ಚಿತ್ರ ಪ್ರಸಕ್ತ ಸಾಲಿನ ಭಾರತೀಯ ಪನೋರಮ ಸ್ಪರ್ಧೆಯ (ಗೋವಾ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ) ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಈ ಆಯ್ಕೆಯು ಕನ್ನಡ ಚಿತ್ರಗಳ ಹಿರಿಮೆಯನ್ನು ಮತ್ತೊಮ್ಮೆ ಹೆಚ್ಚಿಸಿದೆ.

ದೇಶದ ಅತ್ಯುನ್ನತ ಚಲನಚಿತ್ರ ಸ್ಪರ್ಧಾ ವೇದಿಕೆಯಾದ ಭಾರತೀಯ ಪನೋರಮಕ್ಕೆ ವಿವಿಧ ಪ್ರಾಂತ್ಯಗಳಿಂದ ವಿವಿಧ ಭಾಷೆಯ ನೂರಾರು ಚಿತ್ರಗಳು ಬಂದಿರುತ್ತವೆ. ಆ ಎಲ್ಲಾ ಚಿತ್ರಗಳಿಗೆ ಪ್ರಬಲ ಸ್ಪರ್ಧೆಯೊಡ್ಡಿ ಚಿತ್ರವೊಂದು ಪನೋರಮಕ್ಕೆ ಆಯ್ಕೆಯಾಗುವುದು ಸುಲಭದ ವಿಚಾರವಲ್ಲ. ಅಲ್ಲಿ ಆಯ್ಕೆಯಾಗುವ ಚಿತ್ರಕ್ಕೆ ಅದರದೇ ಆದ ತಾಂತ್ರಿಕ ಗುಣಮಟ್ಟ, ಸಮಾಜದ ಮೇಲೆ ಪರಿಣಾಮ ಬೀರುವ ವಿಶೇಷ ಸಾಮರ್ಥ್ಯ ಮತ್ತು ಪ್ರೇಕ್ಷಕರ ಮನದಲ್ಲಿ ಬಹುಕಾಲ ನಿಲ್ಲಬಲ್ಲ ದೃಶ್ಯ ಕಾವ್ಯವೇ ಆಗಿರಬೇಕು. ಈ ಎಲ್ಲ ಅರ್ಹತೆಗಳು ʻನಾನು ಕುಸುಮಾʼ ಚಿತ್ರಕ್ಕೆ ಇರುವುದರಿಂದಲೇ ಇದು ಸಾಧ್ಯವಾಗಿದೆ.

ಪ್ರತಿ ವರ್ಷ ಗೋವಾದ ಪಣಜಿಯಲ್ಲಿ ಕೇಂದ್ರ ಸರ್ಕಾರ (ಎನ್‌ಎಫ್‌ಡಿಸಿ) ಆಯೋಜಿಸುವ ʻಗೋವಾ ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವʼವು ಪ್ರಸಕ್ತ ವರ್ಷ (೨೦೨೨) ನವೆಂಬರ್‌ ೨೦ರಿಂದ ೨೮ರ ವರೆಗೆ ನಿಗದಿತ ಸ್ಥಳದಲ್ಲಿ ನಡೆಯಲಿದೆ. ʻನಾನು ಕುಸುಮಾʼ ಚಿತ್ರವು ಕನ್ನಡವನ್ನು ಪ್ರತಿನಿಧಿಸಿ ನವೆಂಬರ್‌ ೨೩ರಂದು ಬೆಳ್ಳಿ ತೆರೆಯ ಮೇಲೆ ಪ್ರದರ್ಶನವಾಗಲಿದೆ. ಚಿತ್ರೋತ್ಸವಕ್ಕೆ ಹೋಗುವ ಚಿತ್ರಪ್ರೇಮಿಗಳು ಈ ಸದರಭಿರುಚಿಯ ದೃಶ್ಯಕಾವ್ಯವನ್ನು ಕಣ್ಣುತುಂಬಿಕೊಳ್ಳಬಹುದು.