ಕೆಂಪು ಬಣ್ಣದ ರೇಷ್ಮೆ ಸೀರೆಯನ್ನು ಹಿಂದಿನೆರಡು ಬಟ್ಟೆ ತುಂಡುಗಳ ಜೊತೆಗೆ ಜೋಡಿಸುತ್ತಿದ್ದ ಶಂಕ್ರಜ್ಜಿಗೆ ಮದುವೆಯ ನೆನಪು ಬಂದರೂ ಅದು ಮನಸ್ಸಿಗೆ ಖುಷಿ ಕೊಡಲಿಲ್ಲ. ಹಸಿರು, ಹಳದಿ, ಕೆಂಪು ಬಣ್ಣಗಳಿಂದ ತಯಾರಾಗುತ್ತಿದ್ದ ಕೌದಿಗೆ ಸೇರಿಸಲು ಇನ್ನೊಂದೆರಡು ಬಟ್ಟೆಗಳಷ್ಟೇ ಬೇಕಿದ್ದದ್ದು. ಅವಳ ಮಡಿಲ ಬುಡದಲ್ಲಿಯೇ ಇತ್ತು ನೀಲಿ ಬಣ್ಣದ ಫ್ಯಾನ್ಸಿ ಸೀರೆ. ಅದನ್ನು ಎತ್ತಿಕೊಂಡು ಉಳಿದವುಗಳ ಜೊತೆಗೆ ಸೇರಿಸಿ ಹೊಲಿಯಲಾರಂಭಿಸಿದಳು.
ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ “ಕೌದಿ” ನಿಮ್ಮ ಓದಿಗೆ
ತನ್ನ ಸುತ್ತ ಬಣ್ಣಬಣ್ಣದ ಬಟ್ಟೆಗಳನ್ನು ರಾಶಿ ಹಾಕಿಕೊಂಡು ಕುಳಿತಿದ್ದ ಆ ಅಜ್ಜಿ ದಾರವನ್ನು ಸೂಜಿಗೆ ಪೋಣಿಸುವ ಪ್ರಯತ್ನದಲ್ಲಿದ್ದಳು. ಎಪ್ಪತ್ತರ ಅಂಚಿಗೆ ಬಂದುನಿಂತಿದ್ದ, ಕಣ್ಣು ಮಂಜಾಗಿದ್ದ ಅಜ್ಜಿಗೆ ಸೂಜಿ ದಾರದ ಸಂಗಾತ ತ್ರಾಸ ಕೊಡುವುದಕ್ಕೆ ಶುರುಮಾಡಿತ್ತು. ಬಾಯೆಂಜಲಲ್ಲಿ ದಾರದ ತುದಿಯನ್ನು ಒದ್ದೆಮಾಡಿ, ಸೂಜಿಯ ಕಣ್ಣಿಗೆ ದಾರವನ್ನು ಹಾಕಲು ಪ್ರಯತ್ನಿಸುತ್ತಲೇ ಇದ್ದಳು. ಕೊನೆಗೂ ಅದ್ಯಾವುದೋ ಮಾಯೆಯಲ್ಲಿ, ಅವಳೇ ಅಚ್ಚರಿಪಡುವ ಹಾಗೆ ಸೂಜಿ ದಾರಗಳು ಒಂದಕ್ಕೊಂದು ಸೇರಿಕೊಂಡವು.
“ಹಣ ಇದ್ದರೆ ಮಾತ್ರ ಬರಬೇಕು. ಸಾಲ ಗೀಲ ಎಂದು ಬಂದರೆ ಮುಖಕ್ಕೆ ಒದ್ದು ಕಳಿಸುತ್ತೇನೆ. ಮಾನವೀಯತೆ ಅದೂ ಇದೂ ಅಂತೆಲ್ಲಾ ಮಾತಾಡುವುದಕ್ಕೆ ಬರಬೇಡ. ನಿನಗೆ ಪುಕ್ಕಟೆಯಾಗಿ ಕೊಡುವುದಕ್ಕೆ ನೀನೇನೂ ನನ್ನ ಹೆತ್ತ ಅಮ್ಮ ಅಲ್ಲ” ಮನೆಯ ಪಕ್ಕದಲ್ಲಿಯೇ ಇದ್ದ ಅಂಗಡಿಯಿಂದ ಕೇಳಿಬರುತ್ತಿದ್ದ ಒರಟು ಧ್ವನಿ ತೆರೆದಿದ್ದ ಕಿಟಕಿಯ ಮೂಲಕ ಅಜ್ಜಿಯ ಕಿವಿಗೆ ಬಂದು ಬಡಿಯಿತು. ಯಾರೋ ಹೆಂಗಸು ಕ್ಷೀಣ ಸ್ವರದಲ್ಲಿ ಅಂಗಡಿಯವನಲ್ಲಿ ಅಂಗಲಾಚುತ್ತಿದ್ದಳು. ಬಿಟ್ಟಿಯಾಗಿ ಕೊಡುವುದಕ್ಕೆ ಅಂಗಡಿಯವನು ಸುತಾರಾಂ ಸಿದ್ಧನಿರಲಿಲ್ಲ. ಅದು ಅವನ ಮಾತಿನ ಧಾಟಿಯಲ್ಲಿಯೇ ಗೊತ್ತಾಗುತ್ತಿತ್ತು.
ಅಷ್ಟರಲ್ಲಿ ಒಳಕೋಣೆಯಿಂದ ಮಗು ಅಳುವ ಸದ್ದು ಕೇಳಿಸಿತು. ಲಯ ತಪ್ಪಿಹೋದಂತಿದ್ದ ಅಳುವಿನ ಧ್ವನಿ ಹಂತಹಂತವಾಗಿ ಬಂದು ಅಜ್ಜಿಯ ಕಿವಿಗೆ ಬಡಿಯತೊಡಗಿತ್ತು. ಅಳುವನ್ನು ಕೇಳಿಸಿಕೊಂಡೇ ಕುಳಿತುಕೊಳ್ಳಲಾರದ ತಳಮಳ ಅಜ್ಜಿಯೊಳಗೆ. ಒಳಹೋಗಿ ಸಮಾಧಾನ ಮಾಡೋಣ ಎಂದುಕೊಂಡು ಎದ್ದುನಿಂತಳು. ಏನನ್ನೋ ನೆನಪಿಸಿಕೊಂಡವಳು ಹಾಗೆಯೇ ನೆಲದ ಮೇಲೆ ಕುಳಿತಳು. ಅಡುಗೆ ಕೋಣೆಯಿಂದ ಆರಂಭಗೊಂಡ ಹೆಜ್ಜೆಸದ್ದು, ಒಳಕೋಣೆಯ ಬಾಗಿಲು ತೆರೆದುಕೊಂಡದ್ದು, ಬಡಕ್ಕನೆ ಮುಚ್ಚಿದ್ದು, ಅಳುತ್ತಿದ್ದ ಮಗುವನ್ನು ಜೋರುಮಾಡಿದ್ದು, ಮಗು ಭಯದಿಂದಲೇ ಅಳು ನಿಲ್ಲಿಸಿದ್ದು ಇವೆಲ್ಲವೂ ಆ ಅಜ್ಜಿಯ ಕಿವಿಗೆ ಅಸ್ಪಷ್ಟವಾಗಿ ಕೇಳಿಸಿತು.
ಅವಳ ಕೈಯ್ಯೀಗ ಚಲಿಸಿದ್ದು ಚಿನ್ನದ ಬಣ್ಣದ ಜರಿಯಿದ್ದ ಹಸಿರು ಲಂಗದ ಕಡೆಗೆ. ಜರಿ ಅಲ್ಲಲ್ಲಿ ಹರಿದುಹೋಗಿತ್ತು. ಕಡುಹಸಿರಿದ್ದ ಲಂಗ ಕಳೆಗುಂದಿ ನಸುಹಸಿರು ಬಣ್ಣದ್ದಾಗಿ ಕಾಣುತ್ತಿತ್ತು. ಅದು ಅಜ್ಜಿಯ ಬಾಲ್ಯಕಾಲದ್ದು.
*****
ಶಂಕರಿ ಎಂಬ ಹೆಸರಿನ ಇವಳಿಗೆ ಆಗಿನ್ನೂ ಪ್ರಾಯ ಹತ್ತು ದಾಟಿರಲಿಲ್ಲ. ಪಕ್ಕದ ಮನೆಯಲ್ಲಿದ್ದ ಲೀಲಾವತಿ ಎನ್ನುವ ಹುಡುಗಿ, ಹೆಚ್ಚು ಕಡಿಮೆ ಇವಳದ್ದೇ ಪ್ರಾಯದವಳು, ನಸುಗೆಂಪು ಲಂಗಕ್ಕೆ ಚಿನ್ನದ ಬಣ್ಣದ ಜರಿಯನ್ನು ಹಾಕಿಸಿಕೊಂಡಿದ್ದಳು. ಕುಂಟೆಬಿಲ್ಲೆ ಆಡುವುದಕ್ಕೆ ಬಂದಾಗ ಅದನ್ನು ಗಮನಿಸಿದ್ದ ಶಂಕರಿಗೂ ಜರಿ ಹಾಕಿಸುವ ಆಸೆ ಮೊಳಕೆಯೊಡೆದಿತ್ತು. ಮನೆಗೆ ಬಂದು ತಂದೆಯಲ್ಲಿ ಕೇಳಿದರೆ ಅವರು ಮೊದಲಿಗೆ ಒಪ್ಪಿಕೊಂಡಿರಲಿಲ್ಲ. ಅವರು ಹೇಳಿದ್ದೊಂದೇ ಕಾರಣ, ದುಡ್ಡಿಲ್ಲ. ನಿಜವಾಗಿಯೂ ಅವರಲ್ಲಿ ದುಡ್ಡಿರಲಿಲ್ಲ. ಆದರೆ ಅದನ್ನು ಕೇಳುವುದಕ್ಕೆ ಸಿದ್ಧವಿರದ ಹಠಮಾರಿಯಾಗಿದ್ದ ಶಂಕರಿಯದ್ದು ಒಂದೇ ಹಠ, ಲೀಲಾವತಿಯ ಲಂಗದಲ್ಲಿರುವಂಥದ್ದೇ ಚಂದದ ಜರಿ ತನ್ನ ಲಂಗದಲ್ಲಿಯೂ ಇರಬೇಕು. ಜರಿ ಹಾಕಿಸುವವರೆಗೂ ತಾನು ಊಟ ಮಾಡುವುದಿಲ್ಲ ಎಂದು ರಚ್ಚೆ ಹಿಡಿದು ಕುಳಿತಳು. ಮಗಳು ಸ್ವಲ್ಪ ಸಮಯದಲ್ಲಿ ಹಠ ಬಿಟ್ಟು ಊಟ ಮಾಡಿಯಾಳು ಎಂಬ ನಿರೀಕ್ಷೆ ಅಪ್ಪನದ್ದು. ಆದರೆ ನಿರೀಕ್ಷೆ ಹುಸಿಯಾಗಿತ್ತು. ತನ್ನ ಹಠದಿಂದ ಒಂದಿಂಚೂ ಹಿಂದೆ ಸರಿಯಲು ಶಂಕರಿ ಸಿದ್ಧ ಇರಲಿಲ್ಲ. ಮಗಳು ಏನೆಂದರೂ ಸೋಲುವವಳಲ್ಲ ಎಂದು ಅರ್ಥಮಾಡಿಕೊಂಡ ಆ ತಂದೆ ಅದ್ಯಾರಿಂದಲೋ ಸಾಲ ತಂದು, ಮಗಳ ಲಂಗಕ್ಕೆ ಜರಿ ಹಾಕಿಸಿದ್ದರು.
ಅದೇ ಲಂಗವನ್ನು ಕೌದಿಗೆ ಸೇರಿಸುವುದಕ್ಕಾಗಿ ಈಗ ಕತ್ತರಿಸಿ ತೆಗೆದ ಶಂಕ್ರಜ್ಜಿ ಅದರ ಜೊತೆಗೆ ಸೇರಿಸುವುದಕ್ಕಾಗಿ ಸರಿಹೊಂದುವ ಬಟ್ಟೆಯನ್ನು ರಾಶಿಯಲ್ಲಿ ಹುಡುಕತೊಡಗಿದ್ದಳು. ಅವಳ ಕೈಯ್ಯನ್ನು ಬಂದು ಸೇರಿಕೊಂಡದ್ದು ಹಳದಿ ಬಣ್ಣದ ಸೀರೆ.
ಹತ್ತಿರದ ಸಂಬಂಧಿಕರಾದ ಗೋಪಾಲಯ್ಯನವರ ಮನೆಯ ಸತ್ಯನಾರಾಯಣ ಪೂಜೆಗೆ ಅಪ್ಪ ಅಮ್ಮನ ಜೊತೆಗೆ ಹೊರಟಿದ್ದ ಶಂಕರಿಗೆ ಅಮ್ಮ ತಂದುಕೊಟ್ಟದ್ದು ಹಳದಿ ಬಣ್ಣದ ಸೀರೆ. “ಮೈನೆರೆದು ವರ್ಷ ಕಳೆದಿದೆ. ಇನ್ನೂ ಆ ರವಿಕೆ ಲಂಗ ಹಾಕಿಕೊಂಡು ಇರುವುದಲ್ಲ. ನಿನಗೂ ಮದುವೆಯ ಪ್ರಾಯವಾಗಿದೆ ಎಂದು ನಾಲ್ಕು ಜನರಿಗೆ ತಿಳಿಯಬೇಕಲ್ಲ. ಅದಕ್ಕೇ ಈ ಸೀರೆ ಉಟ್ಟುಕೋ” ಎಂದು ಹೇಳಿದ್ದರು ಅಮ್ಮ. ಸೀರೆ ಉಡಬೇಕೆಂಬ ಆಸೆ ಶಂಕರಿಗೆ ಹಿಂದಿನಿಂದಲೇ ಇತ್ತು. ಆದರೆ ಅಮ್ಮ ಎಲ್ಲಿ ಬೈಯ್ಯುತ್ತಾಳೋ ಎಂದುಕೊಂಡು ಸುಮ್ಮನಿದ್ದಳು. ಈಗ ಅಮ್ಮನೇ ಸೀರೆ ಕೈಯ್ಯಲ್ಲಿಟ್ಟು ಉಟ್ಟುಕೋ ಎಂದಾಗ ಅವಳಿಗೆ ಗಗನ ಸ್ಪರ್ಶಿಸಿದ ಅನುಭವ. ಜೊತೆಗೆ ಅಮ್ಮ ಹೇಳಿದ ‘ಮದುವೆಯ ಪ್ರಾಯ’ ಎಂಬ ಪದ ಅವಳಲ್ಲಿ ರೋಮಾಂಚನ ಹುಟ್ಟುಹಾಕಿತ್ತು. ಅಮ್ಮ ಕೊಟ್ಟ ಸೀರೆಯನ್ನು ಸಂತಸದಿಂದ ಎತ್ತಿಕೊಂಡಳೇನೋ ನಿಜ, ಆದರೆ ಅದನ್ನು ಉಟ್ಟುಕೊಳ್ಳುವುದು ಹೇಗೆ ಎನ್ನುವುದೇ ಗೊತ್ತಿರಲಿಲ್ಲ ಶಂಕರಿಗೆ. ಅಮ್ಮನನ್ನೇ ಕೇಳಬೇಕಾಗಿತ್ತು. ಅಚ್ಚುಕಟ್ಟಾಗಿ ಮಗಳಿಗೆ ಸೀರೆ ಉಡಿಸಿದ ಅಮ್ಮ “ಮೈಸೂರು ಮಹಾರಾಣಿಯ ಹಾಗೆ ಕಾಣಿಸುತ್ತಿದ್ದೀಯಲ್ಲೇ. ನನ್ನ ದೃಷ್ಟಿಯೇ ತಗಲುತ್ತದೆ” ಎಂದು ಹೇಳಿ, ದೃಷ್ಟಿ ನಿವಾಳಿಸಿ, ಆನಂದದ ನಗು ಚೆಲ್ಲಿದ್ದರು.
ಇದುವರೆಗೂ ಧರಿಸದ್ದನ್ನು ಮೈಮೇಲೆ ಹೊತ್ತುನಿಂತಿದ್ದ ಶಂಕರಿಗೆ ಹೇಳಲಾಗದಷ್ಟು ಸಂತಸ, ತಾಳಲಾಗದಷ್ಟು ಉಲ್ಲಾಸ. ಪೂಜೆಗೆ ಬಂದಿದ್ದ ಎಲ್ಲರ ಜೊತೆಗೂ ಮಾತು. ಮುಗ್ಧವಾದ ಒಂದು ನಗು. ಪರಿಚಯ ಇರದವರ ಜೊತೆಗೂ ನಗುತ್ತಾ ಮಾತನಾಡಿದಳು. ಮುಖಪೂರ್ತಿ ತುಂಬಿಕೊಂಡಿದ್ದ ನಗುವಿನಿಂದಾಗಿ ಯಾವತ್ತಿಗಿಂತ ಸಾವಿರಪಟ್ಟು ಸುಂದರಿಯಾಗಿ ಕಾಣುತ್ತಿದ್ದಳು ಶಂಕರಿ. “ಆ ಹಳದಿ ಸೀರೆ ಉಟ್ಟವಳು ಯಾರ ಮಗಳು?” ಎಂದು ಎಲ್ಲರೂ ಕೇಳುವಂತೆ ಆಕರ್ಷಕವಾಗಿ ಕಂಡಿದ್ದಳು ಅವಳು ಆ ದಿನ.
ಹಸಿರು ಬಣ್ಣದ ಲಂಗವನ್ನು ಕತ್ತರಿಸಿದ್ದ ಹಳದಿ ಸೀರೆಯ ಜೊತೆಗೆ ಸೇರಿಸಿ ಹೊಲಿದ ಶಂಕ್ರಜ್ಜಿಯ ದೃಷ್ಟಿಯೀಗ ಹರಿದದ್ದು ಕಡಿಮೆಯಾಗುತ್ತಾ ಬಂದಿದ್ದ ಬಟ್ಟೆರಾಶಿಯ ಎಡಬದಿಗೆ. ಕೆಂಪುಬಣ್ಣದ ರೇಷ್ಮೆಸೀರೆ ಅಜ್ಜಿಯನ್ನು ನೋಡಿ ನಗುತ್ತಿತ್ತು.
ಅವರು ಹೇಳಿದ್ದೊಂದೇ ಕಾರಣ, ದುಡ್ಡಿಲ್ಲ. ನಿಜವಾಗಿಯೂ ಅವರಲ್ಲಿ ದುಡ್ಡಿರಲಿಲ್ಲ. ಆದರೆ ಅದನ್ನು ಕೇಳುವುದಕ್ಕೆ ಸಿದ್ಧವಿರದ ಹಠಮಾರಿಯಾಗಿದ್ದ ಶಂಕರಿಯದ್ದು ಒಂದೇ ಹಠ, ಲೀಲಾವತಿಯ ಲಂಗದಲ್ಲಿರುವಂಥದ್ದೇ ಚಂದದ ಜರಿ ತನ್ನ ಲಂಗದಲ್ಲಿಯೂ ಇರಬೇಕು. ಜರಿ ಹಾಕಿಸುವವರೆಗೂ ತಾನು ಊಟ ಮಾಡುವುದಿಲ್ಲ ಎಂದು ರಚ್ಚೆ ಹಿಡಿದು ಕುಳಿತಳು. ಮಗಳು ಸ್ವಲ್ಪ ಸಮಯದಲ್ಲಿ ಹಠ ಬಿಟ್ಟು ಊಟ ಮಾಡಿಯಾಳು ಎಂಬ ನಿರೀಕ್ಷೆ ಅಪ್ಪನದ್ದು. ಆದರೆ ನಿರೀಕ್ಷೆ ಹುಸಿಯಾಗಿತ್ತು.
“ವಾಲಗಬೆಟ್ಟು ಈಶ್ವರಯ್ಯನವರ ಮಗ ನಾರಾಯಣ ನಿಮ್ಮ ಮಗಳನ್ನು ನೋಡಿ ಇಷ್ಟಪಟ್ಟಿದ್ದಾನೆ. ಅದೇ ಗೋಪಾಲಯ್ಯನವರ ಮನೆಯಲ್ಲಿ ಸತ್ಯನಾರಾಯಣ ಪೂಜೆ ಇತ್ತಲ್ಲ, ಅಲ್ಲಿ ಶಂಕರಿಯನ್ನು ನೋಡಿದ್ದಾನಂತೆ. ಅವನಿಗೆ ಬಹಳ ಹಿಡಿಸಿದೆ ಇವಳನ್ನು. ಮದುವೆ ಆಗುವುದಿದ್ದರೆ ಇವಳನ್ನೇ ಎಂದು ಅವನ ಅಪ್ಪ ಅಮ್ಮನಲ್ಲಿ ಹೇಳಿದ್ದಾನಂತೆ…” ಎಂದೆಲ್ಲಾ ಸಣ್ಣಬೆಟ್ಟು ಕೇಶವಯ್ಯ ಬಂದು ಶಂಕರಿಯ ಅಪ್ಪ ಅಮ್ಮನಲ್ಲಿ ಹೇಳಿದಾಗ ಅವರಿಗೆ ಆಕಾಶ ಬಾಗಿ ಭೂಮಿಗೆ ಮುತ್ತಿಟ್ಟ ಅನುಭವ. ವಾಲಗಬೆಟ್ಟು ಮನೆತನದ ಬಗ್ಗೆ, ಆ ಮನೆಯ ಮಗ ನಾರಾಯಣನ ಬಗ್ಗೆ ಅವರಿಗೆ ಗೊತ್ತಿತ್ತು. ಸೀಮೆಯ ಅತ್ಯಂತ ಸಿರಿವಂತ ಮನೆತನಗಳಲ್ಲಿ ಅದೂ ಒಂದು. ನಾರಾಯಣ ಡಿಗ್ರಿ ಮುಗಿಸಿ ಒಂದು ವರ್ಷ ಹಿಂದಷ್ಟೇ ಸರ್ಕಾರಿ ನೌಕರಿಗೆ ಸೇರಿಕೊಂಡಿದ್ದ. ಬುದ್ಧಿವಂತಿಕೆ, ವಿನಯ ಎರಡೂ ಇದ್ದ ಹುಡುಗ ಎನ್ನುವುದು ಶಂಕರಿಯ ಅಪ್ಪ ಅಮ್ಮನಿಗೆ ಗೊತ್ತಿತ್ತು. ಸಾಲ ಮಾಡಿಯಾದರೂ ಈ ಮದುವೆ ಮಾಡಿ ಮುಗಿಸಲೇಬೇಕು ಎಂದು ನಿರ್ಧರಿಸಿದವರು, ಶಂಕರಿಯಲ್ಲಿ ವಿಷಯ ತಿಳಿಸಿದರು. ಹುಡುಗನೊಬ್ಬ ತನ್ನನ್ನು ನೋಡಿ ಇಷ್ಟಪಟ್ಟಿರುವ ವಿಷಯವೇ ಖುಷಿ ಕೊಟ್ಟಿತ್ತು ಇನ್ನೂ ಆಸೆಕಂಗಳ ಹುಡುಗಿಯಾಗಿದ್ದ ಶಂಕರಿಗೆ. ಎರಡೂ ಮನೆಯವರ ಮಧ್ಯೆ ಮಾತುಕತೆಯೆಲ್ಲ ಮುಗಿದು ಮದುವೆಯ ಹಂತಕ್ಕೆ ಬಂದಿತ್ತು.
ಮದುವೆಯ ದಿನ ಕೆಂಪುಬಣ್ಣದ ರೇಷ್ಮೆಸೀರೆಯಲ್ಲಿ ಕಂಗೊಳಿಸುತ್ತಿದ್ದ ಶಂಕರಿ ದೇವಲೋಕದಿಂದಿಳಿದುಬಂದ ಅಪ್ಸರೆಯಂತೆ ಕಾಣುತ್ತಿದ್ದಳು. ಸೀರೆಯೂ ಕೆಂಪು ಕೆಂಪು, ಅವಳ ಮುಖವೂ ನಾಚಿಕೆಯಿಂದ ಕೆಂಪು ಕೆಂಪು. ನಾರಾಯಣನ ಗಮನವೆಲ್ಲಾ ಅವಳತ್ತಲೇ ನೆಟ್ಟಿದ್ದನ್ನು ಕಂಡು ತುಸು ತಮಾಷೆಯ ಪ್ರವೃತ್ತಿಯವರಾದ ಪುರೋಹಿತರು ಮನಸೋ ಇಚ್ಛೆ ನವಜೋಡಿಗಳ ಕಾಲೆಳೆದಿದ್ದರು.
***
ಕೆಂಪು ಬಣ್ಣದ ರೇಷ್ಮೆ ಸೀರೆಯನ್ನು ಹಿಂದಿನೆರಡು ಬಟ್ಟೆ ತುಂಡುಗಳ ಜೊತೆಗೆ ಜೋಡಿಸುತ್ತಿದ್ದ ಶಂಕ್ರಜ್ಜಿಗೆ ಮದುವೆಯ ನೆನಪು ಬಂದರೂ ಅದು ಮನಸ್ಸಿಗೆ ಖುಷಿ ಕೊಡಲಿಲ್ಲ. ಹಸಿರು, ಹಳದಿ, ಕೆಂಪು ಬಣ್ಣಗಳಿಂದ ತಯಾರಾಗುತ್ತಿದ್ದ ಕೌದಿಗೆ ಸೇರಿಸಲು ಇನ್ನೊಂದೆರಡು ಬಟ್ಟೆಗಳಷ್ಟೇ ಬೇಕಿದ್ದದ್ದು. ಅವಳ ಮಡಿಲ ಬುಡದಲ್ಲಿಯೇ ಇತ್ತು ನೀಲಿ ಬಣ್ಣದ ಫ್ಯಾನ್ಸಿ ಸೀರೆ. ಅದನ್ನು ಎತ್ತಿಕೊಂಡು ಉಳಿದವುಗಳ ಜೊತೆಗೆ ಸೇರಿಸಿ ಹೊಲಿಯಲಾರಂಭಿಸಿದಳು.
***
ಮದುವೆಯಾಗಿ ಹಲವು ವರ್ಷ ಕಳೆದುಹೋಗಿದ್ದವು. ಮಗುವಾಗುವ ಲಕ್ಷಣವೇ ಇಲ್ಲ. ವೈದ್ಯರಲ್ಲಿ ಕೇಳಿದಾಗ ಇಬ್ಬರಲ್ಲೂ ಸ್ವಲ್ಪ ಸಮಸ್ಯೆ ಇದೆ. ಆದರೆ ಅದೇನೂ ಸರಿಯಾಗದೇ ಇರುವಂಥದ್ದಲ್ಲ. ಮಗು ಆಗುತ್ತದೆ ಎಂದಿದ್ದರು. ವೈದ್ಯರ ಈ ಮಾತಿನಿಂದಾಗಿ ದಂಪತಿಗಳಿಗೆ ಸಮಾಧಾನ ಆಯಿತಾದರೂ ವಾಲಗಬೆಟ್ಟು ಈಶ್ವರಯ್ಯ ಮತ್ತು ಅವರ ಪತ್ನಿಗೆ ಆತಂಕ ಹಾಗೆಯೇ ಇತ್ತು. ಉಡುಪಿಯ ಶ್ರೀಕೃಷ್ಣನಿಗೆ ಹರಕೆ ಹೇಳಿದರು. ಹೀಗೆ ಹರಕೆ ಹೇಳಿ ಒಂದು ವರ್ಷದಲ್ಲಿಯೇ ಮುದ್ದು ಮೊಗದ ಮಗುವೊಂದು ದಂಪತಿಗಳ ಕೈಯ್ಯ ಬಿಸಿಯಲ್ಲಿ ನಗುತ್ತಿತ್ತು. ಉದ್ಯೋಗದ ಕಾರಣಕ್ಕಾಗಿ ಪೇಟೆಯಲ್ಲಿ ಹೋಗಿ ನೆಲೆನಿಂತಿದ್ದ ನಾರಾಯಣ ಶಂಕರಿ ದಂಪತಿ ಮಗುವಿನ ನಾಮಕರಣಕ್ಕಾಗಿ ಊರಿಗೆ ಬಂದಿದ್ದರು. “ಮಗು ಹುಟ್ಟಿದ್ದಂತೂ ಪೇಟೆಯ ಯಾವುದೋ ಆಸ್ಪತ್ರೆಯಲ್ಲಿ. ಅವನ ನಾಮಕರಣ ನಮ್ಮೂರ ದೇವಸ್ಥಾನದಲ್ಲಿಯೇ ಆಗಬೇಕು” ಎಂದಿದ್ದರು ನಾರಾಯಣನ ತಂದೆ. ಅವರ ಆಸೆಯಂತೆಯೇ ಮಗುವಿನ ನಾಮಕರಣ ಭರ್ಜರಿಯಾಗಿ ನಡೆಯಿತು. ವಾಲಗಬೆಟ್ಟು ಈಶ್ವರಯ್ಯನವರ ಮೊಮ್ಮಗನ ನಾಮಕರಣ ಎಂಬ ಪ್ರೀತಿಯಿಂದ ಊರವರು, ಸಂಬಂಧಿಕರು ಎಲ್ಲರೂ ಬಂದಿದ್ದರು. ನಾರಾಯಣ ಮಗುವಿನ ಕಿವಿಗೆ ಬಾಯಿಯಿಟ್ಟು ‘ಕೃಷ್ಣಪ್ರಸಾದ ಕೃಷ್ಣಪ್ರಸಾದ ಕೃಷ್ಣಪ್ರಸಾದ’ ಎಂದಾಗ ಸುತ್ತ ನಿಂತಿದ್ದ ಸಂಬಂಧಿಕರೆಲ್ಲಾ ‘ಹೋ’ ಎಂದು ಸಂತಸದಲ್ಲಿ ಬೊಬ್ಬೆ ಹೊಡೆದಿದ್ದರು. ಅವರ ಬೊಬ್ಬೆಗೆ ಹೆದರಿಕೊಂಡ ಮಗ ಕೃಷ್ಣಪ್ರಸಾದ ತನ್ನಮ್ಮ ಉಟ್ಟುಕೊಂಡಿದ್ದ ನೀಲಿ ಬಣ್ಣದ ಸೀರೆಯನ್ನು ಒದ್ದೆಮಾಡಿದ್ದ.
***
ಕಪ್ಪು ಬಣ್ಣದ ಕಾಟನ್ ಸೀರೆಯನ್ನು ಎತ್ತಿಕೊಂಡ ಶಂಕ್ರಜ್ಜಿಯ ಕಣ್ಣಲ್ಲಿದ್ದದ್ದು ನೀರ ಹನಿ. ಇದ್ದ ಬಟ್ಟೆಗಳಲ್ಲೇ ಅತೀ ಹೆಚ್ಚು ಹೊಳಪನ್ನು ಉಳಿಸಿಕೊಂಡಿದ್ದ ಅದನ್ನು ಎರಡೆರಡು ಸಲ ನೋಡಿದವಳು ಕೌದಿಗೆ ಸೇರಿಸುವ ಕಾಯಕದಲ್ಲಿ ನಿರತಳಾದಳು.
***
ಎರಡು ವಾರಗಳ ಹಿಂದಷ್ಟೇ ಶಂಕ್ರಜ್ಜಿಗೆ ವಿಪರೀತ ಎದೆನೋವು ಶುರುವಾಗಿತ್ತು. ಆಸ್ಪತ್ರೆಗೆ ಸೇರಿಸಿದಾಗ ವೈದ್ಯರು ಹೇಳಿದ್ದಿಷ್ಟೇ- ಹೃದಯದಲ್ಲಿ ಸಮಸ್ಯೆ ಇದೆ. ಮಾತ್ರೆ ಬರೆದುಕೊಟ್ಟದ್ದನ್ನು ಸರಿಯಾಗಿ ತೆಗೆದುಕೊಳ್ಳಬೇಕು. ತಿಂಗಳಿಗೊಮ್ಮೆಯಾದರೂ ಬಂದು ಪರೀಕ್ಷೆ ಮಾಡಿಸಿಕೊಳ್ಳುತ್ತಿರಬೇಕು. ಹಾಗಿದ್ದರೆ ಮಾತ್ರ ಜೀವ ಉಳಿಸಿಕೊಳ್ಳುವುದಕ್ಕೆ ಸಾಧ್ಯ. ವೈದ್ಯರಿಂದ ಆ ಮಾತು ಕೇಳಿಸಿಕೊಂಡು ಹೊರಬಂದಾಗ ತಾನುಟ್ಟ ಸೀರೆಯನ್ನೇ ನೋಡಿಕೊಳ್ಳುತ್ತಾ ಶಂಕ್ರಜ್ಜಿ ಅಂದುಕೊಂಡಳು- ನಾನುಟ್ಟ ಸೀರೆಯೂ ಕಪ್ಪು ಕಪ್ಪು. ತನ್ನ ಬದುಕೂ ಇನ್ನುಮುಂದೆ ಕಪ್ಪು ಕಪ್ಪಾಗಿಬಿಡುತ್ತದೆ. ತನ್ನ ಬದುಕು ಕತ್ತಲಿಗೆ ಸರಿದಾಗಿದೆ.
ಹಲವು ಬಣ್ಣಗಳನ್ನು ಹೊತ್ತುನಿಂತಿದ್ದ ಕೌದಿ ಶಂಕ್ರಜ್ಜಿಯ ಕೈಯ್ಯಲ್ಲಿತ್ತು. ಅದನ್ನೊಮ್ಮೆ ಎತ್ತಿಕೊಂಡವಳು ಹಾಗೆಯೇ ನೋಡುತ್ತಾ “ಅಲ್ಲಿ ಇನ್ನು ಹೇಗೋ ಏನೋ. ಚಳಿಗಾಲವನ್ನು ಕಳೆಯಬೇಕಲ್ಲಾ” ಎಂದಳು. ಅಷ್ಟರಲ್ಲಿ ಅಂಗಳದಲ್ಲಿ ಕಾರು ನಿಂತ ಸದ್ದು. ಕಾರಿನಿಂದಿಳಿದುಬಂದ ಕೃಷ್ಣಪ್ರಸಾದ ಆತುರಾತುರವಾಗಿ “ಹ್ಞೂ, ಹೊರಡೋಣ ಅಮ್ಮ. ನಾನೆಲ್ಲಾ ಮಾತಾಡಿ ಬಂದಿದ್ದೇನೆ” ಎಂದ. ಮೊದಲೇ ಸಿದ್ಧಮಾಡಿಟ್ಟಿದ್ದ ಬ್ಯಾಗಿಗೆ ಕೌದಿಯನ್ನು ತುಂಬಿಸಿದ ಶಂಕ್ರಜ್ಜಿ ಆ ಬ್ಯಾಗನ್ನು ಎತ್ತಿಕೊಂಡಳು. ಹೊರಟಾಗ ಅವಳ ಕಣ್ಣಲ್ಲಿ ನೀರು. “ಅಷ್ಟು ಬೇಸರ ಮಾಡಿಕೊಳ್ಳುವುದ್ಯಾಕೆ? ಅಲ್ಲಿರುವವರೆಲ್ಲ ನಿನ್ನ ವಯಸ್ಸಿನವರೇ. ನಿನಗೆ ಸಮಯ ಕಳೆಯುವುದಕ್ಕೇನೂ ಸಮಸ್ಯೆಯಿಲ್ಲ. ಎರಡು ತಿಂಗಳಿಗೊಂದು ಸಲ ನಾನು ಬರುತ್ತಿರುತ್ತೇನೆ” ಎಂದ. ಮನೆಯ ಬಾಗಿಲ ಬಳಿ ತಲುಪಿದವಳು ತಿರುಗಿ ಒಳಕೋಣೆಯಾಚೆಗೆ ನೋಡಿದಳು. “ಹ್ಞೂ, ಮತ್ತೆ ಅಲ್ಲಿ ಹೋಗಬೇಕಾದ ಅಗತ್ಯ ಇಲ್ಲ. ನಿನ್ನೆಯೇ ಹೇಳಿ ಆಗಿದೆಯಲ್ಲ. ಮತ್ತೆ ನೀನು ಮಗುವನ್ನು ಮುದ್ದುಮಾಡುತ್ತಾ ಕುಳಿತರೆ ಅವಳಿಗೆ ಆಗುವುದೂ ಇಲ್ಲ” ಗುಟ್ಟಾಗಿ ಹೇಳಿದ ಕೃಷ್ಣಪ್ರಸಾದ ಅವಳ ಕೈಯ್ಯಲ್ಲಿದ್ದ ಬ್ಯಾಗನ್ನು ಎತ್ತಿಕೊಂಡು ಹೋಗಿ ಕಾರಲ್ಲಿಟ್ಟ. ಮಗನ ಹಿಂದೆಯೇ ನಡೆದುಹೋದ ಅವಳು ಕಾರಿನ ಸೀಟಿನಲ್ಲಿ ಕುಳಿತಾಗ ಹೃದಯ ಭಾರವಾಗಿತ್ತು…
ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.
ಒಂದೊಂದು ಬಣ್ಣದ ಸೀರೆಗಳನ್ನು ಜೋಡಿಸುತ್ತಾ ಕೌದಿ ಹೊಲೆಯುವ ಶಂಕರಿ ತನ್ನ ಬದುಕಿನ ಇತಿಹಾಸವನ್ನು ಹರಡಿ ತೋರಿಸುತ್ತಾರೆ. ಕಾಲಕ್ಕೆ ತಕ್ಕ ಹಾಗೆ ಸಿಕ್ಕ ಬಣ್ಣದ ಸೀರೆಗಳನ್ನು ಉಡುವ ಬಗೆಯೇ ಬಂದ ಹಾಗೆ ಜೀವನ ನಡೆಸುವುದು. ಅದು ಕಪ್ಪು ಸೀರೆಯೊಂದಿಗೆ ಕೊನೆಯಾಗುವುದು ಸೊಗಸಾದ ರೂಪಕವಾಗಿದೆ. ಇದು ಈಗಿನ ಸಮಾಜದಲ್ಲಿ ಸಹಜವೆನ್ನುವಷ್ಟು ನಮ್ಮ ನಾಗರಿಕತೆ ಒಪ್ಪಿಕೊಂಡುಬಿಟ್ಟಿದೆ. ಕಥಾ ವಸ್ತು, ನಿರೂಪಣೆ ಚೆನ್ನಾಗಿದೆ. ಲೇಖಕರಿಗೆ ಅಭಿನಂದನೆಗಳು. ಹಾಂ.. ಹಾಗೆಯೇ ಈಗ ಮೂರು ವರ್ಷದ ಹಿಂದೆ ಕಾಸರಗೋಡಿನಲ್ಲಿ ತಮ್ಮ 85ನೇ ವಯಸ್ಸಿನಲ್ಲಿ ಒಂಟಿಯಾಗಿ ತೀರಿಕೊಂಡ ನನ್ನ ಚಿಕ್ಕಮ್ಮ ಶಂಕರಿ ಟೀಚರ್ ನೆನಪಾಯಿತು.