ಭಾರತ ಮತ್ತು ಶ್ರೀಲಂಕದ ಮ್ಯಾಚ್ ಕಡಿಮೆ ಸ್ಕೋರ್‌ಗಳಾಗಿದ್ಯೂ ಆಟ ಬಹಳ ರೋಮಾಂಚನವಾಗಿತ್ತು. ಭಾರತ ಎಂದಿನಂತೆ ಚೆನ್ನಾಗಿ ಶುರುಮಾಡಿ ಇದ್ದಕ್ಕಿದಂತೆ ತನ್ನ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. 20 ವರ್ಷದ ದ್ಯೂನಿತ್ ವೆಲ್ಲಲಾಗೆ ತನ್ನ ಎಡಗೈ ಸ್ಪಿನ್ ಬೋಲಿಂಗ್‌ನಿಂದ ಕೇವಲ ಮೂರು ಓವರ್‌ನಲ್ಲಿ ಮೂರು ವಿಕೆಟ್ ಕಬಳಿಸಿದನು. ಅದರಲ್ಲಿ ಶುಭಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮ ಅವರ ವಿಕೆಟ್ ಸಿಕ್ಕಿತು. ಅವನ ಬೋಲಿಂಗ್ ಆಡುವುದಕ್ಕೆ ಕಷ್ಟಪಟ್ಟ ಭಾರತ ಕೇವಲ 213ರಲ್ಲಿ ತನ್ನ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವ ಕಪ್‌ನ ಕುರಿತ ಬರಹ ನಿಮ್ಮ ಓದಿಗೆ

ಅಕ್ಟೋಬರ್ 2023ರಲ್ಲಿ ವಿಶ್ವ ಕಪ್ ಒಡಿಐ ಟೂರ್ನಮೆಂಟ್ ಭಾರತದಲ್ಲಿ ನಡೆಯಲಿದೆ. ಇದಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ.

ಬರುವ ತಿಂಗಳು ಅಕ್ಟೋಬರ್ 14 ನೇ ತಾರೀಕು ಭಾರತ ಮತ್ತು ಪಾಕಿಸ್ಥಾನದ ಮಧ್ಯೆ ಅಹಮದಾಬಾದ್‌ನಲ್ಲಿ ಅವರಿಬ್ಬರ ವಿಶ್ವ ಕಪ್‌ನ ಮೊದಲ ಪಂದ್ಯ ನಡೆಯಲಿದೆ. ಈ ವರ್ಷದ ಏಷ್ಯಾ ಕಪ್ ಮ್ಯಾಚುಗಳು ಇದೀಗ ಶ್ರೀಲಂಕೆಯಲ್ಲಿ ಮತ್ತು ಪಾಕಿಸ್ಥಾನದಲ್ಲಿ ನಡೆಯುತ್ತಿದೆ. ಭಾರತ ಆಡಬೇಕಾದ ಮ್ಯಾಚುಗಳು ಶ್ರೀಲಂಕೆಯಲ್ಲಿ ನಡೆಯುತ್ತಿದೆ. ಇದೀಗ ಮಳೆಗಾಲವಾಗಿದ್ದರಿಂದ ಆಗಾಗ್ಗೆ ಒಂದು ಇನಿಂಗ್ಸ್ ಮುಗಿಯುವಷ್ಟರಲ್ಲಿ ಮಳೆ ಬಂದು ಆಟವನ್ನು ಸ್ಥಗಿತಗೊಳಿಸಬೇಕಾಗುತ್ತೆ.

ಏಷ್ಯ ಕಪ್ ಮ್ಯಾಚ್‌ಗಳು ಇಂದಿನ ದಿನಗಳಲ್ಲಿ ವಿಶ್ವ ಕಪ್‌ಗೆ ಮುಂಚೆ ಇಡುತ್ತಾರೆ. ಇದರಿಂದ ಅನೇಕ ಟೀಮುಗಳಿಗೆ ಅಭ್ಯಾಸದ ಕೊರತೆ ನೀಗುತ್ತದೆ. ಒಳ್ಳೆ ಫಾರ್ಮ್‌ನಲ್ಲಿ ಬರುವುದಕ್ಕೆ ಅವಕಾಶವಿರುತ್ತೆ. ಭಾರತ ಮತ್ತು ಪಾಕಿಸ್ಥಾನದ ಏಷ್ಯ ಕಪ್ ಮ್ಯಾಚ್ ಎರಡು ಸರ್ತಿ ಮಳೆಯ ಕಾರಣದಿಂದ ಒಂದು ಸಲ ಭಾರತ 266ರನ್ ಹೊಡೆದು ಎಲ್ಲರೂ ಔಟಾದಾಗ ಮಳೆ ಬಂದು ಪಾಕಿಸ್ಥಾನ ಆಡುವುದಕ್ಕೆ ಮೊದಲು ಬಂದ ಮಳೆ ಆಟ ಪ್ರಾರಂಭವಾಗುವುದಕ್ಕೆ ಬಿಡಲಿಲ್ಲ. ಮಾರನೇ ದಿನ ಅದಕ್ಕೆಂದು ಮೀಸಲಾಗಿಟ್ಟಿದ್ದರು.

ಮತ್ತೆ ಶುರುವಾದ ಪಂದ್ಯದಲ್ಲಿ ಟಾಸ್ ಗೆದ್ದು ಭಾರತವನ್ನು ಬ್ಯಾಟಿಂಗ್ ಆಡಲು ಆಮಂತ್ರಿಸಿದ ಪಾಕಿಸ್ಥಾನದ ಬೋಲಿಂಗನ್ನು ಭಾರತದ ಓಪನಿಂಗ್ ಆಟಗಾರರಾದ ರೋಹಿತ್ ಶರ್ಮ ಮತ್ತು ಶುಭಮನ್‌ ಗಿಲ್ಲ್ ಚೆಂಡಾಡಿದರು. ಭಾರತದ ಸ್ಕೋರ್ 147ರನ್ ಗೆ ಎರಡು ವಿಕೆಟ್ ಕಳೆದುಕೊಂಡಿದ್ದಾಗ ಮತ್ತೆ ಮಳೆ ಬಂದು ಆಟವನ್ನು ನಿಲ್ಲಿಸಬೇಕಾಯಿತು. ನಾಯಕ ಮತ್ತು ಮೊದಲ ಆಟಗಾರ ರೋಹಿತ್ ಶರ್ಮ ಮತ್ತು ಶುಭಮನ್‌ ಗಿಲ್ ರಭಸದಿಂದ ಬ್ಯಾಟಿಂಗ್ ಮಾಡಿ ಪಾಕಿಸ್ಥಾನದ ಬೋಲಿಂಗನ್ನು ಯದ್ವಾತದ್ವಾ ಹೊಡೆದರು. ವೇಗದ ಬೋಲಿಂಗ್‌ಗೆ ಹೆಸರು ಪಡೆದಿದ್ದ ಪಾಕಿಸ್ಥಾನದ ಫಾಸ್ಟ್ ಬೋಲರ್‌ಗಳ ಬೋಲಿಂಗನ್ನು ಚೆನ್ನಾಗಿ ಥಳಿಸಿ ನಮ್ಮ ಓಪನಿಂಗ್ ಬ್ಯಾಟ್ಸ್‌ಮನ್‌ಗಳು ಇಬ್ಬರೂ ತಲಾ 50ರ ಮೇಲೆ ಹೊಡೆದರು. ಮಳೆಯ ಕಾರಣಕ್ಕಾಗಿ ಆಟ ನಿಲ್ಲಿಸಿ ಮುಂದಿನ ದಿನಕ್ಕೆ ಆಟವನ್ನು ತಳ್ಳಿಹಾಕಲಾಯಿತು. 147ಕ್ಕೆ ಎರಡು ವಿಕೆಟ್ನಿಂದ ಪ್ರಾರಂಭ ಮಾಡಿ ಬಂದ ವಿರಾಟ್ ಕೊಹ್ಲಿ ಮತ್ತು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಮೊದಲ ಬಾರಿ ಮೈದಾನಕ್ಕೆ ಇಳಿದ ಕೆ ಎಲ್ ರಾಹುಲ್ ಭರ್ಜರಿಯಾಗಿ ಬ್ಯಾಟಿಂಗ್ ಮಾಡಿ ಇಬ್ಬರೂ ಅಜೇಯರಾಗಿ ಶತಕಗಳನ್ನು ಬಾರಿಸಿದರು. ಬೌಂಡರಿ ಮತ್ತು ಸಿಕ್ಸರ್‌ಗಳ ಸುರಿಮಳೆಯ ಮಧ್ಯೆ ಅವರಿಬ್ಬರ ಬ್ಯಾಟಿಂಗ್ ಅಬ್ಬರಿಸಿತು. 50 ಓವರ್‌ಗೆ ತಂಡದ ಸ್ಕೋರ್ 350 ಕ್ಕೆ ಸೇರಿತು.

ಭಾರತದ ಬೋಲಿಂಗ್ ಮುಂದೆ ಪಾಕಿಸ್ಥಾನದ ಬ್ಯಾಟಿಂಗ್ ಕುಸಿದು ಅದಕ್ಕೆ ಮತ್ತೆ ಏಳಲು ಅವಕಾಶವೇ ಕೊಡಲಿಲ್ಲ ಭಾರತದ ಸ್ಪಿನ್ನರ್‌ಗಳು. ಒಂದು ವರ್ಷದ ಮೇಲೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಜಸ್ಪ್ರೀತ್ ಭೂಮ್ರ ವಾಪಸ್ಸು ಬಂದು ಅದ್ಭುತವಾಗಿ ಬೋಲಿಂಗ್ ಮಾಡಿ ಪಾಕಿಸ್ಥಾನದ ವಿಕೆಟ್ ಅನ್ನು ಬೀಳಿಸಿದರು. ಪಾಕಿಸ್ಥಾನದ ನಾಯಕ ಬಾಬರ್ ಆಝಮ್ ಒಳ್ಳೆಯ ಆಟಗಾರ. ಅವರನ್ನು ಹಾರ್ದಿಕ್ ಪಾಂಡ್ಯ ಅವರ ಬೋಲಿಂಗ್‌ನಲ್ಲಿ ಬಾಬರ್ ಅವರನ್ನು ಬೋಲ್ಡ್ ಔಟ್ ಮಾಡಿದರು. ಇದಲ್ಲದೆ ಆಮೇಲೆ ಬೋಲಿಂಗ್ ಮಾಡಿದ ಕುಲ್‌ದೀಪ್ ಯಾಧವ್ ಬೋಲಿಂಗ್‌ನಲ್ಲಿ ಪಾಕಿಸ್ಥಾನದ ವಿಕೆಟ್‌ಗಳು ತರಗೆಲೆಯಂತೆ ಒಂದೊಂದಾಗಿ ಬೀಳತೊಡಗಿತು. ಯಾಧವ್ 25ರನ್‌ಗೆ 5 ವಿಕೆಟ್‌ಗಗಳನ್ನು ಬೀಳಿಸಿದರು. ಇದು ಅವರ ಅತ್ಯುತ್ತಮ ಬೋಲಿಂಗ್ ಪ್ರದರ್ಶನ. ಪಾಕಿಸ್ಥಾನ 8 ವಿಕೆಟ್ ನಷ್ಟಕ್ಕೆ 122 ರನ್‌ಗೆ ಔಟಾಗಿ ಇನ್ನಿಬ್ಬರು ಆಟಗಾರರು ಏಟುಬಿದ್ದಿದ್ದರಿಂದ ಆಡಲು ಮೈದಾನಕ್ಕೆ ಇಳಿಯಲಿಲ್ಲ. ಭಾರತ ಅತ್ಯಂತ ಮಹತ್ತರವಾದ ದೊಡ್ಡ ವಿಜಯ – 228 ರ ವ್ಯತ್ಯಾಸದಲ್ಲಿ ಗಳಿಸಿತು.

ವಿರಾಟ್ ಕೊಹ್ಲಿ ಯ 111ರನ್‌ನಿಂದ ಅವರು 13000 ರನ್ ತಲುಪಿದರು. 13000 ರನ್ ಸಚಿನ್ ಟೆಂಡೂಲ್ಕರ್ 321 ಇನ್ನಿಂಗ್ಸ್‌ನಲ್ಲಿ ಹೊಡೆದರೆ, ಕೊಹ್ಲಿ ಅದನ್ನು 267 ಇನ್ನಿಂಗ್ಸ್‌ನಲ್ಲೇ ಹೊಡೆದು ಹೊಸ ದಾಖಲೆಯನ್ನು ಸ್ಥಾಪಿಸಿದರು.

ಭಾರತ ಮತ್ತು ಶ್ರೀಲಂಕದ ಮ್ಯಾಚ್ ಕಡಿಮೆ ಸ್ಕೋರ್‌ಗಳಾಗಿದ್ಯೂ ಆಟ ಬಹಳ ರೋಮಾಂಚನವಾಗಿತ್ತು. ಭಾರತ ಎಂದಿನಂತೆ ಚೆನ್ನಾಗಿ ಶುರುಮಾಡಿ ಇದ್ದಕ್ಕಿದಂತೆ ತನ್ನ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. 20 ವರ್ಷದ ದ್ಯೂನಿತ್ ವೆಲ್ಲಲಾಗೆ ತನ್ನ ಎಡಗೈ ಸ್ಪಿನ್ ಬೋಲಿಂಗ್‌ನಿಂದ ಕೇವಲ ಮೂರು ಓವರ್‌ನಲ್ಲಿ ಮೂರು ವಿಕೆಟ್ ಕಬಳಿಸಿದನು. ಅದರಲ್ಲಿ ಶುಭಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮ ಅವರ ವಿಕೆಟ್ ಸಿಕ್ಕಿತು. ಅವನ ಬೋಲಿಂಗ್ ಆಡುವುದಕ್ಕೆ ಕಷ್ಟಪಟ್ಟ ಭಾರತ ಕೇವಲ 213ರಲ್ಲಿ ತನ್ನ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ವೆಲ್ಲಲಾಗೆ 5 ವಿಕೆಟ್ ಕೇವಲ 40 ರನ್‌ಗೆ ಬಂತು. ಕೆ. ಎಲ್. ರಾಹುಲ್ ಮತ್ತು ಇಶಾನ್ ಕಿಷನ್ ಇಬ್ಬರೂ ಪಾಲುದಾರಿಕೆ ಇಲ್ಲದಿದ್ದರೆ ಭಾರತದ ಸ್ಥಿತಿ ಇನ್ನೂ ಅಧೋಗತಿಯಾಗುತ್ತಿತ್ತು.

ಶ್ರೀಲಂಕ ತನ್ನ ವಿಕೆಟ್‌ಗಳನ್ನು ಕಳೆದುಕೊಂಡರೂ 7 ನೇ ವಿಕೆಟ್ ಪಾಲುದಾರಿಕೆಯಲ್ಲಿ ಎಡಗೈ ಆಟಗಾರ ವೆಲ್ಲಲಾಗೆ ಮತ್ತು ಇಬ್ಬರೂ ಚೆನ್ನಾಗಿ ಆಡಿ ವಿಜಯಕ್ಕೆ ಶ್ರೀಲಂಕಾವನ್ನು ಬಹಳ ಹತ್ತಿರಕ್ಕೆ ತಂದರು. ಆದರೆ ಭಾರತ ಬೋಲರ್‌ಗಳು ಧೃತಿಗೆಡದೆ ಬೋಲಿಂಗ್ ಮಾಡಿ ಶ್ರೀಲಂಕೆಯನ್ನು 173ಕ್ಕೆ ಆಲ್-ಔಟ್ ಮಾಡಿದರು.

ಎರಡು ದಿನಗಳಲ್ಲಿ ಭಿನ್ನಭಿನ್ನವಾಗಿ ಭಾರತ ತನ್ನ ಮ್ಯಾಚ್‌ಗಳನ್ನು ಗೆದ್ದಿತು. ಇದು ಮುಂಬರುವ ವಿಶ್ವ ಕಪ್‌ಗೆ ನಾಂದಿಯಾಗುತ್ತೆ ಎಂದು ಹೇಳುವುದರಲ್ಲಿ ಸಂಶಯವಿಲ್ಲ.

ಏಷ್ಯ ಕಪ್ ಮ್ಯಾಚ್‌ಗಳು ಮಳೆಯ ಮಧ್ಯೆ ನಡೆಯುತ್ತಿದೆ. ಇದರ ಫೈನಲ್ ಪಂದ್ಯ ಸೆಪ್ಟೆಂಬರ್ 15 ತಾರೀಖು ನಡೆಯಲಿದೆ.

ಶ್ರೀಲಂಕ ಪಾಕಿಸ್ಥಾನವನ್ನು ಸೋಲಿಸಿ ಫೈನಲ್ಸನ್ನು ತಲುಪಿದೆ. ಈ ಪಂದ್ಯವೂ ಬಹಳ ರೋಮಾಂಚಕವಾಗಿದ್ದು ಕೊನೆಯ ಬಾಲ್‌ನಲ್ಲಿ ಯಾರು ಗೆದ್ದರು ಎಂದು ನಿಷ್ಕರ್ಕೆಯಾಯಿತು.
 

ಈ ಬಾರಿ ಐಸಿಸಿ ವಿಶ್ವ ಕಪ್ ಭಾರತದಲ್ಲಿ 5 ಅಕ್ಟೋಬರ್‌ನಲ್ಲಿ ಶುರುವಾಗಿ 19 ನವೆಂಬರ್ ತನಕ ನಡೆಯಲಿದೆ. ಒಟ್ಟು 10 ಟೀಮ್‌ಗಳು ಆಡಲಿದ್ದಾರೆ. ಈ ವರ್ಷ ಮೊದಲ ಬಾರಿಗೆ 2 ವರ್ಷ ಸತತವಾಗಿ ಚಾಂಪಿಯನ್ ಆದ ವೆಸ್ಟ್ ಇಂಡೀಸ್ ಭಾಗವಹಿಸುವುದಿಲ್ಲ. ಅದರ ಅರ್ಹತೆಯನ್ನು ಕಳೆದುಕೊಂಡರು. ಅವರ ಜಾಗದಲ್ಲಿ ನೆದರ್ಲೆಂಡ್ಸ್ ದೇಶ ಭಾಗವಹಿಸುತ್ತೆ.

ಆಸ್ಟ್ರೇಲಿಯ, ಭಾರತ, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ಥಾನ, ಶ್ರೀಲಂಕ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕ, ಆಫ್ಘಾನಿಸ್ಥಾನ್ ಮತ್ತು ನೆದರ್ಲೆಂಡ್ಸ್ -ಒಟ್ಟು 10 ಟೀಮ್‌ಗಳು ಭಾಗವಹಿಸುತ್ತೆ. ಒಟ್ಟು 10 ನಗರಗಳಲ್ಲಿ – ಧರಂಶಾಲ, ಅಹ್ಮದಾಬಾದ್, ದೆಹಲಿ, ಲಕ್ನೊ, ಮುಂಬೈ, ಪುಣೆ, ಬೆಂಗಳೂರು, ಚೆನೈ, ಹೈದರಾಬಾದ್, ಕಲ್ಕೊತ್ತ ಮ್ಯಾಚ್‌ಗಳನ್ನು ಆಡುತ್ತಾರೆ. 50 ಓವರ್‌ನ ಈಡಿಐ ಮ್ಯಾಚುಗಳು ನಡೆಯಲಿವೆ. ಟೀಮ್‌ಗಳನ್ನು ಬೇರೆ ಬೇರೆಯಾಗಿ ವಿಂಗಡಿಸದೆ, ರೌಂಡ್ ರಾಬಿನ್ ಮೇರೆಗೆ – ಅಂದರೆ ಎಲ್ಲಾ ಟೀಮ್‌ಗಳೂ ಪ್ರತಿಯೊಂದು ಟೀಮಿನ ಜೊತೆಗೆ ಒಂದು ಬಾರಿ ಆಡಲೇ ಬೇಕು – ಅನ್ನುವ ಮಾದರಿಯಲ್ಲಿ ಏರ್ಪಾಡು ಮಾಡಿದ್ದಾರೆ.

ಎಲ್ಲಾ ಟೀಮ್‌ಗಳು ವಿಶ್ವ ಕಪ್ಪನ್ನು ಒಂದು ಬಾರಿ ಗೆದ್ದಿದ್ದಾರೆ ಶ್ರೀಲಂಕ, ಪಾಕಿಸ್ಥಾನ, ಇಂಗ್ಲೆಂಡ್. ದಕ್ಷಿಣ ಆಫ್ರಿಕ, ಬಾಂಗ್ಲಾದೇಶ ಮತ್ತು ನ್ಯೂಜಿ಼ಲೆಂಡ್ ಹೊರತು. ಅ ಮೂರು ಟೀಮ್‌ಗಳು ಇನ್ನೂ ಗೆದ್ದಿಲ್ಲ. ಭಾರತ ಮತ್ತು ವೆಸ್ಟ್ ಇಂಡೀಸ್ ಎರಡು ಬಾರಿ ಗೆದ್ದಿದೆ; ಆಸ್ಟ್ರೇಲಿಯ 3 ಬಾರಿ ಸತತವಾಗಿ ಕಪ್ಪನ್ನು ಗೆದ್ದಿದ್ದಾರೆ. ಒಟ್ಟು 5 ಬಾರಿ ಕಪ್ ಗೆದ್ದಿದ್ದಾರೆ.

ಈ ವರ್ಷ ಆಡಲಿರುವ ಟೀಮ್‌ಗಳ ಸದಸ್ಯರು:

ಭಾರತ: ರೋಹಿತ್ ಶರ್ಮ (ನಾಯಕ), ಶುಭಮಾನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಐಯರ್, ಕೆ ಎಲ್ ರಾಹುಲ್ ( ವಿ.ಕೀ), ಸೂರ್ಯಕುಮಾರ್ ಯಾಧವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಇಶಾನ್ ಕಿಶನ್, ಅಕ್ಷರ್‌ ಪಟೇಲ್, ಶಾರ್ದುಲ್ ಠಾಕೂರ್, ಜಸ್ಪ್ರೀತ್ ಭೂಮ್ರ, ಕುಲ್‌ದೀಪ್ ಯಾದವ್, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್.

ಆಸ್ಟ್ರೇಲಿಯ: ಪಾಟ್ ಕಮಿನ್ಸ್ (ನಾಯಕ), ಶಾನ್ ಅಬ್ಬೊಟ್, ಏಶ್ಟನ್ ಅಗರ್, ಅಲೆಕ್ಸ್ ಕ್ಯಾರಿ (ವಿ.ಕೀ), ಕೆಮೊರೂನ್ ಗ್ರೀನ್, ಝೋಶ್ ಹೇಜಲ್ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಶ್ (ವಿ,ಕೀ), ಮೈಕೇಲ್‌ ಮಾರ್ಶ್‌, ಗ್ಲೆನ್ ಮಾಕ್ಸ್‌ವೆಲ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್‌, ಮಾರ್ಕಸ್ ಸ್ಟೋಯ್‌ನಿಸ್, ಡೇವಿಡ್ ವಾರ್ನರ್ ಮತ್ತು ಆಡಮ್ ಜಾಂಪ.

ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ), ಮೊಯೀನ್ ಆಲಿ, ಗಸ್ ಅಟ್ಕಿಂಸನ್, ಜಾನಿ ಬೇಸ್ಟೋ, ಸ್ಯಾಮ್ ಕುರಾನ್, ಲಿಯಮ್ ಲಿವಿಂಗ್ಸಟ್ನ್, ಡೇವಿಡ್ ಮಲಾನ್, ಆದಿಲ್ ರಶೀದ್, ಜೊ ರೂಟ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ರೆಕಿ ಟೋಪ್ಲಿ, ಢೆವಿಡ್ ವಿಲ್ಲಿ, ಮಾರ್ಕ್‌ವುಡ್ ಮತ್ತು ಕ್ರಿಸ್ ವೋಕ್ಸ್.

ನ್ಯೂಝಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಟ್ರೆಂಟ್ ಬೌಲ್ಟ್, ಮಾರ್ಕ್‌ ಚಾಪ್ಮನ್, ದೇವನ್ ಕನ್ವೋಯ್, ಲಾಕಿ ರ‍್ಗೂಸನ್, ಮ್ಯಾಟ್ ಹೆನ್ರಿ, ಟಾಮ್ ಲೇತಮ್, ಡಾರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ರಾಚಿನ್ ರವೀಂದ್ರ, ಮಿಚೆಲ್ ಸಾಂಟನರ್, ಇಸ್ ಸೋದಿ, ಟಿಮ್ ಸೌದಿ ಮತ್ತು ವಿಲ್ ಯಂಗ್.

ದಕ್ಷಿಣ ಆಫ್ರಿಕ: ಟೆಂಬ ಬವುಮ (ನಾಯಕ), ಗೆರಾಲ್ಡ್ ಕೊಟ್ಝೆ, ಕ್ವಿಂಟನ್ ಡಿಕಾಕ್, ರೀಜಾ ಹೆಂದ್ರಿಕ್ಸ್, ಮರ‍್ಕೊ ಜಾನ್ಸನ್, ಹೆನ್ರಿಕ್ ಕ್ಲಾಸನ್, ಸಿಸಾಂಡ ಮಗಲ, ಕೇಶವ್ ಮಹರಾಜ್, ಏಡನ್ ಮರ‍್ಕರಮ್, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ಎನ್ರಿಕ್ ನರ‍್ಜೆ, ಕಗಿಸೊ ರಬಾಡ, ತಬ್ರೈಸ್ ಶಮ್ಸಿ ಮತ್ತು ವಾಂಡರ್ ಡೂಸನ್.

ನೆದರ್ಲೆಂಡ್ಸ್: ಸ್ಕಾಟ್ ಎಡ್ವರ್ಡ್ಸ್‌ (ನಾಯಕ), ಮ್ಯಾಕ್ಸ್ ಒಡೋವ್ಡ್, ಬಾಸ್‌ ಡೆ ಲೇಡೆ, ವಿಕ್ರಂ ಸಿಂಘ್, ತೇಜ ನಿಡಮನ್ರು, ಪಾಲ್ ವೆನ್ ಮೀಕರನ್, ಕಾಲಿನ್ ಆರ‍್ಮನ್, ರೋಲ್ಫ್ ವಾಂಡರ್ ಮರವೆ, ಲೋಗನ್ ವಾನ್ ಬೀಕ್, ಆರ್ಯನ್ ದತ್, ರೈಯನ್ ಕ್ಲೈನ್, ವೆಸ್ಲೆ ಬ್ಯಾರೆಸಿ, ಸಾಕಿಬ್ ಝುಲ್ಫಿಕರ್, ಶರೀಝ್ ಅಹ್ಮದ್ ಮತ್ತು ಸೈಬ್ರಾಂಡ್ ಎಂಗೆಲ್‌ಬ್ರೆಟ್.

ಪಾಕಿಸ್ಥಾನ: ಬಾಬರ್ ಆಝಮ್ (ನಾಯಕ), ಶದಬ್ ಖಾನ್ (ಉಪ ನಾಯಕ), ಮೊಹಮ್ಮದ್ ರಿಝ್ವಾನ್ ( ವಿ.ಕಿ), ಫಖರ್ ಜಮನ್, ಇಮಾಮ್- ಉಲ್- ಹಕ್, ಹ್ಯಾರಿಸ್ ರಉಫ್, ನಸೀಂ ಶಾ, ಶಹೀನ್ ಶಾ ಅಫ್ರಿಡಿ, ಸಉದ್, ಶಕೀಲ್, ಆಘಾ ಸಲ್ಮಾನ್, ಇಫ್ತಿಕಾರ್ ಅಹ್ಮದ್, ಮೊಹಮ್ಮದ್ ಹ್ಯಾರಿಸ್, ಮೊಹಮ್ಮದ್ ನವಾಝ್, ಉಸಾಮಾ ಮೀರ್ ಮತ್ತು ಮೊಹಮ್ಮದ್ ವಸಿಂ ಜರ.

ಬಾಂಗ್ಲಾದೇಶ, ಆಫ್ಘಾನಿಸ್ಥಾನ ಮತ್ತು ಶ್ರೀಲಂಕ ತಂಡಗಳು ಅವರುಗಳ ಟೀಮಿನ ಸದಸ್ಯರ ಹೆಸರನ್ನು ಇನ್ನೂ ಬಿಡುಗಡೆ ಮಾಡಿಲ್ಲ.

ಒಟ್ಟು 45 ಮ್ಯಾಚುಗಳಾಡಿದ ಮೇಲೆ ಎರಡು ಸೆಮಿ-ಫೈನಲ್ಸ್ ಮತ್ತು ಫೈನಲ್ ನವೆಂಬರ್ 19, 2023 ಭಾನುವಾರದಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತೆ.

ಇಲ್ಲಿಯ ತನಕ ಆಡಿದ ಕಪ್‌ನ ವರ್ಷ, ಎಲ್ಲಿ ನಡೆಯಿತು , ಅದರ ವೀಜೇತರು, ಫೈನಲ್ಸ್‌ನಲ್ಲಿ ಸೋತವರು, ಫಲಿತಾಂಶ ಅವರುಗಳ ಸ್ಕೋರ್ ವಿಶೇಷ ಕೆಳಗೆ ಕೊಟ್ಟಿದೆ.

ನಂ. ವರ್ಷ ಎಲ್ಲಿ ನಡೆಯಿತು ಗೆದ್ದ ಟೀಮ್ ಸ್ಕೋರ್ ಸೋತ ಟೀಮ್ ಸ್ಕೋರ್ ಫಲಿತಾಂಶ

01. 1975 ಇಂಗ್ಲೆಂಡ್ ವೆಸ್ಟ್ ಇಂಡೀಸ್ 291/8 ಆಸ್ಟ್ರೇಲಿಯ 274 ವೆಸ್ಟ್ ಇಂಡೀಸ್ 17 ರನ್‌ನಿಂದ ಗೆದ್ದರು.
02. 1979 ಇಂಗ್ಲೆಂಡ್ ವೆಸ್ಟ್ ಇಂಡೀಸ್ 286/9 ಇಂಗ್ಲೆಂಡ್ 194 ವೆಸ್ಟ್ ಇಂಡೀಸ್ 92 ರನ್‌ನಿಂದ ಗೆದ್ದರು.
03. 1983 ಇಂಗ್ಲೆಂಡ್ ಭಾರತ 183 ವೆಸ್ಟ್ ಇಂಡೀಸ್ 140 ಇಂಡಿಯ 43 ರನ್‌ನಿಂದ ಗೆದ್ದರು.
04. 1987 ಇಂಡಿಯ/ಪಾಕ್ ಆಸ್ಟ್ರೇಲಿಯ 253/5 ಇಂಗ್ಲೆಂಡ್ 246/8 ಆಸ್ಟ್ರೇಲಿಯ 7 ರನ್‌ನಿಂದ ಗೆದ್ದರು.
05. 1992 ಆಸ್ಟ್ರೇಲಿಯ/ನ್ಯೂಝಿ ಪಾಕಿಸ್ಥಾನ 249/6 ಇಂಗ್ಲೆಂಡ್ 227 ಪಾಕಿಸ್ಥಾನ 22 ರನ್‌ನಿಂದ ಗೆದ್ದರು.
06. 1996 ಪಾಕಿಸ್ಥಾನ/ ಇಂಡಿಯ ಶ್ರೀಲಂಕ 245/3 ಆಸ್ಟ್ರೇಲಿಯ 241 ಶ್ರೀಲಂಕ 7 ವಿಕೆಟ್‌ನಿಂದ ಗೆದ್ದರು.
17. 1999 ಇಂಗ್ಲೆಂಡ್ ಆಸ್ಟ್ರೇಲಿಯ 133/2 ಪಾಕಿಸ್ಥಾನ 132 ಆಸ್ಟ್ರೇಲಿಯ 8 ವಿಕೆಟ್‌ನಿಂದ ಗೆದ್ದರು.
18. 2003 ದಕ್ಷಿಣ ಆಫ್ರಿಕ ಆಸ್ಟ್ರೇಲಿಯ 359/2 ಇಂಡಿಯ 234 ಆಸ್ಟ್ರೇಲಿಯ 125 ರನ್‌ನಿಂದ ಗೆದ್ದರು.
19. 2007 ವೆಸ್ಟ್ ಇಂಡೀಸ್ ಆಸ್ಟ್ರೇಲಿಯ 281/4 ಶ್ರೀಲಂಕ 215/8 ಆಸ್ಟ್ರೇಲಿಯ 53 ರನ್ನಿಂದ ಗೆದ್ದರು.
20. 2011 ಇಂಡಿಯ/ಬಾಂಗ್ಲಾದೇಶ ಇಂಡಿಯ 277/4 ಶ್ರೀಲಂಕ 274/6 ಇಂಡಿಯ 6 ವಿಕೆಟ್‌ನಿಂದ ಗೆದ್ದರು.
21. 2015 ಆಸ್ಟ್ರೇಲಿಯ / ನ್ಯೂಝಿ ಆಸ್ಟ್ರೇಲಿಯ 186/3 ನ್ಯೂಝಿಲೆಂಡ್ 183 ಆಸ್ಟ್ರೇಲಿಯ 7 ವಿಕೆಟ್‌ನಿಂದ ಗೆದ್ದರು.
22. 2019 ಇಂಗ್ಲೆಂಡ್/ ವೇಲ್ಸ್ ಇಂಗ್ಲೆಂಡ್ 241 ನ್ಯೂಝಿಲೆಂಡ್ 241/8 ಟೈ ಆಯಿತು. ಬೌಂಡರಿ ಲೆಕ್ಕದಲ್ಲಿ ಇಂಗ್ಲೆಂಡ್ ಗೆದ್ದರು.

ವಿಶ್ವ ಕಪ್‌ನ ಅತ್ಯಂತ ಯಶಸ್ವಿ ಆಟಗಾರರು:

1992 : ಮಾರ್ಟಿನ್ ಕ್ರೋ (ನ್ಯೂಝಿ) : 452 ರನ್
1996 : ಸನತ್ ಜಯಸೂರ್ಯ (ಶ್ರೀಲಂಕ) : 221 ರನ್ ಮತ್ತು 6 ವಿಕೆಟ್‌ಗಳು
1999 : ಲಾನ್ಸ್ ಕ್ಲೂಸ್ನರ್ (ದಕ್ಷಿಣ ಆಫ್ರಿಕ) : 281 ರನ್ ಮತ್ತು 17 ವಿಕೆಟ್‌ಗಳು
2003 : ಸಚಿನ್ ಟೆಂಡೂಲ್ಕರ್ ( ಭಾರತ) : 673 ರನ್ ಮತ್ತು 2 ವಿಕೆಟ್‌ಗಳು
2007 : ಗ್ಲೆನ್ ಮೆಗ್ರಾ (ಆಸ್ಟ್ರೇಲಿಯ) : 26 ವಿಕೆಟ್‌ಗಳು
2011 : ಯುವ್‌ರಾಜ್‌ ಸಿಂಗ್‌( ಭಾರತ) : 362 ರನ್ ಮತ್ತು 15 ವಿಕೆಟ್‌ಗಳು
2015 : ಮಿಚೆಲ್ ಸ್ಟಾರ್ಕ್‌(ಆಸ್ಟ್ರೇಲಿಯ) : 22 ವಿಕೆಟ್‌ಗಳು
2019 : ಕೇನ್ ವಿಲಿಯಂಸನ್ (ನ್ಯೂಝಿ ) : 578 ಮತ್ತು 2 ವಿಕೆಟ್‌ಗಳು.

ಈ ವರ್ಷದ ವಿಶ್ವ ಕಪ್ ಮ್ಯಾಚುಗಳಾಗುವುದಕ್ಕೆ ಮುಂಚೆ ಟೀಮ್‌ಗಳು ಅವರದೇ ಆದ ಸಿದ್ಧತೆಗಳನ್ನು ಮಾಡುತ್ತಿದ್ದಾರೆ.

ಇಂಗ್ಲೆಂಡಿನ ಟೆಸ್ಟ್ ಮ್ಯಾಚುಗಳ ನಾಯಕ ಬೆನ್ ಸ್ಟೋಕ್ಸ್ ಒಡಿಐ ನಿಂದ ನಿವೃತ್ತಿಯನ್ನು ಹೊಂದಿದ್ದರು. ಈಗ ಅವರು ನಿವೃತ್ತಿಯನ್ನು ಹಿಂದೆ ತೆಗೆದು ಮತ್ತೆ ಆಡಲು ಮೈದಾನಕ್ಕೆ ಇಳಿಯುತ್ತಿದ್ದಾರೆ. ಅವರು ನ್ಯೂಝಿಲೆಂಡಿನ ಮೇಲೆ ಒಂದು ಪಂದ್ಯದಲ್ಲಿ 124 ಬಾಲ್‌ಗಳಲ್ಲಿ 182 ರನ್ ಹೊಡೆದರು. ಇದು ಇಂಗ್ಲೆಂಡಿನ ಇಲ್ಲಿಯವರೆಗೆ ಅತ್ಯುತ್ತಮ ಸ್ಕೋರ್ ಆಗಿದೆ.

ದಕ್ಷಿಣ ಆಫ್ರಿಕಾದ ಹೆನ್ರಿಕ್ ಕ್ಲಾಸನ್ ಮೊನ್ನೆ ಆಸ್ಟ್ರೇಲಿಯ ವಿರುದ್ಧ ನಡೆದ ಪಂದ್ಯದಲ್ಲಿ ಸೆಪ್ಟೆಂಬರ್ 15 ರಂದು ಕೇವಲ 83 ಬಾಲ್‌ಗಳಲ್ಲಿ 174 ರನ್ ಹೊಡೆದರು. ಅದರಲ್ಲಿ 13 ಬೌಂಡರಿಗಳು 13 ಸಿಕ್ಸರ್‌ಗಳು ಶಾಮೀಲಾಗಿತ್ತು!

ನಿನ್ನೆ ನಡೆದ ಏಷ್ಯ ಕಪ್ನ ಫೈನಲ್ಸ್‌ನಲ್ಲಿ ಭಾರತ ಶ್ರೀಲಂಕ ವಿರುದ್ಧ ನಡೆದ ಪಂದ್ಯದಲ್ಲಿ ಭಾರತಕ್ಕೆ ಅಮೋಘ ಜಯ ದೊರೆಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಡಲು ನಿರ್ಧರಿಸಿದ ಶ್ರೀಲಂಕಾಗೆ ದೊಡ್ಡ ದಿಗ್ಭ್ರಮೆ ಕಾದಿತ್ತು. ಮೊಹಮದ್ ಸಿರಾಜ್ ಮೊದಲನೇ ಓವರ್‌ನಲ್ಲಿ ರನ್ ಕೊಡದೆ ಮೆಯ್ಡನ್ ಓವರ್ ಮಾಡಿ ತನ್ನ ಎರಡನೇ ಓವರ್‌ನಲ್ಲಿ 4 ವಿಕೆಟ್‌ಗಳನ್ನು ತಪತಪನೆ ಬೀಳಿಸಿದನು. ಶ್ರೀಲಂಕ ಒಂದು ಸಮಯದಲ್ಲಿ 6 ವಿಕೆಟ್ ನಷ್ಟಕ್ಕೆ ಕೇವಲ 12 ರನ್ ಗಳಿಸಿತ್ತು. ಇದರಲ್ಲಿ ಸಿರಾಜ್ 5 ವಿಕೆಟ್ ತೆಗೆದುಕೊಂಡಿದ್ದರು. ಕೇವಲ 15.2 ಓವರ್‌ಗಳಿಗೆ ಶ್ರೀಲಂಕ 50 ರನ್‌ಗೆ ಆಲ್ ಔಟ್ ಆದರು! ಸಿರಾಜ್ 21/6, ಹಾರ್ದಿಕ್ ಪಾಂಡ್ಯ 3/3 ಮತ್ತು ಭೂಮ್ರ 1 ವಿಕೆಟ್ ತೆಗೆದುಕೊಂಡರು.

ಬೇಕಾಗಿದ್ದ 51 ರನ್ ಗಳನ್ನು ಭಾರತ ಕೇವಲ 5.2 ಓವರ್‌ನಲ್ಲಿ ಮಾಡಿ ಅದ್ಭುತ ವಿಜಯವನ್ನು ಗಳಿಸಿ, ಏಷ್ಯ ಕಪ್ಪನ್ನು ಅತಿ ಸುಲಭವಾಗಿ ಗೆದ್ದಿತು.

ಈ ವರ್ಷದ ಏಷ್ಯ ಕಪ್ ಪ್ರತಿದಿನವೂ ಮಳೆಯ ಕಾರಣದಿಂದ ಆಟ ನಿಲ್ಲಿಸಬೇಕಾಯಿತು. ಗ್ರೌಂಡನ್ನು ತಯಾರಿ ಮಾಡುತ್ತಿದ್ದ ಸಿಭ್ಭಂಧಿಗಳು ಹಗಲು ರಾತ್ರಿ ಎನ್ನದೆ ದುಡಿದು ಆಟಕ್ಕೆ ಸರಿಯಾಗಿರುವ ಪಿಚ್ ಮತ್ತು ಗ್ರೌಂಡನ್ನು ತಯಾರಿ ಮಾಡುತ್ತಿದ್ದರು.

ಅವರ ನಿರಂತರ ಪರಿಶ್ರಮಕ್ಕೆ ಮೆಚ್ಚಿ ಎಸಿಸಿ ಅವರಿಗೆ 50, 000 / ವನ್ನು ಘೋಶಿಸಿದರು. ಫೈನಲ್ಸ್‌ನಲ್ಲಿ ಅತ್ಯುತ್ತಮ ಬೋಲಿಂಗ್ ಪ್ರದರ್ಶನ ಮಾಡಿದ ಸಿರಾಜ್ ಅವರಿಗೆ ಪಾರಿತೋಷಕವಾಗಿ $3000/ ಸಿಕ್ಕಿತು. ಅದನ್ನು ಸಿರಾಜರು ಅವರಿಗೆ ಬಂದ ಪೂರ್ತಿ ಹಣವನ್ನು ಗ್ರೌಂಡ್ ಸಿಬ್ಬಂದಿಗಳಿಗೆ ಕೊಟ್ಟುಬಿಟ್ಟರು. ಇಂತಹ ದಾನಗಳು ವಿರಳ. ಇದನ್ನು ಕ್ರಿಕೆಟಾಯ ನಮಃ ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ.

ಈ ರೀತಿಯ ತಯಾರಿಗಳನ್ನು ನೋಡಿದರೆ ಕ್ರಿಕೆಟ್ ಅಭಿಮಾನಿಗಳಿಗೆ ಮುಂದಿನ ತಿಂಗಳು ರಸದೌತಣ ಕಾದಿದೆಯೆಂದು ಹೇಳಲು ಸಂದೇಹವಿಲ್ಲ. ಭಾರತ ಮತ್ತು ಶ್ರೀಲಂಕ ನಾಳೆ ಭಾನುವಾರ ಏಷ್ಯ ಕಪ್ ಪ್ರಶಸ್ತಿಗಾಗಿ ಫೈನಲ್ಸ್ ಆಡುತ್ತಿದ್ದಾರೆ.

ಈ ವರ್ಷದ ಒಡಿಐ ಟೂರ್ನಮೆಂಟಿನ ಆಗುಹೋಗುಗಳನ್ನು ‘ಕ್ರಿಕೆಟಾಯ ನಮಃದಿಂದ’ ಎಂದಿನಂತೆ ನಮ್ಮ ಓದುಗರಿಗೆ ತರಲು ಪ್ರಯತ್ನಿಸುತ್ತೇವೆ.