ದಕ್ಷಿಣ ಕಾಶ್ಮೀರವೆಂದು ಕರೆಸಿಕೊಂಡಿರುವ ಕೊಡಗು ಪ್ರಕೃತಿ ಸೊಬಗಿಗೆ ಇನ್ನೊಂದು ಹೆಸರು. ಪ್ರಕೃತಿ, ಸೌಂದರ್ಯ, ಶೌರ್ಯವನ್ನು ಸಂಕೇತಿಸುವ ಅಷ್ಟೇ ಮನೋಲ್ಲಾಸವನ್ನು ನೀಡುವ ಕೊಡವರ ಆಭರಣಗಳ ವಿನ್ಯಾಸವೂ ಅನನ್ಯವಾಗಿರುತ್ತದೆ. ಕೊಡವರು ವಿಶೇಷವಾಗಿ ಗುರುತಿಸಿಕೊಂಡಿರುವುದು ವಿಶೇಷ ವಿನ್ಯಾಸದ ಸೀರೆ ಉಡುಗೆ ಮತ್ತು ಅನುರೂಪದ ಆಭರಣಗಳ ತೊಡುಗೆಯಿಂದ. ಇವರ ಪತ್ತಾಕ್, ಜೋಮಾಲೆ, ಕೊಕ್ಕೆತಾತಿ, ಹವಳದ ಸರ, ಕೈಪಡಚ, ಕಾಲ್ಪಿಲ್ಲಿ, ಜೋಡಿ ಕಡಗ, ಒಂಟಿ ಕಡಗ, ಪೀಚೆಕತ್ತಿ ಇವುಗಳು ಪ್ರಕೃತಿಯಿಂದ ಸ್ಫೂರ್ತಿ ಪಡೆದವೆ ಆಗಿವೆ.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಹತ್ತನೆಯ ಕಂತು ನಿಮ್ಮ ಓದಿಗೆ

ಆಭರಣ ಜನಾಂಗವೊಂದರ ಪ್ರತಿನಿಧಿ ಎಂದರೆ ಅತಿಶಯೋಕ್ತಿಯಲ್ಲ. ಉಡುಗೆ-ತೊಡುಗೆ ಅನ್ನುವ ಪದವೆ ವಸ್ತ್ರಕ್ಕೆ ಪೂರಕವಾದ ಆಭರಣಗಳು ಅನ್ನುವುದನ್ನು ಸಂಕೇತಿಸುತ್ತದೆ. ಈ ಆಭರಣಗಳಿಗೆ ಮನಸೋಲದ ನೀರೆಯರೆ ಇಲ್ಲ. ಪ್ರಾಚೀನ ನಾಗರಿಕತೆಯಿಂದ ಮೊದಲುಗೊಂಡು ಇಲ್ಲಿಯವರೆಗೆ ಚಿನ್ನ, ಬೆಳ್ಳಿ, ಪ್ಲಾಟಿನಮ್, ಇನ್ನಿತರ ಲೋಹಗಳು, ಮಣ್ಣು, ಕಪ್ಪೆಚಿಪ್ಪು ಮುಂತಾದವನ್ನು ಉಪಯೋಗಿಸಿಕೊಂಡು ಆಭರಣಗಳನ್ನು ಧರಿಸುವುದಿದೆ. ಹೆಣ್ಣಿನ ಅಲಂಕಾರಕ್ಕೆ ಶೋಭೆಯನ್ನು ತರುವುದು ಆಭರಣಗಳು. ಪೌರಾಣಿಕ ಚಿತ್ರಪಟಗಳಲ್ಲಿ, ರಾಜ ಮಹಾರಾಜರ ಕಾಲದಿಂದ ಇಲ್ಲಿಯವರೆಗೂ ಆಭರಣಗಳದ್ದೆ ಕಾರುಬಾರು. ಅದರಲ್ಲಿಯೂ ಮುದು ಮಕ್ಕಳ ಆಭರಣಗಳೆಂದರೆ ಕೇಳಬೇಕೆ, ಮದ್ರಾಸಿ, ಬೆಂಗಾಲಿ, ಕೇರಳಿ, ಕೊಡವ ಆಭರಣಗಳ ವಿಶಿಷ್ಟ ವಿನ್ಯಾಸ ಮದುವೆಯ ಸಂಭ್ರಮಕ್ಕೊಂದು ಕಳೆತಂದುಕೊಡುತ್ತದೆ.

ದಕ್ಷಿಣ ಕಾಶ್ಮೀರವೆಂದು ಕರೆಸಿಕೊಂಡಿರುವ ಕೊಡಗು ಪ್ರಕೃತಿ ಸೊಬಗಿಗೆ ಇನ್ನೊಂದು ಹೆಸರು. ಪ್ರಕೃತಿ, ಸೌಂದರ್ಯ, ಶೌರ್ಯವನ್ನು ಸಂಕೇತಿಸುವ ಅಷ್ಟೇ ಮನೋಲ್ಲಾಸವನ್ನು ನೀಡುವ ಕೊಡವರ ಆಭರಣಗಳ ವಿನ್ಯಾಸವೂ ಅನನ್ಯವಾಗಿರುತ್ತದೆ. ಕೊಡವರು ವಿಶೇಷವಾಗಿ ಗುರುತಿಸಿಕೊಂಡಿರುವುದು ವಿಶೇಷ ವಿನ್ಯಾಸದ ಸೀರೆ ಉಡುಗೆ ಮತ್ತು ಅನುರೂಪದ ಆಭರಣಗಳ ತೊಡುಗೆಯಿಂದ. ಇವರ ಪತ್ತಾಕ್, ಜೋಮಾಲೆ, ಕೊಕ್ಕೆತಾತಿ, ಹವಳದ ಸರ, ಕೈಪಡಚ, ಕಾಲ್ಪಿಲ್ಲಿ, ಜೋಡಿ ಕಡಗ, ಒಂಟಿ ಕಡಗ, ಪೀಚೆಕತ್ತಿ ಇವುಗಳು ಪ್ರಕೃತಿಯಿಂದ ಸ್ಫೂರ್ತಿ ಪಡೆದವೆ ಆಗಿವೆ.

1 ಪತ್ತಾಕ್

ಕೊಡವರು ದೇವಕನ್ಯೆಯರು ಅನ್ನುವ ಪ್ರತೀತಿ ಇರುವ ಕಾರಣ ಅವರು ಮನುಷ್ಯರನ್ನು ಮದುವೆ ಆಗುವ ಹಾಗಿಲ್ಲ ಅನ್ನುವಾಗ ನಾಗದೇವ ಪ್ರತ್ಯಕ್ಷನಾಗಿ ನನ್ನ ಆಶೀರ್ವಾದವಿದೆ ಎಂದು ಮದುವೆಯಾಗಲು ಬೆಂಬಲ ಕೊಟ್ಟ ಅನ್ನುವ ಪ್ರತೀತಿ ಇದೆ. ಇವರು ದೇವಕನ್ಯೆಯರು ಅನ್ನುವ ಕಾರಣಕ್ಕೆ ಗಂಡನಾಗುವವನು ಮಾಂಗಲ್ಯ ಕಟ್ಟುವ ಪದ್ಧತಿಯಿಲ್ಲ ಎಂದು ಐತಿಹ್ಯ ಹೇಳುತ್ತದೆ. ಆದರೆ ಆ ಕಾರಣಕ್ಕೆ ಮದುವೆಯ ಹಿಂದಿನ ದಿನ ಮದುಮಗಳ ತಾಯಿ ‘ಪತ್ತಾಕ್’ ಅನ್ನುವ ಆಭರಣವನ್ನು ಮಗಳ ಕೊರಳಿಗೆ ಧಾರಣೆ ಮಾಡುತ್ತಾರೆ. ಪತ್ತಾಕ್ ಅಂದರೆ ತಾಯಿಯ ಹತ್ತು ಸೌಶಿಲ್ಯ ಗುಣಗಳು ಮಗಳಿಗೂ ಬರಲಿ ಅನ್ನುವ ಆಶಯ ಇದರ ಹಿಂದಿದೆ.

ಪತ್ತಾಕ್ ಮಂಗಲ ಸೂತ್ರಕ್ಕೆ ಸಮಾನವಾಗಿರುತ್ತದೆ. ಸುಮಂಗಲಿಯ ಸಂಕೇತವಾಗಿರುವ ಪತ್ತಾಕನ್ನು ಸರಿ ಸುಮಾರು ಅರ್ಧ ಸವರನ್ ಇಲ್ಲವೆ ಅದಕ್ಕೂ ಹೆಚ್ಚಿನ ತೂಕದ ಲಕ್ಷ್ಮಿಕಾಸಿನ ಸುತ್ತ ಮಾಣಿಕ್ಯದ ಹರಳುಗಳನ್ನು ಜೋಡಿಸಿ ಅದರೆ ಮೇಲೆ ನಾಗರ ಹೆಡೆ ಅದರ ಬಾಯಲ್ಲಿ ಮುತ್ತು ಜೋತಾಡುವಂತೆ ಕಲಾತ್ಮಕವಾಗಿ ಮಾಡಿರುತ್ತಾರೆ . ಈ ಪದಕವನ್ನು ಹವಳ ಮತ್ತು ಚಿನ್ನದ ಕಲಾತ್ಮಕ ಗುಂಡುಗಳೊಂದಿಗೆ ಬರೆ ಕರಿಮಣಿ ಸರಕ್ಕೆ ಅಳವಡಿಸಿರುತ್ತಾರೆ. ಕಪ್ಪು ಮಣಿ ಋಣಾತ್ಮಕತೆಯನ್ನು ಹೊಡೆದೋಡಿಸುತ್ತದೆ ಎಂಬ ವಿಚಾರವೂ ಇಲ್ಲಿದೆ.

2 ಪವಳ ಸರ ಪವಳ ಮಾಲೆ

ಹವಳ ಮತ್ತು ಚಿನ್ನದ ಸಾದಾ ಗುಂಡುಗಳಿಂದ ಮಾಡಿರುವ ಆಭರಣವಿದು. ಇದು ಕೊಡವರ ವಿಶೇಷ ಆಭರಣ. ಪದ್ಧತಿಯಂತೆ ಗಂಡು ಹೆಣ್ಣು ಅನ್ನುವ ಬೇಧವಿಲ್ಲದೆ ಇಬ್ಬರೂ ಧರಿಸುತ್ತಾರೆ. ಮದುವೆ ಕಾರ್ಯಗಳೆಲ್ಲ ಸಂಪನ್ನವಾದನಂತರ ತಲಕಾವೇರಿ ಭೇಟಿ ನಂತರ ಮದುಮಕ್ಕಳು ಈ ಆಭರಣವನ್ನು ತೆಗೆಯಬಹುದು. ಅಲ್ಲಿವರೆಗೂ ಇದನ್ನು ಧರಿಸುವುದು ಕಡ್ಡಾಯವಾಗಿರುತ್ತದೆ. ಹವಳ ಸಂತೋಷ, ಫಲವತ್ತತೆಯ ಸಂಕೇತ ಎಂಬಂತೆ ಸಮರ್ಥ ಸಂತಾನಪ್ರಾಪ್ತಿಯ ಆಶಯವೂ ಇದರ ಹಿಂದಿದೆ. ಕಂಕಣ ಧಾರಣೆಯ ಸಂಕೇತವಾಗಿರುವ ಹವಳದ ಸರವನ್ನು ಮದುವೆಯ ಹಿಂದಿನ ದಿನ ಮದುಮಕ್ಕಳ ತಾಯಂದಿರು ಹವಳದ ಸರವನ್ನು ಮದುಮಕ್ಕಳಿಗೆ ಧಾರಣೆ ಮಾಡುತ್ತಾರೆ

3 ಜೋಮಾಲೆ

‘ಜೋಮಾಲೆ’ ಕೊಡವರ ವಿಭಿನ್ನ ಆಭರಣಗಳಲ್ಲಿ ಒಂದು. ಹೆಸರೇ ಹೇಳುವಂತೆ ಇದು ಜೋಲುವ ಅಂದರೆ ತೂಗುವ ಉದ್ದ ಮಾಲೆ. ಸಾಧಾರಣವಾಗಿ 71 ಸೆಂಟಿಮೀಟರ್ ಉದ್ದವಿರುತ್ತದೆ. ಚಿನ್ನದ ಗುಂಡುಗಳನ್ನು ಕಪ್ಪು ದಾರದಲ್ಲಿ ಒಂದು, ಎರಡು, ಮೂರು ಎಳೆಗಳಲ್ಲಿ ಅಳವಡಿಸಿರುತ್ತಾರೆ. ಸುಖ ಮತ್ತು ದುಃಖಗಳನ್ನು ಸಮನಾಗಿ ಹೊಂದಿಸಿಕೊಂಡು ಹೋಗುವುದರ ಸಂಕೇತವಾಗಿ ಈ ಸರವನ್ನು ಧರಿಸುತ್ತಾರೆ. ಇತ್ತೀಚೆಗೆ ತಹೇವಾರಿ ಮಣಿಗಳಿಂದ ಚಿನ್ನದ ಗುಂಡುಗಳನ್ನು ಆಳವಡಿಸಿ ಧರಿಸುವುದು ಈಗಿನ ಫ್ಯಾಷನ್ ಆಗಿದೆ.

4 ಕೊಕ್ಕೆತಾತಿ

ತಾತಿ ಹೆಸರೇ ಹೇಳುವಂತೆ ಕತ್ತಿಗೆ ಹಾಕುವ ಆಭರಣ ಅರ್ಧಚಂದ್ರಾಕೃತಿಯಲ್ಲಿರುವ ಪದಕ. ಸಾಧಾರಣವಾಗಿ 65 ಸೆಂಟಿಮೀಟರ್ ಇರುತ್ತದೆ. ಈ ಪದಕದ ಮಧ್ಯಭಾಗದಲ್ಲಿ ಕುಳಿತಿರುವ ಲಕ್ಷ್ಮಿವಿನ್ಯಾಸವಿರುತ್ತದೆ. ಆದರೆ ಎರಡೂ ಕಡೆ ಹಂಸದ ಚಿತ್ರವಿದ್ದು ಕಡೆಗೆ ಕಡು ಗುಲಾಬಿ ಬಣ್ಣದ ಹರಳುಗಳು ಹಾಗು ಮುತ್ತುಗಳಿಂದ ವಿನ್ಯಾಸಗೊಳಿಸಲಾಗಿರುತ್ತದೆ, ಪದಕದ ಮೇಲ್ಭಾಗದಲ್ಲಿ ನಾಗನ ವಿನ್ಯಾಸವಿರುತ್ತದೆ. ಇದನ್ನು ವಿಶೇಷ ಬಿಂದಿಗೆಯಾಕಾರದ ಚಿನ್ನದ ಗುಂಡುಗಳು ಇಲ್ಲವೆ ಸಾದಾ ಚಿನ್ನದ ಸರಕ್ಕೆ ಅಳವಡಿಸಿ ವಿನ್ಯಾಸಗೊಳಿಸಿರುತ್ತಾರೆ. ಆಧುನಿಕ ಎಂಬಂತೆ ರೂಬಿ ಹರಳಿನ ಬದಲಾಗಿ ಇತರೆ ಬಣ್ಣದ ಹರಳುಗಳನ್ನು ಎರಡು ಮೂರು ಸಾಲುಗಳಲ್ಲಿ ಮುತ್ತುಗಳನ್ನು ಅಳವಡಿಸಿರುತ್ತಾರೆ.

5 ಅಡ್ಡಿಕೆ

ಕತ್ತನ್ನು ತುಸು ಬಿಗಿಯಾಗಿ ಸುತ್ತುವರೆಯುವ ಆಭರಣ ಸಂಪೂರ್ಣ ಚಿನ್ನದಿಂದ ಮಾಡಲಾಗಿರುತ್ತದೆ. ಇದು ಶ್ರೇಷ್ಟತೆ ಮತ್ತು ಪಾವಿತ್ರ್ಯತೆಯ ಸಂಕೇತವಾಗಿರುತ್ತದೆ. ಕೊಡವ ಶೈಲಿಯ ಸೀರೆ ವಿನ್ಯಾಸಕ್ಕೆ ಒಪ್ಪುವ ಆಭರಣ. ದಕ್ಷಿಣ ಭಾರತೀಯ ಶೈಲಿಯನ್ನು ಹೋಲುತ್ತದೆ. ಲಕ್ಷ್ಮಿ ಕಾಸುಗಳಿಂದ ಮಾಡಿರುವ ಕಾಸಿನ ಸರವನ್ನೂ ಹಾಕಿರುತ್ತಾರೆ.

6 ಚೊಮ್ಮೋಲೆ

ಎರಡು ಎಳೆ ಚಿನ್ನದ ಸರ. ಇದರಲ್ಲಿ ಯಾವುದೇ ಪದಕಗಳು ಇರುವುದಿಲ್ಲ. ಕೊಡವರ ಸೀರೆಗೆ ಹೊಂದುವ ವಿಶೇಷ ಸಂದರ್ಭದಲ್ಲಿ ಬೇರೆ ಆಭರಣಗಳ ಕೂಡೆ ಇಲ್ಲವೆ ಬಿಡಿಯಾಗಿ ತೊಡುವ ಆಭರಣ.

7 ಜುಮುಕಿ
ಧಕ್ಷಿಣ ಭಾರತಿಯ ಶೈಲಿಯಲ್ಲಿಯೇ ಇರುತ್ತದೆ. ಬರೆ ಚಿನ್ನ ಇಲ್ಲವೆ ಮುತ್ತುಗಳಿಂದ ಇವುಗಳನ್ನು ವಿನ್ಯಾಸಗೊಳಿಸಿರುತ್ತಾರೆ. ಕೊಡವ ಸಂಪ್ರಾಯದಂತೆ ತಲೆಗೆ ವಸ್ತ್ರ ಧರಿಸುವುದು ಇದೆ. ಇದು ಹೆಚ್ಚಾಗಿ ಕೆಂಪುಬಣ್ಣದಲ್ಲಿ ಇರುತ್ತದೆ. ಜೊತೆಗೆ ಸೀರೆಗೆ ಒಪ್ಪುವ ಬಣ್ಣಗಳಲ್ಲಿಯೂ ಲಭ್ಯವಿವೆ. ಈ ವಸ್ತ್ರ ಧರಿಸಿದ ಮೇಲೆ ಕಿವಿಯ ಆಭರಣದಿಂದ ಕಿವಿಯ ಹಿಂಬದಿಯವರೆಗೂ ಎರಡು ಮೂರು ಎಳೆಗಳಲ್ಲಿ ಮಾಟಿಯನ್ನು ಧರಿಸುವುದಿದೆ.

8 ಕಡಗ

ಕೈ ಪಡಚ ಎಂಬ ಹೆಸರಿನಿಂದ ಕರೆಯುವ ಈ ಆಭರಣ ಕೂರ್ಗಿ ಕಡಗ ಎಂದೇ ಜನಜನಿತವಾಗಿರುವ ಈ ಕಡಗಗಳು ಒಂಟಿ ಜೋಡಿ, ಅಲ್ಲದೆ ಮೂರು ನಾಲ್ಕು ಕಡಗಳನ್ನು ಒಂದೇ ಬಂಧದಲ್ಲಿ ಬರುವಂತೆ ಅಳವಡಿಸಿರುತ್ತಾರೆ. ಇದು ಬಳೆಯ ಆಕಾರದಲ್ಲಿ ಇರುವುದಿಲ್ಲ, ಹೆಣ್ಣು ಮಕ್ಕಳ ಮುಂಗೈ ಅಳತೆಗೆ ಸರಿಯಾಗಿ ಇದನ್ನು ಮಾಡಿರುತ್ತಾರೆ ಇದನ್ನು ಮುಂಗೈ ಮೂಲಕ ಧರಿಸಲು ಆಗುವುದಿಲ್ಲ. ಅರ್ಥಾತ್ ಬ್ರೈಸಲೆಟ್ ಎನ್ನಬಹುದು. ಧರಿಸಲೆಂದೇ ವಿಶೇಷ ತಿರುಪಿರುತ್ತದೆ. ಇದರಲ್ಲಿಯೂ ರೂಬಿ ಬಣ್ಣದ ಇಲ್ಲವೆ ನಾರಿಯರ ಮನಕ್ಕೊಪ್ಪುವ ಹರಳುಗಳನ್ನು ವಿನ್ಯಾಸಗೊಳಿಸಿರುತ್ತಾರೆ. ಇದೇ ಮಾದರಿಯ ಕೈ ಉಂಗುರಗಳೂ ಇರುತ್ತವೆ.

ಕೊಡವರು ದೇವಕನ್ಯೆಯರು ಅನ್ನುವ ಪ್ರತೀತಿ ಇರುವ ಕಾರಣ ಅವರು ಮನುಷ್ಯರನ್ನು ಮದುವೆ ಆಗುವ ಹಾಗಿಲ್ಲ ಅನ್ನುವಾಗ ನಾಗದೇವ ಪ್ರತ್ಯಕ್ಷನಾಗಿ ನನ್ನ ಆಶೀರ್ವಾದವಿದೆ ಎಂದು ಮದುವೆಯಾಗಲು ಬೆಂಬಲ ಕೊಟ್ಟ ಅನ್ನುವ ಪ್ರತೀತಿ ಇದೆ. ಇವರು ದೇವಕನ್ಯೆಯರು ಅನ್ನುವ ಕಾರಣಕ್ಕೆ ಗಂಡನಾಗುವವನು ಮಾಂಗಲ್ಯ ಕಟ್ಟುವ ಪದ್ಧತಿಯಿಲ್ಲ ಎಂದು ಐತಿಹ್ಯ ಹೇಳುತ್ತದೆ.

9 ಪವುಂಚಿ

ಇದು ಬ್ರೈಸ್ಲೆಟ್ ಮಾದರಿಯ ಆಭರಣವೇ. ಇದು ಹಲಸಿನ ಹಣ್ಣಿನ (ಕೊಡಗಿನ ವಿಶೇಷಗಳಲ್ಲಿ ಹಲಸೂ ಕೂಡ ಒಂದು. ಅದು ಆಭರಣಗಳ ವಿನ್ಯಾಸದಲ್ಲೂ ಒಡಮೂಡಿದೆ) ಮುಳ್ಳುಗಳ ರೀತಿ ಇರುವ ಚಿನ್ನದ ಮಣಿಗಳನ್ನು ಎರಡು ಮೂರು ಸಾಲುಗಳಲ್ಲಿ ವಿಶೇಷ ವಿನ್ಯಾಸ ಮಾಡಲಾಗಿರುತ್ತದೆ. ಇದನ್ನು ವಜ್ರಚೂಡಿ ಎನ್ನುವ ಹೆಸರಿನಿಂದಲೂ ಕರೆಯುವುದಿದೆ. ಪಿಂಬಳೆ. ಪೆರಿಯಬಳೆ ಇವುಗಳು ಸರಿಸುಮಾರು ಇದೆ ವಿನ್ಯಾಸ ಹೊಂದಿರುತ್ತದೆ ಸಾಧಾರಣ ಬಳೆಗಳಂತೆ ಇವುಗಳು ಕೈಯನ್ನು ಸುತ್ತುವರಿಯುತ್ತದೆ.

10 ಕಾಲು ಪದಿಚೆ

ಕಾಲು ಪಿಲಿ ಎಂದೂ ಕರೆಯುವಬೆಳ್ಳಿ ಆಭರಣ ಐದು ಕಾಲುಂಗುರಗಳನ್ನು ಒಂದು ಕಾಲು ಚೈನಿಗೆ ಜೋಡಿಸಲ್ಪಟ್ಟಿರುತ್ತಾರೆ.

ಕೈಪಿಲಿ
ಕೈ ಪದಿಚೆ ಬಿಡಿ ಉಂಗುರಗಳನ್ನು ಅಳವಡಿಸಿ ಮಾಡಿರುತ್ತಾರೆ.

11 ಪೀಚೆ ಕತ್ತಿ

ಕೊಡವರು ಕ್ಷತ್ರಿಯ ಕುಟುಂಬದವರು. ಅದರ ಸಂಕೇತವಾಗಿ ವಿಶೇಷ ಸೊಂಟಕ್ಕೆ ಧರಿಸುವ ಆಭರಣವನ್ನು ಕಡ್ಡಾಯವಾಗಿ ಧರಿಸುತ್ತಾರೆ. ಅದುವೆ ಪೀಚೆ ಕತ್ತಿ. ಗಂಡಸರ ಪ್ರತಿಷ್ಟೆಯ ಸಂಕೇತ . ಎಳೆಯ ಅಥವಾ ಚಿಕ್ಕ ಕತ್ತಿ. ಕುಪ್ಪು ಚೇಲೆಯ ಮಾಲೆ ಹಾಕುವುದು. ಚೇಲೆ ಎಂದರೆ ಕೆಂಪು ರೇಷಿಮೆಯ ಸೊಂಟದಪಟ್ಟಿ. ದೇವಕನ್ಯೆಯನ್ನು ಮದುವೆ ಆಗುವ ಸಂದರ್ಭ ಒಡಿ ಕತ್ತಿ. ಕೊಡವ ವಾರ್ ನೈಫ್ ಎನ್ನಬಹುದು. ವಿಶೇಷ ಸಂದರ್ಭದಲ್ಲಿ ಇದನ್ನು ಧರಿಸುತ್ತಾರೆ. ಮುಹೂರ್ತಕ್ಕೆ ಮೊದಲು ಮದುಮಗ ಮಂಟಪವನ್ನು ಪ್ರವೇಶಿಸುವ ಮೊದಲು ಬಾಳೆ ಕಂದನ್ನು ಕತ್ತರಿಸಲು ಈ ಒಡಿಕತ್ತಿಯನ್ನು ಉಪಯೋಗಿಸಿತ್ತಾರೆ. ಇದನ್ನು ಬೆಳ್ಳಿಯ ಕುಚ್ಚುಗಳಲ್ಲಿ ವಿನ್ಯಾಸ ಮಾಡಿರುತ್ತಾರೆ. ಪೀಚೆ ಕತ್ತಿಯನ್ನು ಮದುಮಗಳು ಗಂಗಾ ಪೂಜೆಯ ಸಂದರ್ಭದಲ್ಲಿ ತೆಂಗಿನ ಕಾಯಿ ಒಡೆಯಲು ಬಳಸುವರು. ಇದಲ್ಲದೆ ಶೌರ್ಯದ ಸಂಕೇತವಾಗಿರುವ ಬೆಳ್ಳಿ ಕಡಗವನ್ನು ಪರುಷರು ವಯೋಬೇಧವಿಲ್ಲದೆ ಧರಿಸುತ್ತಾರೆ.

12 ಮೊಯಿರ

ಮೊಯಿರ ಇಡುವ ಅನ್ನುವ ಪದ್ಧತಿ. ಇದು ಪಾಶ್ಚಿಮಾತ್ಯರಿಂದ ಎರವಲು ಪಡೆದಿರುವುದು, ಅಂದರೆ ಮದು ಮಕ್ಕಳು ಪರಸ್ಪರ ಉಂಗುರ ಬದಲಿಸಿಕೊಳ್ಳುವುದು. ಕಾಲು ಮೊಯಿರ ಅಂದರೆ ಕಾಲುಂಗರ ಹೆಚ್ಚಾಗಿ ಒಂಟಿ ಸುತ್ತಿನ ಕಾಲುಗುರಗಳನ್ನು ಕಾಣಬಹುದು. ಸಂತಾನೋತ್ಪತ್ತಿಯ ಸಂಕೇತವಾಗಿ ಬಳಸುವುದು.

13 ಬ್ರೋಚ್

ಇದು ಸೀರೆಗೆ ಹಾಕುವ ಪಿನ್. ಕೊಡವರ ಪೀಚೆ ಕತ್ತಿಯ ವಿನ್ಯಾಸವನ್ನು ಹೊಂದಿರುತ್ತದೆ. ಕಾಲು ಮೊಯಿರ ಅಂದರೆ ಕಾಲುಂಗರ ಹೆಚ್ಚಾಗಿ ಒಂಟಿ ಸುತ್ತಿನ ಕಾಲುಗುರಗಳನ್ನು ಕಾಣಬಹುದು. ಇವಲ್ಲದೆ ಶಕ್ತಿ, ಕೆಟ್ಟ ದೃಷ್ಟಿ ನಿವಾರಣೆಗೆ ಮಕ್ಕಳಿಗೆ ಪಾಲುಮಣಿಯನ್ನು ಹಾಕುತ್ತಾರೆ. ಇದರಲ್ಲಿ ಬಿಳಿ ಹಾಗು ಕಪ್ಪು ಮಣಿಗಳು ಇರುತ್ತವೆ.

ಪತ್ತಾಕ್, ಕೊಕ್ಕೆ ತಾತಿ, ಜೋಮಾಲೆ, ಪವಳ ಸರ, ಮೊದಲಾದ ಏಳು ರೀತಿಯ ಸರಗಳನ್ನು ಕೊಡವ ಮದುಮಗಳು ಧರಿಸುತ್ತಾಳೆ. ಮದುಮಗನೂ ಹವಳದ ಸರ ಮತ್ತು ಕೊಕ್ಕೆ ತಾತಿಯನ್ನು ಧರಿಸುವುದು ರೂಢಿ. ಒಟ್ಟಾರೆಯಾಗಿ ಪ್ರಕೃತಿ ಸೊಬಗಿಗೆ ಹೆಸರಾಗಿರುವ ಕೊಡವ ಆಭರಣಗಳೂ ಅಷ್ಟೇ ಮನಮೋಹಕ ಹಾಗೆ ಪವಿತ್ರವೂ. ಕೊಕ್ಕೆತಾತಿ, ಹವಳಸರ, ಕಾಸಿನ ಸರದ ವಿನ್ಯಾಸವನ್ನೆ ಬಳಸಿದ ಕಿವಿಯೋಲೆಗಳು ಬಹಳ ಪ್ರಸಿದ್ಧಿಯಾಗಿವೆ. ಇವರ ಆಭರಣಗಳು ಸಂಪೂರ್ಣ ಗಟ್ಟಿಯಾಗಿರದೆ ಒಳಗೆ ಅರಗನ್ನು ಸೇರಿಸಿರುತ್ತಾರೆ. ಇವರ ಆಭರಣಗಳಲ್ಲಿ ಸಾಮಾನ್ಯವಾಗಿ ನಾಗನ ವಿನ್ಯಾಸ ಅದು ಪಾವಿತ್ರ್ಯತೆ ಮತ್ತು ಪ್ರಕೃತಿಯ ಆರಾಧನೆಯ ಸಂಕೇತ. ಹಾಗೆ ಮುತ್ತುಗಳು ಆರೋಗ್ಯ ಮತ್ತು ಸೌಂದರ್ಯವನ್ನು ಸಂಕೇತಿಸಿದರೆ, ಹವಳ ಸುಮಂಗಲಿತನ, ಸಂತೋಷ ಹಾಗು ಫಲವತ್ತತೆಯ ಸಂಕೇತ. ಕಪ್ಪು ಮಣಿ ಸುಮಂಗಲಿತನ ಮತ್ತು ಕೆಟ್ಟ ದೃಷ್ಟಿಯನ್ನು ಹೊಡೆದೋಡಿಸುವುದಕ್ಕೆ ಸಂವಾದಿಯಾಗಿ ಬಳಸುತ್ತಾರೆ.


ಕೊಡಗಿನ ಆಭರಣಗಳ ಕರಕುಶಲತೆ ನೋಡುವುದಕ್ಕೂ ತೊಡುವುದಕ್ಕೂ ಆಪ್ಯಾಯಮಾನ ಹಾಗಾಗಿ ಕೊಡವರೆ ಅಲ್ಲದೆ ಇತರೆ ಪ್ರಾಂತ್ಯದವರೂ ಇಷ್ಟಪಟ್ಟು “ಕೂರ್ಗಿ ಡಿಸೈನ್ಸ್ ಬೇಕಿತ್ತು” ಎನ್ನುತ್ತಲೇ ಆಭರಣದ ಅಂಗಡಿಗಳನ್ನು ಪ್ರವೇಶಿಸುತ್ತಾರೆ.