ಫ್ರೆಂಚ್‌ ಓಪನ್ ಪಂದ್ಯಾವಳಿಯ ಕಡೆಯ ಆಟದಲ್ಲಿ ಅದೇನಾಯಿತೋ ಏನೋ ಟೋಫನ್ ಸರಿಯಾಗೇ ಕೂರದೆ ಕೆಳಗೆ ಜಾರುವಂತಾಗುತ್ತಿತ್ತು. ಪ್ರಾಣಪದಕವಾಗಿದ್ದ ತನ್ನ ಇಮೇಜನ್ನು ಕಾಪಾಡಿಕೊಳ್ಳುವ ಸಲುವಾಗಿ ಅತ್ತಿಂದಿತ್ತ ಜೋರಾಗಿ ಓಡಾಡಲು ಹೆದರಿ ಪ್ರತಿಷ್ಠಿತ ಚಾಂಪಿಯನ್ಷಿಪ್ಪನ್ನೇ ಕೈಬಿಟ್ಟಿದ್ದ! ಅದು ಅಂದಿನ ಕತೆ. ಗಂಭೀರವಾದ ಮನ ಮಂಥನದ ಮೂಲಕ ತನ್ನತನವ ಅಪ್ಪಿಕೊಳ್ಳುವ ಪ್ರಕ್ರಿಯೆಯ ಭಾಗವಾಗಿ ಅಳಿದುಳಿದ ಕೂದಲಿನ ಬೊಕ್ಕ ತಲೆಯನ್ನು ಚೊಕ್ಕವಾಗಿ ಬೋಳಿಸಿಕೊಂಡು ಸಾರ್ವಜನಿಕವಾಗಿ ಓಡಾಡತೊಡಗಿದ.
ಟೆನ್ನಿಸ್‌ ತಾರೆ ಲಾಸ್‌ ವೇಗಸ್‌ ಮೂಲದ ಆಂಡ್ರೆ ಅಗಸಿಯ ಕುರಿತ ಅಚಲ ಸೇತು ಬರಹ ನಿಮ್ಮ ಓದಿಗೆ

ಒಲಂಪಿಕ್ ಚಿನ್ನದ ಜೊತೆ ಎಂಟು ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಪಡೆದ ಖ್ಯಾತ ಟೆನಿಸ್ ತಾರೆ ಆಂಡ್ರೆ ಅಗಸಿ ಹುಟ್ಟಿ ಬೆಳೆದಿದ್ದೆಲ್ಲ ಲಾಸ್ ವೇಗಸ್ಸಿನಲ್ಲಿ. ಹುಟ್ಟೂರಿನ ಸ್ಥಳ ಮಹಿಮೆಯನ್ನು ಪ್ರತಿನಿಧಿಸುವ ಗ್ಲಾಮರ್ ಹಾಗು ಮನರಂಜನೆಯನ್ನು ತುಸು ಹೆಚ್ಛೇ ಟಾಕು ಠೀಕೆನಿಸುತ್ತಿದ್ದ ಟೆನಿಸ್ ಮೈದಾನಗಳಿಗೆ ಹೊತ್ತು ತಂದ ಶ್ರೇಯ ಅಗಸಿಗೆ ಸಲ್ಲುತ್ತದೆ. ಹೊಂಬಣ್ಣದ ಕೂದಲ ನಡುವೆ ಫಳಗುಟ್ಟುವ ಲೋಲಾಕು ಜೀಕಿಸುತ್ತ ಮೈದಾನಕ್ಕಿಳಿಯುತ್ತಿದ್ದ ಮುದ್ದು ಮುಖದ ಅಗಸಿ ತೊಂಬತ್ತರ ದಶಕದ ಟೆನಿಸ್ ಪ್ರಿಯರ ಕಣ್ಮಣಿಯಾಗಿದ್ದ.

ತೊಟ್ಟಿಲಿಂದಲೇ ತರಪೇತಿ

‘ಓಪನ್’ ಹೆಸರಿನ ತನ್ನ ಆತ್ಮ ಕಥಾನಕದಲ್ಲಿ ತಾಯಿಯ ಗರ್ಭದಿಂದ ಹೊರಬರುತ್ತಲೇ ಅಂಟಿದ ಟೆನಿಸ್ ನಂಟಿನ ಕತೆಯನ್ನು‌ಅಗಸಿ ಬಿಚ್ಚಿಡುತ್ತಾನೆ. ಕೆಳಮಧ್ಯಮ ವರ್ಗದ ಮನೆತನದಲ್ಲಿ ಹುಟ್ಟಿದ ಮಗುವಿಗೆ ಅಕ್ಷರಶಃ ತೊಟ್ಟಿಲಿನಿಂದಲೇ ಟೆನಿಸ್ ಆಟದ ತರಪೇತಿ ಶುರುವಾಗಿತ್ತು. ತಂದೆ ಮೈಕ್ ಅಗಸಿ, ಟೆನಿಸ್ ಚಂಡುಗಳ ಗೊಂಚಲನ್ನು ತೊಟ್ಟಿಲ ಮೇಲೆ ತೂಗುವಂತೆ ಕಟ್ಟಿ ಟೇಬಲ್ ಟೆನಿಸ್ ಬ್ಯಾಟನ್ನು ಮಗುವಿನ ಕೈಯಲ್ಲಿ ಕೊಡುತ್ತಿದ್ದನಂತೆ.

(ತಂದೆ ಮೈಕ್ ಅಗಸಿಯೊಟ್ಟಿಗೆ ಬಾಲಕ ಆಂಡ್ರೆ ಅಗಸಿ)

ಇರಾನಿನಲ್ಲಿ ಹುಟ್ಟಿ ಬೆಳೆದ ಮೈಕ್ ಅಗಸಿಗೆ ಟೆನಿಸ್ ಆಟದ ಪರಿಚಯವಾಗಿದ್ದು ಜಂಟಿಯಾಗಿ ನಡೆದ ಆಂಗ್ಲೋ-ಸೋವಿಯತ್ ಆಕ್ರಮಣದ ಸಮಯದಲ್ಲಿ. ಬ್ರಿಟಿಷ್ ಸೈನಿಕರು ತಮ್ಮ ವಿರಾಮದಲ್ಲಿ ಆಡುತ್ತಿದ್ದ ಟೆನಿಸ್ ಆಟದಿಂದ ಆಕರ್ಷಿತನಾಗಿ ಗುರುವಿಲ್ಲದ ಏಕಲವ್ಯನಂತೆ ದೂರದಿಂದಲೇ ನೋಡುತ್ತಾ, ಮುರುಕಲು ಟೆನಿಸ್ ರಾಕೆಟ್ಟಿನಿಂದ ತನ್ನ ಪಾಡಿಗೆ ತಾನು ಅಭ್ಯಾಸ ಮಾಡುತ್ತಾ ಆಟದ ರೀತಿ ನೀತಿಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದನಂತೆ. ಅಪಾರ ಆಸಕ್ತಿಯಿದ್ದರೂ ಟೆನಿಸ್ಸಿನಲ್ಲಿ ಮುಂದುವರೆಯಲು ತಕ್ಕುದಾದ ಹಣಕಾಸಿನ ವ್ಯವಸ್ಥೆ ಹಾಗು ಕಲಿಕೆಯ ವಾತಾವರಣವಿರಲಿಲ್ಲ. ಮುಂದೆ ತನ್ನ ಬಂಧುಗಳ ಸಹಾಯದಿಂದ ಅಮೆರಿಕಾಗೆ ವಲಸೆ, ಲಾಸ್ ವೇಗಸ್ಸಿನ ಟ್ರಾಪಿಕಾನ ಕೆಸಿನೋದಲ್ಲಿ ನೌಕರಿ, ಹೆಂಡತಿ ಮತ್ತು ನಾಲ್ಕು ಮಕ್ಕಳ ಜವಾಬ್ದಾರಿ. ನದಿಯ ಅಲೆಗಳಂತೆ ಹರಿದು ಹೋಗುತ್ತಿದ್ದ ಜೀವನದಲ್ಲಿ ಸ್ಥಾಯಿಯಾಗಿ ನಿಂತದ್ದು ಮಾತ್ರ ಟೆನಿಸ್ ಮೇಲಿನ ಉತ್ಕಟ ಪ್ರೇಮ. ಎಷ್ಟು ಪ್ರಯತ್ನ ಪಟ್ಟರೂ ಮೊದಲ ಮೂರು ಮಕ್ಕಳು ಟೆನಿಸ್ ಆಡುವುದರಲ್ಲಿ ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ. ತಂದೆಯ ಅತಿಯಾದ ಅಂಕೆ ಶಂಕೆಗಳ ದೆಸೆಯಿಂದ ಮೂರೂ ಮಕ್ಕಳು ಟೆನಿಸ್ ಆಟದಿಂದ ವಿಮುಖರಾದರು. ಛಲ ಬಿಡದ ವಿಕ್ರಮ ಹಾಗು ಭಯ ಹುಟ್ಟಿಸುವ ಬೇತಾಳ ಇವರೀರ್ವರ ಚೇತನಗಳೆರಡೂ ಮೈಗೂಡಿದಂತಹ ಮೈಕ್ ಅಗಸಿಯ ಮಾರ್ಗದರ್ಶನದಲ್ಲಿ ಕಡೆಯ ಮಗು ಆಂಡ್ರೆಯ ಟೆನಿಸ್ ಯಾತ್ರೆ ಶುರುವಾಯಿತು.

ಕಾಟದ ಆಟ ಹಾಗು ಕಠಿಣ ಪರಿಶ್ರಮದ ಪಾಠ

ಆರು ವರುಷದ ಪುಟ್ಟ ಪೋರನ ಬಿಡುವಿನ ಸಮಯವೆಲ್ಲ ಮನೆಯ ಹಿಂದಿನ ಟೆನಿಸ್ ಮೈದಾನದಲ್ಲಿ ಕಳೆಯುತ್ತಿತ್ತು. ಸುಂಟರಗಾಳಿಯಂತಹ ಅಪ್ಪನ ಮುಂದೆ ಸೊಲ್ಲೆತ್ತುವ ಧೈರ್ಯವಿಲ್ಲದೆ, ಲವ್ ಆಲ್ ಎಂದು ಶುರು ಮಾಡುವ ಆಟದ ಅಭ್ಯಾಸ ‘ಐ ಹೇಟ್ ಟೆನಿಸ್’ ಎಂಬ ಗುಟ್ಟಾದ ಮಂತ್ರ ಜಪದೊಂದಿಗೆ ಮೊದಲಾಗುತ್ತಿತ್ತು. ಬೇಕಂತಲೇ ಎತ್ತರಿಸಿ ಕಟ್ಟಿದ ನೆಟ್ಟಿನ ಆಚೆ ಬದಿಯಿಂದ ನೂರಾಹತ್ತು ಮೈಲು ವೇಗದಲ್ಲಿ ಚಂಡು ಒಗೆಯುವ ಟೆನಿಸ್ ಮಿಷಿನ್ನು ಕಾಮಿಕ್ ಪುಸ್ತಕದಲ್ಲಿ ಬರುವ ಬೆಂಕಿ ಕಾರುವ ಡ್ರ್ಯಾಗನ್ನಂತೆ ಕಾಣುತ್ತಿತ್ತು. ಬೇಗ ಹೊಡಿ ಜೋರಾಗಿ ಹೊಡಿ ಎಂದು ಪ್ರತೀ ಚಂಡಿನ ಹೊಡೆತಕ್ಕೂ ತಾಕೀತು ಮಾಡುವ ಕೇಡಿಗ ಅಪ್ಪನ ದುಷ್ಟ ಸೈಡ್ ಕಿಕ್. ವಿಧಿ ಇಲ್ಲದೆ ಹೀಗೆ ದಿನಂಪ್ರತಿ ಟೆನಿಸ್ ಪ್ರಪಂಚದಲ್ಲಿ ಮುಳುಗುತ್ತಾ ತೇಲುತ್ತಾ ಅದೇ ಸಹಜ ಸ್ವಾಭಾವಿಕ ಬದುಕೇನೋ ಎನ್ನುವಂತಾಯಿತು. ಪ್ರತಿಭೆ ಹಾಗು ಕಠಿಣ ಪರಿಶ್ರಮದಿಂದ ಗಳಿಸಿದ ಕೌಶಲಗಳ ಸಮ್ಮಿಶ್ರಣದಿಂದ ಸುಲಭವಾಗಿ ರಾಜ್ಯ ಮಟ್ಟದ ಚಾಂಪಿಯನ್‌ಷಿಪ್ ದೊರಕುವಂತಾಯಿತು.

ಇಮೇಜ್ ಈಸ್ ಎವೆರಿಥಿಂಗ್

ಹದಿ ಹರೆಯದ ಹೊಸ್ತಿಲು ಏರುವ ಹೊತ್ತಿಗೆ ಮಿಲಿಟರಿ ಶಾಲೆಯಂತಹ ಖಡಕ್ ವಾತಾವರಣವಿರುವ ಟೆನಿಸ್ ಬೋರ್ಡಿಂಗ್ ಶಾಲೆಯೊಂದರಲ್ಲಿ ಅಗಸಿಯ ಸೇರ್ಪಡೆಯಾಗುತ್ತದೆ. ಮುಂಜಾವಿನಿಂದ ಮಧ್ಯಾಹ್ನದ ತನಕ ನಡೆಯುವ ಶೈಕ್ಷಣಿಕ ಚಟುವಟಿಕೆಗಳು ಮುಗಿದ ಮೇಲೆ ಮುಸ್ಸಂಜೆವರೆಗೂ ಟೆನಿಸ್ ಆಟದ ಅಭ್ಯಾಸ. ಶಾಲೆಯ ಟೆನಿಸ್ ದಿನಚರಿಗೆ ಸುಲಭವಾಗಿ ಹೊಂದಿಕೊಂಡರೂ ಕಷ್ಟಕರವಾದ ಪಠ್ಯಕ್ರಮ ಉಸಿರುಗಟ್ಟಿಸುತ್ತದೆ. ಟೆನಿಸ್ ಮಯವಾದ ಮನೆಯ ವಾತಾವರಣದಲ್ಲಿ ಮುಂಚಿನಿಂದಲೂ ಪಾಠ ಪ್ರವಚನಗಳಿಗೆ ಆದ್ಯತೆ ಇರಲಿಲ್ಲ. ಶಾಲೆಗೆ ಚಕ್ಕರ್ ಹೊಡೆದು ತಂದೆಯೊಂದಿಗೆ ಟೆನಿಸ್ ಕ್ಲಬ್ಬಿಗೆ ಹೋಗುವುದು ಅತ್ಯಂತ ಮಾಮೂಲಿನ ವಿಷಯವಾಗಿತ್ತು. ಆದರೆ ಬಾಲ್ಯ ಮತ್ತು ಪ್ರೌಢಾವಸ್ಥೆಯ ನಡುವಿನ ಸಂಕ್ರಮಣದ ಸೂಕ್ಷ್ಮ ಘಟ್ಟದಲ್ಲಿ ಪರೀಕ್ಷೆಗಳಲ್ಲಿ ನಪಾಸಾಗುತ್ತ ಅಪರಿಚಿತರ ಮುಂದೆ ದಡ್ಡತನದ ಪಟ್ಟ ಹೊರುವುದು ತುಂಬಾ ಹೀನಾಯವಾಗತೊಡಗಿತು. ಒಂಭತ್ತನೆಯ ತರಗತಿವರೆಗೂ ಹಾಗು ಹೀಗೂ ಕುಂಟುತ್ತಾ ಸಾಗಿದ ಅಗಸಿಯ ಶೈಕ್ಷಣಿಕ ಜೀವನ ಅವನು ಹದಿನಾರನೆಯ ವಯಸ್ಸಿನಲ್ಲಿ ಪೂರ್ಣ ಪ್ರಮಾಣದ ವೃತ್ತಿನಿರತ ಆಟಗಾರನಾಗುವುದರಲ್ಲಿ ಸಂಪೂರ್ಣವಾಗಿ ಕೊನೆಗೊಂಡಿತು.

ಪ್ರೌಢಶಾಲೆಯನ್ನು ಮುಗಿಸಲಾರದ ಕೀಳರಿಮೆ, ಚಿಕ್ಕ ವಯಸ್ಸಿನಲ್ಲೇ ಎದುರಿಸಬೇಕಾದ ಟೆನಿಸ್ ವೃತ್ತಿ ಜೀವನದ ಒತ್ತಡಗಳು, ವಯೋ ಸಹಜವಾದ ಹಮ್ಮು ಬಿಮ್ಮಿನ ಅಭಿವ್ಯಕ್ತಿಗಳ ತುಡಿತ ಎಲ್ಲ ಸೇರಿಕೊಂಡ ಮನಸ್ಸು ಸೂತ್ರವಿಲ್ಲದ ಗಾಳಿಪಟ. ಟೆನಿಸ್ ಲೋಕದಲ್ಲಿ ವಾಡಿಕೆಯಿರದ ವೇಷ ಭೂಷಣಗಳನ್ನು ಧರಿಸುತ್ತಾ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಮೆರೆಯುವ ಭೂಪ ತಾನೆಂದು ತೋರಿಸಿಕೊಳ್ಳುವ ಮುಖವಾಡದ ಧಾರಣೆ.

ಶ್ವೇತವರ್ಣದ ಉಡುಪು ತೊಡುವ ಆಟಗಾರರ ಮಧ್ಯೆ ವಿಭಿನ್ನವಾಗಿ ಕಾಣುವಂತೆ ನೀಲಿ ಡೆನಿಮ್ ಚಡ್ಡಿ ತೊಟ್ಟು, ಕೇಸರಿಯ ಕೇಶರಾಶಿಯಂತಹ ಕೂದಲು ಹಾರಿಸುತ್ತ ಎದುರಾಳಿಗಳಿಗೆ ಸಿಂಹ ಸ್ವಪ್ನವಾಗುತ್ತಿದ್ದ ಕಿಶೋರ ಟೆನಿಸ್ ಲೋಕದಲ್ಲಿ ಮೆಲ್ಲನೆ ಮಿಂಚು ಸಂಚಾರ ಮಾಡಲು ಶುರು ಮಾಡುತ್ತಾನೆ. ಸರಸರನೆ ಜನಪ್ರಿಯತೆಯ ಮೆಟ್ಟಿಲು ಹತ್ತುತ್ತಿದ್ದ ಹದಿ ಹರೆಯದ ಹುಡುಗನ ಹಿಂದೆ ಜಾಹಿರಾತು ಕಂಪೆನಿಗಳ ಸಾಲು ಸಾಲು. ಟಿಪ್ ಟಾಪಾದ ಟ್ರೆಂಡಿ ಹುಡುಗನಂತೆ ಬಟ್ಟೆ ಬರೆ ತೊಟ್ಟು “ಇಮೇಜ್ ಈಸ್ ಎವೆರಿಥಿಂಗ್” ಎಂದು ಅಗಸಿ ಲ್ಯಾಂಬೋರ್ಘಿನಿ ಕಾರಿಂದಿಳಿಯುತ್ತ ಹೇಳುವ ಕ್ಯಾಮರಾ ಜಾಹೀರಾತೊಂದು ಬಿಡುಗಡೆಯಾಗುತ್ತದೆ. ‘ಛಾಯಾಚಿತ್ರ’ ಮತ್ತು ‘ಚಿತ್ತಭಿತ್ತಿಚಿತ್ರ’ ಈ ಎರಡು ಅರ್ಥ ಬರುವ ಶ್ಲೇಷೆ (ಪನ್) ಪ್ರಯೋಗವಿದ್ದ “ಇಮೇಜ್ ಈಸ್ ಎವೆರಿಥಿಂಗ್” ಎಂಬ ಘೋಷಣೆ, ಸರಿಯಾದ ಮಾರ್ಗದರ್ಶಕರಿಲ್ಲದೆ ಆಂತರಿಕ ಅಭದ್ರತೆಯ ತೊಳಲಾಟದಲ್ಲಿದ್ದ ಹುಡುಗನಿಗೆ ಗುರುಮಂತ್ರದಂತಾಗುತ್ತದೆ.

ತನ್ನತನದ ಹುಡುಕಾಟದಲ್ಲಿ

ಒಳ ವ್ಯಕ್ತಿತ್ವದ ಸಹಜ ಭಾವನೆಗಳ ಅನಾವರಣಕ್ಕೆ ಆದ್ಯತೆ ಕೊಡದೆ ಅವರಿವರ ಯಶಸ್ಸಿನ ಪರಿಭಾಷೆಯನ್ನೇ ಒಪ್ಪಿ ಅಪ್ಪಿಕೊಂಡರೆ ಸಾರ್ಥಕತೆಯ ಭಾವ ಮರುಭೂಮಿಯ ಮರೀಚಿಕೆಯಂತಾಗದೇ? ತನ್ನ ಜೀವಿತದ ಕಾಲು ಶತಮಾನದ ಅವಧಿಯೊಳಗೆ ಅಗಸಿಯ ಸಾಧನೆ ಅಪಾರ. ಯು‌ಎಸ್ ಓಪನ್, ವಿಂಬಲ್ಡನ್, ಒಲಂಪಿಕ್ಸ್ ಸ್ಪರ್ಧೆಗಳಲ್ಲಿ ವಿಜಯ ಪತಾಕೆ, ವಿಶ್ವ ಟೆನಿಸ್ ಲೋಕದಲ್ಲಿ ಪ್ರಥಮ ಶ್ರೇಯಾಂಕಿತನ ಪಟ್ಟ, ಪಟ್ಟದ ರಾಣಿಯಾಗಿ ಹಾಲಿವುಡ್ ತಾರೆ ಬ್ರೂಕ್ ಶೀಲ್ಡಳ ಸಾಂಗತ್ಯ, ಕ್ಲಾಸ್-ಮಾಸ್ ಎರೆಡನ್ನು ಸೆಳೆವ ವರ್ಚಸ್ಸು, ಜೀವನ ಶೈಲಿ. ಇಷ್ಟೆಲ್ಲಾ ಇದ್ದರೂ ಬೀಸುವ ಗಾಳಿಯ ಮರ್ಜಿಗೆ ಒಳಪಟ್ಟ ಲಂಗರು ಕಿತ್ತ ಹಡಗಿನಂತಹ ಆಂತರಿಕ ಜೀವನ. ಮನದಾಳ ಬಗೆದು ಪ್ರಾಮಾಣಿಕವಾಗಿ ತನ್ನತನದ ಹುಡುಕಾಟ ಮಾಡಿದಾಗ ಕಂಡದ್ದು ತೋರ್ಪಡಿಕೆಯ, ಆಡಂಬರ ಜೀವನಶೈಲಿಯ ಬಗೆಗಿನ ಜಿಗುಪ್ಸೆ, ಇಮೇಜ್ ಈಸ್ ನಾಟ್ ಎವೆರಿಥಿಂಗ್ ಎಂಬ ಕಲಿಕೆ. ವಂಶ ಪಾರಂಪರ್ಯವಾಗಿ ಬಳುವಳಿ ಬಂದ ಬೊಕ್ಕ ತಲೆಯ ಸಮಸ್ಯೆ ಅಗಸಿಗೆ ಹದಿ ಹರೆಯದಲ್ಲೇ ಕಾಡುತ್ತಿತ್ತು. ಟೋಫನ್ನು ಹಾಗು ಕೃತಕ ಕೂದಲ ಗೊಂಚಲುಗಳಿಂದ (hair extensions ) ಬೋಳು ತಲೆಯ ಖಾಲಿ ಮೈದಾನವನ್ನು ಸದಾಕಾಲವೂ ಮರೆಮಾಚಿ ಇಟ್ಟಿರುತ್ತಿದ್ದ. ಫ್ರೆಂಚ್‌ ಓಪನ್ ಪಂದ್ಯಾವಳಿಯ ಕಡೆಯ ಆಟದಲ್ಲಿ ಅದೇನಾಯಿತೋ ಏನೋ ಟೋಫನ್ ಸರಿಯಾಗೇ ಕೂರದೆ ಕೆಳಗೆ ಜಾರುವಂತಾಗುತ್ತಿತ್ತು. ಪ್ರಾಣಪದಕವಾಗಿದ್ದ ತನ್ನ ಇಮೇಜನ್ನು ಕಾಪಾಡಿಕೊಳ್ಳುವ ಸಲುವಾಗಿ ಅತ್ತಿಂದಿತ್ತ ಜೋರಾಗಿ ಓಡಾಡಲು ಹೆದರಿ ಪ್ರತಿಷ್ಠಿತ ಚಾಂಪಿಯನ್ಷಿಪ್ಪನ್ನೇ ಕೈಬಿಟ್ಟಿದ್ದ! ಅದು ಅಂದಿನ ಕತೆ. ಗಂಭೀರವಾದ ಮನ ಮಂಥನದ ಮೂಲಕ ತನ್ನತನವ ಅಪ್ಪಿಕೊಳ್ಳುವ ಪ್ರಕ್ರಿಯೆಯ ಭಾಗವಾಗಿ ಅಳಿದುಳಿದ ಕೂದಲಿನ ಬೊಕ್ಕ ತಲೆಯನ್ನು ಚೊಕ್ಕವಾಗಿ ಬೋಳಿಸಿಕೊಂಡು ಸಾರ್ವಜನಿಕವಾಗಿ ಓಡಾಡತೊಡಗಿದ.

ಚಿಕ್ಕಂದಿನಲ್ಲಿ, ಗೆಳೆಯ ಪೆರ್ರಿಯ ಜೊತೆ ಕುಳಿತು ಐಸ್ ಕ್ರೀಮ್ ಮೆಲ್ಲುತ್ತ ಮುಂದೊಂದು ದಿನ ತಾವು ಸಿರಿವಂತರಾದಾಗ ಮಾಡೇ ಮಾಡುವ ಸಮಾಜ ಸುಧಾರಕ ಕಾರ್ಯಗಳ ಬಗ್ಗೆ ಗಂಟೆಗಟ್ಟಲೆ ಚರ್ಚಿಸುತ್ತಿದ್ದ ನೆನಪು ಮಿಂಚಿನ ಸಂಚಾರ ಮಾಡುತ್ತದೆ ಮತ್ತು ಮುಂದಿನ ಕೆಲವೇ ದಿನಗಳಲ್ಲಿ ಅದೇ ಸ್ನೇಹಿತನ ಸಹಕಾರದೊಂದಿಗೆ ಚಾರಿಟಬಲ್ ಸಂಸ್ಥೆಯೊಂದರ ಸ್ಥಾಪನೆಯಾಗುತ್ತದೆ. ಶೋಷಿತ ಮಕ್ಕಳಿಗಾಗಿ ಸುವ್ಯವಸ್ಥಿತವಾದ ತಂಗುದಾಣಗಳ ನಿರ್ಮಾಣ, ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ಧನ ಸಹಾಯ, ಬಡ ಮಕ್ಕಳಿಗೆ ಉಚಿತ ಪೋಷಾಕುಗಳ ವ್ಯವಸ್ಥೆ ಹೀಗೆ ಒಂದಾದ ಮೇಲೊಂದರಂತೆ ಮಕ್ಕಳ ಕಲ್ಯಾಣ ಯೋಜನೆಗಳನ್ನು ಅಚ್ಚುಕಟ್ಟಾಗಿ ಅಗಸಿಯ ಸಂಸ್ಥೆ ನಿಭಾಯಿಸುತ್ತಾ ಸಾಗುತ್ತದೆ. ಲೌಕಿಕ ಲೋಲುಪತೆಯಲ್ಲಿ ಸಂಪೂರ್ಣವಾಗಿ ಮುಳುಗದೆ ನಿಸ್ವಾರ್ಥ ಸೇವೆಯ ಸಂಕಲ್ಪ ತೊಟ್ಟ ಮೇಲೆ ಕಳೆಗುಂದಿದ್ದ ಅಗಸಿಯ ಟೆನಿಸ್ ಆಟದ ಗುಣಮಟ್ಟವು ಸಹ ಮೇಲೇರತೊಡಗುತ್ತದೆ. ತನ್ನ ದಾನಶೀಲತೆ ಹಾಗು ಸರಳತೆಗಳ ಮೌಲ್ಯಗಳಿಗೆ ಒಪ್ಪಿಗೆಯಾಗುವಂತಹ ಪತ್ನಿ ಸ್ಟೆಫಿ ಗ್ರಾಫ್ ಹಾಗು ಮಕ್ಕಳ ಜೊತೆ ಅಗಸಿ ಕುಟುಂಬ ಲಾಸ್ ವೇಗಸ್ಸಿನಲ್ಲೇ ಖಾಯಂ ಆಗಿ ತಳ ಊರಿದೆ.

ಆಂಡ್ರೆ ಅಗಸಿ ಕಾಲೇಜ್ ಪ್ರಿಪರೇಟರಿ ಅಕಾಡೆಮಿ

ದೀಪದ ಕೆಳಗೆ ಕತ್ತಲೆ ತುಂಬಿರುವಂತೆ, ಝಗಮಗಾಯಿಸುವ ಕೆಸಿನೋಗಳು ತುಂಬಿರುವ ಸ್ಟ್ರಿಪ್ ಬೀದಿಯ ಸುತ್ತ ಮುತ್ತಲ ಕೆಲ ಏರಿಯಾಗಳು ಮಾದಕವಸ್ತು ವ್ಯಸನಿಗಳ ಹಾಗೂ ಪುಂಡು ಪೋಕರಿಗಳ ಆಟದ ಮೈದಾನದಂತಿದೆ. ಮುರುಕಲು ಮನೆಗಳು ಮತ್ತು ಮನಗಳು ತುಂಬಿರುವ ಇಂತಹದೊಂದು ಬಡಾವಣೆಯಲ್ಲಿ ಆಂಡ್ರೆ ಅಗಸಿ ತನ್ನ ಸಂಸ್ಥೆಯ ಮೂಲಕ ಚಾರ್ಟರ್ ಶಾಲೆಯೊಂದನ್ನು ತೆರೆಯುವ ನಿರ್ಧಾರ ಮಾಡುತ್ತಾನೆ. ಪ್ರತಿಕೂಲ ವಾತಾವರಣದಲ್ಲಿ ಕಣ್ಣು ತೆರೆಯುವ ಕಂದಮ್ಮಗಳಿಗೆ ಒಳ್ಳೆಯ ವಿದ್ಯಾಭಾಸ ಕೊಟ್ಟು ಬಾಳು ಹಸನು ಮಾಡುವಂತಹ ಉತ್ತಮ ಉದಾತ್ತ ಆದರ್ಶದ ಯೋಜನೆ. ಸ್ವಂತದ ಕೋಟಿಗಟ್ಟಲೆ ಹಣ ತೊಡಗಿಸುವುದರ ಜೊತೆ ತನ್ನ ವರ್ಚಸ್ಸನ್ನು ಉಪಯೋಗಿಸಿಕೊಂಡು ಅನೇಕ ಪ್ರಾಯೋಜಕರು ಹಾಗು ದಾನಿಗಳ ನೆರವನ್ನು ಪಡೆಯುತ್ತಾನೆ. ಎಂಟು ಎಕರೆ ಜಾಗದಲ್ಲಿ ಎಲ್ಲ ರೀತಿಯ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಶಾಲೆ ಪ್ರಾರಂಭವಾಗಿ ಎರಡು ದಶಕಗಳಿಗೂ ಮೇಲಾಗಿದೆ. ಅತ್ಯುತ್ತಮ ಮಟ್ಟದ ಶೈಕ್ಷಣಿಕ ಹಾಗು ಪಠ್ಯೇತರ ಚಟುವಟಿಕೆಗಳಿಂದ ಮಕ್ಕಳ ವ್ಯಕ್ತಿತ್ವ ಸುಸಂಗತವಾಗಲು (ವೆಲ್ ರೌಂಡೆಡ್) ಇಂದಿಗೂ ಶ್ರಮಿಸುತ್ತಿದೆ.