ರಾಜವಾಡೆಯವರ ಬೆಳಗು ಆರಂಭವಾಗುವುದೇ ದೇವಸ್ಥಾನಕ್ಕೆ ಬಂದು ಸ್ವಂತ ರಚನೆಯ ಶಾರದಾ ಸುಪ್ರಭಾತ ಹೇಳುವ ಮೂಲಕ. `ಗಿರಿಬಾಲೆ’ ಅಂಕಿತದಲ್ಲಿ ಅವರು ಬರೆದ ಅಸಂಖ್ಯ ಕೀರ್ತನೆಗಳು ಸದಾ ಅವರ ನಾಲಗೆಯ ಮೇಲೆಯೇ ಇದ್ದುವು. ಮಾತಾಡುತ್ತಿದ್ದ ಹಾಗೆ ಇದ್ದಕ್ಕಿದ್ದಂತೆ ಅವರು ನಮ್ಮ ನಡುವೆ ದೇವಿಯೂ/ದೇವರೂ ಖಂಡಿತವಾಗಿಯೂ ಕುಳಿತಿರುವಳೋ/ನೋ ಎಂಬಂಥ ಹರ್ಷದಲ್ಲಿ ತಟಕ್ಕನೇ ತನ್ನ ಕೀರ್ತನೆಗೆ ಹಾರಿ, ತಾಳ ಹಾಕುತ್ತ ರಾಗವತ್ತಾಗಿ ಹಾಡಿ ಬಿಡುತ್ತಿದ್ದರು. ಹಾಡುತ್ತ ನಡುವೆ ನಿಲ್ಲಿಸುವರು `ಇದು ನನ್ನ ಕಂಠವೆ? ಛೆ. ಎಷ್ಟು ಚೆನ್ನಾಗಿತ್ತು, ಹೇಗಾಗಿ ಬಿಟ್ಟಿದೆ’ ಉದ್ಗರಿಸುವರು. (ತನ್ನ ಈಚಿನ ಫೋಟೋ ಕಂಡು ಝುಮ್ಮ ಮೈ ನಡುಗಿ, `ಹೊಹೊ, ಇದು ಯಾರು, ನಾನೆ? ಹೇಗಿದ್ದೆ, ಹೇಗಾದೆ’ ಎಂದು ನಕ್ಕಿದ್ದರು ರಾಜವಾಡೆ. ಫೋಟೋ ಮೇಲಿನ ದೃಷ್ಟಿ ಕೀಳದೆ `ಇಹ ಎನ್ನುವುದರ ಮೂಲವೇ ದೇಹ. ಅದರ ಮೇಲಿನ ಮಮತೆ ಯಾವಾಗ ಹೋಯಿತೋ ಆಗಲೇ ಇಹದ, ಸೌಂದರ್ಯದ ಭ್ರಮೆಯೂ ಮಾಯವಾಗುತ್ತದೆ’ ಎಂದಿದ್ದರು.) ಬೆಂಗಳೂರಿನಲ್ಲಿದ್ದ ಕಾಲದಲ್ಲಿ ಸಂಗೀತ ಕಲಿತು ರೂಢಿಸಿಕೊಂಡಿದ್ದ ಕವಿ ಆಕೆ, ಸಂಜೆ ದೇವಸ್ಥಾನಕ್ಕೆ ಬಂದ ಭಕ್ತರಿಗೂ ತನ್ನ ಕೀರ್ತನೆಗಳನ್ನು ಕಲಿಸಿ ಹಾರ್ಮೋನಿಯಂ ನುಡಿಸುತ್ತ ಹಾಡಿಸುತ್ತಿದ್ದರು. ಇವತ್ತಿಗೂ ಅವರಿಂದ ಕಲಿತ ಹಾಡುಗಳನ್ನು ಹಾಡುವವರು ಅನೇಕರಿದ್ದಾರೆ.

ಒಂದು ಗಳಿಗೆ ಸುಮ್ಮನಿರುವ ಜೀವವಲ್ಲ ಅವರದು. ಹೂ ವಿಂಗಡಿಸಬೇಕು, ಕಟ್ಟಬೇಕು. ನಡುನಡುವೆ ಗಂಟೆ ಸದ್ದಾಗುತ್ತದೆ. ಯಾರವರು ಬಂದವರು, ದೇವಸ್ಥಾನಕ್ಕೆ ಜನ ಬಂತು ಜನ ಹೋಯಿತು ಅಂತಿರಬಾರದು. ಬಂದವರನ್ನು ತಾನು ವಿಚಾರಿಸಬೇಕು. ಏನು ಕಷ್ಟ ಕೇಳಬೇಕು. ಏನಿಲ್ಲ ಸುಮ್ಮನೆ ಬಂದೆ ಎಂದವರಿಗೆ ಹ್ಞಾಂ ಒಳ್ಳೆಯದಾಗಲಿ ಎನ್ನಬೇಕು. ಗುರುತಿಲ್ಲದವರು ಬಂದರೆ ಒಂದು ಕ್ಷಣ ಅವರನ್ನೇ ನಿಟ್ಟಿಸಿ ಅವರು ಪ್ರದಕ್ಷಿಣೆ ನಮಸ್ಕಾರ ಎಲ್ಲ ಮುಗಿಸಿದ್ದೇ `ನೀವು ಯಾರು ತಿಳಿಯಲಿಲ್ಲ’ ಎಂದು ಪರಿಚಯಮಾಡಿಕೊಳ್ಳಬೇಕು, ಅವರ ಮುಜುಗರ ಓಡಿಸಿ ಕಷ್ಟವೇನೆಂದು ತಿಳಿದು `ತಾಯಿಯಿದ್ದಾಳೆ, ಧೈರ್ಯವಾಗಿರಿ’ ಎನ್ನಬೇಕು. ಅವರು ಹೊರಟು ಹೋಗುತ್ತಲೆ ಗಂಭೀರ. ತನ್ನ ಕೆಲಸಗಳಲ್ಲಿ ಮಗ್ನ. ಪೂಜೆಗೆ ಸನ್ನೆ ಮಾಡುವ ಶ್ರದ್ಧೆ. ಪೂಜೆಯಾಗುವಾಗ ಶಂಖ ಊದುವ ಪಟ್ಟ ಅವರಿರುವವರೆಗೂ ಅವರದೇ. (ಅವರು ಕೆನ್ನೆಯಲ್ಲಿ ಗಾಳಿ ಬುರುಡೆ ಉಬ್ಬಿಸುತ್ತ ತಗ್ಗಿಸುತ್ತ ಶಂಖ ಊದುವ ಫೋಟೋವನ್ನಾದರೂ ತೆಗೆದಿಟ್ಟುಕೊಂಡೆನೇ! ಈಗ ಎಷ್ಟು ಅನಿಸುತ್ತಿದೆ. ತೆಗೆಯದೆ ಅದು ನನ್ನ ಮನದಲ್ಲಿಯೇ ಉಳಿದು ಹೋಯಿತು. ವ್ಯಕ್ತಿ ಜೀವಂತವಿರುವಾಗ ಮರಣದ ನೆನಪೇ ಆಗುವುದಿಲ್ಲವಲ್ಲ; ಅವರ ಕುರಿತು ಇತರರಿಗೂ ಮುಂದಿನ ಪೀಳಿಗೆಗೂ ಸಾಧ್ಯವಾದಷ್ಟೂ ತಲುಪಿಸುವ ಹೊಣೆಯ ಮತ್ತು ಖುಶಿಯ ನೆನಪೂ.) ಪೂಜೆಯಿಲ್ಲದ ಹೊತ್ತಲ್ಲಿ ಅವರು ಮೂರು ಬಾರಿ ಬಿಡದೆ ಗಂಟೆ ಹೊಡೆದರೆಂದರೆ ಅವರು ಸಾಕಿಕೊಂಡ ಹುಡುಗ (ಈಗ ವಯಸ್ಕ) ಓಡೋಡಿ ಬರುತ್ತಾನೆ. ಏನು ಬೇಕು ಎಂದು ಎದುರು ನಿಲ್ಲುತ್ತಾನೆ. ಇಂದ ಮಣಿ ಸುರ್‍ಮಣ್ಯ ಎಂದು ರಾಜವಾಡೆ ಅವನನ್ನು ಕರೆದ ಉದ್ದೇಶ ಹೇಳುತ್ತಾರೆ. ಕರೆವ ತನ್ನ ಕೋಡ್, ಹೇಗಿದೆ! ಎಂದು ಅಲ್ಲಿ ಆ ಹೊತ್ತಿಗೆ ಜೊತೆಗಿರುವವರೊಡನೆ ಕೇಳುತ್ತ ಕಣ್ಣಕುಡಿಯಲ್ಲೇ ನಗೆ ಮಿಂಚಿಸುತ್ತಾರೆ. ಮಾತಾಡುತ್ತಿದ್ದಂತೆ ಕುಂಕುಮಾರ್ಚನೆಯವರು ದುಡ್ಡು ಕೊಡುತ್ತಾರೆ. ಚಿಲ್ಲರೆ ವಾಪಾಸು ಕೊಡಬೇಕು. ಅವರು ಯಾವತ್ತೋ ಹೇಳಿಕೊಂಡ ಹರಕೆ ಸಫಲವಾಯಿತೇ ಕೇಳಬೇಕು. ನಡುವೆ `ತ್ರಿಮಧುರ’ ಮಾಡಿಸುವ ಜನರಲ್ಲಿ ಮಾತಾಡಬೇಕು. ಅಲ್ಲಿ ಹೊಸಬರಿದ್ದರೆ ತ್ರಿಮಧುರ ಮಾಡಿಸಿದರೆ ಸಂತರ್ಪಣೆ ಮಾಡಿಸಿದಷ್ಟು ಪುಣ್ಯ ಅಂತೆಲ್ಲ ವಿವರಿಸಬೇಕು. ಅಷ್ಟರಲ್ಲಿ ಉದ್ದಜಡೆಯ ಹುಡುಗಿಯೊಬ್ಬಳು ಬರುತ್ತಾಳೆ. ಅವಳಿಗೆ ಮರುದಿನ ಮದುವೆ ನಿಶ್ಚಯ. ದೇವಿಯ ಕೃಪೆಯಿಂದಲೇ ಅಕಸ್ಮಾತ್ ಸಂಬಂಧ ಕೂಡಿಬಂದ ಕಥೆ ಹೇಳಬೇಕು. ಹೇಳುತ್ತಿರುವಾಗಲೇ ಅಲ್ಲಿಗೊಂದು ಜನ ಬರುತ್ತದೆ. ಹೋಯ್ ಎಂಚಿನ? ಎನ್ನುತ್ತ ಅವರ ಮನೆಯ ಹಟ್ಟಿಗೆ (ಯಾರೋ) ಕಲ್ಲುಬೀಸುವುದು ನಿಂತಿತೇ ತಿಳಿಯಬೇಕು. ಅವರ ಮನೆ ಮಾಡಿಗೆ ಕಲ್ಲು ಬೀಳುವ ಕತೆ, ಅದು ನಿಂತ ಕತೆ- ಸ್ವತಃ ತಾನು ಹೇಳದೆ ಆ ಆಗಂತುಕರೇ ಹೇಳುವಂತೆ ಮಾಡಿ, ಕೇಳಿ! ಎಂಬಂತೆ ಹುಬ್ಬೇರಿಸಿ ಇಳಿಸುವ ತಂತ್ರವೂ ಅವರಲ್ಲಿದೆ.

ಒಂದು ವಿಚಿತ್ರ. ಆ ಯಾರನ್ನೇ ಆಗಲಿ ರಾಜವಾಡೆ ಪರಿಚಯ ಮಾಡುವ ಕ್ರಮವೆಂದರೆ ಅವರ ಉಳಿದೆಲ್ಲ ವಿವರಗಳೊಂದಿಗೆ ಜಾತಿಯನ್ನೂ, ಸಾಲದೆಂಬಂತೆ ಜಾತಿಯ ಒಳವಿಭಾಗವನ್ನೂ ಸ್ಪಷ್ಟವಾಗಿ ಸೇರಿಸಿಯೆ. ನನ್ನನ್ನು ಪರಿಚಯ ಮಾಡುವಾಗ ಮರೆಯದೆ `ಇವರು (ಬ್ರಾಹ್ಮಣರೆಂದರಷ್ಟೇ ಸಾಲದು) ಕೋಟಬ್ರಾಹ್ಮಣರು’ ಅಂದಾಗಲೇ ಸಮಾಧಾನ. ತಾನು (ಕೊಂಕಣೇರಲ್ಲಿ) ರಾಜಾಪುರಿ ಕೊಂಕಣಿ ಎಂದು ತಿಳಿಸುವುದೂ ಅವರೇ. ತಮ್ಮ ಟೀಚರುಗಳು ಆಳುಗಳು ಮುಂತಾದವರ ಕುರಿತು ಹೇಳುವಾಗ ಜಾತಿಯನ್ನೋ ಸಮುದಾಯವನ್ನೋ ಹೇಳದೆ ಮುಂದೆ ಹೋಗರು ಅವರು. ಅದಾದರೂ ಹೇಗೆ, ಎಲ್ಲಿಯೂ ಆ ಕುರಿತ ಕಲ್ಮಷಗೆರೆಯ ಕುರುಹು ಕೂಡ ಇಲ್ಲದಂತೆ. ಅದು ಅವರ ಮಾತಿನ ಬಗೆಯೇ ಆಗಿತ್ತು. ಪ್ರಾಯಶಃ ಅದು ಅಂದಿನ ಮಾತುಗಾರಿಕೆಯ ವಿಧಾನವೂ. ಪಂಡಿತ ಸೇಡಿಯಾಪು ಅವರ ಮಾತಿನಲ್ಲಿಯೂ ನಾನದನ್ನು ಕಂಡಿದ್ದೆ. ವಾಸ್ತವದಲ್ಲಿ ಈ ಇಬ್ಬರೂ `ಧಿಕ್ ಜಾತಿ- ಧಿಕ್ ಕುಲ’ ಎಂದು ಬಾಳಿ ತೋರಿದವರು. ಅವರು ನಿರ್ಗಮಿಸಿದಾಗ ಅವರೊಂದಿಗೆ ಆ ಮಾದರಿ ಮಾತುಕತೆಯ ಸತ್ವಸ್ವಾರಸ್ಯವೇ ಹೊರಟು ಹೋದಂತೆನಿಸಿತು ನನಗೆ.
##
ಈಗ ಈಕೆ ಬರೆಯುವ ಕತೆಗಾರ್ತಿ ಅಲ್ಲ, ಹೇಳುವ ಕತೆಗಾರ್ತಿ. ಕೇಳುವವರಿದ್ದರೆ ಹೇಳುವಲ್ಲಿ ದಣಿವಿಲ್ಲ. ನೀರಸತೆಯಿಲ್ಲ. ಬದಲು, ಕೇಳುವ ಮತ್ತೂ ಕೇಳುವ ಎಂದೆನಿಸುವ ನುಡಿವೈಖರಿ. ಮಾತಿನ ರುಚಿ ಹತ್ತಿತೆಂದರೆ ಬರೆವ ರುಚಿ ತಗ್ಗುತ್ತದೆಯೆ? ರಾಜವಾಡೆಯವರ ಮಟ್ಟಿಗೆ ಇದು ಸತ್ಯ. ಅವರು ಹೇಳುವ ಮಾತಾಡುವ ಆನಂದದಲ್ಲಿ, (ಅಥವಾ ನೆಪದಲ್ಲಿಯೋ) ಹಿಂದಿನ ಆ ಕಥಾಲೇಖಕಿ ಗಿರಿಬಾಲೆಯನ್ನು ಮರೆತೇ ಬಿಟ್ಟಂತಿದ್ದರು. ಅಂದು ಬರೆಯುತ್ತಿದ್ದ ಕಥಾವಸ್ತುಗಳು ಈಗ ಮೌಖಿಕಕಥೆಗಳಾಗಿ ಸಂಪೂರ್ಣ ಬೇರೆ ರೂಪ ಪಡೆದಿದ್ದುವು. ಆಗಲೇ ಹೇಳಿದಂತೆ ಮದುವೆಯಾಗದೆ ಉಳಿದ ಹುಡುಗಿಯರ ಕಥೆ, ಮನೆಗೆ ಕಲ್ಲುಬೀಳುವ ಕತೆ, ಮಕ್ಕಳಾಗದವರ ಕತೆ, ಅವರೆಲ್ಲಾ ತನ್ನ ಶಾರದಾಂಬೆಗೆ ಸಲ್ಲಿಸಿದ ವಿಶೇಷ ಪೂಜೆ ಫಲಪ್ರದವಾದ ಕತೆಗಳಾಗಿ ಮುಕ್ತಾಯಗೊಳ್ಳುತ್ತವೆ. ಹೀಗೆ ಅವುಗಳ ಜಾಡೇ ಬದಲಾಗಿದೆ. ಅಂತೆಯೆ ಕವನಗಳ ಜಾಡೂ ಬದಲಾಗಿ ಆ ಜಾಗದಲ್ಲಿ ಕೀರ್ತನೆಗಳು ರಚನೆಯಾಗಿದ್ದವಷ್ಟೆ?

ಶುಕ್ರವಾರದ ದಿನವಂತೂ ಅವರಿಗೆ ಬಹುರಾತ್ರಿಯವರೆಗೂ ಕೆಲಸ. ಅಂದು ದರ್ಶನ. ದಕ್ಷಿಣಕನ್ನಡ ಜಿಲ್ಲೆ (ಅವಿಭಜಿತ) ಯಲ್ಲಿ ದರ್ಶನದ ಕಟ್ಟಳೆ ಸಾಮಾನ್ಯವಾದರೂ ನನಗೆ ತಿಳಿದಿರುವಂತೆ ಹೀಗೆ ಮಹಿಳೆಯೊಬ್ಬಳು ಪಾತ್ರಿ ಮತ್ತು ಭಕ್ತರ ನಡುವೆ ಮಧ್ಯವರ್ತಿಯಾಗಿ, ನೇತಾರಳಾಗಿ, ನಿಂತು ಅದನ್ನು ನಡೆಸಿಕೊಡುವ ಉದಾಹರಣೆ ಇಡೀ ಇಂಡಿಯಾದಲ್ಲೇ ಪ್ರಾಯಶಃ ರಾಜವಾಡೆಯವರದು ಮಾತ್ರ. ದರ್ಶನದ ನೇತಾರರೆಂದರೆ ಯಕ್ಷಗಾನದಲ್ಲಿ ಭಾಗವತರಂತೆಯೇ, ತುಸು ವ್ಯತ್ಯಾಸ ಅಷ್ಟೆ ಅಂತ ನನಗೆ ಗೋಚರವಾದದ್ದೂ ರಾಜವಾಡೆಯವರ `ಭಾಗವತಿಕೆ’ ಕಂಡಾಗಲೇ; ಭಾಗವತಿಕೆಗೆ ಇರುವ ಅದರ ರೂಢಿ ಅರ್ಥದ ಜೊತೆಗೆ ಭಾಗವಹಿಸುವುದು, ಪಾಲುಗೊಳ್ಳುವುದು ಎಂಬ ಅರ್ಥ ಕಾಣಿಸಿದ್ದೂ. ಭಾಗವಹಿಸುವ ಅವರ ರೀತಿಯಾದರೂ ಹೇಗೆ! ದರ್ಶನ ನಡೆಯುವಾಗ ಅನೇಕ ಸಲ ನಾನಲ್ಲಿಗೆ ಹೋಗಿ ಕುಳಿತುಕೊಂಡಿದ್ದೇನೆ. ಸಂಕಟದಲ್ಲಿ ಕಂಗೆಟ್ಟು ಬಂದವರ ಅಳಲನ್ನು ಆಲೈಸಿ, ಪಾತ್ರಿಗೆ ತಲುಪಿಸಿ ಅಲ್ಲಿಂದ ಸಮಾಧಾನವನ್ನು ಇವರಿಗೆ ಮುಟ್ಟಿಸುವಲ್ಲಿ, ಈ ಮಧ್ಯಸ್ಥಿಕೆಯ ಅವಧಿಯಲ್ಲಿ, ಆಕೆಯ ಎಲ್ಲ ಗುಣಗಳೂ ಹೊರಹೊಮ್ಮುತ್ತಿದ್ದುವು. ಅವರ ಪರಮಾನಸ ಪ್ರವೇಶಶಕ್ತಿ, ವ್ಯವಹಾರಜ್ಞಾನ, ಅನುಕಂಪ, ಅಂತಃಕರಣ, ಅಭಿನಯ ಚತುರತೆ, ಕಲ್ಪಕಶಕ್ತಿ, ಸ್ತ್ರೀಪರ ದೃಷ್ಟಿ ಎಲ್ಲದರ ದರ್ಶನವೂ ಆಗುತಿತ್ತು. ಆ ಹೊತ್ತಿನಲ್ಲಿ ಆಕೆ ಲೇಖಕಿ, ಗೆಳತಿ, ನಕ್ಕು ನಗಿಸುವ ಮೃದುಹಾಸ್ಯಗಾತಿ, ವಿಮರ್ಶಕಿ, ದೇವರಿಗೇ ಗದರಿ ಆಶೀರ್ವಾದ ವಸೂಲು ಮಾಡುವ ಜೋರಿನ ಭಕ್ತೆ, ಅಕ್ಕ, ತಾಯಿ ಎಲ್ಲವೂ. `ತಾಯಿ, ಈ ಹುಡುಗಿ ಎಷ್ಟು ದಿನದಿಂದ ನಿನ್ನ ಸನ್ನಿಧಾನಕ್ಕೆ ಬಂದು ದುಃಖ ಹೇಳಿಕೊಳ್ಳುತಿದ್ದಾಳೆ. ಒಮ್ಮೆ ಪರಿಹಾರ ಮಾಡಬಾರದೆ’ ಅಂತ ನೇರವಾಗಿ ತಾಯಿ ಶಾರದಾಂಬೆಯ ಜೊತೆ ಏಕಮುಖ ವಾದಕ್ಕಿಳಿಯುತ್ತಿದ್ದರು ಅವರು. ಅವಳ ಪರವಾಗಿ ಆ ಹುಡುಗಿಗೆ ತಾನೆ ಸಾಂತ್ವನದ ಮಾತನ್ನು ಹೇಳುತ್ತ ಅಮ್ಮ ನಡೆಸಿ ಕೊಡುತ್ತಾಳೆ ಹೆದರ ಬೇಡ ಎಂದು ಭರವಸೆಯನ್ನೂ ಕೊಡುತ್ತಿದ್ದರು. ಆ ಹೊತ್ತಿನ ಅವರ ಮನಮುಟ್ಟುವ ಭಾಷೆ, ಸಂತೈಕೆಯ ದನಿ, ಒಮ್ಮೆ ಕೇಳಿದವರು ಮರೆವಂಥದಲ್ಲ.
ಪ್ರತಿ ಸಲವೂ ನಮಗವರು ಹೊಸಹೊಸತಾಗಿ ಕಾಣುವ ಹೊತ್ತು ಅದು; ಆಕೆ ಅಪ್ಪಟ ಸೃಜನಶೀಲೆ ಎಂಬುದಕ್ಕೆ ಸಾಕ್ಷಿಯೂ. ಹೆಂಗಸು ಅಂಜುಕುಳಿಯಾಗಿದ್ದರೆ, ತನ್ನೊಳಗಿನ ಶಕ್ತಿಯನ್ನೇ ಮರೆತು ದೈನ್ಯಕ್ಕೆ ತನ್ನನ್ನು ಒಡ್ಡಿಕೊಂಡಿದ್ದರೆ, ಸಹಾನುಭೂತಿಗೆ ಹಾತೊರೆದು, ಬುದ್ಧಿವಾದ ಹೇಳಿಯೂ ಎಚ್ಚರಾಗದಂತಿದ್ದರೆ, ಗೊಂಬೆಗಳಂತೆ ಬದುಕುತ್ತಿದ್ದರೆ ರಾಜವಾಡೆಯವರಿಗಂತೂ ಸಹಿಸಲೇ ಆಗುತ್ತಿರಲಿಲ್ಲ. ತಡೆಯದೇ ಅಂತಹ ಹೆಂಗಸರನ್ನು `ಅದು’ ಎಂದೇ ಸಂಬೋಧಿಸುತ್ತಿದ್ದರು. (ಅಂತೆಯೇ ಅತಿ ಅಧಿಕಪ್ರಸಂಗಿ ಗಂಡಸು ಕೂಡ ಅವರ ಮಟ್ಟಿಗೆ ’ಅದು’ವೇ. ಅಧಿಕಾಧಿಕ ಮಾತಾಡುವ, ತಾವೇ ಬುದ್ಧಿವಂತರೆಂಬಂತೆ ರೈಸಲು ಬರುವ, ಮೂಗು ತೂರಿಸುವ, ಮೋಸ-ವಂಚನೆ-ದಗಲುಬಾಜಿ ವರ್ತನೆಯ ಗಂಡಸರನ್ನು ಕಂಡರೋ ಬೆಕ್ಕಿನ ಮರಿಯನ್ನು ಎತ್ತುತ್ತಾರಲ್ಲ, ಹಾಗೆ ತನ್ನ ಮಾತಿನ ಶಕ್ತಿಯಿಂದಲೇ ಅವರನ್ನು ಕತ್ತಿನ ಹಿಂಭಾಗಕ್ಕೆ ಕೈ ಹಾಕಿ ಎತ್ತಿ ಸೀದಾ ಕಸದ ಬುಟ್ಟಿಗೆ ಎಸೆದು ಬಿಡುವಂತಹ ವ್ಯಕ್ತಿ ಅವರು. ಬಿಡುಬೀಸು ವೇಗ ಅಬ್ಬರದ ಏರುದನಿಯ ಅವರು ಜೋರಿನ ಮಹಿಳೆಯಾಗಿಯೂ ಕಾಣುತಿದ್ದರು. ಹಾಗೆ ಒಮ್ಮೆ ಅವರ ವ್ಯಕ್ತಿತ್ವದ ಅಭಿಮಾನಿ ಗಂಡಸೊಬ್ಬರು `ಈ ಜನಕ್ಕೆ ಎಲ್ಲವೂ ಸರಿಯಾಗಿ ನಡೆದಿದ್ದರೆ ಊರು ಇಡುತ್ತಿರಲಿಲ್ಲ.’ ಅಂತ ಅವರೆದುರಿಗೇ ನುಡಿದಾಗ, ರಾಜವಾಡೆಯವರು ನಿರ್ಮಲವಾಗಿ ನಕ್ಕದ್ದು ನೆನಪಾಗುತ್ತಿದೆ. ಮೆಚ್ಚುಗೆಯನ್ನು ಟೀಕೆಯಂತೆ ನುಡಿವ ವಿಧಾನವೂ ನಮ್ಮಲ್ಲಿದೆಯಲ್ಲ? ಈ ಸೂಕ್ಷ್ಮವನ್ನೂ ಗ್ರಹಿಸ ಬಲ್ಲವರು ಅವರು. ನಕ್ಕರು, ಆ ವ್ಯಕ್ತಿಯನ್ನು ಛೇಡಿಸಿಯೂ ಛೇಡಿಸಿದರು `ನೀವೆಲ್ಲ ಊರು ಇಟ್ಟ ಚಂದ ಕಾಣುತಿದೆಯಲ್ಲ!’.)

ದೇವರೇ, ನೀನೇ ಗತಿ ಎಂಬಂತೆ ದುಃಖದ ಹೊರೆ ಹೊತ್ತು ಬಂದು ಬಿಕ್ಕುತ್ತ ಸಮಸ್ಯೆಗಳನ್ನು ಹೇಳಿಕೊಳ್ಳಲಾರದೆ, ಕಂಠನಡುಗಿನಲ್ಲೇ ನಿಂತುಬಿಡುವ ಅನೇಕರಿಗೆ ಅಷ್ಟು ಹೆದರಬಾರದು ಹೆಂಗಸರು – ಎಂದು ಅಲ್ಲಿಯೇ ಧೈರ್ಯ ಹೇಳುತ್ತಿದ್ದರು. ಅನೇಕ ಬಾರಿ ಅವರ ದುಃಖವನ್ನು ದೇವಿಗೆ ತಾನೇ ವಿವರಿಸಿ ಹೇಳುತ್ತಾ ಪರಿಹಾರ ಸೂಚಿಸೆಂದು ಆಕೆಯೊಡನೆ ಚರ್ಚೆಗಿಳಿಯುತ್ತಾ ಆಕೆ ಕೇಳುವ ಕಾಣಿಕೆಯನ್ನೋ ಸೇವೆಯನ್ನೋ ಅಲ್ಲಿಯೇ ವಿಮರ್ಶಿಸಿ ಇವಳ ಹತ್ತಿರ ಅಷ್ಟು ದೊಡ್ಡ ಸೇವೆ ಕೇಳಿದರೆ ಹೇಗೆ ತಾಯಿ? ಸಣ್ಣದು ಕೇಳಿಕೋ. ಇಲ್ಲಾ, ತೀರಿಸುವ ಶಕ್ತಿ ಕೊಡು – ಮುಂತಾಗಿ ಅವಳಿಗೇ ಗದರುತ್ತಿದ್ದರು. ಆ ದೃಶ್ಯಗಳೆಲ್ಲ ಈಗ ಇಲ್ಲವಲ್ಲ……..

ಸಂಜೆ ಬತ್ತಿ ಹೊಸೆಯುತ್ತಾ, ನಡುವೆ ನಿಲ್ಲಿಸಿ, ಮಾತಿನ ಪೆಟ್ಟಿಗೆ ತೆರೆದು, ಎದ್ದು ನಿಂತು, ನಡುವೆ ಕುಳಿತು ಕೈಬೀಸಿ, ಹಾರಿಸಿ ಮಾತನಾಡುತ್ತಾ, ಪುನಃ ಬತ್ತಿ ಹೊಸೆಯುತ್ತಾ ಪ್ರತಿ ಕ್ಷಣವನ್ನೂ ಬೆಳಗಿಕೊಳ್ಳುತ್ತಿದ್ದ ರಾಜವಾಡೆಯವರಿಗೂ ಶ್ರೀ ಕೃಷ್ಣಮಠದ ಜಗಲಿಯಲ್ಲಿ ಬತ್ತಿ ಹೊಸೆಯುತ್ತಾ ಮಠದಲ್ಲಿ ಊಟ ಮಾಡುತ್ತಾ ಆಯುಷ್ಯ ಕಳೆಯುತ್ತಿದ್ದ ಅಂದಿನ ಅಸಹಾಯಕ ವೃದ್ಧವಿಧವೆಯರಿಗೂ ಎಂತಹ ಅಂತರ! ಅನುಭವಗಳಿಗೆ ತೆರೆದುಕೊಂಡು ಪಕ್ಕಾದ ಮನಸ್ಸು ಮತ್ತು ಕದವಿಕ್ಕಿ ಯಾಂತ್ರಿಕವಾದ ಮನಸ್ಸುಗಳು.
#
ದೇವಸ್ಥಾನಕ್ಕೆ ಬಂದ ಯಾರಾದರೂ ಆಕೆಯ ಕಾಲಿಗೆ ನಮಸ್ಕಾರ ಮಾಡಿದರೆಂದರೆ `ಪಾಪಿ ನಾನು. ನನ್ನಂಥವರಿಗೆ ನಮಸ್ಕಾರ ಮಾಡಬೇಡಿ. (ಗರ್ಭಗುಡಿ ತೋರಿಸಿ) ನೋಡಿ, ಈ ಸನ್ನಿಧಾನ ಅವಳದ್ದು, ಇಲ್ಲಿ ಯಾರೂ ಯಜಮಾನರಲ್ಲ, ಯಾರೂ ಕೆಲಸದವರಲ್ಲ. ಇಲ್ಲಿ ಅವಳನ್ನು ಬಿಟ್ಟರೆ ಯಾರೂ ದೊಡ್ಡವರಿಲ್ಲ. ಇಲ್ಲಿ ಕಸ ಗುಡಿಸುವವಳೂ ಅವಳೇ, ಕಿರೀಟ ತೊಡುವವಳೂ ಅವಳೇ. ಆಕೆಗೇ ನಮಸ್ಕಾರ ಮಾಡಿ.’ ಎನ್ನುತ್ತ ಹಿಂದೆ ಹಿಂದೆ ಸರಿಯುತ್ತಿದ್ದರು. ಆದರೆ ನಮಸ್ಕಾರ ಮಾಡುವವರು ಮಾಡಿಯೇ ತೀರುವರು. ಆಗ ಅವರ ಬಾಯಲ್ಲಿ ಹೆಚ್ಚು ಕೇಳಿದ ಆಶೀರ್ವಾದವೆಂದರೆ ಕೀರ್ತಿಶಾಲಿಯಾಗಿ ಎಂಬುದೇ. ಈ ಆಶೀರ್ವಾದಕ್ಕೆ ಲಗತ್ತಾಗಿ ಅವರಲ್ಲೊಂದು ಕತೆ ಇತ್ತು. ಪ್ರಸಿದ್ಧ ರಂತಿದೇವನ ಕತೆಯದು. ಈ ಕತೆಯನ್ನು ಅವರು ಒಬ್ಬರಿಗೇ ಎಷ್ಟು ಸಲವಾದರೂ ಹೇಳಬಲ್ಲರು. ಒಂದೊಂದು ಸಲವೂ ಹೊಚ್ಚ ಹೊಸದೆಂಬಂತೆ.

ರಂತಿದೇವನ ಕತೆಯನ್ನು ನಾನು ಚಿಕ್ಕಂದಿನಲ್ಲಿ ಕೇಳಿದ್ದೆ. ಆದರೆ ರಾಜವಾಡೆ ಅದನ್ನು ಪ್ರತೀ ಸಲ ಹೇಳುವಾಗಲೂ ಗಪ್‌ಚಿಪ್ ಆಲೈಸುತ್ತಿದ್ದೆ. ಅವರನ್ನು ಆಲಿಸುತ್ತಾ ಕೂಡುವುದೇನು ಸಣ್ಣ ಅನುಭವವವಲ್ಲ. ಅವರು ಹೋದ ಮೇಲೆಯೂ ಅನಿಸುತ್ತಿದೆ, ಆಕೆ ಹೇಳುವುದು ನಾನು ಆಲೈಸುವುದು ಇನ್ನೂ ಬಹಳ ನಮೂನೆಯಲ್ಲಿ ಇತ್ತು ಅಂತ. ಒಂದು ದಿನವಾದರೂ ಚೆನ್ನಾಗಿ ಬಿಡುವಾಗಿ ಅವರೆದುರು ಕುಳಿತುಬಿಡಬೇಕು ಅಂದುಕೊಂಡರೆ ಆಗಲೇ ಇಲ್ಲ. ಅವರಿಗೂ ನಾನಾ ಹರಬುಗಳು. ನನಗೂ ಒಂದು ಗಂಟೆಗಿಂತ ಹೆಚ್ಚಿಗೆ ಕುಳಿತರೆ ಮನೆಯ ಎಳೆತ. ಅದೇ ಊರಲ್ಲಿ ಮನೆ ಇದ್ದರೆ ಹಾಗೇ ತಾನೆ?